ಕನ್ನಡ ಸಾಹಿತ್ಯ ರಂಗದ ಎಂಟನೆಯ ವಸಂತ ಸಾಹಿತ್ಯೋತ್ಸವ
ಕೇಳಿ! ಕೇಳಿ!! ಅಮೆರಿಕದ ಕನ್ನಡ ಸಾಹಿತ್ಯೋತ್ಸಾಹಿಗಳಿಗೆ ಸಂತಸದ ಸುದ್ದಿ!!! ೨೦೦೩ ನೆಯ ಇಸವಿಯಿಂದ ಈವರೆಗೆ ಏಳು ವಸಂತ ಸಾಹಿತ್ಯೋತ್ಸವಗಳನ್ನು ಕ್ರಮಬದ್ಧವಾಗಿ ನಡೆಸಿ ಫಿಲಡೆಲ್ಫಿಯ, ಲಾಸ್ ಏಂಜಲೀಸ್, ಶಿಕಾಗೋ, ವಾಷಿಂಗ್‌ಟನ್ ಡಿ.ಸಿ. ಸ್ಯಾನ್ ಹೋಸೆ, ಹ್ಯೂಸ್ಟನ್ ಮತ್ತು ಸೇಂಟ್ ಲೂಯಿಸ್ ನಗರಗಳ ಸುತ್ತಮುತ್ತಲ ಕನ್ನಡಿಗರಿಗೆ ಶ್ರೀಮಂತ ಕನ್ನಡ ಸಾಹಿತ್ಯದ ವಿವಿಧ ಮುಖಗಳನ್ನು ಪರಿಚಯಮಾಡಿಕೊಟ್ಟು, ವಿವಿಧ ಮೂಲವಸ್ತುಗಳನ್ನೊಳಗೊಂಡ ಹಲವು ಹತ್ತು ಪುಸ್ತಕಗಳನ್ನು ಪ್ರಕಟಿಸಿ, ಕರ್ನಾಟಕದ ಹತ್ತಾರು ಹೆಸರಾಂತ ಲೇಖಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಅಮೆರಿಕದ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಕನ್ನಡ ಸಾಹಿತ್ಯ ರಂಗದ (ಕಸಾರಂ) ಎಂಟನೆಯ ವಸಂತ ಸಾಹಿತ್ಯೋತ್ಸವದ ಸ್ಥಳ ಮತ್ತು ದಿನಾಂಕಗಳು ಇದೀಗ ನಿಶ್ಚಯಗೊಂಡಿವೆ.
ನ್ಯೂ ಇಂಗ್ಲೆಂಡ್ ಕನ್ನಡ ಕೂಟ–“ಮಂದಾರ”ದ ಆಶ್ರಯದಲ್ಲಿ ಮುಂದಿನ ವಸಂತ ಸಾಹಿತ್ಯೋತ್ಸವ ನಡೆಯಲಿದೆ. ಸೆಪ್ಟೆಂಬರ್ ೧೭ರಂದು ಮಂದಾರದ ಸದಸ್ಯರು ಆಚರಿಸಿದ ಗಣೇಶೋತ್ಸವದ ಶುಭ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ರಂಗದ ಕಾರ್ಯಕಾರೀ ಸಮಿತಿಯ ಅಧ್ಯಕ್ಷರಾದ ಡಾ. ಮೈ. ಶ್ರೀ. ನಟರಾಜರು ಭಾಗವಹಿಸಿ ತಮ್ಮ ಸಂಸ್ಥೆಯ ಮೂಲೋದ್ದೇಶಗಳು ಮತ್ತು ಅದರ ಹದಿಮೂರು ವರ್ಷಗಳ ಇತಿಹಾಸವನ್ನು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ನ್ಯೂ ಇಂಗ್ಲೆಂಡ್ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟ ನಂತರ ಮುಂದಿನ ವಸಂತ ಸಾಹಿತ್ಯೋತ್ಸವ ನಡೆಸುವ ಬಗ್ಗೆ ಕಸಾರಂ ಮತ್ತು ಮಂದಾರ ಸಂಸ್ಥೆಗಳು ಪರಸ್ಪರ ಮಾಡಿಕೊಂಡ ಒಪ್ಪಂದಕ್ಕೆ ಮೈ.ಶ್ರೀ. ನಟರಾಜ ಮತ್ತು ಮಂದಾರದ ಅಧ್ಯಕ್ಷ ಡಾ. ಸುಧಾಕರ ರಾವ್ ಅವರುಗಳು ಸಭಿಕರ ಸಮ್ಮುಖದಲ್ಲಿ ಸಹಿ ಹಾಕುವುದರ ಮೂಲಕ ಎಂಟನೆಯ ಸಮ್ಮೇಳನದ ತಯಾರಿಗೆ ಔಪಚಾರಿಕ ಪ್ರಾರಂಭವನ್ನು ಮಾಡಿದ್ದಾರೆಂದು ತಿಳಿಸಲು ಕಸಾರಂ ಆಡಳಿತ ಮಂಡಲಿಗೆ ಅತ್ಯಂತ ಆನಂದವಾಗುತ್ತಿದೆ. ಬಾಸ್ಟನ್ ಪ್ರದೇಶದಲ್ಲಿ ೨೦೧೭ರ ಏಪ್ರಿಲ್ ಕೊನೆಯ ವಾರಾಂತ್ಯದಲ್ಲಿ (೨೯ ಮತ್ತು ೩೦ ನೆಯ ತಾರೀಖು) ನಡೆಯಲಿರುವ ಈ ಬಾರಿಯ ಸಮ್ಮೇಳನದ ಮೂಲ ವಸ್ತು (ಥೀಮ್) “ಭಕ್ತಿ ಸಾಹಿತ್ಯ.” ಇದೇ ವಿಷಯವನ್ನು ಕುರಿತು ಪ್ರಮುಖ ಭಾಷಣ ಮಾಡಲು ಕರ್ನಾಟಕದಿಂದ ಶ್ರೀಯುತ ಲಕ್ಷ್ಮೀಶ ತೋಳ್ಪಾಡಿಯವರು ಮುಖ್ಯ ಅತಿಥಿಗಳಗಿ ಬರಲು ದಯಮಾಡಿ ಒಪ್ಪಿರುವರೆಂದು ತಿಳಿಸಲು ಆಡಳಿತ ಮಂಡಲಿಗೆ ಹರ್ಷವಾಗುತ್ತಿದೆ.
ಅಮೆರಿಕದ ಕನ್ನಡ ಸಾಹಿತ್ಯಪ್ರಿಯರೇ, ದಯವಿಟ್ಟು ದಿನಾಂಕ ಮತ್ತು ಸಾಹಿತ್ಯದ ಹಬ್ಬ ನಡೆಯುವ ಊರು ಇವೆರಡನ್ನೂ ಗುರುತು ಹಾಕಿಕೊಳ್ಳಿ. ಈಗಾಗಲೇ. ಭಕ್ತಿಸಾಹಿತ್ಯದ ವಿವಿಧ ಮುಖಗಳನ್ನು ಪರಿಚಯಿಸುವ ಅಮೆರಿಕದ ಬರಹಗಾರರೇ ಬರೆದ ಲೇಖನಗಳ ಸಂಗ್ರಹದ ಪುಸ್ತಕವನ್ನು ಸಿದ್ಧಗೊಳಿಸಲು ಕಸಾರಂ ಸಂಪಾದಕ ಮಂಡಲಿ ಭರದಿಂದ ಕಾರ್ಯ ಪ್ರಾರಂಭಿಸಿದೆ. ಎಂದಿನಂತೆ, ಕವಿಗೋಷ್ಠಿ, ಪ್ರಬಂಧಗಳ ಮಂಡನೆ, ಪುಸ್ತಕಗಳ ಲೋಕಾರ್ಪಣೆ ಮತ್ತು ಲೇಖಕರ ಪರಿಚಯ, ಪುಸ್ತಕಗಳ ಮಳಿಗೆ, ಅತಿಥಿಗಳೊಂದಿಗೆ ಪ್ರಶ್ನೋತ್ತರಗಳು, ಮಂದಾರ ಕಲಾವಿದರ ಉತ್ತಮ ಮಟ್ಟದ ಮನರಂಜನೆ, ಜೊತೆಗೆ ರಸದೌತಣ, ಇವನ್ನೆಲ್ಲ ತಪ್ಪಿಸಿಕೊಳ್ಳಬೇಡಿ, ೨೦೧೭, ಏಪ್ರಿಲ್ ತಿಂಗಳಿನ ೨೯ ಮತ್ತು ೩೦ರ ದಿನಗಳನ್ನು ಕಾದಿರಿಸಿಕೊಳ್ಳಿ.
ಹ್ಞಾ! ಮತ್ತೊಂದು ಬಹುಮುಖ್ಯ ವಿಷಯ. ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆ ಮತ್ತಿತರ ತಾತ್ವಿಕ ವಿಷಯಗಳ ಬಗ್ಗೆ ನಿರರ್ಗಳವಾಗಿ ಅಧಿಕಾರವಾಣಿಯಿಂದ ಮಾತಾಡಬಲ್ಲ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರನ್ನು ನಿಮ್ಮೂರಿಗೆ ಕರೆಸಿಕೊಳ್ಳಬೇಕಾ? ಆಸಕ್ತಿಯಿದ್ದವರು ನಮ್ಮೊಡನೆ ತಕ್ಷಣ ಪ್ರಸ್ತಾಪಿಸಿದರೆ ಉಪಕಾರವಾದೀತು.
ಕಸಾರಂ ಆಡಳಿತ ಮಂಡಲಿ.
Dear Sir, How do I register to Boston event which will be in April 2017. I have moved to State College, PA very recently. I would like to attend the next event of Kannada Sahitya ranga in April 2017.
Uma Venkatesh
State College, PA
ನಮಸ್ಕಾರ. ಸದ್ಯದಲ್ಲೇ ಸಮ್ಮೇಳನ ನೋಂದಾವಣೆಯ ಮಾಹಿತಿಯನ್ನು ಪ್ರಕಟಿಸಲಾಗುತ್ತದೆ.
Thank you.
All the best.
Please let us know which city in Boston area?
-Anand
Most likely Framingham Massachusetts. Will be confirmed very soon.
ವಿಷಯ ಹಂಚಿಕೊಂಡದ್ದಕ್ಕೆ ಧನ್ಯವಾದಗಳು