ಆಹಿತಾನಲ, ಆರ್ಕೇಡಿಯ, ದ. ಕ್ಯಾಲಿಫೋರ್ನಿಯ
ಸಾರಸ್ವತಲೋಕದ ಒಬ್ಬ ಶ್ರೇಷ್ಠ ಸಾಹಿತ್ಯಚಿಂತಕರೆನಿಸಿದ, ಶ್ರೀ ಜಿ.ಎಸ್.ಶಿವರುದ್ರಪ್ಪನವರ ಸಾಹಿತ್ಯ ಸೇವೆಯನ್ನು ಮೆಚ್ಚದರವರಾರು? ಅವರ ಕವನ ಸಂಗ್ರಹಗಳಂತೂ ಜನಪ್ರಿಯವಾಗಿದೆಯೆಂಬುದನ್ನು ಎಲ್ಲರೂ ಒಪ್ಪಿಕೊಳ್ಳಲೇ ಬೇಕು. ‘ಸಾಮಗಾನ’ದಿಂದ (೧೯೫೧) ಪ್ರಾರಂಭವಾದ ಅವರ ಸಾಹಿತ್ಯ ಲಹರಿ, ಅರ್ಧ ಶತಮಾನಕ್ಕೂ ಮಿಕ್ಕಿ ಇಂದಿನವರೆಗೂ ಹರಿಯುತ್ತಿದೆ. ಅಂತಹ ಸಾಹಿತ್ಯ ತೀರ್ಥವನ್ನು ಸೇವಿಸಿ ಅನೇಕರು ‘ಪಾವನ’ಗೊಂಡಿದ್ದಾರೆ; ತಮ್ಮ ಸಾಹಿತ್ಯಾಸಕ್ತಿಯನ್ನು ಅಭಿವೃದ್ಧಿಪಡಿಸಿಕೊಂಡಿದ್ದಾರೆ. ಕವನಗಳಲ್ಲದೆ, ವಿಮರ್ಶೆ, ಪ್ರವಾಸ ಗ್ರಂಥ, ಮುಂತಾದ ಸಾಹಿತ್ಯ ಪ್ರಕಾರಗಳಲ್ಲೂ ಅವರು ಸೇವೆ ಸಲ್ಲಿಸಿದ್ದಾರೆ.
ಅಮೆರಿಕಕ್ಕೆ ಬಂದಾಗಲೆಲ್ಲ ಸಾಮಾನ್ಯವಾಗಿ ನಮ್ಮ ಮನೆಗೂ ಅವರು ಭೇಟಿ ಕೊಡುತ್ತಿದ್ದರು. ಅಂತಹ ಒಂದು ಭೇಟಿ ಸಮಯದಲ್ಲಿ ಕಾಫೀ ಟೇಬಲ್ ಮುಂದೆ, ನಮ್ಮ-ನಮ್ಮಲ್ಲಿ ನಡೆದ ಸಾಹಿತ್ಯಿಕ ಸಂವಾದವೇ ಹಿಂದೆ ಬರೆದ ಈ ಲೇಖನ. ಈಗ ನಮ್ಮನ್ನಗಲಿದ ಶಿವರುದ್ರಪ್ಪನವರಿಗೆ ನಮ್ರತೆಯಿಂದ ಈ ಲೇಖನವನ್ನು ಶ್ರದ್ಧಾಂಜಲಿಯಾಗಿ ಅರ್ಪಿಸುತ್ತಿದ್ದೇನೆ.
* * * * *
ಶಿವರುದ್ರಪ್ಪನವರಿನ್ನೂ ಮಹಡಿ ಮೇಲೆ ಮಲಗಿದ್ದರು. ಸ್ವಲ್ಪ ಮುಂಚೆ ಎದ್ದ ನಾನು ಕೆಳಗಡೆ ಅಡುಗೆ ಮನೆಯಲ್ಲಿ, ಅವರ ‘ಕಾಣದ ಕಡಲಿಗೆ ಹಂಬಲಿಸುತಿದೆ ಮನ……’ ಎಂಬ ಕವನವನ್ನು ಅಶ್ವಥ್‍ರು ಹಾಡಿದ ದಾಟಿಯಲ್ಲಿ ಗುನುಗುತ್ತಿದ್ದೆ. ಎಚ್ಚೆತ್ತು ಕೆಳಗೆ ಬಂದು ನಮ್ಮ Kitchen Tableನ ಮುಂದೆ ಕುಳಿತು ಕಾಫೀ ಹೀರುತ್ತಾ ಜಿ.ಎಸ್.ಎಸ್.ರು – ಅಶ್ವಥ್‌ರು ಆ ಕವನಕ್ಕೆ ಮಧುರ ದಾಟಿ ಹಾಕಿ ಜನಪ್ರಿಯವಾಗುವಂತೆ ಮಾಡಿದ್ದಾರೆಂದೂ, ಅದನ್ನು ತಾವು ಕವನ ಬರೆಯುವ ಮೊದಲ ದಿನಗಳಲ್ಲಿ ರಚಿಸಿದ್ದುದೆಂದೂ ಹೇಳಿದರು. ಪ್ರಾರಂಭಿಸಿದ ಸಂಭಾಷಣೆಯನ್ನು ಮುಂದುವರಿಸಲು ನಾನು ಆ ಕವನವನ್ನು ಬರೆಯಲು ಯಾವುದು ಪ್ರೇರಕವಾಯ್ತೆಂದು ಕೇಳಿದೆ. ಅದಕ್ಕೂ ಮೊದಲು ಆ ಕವನದ ಮೇಲೆ ನನ್ನದೇ ಆದ ಭಾವನೆಯನ್ನೂ ಕೊಟ್ಟಿದ್ದೆ. ಅದೇನೆಂದರೆ, ಕಾಣದ ಪರಮಾತ್ಮನನ್ನು ಹುಡುಕಿಕೊಂಡು ಹೋಗುತ್ತ ಅವನೊಡನೆ ಸೇರುವ ಆತ್ಮನ ಹಂಬಲವನ್ನು ಆ ಕವನ ವಿವರಿಸುತ್ತದೆ ಎಂದು. ಆಗ ಜಿ.ಎಸ್.ಎಸ್.ರು, ಯಾವುದೇ ಕವನವನ್ನು ಅವರವರ ಊಹೆಗನುಸಾರವಾಗಿ ವ್ಯಾಖ್ಯಾನ ಮಾಡುವುದರಲ್ಲಿ ತಪ್ಪೇನಿಲ್ಲ; ಆದರೆ, ಆ ಕವನವನ್ನು ಬರೆಯಲು ತಮ್ಮ ಉದ್ದಿಶ್ಯ ನಾನೆಂದತಾಗಿರಲಿಲ್ಲ. ಆದರೂ, ತಮ್ಮ ನಿಜವಾದ ಉದ್ದಿಶ್ಯ ಜ್ಞಾಪಕವಿಲ್ಲ, ಯಾಕೆಂದರೆ ಅದನ್ನು ಬರೆದುದು ತಮ್ಮ ಎಳೆಯ ವಯಸ್ಸಿನಲ್ಲಿ. ಬಹುಶಃ, ತಮ್ಮೊಳಗೇ ಕುದಿಯುತ್ತಿರುವ – ಕವನ ಬರೆಯಬೇಕು, ಕವಿಯಾಗಬೇಕು, ಬದುಕಿನ ಅಂದ ಚೆಂದ, ಕಷ್ಟ-ಕಾರ್ಪಣ್ಯಗಳ ಅರಿವನ್ನೂ, ಪ್ರಕೃತಿ-ಜೀವನಗಳ ಸಂಬಂಧವನ್ನೂ ಅರಿತು, ಅದನ್ನು ಕವನಗಳ ಮೂಲಕ ಅಭಿವ್ಯಕ್ತಗೊಳಿಸುವ ಒಂದು ತವಕ, ಮಹತ್ವಾಕಾಂಕ್ಷೆಯೇ ಆ ಕವನ ಬರೆಯಲು ಪ್ರೇರಣೆ ಒದಗಿಸಿಕೊಟ್ಟಿರಬಹುದು ಎಂದರು. ಹೀಗೆ, ನಮ್ಮಿಬ್ಬರೊಳಗೆ ನಡೆದ ಆ Kitchen Table mini-session ಅಥವಾ ‘ಕಾಫೀ ಟೇಬಲ್ ಚುಟುಕ’ವು ಅವರಿದ್ದ ಐದು ದಿನಗಳವರೆಗೂ ಮುಂದುವರಿಯಿತು. ನಾನು ಆ ದಿನಗಳನ್ನು ‘ರಸನಿಮಿಷ’ಗಳೆಂದು ಎಣಿಸಿದ್ದೇನೆ. ಅಂತಹ ಅವಕಾಶ ನನಗೆ ದೊರಕಿದ್ದುದ್ದು ಮಹತ್ವವಾದುದೆಂದು ನಾನು ತಿಳಿದಿದ್ದೇನೆ. ನನ್ನಾಕೆ ಲಕ್ಷ್ಮಿಯೂ, ಈ ನಮ್ಮ ಸಂಭಾಷಣೆಗಳಲ್ಲಿ ಭಾಗವಹಿಸಿ, ಜಿ.ಎಸ್.ಎಸ್.ರಿಂದ ಅನೇಕ ಅಭಿಪ್ರಾಯಗಳನ್ನು ಪಡೆಯುವುದರಲ್ಲಿ ಸಹಭಾಗಿಯಾಗಿದ್ದಾಳೆ.
ಸಾಹಿತ್ಯ ಮತ್ತು ಜನಜೀವನ:
ಸಾಹಿತ್ಯಕ್ಕೂ, ಜನಜೀವನಕ್ಕೂ ಇರುವ ನಿಕಟ ಸಂಬಂಧವನ್ನು ಜಿಎಸ್‍ಎಸ್ ರು ಈ ರೀತಿ ಸ್ವಾರಸ್ಯವಾಗಿ ವಿವರಿಸುತ್ತಾರೆ: ಸಾಹಿತ್ಯವೆಂದರೆ ‘ಜೀವನವನ್ನು ಗ್ರಹಿಸುವ ಮತ್ತು ವ್ಯಾಖ್ಯಾನಿಸುವ ಕ್ರಮ’. ಇದು ಕವಿಯ ಮುಖ್ಯ ಉದ್ದಿಶ್ಯವಾಗಿರಬೇಕು. ಇದಕ್ಕೆ ಅವರ ಕಲ್ಪನಾಶಕ್ತಿ, ಪ್ರಭಾವಶಕ್ತಿ ಹಿನ್ನೆಲೆ ಒದಗಿಸುತ್ತದೆ. ವಾಸ್ತವಿಕ ಸಂಗತಿಗಳ ಎಲ್ಲೆಯನ್ನೂ ಮೀರಿದ ಈ ಮಹಾ ಶಕ್ತಿಯು ಕವಿತೆಯಲ್ಲಿ ಮೂಡಿ ಬರಬೇಕು. Colridgeರು ಹೇಳಿದ The willing suspension of disbilief for the moment constitutes the poetic faith – ಎಂಬ ಮಾತನ್ನು ವ್ಯಾಖ್ಯಾನಿಸುತ್ತ, ಆ ನಿಲುವಿಗೂ ತಮ್ಮ ನಿಲುವಿಗೂ ಇರುವ ವ್ಯತ್ಯಾಸವನ್ನು ಈ ರೀತಿ ವಿವರಿಸಿದರು. ತಮ್ಮ ಭಾವನೆಯಲ್ಲಿ ‘disbilief’ ಎಂಬುದೇ ಇಲ್ಲ; ಪರಿಣಾಮವಾಗಿ ಅದನ್ನು ‘suspend’ ಮಾಡುವ ಅವಶ್ಯಕತೆಯೇ ಇಲ್ಲ. ಏನೊಂದೂ ಅನುಮಾನಾಸ್ಪದವಿಲ್ಲದೇ ಕವಿಯು ನೀಡಿದ ಆ ಕಲ್ಪನಾಲೋಕಕ್ಕೆ ಓದುಗರನ್ನು ಕರೆದೊಯ್ಯುವ ಚಮತ್ಕಾರ ಕವನದಲ್ಲಿರಬೇಕು. ಉದಾಹರಣೆ ಕೊಡುತ್ತ ಅವರು ಪು.ತಿ.ನ. ರವರ ಒಂದು ಕವನದ ಸಾಲನ್ನು ಉಲ್ಲೇಖಿಸಿದರು:
‘ಏನೀಕ್ಷಿಸಲಿಂತರಳಿದೆ ತಾವರೆ ಹೂ ದಿಟ್ಟಿ’
ಈ ಚರಣದಲ್ಲಿ ತಾವರೆಗೆ ಒಂದು ದೃಷ್ಟಿಯನ್ನೇ ಅವರು ಕೊಟ್ಟಿದ್ದಾರೆ; ಓದುಗನು ಅನುಮಾನವಿಲ್ಲದೆ ಅದನ್ನು ಗುರುತಿಸಬೇಕು. ದೇವಸ್ಥಾನದಲ್ಲಿ ‘ತೀರ್ಥ’ ಸೇವಿಸುವಾಗ ಯಾವ ಅನುಮಾನವೂ ಇಲ್ಲದಿರುವಂತೆ, ಕವನಗಳ ಈ ಊಹಾಪ್ರಯೋಗಗಳನ್ನು ಏನೊಂದೂ ಅನುಮಾನವಿಲ್ಲದೆ ಗ್ರಹಿಸಿಕೊಳ್ಳಬೇಕು. ‘Faith’ನ್ನು ಕವಿಯು ಚಮತ್ಕಾರದಿಂದ, ಅನುಮಾನವೇ ಬಾರದಂತೆ, ಓದುಗರಲ್ಲಿ ಕಲ್ಪಿಸುತ್ತಾನೆ. ‘ಅದುವೆ ಕೆಂಪಿನ ಪೆಂಪು, ಕಂಪಿನ ಇಂಪು’ ಎಂದಾಗ ಒಂದು ಹೂವಿನ (ಚೆಂಗುಲಾಬಿ ಎಂದು ಊಹಿಸಿಕೊಳ್ಳೋಣ) ‘ಕೆಂಪು’, ಕಂಪನ್ನೂ ಸೂಸುತ್ತಿರುತ್ತದೆ, ಆ ‘ಕಂಪಿ’ಗೆ ಕವಿ ’ಇಂಪ’ನ್ನೂ ಬೆರಸಿ, ಓದುಗನಿಗೊಂದು ಅನನ್ಯ ಹಿತ ಭಾವನೆ ಹುಟ್ಟುವಂತೆ ಮಾಡಿ, ತನ್ನ ಚಮತ್ಕಾರವನ್ನು ಪ್ರದರ್ಶಿಸುವುದಲ್ಲದೆ, ಓದುಗರ ಊಹೆಯನ್ನೂ ಕೆರಳುವಂತೆ ಮಾಡುತ್ತಾನೆ. ಇದನ್ನು ಯಾವ ತೊಡಕೂ ಇಲ್ಲದೆ ಕಲ್ಪಿಸಿಕೊಳ್ಳುವಂತಿರಬೇಕು. ಅದು ವಾಸ್ತವಿಕದ ಮೇರೆಯನ್ನು ದಾಟಿ, ನಮ್ಮ ಕಲ್ಪನಾಶಕ್ತಿಯನ್ನು ಪ್ರಚೋದಿಸಿ, ಒಂದು ವಿಶಿಷ್ಟ ಅನುಭವವನ್ನು ಕೊಡುವುದು. ಇಂತಹ ಕೆರಳಿಸುವ ಶಕ್ತಿ ನಿಜವಾದ ಕವಿಗಿದೆ; ಈ ಶಕ್ತಿ ಹೆಚ್ಚಿದಷ್ಟೂ ಕವನದ ಸವಿಯೂ, ಸತ್ವವೂ, ಹೆಚ್ಚುತ್ತದೆ. ಮುಂದುವರಿಯುತ್ತ, ಅವರು ಕವಿಯೂ ಒಬ್ಬ ಸಂಶೋದಕ, ವಿಜ್ಞಾನಿಯಂತೆ. ವಿಜ್ಞಾನಿಯು ಸತ್ಯವನ್ನು ಹುಡುಕುತ್ತಾನೆ; ಕವಿ ಸೌಂದರ್ಯವನ್ನು ಹುಡುಕುತ್ತಾನೆ. ಸತ್ಯ ಮತ್ತು ಸೌಂದರ್ಯಗಳಲ್ಲಿ ನಿಕಟ ಸಂಬಧವಿದೆ. ‘Beauty is Truth, Truth is Beauty’ ಎಂಬುದರಲ್ಲಿ ತಮಗೆ ಸಂಪೂರ್ಣ ನಂಬಿಕೆ ಇದೆ. ‘ಸತ್ಯಂ ಶಿವಂ ಸುಂದರಂ’ ಎಂದು ಋಷಿಗಳು ಹೇಳಿದ್ದ ಮಾತು ಅಕ್ಷರಶಃ ನಿಜ. ಸೌಂದರ್ಯದ ಹುಡುಕಾಟದಲ್ಲಿ ಕವಿಯು ಜೀವನ-ಪ್ರಕೃತಿಗಳಲ್ಲಿ ಅಡಗಿರುವ ಸತ್ಯವನ್ನು ಗುರುತಿಸಿ, ತಾನು ಕಂಡ ಆ ಸತ್ಯವನ್ನು ಓದುಗರಲ್ಲಿ ಹಂಚಿಕೊಳ್ಳುತ್ತಾನೆ. ಇದು ಕವಿಯಾದವನ ಮಹತ್ವ ಗುರಿ. ಸರ್ ಸಿ.ವಿ.ರಾಮನ್ ಹೇಳಿದ – ‘Eyes are the windows of the soul to percieve the external world’ ಎಂಬ ಮಾತು ಸತ್ಯವನ್ನು ಸಂಶೋಧಿಸುವ ವಿಜ್ಞಾನಿಯು ಸಾಹಿತಿಯ ಮಾತನ್ನೇ ಪ್ರತಿಧ್ವನಿಸಿದಂತಿದೆ. ಹೀಗೆ ಒಬ್ಬ ವಿಜ್ಞಾನಿ ಕಲೋಪಾಸಕನಾಗಬಲ್ಲ; ಕವಿಯಾಗಬಲ್ಲ; ತತ್ತ್ವಜ್ಞಾನಿಯೂ ಆಗಬಲ್ಲ.
ಕಾಣದ ಕಡಲಿನ ಮೊರೆತದ ಜೋಗುಳ:
‘ಕಾಣದ ಕಡಲಿನ’ ಪ್ರಸ್ತಾಪ ತಿರುಗಿ ಬಂತು. ಆ ಬಗ್ಗೆ ಮಾತಾಡುತ್ತ, ತಮ್ಮ ತುಡಿತದ ವಿಚಾರವಾಗಿ ಹೆಚ್ಚಿನ ವಿವರಣೆ ಕೊಟ್ಟರು. ಕವಿಯಾಗಬೇಕೆಂಬ ಮಹತ್ವಾಕಾಂಕ್ಷೆಯು ಅದೆಲ್ಲೋ ತಮ್ಮೊಳಗೇ ಅಡಗಿ ಕುಳಿತಿದ್ದು ‘ಕಡಲಿನ ಮೊರೆತದ ಜೋಗುಳ ಒಳಗಿವಿಗಿಂದಿಗೂ ಕೇಳುತಿದೆ’ ಎಂಬಲ್ಲಿ ವ್ಯಕ್ತವಾಗುವುದು. ಇದು ಆ ಆಕಾಂಕ್ಷೆಯ ಭ್ರೂಣ ಅವಸ್ತೆಯನ್ನು ಸೂಚಿಸುವುದೇನೋ! ‘ಜಟಿಲ ಕಾನನ’, ‘ಕುಟಿಲ ಪಥ’ಗಳು ಆ ಹಂಬಲವನ್ನು ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ಎದುರಿಸಬೇಕಾದ ಸಮಸ್ಯೆಗಳ ಅರಿವು ಮಾಡಿಕೊಡುತ್ತದೆ. ಆ ಅಕಾಂಕ್ಷೆಗೆ ಮೇರೆ ಇಲ್ಲ; ಸಾಗರದ ಅಪಾರತೆಯನ್ನು ಕೂಡುವ ಏಕೈಕ ಹಂಬಲ ಮಾತ್ರ. ಇದು ಕುವೆಂಪುರವರ ‘ಅನಿಕೇತನ’ ಕವನದ ನೆನಪನ್ನು ಮಾಡಿಕೊಡುತ್ತದೆ. ‘ಓ ನನ್ನ ಚೇತನ, ಆಗು ನೀ ಅನಿಕೇತನ….’ ಎಂದು ತಮ್ಮೊಳಗಿನ ಚೇತನವನ್ನು ಹೊಡೆದೆಬ್ಬಿಸಿ, ಎಲ್ಲ ಮೇರೆಗಳನ್ನು ಮೀರಿ ‘ಅನಂತವಾಗಿ’ರಲು ಪ್ರಚೋದಿಸುತ್ತಾರೆ ಕುವೆಂಪು ತಮ್ಮ ಕವನದಲ್ಲಿ. ‘ಕಾಣದ ಕಡಲಿ’ನಲ್ಲೂ ಅಂತಹದೇ ಮರುಧ್ವನಿ ಕೇಳಿಸುತ್ತದೆ.
ಕುವೆಂಪುರವರ ಹೆಸರು ಬಂದಾಗಲೆಲ್ಲ ಜಿ.ಎಸ್.ಎಸ್.ರ ಕಂಠ ಗದ್ಗರಿಸುತ್ತದೆ, ಕಣ್ಣಿಂದ ಕೃತಜ್ಞತೆಯು ಹರಿದು ಬರುವಂತಿರುತ್ತದೆ. ಅವರ (ಕುವೆಂಪುರವರ) ಬಾಲ್ಯದ ವಿಚಾರ ಹಾಗೂ ಕವಿಯಾಗಲು ಎದುರಿಸಿದ ಕೆಲವು ಹಿನ್ನೆಲೆಗಳ ವಿವರಗಳನ್ನು ಹೇಳುವಾಗಲಂತೂ ಜಿ.ಎಸ್.ಎಸ್.ರು ಉತ್ಸಾಹಭರಿತರಾಗುತ್ತಾರೆ. ಅವರ ಹೃದಯ ತುಂಬಿ ಬಂದಿರುವುದು ವ್ಯಕ್ತವಾಗುತ್ತದೆ. ತಮ್ಮ ಮಾರ್ಗದರ್ಶಕ, ಗುರು, ತನ್ನಲ್ಲಿರುವ ಆಸಕ್ತಿಯನ್ನು ಪ್ರಚೋದಿಸಿದವರು, ಎಂದೆಲ್ಲ ನೆನೆದಾಗ ಅವರಲ್ಲಿ ನಮ್ರತೆಯ ಭಾವನೆ ಉಕ್ಕಿ ಹರಿಯುವುದು ಸ್ಪಷ್ಟವಾಗುತ್ತದೆ. ಅವರ ಕೃತಜ್ಞತೆಯು ಈ ಕೆಳಗಿನ ಕವನದ ಸಾಲುಗಳಲ್ಲಿ ವ್ಯಕ್ತವಾಗುವುದು:
‘ನಿಶ್ಶಬ್ದದಲ್ಲಿ ನಿಂತು ನೆನೆಯುತ್ತೇನೆ
ನಿಮ್ಮಿಂದ ನಾ ಪಡೆದ ಹೊಸ ಹುಟ್ಟುಗಳ, ಗುಟ್ಟುಗಳ.
ನೀವು ಕಲಿಸಿದಿರಿ ನನಗೆ ತಲೆ ಎತ್ತಿ ನಿಲ್ಲುವುದನ್ನು,
ಕಿರುಕುಳಗಳಿಗೆ ಜಗ್ಗದೆ ನಿರ್ಭಯವಾಗಿ ನಡೆಯುವುದನ್ನು,
ಸದ್ದಿರದೆ ಬದುಕುವುದನ್ನು.
ಎಷ್ಟೊಂದು ಕೀಲಿ ಕೈಗಳನು ದಾನ ಮಾಡಿದ್ದೀರಿ
ವಾತ್ಸಲ್ಯದಿಂದ; ನಾನರಿಯದನೇಕ
ಬಾಗಿಲುಗಳನು ತೆರೆದಿದ್ದೀರಿ ನನ್ನೊಳಗೆ;
ಕಟ್ಟಿ ಹರಸಿದ್ದೀರಿ ಕಂಕಣವನ್ನು ಕೈಗೆ.’
ಇದಕ್ಕಿಂತ ಹೆಚ್ಚಿನ ಗೌರವ ಯಾವ ಗುರುವಿಗೆ ಬೇಕು? ಕುವೆಂಪುರವರ ಮಾರ್ಗದರ್ಶನದಲ್ಲಿ ಕನ್ನಡದಲ್ಲಿ ಪಿಎಚ್.ಡಿ ಪದವಿ (‘ಸೌಂದರ್ಯ ಸಮೀಕ್ಷೆ’ ಎಂಬ ಪ್ರೌಢ ಪ್ರಬಂಧಕ್ಕೆ) ಪಡೆದ ಇಬ್ಬರಲ್ಲಿ ಇವರೊಬ್ಬರು ಎಂಬುದನ್ನು ಇಲ್ಲಿ ನೆನೆಯಬಹುದು. ಇನ್ನೊಬ್ಬರು ಶ್ರೀ ಪ್ರಭುಶಂಕರ ಅವರು. ಕುವೆಂಪುರವರ ಪ್ರೋತ್ಸಾಹದಿಂದಲೆ ಅವರಿಗೆ ರಾಮಕೃಷ್ಣಾಶ್ರಮದ ಸಂಪರ್ಕ ಬೆಳೆದಿತ್ತು. ಕುವೆಂಪುರವರ ರಾಮಕೃಷ್ಣಾಶ್ರಮದ ಮೇಲಿನ ಅಚಲ ಆಸಕ್ತಿಯನ್ನು ವಿವರಿಸುತ್ತ,‘Kuvempu is a voice in Kannada for Vivekananda’ ಎನ್ನುತ್ತ ಗುರುವಿಗೆ ತಮ್ಮ ವಿಶೇಷ ಗೌರವವನ್ನು ಸಲ್ಲಿಸುತ್ತಾರೆ.
‘ಎದೆತುಂಬ ಹಾಡಿದೆನು’:
ಮಾತು ಅವರ ವಿದ್ಯಾಭ್ಯಾಸ ಮತ್ತು ಅವರು ಆ ಬಗ್ಗೆ ಪಟ್ಟ ಶ್ರಮಗಳ ಕಡೆಗೆ ತಿರುಗಿತು. ತಮ್ಮ ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡಿದ ಹಲವರನ್ನು ನೆನೆಸಿಕೊಳ್ಳುತ್ತ, ಶ್ರೀ ತ. ಸು. ಶಾಮರಾಯರು ನೀಡಿದ ಪ್ರೋತ್ಸಾಹವನ್ನು ಮನಸಾರೆ ಹೊಗಳಿದರು. ಶಾಮರಾಯರನ್ನು ‘ವಾತ್ಸಲ್ಯದ ಪ್ರತಿಮಾ ಸ್ವರೂಪರು’ ಎಂದೂ, (ಅದೇ ಶೀರ್ಷಿಕೆಯಲ್ಲಿ ತಮ್ಮ ‘ಚದುರಿದ ಚಿಂತನೆಗಳು’ ಎಂಬ ಪ್ರಬಂಧ ಸಂಕಲನದಲ್ಲಿ ಶಾಮರಾಯರಿಗೆ ಗೌರವ ಸಲ್ಲಿಸಿದ್ದಾರೆ) ಅವರ ವಾತ್ಸಲ್ಯವೇ ಇಂದು ತಾನೊಬ್ಬ ಕವಿ ಎಂದೆನಿಸಿಕೊಳ್ಳುವಂತಾಗಿದೆ ಎಂದು ಬಿಗಿದ ಕಂಠದಲ್ಲಿ ನುಡಿಯುತ್ತ ತಮ್ಮ ಕೃತಜ್ಞತೆಯನ್ನು ಸಲ್ಲಿಸಿದರು. ತಾವು ಎಳೆಯ ವಯಸ್ಸಿನಲ್ಲಿ ಬರೆದ ಹಲವು ಕವನಗಳನ್ನು ಅವರ ಒತ್ತಾಯದಿಂದಲೇ ಅವರ ಮುಂದೆ ಓದಿದಾಗ ಅವರು ನೀಡಿದ ಬೆಂಬಲ, ಸಲಹೆ, ಮೆಚ್ಚುಗೆಗಳು ತಮಗೆ ಅಪಾರ ಪ್ರೋತ್ಸಾಹವನ್ನು ದೊರಕಿಸಿಕೊಟ್ಟಿದೆ ಎಂದು ಹೇಳಿದರು.
‘ಎದೆ ತುಂಬಿ ಹಾಡಿದೆನು ಅಂದು ನಾನು
ಮನವಿಟ್ಟು ಕೇಳಿದಿರಿ ಅಲ್ಲಿ ನೀವು ….’
ಎಂಬ ಅವರ ಜನಪ್ರಿಯ ಕವನವು ಶಾಮರಾಯರಿಗೆ ಅರ್ಪಿಸಲೆಂದೇ ಬರೆದ ಕವನವೆಂದೂ, ‘ಸಾಕೆನಗೆ ಅದುವೆ ಬಹುಮಾನ; ಹಾಡು ಹಕ್ಕಿಗೆ ಬೇಕೆ ಬಿರುದು ಸನ್ಮಾನ’ ಎಂದು ‘ಎದೆ ತುಂಬಿ’ ನುಡಿದರು.
ತಮ್ಮ ಕವನಗಳನ್ನು ಸುಶ್ರಾವ್ಯವಾಗಿ ಹಾಡಿ ಜನಪ್ರಿಯ ಮಾಡಿದ ಹಲವು ಕಲಾವಿದರನ್ನು ಅವರು ಮನಸಾರೆ ಅಭಿನಂದಿಸುತ್ತಾರೆ. ‘ಎದೆ ತುಂಬ ಹಾಡಿದೆನು …..’ ಮೊದಲಿಗೆ ಹಾಡಿದ ಶ್ರೀಮತಿ ಎಚ್. ಆರ್. ಲೀಲಾವತಿ, ಆಮೇಲೆ ಹಾಡಿದ ಮೈಸೂರು ಅನಂತಸ್ವಾಮಿ, ‘ಉಡುಗಣ ವೇಷ್ಟಿತ…’ ಹಾಡಿದ ರತ್ನಮಾಲಾ ಪ್ರಕಾಶ್, ‘ಕಾಣದ ಕಡಲಿಗೆ ….’ ಹಾಡಿದ ಅಶ್ವಥ್ ಇವರೆಲ್ಲ ಇಂತಹ ಹಲವು ಕಲಾವಿದರಲ್ಲಿ ಕೆಲವರು. ಮೇಲೆ ಕಾಣಿಸಿದ ಕವನಗಳಲ್ಲದೆ ಇತರ ಕವನಗಳೂ ಧ್ವನಿ ರೂಪಕವಾಗಿ ಜನರ ಮೆಚ್ಚುಗೆಯನ್ನು ಪಡೆದಿದೆ. ಆದರೆ, ತಾವು ತಮ್ಮ ಕಲೆಯನ್ನು ಮಾರಲೊಪ್ಪುವುದಿಲ್ಲ. ಅದೇ ಉದ್ದಿಶ್ಯದಿಂದ ತಾವು ಕವನ ಬರೆಯುವುದಲ್ಲ; ಅಂತಹ ನಿಲುವಿಗೆ ತಾವು ಸಂಪೂರ್ಣ ವಿರೋಧಿ ಎಂದು ಹೇಳುತ್ತಾರೆ. ಕವನಗಳು ಕೆಸೆಟ್ ಮೂಲಕ ಜನಸಾಮಾನ್ಯರನ್ನು ಸೇರಿದಾಗ ಅದು ಒಂದು ಬೋನಸ್ ಎಂದು ತಿಳಿಯಬೇಕು. ಕೆಲವೊಮ್ಮೆ, ರಾಗ ಹಾಕಿ ಹಾಡಿದರೆ ಕವದಲ್ಲಿರುವ ಭಾವಗಳು ಬಹಳ ಸಮರ್ಪಕವಾಗಿ ವ್ಯಕ್ತವಾದರೂ, ಅನೇಕ ಕವನಗಗಳು ರಾಗ ಜೋಡಿಸಲು ಅನುಕೂಲವಿಲ್ಲದೆ, ಬರಿದೆ ಕವನ ಓದುವ ರೀತಿಯಲ್ಲಿ ಓದಿಯೇ ಅದರೊಳಗಿನ ಭಾವನೆಗಳು ಚೆನ್ನಾಗಿ ಮೂಡಿಬರುವಂತೆ ಮಾಡಬಹುದು ಎಂಬುದು ಅವರ ಮತ. ಅವರು ಬರೆದ ಇತರ ಅನೇಕ ಕವನಗಳು, ‘ಕೆಸೆಟ್’ಗಳಾಗದಿದ್ದರೂ, ಅತ್ಯಂತ ಜನಪ್ರಿಯವಾಗಿದ್ದುದನ್ನು ನಾವಿಲ್ಲಿ ನೆನೆಸಿಕೊಳ್ಳಬಹುದು. ತಮ್ಮ ಅನೇಕ ಕವನಗಳಿಗೆ ಮಧುರ ದನಿ ಜೋಡಿಸಿ ಹಾಡಿದ ಶ್ರೀ ಅಶ್ವಥ್ ರನ್ನು ಬಹಳವಾಗಿ ಪ್ರಶಂಸಿಸಿದರು.
‘ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ?’:
ಜೀವನ ಮತ್ತು ಪ್ರಕೃತಿ ಸಂಬಂಧಗಳ ಬಗ್ಗೆ ಮಾತನಾಡುವಾಗ ಅವರು ತುಂಬ ಉತ್ಸಾಹಭರಿತರಾಗುತ್ತಾರೆ. ಸಸ್ಯಗಳು ಹುಟ್ಟಿ, ಬೆಳೆದು ಫಲಿಸಿ, ಸಾಯುವಂತೆ ಮನುಷ್ಯ ಜೀವನವೂ ಅದೇ ಕ್ರಮಗಳನ್ನು ಅನುಸರಿಸುತ್ತ ಸಾಗುತ್ತದೆ. ಪ್ರಕೃತಿಗೂ ಜನಜೀವನಕ್ಕೂ ನಿಕಟವಾದ ಸಂಬಂಧವಿದೆ. ಪ್ರಕೃತಿಯ ವಿಸ್ತೃತವೇ ಮಾನವ ಜೀವನ. ಉದಾಹರಿಸುತ್ತ ತಾವು ಹಿಂದೆ ಬರೆದ ‘ಶಾರದೆ’ ಎಂಬ ಕವನದಲ್ಲಿ ನಿಸರ್ಗವನ್ನು ಸ್ತ್ರೀಗೆ ಹೋಲಿಸಿ ಸ್ತ್ರೀಯೇ ನಿಸರ್ಗದ ಮತ್ತೊಂದು ಅವತಾರವೆಂಬ ಭಾವನೆ ತಮ್ಮದೆಂದು ಹೇಳುತ್ತಾರೆ. ಆ ಕವನವನ್ನು ಮನ ಮುಟ್ಟುವಂತೆ ಓದುತ್ತ, ನಿಸರ್ಗ-ಹೆಣ್ಣುಗಳೊಳಗಿನ, ಬಲೆಯಂತೆ ಹೆಣೆದು ಬಂದ, ಸಂಬಂಧವನ್ನು ಋತುಗಳ ಬದಲಾವಣೆಯ ಮೂಲಕ ವರ್ಣಿಸಿದುದನ್ನು ವಿವರಿಸಿದರು. ಆ ಕವನದಲ್ಲಿ ಒಂದೆಡೆ
‘ಇವಳು ಉಸಿರಾಡಿದರೆ ಹಸಿರು; ಮಾತಾಡಿದರೆ ಜುಳು ಜುಳು;
ಹೆಜ್ಜೆ ಹೆಜ್ಜೆಗು ಹೂವು; ತುರುಬಿನ ತುಂಬ ಮಲ್ಲಿಗೆ-ಮೋಡ!
…………………………………………. ಈಗಿವಳು ಶಾರದೆ.’
ಎಂಬಲ್ಲಿ ನಿಸರ್ಗವೇ ಹೆಣ್ಣಿನ ಇನ್ನೊಂದು ರೂಪವೆಂಬ ಭಾವನೆ ಓದುಗರಲ್ಲಿ ಬಾರದೇ ಇರುವುದಿಲ್ಲ. ಪ್ರೀತಿ, ವಿಶ್ವಾಸ, ಸ್ನೇಹಗಳಿಲ್ಲದೆ ಭಕ್ತಿಗೆ ಬೆಲೆ ಇಲ್ಲ. ಪ್ರಕೃತಿಯನ್ನು ಪೂಜಿಸಲು ಭಕ್ತಿಯೇ ಪ್ರಧಾನ; ಆ ಭಕ್ತಿಗೆ ಪ್ರೀತಿಯೇ ಕಾರಣ. ಅವರ ‘ಪ್ರೀತಿ ಇಲ್ಲದ ಮೇಲೆ’ ಎಂಬ ಕವನದ
ಪ್ರೀತಿ ಇಲ್ಲದ ಮೇಲೆ
ಹೂವು ಅರಳಿತು ಹೇಗೆ?
ಮೋಡ ಕಟ್ಟಿತು ಹೇಗೆ?
ಹನಿಯೊಡೆದು ಕೆಳಗಿಳಿದು
ನೆಲಕ್ಕೆ ಹಸಿರು ಮೂಡಿತು ಹೇಗೆ?
ಈ ಸಾಲುಗಳಲ್ಲಿ ಮಾನವನು ಪ್ರಕೃತಿಯನ್ನು ಪ್ರೀತಿಯಿಂದ ಸಂಪರ್ಕಿಸಬೇಕೆಂಬುದು ವ್ಯಕ್ತವಾಗುತ್ತದೆ. ಪ್ರಕೃತಿಯ ಅಪಾರ ಸೊಬಗು, ನಿಸರ್ಗವಾಡುವ ಬೆಡಗಿನಾಟವನ್ನು ಅನುಭವಿಸಲು ಮನುಷ್ಯನು ಸಂಪೂರ್ಣ ಅದರಲ್ಲಿ ಕರಗ ಬೇಕು.
ನೋಡು ಇದೊ ಇಲ್ಲರಳಿ ನಗುತಿದೆ
ಏಳು ಸುತ್ತಿನ ಮಲ್ಲಿಗೆ
ಇಷ್ಟು ಹಚ್ಚನೆ ಹಸಿರು ಗಿಡದಿಂ
ದೆಂತು ಮೂಡಿತೊ ಬೆಳ್ಳಗೆ
‘ಮಲ್ಲಿಗೆ’ ಎಂಬ ಕವನದಿಂದ ಆರಿಸಿದ ಈ ಸಾಲುಗಳು ಹಚ್ಚ ಹಸಿರು ಮಲ್ಲಿಗೆ ಬಳ್ಳಿಯಲ್ಲಿ ಅರಳಿದ ಅಚ್ಛ ಬೆಳ್ಳಗಿನ ಹೂವು ನಿಸರ್ಗದ ಚಮತ್ಕಾರವನ್ನು ಪರಿಣಾಮಕಾರಿಯಾಗಿ ಮನದಟ್ಟು ಮಾಡುತ್ತದೆ. ಇದನ್ನು ಅನುಭವಿಸುವ ಅಭಿರುಚಿಯನ್ನು ಕವಿ ತನ್ನ ಕವನದಿಂದ ಓದುಗರಲ್ಲಿ ಮೂಡಿಸುತ್ತಾನೆ. ‘To love Life is to live Life’ ಎಂಬ ಟಾಲ್ಸ್ಟಾಯರ ಮಾತನ್ನು ತಾನು ಅಕ್ಷರಶ ನಂಬುತ್ತೇನೆಂದು ಜಿ.ಎಸ್.ಎಸ್. ಹೇಳುತ್ತಾರೆ. ಹೀಗೆ, ಪ್ರಕೃತಿಯನ್ನು ಪ್ರೀತಿಸಿ, ಬದುಕನ್ನು ಆದರಿಸುವುದೇ ನಿಜ ಜನ ಜೀವನ ಕ್ರಮವೆಂಬುದು ಅವರ ನಿಲುವು.
‘ಪ್ರೀತಿ-ಕರುಣೆ, ಸ್ನೇಹ-ಮರುಕ, ಇದೇ ನಮ್ಮ ದೇವರು’”:
ದೇವರ ವಿಷಯ ಬಂದಾಗ ಅವರ ನಿಲುವಂತೂ ದೃಢವಾದುದು. ‘ಪ್ರೀತಿ-ಕರುಣೆ, ಸ್ನೇಹ-ಮರುಕ, ಇದೇ ನಮ್ಮ ದೇವರು’ ಎಂಬ ತಮ್ಮ ದೃಢ ನಂಬಿಕೆಯನ್ನು ‘ಇದೇ ನಮ್ಮ ದೇವರು’ ಎಂಬ ಕವನದಲ್ಲಿ ಸಾರಿ ಹೇಳಿದ್ದಾರೆ. ದೇವರು ಮಾನವ ಕಲ್ಪನೆ; ಯಾವುದೋ ಶಕ್ತಿಯನ್ನು ದೇವರು ಎಂದು ಮಾನವ ಕಲ್ಪಿಸಿಕೊಂಡಿದ್ದಾನೆ. ಈ ವಿಚಾರದಲ್ಲಿ ಅವರದು ಎ. ಎನ್. ಮೂರ್ತಿರಾಯರು ಮತ್ತು ಕಾರಂತರ ನಿಲುವೇ.
ಎಲ್ಲೊ ಹುಡುಕಿದೆ ಇಲ್ಲದ ದೇವರ
ಕಲ್ಲು ಮಣ್ಣುಗಳ ಗುಡಿಯೊಳಗೆ
ಇಲ್ಲೆ ಇರುವ ಪ್ರೀತಿ-ಸ್ನೇಹಗಳ
ಗುರುತಿಸದಾದೆನು ನನ್ನೊಳಗೆ
‘ಅನ್ವೇಷಣೆ’ ಕವನದ ಈ ಸಾಲುಗಳು ಅವರ ದೇವರ ಮೇಲಿನ ನಂಬಿಕೆಯ ಮೇಲೆ ಸಾಕಷ್ಟು ಬೆಳಕನ್ನು ಚೆಲ್ಲುತ್ತದೆ. ಇಲ್ಲಿಯೂ, ಪ್ರೀತಿ-ಸ್ನೇಹಗಳೇ ದೇವರ ಇರುವನ್ನು ಅನುಭವಿಸುವ ಸಾಧನವೆಂಬುದು ವಿಶದವಾಗುತ್ತದೆ. ಅದೇ ಕವನದ ಅಂತ್ಯದಲ್ಲಿ ಹೇಳಿದ ‘ನಾಲ್ಕು ದಿನದ ಈ ಬದುಕಿನಲಿ’ ಎಂಬ ನುಡಿಯು ವೇದಾಂತಿಗಳ ನುಡಿಯನ್ನು ಮರುಧ್ವನಿಸಿದಂತಿದೆ. ಆದರೆ ಜಿ. ಎಸ್.ಎಸ್.ರು ಜೀವನವನ್ನು ನೋಡುವ ಕ್ರಮ ವೇದಾಂತಿಗಳಿಗಿಂತ ಭಿನ್ನವಾಗಿದೆ.
ವೇದಾಂತಿ ಹೇಳಿದನು:
ಈ ಬದುಕು ಶೂನ್ಯ;
ಕವಿ ನಿಂತು ಸಾರಿದನು:
ಇದು ಅಲ್ಲ ಅನ್ಯ;
ಜನ್ಮ ಜನ್ಮದಿ ಸವಿವೆ
ನಾನೆಷ್ಟು ಧನ್ಯ !
‘ಕವಿ-ವೇದಾಂತಿ’ ಕವನದ ಮೇಲಿನ ಸಾಲುಗಳು ಅವರ ಅಂತಹ ನಿಲುವನ್ನು ವ್ಯಕ್ತಪಡಿಸುತ್ತದೆ. ಜೀವನ, ಪ್ರಕೃತಿಗಳ ಸಂಗಮವೇ ದೇವರು. ದೈವತ್ವದ ಪರಿಚಯವಾಗುವುದೂ ಜೀವನದಿಂದಲೇ ! ದೇವರು ಮನುಷ್ಯನ ಆಲೋಚನಾಶಕ್ತಿಯನ್ನು ನಿಯಂತ್ರಿಸುವುದಾದಲ್ಲಿ ಅವನ ಸ್ವಾತಂತ್ರಕ್ಕೆ ಬೆಲೆ ಏನು? ಅವನ ಬುದ್ಧಿ ವಿಕಾಸಕ್ಕೆ ದಾರಿ ಏನು? ಎಂದು ಪ್ರಶ್ನಿಸುತ್ತಾರೆ, ಜಿ.ಎಸ್.ಎಸ್. ‘ದೇವರೇ ಮನುಷ್ಯನ ಮನಸ್ಸಿನ ಆಗು-ಹೋಗುಗಳನ್ನು ನಿರ್ಮಿಸಿದ್ಡಾದರೆ, ಆ ದೇವರು ನನಗ್ಯಾಕೆ ದೇವರೇ ಇಲ್ಲ ಎಂಬ ಬುದ್ಧಿಯನ್ನು ಕೊಟ್ಟಿರುತ್ತಾನೆ?’ ಎಂದು ಎ. ಎನ್.ಮೂರ್ತಿರಾಯರು ಹೇಳಿದ್ದುದನ್ನು ಇಲ್ಲಿ ನೆನೆಯಬಹುದು. ದೇವರು ಮತ್ತು ಧರ್ಮಗಳ ಹೆಸರಿನಲ್ಲಿ ನಡೆಯುವ ಅನೇಕ ಅತ್ಯಾಚಾರಗಳನ್ನು ನಿರಾಕರಿಸುತ್ತಾರೆ, ಶಿವರುದ್ರಪ್ಪನವರು. ವಿವೇಕಾನಂದರ ‘ಹಸಿದ ಹೊಟ್ಟೆಗೆ ಒಂದು ತುತ್ತು ಅನ್ನ ಕೊಡಲಾರದ, ವಿಧವೆಯರ ಕಣ್ಣೀರನ್ನು ಒರಿಸಲಾಗದ ಧರ್ಮದಲ್ಲಿ ನನಗೆ ನಂಬಿಕೆ ಇಲ್ಲ’ ಎಂಬ ಮತನ್ನು ಅವರು ಮನಸಾರೆ ಒಪ್ಪುತ್ತಾರೆ.
ಆದರೆ, ಮೂರ್ತಿರಾಯರು ಮತ್ತು ಕಾರಂತರಂತೆ ಅವರೂ ಇನ್ನೊಬ್ಬರ ನಂಬಿಕೆಯ ಮೇಲೆ ಅಪಾರ ಆದರವನ್ನು ತೋರಿಸುತ್ತಾರೆ. ಹುಟ್ಟಿನಿಂದ ಜಿ.ಎಸ್.ಎಸ್.ರು ವೀರಶೈವ ಧರ್ಮದವರಾದರೂ, ಅವರಿಗೆ ಹಿಂದೂ, ಬೌದ್ಧ, ಜೈನ ಕ್ರೈಸ್ಥ ಮುಂತಾದ ಧರ್ಮಗಳು ಸಾರುವ ತತ್ವಗಳ ಮೇಲೆ ವಿಶೇಷವಾದ ಗೌರವವಿದೆ. ಗೀತೆಯ ನುಡಿ, ಬುದ್ಧನ ಬೋಧನೆ, ಶಂಕರಾಚಾರ್ಯರ ಅದ್ವೈತ, ವಿವೇಕಾನಂದರ ವಿವೇಕ ನುಡಿಗಳು, ಇವೇ ಮೊದಲಾದುವುಗಳನ್ನು ಯಾವಾಗಲೂ ಉಲ್ಲೇಖಿಸುತ್ತಲೇ ಇರುತ್ತಾರೆ. ಎಲ್ಲ ಮತಗಳನ್ನೂ ಆದರಿಸುವ, ಗೌರವಿಸುವ ವಿಶಾಲ ಮನೋಭಾವ ಮತ್ತು ಹೃದಯವಂತಿಕೆ ಅವರಲ್ಲಿದೆ. ಬಸವೇಶ್ವರ, ಅಕ್ಕ ಮಹಾದೇವಿ, ಅಲ್ಲಮ ಪ್ರಭು ಮುಂತಾದವರ ವಚನಗಳನ್ನು ಸಾಹಿತಿಯ ಕಣ್ಣಿನಿಂದ ನೋಡಿ, ಅಲ್ಲಿನ ಅಪಾರ ಶಕ್ತಿಯನ್ನು ಗುರುತಿಸಿದ್ದಾರೆ. ಉದಾಹರಣೆಗೆ, ಅಲ್ಲಮ ಪ್ರಭುಗಳ ವಚನ ’….ಶಬ್ದದೊಳಗಣ ನಿಶ್ಶಬ್ದದಂತೆ ಗುಹೇಶ್ವರ, ನಿಮ್ಮ ಶರಣ ಸಂಬಂಧ’ ದ ಮೇಲೆ ವ್ಯಾಖ್ಯಾನಿಸುತ್ತ, ಪ್ರಪಂಚದ ಭಂಡಾಚಾರ, ಮೂಢ ಸಂಪ್ರದಾಯ ಮುಂತಾದ ’ಶಬ್ದ’ದೊಳಗೆ ದೈವತ್ವವು ‘ನಿಶ್ಶಬ್ದ’ವಾಗಿ ಕುಳಿತಿದೆ. ಅದರ ಇರವನ್ನು ಅರಿತುಕೋಳ್ಳುವ ರೀತಿಯು ವಿಶೇಷವಾದುದು. ಬೈಬಲ್‍ನ – ‘In the begining there was Word, Word was with God and the Word was God’ ಎಂಬ ಮಾತನ್ನು ಜ್ಞಾಪಿಸಿಕೊಳ್ಳುತ್ತ, ಮೇಲೆ ತಿಳಿಸಿದ ಅಲ್ಲಮ ಪ್ರಭುಗಳ ವಚನಕ್ಕೂ ಬೈಬಲ್‍ನ ಈ ಮಾತಿಗೂ ಸಮಾನಾಂತರವಿದೆ ಎಂದು ಸೂಚಿಸಿದರು. ಬೈಬಲ್‍ನ ಈ ನುಡಿಯಲ್ಲಿಯೂ ಶಬ್ದ, ನಿಶ್ಶಬ್ದ, ದೇವರು ಎಂಬೆಲ್ಲ ಕಲ್ಪನೆಗಳು ವ್ಯಕ್ತವಾಗಿದೆ ಎಂದೂ ಹೇಳಿದರು. ಅಂತೆಯೇ, ಮೂರ್ತ-ಅಮೂರ್ತ, ಜಡ-ಚೇತನ, ಮುಂತಾದ ವಿರುದ್ಧ ಅರ್ಥ ಕೊಡುವ ಶಬ್ದ ಜೋಡನೆಗಳಲ್ಲೂ ನಾವು ಅಂತಹ ತತ್ವವನ್ನು ಕಾಣಬಹುದು. ಜಡವಾಗಿ ಕಾಣಿಸುತ್ತಿರುವ (ಮೂರ್ತ) ಶಿಲೆಯೊಳಗೆ ಕಲೆಯು ಚೇತನವಾಗಿ, ಕಣ್ಣಿಗೆ ಕಾಣಿಸದಿದ್ದರೂ (ಅಮೂರ್ತ) ಅವಿತುಕೊಂಡಿದೆ; ಈ ಅಮೂರ್ತವನ್ನು ಅರ್ಥಮಾಡಿಕೊಳ್ಳುವ ಪರಿಯೇ ಜೀವನವನ್ನು ಅರ್ಥ ಮಾಡಿಕೊಳ್ಳುವ ಕ್ರಮ. Matter is Energy. ಚೈತನ್ಯದ ಈ ಮಹತ್ವನ್ನು ಅರಿವು ಮಾಡಿಕೊಳ್ಳುವುದು ನಮ್ಮ ಗುರಿಯಾಗಬೇಕು. ಆಗಲೇ ಬದುಕಿನಲ್ಲಿಯ ಸೌಂದರ್ಯ, ಪ್ರಕೃತಿಯ ಚೆಲುವುಗಳೆಲ್ಲವನ್ನೂ ನಾವು ಅನುಭವಿಸಲು ಶಕ್ತರಾಗುತ್ತೇವೆ. ಈ ಅಪೂರ್ವ ಅನುಭವವೇ ‘ದೇವರು’ ಎಂಬಂತಿದೆ ಜಿ.ಎಸ್.ಎಸ್.ರ ನಿಲುವು.
ಅಧ್ಯಾತ್ಮ: ‘ಏಕತೆಯನ್ನು ಕಾಣುವ ಮನೋಧರ್ಮ’:
ಮಾತು ಅಲ್ಲಿಂದ ಅಧ್ಯಾತ್ಮಕ್ಕೆ ಹೊರಳಿತು. ಅವರು ‘ಅಧ್ಯಾತ್ಮವೆಂದರೆ ಏಕತೆಯನ್ನು ಕಾಣುವ ಮನೋಧರ್ಮ’ ಎಂದು ಸರಳವಾದ ನಿರೂಪಣೆ ಕೊಡುತ್ತಾರೆ. ಕಡಲೊಳಗೆ ಬೆರೆಯುವ ತೊರೆಯ ಹಂಬಲದಂತೆ ಬದುಕಿನೊಂದಿಗೆ ಗಾಢವಾಗಿ ಬೆಸೆಯುವ ಅನುಭವ ಕೂಡ ಒಂದು ಆದರ್ಶ, ಅದೂ ಅಧ್ಯಾತ್ಮಕವಾಗುತ್ತದೆ. ಹಲವು ಬಾರಿ, ಇಂತಹ ‘ಏಕತೆ’ಯನ್ನು ನೋಡುವ ಮನೋಧರ್ಮದಿಂದ ತಿಳಿದೋ, ತಿಳಿಯದೆಯೋ ನಮ್ಮನ್ನು ನಾವೇ ದೂರ ಮಾಡಿಕೊಳ್ಳುತ್ತೇವೆ. ಹೀಗೆ ಹೇಳುತ್ತ ಅವರು ತಮ್ಮ ‘ಸೋಲಿನ ಹಾಡು’ ಕವನದ ಸಾಲನ್ನು ಉದ್ಧರಿಸಿದರು:
‘ತಿರುಗುವ ಚಕ್ರದ ನಿಶ್ಚಲ ಕೇಂದ್ರದಿ
ನಿಲ್ಲುವ ಬಲವಿಲ್ಲ …….’
ನಾವು ತಿರುಗುತ್ತಿರುವ ಚಕ್ರದ ಮೇಲಿದ್ದು ಏಕಾಗ್ರತೆಯನ್ನು ಕಳೆದುಕೊಳ್ಳುತ್ತೇವೆ, ಮಧ್ಯೆ ಆ ಚಕ್ರವನ್ನೇ ತಿರುಗಿಸುವ ‘ನಿಶ್ಚಲ ಕೇಂದ್ರ’ದ ಅರಿವಿಲ್ಲದೆ. ಈ ಅರಿವು – ಜೀವನದ ಸೌಂದರ್ಯವನ್ನು ಅನುಭವಿಸುವ ರೀತಿಯನ್ನು ಬದಲಿಸಿ, ಬಲವನ್ನೂ ಕೊಡುವುದು, ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.
‘ವ್ಯಕ್ತಮಧ್ಯದ ಬದುಕು’:
ಹಾಗೆಯೇ, ಅವರ ಇತ್ತೀಚೆಗಿನ ‘ವ್ಯಕ್ತಮಧ್ಯ’ ಕವನ ಸಂಕಲನದ ವಿಚಾರ ಬಂತು. ಭಗವದ್ಗೀತೆಯ
‘ಅವ್ಯಕ್ತಾದೀನಿ ಭೂತಾನಿ
ವ್ಯಕ್ತ ಮಧ್ಯಾನಿ ಭಾರತ,
ಅವ್ಯಕ್ತನಿದಾನಾನೈವ
ತತ್ರ ಕಾ ಪರಿದೇವನಾ’
ಎಂಬ ನುಡಿಯೇ ಈ ಸಂಕಲನಕ್ಕೆ ಪ್ರೇರಕವಾದದ್ದು ಎಂದು ವಿವರಿಸಿದರು. ಅಲ್ಲಿ ಮೂಡಿಬಂದಂತೆ, ‘ಜೀವನ’ವೊಂದೇ ‘ವ್ಯಕ್ತ’ವಾದುದು; ಅದಕ್ಕೂ ಹಿಂದಿನ ಮತ್ತು ಮುಂದಿನದೆಲ್ಲವೂ ‘ಅವ್ಯಕ್ತ’ವಾದುದು. ಈ ‘ಅವ್ಯಕ್ತ’ಗಳ ಮಧ್ಯದ ‘ವ್ಯಕ್ತ’ ಜೀವನವನ್ನು ಸಂತೋಷದಿಂದ ಅನುಭವಿಸುವ ಆಶಾವಾದ ಅವರದು. ಇದು ಅವರ ‘ಅವಸ್ತೆ’ ಎಂಬ ಕವನದಲ್ಲಿ ಸೊಗಸಾಗಿ ಮೂಡಿ ಬಂದಿದೆ.
‘ದತ್ತವಾಗಿದೆ ಮತ್ತೆ ವ್ಯಕ್ತಮಧ್ಯದ ಬದುಕು
ಮೊದಲಿಗಿಂತಲೂ ಸೊಗಸಾಗಿ ಕಂಡಿತು ಲೋಕ
ಈ ವರೆಗೂ ಮಹಾವಿಸ್ಮೃತಿಯಲ್ಲಿ ಕರಗಿ ಹೊರಗೆ ಬಂದ
ಅಸ್ಥಿತ್ವಕ್ಕೆ ಎಲ್ಲವನ್ನೂ ತಬ್ಬಿಕೊಳ್ಳುವ ತವಕ’
ಇಲ್ಲಿ ಬದುಕು ‘ದತ್ತವಾಗಿದೆ’ ಎಂಬ ಪ್ರಯೋಗವು ಗಮನಾರ್ಹವಾದುದು. (ನಾನು ‘ದತ್ತ’ವೆಂಬ ಶಬ್ದಕ್ಕೆ ‘ಉಡುಗೊರೆ’ ಎಂದು ಅರ್ಥ ಮಾಡಿರುತ್ತೇನೆ.) ಈ ‘ಉಡುಗೊರೆ’ಯನ್ನು ತುಂಬು ಮನಸ್ಸಿನಿಂದ ಆದರಿಸಿ ಆನಂದದಿಂದ ಅನುಭವಿಸುವುದೇ ತೃಪ್ತಿ. ಈ ತೃಪ್ತಿಯನ್ನು ಅತೃಪ್ತಿಯೆಂಬ ತೆರೆ ಮುಚ್ಚಿರುತ್ತದೆ. ಆ ತೆರೆ ಸರಿದಾಗಲೇ ನಮಗೆ ಬದುಕಿನ ತೆರ ತೆರನಾದ ನೂತನ ಸೌಂದರ್ಯದ ಗೋಚರವಾಗುತ್ತದೆ. ಇದು ‘ಮೊದಲಿಗಿಂತಲೂ ಸೊಗಸಾಗಿ ಕಂಡಿತು ಲೋಕ’, ‘ಎಲ್ಲವನು ತಬ್ಬಿಕೊಳ್ಳುವ ತವಕ’ ಎಂಬ ಸಾಲುಗಳಲ್ಲಿ ವ್ಯಕ್ತವಾದಂತಿದೆ. ‘ಅವಸ್ಥೆ’ ಕವನವನ್ನು ಅವರು ಬರೆದುದು ಅವರ ಹೃದಯ ಶಸ್ತ್ರ ಚಿಕಿತ್ಸೆ ಮುಗಿದ ಮೇಲೆ. ‘ಅರಿವಳಿಕೆ’(anaesthesia)ಯಿಂದ ಎಚ್ಚೆತ್ತು ಬಂದಾಗ ಅನುಭವಿಸಿದ ನೂತನ ‘ಅವಸ್ಥೆ’ಯ ಅನುಭವವನ್ನು ವಿವರಿಸಿದ್ದಾರೆ, ಜಿ.ಎಸ್.ಎಸ್.ರು ಈ ಕವನದಲ್ಲಿ. ಈ ಅವಸ್ಥೆಯು, – ಜಾಗ್ರತೆ, ಸ್ವಪ್ನ, ಸುಷುಪ್ತಿ ಮತ್ತು ತುರೀಯ -ಎಂಬ ನಾಲ್ಕು ಅವಸ್ಥೆಗಳ ಲಕ್ಷಣಗಳಲ್ಲಿ ಒಂದೇ? ಅಥವಾ ಭಿನ್ನವಾದುದೇ?, ಅದು ಬ್ರಾಂತಿಯೇ?, ಶಾಂತಿಯೇ? ಎಂದು ವಿಸ್ಮಯ ಪಟ್ಟಿದ್ದಾರೆ. ಈ ಹಿಂದೆ, ೧೯೯೮ ರಲ್ಲಿ ಶಿಕಾಗೋಗೆ ಬಂದಾಗ, ಇದೇ Kitchen Table ಮುಂದೆ ಕುಳಿತು, ಆಗಿನ್ನೂ ಪ್ರಕಟಣೆಯಾಗಿರದ, ಈ ‘ಅವಸ್ಥೆ’ ಕವನವನ್ನು ಓದಿದ್ದರು. ‘ವ್ಯಕ್ತಮಧ್ಯ’ದ ಹಲವು ಕವನಗಳನ್ನು ನಮ್ಮ ಮುಂದೆ ಓದಿ ಹೇಳಿ ನಮಗೆ ರಸದೌತಣ ಬಡಿಸಿದ್ದರು ಅಂದು. ಈ ಸಂಕಲನದಲ್ಲಿ ಕಾಣುವ – ‘ಹೂವು-ನಕ್ಷತ್ರ’, ‘ದೀಪ ಚಿಂತನೆ’, ‘ನಟ್ಟಿರುಳಲ್ಲಿ’, ‘ಸ್ತಾವರಕ್ಕೆ ಅಳಿವುಂಟು’ ‘ಕಿಷ್ಕಿಂದೆಯ ಕತ್ತಲಲ್ಲಿ’ – ಮುಂತಾದ ಕವನಗಳ ಮೇಲೆ ಬೇರೊಂದು ಪ್ರಬಂಧವನ್ನೇ ಬರೆಯಬಹುದು. ಆ ಕವನಗಳಲ್ಲಿ ತಾವು ಒಪ್ಪಿಕೊಂಡಿರುವ, ಅಪ್ಪಿಕೊಂಡಿರುವ ‘ಜೀವನ ದರ್ಶನ’ದ ಪರಿಚಯ ಮಾಡಿ ಕೊಟ್ಟಿದ್ದಾರೆ.
ಶಿವರುದ್ರಪ್ಪನವರು ತೀರಿಕೊಳ್ಳುವ ಮೊದಲು ಬಹು ಕಾಲ ಪ್ರಜ್ಞೆ ತಪ್ಪಿದ್ದರು. ಅವರನ್ನು ಆ ಸ್ಥಿತಿಯಲ್ಲಿ ನೋಡುವ ದೌರ್ಭಾಗ್ಯ ನನಗೆ ಒದಗಿ ಬಂದಿತ್ತು. ಅವರ ಸಹಧರ್ಮಿಣಿ, ರುದ್ರಾಣಿಯವರು, ಹಾಗೆ ಮಲಗಿದ್ದ ಶಿವರುದ್ರಪ್ಪನ ಬಳಿಗೆ ನನ್ನನ್ನು ಕರೆದೊಯ್ದು, ಅವರ ಕಿವಿಯಲ್ಲಿ “ಐತಾಳರು ಬಂದಿದ್ದಾರೆ..” ಎಂದು ಹೇಳಿದಾಗ ಅವರು ಏನೋ ಗೋಗರೆದರು. ಆಗ ರುದ್ರಾಣಿಯವರು ಅದನ್ನು “ಹೌದಾ…” ಎಂದು ಹೇಳುತ್ತಿದ್ದಾರೆ ಎಂದು ವ್ಯಾಖ್ಯಾನಿಸಿದರು. ಅವರನ್ನು ಆ ಸ್ಥಿತಿಯಲ್ಲಿ ಕಂಡಾಗ ನನ್ನ ಮನಸ್ಸಿನಲ್ಲಿ ತಟ್ಟನೆ ಅವರ “ವ್ಯಕ್ತಮಧ್ಯ”ದ ಕವನದ ನೆನಪು ಬಂತು. ಅವರ ಆ ಸ್ಥಿತಿಯನ್ನು ಏನೆಂದು ಕರೆಯಲಿ? ಆ ಸ್ಥಿಯಲ್ಲೂ ಅವರು ‘ದತ್ತವಾಗಿದೆ ಮತ್ತೆ ವ್ಯಕ್ತಮಧ್ಯದ ಬದುಕು; ಮೊದಲಿಗಿಂತಲೂ ಸೊಗಸಾಗಿ ಕಂಡಿತು ಲೋಕ; ಈ ವರೆಗೂ ಮಹಾವಿಸ್ಮೃತಿಯಲ್ಲಿ ಕರಗಿ ಹೊರಗೆ ಬಂದ ಅಸ್ಥಿತ್ವಕ್ಕೆ ಎಲ್ಲವನ್ನೂ ತಬ್ಬಿಕೊಳ್ಳುವ ತವಕ…’ – ಎಂದು ಹೇಳುತ್ತಿರುವರೇ ಎಂಬ ಭ್ರಾಂತಿ ನನ್ನಲ್ಲಿ ಮೂಡಿತ್ತು. ಅದೇ ಕೆಲವು ದಿನಗಳಲ್ಲಿ ಅವರು ತೀರಿಕೊಂಡು, ‘ಸೊಗಸಾಗಿಹ ಲೋಕ’ವನ್ನು ‘ತಬ್ಬಿ’ಕೊಂಡರು. ಆ ಮಹಾಚೇತನ ‘ಕಾಲ’ವನ್ನು ಸೇರಿ, ಎಲ್ಲಿಲ್ಲದ ತೃಪ್ತಿ ಪಡೆದಿರಬೇಕು!!!!
ನಾಕು-‘ನಾಕ’ ಸಾಲು:
ಅಂದು ನಮ್ಮ ‘ಕಾಫೀ ಟೇಬಲ್ ಚುಟುಕ’ದ ಕೊನೆಯ ‘ಪುಟ್ಟ ಅಧಿವೇಶನ’(mini session). ಅಂದು, ಜಿ.ಎಸ್.ಎಸ್.ರು ಶಿಕಾಗೋ ಬಿಟ್ಟು ಮುಂದಿನ ಪ್ರಯಾಣ ಮಾಡುವವರಿದ್ದರು. ಕಾಫಿ ಹೀರುತ್ತ ಅವರನ್ನು ಕೇಳಿದೆ: ‘ನಿಮ್ಮ ಕವನಗಳು ಸಾರುವ ಮುಖ್ಯ ಸಂದೇಶವೇನು?’ ಎಂದು. ಬೇಂದ್ರೆಯವರ ಈ ಕೆಳಗಿನ ಕವನದ ಸಾಲನ್ನು ಉದ್ಧರಿಸುತ್ತ, ‘ಸಾಹಿತ್ಯ ಪ್ರಪಂಚಕ್ಕೆ ನಾನು ಸಲ್ಲಿಸಿದ ಕಾಣಿಕೆ ತೀರ ಕಿರಿದು ಎಂದೆಣಿಸುತ್ತೇನೆ’ ಎಂದು ಹೇಳಿದಾಗ ಅವರ ಸೌಜನ್ಯತೆ, ವಿನಯಶೀಲತೆ ಎದ್ದು ಕಾಣಿಸುತ್ತಿತ್ತು.
‘ಹಾಸಾದ ಮಿಂಚಿನಿಂದ
ಬೀಸಿದ್ದ ಸೆರಗಿನಿಂದ
ಸೆಳದಂತೆ ಎರಡು ನೂಲು
ಉಳಿದಾವ ನಾಕು ಸಾಲು’
ತಾಯಿಯು ಬೀಸಿದ ಸೆರಗನ್ನು ಮಲಗಿದ ಮಗು ಕೈ ಚಾಚಿ ಸೆಳೆದಾಗ ಸಿಕ್ಕಿದ ಎರಡೇ ಎರಡು ನೂಲಿನಂತೆ, ತಮ್ಮ ‘ಕೊಡುಗೆ’ಯೂ ಸಾಹಿತ್ಯ ಲೋಕಕ್ಕೆ ಬರಿಯ ‘ನಾಕು ಸಾಲು’ ಎಂಬ ನಮ್ರಭಾವನೆಯನ್ನು ಜಿ.ಎಸ್.ಎಸ್.ರು ವ್ಯಕ್ತಪಡಿಸಿದರು. ಆದರೆ ಅವು ಬರಿಯ ‘ನಾಕು ಸಾಲು’ ಗಳಲ್ಲ; ಅವು ‘ನಾಕ’ದ ಸಾಲುಗಳೆಂಬುದು ಎಲ್ಲರೂ ಗಮನಿಸುವಂಥ ವಿಷಯವೇ !
‘ಹಣತೆ ಹಚ್ಚುತ್ತೇನೆ ನಾನು’:
ಮುಂದುವರಿಯುತ್ತ, ಕವನಗಳಲ್ಲಿ ತಾವು ಜೀವನವನ್ನು ನೋಡುವ ಕ್ರಮವನ್ನು ನಿರೂಪಿಸಲು ಪ್ರಯತ್ನ ಮಾಡುತ್ತಿರುವೆನೆಂದು ತಿಳಿಸಿದರು. ‘ತಮಸೋ ಮಾ ಜ್ಯೋತಿರ್ಗಮಯ………’ ಎಂಬ ಶ್ಲೋಕದ ಸಾಲು ಸಾರುವಂತೆ ಬದುಕಿನಲ್ಲಿ ಹರಡಿದ ‘ಕತ್ತಲೆ’ಯನ್ನು ಮಾನವನು ದೂರ ಮಾಡಬೇಕು. ‘ದಟ್ಟ ಕತ್ತಲಿನ ಅಟ್ಟಹಾಸದ ನಡುವೆ ದೀಪ ಹಚ್ಚುವುದು ನಿಜಕ್ಕೂ ತೀರ ಕಷ್ಟದ ಕೆಲಸ’. ಆದರೂ, ‘ಹಣತೆ ಹಚ್ಚುತ್ತೇನೆ ನಾನೂ’ ಎಂಬ ದೃಢ ನಂಬಿಕೆ ಇದೆ ಅವರಿಗೆ. ಎಲ್ಲೆಲ್ಲೂ ಮೂಢ ನಂಬಿಕೆ, ಜಾತಿ ಬೇಧ, ದ್ವೇಷ, ಅಸಹನೆ, ಮುಂತಾದ ‘ಅಂಧತೆ’ಯು ಹಬ್ಬಿದೆ.
‘ತಿರುಗುತ್ತಲೇ ಇದ್ದಾವೆ ಹಗಲೂ ಇರುಳು
ನಮ್ಮ ಸುತ್ತಲೂ ಅಸಂಖ್ಯಾತ
ಜ್ಯೋತಿರ್ಮಂಡಲಗಳು’,
………………………………
‘ಆದರೂ, ನಮ್ಮೊಳಗೆ
ಮತ್ತೆ ಮತ್ತೆ ಹೇಗೋ ಕವಿಯು-
ತ್ತಿರುವ ಕತ್ತಲೆಯೊಳಗೆ ನಮ್ಮದೇ
ಅದೊಂದು ಪುಟ್ಟ ಹಣತೆಯ ನಾವು
ಹುಡುಕಿಟ್ಟು ಕೊಳ್ಳೋಣ…………’
ಎಂದು ಹೇಳುತ್ತಾರೆ ಅವರು ‘ದೀಪ ಚಿಂತನೆ’ ಎಂಬ ಕವನದಲ್ಲಿ.
….‘ಮಾತು-ಕೃತಿಗಳ ನಡುವೆ,
ಬದುಕು-ಬರಹದ ನಡುವೆ, ಕನಸು–ನನ-
ಸಿನ ನಡುವೆ ತೂರಿಸುವ ವಿಕೃತಿ-
ಯನ್ನೆದುರಿಸಲು ಸಾಕು ಒಂದೇ ಒಂದು
ವಾಗರ್ಥ ಚಂದ್ರನ ಪ್ರಣತಿ’
ಎಂಬ ಮಹತ್ವಾಕಾಂಕ್ಷೆಯು ಅವರಲ್ಲಿ ಬೇರೂರಿದೆ.
‘ಸಂಘಟನೆಯೇ ಸಂಸ್ಕೃತಿ, ವಿಂಗಡನೆಯೇ ವಿಕೃತಿ’”
‘ಮಾನವೀಯತೆಯ ಸಂಬಂಧಗಳನ್ನು ಒಡೆಯುವ ಎಲ್ಲ ವಿಕಾರಗಳನ್ನೂ ವಿರೋಧಿಸುವುದೇ ನನ್ನ ನಿಲುವು’ – ಎಂಬುದು ಅವರ ದಿಟ್ಟ ಧ್ಯೇಯ! ಅಂತಹ ಧ್ಯೇಯಗಳನ್ನು ಸಾಧಿಸಲು ಪ್ರೀತಿಯೇ ಮುಖ್ಯ ಸಾಧನವೆಂದು ಹೇಳುತ್ತಾರೆ ಜಿ.ಎಸ್.ಎಸ್. ಆಗ, ತಿರುಗಿ, ತಮ್ಮ ಕವನದ ‘ಪ್ರೀತಿ-ಕರುಣೆ, ಸ್ನೇಹ-ಮರುಕ, ಇದೇ ನಮ್ಮ ದೇವರು’ ಎಂಬ ಸಾಲನ್ನು ಮತ್ತೊಮ್ಮೆ ಉದ್ಧರಿಸಿದರು. ಇವೇ ನಮ್ಮನ್ನು ಒಟ್ಟುಗೂಡಿಸುವ ಸಾಧನ. ‘ಯಾವುದು ನಮ್ಮನ್ನು ಕೂಡಿಸುವುದೋ, ಅದೇ ಸಂಸ್ಕೃತಿ; ಯಾವುದು ನಮ್ಮನ್ನು ಒಡೆಯುವುದೋ, ಅದೇ ವಿಕೃತಿ’. ಈ ನಿಲುವೇ ತಮ್ಮ ಜೀವನ ಕ್ರಮದಲ್ಲೂ, ತಮ್ಮ ಹಲವು ಕವನಗಳಲ್ಲೂ ಮೂಡಿಬರುವಂತೆ ಪ್ರಯತ್ನ ಮಾಡಿರುವುದಾಗಿ ತಿಳಿಸಿದರು. ಇಲ್ಲಿ ಬಂದು ನೆಲೆಸಿದ ಕನ್ನಡಿಗರಲ್ಲಿ, ತಾಯ್ನಾಡನ್ನು ಬಿಟ್ಟು ಬಂದರೂ, ಸಂಘಟನೆಯ ಮನೋಭಾವ ಹೆಚ್ಚಿನವರಲ್ಲಿ ಎದ್ದು ಕಾಣುತ್ತಿರುವುದನ್ನು ಶ್ಲಾಘಿಸುತ್ತ, – ‘ಸಂಘಟನೆಯು ಒಂದು ಮಹಾಶಕ್ತಿ, ಆ ಶಕ್ತಿಯು ಕನ್ನಡಿಗರಲ್ಲಿ ಹೆಚ್ಚಿನಿಂದ ಬೆಳೆದು ಬರಲಿ’ – ಎಂದು ಹಾರೈಸಿದರು. ಅವರಂದಂತೆ ‘ಸಂಘನೆಯೇ ಸಂಸ್ಕೃತಿ; ವಿಂಗಡನೆಯೇ ವಿಕೃತಿ.’ ಈ ಅಪೂರ್ವ ಸಂದೇಶದೊಂದಿಗೆ ನಮ್ಮ Kitchen Tableನ ಕಿರು ‘ಅಧಿವೇಶನ’ಗಳು ಕೊನೆಗೊಂಡವು. ಇಲ್ಲಿ ಅದನ್ನು ‘ಕಿರು ಅಧಿವೇಶನ’ವೆಂದು ಕರೆದಿದ್ದರೂ, ಅದರಿಂದ ನಾನು ಪಡೆದ ಅನುಭವ ಅಮೋಘವಾದುದು ಹಾಗೂ ಅನನ್ಯವಾದುದು. ಅಂತಹ ಅವಕಾಶ ಯಾವಾಗಲೂ ದೊರಕುವುದಿಲ್ಲ. ಶಿಕಾಗೊ ಸಂದರ್ಶನ ಅವರ ಪ್ರಯಾಣದ ಪಟ್ಟಿಯಲ್ಲಿ ಮೊದಲು ಸೇರಿಕೊಂಡಿರಲಿಲ್ಲ. ಆದರೆ, ನನ್ನ ಆಮಂತ್ರಣವನ್ನು ಪ್ರೀತಿಯಿಂದ ಮನ್ನಿಸಿ, ಶಿಕಾಗೋವನ್ನೂ ತಮ್ಮ ಕಾರ್ಯಕ್ರಮದಲ್ಲಿ ಸೇರಿಸಿಕೊಂಡು, ನಮ್ಮ ಅತಿಥಿಗಳಾಗಿ ಉಳಿದುದು ಅವರು ನಮ್ಮ ಮೇಲಿಟ್ಟ ಪ್ರೀತಿ-ವಿಶ್ವಾಸವನ್ನು ವ್ಯಕ್ತಪಡಿಸುತ್ತದೆ. ಅವರು ನಾನು ೨೦೦೪ರಲ್ಲಿ ಸಂಪಾದಿಸಿದ ‘ಕುವೆಂಪು ಸಾಹಿತ್ಯ ಸಮೀಕ್ಷೆ’ ಎಂಬ ಗ್ರಂಥಕ್ಕೆ ಮುನ್ನುಡಿ ಬರೆಯುತ್ತ, ನನ್ನ ವಿಚಾರವಾಗಿ – ‘ಯಾವಸಲ (ಅಮೆರಿಕಕ್ಕೆ) ಹೋದರೂ, “ನಮ್ಮಲ್ಲಿಗೆ ಬರದೆ ನೀವು ಹೇಗೆ ಹೋಗುತ್ತೀರಿ?” ಎಂದು ನನ್ನನ್ನು ತಾವಿದ್ದಲ್ಲಿಗೆ ಬರಮಾಡಿಕೊಂಡು ನನ್ನನ್ನು ತಮ್ಮ ಪ್ರೀತಿ-ವಿಶ್ವಾಸದಲ್ಲಿ ಕಟ್ಟು ಹಾಕಿದ ಕೆಲವರಲ್ಲಿ ಶ್ರೀ ಐತಾಳರು ಮೊದಲಿಗರು. ಶಿಕಾಗೋದಲ್ಲಿ ಅವರಿದ್ದಾಗ ಹೀಗೆ ನಾನೂ ಅವರೂ ಗಂಟೆಗಟ್ಟಲೆ ಏನೆಲ್ಲಾ ವಿಷಯಗಳನ್ನು ಕುರಿತು ನಡೆಸಿದ ಎಷ್ಟೋ ಸಂವಾದಗಳ ಸಂದರ್ಭಗಳು ಇನ್ನೂ ನನ್ನ ನೆನೆಪಿನಲ್ಲಿ ಹಸಿರಾಗಿದೆ” – ಎಂದು ಹೇಳಿದ್ದಾರೆ. ಅಲ್ಲದೆ, ‘ಮುನ್ನುಡಿಯ ನೆಪಮಾಡಿಕೊಂಡು ನನ್ನನ್ನು ತಮ್ಮ ಜತೆಗೆ ಸೇರಿಸಿಕೊಂಡಿದ್ದಾರೆ.’ ಎಂದೂ ಬರೆದಿದ್ದಾರೆ. ಅವರಿಂದ ಈ ಮಾತುಗಳನ್ನು ಅನಿಸಿಕೊಂಡ ನಾನು ಎಲ್ಲಿಲ್ಲದ ಹೆಮ್ಮೆಗೊಳಗಾಗಿದ್ದೇನೆ. ಅವರ ಪ್ರೀತಿ-ವಿಶ್ವಾಸವನ್ನು ಪಡೆದ ನಾವು (ನಾನೂ, ನನ್ನ ಹೆಂಡತಿ ಲಕ್ಷ್ಮಿಯೂ) ಅವರಿಗೆ ಸದಾ ಕೃತಜ್ಞರು. ಅವರೊಡನೆ ನಡೆಸಿದ ವಿಚಾರಾತ್ಮಕ ಸ್ನೇಹಪರ ಸಂವಾದಗಳು ನನ್ನ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುವುದರಲ್ಲಿ ಸಂದೇಹವಿಲ್ಲ! ಮತ್ತೆ ಮತ್ತೆ ಅವರೊಡನೆ ಸಂವಾದಿಸುವ ಇಂತಹ ಅವಕಾಶ, ಈಗ ಅವರನ್ನು ಭೌತಿಕವಾಗಿ ಕಳೆದುಕೊಂಡು, ತಪ್ಪಿ ಹೋಗಿದೆ. ಆದರೇನು? ನಮ್ಮ ಸ್ಮರಣೆಯಲ್ಲಿ ಅವರು ಬಿಟ್ಟು ಹೋದ ಒಳ್ಳೆಯ ಸ್ಮರಣೆಗಳು ನಮ್ಮಲ್ಲಿ ಉಳಿಯುವುದಂತೂ ನಿಜ!
ಲೇಖನ ಮುಗಿಸುವ ಮುನ್ನ ಅವರು ತೀರಿಕೊಂಡಾಗ ನನ್ನ ಮನಸ್ಸಿನಲ್ಲಿ ಮೂಡಿಬಂದ ಭಾವನೆಗಳನ್ನು ಇಲ್ಲಿ ಉಲ್ಲೇಖಿಸಲು ಇಚ್ಛಿಸುತ್ತೇನೆ:
ನಿಮ್ಮ ಅಮೆರಿಕದ ಪ್ರವಾಸಗಳ ಸಂದರ್ಭದಲ್ಲಿ ನಮ್ಮೊಡನೆ ನಡೆಸಿದ ಸಾಹಿತ್ಯಿಕ ಸಂವಾದಗಳು ಅಮೆರಿಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಕೆರಳಿಸಿದೆ. ನಿಮ್ಮ ಪ್ರೋತ್ಸಾಹಕ್ಕಾಗಿ ‘ಎದೆ ತುಂಬಿ’ದ ಕೃತಜ್ಞತೆಗಳು. ನೀವು ಇಂದು ನಮ್ಮ ಮಧ್ಯೆ ಭೌತಿಕವಾಗಿ ಇಲ್ಲದಿದ್ದರೂ, ನಮ್ಮೆಲ್ಲರ ಸ್ಮರಣೆಯಲ್ಲಿಯಲ್ಲಂತೂ ಸದಾ ಉಳಿದಿದ್ದೀರಿ. ಅದೇ ನಮ್ಮೆಲ್ಲರಿಗೂ ನೀವು ಬಿಟ್ಟು ಹೋದ ಅನನ್ಯ ಪ್ರೀತಿಯ ಬಳುವಳಿ. “ಪ್ರೀತಿ ಇಲ್ಲದ ಮೇಲೆ ಹೂವು ಅರಳಿತು ಹೇಗೆ?” – ಈ ನಿಮ್ಮ ಸಂದೇಶ ಪ್ರತಿಧ್ವನಿಸುತ್ತಲೇ ಇದೆ. ನಿಮ್ಮ ಪ್ರೀತಿ ನಮ್ಮೆಲ್ಲರ ಮನಸ್ಸನ್ನು ಅರಳಿಸಿದೆ. ನಿಮಗೆ ನಮ್ಮ ಪ್ರೀತಿಪೂರ್ವಕ ನಮನ….!
***************