೨೦೧೩ರ ಮೇ ೧೮ ಮತ್ತು ೧೯ರಂದು ನಾನು ಹ್ಯೂಸ್ಟನ್’ನ ಕನ್ನಡದ ಸಾಹಿತ್ಯಾಭಿಮಾನಿಗಳ ಜತೆಯಲ್ಲಿ ಕಳೆದ ಕ್ಷಣಗಳು ಕರ್ನಾಟಕಕ್ಕಿಂತ ಒಂದು ಭಿನ್ನವಾದ, ಆದರೆ ಕನ್ನಡದ ವರ್ತಮಾನ ಮತ್ತು ಭವಿಷ್ಯದ ಗತಿಯನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ತೀರಾ ಉಪಯುಕ್ತವಾದ ಕ್ಷಣಗಳಾಗಿ ಇಂದಿಗೂ ಉಳಿದಿರುವುದನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅಂದಿನ ಕನ್ನಡ ಸಾಹಿತ್ಯ ರಂಗದ ಎಲ್ಲರಿಗೆ ಮತ್ತು ನನ್ನನ್ನು ಅಲ್ಲಿಗೆ ಕರೆಸಿಕೊಳ್ಳಲು ಕಾರಣರಾದ ಮಿತ್ರ ಡಾ. ಎಚ್.ವೈ. ರಾಜಗೋಪಾಲ ಹಾಗೂ ನ್ಯೂ ಜರ್ಸಿಯ ಇತರ ಸ್ನೇಹಿತರಿಗೆ ನಾನು ಕೃತಜ್ಞನಾಗಿರಲೇ ಬೇಕು. ಕರ್ನಾಟಕದಲ್ಲಿ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನಗಳಿಗಿಂತ ತೀರ ಭಿನ್ನವಾದ, ಹೆಚ್ಚು ಪರಿಶುದ್ಧವಾದ ಕನ್ನಡ ಮನಸ್ಸುಗಳು ತಮ್ಮ ಭಿನ್ನತೆಗಳನ್ನೆಲ್ಲಾ ಬದಿಗಿಟ್ಟು ಕನ್ನಡ ಬಂಧುಗಳ ಹೃದಯಗಳು ಒಂದುಗೂಡಿ, ಒಂದೇ ಕುಟುಂಬವಾಗಿ ಆನಂದಿಸುವ ಕ್ಷಣಗಳನ್ನು ನಾನಲ್ಲಿ ಕಂಡುಕೊಂಡೆ.
ಕರ್ನಾಟಕದ ಸಮ್ಮೇಳನಗಳಲ್ಲಿ ಅಧ್ಯಕ್ಷರ ಆಯ್ಕೆಯಲ್ಲೇ ಆರಂಭವಾಗುವ “ಸಾಮಾಜಿಕ ನ್ಯಾಯ”ದ ಹೆಸರಿನಲ್ಲಿ ಎದ್ದುಕಾಣುವ ಜಾತಿ, ಲಿಂಗ- ಇತ್ಯಾದಿಗಳ ವಾದಗಳ ಸುಳಿವು ಅಮೆರಿಕದ ನೆಲದಲ್ಲಿ ನಮ್ಮ ಕನ್ನಡದ ಸೋದರ ಸೋದರಿಯರಲ್ಲಿ ನಾನು ಕಾಣದೇ ಇದ್ದದ್ದೇ ನಾನು ಅಲ್ಲಿಯ ಸಾಹಿತ್ಯೋತ್ಸವವನ್ನು ಮೆಚ್ಚಲು ಕಾರಣ. ಒಬ್ಬ ಸಮಾಜ ಶಾಸ್ತ್ರಜ್ಞನಾಗಿ ನಾನು ಇಂದಿನವರೆಗೆ ಅತ್ಯಂತ ಜಾಗ್ರತೆಯಿಂದ ಇಂದಿನ ಸಾಹಿತಿಗಳ “ಒಲವು”ಗಳೆನ್ನುವ ತುರಿಕೆಗಿಡಗಳಿಂದದೂರವೇ ಉಳಿದುಕೊಂಡು ಬಂದವನು. ಕಳೆದ ನಾಲ್ಕೈದು ದಶಕಗಳಲ್ಲಿ ನಾನು ನಿಕಟವಾಗಿದ್ದ ಸಾಹಿತಿಗಳೆಂದರೆ, ಗೋಪಾಲಕೃಷ್ಣ ಅಡಿಗರು, ಶಿವರಾಮ ಕಾರಂತರು ಮತ್ತು ಈಚಿನ ತನಕ ಅನಂತಮೂರ್ತಿಯವರು. ಅನಂತಮೂರ್ತಿಯವರ ಅತ್ಯಂತ ನಿಕಟವರ್ತಿಯಾಗಿದ್ದರೂ ಅವರ ‘ಒಲವು’ಗಳಿಗೆ ಪೂರ್ತಿ ಮತಾಂತರವಾಗದೆ, ಆದರೂ ಅತ್ಯಂತ ಆತ್ಮೀಯತೆಯಿಂದ ಇದ್ದವನು. ಹಾಗೆಯೇ ಡಿ.ಆರ್. ನಾಗರಾಜ ನನ್ನ ಮತ್ತೊಬ್ಬ ಸಂವಾದಿ ಗೆಳೆಯ. ಪರಸ್ಪರ ಮೆಚ್ಚಿಕೊಂಡೂ ನಮ್ಮತನವನ್ನು ಇಬ್ಬರೂ ಕಾಯ್ದುಕೊಂಡವರು. ಇವರೆಲ್ಲರೂ ಇಂದಿಗೆ ನನ್ನ ಪಾಲಿಗೆ ಇತಿಹಾಸ.
ನಾನು ಭಾಗವಹಿಸಿದ ಸಾಹಿತ್ಯ ಸಮ್ಮೇಳನಗಳೂ ೪೦-೫೦ ವರ್ಷಗಳ ಹಿಂದೆ ಎರಡು, ಕಳೆದ ದಶಕದಲ್ಲಿ ಎರಡು. ೧೯೫೦ರ ದಶಕದ ಬೀದರಿನ ಸಮ್ಮೇಳನ ಡಿ.ಎಲ್. ನರಸಿಂಹಾಚಾರ್ ಅವರ ಅಧ್ಯಕ್ಷತೆಯಲ್ಲಿ; ವಿದ್ಯಾರ್ಥಿಯಾಗಿ ಪ್ರಾಧ್ಯಾಪಕ ಭೀಮಸೇನರಾಯರ ಜತೆಯಲ್ಲಿ ಭಾಗವಹಿಸಿದ್ದೆ. ಮಾಸ್ತಿಯವರ, ‘ಚೆನ್ನಬಸವನಾಯಕ’ನ ಬಗೆಗಿನ ಅಂದಿನ ಪ್ರಧಾನ ವಸ್ತು ಮಾತ್ರ ಇಂದಿಗೂ ನೆನಪಿನಲ್ಲಿ ಉಳಿದದ್ದು. ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ ಗೋಕಾಕರು ಅಧ್ಯಕ್ಷರು. ಈ ಸಮ್ಮೇಳನದಲ್ಲಿ ಗೋಕಾಕರು ಪದೇ ಪದೇ “ಮಾನವನಾಗಬೇಕು”- ಎಂದು ಹೇಳುತ್ತಿದ್ದದ್ದು ಮತ್ತು ಇದರ ಬಗ್ಗೆ ಮುಂದಕ್ಕೆ “ಬೀಚಿ”ಯವರ ವಿಶ್ಲೇಷಣೆ ನೆನಪಿವೆ. ಗೋಕಾಕರು ವೇದಿಕೆಯಲ್ಲಿ ಭಾಷಣಮಾಡುವಾಗ ಮುಂದೆ ಕುಳಿತಿದ್ದ ಬೀಚಿಯವರಿಗೆ ಕುತೂಹಲ! ‘ಇವರೇಕೆ ಪದೇ ಪದೇ ಮಾನವನಾಗಬೇಕೆನ್ನುತ್ತಾರೆ? ನಾವು ಮುಂದೆ ಕುಳಿತವರು ಮಾನವರಲ್ಲವೆ?’ ಕೊನೆಗೂ ಬೀಚಿಯವರ ಕಣ್ಣಿಗೆ ಬಿದ್ದದ್ದು ವೇದಿಕೆಯಲ್ಲೇ ಗೋಕಾಕರ ಎಡ ಮತ್ತು ಬಲದಲ್ಲಿ ಕುಳಿತವರು: ‘ಕೋಣದ ಚೆನ್ನಬಸಪ್ಪ’ ಮತ್ತು ‘ವೃಷಭೇಂದ್ರ ಸ್ವಾಮಿ’ಯವರು! ಬೀಚಿಗೆ ಇದೀಗ ಅರ್ಥವಾಯಿತಂತೆ ಮಾನವನಾಗಬೇಕಾದ ಅಗತ್ಯ!
ಒಂದು ಸಮ್ಮೇಳನವು ದೀರ್ಘಕಾಲಾನಂತರ ನಮ್ಮ ನೆನಪಿನಲ್ಲಿ ಉಳಿಯುವುದು ಇಂತಹ ಎದ್ದುಕಾಣುವ ಘಟನೆಗಳಾಗಿ. ಈಚಿನ ಮೂಡಬಿದರೆಯ ಮತ್ತು ಉಡುಪಿಯ ಸಮ್ಮೇಳನಗಳು ನನಗಂತೂ ಉತ್ತಮವಾಗಿ ವ್ಯವಸ್ಥಿತವಾಗಿ ಏರ್ಪಡಿಸಿದ ಜಾತ್ರೆಗಳಾಗಿ ನೆನಪಿಗೆ ಬರುತ್ತವೆ. ಅಧ್ಯಕ್ಷರಿಂದ ಹಿಡಿದು ಉಳಿದೆಲ್ಲರ ಮಾತುಗಳಲ್ಲಿ ಯಾವುವೂ ಗಮನಾರ್ಹವಾದವುಗಳಾಗಿ ನೆನಪಿಗೆ ಬರುತ್ತಿಲ್ಲ. ಸಾಹಿತಿಗಳ ಬೇರೆ ಬೇರೆ ಬಣಗಳು ವಿಶಾಲ ಬಯಲಿನಲ್ಲಿ ತಿರುಗಾಡುತ್ತಿದ್ದ ಚಿತ್ರಣವಷ್ಟೇ ಇಂದಿನ ನನ್ನ ನೆನಪು.
ಹ್ಯೂಸ್ಟನ್’ನಲ್ಲಿ ನೆರೆದವರು ಸಾವಿರಗಟ್ಟಲೆಯೂ ಅಲ್ಲ. ಕೇವಲ ಇನ್ನೂರರ ಆಚೆ ಈಚೆ ಇರಬಹುದು. ಆದರೆ ನೆರೆದವರ ನಡುವೆ ಒಂದು ಹೃದಯಗಳ ಬೆಸುಗೆಯ ಪರಿಸರ. ಪ್ರತ್ಯೇಕಿಸಬಹುದಾದ ಒಲವುಗಳ ಸೆಳೆತಗಳಿರಲಿಲ್ಲ. ನಾವೆಲ್ಲ ಕನ್ನಡದವರು- ಎಂದು ಒಂದೇ ಕುಟುಂಬವಾಗಿಸುವ ಭಾವಬಂಧನ. ತೀರ ಇಳಿವಯಸ್ಸಿನಲ್ಲೂ ಯೌವನದ ಹುರುಪಿನಲ್ಲಿ ಸಪತ್ನೀಕ/ಸಪತೀಕವಾಗಿ ಬಂದವರು! ಪರಸ್ಪರ ಪರಿಚಯಿಸಿಕೊಳ್ಳುವ, ಹತ್ತಿರ ಕುಳಿತು ತಿಂಡಿ ಊಟಗಳನ್ನು ಸವಿಯುವ ಸಂಭ್ರಮದ ವಾತಾವರಣ. ಅತ್ಯಂತ ಆತ್ಮೀಯ “homogeneous community”ಯ ಪರಿಸರ. “Ethnic bond” ಎದ್ದು ಕಾಣುತ್ತಿತ್ತು. ನನಗನ್ನಿಸುತ್ತಿತ್ತು- ಕನ್ನಡವನ್ನು ಉಳಿಸುವುದು ಸಾಹಿತಿಗಳ ಸಿದ್ಧಾಂತಗಳ ಮತ್ತು ವಿಮರ್ಶೆಗಳ ತಾಕಲಾಟದಿಂದಲ್ಲ. ಇಲ್ಲಿರುವಂತಹ ಹೃದಯಗಳ ಬೆಸುಗೆಯಿಂದ, ತಮ್ಮನ್ನು ಮತ್ತೆ ಮತ್ತೆ ಅರಿತುಕೊಳ್ಳುವುದರಿಂದ, ಒಟ್ಟಾಗುವುದರಿಂದ. ಒಡೆಯುವ ಮಾತುಗಳಿಂದಲ್ಲ- ಎನ್ನುವುದು. ಕನ್ನಡ ಮಾತನಾಡುವುದು ಒಂದೇ ಸಾಕು- ಕನ್ನಡ ಕಾಲವಾಹಿನಿಯಲ್ಲಿ ಭವಿಷ್ಯವನ್ನು ಕಂಡುಕೊಳ್ಳಲು. ಸಾಹಿತ್ಯವಲ್ಲ. ಜಗತ್ತಿನಲ್ಲಿ ಭಾಷೆಗಳು ಉಳಿದುಬಂದದ್ದು ಮಾತನಾಡುವುದರಿಂದ, ಲಿಖಿತ ಗ್ರಂಥಗಳಿಂದಲ್ಲ, ಲಿಪಿಯಿಂದಲೂ ಅಲ್ಲವೆನ್ನುವ ಅಂಶ ಸಾಹಿತಿಗಳಿಗೂ ತಿಳಿದರೆ, ಅವರಲ್ಲಿ ವಿನಯವು ಮೂಡೀತು. ಸಾಹಿತಿಯು ಬರೆಯುವಾಗ ಅದು ತನ್ನನ್ನು ತಿಳಿದುಕೊಳ್ಳಲು, ತನ್ನ ತೃಪ್ತಿಗಾಗಿ- ಎಂದಾಗ ಅದು ಸ್ವಾಗತಾರ್ಹ ಕೊಡುಗೆಯಾಗುತ್ತದೆ. ಇದನ್ನು ಬಿಟ್ಟು ಸಮಾಜವನ್ನು ತಿದ್ದಲು- ಎಂದಾಗ ಅದು ಅಹಂಕಾರದ ಪ್ರದರ್ಶನವಾಗುತ್ತದೆ.
ಹ್ಯೂಸ್ಟನ್ನಿನ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಲ್ಲದೆ ಅನೇಕ ಇತರರೂ ವೇದಿಕೆಯಲ್ಲಿ ಭಾಗವಹಿಸಿದ್ದಾರೆ, ತಮ್ಮ ಕೃತಿಗಳನ್ನು ಓದಿದ್ದಾರೆ, ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಎಲ್ಲರಲ್ಲೂ ನಾನು ಕಂಡದ್ದು ಪ್ರದರ್ಶನದ ಬದಲು ತನ್ನನ್ನು ಇತರರ ಮುಂದೆ ತೆರೆದುಕೊಳ್ಳುವ ಹಂಬಲ. ಇತರರ ಪ್ರತಿಕ್ರಿಯೆಯು ಪ್ರತಿಬಿಂಬದ ರೂಪವಾಗಿ ಅದರಲ್ಲಿ ತನ್ನ ಬಿಂಬವನ್ನು ಅರಿತುಕೊಳ್ಳುವ ಆಸಕ್ತಿ. ಮಕ್ಕಳ ನೃತ್ಯ, ವಿದುಷಿಯರ ಹಾಡುಗಾರಿಕೆ- ಎಲ್ಲವನ್ನೂ ಸೇರಿಸಿಕೊಂಡು.
ಇನ್ನು ಸಮ್ಮೇಳನದ ವೈಚಾರಿಕ ನೆಲೆಯಲ್ಲಿ ನನ್ನನ್ನು ಆಕರ್ಷಿಸಿದ್ದು, ಅಲ್ಲಿಯ ಅನೇಕ ಲೇಖಕರು ಬಿಡುಗಡೆಗೊಳಿಸಿದ ಅನೇಕ ಹೊತ್ತಗೆಗಳು. ಪ್ರತಿಯೊಂದೂ ನಮ್ಮ ಸಾಹಿತ್ಯ ಸಮ್ಮೇಳನದಲ್ಲಿ ಹೊರತರುವ ಯಾರೂ ಓದಲು ಉಪಯುಕ್ತವಾಗದ ಒಂದು ಗುಂಪಿನವರ ಬರಹಗಳಿಗಿಂತ ಭಿನ್ನವಾದವುಗಳು. ಮೈ.ಶ್ರೀ. ನಟರಾಜರಂಥವರು ಕನ್ನಡದ ಉತ್ಕೃಷ್ಟ ಸಾಹಿತಿಗಳ ಸಾಲಿಗೆ ಸೇರಬೇಕಾದವರು. ನಮ್ಮ ಹೆಮ್ಮೆಯ ಆಂಗ್ಲ ಸಾಹಿತಿ ದಿ. ರಾಜಾರಾಯರ ಕೃತಿಯ ಕನ್ನಡ ಅನುವಾದ- ‘ನಾರೀಗೀತ’-ದ ರೂವಾರಿಯಾಗಿದ್ದವರು. ಇವರೆಲ್ಲರ ಬರಹಗಳ ಜತೆಗೆ ಸಮ್ಮೇಳನದ ನೆನಪಿಗಾಗಿ ಹೊರತಂದ ಒಂದು ಉತ್ತಮ ಸಂಕಲನ “ಬೇರು ಸೂರು” ಸಮ್ಮೇಳನದ ಪ್ರಾಂಜಲ ಕಲಶದಂತಿತ್ತು.
ಗುರುಪ್ರಸಾದ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಮತ್ತು ಅಮೆರಿಕದಿಂದ ಇತ್ತೀಚೆಗೆ ಉಡುಪಿಗೆ ಮರಳಿ ಇಲ್ಲೇ ನೆಲೆಸಿರುವ ಜ್ಯೋತಿ ಮಹಾದೇವ್- ಇವರ ಸಂಪಾದನದಲ್ಲಿ ಹೊರತಂದ, ಅಮೆರಿಕದಲ್ಲಿ ನೆಲೆಸಿರುವ ಅನೇಕ ಬರಹಗಾರರ ಬರಹಗಳ ಸಂಕಲನ. ಕೃತಿಯ ಹೆಸರೇ ಸಂಕೇತಿಸುವಂತೆ ಈ ಎಲ್ಲ ಬರಹಗಾರರ ಬೇರು ಮತ್ತು ಸೂರಿನ ಕಥೆ-ವ್ಯಥೆಗಳನ್ನು ಅವರ ಲೇಖನಗಳಲ್ಲಿ ಗುರುತಿಸಬಹುದು. ಕರ್ನಾಟಕದ ಬೇರು ಕಿತ್ತುಕೊಳ್ಳದೆ, ಅಮೆರಿಕದಲ್ಲಿ ಸೂರು ಕಟ್ಟಿಕೊಂಡು, ಅಲ್ಲೇ ಬದುಕುತ್ತಿರುವ, ಬದುಕಬೇಕಾಗಿರುವ ಜೀವನವನ್ನು ಈ ಕೃತಿಯ ಮೂಲಕ ಕರ್ನಾಟಕದಲ್ಲೇ ಬದುಕುತ್ತಿರುವ ಕನ್ನಡಿಗರು ತಿಳಿಯಲು ಇದೊಂದು ಉತ್ತಮ ಸಾಧನ. ಸುಮಾರು ೫೦೦ ಪುಟಗಳಷ್ಟು ದೊಡ್ಡ ಗಾತ್ರದ ಈ ಗ್ರಂಥ “Indian Diaspora” ಪ್ರಕ್ರಿಯೆಯಲ್ಲಿ ಪ್ರಸಕ್ತ ದಶಕಗಳಲ್ಲಿ ಸೇರಿಕೊಂಡ ಕನ್ನಡಿಗರ ‘ಜೀವನ ದರ್ಶನ’ವನ್ನಿದು ತೆರೆದಿಡುತ್ತದೆ. ೩೮ ಲೇಖಕರಿಂದ ಬೇರೆ ಬೇರೆ ವಿಷಯಗಳ ಮೇಲೆ ಬರಹಗಳನ್ನು ಸಂಗ್ರಹಿಸಿ ಹೊರತಂದ ಈ ಗ್ರಂಥ ಒಂದು ಗಮನಾರ್ಹ ಕೊಡುಗೆ.
ಈ “ಡಯಾಸ್ಪೋರ” ಪ್ರಕ್ರಿಯೆ ಇಂದಿಗೆ ನಮ್ಮ ಪ್ರತಿಯೊಂದು ಮನೆಯನ್ನೂ ಪ್ರವೇಶಿಸಿದೆ. ಹೀಗಿರುವಾಗ ನಾವಿಂದು ತೀರಾ ಅಪ್ರಸ್ತುತವಾದ ಎಡ-ಬಲದ ವಾದ, ಹಿಂದುಳಿದವರು, ‘ಕಾರ್ಪೊರೇಟ್’, ‘ಮನುವಾದಿ’, ‘ಶೂದ್ರ-ಬ್ರಾಹ್ಮಣ’, ಇತ್ಯಾದಿ ಅರ್ಥ ಕಳೆದುಕೊಂಡ ಶಬ್ದಗಳಿಂದ ಬರಹಗಳನ್ನು ಮುಂದುವರಿಸುವುದು ಈ ಡಯಾಸ್ಪೋರ ಪ್ರಕ್ರಿಯೆಯಲ್ಲಿ ನಮ್ಮಿಂದ ‘alien’ ಆಗುತ್ತಿರುವ ನಮ್ಮ ಮಕ್ಕಳಿಗೇ ಬೇಡವಾದ ಸರಕುಗಳಾಗುತ್ತವೆ ಎನ್ನುವುದನ್ನು ಗಮನಿಸುವ ಅಗತ್ಯವಿದೆ. ಜಾನ್ ಕೆನಡಿಯ ಕೆಳಗೆ ಕಾರ್ಯದರ್ಶಿಯಾಗಿದ್ದ ಖ್ಯಾತ ಇತಿಹಾಸಕಾರ ಸ್ಲೆಶಿಂಜರ್ (Schlesinger)ನ ಮಾತು ನೆನಪಾಗುತ್ತದೆ. ನಾವಿಂದು ಚಿಂತಿಸುವಾಗ, ಬರೆಯುವಾಗ ‘scavengers of the past’ ಆಗುವ ಬದಲು ‘Architects of the future’ ಆಗಬೇಕು. ಹಿಂದಿನ ಅಶೌಚವನ್ನು ನಾವು ಶುದ್ಧೀಕರಿಸಬೇಕಾಗಿಲ್ಲ. ಭೂಮಿಯೇ ಅದನ್ನು ಮಣ್ಣಾಗಿಸಿದ್ದಾಳೆ. ನಮ್ಮ ಮುಂದಿನ ಪೀಳಿಗೆಗೆ ಅವರ ಭವಿಷ್ಯದ ಕನಸುಗಳ ಶಿಲ್ಪಿಗಳಾಗಬೇಕು- ನಮ್ಮ ಬರಹಗಳಲ್ಲಿ.
‘ಬೇರು ಸೂರು’ ಗ್ರಂಥದಲ್ಲಿ ಅನೇಕ ಕತೆಗಳಿವೆ, ವೈಚಾರಿಕ ಲೇಖನಗಳಿವೆ: ಕಾರ್ಪೊರೇಟ್ ಜಗತ್ತಿನಲ್ಲಿ ದುಡಿಯುವಾಗ ಗಳಿಸಿದ ಜ್ಞಾನ ಅನುಭವಗಳ ಚಿತ್ರಣವಿದೆ- ದೇವಾಲಯಗಳ ಪರಿಚಯವಿದೆ- ರಂಗಭೂಮಿಯ ಅನುಭವ ಕಥನವಿದೆ- ಒಟ್ಟು ಅಮೆರಿಕದಲ್ಲಿರುವ ಕನ್ನಡಿಗರ ಇಂದಿನ ಜೀವನದ, ಬಹುಮುಖಿಯಾದ ಪರಿಚಯವನ್ನು ಮಾಡಿಕೊಡುವ ವಿವಿಧ ಬರಹಗಳ ಜೇನುಗೂಡು ಈ ಬೇರು ಸೂರು. ನಮ್ಮವರು ಅಲ್ಲಿ ಕಟ್ಟಿಕೊಂಡು ಬಾಳುತ್ತಿರುವ ಸೂರಿನೊಳಗೆ ಹೊಕ್ಕು ಬರೋಣವೆಂದನ್ನಿಸುವಷ್ಟು ಗಮನಿಸಲೇಬೇಕಾದ ತೀರ ಉಪಯುಕ್ತವಾದ ಮಾಹಿತಿಕೋಶ ಇದಾಗಿದೆಯೆಂದು ನಾನಿದರ ಆದ್ಯಂತ ಕಣ್ಣಾಡಿಸಿದಾಗ ಅನ್ನಿಸಿತು. ನಾನು ಓದುವುದರಲ್ಲಿ ಬಹಳ ಹಿಂದೆ. ಆದರೆ ಇದರ ಪ್ರತಿಯೊಂದು ಲೇಖನವೂ ಓದಿಸಿಕೊಂಡು ಹೋಗಿದೆ. ಶ್ರೀಕಾಂತ ಬಾಬುರವರ ನೀಲಿ ಡಬ್ಬಿಯ ಶ್ರೀಖಂಡವು ನನ್ನ ನಿದ್ದೆಯನ್ನು ಕೆಡಿಸಿದ ಕಥೆ- ಅಮೆರಿಕದಲ್ಲಿ ಮಕ್ಕಳ ಬದುಕಿಗೆ ಕನ್ನಡಿ ಹಿಡಿಯುತ್ತದೆ. ಇದಕ್ಕೆ ಪೂರಕವಾದ ಬರವಣಿಗೆ ಎಚ್.ವೈ. ರಾಜಗೋಪಾಲರ ‘ಹೊಸ ನೆಲದಲ್ಲಿ ಹೊಸ ಸಸಿಗಳು’. ಈ ಸಸಿಗಳ ಬೇರು ಮತ್ತು ಸೂರು- ಎರಡೂ ಅಮೆರಿಕವೇ. Gene ಮಾತ್ರ ಕನ್ನಡದ್ದು. ತಮ್ಮ ‘ಜೀನ್’ ಎರಡೋ ಮೂರೋ ತಲೆಮಾರಿನಲ್ಲಿ ಮರೆತೇ ಹೋಗುವ ಸಾಧ್ಯತೆಯೂ ಇದೆ. ಕನ್ನಡಿ ನೋಡಿಯೇ ಇದರ ಮೂಲವನ್ನು ತಿಳಿದುಕೊಳ್ಳಬೇಕಾದೀತು. ಕನ್ನಡ ನಾಡಿನಿಂದ ಅಮೆರಿಕ ಪ್ರವೇಶಿಸಿ ಅಲ್ಲಿಯ ಸೂರಿನೊಳಗೆ ಬದುಕಲು ಬೇಕಾದ ಸಿದ್ಧತೆಯ ಬಗ್ಗೆ ನಳಿನಿ ಮಯ್ಯರ ಸುಂದರ ಚಿತ್ರಣ, ನಾಗ ಐತಾಳರ ಕಾದಂಬರಿಯನ್ನು ನೆನಪಿಸುವಂಥದ್ದು. ಕಾಗಿನೆಲೆಯವರು ಅಮೆರಿಕದಲ್ಲೇ ನೆಲೆಯನ್ನು ಕಂಡುಕೊಂಡ ಒಬ್ಬ ಶ್ರೇಷ್ಠ ಬರಹಗಾರನೆಂದು ಅವರ ‘ನಾನು-ನೀನು’ ಓದಿದಾಗ ತಿಳಿಯಿತು. ಶ್ರೀವತ್ಸರು ತನ್ನ ಬರಹಗಳ ಮೂಲಕ ಕರ್ನಾಟಕದಲ್ಲೂ ಪರಿಚಿತರು. ಗುಂಡೂ ಶಂಕರರಲ್ಲೂ ಒಬ್ಬ ಉತ್ತಮ ಬರಹಗಾರನನ್ನು ನಾನು ಗುರುತಿಸಿದ್ದೇನೆ. ‘ಅಮೆರಿಕ- ಒಂದು ವಿಶಿಷ್ಟ ರಾಷ್ಟ್ರವೆ?’- ಈ ಲೇಖನ ಒಬ್ಬ ತನ್ನನ್ನು ತಾನೇ ತಿಳಿಯಬಯಸುತ್ತಿರುವ, ಅಮೆರಿಕಕ್ಕೇ ಹೋಗಿ ಬಾಳುವವನ ಒಳಯೋಚನೆಗಳನ್ನು ಬಿಚ್ಚಿಡುತ್ತದೆ. ವಿಮಲಾ ರಾಜಗೋಪಾಲರ ಉಸಿರಿನಲ್ಲೇ ಸಂಗೀತವಿದೆ. ಸುಪ್ತದೀಪ್ತಿಯವರ ವಲಸೆ ವೃತ್ತದ ವರಸೆಯೊಳಗೆ ಅವರ ಸಮ್ಮೋಹನಗೊಳಿಸುವ ಭಾವಗೀತೆಗಳಿಗಿಂತ ಭಿನ್ನವಾದ ಗದ್ಯವನ್ನು ಬರೆಯುವ ಸಾಮರ್ಥ್ಯ ಕಾಣುವ ಅವಕಾಶ. ಮೀರಾ ರಾಜಗೋಪಾಲರು ಒಬ್ಬ ಗಮನಾರ್ಹ ಲೇಖಕಿಯಾಗಿ ಇಲ್ಲಿ ಎದ್ದು ಕಾಣುತ್ತಾರೆ. ಇದೇ ರೀತಿ ಪಟ್ಟಿ ಮಾಡಲು, ಎಚ್.ಕೆ. ಚಂದ್ರಶೇಖರ್, ವೈಶಾಲಿ ಹೆಗಡೆ, ತ್ರಿವೇಣಿ ಶ್ರೀನಿವಾಸರಾವ್, ವತ್ಸ ಕುಮಾರ್, ಎಸ್.ಎನ್. ಶ್ರೀಧರ್, ಕೃಷ್ಣರಾಜು, ಕೆ.ಜಿ.ವಿ. ಕೃಷ್ಣ- ಹೀಗೆ ಎಲ್ಲರ ಬಗ್ಗೆಯೂ ನನ್ನ ಮೆಚ್ಚುಗೆಯನ್ನು ಪ್ರಕಟಿಸಬೇಕಾಗುತ್ತದೆ. ಸಮ್ಮೇಳನಗಳು ಇಂತಹ ಕೃತಿಯನ್ನು ಹೊರತಂದಲ್ಲಿ ಅವು ಚಿರಸ್ಮರಣೀಯವಾಗುತ್ತವೆ; ಹಕ್ಕಿಗಳು ಒಂದು ಒಳ್ಳೆಯ ಹಣ್ಣಿನ ಮರದ ಹಣ್ಣುಗಳನ್ನು ಕಚ್ಚಿಕೊಂಡು ಗಗನಕ್ಕೆ ಹಾರಿ ಬೀಜ ಪ್ರಸಾರ ಮಾಡಿದಂತೆ.
Mar 232015