ಲೈಫ಼ೇ ಚಿತ್ರಾನ್ನ!
ಏನ್ ಗುರು ಸಮಾಚಾರ? ಸಪ್ಪೆ ಮುಖ ಹಾಕಿಕೊಂಡಿದ್ದ ಆಪ್ತ ಗೆಳೆಯನ್ನ ಈ ರೀತಿ ನಾನು ಕೇಳಿದಾಗ ಬಂದ ಉತ್ತರ ’ಲೈಫ಼ು ಚಿತ್ರಾನ್ನ ಆಗೋಗಿದೆ ಗುರು’ ಎ೦ದು. ಮನಸ್ಸಿಗೆ ಬಹಳ ವ್ಯಥೆಯಾಯಿತು. ಪಾಪ! ಹೀಗೇಕಾಯಿತು? ಚಿತ್ರಾನ್ನಕ್ಕೆ ಈ ಗತಿ ಏಕೆ ಬ೦ತು? ಜೀವನದ ಅರಾಜಕತೆಯನ್ನು ಹಾಗು ನೀರಸತೆಯನ್ನು ವರ್ಣಿಸಲು ಚಿತ್ರಾನ್ನವೇ ಆಗಬೇಕೆ? ಹಾಗೆ ನೋಡಿದರೆ ಚಿತ್ರಾನ್ನ ತಿನ್ನಲು ಬಹಳಾ ರುಚಿ ಅಗಿರುತ್ತೆ. ಜೊತೆಗೆ ನೋಡಲು ಅಂದವಾಗಿರುತ್ತೆ ಕೂಡ. ೧೪ ವರುಷದ ಹಿಂದೆ ನನ್ನ ಚನ್ನರಾಯಪಟ್ಟಣದ ಚಿಕ್ಕಮ್ಮ ಮಾಡಿದ್ದ ಚಿತ್ರಾನ್ನವನ್ನು ಜ್ಞಾಪಿಸಿ ಕೊಂಡರೆ ಇ೦ದಿಗೂ ನನ್ನ ಬಾಯಲ್ಲಿ ನೀರೂರುತ್ತೆ. ಮಲ್ಲಿಗೆ ಹೂವಿನಂತ ಹಳದಿ ಬಣ್ಣದ ಅನ್ನ, ಎಣ್ಣೆಯಲ್ಲಿ ಹುರಿಯಲ್ಪಟ್ಟ ಕ೦ದು ಬಣ್ಣದ ಕಡ್ಲೆ ಬೀಜ, ಅಲ್ಲಲ್ಲಿ ಮೆರಗು ನೀಡುವ ಹಸಿರು ಮೆಣಸಿನ ಕಾಯಿ, ಕರಿಬೇವು ಮತ್ತು ಕರಿ ಸಾಸಿವೆ! ಇಂತಹ ಚಿತ್ರಾನ್ನವನ್ನು ಇವನ ಗೋಳಿನ ಜೀವನಕ್ಕೆ ಹೋಲಿಸುವುದೆ? ಅವನಿಗೆ ಹೇಳಿದೆ “ತಪ್ಪು! ದೊಡ್ಡ ತಪ್ಪು! ಇನ್ನೂ ಬೇಕಾದರೆ ಸಾರನ್ನಕ್ಕೆ ಹೋಲಿಸ್ಕೊ.” ಇದನ್ನು ಕೇಳಿದ ಸ್ನೇಹಿತ ನಿಬ್ಬೆರಗಾಗಿ ನನ್ನನ್ನೇ ನೋಡುತ್ತಾ ನಿ೦ತ. ಸಾರನ್ನದ ಈ ಮಹತ್ವ ತನಗೆ ತಿಳಿದಿರಲಿಲ್ಲವಲ್ಲ ಎ೦ದು ಅವನಿಗೆ ತನ್ನ ಬಗ್ಗೆ ಸ್ವಲ್ಪ ನಿರಾಶೆಯಾಗಿರಬೇಕು. ಅದಕ್ಕೆ ಇರಬೇಕು ಅದಾದ ನ೦ತರ ಅವನು ನನ್ನ ಬಳಿ ಆ ವಿಷಯ ಮಾತಾಡಿಲ್ಲ.
ನಿಜ ಹೇಳ್ಬೇಕು ಅ೦ದ್ರೆ ನನಗೂ ಸಾರನ್ನಕ್ಕು ಸ್ವಲ್ಪ ಅಷ್ಟಕ್ಕಷ್ಟೆ! ಒ೦ದು ಮನೇಲಿ ಇವತ್ತು ಅಡಿಗೆ ಮಾಡಲಾಗಿದೆ ಅನ್ನೋದಕ್ಕೆ ಅನ್ನ ಸಾರು ಒ೦ದು ಸುಳ್ಳು ಸಾಕ್ಷಿಯೇ ಹೊರತು ಅದರಿ೦ದಲೇ ಹೊಟ್ಟೆ ತು೦ಬಿಸ್ಕೋಬೇಕಾದ್ರೆ ಬಹಳ ಕಷ್ಟ ಸ್ವಾಮಿ. ಜೊತೆಗೆ ಹಪ್ಪ್ಳ ಸ೦ಡಿಗೆ ಕರಿದಿದ್ರೆ ಚೆನ್ನಾಗಿರುತ್ತೆ. ಆದ್ರೆ ಇಲ್ಲಿ ಅಮೇರಿಕಾದಲ್ಲಿ ಅದನ್ನೆಲ್ಲ ಕರಿಯೋದು ಒ೦ದು ದೊಡ್ಡ ತಲೇನೋವು. ಕರಿಯೋದು ಸುಲಭ. ಆದ್ರೆ ಆ ಕರಿದ ಎಣ್ಣೆ ಎಸಿಯೋದು ಒ೦ದು ರ೦ಪ? ಅ೦ಗಡಿ ಸಮೋಸ ಇರೋದ್ರಿ೦ದ, ಏನೋ ಒಂದಷ್ಟು ಸಾರನ್ನವನ್ನ ಗಂಟಲಲ್ಲಿ ಇಳಿಸ್ಬೋದು.
ಸಾರನ್ನದ ಬಗ್ಗೆ ನನ್ನ ಅಭಿಪ್ರಾಯ ಏನಾದರು ಇದ್ದ್ಗೊ೦ಡ್ ಹೋಗ್ಲಿ. ನನ್ನ ಚೀನಿ ಸಹೋದ್ಯೋಗಿಯೂ ಅದರ ಬಗ್ಗೆ ಆಕ್ಷೇಪಣೆ ಮಾಡೋದೆ? ಒ೦ದು ದಿನ ಊಟ ಮಾಡುವಾಗ ಕೇಳಿಯೇಬಿಟ್ಟಳು “How come you bring rice inside some kind of soup everyday?” ಎ೦ದು. ಸಾರನ್ನದ ಬಗ್ಗೆ ಈ ರೀತಿ ಲಘುವಾಗಿ ಮಾತಾಡೋದೆ? ಅವಳು ತರುವ ಊಟದ ಬಗ್ಗೆ ಏನಾದರೂ ಖಾರವಾಗಿ ಹೇಳಬೇಕು ಎ೦ದು ಮುಷ್ಠಿ ಬಿಗಿದು ಪ್ರಯತ್ನ ಪಟ್ಟೆ. ಬಾಯಲ್ಲೇ ತಡವರಿಸಿದೆನೆ ಹೊರೆತು ಹೆಚ್ಚು ಹೇಳಲಾಗಲಿಲ್ಲ. ನ೦ತರ ಚೆನ್ನಾಗಿ ಯೋಚಿಸಿ ಅವಳ ಊಟದ ಬಗ್ಗೆ ಒ೦ದು ಒಳ್ಳೆಯ ವ್ಯಾಖ್ಯಾನವನ್ನು ಸಿಧ್ಧ ಮಾಡಿಕೊಂಡೆ. ಅದನ್ನು ಹೇಳಲು ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ. ಎಷ್ಟೇ ಆದರೂ ನಮ್ಮ ಊಟ ನಮಗೆ ಹೆಚ್ಚು.
ಅದೇ ದಿನ ನನ್ನ ಜಪಾನಿ ಸಹೋದ್ಯೋಗಿಗೆ ಸಾರನ್ನದ ಬಗ್ಗೆ ಕುತೂಹಲವುಂಟಾಯಿತು. ವಿನಮ್ರತೆಯಿ೦ದ ಕೇಳಿದ “May I try it ?” ಎ೦ದು. ನಾನು ಸ್ವಲ್ಪ ಅಳುಕಿನಿಂದಲೆ “Sure” ಎ೦ದೆ. ಅವನು ಒಂದು ಚಮಚದಷ್ಟನ್ನು ಬಾಯಿಗೆ ಹಾಕಿಕೊಂಡ. ನಾನು ಅವನ ಮುಖವನ್ನೇ ನೋಡ ತೊಡಗಿದ್ದೆ. ಅವನು ತನ್ನ ಕಣ್ಣುಗಳ್ಳನ್ನು ಮುಚ್ಚಿ, ಕತ್ತನ್ನು ಸ್ವಲ್ಪ ಹಿ೦ದಕ್ಕೆ ವಾಲಿಸಿ ಸಾರನ್ನವನ್ನು ಮೆಲ್ಲುತ್ತ “ಊ೦ ಊ೦ ಊ೦ಹು೦ಹು೦” ಎ೦ದು ತಲೆದೂಗ ತೊಡಗಿದ. ನಾನು ಕಾತುರತೆಯಿ೦ದ ” So what do you think ?” ಎ೦ದೆ. ಅವನು ಕಣ್ಣು ಮುಚ್ಚಿಕೊ೦ಡೇ “It is really cool. I can feel it soothing the nerves on the back of my head” ಎ೦ದು ಹೇಳಿ ಮತ್ತೊಮ್ಮೆ “ಊ೦ ಊ೦ ಊ೦ಹು೦ಹು೦” ಎ೦ದು ಪರಮಾನಂದದಿ೦ದ ತಲೆಯಾಡಿಸುತ್ತ “I can really feel it here” ಎ೦ದು ತನ್ನ ತಲೆಯ ಹಿ೦ಬಾಗವನ್ನು ತೋರಿಸಿದ. ತಕ್ಷಣ ನನ್ನ ಮನಸ್ಸು ಮನೆಯ Fridgeನಲ್ಲಿ ಕುಳಿತಿರುವ ಸಾರಿನ ಪುಡಿಯ ಕಡೆ ಹರಿಯಿತು. ಹೋದ ವರುಷ ಭಾರತದಿಂದ ತಂದ ಸಾರಿನ ಪುಡಿ ಇತ್ತೀಚೆಗೆ ಮತ್ತು ಬರಿಸುವ ಗುಣಗಳ್ಳನ್ನು ಸಂಪಾದಿಸಿಕೊಂಡುಬಿಟ್ಟಿತ್ತೊ ಹೇಗೆ? ಅಷ್ಟು ಹೊತ್ತು ಊಟ ನಿಲ್ಲಿಸಿದ್ದ ನಾನು ಕೂಡಲೆ ಒಂದು ಚಮಚ ಬಾಯಿಗೆ ಹಾಕಿಕೊಂಡೆ. ಅದರ ರುಚಿ ತಲೆಯ ಹಿ೦ಬಾಗಕ್ಕೆ ಪರಿಣಾಮ ಬೀರುವುದಿರಲಿ, ನನ್ನ ನಾಲಿಗೆಯ ಮೇಲೆ ರುಚಿಯಿಲ್ಲದೆ ಹರಿದು ಸುಮ್ಮನೆ ಹೊಟ್ಟೆ ಸೇರಿತ್ತು. ಜಪಾನಿ ಸಹೋದ್ಯೋಗಿ ಉತ್ಸಾಹದಿ೦ದ ಕೇಳಿದ “Can I take some for my wife?”. ನನಗೆ ಆ ವೇಳೆಗೆ ಏನೂ ತೋಚದ೦ತೆ ಆಗಿತ್ತು. ಆಗಲಪ್ಪ ತಗೊಂಡು ಹೋಗು ಎಂದು ಸ್ವಲ್ಪ ಕೊಟ್ಟೆ. ಮಾರನೆ ದಿನ ಊಟದ ಸಮಯದಲ್ಲಿ ಅವನನ್ನು ಕೇಳಿದೆ. “So what did your wife think of ಸಾರನ್ನ?”. ಅವನು ಸಂತೃಪ್ತಿಯಿ೦ದ ಬೀಗುತ್ತಾ ಉತ್ತರಿಸಿದ “Oh she liked it very much. She too felt it was soothing to the nerves at the back of her head.” ಅದನ್ನು ಕೇಳಿ ನಾನು ಸುಸ್ತು ಹೊಡೆದು ಹೋದೆ. ಆದರೆ ಸ್ವಲ್ಪ ನಿಧಾನಿಸಿ ಯೋಚಿಸಿದಾಗ ಅವನ ಸ೦ಸಾರದ ಬಗ್ಗೆ ಮೆಚ್ಚುಗೆ ಉ೦ಟಾಯಿತು. ಪರವಾಗಿಲ್ವೆ! ಗಂಡ-ಹೆಂಡ್ತೀರಿಬ್ಬರೂ ಸರಿಯಾಗಿದಾರೆ! ಏನು ಹೊಂದಾಣಿಕೆ. ’ಇಬ್ಬರಿಗೂ ತಿ೦ದ ಅನ್ನ ಒಂದೆ ಜಾಗಕ್ಕೆ ಮೈಗೆ ಹತ್ತತ್ತೆ’. ಅಥವಾ… ಇಬ್ಬರಿಗೂ ನೆತ್ತಿ-ಗಿತ್ತಿ ಹತ್ತಿಬಿಟ್ಟು confuse-ginfuse ಮಾಡಿಕೊಂಡಿರಬಹುದೊ? ಯೋಚನೆ ಮಾಡಿದಷ್ಟೂ ತಲೆ ಕೆಡಲು ಶುರುವಾಯಿತು. ಅದೇ ಯೋಚನೆ ಮಾಡುತ್ತಾ ನನ್ನ ಸಾರನ್ನಕೆ ಕೈ ಹಾಕಿದೆ.ಅನ್ನ ಸಾರು ಹೊಟ್ಟೆ ಸೇರಿದ೦ತೆ ಮನಸ್ಸು ಸ್ವಲ್ಪ ಶಾಂತವಾಯಿತು. ಸಾರನ್ನದ ಮಹಿಮೆ ಇರಬಹುದೇ ಎಂಬ ಸಂದೇಹ ಸುಳಿಯುತ್ತಿದಂತೆ ಅದನ್ನು ಅಲ್ಲಿಗೆ ಮೊಟಕುಗೊಳಿಸಿ ಆ ವಿಚಾರ ಅಲ್ಲಿಗೇ ಮರೆತೆ.
ನನ್ನ ಅಜ್ಜಿ ನನ್ನ ಬಗ್ಗೆ ಹೇಳುತ್ತಿದ್ದ ಮಾತು ನೆನಪಿಗೆ ಬರ್ತಾ ಇದೆ. “ಇವನಿಗೆ ಊಟ ತಿ೦ಡಿ ವಿಷಯದಲ್ಲಿ ಸ್ವಲ್ಪ ಕುಷ್ಪಿಷ್ಟಿ ಜಾಸ್ತಿ” ಅಂತ. ನನಗೋ ಅದು ಭಾರಿ ತಮಾಶೆ ಎನಿಸುತ್ತಿತ್ತು. ಈ ’ಕುಷ್ಪಿಷ್ಟಿ’ ಅನ್ನೋದು ನಮ್ಮ ಅಜ್ಜಿಯೇ ಹುಟ್ಟುಹಾಕಿದ ಪದ ಎಂದುಕೊಂಡಿದ್ದೆ. ಆದರೆ ಈಚೆಗೆ ನಿಘಂಟಿನಲ್ಲಿ ಅ ಪದ ನೋಡಿದಾಗ ಅದರ ಸರಿಯಾದ ಉಚ್ಛಾರಣೆ ಮತ್ತು ಅರ್ಥ ಈ ರೀತಿ ಇತ್ತು. “ಕುಸಿವಿಷ್ಟಿ – ಅತೀ ನಾಜುಕಿನ; ಸುಲಭವಾಗಿ ಮೆಚ್ಚದ”. ಇದೆಲ್ಲ ಊಟ ತಿ೦ಡಿಯ ವಿಷಯದಲ್ಲಿ ನನಗಿರುವ ಧೋರಣೆಯ ಬಗ್ಗೆ! ಇಷ್ಟಾಗಿ ನಾನು ಮಾಡುತ್ತಿದ್ದುದಾದರೂ ಏನು? ಕೆಲವೊಮ್ಮೆ ಅಡುಗೆಯ ರುಚಿ ನೋಡದೇ ಅದನ್ನು ಬರಿ ಕಣ್ಣಿನಿಂದ ನೋಡಿ ಅದಕ್ಕೆ ’ಉಪ್ಪು ಕಮ್ಮಿ’ ಅಂತಾನೊ, ಅಥವಾ “ಇದಕ್ಕೆ ಕಾರ ಜಾಸ್ತಿ ಅಂತ ಕಾಣ್ಸತ್ತೆ” ಎಂದೋ, ಹೇಳುವ ಚಾತುರ್ಯ ನನಗಿತ್ತು. ಕೆಲವೊಮ್ಮೆ ಹೀಗೂ ಹೇಳಿದ್ದು೦ಟು – ” ಅಮ್ಮ ನೀನು ಮಾಡೊ ಇಡ್ಲಿ ಚಟ್ನಿ ಮದುವೆ ಮನೇಲಿ ಅಡುಗೆಯವರು ಮಾಡೊ ತರ ಯಾಕಿರಲ್ಲ?”. ಕೊನೆಗೊಂದು ದಿನ ನನ್ನ ಅಮ್ಮ ಸಿಟ್ಟಿನಿಂದ ಹೀಗೆಂದಿದ್ದರು “ನಿನಗೆ ನೀರುನಿಡಿ ಸಿಗದಲೆ ಇರೊ ಜಾಗಕ್ಕೆ ಕರ್ಕೊಂಡು ಹೋಗಿ ಬಿಡಬೇಕು. ಆಗ ತಿಳಿಯುತ್ತೆ ನಾನು ಮಾಡೊ ಅಡುಗೆಯ ಬೆಲೆ”. ಇದೆಲ್ಲ ನಡೆದು ಅನೇಕ ವರುಷಗಳಾಗಿವೆ. ಈಗ ಆ ಕುಸಿವಿಷ್ಟಿ ಅ೦ದರೆ ಏನು ಎಂದು ಅರ್ಥ ಹುಡುಕುವಂತಾಗಿದೆ. ನಾನು ಪ್ರತಿದಿನ ಬೆಳಗ್ಗೆ ಕಾರು ನಡೆಸುತ್ತ ಎರಡು slice ಬ್ರೆಡ್ಡನ್ನು ತಿನ್ನುತ್ತೇನೆ. ಅದಕ್ಕೆ ಉಪು ಹುಳಿ ಕಾರ ಒಂದೂ ಇಲ್ಲ. ಆದರೂ ಕಳೆದ ಮೂರು ವರುಷದಿಂದ ತಿನ್ನುತ್ತಿದ್ದೇನೆ. ಸುಮ್ಮನೆ ಯಾಂತ್ರಿಕವಾಗಿ ತಿನ್ನುತ್ತೇನೆ. ಕೆಲವೊಮ್ಮೆ drive ಮಾಡುವ ಭರದಲ್ಲಿ ಬ್ರೆಡ್ಡನ್ನು ಸುತ್ತಿದ ಪೇಪರನ್ನೂ ಸಹ ತಿಂದುಬಿಟ್ಟಿರುತ್ತೇನೆ. ಗೊತ್ತೇ ಆಗಿರುವುದಿಲ್ಲ.
ಆದರೆ ಈಚೆಗೆ ನಾನು ತಲ್ಲಣಿಸುವಂತಹ ಒಂದು ಘಟನೆ ನಡೆದುಹೋಯಿತು. ಹೀಗೆ ಯಾರೊ ಪರಿಚಯದವರ ಮಗುವಿನ ಹುಟ್ಟುಹಬ್ಬದ ಸಂದರ್ಭ. ನನ್ನ ಹೆ೦ಡತಿ ಹಾಗು ಮಗಳು ಮುಂಚೆಯೇ ಹೋಗಿದ್ದರು. ನಾನು ತಡವಾಗಿ ಬರುವ ಹೊತ್ತಿಗೆ ಬಹು ಪಾಲು ಜನರ ಊಟ ಮುಗಿದಿತ್ತು. ಊಟ ಮಾಡಲು ಹೊಂಚುಹಾಕುತ್ತಿದ್ದ ನನ್ನನು ನೋಡಿ ನನ್ನ ಹೆಂಡತಿ “ಬಿಸಿಬೇಳೆ ಬಾತ್ ಇದೆ. ಚೆನ್ನಾಗಿದೆ! ತಿನ್ನು” ಎಂದು ಹೇಳಿ ಬೇರೆ ಕಡೆ ಗಮನ ಹರಿಸಿದಳು. ನಾನು ಬಿಸಿಬೇಳೆ ಬಾತ್ ಹಾಕಿಕೊಂಡು ತಿನ್ನತೊಡಗಿದೆ. ಚೆನ್ನಾಗೇನೂ ಇರಲ್ಲಿಲ್ಲ. ಆದರೆ ಹಸಿವಾಗಿದ್ದರಿಂದ ಎರಡನೆ ಸುತ್ತಿಗೆ ಇನ್ನಷ್ಟು ಬಿಸಿಬೇಳೆ ಬಾತ್ ಹಾಕಿಕೊಂಡು ತಿನ್ನತೊಡಗಿದೆ. ಆಷ್ಟು ಹೊತ್ತು ಯಾರೊಟ್ಟಿಗೋ ಮಾತನಾಡುತ್ತಿದ್ದ ನನ್ನ ಪತ್ನಿ ಗಾಭರಿಯಿಂದ ಕೇಳಿದಳು “ಅಯ್ಯೋ ಅದನ್ಯಾಕೆ ತಿಂತಾ ಇದೀಯ?”. ನಾನೆಂದೆ “ನೀನೆ ಹೇಳಿದ್ಯಲ್ಲಾ! ಬಿಸಿಬೇಳೆ ಬಾತ್ ತಿನ್ನು ಅಂತ!” “ಅಯ್ಯೊ ಇದು ಪಾವ್ ಬಾಜಿದು ಪಲ್ಯ” ಎಂದಳು. ಅಷ್ಟಕ್ಕೆ ನಿಲ್ಲಿಸದೆ ಪಿಸುದನಿಯಲ್ಲಿ ನುಡಿದಳು “ಅದೂ ಹಳಸಿಹೋಗಿದೆ”. ಇದು ನನಗೆ ತೀರ ಆಘಾತವನ್ನುಂಟು ಮಾಡಿತು. ಛೆ! ನಾನು ಈ ಮಟ್ಟಕ್ಕೆ ಇಳೀ ಬಾರದಿತ್ತು! ಬಿಸಿಬೇಳೆ ಬಾತಿಗೂ ಪಾವ್ ಬಾಜಿಯ ಪಲ್ಲ್ಯಕ್ಕೂ ವ್ಯತ್ಯಾಸ ತಿಳಿಯದ ಹಾಗಾಗಿ ಹೋಯಿತೆ ನನ್ನ ಕುಸಿವಿಷ್ಟಿ? ಪೇಪರನ್ನು ಬ್ರೆಡ್ಡೆಂದು ಭಾವಿಸಿ ತಿಂದಿದ್ದು ನಿಜ. ಒಪ್ಪ್ಕೋತೀನಿ. ಆದರೆ ಹಳಸಿದ್ದನ್ನು ತಿಂದರೂ ಗೊತ್ತಾಗದೇ ಹೋಗಿದ್ದು? ಇದನ್ನು ಒಪ್ಪಿಕೊಳ್ಳೋಕೆ ನಾನು ಖಂಡಿತ ತಯಾರಿಲ್ಲ.
ಒಟ್ಟಿನಲ್ಲಿ ನಾನು ಹೇಳೋದು ಇಷ್ಟೆ. ಒಂದು – ಪಾವ್ ಬಾಜಿ ಪಲ್ಯ ಹಳಸಿದರೆ ಬಿಸಿಬೇಳೆ ಬಾತಿನಂತೆ ರುಚಿಸುತ್ತದೆ. ಎರಡನೇದು – ಯಾರಾದರು ಕಷ್ಟಸುಖದ ವಿಷಯ ವಿಚಾರಿಸಿದರೆ “ಲೈಫ಼ೇ ಚಿತ್ರಾನ್ನ” ಅನ್ನುವ ಬದಲು ’ಲೈಫ಼ೇ ಸಾರನ್ನ’ ಅಂದರೆ ಹೇಗೆ? ಒಮ್ಮೆ ಪರಿಶೀಲಿಸಿ ನೋಡಿ.