ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ – ೨೦೧೩. ಕನ್ನಡ ನುಡಿಹಬ್ಬದಲ್ಲಿ ನಾಗಾ ಐತಾಳರ ಉಪನ್ಯಾಸ ಮತ್ತು ಎಚ್. ವೈ. ಆರ್ ಅವರಿಗೆ ಸನ್ಮಾನ
ಇಂದಿನ ಹೊತ್ತಿನಲ್ಲಿ ಕನ್ನಡ ನಾಡಿನಾದ್ಯಂತ ಮಾತ್ರವಲ್ಲದೆ ಕನ್ನಡ ಉಸಿರಾಡುವೆಡೆಗಳಲ್ಲೆಲ್ಲ ಆಡ್ಯಾಡುತ್ತಿರುವ ಹೊಸ ಸುದ್ದಿ- ಆಳ್ವಾಸ್ ವಿಶ್ವ ನುಡಿಸಿರಿ ವಿರಾಸತ್ – ೨೦೧೩. ಕನ್ನಡ ನುಡಿಹಬ್ಬ ನಾಡಿನ ಗಡಿದಾಟಿ ಪ್ರಪಂಚದೆಲ್ಲೆಡೆ ಹಬ್ಬಿದ ಮತ್ತು ಎಲ್ಲೆಡೆಗಳಿಂದ ವಿಶೇಷ ಸಾಂಸ್ಕೃತಿಕ ಕಲಾವಿದರ ಸಾಲುಸಾಲನ್ನೇ ಕನ್ನಡ ಮಣ್ಣಿನೆಡೆ ಸೆಳೆದು ತಂದಿರುವ ಹೊಸ ಶಕ್ತಿ ಅಲೆಯೆಬ್ಬಿಸುತ್ತಿರುವ ಹೊತ್ತಿದು.
ಮೂಡಬಿದರೆಯು ಜೈನ ಕಾಶಿಯೆಂದು ಪ್ರತೀತಿ ಹೊಂದಿದೆ. ಜೊತೆಗೇ ಇಂದು ಅದು ವಿದ್ಯಾಸರಸ್ವತಿಯ ಅಂಗಳವಾಗಿಯೂ ಕನ್ನಡ ನುಡಿ-ಸಂಸ್ಕೃತಿಗಳ ವೇದಿಕೆಯಾಗಿಯೂ ಹೆಸರು ಮಾಡಿದ್ದರ ಹಿಂದಿನ ಕರ್ತೃತ್ವ ಶಕ್ತಿ ಡಾ. ಮೋಹನ ಆಳ್ವರದು. ಈ ವ್ಯಕ್ತಿಯ ಕನಸಿನ ಪ್ರತಿಯೊಂದು ಎಳೆಯನ್ನು ಸಾಕಾರಗೊಳಿಸಲು ಅವರ ಹಿಂದೆ ಟೊಂಕಕಟ್ಟಿ ನಿಲ್ಲುವ ಉತ್ಸಾಹೀ ಅಧ್ಯಾಪಕ-ವಿದ್ಯಾರ್ಥಿ ಪಡೆಯಿದೆ. ಇವರು ಪ್ರತಿ ವರ್ಷವೂ ನುಡಿಸಿರಿ ಮತ್ತು ವಿರಾಸತ್ ಎಂಬ ಎರಡೆರಡು ದಿನಗಳ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿದ್ದಾರೆ. ಈ ವರ್ಷ ನುಡಿಸಿರಿಯ ದಶಮಾನೋತ್ಸವವೂ ವಿರಾಸತ್‌ನ ದ್ವಿದಶಮಾನೋತ್ಸವವೂ ಜೊತೆಗೂಡಿ ಭರ್ಜರಿಯ ನಾಲ್ಕುದಿನಗಳ ಕನ್ನಡ ಹಬ್ಬ ಮೂಡಬಿದಿರೆಯ ವಿದ್ಯಾಗಿರಿಯಲ್ಲಿ ನೆರವೇರಿತು. ಇದೇ ೨೦೧೩ರ ದಶಂಬರ ೧೯, ೨೦, ೨೧, ೨೨ರಂದು ನಡೆದ ಈ ಕನ್ನಡ ಜಾತ್ರೆಯಲ್ಲಿ ಏನಿತ್ತು ಏನಿಲ್ಲ ಎನ್ನುವಂತಿಲ್ಲ. ವಿವರಗಳೆಲ್ಲ ಪತ್ರಿಕೆಗಳಲ್ಲಿ, ಅಂತರ್ಜಾಲ ತಾಣಗಳಲ್ಲಿ, ಬ್ಲಾಗುಗಳಲ್ಲಿ ಈಗಾಗಲೇ ಹರಿದಾಡಿದೆ.ಇಂಥ ದೊಡ್ಡ ಮಟ್ಟದ ಸಂಭ್ರಮದಲ್ಲಿ ಅಮೆರಿಕನ್ನಡಿಗರಿಗೆಲ್ಲ ಹೆಮ್ಮೆಯೆನಿಸುವಂಥ ತುಣುಕಗಳೆರಡು ಸೇರಿದ್ದವು.
ಮೊದಲನೆಯದು- ತಾ. ೨೦ರಂದು ಬೆಳಗ್ಗೆ ವಿಚಾರಗೋಷ್ಠಿಯಲ್ಲಿ ನಾಗ ಐತಾಳರು ‘ಹೊರದೇಶದಲ್ಲಿ ಕನ್ನಡ’ ಎನ್ನುವ ವಿಷಯವಾಗಿ ಅರ್ಧ ಗಂಟೆಯ ಉಪನ್ಯಾಸ ನೀಡಿದರು. ಸಂಪೂರ್ಣ ನುಡಿಸಿರಿ ಕಾರ್ಯಕ್ರಮಗಳಲ್ಲಿ ಮೊದಲನೇ ವಿಚಾರಗೋಷ್ಠಿಯಲ್ಲಿ ಮೊದಲನೇ ಉಪನ್ಯಾಸಕರಾಗಿ ಐತಾಳರು ವಿಚಾರ ಮಂಡನೆ ಮಾಡಿರುವುದು ಗಮನೀಯ ಅಂಶ. ಐತಾಳರಿಗೆ ಅಭಿನಂದನೆಗಳು.
ಎರಡನೆಯದು- ತಾ. ೨೧ರಂದು ಸಂಜೆ, ‘ವಿದೇಶ, ಹೊರನಾಡು, ಗಡಿನಾಡುಗಳಲ್ಲಿ ಕನ್ನಡ ನಾಡು ನುಡಿಗೆ ಅನುಪಮ ಸೇವೆ ಸಲ್ಲಿಸಿದವರಿಗೆ ಸನ್ಮಾನ ಸಮಾರಂಭ’ದಲ್ಲಿ ವಿದೇಶದಲ್ಲಿ ಕನ್ನಡ ಸೇವೆಯನ್ನು ಗುರುತಿಸಿ ಡಾ. ಎಚ್.ವೈ. ರಾಜಗೋಪಾಲರನ್ನು ಗೌರವಿಸಲಾಯಿತು. ನಾಲ್ಕು ದಶಕಗಳಿಗೂ ಮೀರಿ ಅಮೆರಿಕದಲ್ಲಿ ಬಾಳುತ್ತಾ, ಆ ಸಮಯದುದ್ದಕ್ಕೂ ಕನ್ನಡವನ್ನು ನಾಡಿಮಿಡಿತದಂತೆ ತನ್ನೊಳಗೆ ಇರಿಸಿಕೊಂಡಿರುವ ರಾಜಗೋಪಾಲರಿಗೆ ಸಂದ ಈ ಸನ್ಮಾನ ಅವರೇ ಸಮಾನಾಸಕ್ತರ ಜೊತೆಗೂಡಿ ಹುಟ್ಟುಹಾಕಿದ ಕನ್ನಡ ಸಾಹಿತ್ಯ ರಂಗದ ಸದಸ್ಯರಿಗೆ ಹೆಮ್ಮೆಯ ಗರಿ. ಈ ಸಮ್ಮಾನ ಸಮಾರಂಭದ ಕೆಲವೇ ಕೆಲವು ಕ್ಷಣಗಳ ಮೊದಲು, ನುಡಿಸಿರಿಯ ಮುಖ್ಯ ವೇದಿಕೆ- ಕವಿ ರತ್ನಾಕರ ವರ್ಣಿ ವೇದಿಕೆಯ ಪಕ್ಕದಲ್ಲೇ ಇದ್ದ ಮಂಗಳೂರು ಆಕಾಶವಾಣಿಯ ಬಿಡಾರದಿಂದಲೇ ರಾಜಗೋಪಾಲರು ತಮ್ಮ ಕನ್ನಡತನದ ಕುರಿತು, ಕನ್ನಡ ಸಾಹಿತ್ಯ ರಂಗದ ಹುಟ್ಟು-ಬೆಳವಣಿಗೆಯ ಕುರಿತು ಕೆಲನಿಮಿಷ ಮಾತನಾಡಿದರು. ಆಕಾಶವಾಣಿಯ ನಿರ್ದೇಶಕ ಡಾ. ವಸಂತ ಕುಮಾರ್ ಪೆರ್ಲ ಈ ಸಂದರ್ಶನ ನಡೆಸಿದರು.
ಇದುತನಕ ಒಂದು ರೀತಿಯಲ್ಲಿ ಕೆಲವೇ ಕೆಲವು ಬೆಂಗಳೂರಿಗರಿಗೆ ಅರಿವಿದ್ದ ಕನ್ನಡ ಸಾಹಿತ್ಯ ರಂಗ, ಅಮೆರಿಕನ್ನಡ ಕಾರ್ಯ ಚಟುವಟಿಕೆಗಳು ಈ ವಿಶ್ವ ನುಡಿಸಿರಿಯಲ್ಲಿ ದೊರೆತ ಅವಕಾಶಗಳಿಂದ ವಿಶಾಲ ಕರ್ನಾಟಕದ ಇತರ ಕನ್ನಡಿಗರ ಗಮನಕ್ಕೂ ಬರಬಹುದೆನ್ನುವುದು ಸದ್ಯದ ಆಶಯ.
Continue reading »