ಕನ್ನಡ ಸಾಹಿತ್ಯ ರಂಗದ ದ್ವೈವಾರ್ಷಿಕ ಸಮ್ಮೇಳನದ ಸಂದರ್ಭದಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಪುಸ್ತಕವೊಂದನ್ನು ಪ್ರಕಟಿಸಲಾಯಿತು. “ಮಥಿಸಿದಷ್ಟೂ ಮಾತು” (ತ್ರಿವೇಣಿ ಶ್ರೀನಿವಾಸ ರಾವ್-ಪ್ರಧಾನ ಸಂಪಾದಕಿ, ಸಹ ಸಂಪಾದಕ -ಎಂ.ಆರ್.ದತ್ತಾತ್ರಿ) ಎಂಬ ಪ್ರಬಂಧ ಸಂಕಲನಲ್ಲಿ ಅಮೆರಿಕದ ಮೂಲೆ-ಮೂಲೆಗಳಲ್ಲಿ ನೆಲೆಸಿರುವ ಹಲವಾರು ಹಿರಿಯ ಮತ್ತು ಕಿರಿಯ ಬರಹಗಾರರ ಲೇಖನಗಳಿವೆ. ಈ ಪುಸ್ತಕಕ್ಕೆ ಸಾಕಷ್ಟು ಮನ್ನಣೆ ಈಗಾಗಲೇ ದೊರಕಿದೆ. ಈ ಪುಸ್ತಕವನ್ನು ರಾಜಧಾನಿಯ ಕನ್ನಡ ಸಂಘ “ಕಾವೇರಿ”ಯ ಸಹೃದಯೀ ಸದಸ್ಯರುಗಳಾದ ಶ್ರೀಮತಿ ಗೋದಾ ಪ್ರಸಾದ್ ಮತ್ತು ಅವರ ಸಹೋದರ ಬಾಲಾಜಿ ಹೆಬ್ಬಾರ್ ಅವರುಗಳ ಕುಟುಂಬಗಳು ಪ್ರಾಯೋಜಿಸಿ ಕನ್ನಡ ಸಾಹಿತ್ಯ ರಂಗಕ್ಕೆ ಅಪಾರವಾದ ಸಹಾಯವನ್ನು ಮಾಡಿರುತ್ತಾರೆ. ಪಶ್ಚಿಮತೀರದಲ್ಲಿ ನಡೆದ ನಮ್ಮ ಕಾರ್ಯಕ್ರಮಕ್ಕೆ ಪ್ರಾಯೋಜಕರು ಬರುವುದು ಸಾಧ್ಯವಾಗದೇ ಹೋದುದರಿಂದ, ಮೇರೀಲ್ಯಾಂಡಿನ ಪೊಟೋಮೆಕ್ ನಗರದಲ್ಲಿ ವಾಸವಾಗಿರುವ ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷ ಡಾ|| ಮೈ.ಶ್ರೀ ನಟರಾಜರ (ಈಗ ಅವರು ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷರಾಗಿ ಸರ್ವಾನುಮತದಿಂದ ಚುನಾಯಿತರಾಗಿದ್ದಾರೆ) ಮನೆಯಂಗಳದಲ್ಲಿ ಕೃತಜ್ಞತಾ ಸಮರ್ಪಣ ಸಮಾರಂಭವೊಂದನ್ನು ಜುಲೈ ೨೩ ರಂದು ಹಮ್ಮಿಕೊಳ್ಳಲಾಗಿತ್ತು.
ಮೊಟ್ಟಮೊದಲಿಗೆ, ಕನ್ನಡ ಸಾಹಿತ್ಯ ರಂಗದ ಸ್ವಾಗತ ಸಮಾರಂಭದ ಅಂಗವಾಗಿ ರಚಿಸಿ ವಾಚಿಸಿದ್ದ, “ಮುಂಜಾನೆಯ ಮಿಡಿತ” ಎಂಬ ಕವಿತೆಯನ್ನು (ಈ ಕವನ ಪ್ರಸಿದ್ಧ ಕವಯಿತ್ರಿ ಮಾಯಾ ಏಂಜೆಲೋ ಬರೆದ “ಆನ್ ದಿ ಪಲ್ಸ್ ಆಫ಼್ ಮಾರ್ನಿಂಗ್” ಎಂಬ ಕವನದ ಕನ್ನಡ ಭಾವಾನುವಾದ) ಶ್ರೀಯುತ ನಟರಾಜರು ವಾಚಿಸಿದರು. ನಂತರ ಅತಿಥಿಗಳನ್ನು ಸ್ವಾಗತಿಸಿ ಅವರನ್ನು ಸಭೆಗೆ ಪರಿಚಯಮಾಡಿಕೊಟ್ಟರು. “ಮಥಿಸಿದಷ್ಟೂ ಮಾತು” ಫುಸ್ತಕವನ್ನು ಮಕ್ಕಳು ತಮ್ಮ ತಂದೆ ಮತ್ತು ತಾಯಿ ಅವರ ನೆನೆಪಿಗೆ ಅರ್ಪಿಸಿರುವದನ್ನು ವಿವರಿಸಿ, ದಿವಂಗತರಾದ ಶ್ರೀಮತಿ ಸೀತಾ ಮತ್ತು ಶ್ರೀ ಗೋಪಾಲಕೃಷ್ಣ ಅವರ ಸುದೀರ್ಘವೂ ಅರ್ಥಪೂರ್ಣವೂ ಆದ ದಾಂಪತ್ಯ ಜೀವನ, ಅವರ ಕನ್ನಡ ಪೇಮ ಮತ್ತು ಸಾಹಿತ್ಯದ ಬಗ್ಗೆ ಅವರಿಗಿದ್ದ ಪ್ರೀತಿ-ಅಭಿಮಾನಗಳನ್ನು ಸಭಾಸದರಿಗೆ ಸ್ಥೂಲವಾಗಿ ಪರಿಚಯಿಸಿದರು.
ನಂತರ, ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷ (ಈಗ ಅವರು ದರ್ಮದರ್ಶಿಗಳ ಮಂಡಲಿಯ ಮುಖ್ಯಸ್ತರಾಗಿ ಆಯ್ಕೆಯಾಗಿದ್ದಾರೆ) ಡಾ|| ಎಚ್. ವೈ. ರಾಜಗೋಪಾಲ್ ಅವರು ಸಂಘದ ಚಟುವಟಿಕೆಗಳ ಪಕ್ಷಿನೋಟ, ಧ್ಯೇಯೋದ್ದೇಶಗಳ ವಿವರಗಳು, ಹಾಗು ಇಲ್ಲಿಯವರೆಗಿನ ಸಾಧನೆಗಳ ಸಮೀಕ್ಷೆಯನ್ನೊಳಗೊಂಡ ಭಾಷಣವನ್ನು ಮಾಡಿದರು. ಹಿಂದೆ ೨೦೦೯ರಲ್ಲಿ ರಾಜಧಾನಿ ಪ್ರದೇಶದ ಕನ್ನಡಿಗರು ಉತ್ಸಾಹದಿಂದ ನಡೆಸಿಕೊಟ್ಟ ಕನ್ನಡ ಸಾಹಿತ್ಯ ರಂಗದ ನಾಲ್ಕನೆಯ ಸಮ್ಮೇಳನವನ್ನು ಕೃತಜ್ಞತೆಯೊಂದಿಗೆ ನೆನೆಸಿಕೊಂಡರು. ನಂತರ ಮಥಿಸಿದಷ್ಟೂ ಮಾತು ಪುಸ್ತಕದಲ್ಲಿರುವ ಹಲವು ಪ್ರಬಂಧಗಳ ಪುಟ್ಟ ಪರಿಚಯವನ್ನು ನಟರಾಜ್ ಮಾಡಿಕೊಟ್ಟು ಪುಸ್ತಕವನ್ನು ಕೊಂಡು ಓದುವಂತೆ ಹುರಿದುಂಬಿಸಿದರು.
ಮುಖ್ಯಅತಿಥಿಗಳಾದ ಶ್ರೀಮತಿ ಗೋದಾ ಪ್ರಸಾದ್ ಮತ್ತು ಡಾ|| ಬಾಲಾಜಿ ಹೆಬ್ಬಾರ್ ಅವರುಗಳಿಗೆ ಪುಷ್ಪಗುಚ್ಛಗಳನ್ನಿತ್ತು ಕನ್ನಡ ಸಾಹಿತ್ಯರಂಗದ ಮನಃಪೂರ್ವಕ ಧನ್ಯವಾದಗಳನ್ನು ಮತ್ತು ಮೆಚ್ಚುಗೆಯನ್ನೂ ವ್ಯಕ್ತಪಡಿಸಲಾಯಿತು. ನಮ್ಮ ಕರೆಗೆ ಓಗೊಟ್ಟು ಬಂದು ನೆರೆದಿದ್ದ ಸುಮಾರು ನಲವತ್ತಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಕನ್ನಡ ಸಾಹಿತ್ಯ ರಂಗದ ಪ್ರಕಟಣೆಗಳಾದ ಹಲವಾರು ಪುಸ್ತಕಗಳನ್ನು ಕೊಂಡು, ರುಚಿಕರವಾದ ಭೋಜನವನ್ನು ಸ್ವೀಕರಿಸಿ, ಕುಶಲೋಪರಿ ಮಾತುಗಳಾಡಿ ಬೀಳ್ಕೊಂಡರು. ಸಂಘದ ಹಲವಾರು ಪ್ರಮುಖ ಸದಸ್ಯರೂ ಮತ್ತು ಖಜಾಂಚಿ ಶ್ರೀ ಗುಂಡೂ ಶಂಕರ್ ಅವರೂ ಸಹ ಭಾಗವಹಿಸಿದ್ದು ಸಭೆಗೆ ಒಳ್ಳೆಯ ಕಳೆ ಕಟ್ಟಿತ್ತು.
ಚಿತ್ರಗಳು : ಶ್ರೀವತ್ಸ ಜೋಶಿ