
(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಕವನಗಳು.)
ಮಳೆ ಎಂದರೆ…
ಮಳೆ ಎಂದರೆ ಕೆಲವರಿಗೆ-
ಹರಳುಗಟ್ಟಿದ ಹಿನ್ನೋಟ,
ಭರವಸೆಯ ಮಿಂಚೋಟ,
ಮಣ್ಣ ಘಮದೊಳ ಹೂದೋಟ.
ಮಳೆ ಎಂದರೆ ಕೆಲವರಿಗೆ-
ಕವಿತೆ ಬರೆಸುವ ಚಿತ್ರ,
ಕಥೆಗೊಂದು ಪಾತ್ರ,
ಪ್ರಣಯದಾಟಕೆ ತಂತ್ರ.
ಮಳೆ ಎಂದರೆ ಕೆಲವರಿಗೆ-
ತೆನೆಯು ತೂಗಿದ ನೆನಪು,
ಕಣಜ ತುಂಬಿದ ಕನಸು,
ಮಣ್ಣ ಮಡಿಲಿನ ಬದುಕು.
ಮಳೆ ಎಂದರೆ ಕೆಲವರಿಗೆ-
ಬಿಡದೇ ಸುರಿವ ಶನಿ.
ಶೀತಹವೆ ಥಂಡಿಗಾಳಿ,
ಹವಾಮಾನ ವರದಿ.
ಮಳೆ ಎಂದರೆ ಮಳೆಗೆ ?
ಇಡಿಯು ಬಿಡಿ ಬಿಡಿಯಾಗಿ
ಗಮ್ಯದೆಡೆಗಿನ ಯಾನ.
ಹನಿಹನಿಯ ಎದೆಯಲ್ಲೂ
ಅದ್ವೈತ ಧ್ಯಾನ.
****************
ಚಂದಿರಗೊಂದು ಕಾಗದ
ಅಮ್ಮಾ..,
ಚಂದಿರಗೊಂದು ಕಾಗದ ಬರೆಯುವೆ
ಹಗಲೂ ಬಾರೆಂದು.
ನಿನ್ನನು ನೋಡಿ ಮಮ್ಮು ತಿನ್ನುವೆ
ಮೊಗವನು ತೋರೆಂದು.
ಉರಿವ ಸೂರ್ಯನ ಹೇಗೆ ನೋಡಲೇ
ನೀನು ಉಣಿಸುವಾಗ?
ತಾರೆಯ ಜೊತೆಯಲಿ ಚಂದಿರ ನಿಂತಿರೆ
ಊಟಕೆ ರುಚಿ ಆಗ.
ನನ್ನಯ ಕಾಗದ ಓದಲು ಅವನಿಗೆ
ಬರುವುದೇ ಕನ್ನಡ?
ಬಾರದೆ ಇದ್ದರೆ ನೀನೇ ಕಲಿಸೇ
ನನ್ನಯ ಸಂಗಡ.
ಹುಣ್ಣಿಮೆ ಬಂದರೆ ಬಾನಿನ ಬಣ್ಣವು
ಬಿಳುಪಾಯಿತು ಹೇಗೇ!?
ಚಂದ್ರನೂ ನನ್ನಂತೆ ಬಟ್ಟಲ ಹಾಲನು
ಚೆಲ್ಲಿಕೊಂಡನೇನೇ ಅಮ್ಮಾ,
ಚೆಲ್ಲಿಕೊಂಡನೇನೇ !?