[gallery_bank type=”individual” format=”masonry” title=”true” desc=”false” responsive=”true” display=”all” sort_by=”pic_name” animation_effect=”” album_title=”true” album_id=”1″]
[gallery_bank type=”individual” format=”masonry” title=”true” desc=”false” responsive=”true” display=”all” sort_by=”pic_name” animation_effect=”” album_title=”true” album_id=”1″]
ಸೇಯಿಂಟ್ ಲೂಯಿಸ್ಸಿನ ಸಂಗಮದ ಆಶ್ರಯದಲ್ಲಿ, ಮಧ್ಯವಲಯದ ಇತರ ಕನ್ನಡ ಕೂಟಗಳ ಸಹಕಾರದೊಂದಿಗೆ ಇದೇ ಮೇ 30 ಮತ್ತು 31ರಂದು ನಡೆಯಲಿರುವ ಕಾರ್ಯಕ್ರಮಗಳಲ್ಲಿ ತಪ್ಪದೇ ಬಾಗವಹಿಸಿ ಎಂದು ರಂಗದ ಪರವಾಗಿ ಮತ್ತು ಸಂಗಮದ ಪದಾಧಿಕಾರಿಗಳ ಪರವಾಗಿ ತಮ್ಮನ್ನೆಲ್ಲ ಆಹ್ವಾನಿಸಲು ನಮಗೆ ತುಂಬಾ ಸಂತಸವಾಗುತ್ತಿದೆ. ಈ ಬಾರಿಯ ನಮ್ಮ ಸಮ್ಮೇಳನದ ಮುಖ್ಯ ವಿಷಯ “ಅನುವಾದ ಸಾಹಿತ್ಯ.” ಕನ್ನಡ ಅನುವಾದ ಸಾಹಿತ್ಯ ಪ್ರಪಂಚದಲ್ಲಿ ಮುಖ್ಯರಾದ ಡಾ|| ಪ್ರಧಾನ್ ಗುರುದತ್ತರು ಮುಖ್ಯ ಅತಿಥಿಗಳಾಗಿ ಭಾರತದಿಂದ ಆಗಮಿಸಿದ್ದಾರೆ, “ಅನುವಾದದ ಆಗುಹೋಗುಗಳು” ಎಂಬ ವಿಷಯದ ಬಗ್ಗೆ ಪ್ರಾಸ್ತಾವಿಕ ಭಾಷಣ ಮಾಡಲಿದ್ದಾರೆ. ನಮ್ಮವರೇ ಆದ ಪ್ರಸಿದ್ಧ ಭಾಷಾವಿಜ್ಞಾನಿ, ಡಾ|| ಎಸ್.ಎನ್ ಶ್ರೀಧರ್ ಮತ್ತು ಅನುವಾದದ ವಿಷಯದಲ್ಲಿ ಪ್ರಾವೀಣ್ಯ ಗಳಿಸಿರುವ ಆಂಗ್ಲಭಾಷಾ ಪ್ರಾಧ್ಯಾಪಕ ಡಾ|| ನಾರಾಯಣ ಹೆಗ್ಡೆ ಅವರುಗಳು ವಿಶೇಷ ಅತಿಥಿಗಳಾಗಿ ಆಗಮಿಸಿ “ಅನುವಾದ ಕಮ್ಮಟ” ಮತ್ತು “ಸಂವಾದ” ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.
ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದವಾದ ಲೇಖನಗಳನ್ನೊಳಗೊಂಡ “ಅನುವಾದ ಸಂವಾದ” ಎಂಬ ಕನ್ನಡ ಪುಸ್ತಕ, ಮತ್ತು ಕನ್ನಡದಿಂದ ಇಂಗ್ಲಿಷಿಗೆ ಅನುವಾದವಾದ ಲೇಖನಗಳನ್ನೊಳಗೊಂಡ “A Little Taste of Kannada-in English” ಎಂಬ ಆಂಗ್ಲ ಪುಸ್ತಕಗಳನ್ನು ರಂಗ ಲೋಕಾರ್ಪಣೆ ಗೊಳಿಸಲಿದೆ. ಇವೇ ಅಲ್ಲದೆ, ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಅವರು ಸಂಪಾದಿಸಿರುವ “ಅಮೆರಿಕನ್ನಡ ಬರಗಾರರ ಮಾಹಿತಿ ಕೋಶ” ಸಹ ಲೋಕಾರ್ಪಣೆಗೊಳ್ಳಲಿದೆ. ಸಂಗಮದ ಮುಂದಾಳತ್ವದಲ್ಲಿ “ಸೊಬಗು” ಎಂಬ ಸ್ಮರಣ ಸಂಚಿಕೆ ಸಹ ಸಿದ್ಧವಾಗುತ್ತಿದೆ. ರಂಗದ ಸಂಸ್ಥಾಪಕರಲ್ಲಿ ಮೊದಲಿಗರಾದ ಎಚ್.ವೈ. ರಾಜಗೋಪಾಲರು ಅನುವಾದಿಸಿರುವ “ಸೃಷ್ಟಿ” (ಅಮೆರಿಕದ ರೆಡ್ ಇಂಡಿಯನ್ ಕಥೆಗಳು) ಎಂಬ ಪುಸ್ತಕವನ್ನು ನೋಂದಾಯಿಸಿಕೊಂಡವರಿಗೆಲ್ಲ ರಂಗದ ವತಿಯಿಂದ ವಿತರಿಸಲಾಗುವುದು. ಪ್ರತಿ ಬಾರಿಯೂ ನಾವು ನಡೆಸುವ ಕವಿಗೋಷ್ಠಿ, ಬರಹಗಾರರ ಮತ್ತು ಅವರ ಇತ್ತೀಚಿನ ಪ್ರಕಟಣೆಗಳ ಪರಿಚಯ, ಇವುಗಳ ಜೊತೆಗೆ, ಈ ಬಾರಿ ಸ್ವಾರಸ್ಯಕರವಾದ ಒಂದು ಅನುವಾದ ಕಮ್ಮಟವನ್ನೂ ಏರ್ಪಡಿಸಲಾಗಿದೆ. ಕೇವಲ ಸಾಹಿತ್ಯ ಮಾತ್ರ ಎಂದು ದಿಗಿಲುಪಡದಿರಿ, ಸಂಗಮದ ನಾಟ್ಯಪಟು ಪ್ರಸನ್ನ ಕಸ್ತೂರಿಯವರ ನಿರ್ದೇಶನದಲ್ಲಿ ಗೀತ-ನಾಟ್ಯ-ನಟನ-ನಾಟಕ-ಪ್ರಿಯರ ಮನಸ್ಸನ್ನು ಸೂರೆಗೊಳ್ಳುವ ಮನರಂಜನಾ ಕಾರ್ಯಕ್ರಮಗಳಲ್ಲಿ ಮತ್ತು ಮಕ್ಕಳ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಸಂಗಮದ ಜೊತೆಗೆ ಕೈಜೋಡಿಸಲು ಸಿನ್ಸಿನ್ಯಾಟಿ, ಶಿಕಾಗೋ, ಇಂಡಿಯನಾಪೊಲಿಸ್, ಲಿಟಲ್ ರಾಕ್, ನ್ಯಾಷವಿಲ್, ಮಿಲ್ವಾಕಿ, ಬ್ಲೂಮಿಂಗ್ ಟನ್ ಮುಂತಾದ ನಗರಗಳ ಕನ್ನಡ ಕೂಟಗಳೂ ಸಿದ್ಧವಾಗಿ ನಿಂತಿವೆ! ಮಕ್ಕಳಿಗಾಗಿ ಸವಿತಾ ರವಿಶಂಕರ್ ಅವರ “ಚಿಲಿಪಿಲಿ ಕನ್ನಡ ಕಲಿ” ಧ್ವನಿ ಸಂಪುಟ ಸಹ ಲೋಕಾರ್ಪಣೆಯಾಗಲಿದೆ. ಕನ್ನಡ ಪುಸ್ತಕಗಳ ಮಳಿಗೆಯಲ್ಲಿ ನಮ್ಮವರೇ ಬರೆದು ಪ್ರಕಟಿಸಿರುವ ಪುಸ್ತಕಗಳನ್ನು ಮಾರಾಟಕ್ಕೆ ಇಡಲಾಗುತ್ತದೆ, ಕೊಂಡು ಓದಿ ಸಂತಸಪಡಲು ಇದೊಂದು ಉತ್ತಮ ಅವಕಾಶ. ಕೊನೆಯದಾಗಿ, ಆದರೆ ಮುಖ್ಯವಾಗಿ, ಉತ್ತಮ ಊಟೋಪಚಾರಗಳ ಏರ್ಪಾಟು ಭರದಿಂದ ಸಾಗಿದೆ! ಸಾಹಿತ್ಯಪ್ರಿಯರನ್ನು ಅತ್ಯಂತ ಪ್ರೀತಿಯಿಂದ ಸ್ವಾಗತಿಸಿ ಸತ್ಕರಿಸಲು ಸಂಗಮದ ಜ್ಯೋತಿ ಮೈಸೂರ್ ಮತ್ತು ಶುಭಾ ಭಾಸ್ಕರ್ ಅವರ ತಂಡದ ಸ್ವಯಂಸೇವಕರು ತವಕದಿಂದ ಕಾದಿದ್ದಾರೆ. ಕಾರ್ಯಕ್ರಮಗಳ ಪಕ್ಷಿನೋಟವನ್ನು ಕೆಳಗೆ ಕೊಡಲಾಗಿದೆ, ಹೆಚ್ಚಿನ ವಿವರಗಳಿಗೆ kannadasahityaranga.org ಮತ್ತು sangamastl.com ಈ ಜಾಲತಾಣಗಳಿಗೆ ಭೇಟಿ ಕೊಡಿ.
] ತನು ಕನ್ನಡ ಮನ ಕನ್ನಡ ನುಡಿ ಕನ್ನಡವೆಮ್ಮದು!
ಮೈ.ಶ್ರೀ. ನಟರಾಜ, ಕನ್ನಡ ಸಾಹಿತ್ಯ ರಂಗದ ಕಾರ್ಯಕಾರೀ ಸಮಿತಿಯ ಅಧ್ಯಕ್ಷ
ನಾಗ ಐತಾಳ, ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಲಿಯ ಅಧ್ಯಕ್ಷ
ಶನಿವಾರ
(1) ಮಧ್ಯಾಹ್ನ 12:00-1:00 – ಆಗಮನ ಮತ್ತು ನೋಂದಣಿ
(2) 1:00-2:00 – ಸ್ವಾಗತ ಗೀತೆ, ಉದ್ಘಾಟನೆ, ಅತಿಥಿಗಳ ಸ್ವಾಗತ ಮತ್ತು ಪರಿಚಯ, ಪುಸ್ತಕಗಳ ಲೋಕಾರ್ಪಣೆ ಮತ್ತು ಬರಹಗಾರರಿಗೆ ವಿತರಣೆ
(3) 2:00-3:00 – ಪ್ರಾಸ್ತಾವಿಕ ಭಾಷಣ, “ಅನುವಾದದ ಆಗುಹೋಗುಗಳು” ಮುಖ್ಯ ಅತಿಥಿ ಪ್ರಧಾನ ಗುರುದತ್ತರಿಂದ
(4) 3:00-3:30 – ಚಹಾ ವಿರಾಮ
(5) 3:30-5:00 – ಸಾಹಿತ್ಯ ಗೋಷ್ಠಿ, ಸ್ವಂತ ಹಾಗು ಅನುವಾದಿತ ಕೃತಿಗಳ ಪ್ರಸ್ತುತಿ (ನಡೆಸಿಕೊಡುವವರು: ನಳಿನಿ ಮೈಯ ಮತ್ತು ವೈಶಾಲಿ ಹೆಗ್ಡೆ)
(6) 5:05-5:15 – ಕವಿ ನಮನ (ಸಂಗಮ ಕಲಾವಿದರಿಂದ)
(7) 5:15-5:30 – ಶ್ರದ್ಧಾಂಜಲಿ (ಅಗಲಿದ ಹಿರಿಯರ ಸ್ಮರಣೆ; ನಡೆಸಿಕೊಡುವವರು: ಎಚ್.ಕೆ. ಚಂದ್ರಶೇಖರ್ ಮತ್ತು ನಳಿನಿ ಕುಕ್ಕೆ)
(8) 5:30-6:00 – ಪುಸ್ತಕದಂಗಡಿಗೆ ಭೇಟಿ (ಮಂಜುನಾಥ್ ಮತ್ತು ಶಂಕರ ಹೆಗ್ಡೆ)
(9) 6:00-8:30 – ಸಾಂಸ್ಕೃತಿಕ ಕಾರ್ಯಕ್ರಮ (ಪ್ರಸನ್ನ ಕಸ್ತೂರಿ ಅವರ ನಿರ್ದೇಶನದಲ್ಲಿ ಸಂಗಮ ಹಾಗು ಇತರ ಮಧ್ಯವಲಯದ ಕನ್ನಡ ಕೂಟಗಳಿಂದ ನೃತ್ಯ ಮತ್ತು ನಾಟಕ ಪ್ರದರ್ಶನ)
(10) 8:00-10:00 – ಭೋಜನ
ಭಾನುವಾರ
(1) 8:00-9:00 – ಬೆಳಗಿನ ಉಪಾಹಾರ
(2) 9:00-9:10 – ಪ್ರಾರ್ಥನೆ ಮತ್ತು ವಾದ್ಯಗೋಷ್ಠಿ (ಸಂಗಮ ಮಕ್ಕಳಿಂದ)
(3) 9:10-10:40 – ಅನುವಾದ ಕಮ್ಮಟ (ಅನುವಾದಕ್ರಿಯೆಯ ಒಂದು ಮಿಂಚುನೋಟ; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ)
(4) 10:40-10:55 – ವಿವಿಧ ವಿಶೇಷಗಳು (ನಡೆಸಿಕೊಡುವವರು ಮೈ.ಶ್ರೀ. ನಟರಾಜ)
(5) 11:00-12:00 – ನಮ್ಮ ಬರಹಗಾರರು (ಇತ್ತೀಚೆಗೆ ಪ್ರಕಟವಾದ ಪುಸ್ತಕಗಳ ಮತ್ತು ಬರಹಗಾರರ ಪರಿಚಯ; ನಡೆಸಿಕೊಡುವವರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಮೀರಾ ರಾಜಗೋಪಾಲ್)
(6) 12:00-1:00 – ಮಧ್ಯಾಹ್ನದ ಭೋಜನ
(7) 1:00-1:30 – ಪುಸ್ತಕದಂಗಡಿಗೆ ಭೇಟಿ
(8) 1:30-2:30 – ಅತಿಥಿಗಳೊಂದಿಗೆ ಸಂವಾದ (ಪ್ರಧಾನ ಗುರುದತ್ತ, ಎಸ್.ಎನ್. ಶ್ರೀಧರ್ ಮತ್ತು ನಾರಾಯಣ ಹೆಗ್ಡೆ ಅವರೊಂದಿಗೆ ಪ್ರಶ್ನೋತ್ತರಗಳು; ನಡೆಸಿಕೊಡುವವರು: ಗುರುಪ್ರಸಾದ್ ಕಾಗಿನೆಲೆ ಮತ್ತಿತರರು)
(9) 2:30-2:45 – ಚಹಾ ವಿರಾಮ
(10) 2:45-3:45 – ಮಧ್ಯವಲಯದ ವಿವಿಧ ಕನ್ನಡ ಕೂಟಗಳ ಮಕ್ಕಳಿಂದ ಮನರಂಜನೆ ಮತ್ತು ಸವಿತಾ ರವಿಶಂಕರ್ ಅವರ “ಚಿಲಿಪಿಲಿ ಕನ್ನಡ ಕಲಿ” ಧ್ವನಿ ಸಂಪುಟ ಬಿಡುಗಡೆ
(11) 3:45-4:30 – ಸ್ವಯಂಸೇವಕರ ಪರಿಚಯ, ವಂದನಾರ್ಪಣೆ ಮತ್ತು ಸಮಾರೋಪ
(12) 4:30ಕ್ಕೆ ವಿದಾಯ!
ಒನ್.ಇಂಡಿಯಾದಲ್ಲಿ ಪ್ರಕಟವಾಗಿರುವ ಕಾರ್ಯಕ್ರಮಗಳ ಪಟ್ಟಿ:-
http://kannada.oneindia.com/nri/article/7th-vasantha-sahityotsava-program-details-093906.html