Oct 252012
 

ಬುಕ್ ಕ್ಲಬ್ – ಕನ್ನಡ ಸಾಹಿತ್ಯ ರಂಗದ ವತಿಯಿಂದ ಹೊಸದಾಗಿ ಪ್ರಾರಂಭವಾಗಿರುವ ಸಾಹಿತ್ಯ ಚಟುವಟಿಕೆ. ಅಮೆರಿಕದಾದ್ಯಂತ ಹಂಚಿಹೋಗಿರುವ ಸದಸ್ಯರು ದೂರವಾಣಿಯಲ್ಲಿ ಏಕಕಾಲಕ್ಕೆ ಸೇರಿ, ತಮಗೆ ಇಷ್ಟವಾದ ಸಣ್ಣಕಥೆಯೊಂದರ ಕುರಿತು ಅಭಿಪ್ರಾಯ ವಿನಿಮಯ ನಡೆಸುವುದು ಇದರ ಹಿಂದಿರುವ ಉದ್ದೇಶ. ಈಗಾಗಲೇ ಈ ರೀತಿಯ ಹಲವಾರು ಗುಂಪುಗಳು ಸಮಾನ ಅಭಿರುಚಿ ಉಳ್ಳವರನ್ನು ಸೇರಿಸಿಕೊಂಡು ತಮ್ಮ ಸಾಹಿತ್ಯಾಸಕ್ತಿಯನ್ನು ಪೋಷಿಸಿಕೊಂಡು ಬರುತ್ತಿವೆ. ಕನ್ನಡ ಸಾಹಿತ್ಯ ರಂಗವೂ ಸಾಹಿತ್ಯ ಚರ್ಚೆಗಾಗಿ ಇಂತಹ ವೇದಿಕೆಯೊಂದನ್ನು ಪ್ರಾರಂಭಿಸಬೇಕೆಂದು ನಿರ್ದರಿಸಿ, ಅದಕ್ಕೆ ಸ್ಪಷ್ಟವಾದೊಂದು ರೂಪ ಕೊಟ್ಟವರು ಕಥೆಗಾರ, ಕಾದಂಬರಿಕಾರ, ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷರೂ ಆಗಿರುವ ಗುರುಪ್ರಸಾದ್ ಕಾಗಿನೆಲೆಯವರು.

ಕನ್ನಡ ಸಾಹಿತ್ಯ ರಂಗದ ಸದಸ್ಯರಿಗೆ ಸೂಚಿಸಿದ ಸಣ್ಣಕಥೆಯೊಂದನ್ನು ಮುಂಚಿತವಾಗಿ ವಿ-ಅಂಚೆಯ ಮೂಲಕ ಕಳಿಸಿಕೊಡುವುದು, ಸದಸ್ಯರು ಅದನ್ನು ಮುಂಚಿತವಾಗಿ ಓದಿಕೊಂಡು ನಂತರ ಸಭೆಯಲ್ಲಿ ಭಾಗವಹಿಸಿ ಚರ್ಚಿಸುವುದು, ಇದರ ಸದ್ಯದ ರೂಪರೇಷೆ. ಅವಕಾಶವಾದಲ್ಲಿ, ಅಮೆರಿಕ ಪ್ರವಾಸಕ್ಕೆಂದು ಬರುವ, ಭಾರತದಲ್ಲೂ ಇರುವ, ಕವಿ-ಲೇಖಕ-ಸಾಹಿತಿಗಳನ್ನೂ ಸಂವಾದದಲ್ಲಿ ತೊಡಗಿಸಿಕೊಳ್ಳುವ, ಅವರ ವಿಚಾರಧಾರೆಯನ್ನು ಹಂಚಿಕೊಳ್ಳುವ ಯೋಜನಯೂ ಇದರಲ್ಲಿ ಸೇರಿಕೊಂಡಿದೆ.

ಕನ್ನಡ ಸಾಹಿತ್ಯ ರಂಗದ ಎಲ್ಲಾ ಸದಸ್ಯರೊಡನೆ ವಿಚಾರ ವಿನಿಮಯ ನಡೆಸಿದ ನಂತರ, ಅಕ್ಟೋಬರ್, ೨೧, ೨೦೧೨, ಶನಿವಾರದಂದು ಬುಕ್ ಕ್ಲಬ್‌ನ ಮೊದಲ ಸಭೆ ಸೇರುವುದೆಂದು ನಿರ್ಧಾರವಾಯಿತು. ಮೊದಲನೆಯ ಸಭೆಯಲ್ಲಿ ಸಂವಾದಕ್ಕೆಂದು ಆರಿಸಿಕೊಂಡಿದ್ದು ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಸಣ್ಣ ಕಥೆ “ಕಲ್ಮಾಡಿಯ ಕೋಣ”. ಅಕ್ಟೋಬರ್ ೨೧ ರ ಸಾಯಂಕಾಲ ಪೂರ್ವ ಕರಾವಳಿಯ ಸಮಯ ಐದು ಘಂಟೆಗೆ ಪ್ರಾರಂಭಗೊಂಡು ಆರು ಘಂಟೆಗೆ ಸಭೆ ಮುಕ್ತಾಯಗೊಂಡಿತು. ೨೨ ಜನ ಸಾಹಿತ್ಯ ಪ್ರೇಮಿಗಳು ಈ ಸಭೆಯಲ್ಲಿ ಭಾಗವಹಿಸಿದ್ದು, ಮಾಸ್ತಿಯವರ ಕಥೆಯ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.

ಈ ಸಭೆಯಲ್ಲಿ ಚರ್ಚಿತಗೊಂಡ ಕಥೆ ‘ಕಲ್ಮಾಡಿಯ ಕೋಣ’ದ ಪಿಡಿ‌ಎಫ್ ರೂಪದಲ್ಲಿ ಇಲ್ಲಿ ಲಭ್ಯವಿದೆ. ಈ ಕಥೆಯ ಕುರಿತು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಲು ಸರ್ವರಿಗೂ ಸ್ವಾಗತವಿದೆ. ಕಾಮೆಂಟ್ ರೂಪದಲ್ಲಿ ನಿಮ್ಮ ಅನಿಸಿಕೆಗಳನ್ನು ಇಲ್ಲಿ ಹಂಚಿಕೊಳ್ಳಿ.

ಬನ್ನಿ, ಸಾಹಿತ್ಯ ಪಯಣದಲ್ಲಿ ಸಹಯಾತ್ರಿಕರಾಗೋಣ..

========================================================================================================

ಮಾಸ್ತಿಯವರ ಸಣ್ಣ ಕಥೆ – ಕಲ್ಮಾಡಿಯ ಕೋಣ

ಕಲ್ಮಾಡಿಯ ಕೋಣ – ಮಾಸ್ತಿ ವೆಂಕಟೇಶ ಅಯ್ಯಂಗಾರ್

ಈ ಕಥೆಯ ಕುರಿತು, ಕನ್ನಡ ಸಾಹಿತ್ಯ ರಂಗದ ಸದಸ್ಯರಾದ ಕೃಷ್ಣಪ್ರಿಯ ಅವರ ಆಸಕ್ತಿಕರ ಟಿಪ್ಪಣಿ ಇಲ್ಲಿದೆ. ಈ ಬಗ್ಗೆ ಮತ್ತಷ್ಟು ಹೊಸ ನೋಟಗಳು ಇಲ್ಲಿ ಸಾಧ್ಯವಾಗಲಿ.

* ಕತೆ, ಸಿನಿಮಾಗಳ ಸಾರವನ್ನು ಒಂದು ವಾಕ್ಯದಲ್ಲಿ ಹೇಳುವ ಪ್ರಯತ್ನ ಉಪಯುಕ್ತ ಎಂದು ಎಲ್ಲೋ ನೋಡಿದ್ದೇನೆ. ಅದು ಇಲ್ಲಿ ಮಾಡಿದರೆ, “ಕೋಣ ಜೀವ ಉಳಿಸಿಕೊಳ್ಳಲು ಪ್ರಯತ್ನಿಸಿ ಮುಂದೆ ಎರಡು ಕೋಣ ಬಲಿಯಾಗುವಂತೆ ಮಾಡುತ್ತದೆ” ಎಂದು ಹೇಳಬಹುದೇ?

* ಭಾವ-೨ರಲ್ಲಿ ಚಿರತೆಯ ಬೇಟೆಯ ವಿಷಯಕ್ಕೆ(೧೨ನೆಯ ಪ್ರಕರಣ,ಚಿರತೆಯ ಬೇಟೆ), ಈ ಕತೆಗೆ ಹೋಲಿಕೆ ಇದೆ.

* ಕಲ್ಮಾಡಿ – ಇಂಟರ್ನೆಟ್ಟಿನಲ್ಲಿ ಹುಡುಕಿದರೆ ಮಹಾರಾಷ್ಟ್ರದಲ್ಲಿ ಸಿಕ್ಕುತ್ತದೆ. ಊರು, ಕತೆಯಲ್ಲಿ ಹೇಳುವಂತೆ ಮಂಗಳೂರಿನ ಹತ್ತಿರವೂ ಇದೆ, ಇಂಗ್ಲೀಷಿನಲ್ಲಿ ಕೆಲವು ಕಡೆ ಈ ಊರಿನ ಕಡೆಯ ಅಕ್ಷರ ವೈ. ರಾಜಕಾರಣಿ ‘ಸುರೇಶ್ ಕಲ್ಮಾಡಿ’ಯವರ ಹೆಸರು ಅದೇ ರೀತಿಯದು.

* ಇಲ್ಲಿ ಈ ಹೆಸರಿನ ಬಳಕೆ. ನಿರೂಪಕನ, ಕತೆಯ, ಜಾಗ ಸೂಚಿಸುವುದು (ಅದು ಮಂಗಳೂರಿನ ಕಡೆ ಅಲ್ಲ ಎಂದು ಹೇಳುವುದು ಮುಖ್ಯ)? ಕತೆಗೆ ದ್ರಾವಿಡ ಹೆಸರು, ಸಂಸ್ಕೃತದ ಹೆಸರಿನ ಊರಿಗಿಂತ ಸರಿಹೋಗುತ್ತದೆ? “ಕಲ್ಮಾಡಿ”, “ಕೋಣ”ಗಳ ಅಲಿಟಏಷನ್. ಹಲ್ಮಡಿ ಶಾಸನ ಪ್ರಸಿದ್ಧವಾಗಿರುವುದರಿಂದ, ಅದಕ್ಕೆ ಹತ್ತಿರದ ಸಾಮ್ಯ ಇರುವ ಹೆಸರು (ಕಕಾರ, ಹಕಾರ ಉಚ್ಚಾರಣೆಯಲ್ಲಿ ಹತ್ತಿರದವು).

* ಕಲ್ಮಾಡಿ ಎಂಬ ಊರು, ಮಂಗಳೂರಿನ ಕಡೆ ಅಲ್ಲದೆ ಬೇರೆ ಕಡೆ ಇಲ್ಲದೆ ಇರುವುದು, ಆ ಹೆಸರಿನ ಊರಿನವರಿಗೆ ಮುಜುಗರ ಆಗದೆ ಇರುವಂತೆ ಮಾಡುವ ತಂತ್ರ? ಈ ರೀತಿಯ ಪ್ರಯತ್ನವನ್ನು “ಬೀದಿಯಲ್ಲಿ ಹೋಗುವ ನಾರಿ”ಯಲ್ಲಿನ ಬೆಂಗಳೂರು, ಮೈಸೂರು ಅಲ್ಲದ “ಮಯಿಳೂರನ್ನು” ಹುಟ್ಟಿಸಿರುವುದರಲ್ಲಿ ನೋಡಬಹುದು.

* ನಿರೂಪಕನ ಪಾತ್ರ (ಉತ್ತಮ ಪುರುಷದಲ್ಲಿ ಕತೆ ಹೇಳಿದರೂ, ನಿರೂಪಕ ಮಾಸ್ತಿ ಅಲ್ಲದೆ ಇರುವ ಸಂಭವ ಹೆಚ್ಚು). ಯೂರೋಪಿನ ಬಗ್ಗೆ ಗೊತ್ತು. ಹೆಸರುಗಳ ವಿಷಯದಲ್ಲಿ ಆಸಕ್ತಿ ಇದೆ, ಆದರೆ ಪರಿಣತಿ ಇಲ್ಲ. ’ಪ್ರಮೋಷನ್’ ಪದ ಬಳಸುತ್ತಾನೆ.

ಹೊರಹಳ್ಳಿ – ಬೆಂಗಳೂರಿನ ಹತ್ತಿರದ (ಬೆಂಗಳೂರಿನ ಭಾಗವೇ ಆಗಿರುವ) ಊರು?
ಹಾಲಾರ – ?
ಮಜರೆ ? – ಕಂದಾಯದ ಲೆಕ್ಕಕ್ಕೆ ಸಂಬಂಧಪಟ್ಟ ಪದ? ಮುಜುರಾಯಿ?
ಗಾಡಿಯಲ್ಲಿ ಇಳಿದು ಹೋಗುವುದು, ಗುಡ್ಡ, ಬಯಲು ಸೀಮೆ ಸೂಚಿಸುತ್ತವೆ
ಮನಸರಿಗನ್ನ – ಮನುಷ್ಯರಿಗಿಂತ

ಐಗಳ ರಾಗಿ – ಅಳತೆಯೇ
ಕೊಳಗ – ನಾಕು ಬಳ್ಳ, ೧೬ ಸೇರು, ಕೊಳದಪ್ಪಲೆ ಎಂಬ ಪ್ರಯೋಗ ಇದೆ. ಇತರ ಅಳತೆಗಳು – ಸೇರು, ಪಾವು, ಚಟಾಕು,(ಮಣ, ತೂಕದ್ದು), ಪಲ್ಲ, ದಡಿಯ
ಮೋಸಾಗಿ – ಮೊಳೆತು, ಅಂಕುರವಾಗಿ
ಹಸಿಗೆಯಾಗಿ – ಬೇರೆಯಾಗಿ
ಕರಗಾಗಲಿ – ಹರಿವಾಗಲಿ (ಹಿಂದಿನ ಕರಗಿ ಹರಿಯಿತು ಎನ್ನುವುದರ ಮುಂದುವರಿಕೆ)
ದೇವರ ಗುಡ್ಡ – ಪೂಜಾರಿ
ಸಿಂಧೂರ – ಕುಂಕುಮ
ಕಸುಬಿನ ಕೊರೆ – ಎರಡು ಸಲ ಅಲ್ಲಿ ಹೋಗಿ ನೋಡಬೇಕು, ಅಲ್ಲಿ ಹೋಗಿ ಕೇಳಬೇಕು ಬಳಕೆ
ಸಾಂಗ್ಯ – ನಿಘಂಟುಗಳಲ್ಲಿ ಇರುವಂತಿಲ್ಲ (ಕಿಟ್ಟೆಲ್, ವೆಂಕಟಸುಬ್ಬಯ್ಯ), ಸಂದರ್ಭದಿಂದ ಅರ್ಥ ತಿಳಿಯುತ್ತದೆ.
ಸೇಸೆ ಹಾಕುವುದು – ಹಣೆಗೆ ಅಕ್ಷತೆ ಹಾಕುವುದು
ಸೋಬಾನೆ – ಮಂಗಳದ ಹಾಡು
ಬೆಗಡುಗೊಂಡಿತು – ಅಶ್ಚರ್ಯ, ಭಯ ಪಟ್ಟಿತು
ನಿಟ್ಟು – ನಿಯಮ (ಕಟ್ಟುನಿಟ್ಟು)
ಹಲಲೋ ಕುಲಲೋ- ಕೂಗಾಟದ ಶಬ್ದ
ದಾರಿಯ ನಿಟ್ಟು – ದಾರಿಯ ದಿಕ್ಕು, ಗುರಿ
ಮಂಚಿಗೆ – ಮಟ್ಟಸವಾದ, ಸುತ್ತಮುತ್ತಲ ಜಾಗಕ್ಕಿಂತ ಎತ್ತರವಾದ ಜಾಗ, ಹೊಲ ಕಾಯಲು ಬಳಸುವ ಅಟ್ಟ.
ಎಡೆ – ನೈವೇದ್ಯ
ಆರೋಗಣೆ – ಊಟ
ಮುಸಾಫರ್ – ಪ್ರವಾಸಿ (ಅರಬ್ಬೀ ಪದ, ಸಫ಼ರ್, ಇಂಗ್ಲೀಷಿನ ಸಫ಼ಾರಿಗಳಿಗೆ ಸಂಬಂಧಿಸಿದ್ದು)
ತೊಂಡು – ಉದ್ಧಟತನ, ಬೇಕಾದ್ದನ್ನು ಮೇಯುವುದು
“ಜೀವ ಉಳಿಯುವುದೆಂತು? ಎಂದಿದ್ದರೂ ಅದು ಸಾಯಬೇಕು. ಉಳಿಯುವುದು ಸಾವು….”!

========================================================================================================

 Posted by at 11:34 AM
Oct 172012
 

ಅನೇಕ ವರ್ಷಗಳ ಹಿಂದೆ ನಾನು ಇಂಜಿನೀರಿಂಗ್ ವಿದ್ಯಾರ್ಥಿಯಾಗಿ ಮಹಾರಾಷ್ಟ್ರದ ಕೊಯ್ನಾ ಪ್ರಾಜೆಕ್ಟಿನಲ್ಲಿ ವಿಶೇಷ ತರಬೇತಿ ಪಡೆಯುತ್ತಿದ್ದ ದಿನಗಳಲ್ಲಿ ನನ್ನ ಕೈಗೆ ಸಿಗುತ್ತಿದ್ದ ಏಕೈಕ ಕನ್ನಡ ಪತ್ರಿಕೆ ಸಂಯುಕ್ತ ಕರ್ನಾಟಕ, ಅದೂ ಒಂದು ದಿನ ಹಳೆಯದು! ಅದನ್ನು ಮೊದಲಿಂದ ಕಡೆಯವರೆಗೂ ಓದುತ್ತಿದ್ದೆ. ಕಡೆಯ ಪುಟದ ಜಾಹೀರಾತುಗಳಲ್ಲಿ ತಪ್ಪದೆ ಕಾಣಬರುತ್ತಿದ್ದ ಒಂದು ಐಟೆಮ್ ಅಂದರೆ ‘ಎಮ್ಮೀ ಕಳೆದುಹೋಗಿದೆ…ಬಾಲ ಕೊಂಬು ಸಾಬೀತ್’ ಎಂಬುದು. ಯಾರದೋ ಮನೆಯ ಎಮ್ಮೆ ಕಳೆದುಹೋಗಿದೆ, ಅದನ್ನು ಹುಡುಕಿಕೊಟ್ಟವವರಿಗೆ ಒಂದಿಷ್ಟು ಬಹುಮಾನ, ಆದರೆ ಆ ಹುಡುಕಿಕೊಟ್ಟವನು ಯಾವುದೋ ಎಮ್ಮೆ ತರುವಂತಿಲ್ಲ, ಇದು ಆ ಜಾಹೀರಾತು ಕೊಟ್ಟವನ ಎಮ್ಮೆಯೇ ಎಂಬುದನ್ನು ಬಾಲ ಕೊಂಬುಗಳ ಸಹಿತ ಸಾಬೀತು ಮಾಡಬೇಕು. ಅದು ಸಿಕ್ಕುವವರೆಗೂ ಮನೆಯಲ್ಲಿ ಯಾರಿಗೂ ಹಾಲಿಲ್ಲ, ಕಂದಮ್ಮಗಳ ಪರಿಸ್ಥಿತಿ ಹೇಳಲಾಗದು, ಇನ್ನು ದೊಡ್ಡವರಿಗೆ ಕಾಫಿಯಿಲ್ಲ, ಚಹಾ ಇಲ್ಲ, ನಾಳೆಗೆ ಮೊಸರಿಲ್ಲ, ಮಜ್ಜಿಗೆಯಿಲ್ಲ…ಎಷ್ಟೊಂದು ಬವಣೆಗಳು! ಅದನ್ನು ಓದಿದಾಗೆಲ್ಲ ಆ ಬಾಲ ಕೊಂಬು ಬೇರೆಯಾಗಿದ್ದರೇನಂತೆ, ಕೆಚ್ಚಲಲ್ಲಿ ಹಾಲಿದ್ದರೆ ಸಾಲದೆ ಎನ್ನಿಸುತ್ತಿತ್ತು.

ಈಗ ಹಲವು ದಶಕಗಳ ನಂತರ ನಾನು ‘ಆನೆ ಕಳೆದುಹೋಗಿದೆ’ ಎಂಬ ಒಂದು ಜಾಹೀರಾತು ಕೊಡುವ ಸ್ಥಿತಿಯಲ್ಲಿದ್ದೇನೆ. ಆದರೆ ನಾನಿರುವಲ್ಲಿ ಸಂಯುಕ್ತ ಕರ್ನಾಟಕ ಇಲ್ಲ. ನಾನು ಜಾಹೀರಾತು ಕೊಟ್ಟರೆ ಇಲ್ಲಿನ ಸ್ಥಳೀಯ ಪತ್ರಿಕೆ The Philadelphia Inquirer ನಲ್ಲಿ ಕೊಡಬೇಕು. ಆದರೆ ಅವರು ಅದನ್ನು serious ಆಗಿ ತೆಗೆದುಕೊಳ್ಳುವರೋ ಇಲ್ಲವೋ ಎಂದು ನನಗೆ ಚಿಂತೆ.

ಅವರಿರಲಿ, ನೀವು ಕೂಡ ನನ್ನ ಪರಿಸ್ಥಿತಿಯನ್ನು ಸೀರಿಯಸ್ ಆಗಿ ತೆಗೆದುಕೊಳ್ಳುತ್ತೀರೋ ಇಲ್ಲವೋ. ಆದರೆ ನನಗಂತೂ ಅದೊಂದು ತುಂಬಾ ಗ೦ಭೀರ ಪರಿಸ್ಥಿತಿ ಎನಿಸಿದೆ. ಈಗ ಒಂದು ವಾರದಿಂದ ನಮ್ಮಾಕೆ ನಮ್ಮ ಆನೆ ಕಳೆದುಹೋಗಿದೆ ಎನ್ನುತ್ತಿದ್ದಾಳೆ. ಅದರಿಂದ ಒದ್ದಾಡುತ್ತಿದ್ದಾಳೆ. ಆನೆ ಎಲ್ಲಾದರೂ ಕಳೆದುಹೋಗಬಹುದೆ ಎನ್ನಬಹುದು ನೀವು. ನಾನೂ ಹಾಗೇ ಅಂದು ಅಂದು ಈಗ ನಿಜಸ್ಥಿತಿಗೆ ಕಣ್ಣುಬಿಡುತ್ತಿದ್ದೇನೆ. ಹೌದು, ನಿಜ, ನಮ್ಮ ಆನೆ ಕಳೆದುಹೋಗಿದೆ.

ನಮ್ಮಾಕೆ ಮೊದಲು ಆ ಮಾತು ಹೇಳಿದಾಗ ನಾನೂ ನಂಬಲಿಲ್ಲ. ‘ಏನೆ, ಹೀಗನ್ನುತ್ತೀಯ, ಆನೆ ಎಲ್ಲದರೂ ಕಳೆದುಹೋಗುವುದುಂಟೆ? ಸರಿಯಾಗಿ ನೋಡು’ ಎಂದೆ. ‘ಎಲ್ಲಾ ಕಡೇನೂ ನೊಡಿದೆ ರೀ, ಎಲ್ಲೂ ಕಾಣಲಿಲ್ಲ’ ಎಂದಳು. ನಾವೇನೂ ಕಾಡಿನ ಸಮೀಪ ಇಲ್ಲ, ನಮ್ಮ ಆನೆ ಇಲ್ಲಿಂದ ಕಾಡಿಗೆ ಹೋಗಿ ಅಲ್ಲಿ ಕಣ್ಣು ತಪ್ಪಿಸುವುದಕ್ಕೆ ಸಾಧ್ಯವಿಲ್ಲ, ನಾವು ಇರುವುದು ಊರಿನ ಮಧ್ಯದಲ್ಲಿ, ಇನ್ನು ಆನೆ ಕಣ್ಣುತಪ್ಪಿಸಿಕೊಳ್ಳುವುದಾದರೂ ಹೇಗೆ?

‘ಮನೆಯೆಲ್ಲ ಹುಡುಕಿದೆಯಾ?’ ಎಂದೆ.
‘ಹೌದು, ರೀ, ಎಲ್ಲ ಕಡೇನೂ ನೋಡಿದೆ, ಕಾಣಲಿಲ್ಲ.’
‘ಬೆಡ್ ರೂಮಿನಲ್ಲಿ ನೋಡಿದೆಯಾ?’
ಬೆಡ್ ರೂಮಿನಲ್ಲಿ ಆನೆ? ಇದೇನು ವಿಚಿತ್ರ ಜನ ಇವರು ಎಂದುಕೊಳ್ಳಬಹುದು ನೀವು.
‘ನೋಡಿದೆ, ಅಲ್ಲಿಲ್ಲ.’
‘ಕೆಳಗೆ, ಲಿವಿಂಗ್ ರೂಮಿನಲ್ಲಿ…?’
‘ಅಲ್ಲೂ ನೋಡಿದೆ, ಅಲ್ಲಿಲ್ಲ.’
‘ಬೇಸ್‌ಮೆಂಟಿನಲ್ಲಿ?’

ಇದ್ಯಾಕೋ ವಿಪರೀತಕ್ಕೆ ಬರ್ತಾ ಇದೆ, ಬೇಸ್‌ಮೆಂಟ್‌ನಲ್ಲಿ ಆನೆ ತುರುಕುವುದು ಸಾಧ್ಯವೆ, ಇವರಿಗೆ ಸ್ವಲ್ಪ ತಲೆ…
‘ಅಯ್ಯೋ ಅಲ್ಲೂ ಇಲ್ಲ, ಬೆಳಿಗ್ಗೆ ತಾನೆ ನಾಲ್ಕು ಲೋಡು ಬಟ್ಟೆ ವಾಷ್‌ಮಾಡಲು ಕೆಳಗೆ ಹೋಗಿದ್ದೆ. ಆದರೆ ಅಲ್ಲೇನೂ ಕಾಣಲಿಲ್ಲ.’
ನನಗೆ ಇನ್ನೇನು ಹೇಳಲೂ ತೋರಲಿಲ್ಲ. ಮನೆಯಲ್ಲಿರುವ ಆನೆಯನ್ನೇ ಕಳೆದುಕೊಳ್ಳುವ ಬೇಜವಾಬ್ದಾರಿ ಹೆಂಗಸಿನೊಂದಿಗೆ ಸಂಸಾರ ಮಾಡುವ ಸ್ಥಿತಿ ನನಗೆ ಬಂದ ಬಗ್ಗೆ ತುಂಬ ಅನ್ಯಾಯವೆನಿಸಿತು. ಆದರೂ ಪಾಪ, ಆನೆ ಕಳಕೊಂಡದ್ದು ಅವಳಿಗೂ ದುಃಖವಾಗಿದೆ ಎಂದು ತಿಳಿದ ನಾನು ನನ್ನ ಎಂದೂ ಇಲ್ಲದ ಔದಾರ್ಯದಿಂದ, ‘ಹೋಗಲಿ ಬಿಡು, ನಮಗೆ ಅದು ಸಿಕ್ಕುವುದಿದ್ದರೆ ಮತ್ತೆ ಸಿಕ್ಕೇ ಸಿಗುತ್ತೆ, ಅಲ್ಲಿಯವರೆಗೆ ನಾವು ಏನೂ ಮಾಡಲಾಗದು. ನೋಡುವಷ್ಟು ನೋಡಿದ್ದೇವೆ’ ಎಂದೆ.

ನಮ್ಮ ಮನೆಯಲ್ಲಿ ಎಷ್ಟೋ ವೇಳೆ ವಸ್ತುಗಳು ಕಳೆದುಹೋಗುವುದುಂಟು. ಅದೇನು ನಮ್ಮ ಮನೆಯ ವೈಚಿತ್ರ್ಯವೋ ಅಥವಾ ವಸ್ತುಗಳಿಗೇ ಇರುವ ಒಂದು ಮಾಂತ್ರಿಕ ಶಕ್ತಿಯೋ ನನಗೆ ಗೊತ್ತಿಲ್ಲ. ವಸ್ತುಗಳು ಏಕೆ ಕಳೆದುಹೋಗುತ್ತವೆ? ನನಗೆ ಅದೊಂದು ಸಮಸ್ಯೆ. ವಸ್ತು ಕಳೆದುಹೋದ ಎಷ್ಟೋ ದಿನಗಳ ಮೇಲೆ ಅದು ಮತ್ತೆ ತಾನೆಂದೂ ಕಳೆದೇ ಹೋಗಿರಲಿಲ್ಲ ಎಂಬ ಅತಿ ಮುಗ್ಧ ಮುಖವಾಡ ಧರಿಸಿ ಅಲ್ಲೇ ಕುಳಿತಿರುತ್ತವೆ. ಅವನ್ನು ನೋಡಿದರೆ ಅವು ನಿಜವಾಗಿ ಕಳೆದುಹೋಗಿದ್ದವೋ ಅಥವಾ ನಮಗೇ ಆ ಭ್ರಮೆ ಅಟಕಾಯಿಸಿತ್ತೋ ಹೇಳುವುದು ಕಷ್ಟ. ಇವು ನಮ್ಮೊಂದಿಗೆ ಹೀಗೆ ‘ಕಣ್ಣುಮುಚ್ಚಾಲೆ’ ಆಡುವುದರಲ್ಲಿ ಏನೋ ಸ್ವಾರಸ್ಯವಿದೆ ಎನಿಸುತ್ತದೆ. ಸಮುದ್ರಗಳಲ್ಲಿ ಒಂದು ಬಗೆಯ circulation ಇರುತ್ತದೆಯಂತೆ. ನೀರಿನ ವಿವಿಧ ಪದರಗಳ ಶಾಖದ ಮತ್ತು ಉಪ್ಪಿನ ಅಂಶದ ವ್ಯತ್ಯಾಸದ ಪರಿಣಾಮವಾಗಿ ಕೆಳನೀರು ಮೇಲಕ್ಕೂ, ಮೇಲ್ನೀರು ಕೆಳಕ್ಕೂ ಚಲಿಸುತ್ತದೆಯಂತೆ. ನಾವು ಹೈಸ್ಕೂಲಿನಲ್ಲಿ ಓದಿದ convection ಗೆ ಸಂಬಂಧಪಟ್ಟದ್ದು. ಹಾಗೇ ನಮ್ಮ ಮನೆಯಲ್ಲಿ ಎಷ್ಟೋ ದಿನ, ದಿನ ಏನು ವರ್ಷಗಳು, ಕಾಣದಿದ್ದ ವಸ್ತುಗಳು – ಮುಖ್ಯವಾಗಿ ಫೋಟೋಚಿತ್ರಗಳು, ಮನೆಯವರ ಕಾಗದಗಳು – ಮತ್ತೆ ಮೇಲೆ ಬರುತ್ತವೆ. ಸ್ವಲ್ಪ ದಿನ ಮೇಲಿದ್ದು ಮತ್ತೆ ಕಾಣೆಯಾಗುತ್ತವೆ. ಅದರಿಂದ ಈ ಕಳೆದು ಹೋದ ಆನೆಯೂ ಮತ್ತೆ ಸಿಗಬಹುದು ಎಂಬುದು ನನ್ನ ಸತ್ಪ್ರತೀಕ್ಷೆ. ಆದರೆ, ಮನೆಗಳಲ್ಲಿ ಈ ಉಷ್ಣ ವ್ಯತ್ಯಾಸ ಏಕೆ ಆಗುತ್ತದೆ? ವಾತಾವರಣದಲ್ಲೇನೋ ಸರಿ, ಆದರೆ ಹವಾ ನಿಯ೦ತ್ರಿತ ಮನೆಯಲ್ಲಿ? ನನಗನ್ನಿಸುವುದು, ನಮ್ಮ ದಿನನಿತ್ಯದ ವ್ಯವಹಾರಗಳಲ್ಲಿ, ಶಂಕರಾಚಾರ್ಯರು ಹೇಳುವ ಈ ಸಂಸಾರಸಾಗರದಲ್ಲಿ, ಗಂಡಹೆಂಡಿರ ಕೋಪತಾಪಗಳಲ್ಲಿ ಮನೆಯ ಉಷ್ಣಾಂಶ ಬದಲಾಗುತ್ತಲೇ ಇರುತ್ತದೆ. ಅದರಿಂದಲೇ ಇಂಥ convection currents ಉದ್ಭವವಾಗುತ್ತವೆ ಎಂದು.

*********

ಈ ಆನೆ ಏನೆನ್ನುತ್ತೀರೋ – ಅದೊಂದು ನಮ್ಮ ಮನೆಯಲ್ಲಿರುವ ಭಾರಿ ಪುಸ್ತಕ. ನಮ್ಮಾಕೆ ತಾನು ಏನಾದರೂ ಬರೆಯುವಾಗ ಅದನ್ನು ಒತ್ತಿಗೆ ಉಪಯೋಗಿಸುತ್ತಾಳೆ. ಇತ್ತೀಚೆಗೆ ಒ೦ದು ಲೇಖನ ಬರೆಯುತ್ತಿದ್ದಳು. ಅರೆ ಬರೆದ ಲೇಖನದ ಹಲವಾರು ಪುಟಗಳನ್ನು ಅದರಲ್ಲೇ ಮಡಚಿ ಇಟ್ಟಿದ್ದಳಂತೆ. ಅದರಲ್ಲಿದ್ದರೆ ಅದು ತಕ್ಷಣ ಕಣ್ಣಿಗೆ ಬೀಳುತ್ತದೆಯೆಂದು ಅವಳ ನಿರೀಕ್ಷೆ. ಆದರೆ ಆದದ್ದೇ ಬೇರೆ. ಆ ‘ಆನೆ’ಯೇ ಕಳೆದುಹೋಯಿತು. ಅನೇಕ ವೇಳೆ ನಾವು ತುಂಬಾ ಜೋಪಾನವಾಗಿ ಇರಿಸುವ ವಸ್ತು ನಮಗೆ ಮತ್ತೆ ಬೇಕಾದಾಗ ಸಿಕ್ಕುವುದೇ ಇಲ್ಲ. ಅದನ್ನು ಎಲ್ಲಿ ಜತನಗೊಳಿಸಿದೆವು ಎಂಬುದೇ ನಮ್ಮ ನೆನಪಿಗೆ ಬರುವುದಿಲ್ಲ. ಉದಾಹರಣೆಗೆ, ನನಗೀಗ ನಮ್ಮ ಬ್ಯಾಂಕಿನ safe deposit box ನ ಬೀಗದಕೈ ಎಲ್ಲಿದೆ ಎಂಬುದು ನೆನಪಿಗೆ ಬರುತ್ತಿಲ್ಲ. ಆನೆ ಕಾಣದಿದ್ದಾಗ ಅದಕ್ಕಾಗಿ ಹಲವಾರು ದಿನ ಹುಡುಕಿ, ಅದು ಇನ್ನೂ ಸಿಕ್ಕದಿದ್ದಾಗ, ಲೇಖನ ಕಳಿಸಬೇಕಾದ ದಿನದ ಗಡುವು ಹತ್ತಿರವಾದಂತೆ ನಮ್ಮಾಕೆಯ ಆತಂಕ ಹೆಚ್ಚಿ, ಹುಡುಕುವುದನ್ನು ಬಿಟ್ಟು ಮತ್ತೆ ಆ ಲೇಖನವನ್ನು ಮೊದಲಿಂದ ಬರೆಯತೊಡಗಿದಳು. ಆ ಲೇಖನ ಪ್ರಕಟವಾದಮೇಲೆ, ಎಂದೋ ಒಂದು ದಿನ…ಆ ಆನೆ ಪ್ರತ್ಯಕ್ಷವಾಗಿ ತನ್ನಲ್ಲಿ ಮಡಚಿಟ್ಟ ಹಾಳೆಗಳನ್ನು ಅವಳ ಕಣ್ಣಿಗೆ ಬೀಳಿಸಬಹುದು ಎಂಬ ‘ಗಜೇಂದ್ರಮೋಕ್ಷ’ವನ್ನು ನಿರೀಕ್ಷಿಸುತ್ತಿದ್ದೇನೆ…

 Posted by at 9:43 AM