admin

Jul 112012
 

ನಮ್ಮ-ನಿಮ್ಮೆಲ್ಲರ ‘ಕನ್ನಡ ಸಾಹಿತ್ಯ ರಂಗ’ವು ಇನ್ನೊಂದು ವಸಂತ ಸಾಹಿತ್ಯ ಸಮ್ಮೇಳನದ ಸಿದ್ಧತೆಯಲ್ಲಿದೆ. ಈಗಾಗಲೇ ಯಶಸ್ವಿಯಾಗಿ ಐದು ಸಾಹಿತ್ಯ ಸಮ್ಮೇಳನಗಳನ್ನು ನಡೆಸಿ, ಸಾಹಿತ್ಯಿಕವಾಗಿ ಮುಖ್ಯವೆನಿಸುವ ಐದು ಪುಸ್ತಕಗಳನ್ನು ಸಂಪಾದಿಸಿ ಪ್ರಕಟಿಸಿರುವುದಕ್ಕೆ ಹೆಮ್ಮೆ ಪಡುತ್ತೇವೆ. ೨೦೧೩ರ ಮೇ ತಿಂಗಳಲ್ಲಿ ನಡೆಯಲಿರುವ ಸಮ್ಮೇಳನದ ಮೊದಲ ಹೆಜ್ಜೆಯಾಗಿ ಅಂದು ಹೊರತರಲಿರುವ ಗ್ರಂಥದ ಹೂರಣ ಮೊದಲೇ ತಯಾರಾಗಬೇಕಿದೆ. ಅದು ಎಲ್ಲರ ಕೂಡುವಿಕೆಯಿಂದ ಮಾತ್ರ ಸಾಧ್ಯ. ಅದಕ್ಕಾಗಿಯೇ ಈ ನಿಮಂತ್ರಣ.

ಈ ಬಾರಿ ನಮ್ಮ ವಿಷಯ, ಸ್ಥೂಲವಾಗಿ: ಅಮೇರಿಕಾದಲ್ಲಿ ನಮ್ಮ ಬದುಕು.

ಈಗಾಗಲೇ ಹಲವಾರು ಕಡೆಗಳಲ್ಲಿ, ಕೆಲವಾರು ರೀತಿಯಲ್ಲಿ, ಹತ್ತಾರು ಲೇಖಕರಿಂದ ಈ ಭಾವ-ಬಣ್ಣಗಳು ಬಣ್ಣಿಸಲ್ಪಟ್ಟಿರಬಹುದು. ‘ಅದನ್ನೇ ಮತ್ತೆ ಮತ್ತೆ ಏನು ಬರೆಯೋದು’ ಅನ್ನುವ ಔದಾಸೀನ್ಯ ಬದಿಗಿರಿಸಿ, ನಮ್ಮ ವಲಸೆ-ಜೀವನದ ಆಸು-ಪಾಸುಗಳನ್ನು ಹತ್ತು ಹಲವು ಮಗ್ಗುಲುಗಳನ್ನು ಒಂದೇ ಧಾರೆಯಲ್ಲಿ ಎರಡು ರಟ್ಟುಗಳ ನಡುವೆ ದಾಖಲಿಸೋಣ. ನಾವೆಲ್ಲ ಯಾವ್ಯಾವುದೋ ಕಾಲ ಘಟ್ಟಗಳಲ್ಲಿ ಪೆಟ್ಟಿಗೆ ಹೊತ್ತು ಹೊಸ ಪಟ್ಟು ಕಲಿಯುವ ಜಟ್ಟಿಗಳಾಗಿ ಹೊಸ ದೇಶದ ಹೊಸ ನೆಲವನ್ನು ಮುಟ್ಟಿದವರು. ನಮ್ಮೆಲ್ಲರ ಅನುಭವ-ಅನುಭಾವಗಳೂ ಅಷ್ಟೇ ವಿಭಿನ್ನ, ವೈವಿಧ್ಯತರ. ಅಂತೆಯೇ, ನಮ್ಮೆಲ್ಲರ ಅಭಿವ್ಯಕ್ತಿಯ ದಾರಿಗಳೂ ಭಿನ್ನ. ಆ ಭಿನ್ನತೆಗೆ ಅನುಗುಣವಾಗಿಯೇ ಅಭಿವ್ಯಕ್ತಿಸೋಣ. ಈ ವೈವಿಧ್ಯವೇ ಈ ಗ್ರಂಥದ ವಿಶೇಷವಾಗಲಿ. ಸಾಮಾಜಿಕವಾಗಿ ಮತ್ತು ಚಾರಿತ್ರಿಕವಾಗಿ ಅಮೆರಿಕನ್ನಡ ವಲಸೆಯ ಈ ಭಾವಗಳು, ಸ್ವರಗಳು, ಮುಖಗಳು ಅತಿ ಮುಖ್ಯವಾಗಲಿವೆ.

ನಮ್ಮ ನಿತ್ಯ ಜೀವನ, ವೃತ್ತಿ ಜೀವನ, ಮನೆ/ನೆರೆಹೊರೆ, ಶಾಲೆ/ಕಾಲೇಜು ಪರಿಸರ, ಕಂಡದ್ದು, ಕೇಳಿದ್ದು, ಆಡಿದ್ದು, ಹಾಡಿದ್ದು, ತಿರುಗಿದ್ದು, ಮರುಗಿದ್ದು, ಹೊರಳಿದ್ದು, ನರಳಿದ್ದು, ಬಿದ್ದದ್ದು, ಎದ್ದದ್ದು… ಇನ್ನೂ ಏನೇನನ್ನು ಮಾಡಿದ್ದೇವೆ ಯಾ ಮಾಡಿಲ್ಲ! ಈ ಹೊಸ ನೆಲೆಯಿಂದ ನಾವು ಪಡೆದದ್ದೆಷ್ಟು, ನಮ್ಮ ಹೊಸ ಬೇರೂರಲು ಬೆಲೆ ತೆತ್ತದ್ದೆಷ್ಟು! ಎಲ್ಲವನ್ನೂ ಪ್ರಾಮಾಣಿಕವಾಗಿಯೂ ರಸವತ್ತಾಗಿಯೂ ತೆರೆದಿಡೋಣ. ಇದಂತೂ ನಮ್ಮದೇ ಚಾವಡಿ. ಇಲ್ಲಿ ನಮ್ಮದೇ ಕಲರವ. ಹರಟೆ, ಪ್ರಬಂಧ, ಕಥೆ, ಕವನ- ಯಾವ ಪ್ರಕಾರವಾದರೂ ಸರಿಯೇ, ಬರವಣಿಗೆ ಹರಿದು ಬರಲಿ. ಬನ್ನಿ, ಮನದ ಪಟಲ ತೆರೆದು, ನೆನಪ ಖಜಾನೆ ಕೆದಕಿ, ಸುರುಳಿ ಬಿಡಿಸಿ ನಿನ್ನೆಯನ್ನು ಇಂದಿನ ಅಕ್ಷರವಾಗಿಸೋಣ.

ನಿಮ್ಮ ಈ ಜೀವನಚಿತ್ರಗಳ ಕಡತ ಸಂಪಾದಕರ ಕೈಸೇರಲು ಇದೇ ವರ್ಷ- ೨೦೧೨- ನವೆಂಬರ್ ಮೂವತ್ತನೇ ತಾರೀಕು ಕೊನೆಯ ದಿನಾಂಕ; ಸಾಕಷ್ಟು ಸಮಯವನ್ನೇ ನೀಡುತ್ತಿದ್ದೇವೆ. ಅದಕ್ಕೂ ಮುಂಚಿತವಾಗಿ ಕಳುಹಿಸಿದರೆ ವಿವರಣೆ-ವಿಶ್ಲೇಷಣೆಗಳು ಬೇಕಾದಲ್ಲಿ ಅವಕಾಶವಿರುತ್ತದೆ. ಹಾಗೇ, ಅದರೊಂದಿಗೇ ನಿಮ್ಮ ಪುಟ್ಟ ಪರಿಚಯ ಪತ್ರವನ್ನೂ ಭಾವಚಿತ್ರವನ್ನೂ ಕಳುಹಿಸಿಕೊಡಿ.

ಮತ್ತೆ ಮತ್ತೆ ಹೇಳಿಸಿಕೊಳ್ಳದೇ ಕೀಲಿಮಣೆಯಲ್ಲಿ ಬೆರಳತುದಿಯಾಡಿಸಿ; ಕಡತ ನಮಗೆ ಕಳಿಸಿ.

* ವಿಷಯ: ಅಮೆರಿಕದ ನೆಲದಲ್ಲಿ ವಲಸಿಗರಾಗಿ ನಮ್ಮ ಬದುಕು

* ಅಕ್ಷರದ ಗಾತ್ರ ೧೪ರಲ್ಲಿ ಸುಮಾರು ಎಂಟು ಹತ್ತು ಪುಟಗಳ ಬರಹ ಅಥವಾ ಎಮ್.ಎಸ್.ವರ್ಡ್. ಕಡತ.

* ನವೆಂಬರ್ ಮೂವತ್ತು ೨೦೧೨- ಕೊನೆಯ ದಿನಾಂಕ.

* ಸಂಪಾದಕರ ಆಯ್ಕೆಯೇ ಅಂತಿಮ.

* ಕಡತಗಳನ್ನು ಕಳುಹಿಸಬೇಕಾಗಿರುವ ವಿಳಾಸ: ksrsammelana2013@gmail.com

* ಹೆಚ್ಚಿನ ಮಾಹಿತಿಗಾಗಿ ಸಂಪರ್ಕ: ಗುರು ಕಾಗಿನೆಲೆ, ತ್ರಿವೇಣಿ ಶ್ರೀನಿವಾಸ ರಾವ್, ಜ್ಯೋತಿ ಮಹಾದೇವ್
gkaginele@gmail.com, sritri@gmail.com, jyothimahadev@gmail.com

 Posted by at 12:11 PM
Jun 252012
 

The Way We Were

Memories
Light the corners of my mind
Misty Watercolor memories
Of the way we were
Scattered pictures
Of the smiles we left behind
Smiles we gave to one another
For the way we were

Can it be that it was all so simple then
Or has time rewritten every line
If we had the chance to do it all again
Tell me- Would we? Could we?

Memories
May be beautiful and yet
That is too painful to remember
We simply choose to forget

So it is the laughter
We will remember
Whenever we remember
The way we were

So it is the laughter
We will remember
Whenever we remember
The way we were

ನಾವಿದ್ದಿದ್ದೇ ಹೀಗೆ

ನೆನಪುಗಳು ಬೆಳಗುವುವು
ಮನಸಿನ ಮೂಲೆಗಳನು
ವರ್ಣಚಿತ್ರದ ಮಸುಕಿನಿಂದ.
ನಾವಿದ್ದ ರೀತಿಯ ಕುರುಹಾಗಿ
ಬಿಟ್ಟುಬಂದ, ಪರಸ್ಪರ
ಕೊಟ್ಟು-ತಂದ, ನಗುವಿನ
ಚದುರಿದ ಚಿತ್ರಗಳು
ನಾವಿದ್ದ ಆ ರೀತಿಗಾಗಿ.

ಅಂದು ನಡೆದ ಅವೆಲ್ಲ
ತುಂಬ ಸರಳವಾಗಿತ್ತೇನು?
ಅಥವಾ, ಕಾಲರಾಯ ಗೀಚಿದನೆ
ಒಂದೊಂದೂ ಗೆರೆಯ ಮತ್ತೆ?
ಪುನರಾವೃತ್ತಿಗಿದ್ದರೆ ಸರತಿ
ಮಾಡುವೆವೆ ನಾವು ಮತ್ತೆ?
ಹೇಳು, ಮಾಡಲಾದೀತೆ ಮತ್ತೆ?

ನೆನಪುಗಳು ಸುಂದರ, ಹಲವು
ಮತ್ತೆ ಹಲವು, ತರುವುವು ನೋವು
ಅವುಗಳನು ನೆನೆಯಲೇಬೇಕೇ?
ಮರೆತುಬಿಡುವುದೇ ನಮ್ಮ ಆಯ್ಕೆ.

ಅಂದರೆ, ನಗುವೇ ನೆನಪಿನ ಬುತ್ತಿ
ಕಳೆದ ದಿನಗಳ ನೆನೆವಾಗಲೆಲ್ಲ
ಮರುಕಳಿಸುವ ನಗುವೇ
ನಮ್ಮೆಲ್ಲರ ನೆನಪಿನ ಬುತ್ತಿ!

ಮೈ.ಶ್ರೀ. ನಟರಾಜ
(ಬಾರ್ಬರಾ ಸ್ಟ್ರೈಸೆಂಡ್ ಹಾಡಿ ಪ್ರಖ್ಯಾತಗೊಳಿಸಿದ “ಮೆಮ್ರೀಸ್” ಎಂಬ ಗೀತೆಯ ಭಾವಾನುವಾದ)

 Posted by at 11:05 AM
May 012012
 

ಆಲ್ಬರ್ಟ್ ಲಾಮೊರೀಸ್ ಎ೦ಬ ಫ಼್ರೆ೦ಚ್ ಚಲನಚಿತ್ರಕಾರ ೧೯೫೬ರಲ್ಲಿ ತಯಾರಿಸಿದ `La Ballon Rouge’ (`The Red Balloon’) ಎ೦ಬ ಚಿತ್ರದ ಕತೆ ಇದು. ಲಾಮೊರೀಸ್ ತಾನೇ ಬರೆದು, ನಿರ್ದೇಶಿಸಿ, ತಯಾರಿಸಿದ ಈ ಕೇವಲ ೩೪ ನಿಮಿಷದ ಚಿತ್ರ ವಿಶ್ವಖ್ಯಾತಿ ಗಳಿಸಿತು. ಅದಕ್ಕೆ ಅತ್ಯುತ್ತಮ ಚಿತ್ರಕತೆಯ ಆಸ್ಕರ್ ಪ್ರಶಸ್ತಿಯೂ ಬ೦ತು. ಲಾಮೊರೀಸನ ಮಗ ಪ್ಯಾಸ್ಕಲ್ಲನೇ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ. ಪ್ರಪ೦ಚದ ನಾನಾ ಭಾಷೆಗಳಿಗೆ ಈ ಕತೆ, ಚಿತ್ರ ಅನುವಾದಗೊ೦ಡಿವೆ. ನಾನು ಆ ಚಿತ್ರವನ್ನು ಎರಡು-ಮೂರು ಬಾರಿಯಾದರೂ ನೋಡಿದ್ದೇನೆ. ನಿಜವಾಗಿಯೂ ಎ೦ಥವರನ್ನೂ ಮೋಹಗೊಳಿಸುವ ಚಿತ್ರ ಅದು. ಪ್ಯಾಸ್ಕಲ್‌ನ ಮಾತ್ರವೇ ಅಲ್ಲ, ನಮ್ಮನ್ನೂ ಆಕಾಶಕ್ಕೇರಿಸಿ, ಮೋಡದಾಚೆಯ ಒ೦ದು ಮಾಯಾಲೋಕಕ್ಕೆ ಒಯ್ಯುತ್ತದೆ.

ಪ್ಯಾರಿಸ್ ಮಹಾನಗರದಲ್ಲಿ ಪ್ಯಾಸ್ಕಲ್ ಅ೦ತ ಒಬ್ಬ ಹುಡುಗ ಇದ್ದ. ಅವನಿಗೆ ಪಾಪ ಅಣ್ಣ, ತಮ್ಮ, ಅಕ್ಕ, ತ೦ಗಿ ಯಾರೂ ಇರಲಿಲ್ಲ. ಮನೆಯಲ್ಲಿ ಆಟಕ್ಕೆ ಯಾರೂ ಇಲ್ಲದೆ ಅವನಿಗೆ ಯಾವಾಗಲೂ ತು೦ಬಾ ಬೇಸರವಾಗುತ್ತಿತ್ತು. ಒ೦ದು ಸಲ ಅವನ ಮನೆಯ ಹತ್ತಿರ ಯಾವುದೋ ಬೆಕ್ಕು ಓಡಾಡುತ್ತಿದ್ದರೆ ಪ್ಯಾಸ್ಕಲ್ ಹೋಗಿ ಮೆಲ್ಲಗೆ ಅದನ್ನು ಹಿಡಿದು ಮನೆಗೆ ತೆಗೆದುಕೊ೦ಡುಹೋಗಿದ್ದ. ಇನ್ನೊ೦ದು ಸಲ ಹಾಗೇ ಒ೦ದು ನಾಯಿಮರಿ ಹಿಡಿದುಕೊ೦ಡು ಬ೦ದಿದ್ದ. ಆದರೆ ಅವನ ಅಮ್ಮನಿಗೆ ನಾಯಿ-ಬೆಕ್ಕು ಅವೆಲ್ಲ ಇಷ್ಟವಾಗುತ್ತಿರಲಿಲ್ಲ. ಥೂ, ಅವು ಮನೆಯೆಲ್ಲ ಗಲೀಜು ಮಾಡುತ್ತವೆ, ಅವನ್ನೆಲ್ಲ ತರಬೇಡ ಅ೦ತ ಗದರಿಸಿ ಅವನ್ನೆಲ್ಲ ಅಟ್ಟಿಬಿಟ್ಟರು! ಪ್ಯಾಸ್ಕಲ್ ಪಾಪ ಒ೦ಟಿಯಾದ. ಆ ಥಳಥಳ ಹೊಳೆಯುವ ಮನೆಯಲ್ಲಿ ಅವನೊಬ್ಬನೇ ಒಬ್ಬ!

ಒ೦ದು ದಿನ ಶಾಲೆಗೆ ಹೋಗುವಾಗ ಅವನಿಗೊ೦ದು ಕೆ೦ಪು ಬಲೂನು ಕಾಣಿಸಿತು. ಬೀದಿ ಪಕ್ಕದ ಲಾ೦ದ್ರ ಕ೦ಬಕ್ಕೆ ಯಾರೋ ಅದನ್ನು ಕಟ್ಟಿ ಹೋಗಿದ್ದರೇನೋ. ಪ್ಯಾಸ್ಕಲ್‌ಗೆ ಅದನ್ನು ನೋಡಿದ ಕೂಡಲೆ ಅದನ್ನು ಹಿಡಿದುಕೊಳ್ಳಬೇಕು ಅನ್ನಿಸಿತು. ತಕ್ಷಣ ತನ್ನ ಪುಸ್ತಕದ ಚೀಲ ತೆಗೆದು ನೆಲದ ಮೇಲಿಟ್ಟು, ಲಾ೦ದ್ರ ಕ೦ಬ ಹತ್ತಿ ಆ ಕೆ೦ಪು ಬಲೂನನ್ನು ಹಿಡಿದುಕೊ೦ಡು, ಸರಸರ ಇಳಿದು ಚೀಲ ತೆಗೆದುಕೊ೦ಡು ಬಸ್ ಸ್ಟಾಪಿಗೆ ಓಡಿದ.

ಬಸ್ ಬ೦ತು. ಪ್ಯಾಸ್ಕಲ್ ಬಲೂನು ಹಿಡಿದುಕೊ೦ಡೇ ಬಸ್ ಹತ್ತಿದ. ಆದರೆ ಬಸ್ ಕ೦ಡಕ್ಟರ್ ಬಲೂನನ್ನು ಬಸ್ಸಿನೊಳಗೆ ತರಲು ಬಿಡಲಿಲ್ಲ. ಕ೦ಡಕ್ಟರನಿಗೆ ಎಲ್ಲಾ ರೂಲ್ಸೂ ಗೊತ್ತು. ‘ಬಸ್ಸಿನಲ್ಲಿ ನಾಯಿ ಬಿಡೊಲ್ಲ, ದೊಡ್ಡ ದೊಡ್ಡ ಟ್ರ೦ಕು, ಹಾಸಿಗೆ ತರಕೂಡದು, ಬಲೂನ್ ಅ೦ತೂ ಯಾರೂ ತರಕೂಡದು…’ ಅ೦ತೆಲ್ಲ ರೂಲ್ಸು ಹೇಳಿದ. ನಾಯಿ-ಗೀಯಿ ತರುವವರು ನಡೆದುಕೊ೦ಡೇ ಹೋಗಬೇಕು, ತು೦ಬಾ ದೊಡ್ಡ ಟ್ರ೦ಕು ಹಾಸಿಗೆ ಇದ್ದರೆ ಟ್ಯಾಕ್ಸಿ ತೊಗೋಬೇಕು, ಬಲೂನ್ ಇರುವವರು ಅದನ್ನ ಮನೇಲೆ ಬಿಟ್ಟು ಬರಬೇಕು- ಅ೦ತೆಲ್ಲ ಹೇಳಿದ ಅವನು. ಆದರೆ ಪ್ಯಾಸ್ಕಲ್‌ಗೆ ಆ ಬಲೂನನ್ನು ಬಿಟ್ಟುಹೋಗೋಕ್ಕೆ ಮನಸ್ಸು ಬರಲಿಲ್ಲ. ‘ಈ ಬಸ್ಸೇ ಬೇಡ, ಹಾಗೇ ಹೋಗ್ತೀನಿ’ ಅ೦ದುಕೊ೦ಡು, ನಡಕೊ೦ಡೇ ಹೊರಟುಬಿಟ್ಟ. ಅವನ ಶಾಲೆಯೋ ತು೦ಬಾ ದೂರ. ಅಷ್ಟು ದೂರ ನಡೆದುಕೊ೦ಡು, ಓಡಿಕೊ೦ಡು, ಏದುಸುರು ಬಿಟ್ಟುಕೊ೦ಡು ಹೋಗುವ ಹೊತ್ತಿಗೆ ಶಾಲೆಯ ಗ೦ಟೆ ಹೊಡೆದು, ಶಾಲೆಯ ದೊಡ್ಡ ಗೇಟನ್ನು ಮುಚ್ಚಿಬಿಟ್ಟಿದ್ದರು. ಸ್ಕೂಲಿಗೆ ತಡವಾಗಿ ಹೋಗೋದು ಉ೦ಟೆ; ಅದೂ ಬಲೂನ್ ತೊಗೊ೦ಡು ಹೋಗೋದು ಎಲ್ಲಾದರೂ ಉ೦ಟೆ? ಏನು ಮಾಡೋದು ಈಗ ಅ೦ತ ಪ್ಯಾಸ್ಕಲ್‌ಗೆ ತು೦ಬಾ ಯೋಚನೆಯಾಯಿತು. ಆಗ ಅವನಿಗೆ ಇದ್ದಕ್ಕಿದ್ದ ಹಾಗೆ ಒ೦ದು ಉಪಾಯ ಹೊಳೆಯಿತು. ಅಲ್ಲೇ ಶಾಲೆಯ ಆವರಣದಲ್ಲೇ ಕೆಲಸ ಮಾಡುತ್ತಿದ್ದ ಜವಾನನನ್ನು ಕರೆದು ಅವನ ಕೈಗೆ ತನ್ನ ಬಲೂನು ಕೊಟ್ಟು ಶಾಲೆ ಮುಗಿಯೋ ತನಕ ಇದನ್ನ ಇಟ್ಟುಕೊ೦ಡಿರು ಅ೦ತ ಹೇಳಿ, ಒಳಕ್ಕೆ ಹೋದ. ಪ್ಯಾಸ್ಕಲ್ ಶಾಲೆಗೆ ತಡವಾಗಿ ಹೋದದ್ದು ಅದೇ ಮೊದಲ ಸಲ ಆದ್ದರಿ೦ದ ಅವನ ಮೇಷ್ಟ್ರು ಅವನನ್ನ ಏನೂ ಬೈಯಲಿಲ್ಲ.

ಶಾಲೆ ಮುಗಿದ ಮೇಲೆ, ಜವಾನ ಬ೦ದು ಪ್ಯಾಸ್ಕಲ್‌ಗೆ ಅವನ ಬಲೂನು ವಾಪಸು ಕೊಟ್ಟ. ಅಷ್ಟು ಹೊತ್ತಿಗೆ ಮಳೆ ಶುರುವಾಯಿತು. ಆ ಮಳೇಲೂ ಪ್ಯಾಸ್ಕಲ್ ನಡೆದುಕೊ೦ಡೇ ಹೊರಟ ಮನೆಗೆ, ಬಸ್ಸಿನಲ್ಲಿ ಬಲೂನ್ ತೆಗೆದುಕೊ೦ಡು ಹೋಗಕೂಡದಲ್ಲ! ಏನು ಹುಚ್ಚು ರೂಲ್ಸು ಮಾಡಿದ್ದಾರಪ್ಪ ಎ೦ದುಕೊ೦ಡ. ಆದರೆ ಮಳೇಲಿ ಹಾಗೇ ಹೋದರೆ, ಬಲೂನ್ ಪಾಪ ಎಲ್ಲ ಒದ್ದೆ ಆಗುತ್ತಲ್ಲ ಅ೦ತ ಯೋಚಿಸಿದ. ಅಲ್ಲೇ ನೋಡಿದರೆ, ಒಬ್ಬರು ಮುದುಕರು ಛತ್ರಿ ಹಿಡಿದುಕೊ೦ಡು ಹೋಗುತ್ತಿದ್ದರು. ಮೆಲ್ಲಗೆ ಹೋಗಿ ಅವರ ಛತ್ರಿ ಕೆಳಗೆ ನುಸುಳಿಕೊ೦ಡು ಬಲೂನ್ ಒದ್ದೆ ಆಗದ ಹಾಗೆ ಹೋದ. ಹಾಗೇ ಮನೆಯವರೆಗೂ ಅವರಿವರ ಛತ್ರಿ ಕೆಳಗೆ ನುಸುಳಿಕೊ೦ಡು ಹೋಗಿ ಮನೆ ಸೇರಿದ.

ದಿನಾಗಲೂ ಒ೦ದು ಹೊತ್ತಿಗೆ ಬಸ್ಸಿನಲ್ಲಿ ಬರುತ್ತಿದ್ದವನು ಈವತ್ತು ಯಾಕೆ ಬರಲಿಲ್ಲ, ಎಷ್ಟು ಹೊತ್ತಾಯಿತು, ಎಲ್ಲಿ ಹೋದ… ಅ೦ತ ಅವನ ಅಮ್ಮನಿಗೆ ಗಾಬರಿ ಆಗುತ್ತಿತ್ತು. ಇವನು ಮನೆಗೆ ಹೋದ ಮೇಲೆ, ಸದ್ಯ ಬ೦ದನಲ್ಲ ಅ೦ತ ತಿಳಿದು ಸ೦ತೋಷವಾಯಿತು, ಆದರೂ ಈ ಬಲೂನಿನಿ೦ದಾಗಿ ಇಷ್ಟು ಹೊತ್ತುಮಾಡಿಕೊ೦ಡು ಬ೦ದ ಅ೦ತ ತಿಳಿದು ಅಮ್ಮನಿಗೆ ಕೋಪ ಬ೦ತು. ಇದು ಇದ್ದರೆ ಇನ್ನು ನಾಳೆಯೂ ಹೀಗೇ ಹೊತ್ತುಮಾಡಿಕೊ೦ಡು ಬರುತ್ತಾನೆ ಅ೦ತ ತಿಳಿದು ಅವನ ಅಮ್ಮ ಕಿಟಕಿ ಬಾಗಿಲು ತೆಗೆದು ಆ ಕೆ೦ಪು ಬಲೂನನ್ನು ಹೊರಕ್ಕೆ ಅಟ್ಟಿಬಿಟ್ಟರು!

ಸಾಧಾರಣವಾಗಿ ಬಲೂನ್ ಹೊರಗೆ ಬಿಟ್ಟರೆ ಗಾಳಿಗೆ ಹೊಡೆದುಕೊ೦ಡು ಹೋಗುತ್ತದೆ ಅಲ್ಲವೆ? ಆದರೆ ಆ ಬಲೂನು ಹಾಗೆ ಹೋಗಲಿಲ್ಲ. ಅಲ್ಲೇ ಪ್ಯಾಸ್ಕಲ್ ರೂಮಿನ ಕಿಟಕಿಯ ಹೊರಗಡೆ ಗಾಳಿಯಲ್ಲಿ ತೇಲುತ್ತ ನಿ೦ತಿತ್ತು! ಅವರಿಬ್ಬರೂ ಕಿಟಕಿಯ ಗಾಜಿನ ಮೂಲಕ ಎಷ್ಟೋ ಹೊತ್ತು ಒಬ್ಬರನ್ನೊಬ್ಬರು ನೋಡುತ್ತ ನಿ೦ತಿದ್ದರು. ಪ್ಯಾಸ್ಕಲ್‌ಗೆ, ಅರೆ, ಇದೇನು, ಈ ಬಲೂನು ಇಲ್ಲೇ ನಿ೦ತಿದೆ ಅ೦ತ ಒ೦ದು ಕ್ಷಣ ಆಶ್ಚರ್ಯ ಆದರೂ, ಹೌದು, ಅದು ನನ್ನ ಸ್ನೇಹಿತ ಅಲ್ಲವೇ, ಅದಕ್ಕೇ ಅಲ್ಲಿ ನಿ೦ತಿದೆ, ಅದರಲ್ಲೇನು ಆಶ್ಚರ್ಯ ಎ೦ದೂ ಅನ್ನಿಸಿತು. ಮೆಲ್ಲಗೆ ಕಿಟಕಿ ಬಾಗಿಲು ತೆಗೆದು ಬಲೂನನ್ನು ಒಳಕ್ಕೆ ಕರೆದ. ಬಲೂನು ಸ೦ತೋಷದಿ೦ದ ಒಳಕ್ಕೆ ಬ೦ತು. ತನ್ನ ರೂಮಿನಲ್ಲಿ ಯಾರಿಗೂ ಕಾಣದ ಹಾಗೆ ಅದನ್ನು ಬಚ್ಚಿಟ್ಟ.

ಮಾರನೇ ದಿನ, ಶಾಲೆಗೆ ಹೋಗುವ ಮು೦ಚೆ, ಪ್ಯಾಸ್ಕಲ್ ಕಿಟಕಿ ತೆಗೆದು ಬಲೂನನ್ನ ಹೊರಗೆ ಕಳಿಸಿ, “ನೀನು ಇಲ್ಲೇ ಇರು ಹೊರಗೆ, ನಾನು ಕರೆದಾಗ ನನ್ನ ಜೊತೆ ಸ್ಕೂಲಿಗೆ ಬರುವೆಯ೦ತೆ” ಎ೦ದ. ಆಮೇಲೆ ಪುಸ್ತಕದ ಚೀಲ ತೆಗೆದುಕೊ೦ಡು ಅವರ ಅಮ್ಮನಿಗೆ ಹೇಳಿ ಹೊರಟ. ರಸ್ತೆಗೆ ಹೋಗಿ, “ಏ ಬಲೂನ್, ಬಾ ಹೋಗೋಣ” ಅ೦ತ ಕರೆದ. ಅವನು ಕರೆಯುವುದನ್ನೇ ಕಾಯುತ್ತಿದ್ದ ಬಲೂನು ಚಿಮ್ಮುತ್ತ ಅವನಿದ್ದ ಕಡೆಗೆ ಬ೦ತು. ಪ್ಯಾಸ್ಕಲ್ ಜೊತೆ, ಅವನ ಹಿ೦ದೆ, ತಾನೂ ಹೊರಟಿತು.

ಆ ಬಲೂನು ತು೦ಬಾ ತು೦ಟು! ಪ್ಯಾಸ್ಕಲ್ ಜೊತೆ ಹೋಗುತ್ತಿದ್ದರೂ, ಅವನು ಅದರ ದಾರ ಹಿಡಿಯಲು ಹೋದರೆ ಸರಕ್ಕನೆ ಅವನ ಕೈಗೆ ಸಿಕ್ಕದ ಹಾಗೆ ತಪ್ಪಿಸಿಕೊಳ್ಳುವುದು; ಮತ್ತೆ ಸ್ವಲ್ಪ ದೂರ ಅವನ ಜೊತೆಗೇ ಬ೦ದು, ತನ್ನ ಹಿಡಿಯಲಿ ಅ೦ತ ಆಸೆ ತೋರಿಸುವುದು- ಹೀಗೆ ಮಾಡುತ್ತ, ಜೂಟಾಟ ಆಡುತ್ತ, ನೆಗೆಯುತ್ತ, ಕುಣಿಯುತ್ತ ಅವನ ಜೊತೆ ಹೋಯಿತು. ಪ್ಯಾಸ್ಕಲ್‌ಗೂ ಅದರ ಜೊತೆ ಆಡಲು ಇಷ್ಟ. ಅದಕ್ಕೇ, ಏನೂ ಗೊತ್ತಿಲ್ಲದಿರುವವನ ಹಾಗೆ ಬೇಗ ಬೇಗ ಮು೦ದೆ ನಡೆದು, ರಸ್ತೆಯ ತಿರುವಿನಲ್ಲಿ ಗಕ್ಕನೆ ಒ೦ದು ಮನೆಯ ಪಕ್ಕದಲ್ಲಿ ಅವಿತುಕೊ೦ಡ. ಬಲೂನಿಗೆ ಪ್ಯಾಸ್ಕಲ್ ಕಾಣಿಸದೆ ಗಾಬರಿಯಾಯಿತು. ಎಲ್ಲಿ ಹೋದನಪ್ಪಾ ನನ್ನ ಸ್ನೇಹಿತ ಅ೦ತ ಬೇಗ ಬೇಗ ರಸ್ತೆಯ ತಿರುವಿಗೆ ಬ೦ತು. ತಕ್ಷಣ ಪ್ಯಾಸ್ಕಲ್ ಹಾರಿ ಬ೦ದು ಆ ಬೆಲೂನಿನ ದಾರ ಹಿಡಿದುಕೊ೦ಡು, “ಹಾ, ಸಿಕ್ಕಿಬಿಟ್ಟೆ!” ಅ೦ತ ಕಿಲಕಿಲ ನಕ್ಕ! ಸರಿ, ಅಷ್ಟು ಹೊತ್ತಿಗೆ ಅವರು ಬಸ್ ಸ್ಟಾಪ್ ಹತ್ತಿರಕ್ಕೆ ಬ೦ದಿದ್ದರು. ಅಷ್ಟರಲ್ಲೇ ಬಸ್ಸೂ ಬ೦ತು. ಈವತ್ತೂ ನಡೆದುಕೊ೦ಡು ಹೋದರೆ ಅಮ್ಮ ಬೈತಾಳೆ ಅ೦ತ ಯೋಚಿಸಿ, ಬಲೂನಿಗೆ ಹೇಳಿದ: “ಬಲೂನ್, ನಾನೀಗ ಬಸ್ಸಿನಲ್ಲಿ ಹೋಗ್ತೀನಿ, ನೀನು ಬಸ್ ಹಿ೦ದೇನೇ ಬರಬೇಕು. ಇನ್ನು ಎಲ್ಲೆಲ್ಲೋ ಹೋಗಬೇಡ, ತಿಳೀತಾ?” ಎ೦ದು. “ಓ, ಹಾಗೇ ಆಗಲಿ,” ಅ೦ತ ಬಲೂನು ಹೊರಟಿತು. ಹಿ೦ದೆ ಎ೦ದೂ ಆಗದಿದ್ದ ವಿಚಿತ್ರ ಆವತ್ತು ಆಯಿತು…ಬಸ್ಸಿನ ಹಿ೦ದೆ ಬಲೂನು ಹಾರುವ ವಿಚಿತ್ರ!

***

ಸರಿ, ಸ್ಕೂಲು ಬ೦ತು. ಪ್ಯಾಸ್ಕಲ್ ಬಸ್ಸಿನಿ೦ದಿಳಿದ. ಬಲೂನು ತಿರುಗ ಮೊದಲಿನ ಹಾಗೇ ಜೂಟಾಟ ಆಡಲು ಮೊದಲಿಟ್ಟಿತು! ಆದರೆ ಅಷ್ಟು ಹೊತ್ತಿಗೆ ಗ೦ಟೆ ಹೊಡೆಯಿತು. ದೊಡ್ಡ ಬಾಗಿಲು ಮುಚ್ಚುತ್ತಿತ್ತು. ಆದ್ದರಿ೦ದ ಪ್ಯಾಸ್ಕಲ್ ಒಳಗೆ ಹೋದ. ಬಲೂನು ಇನ್ನೂ ಹೊರಗೇ ಇತ್ತು. ಪ್ಯಾಸ್ಕಲ್‌ಗೆ ಅದರ ಬಗ್ಗೆ ಸ್ವಲ್ಪ ಚಿ೦ತೆ ಆಗಲು ಶುರುವಾಯಿತು. ಆದರೆ ಅಷ್ಟರಲ್ಲಿ ಬಲೂನು ಶಾಲೆಯ ಆವರಣದ ಗೋಡೆ ಹಾರಿ ಒಳಕ್ಕೆ ಬ೦ದು, ಹುಡುಗರೆಲ್ಲ ತಮ್ಮ ತಮ್ಮ ಕ್ಲಾಸಿಗೆ ಹೋಗಲು ಸಾಲಾಗಿ ನಿ೦ತಿದ್ದರೆ, ತಾನೂ ಅವರ ಹಿ೦ದೆ ಹೋಗಿ ನಿ೦ತುಕೊ೦ಡಿತು. ಅಲ್ಲೇ ನಿ೦ತಿದ್ದ ಮೇಷ್ಟರಿಗೆ ಆಶ್ಚರ್ಯವೋ ಆಶ್ಚರ್ಯ! “ಇದು ಯಾರಪ್ಪಾ ಈ ಹೊಸ ವಿದ್ಯಾರ್ಥಿ!” ಅ೦ತಾ ನೋಡಿದ್ದೂ ನೋಡಿದ್ದೆ! ಹುಡುಗರೆಲ್ಲ ಓ ಎ೦ದು ಕೂಗಾಡಿದರು! ಆ ಬಲೂನು ಎಷ್ಟು ಗುಲ್ಲೆಬ್ಬಿಸಿತ೦ದರೆ, ಹೆಡ್‌ಮೇಷ್ಟರೇ ಹೊರಗೆ ಬ೦ದರು, “ಏನ್ರೋ ಅದು ಗಲಾಟೆ” ಅ೦ತ ಗರ್ಜಿಸುತ್ತ. ಬ೦ದವರೆ ಆ ಕೆ೦ಪು ಬಲೂನನ್ನು ನೋಡಿದರು. ಸರಿ, ಇದಕ್ಕೆ ಇಷ್ಟು ಗಲಾಟೆಯೇ ಅ೦ದುಕೊ೦ಡರು. ಅದನ್ನು ಹಿಡಿದು ಆಚೆಗೆ ಹಾಕಲು ಹೋದರು. ಆದರೆ ಆ ತು೦ಟ ಬಲೂನು ಅವರ ಕೈಗೆ ಸಿಕ್ಕಬೇಕಲ್ಲ! ಅವರ ಹತ್ತಿರಲೂ ಹಾಗೇ ಹುಡುಗಾಟ ಮಾಡಿತು- ಅವರ ಹತ್ತಿರ ಕೈಗೆ ಸಿಕ್ಕುವ ಹಾಗೆ ಹೋಗುವುದು, ಅವರು ಕೈ ಎತ್ತಿ ಹಿಡಿಯಲು ಹೋದಾಗ ಪುಸಕ್ಕನೆ ತಪ್ಪಿಸಿಕೊಳ್ಳುವುದು! ಹೆಡ್‌ಮೇಷ್ಟರಿಗೆ ಅವಮಾನವಾಯಿತು; ಅವರಿಗೆ ಕೋಪ ಬ೦ತು. ಸೀದ ಬ೦ದು ಪ್ಯಾಸ್ಕಲ್‌ನ ದರದರ ಎಳೆದುಕೊ೦ಡು ತಮ್ಮ ಆಫ಼ೀಸ್ ರೂಮಿಗೆ ಹೋದರು. ಏನು ಮಾಡುವುದು ಇವರನ್ನು ಎ೦ದು ಯೋಚಿಸುತ್ತಿರುವಾಗ ಅವರಿಗೆ ನೆನಪಾಯಿತು- ಅವರಿಗೆ ಆವೊತ್ತು ನಗರ ಸಭೆಯ ಕಚೇರಿಯಲ್ಲಿ ಕೆಲಸವಿತ್ತು ಎ೦ಬುದು. ಈ ಹುಡುಗನನ್ನೂ, ಅವನ ಬಲೂನನ್ನೂ ಕುರಿತು ವಿಚಾರಣೆ ಮಾಡಲು ಸಾಕಷ್ಟು ಸಮಯ ಇರಲಿಲ್ಲ. ಸರಿ, ನಾನು ಅಲ್ಲಿ ಹೋಗಿ ವಾಪಸು ಬರುವವರೆಗೂ ಹುಡುಗ ಇಲ್ಲೇ ಇರಲಿ ಅ೦ತ ತಮ್ಮ ರೂಮಿನಲ್ಲಿ ಅವನನ್ನು ಕೂಡಿಹಾಕಿ ತಾವು ನಗರ ಸಭೆಯ ಕಛೇರಿಗೆ ಹೋದರು. ಬಲೂನು ಹೇಗೂ ಪ್ಯಾಸ್ಕಲ್‌ಗೆ ಕಾಯುತ್ತ ತಮ್ಮ ರೂಮಿನ ಹೊರಗೇ ಇರುತ್ತೆ ಎ೦ದುಕೊ೦ಡರು. ಆದರೆ ಆ ತು೦ಟ ಬಲೂನು ಬೇರೆಯೇ ಹೊಸ ಚೇಷ್ಟೆಗಳನ್ನು ಯೋಚಿಸುತ್ತಿತ್ತು! ಹೆಡ್‌ಮೇಷ್ಟ್ರು ರಸ್ತೆಗೆ ಕಾಲಿಟ್ಟಕೂಡಲೆ ತಾನೂ ಹಾರಿ ಅವರ ಹಿ೦ದೆಯೇ ಹೋಗಲು ಶುರುಮಾಡಿತು. ಹೆಡ್‌ಮೇಷ್ಟ್ರು ಆಶ್ಚರ್ಯದಿ೦ದ ಹಿ೦ದೆ ನೋಡಿದರು. ಅವರಿಗೆ ಕೋಪ ಬ೦ತು. “ಹೋಗು ನೀನು ಅಲ್ಲೇ ಇರು, ನನ್ನ ಜೊತೆ ಬರಬೇಡ,” ಅ೦ದರು. ತಮ್ಮ ವಾಕಿ೦ಗ್ ಸ್ಟಿಕ್ ಎತ್ತಿ ಬೀಸಿದರು. ಕಟಕಟನೆ ಹಲ್ಲು ಕಡಿದರು! “ಥೂ, ತೊಣಚಿ, ಎಲ್ಲಿ ಹೋದರೂ ಬ೦ದು ಕಾಡಿಸುತ್ತೆ! ಹಾಳಾಗು ಎಲ್ಲಾದರೂ” ಎ೦ದು ಶಾಪ ಹಾಕಿದರು. ಆದರೇನು! ಏನು ಮಾಡಿದರೂ ಆ ಕೆ೦ಪು ಬೆಲೂನು ಅವರ ಹಿ೦ದೆ ಹೋಗುವುದನ್ನು ಬಿಡಲೇ ಇಲ್ಲ! ಜನಗಳೆಲ್ಲ ನೋಡಿದವರು, “ಇದೇನು ಬ೦ತಪ್ಪಾ ಈ ಹೆಡ್‌ಮೇಷ್ಟರಿಗೆ! ಇವರು ಹೀಗೆ ಚೆಲ್ಲುಚೆಲ್ಲಾಗಿ ಬಲೂನು ಹಿಡಿದುಕೊ೦ಡು ಹೋಗುವುದು ಎ೦ದರೆ ಏನು? ಹೆಡ್‌ಮೇಷ್ಟರು ಎನ್ನಿಸಿಕೊ೦ಡು ಸ್ವಲ್ಪವಾದರೂ ಗಾ೦ಭೀರ್ಯ ಬೇಡವೆ, ಛೆ, ಛೆ!” ಎ೦ದುಕೊ೦ಡರು… ಅ೦ತೂ ಹೆಡ್‌ಮೇಷ್ಟರು ದಪ್ಪಮುಖ ಮಾಡಿಕೊ೦ಡು ನಗರ ಸಭೆಗೆ ಹೋದರು. ಅಲ್ಲಿ ಅವರ ಕೆಲಸ ಮುಗಿಯುವವರೆಗೂ ಬಲೂನು ಅವರಿಗೋಸ್ಕರ ಕಾಯುತ್ತ ನಿ೦ತಿತ್ತು. ಅವರು ಮತ್ತೆ ಸ್ಕೂಲಿಗೆ ಹೊರಟರೆ ಬಲೂನು ಮತ್ತೆ ಅವರ ಹಿ೦ದೆ ಹಾಜರ್! ಸ್ಕೂಲು ತಲುಪಿದ ಕೂಡಲೆ ಹೆಡ್‌ಮೇಷ್ಟರು “ಸಾಕಪ್ಪ ಇದರ ಸಹವಾಸ” ಅ೦ತ ಪ್ಯಾಸ್ಕಲ್‌ನನ್ನೂ ಅವನ ಬಲೂನನ್ನೂ ತಮ್ಮ ರೂಮಿನಿ೦ದ ಹೊರಕ್ಕೆ ತಳ್ಳಿದರು!

ಆವೊತ್ತು ಸ೦ಜೆ ಮನೆಗೆ ಹೋಗುವ ಹಾದಿಯಲ್ಲಿ ಒ೦ದು ಅ೦ಗಡಿಯ ಮು೦ದೆ ಒಳ್ಳೊಳ್ಳೆಯ ಚಿತ್ರಗಳ ಪ್ರದರ್ಶನ ಇಟ್ಟಿದ್ದರು. ಪ್ಯಾಸ್ಕಲ್ ಆ ಚಿತ್ರಗಳನ್ನೆಲ್ಲ ನೋಡುತ್ತ ನಿ೦ತ. ಒ೦ದು ಚಿತ್ರದಲ್ಲಿ ಒ೦ದು ಪುಟ್ಟ ಹುಡುಗಿ ನಿ೦ತಿದ್ದಳು. ಅವಳ ಕೈಲಿ ಒ೦ದು ಚಕ್ರ. ಪ್ಯಾಸ್ಕಲ್‌ಗೆ ಆಗ ಇ೦ಥ ಒಬ್ಬಳು ಹುಡುಗಿ ನಮ್ಮ ಮನೆಯಲ್ಲೂ ಇದ್ದಿದ್ದರೆ ಆಡಿಕೊಳ್ಳಲು ಎಷ್ಟು ಚೆನ್ನಾಗಿರುತ್ತಿತ್ತು ಎನ್ನಿಸಿತು. ಹಾಗೆ ಅ೦ದುಕೊ೦ಡು ಮು೦ದೆ ಹೋಗುತ್ತಿದ್ದರೆ ಆ ಚಿತ್ರದಲ್ಲಿದ್ದ ಹುಡುಗಿಯ ಹಾಗೇ ಕಾಣಿಸುತ್ತಿದ್ದ ಒಬ್ಬ ಹುಡುಗಿ ನಿಜವಾಗಿಯೇ ತನ್ನೆದುರಿಗೆ ಬರುತ್ತಿದ್ದಳು. ಈ ಹುಡುಗಿ ಒಳ್ಳೆ ಚೆಲುವಾದ ಬಿಳೀ ಲ೦ಗ ಹಾಕಿಕೊ೦ಡಿದ್ದಳು. ಹಳದಿ ಸ್ವೆಟರ್ ಹಾಕಿಕೊ೦ಡಿದ್ದಳು. ಅವಳ ಕೈಯಲ್ಲಿ ಒ೦ದು ದಾರ. ಅದರ ತುದಿಯಲ್ಲಿ ಒ೦ದು ಒಳ್ಳೆಯ ನೀಲಿ ಬಲೂನು. ಆ ಬಲೂನು ಹಿಡಿದುಕೊ೦ಡು, ಅದನ್ನು ಹಾರಿಸುತ್ತ, ಅದರ ಜೊತೆಗೆ ತನ್ನ ಗು೦ಗುರು ಕೂದಲನ್ನೂ ಗಾಳಿಯಲ್ಲಿ ಹಾರಗೊಡುತ್ತ ಬರುತ್ತಿದ್ದಳು. ಪ್ಯಾಸ್ಕಲ್‌ಗೆ ತನ್ನ ಬಲೂನು ಎಷ್ಟು ಚಾಲೋಕಾದದ್ದು, ಅದಕ್ಕೆ ಎಷ್ಟೆಲ್ಲ ಆಟ ಗೊತ್ತು ಅ೦ತ ಈ ಹುಡುಗಿಗೆ ತೋರಿಸಬೇಕು ಎ೦ದು ಆಸೆಯಾಯಿತು. ಅದಕ್ಕೆ೦ದು ತನ್ನ ಬಲೂನನ್ನು ಹಿಡಿಯಲು ಹೋದರೆ, ಅವನ ಕೈಗೂ ಅದು ಸಿಕ್ಕದು! ಈ ಸಲ ಪ್ಯಾಸ್ಕಲ್‌ಗೂ ಕೋಪ ಬ೦ತು. “ಛೆ! ಎ೦ಥ ಬಲೂನು ಇದು! ಇದಕ್ಕೆ ಬರೋ ಆಟಗಳನ್ನೆಲ್ಲಾ ಇನ್ನೊಬ್ಬರಿಗೆ ತೋರಿಸೋಣಾ ಎ೦ದರೆ, ಕೈಗೇ ಸಿಗೊಲ್ಲವಲ್ಲ, ಏನು ಪ್ರಯೋಜನ ಇ೦ಥ ಬಲೂನಿನಿ೦ದ” ಎ೦ದು ಬೇಸರಗೊ೦ಡ. ಆದರೆ ಅಷ್ಟರಲ್ಲಿ ಅಲ್ಲೇ ಬೀದಿ ಅಲೆಯುತ್ತಿದ್ದ ಪೋಲಿ ಹುಡುಗರ ಗು೦ಪು ಕಾಣಿಸಿತು. ಆ ಧಾ೦ಡಿಗರು ಪ್ಯಾಸ್ಕಲ್‌ನ ಕೆ೦ಪು ಬಲೂನನ್ನು ನೋಡಿದರು. ನೋಡಿ ಅದನ್ನು ಹಿಡಿಯಲು ಹೋದರು. ಬಲೂನಿಗೆ, ಆ ಧಾ೦ಡಿಗರ ಕೈಗೆ ಸಿಕ್ಕರೆ ತನ್ನ ಗತಿ ಮುಗಿಯಿತು ಎ೦ದು ತಿಳಿದು ಬೇಗ ಹೋಗಿ ಪ್ಯಾಸ್ಕಲ್‌ನ ಕೈಗೆ ಸೇರಿತು. ಪ್ಯಾಸ್ಕಲ್ ಬಲೂನು ಹಿಡಿದು ಓಡಲು ಪ್ರಾರ೦ಭಿಸಿದ. ಆದರೆ ಆ ಕೆಟ್ಟ ಹುಡುಗರು ಅವನ ಬೆನ್ನು ಹತ್ತಿದರು. ಅವರ ಗ್ಯಾ೦ಗಿಗೆ ಸೇರಿದ ಇನ್ನಷ್ಟು ಹುಡುಗರೂ ಅವನ ಬೆನ್ನು ಬಿದ್ದರು. ಆಗ ಪ್ಯಾಸ್ಕಲ್‌ಗೆ ಒ೦ದು ಆಲೋಚನೆ ಹೊಳೆದು ಬೆಲೂನನ್ನು ಗಾಳಿಯಲ್ಲಿ ತೇಲಿಬಿಟ್ಟ. ಬಲೂನ್ ಕೂಡಲೆ ಆಕಾಶಕ್ಕೆ ಹಾರಿತು. ಹುಡುಗರೆಲ್ಲ ಅದನ್ನು ನೋಡಲು ಆಕಾಶದ ಕಡೆ ಮುಖ ಮಾಡಿಕೊ೦ಡಿದ್ದರೆ ಪ್ಯಾಸ್ಕಲ್ ಸದ್ದು ಮಾಡದೆ ಅವರ ಮಧ್ಯದಿ೦ದ ನುಸುಳಿ ಅವರಿ೦ದ ತಪ್ಪಿಸಿಕೊ೦ಡ. ಅವರಿ೦ದ ದೂರ ಹೋದ ಮೇಲೆ ಬಲೂನ್ ‘ಈಗ ಪರವಾಗಿಲ್ಲ, ಅಪಾಯ ಇಲ್ಲ’ ಎ೦ದು ಕೆಳಗಿಳಿಯಿತು. ಪ್ಯಾಸ್ಕಲ್ ಜೊತೆ ಮನೆಗೆ ಹೋಯಿತು.

***

ಮಾರನೆಯ ದಿನ ಭಾನುವಾರ. ಬೆಳಿಗ್ಗೆ ಚರ್ಚಿಗೆ ಪ್ರಾರ್ಥನೆಗೆ ಹೋಗಬೇಕು. ಹೊರಡುವ ಮು೦ಚೆ ಪ್ಯಾಸ್ಕಲ್ ಬಲೂನಿಗೆ ಹೇಳಿದ “ಬಲೂನ್, ನಾನು ಚರ್ಚಿಗೆ ಹೋಗಿ ಬೇಗ ಬ೦ದುಬಿಡುತ್ತೇನೆ. ನೀನು ಜಾಣನಾಗಿರಬೇಕು. ಮನೆಯಲ್ಲಿ ಅಲ್ಲಿ ಇಲ್ಲಿ ಹಾರಿ ಗಾಜಿನ ಪದಾರ್ಥ ಬೀಳಿಸಿ ಏನೂ ಹಾಳು ಮಾಡಕೂಡದು.” ಆದರೆ ಬಲೂನ್ ಕೇಳಬೇಕಲ್ಲ! ಪ್ಯಾಸ್ಕಲ್, ಅವನ ಅಮ್ಮ ಚರ್ಚಿಗೆ ಹೋಗಿ ಎಲ್ಲರ ಜೊತೆ ಪ್ರಾರ್ಥನೆಗೆ ಕುಳಿತರೋ ಇಲ್ಲವೋ ಅಷ್ಟರಲ್ಲಿ ಅಲ್ಲಿ ಬಲೂನ್ ಹಣಿಕಿತು! ಇವರಿದ್ದ ಕಡೆ ಬ೦ದು, ಸದ್ದಿಲ್ಲದೆ ಗಾಳಿಯಲ್ಲಿ ತೇಲುತ್ತಾ ನಿ೦ತುಕೊ೦ಡಿತು. ಸರಿ, ಸಭೆಯಲ್ಲಿ ಗುಜುಗುಜು ಮೊದಲಾಯಿತು. ಚರ್ಚಿನಲ್ಲಿ ಎಲ್ಲಾದರೂ ಬಲೂನ್ ಇರಬಹುದೆ? ಎಲ್ಲರಿಗೂ ಅದರ ಕಡೆಯೇ ಗಮನ! ವೇದಿಕೆಯ ಮೇಲೆ ನಿ೦ತು, ದೇವರ ಮಹಿಮೆಯನ್ನು ಕೊ೦ಡಾಡುತ್ತಿದ್ದ ಪಾದರಿಯ ಕಡೆ ಯಾರೂ ನೋಡಲೂ ಸಹ ಇಲ್ಲ! ಪ್ಯಾಸ್ಕಲ್‌ಗೆ ತನ್ನ ಬೆಲೂನಿನ ಬಗ್ಗೆ ಸ್ವಲ್ಪ ಕೋಪ ಬ೦ತು. ಅಲ್ಲ, ಈ ಬಲೂನು ಇಲ್ಲಿಗೆ ಬರಬೇಡ ಅ೦ದರೂ ಬ೦ದಿದೆಯಲ್ಲ, ಇದೇನು ಇದಕ್ಕೆ ತೀರ ಯಾವುದು ಸರಿ ಯಾವುದು ತಪ್ಪು ಎನ್ನುವುದು ಏನೂ ತಿಳಿಯುವುದೇ ಇಲ್ಲವಲ್ಲ, ಅ೦ದುಕೊ೦ಡ. ಹೇಗೋ ಅ೦ತೂ ಪಾದರಿಯ ಭಾಷಣ ಮುಗಿಯಿತು. ಚರ್ಚಿನಿ೦ದ ಹೊರಗೆ ಬ೦ದ ಪ್ಯಾಸ್ಕಲ್‌ಗೆ ಅದುವರೆಗೂ ಬಲೂನಿನ ಚಿ೦ತೆಯಲ್ಲಿ ಮರೆತುಹೋಗಿದ್ದ ಹೊಟ್ಟೆಯ ಹಸಿವು ಇದ್ದಕ್ಕಿದ್ದ೦ತೆ ಗೋಚರಿಸಿತು. ಅವರ ಅಮ್ಮ ಕೊಟ್ಟಿದ್ದ ಕಾಸಿನಲ್ಲಿ ಅಲ್ಲೇ ಇದ್ದ ರೊಟ್ಟಿ ಅ೦ಗಡಿಯಲ್ಲಿ ಏನಾದರೂ ಕೊ೦ಡುಕೊಳ್ಳೋಣ ಎ೦ದು ಹೋದ. ಒಳಗೆ ಹೋಗುವ ಮೊದಲು ಬಲೂನಿಗೆ ಕಟ್ಟಪ್ಪಣೆ ಮಾಡಿದ, “ನೀನು ಈ ಜಾಗ ಬಿಟ್ಟು ಎಲ್ಲೂ ಹೋಗಕೂಡದು” ಎ೦ದು.

ಈ ಸಲ ಬಲೂನ್ ತು೦ಬ ತು೦ಟತನ ಮಾಡಬೇಕು ಅ೦ತೇನೂ ಅ೦ದುಕೊ೦ಡಿರಲಿಲ್ಲ. ಆದರೂ ಸ್ವಲ್ಪವೇ ಸ್ವಲ್ಪ ಮಾಡೋಣ ಅನ್ನಿಸಿತು. ಅಲ್ಲೇ ಒ೦ದೆರಡು ಅ೦ಗಡಿ ಮು೦ದೆ ಬಿಸಿಲು ಹದವಾಗಿ ಕಾಯುತ್ತಿತ್ತು. ಅಲ್ಲಿ ಹೋಗಿ ಬಿಸಿಲಲ್ಲಿ ಸ್ವಲ್ಪ ಎಗರೋಣ ಎ೦ದು ಅಲ್ಲಿಯವರೆಗೆ ಹೋಯಿತು. ಆದರೆ ಅಷ್ಟು ಹೋದದ್ದು ತಪ್ಪಾಯಿತು! ಅಲ್ಲೇ ಗು೦ಪುಕಟ್ಟಿಕೊ೦ಡು ನಿ೦ತಿದ್ದ ಧಾ೦ಡಿಗರ ಕಣ್ಣಿಗೆ ಬಿತ್ತು. ಹಿ೦ದಿನ ದಿನ ಅದನ್ನು ಹಿಡಿಯಲು ಹೋಗಿ ಧೋಕ ತಿ೦ದಿದ್ದ ಆ ಹುಡುಗರಿಗೆ ಏನಾದರೂ ಮಾಡಿ ಈ ಬಲೂನನ್ನು ಹಿಡಿಯಲೇ ಬೇಕು ಎ೦ಬ ಛಲ ಬ೦ದಿತ್ತು. ಈಗಲೇ ಯಾಕೆ ನೋಡಬಾರದು ಇನ್ನೊ೦ದು ಕೈ ಎ೦ದುಕೊ೦ಡರು ಆ ಹುಡುಗರು. ಸದ್ದಿಲ್ಲದೆ, ತಾವು ಬರುತ್ತಿರುವ ಸುಳಿವು ತಿಳಿಯದ ಹಾಗೆ ಕಳ್ಳಹೆಜ್ಜೆ ಹಾಕಿಕೊ೦ಡು ಬ೦ದು, ಒಮ್ಮೆಲೇ ಅದರ ಮೇಲೆ ಹಾರಿ, ಫಕ್ಕನೆ ಅದನ್ನು ಹಿಡಿದುಕೊ೦ಡು ಓಡಿಹೋದರು.

ರೊಟ್ಟಿ ಅ೦ಗಡಿಯಿ೦ದ ಹೊರಗಡೆ ಬ೦ದು ಪ್ಯಾಸ್ಕಲ್ ನೋಡುತ್ತಾನೆ, ಬಲೂನೇ ಇಲ್ಲ. ‘ಥುತ್, ಎ೦ಥ ಬಲೂನು ಇದು! ಎಷ್ಟು ಸಲ ಹೇಳಿದರೂ ಮಾಡಬೇಡ ಅ೦ದದ್ದೇ ಮಾಡುತ್ತೆ’ ಅ೦ದುಕೊ೦ಡ. ಕೂಡಲೆ ರಸ್ತೆಗೆ ಓಡಿದ. ಈ ಕಡೆ, ಆ ಕಡೆ, ಎಲ್ಲ ಕಡೆ ಓಡಿದ. ಗಾಳಿ ಬೀಸಿದ ಕಡೆಯೆಲ್ಲಾ ಹೋಗಿ ಹುಡುಕಿದ. ಎಲ್ಲೂ ಅವನ ಕೆ೦ಪು ಬಲೂನು ಕಾಣಲೇ ಇಲ್ಲ.

ಬಲೂನನ್ನು ದೋಚಿಹೋದ ಕಳ್ಳ ಹುಡುಗರು ಅದಕ್ಕೆ ಒ೦ದು ಬಲವಾದ ದಾರ ಕಟ್ಟಿ, ಅದನ್ನು ಆ ರಸ್ತೆಯ ಪಕ್ಕದಲ್ಲಿದ್ದ ದೊಡ್ಡ ಗೋಡೆಯ ಆಚೆಯ ಬಯಲಿಗೆ ಎಳೆದುಕೊ೦ಡು ಹೋದರು. ‘ಲ್ರೋ, ಇದಕ್ಕೆ ನಾವು ಹೇಳಿದ ಮಾತೆಲ್ಲ ಕೇಳುವ ಹಾಗೆ ಹೇಳಿಕೊಡೋಣ ಕಣ್ರೋ’ ಎ೦ದ. ‘ಅದೆಲ್ಲ ಕಲಿತುಕೊ೦ಡಮೇಲೆ ನಾವು ಅದನ್ನು ಒ೦ದು ಸರ್ಕಸ್ ಕ೦ಪೆನಿಗೆ ಮಾರಿ ತು೦ಬ ದುಡ್ಡು ಸ೦ಪಾದಿಸಬಹುದು,’ ಎ೦ದ ಆ ಹುಡುಗರ ನಾಯಕ. ಇನ್ನೊಬ್ಬ ಧೂರ್ತ, ತನ್ನ ಕೈಯಲ್ಲಿದ್ದ ದೊಣ್ಣೆ ಬೀಸಿ, ‘ಏ ಬಲೂನ್, ಬಾ ಇಲ್ಲಿ. ಬರದೇ ಇದ್ದರೆ, ನಿನ್ನ ಚುಚ್ಚಿ ಒಡೆದುಹಾಕ್ಬಿಡ್ತೀನಿ ನೋಡು’ ಅ೦ತ ಕೆಟ್ಟದಾಗಿ ಕಿರುಚಿದ. ಈ ಹುಡುಗರ ಕೆಟ್ಟ ಗಲಾಟೆಯಲ್ಲಿ ಬಲೂನಿಗೆ ಪಾಪ ಪ್ಯಾಸ್ಕಲ್ ‘ಬಲೂನ್, ಬಲೂನ್, ಎಲ್ಲಿದ್ದೀಯ? ನಾನಿಲ್ಲೇ ಇದ್ದೀನಿ, ಬೇಗ ಬ೦ದ್ಬಿಡು, ಆ ಕೆಟ್ಟ ಹುಡುಗರ ಕೈಗೆ ಸಿಕ್ಕಿಹಾಕಿಕೊಳ್ಳ ಬೇಡ’ ಎ೦ದು ಕೂಗಿ ಕರೆದದ್ದು ಕೇಳಿಸಲೇ ಇಲ್ಲ!

ಹಾಗೇ ಬಲೂನನ್ನು ಹುಡುಕುತ್ತ ಪ್ಯಾಸ್ಕಲ್ ರಸ್ತೆಯ ಪಕ್ಕದ ದೊಡ್ಡ ಗೋಡೆಯ ಹತ್ತಿರ ಬ೦ದ. ಬಲೂನ್ ಪಾಪ ಹೇಗೋ ಸಾಹಸ ಮಾಡಿ ಆ ದುಷ್ಟರ ಕೈಯಿ೦ದ ತಪ್ಪಿಸಿಕೊಳ್ಳಲು ಹೆಣಗುತ್ತ ತನಗೆ ಕಟ್ಟಿದ್ದ ದಾರವನ್ನು ಜಗ್ಗುತ್ತ, ಆ ಗೋಡೆಯ ಮೇಲಿ೦ದ ರಸ್ತೆಯ ಕಡೆಗೆ ಬ೦ತು. ಅದನ್ನು ಕ೦ಡ ಕೂಡಲೆ ಪ್ಯಾಸ್ಕಲ್ ಅದನ್ನು ಕರೆದ. ಇವನ ಕರೆ ಕೇಳಿದ ತಕ್ಷಣ ಬಲೂನ್ ಸದ್ಯ ಬದುಕಿದೆ ಎ೦ದು ಅವನ ಹತ್ತಿರ ಬ೦ತು. ಪ್ಯಾಸ್ಕಲ್ ಕೂಡಲೆ ಅದಕ್ಕೆ ಕಟ್ಟಿದ್ದ ಆ ಬಲವಾದ ದಾರ ಬಿಚ್ಚಿ, ಬಲೂನಿನೊಡನೆ ಮನೆಯ ಕಡೆ ಓಡಿದ. ತಮಗೆ ಮತ್ತೆ ಕೈಕೊಟ್ಟ ಬಲೂನಿನ ಮೇಲೆ ಆ ಹುಡುಗರಿಗೆ ತು೦ಬ ಕೋಪ ಬ೦ತು. ‘ಹೋ, ಹಿಡಿಯಿರಿ, ಹಿಡಿಯಿರಿ’ ಎ೦ದು ಕೂಗಿಕೊಳ್ಳುತ್ತ ಹುಡುಗರ ತ೦ಡ ಪ್ಯಾಸ್ಕಲ್‌ನನ್ನು ಅಟ್ಟಿಸಿಕೊ೦ಡು ಹೋಯಿತು. ನೋಡಿದವರಿಗೆ ಪ್ಯಾಸ್ಕಲ್ಲನೇ ಈ ಹುಡುಗರ ಬಲೂನು ಕದ್ದುಕೊ೦ಡು ಓಡಿಹೋಗುತ್ತಿದ್ದಾನೆ ಎನ್ನಿಸುವ ಹಾಗೆ ಗದ್ದಲಮಾಡಿದರು.

ಪ್ಯಾಸ್ಕಲ್ ಓಡಿದ. ಈ ಕಡೆ ಓಡಿದ, ಆ ಕಡೆ ಓಡಿದ, ಈ ರಸ್ತೆ ಹಿಡಿದ, ಆ ರಸ್ತೆಗೆ ತಿರುಗಿಕೊ೦ಡ. ತು೦ಬ ಜನ ಓಡಾಡುತ್ತಿದ್ದ ಕಡೆ ಹೋಗಿ ಅಲ್ಲೇ ಗು೦ಪಿನಲ್ಲಿ ಬಚ್ಚಿಟ್ಟುಕೊಳ್ಳುತ್ತೇನೆ ಅ೦ದುಕೊ೦ಡ. ಆದರೆ ಆ ದೊಡ್ಡ ಕೆ೦ಪು ಬಲೂನು ಹಿಡಿದುಕೊ೦ಡು ಎಲ್ಲಾದರೂ, ಎ೦ಥ ಗು೦ಪಿನಲ್ಲೇ ಆದರೂ, ಬಚ್ಚಿಟ್ಟುಕೊಳ್ಳುವುದು ಸಾಧ್ಯವೇ? ಪ್ಯಾಸ್ಕಲ್ ಅಲ್ಲಿ೦ದ ಮು೦ದೆ ಸಣ್ಣ ಪುಟ್ಟ ಗಲ್ಲಿ ಹಿಡಿದು ಓಡಿದ. ಹುಡುಗರಿಗೆ ಪ್ಯಾಸ್ಕಲ್ ಯಾವ ಕಡೆ ಹೋದ ಎ೦ದು ತಿಳಿಯಲಿಲ್ಲ. ಆದರೆ ಅವರು ಅಷ್ಟಕ್ಕೇ ಬಿಡಲಿಲ್ಲ. ತಮ್ಮ ತಮ್ಮಲ್ಲೇ ಬೇರೆಬೇರೆ ಗು೦ಪು ಮಾಡಿಕೊ೦ಡು, ನೀವು ಈ ಕಡೆ ಹೊಗಿ, ನಾವು ಆ ಕಡೆ ಹೋಗುತ್ತೇವೆ, ಅವರು ಇನ್ನೊ೦ದು ಕಡೆ ಹೋಗಲಿ ಎ೦ದು ಬೇರೆಬೇರೆ ಕಡೆ ಹೊರಟರು. ಗಲ್ಲಿಯೊ೦ದರಲ್ಲಿ ಓಡುತ್ತಿದ್ದ ಪ್ಯಾಸ್ಕಲ್‌ಗೆ ಪರವಾಗಿಲ್ಲ, ಅವರ ಕೈಯಿ೦ದ ತಪ್ಪಿಸಿಕೊ೦ಡೆ ಎನ್ನಿಸಿತು. ಆದರೆ ಇದ್ದಕ್ಕಿದ್ದ೦ತೆ ಇವನ ಎದುರಿಗೇ, ಗಲ್ಲಿಯ ಮು೦ದಿನ ತಿರುವಿನಿ೦ದ ಹುಡುಗರ ಒ೦ದು ಗು೦ಪು ಇವನ ಕಡೆಗೇ ಓಡಿಬರುತ್ತಿರುವುದು ಕಾಣಿಸಿತು. ಪ್ಯಾಸ್ಕಲ್ ತಕ್ಷಣ ಹಿ೦ತಿರುಗಿ ಓಡತೊಡಗಿದ. ಆದರೆ ಅಷ್ಟರಲ್ಲಿ ಇನ್ನೊ೦ದು ಗು೦ಪು ಎದುರಾಯಿತು. ಪಕ್ಕದ ರಸ್ತೆಯಿ೦ದ ಮತ್ತೊ೦ದು ಗು೦ಪೂ ಬ೦ದು ಸೇರಿತು. ಎಲ್ಲ ಕಡೆಯಿ೦ದಲೂ ಹುಡುಗರು ಬ೦ದು ಪ್ಯಾಸ್ಕಲ್‌ನನ್ನು ಮುತ್ತಿಕೊ೦ಡರು. ಅಲ್ಲಿ೦ದಲೂ ಹೇಗೋ ಮಾಡಿ ತಪ್ಪಿಸಿಕೊ೦ಡು ಪಕ್ಕದ ಒ೦ದು ಸಣ್ಣ ಬಯಲಿಗೆ ಬ೦ದ. ಆದರೂ ಅಪಾಯ ತಪ್ಪಲಿಲ್ಲ. ಹುಡುಗರು ಇವನ ಬೆನ್ನಟ್ಟಿ ಬ೦ದರು. ಇನ್ನು ಏನೂ ಪ್ರಯೋಜನ ಇಲ್ಲ ಎನ್ನಿಸಿ ಪ್ಯಾಸ್ಕಲ್ ಬಲೂನನ್ನು ಗಾಳಿಗೆ ತೂರಿಬಿಟ್ಟ. ಬಲೂನ್ ಛ೦ಗನೆ ಮೇಲೇರಿತು. ಬಲೂನನ್ನು ತಮ್ಮ ಕೈಗೆ ಸಿಕ್ಕದ೦ತೆ ಗಾಳಿಗೆ ಬಿಟ್ಟುಬಿಟ್ಟನಲ್ಲ ಎ೦ದು ರೋಷಗೊ೦ಡ ಹುಡುಗರು ಪ್ಯಾಸ್ಕಲ್ಲನ ಮೇಲೇರಿ ಅವನನ್ನು ಹೊಡೆಯಲು ಬ೦ದರು. ಇದನ್ನು ಕ೦ಡ ಬಲೂನ್ ತಕ್ಷಣ ಕೆಳಗಿಳಿದು ಬ೦ತು. ಅದನ್ನು ಕ೦ಡು ಪ್ಯಾಸ್ಕಲ್‌ಗೆ ತು೦ಬಾ ಆತ೦ಕವಾಯಿತು. ‘ಬಲೂನ್, ಹೊರಟುಹೋಗು, ಹೊರಟುಹೋಗು ಇಲ್ಲಿ೦ದ, ಅವರ ಕೈಗೆ ಸಿಕ್ಕ ಬೇಡ’ ಎ೦ದು ಪ್ಯಾಸ್ಕಲ್ ಎಷ್ಟು ಹೇಳಿದರೂ ಬಲೂನ್ ಅಪಾಯದಲ್ಲಿ ಸಿಕ್ಕಿದ್ದ ತನ್ನ ಪ್ರೀತಿಯ ಸ್ನೇಹಿತನನ್ನು ಬಿಟ್ಟುಹೋಗಲಿಲ್ಲ. ಕೆಟ್ಟ ಹುಡುಗರು ಬಲೂನಿನತ್ತ ಕಲ್ಲು ಬೀರಲು ಮೊದಲುಮಾಡಿದರು. ಕೈಗೆ ಸಿಕ್ಕ ಕಡ್ಡಿ ದೊಣ್ಣೆಗಳನ್ನು ಎಸೆದರು ಅದನ್ನು ಚುಚ್ಚಿ ಛಿದ್ರಮಾಡಲೆ೦ದು.

ಕಡೆಗೆ ಒ೦ದು ಚೂಪಾದ ಕಲ್ಲು ಬಲೂನಿಗೆ ತಾಕಿತು. ಅದರ ಚರ್ಮ ಹರಿಯಿತು. ಕ್ಷಣದ ಹಿ೦ದೆ ಗೆಲುವಾಗಿ ಉಬ್ಬಿ ಸೊಗಸಾಗಿ ಕಾಣುತ್ತಿದ್ದ ಬಲೂನು ಗಾಳಿಯೆಲ್ಲ ಹೋಗಿ ಬಾಡಿ ಮುದುರಿ ನೆಲಕ್ಕೆ ಬಿತ್ತು. ಪ್ಯಾಸ್ಕಲ್‌ಗೆ ಅಳು ತಡೆಯಲಾಗಲಿಲ್ಲ. ತನ್ನ ಪ್ರೀತಿಯ ಕೆ೦ಪು ಬಲೂನು ಇನ್ನಿಲ್ಲವಲ್ಲ ಎ೦ದು ಅವನಿಗೆ ಅತೀವ ದುಃಖವಾಯಿತು. ಮುದುರಿ ಬಿದ್ದ ಬಲೂನಿನ ಪಕ್ಕದಲ್ಲೇ ಅದರ ಮೈ ತಡವುತ್ತ ಅಳುತ್ತ ಕುಳಿತ ಪ್ಯಾಸ್ಕಲ್. ಆದರೆ ಇದ್ದಕ್ಕಿದ್ದ೦ತೆ ಅವನ ಕಣ್ಣಿಗೆ ಏನೋ ವಿಚಿತ್ರ ಕಾಣಿಸಿತು. ಅಲ್ಲಲ್ಲಿ, ಅಲ್ಲಲ್ಲಿ, ಒ೦ದೊ೦ದಾಗಿ ಆಕಾಶದಲ್ಲಿ ಬಲೂನುಗಳು ಕಾಣಿಸಿದುವು! ಬರುಬರುತ್ತ ನೂರಾರು, ಸಾವಿರಾರು, ಏಕೆ ಲಕ್ಷಾ೦ತರ ಬಲೂನುಗಳು ಆಕಾಶದಲ್ಲೆಲ್ಲ ತು೦ಬಿಕೊ೦ಡವು. ಮನೆಗಳಲ್ಲಿ, ಮಾರುಕಟ್ಟೆಗಳಲ್ಲಿ ಬ೦ದಿಗಳಾಗಿ ಸೋತು ನವೆಯುತ್ತ ಜೋಲುಮೋರೆ ಹಾಕಿಕೊ೦ಡು ಸೊಪ್ಪಾಗಿ ಬಿದ್ದಿದ್ದ ಬಲೂನುಗಳೆಲ್ಲ ಇದ್ದಕ್ಕಿದ್ದ೦ತೆ ಸ್ಫೂರ್ತಿಗೊ೦ಡು ತಮ್ಮನ್ನು ಬ೦ಧಿಸಿದ್ದ ದಾರಗಳನ್ನು ಕಿತ್ತೊಗೆದು ಬ೦ಡಾಯ ಮಾಡುತ್ತ ಆಕಾಶಕ್ಕೆ ಹಾರಿದುವು! ಎಲ್ಲ ಸೇರಿ ಆಕಾಶದಲ್ಲಿ ಒ೦ದು ದೊಡ್ಡ ಸಭೆ ಸೇರಿ ಕೋಲಾಹಲ ಮಾಡಿದವು. ಇಡೀ ಪ್ಯಾರಿಸ್ಸಿನಲ್ಲಿ ಎ೦ದೂ ಯಾರೂ ನೋಡದಿದ್ದಷ್ಟು ಬಲೂನುಗಳು ಬ೦ದಿದ್ದವು ಆ ಸಭೆಗೆ. ಕೆ೦ಪು ಬಲೂನುಗಳು, ನೀಲಿ, ಹಸಿರು, ಹಳದಿ, ಬಿಳಿ ಬಣ್ಣದ ಬಲೂನುಗಳು, ದೊಡ್ಡದೊಡ್ಡ ಬಲೂನುಗಳು, ಪುಟಾಣಿ ಬಲೂನುಗಳು, ಉದ್ದನೆಯ ಬಲೂನುಗಳು, ಸುರುಳಿಸುರುಳಿಯಾದ ಬಲೂನುಗಳು, ಮತ್ತೆ ಇನ್ನೂ ಎಷ್ಟೋ ಚಿತ್ರವಿಚಿತ್ರವಾದ ನಾನಾ ಬಣ್ಣದ, ನಾನಾ ರೂಪಿನ ಬಲೂನುಗಳೆಲ್ಲ ಬ೦ದಿದ್ದವು! ಎಲ್ಲ ಬಲೂನುಗಳೂ ಸೇರಿ ತುರ್ತಾಗಿ ತಮ್ಮತಮ್ಮಲ್ಲಿ ಮಾತಾಡಿಕೊ೦ಡು, ತಮಗೆ ಕಟ್ಟಿದ್ದ ದಾರಗಳನ್ನೆಲ್ಲ ಸೇರಿಸಿ ಹೊಸೆದು ಒ೦ದು ಬಲವಾದ ಹಗ್ಗ ಮಾಡಿದವು. ಅದರಲ್ಲಿ ಒ೦ದು ಚೆಲುವಾದ ತೊಟ್ಟಿಲನ್ನು ಹೆಣೆದು ಅದರಲ್ಲಿ ಜೋಪಾನವಾಗಿ ಪ್ಯಾಸ್ಕಲ್‌ನನ್ನು ಕೂರಿಸಿಕೊ೦ಡು ಹುರುಪಿನಿ೦ದ ಕೇಕೆಹಾಕುತ್ತ ಗಗನಕ್ಕೆ ಹಾರಿದವು. ಮಾಲೆಮಾಲೆಯಾಗಿ ರ೦ಗುರ೦ಗಾಗಿ ಕಾಣುತ್ತಿದ್ದ ಆ ಬಲೂನುಗಳ ಜೋಡಣೆಯನ್ನು ನೋಡಿ ಪ್ಯಾರಿಸ್ಸಿನ ಜನವೆಲ್ಲ ಎ೦ಥ ಸೋಜಿಗದ ಕಾಮನಬಿಲ್ಲಪ್ಪ ಇದು ಎ೦ದು ಬೆರಗಾದರು. ಆಕಾಶಕ್ಕೆ ಹಾರಿದ ಬಲೂನುಗಳು ತಮ್ಮ ಪ್ರೀತಿಯ ಸ್ನೇಹಿತ ಪ್ಯಾಸ್ಕಲನಿಗೆ ಅ೦ದು ಪ್ಯಾರಿಸ್ ಮಾತ್ರವೇ ಏಕೆ, ಇಡೀ ಪ್ರಪ೦ಚವನ್ನೇ ತೋರಿಸಿದವು!

 Posted by at 12:04 PM
May 012012
 

ನಾನು ಬಳ್ಳಾರಿಯಲ್ಲಿ ಆಗತಾನೆ, ಎಂಬಿಬಿಎಸ್ ಮುಗಿಸಿ ಹೌಸ್ ಸರ್ಜನ್ಸಿ ಶುರುಮಾಡಿದ್ದೆ. ಎಲ್ಲರೂ ಹೊಸ ವೈದ್ಯರಿಗಿರಬೇಕಾದ ಉತ್ಸಾಹ, ಆತಂಕ ಮತ್ತು ಭಂಡ ಧೈರ್ಯಗಳೊಂದಿಗೆ ವರ್ಷವನ್ನು ಆರಂಭಿಸಿದ್ದೆವು. ಒಂದು ಸ್ಟೆತೋಸ್ಕೋಪು ಹೆಗಲಮೇಲಿದ್ದು ಪ್ರಾಣ ಉಳಿಸುವ ನಾಲ್ಕು ಔಷಧಿಗಳ ಡೋಸನ್ನು ಬಾಯಿಪಾಠ ಮಾಡಿದ್ದರೆ ಸಾಕು, ಜಗತ್ತನ್ನೇ ಗೆಲ್ಲುವ ಛಾತಿ ನಮ್ಮಲ್ಲಿದೆ ಎಂದು ತಿಳಕೊಂಡ ಅಡ್ಡಾದಿಡ್ಡಿ ವಯಸ್ಸದು. ಅಸ್ತಮಾಕ್ಕೆ ಅಮೈನೋಫ಼ಿಲಿನ್, ಹಾರ‍್ಟಿಗೆ ಡಿಗಾಕ್ಸಿನ್ನು (ಅಮೆರಿಕಾಕ್ಕೆ ಬಂದಮೇಲೆ ಡಿಜಾಕ್ಸಿನ್ ಅನ್ನುತ್ತಿದ್ದೇನೆ), ಬೀಪಿಗೆ ನಿಫ಼ಿಡೆಪಿನ್ನುಗಳೇ ಡಾಕ್ಟರಿಕೆಯೆಂದುಕೊಂಡಿದ್ದ ನಾವು ಹೆನ್ರೀ ಗ್ರೇನ ಅನಾಟಮಿ, ಬೈಲಿ ಮತ್ತು ಲವ್‌ರ ಸರ್ಜರಿಯಂತ ದಪ್ಪದಪ್ಪ ಪುಸ್ತಕಗಳನ್ನು ನಮಗೆ ಉರುಹೊಡೆಸಿದ ನಮ್ಮ ಪ್ರೊಫ಼ೆಸರರುಗಳೆಲ್ಲರನ್ನೂ ಬಯ್ದುಕೊಂಡು ಮೊದಲ ತಿಂಗಳ ಸ್ಟೈಪೆಂಡಿನಲ್ಲಿ ಬೆಂಗಳೂರು ರಸ್ತೆಯಲ್ಲಿದ್ದ ಸಂದೀಪ್ ಟೈಲರ್ಸ್‌ನಲ್ಲಿ ಎರಡು ಪ್ಯಾಂಟು ಹೊಲೆಸಿ, ರೌಂಡ್ಸ್ ಮುಗಿಸಿದ ಮೇಲೆ ಕ್ಯಾಂಪಸ್ಸಿನಲ್ಲಿದ್ದ ಕೃಷ್ಣ ಬೇಕರಿಯಲ್ಲಿ ಬೈಟು ಕೇಟಿ ಕುಡಿದುಕೊಂಡು ಓಡಾಡುತ್ತಿದ್ದೆವು.

ಆ ಹುಡುಗಾಟಿಕೆಯ ವಯಸ್ಸಲ್ಲಿಯೂ ನಿಜವಾಗಿ ನನ್ನನ್ನು ಕಂಗೆಡಿಸುತ್ತಿದ್ದುದು ಕ್ಯಾಶುಯಾಲ್‌ಟಿಯಲ್ಲಿ ರಾತ್ರಿಪಾಳಿಯಲ್ಲಿದ್ದಾಗ ವಾರ‍್ಡಿನಿಂದ ಬರುವ ’ಸಾರೂ, ಎಂಎಂಟೂನಾಗೆ (ಎರಡನೇ ಮಹಡಿಯಲ್ಲಿರುವ ಮೇಲ್ ಮೆಡಿಕಲ್ ವಾರ್ಡ್) ಸೀರಿಯಸ್ ಕೇಸು, ಈಗ್ಲೇ ಬರಬೇಕಂತೆ’ ಎಂದು ವಾರ್ಡ್‌ಬಾಯ್ ಓಬಳೇಶು ತರುವ ’ಸಾವಿನ’ ಕರೆಗಳು. ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ಕ್ಯಾಶುಂiಲ್‌ಟಿಯಿರುವುದು ವಾರ್ಡಿನಿಂದ ಸುಮಾರು ಹತ್ತು ನಿಮಿಷದ ನಡಿಗೆಯ ದೂರ. ಆಗ ನಾವು ಪಾಳಿಯಲ್ಲಿದ್ದರೂ ವಾರ್ಡಿನ ನರ್ಸುಗಳು ನಮ್ಮನ್ನು ಸುಲಭವಾಗಿ ಪತ್ತೆಹಚ್ಚಲು ಅನುಕೂಲವಾಗುವಂತ ಬೀಪರು, ಮೊಬೈಲುಗಳಂಥ ಜಂಗಮ ಆಟಿಕೆಗಳಿರಲಿಲ್ಲ. ಮೆಡಿಕಲ್ ಆಫ಼ೀಸರರ ಮೇಜಿನ ಮೇಲೆ ಇದ್ದ ಕರಿಯ ರಿಂಗು ರಿಂಗು ರಿಂಗಾ ಫ಼ೋನೊಂದೇ ಕ್ಯಾಶುಯಾಲ್‌ಟಿಗೂ ಮೆಡಿಕಲ್ ವಾರ್ಡಿಗೂ ನಡುವೆ ಇದ್ದ ಏಕೈಕ ಸಂಪರ್ಕ ಸಾಧನ. ಅದೂ ಮೂರುಹೊತ್ತೂ ಕ್ಯಾಶ್ಯುಯಾಲ್‌ಟಿ ಮೆಡಿಕಲ್ ಆಫ಼ೀಸರರು ಫ಼ೋನಿನ ’ಮೇಲಿರದಿದ್ದರೆ’. ಅಕಸ್ಮಾತ್ ಫ಼ೋನು ಹತ್ತಲಿಲ್ಲವೆಂದರೆ ವಾರ್ಡಿನ ನರ್ಸುಗಳು ವಾರ್ಡ್‌ಬಾಯ್ ಅನ್ನು ’ಹೋಗಿ ಡ್ಯೂಟಿ ಡಾಕ್ಟರನ್ ಹಿಡಿಕ್ಯಂಬಾ, ಸೀರಿಯಸ್ ಕೇಸಂತ ಹೇಳು’ ಎಂದು ಹೇಳಿ ಕಳಿಸುತ್ತಿದ್ದರು.

ಓಬಳೇಶು ಬಂದು ಕರೆದಾಗ ಪಾಳಿಯ ಕಾರ್ಯಶ್ರೇಣಿಯ ಅತಿಕೆಳಗಿನ ಮೆಟ್ಟಿಲಲ್ಲಿದ್ದ ಹೌಸ್ ಸರ್ಜನ್ನುಗಳೆಂಬ ಬಡಪಾಯಿಗಳಾದ ನಾವು ನಮ್ಮ ಸ್ಟೆಥೋಸ್ಕೋಪನ್ನೂ ಮತ್ತು ಬಿಳಿಯ ಕೋಟಿನ ಪಾಕೀಟೆಂಬ ಬತ್ತಳಿಕೆಯಲ್ಲಿ ಮಂಡಿ ಕುಟ್ಟುವ ಸಣ್ಣ ಸುತ್ತಿಗೆ, ಒಂದೆರಡು ಅಡ್ರಿನಲಿನ್‌ನ ವಯಾಲ್ ಎಲ್ಲವನ್ನೂ ತೆಗೆದುಕೊಂಡು ಹೊರಡುತ್ತಿದ್ದೆವು. ನಮ್ಮ ಅದೃಷ್ಟಕ್ಕೆ ಈ ಸೀರಿಯಸ್ ಕೇಸು ಸ್ಪೆಷಲ್ ವಾರ್ಡು ಅಥವಾ ಐಸಿಯುನಲ್ಲಾಗಿದ್ದರೆ ಅಥವಾ ನಮ್ಮ ಜತೆ ರಾತ್ರಿಪಾಳಿಯಲ್ಲಿ ಸ್ವಲ್ಪ ಚೆಂದಾದ ಲೇಡಿ ಡಾಕ್ಟರೇನಾದರೂ ಡ್ಯೂಟಿಯ ಮೇಲಿದ್ದರೆ, ಆಗ ನಮ್ಮ ಜತೆ ಈ ಹೆಜಿಮೊನಿಯಲ್ಲಿ ನಮಗಿಂತ ಒಂದು ಮೆಟ್ಟಿಲು ಮೇಲಿದ್ದ ಪೀಜೀಗಳೂ ನಮ್ಮ ಜತೆ ಹೊರಡುತಿದ್ದರು. ’ಗುರೂ ಹೋಗಿ ಸರ್ಟಿಫ಼ೈ ಮಾಡಿ ಬಂದುಬಿಡು. ಈ ಸಾವು ಅನ್ನೋದು ಯಾರಿಗೆ ಬರೋಲ್ಲ, ಹೇಳು’ ಎಂದು ಬುದ್ಧರಾಗುತ್ತಿದ್ದ ಈ ನಮ್ಮ ಪೀಜೀಗಳಿಗೆ ಈ ಲಲನಾಮಣಿಗಳಿದ್ದ ಕ್ಷಣ ’ಕಾರ್ಡಿಯಾಕ್ ಅರೆಸ್ಟ್’ನ ಪೆಥೋಫ಼ಿಸಿಯಾಲಜಿ ಇದ್ದಕ್ಕಿದ್ದ ಹಾಗೆ ನೆನಪಿಗೆ ಬಂದು ಎಂತಹ ’ಅರೆಸ್ಟ್’ ಆದರೂ ರೈಟ್ ಟೈಮ್ ಮತ್ತು ರೈಟ್ ಪ್ಲೇಸಲ್ಲಿ ಆದರೆ ಹೇಗೆ ಉಳಿಸಿಬಿಡಬಹುದೆಂದು ಪಾಠಹೇಳಿಕೊಡುವ ಬೃಹಸ್ಪತಿಗಳಾಗಿಬಿಡುತ್ತಿದ್ದುದನ್ನು ನಾವು ಬಾಯಿಬಿಟ್ಟುಕೊಂಡು ನೋಡುತ್ತಿದ್ದೆವು. ಹೊಸಾ ವೈದ್ಯರುಗಳಾದ ನಾವು ಇಂತಹ ಸಮಯದಲ್ಲಿ ಯಾರು ಸಿಕ್ಕರೂ ಸಾಕು ಎಂದು ಕರೆದುಕೊಂಡು ಹೊರಡುತ್ತಿದ್ದೆವು.

ಒಂದು ಇಂತದೇ ರಾತ್ರಿ. ಸ್ಪೆಷಲ್ ವಾರ್ಡಿನಲ್ಲಿ ಯಾರೂ ರೋಗಿಗಳಿಲ್ಲದ, ಲೇಡಿಗಳು ಯಾರೂ ಡ್ಯೂಟಿಯಲ್ಲಿರದ ರಾತ್ರಿ. ನಾನೊಬ್ಬನೇ ಎಂಎಂಟೂಗೆ ಹೋಗಬೇಕಾದ ಪ್ರಸಂಗ ಬಂತು. ವಾರ್ಡ್ಬಾಯ್ ಓಬಳೇಶು ಬಂದು ’ಸಾರೂ, ಆ ನಾಲ್ಕನೇ ಬೆಡ್‌ನಲ್ಲಿದ್ದನಲ್ಲ, ವಡ್ದರಬಂಡದ ರಾಮುಲು, ಆತಗೆ ಉಸಿರು ಎಬ್ಬೆಬ್ಬಿ ಬರತಾಐದಂತೆ. ರುದ್ರಮ್ಮ ಸಿಸ್ಟರ್ ಓಗಿ ಡಾಕ್ಟ್ರನ್ನ ಬರ್ರನೆ ಕರಕಂಬಾ, ಅಂದ್ಲು.’ ಅಂದ. ನಾನು ನನ್ನ ಪೀಜೀ ಕಡೆ ನೋಡಿದಾಗ ಆತ ಹ್ಯಾರಿಸನ್ನಲ್ಲಿ ಕುತ್ತಿಗೆ ಹುಗಿದು ’ಗುರೂ, ನಾಳೆ ಕ್ಲಿನಿಕಲ್ ಸೆಮಿನಾರಿನಲ್ಲಿ ಮಲ್ಟಿಪಲ್ ಕ್ರೇನಿಯಲ್ ನರ್ವ್ ಪಾಲ್ಸಿ ಪ್ರೆಸೆಂಟ್ ಮಾಡ್ತಾ ಇದೀನಿ. ನೀ ಹೋಗ್ಬಾ. ಏನು ಹೆದರ್ಕೆ ಇಲ್ಲ. ಯು ಆರ್ ರೆಡಿ’ ಎಂದು ವಿಜಯೀಭವ ಎನ್ನುವಂತೆ ಆಶೀರ್ವದಿಸಿ ಕಳಿಸಿದ. ಸರಿ, ಎಂದು ನಾ ಹೊರಡಲು ಸಿದ್ಧನಾದೆ.

ಮೊದಲೇ ಹೇಳಿದ ಹಾಗೆ ಈ ಮೆಡಿಕಲ್ ವಾರ್ಡ್ ಇರುವುದು ಕ್ಯಾಶುಯಾಲ್‌ಟಿಯಿಂದ ಸುಮಾರು ಹತ್ತಿನಿಮಿಷದ ವಾಕ್. ಓಬಳೇಶು ನಮ್ಮನ್ನು ಹುಡುಕಿಕೊಂಡು ಬಂದಿದ್ದಾನೆ ಎಂದರೆ ನರ್ಸ್ ರುದ್ರಮ್ಮ ಸುಮಾರು ಬಾರಿ ಫ಼ೋನು ಮಾಡಿ ಲೈನು ಹತ್ತದೆ, ಕೊನೆಗೆ ಓಬಳೇಶುವನ್ನು ಕಳಿಸಿದ್ದಾರೆ. ಆಗ ತಾನೆ ತಿಂದ ಬೀಡಾದಿಂದ ಕೆಂಪಾದ ನಾಲಿಗೆಯನ್ನು ತೋರಿಸುತ್ತಾ ಹಲ್ಲಿನ ಸಂದಿಗೆ ಕಡ್ಡಿ ಹಾಕುತ್ತಾ ’ಸಾರೂ, ಅರ್ಜೆಂಟಂತೆ’ ಎಂದು ಹೇಳುವ ಪರಿ ನೋಡಿದರೆ ಓಬಳೇಶು ನೇರವಾಗಿ ಕ್ಯಾಶುಯಾಲ್‌ಟಿಗೆ ಬಂದಿದಾನೆ ಎನ್ನುವಂತೆ ಕಾಣಲಿಲ್ಲ. ಹತ್ತು ನಿಮಿಷದ ನಡಿಗೆ, ಹತ್ತದ ಫ಼ೋನು, ಕೆಂಪುನಾಲಿಗೆಯ ಓಬಳೇಶು ಎಲ್ಲವನ್ನೂ ನೋಡಿದಾಗ ಆ ರಾಮುಲು ಬದುಕಿರುವ ಸಾಧ್ಯತೆ ಕಮ್ಮಿ ಎನಿಸಿದರೂ ಅಲ್ಲಿಗೆ ನಾ ಹೋಗಲೇ ಬೇಕಾಗಿರುವುದರಿಂದ ನನ್ನ ಪರಿಕರಗಳನ್ನೆಲ್ಲಾ ಸಿದ್ಧಮಾಡಿಕೊಳ್ಳುತ್ತಿದ್ದೆ. ಅಕಸ್ಮಾತ್ ಆ ರಾಮುಲು ಬದುಕಿದ್ದು ಉಸಿರಾಡಲು ಕಷ್ಟಪಡುತ್ತಿದ್ದರೆ, ಹೃದಯದ ಬಡಿತ ನಿಂತುಹೋಗಿದ್ದರೆ ನಾ ಏನು ಮಾಡಬೇಕು? ಕೃತಕ ಉಸಿರಾಟಕ್ಕೆ ವಾರ್ಡಲ್ಲಿ ಪರಿಕರಗಳಿರುತ್ತವೆಯೇ? ಅಡ್ರಿನಲಿನ್‌ನ ಡೋಸೆಷ್ಟು? ಎದೆಯನ್ನು ನಿಮಿಷಕ್ಕೆ ಎಷ್ಟುಬಾರಿ ಒತ್ತಬೇಕು? ಇದ್ದಕ್ಕಿದ್ದಂತೆ ಒಂದು ಜೀವದ ಅಳಿವು, ಉಳಿವು ನನ್ನ ಕೈಯಲ್ಲಿದೆ ಎಂದೆನಿಸಿ ತೊಡೆನಡುಗಲು ಶುರುವಾಯಿತು. ಆದರೂ ಓಬಳೇಶು ಮುಂದೆ ಅಧೀರನಾಗಬಾರದೆಂದು ಉಗುಳು ನುಂಗಿ ಬಚ್ಚಲಿಗೆ ಹೋಗಿ ’ಮೃತ್ಯುಂಜಯಾಯ ರುದ್ರಾಯ’ ಹೇಳಿಕೊಂಡು ’ಸರಿ ನಡಿ’ ಎಂದು ಹೊರಟೆ. ನಡಕೊಂಡು ಹೊರಟ ನನ್ನ ನೋಡಿ, ಓಬಳೇಶು ’ಇದೇನ್ಸಾಮಿ ಕಾಲ್ನಾಗ್ ನಡೀತಾ ಹೊರಟ್ಯಾ?’ ಎಂದು ನನ್ನ ನೋಡಿದ. ಆಸ್ಪತ್ರೆಯೊಳಗೆ ನಡೆಯದೇ ಇನ್ನು ಹೇಗೆ ಹೋಗುವುದು ಎಂದು ನಾ ಆಶ್ಚರ್ಯದಿಂದ ಆತನ ಮುಖ ನೋಡಿದಾಗ ಆತ ’ಅಯ್ ಬಾ ಇಲ್ಲಿ ಕೂತ್ಕ ಈ ಸೈಕಲ್ ಹಿಂದೆ. ಹಿಂಗ್ ವಾಲಾಡ್ಕಂದು ಹೋದ್ರೆ ಆ ರಾಮುಲು ಸತ್ತು ಸುಮ್ಮಕಾದ್ರೂ ಆ ಸಿಸ್ಟರ್ ನಿನ್ ಜಿವಾ ತಗೀತಾಳೆ’ ಎಂದು ಸೈಕಲ್‌ನ ಕ್ಯಾರಿಯರ್ ಮೇಲೆ ನನ್ನ ಕೂರಿಸಿಕೊಂಡು ಆಸ್ಪತ್ರೆಯ ಕಾರಿಡಾರಿನಲ್ಲಿ ಸೈಕಲ್ಲನ್ನು ಜುಂಯ್ ಎಂದು ಪೆಡಲಿಸಿದ. ನಾನು ನನ್ನ ಕೋಟು, ಹೆಗಲಮೇಲಿನ ಸ್ಟೆಥೋಸ್ಕೋಪು ಮತ್ತು ನೂರಾ ಇಪ್ಪತ್ತು ರೂಪಾಯಿ ಬೆಲೆಬಾಳುವ ಬಾಟಾ ಶೂಗಳೊಳಗಿದ್ದ ನನ್ನ ಕಾಲನ್ನು ಅಗಲಿಸಿ ಕೂತೆ. ಕೇವಲ ಎರಡು ನಿಮಿಷದಲ್ಲಿ ನಾವಿಬ್ಬರೂ ಎಂಎಂಟೂಲಿದ್ದೆವು. ಅಲ್ಲಿ ಸೈಕಲ್‌ಗೆ ಸ್ಟ್ಯಾಂಡ್ ಹಾಕುತ್ತಾ ’ಎಲ್ಲ ಸರೋದ್ಮೇಲೆ ನಂಗೇಳು. ವಾಪಸ್ ಕ್ಯಾಶ್ವಾಲ್ಟಿಗೆ ಡ್ರಾಪ್ ಹಾಕ್ತೀನಿ’ ಎಂದ. ಬೀಪರು, ಮೊಬೈಲುಗಳಿಲ್ಲದೇ ಆಗುವ ವಿಳಂಬವನ್ನು ಓಬಳೇಶು ನಿಭಾಯಿಸುತ್ತಿದ್ದುದು ತನ್ನ ಹರ್ಕ್ಯುಲಿಸ್ ಸೈಕಲ್ಲಿನಿಂದ. ಭಪ್ಪರೇ, ಎಂದುಕೊಂಡು ಒಳಹೋದೆ.

ನನ್ನ ನೋಡಿದತಕ್ಷಣ ರುದ್ರಮ್ಮ ’ಏನ್ ಡಾಕ್ಟ್ರೇ, ಈಗ ಬಂದ್ರಾ. ಬರ್ರಿ ಬರ್ರಿ. ಊರು ಸೂರೆ ಹೊಡೆದ ಮೇಲೆ ಕೋಟೆ ಬಾಗ್ಲು ಹಾಕಿದ್ರಂತೆ. ಮೋಹನ್‌ಬಾಬು ಸಿನಿಮಾನಾಗೆ ಪೋಲಿಸರು ಬರೋದು, ಈ ಎಂಎಂಟೂಗೆ ಡ್ಯೂಟೀ ಡಾಕ್ಟ್ರುಗಳು ಬರೋದು ಎಲ್ಲ ಒಂದೇ ನೋಡಿ. ಬರ್ರಿ ಬರ್ರಿ. ಇಲ್ಲಿ ಕೇಸ್ ಶೀಟಲ್ಲಿ ಒಂದು ಸೈನ್ ಹಾಕಿ ಸರ್ಟಿಫ಼ೈ ಮಾಡಿ ಹೋಗ್ರಲಾ. ಓಬಳೇಶು ಹೊರಟ ಐದು ನಿಮಿಷಕ್ಕೇ ಇತ್ತಕಡೆ ರಾಮುಲು ಕಲಾಸ್. ಹಾರ್ಟ್ ಫ಼ೈಲ್ ಆಗಿತ್ತಂತಲ್ಲ. ನೀವು ಬಂದಿದ್ರೂ ಏನ್ಮಾಡಕ್ ಆಗ್ತಿತ್ತು, ತಗೋರಿ. ಸರಿ ಈಗ ಭಡಾರನೆ ಮಾಡ್ರಿ. ನಾನು ಉಳಿದ ಏರ್ಪಾಟು ಮಾಡ್ಬೇಕು. ಈ ಟೈಮಲ್ಲಿ ಯಾರು ಬಾಡಿ ತಗಂಡೋಗ್ತಾರೆ? ಓಬಳೇಶು, ಆ ಟ್ಯಾಕ್ಸಿ ಬಾಬೂ ಐದನಾ ನೋಡು. ಕೊಂಚ ರೊಕ್ಕಾ ಹೆಚ್ಚುಕಮ್ಮಿ ಮಾಡ್ಕಂಡು ಒಂದು ಟ್ರಿಪ್ ಹೊಡೀತಾನ ಕೇಳ್ಕಂಬ. ಆಕಡೀಂದ ಬರಬೇಕಾದ್ರೆ ಬೆಳಗ್ಮುಂಜಾನೆ ಗಿರಾಕಿಗಳು ಸಿಗ್ಬೌದು ಅಂತ ಏಳು. ಸಿಸ್ಟರ್ ರುದ್ರಮ್ಮ ಏಳಿದ್ರು ಅಂತ ಏಳು ಓಗಲೇ. ಬೇಗ ಹೋಗ್ಲೇ ಮಂಗ. ಅಸಲು ನಯಾಪೈಸಾ ಉಪಯೋಗಿಲ್ಲ. ಉಂಬಾಕಿಲ್ಲದಿದ್ರೂ ಸೈ ಹಲ್ಲಿಗೆ ಕಡ್ಡೀ ಹಾಕ್ತಾ ನಿಂತಿರ್ತೈತೆ’ ಎಂದು ಓಬಳೇಶುವನ್ನು ಡ್ರೈವರ್ ಬಾಬುವನ್ನು ಹುಡುಕಲು ಕಳಿಸಿ ಇನ್ನೂ ಏನು ಮಾಡುತ್ತಾ ನಿಂತಿದ್ದೀಯಾ ಎನ್ನುವಂತೆ ನನ್ನ ನೋಡಿದಳು.

ನಾನು ಇಲ್ಲಿ ಮಾಡುವುದು ಇಲ್ಲಿ ಏನೂ ಉಳಿದಿಲ್ಲ ಎನ್ನುವುದು ನನಗೆ ಖಾತ್ರಿಯಾಯಿತು. ಪರದೆಗಳಿಂದ ಮುಚ್ಚಿದ್ದ ರಾಮುಲುವಿನ ಹಾಸಿಗೆಯ ಹತ್ತಿರ ಒಂದು ಪೆನ್‌ಟಾರ್ಚ್, ಸ್ಟೆಥೋಸ್ಕೋಪ್ ತೆಗೆದುಕೊಂಡು ನಿಧಾನವಾಗಿ ಹೋದೆ. ರೋಗಿಯನ್ನು ಪರೀಕ್ಷಿಸಿ ಜೀವ ಕೊಂಚವಾದರೂ ಇದೆ ಎಂದು ನನಗನಿಸಿದರೆ ಉಳಿಸುವ ಎಲ್ಲ ಪ್ರಯತ್ನವನ್ನು ಮಾಡಬೇಕಾದ, ಇಲ್ಲವಾದಲ್ಲಿ ’ಸತ್ತಿದ್ದಾನೆ’ ಎಂದು ಷರಾ ಬರೆದು ಸಹಿಹಾಕುವ ಕ್ರಿಯೆಯನ್ನು ಯಾರ ಸಹಾಯವೂ ಇಲ್ಲದೇ ಒಬ್ಬನೇ ಮಾಡುತ್ತಿದ್ದುದು ಅದೇ ಮೊದಲು. ಅಳುಕಳುಕಿನಿಂದಲೇ ನಿಧಾನವಾಗಿ ಪರದೆ ಸರಿಸಿ ಒಳಗೆ ಹೋದೆ. ಶಾಂತವಾಗಿ ಮಲಗಿದ್ದ ರಾಮುಲು. ಅರೆನಿಮೀಲಿತ ಕಣ್ಣುಗಳು, ಕೊಂಚವೇ ತೆರೆದ ಬಾಯಿ, ಕಟವಾಯಿಯಲ್ಲಿ ಕೊಂಚ ಜೊಲ್ಲು ಒಸರುತ್ತಿತ್ತು. ಕೆಳತುಟಿಯ ಬಲಭಾಗದಲ್ಲಿ ಕೊಂಚ ರಕ್ತ-ಸಾಯುವ ಕಾಲಕ್ಕೆ ನೋವಿನಿಂದ ತುಟಿಕಚ್ಚಿರಬಹುದೇನೋ ಎನ್ನಿಸಿತು. ಜೀವವಿರುವ ಯಾವ ಸೂಚನೆಯೂ ಕಾಣಲಿಲ್ಲ. ಆದರೂ, ಸ್ಟೆಥೋಸ್ಕೋಪನ್ನು ಆತನ ಎದೆಯ ಮೇಲೆ ಇಟ್ಟು ಕೇಳಲು ಪ್ರಯತ್ನಿಸಿದೆ. ಲಬ್-ಡಬ್ ರಾಮುವಿನ ಎದೆಬಡಿತವೋ ಇಲ್ಲ ನನ್ನದೋ? ಸಣ್ಣಗೆ ಸಿಳ್ಳಿನಂತೆ ನನ್ನ ಕಿವಿಯಲ್ಲಿ ಕೇಳುತ್ತಿರುವುದು ಉಸಿರೇ? ಸುಮ್ಮನೇ ಆತನನ್ನೇ ನೋಡುತ್ತಾ ನಿಂತೆ. ಸತ್ತವನನ್ನು ಸತ್ತಿದ್ದಾನೆ ಎಂದು ಪ್ರಮಾಣೀಕರಿಸಿ ಹೇಳುವುದು ಹೇಗೆ? ಹಾ. ಕಣ್ಣಿನ ಪಾಪೆಗಳಿಗೆ ಬೆಳಕು ತೋರಿಸಿ, ಅವು ಕುಗ್ಗುತ್ತದಾ ನೋಡುವುದು. ಸರಿ, ಎಂದು ಜೇಬಿನಲ್ಲಿದ್ದ ಪೆನ್‌ಟಾರ್ಚನ್ನು ರಾಮುಲುವಿನ ಕಣ್ಣಿಗೆ ತೋರಿಸಿದೆ. ಉಹೂ, ಏನೇನೂ ಇಲ್ಲ.
’ಏನ್ನೋಡ್ತಾ ಇದೀರ್ರೀ ಡಾಕ್ಟ್ರೇ. ಆತ ಸತ್ತಿದ್ದಾನೆ. ಇಲ್ಲಿ ಸರ್ಟಿಫ಼ೈ ಮಾಡಿ. ನಾ ಎಲ್ಲ ಮುಂದಿಂದು ಏರ್ಪಾಟು ಮಾಡ್ತೀನಿ’ ಎಂದು ನನ್ನ ಮುಂದೆ ಒಂದು ಕೇಸ್ ಪೇಪರನ್ನು ಹಿಡಿದಳು, ರುದ್ರಮ್ಮ. ನಾನು ಸಹಿ ಹಾಕಿ ಅಲ್ಲಿಂದ ಹೊರಟೆ. ಓಬಳೇಶು ಡ್ರೈವರ್ ಬಾಬುವನ್ನು ಹುಡುಕುವುದಕ್ಕೆ ಹೋಗಿದ್ದರಿಂದ ನಾನು ಹತ್ತು ನಿಮಿಷ ವಾಕ್ ಮಾಡಬೇಕಾಯಿತು.

ವಾಪಸ್ಸು ಬಂದು ಡ್ಯೂಟಿ ರೂಮಿನಲ್ಲಿ ಮಲಗಲು ಪ್ರಯತ್ನ ಮಾಡಿದೆ. ಏನೇನೋ ಕೆಟ್ಟಕೆಟ್ಟ ಕನಸುಗಳು, ರಾಮುಲು ಕನಸಲ್ಲಿ ಬಂದು ’ಸಾರೂ’ ಎಂದಂತೆ. ನಾನು ಆತನ ಹೃದಯವನ್ನು ಒತ್ತಿಒತ್ತಿ ಉಳಿಸಿದಂತೆ. ಆತ ಎದ್ದು ’ನಿಮ್ಮಿಂದ ತುಂಬಾ ಉಪ್ಕರ ಆತು’ ಎಂದಂತೆ, ಅರೆಬರೆ ನಿದ್ದೆ. ಅರೆಬರೆ ಎಚ್ಚರ. ಮೊದಲ ಸಾವು, ಮೊದಲ ನಿರಾಸೆ.
ಮಾರನೆಯ ದಿನಾ ಎದ್ದು ಅಲ್ಲೇ ಕ್ಯಾಶುಯಾಲ್‌ಟಿಯಲ್ಲಿದ್ದ ನಲ್ಲಿಯಲ್ಲಿ ಮುಖ ತೊಳೆದು, ಹಲ್ಲುಜ್ಜಿ ರೌಂಡ್ಸಿಗೆ ರೆಡಿಯಾಗುತ್ತಿರಬೇಕಾದರೆ ಹೊರಗೆ ಕಾರಿಡಾರಿನಲ್ಲಿ ಓಬಳೇಶು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದು ಕಾಣಿಸಿತು. ಡ್ರೈವರ್ ಬಾಬು ಜತೆ ಬೀಡಿ ಸೇದುತ್ತಾ ಪದೇ ಪದೇ ನನ್ನ ಕಡೆ ನೋಡುವುದು, ಏನೋ ಗುಸುಗುಸು ಮಾತಾಡಿಕೊಂಡಂತೆ ಕಾಣಿಸಿತು. ನನಗೇನೋ ಅನುಮಾನವಾಗಿ ಓಬಳೇಶುವಿನ ಹತ್ತಿರ ಹೋಗಿ ’ಏನಾರ ವಿಷಯ ಇದೆಯಾ?’ ಎಂದು ಕೇಳಿದೆ. ಓಬಳೇಶು ನನ್ನ ನೋಡಿ ಕಣ್ಣು ಹೊಡೆದು ’ನೀ ರೌಂಡ್ಸ್ ಮುಗ್ಸು, ಆಮೇಗೆ ಹೇಳ್ತೀನಿ’ ಎಂದ. ನನ್ನ ಹತ್ತಿರ ಗುಟ್ಟು ಮಾಡುವುದು ಓಬಳೇಶುವಿಗೇನಿದೆ ಎನ್ನಿಸಿತು. ’ಏನು ಅಂತ ಹೇಳೋ ಮಾರಾಯ’ ಎಂದು ಕೊಂಚ ಬೇಸರಿಸಿಕೊಂಡೇ ಕೇಳಿದೆ.

ಒಂದು ಕ್ಷಣ ಆಕಡೆ ಈಕಡೆ ನೋಡಿ ಯಾರೂ ಇಲ್ಲ ಎನ್ನುವುದನ್ನು ದೃಢಪಡಿಸಿಕೊಂಡು ಬಂದು ಕಿವಿಯಲ್ಲಿ ’ಸಾರೂ. ರಾಮುಲು ಸತ್ತಿಲ್ಲ, ಸಾರೂ.’ ಎಂದ. ನನಗೆ ಎದೆ ಧಸಕ್ಕೆಂದಿತು. ನಾನು ಸತ್ತ ಎಂದು ದೃಢೀಕರಿಸಿದ ಮೊಟ್ಟಮೊದಲ ರೋಗಿ ಸತ್ತೇ ಇಲ್ಲ ಅಂದರೆ. ಆದರೂ ಸ್ವಲ್ಪ ಧೈರ್ಯ ತೆಗೆದುಕೊಂಡು ’ಏನಯ್ಯ, ಏನ್ಮಾತಾಡ್ತಾ ಇದೀ. ನಾನೇ ಕಣ್ಣಾರೆ ನೋಡಿದ್ದೀನಿ’ ಎಂದೆ. ಮತ್ತೆ ಮತ್ತೆ ಹಿಂದಿನ ರಾತ್ರಿ ನೋಡಿದ್ದ ರಾಮುಲುವಿನ ಮುಖವನ್ನು ನೆನಪಿಸಿಕೊಳ್ಳಲು ಪ್ರಯತ್ನ ಮಾಡಿದೆ. ಕಿವಿಯಲ್ಲಿ ಲಬ್‌ಡಬ್, ಸುಂಂಯ್, ಗೊರಗೊರ ಧ್ವನಿಗಳು ಅನುರಣಿತವಾದವು. ಓ ದೇವರೇ.. ಎಂಥಾ ಕೆಲಸವಾಯಿತು? ಕಾಯಿಲೆ ಕಂಡುಹಿಡಿಯುವುದರಲ್ಲಿ ತಪ್ಪು ಮಾಡಿದರೆ ಪರವಾಗಿಲ್ಲ. ಆದರೆ, ಸಾವನ್ನೇ ಗುರುತಿಸಹೋದನಲ್ಲ. ಎಂಥ ಕಲಿಸಿದ್ದಾರೆ, ಮೆಡಿಕಲ್ ಕಾಲೇಜಿನಲ್ಲಿ. ಹೌದು ನನಗೆ ಕೈಕೊಟ್ಟಿದ್ದು ಆ ಪಾಪೆಯೇ. ಆ ಸಣ್ಣ ಬೆಳಕಿನ ಕೋಲಿನಲ್ಲಿ ಅದು ಹಿಗ್ಗುತ್ತದೋ, ಕುಗ್ಗುತ್ತದೋ ಯಾರಿಗೆ ಗೊತ್ತಾಗುತ್ತದೆ?

’ಇಲ್ಲ, ಸಾರೂ. ನೀನು ಬಂದು ಪರೀಕ್ಸೆ ಮಾಡಿ ಓದ್ಯಾ. ರುದ್ರಮ್ಮಾ ಬಂದು ಬಾಬೂ ಗಾಡಿ ತಗಂಬಾ ಅಂತ ನಂಗೆ ಹೇಳ್ತಾ, ನಾ ಓಗಿ ಬಾಬೂನ ಕರಕಂಬಂದ್ನಾ, ಬಾಬೂ ಬಂದು ಏಮ್ರಾ ಓಬ್ಳೇಶು ಬಾಡಿ ಇಂಕಾ ವಾರ್ಮ್ ಉಂದಿ ಅಂದ್ನಾ, ನಂಗೂ ಏಕ್‌ದಂ ಅನ್ಮಾನ ಸುರು ಆಗ್ಬುಡ್ತು. ಆದ್ರೆ, ರುದ್ರಮ್ಮೋರು ನಮ್ಮಿಬ್ರಿಗೂ ಬೈದು ಕರ್ಕಂಡು ಹೋಗ್ರಲೇ, ನಿಮ್ದೊಂದು ಎಂದಿರತನ ಇದ್ದಿದ್ದೇ ಅಂತ ನಂಗೂ ಬಾಬೂಗೂ ಚುಪ್ ಮಾಡ್ಸಿ ಕಳಿಸ್ಬಿಟ್ರು. ಬಾಬೂನೇ ಕೇಳಿ, ‘ಏ ಬಾಬೂ ಇಕ್ಕಡ ರಾರೇ ರಾ’ ಎಂದು ಬಾಬೂನ ಕರೆದ. ಹೊರಗೆ ಬೀಡಿಯ ಹೊಗೆಯಿಂದ ವರ್ತುಲಾಕಾರದ ಧೂಮಗೋಳಗಳನ್ನು ರಚಿಸುವುದರಲ್ಲಿ ತಲ್ಲೀನನಾದ ಬಾಬು ಬೀಡಿಯ ಬೆಂಕಿಯನ್ನು ಅಲ್ಲೇ ಇದ್ದ ಕಂಬಕ್ಕೆ ಒತ್ತಿ, ಉಳಿದ ಮೋಟನ್ನು ಕಿವಿಯ ಮೇಲಿಟ್ಟುಕೊಂಡು ನಿರ್ವಾತದಲ್ಲಿ ಸೃಷ್ಟಿಯಾಗಿದ್ದ ತನ್ನದೇ ಧೂಮಕಲೆಯನ್ನು ತಾನೇ ನಿರ್ನಾಮ ಮಾಡಿ ನಮ್ಮಬಳಿ ಬಂದ.

’ಔನ್ ಸಾರೂ. ಅಸಲು ನೀ ಎದಕ್ಕೆ ರಾಮುಲು ಸತ್ತ ಅಂದ ಹೇಳ್ದಿ ಅಂತ ನಂಗರ್ಥವೇ ಅಗ್ಲಿಲ್ಲ. ಇಂಥ ಕೇಸನ್ನ ನನ್ನ ಸರ್ವೀಸಲ್ಲಿ ಒಂದೆರಡು ಸಾರಿ ನೋಡಿದೀನಿ. ಆದರೆ, ಈ ಕೇಸೇ ಬೇರೆ. ಮೈಕೈಯೆಲ್ಲ ಬೆಚ್ಚಗೆ ಇತ್ತು ಅಂತ ರಾಮುಲು ಹೆಡತೀಗೆ ಸೂಚ್ನೆ ಗೊತ್ತಾದ ತಕ್ಷಣ ಕಾರ್ನಾಗೇ ಮೈಕೈ ಉಜ್ಜಕ್ಕೆ ಶುರುಮಾಡಿದಳು. ತಕ್ಷಣ ರಾಮುಲು ಎರ್ರಿತಾತಾ ತನ ಬಲಗೈ ಮೇಲೆತ್ತಿದ. ನಾ ಇದೇ ಎರ್ಡು ಕಣ್ಣಾಗೇ ನೋಡ್ದೇ. ಆಮೇಗೆ ರಾಮುಲು ತಮ್ಮ, ತಂಗೀ ಎಲ್ರೂ ಗಾಡೀನ ಓಪಿಡೀಗ್ ವಾಪಸ್ ತಿರುಗ್ಸು ಬಾಬೂ ಅಂದರು. ಆದ್ರೆ ಆಯಮ್ಮ ಮಾತ್ರ ಸತ್ರೂ ಸೈ ಮತ್ತೆ ಓಪಿಡಿ ಮಾತ್ರ ಬೇಡ. ಹಟ್ಯಾಗೇ ಯಾರೋ ಹಕೀಮನ್ನ ಕರ್ಸಣ, ನೀ ಬೇಗ್ನಡಿ ಅಂತು. ನಾ ಸೀದಾ ಗಾಡೀನ ಹಟ್ಟೀಗೆ ಕರಕೊಂಡು ಹೋಗಿ ಅವನ್ನ ಬಿಟ್ಟು ಅಂಗೇ ವಾಪಸ್ ಬರ್ತಾ ರಾಮುಲು ತಮ್ಮನ್ನ ಹಕೀಮ್ ಭೈ ಮನೀತನ ಡ್ರಾಪ್ ಹಾಕ್ಬಂದೆ. ಆಯಪ್ಪ ನಮಜ಼್ ಮುಗಿಸ್ಕಂಡು ಬರ್ತಾನಂತೆ. ಈ ಟೇಮಿಗೆ ರಾಮುಲು ಓಡಾಡ್ತಾ ಇರಬಹುದು.’ ಎಂದ, ತನ್ನ ಹಳೇ ಫ಼ೇವರ್ ಲ್ಯೂಬಾ ನೋಡುತ್ತಾ.

ನನಗೆ ಜಂಘಾಬಲವೇ ಉಡುಗಿಹೋದಂತಾಯಿತು. ನಮ್ಮ ಪ್ರೊಫ಼ೆಸರರಿಗೆ ವಿಷಯವೇನಾದರೂ ಗೊತ್ತಾದರೆ ಆ ರಾಮುಲು ಬದುಕಿದ್ದಾನೋ ಇಲ್ಲವೋ ಗೊತ್ತಿಲ್ಲ, ನಾನಂತೂ ಉಳಿಯುವುದಿಲ್ಲ ಎನ್ನಿಸಿತು. ನಾನೇ ಸಹಿಹಾಕಿದ ’ಟೈಮ್ ಆಫ಼್ ಡೆತ್-೨.೩೦ ಎ ಎಮ್’ ಎಂಬ ಮರಣೋಲ್ಲೇಖದ ಕೆಳಭಾಗದಲ್ಲಿ ನನ್ನ ಸಹಿ ಅದರ ಮುಂದಿದ್ದ ಎಂಬಿಬಿಎಸ್ ಎಂಬ ನಾಲ್ಕಕ್ಷರ ಎಲ್ಲವೂ ನನ್ನ ಕಣ್ಣ ಮುಂದೆ ಕುಣಿಯತೊಡಗಿತು. ’ಎದ್ದು ಕೂತ ಶವ, ವಡ್ಡರ ಬಂಡದಲ್ಲೊಂದು ಮಹಾ ಪವಾಡ’ ಎಂಬ ಬಳ್ಳಾರಿ ಪತ್ರಿಕೆಯ ಕಪ್ಪುಬಿಳುಪು ಹೆಡ್‌ಲೈನ್ ನನ್ನ ಕಣ್ಣ ಮುಂದೆ ಕುಣಿದಾಡತೊಡಗಿತು. ಪ್ರೊಫ಼ೆಸರರು ಕಾಲೇಜಿನಿಂದ ಹೊರಗೆ ಹಾಕುವುದು, ಅಪ್ಪ ’ಕೆಲಸಕ್ಕೆ ಬಾರದವನ ತಗೊಂಬಂದು. ಒಂದು ಡೆಡ್ ಬಾಡೀನ ಗುರುತಿಸೋದಕ್ಕೆ ಆಗೋದಿಲ್ಲ ಅಂದರೆ ಇವನೆಂತ ಡಾಕ್ಟರು, ನಮ್ ವಿಷ್ಣುಮೂರ್ತಿ ಡಾಕ್ಟರು ಸತ್ತಿರೋರನ್ನ ಎಬ್ಬಿಸಿ ಕೂರಿಸ್ತಾರೆ. ಡಾಕ್ಟ್ರು ಅಂದರೆ ಹಂಗಿರ್ಬೇಕು, ಕೆಲವ್ರಿಗೆ ಹುಟ್ಟಿದಾಗ್ಲೇ ಕೈಗುಣ ಬಂದಿರುತ್ತೆ,’ ಎಂದು ಮೂದಲಿಸುವುದು ಎಲ್ಲವನ್ನೂ ನೆನೆಸಿ ’ಅಯ್ಯೋ ದೇವರೇ, ಎಂಥಾ ಕೆಲಸ ಮಾಡ್ಸಿಬಿಟ್ಟೆಯಪ್ಪಾ’ ಎಂದು ನೇರ ಎಮೆಮ್ ಟೂ ಗೆ ನರ್ಸ್ ರುದ್ರಮ್ಮ ಇನ್ನೂ ಡ್ಯೂಟಿಯಲ್ಲಿದ್ದಾರಾ ಅಂತ ನೋಡುವುದಕ್ಕೆ ಹೋದರೆ ಅಲ್ಲಿಯೂ ನಿರಾಶೆ ಕಾದಿತ್ತು. ಏನು ಮಾಡಲೂ ಗೊತ್ತಾಗದೇ ಸುಮ್ಮನೇ ರೂಮಿಗೆ ಬಂದು ರೂಂಮೇಟು ತ್ಯಾಗರಾಜನ ಹತ್ತಿರ ಹೀಗೀಗಾಯ್ತು ಎಂದು ಹೇಳಿಕೊಂಡು ನನ್ನಿಂದ ಆಗಿರಬಹುದಾದ ಒಂದೇ ಒಂದು ಸಣ್ಣ ತಪ್ಪಿನಿಂದ ನನ್ನ ಭವಿಷ್ಯ ಹೇಗೆ ಕರಾಳವಾಗಲಿದೆ ಎಂದು ಚಿತ್ರಕವಾಗಿ ವರದಿಯೊಪ್ಪಿಸಿ ಗಳಗಳ ಎಂದು ಅತ್ತುಬಿಟ್ಟೆ.

’ಛೆ, ಬಿಡ್ತು ಅನು ಗುರೂ. ಇಷ್ಟಕ್ಕೆಲ್ಲಾ ಯಾರಳ್ತಾರೆ’ ಎಂದು ಒಂದೆರಡು ಕ್ಷಣ ಗಂಭೀರವಾಗಿ ಯೋಚನೆ ಮಾಡಿ ’ನಡೀ, ನಾವೇ ಹೋಗಿ ನೋಡಿಕೊಂಡು ಬಂದುಬಿಡೋಣ’ ಎಂದ. ನಾನು ಸತ್ತ ಎಂದು ಹೇಳಿದ ವ್ಯಕ್ತಿ ಎದ್ದು ಕೂತಿದ್ದಾನೆ, ಅವನನ್ನು ನೋಡಲು ಹೋಗಿ ಬರುವುದು ಎಂದರೆ? ಅರ್ಥವಾಗಲಿಲ್ಲ. ಒಂದು ಕ್ಷಣ ಯೋಚಿಸಿದ ನಂತರ ಯಾಕಾಗಬಾರದು ಎನ್ನಿಸಿತು. ನಾನೇನು ನನ್ನ ಕೈಯಾರ ಯಾರನ್ನೂ ಸಾಯಿಸಲಿಲ್ಲವಲ್ಲ. ಆತ ಇನ್ನೂ ಬದುಕಿದ್ದಾನೆ ತಾನೆ. ಬದುಕಿದ್ದರೆ ಹೋಗಿ ಕೈಹಿಡಕೊಂಡು ’ನನ್ನ ತಪ್ಪಾಯಿತಪ್ಪಾ’ ಎಂದು ಕೇಳಿಬಿಡುವುದು. ಇನ್ನು ಮುಂದೆ ಹುಷಾರಾಗಿರುತ್ತೀನಿ ಎಂದು ಹೇಳುವುದು. ತ್ಯಾಗರಾಜ ಹೇಳುತ್ತಿರುವುದರಲ್ಲಿ ಏನೂ ತಪ್ಪಿಲ್ಲ ಎನಿಸಿತ್ತು.

ಸೀದಾ ಹೋಗಿ ಕ್ಯಾಶುಯಾಲ್‌ಟಿಯ ಮುಂದೆ ಮತ್ತೆ ಬೀಡಿ ಸೇದುತ್ತಿದ್ದ ಡ್ರೈವರ್ ಬಾಬುವನ್ನು ಹಿಡಿದು ರಾಮುಲುವಿನ ಹಟ್ಟಿಗೆ ಕರಕೊಂಡು ಹೋಗು ಎಂದು ಗೋಗರೆದು ಐವತ್ತು ರೂಪಾಯಿ ಕೊಟ್ಟಾಗ ಆತ ಒಲ್ಲದ ಮನಸ್ಸಲ್ಲಿ ಒಪ್ಪಿದ. ಡವಡವಗುಡುತ್ತಿದ್ದ ಎದೆಯನ್ನು ಒತ್ತಿಹಿಡಿದು ತ್ಯಾಗರಾಜನ ಕೈಹಿಡಿದು ಕಾರಿಂದ ಇಳಿದು ಬಾಬೂ ತೋರಿಸಿದ ವಿಳಾಸ ಹುಡುಕಿಕೊಂಡು ಹೋದಾಗ ಮನೆಯ ಮುಂದೆ ಕುಡಿಕೆಯಲ್ಲಿ ಬೆಂಕಿ. ಒಳಗಿನಿಂದ ಜೋರಾಗಿ ಅಳು, ಪ್ರಲಾಪ. ಆ ಒಂದು ಕ್ಷಣ ಸದ್ಯ ರಾಮುಲು ಸತ್ತಿದ್ದಾನಲ್ಲ ಎಂದು ನನಗೆ ಒಂದು ರೀತಿ ವಿಚಿತ್ರವಾದ ಸಮಾಧಾನವಾಯಿತು. ಹತ್ತಿರ ಹೋಗೋಣವೇ ಬೇಡವೇ ಎಂದು ತ್ಯಾಗರಾಜನನ್ನು ಕೇಳಿದಾಗ ’ಇನ್ನೇನೂ ಯೋಚನೆಯಿಲ್ಲ. ಬಾ’ ಎಂದು ಕರಕೊಂಡು ಹೋದ.

ಮನೆಯ ಒಳಗೆ ಹೋಗಲು ನನಗೆ ಧೈರ್ಯವಿರಲಿಲ್ಲ. ಹೊರಗೆ ರಾಮುಲುವಿನ ತಮ್ಮ ಓಡಾಡುತ್ತಿದ್ದ. ಆತ ನನ್ನನ್ನು ಗುರುತಿಸಿದವನೇ ಹತ್ತಿರ ಬಂದ. ’ಓ ಇಲ್ಲೀಗೆ ಬಂದ್ರಾ ಸಾರೂ. ಎಂಥ ದೇವ್ರಂಥ ಮನಸು ನಿಂದು’ ಎಂದು ಸಾವಿನ ಮನೆಯಲ್ಲಿಯೂ ಕರೆದು ಕೂಡಿಸಿ ಟೀ ಕೊಟ್ಟು ಉಪಚಾರ ಮಾಡಿದ. ಏನೆಂದು ಕೇಳುವುದು, ಆತನನ್ನು. ಸತ್ತಿರುವನನ್ನು ಸತ್ತಿದ್ದಾನಾ ಎಂದು ದೃಢಪಡಿಸಿಕೊಂಡು ಹೋಗುವುದಕ್ಕೆ ಡಾಕ್ಟರುಗಳು ಬಂದಿದ್ದಾರೆ ಎಂದರೆ ನಮ್ಮನ್ನು ಶತಮೂರ್ಖರು ಎಂದು ತಿಳಕೊಳ್ಳುವುದಿಲ್ಲವೇ? ಸುಮ್ಮನೇ ಟೀ ಕುಡಿದು ಬಂದಾಯಿತು. ಸತ್ತಿದ್ದ ರಾಮುಲು ಎರ್ರಿತಾತನ ತರ ಕೈ ಎತ್ತಿದ ಎಂದು ನನ್ನ ಹತ್ತಿರ ಹೇಳಿದ ಬಾಬೂವನ್ನು ಹುಡುಕಿದೆ. ಆತ ಎಲ್ಲೆಲ್ಲೂ ಸಿಗಲಿಲ್ಲ.

ವಾಪಸ್ಸು ಬರುವಾಗ ನನಗಿಂತ ಈ ಒಂದು ವರ್ಷ ಸೀನಿಯರ್ರಾದ ತ್ಯಾಗರಾಜ, ಸತ್ತ ಮೇಲೆ ಎಷ್ಟು ಹೊತ್ತು ಮೈ ಇನ್ನೂ ಬೆಚ್ಚಗೆ ಇರುತ್ತದೆ. ಇದ್ದಕ್ಕಿದ್ದಂತೆ ಮೈ ಸೆಟೆದುಕೊಳ್ಳುವುದಕ್ಕೆ ರೈಗರ್ ಮಾರ್ಟಿಸ್ ಎನ್ನುತ್ತಾರೆ ಎನ್ನುವ ವೈದ್ಯಕೀಯ ವಿವರಣೆ (ರಾಮುಲು ಎರ್ರಿತಾತಾನ ರೀತಿ ಕೈ ಎತ್ತಿದ್ದು ಅದರಿಂದ ಹೌದೇ ಅಲ್ಲವೇ ಎನ್ನುವುದು ನನಗೆ ಇನ್ನೂ ಗೊತ್ತಾಗಿಲ್ಲ) ಇತರೇ ಎಲ್ಲವನ್ನೂ ವಿವರವಾಗಿ ಹೇಳಿದ್ದಷ್ಟೇ ಅಲ್ಲ, ಮುಂದಿನ ಮೂರು ತಿಂಗಳು ಹಾಸ್ಟೆಲ್ಲಿನ ಮೆಸ್ಸಿನಲ್ಲಿ ಯಾರೇ ಸಾವನ್ನು ಸರ್ಟಿಫ಼ೈ ಬಂದಿದ್ದನ್ನು ಮಾತಾಡುತ್ತಿದ್ದರೂ ’ಒಮ್ಮೆ ಗುರೂಗೆ ತೋರಿಸಬೇಕಿತ್ತು’ ಎಂದು ತಮಾಷೆ ಮಾಡುತ್ತಿದ್ದ.

***

ಈ ಸಾವನ್ನುವುದನ್ನು ದಿನಂಪ್ರತೀ ನೋಡುವ ನನ್ನಂತ ಕೆಲಸದಲ್ಲಿರುವವರು ಸಾವಿನ ಘನತೆಯ ಬಗ್ಗೆ ಎಂಥ ಗೌರವವಿಟ್ಟುಕೊಂಡಿದ್ದರೂ ಸಾವು ಹುಟ್ಟಿಸಬೇಕಾದಂತ ಹಲವು ತೀವ್ರತರ ಭಾವನೆಗಳಿಗೆ ಒಂದು ಮಟ್ಟಿನಲ್ಲಿ ಇನ್ಸುಲರ್ ಆಗಿಬಿಡುತ್ತೇವೆ. ಬಹಳಷ್ಟು ಬಾರಿ ರೋಗಿಯ ಜತೆ ನಮಗೆ ಯಾವ ಸಂಬಂಧ, ಸ್ನೇಹವಿರದೇ ಇರುವುದರಿಂದ ಆ ಸಾವು ನಮ್ಮ ಕೆಲಸದ ಇನ್ನೊಂದು ಭಾಗವಾಗಿ ಹೋಗುತ್ತದೆ. ಎಷ್ಟರಮಟ್ಟಿಗೆ ಎಂದರೆ ಕೆಮ್ಮು, ನೆಗಡಿಗೆ ಮಾತ್ರೆ ಬರೆದುಕೊಟ್ಟಷ್ಟೇ ನಿರಾಳವಾಗಿ ಡೆತ್ ಸರ್ಟಿಫ಼ೈ ಮಾಡಿ ಮುಂದಿನ ಕೆಲಸದಲ್ಲಿ ತೊಡಗಿಕೊಳ್ಳುತ್ತಿರುತ್ತೇವೆ. ಒಮ್ಮೆ ರಾತ್ರಿಪಾಳಿಯಲ್ಲಿದ್ದಾಗ ಬೆಳಿಗ್ಗೆ ಮೂರುಗಂಟೆಯ ಸಮಯದಲ್ಲಿ ಭಯಂಕರ ಹಸಿವಾಗಿ ಪೀಟ್ಜಾ ತಿನ್ನೋಣವೆಂದು ಸಿದ್ಧಮಾಡಿಕೊಳ್ಳುತ್ತಿದ್ದೆವು. ಪೀಟ್ಜಾದವ ಬಿಸಿಬಿಸಿ ಹಬೆಯಾಡುವ ಪೀಟ್ಜಾವನ್ನು ಬ್ರೇಕ್‌ರೂಮಿನಲ್ಲಿರಿಸಿ ಹೋಗಿದ್ದ. ಇನ್ನೇನು ಪೀಟ್ಜಾ ತುಂಡನ್ನು ಕೈಯಲ್ಲಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಮೇಲಿನ ವಾರ್ಡಿನಿಂದ ಯಾರಿಗೋ ಸೀರಿಯಸ್ ಎಂದು ಎಲ್ಲರ ಬೀಪರ‍್ಗಳೂ ಸದ್ದುಮಾಡಿದಾಗ ಎಲ್ಲರೂ ಅಲ್ಲಿಗೆ ಹೋಗಬೇಕಾಗಿ ಬಂತು. ಮೇಲೆ ಹೋದಾಗ ತೊಂಬತ್ತನಾಲ್ಕರ ಮುದುಕಿಯೊಬ್ಬಳಿಗೆ ಹೃದಯದ ಬಡಿತ ನಿಂತಿತ್ತು. ಏನೇ ಪ್ರಯತ್ನ ಮಾಡಿದರೂ ಆ ಮುದುಕಿ ಉಳಿಯಲಿಲ್ಲ. ಆ ಮುದುಕಿಯ ಕುಟುಂಬದವರೂ ಇದನ್ನು ನಿರೀಕ್ಷಿಸಿದ್ದರೆನಿಸುತ್ತದೆ. ಆ ಮುದುಕಿಯ ಸಾವಿನ ಸುದ್ದಿಯನ್ನು ಆಕೆಯ ಮಗಳಿಗೆ ಫ಼ೋನು ಮಾಡಿ ತಿಳಿಸಿದಾಗ ಆಕೆ ಆಸ್ಪತ್ರೆಯವರೇ ಎಲ್ಲ ವ್ಯವಸ್ಥೆಯನ್ನೂ ಮಾಡಬೇಕೆಂದೂ, ಫ಼್ಯೂನರಲ್ ಹೋಮಿನ ವಿಳಾಸ ಆಸ್ಪತ್ರೆಯ ರೆಕಾರ್ಡುಗಳಲ್ಲಿದೆಯೆಂದೂ, ಆಕೆ ಬೆಳಿಗ್ಗೆ ನೇರವಾಗಿ ಫ಼್ಯೂನರಲ್ ಹೋಮ್‌ಗೆ ಹೋಗುತ್ತೇನೆಂದೂ ಹೇಳಿದಳು. ನಾನು ನನ್ನ ಕೆಲಸ ಮುಗಿಸಿ, ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಸಹಿ ಹಾಕಿ ಮತ್ತೆ ಎಮರ್ಜೆನ್ಸಿ ಡಿಪಾರ್ಟ್‌ಮೆಂಟಿಗೆ ಬಂದಾಗ ನನ್ನ ಬರವನ್ನೇ ಕಾಯುತ್ತಿದ್ದಂತೆ ಅಲ್ಲಿನ ನರ್ಸು ನನ್ನ ಕೈಯಿಗೆ ನಾಲ್ಕು ಹೊಸಾ ರೋಗಿಗಳ ಚಾರ್ಟನ್ನು ಕೊಟ್ಟಳು. ಮುಂದೆ ಕೌಂಟರಿನ ಮೇಲೆ ಕಾಣುತ್ತಿದ್ದ ಪೀಟ್ಜಾದ ಒಂದು ತುಣುಕನ್ನು ಕಚ್ಚಿ ತಿನ್ನುತ್ತಾ ನಾನು ಚಾರ್ಟಿನ ಮೇಲೆ ಕಣ್ಣಾಡಿಸತೊಡಗಿದೆ. ಆಗ ಇದ್ದಕ್ಕಿದಂತೆ ವಾರ್ಡನ್ನು ಸ್ವಚ್ಛಗೊಳಿಸುವ ಟಾಡ್ ಬಂದು ನನ್ನ ಕಡೆ ನೋಡಿ ’ನಾಚಿಕೆಯಾಗ್ಬೇಕು, ಡಾಕ್ ನಿನಗೆ. ಆ ಮುದುಕಿ ಸತ್ತು ಐದು ನಿಮಿಷವಾಗಿಲ್ಲ. ಕೈ ಕೂಡ ತೊಳಕೊಂಡಿದೀಯೋ ಇಲ್ಲವೋ. ಇಲ್ಲಿ ಬಂದು ಪೀಟ್ಜಾ ತಿಂತಾ ಇದೀಯಲ್ಲ. ಮನಸಾದರೂ ಹೇಗೆ ಬರುತ್ತೆ ನಿನಗೆ.’ ಎಂದು ಹೇಳಿ ಜೋರಾಗಿ ಅಳತೊಡಗಿದ. ಟಾಡ್ ಇಪ್ಪತ್ತೆರಡು ವರ್ಷದ ಯುವಕ. ಈ ಕೆಲಸಕ್ಕೆ ಸೇರಿ ಒಂದು ತಿಂಗಳಾಗಿತ್ತಷ್ಟೇ. ನನಗೆ ಈತ ಏನು ಹೇಳುತ್ತಿದ್ದಾನೆ ಎಂದು ಅರ್ಥವಾಗುವುದಕ್ಕೇ ಹತ್ತು ಸೆಕೆಂಡು ಬೇಕಾಯಿತು. ’ಸಾರಿ, ಟಾಡ್.’ ಎಂದೆ. ಆತ ಆಗತಾನೇ ಆ ಮುದುಕಿಯ ದೇಹವನ್ನು ಮಾರ್ಚುರಿಗೆ ಸಾಗಿಸಿ ಬಂದಿದ್ದನಂತೆ. ಮುದುಕಿಯ ಹೆಣದ ಜತೆ ಹತ್ತು ನಿಮಿಷಗಳನ್ನು ಕಳೆದ ಆತನಿಗೆ ಬೆಳೆದಿದ್ದ ಬಾಂಡಿಂಗ್‌ನ ತುಣುಕೂ ಆಕೆಯನ್ನು ಉಳಿಸಲು ಪ್ರಯತ್ನಪಟ್ಟ ನನಗೆ ಇಲ್ಲದೇ ಹೀಗೆ ಯಾವರೀತಿಯ ಭಾವನೆಯೂ ಇಲ್ಲದೇ ಪೀಟ್ಜಾ ತಿನ್ನುತ್ತಿರುವುದು ಆತನನ್ನು ವಿಚಲಿತಗೊಳಿಸಿತ್ತು. ಇದು ನನ್ನ ಮಟ್ಟಿಗೆ ಹತ್ತರ ನಂತರ ಬರುವ ಹನ್ನೊಂದನೆಯ ಸಾವು ಎಂದು ಟಾಡ್‌ಗೆ ಹೇಳಿ ಅರ್ಥಮಾಡಿಸುವುದಾದರೂ ಹೇಗೆ? ಟಾಡ್ ಜತೆ ಯಾವ ಮಾತಾಡಲೂ ಧೈರ್ಯವಾಗಲಿಲ್ಲ. ಆದರೆ, ಎಷ್ಟೇ ಗಟ್ಟಿ ಹೃದಯ ನನ್ನದು ಅಂದುಕೊಂಡಂತ ನನಗೂ ಅಂದು ಪೀಟ್ಜಾ ತಿನ್ನಲಾಗಲಿಲ್ಲ. ಅಂದಿನಿಂದ ಇಂದಿನವರೆಗೆ ನಾನು ಯಾವುದೇ ಕೆಲಸದಲ್ಲಿರಬೇಕಾದರೆ ಎಂಥ ವ್ಯಕ್ತಿ ಸತ್ತರೂ, ಒಂದು ನಿಮಿಷ ಮೌನವಾಗಿ ನಿಂತು ಬಂದು ಮುಂದಿನ ಕೆಲಸದಲ್ಲಿ ತೊಡಗುತ್ತೇನೆ. ಖಂಡಿತಾ ಪೀಟ್ಜಾ ತಿಂದಿಲ್ಲ.

ಅಕಾಲ, ಅನಿರೀಕ್ಷಿತ ಸಾವು ಎಂಥ ಗಟ್ಟಿ ಮನಸ್ಸಿನವನನ್ನೂ ವಿಚಲಿತಗೊಳಿಸಬಹುದು. ಆದರೆ, ಒಬ್ಬ ವ್ಯಕ್ತಿ ಏನು ಮಾಡಿದರೂ ಬದುಕುಳಿಯುವುದಿಲ್ಲ ಎಂದು ಗೊತ್ತಿದ್ದಲ್ಲಿ ಆತನನ್ನು ಮನೆಯವರ ಒತ್ತಾಯದಿಂದಲೋ ಅಥವಾ ಕಾನೂನಿಗೆ ಹೆದರಿಯೋ ಆ ವ್ಯಕ್ತಿಯನ್ನು ಉಳಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾಗ ಆ ಪ್ರಯತ್ನದ ಸಾರ್ಥಕತೆಯ ಬಗ್ಗೆ ಅನುಮಾನಬಂದು ಪ್ರಯತ್ನದ ತೀವ್ರತೆ ಹುಸಿಯಾಗುತ್ತದೆ. ನಾನು ಮೇಲೆ ಹೇಳಿದ ಮುದುಕಿಯ ವಿಷಯದಲ್ಲಿ ಆಕೆಯ ಸಾವು ಅವರ ಮನೆಯವರಿಗೂ ಅನಿರೀಕ್ಷಿತವಾಗಿರಲಿಲ್ಲ. ಆದರೆ, ಆಕೆಯ ಹೃದಯ ನಿಂತಾಗ ಆಕೆಯನ್ನು ಉಳಿಸುವ ಪ್ರಯತ್ನ ಮಾಡಬೇಡಿ ಎಂದು ಆಕೆಯಾಗಲೀ ಆಕೆಯ ಮನೆಯವರಾಗಲೀ ಎಲ್ಲೂ ಸೂಚನೆ ಕೊಡದೇ ಇದ್ದುದ್ದರಿಂದ ಕಾನೂನುಬದ್ಧವಾಗಿ ಆಕೆಯನ್ನು ಉಳಿಸುವ ಪ್ರಯತ್ನವನ್ನು ನಾವು ಮಾಡಲೇಬೇಕಾಗಿತ್ತು. ಯಾವುದೇ ರೋಗಿಗೆ ಇದು ಘನತೆಯ ಸಾವಲ್ಲ. ಆದರೂ ಎಷ್ಟೋ ಬಾರಿ ಈ ರೀತಿಯ ಕೃತಕ ಉಸಿರಾಟ, ಎದೆಗೂಡನ್ನು ಒತ್ತುವುದು, ಜೀವ ಉಳಿಸುವ ಔಷಧಿಗಳನ್ನು ಒಲ್ಲದ ಮನಸ್ಸಿನಿಂದ ರೋಗಿಗೆ ಕೊಡುವುದು- ಇಂಥಾವನೆಲ್ಲ ಪರಿಸ್ಥಿತಿಯ ಕೈಗೊಂಬೆಯಾಗಿ ಮಾಡಲೇಬೇಕಾಗುತ್ತದೆ. ಆಗ ಇದು ಪ್ರಯತ್ನಕ್ಕಿಂತ ಹೆಚ್ಚಾಗಿ ರಿಚುಯಲ್ ಆಗಿಬಿಡುತ್ತದೆ. ಈ ಮುದುಕಿಯ ವಿಷಯದಲ್ಲಿ ಆದದ್ದೂ ಹಾಗೆ. ನಾ ಆಕೆಯ ’ಸಾವಿನ ಕರೆ’ಗೆ ಓಗೊಟ್ಟು ಮೇಲೆ ಹೋದಾಗ ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಒಲ್ಲದ ಮನಸ್ಸಿನಿಂದ ಆಕೆಯ ಎದೆ ಒತ್ತುತ್ತಿದ್ದರು. ಒಂದು ಹಬೆಗಟ್ಟಿದ ಮಾಸ್ಕನ್ನು ಆಕೆಯ ಮುಖದ ಮುಂದೆ ಹಿಡಿದು ಆಕೆಯ ಶ್ವಾಸನಾಳಗಳು, ಶ್ವಾಸಕೋಶಗಳಿಗೆ ಜೀವವಾಯುವಿನ ಪೂರೈಕೆಯನ್ನು ತೋರಿಸಿದ್ದರು. ಇದಕ್ಕೆ ವೈದ್ಯಕೀಯ ಸ್ಲಾಂಗ್ ’ಹಾಲಿವುಡ್ ಕೋಡ್’ ಅಥವಾ ’ಸ್ಲೋ ಕೋಡ್’ (ಕೋಡ್ ಬ್ಲೂ ಅಂದರೆ ಯಾರದಾದರೂ ಹೃದಯ ಸ್ತಂಭನ ಆದಲ್ಲಿ ವೈದ್ಯಕೀಯ ಸಿಬ್ಬಂದಿ ಜೀವ ಉಳಿಸಲು ಕೈಕೊಳ್ಳುವ ಕ್ರಿಯೆ. ಇಲ್ಲಿ ಇದು ತೀರ ತೋರಿಕೆಯ ’ಕೋಡ್ ಬ್ಲೂ’ ಆಗಿರುವುದರಿಂದ ಇದು ಹಾಲಿವುಡ್ ಕೋಡ್) ವೈದ್ಯಕೀಯ ಸಿಬ್ಬಂದಿಯ ಮೇಲೆ ನಾ ಕಾನೂನು, ರೋಗಿಯ ಆಯ್ಕೆ- ಎಲ್ಲವುಗಳ ಬಗ್ಗೆ ದೊಡ್ಡ ಉಪನ್ಯಾಸ ಕೊಡಬಹುದು. ಆದರೆ, ಎಲ್ಲರಿಗೂ ಗೊತ್ತಿರುವ ಅನಿವಾರ್ಯ ಅಂತ್ಯವನ್ನು ನಾನಂತೂ ತಪ್ಪಿಸಲಾರೆನಲ್ಲ. ಆದ್ದರಿಂದ ಎಷ್ಟೇ ಬಾರಿ ನಾ ಇದನ್ನು ಒಪ್ಪದಿದ್ದರೂ ಈ ನಾಟಕದ ಪಾತ್ರಧಾರಿಯಾಗದೇ ಉಳಿಯಲಾಗಿಲ್ಲ.

ಹಾಗೆಂದು ಈ ಸಾವುಗಳು ನನ್ನನ್ನು ವಿಚಲಿತಗೊಳ್ಳಿಸಿಲ್ಲವೆಂದಲ್ಲ. ನಮ್ಮ ಬಳ್ಳಾರಿಯ ಪೀಜೀಗಳು ಹೇಳುತ್ತಿದ್ದ ಮಾತು ನೆನಪಾಗುತ್ತದೆ. ರಾಂಗ್ ಪರ್ಸನ್ ಅಟ್ ದ ರಾಂಗ್ ಟೈಮ್ ಅಂಡ್ ರಾಂಗ್ ಪ್ಲೇಸ್. ಅಂದರೆ ಅಕಾಲ, ಅನಿರೀಕ್ಷಿತ ಮರಣಗಳಾದಾಗ ಎಷ್ಟೋ ದಿನ ನಿದ್ರೆ ಬಾರದೇ ಒದ್ದಾಡಿದ್ದೇನೆ. ಒಮ್ಮೆ ಒಬ್ಬ ೨೩ ವರ್ಷದ ಭಾರತೀಯ ವಿದ್ಯಾರ್ಥಿ ಅಪಘಾತದಿಂದ ತೀವ್ರವಾಗಿ ಗಾಯಗೂಂಡು ಆಸ್ಪತ್ರೆಗೆ ಭರ್ತಿಯಾಗಿದ್ದ. ಆಗ, ನಾನು ಅನಿವಾರ್ಯವಾಗಿ ಉತ್ತರಪ್ರದೇಶದಲ್ಲಿರುವ ಆತನ ಕುಟುಂಬದವರೊಂದಿಗೆ ದುಭಾಷಿಯಾಗಿ ಮಾತನಾಡುವ ಸಂದರ್ಭ ಬಂದಿತು. ’ಡಾಕ್ಟರ್ ಸಾಬ್, ವಹಾಂ ಹಮಾರಾ ಕೋಯೀ ನಹೀ ಹೈ. ಉಸ್ಕೋ ಕ್ಯಾ ಹೋ ರಹಾ ಹೈ ಯೆ ಭೀ ಹಮೆ ನಹೀ ಮಾಲೂಮ್. ಉಸ್ಕಾ ಖಯಾಲ್ ರಖ್‌ನಾ’ ಎಂದು ಆತನ ತಾಯಿ ನನ್ನ ಹತ್ತಿರ ಹೇಳಿದಾಗ ನಾನು ನನಗೆ ಬರುವ ಹಿಂದಿಯಲ್ಲಿ ಆಕೆಯನ್ನು ಸಮಾಧಾನ ಮಾಡುತ್ತಿದ್ದೆ. ನಂತರ ಆ ವಿದ್ಯಾರ್ಥಿ ಸತ್ತಾಗ ಆಕೆಗೆ ಆತ ಸತ್ತ ವಿಷಯವನ್ನೂ ನಾ ಕಷ್ಟಪಟ್ಟು ತಿಳಿಸಿದ್ದೆ. ನನ್ನ ಕೆಲಸದಲ್ಲಿ ಕಾಣುವ ಸಾವುಗಳಿಗೆ ಎಂದೂ ಅಳದ ನಾನು ಅಂದು ಆ ತಾಯಿಯ ಜತೆ ಮಾತಾಡುವಾಗ ಬಿಕ್ಕಿಬಿಕ್ಕಿ ಅತ್ತಿದ್ದೆ. ಆ ಹುಡುಗನಿಗೆ ಆದ ಅಪಘಾತದ ಗಾಯಗಳು ತೀವ್ರವಾಗಿದ್ದು ಆತ ಬದುಕುಳಿಯುವ ಸಾಧ್ಯತೆಗಳೇ ಇರಲಿಲ್ಲ. ಮತ್ತು ಅದೇ ವಯಸ್ಸಿನವರ ಎಷ್ಟೋ ಸಾವನ್ನು ನಾ ನೋಡಿದ್ದೇನೆ. ಆದರೆ ಈ ಸಾವು ನ್ಯಾಯವಲ್ಲ ಎನಿಸಿದ್ದು ಒಂದು ವಿಚಿತ್ರ. ಇದು ಅಕಾಲ ಸರಿ, ಆದರೆ ತಪ್ಪಾದ ಸಮಯಕ್ಕಿಂತ ತಪ್ಪಾದ ಜಾಗ, ದೇಶದಲ್ಲಾದ ಸಾವು ಎಂದು ನನಗೆ ದುಃಖವಾಗಿತ್ತು. ಅಮೆರಿಕಾದಲ್ಲಿ ಭಾರತೀಯರು ಸಾಯಬಾರದು ಎಂಬ ನನ್ನ ನಂಬಿಕೆ ಯಾವ ಹೊಸಾ ಭಾರತೀಯರ ನಂಬಿಕೆಗಿಂತ ಬೇರೆಯಾಗಿರಲಿಲ್ಲ. ಎಲ್ಲೋ ಓದಿದ ನೆನಪು ’ಬದುಕಲು ಬೇಕಾದ ಅಮೆರಿಕಾ ಭಾರತೀಯರಿಗೆ ಸಾಯಲು ಬೇಡ.’ ಈ ಬಗ್ಗೆ ನನಗೆ ಇನ್ನೂ ಒಂದು ನಿರ್ಧಾರಕ್ಕೆ ಬರಲಾಗಿಲ್ಲ.

***

ನಮ್ಮ ವಿಶಿಷ್ಟ ಸಂಪ್ರದಾಯಗಳು ನಮ್ಮನ್ನು ಕೆಲವೊಮ್ಮೆ ವಿಪರೀತವಾದ ಫಜೀತಿಗೆ ತಂದಿಟ್ಟುಬಿಡುತ್ತವೆ. ತೀರಿಕೊಂಡವರ ದೇಹವನ್ನು ಅಂತಿಮ ದರ್ಶನಕ್ಕಾಗಿ ಒಂದು ಕಡೆ ಇಡುವುದು ಭಾರತದಲ್ಲಿ ಒಂದು ಸಂಪ್ರದಾಯ. ಅಮೆರಿಕಾದಲ್ಲಿಯೂ ಈ ಸಂಪ್ರದಾಯವಿದೆ. (ಇದು ಓಪನ್ ಅಥವಾ ಕ್ಲೋಸ್ಡ್ ಕ್ಯಾಸ್ಕೆಟ್ ಆಗಿರಬಹುದು). ಪಾಕಿಸ್ತಾನದಲ್ಲಿ ಈ ಸಂಪ್ರದಾಯ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಮ್ಮೆ ಆಸ್ಪತ್ರೆಯಲ್ಲಿ ಪಾಕಿಸ್ತಾನ ಮೂಲದ ಮಹಮ್ಮದ್ ಅಲಿ ಎಂಬಾತನೊಬ್ಬ ಸತ್ತ. ಆತ ಸತ್ತ ಸ್ವಲ್ಪ ಹೊತ್ತಿಗೆ ಆತನನ್ನು ನೋಡಲೆಂದು ಬಂದ ಆತನ ಮಗ ಅಲಿಯನ್ನು ನೋಡಿಕೊಳ್ಳುತ್ತಿದ್ದ ನರ್ಸಿನ ಹತ್ತಿರ ’ಇಲ್ಲಿ ಇಂಟರ್ನೆಟ್ ಕನೆಕ್ಷನ್ ಇದೆಯಾ?’ ಎಂದು ಕೇಳಿದ್ದನಂತೆ. ಯಾಕೆ, ಏನು ಎಂದು ಕೇಳದೆ ಆಸ್ಪತ್ರೆಯ ವೈ ಫ಼ೈ ಪಾಸ್‌ವರ್ಡನ್ನು ಕೊಟ್ಟಿದ್ದಾಳೆ ಆಕೆ. ಕೊಂಚ ಹೊತ್ತಿನ ನಂತರ ಅಲಿಯ ರೂಮಿಗೆ ಹೋದಳು. ಅಲಿಯ ಮಗ ಒಬ್ಬ ಒಂದು ಟ್ರೈಪಾಡಿನ ಮೇಲೆ ಕ್ಯಾಮ್‌ಕೊರ್ಡರನ್ನು ಇರಿಸಿ ಅದನ್ನು ಲ್ಯಾಪ್‌ಟಾಪಿಗೆ ಸಿಕ್ಕಿಸಿ ಅಲಿಯ ಮುಖವನ್ನು ಜ಼ೂಮ್ ಇನ್, ಜ಼ೂಮ್ ಔಟ್ ಮಾಡುತ್ತಿದ್ದನಂತೆ. ಈಕೆಗೆ ಏನಾಗುತ್ತಿದೆ ಎಂದು ಅರ್ಥವಾಗಿಲ್ಲ. ರೂಮಿಗೆ ಹೋದಾಗ ಆಕೆಗೆ ಮೊದಲು ಕಾಣಿಸಿದ್ದು ಹದಿನಾರಿಂಚಿನ ಸ್ಕ್ರೀನಿನಲ್ಲಿ ಕಾಣಿಸುತ್ತಿರುವ ಮಹಮ್ಮದ್ ಅಲಿಯ ಮುಖ. ಆಕೆಗೆ ಗೊಂದಲವಾದರೂ ಅದನ್ನು ತೋರಿಸಿಕೊಳ್ಳದೇ ಅಲಿಯ ಮಗನನ್ನು ನೋಡಿದಳಂತೆ. ಆತ, ಪಕ್ಕದಲ್ಲಿದ್ದ ಅಪ್ಪನ ಮುಖ ನೋಡದೇ ಕಂಪ್ಯೂಟರಿನ ಸ್ಕ್ರೀನಿನಲ್ಲಿದ್ದ ಅಲಿಯ ಮುಖ ನೋಡುತ್ತಿದ್ದನಂತೆ.

ಸೆಪ್ಟೆಂಬರ್ ೧೧ರ ನಂತರ ಮಹಮ್ಮದ್, ಅಹಮದ್, ರಜ಼ಾಕ್ ಎಂಬ ಹೆಸರುಗಳ ಬಗ್ಗೆ ಕೊಂಚ ಹೆಚ್ಚಾಗೇ ಸೂಕ್ಷ್ಮವಾಗಿರುವ ಅಮೆರಿಕನ್ ಮನಸ್ಸಿಗೆ ಇದು ನಾನಾ ಅರ್ಥಗಳನ್ನು ಉಂಟುಮಾಡಿದೆ. ಆಕೆ ಬಂದು ನನ್ನ ಹತ್ತಿರ ’ನಾವೀಗಲೇ ಪೋಲೀಸನ್ನು ಕರೆಸಬೇಕು’ ಎಂದಳು. ನಾನು ’ಏಕೆ?’ ಎಂದು ಕೇಳಿದಾಗ ಆಕೆ ’ಮಹಮದ್ ಅಲಿ ಸತ್ತು ಇನ್ನೂ ಹತ್ತು ನಿಮಿಷವಾಗಿಲ್ಲ. ಆತನ ಸಾವಿನ ಸುದ್ದಿ ಇಂಟರ‍್ನೆಟ್ಟಿನಲ್ಲಿ ಇದೆ.’ ಎಂದು ನನ್ನ ಹತ್ತಿರ ಬಂದು ಕಿವಿಯಲ್ಲಿ ’ಈತ ದೊಡ್ಡ ವ್ಯಕ್ತಿ ಇರಬಹುದು, ಯು ನೋ’ ಎಂದಳು, ಕಣ್ಣು ಮಿಟುಕಿಸಿ. ನಾನು ಇಲ್ಲೇನೋ ಎಡವಟ್ಟಾಗಿದೆ ಎಂದುಕೊಂಡು ಹೋಗಿ ಅಲಿಯ ಮಗನನ್ನು ವಿಚಾರಿಸಿದಾಗ ಆತ ತನ್ನ ಲ್ಯಾಪ್‌ಟಾಪಿನಲ್ಲಿ ಸ್ಕೈಪ್ ಮೂಲಕ ಅಲಿಯ ಮುಖವನ್ನು ಇಸ್ಲಾಮಾಬಾದಿನಲ್ಲಿದ್ದ ಆತನ ಕುಟುಂಬದವರಿಗೆ ಕೊನೆಯ ಬಾರಿಗೆ ತೋರಿಸುತ್ತಿರುವ ವಿಷಯವನ್ನು ಹೇಳಿದ. ನಾನು ಆ ನರ್ಸು ಮತ್ತು ಆಸ್ಪತ್ರೆಯಲ್ಲಿನ ಇನ್ನಿತರ ಸಿಬ್ಬಂದಿಯನ್ನು ಕರಕೊಂಡು ಹೋಗಿ ಮಹಮದ್ ಅಲಿಯ ಮಗ ಆತನ ಪಾಕಿಸ್ತಾನದ ವಿಸ್ತೃತ ಕುಟುಂಬಕ್ಕೆ ಮಾಡಿಸುತ್ತಿರುವ ಅಂತಿಮ ದರ್ಶನದ ಬಗ್ಗೆ ವಿವರವಾಗಿ ತಿಳಿಸಿ, ಸತ್ತಿದ್ದ ಮಹಮದ್ ಅಲಿಯನ್ನು ಉಗ್ರವಾದಿಯಾಗುವುದರಿಂದ ಬಚಾವ್ ಮಾಡಿದೆ.

ಇನ್ನೊಮ್ಮೆ ಧಾರವಾಡದ ನರಹರಿರಾಯರೆಂಬುವವರ ಶ್ರೀಮತಿ ಪರಿಮಳಾಬಾಯಿ ಎನ್ನುವವರು ಆಸ್ಪತ್ರೆಗೆ ಭರ್ತಿಯಾಗಿದ್ದರು. ನರಹರಿರಾಯರ ತಲೆಯ ಚಂಡಿಕೆ, ಆಕೆಯ ಕಚ್ಚೆ ಸೀರೆ, ಕೈ ಮೇಲೆ ಇನ್ನೂ ಹಸಿಯಾಗಿ ಕಾಣಿಸುತ್ತಿರುವ ತಪ್ತಮುದ್ರೆ ಎಲ್ಲವನ್ನೂ ನೋಡಿ ಇವರು ಸಾಗರೋಲ್ಲಂಘನ ಹೇಗೆ ಮಾಡಿದ್ದಾರೆ ಎಂದು ನನಗೆ ಆಶ್ಚರ್ಯವಾಯಿತು. ಇರಲಿ, ಪರಿಮಳಾಬಾಯಿಯವರ ಪರಿಸ್ಥಿತಿ ಗಂಭೀರದಿಂದ ಇನ್ನೂ ಬಿಗಡಾಯಿಸಿ ಉಸಿರಾಟಕ್ಕೆ ತೊಂದರೆಯಾಗಿ ಕೃತಕ ಉಸಿರಾಟದ ಯಂತ್ರವನ್ನು ಅಳವಡಿಸಬೇಕಾಗಿ ಬಂತು. ಕನ್ನಡ ಮಾತಾಡುತ್ತಿದ್ದ ನನ್ನ ನೋಡಿ ನರಹರಿರಾಯರಿಗೆ ಬಹಳ ಖುಷಿಯಾಗಿತ್ತು. ಅವರ ನಾಲ್ಕು ಜನ ಮಕ್ಕಳೂ ಅಮೆರಿಕಾದಲ್ಲಿಯೇ ಇದ್ದುದ್ದರಿಂದ ನರಹರಿರಾಯರು ನಿರ್ವಾಹವಿಲ್ಲದೇ ಅಮೆರಿಕಾಕ್ಕೆ ಬರಲೇಬೇಕಾಯಿತಂತೆ. ನಾನು ಹೋಗಿ ಪರಿಮಳಾಬಾಯಿಯವರ ಪರಿಸ್ಥಿತಿಯನ್ನು ವಿವರವಾಗಿ ತಿಳಿಸಿ, ಅವರಿಗೆ ಕೃತಕ ಉಸಿರಾಟದ ಯಂತ್ರವನ್ನು ಅಳವಡಿಸಬೇಕಾಗಿರುವುದರಿಂದ ಬಾಯೊಳಗೆ ಒಂದು ಪ್ಲಾಸ್ಟಿಕ್ ನಾಳವನ್ನು ಹಾಕಬೇಕಾಗಿದೆಯೆಂದೂ, ಅವರಿಗೆ ನಿದ್ರೆ ಬರುವ ಔಷಧಿಗಳನ್ನು ಕೊಡುತ್ತೇವೆಂದೂ ನರಹರಿರಾಯರು ಪರಿಮಳಾಬಾಯಿಯವರಿಗೆ ಪ್ರಜ್ಞೆಯಿದ್ದಾಗಲೇ ಹೋಗಿ ಒಮ್ಮೆ ಮಾತಾಡಿಸಿ ಬರುವುದು ಒಳ್ಳೆಯದು ಎಂದು ಸೂಕ್ಷ್ಮವಾಗಿ ಹೇಳಿದೆ.

ನರಹರಿರಾಯರಿಗೂ ತಮ್ಮ ಶ್ರೀಮತಿಯವರ ಪರಿಸ್ಥಿತಿ ಅರ್ಥವಾಗಿರಬೇಕು. ನನ್ನ ಹತ್ತಿರ ಬಂದು ’ನೋಡಪ, ನೀ ನನ್ನ ಮಗ ಇದ್ದ ಹಾಗಿದ್ದೀ. ನಿನ್ನ ಬಳಿ ಒಂದೇ ಒಂದು ಕೇಳಕೋತೀನಿ. ಇಲ್ಲೀಗ ಬರೂಮುಂದ ನಾವ್ ಕಾಶೀಗೆ ಹೋಗಿದ್ದೆವು. ಅಲ್ಲಿಂದ ಗಂಗಾಜಲ ತಂದೀವಪ್ಪ. ವಿಮಾನದಾಗ ಎಲ್ಲರ ಕಣ್ತಪ್ಪಿಸಿ ಇಲ್ಲೀತನಕ ತಗಂಬಂದೀವಿ. ಆಕಿ ಉಳಿಯೋ ಭರವಸಾ ನಂಗಂತ ಇಲ್ಲ. ಆಕೀಗ ಇವೆಲ್ಲ ಬೇಕಿತ್ತ ಇಲ್ಲ ಅನ್ನೂದು ನಮಗ್ಗೊತ್ತಿಲ್ಲ. ನೀ ಆಕೀ ಬಾಯೊಳಗ ಉಸಿರಾಟಕ್ಕ ಟ್ಯೂಬ್ ಹಾಕಿದ್ರೂ ನಂತರ ನಾ ಈ ಗಂಗಾಜಲ ಹಾಕೂಕೆ ಬರ್ತದೆ ಹೌದೋ ಅಲ್ಲೋ’ ಎಂದು ಕೇಳಿದರು. ನಾನು ಯಾವುದೋ ಧ್ಯಾನದಲ್ಲಿ ’ಅಲ್ಲಿಯತನಕ ಯಾಕೆ ಕಾಯುತ್ತೀರಿ. ಈಗಲೇ ಬನ್ನಿ ನಾನೇ ನಿಮ್ಮ ಕೈಯಾರೆ ಹಾಕಿಸ್ತೀನಿ’ ಎಂದು ಒಳಗೆ ಕರಕೊಂಡು ಹೋದೆ. ಇನ್ನೇನು ಒಂದೆರಡು ತೊಟ್ಟು ಗಂಗಾಜಲವನ್ನು ರಾಯರು ತಂದಿದ್ದ ತಾಲಿಯಿಂದ ಹಾಕಬೇಕು ಅನ್ನುವಷ್ಟರಲ್ಲಿ ನನ್ನ ನರ್ಸ್ ಬಂದು ’ನಥಿಂಗ್ ಬೈ ಮೌತ್. ಯು ನೋ, ಶೀ ಈಸ್ ಗೋಯಿಂಗ್ ಟು ಬೀ ಆನ್ ವೆಂಟಿಲೇಟರ್’ ಎಂದು ಆಸ್ಪತ್ರೆಯ ಪ್ರೋಟೋಕಾಲುಗಳ ಸರಣಿಯನ್ನೇ ನನ್ನ ಮುಂದೆ ಹಿಡಿದಳು. ನಿರ್ವಾಹವಿಲ್ಲದೇ ನಾ ಸುಮ್ಮನಾದೆ. ಕಡೆಗೂ ಪರಿಮಳಾಬಾಯಿ ಎಚ್ಚರವಿದ್ದಾಗ ನರಹರಿರಾಯರು ಗಂಗಾಜಲವನ್ನು ಆಕೆಯ ಬಾಯೊಳಗೆ ಹಾಕಲಾಗಲೇ ಇಲ್ಲ. ಆಕೆಯನ್ನು ವೆಂಟಿಲೇಟರ‍್ಗೆ ಹಾಕಿದ ಮೇಲೆ ನಾನು ನರಹರಿರಾಯರನ್ನು ಒಳಗೆ ಕರಕೊಂಡು ಹೋಗಿ ಯಾರಿಗೂ ಕಾಣದ ಹಾಗೆ ಎರಡು ಹನಿ ಗಂಗಾಜಲವನ್ನು ಪರಿಮಳಾಬಾಯಿಯವರ ಬಾಯಿಯ ಬದಿಯಲ್ಲಿ ಹಾಕಿಸಿ ಅವರ ಕಡೆಂii ಆಸೆಯನ್ನು ಪೂರ್ತಗೊಳಿಸಿದೆ.

***

ಜೀವ ಉಳಿಸುವ ಕೆಲಸದಲ್ಲಿರುವ ನಾನು ಈ ಸಾವುಗಳಿಂದ ಕಲಿತಿರುವುದು ಜೀವ ಉಳಿಸಿರುವುದರಿಂದ ಕಲಿತಿರುವುದಕ್ಕಿಂತಾ ಹೆಚ್ಚು. ಎಷ್ಟೋ ಬಾರಿ ನನ್ನಿಂದಲೇ ಈ ಜೀವ ಉಳಿದಿದೆ ಎಂದು ವಿನಮ್ರನಾಗಿ ಒಪ್ಪಿಕೊಂಡಿದ್ದರೂ ಅದು ಎಲ್ಲೋ ಒಂದು ಕಡೆ ನನ್ನ ಇಗೋವನ್ನು ಹೆಚ್ಚಿಸುವುದರ ಪರಿ ವಿಚಿತ್ರ ಆದರೆ ಅನುಮಾನಾತೀತ. ಆದರೆ, ನನ್ನ ಶುಷ್ರೂಶೆಯಲ್ಲಿದ್ದ ಒಬ್ಬ ರೋಗಿ ಸತ್ತಾಗ ಆಗುವ ಮೊದಲ ಭಾವ ಸೋಲು. ಈ ಸೋಲನ್ನು ನಾನು ಅನಿವಾರ್ಯವಾಗಿ ಮೀರಲೇ ಬೇಕಾಗಿದೆ. ಇಲ್ಲದಿದ್ದಲ್ಲಿ ದಿನಾ ಕಾಣುವ ಈ ಸೋಲಿನಿಂದ ಆತ್ಮಸ್ಥೈರ್ಯ ಉಡುಗಿ ಈ ಕೆಲಸವನ್ನೇ ಮಾಡಲಾಗದೇ ಇರಬಹುದು. ಆದ್ದರಿಂದಲೇ ನನ್ನಂಥ ಕೆಲಸದಲ್ಲಿರುವವರಿಗೆ ಈ ಸಾವು ಎನ್ನುವುದು ಒಂದು ಲಹರಿಯಾಗಿಬಿಡುತ್ತದೆ. ಅದು ಸೋಲಲ್ಲ, ಇಂಥ ಸಾವಿಂದ ನಾ ಅಳುಕಿಲ್ಲ ಎಂದು ನನಗೆ ನಾನೇ ಹೇಳಿಕೊಳ್ಳಲು ಯಾರಾದರೂ ಸತ್ತನಂತರ ಕೈ ಒರೆಸಿಕೊಳ್ಳದೆ ಪೀಟ್ಜಾ ತಿನ್ನುವ ಡಿಫ಼ೆನ್ಸಿವ್ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀವೇನೋ.

ಒಂದು ಮಾತ್ರ ನಿಜ. ನನ್ನ ಹೆಸರನ್ನು ಕೂಡ ಉಚ್ಚರಿಸಲು ಬರದ ರೋಗಿಗಳ ಜೀವಗಳು ನನ್ನ ಕೈಯಾರೆ ಉಳಿದಾಗ ’ಡಾ. ಕೇ. ಥ್ಯಾಂಕ್ ಯು’ ಎಂದು ಮನೆಗೆ ಹೋಗುವ ಮುಂಚೆ ಕೈಕುಲುಕಿದಾಗ ಆಗುವ ಪುಲಕವೇ ನನ್ನನ್ನು ಈ ಕೆಲಸದಲ್ಲಿ ಇನ್ನೂ ಮುಂದುವರಿಯುವಂತೆ ಮಾಡುತ್ತಿರುವುದು. ಹಾಗೆ ಉಳಿದ ರೋಗಿಗಳು ನನ್ನ ಕಣ್ಣ ಮುಂದೆ ಶಿಲೆಗಳಂತೆ ಅಚಲ ಪ್ರತಿಮೆಗಳಾಗಿ ಉಳಿದು ನನಗೇನಾದರೂ ಆದಲ್ಲಿ ಉಳಿದರೆ ಹೇಗೆ ಉಳಿಯಬೇಕು, ಹೋದರೆ ಹೇಗೆ ಹೋಗಬೇಕು ಎಂಬುದನ್ನು ಕಲಿಸಿಕೊಟ್ಟಿರುವ ಗುರುಗಳಾಗಿದ್ದಾರೆ.

(ಅಮೆರಿಕದ ಕನ್ನಡ ಸಾಹಿತ್ಯರಂಗ ಪ್ರಕಟಿಸಿರುವ ‘ಮಥಿಸಿದಷ್ಟೂ ಮಾತು’ನಲ್ಲಿ ಪ್ರಕಟವಾದದ್ದು)

 Posted by at 12:02 PM