ಅಮೆರಿಕೆಯಲ್ಲಿ ಬಿಡಾರ ಹೂಡಿರುವ ಕನ್ನಡ ಪರಿಸರದ ಸ್ಥಾಯೀ ಮತ್ತು ಸಂಚಾರೀ ಭಾವಗಳ, ವೈವಿಧ್ಯಪೂರ್ಣ ಆಧುನಿಕ ಅಭಿವ್ಯಕ್ತಿಯ ವಿಶಿಷ್ಟ ಸೊಲ್ಲುಗಳ ಸಂಕಲನ ಇದು. ಕಾವ್ಯದ ಧ್ವನಿಶಕ್ತಿಯ ಜೊತೆಗೆ ಕಥನದ ಕುತೂಹಲವನ್ನೂ ಹೊಂದಿರುವ ಈ ಲಲಿತ ನಿಬಂಧಗಳು, ತಮ್ಮ ಅನುಭವಜನ್ಯ ವಿವರಗಳಲ್ಲಿ ಮೈದಾಳುತ್ತಲೇ, ಅದರಾಚೆಗೂ ಚಿಂತನಶೀಲವಾಗಿ ರೆಕ್ಕೆ ಬಿಚ್ಚುವ ರೀತಿ ಭಾವೋದ್ದೀಪಕವಾಗಿದೆ. ಹೊಸ ಆವರಣ, ಜೀವನ ಶೈಲಿಯ ವಿವರ, ಮಾಹಿತಿಗಳಷ್ಟೆ ಪ್ರಬಂಧವಾಗಲಾರವು. ವಿವರಗಳು ಅರಿವಿನೆಡೆಯ ಕಿಟಕಿಗಳೂ, ಬಾಗಿಲುಗಳೂ, ಕಾಲ್ದಾರಿಗಳೂ ಆದಾಗ ಮಾತ್ರ ಅದು ಸಾರ್ಥಕ ಸಲ್ಲಾಪ.
‘ಕೆಂಪು ಗಾಜಿನ ಹಣ್ಣುಗಳಂತೆ ಕಾಣುವ ಗಾರ್ನೆಟ್‌ಗಳು’, ‘ಸ್ಕೂಟರನ್ನು ಬೆದರಿಸುವ ಲಾರಿಯಂತೆ ಲೇಖಕಿಯನ್ನು ಕಂಗೆಡಿಸುವ ಖಾಲಿ ಹಾಳೆ’, ‘ಬಡಿಸಿದ್ದು ಆರಿ ಹೋಗ್ತಾಇದೆ, ಊಟಕ್ಕೆ ಬಾರೋ’ ಎಂದು ಕರೆಯುತ್ತಲೇ ಇರುವ ಅಮ್ಮನ ದನಿ, ‘ಮತಿಘಟ್ಟದ ಅಪರೂಪದ ಹತ್ತಿಯಷ್ಟೇ ಮೃದುವಾದ ನೆಹರೂರ ಕೈಕುಲುಕನ್ನು ನೆನೆಯುವ ಅಜ್ಜಯ್ಯ’, ‘ಐಸಿಯು’ನ ವೆಂಟಿಲೇಟರಿನಲ್ಲಿ ಹೋಗದ ಗಂಗೋದಕ’, ‘ಊರಿನ ಆಯಿಗೆಂದೇ ಕಾದಿರಿಸಿದ ಮಾಲ್‌ನ ಇಪ್ಪತ್ತು ಪೌಂಡ್ ಅಕ್ಕಿಯ ಸೋನಾಮಸೂರಿಯ ಖಾಲಿಚೀಲ’, ‘ಬಡವನ ಪಾಲಿನ ಕೇವಲ ಕಪ್ಪುಬಿಳಿಬಣ್ಣದ ಕಾಮನಬಿಲು’, ‘ಎಂದೂ ಹಾದಿ ತಪ್ಪಿಸದ ಎದೆಯ ಜಿ.ಪಿ.ಎಸ್’, ‘ಎಚ್‌ಒನ್‌ಎನ್‌ಒನ್’ಗಿಂತ ಭಯಾನಕವಾದ ‘ಎಚ್‌ಒನ್’(ವೀಸಾ) ಆತಂಕ, ‘ಕ್ಷಣವನ್ನು ಹಿಡಿಯುವುದನ್ನು ಹೇಳಿಕೊಡುವ ಟೀವಿ ಗುರು’, ‘ಕಳೆದುಕೊಂಡದ್ದರ ಕುರಿತ ದಿಢೀರ್ ವೈರಾಗ್ಯ’, ‘ಸೊನ್ನೆಯಿಂದ ಅನಂತದ ನಡುವಿನ ಶೂನ್ಯ ಸಂಪಾದನೆ’, ‘ನೆನಪಿನ ಚಿಲಿಪಿಲಿಗಳಿಂದ ನೇಯ್ದ ಖಾಲಿಗೂಡು’, ‘ಬರೆದು ಒರೆಸಿದಷ್ಟೂ ನುಣುಪಾಗುವ, ಅಂಚು ಮೊಂಡಾದ ಕಲ್ಲಿನ ಪಾಟಿ(ಸ್ಲೇಟ್)’ …. ಇಂಥ ಎಷ್ಟೊಂದು ಸಜೀವ ಸಂಗತಿಗಳು, ಒಟ್ಟಾಗಿ ಒಂದು ದರ್ಶನದೆಡೆಗೆ ಪ್ರಾಮಾಣಿಕವಾಗಿ ಚಲಿಸುವ ರೀತಿಯೇ ಈ ನಿಬಂಧಗಳ ನಿರಾಡಂಬರ ಸ್ಥೈರ್ಯವಾಗಿದೆ. ಇಂಥ ವಿವರಗಳು ಕೇವಲ ಕಲೆಹಾಕುವ ‘ಮಾಹಿತಿ’ಗಳಾಗದೆ, ಒಂದು ಮನೋಧರ್ಮವನ್ನು ರೂಪಿಸುವ ಸ್ಪಂದನವಾಗಿ ಬೆಳೆಯುವುದರಿಂದಲೇ, ಇಲ್ಲಿನ ಹೆಚ್ಚಿನ ಬರಹಗಳು ಕನ್ನಡ ಸಂವೇದನೆಯನ್ನು ಹಿಗ್ಗಿಸುವಷ್ಟು ಸತ್ವಶಾಲಿಯಾಗಿವೆ.
ಜಯಂತ ಕಾಯ್ಕಿಣಿ