ಕವಿ, ಕಥೆಗಾರ, ವಿಮರ್ಶಕ ಸುಮತೀಂದ್ರ ನಾಡಿಗ
ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಪ್ರಸಿದ್ಧರಾಗಿರುವ ಶ್ರೀ ಸುಮತೀಂದ್ರನಾಡಿಗರು (ಜನನ: ೧೯೩೫) ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಜನಿಸಿದರು. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ಪ್ರತಿಭಾವಂತ ವಿದ್ಯಾರ್ಥಿಯಾದ ನಾಡಿಗರು ೧೯೫೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಮತ್ತು ೧೯೭೯ರಲ್ಲಿTemple University, Philadelphia, USA ಇಂದ ಇಂಗ್ಲಿಷ್ ಎಂ. ಎ. ಪದವಿಯನ್ನು ಪಡೆದರು. ೧೯೮೫ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಡಾಕ್ಟರೇಟ್ ಪಡೆದುಕೊಂಡ ನಾಡಿಗರು ತಮ್ಮ ಪ್ರೌಢ ಪ್ರಬಂಧಕ್ಕಾಗಿ ಆರಿಸಿಕೊಂಡಿದ್ದ ವಿಷಯ ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’. ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಕೆ. ಎಸ್. ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ವಿಶೇಷವಾದ ಅಧ್ಯಯನ ನಡೆಸಿದ್ದಾರೆ.
ಸುಮತೀಂದ್ರ ನಾಡಿಗರು ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಯನ್ನು ಸಲ್ಲಿಸಿದ್ದಾರೆ. ‘ಜಡ ಮತ್ತು ಚೇತನ’, ‘ಪಂಚಭೂತಗಳು’, ‘ನಟರಾಜ ಕಂಡ ಕಾಮನಬಿಲ್ಲು’, ‘ಕುಹೂ ಗೀತ’, ‘ತಮಾಷೆ ಪದ್ಯಗಳು’, ‘ದಾಂಪತ್ಯ ಗೀತ’, ‘ಭಾವಲೋಕ’, ‘ಉದ್ಘಾಟನೆ’, ‘ಕಪ್ಪು ದೇವತೆ’ ಮತ್ತು ‘ನಿಮ್ಮ ಪ್ರೇಮಕುಮಾರಿಯ ಜಾತಕ’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವುಗಳ ಪೈಕಿ ‘ಪಂಚಭೂತಗಳು’ ಮತ್ತು ‘ದಾಂಪತ್ಯ ಗೀತ’ ಬಹಳ ಪ್ರಮುಖವಾಗಿದ್ದು, ಇಂಗ್ಲಿಷ್ ಮತ್ತು ಭಾರತದ ಹಲವಾರು ಪ್ರಾಂತೀಯ ಭಾಷೆಗಳಿಗೆ ಅನುವಾದಗೊಂಡಿವೆ.
‘ಮೌನದಾಚೆಯ ಮಾತು’, ‘ನಾಲ್ಕನೆಯ ಸಾಹಿತ್ಯ ಚರಿತ್ರೆ’, ‘ಮತ್ತೊಂದು ಸಾಹಿತ್ಯ ಚರಿತ್ರೆ’, ‘ಅಡಿಗರು ಮತ್ತು ನವ್ಯಕಾವ್ಯ’, ‘ವಿಮರ್ಶೆಯ ದಾರಿಯಲ್ಲಿ’, ‘ಕಾವ್ಯ ಎಂದರೇನು?’ ಇತ್ಯಾದಿ…, ನಾಡಿಗರ ವಿಮರ್ಶಾ ಕೃತಿಗಳು. ‘ಗಿಳಿ ಮತ್ತು ದುಂಬಿ’, ‘ಕಾರ್ಕೋಟಕ’ ‘ಸ್ಥಿತಪ್ರಜ್ಞ’ಎಂಬ ಕಥಾ ಸಂಕಲನಗಳನ್ನು ಹೊರತಂದಿರುವ ನಾಡಿಗರ ‘ಆಯ್ದ ಕಥೆಗಳು’ ಎಂಬ ಕೃತಿ ೧೯೯೨-೧೯೯೩ರ ಸಾಲಿನ, ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ಪಠ್ಯವಾಗಿ ಆಯ್ಕೆಯಾಗಿತ್ತು. ಮಕ್ಕಳ ಸಾಹಿತ್ಯದಲ್ಲೂ ವಿಪುಲ ಕೃಷಿ ನಡೆಸಿರುವ ನಾಡಿಗರು, ‘ಡಕ್ಕಣಕ್ಕ ಡಕ್ಕಣ’, ಧ್ರುವ ಮತ್ತು ಪ್ರಹ್ಲಾದ’, ‘ಗೂಬೆಯ ಕಥೆ’, ‘ಇಲಿ ಮದುವೆ’, ‘ಗಾಳಿಪಟ’ ಮುಂತಾದ ಕೃತಿಗಳನ್ನೂ, ‘ಹನ್ನೊಂದು ಹಂಸಗಳು’ ಎಂಬ ಮಕ್ಕಳ ನಾಟಕವನ್ನೂ ಬರೆದಿದ್ದಾರೆ.
ಅನುವಾದ ಕ್ಷೇತ್ರದಲ್ಲೂ ನಾಡಿಗರದು ದೊಡ್ಡ ಹೆಸರು. ‘ರಾಧಾನಾಥ್ ರಾಯ್’, ‘ಸಿಂಧಿ ಸಾಹಿತ್ಯ ಚರಿತ್ರೆ’, ಅರಿಷ್ಟೋಫೇನನ ‘Birds’ ರಸ್ಕಿನ್ನನ ‘Unto This Last’ ಮುಂತಾದ ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿರುವುದಲ್ಲದೆ, ಬಂಗಾಳಿ ಭಾಷೆಯಿಂದ ರವೀಂದ್ರನಾಥ ಟಾಗೋರ್, ನರೇಂದ್ರನಾಥ ಚಕ್ರವರ್ತಿಯವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.
ಸುಮತೀಂದ್ರ ನಾಡಿಗರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ. ವಿ. ಸೀ. ಪುರಸ್ಕಾರ ಮುಂತಾದ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. ೧೯೯೬-೧೯೯೯ ಅವಧಿಯಲ್ಲಿ ‘ನ್ಯಾಷನಲ್ ಬುಕ್ ಟ್ರಸ್ಟ್’ ಸಂಸ್ಥೆಯ ಚೇರ್‌ಮನ್ನರಾಗಿದ್ದ ನಾಡಿಗರನ್ನು ಹರಿದ್ವಾರದ ಗುರುಕುಲ ಕಾಂಗ್ಡಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಭಾರತದ ಹಲವಾರು ಭಾಷೆಗಳನ್ನು ಬಲ್ಲ ನಾಡಿಗರಿಗೆ (ಕನ್ನಡ, ಹಿಂದಿ, ಮರಾಠಿ, ಕೊಂಕಣಿ, ಬಂಗಾಳಿ) ಭಾರತೀಯ ಸಾಹಿತ್ಯದ ಅತ್ಯಂತ ನಿಕಟ ಪರಿಚಯವಿದೆ.
ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ
ಕನ್ನಡದ ಪ್ರಮುಖ ಹಾಸ್ಯ ಲೇಖಕಿಯಾಗಿರುವ ಶ್ರೀಮತಿ ಭುವನೇಶ್ವರಿ ಹೆಗಡೆಯವರ (ಜನನ: ಮೇ ೦೬, ೧೯೫೬) ಜನ್ಮ ಸ್ಥಳ ಉತ್ತರ ಕನ್ನಡ ಜಿಲ್ಲೆ ಕತ್ರಗಾಲ ಗ್ರಾಮ. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಎಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಭುವನೇಶ್ವರಿಯವರ ೫೦೦ಕ್ಕೂ ಹೆಚ್ಚು ಹಾಸ್ಯ ಪ್ರಬಂಧಗಳು ಕನ್ನಡದ ಎಲ್ಲ ಪ್ರಮುಖ ಪತ್ರಿಕೆ, ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿವೆ.
ಭುವನೇಶ್ವರಿಯವರು ‘ಮುಗುಳು’, ‘ನಕ್ಕು ಹಗುರಾಗಿ’, ‘ಎಂಥದು ಮಾರಾಯ್ರೆ’, ‘ವಲಲ ಪ್ರತಾಪ’, ‘ಹಾಸಭಾಸ’, ‘ಮೃಗಯಾ ವಿನೋದ’, ‘ಬೆಟ್ಟದ ಭಾಗೀರಥಿ’, ‘ಮಾತಾಡಲು ಮಾತೇ ಬೇಕೇ?’, ‘ಪಟ್ಟೆಯ ಪಟ್ಟೆ ಹುಲಿ’, ‘ಕೈಗುಣ ಬಾಯ್ಗುಣ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಆಯ್ದ ನಗೆಬರಹಗಳು ‘ಬೆಸ್ಟ್ ಆಫ್ ಭು. ಹೆ. ಎಂಬ ಹೆಸರಿನ ಪುಸ್ತಕವಾಗಿ ಪ್ರಕಟವಾಗಿವೆ. ಭುವನೇಶ್ವರಿಯವರು ‘ಸೂರು ಸಿಕ್ಕದಲ್ಲಾ’, ‘ಕಛೇರಿ ವೈಭವಂ’, ‘ವಸಂತ ವ್ಯಾಧಿ’, ‘ಕಾವ್ಯಕೋಲಾಹಲ’ ಎಂಬ ರೇಡಿಯೋ ನಗೆನಾಟಕಗಳನ್ನು ಕೂಡ ರಚಿಸಿದ್ದಾರೆ. ಭುವನೇಶ್ವರಿಯವರ ‘ಸಭಾಕಂಪನ’, ‘ಮೂಢ ನಂಬಿಕೆಗಳ ಬೀಡಿನಲ್ಲಿ’, ‘ಸುಲಭದಲ್ಲಿ ಸಜ್ಜನರಾಗಲಾರಿರಿ’ ‘ನಕ್ಕು ಹಗುರಾಗಿ’ ಮತ್ತಿತರ ಪ್ರಬಂಧಗಳು ಶಾಲಾಕಾಲೇಜುಗಳ ಪಠ್ಯವಾಗಿ ಆಯ್ಕೆಯಾಗಿವೆ. ಭುವನೇಶ್ವರಿಯವರು ಅಂಕಣಗಾರ್ತಿಯಾಗಿಯೂ ಪ್ರಸಿದ್ಧರು. ‘ಮಂಗಳೂರು ಮುಗುಳ್ನಗೆ’ (ಲಂಕೇಶ್ ಪತ್ರಿಕೆ), ‘ನಗೆಮೊಗೆ’ (ವಾರ್ತಾಭಾರತಿ),‘ ಲಘುಬಗೆ’(ಉದಯವಾಣಿ), ‘ಎಂಥದು ಮಾರಾಯ್ರೇ’ (ಕರ್ಮವೀರ), ‘ಪಡು ಪಡುಸಾಲೆ’ (ಪ್ರಜಾವಾಣಿ) – ಭುವನೇಶ್ವರಿಯವರು ನಿರ್ವಹಿಸಿದ ಅಂಕಣಗಳು. ಇವಲ್ಲದೆ ಹಲವಾರು ವಿಶೇಷ ಸಂಚಿಕೆಗಳಲ್ಲಿಯೂ ಭುವನೇಶ್ವರಿಯವರ ಲೇಖನಗಳು ಪ್ರಕಟವಾಗಿವೆ. ಅಮೆರಿಕದ ಕನ್ನಡ ಸಾಹಿತ್ಯ ರಂಗ ಹೊರತಂದಿರುವ ‘ನಗೆ ಗನ್ನಡಂಗೆಲ್ಗೆ’ ಗ್ರಂಥದಲ್ಲಿ ‘ಅ.ರಾ.ಸೇ.’ ಕುರಿತ ಆಹ್ವಾನಿತ ಲೇಖನ ಪ್ರಕಟವಾಗಿದೆ.
ಭುವನೇಶ್ವರಿಯವರು ಸಲ್ಲಿಸಿರುವ ವಿಪುಲ ಸಾಹಿತ್ಯಸೇವೆಯಿಂದಾಗಿ ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅವರನ್ನು ಅರಸಿ ಬಂದಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೮, ೧೯೯೭), ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನ (೧೯೯೭, ೨೦೦೦), ಬನಹಟ್ಟಿ ಪುಸ್ತಕ ಬಹುಮಾನ, ಪುತ್ತೂರಿನ ಉಗ್ರಾಣ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಇನ್ಫೋಸಿಸ್ ಫೌಂಡೇಶನ್ನಿನ ಡಾ. ಸುಧಾಮೂರ್ತಿ ಪ್ರಶಸ್ತಿಗಳಲ್ಲದೆ, ಇನ್ನೂ ಹಲವಾರು ಪ್ರಶಸ್ತಿಗಳಿಂದ ಭುವನೇಶ್ವರಿಯವರನ್ನು ಗೌರವಿಸಲಾಗಿದೆ. ಭುವನೇಶ್ವರಿಯವರು ಪತಿ ಶಂಭು ಹೆಗಡೆ ಮತ್ತು ಪುತ್ರಿ ಆಭಾ ಹೆಗಡೆಯವರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.