Nov 252012
 

ಕೆ.ವಿ.ತಿರುಮಲೇಶ್

ಮನೆ ಬಿಟ್ಟವರಿದ್ದಾರೆ ಮಠ ಬಿಟ್ಟವರಿದ್ದಾರೆ
ತತ್ವಜ್ಞಾನದ ಮೋಹದಲ್ಲಿ
ದೇಶ ತೊರೆದವರು ವಿಷ ಕುಡಿದವರು
ಅಮೃತದಂತೆ ಮದ್ಯವನ್ನೂ
ವ್ಯಸನವಾಗಿಸಿಕೊಂಡವರು ಹಾಗೂ
ತಬ್ಬಿಕೊಂಡವರು
ಅಪ್ಸರಸಿಯರಂತೆ ಸೂಳೆಯರನ್ನೂ

ಏನೀ ಆಕರ್ಷಣೆ ಎಂದು ನಾನೂ
ನಡೆದು ನೋಡುತ್ತೇನೆ
ಒಂದಷ್ಟು ದೂರ
ಹರಡಿದ ಮಬ್ಬಲ್ಲದೆ ಇನ್ನೇನೂ
ಕಾಣಿಸುವುದಿಲ್ಲ
ನನಗೋ ಸಮೀಪದೃಷ್ಟಿ
ಯಾರೂ ಬಿಟ್ಟ ದಾರಿಗುರುತುಗಳಿಲ್ಲ
ಇದ್ದರೂ ಅವನ್ನು ಬಳಸುವಂತಿಲ್ಲ
ಇಷ್ಟು ಮಾತ್ರ ತಿಳಿದಿದ್ದೇನೆ:
ತತ್ವಜ್ಞಾನ ಹೀಗೆಯೇ ಆವಾಗಲೂ ಯಾವಾಗಲೂ
ದೇಶಭ್ರಷ್ಟ!

ಕಾವ್ಯವೂ ಅರ್ಧ ಹಾಗೆಯೇ
ಇನ್ನರ್ಧ ಹೀಗೆ
ಕವಿ ನಡೆಯುತ್ತಾನೆ ಬರಿಜೇಬಿನಲ್ಲೂ ಮಹಾ
ರಾಜನ ಹಾಗೆ
ಎಲ್ಲರನ್ನೂ ಕೂಡಿಕೊಂಡೇ
ಕಾಡುಮೇಡುಗಳಲ್ಲಿ ಮತ್ತು
ವಾರದ ಸಂತೆಗಳಲ್ಲಿ ಒಬ್ಬನೇ ಆದರೂ ಬರೀ
ಒಬ್ಬನೂ ಅಲ್ಲ

ದೇವಯಾನಿ ಶರ್ಮಿಷ್ಠ ಮತ್ತಿನ್ನು ಯಾರು ಆ
ಅಪ್ಸರಸಿ ಸರಸಿ ಯವನೀ ರಮಣಿ ಕೂಡ
ಅವನಿಗಿಷ್ಟ

ಇತ್ತ ಈ ಫ಼ಿಲಾಸಫ಼ಿಗಾದರೆ ಮೈಮನಸ್ಸಿಗೆ ಗಾಯ
ಆದರೂ ಅದೆಂಥ ಮೋಹ ಎಂದಿಗೂ
ಪರವಶತೆ ಬಿಡದ ಮನದ ಮಾಯ.

 Posted by at 12:30 AM