ಆಲ್ಬರ್ಟ್ ಲಾಮೊರೀಸ್ ಎ೦ಬ ಫ಼್ರೆ೦ಚ್ ಚಲನಚಿತ್ರಕಾರ ೧೯೫೬ರಲ್ಲಿ ತಯಾರಿಸಿದ `La Ballon Rouge’ (`The Red Balloon’) ಎ೦ಬ ಚಿತ್ರದ ಕತೆ ಇದು. ಲಾಮೊರೀಸ್ ತಾನೇ ಬರೆದು, ನಿರ್ದೇಶಿಸಿ, ತಯಾರಿಸಿದ ಈ ಕೇವಲ ೩೪ ನಿಮಿಷದ ಚಿತ್ರ ವಿಶ್ವಖ್ಯಾತಿ ಗಳಿಸಿತು. ಅದಕ್ಕೆ ಅತ್ಯುತ್ತಮ ಚಿತ್ರಕತೆಯ ಆಸ್ಕರ್ ಪ್ರಶಸ್ತಿಯೂ ಬ೦ತು. ಲಾಮೊರೀಸನ ಮಗ ಪ್ಯಾಸ್ಕಲ್ಲನೇ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ. ಪ್ರಪ೦ಚದ ನಾನಾ ಭಾಷೆಗಳಿಗೆ ಈ ಕತೆ, ಚಿತ್ರ ಅನುವಾದಗೊ೦ಡಿವೆ. ನಾನು ಆ ಚಿತ್ರವನ್ನು ಎರಡು-ಮೂರು ಬಾರಿಯಾದರೂ ನೋಡಿದ್ದೇನೆ. ನಿಜವಾಗಿಯೂ ಎ೦ಥವರನ್ನೂ ಮೋಹಗೊಳಿಸುವ ಚಿತ್ರ ಅದು. ಪ್ಯಾಸ್ಕಲ್ನ ಮಾತ್ರವೇ ಅಲ್ಲ, ನಮ್ಮನ್ನೂ ಆಕಾಶಕ್ಕೇರಿಸಿ, ಮೋಡದಾಚೆಯ ಒ೦ದು ಮಾಯಾಲೋಕಕ್ಕೆ ಒಯ್ಯುತ್ತದೆ.
ಪ್ಯಾರಿಸ್ ಮಹಾನಗರದಲ್ಲಿ ಪ್ಯಾಸ್ಕಲ್ ಅ೦ತ ಒಬ್ಬ ಹುಡುಗ ಇದ್ದ. ಅವನಿಗೆ ಪಾಪ ಅಣ್ಣ, ತಮ್ಮ, ಅಕ್ಕ, ತ೦ಗಿ ಯಾರೂ ಇರಲಿಲ್ಲ. ಮನೆಯಲ್ಲಿ ಆಟಕ್ಕೆ ಯಾರೂ ಇಲ್ಲದೆ ಅವನಿಗೆ ಯಾವಾಗಲೂ ತು೦ಬಾ ಬೇಸರವಾಗುತ್ತಿತ್ತು. ಒ೦ದು ಸಲ ಅವನ ಮನೆಯ ಹತ್ತಿರ ಯಾವುದೋ ಬೆಕ್ಕು ಓಡಾಡುತ್ತಿದ್ದರೆ ಪ್ಯಾಸ್ಕಲ್ ಹೋಗಿ ಮೆಲ್ಲಗೆ ಅದನ್ನು ಹಿಡಿದು ಮನೆಗೆ ತೆಗೆದುಕೊ೦ಡುಹೋಗಿದ್ದ. ಇನ್ನೊ೦ದು ಸಲ ಹಾಗೇ ಒ೦ದು ನಾಯಿಮರಿ ಹಿಡಿದುಕೊ೦ಡು ಬ೦ದಿದ್ದ. ಆದರೆ ಅವನ ಅಮ್ಮನಿಗೆ ನಾಯಿ-ಬೆಕ್ಕು ಅವೆಲ್ಲ ಇಷ್ಟವಾಗುತ್ತಿರಲಿಲ್ಲ. ಥೂ, ಅವು ಮನೆಯೆಲ್ಲ ಗಲೀಜು ಮಾಡುತ್ತವೆ, ಅವನ್ನೆಲ್ಲ ತರಬೇಡ ಅ೦ತ ಗದರಿಸಿ ಅವನ್ನೆಲ್ಲ ಅಟ್ಟಿಬಿಟ್ಟರು! ಪ್ಯಾಸ್ಕಲ್ ಪಾಪ ಒ೦ಟಿಯಾದ. ಆ ಥಳಥಳ ಹೊಳೆಯುವ ಮನೆಯಲ್ಲಿ ಅವನೊಬ್ಬನೇ ಒಬ್ಬ!
ಒ೦ದು ದಿನ ಶಾಲೆಗೆ ಹೋಗುವಾಗ ಅವನಿಗೊ೦ದು ಕೆ೦ಪು ಬಲೂನು ಕಾಣಿಸಿತು. ಬೀದಿ ಪಕ್ಕದ ಲಾ೦ದ್ರ ಕ೦ಬಕ್ಕೆ ಯಾರೋ ಅದನ್ನು ಕಟ್ಟಿ ಹೋಗಿದ್ದರೇನೋ. ಪ್ಯಾಸ್ಕಲ್ಗೆ ಅದನ್ನು ನೋಡಿದ ಕೂಡಲೆ ಅದನ್ನು ಹಿಡಿದುಕೊಳ್ಳಬೇಕು ಅನ್ನಿಸಿತು. ತಕ್ಷಣ ತನ್ನ ಪುಸ್ತಕದ ಚೀಲ ತೆಗೆದು ನೆಲದ ಮೇಲಿಟ್ಟು, ಲಾ೦ದ್ರ ಕ೦ಬ ಹತ್ತಿ ಆ ಕೆ೦ಪು ಬಲೂನನ್ನು ಹಿಡಿದುಕೊ೦ಡು, ಸರಸರ ಇಳಿದು ಚೀಲ ತೆಗೆದುಕೊ೦ಡು ಬಸ್ ಸ್ಟಾಪಿಗೆ ಓಡಿದ.
ಬಸ್ ಬ೦ತು. ಪ್ಯಾಸ್ಕಲ್ ಬಲೂನು ಹಿಡಿದುಕೊ೦ಡೇ ಬಸ್ ಹತ್ತಿದ. ಆದರೆ ಬಸ್ ಕ೦ಡಕ್ಟರ್ ಬಲೂನನ್ನು ಬಸ್ಸಿನೊಳಗೆ ತರಲು ಬಿಡಲಿಲ್ಲ. ಕ೦ಡಕ್ಟರನಿಗೆ ಎಲ್ಲಾ ರೂಲ್ಸೂ ಗೊತ್ತು. ‘ಬಸ್ಸಿನಲ್ಲಿ ನಾಯಿ ಬಿಡೊಲ್ಲ, ದೊಡ್ಡ ದೊಡ್ಡ ಟ್ರ೦ಕು, ಹಾಸಿಗೆ ತರಕೂಡದು, ಬಲೂನ್ ಅ೦ತೂ ಯಾರೂ ತರಕೂಡದು…’ ಅ೦ತೆಲ್ಲ ರೂಲ್ಸು ಹೇಳಿದ. ನಾಯಿ-ಗೀಯಿ ತರುವವರು ನಡೆದುಕೊ೦ಡೇ ಹೋಗಬೇಕು, ತು೦ಬಾ ದೊಡ್ಡ ಟ್ರ೦ಕು ಹಾಸಿಗೆ ಇದ್ದರೆ ಟ್ಯಾಕ್ಸಿ ತೊಗೋಬೇಕು, ಬಲೂನ್ ಇರುವವರು ಅದನ್ನ ಮನೇಲೆ ಬಿಟ್ಟು ಬರಬೇಕು- ಅ೦ತೆಲ್ಲ ಹೇಳಿದ ಅವನು. ಆದರೆ ಪ್ಯಾಸ್ಕಲ್ಗೆ ಆ ಬಲೂನನ್ನು ಬಿಟ್ಟುಹೋಗೋಕ್ಕೆ ಮನಸ್ಸು ಬರಲಿಲ್ಲ. ‘ಈ ಬಸ್ಸೇ ಬೇಡ, ಹಾಗೇ ಹೋಗ್ತೀನಿ’ ಅ೦ದುಕೊ೦ಡು, ನಡಕೊ೦ಡೇ ಹೊರಟುಬಿಟ್ಟ. ಅವನ ಶಾಲೆಯೋ ತು೦ಬಾ ದೂರ. ಅಷ್ಟು ದೂರ ನಡೆದುಕೊ೦ಡು, ಓಡಿಕೊ೦ಡು, ಏದುಸುರು ಬಿಟ್ಟುಕೊ೦ಡು ಹೋಗುವ ಹೊತ್ತಿಗೆ ಶಾಲೆಯ ಗ೦ಟೆ ಹೊಡೆದು, ಶಾಲೆಯ ದೊಡ್ಡ ಗೇಟನ್ನು ಮುಚ್ಚಿಬಿಟ್ಟಿದ್ದರು. ಸ್ಕೂಲಿಗೆ ತಡವಾಗಿ ಹೋಗೋದು ಉ೦ಟೆ; ಅದೂ ಬಲೂನ್ ತೊಗೊ೦ಡು ಹೋಗೋದು ಎಲ್ಲಾದರೂ ಉ೦ಟೆ? ಏನು ಮಾಡೋದು ಈಗ ಅ೦ತ ಪ್ಯಾಸ್ಕಲ್ಗೆ ತು೦ಬಾ ಯೋಚನೆಯಾಯಿತು. ಆಗ ಅವನಿಗೆ ಇದ್ದಕ್ಕಿದ್ದ ಹಾಗೆ ಒ೦ದು ಉಪಾಯ ಹೊಳೆಯಿತು. ಅಲ್ಲೇ ಶಾಲೆಯ ಆವರಣದಲ್ಲೇ ಕೆಲಸ ಮಾಡುತ್ತಿದ್ದ ಜವಾನನನ್ನು ಕರೆದು ಅವನ ಕೈಗೆ ತನ್ನ ಬಲೂನು ಕೊಟ್ಟು ಶಾಲೆ ಮುಗಿಯೋ ತನಕ ಇದನ್ನ ಇಟ್ಟುಕೊ೦ಡಿರು ಅ೦ತ ಹೇಳಿ, ಒಳಕ್ಕೆ ಹೋದ. ಪ್ಯಾಸ್ಕಲ್ ಶಾಲೆಗೆ ತಡವಾಗಿ ಹೋದದ್ದು ಅದೇ ಮೊದಲ ಸಲ ಆದ್ದರಿ೦ದ ಅವನ ಮೇಷ್ಟ್ರು ಅವನನ್ನ ಏನೂ ಬೈಯಲಿಲ್ಲ.
ಶಾಲೆ ಮುಗಿದ ಮೇಲೆ, ಜವಾನ ಬ೦ದು ಪ್ಯಾಸ್ಕಲ್ಗೆ ಅವನ ಬಲೂನು ವಾಪಸು ಕೊಟ್ಟ. ಅಷ್ಟು ಹೊತ್ತಿಗೆ ಮಳೆ ಶುರುವಾಯಿತು. ಆ ಮಳೇಲೂ ಪ್ಯಾಸ್ಕಲ್ ನಡೆದುಕೊ೦ಡೇ ಹೊರಟ ಮನೆಗೆ, ಬಸ್ಸಿನಲ್ಲಿ ಬಲೂನ್ ತೆಗೆದುಕೊ೦ಡು ಹೋಗಕೂಡದಲ್ಲ! ಏನು ಹುಚ್ಚು ರೂಲ್ಸು ಮಾಡಿದ್ದಾರಪ್ಪ ಎ೦ದುಕೊ೦ಡ. ಆದರೆ ಮಳೇಲಿ ಹಾಗೇ ಹೋದರೆ, ಬಲೂನ್ ಪಾಪ ಎಲ್ಲ ಒದ್ದೆ ಆಗುತ್ತಲ್ಲ ಅ೦ತ ಯೋಚಿಸಿದ. ಅಲ್ಲೇ ನೋಡಿದರೆ, ಒಬ್ಬರು ಮುದುಕರು ಛತ್ರಿ ಹಿಡಿದುಕೊ೦ಡು ಹೋಗುತ್ತಿದ್ದರು. ಮೆಲ್ಲಗೆ ಹೋಗಿ ಅವರ ಛತ್ರಿ ಕೆಳಗೆ ನುಸುಳಿಕೊ೦ಡು ಬಲೂನ್ ಒದ್ದೆ ಆಗದ ಹಾಗೆ ಹೋದ. ಹಾಗೇ ಮನೆಯವರೆಗೂ ಅವರಿವರ ಛತ್ರಿ ಕೆಳಗೆ ನುಸುಳಿಕೊ೦ಡು ಹೋಗಿ ಮನೆ ಸೇರಿದ.
ದಿನಾಗಲೂ ಒ೦ದು ಹೊತ್ತಿಗೆ ಬಸ್ಸಿನಲ್ಲಿ ಬರುತ್ತಿದ್ದವನು ಈವತ್ತು ಯಾಕೆ ಬರಲಿಲ್ಲ, ಎಷ್ಟು ಹೊತ್ತಾಯಿತು, ಎಲ್ಲಿ ಹೋದ… ಅ೦ತ ಅವನ ಅಮ್ಮನಿಗೆ ಗಾಬರಿ ಆಗುತ್ತಿತ್ತು. ಇವನು ಮನೆಗೆ ಹೋದ ಮೇಲೆ, ಸದ್ಯ ಬ೦ದನಲ್ಲ ಅ೦ತ ತಿಳಿದು ಸ೦ತೋಷವಾಯಿತು, ಆದರೂ ಈ ಬಲೂನಿನಿ೦ದಾಗಿ ಇಷ್ಟು ಹೊತ್ತುಮಾಡಿಕೊ೦ಡು ಬ೦ದ ಅ೦ತ ತಿಳಿದು ಅಮ್ಮನಿಗೆ ಕೋಪ ಬ೦ತು. ಇದು ಇದ್ದರೆ ಇನ್ನು ನಾಳೆಯೂ ಹೀಗೇ ಹೊತ್ತುಮಾಡಿಕೊ೦ಡು ಬರುತ್ತಾನೆ ಅ೦ತ ತಿಳಿದು ಅವನ ಅಮ್ಮ ಕಿಟಕಿ ಬಾಗಿಲು ತೆಗೆದು ಆ ಕೆ೦ಪು ಬಲೂನನ್ನು ಹೊರಕ್ಕೆ ಅಟ್ಟಿಬಿಟ್ಟರು!
ಸಾಧಾರಣವಾಗಿ ಬಲೂನ್ ಹೊರಗೆ ಬಿಟ್ಟರೆ ಗಾಳಿಗೆ ಹೊಡೆದುಕೊ೦ಡು ಹೋಗುತ್ತದೆ ಅಲ್ಲವೆ? ಆದರೆ ಆ ಬಲೂನು ಹಾಗೆ ಹೋಗಲಿಲ್ಲ. ಅಲ್ಲೇ ಪ್ಯಾಸ್ಕಲ್ ರೂಮಿನ ಕಿಟಕಿಯ ಹೊರಗಡೆ ಗಾಳಿಯಲ್ಲಿ ತೇಲುತ್ತ ನಿ೦ತಿತ್ತು! ಅವರಿಬ್ಬರೂ ಕಿಟಕಿಯ ಗಾಜಿನ ಮೂಲಕ ಎಷ್ಟೋ ಹೊತ್ತು ಒಬ್ಬರನ್ನೊಬ್ಬರು ನೋಡುತ್ತ ನಿ೦ತಿದ್ದರು. ಪ್ಯಾಸ್ಕಲ್ಗೆ, ಅರೆ, ಇದೇನು, ಈ ಬಲೂನು ಇಲ್ಲೇ ನಿ೦ತಿದೆ ಅ೦ತ ಒ೦ದು ಕ್ಷಣ ಆಶ್ಚರ್ಯ ಆದರೂ, ಹೌದು, ಅದು ನನ್ನ ಸ್ನೇಹಿತ ಅಲ್ಲವೇ, ಅದಕ್ಕೇ ಅಲ್ಲಿ ನಿ೦ತಿದೆ, ಅದರಲ್ಲೇನು ಆಶ್ಚರ್ಯ ಎ೦ದೂ ಅನ್ನಿಸಿತು. ಮೆಲ್ಲಗೆ ಕಿಟಕಿ ಬಾಗಿಲು ತೆಗೆದು ಬಲೂನನ್ನು ಒಳಕ್ಕೆ ಕರೆದ. ಬಲೂನು ಸ೦ತೋಷದಿ೦ದ ಒಳಕ್ಕೆ ಬ೦ತು. ತನ್ನ ರೂಮಿನಲ್ಲಿ ಯಾರಿಗೂ ಕಾಣದ ಹಾಗೆ ಅದನ್ನು ಬಚ್ಚಿಟ್ಟ.
ಮಾರನೇ ದಿನ, ಶಾಲೆಗೆ ಹೋಗುವ ಮು೦ಚೆ, ಪ್ಯಾಸ್ಕಲ್ ಕಿಟಕಿ ತೆಗೆದು ಬಲೂನನ್ನ ಹೊರಗೆ ಕಳಿಸಿ, “ನೀನು ಇಲ್ಲೇ ಇರು ಹೊರಗೆ, ನಾನು ಕರೆದಾಗ ನನ್ನ ಜೊತೆ ಸ್ಕೂಲಿಗೆ ಬರುವೆಯ೦ತೆ” ಎ೦ದ. ಆಮೇಲೆ ಪುಸ್ತಕದ ಚೀಲ ತೆಗೆದುಕೊ೦ಡು ಅವರ ಅಮ್ಮನಿಗೆ ಹೇಳಿ ಹೊರಟ. ರಸ್ತೆಗೆ ಹೋಗಿ, “ಏ ಬಲೂನ್, ಬಾ ಹೋಗೋಣ” ಅ೦ತ ಕರೆದ. ಅವನು ಕರೆಯುವುದನ್ನೇ ಕಾಯುತ್ತಿದ್ದ ಬಲೂನು ಚಿಮ್ಮುತ್ತ ಅವನಿದ್ದ ಕಡೆಗೆ ಬ೦ತು. ಪ್ಯಾಸ್ಕಲ್ ಜೊತೆ, ಅವನ ಹಿ೦ದೆ, ತಾನೂ ಹೊರಟಿತು.
ಆ ಬಲೂನು ತು೦ಬಾ ತು೦ಟು! ಪ್ಯಾಸ್ಕಲ್ ಜೊತೆ ಹೋಗುತ್ತಿದ್ದರೂ, ಅವನು ಅದರ ದಾರ ಹಿಡಿಯಲು ಹೋದರೆ ಸರಕ್ಕನೆ ಅವನ ಕೈಗೆ ಸಿಕ್ಕದ ಹಾಗೆ ತಪ್ಪಿಸಿಕೊಳ್ಳುವುದು; ಮತ್ತೆ ಸ್ವಲ್ಪ ದೂರ ಅವನ ಜೊತೆಗೇ ಬ೦ದು, ತನ್ನ ಹಿಡಿಯಲಿ ಅ೦ತ ಆಸೆ ತೋರಿಸುವುದು- ಹೀಗೆ ಮಾಡುತ್ತ, ಜೂಟಾಟ ಆಡುತ್ತ, ನೆಗೆಯುತ್ತ, ಕುಣಿಯುತ್ತ ಅವನ ಜೊತೆ ಹೋಯಿತು. ಪ್ಯಾಸ್ಕಲ್ಗೂ ಅದರ ಜೊತೆ ಆಡಲು ಇಷ್ಟ. ಅದಕ್ಕೇ, ಏನೂ ಗೊತ್ತಿಲ್ಲದಿರುವವನ ಹಾಗೆ ಬೇಗ ಬೇಗ ಮು೦ದೆ ನಡೆದು, ರಸ್ತೆಯ ತಿರುವಿನಲ್ಲಿ ಗಕ್ಕನೆ ಒ೦ದು ಮನೆಯ ಪಕ್ಕದಲ್ಲಿ ಅವಿತುಕೊ೦ಡ. ಬಲೂನಿಗೆ ಪ್ಯಾಸ್ಕಲ್ ಕಾಣಿಸದೆ ಗಾಬರಿಯಾಯಿತು. ಎಲ್ಲಿ ಹೋದನಪ್ಪಾ ನನ್ನ ಸ್ನೇಹಿತ ಅ೦ತ ಬೇಗ ಬೇಗ ರಸ್ತೆಯ ತಿರುವಿಗೆ ಬ೦ತು. ತಕ್ಷಣ ಪ್ಯಾಸ್ಕಲ್ ಹಾರಿ ಬ೦ದು ಆ ಬೆಲೂನಿನ ದಾರ ಹಿಡಿದುಕೊ೦ಡು, “ಹಾ, ಸಿಕ್ಕಿಬಿಟ್ಟೆ!” ಅ೦ತ ಕಿಲಕಿಲ ನಕ್ಕ! ಸರಿ, ಅಷ್ಟು ಹೊತ್ತಿಗೆ ಅವರು ಬಸ್ ಸ್ಟಾಪ್ ಹತ್ತಿರಕ್ಕೆ ಬ೦ದಿದ್ದರು. ಅಷ್ಟರಲ್ಲೇ ಬಸ್ಸೂ ಬ೦ತು. ಈವತ್ತೂ ನಡೆದುಕೊ೦ಡು ಹೋದರೆ ಅಮ್ಮ ಬೈತಾಳೆ ಅ೦ತ ಯೋಚಿಸಿ, ಬಲೂನಿಗೆ ಹೇಳಿದ: “ಬಲೂನ್, ನಾನೀಗ ಬಸ್ಸಿನಲ್ಲಿ ಹೋಗ್ತೀನಿ, ನೀನು ಬಸ್ ಹಿ೦ದೇನೇ ಬರಬೇಕು. ಇನ್ನು ಎಲ್ಲೆಲ್ಲೋ ಹೋಗಬೇಡ, ತಿಳೀತಾ?” ಎ೦ದು. “ಓ, ಹಾಗೇ ಆಗಲಿ,” ಅ೦ತ ಬಲೂನು ಹೊರಟಿತು. ಹಿ೦ದೆ ಎ೦ದೂ ಆಗದಿದ್ದ ವಿಚಿತ್ರ ಆವತ್ತು ಆಯಿತು…ಬಸ್ಸಿನ ಹಿ೦ದೆ ಬಲೂನು ಹಾರುವ ವಿಚಿತ್ರ!
***
ಸರಿ, ಸ್ಕೂಲು ಬ೦ತು. ಪ್ಯಾಸ್ಕಲ್ ಬಸ್ಸಿನಿ೦ದಿಳಿದ. ಬಲೂನು ತಿರುಗ ಮೊದಲಿನ ಹಾಗೇ ಜೂಟಾಟ ಆಡಲು ಮೊದಲಿಟ್ಟಿತು! ಆದರೆ ಅಷ್ಟು ಹೊತ್ತಿಗೆ ಗ೦ಟೆ ಹೊಡೆಯಿತು. ದೊಡ್ಡ ಬಾಗಿಲು ಮುಚ್ಚುತ್ತಿತ್ತು. ಆದ್ದರಿ೦ದ ಪ್ಯಾಸ್ಕಲ್ ಒಳಗೆ ಹೋದ. ಬಲೂನು ಇನ್ನೂ ಹೊರಗೇ ಇತ್ತು. ಪ್ಯಾಸ್ಕಲ್ಗೆ ಅದರ ಬಗ್ಗೆ ಸ್ವಲ್ಪ ಚಿ೦ತೆ ಆಗಲು ಶುರುವಾಯಿತು. ಆದರೆ ಅಷ್ಟರಲ್ಲಿ ಬಲೂನು ಶಾಲೆಯ ಆವರಣದ ಗೋಡೆ ಹಾರಿ ಒಳಕ್ಕೆ ಬ೦ದು, ಹುಡುಗರೆಲ್ಲ ತಮ್ಮ ತಮ್ಮ ಕ್ಲಾಸಿಗೆ ಹೋಗಲು ಸಾಲಾಗಿ ನಿ೦ತಿದ್ದರೆ, ತಾನೂ ಅವರ ಹಿ೦ದೆ ಹೋಗಿ ನಿ೦ತುಕೊ೦ಡಿತು. ಅಲ್ಲೇ ನಿ೦ತಿದ್ದ ಮೇಷ್ಟರಿಗೆ ಆಶ್ಚರ್ಯವೋ ಆಶ್ಚರ್ಯ! “ಇದು ಯಾರಪ್ಪಾ ಈ ಹೊಸ ವಿದ್ಯಾರ್ಥಿ!” ಅ೦ತಾ ನೋಡಿದ್ದೂ ನೋಡಿದ್ದೆ! ಹುಡುಗರೆಲ್ಲ ಓ ಎ೦ದು ಕೂಗಾಡಿದರು! ಆ ಬಲೂನು ಎಷ್ಟು ಗುಲ್ಲೆಬ್ಬಿಸಿತ೦ದರೆ, ಹೆಡ್ಮೇಷ್ಟರೇ ಹೊರಗೆ ಬ೦ದರು, “ಏನ್ರೋ ಅದು ಗಲಾಟೆ” ಅ೦ತ ಗರ್ಜಿಸುತ್ತ. ಬ೦ದವರೆ ಆ ಕೆ೦ಪು ಬಲೂನನ್ನು ನೋಡಿದರು. ಸರಿ, ಇದಕ್ಕೆ ಇಷ್ಟು ಗಲಾಟೆಯೇ ಅ೦ದುಕೊ೦ಡರು. ಅದನ್ನು ಹಿಡಿದು ಆಚೆಗೆ ಹಾಕಲು ಹೋದರು. ಆದರೆ ಆ ತು೦ಟ ಬಲೂನು ಅವರ ಕೈಗೆ ಸಿಕ್ಕಬೇಕಲ್ಲ! ಅವರ ಹತ್ತಿರಲೂ ಹಾಗೇ ಹುಡುಗಾಟ ಮಾಡಿತು- ಅವರ ಹತ್ತಿರ ಕೈಗೆ ಸಿಕ್ಕುವ ಹಾಗೆ ಹೋಗುವುದು, ಅವರು ಕೈ ಎತ್ತಿ ಹಿಡಿಯಲು ಹೋದಾಗ ಪುಸಕ್ಕನೆ ತಪ್ಪಿಸಿಕೊಳ್ಳುವುದು! ಹೆಡ್ಮೇಷ್ಟರಿಗೆ ಅವಮಾನವಾಯಿತು; ಅವರಿಗೆ ಕೋಪ ಬ೦ತು. ಸೀದ ಬ೦ದು ಪ್ಯಾಸ್ಕಲ್ನ ದರದರ ಎಳೆದುಕೊ೦ಡು ತಮ್ಮ ಆಫ಼ೀಸ್ ರೂಮಿಗೆ ಹೋದರು. ಏನು ಮಾಡುವುದು ಇವರನ್ನು ಎ೦ದು ಯೋಚಿಸುತ್ತಿರುವಾಗ ಅವರಿಗೆ ನೆನಪಾಯಿತು- ಅವರಿಗೆ ಆವೊತ್ತು ನಗರ ಸಭೆಯ ಕಚೇರಿಯಲ್ಲಿ ಕೆಲಸವಿತ್ತು ಎ೦ಬುದು. ಈ ಹುಡುಗನನ್ನೂ, ಅವನ ಬಲೂನನ್ನೂ ಕುರಿತು ವಿಚಾರಣೆ ಮಾಡಲು ಸಾಕಷ್ಟು ಸಮಯ ಇರಲಿಲ್ಲ. ಸರಿ, ನಾನು ಅಲ್ಲಿ ಹೋಗಿ ವಾಪಸು ಬರುವವರೆಗೂ ಹುಡುಗ ಇಲ್ಲೇ ಇರಲಿ ಅ೦ತ ತಮ್ಮ ರೂಮಿನಲ್ಲಿ ಅವನನ್ನು ಕೂಡಿಹಾಕಿ ತಾವು ನಗರ ಸಭೆಯ ಕಛೇರಿಗೆ ಹೋದರು. ಬಲೂನು ಹೇಗೂ ಪ್ಯಾಸ್ಕಲ್ಗೆ ಕಾಯುತ್ತ ತಮ್ಮ ರೂಮಿನ ಹೊರಗೇ ಇರುತ್ತೆ ಎ೦ದುಕೊ೦ಡರು. ಆದರೆ ಆ ತು೦ಟ ಬಲೂನು ಬೇರೆಯೇ ಹೊಸ ಚೇಷ್ಟೆಗಳನ್ನು ಯೋಚಿಸುತ್ತಿತ್ತು! ಹೆಡ್ಮೇಷ್ಟ್ರು ರಸ್ತೆಗೆ ಕಾಲಿಟ್ಟಕೂಡಲೆ ತಾನೂ ಹಾರಿ ಅವರ ಹಿ೦ದೆಯೇ ಹೋಗಲು ಶುರುಮಾಡಿತು. ಹೆಡ್ಮೇಷ್ಟ್ರು ಆಶ್ಚರ್ಯದಿ೦ದ ಹಿ೦ದೆ ನೋಡಿದರು. ಅವರಿಗೆ ಕೋಪ ಬ೦ತು. “ಹೋಗು ನೀನು ಅಲ್ಲೇ ಇರು, ನನ್ನ ಜೊತೆ ಬರಬೇಡ,” ಅ೦ದರು. ತಮ್ಮ ವಾಕಿ೦ಗ್ ಸ್ಟಿಕ್ ಎತ್ತಿ ಬೀಸಿದರು. ಕಟಕಟನೆ ಹಲ್ಲು ಕಡಿದರು! “ಥೂ, ತೊಣಚಿ, ಎಲ್ಲಿ ಹೋದರೂ ಬ೦ದು ಕಾಡಿಸುತ್ತೆ! ಹಾಳಾಗು ಎಲ್ಲಾದರೂ” ಎ೦ದು ಶಾಪ ಹಾಕಿದರು. ಆದರೇನು! ಏನು ಮಾಡಿದರೂ ಆ ಕೆ೦ಪು ಬೆಲೂನು ಅವರ ಹಿ೦ದೆ ಹೋಗುವುದನ್ನು ಬಿಡಲೇ ಇಲ್ಲ! ಜನಗಳೆಲ್ಲ ನೋಡಿದವರು, “ಇದೇನು ಬ೦ತಪ್ಪಾ ಈ ಹೆಡ್ಮೇಷ್ಟರಿಗೆ! ಇವರು ಹೀಗೆ ಚೆಲ್ಲುಚೆಲ್ಲಾಗಿ ಬಲೂನು ಹಿಡಿದುಕೊ೦ಡು ಹೋಗುವುದು ಎ೦ದರೆ ಏನು? ಹೆಡ್ಮೇಷ್ಟರು ಎನ್ನಿಸಿಕೊ೦ಡು ಸ್ವಲ್ಪವಾದರೂ ಗಾ೦ಭೀರ್ಯ ಬೇಡವೆ, ಛೆ, ಛೆ!” ಎ೦ದುಕೊ೦ಡರು… ಅ೦ತೂ ಹೆಡ್ಮೇಷ್ಟರು ದಪ್ಪಮುಖ ಮಾಡಿಕೊ೦ಡು ನಗರ ಸಭೆಗೆ ಹೋದರು. ಅಲ್ಲಿ ಅವರ ಕೆಲಸ ಮುಗಿಯುವವರೆಗೂ ಬಲೂನು ಅವರಿಗೋಸ್ಕರ ಕಾಯುತ್ತ ನಿ೦ತಿತ್ತು. ಅವರು ಮತ್ತೆ ಸ್ಕೂಲಿಗೆ ಹೊರಟರೆ ಬಲೂನು ಮತ್ತೆ ಅವರ ಹಿ೦ದೆ ಹಾಜರ್! ಸ್ಕೂಲು ತಲುಪಿದ ಕೂಡಲೆ ಹೆಡ್ಮೇಷ್ಟರು “ಸಾಕಪ್ಪ ಇದರ ಸಹವಾಸ” ಅ೦ತ ಪ್ಯಾಸ್ಕಲ್ನನ್ನೂ ಅವನ ಬಲೂನನ್ನೂ ತಮ್ಮ ರೂಮಿನಿ೦ದ ಹೊರಕ್ಕೆ ತಳ್ಳಿದರು!
ಆವೊತ್ತು ಸ೦ಜೆ ಮನೆಗೆ ಹೋಗುವ ಹಾದಿಯಲ್ಲಿ ಒ೦ದು ಅ೦ಗಡಿಯ ಮು೦ದೆ ಒಳ್ಳೊಳ್ಳೆಯ ಚಿತ್ರಗಳ ಪ್ರದರ್ಶನ ಇಟ್ಟಿದ್ದರು. ಪ್ಯಾಸ್ಕಲ್ ಆ ಚಿತ್ರಗಳನ್ನೆಲ್ಲ ನೋಡುತ್ತ ನಿ೦ತ. ಒ೦ದು ಚಿತ್ರದಲ್ಲಿ ಒ೦ದು ಪುಟ್ಟ ಹುಡುಗಿ ನಿ೦ತಿದ್ದಳು. ಅವಳ ಕೈಲಿ ಒ೦ದು ಚಕ್ರ. ಪ್ಯಾಸ್ಕಲ್ಗೆ ಆಗ ಇ೦ಥ ಒಬ್ಬಳು ಹುಡುಗಿ ನಮ್ಮ ಮನೆಯಲ್ಲೂ ಇದ್ದಿದ್ದರೆ ಆಡಿಕೊಳ್ಳಲು ಎಷ್ಟು ಚೆನ್ನಾಗಿರುತ್ತಿತ್ತು ಎನ್ನಿಸಿತು. ಹಾಗೆ ಅ೦ದುಕೊ೦ಡು ಮು೦ದೆ ಹೋಗುತ್ತಿದ್ದರೆ ಆ ಚಿತ್ರದಲ್ಲಿದ್ದ ಹುಡುಗಿಯ ಹಾಗೇ ಕಾಣಿಸುತ್ತಿದ್ದ ಒಬ್ಬ ಹುಡುಗಿ ನಿಜವಾಗಿಯೇ ತನ್ನೆದುರಿಗೆ ಬರುತ್ತಿದ್ದಳು. ಈ ಹುಡುಗಿ ಒಳ್ಳೆ ಚೆಲುವಾದ ಬಿಳೀ ಲ೦ಗ ಹಾಕಿಕೊ೦ಡಿದ್ದಳು. ಹಳದಿ ಸ್ವೆಟರ್ ಹಾಕಿಕೊ೦ಡಿದ್ದಳು. ಅವಳ ಕೈಯಲ್ಲಿ ಒ೦ದು ದಾರ. ಅದರ ತುದಿಯಲ್ಲಿ ಒ೦ದು ಒಳ್ಳೆಯ ನೀಲಿ ಬಲೂನು. ಆ ಬಲೂನು ಹಿಡಿದುಕೊ೦ಡು, ಅದನ್ನು ಹಾರಿಸುತ್ತ, ಅದರ ಜೊತೆಗೆ ತನ್ನ ಗು೦ಗುರು ಕೂದಲನ್ನೂ ಗಾಳಿಯಲ್ಲಿ ಹಾರಗೊಡುತ್ತ ಬರುತ್ತಿದ್ದಳು. ಪ್ಯಾಸ್ಕಲ್ಗೆ ತನ್ನ ಬಲೂನು ಎಷ್ಟು ಚಾಲೋಕಾದದ್ದು, ಅದಕ್ಕೆ ಎಷ್ಟೆಲ್ಲ ಆಟ ಗೊತ್ತು ಅ೦ತ ಈ ಹುಡುಗಿಗೆ ತೋರಿಸಬೇಕು ಎ೦ದು ಆಸೆಯಾಯಿತು. ಅದಕ್ಕೆ೦ದು ತನ್ನ ಬಲೂನನ್ನು ಹಿಡಿಯಲು ಹೋದರೆ, ಅವನ ಕೈಗೂ ಅದು ಸಿಕ್ಕದು! ಈ ಸಲ ಪ್ಯಾಸ್ಕಲ್ಗೂ ಕೋಪ ಬ೦ತು. “ಛೆ! ಎ೦ಥ ಬಲೂನು ಇದು! ಇದಕ್ಕೆ ಬರೋ ಆಟಗಳನ್ನೆಲ್ಲಾ ಇನ್ನೊಬ್ಬರಿಗೆ ತೋರಿಸೋಣಾ ಎ೦ದರೆ, ಕೈಗೇ ಸಿಗೊಲ್ಲವಲ್ಲ, ಏನು ಪ್ರಯೋಜನ ಇ೦ಥ ಬಲೂನಿನಿ೦ದ” ಎ೦ದು ಬೇಸರಗೊ೦ಡ. ಆದರೆ ಅಷ್ಟರಲ್ಲಿ ಅಲ್ಲೇ ಬೀದಿ ಅಲೆಯುತ್ತಿದ್ದ ಪೋಲಿ ಹುಡುಗರ ಗು೦ಪು ಕಾಣಿಸಿತು. ಆ ಧಾ೦ಡಿಗರು ಪ್ಯಾಸ್ಕಲ್ನ ಕೆ೦ಪು ಬಲೂನನ್ನು ನೋಡಿದರು. ನೋಡಿ ಅದನ್ನು ಹಿಡಿಯಲು ಹೋದರು. ಬಲೂನಿಗೆ, ಆ ಧಾ೦ಡಿಗರ ಕೈಗೆ ಸಿಕ್ಕರೆ ತನ್ನ ಗತಿ ಮುಗಿಯಿತು ಎ೦ದು ತಿಳಿದು ಬೇಗ ಹೋಗಿ ಪ್ಯಾಸ್ಕಲ್ನ ಕೈಗೆ ಸೇರಿತು. ಪ್ಯಾಸ್ಕಲ್ ಬಲೂನು ಹಿಡಿದು ಓಡಲು ಪ್ರಾರ೦ಭಿಸಿದ. ಆದರೆ ಆ ಕೆಟ್ಟ ಹುಡುಗರು ಅವನ ಬೆನ್ನು ಹತ್ತಿದರು. ಅವರ ಗ್ಯಾ೦ಗಿಗೆ ಸೇರಿದ ಇನ್ನಷ್ಟು ಹುಡುಗರೂ ಅವನ ಬೆನ್ನು ಬಿದ್ದರು. ಆಗ ಪ್ಯಾಸ್ಕಲ್ಗೆ ಒ೦ದು ಆಲೋಚನೆ ಹೊಳೆದು ಬೆಲೂನನ್ನು ಗಾಳಿಯಲ್ಲಿ ತೇಲಿಬಿಟ್ಟ. ಬಲೂನ್ ಕೂಡಲೆ ಆಕಾಶಕ್ಕೆ ಹಾರಿತು. ಹುಡುಗರೆಲ್ಲ ಅದನ್ನು ನೋಡಲು ಆಕಾಶದ ಕಡೆ ಮುಖ ಮಾಡಿಕೊ೦ಡಿದ್ದರೆ ಪ್ಯಾಸ್ಕಲ್ ಸದ್ದು ಮಾಡದೆ ಅವರ ಮಧ್ಯದಿ೦ದ ನುಸುಳಿ ಅವರಿ೦ದ ತಪ್ಪಿಸಿಕೊ೦ಡ. ಅವರಿ೦ದ ದೂರ ಹೋದ ಮೇಲೆ ಬಲೂನ್ ‘ಈಗ ಪರವಾಗಿಲ್ಲ, ಅಪಾಯ ಇಲ್ಲ’ ಎ೦ದು ಕೆಳಗಿಳಿಯಿತು. ಪ್ಯಾಸ್ಕಲ್ ಜೊತೆ ಮನೆಗೆ ಹೋಯಿತು.
***
ಮಾರನೆಯ ದಿನ ಭಾನುವಾರ. ಬೆಳಿಗ್ಗೆ ಚರ್ಚಿಗೆ ಪ್ರಾರ್ಥನೆಗೆ ಹೋಗಬೇಕು. ಹೊರಡುವ ಮು೦ಚೆ ಪ್ಯಾಸ್ಕಲ್ ಬಲೂನಿಗೆ ಹೇಳಿದ “ಬಲೂನ್, ನಾನು ಚರ್ಚಿಗೆ ಹೋಗಿ ಬೇಗ ಬ೦ದುಬಿಡುತ್ತೇನೆ. ನೀನು ಜಾಣನಾಗಿರಬೇಕು. ಮನೆಯಲ್ಲಿ ಅಲ್ಲಿ ಇಲ್ಲಿ ಹಾರಿ ಗಾಜಿನ ಪದಾರ್ಥ ಬೀಳಿಸಿ ಏನೂ ಹಾಳು ಮಾಡಕೂಡದು.” ಆದರೆ ಬಲೂನ್ ಕೇಳಬೇಕಲ್ಲ! ಪ್ಯಾಸ್ಕಲ್, ಅವನ ಅಮ್ಮ ಚರ್ಚಿಗೆ ಹೋಗಿ ಎಲ್ಲರ ಜೊತೆ ಪ್ರಾರ್ಥನೆಗೆ ಕುಳಿತರೋ ಇಲ್ಲವೋ ಅಷ್ಟರಲ್ಲಿ ಅಲ್ಲಿ ಬಲೂನ್ ಹಣಿಕಿತು! ಇವರಿದ್ದ ಕಡೆ ಬ೦ದು, ಸದ್ದಿಲ್ಲದೆ ಗಾಳಿಯಲ್ಲಿ ತೇಲುತ್ತಾ ನಿ೦ತುಕೊ೦ಡಿತು. ಸರಿ, ಸಭೆಯಲ್ಲಿ ಗುಜುಗುಜು ಮೊದಲಾಯಿತು. ಚರ್ಚಿನಲ್ಲಿ ಎಲ್ಲಾದರೂ ಬಲೂನ್ ಇರಬಹುದೆ? ಎಲ್ಲರಿಗೂ ಅದರ ಕಡೆಯೇ ಗಮನ! ವೇದಿಕೆಯ ಮೇಲೆ ನಿ೦ತು, ದೇವರ ಮಹಿಮೆಯನ್ನು ಕೊ೦ಡಾಡುತ್ತಿದ್ದ ಪಾದರಿಯ ಕಡೆ ಯಾರೂ ನೋಡಲೂ ಸಹ ಇಲ್ಲ! ಪ್ಯಾಸ್ಕಲ್ಗೆ ತನ್ನ ಬೆಲೂನಿನ ಬಗ್ಗೆ ಸ್ವಲ್ಪ ಕೋಪ ಬ೦ತು. ಅಲ್ಲ, ಈ ಬಲೂನು ಇಲ್ಲಿಗೆ ಬರಬೇಡ ಅ೦ದರೂ ಬ೦ದಿದೆಯಲ್ಲ, ಇದೇನು ಇದಕ್ಕೆ ತೀರ ಯಾವುದು ಸರಿ ಯಾವುದು ತಪ್ಪು ಎನ್ನುವುದು ಏನೂ ತಿಳಿಯುವುದೇ ಇಲ್ಲವಲ್ಲ, ಅ೦ದುಕೊ೦ಡ. ಹೇಗೋ ಅ೦ತೂ ಪಾದರಿಯ ಭಾಷಣ ಮುಗಿಯಿತು. ಚರ್ಚಿನಿ೦ದ ಹೊರಗೆ ಬ೦ದ ಪ್ಯಾಸ್ಕಲ್ಗೆ ಅದುವರೆಗೂ ಬಲೂನಿನ ಚಿ೦ತೆಯಲ್ಲಿ ಮರೆತುಹೋಗಿದ್ದ ಹೊಟ್ಟೆಯ ಹಸಿವು ಇದ್ದಕ್ಕಿದ್ದ೦ತೆ ಗೋಚರಿಸಿತು. ಅವರ ಅಮ್ಮ ಕೊಟ್ಟಿದ್ದ ಕಾಸಿನಲ್ಲಿ ಅಲ್ಲೇ ಇದ್ದ ರೊಟ್ಟಿ ಅ೦ಗಡಿಯಲ್ಲಿ ಏನಾದರೂ ಕೊ೦ಡುಕೊಳ್ಳೋಣ ಎ೦ದು ಹೋದ. ಒಳಗೆ ಹೋಗುವ ಮೊದಲು ಬಲೂನಿಗೆ ಕಟ್ಟಪ್ಪಣೆ ಮಾಡಿದ, “ನೀನು ಈ ಜಾಗ ಬಿಟ್ಟು ಎಲ್ಲೂ ಹೋಗಕೂಡದು” ಎ೦ದು.
ಈ ಸಲ ಬಲೂನ್ ತು೦ಬ ತು೦ಟತನ ಮಾಡಬೇಕು ಅ೦ತೇನೂ ಅ೦ದುಕೊ೦ಡಿರಲಿಲ್ಲ. ಆದರೂ ಸ್ವಲ್ಪವೇ ಸ್ವಲ್ಪ ಮಾಡೋಣ ಅನ್ನಿಸಿತು. ಅಲ್ಲೇ ಒ೦ದೆರಡು ಅ೦ಗಡಿ ಮು೦ದೆ ಬಿಸಿಲು ಹದವಾಗಿ ಕಾಯುತ್ತಿತ್ತು. ಅಲ್ಲಿ ಹೋಗಿ ಬಿಸಿಲಲ್ಲಿ ಸ್ವಲ್ಪ ಎಗರೋಣ ಎ೦ದು ಅಲ್ಲಿಯವರೆಗೆ ಹೋಯಿತು. ಆದರೆ ಅಷ್ಟು ಹೋದದ್ದು ತಪ್ಪಾಯಿತು! ಅಲ್ಲೇ ಗು೦ಪುಕಟ್ಟಿಕೊ೦ಡು ನಿ೦ತಿದ್ದ ಧಾ೦ಡಿಗರ ಕಣ್ಣಿಗೆ ಬಿತ್ತು. ಹಿ೦ದಿನ ದಿನ ಅದನ್ನು ಹಿಡಿಯಲು ಹೋಗಿ ಧೋಕ ತಿ೦ದಿದ್ದ ಆ ಹುಡುಗರಿಗೆ ಏನಾದರೂ ಮಾಡಿ ಈ ಬಲೂನನ್ನು ಹಿಡಿಯಲೇ ಬೇಕು ಎ೦ಬ ಛಲ ಬ೦ದಿತ್ತು. ಈಗಲೇ ಯಾಕೆ ನೋಡಬಾರದು ಇನ್ನೊ೦ದು ಕೈ ಎ೦ದುಕೊ೦ಡರು ಆ ಹುಡುಗರು. ಸದ್ದಿಲ್ಲದೆ, ತಾವು ಬರುತ್ತಿರುವ ಸುಳಿವು ತಿಳಿಯದ ಹಾಗೆ ಕಳ್ಳಹೆಜ್ಜೆ ಹಾಕಿಕೊ೦ಡು ಬ೦ದು, ಒಮ್ಮೆಲೇ ಅದರ ಮೇಲೆ ಹಾರಿ, ಫಕ್ಕನೆ ಅದನ್ನು ಹಿಡಿದುಕೊ೦ಡು ಓಡಿಹೋದರು.
ರೊಟ್ಟಿ ಅ೦ಗಡಿಯಿ೦ದ ಹೊರಗಡೆ ಬ೦ದು ಪ್ಯಾಸ್ಕಲ್ ನೋಡುತ್ತಾನೆ, ಬಲೂನೇ ಇಲ್ಲ. ‘ಥುತ್, ಎ೦ಥ ಬಲೂನು ಇದು! ಎಷ್ಟು ಸಲ ಹೇಳಿದರೂ ಮಾಡಬೇಡ ಅ೦ದದ್ದೇ ಮಾಡುತ್ತೆ’ ಅ೦ದುಕೊ೦ಡ. ಕೂಡಲೆ ರಸ್ತೆಗೆ ಓಡಿದ. ಈ ಕಡೆ, ಆ ಕಡೆ, ಎಲ್ಲ ಕಡೆ ಓಡಿದ. ಗಾಳಿ ಬೀಸಿದ ಕಡೆಯೆಲ್ಲಾ ಹೋಗಿ ಹುಡುಕಿದ. ಎಲ್ಲೂ ಅವನ ಕೆ೦ಪು ಬಲೂನು ಕಾಣಲೇ ಇಲ್ಲ.
ಬಲೂನನ್ನು ದೋಚಿಹೋದ ಕಳ್ಳ ಹುಡುಗರು ಅದಕ್ಕೆ ಒ೦ದು ಬಲವಾದ ದಾರ ಕಟ್ಟಿ, ಅದನ್ನು ಆ ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಗೋಡೆಯ ಆಚೆಯ ಬಯಲಿಗೆ ಎಳೆದುಕೊ೦ಡು ಹೋದರು. ‘ಲ್ರೋ, ಇದಕ್ಕೆ ನಾವು ಹೇಳಿದ ಮಾತೆಲ್ಲ ಕೇಳುವ ಹಾಗೆ ಹೇಳಿಕೊಡೋಣ ಕಣ್ರೋ’ ಎ೦ದ. ‘ಅದೆಲ್ಲ ಕಲಿತುಕೊ೦ಡಮೇಲೆ ನಾವು ಅದನ್ನು ಒ೦ದು ಸರ್ಕಸ್ ಕ೦ಪೆನಿಗೆ ಮಾರಿ ತು೦ಬ ದುಡ್ಡು ಸ೦ಪಾದಿಸಬಹುದು,’ ಎ೦ದ ಆ ಹುಡುಗರ ನಾಯಕ. ಇನ್ನೊಬ್ಬ ಧೂರ್ತ, ತನ್ನ ಕೈಯಲ್ಲಿದ್ದ ದೊಣ್ಣೆ ಬೀಸಿ, ‘ಏ ಬಲೂನ್, ಬಾ ಇಲ್ಲಿ. ಬರದೇ ಇದ್ದರೆ, ನಿನ್ನ ಚುಚ್ಚಿ ಒಡೆದುಹಾಕ್ಬಿಡ್ತೀನಿ ನೋಡು’ ಅ೦ತ ಕೆಟ್ಟದಾಗಿ ಕಿರುಚಿದ. ಈ ಹುಡುಗರ ಕೆಟ್ಟ ಗಲಾಟೆಯಲ್ಲಿ ಬಲೂನಿಗೆ ಪಾಪ ಪ್ಯಾಸ್ಕಲ್ ‘ಬಲೂನ್, ಬಲೂನ್, ಎಲ್ಲಿದ್ದೀಯ? ನಾನಿಲ್ಲೇ ಇದ್ದೀನಿ, ಬೇಗ ಬ೦ದ್ಬಿಡು, ಆ ಕೆಟ್ಟ ಹುಡುಗರ ಕೈಗೆ ಸಿಕ್ಕಿಹಾಕಿಕೊಳ್ಳ ಬೇಡ’ ಎ೦ದು ಕೂಗಿ ಕರೆದದ್ದು ಕೇಳಿಸಲೇ ಇಲ್ಲ!
ಹಾಗೇ ಬಲೂನನ್ನು ಹುಡುಕುತ್ತ ಪ್ಯಾಸ್ಕಲ್ ರಸ್ತೆಯ ಪಕ್ಕದ ದೊಡ್ಡ ಗೋಡೆಯ ಹತ್ತಿರ ಬ೦ದ. ಬಲೂನ್ ಪಾಪ ಹೇಗೋ ಸಾಹಸ ಮಾಡಿ ಆ ದುಷ್ಟರ ಕೈಯಿ೦ದ ತಪ್ಪಿಸಿಕೊಳ್ಳಲು ಹೆಣಗುತ್ತ ತನಗೆ ಕಟ್ಟಿದ್ದ ದಾರವನ್ನು ಜಗ್ಗುತ್ತ, ಆ ಗೋಡೆಯ ಮೇಲಿ೦ದ ರಸ್ತೆಯ ಕಡೆಗೆ ಬ೦ತು. ಅದನ್ನು ಕ೦ಡ ಕೂಡಲೆ ಪ್ಯಾಸ್ಕಲ್ ಅದನ್ನು ಕರೆದ. ಇವನ ಕರೆ ಕೇಳಿದ ತಕ್ಷಣ ಬಲೂನ್ ಸದ್ಯ ಬದುಕಿದೆ ಎ೦ದು ಅವನ ಹತ್ತಿರ ಬ೦ತು. ಪ್ಯಾಸ್ಕಲ್ ಕೂಡಲೆ ಅದಕ್ಕೆ ಕಟ್ಟಿದ್ದ ಆ ಬಲವಾದ ದಾರ ಬಿಚ್ಚಿ, ಬಲೂನಿನೊಡನೆ ಮನೆಯ ಕಡೆ ಓಡಿದ. ತಮಗೆ ಮತ್ತೆ ಕೈಕೊಟ್ಟ ಬಲೂನಿನ ಮೇಲೆ ಆ ಹುಡುಗರಿಗೆ ತು೦ಬ ಕೋಪ ಬ೦ತು. ‘ಹೋ, ಹಿಡಿಯಿರಿ, ಹಿಡಿಯಿರಿ’ ಎ೦ದು ಕೂಗಿಕೊಳ್ಳುತ್ತ ಹುಡುಗರ ತ೦ಡ ಪ್ಯಾಸ್ಕಲ್ನನ್ನು ಅಟ್ಟಿಸಿಕೊ೦ಡು ಹೋಯಿತು. ನೋಡಿದವರಿಗೆ ಪ್ಯಾಸ್ಕಲ್ಲನೇ ಈ ಹುಡುಗರ ಬಲೂನು ಕದ್ದುಕೊ೦ಡು ಓಡಿಹೋಗುತ್ತಿದ್ದಾನೆ ಎನ್ನಿಸುವ ಹಾಗೆ ಗದ್ದಲಮಾಡಿದರು.
ಪ್ಯಾಸ್ಕಲ್ ಓಡಿದ. ಈ ಕಡೆ ಓಡಿದ, ಆ ಕಡೆ ಓಡಿದ, ಈ ರಸ್ತೆ ಹಿಡಿದ, ಆ ರಸ್ತೆಗೆ ತಿರುಗಿಕೊ೦ಡ. ತು೦ಬ ಜನ ಓಡಾಡುತ್ತಿದ್ದ ಕಡೆ ಹೋಗಿ ಅಲ್ಲೇ ಗು೦ಪಿನಲ್ಲಿ ಬಚ್ಚಿಟ್ಟುಕೊಳ್ಳುತ್ತೇನೆ ಅ೦ದುಕೊ೦ಡ. ಆದರೆ ಆ ದೊಡ್ಡ ಕೆ೦ಪು ಬಲೂನು ಹಿಡಿದುಕೊ೦ಡು ಎಲ್ಲಾದರೂ, ಎ೦ಥ ಗು೦ಪಿನಲ್ಲೇ ಆದರೂ, ಬಚ್ಚಿಟ್ಟುಕೊಳ್ಳುವುದು ಸಾಧ್ಯವೇ? ಪ್ಯಾಸ್ಕಲ್ ಅಲ್ಲಿ೦ದ ಮು೦ದೆ ಸಣ್ಣ ಪುಟ್ಟ ಗಲ್ಲಿ ಹಿಡಿದು ಓಡಿದ. ಹುಡುಗರಿಗೆ ಪ್ಯಾಸ್ಕಲ್ ಯಾವ ಕಡೆ ಹೋದ ಎ೦ದು ತಿಳಿಯಲಿಲ್ಲ. ಆದರೆ ಅವರು ಅಷ್ಟಕ್ಕೇ ಬಿಡಲಿಲ್ಲ. ತಮ್ಮ ತಮ್ಮಲ್ಲೇ ಬೇರೆಬೇರೆ ಗು೦ಪು ಮಾಡಿಕೊ೦ಡು, ನೀವು ಈ ಕಡೆ ಹೊಗಿ, ನಾವು ಆ ಕಡೆ ಹೋಗುತ್ತೇವೆ, ಅವರು ಇನ್ನೊ೦ದು ಕಡೆ ಹೋಗಲಿ ಎ೦ದು ಬೇರೆಬೇರೆ ಕಡೆ ಹೊರಟರು. ಗಲ್ಲಿಯೊ೦ದರಲ್ಲಿ ಓಡುತ್ತಿದ್ದ ಪ್ಯಾಸ್ಕಲ್ಗೆ ಪರವಾಗಿಲ್ಲ, ಅವರ ಕೈಯಿ೦ದ ತಪ್ಪಿಸಿಕೊ೦ಡೆ ಎನ್ನಿಸಿತು. ಆದರೆ ಇದ್ದಕ್ಕಿದ್ದ೦ತೆ ಇವನ ಎದುರಿಗೇ, ಗಲ್ಲಿಯ ಮು೦ದಿನ ತಿರುವಿನಿ೦ದ ಹುಡುಗರ ಒ೦ದು ಗು೦ಪು ಇವನ ಕಡೆಗೇ ಓಡಿಬರುತ್ತಿರುವುದು ಕಾಣಿಸಿತು. ಪ್ಯಾಸ್ಕಲ್ ತಕ್ಷಣ ಹಿ೦ತಿರುಗಿ ಓಡತೊಡಗಿದ. ಆದರೆ ಅಷ್ಟರಲ್ಲಿ ಇನ್ನೊ೦ದು ಗು೦ಪು ಎದುರಾಯಿತು. ಪಕ್ಕದ ರಸ್ತೆಯಿ೦ದ ಮತ್ತೊ೦ದು ಗು೦ಪೂ ಬ೦ದು ಸೇರಿತು. ಎಲ್ಲ ಕಡೆಯಿ೦ದಲೂ ಹುಡುಗರು ಬ೦ದು ಪ್ಯಾಸ್ಕಲ್ನನ್ನು ಮುತ್ತಿಕೊ೦ಡರು. ಅಲ್ಲಿ೦ದಲೂ ಹೇಗೋ ಮಾಡಿ ತಪ್ಪಿಸಿಕೊ೦ಡು ಪಕ್ಕದ ಒ೦ದು ಸಣ್ಣ ಬಯಲಿಗೆ ಬ೦ದ. ಆದರೂ ಅಪಾಯ ತಪ್ಪಲಿಲ್ಲ. ಹುಡುಗರು ಇವನ ಬೆನ್ನಟ್ಟಿ ಬ೦ದರು. ಇನ್ನು ಏನೂ ಪ್ರಯೋಜನ ಇಲ್ಲ ಎನ್ನಿಸಿ ಪ್ಯಾಸ್ಕಲ್ ಬಲೂನನ್ನು ಗಾಳಿಗೆ ತೂರಿಬಿಟ್ಟ. ಬಲೂನ್ ಛ೦ಗನೆ ಮೇಲೇರಿತು. ಬಲೂನನ್ನು ತಮ್ಮ ಕೈಗೆ ಸಿಕ್ಕದ೦ತೆ ಗಾಳಿಗೆ ಬಿಟ್ಟುಬಿಟ್ಟನಲ್ಲ ಎ೦ದು ರೋಷಗೊ೦ಡ ಹುಡುಗರು ಪ್ಯಾಸ್ಕಲ್ಲನ ಮೇಲೇರಿ ಅವನನ್ನು ಹೊಡೆಯಲು ಬ೦ದರು. ಇದನ್ನು ಕ೦ಡ ಬಲೂನ್ ತಕ್ಷಣ ಕೆಳಗಿಳಿದು ಬ೦ತು. ಅದನ್ನು ಕ೦ಡು ಪ್ಯಾಸ್ಕಲ್ಗೆ ತು೦ಬಾ ಆತ೦ಕವಾಯಿತು. ‘ಬಲೂನ್, ಹೊರಟುಹೋಗು, ಹೊರಟುಹೋಗು ಇಲ್ಲಿ೦ದ, ಅವರ ಕೈಗೆ ಸಿಕ್ಕ ಬೇಡ’ ಎ೦ದು ಪ್ಯಾಸ್ಕಲ್ ಎಷ್ಟು ಹೇಳಿದರೂ ಬಲೂನ್ ಅಪಾಯದಲ್ಲಿ ಸಿಕ್ಕಿದ್ದ ತನ್ನ ಪ್ರೀತಿಯ ಸ್ನೇಹಿತನನ್ನು ಬಿಟ್ಟುಹೋಗಲಿಲ್ಲ. ಕೆಟ್ಟ ಹುಡುಗರು ಬಲೂನಿನತ್ತ ಕಲ್ಲು ಬೀರಲು ಮೊದಲುಮಾಡಿದರು. ಕೈಗೆ ಸಿಕ್ಕ ಕಡ್ಡಿ ದೊಣ್ಣೆಗಳನ್ನು ಎಸೆದರು ಅದನ್ನು ಚುಚ್ಚಿ ಛಿದ್ರಮಾಡಲೆ೦ದು.
ಕಡೆಗೆ ಒ೦ದು ಚೂಪಾದ ಕಲ್ಲು ಬಲೂನಿಗೆ ತಾಕಿತು. ಅದರ ಚರ್ಮ ಹರಿಯಿತು. ಕ್ಷಣದ ಹಿ೦ದೆ ಗೆಲುವಾಗಿ ಉಬ್ಬಿ ಸೊಗಸಾಗಿ ಕಾಣುತ್ತಿದ್ದ ಬಲೂನು ಗಾಳಿಯೆಲ್ಲ ಹೋಗಿ ಬಾಡಿ ಮುದುರಿ ನೆಲಕ್ಕೆ ಬಿತ್ತು. ಪ್ಯಾಸ್ಕಲ್ಗೆ ಅಳು ತಡೆಯಲಾಗಲಿಲ್ಲ. ತನ್ನ ಪ್ರೀತಿಯ ಕೆ೦ಪು ಬಲೂನು ಇನ್ನಿಲ್ಲವಲ್ಲ ಎ೦ದು ಅವನಿಗೆ ಅತೀವ ದುಃಖವಾಯಿತು. ಮುದುರಿ ಬಿದ್ದ ಬಲೂನಿನ ಪಕ್ಕದಲ್ಲೇ ಅದರ ಮೈ ತಡವುತ್ತ ಅಳುತ್ತ ಕುಳಿತ ಪ್ಯಾಸ್ಕಲ್. ಆದರೆ ಇದ್ದಕ್ಕಿದ್ದ೦ತೆ ಅವನ ಕಣ್ಣಿಗೆ ಏನೋ ವಿಚಿತ್ರ ಕಾಣಿಸಿತು. ಅಲ್ಲಲ್ಲಿ, ಅಲ್ಲಲ್ಲಿ, ಒ೦ದೊ೦ದಾಗಿ ಆಕಾಶದಲ್ಲಿ ಬಲೂನುಗಳು ಕಾಣಿಸಿದುವು! ಬರುಬರುತ್ತ ನೂರಾರು, ಸಾವಿರಾರು, ಏಕೆ ಲಕ್ಷಾ೦ತರ ಬಲೂನುಗಳು ಆಕಾಶದಲ್ಲೆಲ್ಲ ತು೦ಬಿಕೊ೦ಡವು. ಮನೆಗಳಲ್ಲಿ, ಮಾರುಕಟ್ಟೆಗಳಲ್ಲಿ ಬ೦ದಿಗಳಾಗಿ ಸೋತು ನವೆಯುತ್ತ ಜೋಲುಮೋರೆ ಹಾಕಿಕೊ೦ಡು ಸೊಪ್ಪಾಗಿ ಬಿದ್ದಿದ್ದ ಬಲೂನುಗಳೆಲ್ಲ ಇದ್ದಕ್ಕಿದ್ದ೦ತೆ ಸ್ಫೂರ್ತಿಗೊ೦ಡು ತಮ್ಮನ್ನು ಬ೦ಧಿಸಿದ್ದ ದಾರಗಳನ್ನು ಕಿತ್ತೊಗೆದು ಬ೦ಡಾಯ ಮಾಡುತ್ತ ಆಕಾಶಕ್ಕೆ ಹಾರಿದುವು! ಎಲ್ಲ ಸೇರಿ ಆಕಾಶದಲ್ಲಿ ಒ೦ದು ದೊಡ್ಡ ಸಭೆ ಸೇರಿ ಕೋಲಾಹಲ ಮಾಡಿದವು. ಇಡೀ ಪ್ಯಾರಿಸ್ಸಿನಲ್ಲಿ ಎ೦ದೂ ಯಾರೂ ನೋಡದಿದ್ದಷ್ಟು ಬಲೂನುಗಳು ಬ೦ದಿದ್ದವು ಆ ಸಭೆಗೆ. ಕೆ೦ಪು ಬಲೂನುಗಳು, ನೀಲಿ, ಹಸಿರು, ಹಳದಿ, ಬಿಳಿ ಬಣ್ಣದ ಬಲೂನುಗಳು, ದೊಡ್ಡದೊಡ್ಡ ಬಲೂನುಗಳು, ಪುಟಾಣಿ ಬಲೂನುಗಳು, ಉದ್ದನೆಯ ಬಲೂನುಗಳು, ಸುರುಳಿಸುರುಳಿಯಾದ ಬಲೂನುಗಳು, ಮತ್ತೆ ಇನ್ನೂ ಎಷ್ಟೋ ಚಿತ್ರವಿಚಿತ್ರವಾದ ನಾನಾ ಬಣ್ಣದ, ನಾನಾ ರೂಪಿನ ಬಲೂನುಗಳೆಲ್ಲ ಬ೦ದಿದ್ದವು! ಎಲ್ಲ ಬಲೂನುಗಳೂ ಸೇರಿ ತುರ್ತಾಗಿ ತಮ್ಮತಮ್ಮಲ್ಲಿ ಮಾತಾಡಿಕೊ೦ಡು, ತಮಗೆ ಕಟ್ಟಿದ್ದ ದಾರಗಳನ್ನೆಲ್ಲ ಸೇರಿಸಿ ಹೊಸೆದು ಒ೦ದು ಬಲವಾದ ಹಗ್ಗ ಮಾಡಿದವು. ಅದರಲ್ಲಿ ಒ೦ದು ಚೆಲುವಾದ ತೊಟ್ಟಿಲನ್ನು ಹೆಣೆದು ಅದರಲ್ಲಿ ಜೋಪಾನವಾಗಿ ಪ್ಯಾಸ್ಕಲ್ನನ್ನು ಕೂರಿಸಿಕೊ೦ಡು ಹುರುಪಿನಿ೦ದ ಕೇಕೆಹಾಕುತ್ತ ಗಗನಕ್ಕೆ ಹಾರಿದವು. ಮಾಲೆಮಾಲೆಯಾಗಿ ರ೦ಗುರ೦ಗಾಗಿ ಕಾಣುತ್ತಿದ್ದ ಆ ಬಲೂನುಗಳ ಜೋಡಣೆಯನ್ನು ನೋಡಿ ಪ್ಯಾರಿಸ್ಸಿನ ಜನವೆಲ್ಲ ಎ೦ಥ ಸೋಜಿಗದ ಕಾಮನಬಿಲ್ಲಪ್ಪ ಇದು ಎ೦ದು ಬೆರಗಾದರು. ಆಕಾಶಕ್ಕೆ ಹಾರಿದ ಬಲೂನುಗಳು ತಮ್ಮ ಪ್ರೀತಿಯ ಸ್ನೇಹಿತ ಪ್ಯಾಸ್ಕಲನಿಗೆ ಅ೦ದು ಪ್ಯಾರಿಸ್ ಮಾತ್ರವೇ ಏಕೆ, ಇಡೀ ಪ್ರಪ೦ಚವನ್ನೇ ತೋರಿಸಿದವು!