Jun 182020
 

 

ಕಸಾರಂ ಆಶ್ರಯದಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸುವ ವಸಂತ ಸಾಹಿತ್ಯೋತ್ಸವ ಈ ಬಾರಿ ಮೇ ೨೦೨೧ರಲ್ಲಿ ಡಲ್ಲಸ್ ನಗರದ ಮಲ್ಲಿಗೆ ಕನ್ನಡ ಸಂಘದ ಆಶ್ರಯದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಪ್ರಕಟಿಸುವ ಗ್ರಂಥಕ್ಕೆ ಲೇಖನಗಳನ್ನು ಆಹ್ವಾನಿಸುವುದೇ ಈ ಪ್ರಕಟಣೆಯ ಉದ್ದೇಶ.

‘ಜನವಾಣಿ ಬೇರು : ಕವಿವಾಣಿ ಹೂವು’ ಎಂದರು ಬಿ.ಎಮ್.ಶ್ರೀ. ಕವಿವಾಣಿ ಶಿಷ್ಟ ಮಾರ್ಗದ್ದಾದರೆ, ಜನವಾಣಿಯಾದ ಜಾನಪದದ್ದು ದೇಸೀಮಾರ್ಗ. ಜನಮನದ ಮಾತು, ಜಾನಪದ ಕತೆ, ಹಾಡು-ಹಬ್ಬಗಳಲ್ಲಿ ವೈವಿಧ್ಯವಾಗಿ ಅರಳಿ ಅಲ್ಲಲ್ಲಿನ, ಅಂದಂದಿನ ಜನ ಸಮುದಾಯದ ನೋವು, ನಲಿವು, ಸುಖ-ದುಃಖಗಳನ್ನು ಅದು ಇರುವಂತೆಯೇ ದಾಖಲಿಸುವುದು, ದಾಟಿಸುವುದು ಜನಪದದ ಶಕ್ತಿ. ಜಾನಪದ ಸಾಹಿತ್ಯ-ಕಲೆಗಳ ಅಧ್ಯಯನ, ಆ ಭಾಷಿಕರ ಸಂಸ್ಸ್ಕೃತಿಯೊಂದರ ಅಧ್ಯಯನವಾಗಬಲ್ಲದು.

ಈ ನಿಟ್ಟಿನಲ್ಲಿ ಬರಲಿರುವ ನಮ್ಮ ಸಮ್ಮೇಳನದ ಮುಖ್ಯ ವಿಷಯವಾಗಿ ‘ಜಾನಪದ’ವನ್ನೇ ನಾವು ಆರಿಸಿಕೊಂಡಿದ್ದೇವೆ. ಪ್ರತಿ ಬಾರಿಯಂತೆ, ಸಮ್ಮೇಳನದ ಸಂದರ್ಭದಲ್ಲಿ ನಾವು ಹೊರತರಲಿರುವ ಗ್ರಂಥಕ್ಕಾಗಿ ನಾವು ಆರಿಸಿಕೊಂಡಿರುವ ವಿಷಯ ‘ಅಮೆರಿಕನ್ ಜಾನಪದ ಲೋಕ’. ಕರ್ನಾಟಕದ ಜಾನಪದದಂತೆಯೇ ನಾವಿಂದು ಬದುಕುತ್ತಿರುವ ಅಮೆರಿಕಾ ದೇಶದ ಜಾನಪದ ಲೋಕವನ್ನೂ ನಾವು ಪರಿಚಯಿಸಿಕೊಳ್ಳುವ, ಅರಿಯುವ ಮತ್ತು ಅದನ್ನು ಕನ್ನಡ ಲೋಕಕ್ಕೆ ಪರಿಚಯಿಸುವ ಅವಕಾಶವೊಂದು ನಮಗೀಗ ಈ ಮೂಲಕ ಒದಗಿ ಬಂದಿದೆ. ವಲಸಿಗರ ದೇಶವೇ ಆದ ಅಮೆರಿಕಾ ದೇಶದಲ್ಲಿ ಮೊದಲಿನಿಂದಲೂ ನೆಲೆಸಿದ ಮೂಲನಿವಾಸಿಗಳ ಜಾನಪದವಷ್ಟೇ ಅಲ್ಲದೆ, ಈ ದೇಶಕ್ಕೆ ಕಾಲಾಂತರಗಳಲ್ಲಿ ವಲಸಿಗರಾಗಿ ಬಂದು ನೆಲೆಸಿದ ಬೇರೆ ಬೇರೆ ದೇಶ, ಭಾಷೆ, ಜನಾಂಗಗಳು ಅವರೊಟ್ಟಿಗೆ ಹೊತ್ತು ತಂದ ಅಲ್ಲಲ್ಲಿನ ನಂಬಿಕೆ, ಹಾಡು, ಪಾಡುಗಳು ಅವರ ಜನಪದ ಸಾಹಿತ್ಯ, ಕಲೆ ಮತ್ತು ಆಚರಣೆಗಳಲ್ಲಿ ಸೇರಿ ಹೋಗಿದೆ. ಅಮೇರಿಕದ ಜನಪದ ಸಂಪತ್ತನ್ನು, ವೈವಿಧ್ಯತೆಯನ್ನು ಪರಿಚಯಿಸುವ ಪ್ರಯತ್ನ ನಮ್ಮದು.

• ಅಮೆರಿಕನ್ ಜಾನಪದ ಕಥೆ/ಹಾಡುಗಳನ್ನು ಕನ್ನಡಕ್ಕೆ ತರುವುದು – ನೇರ ಅನುವಾದವೇ ಆಗಬೇಕೆಂದಿಲ್ಲ, ಭಾವಾನುವಾದದ ಮೂಲಕ ಮೂಲವನ್ನು ಕನ್ನಡದಲ್ಲೇ ಹೊಸದಾಗಿ ಕಟ್ಟುವ ಪ್ರಯತ್ನವನ್ನೂ ಮಾಡಬಹುದು. ದೊಡ್ಡ ಕಥೆಗಳಿದ್ದರೆ ಸಂಕ್ಷಿಪ್ತಗೊಳಿಸಲು ಅಥವಾ ವಿವರಗಳನ್ನು ಸೇರಿಸಲು ಅವಕಾಶವಿರುತ್ತದೆ. ಒಂದೇ ಕಥೆ ಅಲ್ಪಸ್ವಲ್ಪ ಭಿನ್ನವಾಗಿ ಲಭ್ಯವಿದ್ದರೆ ಒಟ್ಟುಗೂಡಿಸುವ, ಯಾವುದೋ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಬರಹಗಾರರಿಗಿದೆ. ಪ್ರತಿ ಕಥೆ/ಲೇಖನ/ಕವನಗಳಿಗೂ ಉಪಯೋಗಿಸಿದ ಮೂಲಗಳನ್ನು, ಆಕರ ಗ್ರಂಥಗಳನ್ನು ಉಲ್ಲೇಖಿಸಬೇಕು. ಅನುವಾದಕ್ಕಿಂತಲೂ ಮರುಕಥನವಾದರೆ ಒಳಿತು.
• ಮೂಲನಿವಾಸಿಗಳಲ್ಲಿ ಸಾಕಷ್ಟು ಭಿನ್ನ ಜನಪದಗಳಿವೆ. ಪುನರಾವರ್ತನೆಯಾಗದಂತೆ ಅವುಗಳನ್ನು ವೈವಿಧ್ಯವನ್ನು ಪರಿಚಯಿಸುವುದು ಉದ್ದೇಶವಾಗಿರುವುದರಿಂದ, ಲೇಖಕರು ತಮ್ಮ ರಾಜ್ಯದ ಅಥವಾ ಹತ್ತಿರದ ಜನಪದಗಳನ್ನು ಪ್ರತಿನಿಧಿಸಲು ಪ್ರಯತ್ನಿಸಿದರೆ ವೈವಿಧ್ಯತೆ ಬರಲು ಸುಲಭವಾಗಬಹುದು. ಹಾಗೂ ಸ್ಥಳೀಯ ಲೈಬ್ರರಿಗಳಲ್ಲಿ ಆಕರ ಗ್ರಂಥಗಳು ಸಿಗುವುದೂ ಸುಲಭವಾಗಬಹುದು.
• ಆಫ್ರಿಕ, ಯುರೋಪ್, ದ. ಅಮೇರಿಕ ಮತ್ತು ಏಷ್ಯಾ ಖಂಡಗಳಿಂದ ಜನ ವಲಸೆಬಂದಂತೆ ಆದ ಕೊಡುಕೊಳ್ಳುವಿಕೆ ಅಥವಾ ಸಂಘರ್ಷ ತಂದ ಬದಲಾವಣೆಯನ್ನು ಗುರುತಿಸಲು ಪ್ರಯತ್ನಿಸಬಹುದು. ಬೇರೆ ಬೇರೆ ಭಾಷಿಕರ/ಜನಾಂಗಗಳ ನಂಬಿಕೆ, ಆಚರಣೆಗಳ ಮೂಲಕ ಆಯಾ ಜನಪದದ ಚರಿತ್ರೆ ಮತ್ತು ಮನಃಶಾಸ್ತ್ರೀಯ ವಿವರಗಳ ಸಂಕ್ಷಿಪ್ತ ಅಧ್ಯಯನವನ್ನೂ ಮಂಡಿಸಬಹುದು.
• ಜಾನಪದ ಕಥೆ/ಕಾವ್ಯಗಳ ಹೊರತಾಗಿ ಜಾನಪದ ಸಂಗೀತ, ನೃತ್ಯ, ಮಕ್ಕಳ ಸಾಹಿತ್ಯ, ಕಲೆ, ನಂಬಿಕೆ, ಆಟ, ಆಹಾರ, ಔಷಧಿ, ಗಾದೆ-ಒಗಟುಗಳಂಥವು – ಒಟ್ಟಿನಲ್ಲಿ ಸಾಮಾನ್ಯ ಜನಜೀವನದ ಹಲವು ಅಲ್ಲಲ್ಲಿನ (ಆಯಾ ಜನಪದಗಳಿಗೆ ಸಂಬಂಧಿಸಿದ ಕತೆಗಳೊಡನೆ) ವಿಷಯಗಳನ್ನು ಬರೆದಲ್ಲಿ ಓದುಗರಲ್ಲಿ ಅದನ್ನು ಇನ್ನಷ್ಟು ಅರಿಯುವ ಆಸಕ್ತಿ ಹುಟ್ಟುತ್ತದೆ. ಅಥವಾ ಕೆಲವರು ತೌಲನಿಕವಾಗಿ ಒಂದೊಂದು ವಿಷಯದ ಬಗ್ಗೆ ಬರೆದರೂ ಆದೀತು.
• ಕನ್ನಡ ನಾಡಿನ ಮತ್ತು ಅಮೆರಿಕಾದ ಜಾನಪದದಲ್ಲಿ ಕಾಣಬಹುದಾದ ಸಾಮ್ಯತೆ ಅಥವಾ ಭಿನ್ನತೆಗಳ ತೌಲನಿಕ ಅಧ್ಯಯನವನ್ನೂ ಲೇಖನದಲ್ಲಿ ಮಂಡಿಸಬಹುದು.

ಮೊಟ್ಟ ಮೊದಲು, ಈ ನಮ್ಮ ಯತ್ನದಲ್ಲಿ ಭಾಗಿಯಾಗಲು ಉತ್ಸಾಹವುಳ್ಳವರು ಸಾಧ್ಯವಾದಷ್ಟು ಬೇಗ (ಜೂನ್ ತಿಂಗಳು ಮುಗಿಯುವ ಮುನ್ನ) ಸಂಪಾದಕರನ್ನು ಸಂಪರ್ಕಿಸಿ ತಮ್ಮ ಉದ್ದಿಶ್ಯವನ್ನು (ಸಾಧ್ಯವಿದ್ದಲ್ಲಿ ವಸ್ತುವಿನ ಸ್ಥೂಲ ಪರಿಚಯವನ್ನೂ) ಹಂಚಿಕೊಂಡಲ್ಲಿ ನಿರ್ವಹಣೆಯ ದೃಷ್ಟಿಯಿಂದ ಸಹಾಯವಾಗುತ್ತದೆ. ನಿಮ್ಮ ಯೋಚನೆ ಹಾಗು ಯೋಜನೆಯನ್ನು ಆದಷ್ಟು ಬೇಗ ನಮ್ಮೊಂದಿಗೆ ಹಂಚಿಕೊಂಡರೆ ವಿಷಯಗಳ ಪುನರಾವರ್ತನೆಯಾಗುವುದನ್ನು ತಡೆಯಬಹುದು. ದಯವಿಟ್ಟು ಸಹಕರಿಸಿ.
ಲೇಖನಗಳ ಉದ್ದ, ಮಿತಿ, ಫ಼ಾಂಟ್ ಮುಂತಾದ ವಿವರಗಳನ್ನು ಆಸಕ್ತಿ ತೋರಿಸಿದ ಲೇಖಕರಿಗೆ ಮತ್ತೊಂದು ಪ್ರಕಟಣೆಯಲ್ಲಿ ತಿಳಿಸಲಾಗುವುದು. ನಿಮ್ಮ ಲೇಖನದ ಮೊದಲ ಕರಡನ್ನು ಸಿದ್ಧಪಡಿಸಲು ಸುಮಾರು ಎರಡು ತಿಂಗಳ ಸಮಯವಿರುತ್ತದೆ. ಅಂದರೆ ಆಗಸ್ಟ್ ಕೊನೆಯ ವೇಳೆಗೆ ನಿಮ್ಮ ಮೊದಲ ಕರಡು ಸಂಪಾದಕರನ್ನು ಸೇರಬೇಕು. ಐದಾರು ಜನರ ಸಂಪಾದಕ ಸಮಿತಿ ಕೈಗೆ ಬಂದ ಲೇಖನಗಳನ್ನು ಸಮೀಕ್ಷಿಸಿ ತಮ್ಮ ಆಯ್ಕೆಯ ಫಲಿತಾಂಶವನ್ನು ಸೆಫ್ಟೆಂಬರ್ ಕೊನೆಯ ವೇಳೆಗೆ ಲೇಖಕರಿಗೆ ತಿಳಿಸುವುದು. ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಮಾಡಿದ ಕೊನೆಯ ಕರಡನ್ನು ಸಿದ್ಧಪಡಿಸಲು ಒಂದು ತಿಂಗಳ ಅವಧಿ ಇರುತ್ತದೆ. ನವೆಂಬರ್ ತಿಂಗಳಲ್ಲಿ ಗ್ರಂಥವು ನಿರ್ದಿಷ್ಟ ರೂಪನ್ನು ಪಡೆಯಬೇಕೆಂಬುದು ನಮ್ಮ ಆಶಯ. ಇದಕ್ಕೆ ಲೇಖಕರ ಸಹಕಾರ ಅತ್ಯಗತ್ಯ. ಅಮೆರಿಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಘನ ಉದ್ದೇಶದಿಂದ ಕಸಾರಂ ಹುಟ್ಟಿದೆ, ಬರವಣಿಗೆಯನ್ನು ಗಂಭೀರವಾಗಿ ಗ್ರಹಿಸುವವರಿಗೆ ಸ್ವಾಗತವಿದೆ. ಹಿರಿಯ ನುರಿತ ಲೇಖಕರಿಗೂ, ಉತ್ಸಾಹೀ ಯುವ ಲೇಖಕರಿಗೂ ಸಮಾನಾವಕಾಶ ಕಲ್ಪಿಸುವುದು ನಮ್ಮ ಯೋಜನೆ. ಹಾಗಿದ್ದರೂ ಗುಣಮಟ್ಟಗಳನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ, ಆದ್ದರಿಂದ ಲೇಖನಗಳ ಆಯ್ಕೆಯ ವಿಷಯದಲ್ಲಿ ಸಂಪಾದಕ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ. ಲೇಖನವನ್ನು ಕಳುಹಿಸುವವರು ದಯವಿಟ್ಟು ಈ ನಿಯಮವನ್ನು ಗೌರವಿಸುವಿರೆಂದು ನಂಬುತ್ತೇವೆ.

ನಿಮ್ಮ ಉದ್ದೇಶವನ್ನು ತಿಳಿಸಲು ಅಥವಾ ಹೆಚ್ಚಿನ ವಿವರಗಳನ್ನು ತಿಳಿಯಲು ಈ ವಿಳಾಸಕ್ಕೆ ವಿಅಂಚೆ ಕಳಿಸಿರಿ: mysreena@aol.com

 Posted by at 1:58 PM