Jan 292017
 

ಕನ್ನಡ ಸಾಹಿತ್ಯ ರಂಗದ ಪ್ರಮುಖ ಮೈಲಿಗಲ್ಲುಗಳು

೨೦೧೫: ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವ: ಸೈಂಟ್ ಲೂಯಿಸ್ ನಗರದ ಸಂಗಮ ಕನ್ನಡ ಕೂಟದ ಆಶ್ರಯ ಮತ್ತು ಮಧ್ಯ-ಪಶ್ಚಿಮ ವಲಯದ ಹಲವು ಕನ್ನಡ ಸಂಘಗಳ ಸಹಕಾರದೊಂದಿಗೆ ಅನುವಾದ ಸಾಹಿತ್ಯವನ್ನು ಕುರಿತ ಕಾರ್ಯಕ್ರಮ ಮೇ ೩೦-೩೧ ರಂದು ವಿಜೃಂಭಣೆಯಿಂದ ನೆರವೇರಿತು. ಮೈಸೂರಿನಿಂದ ಖ್ಯಾತ ಅನುವಾದಕ ಪ್ರೊ. ಪ್ರಧಾನ್ ಗುರುದತ್ತರು ಪ್ರಧಾನ ಅತಿಥಿಗಳಾಗಿ ಆಗಮಿಸಿ “ಅನುವಾದದ ಆಗು-ಹೋಗುಗಳು” ಎಂಬ ವಿದ್ವತ್ಪೂರ್ಣ ಭಾಷಣವನ್ನು ಮಾಡಿದರು. ಪ್ರೊ. ಎಸ್. ಎನ್. ಶ್ರೀಧರ್ ಮತ್ತು ಪ್ರೊ. ನಾರಾಯಣ ಹೆಗ್ಡೆ ವಿಶೇಷ ಅತಿಥಿಗಳಾಗಿ ಬಂದು ಅನುವಾದ ಕಮ್ಮಟದಲ್ಲಿ ಭಾಗವಹಿಸಿದರು. “ಅನುವಾದ ಸಂವಾದ” ಎಂಬ ಕನ್ನಡ ಪುಸ್ತಕ (ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ, ಕಥೆ, ಕವನ, ಪ್ರಬಂಧ ಮತ್ತು ನಾಟಕಗಳ ಸಂಕಲನ) ಮತ್ತು “A Little Taste of Kannada in English” ಎಂಬ ಇಂಗ್ಲೀಷ್ ಪುಸ್ತಕ (ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಕಥೆ, ಕವನ ಮತ್ತು ಪ್ರಬಂಧಗಳ ಸಂಕಲನ) ಶ್ರೀಕಾಂತ ಬಾಬು ಅವರ ಸಂಪಾದಕತ್ವದಲ್ಲಿ ಲೋಕಾರ್ಪಣೆಗೊಂಡವು. ಆಂಗ್ಲ ಭಾಷೆಯಲ್ಲಿ ಪುಸ್ತಕವೊಂದನ್ನು ರಂಗ ಹೊರತರುತ್ತಿರುವುದು ಇದೇ ಮೊದಲು. ಈ ಪುಸ್ತಕಗಳು ಮೊದಲ ಬಾರಿಗೆ ಅಮೆಜಾನ್ ಮೂಲಕ ಲಭ್ಯವಾಗಿವೆ. ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಸಂಪಾದಿಸಿರುವ “ಅಮೆರಿಕನ್ನಡ ಬರಹಗಾರರ ಸಂಕ್ಷಿಪ್ತ ಮಾಹಿತಿ ಕೋಶ” ಎಂಬ ಉಪಯುಕ್ತ ಪುಸ್ತಕವು ಕೂಡ ಲೋಕಾರ್ಪಣೆಗೊಂಡಿದ್ದು ಏಳನೆಯ ವಸಂತ ಸಾಹಿತ್ಯೋತ್ಸವದ ಹಿರಿಮೆಗಳಲ್ಲೊಂದು.

೨೦೧೩: ಕನ್ನಡ ಸಾಹಿತ್ಯ ರಂಗ ಮೊದಲ ದಶಕವನ್ನು ತಲುಪಿದ ಸಂಭ್ರಮ, ಹ್ಯೂಸ್ಟನ್ ಕನ್ನಡವೃಂದದ ಸಹಯೋಗದಲ್ಲಿ ಮತ್ತು ಟೆಕ್ಸಸ್ ಪ್ರಾಂತ್ಯದ ಇತರ ಕನ್ನಡ ಸಂಘಗಳಾದ ಡಲ್ಲಾಸಿನ ಮಲ್ಲಿಗೆ ಕನ್ನಡ ಸಂಘ, ಸ್ಯಾನ್ ಆಂಟೋನಿಯಾದ ಕುವೆಂಪು ಕನ್ನಡ ಸಂಘ, ರಿಯೋ ಗ್ರ್ಯಾಂಡಿ ಕಣಿವೆಯ ಕನ್ನಡ ಸಂಘ ಮತ್ತು ಆಸ್ಟಿನ್ ಕನ್ನಡ ಸಂಘಗಳ ಸಹಕಾರದೊಂದಿಗೆ ರೈಸ್ ಯೂನಿವರ್ಸಿಟಿ ಪ್ರಾಂಗಣದಲ್ಲಿ ಆರನೇ ವಸಂತ ಸಾಹಿತ್ಯೋತ್ಸವ. ಪ್ರಖ್ಯಾತ ಕವಿ ಮತ್ತು ಬರಹಗಾರ ಪ್ರೊ|| ಕೆ.ವಿ ತಿರುಮಲೇಶ್ ಅವರು ಮುಖ್ಯ ಅತಿಥಿಗಳು, ಮುಖ್ಯ ಅತಿಥಿಗಳ ಭಾಷಣದ ವಿಷಯ “ಕನ್ನಡದ ಮುನ್ನಡೆ: ಸವಾಲುಗಳು ಮತ್ತು ಅವಕಾಶಗಳು.” ಸಮಾಜ ಶಾಸ್ತ್ರಜ್ಞ, ಪ್ರೊ. ಶ್ರೀಪತಿ ತಂತ್ರಿ, ಕನ್ನಡ ಭಾಷಾಶಾಸ್ತ್ರಜ್ಞ ಪ್ರೊ. ಎಸ್.ಎನ್. ಶ್ರೀಧರ್ ಮತ್ತು ಮೈಸೂರಿನ ಧ್ವನ್ಯಾಲೋಕದ ಪ್ರೊ. ಸಿ. ಎನ್. ಶ್ರೀನಾಥ್ ಇತರ ಆಹ್ವಾನಿತ ಅತಿಥಿಗಳು. ಹ್ಯೂಸ್ಟನ್ ಕನ್ನಡವೃಂದ ಯೋಜಿಸಿದ, ಜಗದ್ವಿಖ್ಯಾತ (ದಿವಂಗತ) ರಾಜಾರಾಯರ ಇನ್ನೂ ಕರಡಿನಲ್ಲಿದ್ದ ಆಂಗ್ಲ ಕಾದಂಬರಿಯ ಕನ್ನಡ ರೂಪಾಂತರ, ‘ನಾರೀಗೀತ’ದ ಲೋಕಾರ್ಪಣೆ ಮತ್ತು ಅದರ ವೈಶಿಷ್ಟ್ಯಗಳ ಚರ್ಚೆ. ಅಮೆರಿಕದಲ್ಲಿ ನೆನೆಸಿರುವ ಕನ್ನಡಿಗರ ಜೀವನ ಮತ್ತು ವೃತ್ತಿ ಅನುಭವಗಳನ್ನು ಸೆರೆಹಿಡಿಯುವ ಪ್ರಬಂಧಗಳನ್ನೊಳಗೊಂಡ ಅಮೂಲ್ಯ ಪುಸ್ತಕ “ಬೇರು-ಸೂರು, ಅಮೆರಿಕದಲ್ಲಿ ನಮ್ಮ ಬದುಕು” ಪ್ರಕಟಣೆ (ಸಂಪಾದಕರು: ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಮತ್ತು ಜ್ಯೋತಿ ಮಹಾದೇವ್).

೨೦೧೨: KSR-Book Club ಸ್ಥಾಪನೆ. ತಿ೦ಗಳಿಗೊಮ್ಮೆ ದೂರವಾಣಿಯ ಮೂಲಕ ನಡೆಯುವ ಈ ಕಿರು ಸಂಕಿರಣದಲ್ಲಿ ಯಾವುದಾದರೂ ಒ೦ದು ಉತ್ತಮವಾದ ಕತೆ ಅಥವ ಇತರ ಸಾಹಿತ್ಯ ರಚನೆಯನ್ನು ಕುರಿತು ಸದಸ್ಯರು ಚರ್ಚಿಸುತ್ತಾರೆ. ದೇಶದ ಒಳಗೆ ಮತ್ತು ಹೊರಗೆ ಇರುವ ಆಸಕ್ತ ಸದಸ್ಯರೆಲ್ಲ ಸೇರಿ ನಡೆಸುವ ಈ ಚರ್ಚೆ ಬಹಳ ವಿಚಾರಶೀಲವೂ ಉಪಯುಕ್ತವೂ ಆಗಿದೆ. ಪ್ರತಿ ತಿಂಗಳೂ ನಡೆಯುವ ರಂಗದ ಈ ಕಾರ್ಯಕ್ರಮದಲ್ಲಿ ಕೇಳುಗರಾಗಿ ಅಥವಾ ಪ್ರಸ್ತುತ ಪಡಿಸುವವರಾಗಿ ಮತ್ತು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿ ಭಾಗವಹಿಸಲು ಅವಕಾಶವಿದೆ. ಈ ಬಗ್ಗೆ ರಂಗದ ಪದಾಧಿಕಾರಿಗಳನ್ನು ಸಂಪರ್ಕಿಸಿ.

೨೦೧೧: ಐದನೇ ವಸ೦ತ ಸಾಹಿತ್ಯೋತ್ಸವ, ಏಪ್ರಿಲ್ ೩೦-ಮೇ ೧, ಕ್ಯಾಲಿಫ಼ೋರ್ನಿಯಾ ಕೊಲ್ಲಿ ಪ್ರದೇಶದ ವುಡ್ಸೈಡ್ ಎಂಬ ಊರಿನಲ್ಲಿ; ಸಹಯೋಗ: ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟ; ಸಹಕಾರ: ಸಾಹಿತ್ಯ ಗೋಷ್ಠಿ; ಮುಖ್ಯ ವಸ್ತು: ಕನ್ನಡ ಪ್ರಬಂಧ; ಮುಖ್ಯ ಅತಿಥಿ: ಡಾ. ಸುಮತೀ೦ದ್ರ ನಾಡಿಗ; ಪ್ರಮುಖ ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯದಲ್ಲಿ ಪ್ರಬ೦ಧ ಪ್ರಕಾರ;” ವಿಶೇಷ ಅತಿಥಿ: ಭುವನೇಶ್ವರಿ ಹೆಗಡೆ; ಭಾಷಣ: “ಹಾಸ್ಯ ಲೇಖಕಿಯಾಗಿ ನನ್ನ ಅನುಭವಗಳು;” ಪ್ರಕಟವಾದ ಪುಸ್ತಕ: “ಮಥಿಸಿದಷ್ಟೂ ಮಾತು” (ಸ೦ಪಾದಕರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಎ೦.ಆರ್. ದತ್ತಾತ್ರಿ)

೨೦೦೯: ನಾಲ್ಕನೆಯ ವಸಂತ ಸಾಹಿತ್ಯೋತ್ಸವ, ಮೇ ೩೦-೩೧, ಬಾಲ್ಟಿಮೋರ್-ವಾಷಿಂಗ್ಟನ್ ನಡುವಿನ ರಾಕ್ವಿಲ್, ಮೇರಿಲೆಂಡ್ನಲ್ಲಿರುವ Universities of Maryland at Shadygrove ನಲ್ಲಿ. ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ನಡೆದ ಈ ಉತ್ಸವಕ್ಕೆ ಮುಖ್ಯ ವಸ್ತು: “ಕನ್ನಡ ಕಾದಂಬರಿ;” ಮುಖ್ಯ ಅತಿಥಿ: ಡಾ. ವೀಣಾ ಶಾಂತೇಶ್ವರ; ಭಾಷಣದ ಶೀರ್ಷಿಕೆ: “ಕನ್ನಡ ಕಾದಂಬರಿ – ಕಳೆದ ಕಾಲು ಶತಮಾನದಲ್ಲಿ;” ವಿಶೇಷ ಅತಿಥಿ ವೈದೇಹಿಯವರಿಂದ ಸ್ವಂತ ಕತೆಗಳ ವಾಚನ ಮತ್ತು ಅವರೊಂದಿಗೆ ಸಂವಾದ; ಪ್ರಕಟವಾದ ಪುಸ್ತಕ: “ಕನ್ನಡ ಕಾದಂಬರಿ ಲೋಕದಲ್ಲಿ…ಹೀಗೆ ಹಲವು…” (ಸಂಪಾದಕರು: ಮೈ.ಶ್ರೀ. ನಟರಾಜ).

೨೦೦೮: ಆಡಳಿತ ಮಂಡಲಿಯ ಪುನಾರಚನೆ ಮತ್ತು ಚುನಾವಣೆ; ಕಾರ್ಯಕಾರೀ ಸಮಿತಿಯ ಚುನಾವಣೆ.

೨೦೦೭: ಮೂರನೆಯ ವಸಂತ ಸಾಹಿತ್ಯೋತ್ಸವ, ಮೇ ೧೯-೨೦, ಚಿಕಾಗೋ ಬಳಿಯ ಅರೋರ, ಇಲಿನಾಯ್ನಲ್ಲಿನ ಶ್ರೀ ಬಾಲಾಜಿ ದೇವಾಲಯದಲ್ಲಿ. ಸಹಪ್ರವರ್ತಕರು: ವಿದ್ಯಾರಣ್ಯ ಕನ್ನಡ ಕೂಟ; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಹಾಸ್ಯ; ಮುಖ್ಯ ಅತಿಥಿ: ಪ್ರೊ. ಅ.ರಾ. ಮಿತ್ರ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ;” ವಿಶೇಷ ಅತಿಥಿ: ಡಾ. ಎಚ್.ಎಸ್. ರಾಘವೇಂದ್ರ ರಾವ್; ಮುಖ್ಯ ಅತಿಥಿಗಳ ಭಾಷಣದ ಶೀರ್ಷಿಕೆ: “ಅಮೆರಿಕಾದ ಕನ್ನಡಿಗರ ಸಾಹಿತ್ಯ ಸೃಷ್ಟಿ – ಕೆಲವು ಅನಿಸಿಕೆಗಳು;” ಪ್ರಕಟವಾದ ಪುಸ್ತಕ: “ನಗೆಗನ್ನಡಂ ಗೆಲ್ಗೆ!” (ಸಂಪಾದಕರು: ಎಚ್.ಕೆ. ನಂಜುಂಡಸ್ವಾಮಿ ಮತ್ತು ಎಚ್.ವೈ. ರಾಜಗೋಪಾಲ್). ಲಾಸ್ ಏಂಜಲಿಸ್ನ “ಅಂಜಲಿ” ಪ್ರಕಟಿಸಿದ “ಕನ್ನಡದಮರ ಚೇತನ (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮೀಕ್ಷೆ)” ಯೋಜನೆಯಲ್ಲಿ ಆರ್ಥಿಕ ಸಹಾಯ; ಅಮೆರಿಕದ Internal Revenue Service (IRS) ನಿಂದ ಆದಾಯ ತೆರಿಗೆ ವಿನಾಯಿತಿ ಅನುದಾನ; ರಂಗದ ಅಂತರ್ಜಾಲ ತಾಣದ ಉದ್ಘಾಟನೆ .

೨೦೦೬: ಕನ್ನಡ ಸಾಹಿತ್ಯ ಶಿಬಿರ – ಅಮೆರಿಕದ ಒಂಬತ್ತು ನಗರಗಳಲ್ಲಿ ಜೂನ್-ಆಗಸ್ಟ್ ಕಾಲಾವಧಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಎರಡು ದಿನಗಳ ಕ್ರಮಬದ್ಧ ಅಭ್ಯಾಸ ಶಿಬಿರ; ಅಮೆರಿಕದಲ್ಲಿ ಈ ಪ್ರಮಾಣದಲ್ಲಿ ನಡೆದ ಮೊಟ್ಟಮೊದಲ ಶಿಬಿರ. ಉಪನ್ಯಾಸಕರು: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ; ಉಪನ್ಯಾಸದ ಟಿಪ್ಪಣಿಗಳು, ೪ ಧ್ವನಿಸಂಪುಟಗಳ ಹಂಚಿಕೆ.

೨೦೦೫: ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ ತ್ರಿವೇಣಿ ನಡೆಸಿದ ಪುತಿನ ಜನ್ಮ ಶತಮಾನೋತ್ಸವದಲ್ಲಿ ಸಹಪ್ರವರ್ತನ, ಜೂನ್ ೧೮. ಎರಡನೆಯ ವಸಂತ ಸಾಹಿತ್ಯೋತ್ಸವ, ಡಿಸೆಂಬರ್ ೫, ಲಾಸ್ ಏಂಜಲಿಸ್ ಬಳಿಯ ಲೇಕ್ವುಡ್ ಎಂಬ ಊರಿನ ಹೂವರ್ ಹರ್ಬರ್ಟ್ ಮಾಧ್ಯಮಿಕ ಶಾಲೆಯಲ್ಲಿ. ಸಹಪ್ರವರ್ತಕರು: ಕರ್ನಾಟಕ ಸಾಂಸ್ಕೃತಿಕ ಸಂಘ – ದಕ್ಷಿಣ ಕ್ಯಾಲಿಫ಼ೋರ್ನಿಯ; ಕಸ್ತೂರಿ ಕನ್ನಡ ಸಂಘ – ಸ್ಯಾನ್ ಡಿಯೇಗೋ; ಮತ್ತು “ಅಂಜಲಿ” – ಲಾಸ್ ಏಂಜಲಿಸ್; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ; ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ;” ಪ್ರಕಟವಾದ ಪುಸ್ತಕ: “ಆಚೀಚೆಯ ಕತೆಗಳು” (ಪ್ರಧಾನ ಸಂಪಾದಕ: ಗುರುಪ್ರಸಾದ ಕಾಗಿನೆಲೆ).

೨೦೦೪: ನ್ಯೂ ಜೆರ್ಸಿ ರಾಜ್ಯದಲ್ಲಿ ಕನ್ನಡ ಸಾಹಿತ್ಯ ರಂಗದ ದಾಖಲೆ, ಆರ್ಥಿಕ ಲಾಭೋದ್ದೇಶವಿಲ್ಲದ ಸಾಂಸ್ಕೃತಿಕ, ಶೈಕ್ಷಣಿಕ ಸಂಸ್ಥೆ ಎಂಬ ಅಧಿಕೃತ ಅಭಿದಾನ. ಮೇ ೨೯, ಮೊಟ್ಟಮೊದಲ ವಸಂತ ಸಾಹಿತ್ಯೋತ್ಸವ, ಫಿಲಡೆಲ್ಫಿಯಾ ಬಳಿಯ ವಿಲನೋವ ವಿಶ್ವವಿದ್ಯಾಲಯದಲ್ಲಿ. ಸಹಪ್ರವರ್ತಕರು: ವಿಲನೋವ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಅಧುನಿಕ ಭಾಷಾ ಸಾಹಿತ್ಯಗಳ ವಿಭಾಗ; ಸಹಕಾರ: ತ್ರಿವೇಣಿ (ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ); ಮುಖ್ಯ ವಸ್ತು: ಕುವೆಂಪು ಜನ್ಮ ಶತಮಾನೋತ್ಸವ; ಮುಖ್ಯ ಅತಿಥಿ: ಡಾ. ಪ್ರಭುಶಂಕರ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯ — ಒಂದು ಮಿಂಚು ನೋಟ;” ಪ್ರಕಟವಾದ ಪುಸ್ತಕ: “ಕುವೆಂಪು ಸಾಹಿತ್ಯ ಸಮೀಕ್ಷೆ” (ಪ್ರಧಾನ ಸಂಪಾದಕ: ನಾಗ ಐತಾಳ).

೨೦೦೩: ಕನ್ನಡ ಸಾಹಿತ್ಯ ರಂಗದ ಪರಿಕಲ್ಪನೆ ಹಾಗು ರಂಗದ ಆಶಯ ಮತ್ತು ಧ್ಯೇಯೋದ್ದೇಶಗಳ ಅಂಕುರಾರ್ಪಣೆ.

ಮುಕ್ತಾಯ: ಅಮೆರಿಕದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರನ್ನು ರಂಗ ಆದರದಿಂದ ಸ್ವಾಗತಿಸುತ್ತದೆ. ರಂಗದ ಸಂವಿಧಾನದ ಪ್ರಕಾರ ಸದಸ್ಯತ್ವ ಆಹ್ವಾನದ ಮೂಲಕ ನಡೆಯುತ್ತದೆ. ಸದಸ್ಯತ್ವ ಪಡೆದವರು ಸ್ವಯಂಸೇವಕರಾಗಿ ದುಡಿದು ಕಾರ್ಯಕಾರೀ ಸಮಿತಿಯಲ್ಲಿ ಮತ್ತು ಆಡಳಿತ ಮಂಡಲಿಗೆ ಚುನಾಯಿತರಾಗಲು ಹೇರಳವಾದ ಅವಕಾಶಗಳಿವೆ. ರಂಗ ಪ್ರಕಟಿಸುವ ಪುಸ್ತಕಗಳಲ್ಲಿ ತಮ್ಮ ಲೇಖನಗಳಿಗೆ ಸ್ವಾಗತವಿದೆ, ಅಷ್ಟೇ ಅಲ್ಲ, ರಂಗದ ಸಂಪಾದಕೀಯ ಸಮಿತಿಯ ಸದಸ್ಯರಾಗಲೂ ಅವಕಾಶಗಳಿವೆ. ನೀವು ಸದಸ್ಯರಾಗಲು ಬಯಸದಿದ್ದಲ್ಲಿ ಸಹ ರಂಗದ ಚಟುವಟಿಕೆಗಳಿಗೆ ನೀವು ಹಲವು ರೀತಿಯಲ್ಲಿ ನಿಮ್ಮ ಉತ್ತೇಜನ ಮತ್ತು ಸಹಕಾರಗಳನ್ನು ತೋರಬಹುದು. ಸದಸ್ಯರಾಗಲು ಇಚ್ಛೆಯಿದ್ದಲ್ಲಿ ನಿಮ್ಮ ಬಯಕೆಯನ್ನು ರಂಗದ ಸದಸ್ಯರಿಗೆ ತಿಳಿಸಿದರೆ ನಿಮಗೆ ಆಹ್ವಾನ ಕೊಡಲಾಗುವುದು, ರಂಗದ ಪ್ರಕಟಣೆಗಳನ್ನು ಕೊಂಡು ಓದಲು, ರಂಗ ನಡೆಸುವ ವಸಂತ ಸಾಹಿತ್ಯೋತ್ಸವಗಳಲ್ಲಿ ಭಾಗವಹಿಸಲು, ಹಾಗು ಪ್ರತಿ ತಿಂಗಳೂ ನಡೆಯುವ ಪುಸ್ತಕ-ಕೂಟದ ಚರ್ಚೆಗಳಲ್ಲಿ ಭಾಗವಹಿಸಲು ನೀವು ಸದಸ್ಯರಾಗಬೇಕಿಲ್ಲ, ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿದ್ದರೆ ಸಾಕು. ಜೊತೆಗೆ, ಉಳ್ಳ ಉದಾರಿಗಳು ನಮಗೆ ಧನಸಹಾಯಮಾಡಬಹುದು (ರಂಗ ಲಾಭರಹಿತ ಸಂಸ್ಥೆಯಾದ್ದರಿಂದ, ತಮ್ಮ ಕೊಡುಗೆ ಆದಾಯ ತೆರಿಗೆಯಿಂದ ವಿನಾಯತಿಗೆ ಅರ್ಹವಾಗುತ್ತದೆ ಎಂಬುದನ್ನು ತಾವು ದಯವಿಟ್ಟು ಗಮನಿಸಬೇಕು!) ನಮ್ಮ ಪ್ರಕಟನೆಗಳನ್ನು ಅಭಿನವ ಮತ್ತು ವಸ೦ತ ಪ್ರಕಾಶನ, ಬೆ೦ಗಳೂರು, ಅವರಿ೦ದ ಪಡೆಯಬಹುದು. ಕನ್ನಡ ಸಾಹಿತ್ಯ ರಂಗದ ಮುಂದಿನ ಕಾರ್ಯಕ್ರಮಗಳನ್ನು ನಿಮ್ಮೂರಿಗೆ ಕರೆಸಿಕೊಳ್ಳಲು ನಿಮಗೆ ಬಯಕೆಯಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ, ಕನ್ನಡ ಸಾಹಿತ್ಯ ರಂಗದ ಹೆಚ್ಚಿನ ಚಟುವಟಿಕೆಗಳ ಮಾಹಿತಿ ಪಡೆಯಲು ನಮ್ಮ ಜಾಲತಾಣಕ್ಕೆ ತಪ್ಪದೇ ಭೇಟಿ ಕೊಡಿ (www.kannadasahityaranga.org).

ಸಿರಿಗನ್ನಡ ಗೆಲ್ಗೆ.

 Posted by at 11:00 AM