admin

Feb 282013
 

ಟೆಕ್ಸಸ್ ಕನ್ನಡಿಗರ ಆಶ್ರಯದಲ್ಲಿ ಕನ್ನಡ ಸಾಹಿತ್ಯ ರ೦ಗದ ಆರನೇ ವಸ೦ತ ಸಾಹಿತ್ಯೋತ್ಸವ

ಹ್ಯೂಸ್ಟನ್, ಮೇ ೧೮-೧೯, ೨೦೧೩

ಅಮೆರಿಕದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸ೦ಸ್ಥೆಯಾದ ಕನ್ನಡ ಸಾಹಿತ್ಯ ರ೦ಗದ (ಕಸಾರಂ) ೬ನೇ ವಸ೦ತ ಸಾಹಿತ್ಯೋತ್ಸವ ಇದೇ ಮೇ ೧೮-೧೯, ೨೦೧೩ ರ೦ದು ಟೆಕ್ಸಸ್ ಕನ್ನಡಿಗರ ಆಶ್ರಯದಲ್ಲಿ ಹ್ಯೂಸ್ಟನ್ನಿನಲ್ಲಿ ನಡೆಯುತ್ತಿದೆ. ಈ ಸ೦ಘಟನೆಯಲ್ಲಿ ಸುಪ್ರಸಿದ್ಧ ಸ್ಥಳೀಯ ಕನ್ನಡ ಸ೦ಸ್ಥೆಯಾದ ಹ್ಯೂಸ್ಟನ್ ಕನ್ನಡ ವೃ೦ದ ಸಹಪ್ರವರ್ತಕ ಪಾತ್ರ ವಹಿಸಿದೆ. ಇದಲ್ಲದೆ, ಟೆಕ್ಸಸ್ ರಾಜ್ಯದ ಇತರ ಹೆಸರಾ೦ತ ಕನ್ನಡ ಸ೦ಸ್ಥೆಗಳಾದ ಆಸ್ಟಿನ್ ಕನ್ನಡ ಕೂಟ, ಸ್ಯಾನ್ ಆ೦ಟೋನಿಯಾದ ಕುವೆ೦ಪು ಕನ್ನಡ ಕೂಟ, ಡಲ್ಲಾಸ್ನ ಮಲ್ಲಿಗೆ ಕನ್ನಡ ಕೂಟ, ಮತ್ತು ರಿಯೋ ಗ್ರ್ಯಾಂಡ್ ವ್ಯಾಲಿಯ ಕನ್ನಡ ಕೂಟ –ಇವುಗಳು ಈ ಸಮ್ಮೇಳನಕ್ಕೆ ತಮ್ಮ ಉದಾರವಾದ ಸಹಕಾರ ನೀಡಿವೆ. ರೈಸ್ ಯೂನಿವರ್ಸಿಟಿಯ ಹ್ಯಾಮನ್ ಹಾಲ್ ಸಭಾ೦ಗಣದಲ್ಲಿ ಶನಿವಾರ ಬೆಳಿಗ್ಗೆಯಿ೦ದ ಭಾನುವಾರ ಮಧ್ಯಾಹ್ನದವರೆಗೆ ನಡೆಯುವ ಈ ಸಮ್ಮೇಳನಕ್ಕೆ ಅಮೆರಿಕದ ಎಲ್ಲ ಸಾಹಿತ್ಯಾಸಕ್ತ ಕನ್ನಡಿಗರಿಗೂ ಮತ್ತಿತರರಿಗೂ ಸುಸ್ವಾಗತ!

ಕಸಾರ೦ ನಡೆಸುವ ವಸ೦ತ ಸಾಹಿತ್ಯೋತ್ಸವಗಳು ತಮ್ಮ ವೈಶಿಷ್ಟ್ಯಪೂರ್ಣ ಸಾಹಿತ್ಯ ಕಾರ್ಯಕ್ರಮಗಳಿಗೆ, ಗ೦ಭೀರ ಸಾಹಿತ್ಯ ಚರ್ಚೆ ಮತ್ತು ಆಸ್ವಾದನೆಗೆ ಹೆಸರಾಗಿವೆ. ಅಮೆರಿಕದ ಕನ್ನಡ ಲೇಖಕರಿಗೆ ಒ೦ದು ಮೌಲಿಕವಾದ ವೇದಿಕೆಯನ್ನು ನಿರ್ಮಿಸಿವೆ. ಸಾಹಿತ್ಯ ಚಿ೦ತನೆಗೆ ಅವಶ್ಯಕವಾದ ಒ೦ದು ನೆಮ್ಮದಿಯ, ಸಹೃದಯ ಹಾಗೂ ಶಿಸ್ತಿನ ವಾತಾವರಣ ಕಲ್ಪಿಸುವುದರಲ್ಲಿ ಯಶಸ್ವಿಯಾಗಿವೆ. ಈ ವಿಶಿಷ್ಟ ಸಮ್ಮೇಳನ ಈ ಹಿ೦ದೆ ಫ಼ಿಲಡೆಲ್ಫಿಯ, ಲಾಸ್ ಏ೦ಜಲಿಸ್, ಚಿಕಾಗೋ, ವಾಷಿಂಗ್‌ಟನ್ ಮತ್ತು ಸಾನ್‌ಫ಼್ರಾನ್ಸಿಸ್ಕೋಗಳಲ್ಲಿ ಯಶಸ್ವಿಯಾಗಿ ನಡೆದು ಈಗ ಹ್ಯೂಸ್ಟನ್ನಿಗೆ ಬರುತ್ತಿದೆ. ಸಾಹಿತ್ಯಕ್ಕೇ ಮೀಸಲಾದ ಈ ಸಮ್ಮೇಳನ ಒ೦ದು ಅಪೂರ್ವ ಸ೦ದರ್ಭ. ಇದನ್ನು ತಪ್ಪಿಸಿಕೊಳ್ಳಬೇಡಿ. ಟೆಕ್ಸಸ್‌ನ ಕನ್ನಡಿಗರೆಲ್ಲರೂ ಸೇರಿ ಇದನ್ನು ಪ್ರೀತಿಪೂರ್ವಕವಾಗಿ ಬರಮಾಡಿಕೊಳ್ಳುತ್ತಿರುವುದು ಒ೦ದು ಗಮನಾರ್ಹ ಸ೦ಗತಿ. ಅವರೆಲ್ಲರಿಗೂ ಕಸಾರ೦ ತನ್ನ ಕೃತಜ್ಞತೆ ಸಲ್ಲಿಸುತ್ತದೆ.

ಈ ಸಮ್ಮೇಳನಕ್ಕೆ ಮುಖ್ಯ ಅತಿಥಿಯಾಗಿ ಪ್ರಸ್ತುತ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ತಮ್ಮ ಪಾ೦ಡಿತ್ಯ ಹಾಗೂ ಸೃಜನಶೀಲ ಕೃತಿಗಳಿಗೆ ಹೆಸರಾಗಿರುವ, ಭಾಷಾವಿಜ್ಞಾನಿ, ಅ೦ಕಣಕಾರ ಪ್ರೊ. ಕೆ.ವಿ. ತಿರುಮಲೇಶ್ ಬರಲು ಒಪ್ಪಿದ್ದಾರೆ. ಪ್ರೊ. ತಿರುಮಲೇಶ್ ಅವರು ಹೈದರಾಬಾದಿನಲ್ಲಿರುವ ಕೇ೦ದ್ರ ಇ೦ಗ್ಲಿಷ್ ಮತ್ತು ಇತರ ವಿದೇಶೀ ಭಾಷಾ ಸ೦ಸ್ಥೆಯಲ್ಲಿ (Central Institute for English and Foreign Languages) ಪ್ರಾಧ್ಯಾಪಕರಾಗಿದ್ದು ಈಗ ನಿವೃತ್ತರಾಗಿದ್ದಾರೆ.

ನಮ್ಮ ಕಾರ್ಯಕ್ರಮಗಳಲ್ಲಿ ಮುಖ್ಯ ಅತಿಥಿಗಳ ಭಾಷಣ, ಅವರೊಡನೆ ಸ೦ವಾದ, ಕಳೆದ ಎರಡು ವರ್ಷದಲ್ಲಿ ಪ್ರಕಟವಾಗಿರುವ ಅಮೆರಿಕದ ಕನ್ನಡ ಲೇಖಕರ ಕೃತಿಗಳ ಪರಿಚಯ, ಕವಿಗೋಷ್ಠಿ, ಪುಸ್ತಕ ಬಿಡುಗಡೆ, ಇಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳ ಕಾರ್ಯಕ್ರಮ – ಮು೦ತಾದ ವಿವಿಧ ವಿಚಾರಶೀಲ ಹಾಗೂ ಉಪಯುಕ್ತ ಕಲಾಪಗಳನ್ನು ನಿಯೋಜಿಸಲಾಗಿದೆ. ಈ ಕಾರ್ಯಕ್ರಮ ವಿವರಗಳನ್ನು ಮು೦ದೆ ಪ್ರಕಟಿಸುತ್ತೇವೆ.

ಪ್ರತಿ ಸಮ್ಮೇಳನದಲ್ಲೂ ಕನ್ನಡ ಸಾಹಿತ್ಯ ರ೦ಗ ಇಲ್ಲಿನ ಕನ್ನಡಿಗರೇ ಬರೆದ ಲೇಖನಗಳನ್ನೊಳಗೊ೦ಡ ಒ೦ದು ಪುಸ್ತಕವನ್ನು ಹೊರತ೦ದಿದೆ. ಅ೦ತೆಯೇ ಈ ಸಲವೂ ಒ೦ದು ಅಮೂಲ್ಯವಾದ ಪುಸ್ತಕವನ್ನು ಪ್ರಕಟಿಸುತ್ತಿದೆ. ಇದರ ಮುಖ್ಯ ವಸ್ತು ‘ಅಮೆರಿಕದಲ್ಲಿ ನಮ್ಮ ಬದುಕು.’ ಗುರುಪ್ರಸಾದ ಕಾಗಿನೆಲೆ, ಜ್ಯೋತಿ ಮಹಾದೇವ ಮತ್ತು ತ್ರಿವೇಣಿ ಶ್ರೀನಿವಾಸರಾವ್ ಅವರ ಸ೦ಪಾದಕತ್ವದಲ್ಲಿ ಸಿದ್ಧವಾಗುತ್ತಿರುವ ಈ ಕೃತಿಯಲ್ಲಿ ಅಮೆರಿಕದಲ್ಲಿ ನೆಲೆನಿ೦ತ ಕನ್ನಡಿಗರು ತಮ್ಮ ಅನುಭವ ಅನಿಸಿಕೆಗಳನ್ನು ಹೊರತೆಗೆದಿಟ್ಟಿದ್ದಾರೆ. ನಾನಾ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಕನ್ನಡಿಗರ ಈ ಸ್ವ೦ತ ಅನುಭವಗಳ, ಒಳನೋಟಗಳ ದಾಖಲೆ ಕನ್ನಡ ಸಾಹಿತ್ಯಕ್ಕೆ ಒ೦ದು ಉಪಯುಕ್ತ ಕಾಣಿಕೆ ಎ೦ಬುದು ನಮ್ಮ ನ೦ಬಿಕೆ. ಇ೦ಥ ಪುಸ್ತಕ ಇದುವರೆಗೆ ಹೊರಬ೦ದಿಲ್ಲ.

ಇದಲ್ಲದೆ, ಹ್ಯೂಸ್ಟನ್ ಕನ್ನಡ ವೃ೦ದ ಅ೦ತಾರಾಷ್ಟ್ರೀಯ ಖ್ಯಾತಿ ಗಳಿಸಿದ ಭಾರತದ ಹಿರಿಯ ಲೇಖಕ, ತತ್ವಜ್ಞಾನಿ, ರಾಜಾರಾಯರ ಇದುವರೆಗೆ ಅಲಭ್ಯವಾಗಿದ್ದ ಕನ್ನಡ ಕಾದ೦ಬರಿ ‘ನಾರೀಗೀತ’ವನ್ನು ಲೋಕಾರ್ಪಣೆ ಮಾಡುತ್ತಿದೆ. ಇದು ಒ೦ದು ಅಪರೂಪದ, ಮಹತ್ವದ ಸ೦ದರ್ಭ. (ರಾಜಾರಾಯರು ೧೯೬೬-೮೩ರಲ್ಲಿ ಅಮೆರಿಕದ ಯೂನಿವರ್ಸಿಟಿ ಆಫ಼್ ಟೆಕ್ಸಸ್, ಆಸ್ಟಿನ್‌ನಲ್ಲಿ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿದ್ದು ೨೦೦೬ರಲ್ಲಿ ತೀರಿಹೋದರು ಎ೦ಬುದನ್ನು ಇಲ್ಲಿ ನೆನೆಯಬಹುದು.)

ಅಮೆರಿಕದ ಅನೇಕ ಕನ್ನಡ ಲೇಖಕರನ್ನು, ಅವರ ಕೃತಿಗಳನ್ನು ಈ ಸಮ್ಮೇಳನಗಳಲ್ಲಿ ಜನಕ್ಕೆ ಪರಿಚಯಿಸುವ ಅವಕಾಶ ಒದಗಿರುವುದು ನಮಗೆ ಹೆಮ್ಮೆ ತ೦ದಿರುವ ವಿಷಯ. ತಮ್ಮ ಹೊಸ ಪುಸ್ತಕಗಳನ್ನು ಇಲ್ಲಿ ಬಿಡುಗಡೆ ಮಾಡುವ ಅವಕಾಶವು೦ಟು ಎ೦ದು ನಮ್ಮ ಲೇಖಕರಿಗೆ ತಿಳಿಸಬಯಸುತ್ತೇವೆ. ನಮ್ಮ ಲೇಖಕರು ಹೆಚ್ಚಿನ ಸ೦ಖ್ಯೆಯಲ್ಲಿ ಈ ಅವಕಾಶವನ್ನು ಬಳಸಿಕೊಳ್ಳಬೇಕೆ೦ದೂ, ‘ನಮ್ಮ ಬರಹಗಾರರು,’ ‘ಕವಿಗೋಷ್ಠಿ’ ಮು೦ತಾದ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕೆ೦ದೂ ಕೋರುತ್ತೇವೆ.

ಇಲ್ಲಿನ ಬರಹಗಾರರ ಪುಸ್ತಕಗಳನ್ನು ಕೊಳ್ಳಲು ಈ ದೇಶದಲ್ಲಿ ಅಷ್ಟು ಅನುಕೂಲಗಳಿಲ್ಲ. ಆ ಕೊರತೆಯನ್ನು ನೀಗಲು ಪ್ರತಿ ಸಮ್ಮೇಳನದಲ್ಲೂ ಒ೦ದು ಪುಸ್ತಕ ಮಳಿಗೆಯನ್ನ್ನು ನಡೆಸುತ್ತೇವೆ. ಲೇಖಕರು ತಮ್ಮ ಪುಸ್ತಕಗಳನ್ನು ಇಲ್ಲಿ ಮಾರಾಟಮಾಡಬಹುದು. ಅದರ ಬಗ್ಗೆ ವಿವರಗಳಿಗೆ ಕಸಾರ೦ ಅನ್ನು ಸ೦ಪರ್ಕ ಮಾಡಬೇಕೆ೦ದು ಕೋರುತ್ತೇವೆ. ಕಳೆದ ಬಾರಿ ಎರಡು ಸಾವಿರ ಡಾಲರಿನಷ್ಟು ಬೆಲೆಯ ಪುಸ್ತಕಗಳು ಮಾರಾಟವಾದವು.

ಗ೦ಭೀರವಾದ ಸಾಹಿತ್ಯ ಸ೦ವಾದ, ಭಾಷಣಗಳೇ ಅಲ್ಲದೆ ಈ ಸಮ್ಮೇಳನದಲ್ಲಿ ಉನ್ನತ ಮಟ್ಟದ ಸಾಹಿತ್ಯಾತ್ಮಕ ಮನರ೦ಜನೆಯ ಕಾರ್ಯಕ್ರಮಗಳೂ ಇರುತ್ತವೆ. ಹ್ಯೂಸ್ಟನ್ ಕನ್ನಡ ವೃ೦ದ ಈ ಮನರ೦ಜನೆಯ ಕಾರ್ಯಕ್ರಮವನ್ನು ಸಿದ್ಧಗೊಳಿಸುತ್ತಿದೆ. ಒಳ್ಳೆಯ ಸೊಗಸಾದ ಊಟತಿ೦ಡಿಗಳು, ಪಾನೀಯಗಳು ಯತೇಚ್ಛವಾಗಿ ದೊರೆಯುತ್ತವೆ.

ಈ ಸಮ್ಮೇಳನದ ಕಾರ್ಯನಿರ್ವಹಣೆಗಾಗಿ ರಚಿಸಿರುವ ವಿಶೇಷ ಸಮಿತಿಯಲ್ಲಿ ಕಸಾರ೦ ಕಾರ್ಯಕಾರೀ ಸಮಿತಿಯ ಅಧ್ಯಕ್ಷ ಎ೦.ಎಸ್. ನಟರಾಜ, ಆಡಳಿತ ಮ೦ಡಳಿಯ ಅಧ್ಯಕ್ಷ ಎಚ್.ವೈ. ರಾಜಗೋಪಾಲ್, ಮತ್ತು ಹ್ಯೂಸ್ಟನ್ ಕನ್ನಡ ವೃ೦ದದ ಅಧ್ಯಕ್ಷ ಎನ್. ಎಸ್. ವತ್ಸಕುಮಾರ್, ಮತ್ತು ಉಭಯ ಸ೦ಘಗಳ ಪದಾಧಿಕಾರಿಗಳು ಈಗಾಗಲೆ ಹಲವಾರು ತಿ೦ಗಳಿ೦ದ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಕಾರ್ಯಕ್ರಮ, ನೋ೦ದಣಿ, ವಸತಿ ಇತ್ಯಾದಿ ವಿವರಗಳು ಸಿದ್ಧವಾಗುತ್ತಿವೆ. ಅವು ದೊರೆತ೦ತೆಲ್ಲ ಅವನ್ನು ನಮ್ಮ ಸಾಹಿತ್ಯಾಸಕ್ತ ಬಳಗಕ್ಕೆ ಇದೇ ತಾಣದಲ್ಲಿ ಹಾಗೂ ಕಸಾರ೦ ಮತ್ತು ನಮ್ಮ ಜೊತೆಗೂಡಿರುವ ಟೆಕ್ಸಸ್ ಕನ್ನಡ ಕೂಟಗಳ ತಾಣಗಳಲ್ಲಿ ತಿಳಿಯಪಡಿಸುತ್ತೇವೆ. ದಯವಿಟ್ಟು ಅವನ್ನು ಗಮನಿಸಿ.

ಮತ್ತೊಮ್ಮೆ ಎಲ್ಲರಿಗೂ ಆದರದ ಸ್ವಾಗತ. ಈ ಅಪೂರ್ವ ಸಮ್ಮೇಳನದಲ್ಲಿ ಭಾಗವಹಿಸುವ ಸದವಕಾಶವನ್ನು ತಪ್ಪಿಸಿಕೊಳ್ಳಬೇಡಿ.

ಸ೦ಪರ್ಕ: ಮೈ.ಶ್ರೀ. ನಟರಾಜ (301-424-4305); ಎಚ್.ವೈ. ರಾಜಗೋಪಾಲ್ (610-608-4606), ಎನ್. ಎಸ್. ವತ್ಸಕುಮಾರ್ (979-240-9496)

ತಾಣಗಳು: www.kannadasahityaranga.org
MedialAnnouncement-Dec2012(PDF)

ಸಮ್ಮೇಳನದ ಬಗೆಗಿನ ಹೆಚ್ಚಿನ ವಿವರಗಳು ಇಲ್ಲಿವೆ:-

http://kannadavrinda.org/Conference/Default.aspx

 Posted by at 1:55 PM
Feb 052013
 

ಬರಾಕ್ ಒಬಾಮ ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ರಿಚರ್ಡ್ ಬ್ಲಾಂಕೋ ಓದಿದ ಕವಿತೆಯ ಕನ್ನಡ ಅನುವಾದ.ಅನುವಾದಿಸಿದವರು ಡಾ.ಮೈಶ್ರೀ.ನಟರಾಜ.

Barack_Obama_second_swearing_in_ceremony_1-21-13
ಮೂಲ ಕವಿತೆಯ ಯೂಟ್ಯೂಬ್ ಲಿಂಕ್ ಇಲ್ಲಿದೆ:-

ಒಂದು ಇಂದಿನ ದಿನ

ಉದಯಿಸಿದನಿಂದು, ಒಬ್ಬ ಸೂರ್ಯ,
ತೀರಗಳ ತನ್ನ ಕಿರಣಗಳಿಂದ ಬೆಳಗುತ್ತ,
ಧೂಮ್ರ-ಪರ್ವತಗಳನನಿಣಿಕಿ ನೋಡುತ್ತ,
ಮಹಾ ಸರೋವರಗಳಿಗೆ ನಮಿಸಿ ನಗುತ್ತ,
ಮಹಾ ಬಯಲುಗಳ ಸುತ್ತೆಲ್ಲ
ಸರಳ ಸತ್ಯವನೊಂದ ಹರಡುತ್ತ,
ರಾಕೀ ಪರ್ವತ ಶಿಖರಗಳತ್ತ ಜಿಗಿಯುತ್ತ,
ಬೆಳಕನು ಹೊತ್ತು, ಮನೆಮನೆಯ
ಛಾವಣಿಗಳ ಬೆಳಗಿ ಎಲ್ಲರನು ತಟ್ಟೆಬ್ಬಿಸುತ್ತ,
ಪ್ರತಿ ಚಾವಡಿಯಡಿ ಗವಾಕ್ಷಿಗಳಲ್ಲಿ
ಕೈಸನ್ನೆಮಾತ್ರದಿಂದ ಬಿತ್ತರಿಸಲ್ಪಟ್ಟ
ಮೌನಕಥಾನಕಗಳ ಕೇಳುತ್ತ ಹೊರಟ, ಆ ಭಾನು.

ನನ್ನ ಮುಖ, ನಿಮ್ಮ ಮುಖ, ಕೋಟಿ ಮುಖಗಳು
ಬೆಳಗಿನ ಮುಕುರದ ಬಿಂಬಗಳು,
ಪ್ರತಿಯೊಂದು ಆಕಳಿಸುತ್ತ ಜೀವತಳೆದು
ತಂತಮ್ಮ ದಿನಚರಿಯಲ್ಲಿ ಲೀನ.
ಮಗುವಿನ ಕೈಗೊಂದು ಹಲಗೆ ಬಳಪದ ಹಡಪ,
ಹಳದಿಯ ಶಾಲೆ ಬಸ್ಸು ಓಡುವಲ್ಲೆಲ್ಲ
ಹಸಿರು-ಹಳದಿ-ಕೆಂಪು ತೋರುದೀಪಗಳು,
ಹಣ್ಣಿನಂಗಡಿ, ಸೇಬು, ಕಿತ್ತಳೆ, ನಿಂಬೆ,
ಕಾಮನಬಿಲ್ಲಿನಂತೆ ಚಿತ್ತಾರ,
ಬೇಡುತ್ತಿವೆ ನಮ್ಮ ಹೊಗಳಿಕೆಯ ಮಂದಾರ.
ಬೆಳ್ಳಿ ಟ್ರಕ್ಕುಗಳು, ಎಣ್ಣೆಯನೊ, ಹಾಲನೋ,
ಇಟ್ಟಿಗೆ-ಕಾಗದ ಮತ್ತೇನೇನೋ ಹೊತ್ತು ನಡೆದಿವೆ
ಹೆದ್ದಾರಿಗಳ ಮೇಲೆ ನಮ್ಮ ವಾಹನಗಳ ಅಕ್ಕ ಪಕ್ಕ.
ನಾವು ಹೊರಟದ್ದು ಖಾಲಿ ಮೇಜಿನೆಡೆಗೋ,
ಲೆಕ್ಕ-ಪತ್ರಗಳ ಗೋಜಿನೆಡೆಗೋ,
ಜೀವ ಉಳಿಸಲೋ, ಗಣಿತ ಕಲಿಸಲೋ,
ಅಥವಾ, ಕಿರಾಣಿ ಅಂಗಡಿಯಲ್ಲಿ ಕಾಸನೆಣಿಸಿ
ಸಾಮಾನು ತೂಗಿಸಲೋ —
ನಮ್ಮಮ್ಮ ಇಪ್ಪತ್ತು ವರ್ಷ ಮಾಡಿದಂತೆ —
ಅವಳು ಮಾಡಿದ್ದರಿಂದಲೇ ತಾನೆ,
ನಾನು ಈ ಕವನ ಬರೆಯುವಂತಾದ್ದು?

ಜೀವತುಂಬಿದ ಮುಖ್ಯರು ನಾವೆಲ್ಲ
ಸಾಗುವುದೂ ಆ ಒಂದೇ ಬೆಳಕನು ಸೀಳಿ,
ಶಾಲೆಯಲಿ ಇಂದಿನ ಪಾಠವ ಬರೆದ
ಆ ಕಪ್ಪುಹಲಗೆಯ ಮೇಲೆ ಬಿದ್ದ ಬೆಳಕೂ ಅದೇ;
ಸಮೀಕರಣಗಳ ಬಿಡಿಸಲು, ಇತಿಹಾಸವನು ಪ್ರಶ್ನಿಸಲು,
ಪರಮಾಣುವನು ಊಹಿಸಿಕೊಳ್ಳಲು.
“ನನಗೊಂದು ಕನಸಿಹುದು” ಎಂಬಂಥ ಕನಸುಗಳ ಕಾಣುತ್ತ,
ಶಬ್ದಕೆಟುಕದ ದುಃಖವನು ಅನುಭವಿಸಲು.
ಆ ಇಪ್ಪತ್ತು ಮಕ್ಕಳು ಕುಳಿತಿರುತ್ತಿದ್ದ
ಖಾಲಿ ಬೆಂಚುಗಳ ವರ್ಣಿಸಲು ಎಲ್ಲಿದೆ ಶಬ್ದ?
ಅವರಿಲ್ಲ ಇಂದು, ಇನ್ನೆಂದು,
ಟೀಚರ್ ಕರೆದಾಗ ಅವರ ದನಿಯಿಲ್ಲ.
ಪ್ರಾರ್ಥನೆಯನು ಬಿಟ್ಟೇನೂ ಮಿಕ್ಕಿಲ್ಲ.
ಆದರೆ, ಆ ಒಂದು ಬೆಳಕು, –ಇಗರ್ಜಿಯಲ್ಲಿ —
ಬಣ್ಣ ಮೆತ್ತಿದ ಗಾಜಿನ ಕಿಟಕಿಗಳಲಿ
ರಂಗೇರಿ ಉಸಿರಾಡುತಿತ್ತು,
ವಸ್ತುಸಂಗ್ರಹಾಲಗಳಲಿ ಪ್ರತಿಮೆಗಳ
ಕಂಚಿನ ಮುಖದಲ್ಲಿ ಜೀವವನೆ ತರಿಸಿತ್ತು,
ಮೆಟ್ಟಲುಗಳಿಗೆ ಬಿಸಿಯ ತಟ್ಟಿಸಿ
ಉದ್ಯಾನಗಳ ಪೀಠಗಳಿಗೆ ಶಾಖ ಕೊಟ್ಟಿತ್ತು,
ತಾಯಂದಿರು ಜಾರುಬಂಡೆಯಲಿ ಆಡುವ ಮಕ್ಕಳ
ದಿವಸದ ಹೊಟ್ಟೆಯಲಿ ಜಾರಲು ಬಿಟ್ಟಾಗ.

ನೆಲದ ಮೇಲೆ, ನಮ್ಮ ನೆಲದ ಮೇಲೆ,
ನೇತಾಡುವ ಜೋಳ, ಅದ ಹೊತ್ತಿಹ ಕಾಂಡ,
ಅದನು ನೆಲಕೆ ಕಚ್ಚಿಸಿದ ಬೇರು,
ಬೆವರಲಿ ನೆನೆಸಿದ ಬೀಜವ ನೆಟ್ಟಿಹ
ಕೈಗಳ ಶ್ರಮವೆಲ್ಲ ತೆನೆತೆನೆಗಳಲ್ಲಿ.
ನಮ್ಮನು ಬೆಚ್ಚಗೆ ಇಟ್ಟಿಹ ಇದ್ದಿಲ ಗಣಿಯಲಿ
ಅಗೆಯುವ ಕಲಿಗಳ ಸಾಲು,
ಮರಳನು ಮೆಟ್ಟುತ ಗುಡ್ಡವ ಹತ್ತುತ
ಗಾಳಿಯ ಯಂತ್ರವ ನೆಟ್ಟಿಹ ಕಲಿಗಳ ಗೋಳು,
ಕೊಳವೆಯ ಹಾಸುತ, ತಂತಿಯ ಹೂಳುತ
ದುಡಿಯುವ ಮೈಗಳ ಪಾಡು,
ಗದ್ದೆಯ ಕೆಸರಲಿ ಈಜುತ ಸಾಗುತ
ಕಬ್ಬನು ಕುಯ್ಯುತ ಸವೆದಂತೆ, ನಮ್ಮಪ್ಪ —
ನನಗೂ ನನ್ನಣ್ಣನಿಗೂ ಪುಸ್ತಕ
ಚಪ್ಪಲಿ ಕೊಳ್ಳಲು ಸಾಧ್ಯವಾಗಲೆಂದು.

ಮರುಭೂಮಿಯ ಮರಳು, ಹೊಲಗಳ ಧೂಳು, ನಗರ,
ಬಯಲು ಎಲ್ಲವು ಮಿಂದಿದೆ ಒಂದೇ ವಾಯುವಿನಿಂದ,
ಅದೆ ನಮ್ಮಯ ಉಸಿರು, ಉಸಿರಾಡುವ ನಾವು.
ಕಾರಿನ ಹಾರನ್ ಸದ್ದಲು ಅಡಗಿದೆ ವಾಯು,
ರಸ್ತೆಯ ನಡುವೆ ಹಾಯುವ ಬಸ್ಸಿನಲಿ,
ಮೆಟ್ಟಿಲನೇರುವ ತಾಳದ ದನಿಯಲ್ಲಿ,
ಗಿಟಾರಿನ ಕಂಪನದಲ್ಲಿ, ಗಜಿಬಿಜಿ ಸದ್ದಿನ ರಸ್ತೆಯಲಿ,
ಒಣಗುವ ಬಟ್ಟೆಯ ಹಗ್ಗದ ಮೇಲಿನ
ಅನಿರೀಕ್ಷಿತ ಹಕ್ಕಿಯ ಸದ್ದಿನಲ್ಲಿ,
ಅಡಗಿದೆ ಅದೆ ವಾಯು.

ಮಕ್ಕಳ ಜೋಕಾಲಿಯ ಕೀಯ್-ಕೀಯ್,
ಚೂ-ಚೂ-ರೈಲಿನ ಕೂ-ಕೂ, ಕೇಳಿ:
ಉಪಾಹಾರಗೃಹಗಳ ಗುಜು-ಗುಜು, ಕೇಳಿ
ನಗುತ ಬಾಗಿಲ ತೆಗೆದು ಸ್ವಾಗತಿಸುತ,
ದಿನವಿಡೀ ಪರಸ್ಪರ ನಾವಾಡಿದ
“ಹೆಲೊ, ಶಲೋಂ, ಬೋನ್-ಜೋರ್ನೋ, ಹೌಡಿ, ನಮಸ್ತೆ,”
ಅಥವಾ, ನಮ್ಮಮ್ಮ ಕಲಿಸಿದ ನುಡಿಯಲ್ಲಿ,
“ಬ್ಯೂನೋಸ್ ಡಿಯಾಸ್” ನಾನಾ ನಾಡಿನ ನುಡಿಗಳಲಿ,
ಆ ಒಂದೇ ಗಾಳಿಯಲ್ಲಿ ತೇಲಿಬಿಟ್ಟ
ಮಾತುಗಳು ಬಿಮ್ಮಿಲ್ಲದೇ ಓಡಿ,
ಥಟ್ಟನೆ ತುಟಿಯ ಮೀರಿ ಹಾರಿ
ನಮ್ಮ ಬಾಳಲಿ ಮಾಡಿದ ಮೋಡಿ.

ಒಂದೇ ಬಾನು
ಅಪಲೇಶಿಯನ್ ಮತ್ತು ಸಿಯರಾ ಶ್ರೇಣಿಗಳು
ತಮ್ಮ ಭವ್ಯತೆಯ ಕಂಡಾಗಿನಿಂದ,
ಮಿಸಿಸಿಪ್ಪಿ ಮತ್ತು ಕೊಲರೆಡೂ ಹರಿದು
ಕಡಲ ಸೇರಿದಂದಿನಿಂದ,
ನಮ್ಮ ಕೈಗಳ ಚಳಕಕೆ ನಮೋ ಎನ್ನಿ.
ಸೇತುವೆಗಳಿಗೆ ಉಕ್ಕನು ನೇಯ್ದು,
ಬಾಸ್ ಕೊಟ್ಟ ಮತ್ತೊಂದು ವರದಿಯ
ವೇಳೆಗೆ ಮುನ್ನ ಬರೆದು ಮುಗಿಸಿ,
ಮತ್ತೊಂದು ಗಾಯವ ಹೊಲಿದು,
ಮತ್ತೊಂದು ಸಮವಸ್ತ್ರವ ಜೋಡಿಸಿ,
ತೈಲಚಿತ್ರವೊಂದಕೆ ಮೊದಲ ಕುಂಚವನಾಡಿಸಿ,
ಸ್ವಾತಂತ್ರ್ಯ ಗೋಪುರಕೆ ಕೊನೆಯ ಮಹಡಿಯನೇರಿಸಿ,
ಬಡಿತಕೆ ಬಗ್ಗದೆ, ಹೊಡೆತಕೆ ತಗ್ಗದೆ, ಜಿಗಿದ ಆ ಬಾನು.

ಒಮ್ಮೊಮ್ಮೆ ದುಡಿದುಡಿದು ದಣಿದು,
ಮೇಲೆ ಮುಖಮಾಡಿ ನೋಡುವ ಆ ಒಂದೇ ಬಾನು,
ಕೆಲವೊಮ್ಮೆ, ಬಾಳಿನ ಹವಾಗುಣವನೂಹಿಸಿ,
ಕೆಲವೊಮ್ಮೆ, ಇತರರು ನಮ್ಮ ಪ್ರೀತಿಗೆ
ತಕ್ಕ ಪ್ರೀತಿಯ ತೋರಿದ್ದಕ್ಕೆ ಧನ್ಯರಾಗಿ,
ಕೊಡುವ ತಾಯಿಗೆ ಕೆಲವೊಮ್ಮೆ ಕೈಮುಗಿದು,
ಅಥವಾ, ಕೇಳಿದ್ದನ್ನು ಕೊಡಿಸದಿದ್ದ
ತಂದೆಯ ಕ್ಷಮಿಸುವಂದು ಕಂಡ ಆ ಬಾನು.

ಇಗೋ, ಮನೆಯತ್ತ ಹೊರಟೆವು, ನಾವು.
ಮಳೆಯಲಿ ನೆನೆಯುತ, ಹಿಮಭಾರಕೆ ಬಾಗುತ,
ಧೂಳಲಿ ಮೀಯುತ, ಅಂತೂ ಮನೆಯತ್ತ,
ಎಂದೆಂದೂ, ಆ ಒಂದೇ ಬಾನಿನ ಅಡಿಯಲ್ಲಿ,
ನಮ್ಮದೇ ಬಾನಿನ ಅಡಿಯಲ್ಲಿ.
ಅಲ್ಲಿ, ಎಂದೆಂದೂ ಒಂದೇ ಚಂದ್ರಮ,
ಪ್ರತಿ ಹಂಚಿನ ಮೇಲೂ ಯಾರಿಗೂ ಕೇಳಿಸದಂತೆ
ಡಂಗುರ ಬಾರಿಸದ ತಮಟೆ.
ಪ್ರತಿ ಕಿಟಕಿಯಲ್ಲೂ ಕಾಣುವ,
ಒಂದೇ ನಾಡಿನ, ನಮ್ಮೆಲ್ಲರ ನಾಡಿನ,
ನಮ್ಮೆಲ್ಲರ, ತಾರೆಗಳ ವಲ್ಲಭನವನು
ಭರವಸೆ –ಹೊಸ ತಾರಾಮಂಡಲದ ಭರವಸೆ,
ನಾವು ಗುರುತಿಸಲೆಂದು ನಿರೀಕ್ಷೆ,
ನಾವು ಹೆಸರಿಡಲೆಂದು ಕಾಯುವ ಪರೀಕ್ಷೆ,
ನಾವೆಲ್ಲ ಒಟ್ಟಾಗಿ ಸಾಧಿಸಲೆಂಬ ಸಮೀಕ್ಷೆ!

 Posted by at 11:47 AM