ಆಹಿತಾನಲ, ಆರ್ಕೇಡಿಯ, ದ. ಕ್ಯಾಲಿಫೋರ್ನಿಯ
ತಮ್ಮ ಆರ್ಥಿಕ, ಶೈಕ್ಷಣಿಕ ಮತ್ತು ತಾಂತ್ರಿಕ ನಿಪುಣತೆಯನ್ನು ವೃದ್ಧಿಪಡಿಸಿಕೊಳ್ಳಲು ಭಾರತದಿಂದ ಅಮೆರಿಕಕ್ಕೆ ವಲಸೆ ಬಂದ ಕನ್ನಡಿಗರ ‘ಕನ್ನಡತನ’ ಅವರ ಬೆನ್ನಿಗೆ ಅಂಟಿಕೊಂಡೇ ಬಂದಿದೆ. ಅಮೆರಿಕದಲ್ಲಿ ವಲಸಿಗರಾದ ನಮ್ಮ ಬದುಕನ್ನು ಸಾಗಿಸಿಕೊಂಡು ಹೋಗುವಲ್ಲಿ ಕನ್ನಡ ಭಾಷೆ ಮತ್ತು ಸಂಸ್ಕೃತಿ ಅತಿ ಮುಖ್ಯ ಸ್ಥಾನ ಪಡೆದಿರುವುದೆಂಬುದು ನಿಜ! ನಾವಾಗಿಯೇ ಆರಿಸಿಕೊಂಡು ವಲಸೆ ಬಂದ ಈ ‘ಪರಕೀಯ ಪರಿಸರ’ದಲ್ಲಿ ನಮ್ಮನ್ನು ಒಗ್ಗಿಸಿಕೊಂಡು, ನಮ್ಮದಲ್ಲದ ಸಂಸ್ಕೃತಿಯೊಡನೆ ಒಡಂಬಡಿಕೆ ಮಾಡಿಕೊಳ್ಳುವ ಪ್ರಯತ್ನದಲ್ಲಿ, ಸಾಂಸ್ಕೃತಿಕ ಸಂಘರ್ಷಕ್ಕೆ ತುತ್ತಾಗಿ, ನಮ್ಮಲ್ಲಿ ಒಂದು ವಿಧದ ‘ಅಪರಾಧೀ ಪ್ರಜ್ಞೆ’ ಮೂಡಿ ಬಂದಿರುವುದು ಸ್ವಾಭಾವಿಕವೇ! ಈ ಸಂಘರ್ಷದಿಂದ ಪಾರಾಗುವ ಪ್ರಯತ್ನದಲ್ಲಿ, ತಮ್ಮಂತೆ ವಲಸೆ ಬಂದ ಇತರ ಕನ್ನಡಿಗರ ಸಾಮೀಪ್ಯ ಹಾಗೂ ಸಂಪರ್ಕ ಬಯಸಿದುದು, ಅಮೆರಿಕದಲ್ಲಿ ಕನ್ನಡ ಕೂಟಗಳ ಸ್ಥಾಪನೆಯಾಗುವಲ್ಲಿ ಕಾರಣವಾಯ್ತೆನ್ನಬಹುದು. ಮೊದಮೊದಲಿಗೆ ಮನೆಗಳಲ್ಲಿ ಸೇರಿದ ವೈಯಕ್ತಿಕ ಪಾರ್ಟಿ (Social Party)ಗಳಲ್ಲಿ, ಕನ್ನಡ ಹಾಡುಗಳನ್ನು ಹಾಡಿಯೋ, ಕನ್ನಡ ಸಂಸ್ಕೃತಿಯ ಮೇಲೆ ಸೀಮಿತ ಚರ್ಚೆ ಮಾಡಿಯೋ, ಅಥವಾ ಊರಿನ ಜಾತ್ರೆ-ಹಬ್ಬ ಮತ್ತಿತರ ವಿಶಿಷ್ಟತೆಗಳನ್ನು ನೆನೆಯುತ್ತಲೋ, ನಮ್ಮ ‘ವಿರಹ ವೇದನೆ’ಯಿಂದ ಪಾರಾಗುತ್ತಿದ್ದೆವು. ಮುಂದೆ, ವಲಸೆ ಬಂದ ಕನ್ನಡಿಗರ ಸಂಖ್ಯೆ ಹೆಚ್ಚುತ್ತ ಬಂದಂತೆಲ್ಲ, ಕನ್ನಡ ಸಂಘಟನೆಯ ಅನಿವಾರ್ಯತೆಯೂ ಹೆಚ್ಚುತ್ತ ಬಂತು. ಈ ಸಂಘಟನೆಯ ಪರಿಕಲ್ಪನೆಯನ್ನು ಕಾರ್ಯರೂಪಕ್ಕೆ ತರುವಲ್ಲಿ ಮುಂದಾಳತ್ವ ಹೊತ್ತ, ಡಿಟ್ರಾಯ್ಟ್‌ನ ಕನ್ನಡಿಗರಾದ, ಶ್ರೀಪಾದರಾಜು, ಹನುಮಂತಯ್ಯ, ಕೃಷ್ಣಪ್ಪ, ಪ್ರಕಾಶ್ (ಇಲ್ಲಿ ಇತರರ ಹೆಸರು ಸೂಚಿಸುವಲ್ಲಿ ಲೋಪವಾದಲ್ಲಿ, ಕ್ಷಮೆ ಇರಲಿ) – ಇವರೇ ಮುಂತಾದವರ ಶ್ರದ್ಧೆ ಮತ್ತು ಶ್ರಮಕ್ಕೆ, ಎಲ್ಲ ಅಮೆರಿಕನ್ನಡಿಗರೂ ಕೃತಜ್ಞರಾಗಿರಬೇಕು! ಅವರ ಶ್ರಮದ ಫಲವಾಗಿ, ಮೊದಲಿಗೆ ‘ಪಂಪ’ ಎಂಬ ಹೆಸರಿನಲ್ಲಿ ಒಂದು ಕನ್ನಡ ಕೂಟವು ಸ್ಥಾಪನೆಯಾಗಿ, ಮುಂದೆ ಅಮೆರಿಕದಾದ್ಯಂತ ಹಲವಾರು ಕೂಟಗಳ ಸ್ಥಾಪನೆಗೆ ನಾಂದಿಯಾಯ್ತು. ಈ ಕೂಟಗಳು, ಕನ್ನಡಿಗರಲ್ಲಿ ಸುಪ್ತವಾಗಿದ್ದ ಪ್ರತಿಭೆಯನ್ನು ಹಾಡು, ನೃತ್ಯ, ಅಭಿನಯಗಳ ಮೂಲಕ ಅಭಿವ್ಯಕ್ತಪಡಿಸಲು ದಾರಿ ಮಾಡಿಕೊಟ್ಟಿತು.
ಸಾಹಿತ್ಯ ಒಂದು ಜನಾಂಗದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತದೆ. ದಾಸ ಸಾಹಿತ್ಯ, ಜನಪದ ಸಾಹಿತ್ಯ ನಮ್ಮಸಂಸ್ಕೃತಿಯ ಮೇಲೆ ಬೆಳಕು ಚೆಲ್ಲುವುದು ಎಂಬುದರಲ್ಲಿ ಅನುಮಾನವಿಲ್ಲ. ಕತೆ, ಕಾದಂಬರಿ, ಕವನಗಳು ಜನ-ಜೀವನವನ್ನು ಪ್ರತಿಬಿಂಬಿಸುತ್ತ, ನಮ್ಮ ಸಂಸ್ಕೃತಿಗೊಂದು ಮುಖವಾಣಿಯಾಗಿರುತ್ತವೆ. ಈ ನಂಬಿಕೆಯನ್ನು ಅಭಿವ್ಯಕ್ತಪಡಿಸಲೆಂದೋ ಏನೋ ಅಮೆರಿಕನ್ನಡಿಗರಲ್ಲಿ ಸುಪ್ತವಾಗಿ ಕುದಿಯುತ್ತಿದ್ದ ಸಾಹಿತ್ಯಾಭಿಮಾನವನ್ನು ಹೊರಗೆಡಲು ಸಂಚಿಕೆಗಳ ಪ್ರಕಟಣೆಗೆ ಪ್ರಾರಂಭವಾದುವು. ಉದಾಹರಣೆಗೆ, ಶಿಕಾಕಾಗೋ ಕನ್ನಡ ಕೂಟದವರು (ವಿದ್ಯಾರಣ್ಯ) ಪ್ರಕಟಿಸುವ ‘ಸಂಗಮ’. ಇದರ ಮೊದಲನೆಯ ಸಂಪಾದಕರಾದ ತೋನ್ಸೆ ಕೃಷ್ಣರಾಜು ಅವರು, ಸಂಚಿಕೆಯಲ್ಲಿ ಉಲ್ಲೇಖಿಸಿದ ಬಿ.ಎಂ.ಶ್ರೀ. ಯವರ ಕವನದ ಸಾಲು
ಇವಳ ಸೊಬಗನವಳು ತೊಟ್ಟು ನೋಡಬಯಸಿದೆ
ಅವಳ ತೊಡಿಗೆ ಇವಳಿಗಿಟ್ಟು ಹಾಡ ಬಯಸಿದೆ
ತುಂಬಾ ಅರ್ಥಗರ್ಭಿತವಾಗಿದ್ದು, ಕನ್ನಡ ಸಾಹಿತ್ಯಕ್ಕೊಂದು ಹೊಸ ಆಯಮವನ್ನು ನೀಡಿದೆ. ಈ ಸಾಲುಗಳು ಅಮೆರಿಕದ ಸಾಹಿತ್ಯ ಬೆಳವಣಿಗೆಗೆ ವಿಶೇಷ ಅರ್ಥ ಕಲ್ಪಿಸಿದೆ ಎಂದು ನನ್ನ ಅಭಿಮತ. ಶಿಕಾಗೋದ ‘ವಿದ್ಯಾರಣ್ಯ’ ಕೂಟದವರಲ್ಲದೆ, ಅಮೆರಿಕದ ಹಲವಾರು ಕೂಟಗಳೂ ಸಂಚಿಕೆಗಳನ್ನು ಪ್ರಕಟಿಸುತ್ತಿವೆ: ಉತ್ತರ ಕ್ಯಾಲಿಫೋರ್ನಿಯ ಕೂಟದ ‘ಸ್ವರ್ಣ ಸೇತು’, ದಕ್ಷಿಣ ಕ್ಯಾಲಿಫೋರ್ನಿಯದ ‘ಸಂಗಮ’, ಕಾವೇರಿ (ವಾಷಿಂಗ್‌ಟನ್ ವಲಯ) ಕೂಟದ ವಾರ್ಷಿಕ ಸಂಚಿಕೆ, ನ್ಯೂಜರ್ಸಿ ಕೂಟದ ‘ದರ್ಪಣ’, ಅರಿಜ಼ೋನದ ‘ಕನ್ನಡವಾಣಿ’, ಡಿಟ್ರಾಯ್ಟ್‌ನ ‘ಸ್ಪಂದನ’ – ಇವೇ ಮುಂತಾದುವುಗಳು ಇಂತಹ ಹಲವಾರು ಸಂಚಿಕೆಗಳಲ್ಲಿ ಕೆಲವು. ಇಂತಹ ಸಂಚಿಕೆಗಳ ಪರಿಣಾಮವೆಂದರೆ, ಉತ್ತಮ ಲೇಖನಗಳನ್ನು ಬರೆಯಲು ಅಮೆರಿಕನ್ನಡಿಗರಲ್ಲಿ ಹೆಚ್ಚು-ಹೆಚ್ಚು ಕನ್ನಡ ಸಾಹಿತ್ಯ ಅಧ್ಯಯನಕ್ಕೆ ದಾರಿಯಾದುದು. ಈ ನಿಟ್ಟಿನಲ್ಲಿ ಅಮೆರಿಕಕ್ಕೆ ಭೇಟಿಕೊಟ್ಟ ಹಲವಾರು ಸಾಹಿತಿಗಳ ಪ್ರೋತ್ಸಾಹವೂ ಪೂರಕವಾಗಿದೆ. ಅಂಥವರಲ್ಲಿ, ಶ್ರಿಯುತರುಗಳಾದ, ಶಿವರಾಮ ಕಾರಂತ, ಜಿ.ಎಸ್. ಶಿವರುದ್ರಪ್ಪ, ಚಂದ್ರಶೇಖರ ಕಂಬಾರ, ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ, ಬರಗೂರು ರಾಮಚಂದ್ರಪ್ಪ, ಯು. ಆರ್. ಅನಂತಮೂರ್ತಿ, ಗಿರೀಶ್ ಕಾರ್ನಾಡ್, ವೈದೇಹಿ, ಆಮೂರ, ವೆಂಕಟೇಶಮೂರ್ತಿ, ಅ.ರಾ. ಮಿತ್ರ, ಚೆನ್ನವೀರ ಕಣವಿ, ಎಚ್.ಎಸ್. ರಾಘವೇಂದ್ರ ರಾವ್, ನರಹಳ್ಳಿ ಬಾಲಸುಬ್ರಮಣ್ಯ, ಪ್ರಭುಶಂಕರ, ಬಿ ಆರ್. ಲಕ್ಷ್ಮಣ ರಾವ್, ದುಂಡಿರಾಜ್, ಕೃಷ್ನೇ ಗೌಡ, ಸುಮತೀಂದ್ರ ನಾಡಿಗ, ಭುವನೇಶ್ವರಿ ಹೆಗಡೆ, ಕೆ.ವಿ. ತಿರುಮಲೇಶ – ಮುಂತಾದವರ ಪ್ರೋತ್ಸಾಹವನ್ನು ನೆನೆಯಲೇಬೇಕು! ಸಾಹಿತಿಗಳ ಭೇಟಿ, ಕನ್ನಡ ಸಾಹಿತ್ಯಕ್ಕೆ ಸಂಬಂಧ ಪಟ್ಟಂತೆ ಕರ್ನಾಟ ಮತ್ತು ಅಮೆರಿಕಗಳೆರಡರೊಳಗಿನ ವಿಶೇಷ ಸಂಪರ್ಕ ಬೆಳೆಯಲು ಎಡೆಮಾಡಿಕೊಟ್ಟಿತು. ಇಂಥ ಸಂಪರ್ಕವೇ ಅಮೆರಿಕದಲ್ಲಿ ಕನ್ನಡ ಸಾಹಿತ್ಯದ ಸಾಕಷ್ಟು ಬೆಳವಣಿಗೆಗೆ ಕಾರಣವಾಯ್ತು ಎಂದು ಹೇಳಬಹುದು. ಕನ್ನಡ ಫಾಂಟ್ ಉಪಯೋಗಿಸಿ ಲೇಖನಗಳನ್ನು ಬರೆಯಲು ಮೊದಲಿಗೆ ಶ್ರೀ ಶೇಷಾದ್ರಿಯವರು ಉಚಿತವಾಗಿ ದೊರಕಿಸಿಕೊಟ್ಟ ಬರಹ ಸಾಫ್ಟ್‌ವೇರ್ ಅಮೆರಿಕನ್ನಡಿಗರಿಗೆ ಹೆಚ್ಚಿನ ಉತ್ತೇಜನ ಕೊಟ್ಟಿತು. ಆ ಬಗ್ಗೆ ಶೇಷಾದ್ರಿಯವರು ಅಭಿನಂದನಾರ್ಹರು. ಅಲ್ಲದೆ, ‘ದಟ್ಸ್‌ಕನ್ನಡ’ ಅಂತರ್ಜಾಲ ಪತ್ರಿಕೆಯ, ಶ್ರೀ ಶಾಮಸುಂದರ ಅವರು ಅಮೆರಿಕನ್ನಡಿಗರ ಲೇಖನಗಳನ್ನು ತಮ್ಮ ಅಂತರ್ಜಾಲದಲ್ಲಿ ಪ್ರಕಟಿಸಿ, ಬಹಳಷ್ಟು ಪ್ರೋತ್ಸಾಹ ನೀಡಿದ್ದರು. ಅವರಿಗೆ ನಮ್ಮ ಕೃತಜ್ಞತೆಗಳು. ಇಲ್ಲಿ, ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಬೆಳೆಯಲು ಬಹಳಷ್ಟು ದುಡಿದ, ನಾಗಲಕ್ಷ್ಮಿ ಮತ್ತು ಹರಿಹರೇಶ್ವರ – ಇವರಿಬ್ಬರ ಕೊಡುಗೆಯನ್ನು ನೆನೆಯಲೇ ಬೇಕು. ಅವರ ಪ್ರೋತ್ಸಾಹದಿಂದಲೇ ಅನೇಕ ಹವ್ಯಾಸೀ ಲೇಖಕರು ಉತ್ಸಾಹಗೊಂಡು, ಈ ದಂಪತಿಗಳು ಪ್ರಾರಂಭಿಸಿದ ‘ಅಮೆರಿಕನ್ನಡ’ ದೈಮಾಸಿಕ ಪತ್ರಿಕೆಯಲ್ಲಿ ಲೇಖನ, ಕವನ, ನಾಟಕ ಇತ್ಯಾದಿಗಳನ್ನು ಬರೆಯಲು ಸಾಧ್ಯವಾಯ್ತು. ಈ ದಂಪತಿಗಳ ಪರಿಶ್ರಮವೇ ಹಲವು ಅಮೆರಿಕನ್ನಡಿಗರಲ್ಲಿ ಸುಪ್ತವಾಗಿದ್ದ ಪ್ರತಿಭೆಯು ಹೊರಗೆಡಲು ಸಾಧ್ಯವಾಗಿದೆ ಎಂದರೆ ತಪ್ಪಿಲ್ಲ. ಹರಿಹರೇಶ್ವರರು ಅಮೆರಿಕದಲ್ಲಿದ್ದಾಗ ಹಲವಾರು ಗ್ರಂಥಗಳನ್ನು ಬರೆದಿದ್ದಾರೆ, ಹಾಗೂ ಇತರರಿಂದ ಬರೆಯಿಸಿದ್ದಾರೆ.
ಅಮೆರಿಕದ ಕನ್ನಡ ಬರಹಗಾರರು:
ಅಮೆರಿಕದಿಂದ ಹೆಚ್ಚಿನ ಸಂಖ್ಯೆಯಲ್ಲಿ ಕರ್ನಾಟಕದ ಸಾಹಿತಿಗಳ ಪ್ರೋತ್ಸಾಹದಿಂದ ಗ್ರಂಥಗಳು ಪ್ರಕಟಣೆಯಾಗುತ್ತಿರುವುದು, ಇಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೊಂದು ನಿದರ್ಶನವಾಗಿದೆ. ಅಮೆರಿಕದಲ್ಲಿನ ಕನ್ನಡ ಬರಹಗಾರರನ್ನು ನೆನೆಸಿಕೊಂಡಾಗಲೆಲ್ಲ ನನ್ನ ಮನಸ್ಸಿಗೆ ತಕ್ಷಣ ಬರುವುದು ಎ. ಕೆ. ರಾಮಾನುಜನ್ ಅವರ ಹೆಸರು. ಶಿಕಾಗೂ ಯುನಿವರ್ಸಿಟಿಯಲ್ಲಿ South Asian Departmentನಲ್ಲಿ ಪ್ರಾಧ್ಯಾಪಕರಾಗಿದ್ದ ರಾಮಾನುಜನ್ ಅವರು ಪ್ರಾಯಶಃ ಅಮೆರಿಕದಲ್ಲಿ ಕನ್ನಡ ಸ್ಥಾಪನೆಗೆ ಅಡಿಕಲ್ಲು ಹಾಕಿದವರು ಎಂದು ಹೇಳಿದರೆ ತಪ್ಪಾಗಲಾರದು. ಎಲೆಮರೆಯಲ್ಲಿದ್ದೇ, ಅವರು ಕನ್ನಡ ಕೆಲಸ ಮಾಡುತ್ತಿದ್ದರು. ಆಗ್ನೇಯ ಏಷ್ಯಾ ಬೋಧನೆಯ ವಿಭಾಗದಲ್ಲಿ ಕೆಲವರಿಗೆ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಮೇಲೆ ಬೋಧನೆ ಮಾಡುತ್ತಿದ್ದರು. ಕರ್ನಾಟಕದಿಂದ ಹಲವು ಸಾಹಿತಿಗಳನ್ನು ತಮ್ಮ ಡಿಪಾರ್ಟ್‌ಮೆಂಟ್‌ಗೆ ಕರೆಯಿಸಿಕೊಂಡು ಅಮೆರಿಕನ್ ವಿಧ್ಯಾರ್ಥಿಗಳಿಗೆ ಕನ್ನಡ ಸಾಹಿತ್ಯ ಹಾಗೂ ಸಂಸ್ಕೃತಿಯ ಪರಿಚಯ ಮಾಡಿಸಲು ಕಾರಣರಾಗಿದ್ದರು. ಚಂದ್ರಶೇಖರ ಕಂಬಾರ, ಗಿರೀಶ್ ಕಾರ್ನಾಡ್, ರಾಮಚಂದ್ರ ಶರ್ಮ, ಅನಂತಮೂರ್ತಿ ಮುಂತಾದವರು ರಾಮಾನುಜನ್ ಆಮಂತ್ರಣದ ಮೇರೆಗೆ ಬಂದಂತಹ ಕೆಲವು ಸಾಹಿತಿಗಳು. ಪ್ರಾಯಶಃ ಅಮೆರಿಕದಲ್ಲಿ ನೆಲೆಸಿ, ಕನ್ನಡ ಗ್ರಂಥಗಳನ್ನು ಪ್ರಕಟಿಸಿದವರಲ್ಲಿ ಅವರೇ ಪ್ರಥಮರೆಂದು ಹೇಳಬಹುದು. ಕರ್ನಾಟಕದ ಅನೇಕ ಜಾನಪದ ಕತೆಗಳನ್ನು ಅವರು ಇಂಗ್ಲಿಷ್‌ಗೆ ಅನುವಾದಿಸಿದ್ದಾರೆ. ಅವರು ಅನುವಾದಿಸಿದ, ಅನಂತಮೂರ್ತಿಯವರ ‘ಸಂಸ್ಕಾರ’, ಮತ್ತು ಶಿವಶರಣರ ವಚನಗಳು (Speaking of Shiva) ಇಲ್ಲಿನ ಸಾಹಿತ್ಯವಲಯದಲ್ಲಿ ಜನಪ್ರಿಯತೆ ಗಳಿಸಿದುದಲ್ಲದೆ, ಕೆಲವು ಯುನಿವರ್ಸಿಟಿಗಳ ಸೌತ್ ಏಷ್ಯನ್ ಸ್ಟಡೀಸ್ ವಿಭಾಗಗಳಲ್ಲಿ ಆಕರ ಗ್ರಂಥಗಳಾಗಿ ಬಳಸಿಕೊಂಡಿರುವುದು ಎಲ್ಲ ಕನ್ನಡಿಗರಿಗೆ ಹೆಮ್ಮೆಯ ಸಂಗತಿಯಾಗಿದೆ. ಗೋಪಾಲಕೃಷ್ಣ ಅಡಿಗರು ಮತ್ತು ರಾಮಚಂದ್ರ ಶರ್ಮರಿಂದ ಪ್ರಭಾವಿತರಾಗಿ ಕನ್ನಡದಲ್ಲಿ ಮೂರು ಕವನ ಸಂಕಲಗಳನ್ನು – ‘ಹೊಕ್ಕುಳಲ್ಲಿ ಹೂವಿಲ್ಲ’, ‘ಮತ್ತು ಇತರ ಪದ್ಯಗಳು’, ಮತ್ತು ‘ಕುಂಟೆಬಿಲ್ಲೆ’ – ಪ್ರಕಟಿಸಿದುದಲ್ಲದೆ, ‘ಮತ್ತೊಬ್ಬನ ಆತ್ಮಚರಿತ್ರೆ’ ಎಂಬ ಕಾದಂಬರಿಯನ್ನೂ, ಹಲವು ರೇಡಿಯೊ ನಾಟಕಗಳನ್ನೂ ಪ್ರಕಟಿಸಿದ್ದಾರೆ. ಅಂಥ ಪ್ರತಿಭಾವಂತ ಅಮೆರಿಕನ್ನಡಿಗನ ಅಕಾಲ ಮರಣ ಅಮೆರಿಕನ್ನಡಿಗರ ದೌರ್ಭಗ್ಯವೆಂದು ಹೇಳಬಹುದು.
ಇಲ್ಲಿ ನೆನೆಸಿಕೊಳ್ಳಬೇಕಾದ ಇನ್ನೊಬ್ಬ ವಲಸೆ ಬಂದ ಅಮೆರಿಕನ್ನಡ ಸಾಹಿತಿಯೆಂದರೆ, ಪಿ. ಶ್ರೀನಿವಾಸ ರಾವ್. ಅವರು, ‘ಪ್ರಣಯ ಮತ್ತು ಪ್ರಯಾಣ’ ಎಂಬ ಕಥಾಸಂಕಲವನ್ನೂ, ‘ಪ್ರಸ್ತಾಪ’ ಎಂಬ ವಿಮರ್ಶಾಲೇಖನಗಳನ್ನೂ ಪ್ರಕಟಿಸಿದ್ದಾರೆ. ಅಲ್ಲದೆ, Meenakshi`s Private Tutor (ಮೂಲ ಲೇಖಕ: ಕುವೆಂಪು), Buddha Smile and other Poems (ಮೂಲ ಲೇಖಕ: ಕೆ.ಎಸ್.ನ.) ಎಂಬೆರಡು ಅನುವಾದ ಗ್ರಂಥಗಳನ್ನು ಪ್ರಕಟಿಸಿದುದಲ್ಲದೆ, ಅನಂತಮೂರ್ತಿಯವರ ‘ಭಾರತೀಪುರ’ ಕಾದಂಬರಿಯನ್ನೂ ಅನುವಾದಿಸಿದ್ದಾರೆ. ರಾಮಾನುಜನ್‌ರಂತೆ, ಅವರ ಅಕಾಲ ಮರಣವೂ ಅಮೆರಿಕನ್ನಡಿಗರ ಲಾಸ್ ಎಂದು ಹೇಳಬಹುದು. ಹಾಸನ ರಾಜಾರಾಯರು ಇಲ್ಲಿಗೆ ವಲಸೆಬಂದ ಇನ್ನೊಬ್ಬ ಕನ್ನಡ ಸಾಹಿತಿ. ಅವರು ಪ್ರಕಟಿಸಿದ ಅನೇಕ ಇಂಗ್ಲಿಷ್ ಗ್ರಂಥಗಳು ಜನಪ್ರಿಯವಾಗಿರುವುದು ಎಲ್ಲರಿಗೂ ತಿಳಿದ ಸಂಗತಿ. ಇತ್ತೀಚೆಗೆ ಅವರು ಬರೆದ ಒಂದು ಇಂಗ್ಲಿಷ್ ಕಾದಂಬರಿಯನ್ನು ‘ನಾರೀಗೀತ’ವೆಂಬ ಶೀರ್ಷಿಕೆಯಲ್ಲಿ, ಮೈಸೂರಿನ ಧ್ವನ್ಯಾಲೋಕದ ಸಹಕಾರದೊಂದಿಗೆ, ಹ್ಯೂಸ್ಟನ್ ಕನ್ನಡ ವೃಂದ, ಕನ್ನಡ ಸಾಹಿತ್ಯ ರಂಗದ ಸಮ್ಮೇಳನದಲ್ಲಿ ಲೋಕಾರ್ಪಣೆ ಮಾಡಿ, ರಾಜಾರಾಯರಿಗೆ ಶ್ರದ್ಧಾಂಜಲಿ ಅರ್ಪಿಸಿ, ಅವರ ಸಾಹಿತ್ಯ ಕೊಡುಗೆಯನ್ನು ನೆನೆಸಿಕೊಂಡಿದೆ.
ಯುನಿವರ್ಸಿಟಿಯಲ್ಲಿ ಅಧ್ಯಾಪರಾಗಿದ್ದು, ಕನ್ನಡ ಸೇವೆ ಮಾಡುತ್ತಿರುವವರನ್ನು ನೆನೆದಾಗ, ಎಸ್. ಎನ್. ಶ್ರೀಧರ ಮತ್ತು ನಾರಾಯಣ ಹೆಗಡೆ, ಮಹಾಬಲಗಿರಿ ಎನ್. ಹೆಗಡೆ (ಗಿರಿ) – ಇವರ ಹೆಸರು ಜ್ಞಾಪಕಕ್ಕೆ ಬರುತ್ತದೆ. ಶ್ರೀಧರ ಮತ್ತು ನಾರಾಯಣ ಹೆಗಡೆ ಇವರಿಬ್ಬರೂ, SUNY (State University of New York) ಯಲ್ಲಿ ಅಧ್ಯಾಪಕರಾಗಿದ್ದಾರೆ. ಶ್ರೀಧರ ಅವರು Stoneybrook Campusನಲ್ಲಿ ಭಾರತೀಯ ಬೋಧನೆ ವಿಭಾಗದಲ್ಲಿ ಮುಖ್ಯಸ್ಥರಾಗಿದ್ದರೆ, ನಾರಾಯಣ ಹೆಗಡೆಯವರು SUNY, Westburyಯಲ್ಲಿ ಇಂಗ್ಲಿಷ್ ಮತ್ತು ತೌಲನಿಕ ಸಾಹಿತ್ಯದಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಶ್ರೀಧರ ಅವರು ಭಾಷಾವಿಜ್ಞಾನಕ್ಕೆ ಸಂಬಂಧಪಟ್ಟಂತೆ, Kannada (Descriptive Grammer), ‘ಇಂದಿನ ಕನ್ನಡ – ರಚನೆ ಮತ್ತು ಬಳಕೆ’, ಮತ್ತಿತರ ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಸ್ಟೋನಿಬ್ರೂಕ್‌ಗೆ ಕರ್ನಾಟಕದ ಅನೇಕ ಸಾಹಿತಿಗಳನ್ನು ಕರೆಯಿಸಿಕೊಂಡು, ಅವರಿಂದ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಮೇಲೆ ಭಾಷಣಗಳನ್ನು ಏರ್ಪಡಿಸುತ್ತ, ಕನ್ನಡ ಸೇವೆಯನ್ನು ಮಾಡುತ್ತಿದ್ದಾರೆ. ಹೆಗಡೆಯವರ ಕಾರ್ಯದಲ್ಲಿ, ಅವರು ಇಂಗ್ಲಿಷ್‌ಗೆ ಅನುವಾದಿಸಿದ, ಅನಂತಮೂರ್ತಿಯವರ ‘ಸೂರ್ಯನ ಕುದುರೆ ಮತ್ತು ಇತರ ಕತೆಗಳು’ ಜನಪ್ರಿಯವಾಗಿದೆ. ಇತ್ತೀಚೆಗೆ ಅವರು, ೧೮೮೭ರಲ್ಲೇ ಪ್ರಕಟವಾದ, ಶ್ರೀ ವೆಂಕಟರಮಣ ಶಾಸ್ತ್ರಿಯವರ ‘ಇಗ್ಗಪ್ಪ ಹೆಗಡೆ ವಿವಾಹ ಪ್ರಹಸನ’ ಎಂಬ ಸಾಮಾಜಿಕ ನಾಟಕವನ್ನು ಇಂಗ್ಲಿಷ್‌ಗೆ ಅನುವಾದ ಮಾಡಿದ್ದಾರೆ (ಸಾಹಿತ್ಯ ಅಕೇಡೆಮಿ). ಈ ನಾಟಕದಲ್ಲಿನ ಸಂಭಾಷಣೆ ಅನನ್ಯವಾಗಿದ್ದು, ಅದು ಕನ್ನಡ ಸಾಹಿತ್ಯದ ಅತಿ ಹಳೆಯ ಸಾಮಾಜಿಕ ನಾಟಕವೆನ್ನಲಾಗಿದೆ. California State University at Fresno, Speech Therapy ವಿಭಾಗದಲ್ಲಿ ಅಧ್ಯಾಪಕರಾಗಿದ್ದ ಗಿರಿಯವರು ಇತ್ತೀಚೆಗೆ ನಿವೃತ್ತರಾಗಿದ್ದಾರೆ. ಅವರ ಮೊದಲನೆಯ ಕಾದಂಬರಿ, ‘ಗತಿ, ಸ್ಠಿತಿ’, ಆಧುನಿಕ ಸಾಹಿತ್ಯವಲಯದಲ್ಲಿ ಪ್ರಶಂಸೆಗಳಿಸಿದೆ. ‘ಕಂಡದ್ದು, ಕಾಣದ್ದು’, ಅವರ ಎರಡನೆಯ ಕಾದಂಬರಿ. ಅಲ್ಲದೆ, ಫ಼್ರಾಂಜ಼್ ಕಾಫ಼್ಕಾ ಅವರ Metamorphosis ಎಂಬ ಕೃತಿಯನ್ನು ‘ರೂಪಾಂತರ’ ಎಂಬ ಶೀರ್ಷಿಕೆಯಲ್ಲಿ ಕನ್ನಡಕ್ಕೆ ಅನುವಾದಿಸಿದುದಲ್ಲದೆ, ಕನ್ನಡದಲ್ಲಿ ಅನೇಕ ಕತೆಗಳನ್ನೂ ಬರೆದಿದ್ದಾರೆ. ಇವುಗಳಲ್ಲದೆ, ತಮ್ಮ ವೃತ್ತಿಗೆ ಸಂಬಂಧಿಸಿದ ಹಲವಾರು ವೈಜ್ಞಾನಿಕ ಗ್ರಂಥಗಳನ್ನೂ ಪ್ರಕಟಿಸಿದ್ದಾರೆ. ಅವರ ಸಮಗ್ರ ಬರೆಹಗಳು (ಕಾದಂಬರಿ ಮತ್ತು ಕತೆಗಳು) ಸಧ್ಯದಲ್ಲೆ ಪುನರ್ ಬಿಡುಗಡೆಯಾಗುವುದೆಂದು ತಿಳಿಯಲಾಗಿದೆ. ಅನುವಾದ ಸಾಹಿತ್ಯ ವಿಚಾರ ಎಣಿಸಿದಾಗ, ಟೆಕ್ಸಸ್ ಯುನಿವರ್ಸಿಟಿಯಲ್ಲಿ ಅಧ್ಯಾಪಕರಾಗಿರುವ ಜುಡಿತ್ ಕ್ರೋಲ್ ಅವರು ಇಂಗ್ಲಿಷ್‌ಗೆ ಅನುವಾದಿಸಿದ ಅನಂತಮೂರ್ತಿಯವರ ‘ಭವ’ ಕಾದಂಬರಿಯನ್ನು ಇಲ್ಲಿ ನೆನೆಯಬಹುದು.
ಅಮೆರಿಕದ ಇತ್ತೀಚಿನ ಬರಹಗಾರರ ಪಟ್ಟಿ ಬಲು ದೊಡ್ಡದು. ಮೈ. ಶ್ರೀ. ನಟರಾಜ, ಗುರುಪ್ರಸಾದ ಕಾಗಿನೆಲೆ, ಅಲಮೇಲು ಅಯ್ಯಂಗಾರ್, ಸಂಧ್ಯಾ ರವೀಂದ್ರನಾಥ್, ಶಶಿಕಲಾ ಚಂದ್ರಶೇಖರ್, ಎಚ್.ಕೆ. ನಂಜುಂಡಸ್ವಾಮಿ, ರಾಜಗೋಪಾಲ ದಂಪತಿಗಳು, ಎಚ್.ವಿ. ರಂಗಾಚಾರ್, ವೈ.ಆರ್. ಮೋಹನ್, ಎಚ್.ಕೆ. ಚಂದ್ರಶೇಖರ್, ಆಹಿತಾನಲ, ವೈಶಾಲಿ ಹೆಗಡೆ, ಎಚ್.ಕೆ ಕೃಷ್ಣಪ್ರಿಯ, ಎಚ್.ಕೆ.ರಾಮಪ್ರಿಯ, ಶ್ರೀವತ್ಸ ಜೋಶಿ, ತ್ರಿವೇಣಿ ಶ್ರೀನಿವಾಸ ರಾವ್, ನಳಿನಿ ಮೈಯ, ಸುಬ್ರಾಯ ಮೈಯ, ಹೇಮಾ ಶ್ರೀಕಂಠ, ಮೀರಾ ರಾಜಗೋಪಾಲ್, ಜಯರಾಮ ಉಡುಪ, ಗುಂಡುಶಂಕರ ದಂಪತಿಗಳು, ತಾವರೆಕೆರೆ ಶ್ರೀಕಂಠಯ್ಯ, ಪ್ರಕಾಶ ನಾಯಕ್, ವಿಶ್ವನಾಥ ಹುಲಿಕಲ್, ಶಾಂತಲಾ ಭಂಡಿ, ಶಶಿಕಲಾ ನಿಂಬಾಳ್, ಮಧು ಕೃಷ್ಣಮೂರ್ತಿ, ಪ್ರಕಾಶ್ ಹೇಮಾವತಿ, ವಲ್ಲೀಶ ಶಾಸ್ತ್ರಿ, ಮಾಲಾ ರಾವ್, ಶ್ರೀನಾಥ ಭಲ್ಲೆ, ಕುಂಬಾಶಿ ಶ್ರೀನಿವಾಸ ಭಟ್ಟ, ಶ್ರೀಕಾಂತ ಬಾಬು, (ದಿ) ವಿಮಲಾ ಚೆನ್ನಬಸಪ್ಪ, ತೋನ್ಸೆ ಕೃಷ್ಣರಾಜು, ಪ್ರಕಾಶ್ ಹೇಮಾವತಿ, ಲಕ್ಷ್ಮೀನಾರಾಯಣ ಗಣಪತಿ, ಅನಿಲ್ ದೇಸಾಯಿ, ಅನಿಲ್ ತಾಳಿಕೋಟೆ, ದತ್ತಾತ್ರಿ ರಾಮಣ್ಣ, ಸುಕುಮಾರ್ ರಘುರಾಮ್, ಸುಪ್ತದಿಪ್ತಿ, ….. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಇವರೆಲ್ಲರೂ ವಿವಿಧ ಕನ್ನಡ ಪತ್ರಿಕೆಗಳಲ್ಲಿ ತಮ್ಮ ಲೇಖನಗಳನ್ನು ಪ್ರಕಟಿಸಿದ್ದಾರೆ.
ಅಮೆರಿಕದಿಂದ ಪ್ರಕಟವಾದ ಗ್ರಂಥಗಳು:
ಅಮೆರಿಕದಿಂದ ಹಲವು ಗ್ರಂಥಗಳು ಪ್ರಕಟವಾಗಿವೆ, ಹಾಗೂ ಪ್ರಕಟವಾಗುತ್ತಲೇ ಇದೆ. ಇಲ್ಲಿ ನನಗೆ ತಿಳಿದ ಇತ್ತೀಚಿನ ಕೆಲವು ಗ್ರಂಥಗಳನ್ನು ಸಂಕ್ಷೇಪವಾಗಿ ಪಟ್ಟಿ ಮಾಡುತ್ತಿದ್ದೇನೆ. ಇದು ಸಮಗ್ರ ಪಟ್ಟಿಯಲ್ಲವೆಂದು ಒತ್ತಿ ಹೇಳುತ್ತಿದ್ದೇನೆ. ಈ ಪಟ್ಟಿ ಅಮೆರಿಕದಲ್ಲಿ ಸಾಹಿತ್ಯ ಬೆಳವಣಿಗೆಗೆ ಸಮರ್ಥನೆ ಕೊಟ್ಟೀತೆಂದು ನನ್ನ ಆಶಯ. ಪ್ರಮಾದದಿಂದ ಉಲ್ಲೇಖಿಸದಿರುವ ಗ್ರಂಥಗಳೇನಾದರೂ ಇದ್ದಲ್ಲಿ ಕ್ಷಮೆ ಇರಲಿ.
೧. ‘ನಾನೂ ಅಮೆರಿಕನ್ ಆಗಿಬಿಟ್ಟೆ’ (ಕವನ ಸಂಕಲನ), ‘ಮಧುಚಂದ್ರ ಸಿರಿಕೇಂದ್ರ’ (ಕವನ ಸಂಕಲನ), ‘ಜಾಲತರಂಗ’ (ಅಂಕಣ ಬರಹ), ‘ಜಾಲತರಂಗಿಣಿ’ (ಅಂಕಣ ಬರಹಗಳು), ‘ಭಾಷೆಯಿಯಿಂದ ಭಾಷೆಗೆ’ (ಇಂಗ್ಲಿಷ್‌ನಿಂದ ಕನ್ನಡಕ್ಕೆ ಕೆಲವು ಕವನಗಳ ಅನುವಾದ), Beyond words, The Void and the Womb (ಕನ್ನಡದಿಂದ ಇಂಗ್ಲಿಷ್‌ಗೆ ಅನುವಾದ), ‘ಮಾಯಾವಿ ಸರೋವರ’ (ಹಿಂದಿಯಿಂದ ಅನುವಾದ) ಮತ್ತು ಇನ್ನೂ ಹಲವು – ಮೈ. ಶ್ರೀ. ನಟರಾಜ.
೨. ‘ವೈದ್ಯ ಮತ್ತೊಬ್ಬ’, ‘ನಿರ್ಗುಣ’ (ಕಥಾಸಂಕಲನ), ‘ಶಾಕುಂತಲಾ’ (ಕಥಾಸಂಗ್ರಹ), ‘ಬಿಳಿಯ ಚಾದರ’ (ಕಾದಂಬರಿ), ‘ಗುಣ’ (ಕಾದಂಬರಿ) – ಗುರುಪ್ರಸಾದ ಕಾಗಿನೆಲೆ
೩. ‘ಕಲಸು ಮೇಲೋಗರ’, ‘ನಿಶ್ಶಬ್ದ ಶಬ್ದ’, ‘ಕಾನನದ ಮಲ್ಲಿಗೆ’, ‘ಶುಶ್ರುತ ನಡೆದ ಹಾದಿಯಲ್ಲಿ’, ಇತ್ಯಾದಿ – ಎಚ್.ಕೆ. ನಂಝುಂಡಸ್ವಾಮಿ
೪. ‘ಹೈಟೆಕ್ ಹಯವದನ’ (ನಾಟಕಗಳ ಸಂಗ್ರಹ), ಇತ್ಯಾದಿ – ಅಲಮೇಲು ಅಯ್ಯಂಗಾರ್.
೫. ‘ಅಲೆಮಾರಿ ಕನಸುಗಳು’ (ಕವನ ಸಂಕಲನ), ‘ಪೂರ್ವ ಪಶ್ಚಿಮ’ (ಅಂಕಣ ಬರಹ), ‘ದ್ವೀಪವ ಬಯಸಿ’ (ಕಾದಂಬರಿ), ಮತ್ತಿತರ – ಎಮ್. ಆರ್. ದತ್ತಾತ್ರಿ
೬. ‘ಪಯಣ’ (ಆತ್ಮಕಥನ) – ಶಾರದಾ ಬೈಯಣ್ಣ
೭. ‘ಮರೀಚಿಕೆ ಮತ್ತು ಇತರ ಕತೆಗಳು’ – ನಳಿನಿ ಮೈಯ
೮. ‘ಭಾವ ತರಂಗ’ (ಕವನ ಸಂಕಲನ) – ನಾಗಭೂಷಣ ಮೂಲ್ಕಿ
೯. ‘ಮರಳಿ ಬರುವೆ ನಾ’ (ಕಥಾಸಂಕಲನ) – ಸಂಧ್ಯಾ ರವೀಂದ್ರನಾಥ್
೧೦. ‘ಶ್ರೀಮದ್ ಭಗವತ್ ಕಂನುಡಿ’ (ಭಗವದ್‌ಗೀತೆಯ ಸರಳ ಕನ್ನಡ ಅನುವಾದ) – ವಿಶ್ವೇಶ್ವರ ದೀಕ್ಷಿತ್
೧೧. ‘ಭಾರತದ ಬೃಹತ್ ಬೇಲಿ’ (ಅನನ್ಯ ಚಾರಿತ್ರಿಕ ಗಂಥ) – ಎಚ್. ಕೆ. ಚಂದ್ರಶೇಖರ್
೧೨. ‘ಒದ್ದೆ ಹಿಮ.. ಉಪ್ಪುಗಾಳಿ’ (ಪ್ರಬಂಧ ಸಂಕಲನ) – ವೈಶಾಲಿ ಹೆಗಡೆ
೧೩. ‘ತುಳಸಿ ವನ’ (ಅಂಕಣ ಬರಹಗಳು), ‘ತಿಳಿ ನೀಲಿ ಪೆನ್ನು’ (ಕಥಾಸಂಕಲನ) – ತ್ರಿವೇಣಿ ಶ್ರೀನಿವಾಸ ರಾವ್
೧೪. ‘ದೀಪವು ನಿನ್ನದೆ, ಗಾಳಿಯು ನಿನ್ನದೆ’ (ಕಥಾಸಂಕಲನ) – ಶಶಿಕಲಾ ಚಂದ್ರಶೇಖರ್
೧೫. ‘ಬೇತಾಳರಾಯ ಮತ್ತು ಇತರ ಕತೆಗಳು’ (ಕಥಾಸಂಕಲನ), ‘ಪಶ್ಚಿಮಾಯಣ’ (ಕಾದಂಬರಿ), ‘ಸಾವಿರ ಪಕ್ಷಿಗಳು’ (ಅನುವಾದ), Poema and Novella (ಎ.ಕೆ. ರಾಮಾನುಜನ್ ಅವರ ಸಾಹಿತ್ಯದ ಅನುವಾದ, ಇಂಗ್ಲಿಷ್‌ಗೆ), Nobel Chronicles (ನೊಬೆಲ್ ಪಾರಿತೋಷಕ ಪಡೆದವರ ಸಂಕ್ಷೀಪ್ತ ಪರಿಚಯ), ಇತ್ಯಾದಿ – ತೋನ್ಸೆ ಕೃಷ್ಣರಾಜು
೧೬. ‘ಗಾಂಧೀ ಯುಗಕ್ಕೆ ಕನ್ನಡಿ’ (ಪ್ರಬಂಧ ಸಂಕಲನ) – ಎಚ್.ವೈ. ರಾಜಗೋಪಾಲ್
೧೭. ‘ಅಮೆರಿಕನ್ನಡಿಗನೊಬ್ಬನ ದಿನಚರಿಯಿಂದ’ (ಅನುಭವ ಕಥನ), ಕಾದೇ ಇರುವಳು ರಾಧೆ’ (ಕಿರುಕಾದಂಬರಿ), ‘ಕಲಬೆರಕೆ’ (ಪ್ರಬಂಧ ಸಂಕಲನ), ‘ಒಂದಾನೊಂದು ಕಾಲದಲ್ಲಿ’ (ಕಟ್ಟು ಕತೆಗಳು), ‘ದೂರತೀರದಿಂದ ಹರಿದು ಬಂದ ಕತೆಗಳು’ (ಕಥಾಸಂಕಲನ), ‘ಜೀವನ ರಹಸ್ಯ’ (ವೈಜ್ಞಾನಿಕ ಗ್ರಂಥ), ‘ತಲೆಮಾರ ಸೆಲ’ (ಕಾದಂಬರಿ) – ಆಹಿತಾನಲ
೧೮. ‘ವಿಚಿತ್ರಾನ್ನ’ (ಈ ಹೆಸರಿನಲ್ಲಿ ಇನ್ನೂಎರಡುಅಂಕಣ ಗ್ರಂಥಗಳು), ‘ಒಲವಿನ ಟಚ್’ ( ಇನ್ನೂ ನಾಲ್ಕು‘ಟಚ್’ ಅಂಕಣ ಬರಹಗಳ ಗ್ರಂಥಗಳು) – ಶ್ರೀವತ್ಸ ಜೋಶಿ
೧೯. ‘ನೆನಪುಗಳು’, ‘ಪಾರ್ಕಿನ್‌ಸನ್ ಕಾಯಿಲೆಯಿಂದ ನಾನೇನು ಕಲಿತೆ?’, ‘ಅಮೆರಿಕಾಯಣ’, ಇತ್ಯಾದಿ – ವೈ. ಆರ್. ಮೋಹನ್
೨೦. ‘ನೆಲದ ಕರೆ’ (ಕವನ ಸಂಕಲನ), ‘ಹಿರೋದೋತನ ಸಮರ ಕತೆಗಳು’ (ಕಥಾಸಂಗ್ರಹ), ‘ತರಗೆಲೆಯ ಹಾರಾಟ’ (ಪ್ರಬಂಧ ಸಂಕಲನ), Hill Temple (ಪು.ತಿ.ನ. ಅವರ ‘ಮಲೆದೇಗುಲ’ ದ ಇಂಗ್ಲಿಷ್ ಅನುವಾದ) – ಎಚ್. ವಿ. ರಂಗಾಚಾರ್
೨೧. ‘ಮೋಡ ಕರಗಿದ ಮೇಲೆ’ (ಕಥಾಸಂಕಲನ), Detour to Happiness (ಕಥಾಸಂಕಲನ) – ಅಶ್ವಥ್ ನಾ. ರಾವ್
೨೨. ‘ಹೃದಯ’ (ಕಥಾಸಂಕಲನ), ‘ಸೌರಭ’ (ಕಥಾಸಂಕಲನ), ‘ಮಂಥನ’ (ಅನುವಾದ), ‘ಅಮೆರಿಕ ಮತ್ತು ಅಮೆರಿಕನ್ನರು’ (ಅನುವಾದ), ‘ಆತ ಮಂಗಳ ಲೋಕದಿಂದ, ಈಕೆ ಶುಕ್ರ ಲೋಕದಿಂದ‘ (ಅನುವಾದ), ‘ನಾಗರಿಕತೆಯ ಕಥೆ’ (ಅನುವಾದ), Dots and Lines, ಇತ್ಯಾದಿ – ವಿಶ್ವನಾಥ ಹುಲಿಕಲ್
೨೩. ‘ಜಿಜ್ಞಾಸೆ, ಗಂಗೆಯ ದಡದ ಕಾಲ್ದಾರಿಯಲ್ಲಿ’ – ರವಿ ಕೃಷ್ಣ ರೆಡ್ಡಿ
೨೪. ‘ಕಾಡಿದೆ ತವರಿನ ನೆನಪು’ (ಕವನ ಸಂಕಲನ) – ಮಾಯಾ ಹರಪನಹಳ್ಳಿ
೨೫. ‘ನುಡಿ ಎನ್ನ ವೀಣೆ’ (ಕವನ ಸಂಕಲನ) – (ದಿ) ವಿಮಲಾ ಚೆನ್ನಬಸಪ್ಪ
೨೬. ‘ಗಾನ ಸುಂದರಿ’ (ಕವನ ಸಂಕಲನ), ‘ಸ್ವರ್ಣಯುಗ’ (ಕವನ ಸಂಕಲನ) – ವೆಂಕಟಪ್ಪ ಐತಾಂಡಹಳ್ಳಿ
೨೭. ‘ಭಾವಲಹರಿ’ (ಕವನ ಸಂಕಲನ), ‘ಭಾವಗಾನ’ (ಕವನ ಸಂಕಲನ) ‘ಭಾವಬಿಂಬ’ (ಕವನ ಸಂಕಲನ), ‘ಭಾವಲೋಕ’ (ಕವನ ಸಂಕಲನ), ‘ಭಾವಯಾನ’ (ಕಥೆ-ಹರಟೆ ಸಂಕಲನ) – ಸುಪ್ತದೀಪ್ತಿ
೨೮. ‘ಬೊಗಸೆಯಲ್ಲಿ ಬೆಳದಿಂಗಳು’ (ಕವನ ಸಂಕಲನ), ‘ಬೆಳದಿಂಗಳ ಬೇರು’ (ಕಥಾಸಂಕಲನ), ಇತ್ಯಾದಿ – ಶಾಂತಲಾ ಭಂಡಿ
ಇವರುಗಳಲ್ಲದೆ, ಶ್ರೀ ಶಾಂತಾರಾಮ ಸೋಮಯಾಜಿ ಅವರು ಅಮೆರಿಕದಲ್ಲಿದ್ದಾಗ ಹಲವು ಗ್ರಂಥಗಳನ್ನು (ಪಟ್ಟಿ ತುಂಬಾ ದೊಡ್ಡದು) ಪ್ರಕಟಿಸಿದ್ದಾರೆ. ಇವರೆಲ್ಲರೂ ತಮ್ಮ ವಿವಿಧ ಗ್ರಂಥಗಳ ಮೂಲಕ ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದ್ದಾರೆ.
ಸಂಪಾದಿತ ಕೃತಿಗಳು:
ಈ ಕೆಳಗೆ ಅಮೆರಿಕದಲ್ಲಿ ಪ್ರಕಟವಾದ ಕೆಲವು ಕೃತಿಗಳ ಪಟ್ಟಿ ಮಾಡಿದ್ದೇನೆ:
೧. ‘ಕಾರಂತ ಚಿಂತನ – ಕಡಲಾಚೆಯ ಕನ್ನಡಿಗರಿಂದ’ (೨೦೦೦) – ಸಂ. ಆಹಿತಾನಲ
೨. ‘ಕುವೆಂಪು ಸಾಹಿತ್ಯ ಸಮೀಕ್ಷೆ’ (೨೦೦೪) – ಸಂ. ಆಹಿತಾನಲ *
೩. ‘ಆಚೀಚೆಯ ಕತೆಗಳು’ (೨೦೦೫) – ಸಂ. ಗುರುಪ್ರಸಾದ ಕಾಗಿನೆಲೆ *
೪. ‘ಯದುಗಿರಿಯ ಬೆಳಕು’ (೨೦೦೫) – ಸಂ. ಆಹಿತಾನಲ
೫. ‘ನಗೆಗನ್ನಡಂ ಗೆಲ್ಗೆ’ (೨೦೦೭) – ಸಂ. ಎಚ್.ಕೆ. ನಂಜುಂಡಸ್ವಾಮಿ ಮತ್ತು ಎಚ್.ವೈ. ರಾಜಗೋಪಾಲ್ *
೬. ‘ಕನ್ನಡದಮರಚೇತನ’ (೨೦೦೭) – ಸಂ. ಆಹಿತಾನಲ ಮತ್ತು ಹ. ಕಂ. ಕೃಷ್ಣಪ್ರಿಯ
೭. ‘ಗೆಲುವಿನ ಚಿಲುಮೆ ರಾಜರತ್ನಂ’ (೨೦೦೮) – ಸಂ. ಆಹಿತಾನಲ
೮. ‘ಕಾದಂಬರಿ ಲೋಕದಲ್ಲಿ ಹೀಗೆ ಹಲವು’ (೨೦೦೯) – ಸಂ. ಮೈ. ಶ್ರೀ. ನಟರಾಜ *
೯. ‘ಅನಂತಮುಖದಮೂರ್ತಿ’ (೨೦೦೯) – ಸಂ. ಆಹಿತಾನಲ
೧೦. ‘ಮಥಿಸಿದಷ್ಟೂ ಮಾತು’ (೨೦೧೧) – ಸಂ. ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಎಮ್. ಆರ್. ದತ್ತಾತ್ರಿ *
೧೧. ‘ಬೇರು ಸೂರು’ (೨೦೧೩) – ಸಂ. ಗುರುಪ್ರಸಾದ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಜ್ಯೋತಿ ಮಹದೇವ್ *
ಈ ಎಲ್ಲ ಗ್ರಂಥಗಳಿಗೂ ಕರ್ನಾಟಕದ ಹೆಸರಾಂತ ಸಾಹಿತಿಗಳು ಮೆಚ್ಚುಗೆಯ ಮುನ್ನುಡಿಗಳನ್ನು ಬರೆದು, ಅಮೆರಿಕದ ಸಾಹಿತ್ಯ ಬೆಳವಣಿಗೆಗೆ ಪ್ರೋತ್ಸಾಹ ನೀಡಿದ್ದಾರೆಂಬುದು ಅತಿ ಅಭಿಮಾನದ ಸಂಗತಿ. ಹೀಗೆ ಅಮೆರಿಕ ಮತ್ತು ಕರ್ನಾಟಗಳ ನಡುವೆ ಸಾಹಿತ್ಯ ಸಂಪರ್ಕ ಬೆಳೆಯುತ್ತ ಬಂದು, ಅಮೆರಿಕದಲ್ಲಿ ಕನ್ನಡ ಭುವನೇಶ್ವರಿಯ ಸೇವೆ ನಡೆಯುತ್ತಿರಲೆಂದು ಹಾರೈಸೋಣ.
ಕನ್ನಡ ಸಾಹಿತ್ಯ ರಂಗ:
ಅಮೆರಿಕದಲ್ಲಿ ಸಾಹಿತ್ಯಕ್ಕೆಂದೇ ಮೀಸಲಾದ ಸಂಘಟನೆಯೆಂದರೆ, ಕನ್ನಡ ಸಾಹಿತ್ಯ ರಂಗ. ೨೦೦೩ರಲ್ಲಿ ಕೆಲವು ಸಾಹಿತ್ಯಾಭಿಮಾನಿಗಳ ಉತ್ಸಾಹದ ಫಲವಾಗಿ ಈ ಸಾಹಿತ್ಯ ರಂಗವು ಅಸ್ತಿತ್ವಕ್ಕೆ ಬಂದುದು, ಅಮೆರಿಕದಲ್ಲಿ ಸಾಹಿತ್ಯ ಬೆಳವಣಿಗೆಯ ಮಹತ್ವ ಮೈಲುಗಲ್ಲೆಂದೇ ಹೇಳಬಹುದು. ಎರಡು ವರ್ಷಗಳಿಗೊಮ್ಮೆ ಮೇ ತಿಂಗಳಲ್ಲಿ ‘ವಸಂತೋತ್ಸವ’ವೆಂಬ ಸಾಹಿತ್ಯ ಸಮ್ಮೇಳನವನ್ನು ಏರ್ಪಡಿಸಿ, ಕರ್ನಾಟಕದಿಂದ ಹೆಸರಾಂತ ಸಾಹಿತಿಗಳನ್ನು ಬರಮಾಡಿಕೊಂಡು, ಅವರಿಂದ ಸಾಹಿತ್ಯದ ಮೇಲೆ ರಸವತ್ತಾದ ಭಾಷಣಗಳನ್ನು ಸಾಹಿತ್ಯ ರಂಗ ಏರ್ಪಡಿಸುತ್ತಿದೆ. ಈ ಸಮ್ಮೇಳನಗಳಲ್ಲಿ ಸಾಹಿತ್ಯಕ್ಕೆ ಸಂಬಂಧಪಟ್ಟಂತೆ ವಿವಿಧ ವಿಷಯಗಳ ಮೇಲೆ ವಿಚಾರ ಗೋಷ್ಠಿಗಳನ್ನೂ ನಡೆಸಿಕೊಡುತ್ತಿದೆ. ಇದುವರೆಗೆ ಕರ್ನಾಟಕದಿಂದ ಬಂದ ಸಾಹಿತಿಗಳ ಪಟ್ಟಿ ಹೀಗಿದೆ: ಪ್ರಭುಶಂಕರ, ಬರಗೂರು ರಾಮಚಂದ್ರಪ್ಪ, ಅ.ರಾ. ಮಿತ್ರ, ಎಚ್.ಎಸ್. ರಾಘವೇಂದ್ರ ರಾವ್, ವೈದೇಹಿ, ವೀಣಾ ಶಾಂತೇಶ್ವರ, ಸುಮತೀಂದ್ರ ನಾಡಿಗ, ಭುವನೇಶ್ವರಿ ಹೆಗಡೆ, ಕೆ. ವಿ. ತಿರುಮಲೇಶ ಮತ್ತು ಶ್ರೀಪತಿ ತಂತ್ರಿ. ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳು ಮಾಡಿದ ಭಾಷಣಗಳನ್ನು ಮುದ್ರಿಸಿ, ಕಿರು ಹೊತ್ತಿಗೆಯನ್ನಾಗಿ ಸಮ್ಮೇಳನದಲ್ಲಿ ಉಚಿತವಾಗಿ ಹಂಚುತ್ತಾರೆ. ಇದುವರೆಗೆ ಮುಖ್ಯ ಅತಿಥಿಗಳು ಮಾಡಿದ ಭಾಷಣಗಳ ಹೊತ್ತಿಗೆ ಇಂತಿವೆ:
೧. ‘ಕನ್ನಡ ಸಾಹಿತ್ಯ – ಒಂದು ಮಿಂಚುನೋಟ’ (೨೦೦೪) – ಪ್ರಭುಶಂಕರ
೨. ‘ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ’ (೨೦೦೫) – ಬರಗೂರು ರಾಮಚಂದ್ರಪ್ಪ
೩. ‘ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ’ (೨೦೦೭) – ಅ. ರಾ. ಮಿತ್ರ
೪. ‘ಕನ್ನಡ ಕಾದಂಬರಿ – ಕಳೆದ ಕಾಲು ಶತಮಾನದಲ್ಲಿ’ (೨೦೦೯) – ವೀಣಾ ಶಾಂತೇಶ್ವರ
೫. ‘ಕನ್ನಡ ಸಾಹಿತ್ಯದಲ್ಲಿ ಪ್ರಬಂಧ ಪ್ರಕಾರ’ (೨೦೧೧) – ಸುಮತೀಂದ್ರ ನಾಡಿಗ
೬. ‘ಕನ್ನಡದ ಮುನ್ನೆಡೆ – ಸವಾಲುಗಳು ಮತ್ತು ಅವಕಾಶಗಳು’ (೨೦೦೧೩) – ಕೆ.ವಿ. ತಿರುಮಲೇಶ
ಇವುಗಳಲ್ಲದೆ, ಕನ್ನಡ ಸಾಹಿತ್ಯ ರಂಗ ಪ್ರಕಟಿಸಿದ ವಿವಿಧ ಗ್ರಂಥಗಳನ್ನೂ (ಮೇಲೆ, ಸಂಪಾದಿತ ಕೃತಿಗಳ ಶೀರ್ಷ್ಕೆಯಲ್ಲಿ * ಚಿಹ್ನೆ ಹಾಕಿದ ಪುಸ್ತಕಗಳು) ‘ವಸಂತೋತ್ಸವ’ದಲ್ಲಿ ಭಾಗವಹಿಸವರಿಗೆ ಉಚಿತವಾಗಿ ಹಂಚುವ ವ್ಯವಸ್ಥೆಯೂ ಇದೆ. ‘ವಸಂತೋತ್ವವ’ವಲ್ಲದೆ, ಸಾಹಿತ್ಯ ರಂಗ ಬೇರೆ ಬೇರೆ ಕಾರ್ಯಕ್ರಮಗಳನ್ನೂ ಏರ್ಪಡಿಸುತ್ತದೆ. ಇವುಗಳಲ್ಲಿ, ೨೦೦೬ರಲ್ಲಿ ಕರ್ನಾಟಕದ ಹೆಸರಾಂತ ವಿಮರ್ಶಕ, ಎನ್. ಎಸ್. ಲಕ್ಷ್ಮೀನಾರಾಯಣ ಭಟ್ಟರು ನಡೆಸಿಕೊಟ್ಟ ಕನ್ನಡ ಸಾಹಿತ್ಯ ಚರಿತ್ರೆಯ ಮೇಲಿನ ಶಿಬಿರ ಮುಖ್ಯವಾದುದು. ಅಮೆರಿಕಾದ್ಯಂತ ಒಂಬತ್ತು ನಗರಗಳಲ್ಲಿ ಎರಡು ದಿನಗಳ ಈ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆಯಿತು. ಶ್ರೀ ಭಟ್ಟರ ಉಪನ್ಯಾಸಗಳ C.D. ಕಾಪಿಗಳೂ ದೊರಕುವ ವ್ಯಸ್ಥೆ ಮಾಡಿದೆ. ಅಲ್ಲದೆ, ತಿಂಗಳಿಗೊಮ್ಮೆ ಯಾವುದಾದರೊಂದು ಕತೆಯನ್ನು ಆರಿಸಿ, ಅದರ ಮೇಲೆ ದೂರವಾಣಿಯ ಮೂಲಕ ಚರ್ಚೆ ಮಾಡಿ, ದೇಶದ ವಿವಿಧ ಕಡೆಯಿಂದ ಸದಸ್ಯರು ತಮ್ಮ ಅಭಿಪ್ರಾಯ ಮಂಡಿಸುವ KSR Book Club ಎಂಬ ವ್ಯವಸ್ಥೆ ಕೂಡ ಪ್ರಾರಂಭವಾಗಿದೆ. ವಿವಿಧ ನಗರಗಳಲ್ಲಿ ಸಾಹಿತ್ಯದ ಮೇಲೆ ವಿಚಾರ ಗೋಷ್ಠಿ ಕೂಡ ಆಗಾಗ್ಗೆ ನಡೆಯುತ್ತದೆ. ರಂಗದ ಇಂತಹ ಕಾರ್ಯಕ್ರಮಗಳು ಜನಪ್ರಿಯವಾಗಿದ್ದು, ಅತ್ಯಂತ ಯಶಸ್ಸು ಗಳಿಸಿದೆ. ರಂಗದ ಮೊದಲನೆಯ ಅಧ್ಯಕ್ಷರಾದ ಎಚ್. ವೈ. ರಾಜಗೋಪಾಲ್ ಅವರ ನಿಸ್ವಾರ್ಥ ಸೇವೆಯ ಫಲವಾಗಿ ಅಮೆರಿಕದಾದ್ಯಂತ, ಹಾಗೂ ಕರ್ನಾಟಕದಲ್ಲೂ, ಕನ್ನಡ ಸಾಹಿತ್ಯ ರಂಗದ ಚಟುವಟಿಕೆಗಳ ಬಗ್ಗೆ ಮೆಚ್ಚುಗೆಯ ಮಾತುಗಳು ವ್ಯಕ್ತವಾಗಿವೆ. ಹಾಲೀ ಅಧ್ಯಕ್ಷರಾದ, ಮೈ. ಶ್ರೀ. ನಟರಾಜ ಅವರು ರಂಗದ ಕಾಯ್ರಕ್ರಮಗಳನ್ನು ಯಶಸ್ವಿಯಾಗಿ ನಡೆಸುತ್ತಿದ್ದಾರೆ. ೨೦೧೩ ಮೇ ತಿಂಗಳಲ್ಲಿ ಹ್ಯೂಸ್ಟನ್‌ನಲ್ಲಿ ನಡೆದ ‘ವಸಂತೋತ್ಸವ’ದಲ್ಲಿ, ಹಾಸನದ ಶ್ರೀ ರಾಜಾರಾಯರ ಸಾಹಿತ್ಯ ಕೊಡುಗೆ ಮೇಲೆ ವಿಚಾರ ಗೋಷ್ಠಿ ನಡೆದಿದ್ದು, ಅವರಿಗೆ ಶ್ರದ್ಧಾಂಜಲಿ ಅರ್ಪಿಸಲಾಗಿದೆ. ರಂಗದ ಕಾರ್ಯಕ್ರಮಗಳನ್ನು ಗುರುತಿಸಿ, ಕರ್ನಾಟಕ ಸರಕಾರ ಅಂದಿನ ಅಧ್ಯಕ್ಷರಾದ ರಾಜಗೋಪಾಲ್ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಿದುದು ನಮ್ಮ ಸಂಸ್ಥೆಗೆ ಹೆಮ್ಮೆ ತಂದುಕೊಟ್ಟಿದೆ.
ಮುನ್ನೋಟ:
ಭಾಷೆಯನ್ನು ಉಳಿಸಲು ಮನೆ-ಮನೆಗಳಲ್ಲಿ ಕನ್ನಡವನ್ನೇ ಬಳಸುತ್ತಿರುವುದು ಒಂದು ಶುಭ ಸೂಚನೆ. ಅಮೆರಿಕದ ವಿವಿಧ ನಗರಗಳಲ್ಲಿ ನಮ್ಮ ಎರಡನೆಯ ಪೀಳಿಗೆಯವರಿಗೆ ಕನ್ನಡ ಬೋಧನೆ ಮಾಡಲು, ‘ಕನ್ನಡ ಕಲಿ’ ಶಾಲೆಗಳು ಅಸ್ತಿತ್ವಕ್ಕೆ ಬರುತ್ತಿರುವುದೂ ಸಂತೋಷದ ಸಂಗತಿ. ಆದರೆ, ಇದಕ್ಕೂ ಹೆಚ್ಚಿನ ಕೆಲಸವಾಗಬೇಕೆಂಬುದು ನನ್ನ ಅಭಿಮತ. ಕನ್ನಡ ಸಾಹಿತ್ಯ ಪರಂಪರೆಯ ಪ್ರಭುದ್ಧತೆ, ಅದರ ಶ್ರೀಮಂತಿಕೆ, ನಮ್ಮ ಯುವ ಪೀಳಿಗೆಗೆ ಎಷ್ಟರಮಟ್ಟಿಗೆ ಅನುಭವವಾಗುತ್ತಿದೆ ಎಂಬ ಪ್ರಶ್ನೆ ಇಲ್ಲಿ ಉದ್ಭವವಾಗುತ್ತಿದೆ. ಅಮೆರಿಕದ ಶಾಲೆ ಮತ್ತು ಯುನಿವರ್ಸಿಟಿಯಲ್ಲಿ ಓದುತ್ತಿರುವ ಅವರಿಗೆ ಕನ್ನಡ ಸಾಹಿತ್ಯದ ಪರಿಜ್ಞಾನ ಬಹಳ ಸೀಮಿತವೆಂಬುದನ್ನು ನಾವು ಒಪ್ಪಿಕೊಳ್ಳಲೇ ಬೇಕು. ಇದರ ಪರಿಹಾರಕ್ಕಾಗಿ ಯೋಚಿಸುವ ಸಮಯ ಈಗ ಬಂದಿದೆ. ವಿದೇಶೀಯರಿಗೆ ಮತ್ತು ವಿದೇಶದಲ್ಲಿ ಬೆಳೆಯುತ್ತಿರುವ ದೇಸೀ ಯುವ ಪೀಳಿಗೆಗೆ ನಮ್ಮ ಸಾಹಿತ್ಯದ ಶ್ರೀಮಂತಿಕೆಯನ್ನು ಪರಿಚಯಿಸಲು ಅನುವಾದ ಸಾಹಿತ್ಯ ಬಹಳ ಮುಖ್ಯ ಸ್ಥಾನ ಪಡೆಯುತ್ತದೆ ಎಂದು ನಾನು ನಂಭಿರುತ್ತೇನೆ. ಈ ನಿಟ್ಟಿನಲ್ಲಿ ರಾಮಾನುಜನ್‌ಅವರು ಮಾಡಿದ ಇಂಗ್ಲಿಷ್ ಅನುವಾದ, ‘ಸಂಸ್ಕಾರ’ ಮತ್ತು ‘ಶರಣವಚನಗಳು’ ಒಂದು ದಿಟ್ಟ ಪ್ರಯೋಗವೆಂದೇ ಹೇಳಬೇಕು! ಅಲ್ಲದೆ, SUNY ಯಲ್ಲಿ ಅಧ್ಯಾಪಕರಾಗಿರುವ ಎಸ್.ಎನ್.ಶ್ರೀಧರ ಮತ್ತು ನಾರಾಯಣ ಹೆಗಡೆಯವರು ಕನ್ನಡ ಭಾಷೆ ಮತ್ತು ಸಂಸ್ಕೃತಿಯನ್ನು ಪರಿಚಯ ಮಾಡಿಕೊಡುವುದರಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದಾರೆ.
ನಾನಿಲ್ಲಿ ನಮ್ಮ ಶ್ರೀಮಂತ ಸಾಹಿತ್ಯದ ಸಮರ್ಥ ಅನುವಾದವಾಗಬೇಕೆಂದು ಅಪೇಕ್ಷಿಸುತ್ತಿದ್ದೇನೆ. ನವೋದಯ ಸಾಹಿತ್ಯ ನೇಕಾರರಾದ ಬಿ.ಎಂ.ಶ್ರೀ. ಅವರ ‘ಇಂಗ್ಲಿಷ್ ಗೀತಗಳು’ ನಮ್ಮ ಸಾಹಿತ್ಯದ ಮೇಲೆ ಅಪಾರ ಪ್ರಭಾವ ಬೀರಿದೆ. ಅದು ಇಂಗ್ಲಿಷ್ ಸಾಹಿತ್ಯದಿಂದ ಕನ್ನಡಕ್ಕೆ ಅನುವಾದವಾದಲ್ಲಿ, ಇದೀಗ ಅದರ ‘ಉಲ್ಟಾ’ ನಡೆಯಬೇಕಾದ ಕಾಲ ಬಂದಿದೆ ಎಂದು ನನ್ನ ಅನಿಸಿಕೆ. ಕೂಪ ಮಂಡೂಕದಂತೆ ನಮ್ಮನ್ನೇ ನಾವು ವೈಭವೀಕರಿಸಿಕೊಳ್ಳುವ ಹಂತದಿಂದ ಹೊರಗೆ ಬರಬೇಕಾಗಿದೆ. ಒಂದು ಯುನಿವರ್ಸಿಟಿ ಮಟ್ಟದಲ್ಲಿ ನಮ್ಮ ಸಾಹಿತ್ಯದ ಸಮರ್ಥ ಅನುವಾದವಾದಲ್ಲಿ, ಪಾಶ್ಚತ್ಯರ ಗಮನಕ್ಕೆ ಅದು ಬೀಳುವ ಸಾಧ್ಯತೆ ಹೆಚ್ಚಿನದು ಎಂದು ನಂಬಿದವರಲ್ಲಿ ನಾನೊಬ್ಬ. ಇದಕ್ಕಾಗಿ, ಅಮೆರಿಕದ ಯಾವುದಾದರೊಂದು ಹೆಸರಾಂತ ಯುನಿವರ್ಸಿಟಿಯಲ್ಲಿ ಕನ್ನಡ ಅಧ್ಯಯನ ಕೇಂದ್ತದ ಸ್ಥಾಪನೆಯಾಗಬೇಕಾಗಿದೆ. ಇದಕ್ಕಾಗಿ, ಎಲ್ಲ ಅಮೆರಿಕನ್ನಡಿಗರ ನೈತಿಕ, ಅದಕ್ಕೂ ಹೆಚ್ಚಾಗಿ ಆರ್ಥಿಕ ಬೆಂಬಲ ಅಗತ್ಯ. ಅಮೆರಿಕದ ಕನ್ನಡಿಗರಲ್ಲಿ ಆ ಬಗ್ಗೆ ಹೆಚ್ಚಿನ ಕಾಳಜಿ ಬೆಳೆಯಬೇಕಾಗಿದೆ. ಇಲ್ಲಿನ ಎಲ್ಲ ಕನ್ನಡ ಸಂಘಟನೆಗಳೂ ಮುತುವರ್ಜಿ ವಹಿಸಬೇಕಾಗಿದೆ. ರಾಷ್ಟ್ರೀಯ ಕನ್ನಡ ಸಂಸ್ಥೆಗಳಾದ ‘ಅಕ್ಕ’ ಮತ್ತು ‘ನಾವಿಕ’ ಈ ಬಗ್ಗೆ ಹೆಚ್ಚಿನ ಆಸಕ್ತಿ ವಹಿಸಬೇಕಾಗಿದೆ. ಅಲ್ಲದೆ ಕರ್ನಾಟಕ ಸರಕಾರವೂ ಆಸಕ್ತಿ ವಹಿಸಿ, ಅಮೆರಿಕನ್ನಡಿಗರಿಗೆ ಬೆಂಬಲ ನೀಡಬೇಕು. ಒಟ್ಟಿನಲ್ಲಿ ಇವರೆಲ್ಲರ ಪ್ರಾಮಾಣಿಕ ಪ್ರಯತ್ನದಿಂದಾಗಿ, ಕನ್ನಡ ಅಧ್ಯಯನ ಕೇಂದ್ರ ಸ್ಥಾಪನೆಯಾಗುವುದು ಅಷ್ಟೇನೂ ಕಷ್ಟವಾಗಲಾರದು. ಕನ್ನಡದ ಕೀರ್ತಿ ವಿದೇಶದಲ್ಲೂ ಮೆರೆಯುವಂತಾಗಲಿ!
ಇನ್ನು ಯುನಿವರ್ಸಿಟಿ ಮಟ್ಟದಲ್ಲಿ ಇದು ಸಾಧ್ಯ ಎಂಬುದರ ಬಗ್ಗೆ ಸ್ವಲ್ಪ ವಿವರಣೆ. ಅಂಥ ಯೋಜನೆ ‘ಮರಹತ್ತಿ ಬುಡ ಕಡಿಯುವ ಯೋಚನೆ’ ಎಂದು ಹೇಳುವವರಿದ್ದಾರೆ. ಕನ್ನಡ ಭಾಷೆ ಮತ್ತು ಸಂಸ್ಕೃತಿ ಕಲಿಯುವ ಪ್ರಯತ್ನ ಮೂಲತಃ ಮನೆ-ಮನೆಗಳಲ್ಲಿ ಪ್ರಾರಂಭವಾಗಬೇಕೆನ್ನುವುದು ನಿಜ! ಆದರೆ, ಇಲ್ಲಿ ಮುಂದಿನ ಪೀಳಿಗೆಯವರಿಗೆ ಕನ್ನಡ ಕಲಿಸಬೇಕೆಂಬ ಉದ್ದೇಶದ ಜೊತೆಗೆ ಇನ್ನೂ ಹಿರಿದಾದ ಧ್ಯೇಯವಿರುವುದನ್ನು ಗಮನಿಸಬೇಕು. ಯುನಿವರ್ಸಿಟಿಯಲ್ಲಿ ಉತ್ತಮ ಮಟ್ಟದ ಅನುವಾದವಾಗುವ ಸಾಧ್ಯತೆ ಜಾಸ್ತಿ ಎಂದು ನಾನು ನಂಬಿರುತ್ತೇನೆ. ರಾಮಾನುಜನ್‌ರಂಥ ಸಮರ್ಥರು ಅಂಥ ಕೆಲಸಗಳ ಜವಾಬ್ದಾರಿ ಹೊತ್ತರೆ, ಕನ್ನಡ ಸಾಹಿತ್ಯದ ಕಂಪು ಪಾಶ್ಚಾತ್ಯ ದೇಶಗಳಲ್ಲಿ ಪಸರಿಸಲು ತುಂಬಾ ಅನುಕೂಲ. ಹೆಚ್ಚು ಹೆಚ್ಚಿಗೆ ಸಮರ್ಥ ಅನುವಾದವಾಗುತ್ತಿದ್ದಲ್ಲಿ, ಯಾರಿಗೆ ಗೊತ್ತು ಮುಂದೆ ಕನ್ನಡ ಸಾಹಿತಿಗಳಿಗೆ ‘ನೊಬೆಲ್’ ಪಾರಿತೋಷಕ ದೊರೆಯಲೂ ಬಹುದು. ಹಿಂದೆ ಅಯೋವಾ ಯುನಿವರ್ಸಿಟಿಯಲ್ಲಿ ಕನ್ನಡ ಅಧ್ಯಯನ ಕೇಂದ್ರ ಸ್ಥಾಪನೆ ಮಾಡುವ ಪ್ರಯತ್ನ ಫಲಿಸದೇ ಹೋದುದು ವಿಷಾದಕರ. ಮುಂದಾದರೂ ಒಂದು ಯುನಿವರ್ಸಿಟಿಯಲ್ಲಿ ಅಂತಹ ಅಧ್ಯಯನ ಕೇಂದ್ರ ಸ್ಥಾಪನೆಯಾಗಿ, ಅಲ್ಲಿ ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿಯ ಜೊತೆಗೆ ಅನುವಾದವೂ ನಡೆಯುವ ಸಮಯ ಬಂದೀತೆಂದು ಹಾರೈಸೋಣ.
ಯುನಿವರ್ಸಿಟಿ ಮಟ್ಟವಲ್ಲದೆ, ಅಮೆರಿಕದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮಟ್ಟದಲ್ಲೂ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಸ್ಥಾಪನೆಯಾಗಬೇಕು. ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿರುವ ಶಾಲೆಗಳಲ್ಲಿ ಕನ್ನಡ ಸಂಸ್ಕೃತಿಯ ಪರಿಚಯ ಮಾಡಿಕೊಡುವ ಕೋರ್ಸ್‌ಗಳನ್ನು ಪ್ರಾರಂಭಿಸಲು ಸ್ಥಳೀಯ ಕನ್ನಡ ಸಂಘಟನೆಗಳು ಆಯಾ School District ಮೇಲೆ ಪ್ರಭಾವ ಬೀರಬೇಕು. ನಮ್ಮ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ವಿದೇಶಿಯರನ್ನು ಆಮಂತ್ರಿಸಿ, ಅವರಿಗೆ ಕುತೂಹಲ ಮೂಡುವಂತೆ ಮಾಡುವುದಲ್ಲದೆ, ಅಮೆರಿಕದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ಕರ್ನಾಟಕವನ್ನು ಪ್ರತಿನಿಧಿಸುವ ಕಾರ್ಯಕ್ರಮಗಳನ್ನು ಸೇರಿಸುವಂತೆ ಪ್ರಯತ್ನ ಕೈಗೊಳ್ಳಬೇಕು.
ಇವೆಲ್ಲ ಸಾಧ್ಯವಾಗದ ಕಾರ್ಯಗಳೇನಲ್ಲ. ಮಾಡುವ ಮನಸ್ಸು ಮಾತ್ರ ಬಲವಾಗಿರಬೇಕು! ಇಂಥ ಕಾರ್ಯಕ್ರಮಗಳು ಫಲಿಸಿದಲ್ಲಿ, ಬಹು ಸಂಸ್ಕೃತಿಯೆಂದೇ ಅನಿಸಿಕೊಂಡ ಅಮೆರಿಕವೆಂಬ Fruit Bowlನಲ್ಲಿ ನಮ್ಮ ಸಂಸ್ಕೃತಿಯ ರುಚಿಯನ್ನೂ ಬೆರೆಸಿ, ಅಮೆರಿಕನ್‍ರಿಗೆ ಅದರ ಸವಿ ಉಣಿಸಿದಾಗ, ಅದು ನಾವು ಬಂದು ನೆಲೆಸಿದ ಈ ದೇಶಕ್ಕೆ ನೀಡುವ ಉತ್ತಮ ಕೊಡುಗೆಯಾದೀತು!
* * * * *
ಲೇಖಕನ ಪರಿಚಯ:
ಕರ್ನಾಟಕದ ಕರಾವಳಿಯ ಕೋಟ (ಉಡುಪಿ ಜಿಲ್ಲೆ) ದಲ್ಲಿ ಜನನ. ಇಂಡಿಯನ್ ಇನ್‌ಸ್ಟಿಟ್ಯೂಟ್ ಆಪ್ ಸಯನ್ಸ್ ನಿಂದ ಬಯೋಕೆಮಿಸ್ಟ್ರಿಯಲ್ಲಿ ಪಿ ಎಚ್. ಡಿ ಪಡೆದು, ಹೆಚ್ಚಿನ ತರಬೇತಿಗಾಗಿ, ೬೦ರ ದಶಕದಲ್ಲಿ ಅಮೆರಿಕಕ್ಕೆ ವಲಸೆ ಬಂದರು. USC School of Medicineನಲ್ಲಿ ಮೂರು ವರ್ಷ ತರಬೇತಿ ಪಡೆದು, ಕೆನಡಾದ Western University, London ಮತ್ತು Guelph Universityಯಲ್ಲಿ Teaching Asst. ಆಗಿ ಕೆಲಸ ಮಾಡಿ, ಮುಂದೆ ೨೭ ವರ್ಷ University of Chicagoದಲ್ಲಿ ಸಂಶೋಧನಾ ಪ್ರಾಧ್ಯಾಪಕರಾಗಿ ಕೆಲಸ ಮಾಡಿ, ೨೦೦೧ರಲ್ಲಿ ನಿವೃತ್ತರಾಗಿದ್ದಾರೆ. ತಮ್ಮ ನಿವೃತ್ತ ಜೀವನವನ್ನು ಸಹಧರ್ಮಿಣಿ ಲಕ್ಷ್ಮಿಯ ಜೊತೆ ದಕ್ಷಿಣ ಕ್ಯಾಲಿಫೋರ್ನಿಯದ ಆರ್ಕೇಡಿಯದಲ್ಲಿ ಕಳೆಯುತ್ತಿದ್ದಾರೆ. ತಮ್ಮ ನಿವೃತ್ತ ಜೀವನದಲ್ಲಿ, ಹವ್ಯಾಸಕ್ಕೆಂದು ಅಷ್ಟಿಷ್ಟು ಬರಹದಲ್ಲಿ ತೊಡಗಿಸಿಕೊಂಡು, ಕೆಲವು ಗಂಥಗಳನ್ನು ಪ್ರಕಟಿಸಿದ್ದಾರೆ. ಇವರು ಅಮೆರಿಕದ ‘ಕನ್ನಡ ಸಾಹಿತ್ಯ ರಂಗ’ದ ಸ್ಥಾಪಕ ಸದಸ್ಯರು.