ಶಕುನಿಯ ದಾಳ
ಒಂಬತ್ತು-ಹನ್ನೊಂದರಂದು
ಅನಿರೀಕ್ಷಿತ ಆಘಾತಕ್ಕೆ ನಡುಗಿ
ಬೆಂಕಿಯುಂಡೆಯ ಶಾಖವುಂಡು
ಕರುಗುತ್ತಾ ತನ್ನೊಳಕ್ಕೇ ಕುಸಿದು ಉಡುಗಿ
ನಿಜಮಾಡಿಬಿಟ್ಟೆ ನಾಣ್ನುಡಿಯ ಮಾತು
“ಅತ್ಯುನ್ನತಿಯೆ ಪತನಕ್ಕೆ ಹೇತು” (೧)
ಬೆಳೆದಷ್ಟು ಬೆಳೆದಷ್ಟು ಎತ್ತರ
ಸಹಸ್ರಾಕ್ಷನಾಗಿ ಹುಡುಕುತ್ತಿರಬೇಕು
ಸುತ್ತಲೂ ವೈರಿಗಳ ಪೂರ್ವೋತ್ತರ
ವಿಶ್ವಸಿರಿಕೇಂದ್ರ ಆಗಿದ್ದೇನೋ ದಿಟ
ಅವಳಿ-ಜವಳಿಗಳಾಗಿ ಹುಟ್ಟಿ ಬೆಳೆದು
ನೀವಾಡಿದ್ದೆ ಆಟ ಹೂಡಿದ್ದೆ ಹೂಟ (೨)
ಒಮ್ಮೆ ಕರಗಿದಮೇಲೆ ಆ ಸೊಕ್ಕು
ಮಿಕ್ಕದ್ದು ಬರಿ ಒಂದಷ್ಟು ಉಕ್ಕು
ಉರಿದುಳಿದ ನಿನ್ನ ಅಸ್ಥಿಪಂಜರಕ್ಕು
ಏಳುವರ್ಷಗಳಲ್ಲೆ ಪುನರ್ಜನ್ಮ ಸಿಕ್ಕು
ಹುಟ್ಟಿದೆ ನೋಡು ಮತ್ತೊಂದು ಯುದ್ಧನೌಕೆ
ಹೊಡೆತಕ್ಕೆ ಕಾಯುತ್ತ ಕೂರದಿರು ಜೋಕೆ (೩)
ಎಲೆ ಯುದ್ಧನೌಕೆ, ಯುಎಸೆಸ್ ನ್ಯೂಯಾರ್ಕೆ
ವೈರಿಗಳ ಹುಡುಕಲು ತಡವಿನ್ನೇಕೆ
ಉಗ್ರರ ಹಿಡಿಯಲು ಬೇಡ ಹಿಂಜರಿಕೆ
ಕುರುನಾಡಬಿಟ್ಟು ನೀ ನಡೆ ಗಾಂಧಾರಕೆ
ಸತ್ತು ಮತ್ತೆ ಚಿಗುರಿದ ಮೂಳೆಯ ದಾಳ
ಮುಗಿಸಲಿಲ್ಲವೇ ಕೌರವೇಂದ್ರನ ಬಾಳ? (೪)
ಸಿರಿಕೇಂದ್ರದುರಿಯಿಂದ ಹುಟ್ಟಿಬಂದೀ ಅಸ್ತ್ರ
ಆಗಿಬಿಡಲಿ ವೈರಿಗಳ ಸುಡುವ ಮಾರಕಾಸ್ತ್ರ
ಉರುಳಿಸು ಉಗ್ರರನು ಮತ್ತೆ ತಲೆಯೆತ್ತದಂತೆ
ಕಿತ್ತೊಗೆ ಬೇರುಗಳ ಮತ್ತೆಂದೂ ಚಿಗುರದಂತೆ
ದಾಳಗಳನುರುಳಿಸುತ ಗರಗಳನು ಕೇಳು
ಒಂಬತ್ತು-ಹನ್ನೊಂದು ಬೀಳದಿದ್ದರೆ ಕೇಳು! (೫)
ಟಿಪ್ಪಣಿ :- ಸೆಪ್ಟೆಂಬರ್ ಹನ್ನೊಂದು, ಎರಡುಸಾವಿರದ ಒಂದರಂದು ಸಿರಿಕೇಂದ್ರದ ಜೋಡಿ ಕಂಬಗಳು ಉಗ್ರರ ವಿಮಾನದ ಬಡಿತಕೆ ಸಿಕ್ಕು ಕುಸಿದನಂತರ, ಅಲ್ಲಿ ಕರಗಿದ ಉಕ್ಕನ್ನು ಬಳಸಿ ಯುಎಸೆಸ್ ನ್ಯೂಯಾರ್ಕ್ ಎಂಬ ಯುದ್ಧನೌಕೆಯೊಂದನ್ನು ಕಟ್ಟಿ ಸಿದ್ಧಗೊಳಿಸಲಾಗಿದೆ. ವಿಶ್ವದಾದ್ಯಂತ ಉಗ್ರರ ವಿರುದ್ಧ ಧಾಳಿ ನಡೆಸುವ ಸಲುವಾಗೇ ಕಟ್ಟಿದ ಈ ನೌಕೆಯನ್ನು ಇಲ್ಲಿ ಶಕುನಿಯ ದಾಳಕ್ಕೆ ಹೋಲಿಸಲಾಗಿದೆ. ಕೌರವನ ದ್ವೇಷಕ್ಕೆ ಪಾತ್ರರಾದ ಶಕುನಿಯ ಸಮಸ್ತ ಕುಟುಂಬವನ್ನು ಸೆರೆಯಲ್ಲಿಟ್ಟು ಒಬ್ಬರಿಗಾಗುವಷ್ಟು ಮಾತ್ರ ಆಹಾರವನ್ನು ಕೊಡುತ್ತಿದ್ದರಂತೆ. ತಮ್ಮೆಲ್ಲರ ಆಹಾರವನ್ನು ಶಕುನಿಗೆ ಕೊಟ್ಟು ಅವನನ್ನು ಉಳಿಸಿ ತಮ್ಮ ಪ್ರಾಣಗಳನ್ನು ತ್ಯಾಗಮಾಡಿದ ಅವರೆಲ್ಲರ ಆಶಯ ಏನಿತ್ತೆಂದರೆ, ಉಳಿದುಕೊಂಡ ಶಕುನಿ ಏನಾದರೂ ಕುತಂತ್ರಮಾಡಿ ಕೌರವರನ್ನು ನಿರ್ನಾಮಗೊಳಿಸಲಿ ಎಂಬುದೇ ಆಗಿತ್ತು. ಶಕುನಿ ತನ್ನ ಅಣ್ಣತಮ್ಮಂದಿರ ಮೂಳೆಯಿಂದ ಮಾಡಿದ ದಾಳಗಳನ್ನು ಪಗಡೆಯ ಜೂಜಿನಾಟಕ್ಕೆ ಉಪಯೋಗಿಸಿದನಂತೆ. ಅವನಿಗೆ ಕೇಳಿದ ಗರ ಬಿಳುತ್ತಿತ್ತಂತೆ. ಅದೇರೀತಿ, ಬಿನ್ ಲಾಡೆನ್ ಮುಂತಾದ ಉಗ್ರರನ್ನು ಕೊಲ್ಲಲು ಆ ಸಿರಿಕೇಂದ್ರದ ಜೋಡಿ ಕಂಬಗಳಲ್ಲಿ ಬಲಿಯಾಗಿ ಕರಗಿದ ಉಕ್ಕು ಮೂರು ಸಾವಿರ ಜನರ ಮೂಳೆಯಿಂದ ಬಲಗೊಂಡು ಈ ಯುದ್ಧನೌಕೆಯ ರೂಪತಾಳಿದೆ ಎಂಬುದೇ ಇಲ್ಲಿನ ಪ್ರತಿಮೆ.