(ಮೇ ೧೭, ೨೦೧೩ ರಂದು, ಹ್ಯೂಸ್ಟನ್ ಸಮ್ಮೇಳನದಲ್ಲಿ ನಡೆದ ‘ಸಾಹಿತ್ಯಗೋಷ್ಟಿ’ಯಲ್ಲಿ ಪ್ರಸ್ತುತಪಡಿಸಲಾದ ಕವನಗಳು.)
ರಾತ್ರಿಹಕ್ಕಿ
ಕುದಿಯುತಿರುವ ಕಡಲಿನೊಳಗೆ
ಉರಿದು ದಣಿದ ಸೂರ್ಯ ಮುಳುಗೆ
ಬೆಳಗಿನಿಂದ ಬೆಳಗಿ ಬೆಳಗಿ
ಬಾಗಿ ನಿಂತ ಬಾನ ಕೆಳಗೆ
ರಾತ್ರಿ ಹಕ್ಕಿ ಹಾರಿತು
ಅದರ ನೆರಳು ಜಾರಿತು
ಕಪ್ಪು ಹಾಸು ಹಾಸಿ ಬಂದು
ಗುಮ್ಮನನ್ನು ಕರೆವೆನೆಂದು
ಬಳಲಿದವರ ಒಳಗೆ ತಂದು
ಬಾಗಿಲಂಚಿನಿಂದ ಸಂದು
ರಾತ್ರಿ ಹಕ್ಕಿ ಹಾರಿತು
ಅದರ ನೆರಳು ಜಾರಿತು
ಕಮ್ಮೆನ್ನುವ ಬಿಳಿಯ ಮುಗುಳು
ಕುಸುಮ ರಾಣಿ ಬೆಳಕ ಮಗಳು
ಕಣ್ಣು ಹೊಡೆವ ಚಿಕ್ಕೆ ಹರಳು
ಮುಸುಕಿನೊಳಗೆ ಸೋಲುತಿರಲು
ರಾತ್ರಿ ಹಕ್ಕಿ ಹಾರಿತು
ಅದರ ನೆರಳು ಜಾರಿತು
*ಸುಪ್ತದೀಪ್ತಿ
೦೮-ಮೇ-೨೦೧೧
***************
ಕೆಲವು ದಿನಗಳು
ಕೆಲವು ದಿನಗಳೇ ಹಾಗೆ
ಅರಳುವ ಹೊತ್ತಲ್ಲೇ ಕಪ್ಪು
ಬಿರಿದು ಸುರಿದು ಸರಿದು
ಮರಳಿನಲ್ಲಿ ತೆರೆಯಂತೆ
ಮೊರೆದೂ ಮೊರೆಯದೆ
ಮರೆಯಾಗಿರುತ್ತವೆ.
ಕೆಲವು ದಿನಗಳೇ ಹಾಗೆ
ಬೆರಗಾಗಿ ಬೆಳಗುವ ಕ್ಷಣ
ಅಲೆದು ನಲಿದು ನುಲಿದು
ಕಣ್‌ತೆರೆಯುವ ರವಿಕಣದಂತೆ
ಅಲ್ಲೆಲ್ಲೋ ದಾರಿತಪ್ಪಿ
ಮರೆಯಾಗಿರುತ್ತವೆ.
ಕೆಲವು ದಿನಗಳೇ ಹಾಗೆ
ಗುಣಾಕಾರ ಭಾಗಾಕಾರಗಳ
ವೃತ್ತಚಿತ್ತದೊಳಗೆ ಮುಳುಗಿ
ಕಳೆದುಹೋಗುವ ಗಣಿತದಂತೆ
ಇದ್ದಲ್ಲೇ ಇಲ್ಲವಾಗಿ
ಮರೆಯಾಗಿರುತ್ತವೆ.
*ಸುಪ್ತದೀಪ್ತಿ
೨೬-ಜುಲೈ-೨೦೧೨