ಕನ್ನಡ ಸಾಹಿತ್ಯರಂಗದ ಸಮ್ಮೇಳನಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸುತ್ತಿರುವ ಸಾಹಿತಿ ಪ್ರಧಾನ್ ಗುರುದತ್ ಅವರ ಕಿರುಪರಿಚಯ ಇಲ್ಲಿದೆ:-
ಪ್ರಧಾನ್ ಗುರುದತ್ತ (ಮೇ, ೩೦, ೧೯೩೮) ಅವರು ಅನುವಾದ ಸಾಹಿತ್ಯ ಪ್ರಕಾರದಲ್ಲಿ ಪ್ರಮುಖ ಹೆಸರು. ಕರ್ನಾಟಕ ಅನುವಾದ ಸಾಹಿತ್ಯ ಅಕಾಡೆಮಿಯ ಮುಖ್ಯಸ್ಥರಾದ, ಗುರುದತ್ತರು ಬಹುಭಾಷಾ ವಿದ್ವಾಂಸರು. ಕನ್ನಡ, ಹಿಂದಿ, ಸಂಸ್ಕೃತ, ತೆಲುಗು, ತಮಿಳು, ಮರಾಠಿಗಳ ಜೊತೆ ಇಂಗ್ಲಿಷ್, ಫ್ರೆಂಚ್ ಭಾಷೆಗಳಲ್ಲಿಯೂ ಪರಿಣತರು. ಗುರುದತ್ತ ಅವರು ಕನ್ನಡ, ಹಿಂದಿ ಭಾಷೆಗಳಲ್ಲಿ ಎಂ.ಎ. ‘ಅನುವಾದ’ವಿಷಯದಲ್ಲಿ ಡಾಕ್ಟರೇಟ್ ಪದವಿಗಳಿಸಿದ್ದಾರೆ. ಅನುವಾದವಲ್ಲದೆ, ಸ್ವತ: ಲೇಖಕರಾಗಿಯೂ, ಸಂಪಾದಕರಾಗಿಯೂ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ. ಇವರ ಪುಸ್ತಕಗಳನ್ನು ಹಲವಾರು ಪ್ರಮುಖ ಪ್ರಕಾಶನಗಳು ಹೊರತಂದಿವೆ. ನೂರೈವತ್ತಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿರುವುದಲ್ಲದೆ, ೨೫೦ ಸಂಶೋಧನಾ ಲೇಖನಗಳಲ್ಲದೆ, ಇಂಗ್ಲಿಷ್ ಮತ್ತು ಭಾರತೀಯ ಭಾಷೆಗಳ ಸಾಹಿತ್ಯವನ್ನು ಕನ್ನಡಕ್ಕೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಲೇ ಬಂದಿದ್ದಾರೆ.
ಬೋಧಕರಾಗಿಯೂ ಮೂರು ದಶಕಗಳ ಅಪಾರ ಅನುಭವ ಇವರದು. ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಬೋಧಕರಾಗಿಯಲ್ಲದೆ, ಕೆಲವು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಡಾಕ್ಟರೇಟ್ ಪದವಿ ಗಳಿಸಿದ್ದಾರೆ. ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಅಧ್ಯಯನ ಕೇಂದ್ರದಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.
ಗುರುದತ್ ಅವರು ಸಲ್ಲಿಸಿರುವ ಸಾಹಿತ್ಯ ಸೇವೆಯನ್ನು ಗುರುತಿಸಿ ಅವರಿಗೆ ಹಲವಾರು ಗೌರವಗಳು ಸಲ್ಲಿಸಲಾಗಿದೆ. ‘ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ’(೧೯೯೪), ‘ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ(೨೦೦೩)’, ‘ಆರ್ಯಭಟ’ ‘ದೇಜಗೌ’ ಪ್ರಶಸ್ತಿಗಳೂ ಸೇರಿದಂತೆ ಹಲವು ಪ್ರತಿಷ್ಠಿತ ಪುರಸ್ಕಾರಗಳು ಗುರುದತ್ತರನ್ನು ಅರಸಿಬಂದಿವೆ.