Jul 012013
 

(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಪ್ರಬಂಧ.)

 

ಮೊನ್ನೆ ನಮ್ಮ ನಗೆಹೊನಲು ಭು.ಹೆ. ಯವರು ತಮ್ಮ ಮುಖಪುಸ್ತಕದಲ್ಲಿ ಚಂದದ ಬಾಗಿಲಿನ ಚಿತ್ರ ಅಂಟಿಸಿದ್ದರು. ದಪ್ಪನೆಯ ಮರದ ಚೌಕಟ್ಟಿನ ಮೇಲೆ ಚಿತ್ತಾರದ ಬಳ್ಳಿ, ಎತ್ತರದ ಹೊಸ್ತಿಲು, ಮೇಲೊಂದು    ಗಣಪತಿ ಪಟ, ಎಂತ ಚಂದದ ಬಲು ಆತ್ಮೀಯ ಬಾಗಿಲು ಅದು. ಮಲೆನಾಡು, ಕರಾವಳಿಯ ಬಹುಮೊನ್ನೆ ನಮ್ಮ ನಗೆಹೊನಲು ಭು.ಹೆ. ಯವರು ತಮ್ಮ ಮುಖಪುಸ್ತಕದಲ್ಲಿ ಚಂದದ ಬಾಗಿಲಿನ ಚಿತ್ರ ಅಂಟಿಸಿದ್ದರು. ದಪ್ಪನೆಯ ಮರದ ಚೌಕಟ್ಟಿನ ಮೇಲೆ ಚಿತ್ತಾರದ ಬಳ್ಳಿ, ಎತ್ತರದ ಹೊಸ್ತಿಲು, ಮೇಲೊಂದು ಗಣಪತಿ ಪಟ, ಎಂತ ಚಂದದ ಬಲು ಆತ್ಮೀಯ ಬಾಗಿಲು ಅದು. ಮಲೆನಾಡು, ಕರಾವಳಿಯ ಬಹುತೇಕ ಹಳ್ಳಿಗಳೆಲ್ಲ ಮನೆಯ ಪ್ರಧಾನ ಬಾಗಿಲು ಅದು. ಪ್ರಧಾನ ಬಾಗಿಲು ಆಗಿನ ಕಾಲದ ದಪ್ಪ ಮರದ ತೊಲೆಯ ಅಂಕಣದ ಮನೆಗಳ ಜೀವಸಂವಹನದ ಕೇಂದ್ರ ಬಿಂದು; ಗಡಿರೇಖೆ. ಮಲೆನಾಡಿನ ಮನೆಗಳ ಸೌಂದರ್ಯವನ್ನು, ಗೌರವವನ್ನು, ಆಪ್ತತೆಯನ್ನು, ಸುರಕ್ಷೆಯ ಭಾವವನ್ನು ಒಂದು ವಿಶಿಷ್ಟ ಬಗೆಯಲ್ಲಿ ಬೆಸೆದುಕೊಡುವ ಚೈತನ್ಯ ಆ ಬಾಗಿಲಿಗಿದೆ ಎಂದರೆ ತಪ್ಪಾಗಲಾರದು. ಆದರೆ ಪ್ರಧಾನ ಬಾಗಿಲು ಎಂದಾಕ್ಷಣ ಅಯಾಚಿತವಾಗಿ ನನ್ನ ಕೈ ತಲೆ ಮುಟ್ಟಿ ನೋಡಿಕೊಳ್ಳುತ್ತೆ. ಹೌದು, ಬಹಳ ಬಾರಿ ತಲೆಬಡಿಸಿಕೊಂಡು ಬುಗುಟೆಯೆದ್ದು, ಈಗಲೂ ಅಲ್ಲೆಲ್ಲೋ ಹಸಿ ನೋವು ಇದ್ದಂತೆ ಭಾಸವಾಗಿಸುವ ಬಾಗಿಲು ಪ್ರಧಾನ ಬಾಗಿಲು.

 

ಮಣ್ಣು ಗೋಡೆಯ ಕಟ್ಟಿಗೆ ಅಂಕಣದ ಆಗಿನ ಮನೆಗಳನ್ನು ಸ್ಪಷ್ಟವಾಗಿ ಹೊರಮನೆ ಒಳಮನೆ ಎಂದು ವಿಂಗಡಿಸುವ ಮುಖ್ಯ ಗಡಿ ಪ್ರಧಾನ ಬಾಗಿಲು. ಮನೆಯೆದುರು ಮಣ್ಣು, ಸೆಗಣಿ ಬಡಿದು ಸಾರಿಸಿದ ಅಂಗಳ, ಅಲ್ಲೊಂದು ತುಳಸಿಕಟ್ಟೆ, ಅಡಿಕೆ ಒಣಗಿಸುವ ಅಟ್ಟ. ಅಂಗಳದಾಚೆ ಒಂದು ಅಗಳ ಅಥವಾ ದೊಡ್ಡ ಮಳೆನೀರ ಕಾಲುವೆ, ಅದಕ್ಕೊಂದು ಪುಟ್ಟ ಅಡಿಕೆ ದಬ್ಬೆಯ ಸಂಕ. ಅದರಾಚೆ ತಗ್ಗಿನಲ್ಲಿ ಹಸಿರು ಅಡಿಕೆ ತೋಟ. ಅಂಗಳದೀಚೆ ಮನೆಗೊಂದು ಹೊರಬದಿಗೆ ಕಟ್ಟೆ ಅಥವಾ ಚಿಟ್ಟೆ. ಅದರಾಚೆ ಒಂದು ಕಡೆಯಲ್ಲಿ ಮಾಡು, ಅಡಿಕೆ ಚೀಲ ಶೇಖರಕ್ಕೆ, ಅಡಿಕೆ ಸುಲಿಯುವವರಿಗೆ ಜಾಗ. ಮನೆಯ ಆಚೆಮಾಡಿನ ಹೊರಗೊಂದು ತಣ್ಣೀರಿನ ತಳಕಾಣದ ಬಾವಿ. ಅಲ್ಲೇ ಒಂದು ಬಚ್ಚಲು, ಅದಕೊಂದು ಸದಾ ಬೆಚ್ಚಗಿರುವ ಒಲೆ, ಸದಾ ಸುಡುಸುಡು ನೀರಿರಿರುವ ಕಾದುಕೊಂಡೆ ಇರುವ ತುಂಬಿದ ಹಂಡೆ. ಹಿಂದೊಂದು ದನದ ಕೊಟ್ಟಿಗೆ, ಹೊರಬದಿಗೊಂದು ಅಕ್ಕಚ್ಚು ದಾಣಿ, ಮುರ ಕೊಚ್ಚುವ ಕತ್ತಿ, ಮೆಟ್ಟುಗತ್ತಿ, ಬತ್ತ ಕುಟ್ಟುವ ಒರಳುಕಲ್ಲು. ಮನೆಯ ಹೊರಚಿಟ್ಟೆಯಿಂದ ಮುಂಬಾಗಿಲಿನಿಂದ ಒಳಹೊಕ್ಕರೆ ಅಲ್ಲೊಂದು ವಿಶಾಲ ಹೊರಜಗಲಿ ಅಥವಾ ಕೆಳಜಗಲಿ. ಅಲ್ಲೊಂದು ಮೆಟ್ಟಿಲಿನಂತೆ ಸ್ವಲ್ಪ ಎತ್ತರಕ್ಕೆ ಒಳಜಗಲಿ ಅಥವಾ ಮೇಲ್ಜಗಲಿ. ಹೊರಜಗಲಿಯಲ್ಲೊಂದಿಷ್ಟು ಕುರ್ಚಿ, ಬೆಂಚು ಒಂದು ಕವಳಬಟ್ಟಲಿಡಲು ಮೇಜು. ಮೇಲ್ಜಗಲಿಯಲ್ಲಿ ಒಂದು ಮೆತ್ತನೆಯ ವಿಶಾಲ ಜಮಖಾನೆ, ಅದರ ಮೇಲೆಲ್ಲಾ ಸುತ್ತಲೂ ಹರಡಿದ ಗಟ್ಟಿ ದಿಂಬು ಅಥವಾ ಆನಿಸಿಕೊಳ್ಳಲಿರುವ ಲೋಡು. ಗೊಡೆಯ ಮೇಲೆಲ್ಲಾ ಸಿಕ್ಕಾಪಟ್ಟೆ ದೇವರ ಕ್ಯಾಲೆಂಡರುಗಳು, ಮನೆಯ ಹಿರಿಯರ ಛಾಯಾಚಿತ್ರಗಳು, ಮಕ್ಕಳ ಮೊಮ್ಮಕ್ಕಳ ಚಿತ್ರಗಳು, ಅಂಕಣದ ಮೂಲೆಯಲ್ಲಿ ಚಿಂವ್ ಚಿಂವ್ ಗುಬ್ಬಿ ಗೂಡು. ಈ ವಿವರಗಳನ್ನು ಕಣುಮುಚ್ಚಿಕೊಂಡು ಕಲ್ಪಿಸಿಕೊಂಡರೆ ಮಲೆನಾಡಿನಲ್ಲಿ ಹುಟ್ಟಿ ಬೆಳೆದ ಯಾರಾದರೂ ತಮ್ಮ ತಮ್ಮ ಮನೆಯನ್ನೇ ನೆನಪಿಸಿಕೊಳ್ಳಬಲ್ಲರು. ಇಂಥ ಮೇಲ್ಜಗಲಿಯ ಮಧ್ಯದಲ್ಲಿ ಗಾಂಭೀರ್ಯವೂ ಪ್ರೀತಿಯೂ ತುಂಬಿದ, ಸಣ್ಣನೆಯ ಊದಿನಕಡ್ಡಿಯ ಹೊಗೆ ಸೂಸುತ್ತ ಮುಗುಳ್ನುಗುತ್ತಿರುವುದೆ ಚಿತ್ತಾರದ ಬಾಗಿಲು, ಪ್ರಧಾನ ಬಾಗಿಲು. ಆಗೆಲ್ಲ ಮನೆಯೊಡತಿ ಬೆಳಗೆದ್ದು ಮುಖ ತೊಳೆದು ಒಂದು ದೊಡ್ಡ ತಂಬಿಗೆಯಲ್ಲಿ ನೀರಿಟ್ಟುಕೊಂಡು ಹೊರಬಂದು, ತುಳಸಿ ಕಟ್ಟೆಗೆ ನೀರು ಹಾಕಿ, ಹೊರಬಾಗಿಲಿಗೆ ರಂಗೋಲಿ ಹಾಕಿ, ಪ್ರಧಾನ ಬಾಗಿಲಿಗೊಂದು ತಂಬಿಗೆ ನೀರಿತ್ತು, ಅಲ್ಲಿ ಅರಿಹೋಗಿರುವ ರಾತ್ರಿ ಹಚ್ಚಿಟ್ಟ ದೀಪ ಎತ್ತಿಕೊಂಡು ಒಳಹೋಗುವಳು.

 

Vaishali_Hegade

ನನ್ನ ಅಜ್ಜಿಯ ಮನೆಯೂ ಇಂಥದ್ದೇ ಒಂದು ಮನೆ. ಈಗಲೂ ಚಿಕ್ಕಮ್ಮನ ದಿನ ಆರಂಭವಾಗುವುದು ಹೀಗೆಯೇ. ರಜೆಯಲ್ಲಾದರೆ ದೇವರಿಗೆ ನಾವು ಮೊಮ್ಮಕ್ಕಳು ಸುತ್ತಲಿನ ಹೂಗಿಡಗಳಿಂದ ಹೂಕೊಯ್ದು ದೇವರ ಮುಂದಿಡಬೇಕು. ಆನಂತರ ಕೊಟ್ಟಿಗೆ ಕೆಲಸ ಮುಗಿಸಿ ಸ್ನಾನ ಮಾಡಿ ಚಿಕ್ಕಪ್ಪ ದೇವರಪೂಜೆ ಮುಗಿಸಿ, ಜಗಲಿಯ ದೇವರುಗಳಿಗೆ ಅಜ್ಜನ,(ಈಗ ಅಜ್ಜಿಯದಕ್ಕೂ ) ಪಟಕ್ಕೆಲ್ಲ ಹೂ ಮುಡಿಸಿ, ದೀಪ ತೋರಿಸಿ, ಪ್ರಧಾನ ಬಾಗಿಲ ಬುಡದಲ್ಲಿ ಅಕ್ಕಿಲೋಟದಲ್ಲಿ ಊದಿನ ಕಡ್ಡಿ ಸಿಕ್ಕಿಸಿದರೆ ದಿನವೆಲ್ಲ ಪರಿಮಳ ಸೂಸುತ್ತ ನಿಂತಿರುವ ಬಾಗಿಲು. ಮಧ್ಯಾಹ್ನ ಊಟವಾದ ಮೇಲೆ ಅಡ್ಡಾಗಿ ಎಂದು ಬೈಸಿಕೊಂಡು ಮಲಗಿರುವ ನಾವು, ಬೆಳಕು ಬೀಳದಿರಲೆಂದು ಬಾಗಿಲ ಕದ ಓರೆ ಮಾಡಿ ಮಲಗಿದ ಅಜ್ಜಿಗೆ ಕಾಣದಂತೆ ಉರಿಬಿಸಿಲಲ್ಲಿ ಎದ್ದು ಓಡುವ ಆತುರ ನಮಗೆ. ಮೆಲ್ಲನೆ ಪ್ರಧಾನ ಬಾಗಿಲ ಕದ ಸರಿಸಿದರೆ, ಯಮಭಾರದ ಕದ ಕಿರ್ರೆಂದು ರಂಪ ಮಾಡಿ ಉಪಾಯದ ಓಟಕ್ಕೆಲ್ಲ ಅಲ್ಲೇ ಹೊಸ್ತಿಲಲ್ಲಿ ಅಡ್ಡ ಹಾಕುತ್ತಿತ್ತು. ಸಂಜೆ ಭಜನೆಯ ಹೊತ್ತಲ್ಲಿ, ಬಿಸಿಬಿಸಿ ಹಂಡೆಯ ನೀರಲ್ಲಿ ಕಾಲ್ತೊಳೆದು, ಪ್ರಧಾನ ಬಾಗಿಲಿಗೆ ಕೈಮುಗಿದು ಒಳಬಂದು ಕರಂಡಕ ಭಸ್ಮ ಹಚ್ಚಿಕೊಂಡರೆ ಅಲ್ಲಿಂದ ಅಜ್ಜಿಯ ಕತೆಯ ಸರಣಿಗೆ ಕಾಯುವ ಎಣಿಕೆ ಶುರು ಎಂದರ್ಥ. ಭಜನೆ ಮುಗಿಸಿ, ಊಟ ಮುಗಿಸಿ, ಚಿಕ್ಕಮ್ಮ ಬಾಗಿಲ ದೀಪಕ್ಕೆ ಎಣ್ಣೆ ಹನಿಸಿದ ಮೇಲೆ ಮೇಲೆ ಕಾಲು ನೀಡಿ ಕುಳಿತ ಅಜ್ಜಿಯ ಬಾಯಿಂದ ಒಂದೊಂದೇ ಕತೆಗಳು ಹೊರಬೀಳುತಿದ್ದವು. ಅಜ್ಜಿಯಾ ಪ್ರಕಾರ, ಪ್ರಧಾನ ಬಾಗಿಲು ದಾಟಿ ಯಾವ ದುಷ್ಟ ಶಕ್ತಿಯೂ ಒಳಬರುವುದಿಲ್ಲ, ಹಾಗಾಗಿ ಜಗಲಿಯ ಮೇಲೆ ರಾತ್ರಿ ಮಲಗುವ ಅವಕಾಶ ಮಕ್ಕಳಿಗಿಲ್ಲ. ಅಲ್ಲಿ ಗಂಡಸರು ಮಾತ್ರ ಗೊರಕೆ ಹೊಡೆಯುತ್ತ ಬಿದ್ದಿರಬಹುದು. ಅದು ಮೆತ್ತಿನ (ಮೇಲಂತಸ್ತಿನ) ಮೇಲಾದರೂ ಮಕ್ಕಳೆಲ್ಲ ಪ್ರಧಾನ ಬಾಗಿಲಿನ ಒಳ ಪ್ರದೇಶ ಭಾಗವಾದ ಮನೆಯಲ್ಲಿ ಮಲಗತಕ್ಕದ್ದು.

ಈ ಪ್ರಧಾನ ಬಾಗಿಲು ನಾನು ನೋಡಿದಂತೆ ಇತರ ಎಲ್ಲ ಬಾಗಿಲುಗಳಿಗಿಂತ ಒಂದು ಅಡಿಗಿಂತಲೂ ಹೆಚ್ಚಿನ ಎತ್ತರವನ್ನು ಕಳೆದುಕೊಂಡ ಗಿಡ್ಡ ಬಾಗಿಲು. ಹೊಸ್ತಿಲು ಕೂಡ ಅರ್ಧ ಮೆಟ್ಟಿಲ ಎತ್ತರ. ಹೆಚ್ಚಿನ ಕಡೆ ಬಾಗಿಲ ಮೇಲೆ ಇರುವುದು ಮನೆದೇವರ ಪಟ ಇಲ್ಲವೇ ಗಣಪತಿಯ ಪಟ. ಸ್ವಲ್ಪ ಎಚ್ಚರ ತಪ್ಪಿದಿರೋ ಬಾಗಿಲು ದಾಟುವಾಗ ತಲೆ ಧಂ ಎಂದು ಬಡಿಸಿಕೊಳ್ಳುವುದು ಖಂಡಿತ. ಬಹಳಷ್ಟು ಬಾರಿ ಹಾಗೆ ಬಡಿಸಿಕೊಂಡಿದ್ದೇನೆ. ಆರು ಫೂಟು ಎತ್ತರದ ದೊಡ್ಡಪ್ಪನ ಮಗನಂತೂ ತಲೆತಗ್ಗಿಸಿದರೂ ಧಡಾಲ್ ಎಂದು ಬಡಿಸಿಕೊಳ್ಳುತ್ತಿದ್ದ. ಅವನು ಚಪ್ಪಲಿ ಕಳಚಲು ಪುರುಸೊತ್ತಿಲ್ಲದಂತೆ ಅಜ್ಜಿ, ಚಿಕ್ಕಮ್ಮ, “ತಮ್ಮ ತಲೆ ಹುಷಾರು” ಎಂದು ಬಡಕೊಳ್ಳುತ್ತಿದ್ದರೂ ಅವ ಬಾಗಿಲಿಗೆ ಬಡಿಸಿಕೊಳ್ಳುತ್ತಿದ್ದ. ಈ ಬಾಗಿಲನ್ನು ಅದೇಕೆ ಇಷ್ಟು ಗಿಡ್ಡ ಕಟ್ಟುತ್ತಾರೊ, ಆಗಿನ ಜನರೇ ಮೈಕಟ್ಟಿನಲ್ಲಿ ಸ್ವಲ್ಪ ಗಿಡ್ಡ ಎಂದಿಟ್ಟುಕೊಂಡರೂ ಅವರಿಗೂ ತಲೆಬಗ್ಗಿಸಿಯೇ ಹೋಗುವಷ್ಟು ಗಿಡ್ಡವಿರುತ್ತವೆ ಈ ಬಾಗಿಲುಗಳು. ಆದರೆ ಬಾಗಿಲಿನ ಮೂಲಕ ಸಾರುವ ಒಂದು ಅಡಕವಾದ ಸಂದೇಶವಿದೆ ಅಲ್ಲಿ. ಮನೆಗೆ ಬಂದವರನ್ನು ಕರೆದು ಉಪಚರಿಸುವ, ಕೂರಿಸುವ ಪರಿ, ಜಾಗಗಳಲ್ಲಿಯೂ ಮಲೆನಾಡಿನಲ್ಲಿ ಸೂಕ್ಷ್ಮ ವ್ಯತ್ಯಾಸವಿದೆ. ಅಪರಿಚಿತರು, ಏನೋ ಕೆಲಸ ಕಾರ್ಯಕ್ಕೆಂದು ಒಣ ವ್ಯವಹಾರಗಳಿಗೆ ಬಂದವರಿಗೆ ಹೊರಜಗಲಿಗೆ ಮಾತ್ರ ಪ್ರವೇಶ. ಆದರೆ ಯಾರೇ ಬಂದರು ತಕ್ಷಣ ಅವರಿಗೆ ನೀರು ಕೊಡುವುದು ವಾಡಿಕೆ. ಅಲ್ಲೇ ಬೇಕಿದ್ದರೆ ಚಹಾ ಸರಬರಾಜು. ಇನ್ನು ಹರಟೆಗೆಂದು ಬಂದವರು, ಲೋಕಾಭಿರಾಮ ಮಾತನಾಡುವವರು, ಸ್ವಲ್ಪ ಹೆಚ್ಚಿನ ಬಳಕೆಯ ಊರಜನ ಬಂದರೆ ಒಳಜಗಲಿಯೆ ಲೋಡಿನ ಆಸನ ಜೊತೆಗೆ ಕವಳ(ಎಲೆ ಅಡಿಕೆ) ಬಟ್ಟಲು. ಒಳಕರೆದು ಅಡಿಗೆಮನೆಯಲ್ಲಿ ಇಲ್ಲ ಒಳಮನೆಯಲ್ಲಿ ಕೂರಿಸಿ ಉಪಚರಿಬೇಕಾದರೆ, ಊಟ ಹಾಕಬೇಕಾದರೆ, ಆ ವ್ಯಕ್ತಿ ಅತ್ಯಂತ ಆತ್ಮೀಯರೂ, ಬಳಗದವರೂ, ತೀರ ಹೊಕ್ಕು ಬಳಕೆಯುಳ್ಳವರೋ ಆಗಿರಬೇಕು. ಅಂಥವರು ಒಳ ಬರುವಾಗ, ಮನೆಗೂ, ಮನೆತನಕ್ಕೂ, ಮನೆಜನಕ್ಕೂ ಗೌರವ ಸೂಚಿಸಿ, ಅವರ ಆತ್ಮೀಯತೆಗೆ ಪ್ರೀತಿಗೆ ಧಕ್ಕೆ ತರದಂತೆ ನಡೆದುಕೊಳ್ಳುವೆ ಎಂಬಂತೆ ಒಪ್ಪಂದ ಸೂಚಕವಾಗಿ ಒಳಬರುವ ವ್ಯಕ್ತಿ ತಲೆತಗ್ಗಿಸಿ ಬರಲೆಂದು ಬಾಗಿಲಿನ ಮೂಲಕ ಮನೆಯವರು ಕೇಳುವ ಚಿಕ್ಕ ಮನ್ನಣೆ. ತಲೆತಗ್ಗಿಸಲಿಲ್ಲವೋ, ಬಾಗಿಲೆ ಎಚ್ಚರಿಸುತ್ತೆ. ಒಮ್ಮೆ ದಪ್ಪನೆಯ ಚೌಕಟ್ಟಿನ ಭಾರೀ ಬಾಗಿಲಿಗೆ ಬಡಿಸಿಕೊಂಡವ ಮತ್ತೊಮ್ಮೆ ಒಳಬರುವಾಗ ಬಗ್ಗಲು ತಪ್ಪುವುದಿಲ್ಲ.

ಈಗ ಕಟ್ಟುವ ಮನೆಗಳಲೆಲ್ಲ ಇರುವ ಪ್ರಧಾನ ಬಾಗಿಲು ಹೆಸರಿಗಷ್ಟೇ ಪ್ರಧಾನ. ಯಾರಿಗೂ ತಲೆತಗ್ಗಿಸಿ ಒಳಹೋಗಲು ಇಲ್ಲ ವ್ಯವಧಾನ. ಮನೆಯ ಮುಖ್ಯ ಆರ್ಟರಿಯಂತೆ ಇದ್ದ ಬಾಗಿಲು ಈಗ ಪ್ರತಿಶ್ಠೆಯ ಕೆತ್ತನೆ, ಅಲಂಕಾರದ ಪ್ರದರ್ಶನಕ್ಕೆ ಮೀಸಲು.ಜನಜೀವನ ಪ್ರಧಾನ ಬಾಗಿಲು – ವೈಹ್ಸಾಲಿ ಹೆಗಡೆ ಬದಲಾದಂತೆ ಬದುವ ರೀತಿ ಬದಲಾದಂತೆ ಇವೆಲ್ಲ ಸಹಜವೇನೋ ಎಂಬಂತೆ ನಾವೂ ಒಪ್ಪಿಕೊಂಡುಬಿಟ್ಟಿದ್ದೇವೆ. ಆದರೆ ತಲೆಮಾರುಗಳ ಹೆಜ್ಜೆಗುರುತುಗಳನ್ನು, ಹಾದುಹೋದ ಬಗ್ಗಿದ ತಲೆಗಳ ಲೆಕ್ಕವಿಟ್ಟ ಗಿಡ್ಡ ಬಾಗಿಲನ್ನು ಕಿತ್ತು ಉದ್ದಗೊಳಿಸಲು ಹೇಗೆ ಸಾಧ್ಯ? ಈ ಬಾಗಿಲು ಹಲವು ಬಗೆಯಲ್ಲಿ ಮನೆಜನರ ನಿತ್ಯಜೀವನದ ನಿಯಂತ್ರಣವನ್ನು ಹೊಂದಿತ್ತು. ಎತ್ತರದ ಹೊಸ್ತಿಲಿನಿಂದಾಗಿ, ಕಾಡಿನ ಹುಳ ಹುಪ್ಪತೆಗಳು, ಹಾವು ಹರಣೆಗಳು, ಅಷ್ಟು ಸುಲಭದಲಿ ಒಳಮನೆಯಲ್ಲಿ ನುಸುಳುವುದಿಲ್ಲ. ಹೈಟೆಕ್ ಬೀಗಗಳಿಲ್ಲದ ಕಾಲದಲ್ಲಿ ಕಳ್ಳಕಾಕರ ಕೈಚಳಕಕ್ಕೆ ಸುಲಭದಲ್ಲಿ ಜಗ್ಗದ ದಪ್ಪನೆಯ ಕದ, ಬಾಗಿಲ ಚೌಕಟ್ಟು, ಚಿಳಕಗಳು, ಮನೆಬಿಟ್ಟು ಹೋದ ಪ್ರಯಾಣದ ಸಂದರ್ಭಗಳಲ್ಲಿ ಮನೆಗೆ ಹೆಚ್ಚಿನ ರಕ್ಷಣೆಯನ್ನು ಒದಗಿಸಿರುತ್ತಿದ್ದವು. ಮನೆಯಲ್ಲಿನ ದಿನನಿತ್ಯದ ಹಲವು ಆಚರಣೆಗಳು ಪ್ರಧಾನ ಬಾಗಿನ ಸುತ್ತ ಅರಿವಿಲ್ಲದೆಯೇ ಆತುಕೊಂಡಿವೆ. ಬೆಳಿಗ್ಗೆ ಗಂಧ ಸೂಸುವ ಬಾಗಿಲು, ಮುಸ್ಸಂಜೆಯಲ್ಲಿ ಮತ್ತೆ ಚಿಕ್ಕಮ್ಮ ತುಳಸಿಗೆ ದೀಪ ತೋರಿಸಿ, ಪ್ರಧಾನ ಬಾಗಿಲಿನ ಬುಡಕ್ಕೊಂದು ದೀಪ, ಒಂದು ಚಂಬು ನೀರಿಡುವ ಮೂಲಕ ಮತ್ತೆ ಚಂಬಿನ ನೀರಿನ ಜೊತೆ ರಿಫ್ರೆಶ್ ಆಗಿ ನಿಂತಿರುತ್ತೆ. ರಾತ್ರಿಯಾಗುತ್ತಿದ್ದಂತೆ ದೀಪಕ್ಕೆ ಮತ್ತೆ ಎಣ್ಣೆ ತುಂಬಲಾಗುತ್ತೆ. ಆಗೆಲ್ಲ ವಿದ್ಯುತ್ ಇರದ, ಈಗ ಇದ್ದರೂ ಇಲ್ಲದಂತಿರುವ ವಿದ್ಯುತ್ಗಿಂತ ಪ್ರಧಾನ ಬಾಗಿಲಿನ ದೀಪ ಹೊರಬಾಗಿಲಿನಿಂದ ಹಿಡಿದು, ಅಡಿಗೆಮನೆಯ ಬಾಗಿಲಿನವೆರೆಗೂ ದಾರಿ ತೋರುವ ದೀಪ. ಹೊರಜಗಲಿಯ ಮೇಲೆ ಇಲ್ಲವೇ ಒಳ ಮನೆಯಲ್ಲಿ ಮಲಗಿದವರಿಗೆ ಮಧ್ಯೆ ಬಚ್ಚಲಿಗೆ ಎದ್ದು ಹೋಗಲು ಇರುವ ಬೆಡ್ ಲ್ಯಾಂಪ್. ಬಾಗಿಲಿನ ನೀರು, ರಾತ್ರಿ ಎದ್ದವರಿಗೆ ಬಾಯಾರಿಕೆ ತಣಿಸುವ ನೀರು. ರಾತ್ರಿಯಿಂದ ಬೆಳಗಿನವರೆಗೂ ಉರಿದು ಉಷೆ ಮೂಡುವಾಗೆಲ್ಲೊ ಕೊನೆಯುಸಿರೆಳೆದು, ಕಮ್ಮನೆಯ ಘಾಟಿನೊಂದಿಗೆ ಹಲವರ ನಿದ್ದೆಯ ಕನಸಿನಲ್ಲಿನ ಬೆಳಕಂತೆ ಆರಿಹೋಗುವ ದೀಪ ಮತ್ತೆ ಬೆಳಗುವುದು ಮರುದಿನ ಮುಸ್ಸಂಜೆಯಲ್ಲಿ. ದೀಪ ಆರಿದ ಕಮಟಿಗೆ ಬೆಳಗಾಯಿತೆಂದು ಏಳುತ್ತಿದ್ದ ಅಜ್ಜಿ ಈಗಲೂ ಪ್ರಧಾನ ಬಾಗಿಲ ಪಕ್ಕದಲ್ಲಿ ಪಟವಾಗಿ ದೀಪ ಕಾಯುತ್ತಿದ್ದಾಳೆ. ಬಾಗಿಲ ಬಳಿ ಬರುವವರಿಗೆ “ತಂಗಿ ತಲೆ ಹುಷಾರು, ತಮ್ಮ ಹನಿ ಬಗ್ಗು” ಎಂದಂತೆ ಕೇಳಿಸುತ್ತಿದೆ.

 Posted by at 12:07 PM

  One Response to “ಪ್ರಧಾನ ಬಾಗಿಲು – ವೈಶಾಲಿ ಹೆಗಡೆ”

  1. Vaishali

    Wonderful article. Ocourse, reminds me of my childhood, 100% of it.

    G. Hegde