Jun 292009
 

Vishwanath Hulikal ೧. ಮೂಲ ಕೃತಿ: `Men are from Mars, Women are from Venus’
 ಆಂಗ್ಲ ಮೂಲ ಲೇಖಕ: ಡಾ. ಜಾನ್ ಗ್ರೇ
 ಕನ್ನಡ ಅನುವಾದ: ‘ಆತ ಮಂಗಳ ಲೋಕದಿಂದ, ಈಕೆ ಶುಕ್ರ ಲೋಕದಿಂದ’
 ಅನುವಾದಕರು: ವಿಶ್ವನಾಥ್ ಹುಲಿಕಲ್
 ಪ್ರಕಟಣೆ: ಕಾವ್ಯಾಲಯ ಪ್ರಕಾಶಕರು, ಮೈಸೂರು
 ಪ್ರಕಟಿತ ವರ್ಷ: ೨೦೦೯.

 

Men are from from Mars, Women are from Venus  ಎಂಬ ಪುಸ್ತಕವು ಕಳೆದ ದಶಕದಲ್ಲಿ ಮಾನವೀಯ ಸಂಬಂಧಗಳ ಬಗ್ಗೆ ಪ್ರಕಟವಾದ ಪುಸ್ತಕಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾದ ಖ್ಯಾತಿಯನ್ನು ಹೊಂದಿದೆ. ಕಳೆದ ಹತ್ತು ವರ್ಷಗಳಲ್ಲಿ ಈ ಪುಸ್ತಕವು ವಿಶ್ವದ ೪೦ ಭಾಷೆಗಳಿಗೆ ಅನುವಾದವಾಗಿ, ಒಟ್ಟು ೩ ಕೋಟಿಗಿಂತ ಅಧಿಕ ಸಂಖ್ಯೆಯಲ್ಲಿ ಮಾರಾಟವಾಗಿದೆ.

 ಈ ಪುಸ್ತಕ ಡಾ|| ಜಾನ್ ಗ್ರೇ ಅವರ ೭ ವರ್ಷಗಳ ಅವಿಶ್ರಾಂತ ಸಂಶೋಧನೆಯ ಫಲ. ಈ ಅವಧಿಯಲ್ಲಿ ಅವರು ೨೫೦೦೦ಕ್ಕೂ ಹೆಚ್ಚಿನ ಜನರನ್ನು ತಮ್ಮ ಸೆಮಿನಾರ್ ಗಳಲ್ಲಿ ಸಂದರ್ಶಿಸಿದ್ದಾರೆ. ಇದರಿಂದ ಅವರಿಗೆ ಗಂಡು-ಹೆಣ್ಣುಗಳು ಹೇಗೆ ಮೂಲಭೂತವಾಗಿ ಭಿನ್ನರು ಎಂಬುದನ್ನು ಅವರು ಆಳವಾಗಿ ಅರಿತುಕೊಂಡು, ನಿರ್ದಿಷ್ಠವಾಗಿ ವ್ಯಖ್ಯಾನಿಸಲು ಸಾಧ್ಯವಾಗಿದೆ. ಈ ತೆರನಾದ ತಿಳುವಳಿಕೆಯಿಂದ, ಸ್ತ್ರೀ-ಪುರುಷರ ಮಧ್ಯದ ಸಂಬಂಧ ಮತ್ತು ಸಂಪರ್ಕವನ್ನು ನೂತನ ವಿಧಾನಗಳಿಂದ ಸುಧಾರಿಸಲು ಅನುಕೂಲವಾಗಿದೆ. ಗಂಡು-ಹೆಣ್ಣುಗಳ ಮಧ್ಯೆ ಸಂಬಂಧವನ್ನು ಉತ್ತಮಪಡಿಸಬೇಕಾದರೆ, ಇವರಿಬ್ಬರ ನಡುವಣ ಮೂಲಭೂತ ವ್ಯತ್ಯಾಸಗಳನ್ನು ಮೊದಲು ಅರಿತುಕೊಳ್ಳಬೇಕು. ಈ ಬಗೆಯ ತಿಳುವಳಿಕೆಯಿಂದ ಆತ್ಮಾಭಿಮಾನ ಮತ್ತು ವೈಯಕ್ತಿಕ ಘನತೆ ಹೆಚ್ಚುತ್ತದೆ. ಅಷ್ಟೇ ಅಲ್ಲದೆ, ಪರಸ್ಪರ ವಿಶ್ವಾಸ, ನಂಬಿಕೆ, ವೈಯಕ್ತಿಕ ಜವಾಬುದಾರಿ, ಸಹಕಾರ ಮತ್ತು ಪ್ರೀತಿಯೂ ಅಧಿಕವಾಗುತ್ತದೆ.

 ಪ್ರಸ್ತುತ ಆಧುನಿಕ ಕಾಲದ ಸ್ತ್ರೀ-ಪುರುಷರ ನಡುವೆ ಪ್ರೀತಿಪೂರ್ವಕ ಸಂಬಂಧ ಸ್ಥಾಪನೆಗೆ, ಈ ಪುಸ್ತಕ ನೇರವಾಗಿ ನೆರವಾಗುತ್ತದೆ ಎಂಬುದರಲ್ಲಿ ಸಂಶಯವಿಲ್ಲ. ಏಕೆಂದರೆ, ಇದರಲ್ಲಿ ವಿವರಿಸಿರುವ ಪ್ರತಿಯೊಂದು ಪ್ರಾಯೋಗಿಕ ಸಲಹೆಯನ್ನೂ ಅತ್ಯಂತ ವ್ಯಾಪಕ ಪರೀಕ್ಷೆಗೆ ಗುರಿಪಡಿಸಲಾಗಿದೆ. ಡಾ|| ಜಾನ್ ಗ್ರೇ ಪ್ರಶ್ನಿಸಿದ ೨೫೦೦೦ ವ್ಯಕ್ತಿಗಳಲ್ಲಿ, ಪ್ರತಿಶತ ೯೦ಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಜನರು ಈ ಪುಸ್ತಕದಲ್ಲಿ ವಿವರಿಸಿರಿವ ವ್ಯಕ್ತಿಗಳ ಜೊತೆ ತಮ್ಮನ್ನು ಉತ್ಸಾಹದಿಂದ ಗುರುತಿಸಿಕೊಂಡಿದ್ದಾರೆ. ಗಂಡು-ಹೆಣ್ಣುಗಳ ಮಧ್ಯೆ, ಅವರೀರ್ವರ ಭಿನ್ನತೆಯಿಂದಾಗಿ ಉದ್ಭವಿಸುವ ಸಮಸ್ಯೆಗಳನ್ನು ಯಶಸ್ವಿಯಾಗಿ ಎದುರಿಸಿ, ಅವನ್ನು ನಿವಾರಿಸಲು ಅನುಷ್ಠಾನಗೊಳಿಸಬಹುದಾದಂತಹ ಪ್ರಾಯೋಗಿಕ ಸಲಹೆಗಳನ್ನು ನೀಡಲಾಗಿದೆ. ಆದ್ದರಿಂದಲೇ ಈ ಪುಸ್ತಕಕ್ಕೆ ಮಹತ್ವ ಹೆಚ್ಚಾಗಿದೆ. 

ಈ ಪುಸ್ತಕದಲ್ಲಿ ವಿವರಿಸಿರುವ ಪ್ರಾಯೋಗಿಕ ಸಲಹೆಗಳು ಯಾವ ದೇಶದ ಜನರಿಗೂ ಅನ್ವಯಿಸುವಂತಹುದು. ಗಂಡು-ಹೆಣ್ಣುಗಳ ಮಧ್ಯೆ ಉದ್ಭವಿಸುವ ಸಮಸ್ಯೆಗಳು ಪರಿಹಾರವಾದರೆ, ಈ ಸಂಸಾರ ಸುಖಮಯವಾಗಿರುತ್ತದೆ. ಅವರಿಬ್ಬರ ನಡುವೆ ಸಂಘರ್ಷಗಳೇ ಉಗಮಿಸದಿದ್ದರೆ, ಅದಕ್ಕಿಂತ ಹೆಚ್ಚಿನ ಸಂತೋಷ ಎಲ್ಲಿದೆ? ಈ ಪುಸ್ತಕದ ಪ್ರಯೋಜನವನ್ನು ತಮ್ಮ ಕನ್ನಡ ನಾಡಿನ ಬಾಂಧವರಿಗೆ ತಲುಪಿಸಬೇಕೆಂಬ ಚಡಪಡಿಕೆಯೇ ನನ್ನನ್ನು ಈ ಪುಸ್ತಕದ ಅನುವಾದಕ್ರಿಯೆಗೆ ಪ್ರೇರೇಪಿಸಿತು.

 

(ಇದೇ ಪುಸ್ತಕ ಕನ್ನಡ ಜಾಗತಿಕ ಜಾಲತಾಣದಲ್ಲಿ http://ThatsKannada.OneIndia.in/column/hulikal  ಸೆಪ್ಟೆಂಬರ್ ೧೬, ೨೦೦೫ ರಿಂದ ಮೇ ೧೧, ೨೦೦೭ ರವರೆಗೆ ಸಾಪ್ತಾಹಿಕ ಧಾರಾವಾಹಿಯಾಗಿ ಅಂಕಣವಾಗಿ ಪ್ರಕಟಗೊಂಡಿದೆ.)

೨. ಮೂಲ ಕೃತಿ:  ‘Story of Civilization’
ಆಂಗ್ಲ ಲೇಖಕ: ವಿಲ್ ಡ್ಯೂರಂಟ್
ಕನ್ನಡ ಅನುವಾದ ‘ನಾಗರೀಕತೆಯ ಕಥೆ’ (ಸಂಪುಟ ೩) – ಸೀಸರ್ ಮತ್ತು ಕ್ರಿಸ್ತ
ಅನುವಾದಕರು: ವಿಶ್ವನಾಥ್ ಹುಲಿಕಲ್, ಶಶಿಕಲ ರಾಜ, ಮೀರಾ ಮೂರ್ತಿ, ಶ್ರೀಧರ ಮೂರ್ತಿ, ಮಾಗಳದ.
ಪ್ರಧಾನ ಸಂಪಾದಕರು: ಡಾ|| ಎಲ್. ಎಸ್. ಶೇಷಗಿರಿರಾವ್
ಪ್ರಕಟಣೆ:  ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿ, ಬೆಂಗಳೂರು
ಪ್ರಕಟಿತ ವರ್ಷ: ೨೦೦೮.

 

 Posted by at 6:43 PM