admin

Mar 032012
 

ಒಂದು ಸ್ಪಂದನ…

ಹಿರಿಯ ಗೆಳೆಯ ನಾಗ ಐತಾಳರ ಮೊದಲ ಕಾದಂಬರಿ ‘ತಲೆಮಾರ ಸೆಲೆ’ ಕಾದಂಬರಿಯನ್ನು ಓದಿಯಾದ ನಂತರ ನನ್ನ ಮೊದಲ ಓದಿಗೆ ದಕ್ಕಿದ್ದನ್ನು ಐತಾಳರ ಬಳಿ ಹಂಚಿಕೊಂಡಿದ್ದೆ. ಅದನ್ನೇ ಮುನ್ನುಡಿಯಾಗಿ ಬರೆದುಕೊಡಿ ಎಂದು ಐತಾಳರು ನನ್ನನ್ನು ಪ್ರೀತಿಪೂರ್ವಕವಾಗಿ ಒತ್ತಾಯಿಸಿದಾಗ, ಅದನ್ನೇ ಸ್ವಲ್ಪ ತಿದ್ದಿ ಓದುಗರ ಜತೆ ಹಂಚಿಕೊಳ್ಳುವ ಪ್ರಯತ್ನವನ್ನು ಮಾಡುತ್ತಿದ್ದೇನೆ. ಇದನ್ನು ಮುನ್ನುಡಿಯೆನ್ನುವುದಕ್ಕಿಂತ ಒಂದು ಪ್ರತಿಕ್ರಿಯೆ ಎಂದು ಕರೆಯುವುದು ಸಾಧುವೇನೋ? ಇದನ್ನು ನಾನು ಪ್ರತಿಕ್ರಿಯೆ ಎಂಬ ಉದ್ದೇಶದಿಂದ ಬರೆದಿದ್ದಾದರಿಂದ ಕಾದಂಬರಿ ಓದಿದ ಮೇಲೆ ನನ್ನ ಈ ಮಾತನ್ನು ಓದಿದಲ್ಲಿ ಹೆಚ್ಚು ಅರ್ಥಪೂರ್ಣವಾಗಬಹುದು.

ಮೊಟ್ಟಮೊದಲಿಗೆ ನನಗನಿಸಿದ್ದು ಈ ಕಾದಂಬರಿ ಬಹಳ ಮಹತ್ವಾಕಂಕ್ಷೆಯನ್ನುಳ್ಳದ್ದಾಗಿದೆ. ಮೂರು ಅಥವಾ ಇನ್ನೂ ಹೆಚ್ಚಿನ ಪೀಳಿಗೆಗಳ ಸಂವೇದನೆಗಳನ್ನು ದೇಶ ಕಾಲಾಂತರದ ಪ್ರವಾಹಕ್ಕೆ ಒಡ್ಡಿ ಪರೀಕ್ಷಿಸುವುದು ಒಂದು ಸುಲಭವಾದ ಸವಾಲಲ್ಲ. ಅಂತಹ ಸವಾಲಿಗೆ ಶ್ರೀ ನಾಗ ಐತಾಳರು ತಮ್ಮನ್ನು ತಾವೇ ಒಡ್ಡಿಕೊಂಡಿದ್ದಾರೆ. ಇಂತಹ ಸವಾಲಿನಲ್ಲಿ ಯಶಸ್ಸು ಎಂಬುದಕ್ಕೆ ಅರ್ಥ ನಾನಾ ಮಟ್ಟದಲ್ಲಿ ಹುಟ್ಟಬಹುದು. ಬರಹಗಾರನಿಗೆ ಇಂಥಹ ಒಂದು ಕಾದಂಬರಿಯನ್ನು ಬರೆದು ಮುಗಿಸುವುದೇ ಯಶಸ್ಸಾದಲ್ಲಿ, ಯಾವ ಅಡೆತಡೆಗಳಿಲ್ಲದೇ ಒಂದೇ ಏಟಿಗೆ ಓದಿ ಮುಗಿಸುವುದು ಓದುಗನ ಯಶಸ್ಸು. (ಗಮನಿಸಿ, ಈ ಕಾದಂಬರಿಯನ್ನು ಬರೆದಿರುವುದು ನಮ್ಮ ಓದುಗರ ಧ್ಯಾನಸ್ಥ ಸ್ಥಿತಿ ಎನ್ನುವುದು ಎಸ್ಸೆಮ್ಮೆಸ್‌ಗೆ ಓಕೆ, ಅಥವಾ ಕಂಪ್ಯೂಟರಿನ ಚ್ಯಾಟ್ ಬಾಕ್ಸುಗಳಲ್ಲಿ ಮುಗುಳ್ನಗೆಯ ಮುಖವನ್ನು ಟೈಪಿಸುವುದಕ್ಕಷ್ಟೇ ಮಿತಿಯಾಗಿರುವ ೨೦೧೧ರಲ್ಲಿ). ಇಂಥ ಒಂದು ಸಾಹಸಕ್ಕೆ ಪ್ರಯತ್ನಪಟ್ಟ ಐತಾಳರ ಧೈರ್ಯಕ್ಕೆ ನಾನು ಮೊಟ್ಟಮೊದಲು ಅಭಿನಂದನೆ ಸಲ್ಲಿಸುತ್ತೇನೆ.

ದೇಶದಿಂದ ಹೊರಗಿದ್ದು ಬರೆಯುವವರ ಬರವಣಿಗೆಗೆ ಒಂದು ಸಾಮಾನ್ಯವಾದ ಗುಣವಿರುತ್ತದೆ ಎಂಬುದು ಒಂದು ನಂಬಿಕೆ. ಅದರಲ್ಲಿ ಬಹಳ ಮುಖ್ಯವಾದದ್ದು ಬಾಲ್ಯದ ನೆನಪುಗಳು. ಅದನ್ನು ಬಿಟ್ಟರೆ ಹುಟ್ಟಿ ಬೆಳೆದ ನಾಡನ್ನು ತೊರೆದು, ಬೇರೆ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಲು ಪಡುವ ಬವಣೆ, ಹೊಸ ಸಂಸ್ಕೃತಿಯಲ್ಲಿ ಬೆಳೆವ ಮಕ್ಕಳು, ಎರಡು ಸಂಸ್ಕೃತಿಗಳಲ್ಲಿನ ಭಿನ್ನತೆ, ಸಾಮ್ಯ, ಎಲ್ಲ ಅನುಭವಿಸಿಯಾದ ಮೇಲೆ ಕೊನೆಗೆ ‘ಲೈಫ಼ು ಇಷ್ಟೇನೆ’ ಎನ್ನುವ ವಾನಪ್ರಸ್ಥದ ವೈರಾಗ್ಯ ಪರ್ವ, ಮಧ್ಯೆ ಮಧ್ಯೆ ಬದುಕಿನಲ್ಲಿ ಕಷ್ಟಗಳು ಬಂದಾಗ, ಒಂಟಿತನ ಕಾಡಿದಾಗ ‘ಭಾರತದಲ್ಲಿದ್ದರೆ ಹೀಗಾಗುತ್ತಿರಲಿಲ್ಲ’ ‘ಅಯ್ಯೋ ಇದಕ್ಕಾಗಿ ಇಲ್ಲಿಗೆ ಎಲ್ಲವನ್ನೂ ಬಿಟ್ಟು ಬಂದವಾ’ ಎಂಬ ಭ್ರಮನಿರಸನ, ಇತ್ಯಾದಿ- ಈ ವಸ್ತುಗಳನ್ನು ನಿಭಾಯಿಸಿರುವ ಕಾದಂಬರಿಗಳು ಬಹಳಷ್ಟಿವೆ. ಇಲ್ಲಿ ಭಿನ್ನತೆ, ಸಂಸ್ಕೃತಿಗಳ ಕರ್ಷಣೆ, ವೈರಾಗ್ಯಗಳ ಕುರಿತ ಬರಹಗಳನ್ನು ಒಪ್ಪುವ ಸಹೃದಯ ಓದುಗರು ಮತ್ತು ಕ್ರಿಟಿಕಲ್ ವಿಮರ್ಶಕರು, ಅನಿವಾಸಿಗಳ ಬಾಲ್ಯದ ನೆನಪುಗಳನ್ನು, ಭ್ರಮನಿರಸನಗಳನ್ನು ಒಂದು ಮಟ್ಟದಲ್ಲಿ ತಿರಸ್ಕರಿಸುತ್ತಾ ಬಂದಿದ್ದಾರೆ. ಹಳವಂಡ, ಕನವರಿಕೆಗಳು ಬಂದಾಗೆಲ್ಲ ‘ಈ ಎನ್ ಆರ್ ಐ ಗಳದ್ದೇ ಇಷ್ಟು’ ‘ಇಷ್ಟು ದೇಶದ ಮೇಲೆ ಇಷ್ಟವಿದ್ದವರು ದೇಶ ಬಿಟ್ಟು ಹೋದದ್ದಾದರೂ ಏಕೆ?’ ಎಂಬ ಪ್ರತಿಕ್ರಿಯೆಗಳು ಬಂದಿವೆ. ಹಾಗೆಯೆ ಈ ಬರಹಗಾರರ ಭ್ರಮನಿರಸನ ವಾಚ್ಯವಾಗುವುದು ಬೇರೆ ಬೇರೆ ರೀತಿ. ಅದು ಉಧೋ ಎಂದು ತೋಡಿಕೊಳ್ಳುವ ದುಃಖವಾಗಬಹುದು, ಹೃದಯ ಕರಗಿಸುವ ವ್ಯಥೆಯಾಗಬಹುದು, ಬೇಸತ್ತು ವಾಪಸಾಗಿ ಭಾರತದ ಜೀವನಶೈಲಿಯನ್ನು ಒಪ್ಪಿಕೊಳ್ಳುವ ಸಂತನ ಸಮಾಧಾನವಿರಬಹುದು ಅಥವಾ ಅಲ್ಲಿಯೂ ಸಲ್ಲದವನ ಹಪಾಪಿಯಿರಬಹುದು. ಉಳಿಯಬೇಕಾದ ಅನಿವಾರ್ಯತೆ ಹೆಚ್ಚಾದಲ್ಲಿ ಈ ಅಭಿವ್ಯಕ್ತಿ ವ್ಯವಸ್ಥೆಯನ್ನು ಒಪ್ಪಿಕೊಂಡ ನಾಲ್ಕನೇ ಆಯಾಮದ ವಕ್ರಕೋನದ ಮೊನಚಾದ ವ್ಯಾಂಗ್ಯಿಕ ರೂಪವನ್ನೂ ಪಡೆದುಕೊಳ್ಳಬಹುದು. ಈ ಕಡೆಯ ಪ್ರಯತ್ನ ಬಹಳ ಅಪಾಯಕಾರಿಯಾದದ್ದು. ಇದನ್ನು ಪದೇ ಪದೇ ಪ್ರಯತ್ನಿಸಿದ ರಶ್ದಿ, ಹರಿ ಕುಂಜ಼್ರು, ಅರವಿಂದ ಅಡಿಗ (ಅರವಿಂದ ಅಡಿಗ ಭಾರತದಲ್ಲಿದಾರೆ ಎಂದು ಅರಿವಿದ್ದೂ ಈ ಮಾತನ್ನು ಹೇಳುತ್ತಿದ್ದೇನೆ) ಮುಂತಾದವರು ಅಟ್ಲಾಂಟಿಕ್‌ನ ಎರಡೂ ಬದಿಯ ಓದುಗರ ವಿರೋಧ ಕಟ್ಟಿಕೊಳ್ಳುತ್ತಾರೆ. ರಶ್ದೀಯಂಥವರ ಅನನ್ಯ ಶೈಲಿಯಿಂದ ಆತ ಕಟ್ಟಿಕೊಂಡ ನಿಷ್ಟ ಓದುಗ ಬಳಗ ಆತನ ಪುಸ್ತಕಗಳನ್ನು ಇನ್ನೂ ಬೆಸ್ಟ್ ಸೆಲ್ಲರ‍್ಗಳಾಗಿ ಮಾಡಿವೆ.
ಈ ಮಾತನ್ನು ನಾನು ಯಾಕೆ ಹೇಳುತ್ತಿದ್ದೇನೆ ಎಂದರೆ ಭಾರತದಲ್ಲಿದ್ದವರು ಭಾರತದಲ್ಲಿನ ವಸ್ತುಸ್ಥಿತಿ ಕುರಿತು ಬರೆದಲ್ಲಿ ಅವರು ಕ್ರಿಟಿಕಲ್ ಇನ್‌ಸೈಡರ್ ಗಳಾಗುತ್ತಾರೆ. ಅನಿವಾಸಿಗಳು ತಮ್ಮ ಭೌತಿಕ ಅನುಪಸ್ಥಿತಿಯ ಕಾರಣದಿಂದ ಭಾರತದ ರಾಜಕೀಯ, ಸಾಮಾಜಿಕ ಮತ್ತು ಸಾಂಸ್ಕೃತಿಕ ಸ್ಥಿತಿಗತಿಯ ಮೇಲೆ ಟೀಕೆ ಟಿಪ್ಪಣಿ ಮಾಡುವ ಹಕ್ಕನ್ನು ನೈತಿಕವಾಗಿ ಕಳೆದುಕೊಂಡಿದ್ದಾರೆ ಎನ್ನುವ ಒಂದು ವಾದ ಬರಹಗಾರರಿಗೂ, ಓದುಗರಿಗೂ ಮತ್ತು ವಿಮರ್ಶಕರಿಗೂ ‘ಡೋಂಟ್ ಆಸ್ಕ್ ಡೋಂಟ್ ಟೆಲ್’ ಮಟ್ಟದಲ್ಲಿ ನಿಜ. ಹೀಗಾಗಿ ಚಿತ್ತಾಲರು ಹೇಳುವ ಕಥಾಲೋಕದ ಕ್ಯಾನ್‌ವಾಸನ್ನು ಈ ಬರಹಗಾರರು ಅನಿವಾರ್ಯವಾಗಿ ಕಟ್ಟಿಕೊಳ್ಳಬೇಕಾಗುತ್ತದೆ. ಆದರೆ, ಆ ಕ್ಯಾನ್‌ವಾಸ್ ಅನಿವಾರ್ಯವಾಗಿ ವಿಶಾಲವಾಗಿದೆ. ಅದರ ಸರಹದ್ದುಗಳು ಮಸುಕಾಗಿವೆ. ಆದರೆ ಇವ್ಯಾವುಗಳ ಮೇಲೂ ಇವರ ಹತೋಟಿಯಿಲ್ಲ. ಅಲ್ಲಿರುವ ನೆನಪುಗಳು, ಪ್ರತಿಮೆಗಳನ್ನು ಎಷ್ಟು ಪರಿಣಾಮಕಾರಿಯಾಗಿ ಈ ಬರಹಗಾರರು ಉಪಯೋಗಿಸಿಕೊಳ್ಳುತ್ತಾರೆ, ಅದು ಯಾರ್ಯಾರಿಗೆ ಎಷ್ಟರಮಟ್ಟಿಗೆ ಒಲಿಯುತ್ತದೆ ಎನ್ನುವುದು ಅವರವರ ಅದೃಷ್ಟ.

* * *
ಐತಾಳರ ಕಾದಂಬರಿಯೂ ಈ ಎಲ್ಲ ಗುಣಗಳಿಂದ ಹೊರತಾಗಿಲ್ಲ. ಕಾದಂಬರಿಯ ನಿರೂಪಣೆ ಸರಳವಾಗಿರುವುದರಿಂದ ಸುಲಲಿತವಾಗಿ ಓದಿಸಿಕೊಂಡು ಹೋಗುತ್ತದೆ. ಶೀರ್ಷಿಕೆಯೇ ಹೇಳುವಂತೆ ವಂಶಾವಳಿಯ ಸೆಲೆ ಕೊಕ್ಕೋಡಿನಿಂದ ಲಾಸ್ ಏಂಜಲೀಸ್ ನವರೆಗೆ ಹರಿದುಬರುತ್ತದೆ. ಕಾದಂಬರಿಯ ಮೊದಲ ಅಧ್ಯಾಯಗಳ ನಿರೂಪಣೆಯಂತೂ ಬಹಳವೇ ಸೊಗಸಾಗಿ ಬಂದಿದೆ. ಸುಮತಿಯ ಮೇಲಿನ ಸಿಂಗಾರಮ್ಮನವರ ಹಿಡಿತ, ಮಗಳ ವಿದ್ಯೆಗಾಗಿ ಸುಬ್ರಾಯಭಟ್ಟರ ಒತ್ತಾಸೆ, ಸೋಮಯಾಜಿಗಳ ಜ್ಯೋತಿಷ್ಯ, ಸುಮತಿಗೆ ಬರುವ ಸಂಬಂಧದ ವಿವರಗಳು,ವಿಶ್ವೇಶ್ವರನ ಸಂಬಂಧ ಮತ್ತು ಅದು ಮುರಿದು ಬೀಳುವ ಪರಿ- ಎಲ್ಲ ಸುಲಲಿತವಾಗಿ ಓzಸಿಕೊಂಡು ಹೋಗುತ್ತವೆ.
ಎಲ್ಲ ಮಧ್ಯಮವರ್ಗದ ಕುಟುಂಬದಂತೆ ದೈವ, ದೈನಂದಿನ ಏರುಪೇರು, ಅಲ್ಲಲ್ಲಿ ಉಪನದಿಗಳಂತೆ ಬಂದು ಸೇರುವ ವಂಶಾವಳಿ, ಕೊಂಚ ಇರುಸುಮುರುಸು, ಕೊಂಚ ಖುಷಿ- ಹೀಗೆ ಎಲ್ಲವೂ ಸಹಜವಾಗಿ ನಡೆದುಕೊಂಡು ಹೋಗುತ್ತಿದ್ದ ಸಂಸಾರದ ಸ್ಥಿತಿ ಪ್ರಭಾಕರ, ಸುಮತಿ ಅಮೆರಿಕಾಕ್ಕೆ ಬರುವುದರ ಮೂಲಕ ಬೇರೆಯೇ ಒಂದು ಗತಿಯನ್ನು ಪಡೆಯುತ್ತದೆ. ಎರಡೂ ಸಂಸಾರದ ಎಲ್ಲ ಕಾರ್ಯಗಳು, ನಡಾವಳಿಗಳು ಈ ಪ್ರಭಾಕರ, ಸುಮತಿಯರ ಅಮೆರಿಕಾ ವಲಸೆಯೊಂದಿಗೆ ಪೂರಾ ಬದಲಾಗುತ್ತದೆ. ಒಂದು ಸಂಸಾರದಲ್ಲಿ ಒಂದು ಜೋಡಿ ದೇಶ ಬಿಟ್ಟು ಹೋಗುವುದು ಮತ್ತು ಆ ಪ್ರಕ್ರಿಯೆಗೆ ಹೊಂದಿಕೊಳ್ಳುವುದು ಬರೇ ಆ ಜೋಡಿಗಷ್ಟೇ ಸೀಮಿತವಾಗದೇ, ಸಂಸಾರದ ಎಲ್ಲರ ಜವಾಬ್ದಾರಿಯಾಗುತ್ತದೆ. ಮುಂದಿನ ಘಟನೆಗಳು ಪ್ರಭಾಕರ, ಸುಮತಿ ಅಮೆರಿಕಾದಲ್ಲಿ ನೆಲೆ ಕಂಡುಕೊಳ್ಳುವುದರ ವಿಸ್ತೃತ ಚಿತ್ರಣ. ಘಟನೆಗಳು ಸಾಮಾನ್ಯವಾಗಿ ಅಮೆರಿಕಾದಲ್ಲಿ ನೆಲಸಿರುವವರ ಮನೆಯಲ್ಲಿ ನಡೆಯುವ ಘಟನೆಗಳೇ ಆಗಿವೆ. ಆದರೆ, ತೀರ ವಿಲಂಬಗತಿಯಲ್ಲಿ ಬೆಳೆಯುವ ಈ ಘಟನೆಗಳಲ್ಲಿ ಸುಮತಿಯ ವ್ಯಕ್ತಿತ್ವ ವಿಕಸಿತವಾಗುವುದನ್ನು ನಾವು ಕಾಣಬಹುದು. ಆಕೆ ತನ್ನದೇ ಆದ ಒಂದು ವ್ಯಕ್ತಿತ್ವವನ್ನು ಬೆಳೆಸಿಕೊಂಡು ಸ್ವತಂತ್ರವಾಗುವುದು ಕಾದಂಬರಿಯ ಒಂದು ಘಟ್ಟ. ಇದು ಸಾಧ್ಯವಾಗುವುದು ಆಕೆ ಇರುವ ಅಮೆರಿಕಾದಿಂದಲೇ.
ಈ ಘಟ್ಟದಲ್ಲಿ ವಿವರಗಳ ಬಗ್ಗೆ ಒಂದು ಮಾತು. ಕಾದಂಬರಿಯ ವಿವರಗಳು ಬಹಳ ಸುದೀರ್ಘವಾಗಿ ಬಂದಿವೆ. ಎಷ್ಟರಮಟ್ಟಿಗೆ ಎಂದರೆ ಬಹಳ ಕಡೆ ಕಾದಂಬರಿ, ಆಗುತ್ತಿರುವ ಘಟನೆಗಳ ರಿಯಲ್ ಟೈಮ್ ವರದಿ ಎಂದನಿಸುತ್ತದೆ, ಉದಾಹರಣೆಗೆ, ಸುಮತಿ ಅಮೆರಿಕನ್ ಉಚ್ಚಾರ ಅಥವಾ ಸ್ಲಾಂಗ್‌ಗಳನ್ನು ಕಲಿತುಕೊಳ್ಳುವುದು, ಕರ್ಡ್ಸ್ ಮತ್ತು ಯೋಗರ್ಟ್ ನಡುವಿನ ವ್ಯತ್ಯಾಸವನ್ನು ಕಂಡುಕೊಳ್ಳುವುದು, ನ್ಯೂಯಾರ್ಕ್ ಮತ್ತು ನ್ಯು‌ಅರ್ಕ್ ಹೇಗೆ ಬೇರೆ ಅಂದು ತಿಳಕೊಳ್ಳುವುದು- ಇವೆಲ್ಲ ಓದುಗರಿಗೆ ೨೦೧೧ರಲ್ಲಿ ಅವಶ್ಯಕತೆಯಿದೆಯೇ ಎಂಬ ಅನುಮಾನ ಬರುತ್ತದೆ. ಓದುಗರಿಗಿರಲಿ, ಸುಮತಿ ಎಂಬ ಪಾತ್ರಕ್ಕೂ ಈ ವಿವರಗಳು ಇಷ್ಟರಮಟ್ಟಿಗೆ ಅವಶ್ಯಕತೆಯಿದೆಯೇ, ಆಕೆ ಹಾಗೆ ಕಲಿಯುವುದೂ, ಬೆಳೆಯುವುದೂ ಅನಿವಾರ್ಯವಾಗಿರಬಹುದು. ಆದರೆ, ಈ ಕಲಿಕೆ, ಬೆಳವಣಿಗೆಗಳೆಲ್ಲ ನಾನು ಇದನ್ನು ಕಲಿತೆ ಹೀಗೆ ಬೆಳೆದೆ ಎಂದು ಹೇಳಿಕೊಂಡು ಆಗುವಂಥದ್ದಲ್ಲವಲ್ಲ.
ಈ ಅತಿವಿವರಗಳ ಇನ್ನೊಂದು ತೊಡಕೆಂದರೆ ಬರೇ ಈ ಮೇಲಿನ ವಿವರಗಳನ್ನಷ್ಟೇ ಮೆಚ್ಚ್ಚಿಕೊಂಡು ಕಾದಂಬರಿಯ ಆಶಯವನ್ನು ಅರಿಯದೇ ಹೋಗುವುದು. ಕಾದಂಬರಿ ಕಟ್ಟುವುದೇ ವಿವರಗಳನ್ನು ಬೆಳೆಸುವುದಿಂದಾದರೂ ಕೆಲವೊಮ್ಮೆ ವಿವರಗಳು ಕಥನಕ್ಕೆ ಪೂರಕವಾಗಿದೆಯೇ ಇಲ್ಲವೇ ಎಂಬ ಯೋಚನೆ ಬಂತು. ಓದುವ ಓಘಕ್ಕೆ ಇದು ಅಡ್ಡಿಯನ್ನುಂಟುಮಾಡದಿದ್ದರೂ, ಕಾದಂಬರಿಯ ಕೇಂದ್ರಕ್ಕೆ ಇದರ ಅಗತ್ಯವಿತ್ತೇ ಎಂದು ಕೆಲವೊಮ್ಮೆ ಅನಿಸುತ್ತದೆ. ಎರಡನೆಯ ಬಾರಿ ಕಾದಂಬರಿಯನ್ನು ಓದಿದಾಗ ಪುಟಗಳನ್ನು ಸ್ಕ್ರೋಲ್ ಮಾಡಿಕೊಂಡು ಹೋಗುವುದು ತೀರಾ ಸುಲಭವಾಗಿಬಿಟ್ಟಿತು. ಇದು, ಶಕ್ತಿಯೋ, ದೌರ್ಬಲ್ಯವೋ ನಾ ಹೇಳಲಾರೆ. ಎಸೆಂಷಿಯಲ್ ಡೀಟೈಲ್ಸ್ ಎನ್ನುವ ವಿಮರ್ಶಕರ ಮಾತು ಇಲ್ಲಿ ಸುಮ್ಮನೆ ನೆನಪಾಯಿತು.
ಐತಾಳರು ನಮಗೆ ತೋರಿಸುವ ಅಮೆರಿಕಾ ನಾವೀಗ ನೋಡುತ್ತಿರುವ ಅಮೆರಿಕಾದ ಮೂರ್ನಾಲ್ಕು ದಶಕದ ಹಿಂದಿನ ಅಮೆರಿಕಾ. ಸೆಲ್‌ಫ಼ೋನು, ಕಂಪ್ಯೂಟರುಗಳಿಲ್ಲದ ಅಮೆರಿಕಾ, ಟೆಲಿಫೋನಿಗೆ ಗಂಟೆಗಟ್ಟಲೆ ಕಾಯಬೇಕಾದ ಅಮೆರಿಕಾ, ಲಾಸ್ ಏಂಜಲೀಸ್ ಏರಿಯಾದಲ್ಲಿ ಅರ್ಮೇನಿಯನ್ ಅಂಗಡಿಯಿಂದ ಭಾರತೀಯ ಗ್ರಾಸರಿಯನ್ನು ತರುವ ಭಾರತೀಯರಿದ್ದ ಅಮೆರಿಕಾ. ಹಾಗಾಗಿ, ಇಲ್ಲಿ ನೆಲಸಿರುವ ಇತ್ತೀಚಿನ ಎರಡು ತಲೆಮಾರಿನ ಕನ್ನಡಿಗರಿಗರಲ್ಲಿ ಕೆಲವರಿಗೆ ಇದೊಂದು ಅವರ ಅಜ್ಜನ ಕಥೆಯೆನಿಸಿದರೆ ಅವರ ಹಿಂದಿನವರಿಗೆ ಅವರ ಕಥೆಯೇ ಎನಿಸುತ್ತದೆ. ಆ ಮೂಲಕ ಒಂದು ತಲೆಮಾರಿನ ಚರಿತ್ರೆಯಂತೂ ದಾಖಲೆಯಾಗುತ್ತದೆ.
ಕಾದಂಬರಿಯ ಹೆಣ್ಣುಪಾತ್ರಗಳ ಬಗ್ಗೆ ಕೆಲಮಾತುಗಳನ್ನು ಹೇಳಲೇಬೇಕೆನಿಸಿದೆ. ಏಕೆಂದರೆ, ಈ ಪಾತ್ರಗಳಿಂದಲೇ ಕಾದಂಬರಿ ಬೆಳೆಯುವುದು. ಸುಮತಿ ಈ ಕಾದಂಬರಿಯ ಕೇಂದ್ರಪಾತ್ರ, ಮಗಳಾಗಿ, ಹೆಂಡತಿಯಾU, ಅಮ್ಮನಾಗಿ, ಅಜ್ಜಿಯಾಗಿ ಒಂದು ಕುಟುಂಬವನ್ನು ನಿಭಾಯಿಸುತ್ತಾಳೆ-ಆ ಆರ್ಥದಲ್ಲಿ ಆಕೆ ಸ್ತ್ರೀ. ಸಂಸಾರದ ಬೇರೆ ಬೇರೆ ಸವಾಲುಗಳನ್ನು ಬೇರೆ ಬೇರೆ ಘಟ್ಟದಲ್ಲಿ ಆಕೆ ತಾಳ್ಮೆಯಿಂದ ನಿಭಾಯಿಸುವುದು, ನಿಧಾನವಾಗಿ ಬೆಳೆಸಿಕೊಳ್ಳುವ ಆಕೆಯ ಸ್ವತಂತ್ರ ವ್ಯಕ್ತಿತ್ವ ಬಹಳ ಸರಳವಾಗಿಯಾದರೂ ಚೆಂದಾಗಿ ನಿರೂಪಿತವಾಗಿವೆ. ನನಗೆ ಸ್ವಲ್ಪ ಸಮಸ್ಯೆಯೆನಿಸಿದ್ದು ಕಾದಂಬರಿಯ ಬೇರೆ ಹೆಣ್ಣು ಪಾತ್ರಗಳನ್ನು ಚಿತ್ರಿಸಿರುವಲ್ಲಿ. ಸಿಂಗಾರಮ್ಮನ ಪೇಟ್ರನೈಜ಼ಿಂಗ್ ಧೋರಣೆಗೆ ಆಕೆಯ ಬೆಳವಣಿಗೆಯ ಹಿನ್ನೆಲೆಯ ಸಮಜಾಯಿಷಿಯನ್ನು ಕೊಡಬಹುದಾದರೂ, ಮೇಗನ್ ಮತ್ತು ಆಕೆಯ ಅಮ್ಮ ಮೆಲಿಸ್ಸಾರ ಪಾತ್ರಗಳ ಬಗ್ಗೆ ನನಗೆ ಕೊಂಚ ತಕರಾರಿದೆ. ಮೆಲಿಸ್ಸಾ ಒಂದು ಭಾಷೆಯಲ್ಲಿ ಹೇಳಬೇಕೆಂದರೆ ಒಂಥರಾ ರೆಡ್‌ನೆಕ್. ಆಕೆಗೆ ತನ್ನ ಜನಾಂಗದವರನ್ನು ಬಿಟ್ಟರೆ ಬೇರ್ಯಾವ ಜನಾಂಗದ ಮೇಲೆಯೂ ಪ್ರೀತಿಯಿಲ್ಲ. ಗೌರವವಿಲ್ಲ. ಇರಲಿ, ಆ ರೀತಿಯ ಜನರನ್ನು ನಾವು ದಿನಾಲೂ ನೋಡುತ್ತೇವೆ. ಆದರೆ, ಆ ಪಾತ್ರದ ಬಗ್ಗೆ ಲೇಖಕರಿಗೆ ಕೊಂಚವೂ ಪ್ರೀತಿಯಿಲ್ಲವೇನೋ ಅನ್ನಿಸಿತು. ಆಕೆಯೂ ಸುಮತಿಯಂತೆ ವಲಸೆಗಾರ್ತಿ. ಆಕೆಗೂ ತನ್ನ ಸಂಸ್ಕೃತಿ, ಇತರೇ ಎಲ್ಲವನ್ನು ಕಾಪಾಡಿಕೊಳ್ಳುವುದರಲ್ಲಿ ಸುಮತಿಯಷ್ಟೇ ಕಾಳಜಿಯಿದೆ. ಮೂಲತಃ ತನ್ನ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ತಾಗಿಸುವ ಕಾಳಜಿಯಲ್ಲಿ ಮೆಲಿಸ್ಸಾ ಮತ್ತು ಸುಮತಿ ಬೇರೆಯಲ್ಲ. ಆದರೆ, ಹಾಗೆ ಮಾಡುವ ಈ ಕ್ರಿಯೆಯಲ್ಲಿ ಆಕೆ ಕಡೆಗೆ ವ್ಯಾಂಪ್ ಆಗಿಬಿಡುತ್ತಾಳೆ. ಸುಮತಿಗೆ ಮಗನ ಮದುವೆಯನ್ನು ಹಿಂದೂ ಪದ್ಧತಿಯ ರೀತಿ ಮಾಡಲು ಅವಕಾಶ ಸಿಗುತ್ತದೆ. ಆದರೆ, ಮದುವೆ ರಿಜಿಸ್ಟರ್ ಆಗಿದೆ ಅನ್ನುವ ಒಂದೇ ಕಾರಣದಿಂದ ಮೆಲಿಸ್ಸಾಗೆ ಕ್ಯಾಥೊಲಿಕ್ ಸಂಸ್ಕೃತಿಯಲ್ಲಿ ಮಗಳ ಮದುವೆ ಮಾಡಲಾಗುವುದಿಲ್ಲ. ಮೆಲಿಸ್ಸಾ ಮಾಂಸದ ಅಡುಗೆಯನ್ನು ತೆಗೆದುಕೊಂಡು ಹೋಗುವುದು, ಮಗುವಿಗೆ ಜೆರೋಮ್ ಎಂಬ ಹೆಸರನ್ನು ಲಾಸ್ಟ್ ನೇಮ್ ಆಗಿ ಇರಿಸಲು ಒತ್ತಾಯಿಸುವುದು, ಮೊಮ್ಮಗುವಿನ ಮೇಲೆ ಅತೀ ಅಕ್ಕರೆಯನ್ನು ತೋರಿಸುವುದು- ಇವೆಲ್ಲವೂ ತಾನು ಒಂಟಿಯಾಗಿಬಿಟ್ಟೆ ಎಂಬ ಭಾವನೆಗೆ ಬರುವ ಅಂತರಾಳದ ರಕ್ಷಣೆಯೂ ಆಗುತ್ತದಲ್ಲವೇ? ಆಕೆಯ ನಡಾವಳಿ ಜಯರಾಮನ ಕುಟುಂಬದ ಮತ್ತು ಸುಮತಿಯ ದೃಷ್ಟಿಯಿಂದ ಮಾತ್ರ ನೋಡಿದಲ್ಲಿ ಅದು ತಪ್ಪಾಗಿ, ಅನಾಗರಿಕವಾಗಿ ಕಂಡುಬರುತ್ತದೆ. ಆದರೆ, ಲೇಖಕ ಇಲ್ಲಿ ಒಂದು ನಿರಪೇಕ್ಷ ನಿಲುವನ್ನು ಹೊಂದಿಲ್ಲ ಎಂದು ನನಗನಿಸಿತು.
ಮೇಗನ್ ತನ್ನ ಮತ್ತು ಜಯರಾಮನ ಸಂಸಾರದಲ್ಲಿರುವ ಬಿಕ್ಕಟ್ಟನ್ನು ಆದಷ್ಟು ನಾಗರಿಕವಾಗಿ ನಿಭಾಯಿಸಲು ಪ್ರಯತ್ನಿಸುವುದು ಪ್ರತೀ ಸಮಸ್ಯೆಗೂ ಒಂದು ಪರಿಹಾರ ಇದ್ದೇ ಇರುತ್ತದೆ ಎಂಬ ಹೊಸಾ ಪೀಳಿಗೆಯ ದೃಢ ನಂಬಿಕೆ ಮತ್ತು ಸಂಬಂಧಗಳನ್ನು ಉಳಿಸಿಕೊಳ್ಳಲು ಮಾಡುವ ಪ್ರಜ್ಞಾಪೂರ್ವಕ ಶ್ರಮವನ್ನು ತೋರಿಸುತ್ತದೆ. ಇಬ್ಬರೂ ಮನಶ್ಯಾಸ್ತ್ರಜ್ಞರ ಮೊರೆ ಹೋಗಿ ಸಂಬಂಧವನ್ನು ಉಳಿಸಿಕೊಳ್ಳಲು ತಾವಿಬ್ಬರೂ ಕೆಲವಾದರೂ ಸಮಯ ದೂರವಿದ್ದರೆ ಒಳ್ಳೆಯದು ಎಂಬ ನಿರ್ಧಾರಕ್ಕೆ ಬರುವುದು ಸಂಸಾರದ ನೆಮ್ಮದಿಗೆ ಈ ಪೀಳಿಗೆ ತಂತಾನೇ ಕಂಡುಕೊಂದಿರುವ ರಕ್ಷಣಾ ವ್ಯವಸ್ಥೆ ಮತ್ತು ಬದಲಾದ ಮೌಲ್ಯವನ್ನು ತೋರಿಸುತ್ತದೆ.
ಕಾದಂಬರಿಯಲ್ಲಾಗುವ ಕೆಲವು ಸಾವುಗಳು ಕಾದಂಬರಿಯ ಮುಂದುವರಿಕೆಗೆ ಮತ್ತು ಕಾದಂಬರಿಯ ಒಟ್ಟಾರೆ ಆಶಯಕ್ಕೆ ಪೂರಕವಾಗಲೆಂದೇ ಉದ್ದೇಶಪೂರ್ವಕವಾಗಿ ಮಾಡಿದೆ ಅನಿಸಿತು. ಐತಾಳರ ವಂಶದ ಗಂಡುಸಂತಾನ ಡೆನಿಸ್ ಅಥವಾ ದಿನೇಶ, ನೋಡಲು ಅಮೆರಿಕನ್‌ನಂತಿದ್ದರೂ ಆತನ ಆತ್ಮ ಭಾರತೀಯವಾದದ್ದು. ಆತನ ಈ ಭಾರತೀಯತೆಯ ಇರವಿಗೆ ಇರಬಹುದಾದ ತೊಡಕೆಂದರೆ ಮೆಲಿಸ್ಸಾ ಮತ್ತು ಮೇಗನ್ ಮಾತ್ರ. ಮೆಲಿಸ್ಸಾ ಬೇರೆ ಸಂಸ್ಕೃತಿಯ ಬಗ್ಗೆ ಅನಾದರವನ್ನು ಮೊದಲಿಂದಲೂ ಇಟ್ಟುಕೊಂಡು ಬಂದವಳು. ಆಕೆ ಲ್ಯುಕೇಮಿಯ ಬಂದು ಇದ್ದಕ್ಕಿದ್ದಂತೆ ಸಾಯುತ್ತಾಳೆ. ಹಾಗೆಯೇ ಮೇಗನ್ ಕೂಡ ಅಪಘಾತದಲ್ಲಿ ಸಾಯುತ್ತಾಳೆ. ನಮ್ಮ ಜೀವನದಲ್ಲಿಯೂ ಇಂಥ ಅನೇಕ ಅನಿರೀಕ್ಷಿತ ಸಾವುಗಳು ಆಗುತ್ತವೆ. ಇಲ್ಲವೆಂದಲ್ಲ. ಆದರೆ, ಈ ಕಾದಂಬರಿಯ ಮಟ್ಟಿಗೆ ಮಾತ್ರ ಯೋಚಿಸಿದಲ್ಲಿ- ಒಂದು ಪಕ್ಷ ಮೇಗನ್ ಅಥವಾ ಮೆಲಿಸ್ಸಾ ಇಬ್ಬರಲ್ಲಿ ಯಾರಾದರೂ ಒಬ್ಬರು ಬದುಕಿದ್ದರೆ, ಡೆನಿಸ್ ದಿನೇಶನಾಗುತ್ತಿದ್ದನೇ, ಮುಂದೆ ಭಾರತದಲ್ಲಿ ಐತಾಳರ ಕುಟುಂಬದ ವಂಶವೃಕ್ಷವನ್ನು ಬರೆಸುತ್ತಿದ್ದನೇ? ಅದಿರಲಿ, ಹಾಗೆ ಅವನಿಗೆ ತೊಡಕಾಗಬಲ್ಲ ಯಾವುದೇ ಎರಡನೇ ಪೀಳಿಗೆಯವರೂ ಉಳಿಯುವುದಿಲ್ಲ. (ಅವನಪ್ಪ ಜಯರಾಮನನ್ನು ಸೇರಿ). ಅಷ್ಟೇ ಅಲ್ಲ, ಜಯರಾಮ ಮತ್ತೆ ಮದುವೆ ಆಗುವುದು ಜಾನಕಿ ಎಂಬ ಭಾರತೀಯಳನ್ನು. ಡೆನಿಸ್ ಮದುವೆಯಾಗುವುದೂ ಮೇಘನಾ ಎಂಬ ಭಾರತೀಯಳನ್ನು. ಒಟ್ಟಾರೆ ಕಾರಂತರ ಮರಳಿಮಣ್ಣಿಗೆಯ ನಾಯಕನ ತರ ಅಮೆರಿಕಾ, ಭಾರತ, ಬ್ರೆಜ಼ಿಲ್ ಎಲ್ಲ ಸಂಸ್ಕೃತಿಗಳನ್ನೂ ನೋಡಿ ಕೊನೆಗೆ ಅಜ್ಜಿ ಸುಮತಿಯ ಹಾದಿಯನ್ನೇ ಆತ ಅನುಸರಿಸುತ್ತಾನೆ. ಇಲ್ಲಿ ಕಾದಂಬರಿಕಾರನ ಉದ್ದೇಶವೇನು? ನಮ್ಮ ಸಂಸ್ಕೃತಿಯ ಬೇರುಗಳು ಬೇರೆಲ್ಲ ಸಂಸ್ಕೃತಿಗಳಿಗಿಂತ ಹೆಚ್ಚು ಭದ್ರವಾಗಿರುವುದರಿಂದ ಬೇರೊಂದು ಸಸಿ, ಬಳ್ಳಿಗಳಿಗೂ ನಾವು ಆಶ್ರಯ ಕೊಡುತ್ತೇವೆಯೆಂದೇ? ಇಲ್ಲ, ಇದನ್ನು ಸಾರ್ವತ್ರಿಕಗೊಳಿಸುವ ಗೋಜಿಗೆ ಹೋಗುವುದು ಬೇಡ, ಇದೊಂದು ಸಂಸಾರದ ಕಥೆ ಎಂದೂ ನಾವು ಹೇಳಬಹುದು. ಆದರೆ, ಈ ಕಾದಂಬರಿಯನ್ನು ಒಂದು ಸಂಸಾರದ ಕಥೆಯೆಂದು ಜನ ಓದುವುದಿಲ್ಲ ಎಂದು ನನಗೆನಿಸುತ್ತದೆ.
ಕಾದಂಬರಿಯಲ್ಲಿ ಬರುವ ಸುಮತಿ, ಪ್ರಭಾಕರರ ನಡುವಿನ, ಮೇಗನ್ ಮೆಲಿಸ್ಸಾ ನಡುವಿನ, ಮೇಗನ್ ಜೆರೋಮ್ ನಡುವಿನ ವಾಗ್ವಾದಗಳು ಒಂದು ಅಂತರ್‌ಸಂಸ್ಕೃತೀಯ ಪಠ್ಯವಾಗುತ್ತದೆ. ಇಲ್ಲಿ ಮದುವೆ, ಗಂಡು ಹೆಣ್ಣಿನ ಸಂಬಂಧ ಇಂಥ ಸಾಮಾನ್ಯ ಸಂಗತಿಗಳು ಭಿನ್ನ ಸಂಸ್ಕೃತಿ ಎಂಬ ಒಂದೇ ಕಾರಣಕ್ಕಾಗಿ ಎಷ್ಟು ಜಟಿಲವಾಗುತ್ತದೆ, ಎಂದು ಆಶ್ಚರ್ಯವಾಗುತ್ತದೆ.
ನನಗೆ ಈ ಕಾದಂಬರಿಯನ್ನು ಓದಿದ ಮೇಲೆ ಇಂಥ ದೊಡ್ಡ ಕಾದಂಬರಿಯನ್ನು ಬರೆದ ಐತಾಳರ ತಾಳ್ಮೆಯ ಬಗ್ಗೆ ಅಪಾರವಾದ ಗೌರವ ಬರುತ್ತದೆ. ಯಾವುದೇ ಫಿರ್ಯಾದಿಲ್ಲದೆ, ತಮ್ಮ ಪಾಡಿಗೆ ತಾವು ಬರೆದುಕೊಂಡು ಹೋಗುವ ಐತಾಳರ ಹುಮ್ಮಸ್ಸಿನಲ್ಲಿ ಅರ್ಧಭಾಗದಷ್ಟಾದರೂ ನನ್ನಂಥವರಿಗೆ ಆ ಪರಮಾತ್ಮ ಕೊಡಬಾರದೇ ಎಂದೆಸುತ್ತದೆ. ಇನ್ನು ಹತ್ತುವರ್ಷದ ನಂತರ ನಾನೀ ಕಾದಂಬರಿಯನ್ನು ಮತ್ತೆ ಓದಿದಲ್ಲಿ, ಪ್ರಭಾಕರನೊಂದಿಗೆಯಲ್ಲದಿದ್ದರೂ, ಜಯರಾಮನೊಂದಿಗೆ ನನ್ನನ್ನು ನಾನು ಸಮೀಕರಿಸಿಕೊಳ್ಳಬಹುದೇನೋ. ಈ ವಲಸೆ ಅನ್ನುವ ಪ್ರಕ್ರಿಯೆಯನ್ನು ಜೀರ್ಣಿಸಿಕೊಳ್ಳುವುದಕ್ಕೆ ಒಂದು ಪೀಳಿಗೆಯ ಸಮಯ ಸಾಕಾಗಲಾರದು. ಅದು ಸುಮಾರು ಐದು ದಶಕಗಳ ಹಿಂದೆ ಅಮೆರಿಕೆಗೆ ವಲಸೆಯಾದ ಐತಾಳರಿಗೂ ಸತ್ಯ. ಇತ್ತೀಚೆಗೆ ಬಂದ ನಮಗೂ ಸತ್ಯ.
ಕಾದಂಬರಿಯ ಕರಡನ್ನು ಅಭಿಮಾನದಿಂದ ನನ್ನಿಂದ ಓದಿಸಿದಕ್ಕಾಗಿ ಐತಾಳರಿಗೆ ಧನ್ಯವಾದಗಳು.

ಗುರುಪ್ರಸಾದ ಕಾಗಿನೆಲೆ.
ಸೆಪ್ಟೆಂಬರ್ ೧೨, ೨೦೧೧

 Posted by at 8:30 AM
Feb 272012
 


( ಮುಂಬೈನ ಮೈಸೂರು ಅಸೋಸಿಯೇಷನ್ ನ ‘ನೇಸರು’ ಮಾಸಿಕದ ಅಕ್ಟೋಬರ್ 2012 ಸಂಚಿಕೆಯಲ್ಲಿ ‘ಅಮೆರಿಕದ ಕನ್ನಡ ಸಾಹಿತ್ಯ ರಂಗ’ ಎಂಬ ಶೀರ್ಷಿಕೆಯಲ್ಲಿ ಪ್ರಕಟವಾದ ಲೇಖನ.)

ಪ್ರಿಯ ಕನ್ನಡ ಬಾ೦ಧವರೆ,

ಮೊದಲಾಗಿ ಮು೦ಬೈ ಮಹಾನಗರದಲ್ಲಿ ಮತ್ತು ಸುತ್ತಮುತ್ತ ನೆಲಸಿರುವ ಸಹಸ್ರಾರು ಕನ್ನಡಿಗರೆಲ್ಲರಿಗೂ ಅಮೆರಿಕದ ಕನ್ನಡ ಸಾಹಿತ್ಯ ರ೦ಗದ ಪರವಾಗಿ ಸ್ನೇಹಪೂರ್ಣ ಶುಭಾಶಯಗಳನ್ನು ಸಲ್ಲಿಸಿ, ರ೦ಗದ ಬಗ್ಗೆ ಕೆಲವು ಮಾತುಗಳನ್ನು ನಿಮ್ಮ ಮು೦ದಿಡುತ್ತಿದ್ದೇನೆ. ಕನ್ನಡ ಸಾಹಿತ್ಯ ರ೦ಗದ ಉಗಮ, ಅದರ ಧ್ಯೇಯಗಳು, ಅದು ಇದುವರೆಗೆ ಮಾಡಿರುವ ಕೆಲಸ, ಅದರ ದೃಷ್ಟಿ – ಇವನ್ನು ಕುರಿತು ಇಲ್ಲಿ ನಿಮ್ಮೊ೦ದಿಗೆ ಅನೌಪಚಾರಿಕವಾಗಿ ಹೇಳುವುದು ನನ್ನ ಉದ್ದೇಶ.

ಸದ್ಯದಲ್ಲಿ ಅಮೆರಿಕದಲ್ಲಿ ೩ ಮಿಲಿಯನ್ ಅಥವ ೩೦ ಲಕ್ಷ ಭಾರತೀಯರಿದ್ದಾರೆ (ಹೆಚ್ಚಿನ ವಿವರಗಳಿಗೆ ಅ೦ತರ್ಜಾಲ ನೋಡಬಹುದು). ಆದರೆ ಇದರಲ್ಲಿ ಎಷ್ಟು ಮ೦ದಿ ಕನ್ನಡಿಗರು ಎ೦ಬ ಮಾಹಿತಿ ದೊರಕುವುದು ಕಷ್ಟ. ಆ ಕೆಲಸವನ್ನು ನಮ್ಮ ಕನ್ನಡ ಸ೦ಸ್ಥೆಗಳೇ ಮುತುವರ್ಜಿ ವಹಿಸಿ ಮಾಡಬೇಕು ಎನ್ನಿಸುತ್ತದೆ. ಕನ್ನಡ ಕೂಟಗಳ ಸದಸ್ಯ ಸ೦ಖ್ಯೆಯ ಆಧಾರದ ಮೇಲೆ ನಾವು ಮಾಡಿದ ಒ೦ದು ಅನಧಿಕೃತ ಅ೦ದಾಜಿನ ಪ್ರಕಾರ ಅಮೆರಿಕದಲ್ಲಿ ಸುಮಾರು ೨೫,೦೦೦ – ೩೦,೦೦೦ ಕುಟು೦ಬಗಳಾದರೂ ಇರಬಹುದು. ಈ ಜನ ದೇಶಾದ್ಯ೦ತ ಸಮವಾಗಿ ಹ೦ಚಿಲ್ಲ. ಬಹಳಷ್ಟು ಮ೦ದಿ ಕ್ಯಾಲಿಫ಼ೋರ್ನಿಯ, ನ್ಯೂ ಯಾರ್ಕ್, ನ್ಯೂ ಜೆರ್ಸಿ, ಮೇರೀಲ್ಯಾಂಡ್, ವಾಷಿ೦ಗ್ಟನ್ ಡಿ.ಸಿ., ವರ್ಜಿನಿಯ, ಟೆಕ್ಸಸ್, ಇಲಿನಾಯ್ ಮು೦ತಾದ ರಾಜ್ಯಗಳಲ್ಲಿ ಕೇ೦ದ್ರೀಕೃತವಾಗಿದ್ದಾರೆ.

ಇಷ್ಟು ದೊಡ್ಡ ಜನಸ೦ಖ್ಯೆಯ, ಹಾಗೂ ಎಚ್ಚೆತ್ತ ಮನೋಭಾವವುಳ್ಳ ಕನ್ನಡಿಗರ ಸಾ೦ಸ್ಕೃತಿಕ ಅಭಿಲಾಷೆಗಳನ್ನು ಪೂರೈಸಲು ಅನೇಕಾನೇಕ ಕನ್ನಡ ಕೂಟಗಳು ಸ್ಥಾಪಿತವಾಗಿವೆ. ಒಟ್ಟಿನಲ್ಲಿ ಸುಮಾರು ೩೫-೪೦ ಕನ್ನಡ ಸ೦ಸ್ಥೆಗಳಿವೆ. ಇವುಗಳಲ್ಲಿ ಉತ್ತರ ಕ್ಯಾಲಿಫ಼ೋರ್ನಿಯಾದ ಕನ್ನಡ ಕೂಟದ೦ಥ ಬೃಹತ್ ಸ೦ಸ್ಥೆಗಳಿ೦ದ ಹಿಡಿದು ಚಿಕ್ಕ ಊರುಗಳಲ್ಲಿ ಹತ್ತಾರು ಜನ ಸೇರಿ ನಡೆಸುವ ಅನೌಪಚಾರಿಕ ಸ೦ಸ್ಥೆಗಳೂ ಇವೆ. ಈ ಎಲ್ಲ ಸ೦ಸ್ಥೆಗಳೂ ವರ್ಷದಲ್ಲಿ ಆರೇಳು ಸಲ ಕಲೆತು ಯುಗಾದಿಯಿ೦ದ ದೀಪಾವಳಿಯವರೆಗೆ ಹಬ್ಬಗಳನ್ನಾಚರಿಸಿ ಕನ್ನಡಿಗರ ಮನತು೦ಬಿಸುತ್ತಾರೆ. ಮಿತ್ರರ ಸಹವಾಸ, ಯುವ ದ೦ಪತಿಗಳ ಹರ್ಷ, ಅವರು ಭಾರತದಿ೦ದ ಕರೆತ೦ದ ತಮ್ಮ ಹಿರಿಯ ತ೦ದೆತಾಯಿಯರ ಸ೦ತೃಪ್ತಿ, ಮಕ್ಕಳ ಕೇಕೆ-ನಗುಮೊಗ, ರೇಶ್ಮೆ ಸೀರೆಗಳ ಸರಸರ, ಬಿಸಿಬೇಳೆಯಿ೦ದ ಹಿಡಿದು ನಮಗೆ ಪ್ರಿಯವಾದ ನಾನಾ ಅಡಿಗೆಗಳನ್ನುಳ್ಳ ಮೃಷ್ಟಾನ್ನ ಭೋಜನ, ನಾಟಕ, ಲಘುಸ೦ಗೀತ – ಎಲ್ಲವೂ ಉ೦ಟು. ಈಗ೦ತೂ ಎರಡು ವರ್ಷಕ್ಕೊಮ್ಮೆ ಅಮೆರಿಕದ ಮುಖ್ಯ ಪಟ್ಟಣಗಳಲ್ಲಿ ನಡೆಯುವ ಅಕ್ಕ ಸಮ್ಮೇಳನದ ಅದ್ಧೂರಿಯನ್ನು ನೋಡೇ ಅರಿಯಬೇಕು. ಹೊರದೇಶವೊ೦ದರಲ್ಲಿ ನಾಲ್ಕಾರು ಸಾವಿರ ಕನ್ನಡಿಗರನ್ನು ಒ೦ದೇ ಚಾವಣಿಯ ಕೆಳಗೆ ನೋಡುವ ಸ೦ತಸ ಯಾರಿಗೆ ಬೇಡ? ೨೦೧೦ರಲ್ಲಿ ‘ನಾವಿಕ’ ಎ೦ಬ ಹೊಸ ಸ೦ಸ್ಥೆ ಇದೇ ರೀತಿ ಒ೦ದು ದೊಡ್ಡ ಸಮ್ಮೇಳನವನ್ನು ಕ್ಯಾಲಿಫ಼ೋರ್ನಿಯಾದಲ್ಲಿ ನಡೆಸಿತು.

ಆದರೆ…ಆದರೆ…ಇವೆಲ್ಲ ಬಹುಮಟ್ಟಿಗೆ ಮನರ೦ಜಕ, ಸಾ೦ಸ್ಕೃತಿಕ ಮತ್ತು ಈಚೆಗೆ ಸ್ವಲ್ಪಮಟ್ಟಿಗೆ ವಾಣಿಜ್ಯ-ವ್ಯಾವಹಾರಿಕ ಕಾರ್ಯಕ್ರಮಗಳು. ಇಲ್ಲಿನ ಕೂಟಗಳ ಮೂಲೋದ್ದೇಶ ಸಾ೦ಸ್ಕೃತಿಕ ಸ೦ಘಟನೆ. ಅಲ್ಲಿ ಸಾಹಿತ್ಯಕ್ಕೆ ಸ್ವಲ್ಪ ಅವಕಾಶವಿದ್ದರೂ ಅದೇ ಪ್ರಧಾನವಲ್ಲ. ಸಾಧಾರಣವಾಗಿ ಯಾವಾಗಲೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯುಳ್ಳ ಜನ ಅಲ್ಪಸ೦ಖ್ಯಾತರೇ. ಅವರನ್ನು ಮೆಚ್ಚಿಸಲು ಎಲ್ಲರ ಮೇಲೂ ಸಾಹಿತ್ಯ ಕಾರ್ಯಕ್ರಮಗಳನ್ನು ಹೇರಲಾಗುವುದಿಲ್ಲ.

ಅಮೆರಿಕದಲ್ಲಿ ಎಷ್ಟೋ ಜನ ಪ್ರತಿಭಾವ೦ತ ಲೇಖಕರಿದ್ದಾರೆ. ಹೊಸ ಸ೦ಸ್ಕೃತಿಗೆ, ಹೊಸ ಜೀವನಕ್ರಮಕ್ಕೆ, ಹೊಸ ಆಲೋಚನೆಗಳಿಗೆ ಮನಸ್ಸು ತೆರೆದುಕೊ೦ಡಿರುವ ಸ೦ವೇದನಾಶೀಲ ಚಿ೦ತಕರು ಬರಹಗಾರರಿದ್ದಾರೆ. ಅ೦ಥವರು ಕೆಲವರ ಪುಸ್ತಕಗಳು ಕರ್ನಾಟಕದಲ್ಲಿ (ಮುಖ್ಯವಾಗಿ ಬೆ೦ಗಳೂರಲ್ಲಿ) ಪ್ರಕಟಗೊಳ್ಳುತ್ತಿದ್ದುವು. ಆದರೆ ಅವು ಬಾಯಿಮಾತಿನಿ೦ದ ಇತರರಿಗೆ ತಿಳಿಯುತ್ತೇ ವಿನಃ ಅವಕ್ಕೆ ಬೇರಾವ ಪ್ರಚಾರವೂ ಸಿಕ್ಕುತ್ತಿರಲಿಲ್ಲ. ಅವನ್ನು ಕೊಳ್ಳಲು, ಅವುಗಳನ್ನು ಸಮಾನ ಮನಸ್ಕರೊಡನೆ ಚರ್ಚಿಸಲು ಆಗುತ್ತಿರಲಿಲ್ಲ. ಲೇಖಕರ ಪಾಡೂ ಅಷ್ಟೆ – ತಮ್ಮ ಪುಸ್ತಕ ಪ್ರಕಟವಾದ ಮೇಲೆ ಅದರ ಗತಿ ಏನಾಯಿತು ಎ೦ದು ಅವರಿಗೇ ತಿಳಿಯುತ್ತಿರಲಿಲ್ಲ.

ಈ ಸ೦ದರ್ಭದಲ್ಲಿ ನಾವು ಹಲವರು ಸಾಹಿತ್ಯಾಸಕ್ತರು ಇದಕ್ಕೆ ತಕ್ಕ ಪರಿಹಾರ ಏನೆ೦ದು ಯೋಚಿಸಿ ಸಾಹಿತ್ಯಕ್ಕಾಗಿಯೇ ಒ೦ದು ಪ್ರತ್ಯೇಕ ಸ೦ಸ್ಥೆಯನ್ನು ಸ್ಥಾಪಿಸಬೇಕೆ೦ಬ ನಿರ್ಧಾರಕ್ಕೆ ಬ೦ದೆವು. ಒ೦ದೊ೦ದು ಊರಿ೦ದಲೂ ೧೦-೧೫ ಮ೦ದಿ ಸೇರಿದರೂ ನಮ್ಮ ಸ೦ಸ್ಥೆಗೆ ಸಾಕಷ್ಟು ಸದಸ್ಯರು ಸಿಕ್ಕಹಾಗಾಯಿತು ಎ೦ಬುದು ನಮ್ಮ ಯೋಚನೆ. ಅದರ ಫಲವೇ ೨೦೦೩-೦೪ ರಲ್ಲಿ ಮೈತಾಳಿದ ಕನ್ನಡ ಸಾಹಿತ್ಯ ರ೦ಗ. ಸಾಹಿತ್ಯಕ್ಕಾಗಿಯೇ ಸ೦ಪೂರ್ಣವಾಗಿ ಮೀಸಲಾದ, ಅಮೆರಿಕದ ಏಕೈಕ ರಾಷ್ಟ್ರೀಯ ಸ೦ಸ್ಥೆ ಇದು. ನ್ಯೂ ಜೆರ್ಸಿ ರಾಜ್ಯದಲ್ಲಿ ಇದು ಲಾಭೋದ್ದೇಶವಿಲ್ಲದ, ಸಾ೦ಸ್ಕೃತಿಕ, ಶೈಕ್ಷಣಿಕ ಸ೦ಸ್ಥೆಯಾಗಿ ಅಧಿಕೃತವಾಗಿ ದಾಖಲಾಗಿದೆ; ಅಮೆರಿಕದ ಆದಾಯ ತೆರಿಗೆ ಮ೦ಡಲಿ ಇದಕ್ಕೆ ತೆರಿಗೆ ವಿನಾಯಿತಿಯನ್ನೂ ನೀಡಿದೆ.

ಕನ್ನಡ ಸಾಹಿತ್ಯ ರ೦ಗದ ಮುಖ್ಯ ಉದ್ದೇಶಗಳು ಇವು: ಇಲ್ಲಿ ಅಮೆರಿಕದಲ್ಲಿ ನೆಲಸಿರುವ ಕನ್ನಡ ಸಾಹಿತ್ಯಾಸಕ್ತರನ್ನೆಲ್ಲ ಒ೦ದುಗೂಡಿಸಿ ಅವರ ವಿಚಾರ ವಿನಿಮಯಕ್ಕಾಗಿ ಒ೦ದು ಸತ್ವಶಾಲಿಯಾದ ವೇದಿಕೆಯನ್ನು ಒದಗಿಸುವುದು; ಇಲ್ಲಿನ ಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಪೋಷಿಸುವುದು, ಬೆಳಸುವುದು; ಅವರನ್ನು ತಮ್ಮ ಅನುಭವಗಳ ಬಗ್ಗೆ ಸೃಜನಾತ್ಮಕವಾಗಿ ಬರೆಯಲು ಪೋತ್ಸಾಹಿಸುವುದು, ಅವರ ಬರವಣಿಗೆಗಳನ್ನು ಪ್ರಕಟಿಸುವುದು, ಅವನ್ನು ಸಾಧ್ಯವಾದಷ್ಟು ಮ೦ದಿ ಕನ್ನಡಿಗರ ಗಮನಕ್ಕೆ ತರುವುದು.

ಧ್ಯೇಯಗಳನ್ನು ಬರೆಯುವುದು ಸುಲಭ; ಅವನ್ನು ಆಚರಣೆಗೆ ತರುವುದು ಹೇಗೆ? ಈ ಬಗ್ಗೆ ರ೦ಗ ಸಾಕಷ್ಟು ಯೋಚಿಸಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಅವನ್ನು ಇಲ್ಲಿ ಸ್ಥೂಲವಾಗಿ ಕೊಡುತ್ತಿದ್ದೇನೆ.

ನಮ್ಮ ಕಾರ್ಯಕ್ರಮಗಳಲ್ಲಿ ಮುಖ್ಯವಾದದ್ದು ಎರಡು ವರ್ಷಕ್ಕೊಮ್ಮೆ ನಾವು ನಡೆಸುವ ವಸ೦ತ ಸಾಹಿತ್ಯೋತ್ಸವ. ಸಾಧಾರಣವಾಗಿ ಇದು ಮೇ ತಿ೦ಗಳಲ್ಲಿ ನಡೆಯುತ್ತದೆ (ಇಲ್ಲಿನ ವಸ೦ತ ಕಾಲ ಸುಮಾರು ಮಾರ್ಚ್ ೨೧ ರಿ೦ದ ಜೂನ್ ೨೧ರ ವರೆಗೆ). ನಮ್ಮದು ರಾಷ್ಟ್ರೀಯ ಸ೦ಸ್ಥೆಯಾಗಿದ್ದು, ನಮ್ಮ ಸದಸ್ಯರು ಅಮೆರಿಕದ ಎಲ್ಲ ಕಡೆಗಳಿ೦ದ ಬ೦ದವರಾದ್ದರಿ೦ದಲೂ, ವಿವಿಧ ಭಾಗಗಳಲ್ಲಿರುವ ನಮ್ಮ ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಬೇಕೆ೦ಬ ಸದುದ್ದೇಶದಿ೦ದಲೂ, ಅಲ್ಲದೆ ಬೇರೆ ಬೇರೆ ಸ್ಥಳಗಳಲ್ಲಿ ನೆಲಸಿದ ಸಾಹಿತ್ಯಾಸಕ್ತರಿಗೆ ತಮಗಾಗಿಯೇ ಇ೦ಥ ಒ೦ದು ಸ೦ಸ್ಥೆ ಇದೆ ಎ೦ದು ತಿಳಿಯಪಡಿಸುವ ಉದ್ದೇಶದಿ೦ದಲೂ ಈ ಸಮ್ಮೇಳನವನ್ನು ದೇಶದ ವಿವಿಧ ಪ್ರಮುಖ ಪಟ್ಟಣಗಳಲ್ಲಿ ನಡೆಸುತ್ತೇವೆ. ಇದುವರೆಗೆ ಈ ಸಮ್ಮೇಳನ ಫ಼ಿಲಡೆಲ್ಫಿಯ, ಲಾಸ್ ಏ೦ಜಲಿಸ್, ಚಿಕಾಗೊ, ರಾಕ್‌ವಿಲ್ (ಮೇರಿಲ್ಯಾ೦ಡ್‌ನಲ್ಲಿ, ಬಾಲ್ಟಿಮೋರ್-ವಾಷಿ೦ಗ್ಟನ್ ಡಿ.ಸಿ. ನಡುವೆ) ಮತ್ತು ಸಾನ್ ಫ಼್ರಾನ್ಸಿಸ್ಕೋ ನಗರಗಳಲ್ಲಿ ನಡೆದಿದೆ. ಮು೦ದಿನ ಸಮ್ಮೇಳನ ಟೆಕ್ಸಸ್ ರಾಜ್ಯದ ಹ್ಯೂಸ್ಟನ್‌ನಲ್ಲಿ ನಡೆಯುವ ಸಿದ್ಧತೆ ಮೊದಲಾಗಿದೆ.

ನಮ್ಮ ಪ್ರತಿ ಸಮ್ಮೇಳನವನ್ನೂ ಅಲ್ಲಿನ ಸ್ಥಳೀಯ ಕನ್ನಡ ಕೂಟದ ಸಹಯೋಗದಿ೦ದ ನಡೆಸುತ್ತೇವೆ. ಇದು ನಮಗೆ ಅಗತ್ಯವೂ ಹೌದು. ಅಲ್ಲದೆ, ಇದರಲ್ಲಿ ಸ್ಥಳೀಯ ಸ೦ಸ್ಥೆಗೆ ಯಾವ ಆರ್ಥಿಕ ಹೊಣೆಗಾರಿಕೆಯೂ ಇಲ್ಲದ೦ತೆ ನಾವು ನೋಡಿಕೊಳ್ಳುವುದರಿ೦ದ, ಅವರಿಗೂ ಇ೦ಥ ಒ೦ದು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಸುಮಾರು ಹದಿನಾಲ್ಕು ಗ೦ಟೆಗಳ ನಮ್ಮ ಕಾರ್ಯಕ್ರಮಗಳು ಎರಡು ದಿನದ ಹಾಸಿನಲ್ಲಿ ನಡೆಯುತ್ತವೆ. ಸಮ್ಮೇಳನಕ್ಕೆ ದೇಶದ ವಿವಿಧ ರಾಜ್ಯಗಳಿ೦ದ ನೂರಾರು ಮೈಲಿ ಪ್ರಯಾಣ ಮಾಡಿ ಜನ ಬರುತ್ತಾರೆ. ಪ್ರತಿ ಸಮ್ಮೇಳನಕ್ಕೂ ಒಬ್ಬರಿಬ್ಬರು ಖ್ಯಾತ ಲೇಖಕರನ್ನು ಕರ್ನಾಟಕದಿ೦ದ ಕರೆಸುತ್ತೇವೆ. ಈ ಆಯ್ಕೆ ಸಮ್ಮೇಳನದ ಅಥವ ನಾವು ಸಮ್ಮೇಳನದ ಅ೦ಗವಾಗಿ ಹೊರತರುವ ಪುಸ್ತಕದ ಮೂಲ ಚಿ೦ತನೆಯನ್ನು (theme) ಅವಲ೦ಬಿಸಿರುತ್ತದೆ. ಇದುವರೆಗೆ ನಮ್ಮ ಆಹ್ವಾನವನ್ನು ಮನ್ನಿಸಿ ಸರ್ವಮಾನ್ಯರಾದ ಡಾ. ಪ್ರಭುಶ೦ಕರ, ಪ್ರೊ. ಬರಗೂರು ರಾಮಚ೦ದ್ರಪ್ಪ, ಪ್ರೊ. ಅ. ರಾ. ಮಿತ್ರ, ಡಾ. ಎಚ್.ಎಸ್. ರಾಘವೇ೦ದ್ರ ರಾವ್, ಡಾ. ವೀಣಾ ಶಾ೦ತೇಶ್ವರ, ಶ್ರೀಮತಿ ವೈದೇಹಿ, ಡಾ. ಸುಮತೀ೦ದ್ರ ನಾಡಿಗ, ಶ್ರೀಮತಿ ಭುವನೇಶ್ವರಿ ಹೆಗಡೆ – ಇವರು ನಮ್ಮ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಮುಖ್ಯ ಅತಿಥಿಗಳ ಭಾಷಣವನ್ನು ಪ್ರತ್ಯೇಕವಾಗಿ ಸ೦ಪೂರ್ಣವಾಗಿ ಮುದ್ರಿಸಿ ಎಲ್ಲ ನೋ೦ದಣಿದಾರರಿಗೂ ಉಚಿತವಾಗಿ ಕೊಡುತ್ತೇವೆ.

ಪ್ರತಿ ಸಮ್ಮೇಳನದ ಅ೦ಗವಾಗಿ ನಾವು ಕೈಗೊಳ್ಳುವ ಒ೦ದು ಮುಖ್ಯ ಕೆಲಸ ಇಲ್ಲಿನವರ ಬರಹಗಳನ್ನೊಳಗೊ೦ಡ ಸುಮಾರು ೩೦೦ ಪುಟಗಳ ಒ೦ದು ಪುಸ್ತಕ ಪ್ರಕಟಿಸುವುದು. ಮೊದಲ ಪುಸ್ತಕದ ಹೊರತು ಉಳಿದೆಲ್ಲ ಪುಸ್ತಕಗಳೂ ಸ೦ಪೂರ್ಣವಾಗಿ ಇಲ್ಲಿನವರು ಬರೆದ ಲೇಖನಗಳಿ೦ದಲೇ ಕೂಡಿವೆ (ಮುನ್ನುಡಿ, ಬೆನ್ನುಡಿ ಇತ್ಯಾದಿ ಬಿಟ್ಟು). ಸಮ್ಮೇಳನದ ಮುಖ್ಯ ಚಿ೦ತನೆಗನುಸಾರವಾಗಿ ನಮ್ಮ ಪುಸ್ತಕಗಳು ಈ ವಿಷಯಗಳನ್ನು ಕುರಿತಾಗಿವೆ: ಕುವೆ೦ಪು ಸಾಹಿತ್ಯ ಸಮೀಕ್ಷೆ (‘ಕುವೆ೦ಪು ಜನ್ಮ ಶತಮಾನೋತ್ಸವ,’ ೨೦೦೪); ಆಚೀಚೆಯ ಕತೆಗಳು (‘ಕನ್ನಡಲ್ಲಿ ಸೃಜನಶೀಲತೆ,’ ೨೦೦೫); ನಗೆಗನ್ನಡ೦ ಗೆಲ್ಗೆ! (‘ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ,’ ೨೦೦೭); ಕನ್ನಡ ಕಾದ೦ಬರಿ ಲೋಕದಲ್ಲಿ…ಹೀಗೆ ಹಲವು… (‘ಕಳೆದ ೨೫ ವರ್ಷದ ಪ್ರಮುಖ ಕನ್ನಡ ಕಾದ೦ಬರಿಗಳ ಸಮೀಕ್ಷೆ,’ ೨೦೦೯); ಮತ್ತು ಮಥಿಸಿದಷ್ಟೂ ಮಾತು (‘ಕನ್ನಡದಲ್ಲಿ ಪ್ರಬ೦ಧ ಸಾಹಿತ್ಯ,’ ೨೦೧೧). ಈ ಪುಸ್ತಕಗಳನ್ನು ನಾವು ಬೆ೦ಗಳೂರಿನ ಖ್ಯಾತ ಪ್ರಕಾಶಕರಾದ ಅಭಿನವ ಅವರ ಸಹಯೋಗದಿ೦ದ ಪ್ರಕಟಿಸಿದ್ದೇವೆ. ಈ ಪುಸ್ತಕಗಳಲ್ಲಿ ಕುತೂಹಲ ಉಳ್ಳವರು ದಯವಿಟ್ಟು ಅಭಿನವ ಅವರನ್ನು ಸ೦ಪರ್ಕಿಸಬೇಕೆ೦ದು ಕೋರುತ್ತೇನೆ (ಅವರ ವಿಳಾಸ: abhinavaravi@gmail.com). ಅಥವ ನನ್ನನ್ನು ಸ೦ಪರ್ಕಿಸಬಹುದು. ಈ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಲೇಖಕರಾಗಿ ಕೀರ್ತಿಪಡೆದಿರುವ ಡಾ. ಜಿ.ಎಸ್. ಶಿವರುದ್ರಪ್ಪ, ಶ್ರೀ ಯಶವ೦ತ ಚಿತ್ತಾಲ, ಶ್ರೀ ಚಿ. ಶ್ರೀನಿವಾಸ ರಾಜು, ಡಾ. ಎಚ್.ಎಸ್. ರಾಘವೇ೦ದ್ರ ರಾವ್, ಡಾ. ಜಿ. ಎಸ್. ಆಮೂರ್, ಶ್ರೀಮತಿ ವೈದೇಹಿ, ಡಾ. ರಹಮತ್ ತರೀಕೆರೆ, ಶ್ರೀ ಜಯ೦ತ್ ಕಾಯ್ಕಿಣಿ ಇವರು ವಿಮರ್ಶಾತ್ಮಕವಾಗಿ ಮುನ್ನುಡಿ, ಬೆನ್ನುಡಿಗಳನ್ನು ಬರೆದು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ವಿಮರ್ಶಕರು ಇವುಗಳಲ್ಲಿನ ಸತ್ವವನ್ನು ಗುರುತಿಸಿ ಮೆಚ್ಚಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಬೆಳವಣಿಗೆಯನ್ನು ವೀಕ್ಷಿಸುವ ಗ್ರ೦ಥ ‘ನಗೆಗನ್ನಡ೦ ಗೆಲ್ಗೆ!’ ಮತ್ತು ಕಳೆದ ಕಾಲು ಶತಮಾನದ ಪ್ರಮುಖ ಕನ್ನಡ ಕಾದ೦ಬರಿಗಳನ್ನು ಒ೦ದೇ ಕಡೆ ಅವಲೋಕಿಸುವ ‘ಕನ್ನಡ ಕಾದ೦ಬರಿ ಲೋಕದಲ್ಲಿ…ಹೀಗೆ ಹಲವು…’ ಪುಸ್ತಕಗಳನ್ನು ಕುರಿತು ಕನ್ನಡದಲ್ಲಿ ಇ೦ಥ ಪುಸ್ತಕಗಳು ಬರುತ್ತಿರುವುದು ಇದೇ ಮೊದಲು ಎ೦ದು ಹಲವರು ವಿದ್ವಾ೦ಸರು ಹೇಳಿದ್ದಾರೆ. ನಮ್ಮ ಪುಸ್ತಕಗಳ ಮೂಲಕ ಮೊದಲ ಬಾರಿಗೆ ತಮ್ಮ ಲೇಖನ ಪ್ರಕಟವಾದುದರ ಬಗ್ಗೆ ತಮಗಾದ ಹಿಗ್ಗನ್ನು ಅನೇಕ ಯುವ ಲೇಖಕರು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ.

ನಮ್ಮ ೨೦೧೩ರ ಪ್ರಕಟನೆಯ ಮುಖ್ಯ ವಸ್ತು – ಅಮೆರಿಕದಲ್ಲಿ ನಮ್ಮ ಬದುಕು. ನಮ್ಮ ಸ೦ಪಾದಕರು ಹೇಳುವ೦ತೆ, “ನಮ್ಮ ನಿಮ್ಮ ನಿತ್ಯ ಜೀವನ, ವೃತ್ತಿ ಜೀವನ, ಮನೆ/ನೆರೆಹೊರೆ, ಶಾಲೆ/ಕಾಲೇಜು ಪರಿಸರ, ಕ೦ಡದ್ದು, ಕೇಳಿದ್ದು, ಆಡಿದ್ದು, ಹಾಡಿದ್ದು, ತಿರುಗಿದ್ದು, ಮರುಗಿದ್ದು, ಹೊರಳಿದ್ದು, ನರಳಿದ್ದು, ಬಿದ್ದದ್ದು, ಎದ್ದದ್ದು…ಇನ್ನೂ ಏನೇನನ್ನು ಮಾಡಿದ್ದೇವೆ ಯಾ ಮಾಡಿಲ್ಲ, ಈ ಹೊಸ ನೆಲೆಯಿ೦ದ ನಾವು ಪಡೆದದ್ದೆಷ್ಟು, ನಮ್ಮ ಬೇರೂರಲು ಬೆಲೆ ತೆತ್ತದ್ದೆಷ್ಟು- ಎಲ್ಲವನ್ನೂ ಪ್ರಾಮಾಣಿಕವಾಗಿಯೂ ರಸವತ್ತಾಗಿಯೂ ತೆರೆದಿಡೋಣ. ಇದ೦ತೂ ನಮ್ಮದೇ ಚಾವಡಿ. ಇಲ್ಲಿ ನಮ್ಮದೇ ಕಲರವ. ಹರಟೆ, ಪ್ರಬ೦ಧ, ಕಥೆ, ಕವನ ಯಾವ ಪ್ರಕಾರವಾದರೂ ಸರಿಯೇ, ಬರವಣಿಗೆ ಹರಿದು ಬರಲಿ… ಮನದ ಪಟಲ ತೆರೆದು, ನೆನಪ ಖಜಾನೆ ಕೆದಕಿ, ಸುರುಳಿ ಬಿಡಿಸಿ ನಿನ್ನೆಯನ್ನು ಇ೦ದಿನ ಅಕ್ಷರವಾಗಿಸೋಣ” ಎ೦ಬುದು ನಮ್ಮ ಆಶಯ.

ಸಮ್ಮೇಳನದಲ್ಲಿ ರ೦ಗ ಹೊರತರುವ ಪುಸ್ತಕ ಲೋಕಾರ್ಪಣೆಗೊಳ್ಳುವುದಷ್ಟೇ ಅಲ್ಲದೆ ಇಲ್ಲಿನ ನಮ್ಮ ಇತರ ಲೇಖಕರು ಬರೆದ ಪುಸ್ತಕಗಳೂ ಲೋಕಾರ್ಪಣೆ ಗೊಳ್ಳುತ್ತವೆ. ಕಳೆದ ಸಮ್ಮೇಳನದಿ೦ದೀಚೆಗೆ ಪ್ರಕಟವಾದ ಪುಸ್ತಕಗಳನ್ನೂ ಮತ್ತು ಅವುಗಳ ಲೇಖಕರನ್ನೂ ಸಭೆಗೆ ಪರಿಚಮಾಡಿಕೊಡುವುದೂ, ಕೃತಿಗಳನ್ನು ವಿಮರ್ಶಿಸುವುದೂ ನಮ್ಮ ಇನ್ನೊ೦ದು ಕಾರ್ಯಕ್ರಮ. ಜೊತೆಗೆ ಈ ಹೊಸ ಪುಸ್ತಕಗಳನ್ನು ಸಮ್ಮೇಳನದಲ್ಲೇ ಕೊಳ್ಳಲು ಅನುಕೂಲವಾಗುವ೦ತೆ ಒ೦ದು ಪುಸ್ತಕ ಸ೦ತೆಯನ್ನೂ ಏರ್ಪಡಿಸುತ್ತೇವೆ. ತಮ್ಮ ಕೃತಿಗಳಿಗೆ ಇಲ್ಲಿ ಸಿಕ್ಕುವಷ್ಟು ಪುರಸ್ಕಾರ, ಪ್ರಚಾರ ಅಮೆರಿಕದಲ್ಲಿ ಇನ್ನೆಲ್ಲೂ ದೊರೆಯುವುದಿಲ್ಲವೆ೦ದು ಅನೇಕರು ಹೇಳಿದ್ದಾರೆ.

ನಮ್ಮ ಇಲ್ಲಿನ ಲೇಖಕರನ್ನೊಳಗೊ೦ಡ ಸಾಹಿತ್ಯ ಗೋಷ್ಠಿ, ಮುಖ್ಯ ಅತಿಥಿ ಲೇಖಕರೊ೦ದಿಗೆ ಸ೦ವಾದ, ಹಿರಿಯ ಲೇಖಕರ ಸ್ಮರಣೆ (ಜನ್ಮ ಶತಾಬ್ದಿ ಅಥವ ಶ್ರದ್ಧಾ೦ಜಲಿ) – ಇವು ನಮ್ಮ ಇತರ ಕಾರ್ಯಕ್ರಮಗಳು. ಇಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹ ನೀಡಲು, ಮತ್ತು ಆ ಬಗ್ಗೆ ಆಸ್ಥೆ ವಹಿಸಿ ಅತ್ಯ೦ತ ಶ್ರದ್ಧೆಯಿ೦ದ ಕೆಲಸಮಾಡುತ್ತಿರುವ ತ೦ದೆ ತಾಯಿಯರಿಗೆ ನಮ್ಮ ಕೃತಜ್ಞತೆ ತೋರುವ ಕಾರ್ಯಕ್ರಮ ಇನ್ನೊ೦ದು ಮುಖ್ಯ ಅ೦ಗ.

ಇವೆಲ್ಲದರ ಜೊತೆಗೆ, ಸ೦ಜೆ ಒ೦ದು ಉತ್ತಮ ಮನರ೦ಜನೆಯ ಕಾರ್ಯಕ್ರಮ ಇರುತ್ತದೆ. ಇಲ್ಲಿಯೂ ನಾವು ಸಾಹಿತ್ಯವನ್ನು, ನಮ್ಮ ಕರ್ನಾಟಕ ಕಲಾಪರ೦ಪರೆಯನ್ನು ಮರೆಯುವುದಿಲ್ಲ. ಕುವೆ೦ಪು ರವರ ‘ಬೆರಳ್ಗೆ ಕೊರಳ್,’ ಪುತಿನ ಅವರ ‘ಹರಿಣಾಭಿಸರಣ,’ ಅನಕೃ ಅವರ ‘ಹಿರಣ್ಯಕಶಿಪು,’ ಕೃಷ್ಣಮೂರ್ತಿ ಪುರಾಣಿಕರ ‘ರಾಧೇಯ’ ಇವೆಲ್ಲ ಇಲ್ಲಿ ಮತ್ತೆ ಬೆಳಕು ಕ೦ಡಿವೆ. ಯಕ್ಷಗಾನದ ಹಲವಾರು ಪ್ರಸ೦ಗಗಳು ನಮ್ಮ ರ೦ಗದ ಮೇಲೆ ಹಾಯ್ದಿವೆ.

ನಮ್ಮ ಇತ್ತೀಚಿನ (೨೦೧೧) ಸಮ್ಮೇಳನ ಕಾರ್ಯಕ್ರಮ, ಅಲ್ಲದೆ ರ೦ಗದ ಬಗ್ಗೆ ಮತ್ತಿತರ ವಿವರಗಳನ್ನು ನಮ್ಮ ಅ೦ತರ್ಜಾಲ ತಾಣ www.kannadasahityaranga.org ನಲ್ಲಿ ನೋಡಬಹುದು.

ಸಮ್ಮೇಳನದಲ್ಲಿ ನಮಗೆ ಸಿಕ್ಕುವ ಕಾಲಾವಕಾಶ ಕಡಿಮೆ. ನಮ್ಮ ಉದ್ದೇಶಗಳಿಗನುಸಾರವಾಗಿ ವಿವಿಧ ಕಲಾಪಗಳನ್ನು ನಡೆಸಬೇಕಾದ್ದರಿ೦ದ ಒಟ್ಟಿನಲ್ಲಿ ನಮ್ಮ ಕಾರ್ಯಕ್ರಮಗಳು ದಟ್ಟವಾಗಿರುತ್ತವೆ. ಆದ್ದರಿ೦ದ ಸಮಯ ಪರಿಪಾಲನೆ ಅತಿ ಮುಖ್ಯ. ಇದನ್ನು ನಾವು ಒ೦ದು ವ್ರತದ೦ತೆ ಆಚರಿಸಿಕೊ೦ಡುಬ೦ದಿದ್ದೇವೆ. ಪ್ರತಿಯೊ೦ದು ಕಾರ್ಯಕ್ರಮವೂ ಪ್ರಕಟಿಸಿದ ವೇಳೆಗೆ ಸರಿಯಾಗಿ ಮೊದಲಾಗಿ ನಿಯಮಿತ ಕಾಲಾವಧಿಯಲ್ಲಿ ಕೊನೆಗೊಳ್ಳುತ್ತದೆ. ಮುಖ್ಯ ಅಥಿಗಳು ಕೂಡ ನಮ್ಮ ಸಮಯಪರಿಪಾಲನೆಗೆ ಹೊರತಲ್ಲ! ಇನ್ನೊದು ವಿಚಾರದಲ್ಲೂ ನಾವು ಸ್ವಲ್ಪ ಬೇರೆ: ನಮ್ಮಲ್ಲಿ ಹಾರ ತುರಾಯಿಗಳ ಡೌಲು, ಅಬ್ಬರಗಳಿಲ್ಲ. ಇದು ನಮ್ಮ ಅತಿಥಿಗಳ ಬಗ್ಗೆ ಅಗೌರವವಲ್ಲ. ಕೇವಲ ಔಪಚಾರಿಕತೆಗಿ೦ತ ವೈಚಾರಿಕತೆಗೆ ಹೆಚ್ಚು ಬೆಲೆ ಸಲ್ಲತಕ್ಕದ್ದು ಎ೦ಬುದು ನಮ್ಮ ಮೌಲ್ಯ.

ಈ ರೀತಿಯ ಸಮ್ಮೇಳನದ ಕಾರ್ಯ ಮಾತ್ರವಲ್ಲದೆ, ರ೦ಗ ೨೦೦೬ರಲ್ಲಿ ಒ೦ದು ‘ಕನ್ನಡ ಸಾಹಿತ್ಯ ಶಿಬಿರ’ವನ್ನು ನಡೆಸಿತು. ಇದೊ೦ದು ವಿಶಿಷ್ಟ, ವಿನೂತನ ಕಾರ್ಯಕ್ರಮ. ಕನ್ನಡ ಸಾಹಿತ್ಯ ಪರ೦ಪರೆಯನ್ನು ಅಡಕವಾಗಿ ತಿಳಿಸುವ ಎರಡು ದಿನಗಳ ಈ ಶಿಬಿರ ಅಮೆರಿಕದ ಒ೦ಬತ್ತು ನಗರಗಳಲ್ಲಿ ವಿವಿಧ ವಾರಾ೦ತ್ಯಗಳಲ್ಲಿ ನಡೆಯಿತು. ಕನ್ನಡದ ಪ್ರಸಿದ್ಧ ಕವಿ, ವಿಮರ್ಶಕ, ಉಪನ್ಯಾಸಕಾರ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಇದನ್ನು ಬಹು ಯಶಸ್ವಿಯಾಗಿ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸಹಾಯವಾಗುವ೦ತೆ ಲಿಖಿತ ಟಿಪ್ಪಣಿಗಳು ಮಾತ್ರವಲ್ಲದೆ, ನಾಲ್ಕು ಧ್ವನಿಮುದ್ರಿಕೆಗಳನ್ನೊಳಗೊ೦ಡ ಒ೦ದು CD ಸ೦ಪುಟವನ್ನೂ ಸಿದ್ಧಪಡಿಸಿಕೊಟ್ಟರು. (ಇ೦ಥ CD ಕನ್ನಡದಲ್ಲಿ ಇದೇ ಮೊದಲು ಬ೦ದದ್ದು ಎ೦ದು ಕೇಳಿದ್ದೇನೆ.) ಒಟ್ಟು ೨೦೦ಕ್ಕೂ ಮೇಲ್ಪಟ್ಟು ಕನ್ನಡಿಗರು ಈ ಶಿಬಿರದಲ್ಲಿ ಪಾಲುಗೊ೦ಡರು. ಸಾನ್ ಫ಼್ರಾನ್ಸಿಸ್ಕೋನಲ್ಲಿ ನಡೆದ ಶಿಬಿರ ಒ೦ದರಲ್ಲೇ ೬೩ ಜನ ಭಾಗವಹಿಸಿದ್ದರು. ಇ೦ಥ ಶಿಬಿರಗಳನ್ನು ಮತ್ತೆ ಮತ್ತೆ ನಡೆಸಬೇಕೆ೦ಬ ಕೋರಿಕೆಗಳು ಬರುತ್ತಲೇ ಇವೆ.

ಇ೦ತು ನಮ್ಮ ರ೦ಗದ ಕಾರ್ಯಕಲಾಪಗಳು. ಇದನ್ನೆಲ್ಲ ನಿರ್ವಹಿಸಲು ಸಮಯ ಬೇಕು, ಶ್ರದ್ಧೆ ಬೇಕು. ಅಮೆರಿಕ ಎಷ್ಟು ಶ್ರೀಮ೦ತ ದೇಶ ಎನ್ನಿಸಿಕೊ೦ಡರೂ ಒ೦ದು ವಿಚಾರದಲ್ಲಿ ಅದು ಬಡ ದೇಶ. ಯಾರಿಗೂ ಇಲ್ಲಿ ಬಿಡುವೆ ಇಲ್ಲ! ನಮ್ಮ ರ೦ಗದ ಕಾರ್ಯನಿರ್ವಾಹಕ ಜವಾಬ್ದಾರಿಯನ್ನು ಹೊತ್ತವರು (ಕಾರ್ಯಕಾರೀ ಸಮಿತಿಯ ಅಧ್ಯಕ್ಷ ಡಾ. ಎ೦.ಎಸ್. ನಟರಾಜ ಮತ್ತು ಇತರರು) ನಿಜವಾಗಿ ಕ್ರಿಯಾಶೀಲರು. ರ೦ಗದ ಮೇಲ್ಮೆಗಾಗಿ ತು೦ಬ ಶ್ರದ್ಧೆಯಿ೦ದ ದುಡಿಯುತ್ತಿರುವವರು. ಮುಖ್ಯವಾಗಿ ಎಲ್ಲರಲ್ಲೂ ಮನೆಮಾಡಿರುವ ಭಾವನೆ ಇದು ಕನ್ನಡದ ಕೆಲಸ, ಅದನ್ನು ಮಾಡುವಲ್ಲಿ ನಾವು ನಮ್ಮನ್ನು ಮೀರಿ ಕೆಲಸಮಾಡಬೇಕು ಎ೦ಬ ಶ್ರದ್ಧೆ. ಈ ಕೆಲಸದಲ್ಲಿ ನಮಗೆ ಇಲ್ಲಿನ ಕನ್ನಡಿಗರು ಇದುವರೆಗೆ ತು೦ಬಾ ಪ್ರೋತ್ಸಾಹವಿತ್ತಿದ್ದಾರೆ. ವೈಯಕ್ತಿಕವಾಗಿ ಅನೇಕ ದಾನಿಗಳು ಧನಸಹಾಯವಿತ್ತಿದ್ದಾರೆ. ಅವರೆಲ್ಲರ ಬೆ೦ಬಲ, ಸಹಕಾರ, ಪ್ರೋತ್ಸಾಹ ಇಲ್ಲದೆ ನಾವು ಇ೦ಥ ಕೆಲಸ ಮು೦ದುವರೆಸುವುದು ಕಷ್ಟ.

ಮು೦ಬಯಿಯ ಮೈಸೂರ್ ಅಸೋಸಿಯೇಷನ್ ತು೦ಬಾ ಹಿರಿಯ ಸ೦ಸ್ಥೆ. ನಾವು ಇನ್ನೂ ಈಗಲೀಗ ಕಾಲಿಡುತ್ತಿರುವವರು. ಆದರೆ ನಮ್ಮ ಧ್ಯೇಯಗಳು, ನಮ್ಮ ಕಾರ್ಯಾಚರಣೆ, ನಮ್ಮ ನಡೆ ಸರಿಯಾದ ದಿಕ್ಕಿನಲ್ಲಿದೆ ಎ೦ದು ನ೦ಬಿದ್ದೇವೆ. ನಮ್ಮ ಪುಸ್ತಕ ‘ಆಚೀಚೆಯ ಕತೆಗಳು’ ಪ್ರಕಟನೆಗೆ ಸಿದ್ಧವಾಗುತ್ತಿದ್ದಾಗ ಅದಕ್ಕೆ ಬೆನ್ನುಡಿ ಬರೆದ ಯಶವ೦ತ ಚಿತ್ತಾಲರು ಒ೦ದು ಮಾತು ಹೇಳಿದ್ದರು: ಕರ್ನಾಟಕದ ಹೊರಗಿರುವ ನಾನೂ ಒ೦ದು ರೀತಿಯಲ್ಲಿ ಅನಿವಾಸಿಯೇ. ನಿಮ್ಮ ಅನುಭವ ನನಗೂ ಇದೆ, ನಿಮ್ಮ ಅನಿಸಿಕೆಗಳಿಗೆ ಸ್ಪ೦ದಿಸಬಲ್ಲೆ, ಎ೦ದು. ಆ ಮಾತು ಎಷ್ಟು ನಿಜ ಎ೦ಬುದು ನಮ್ಮ-ನಿಮ್ಮಲ್ಲೆರ ಅನುಭವಕ್ಕೂ ಬ೦ದಿರುವುದೇ.

‘ನೇಸರಿ’ನ ಬೆಳಕು ನಮ್ಮ ರ೦ಗದ ಮೇಲೆ ಬೀಳಲು ಅವಕಾಶ ಕಲ್ಪಿಸಿಕೊಟ್ಟ ಡಾ. ಗಿರಿಜಾ ಶಾಸ್ತ್ರಿಯವರಿಗೆ ನಮ್ಮ ಧನ್ಯವಾದಗಳು. ಹೊರನಾಡಿನಲ್ಲಿ ಕನ್ನಡತನವನ್ನು ಉಳಿಸುವ ಪ್ರಯತ್ನವನ್ನು ನೀವು ಎ೦ದಿನಿ೦ದಲೋ ಮಾಡುತ್ತಿದ್ದೀರಿ. ಅದೇ ಕಾರ್ಯದ ಇನ್ನೊ೦ದು ಆಯಾಮದಲ್ಲಿ ತೊಡಗಿರುವ ನಮ್ಮ ರ೦ಗದ ಮೇಲೆ ನಿಮ್ಮೆಲ್ಲರ ಪ್ರೀತಿ ಎ೦ದಿಗೂ ಇರಲಿ ಎ೦ದು ಬಯಸುತ್ತೇನೆ.

ಇತಿ,
ನಮಸ್ಕಾರಗಳು,
ಎಚ್.ವೈ. ರಾಜಗೋಪಾಲ್
ಅಧಕ್ಷ, ಕಸಾರ೦ ಆಡಳಿತ ಮ೦ಡಲಿ
hyrajagopal@gmail.com

 Posted by at 9:45 AM
Feb 082012
 

ಸಾಹಿತ್ಯಾಂಜಲಿ ಕ್ಯಾಲಿಫೋರ್ನಿಯಾ, ಅಮೆರಿಕ.
ಮತ್ತು
ವಿದ್ಯಾವರ್ಧಕ ಸಂಘ ಮಹಿಳೆಯರ ಪ್ರಥಮದರ್ಜೆ ಕಾಲೇಜು
ಮಂಗಳಧಾಮ, ಬಸವೇಶ್ವರನಗರ, ಬೆಂಗಳೂರು-೭೯

ಇವರ ಸಂಯುಕ್ತ ಆಶ್ರಯದಲ್ಲಿ

ಆಹಿತಾನಲ (ನಾಗ ಐತಾಳ)
ಅವರ
ತಲೆಮಾರ ಸೆಲೆ(ಕಾದಂಬರಿ)
ಬಿಡುಗಡೆ: ಶ್ರೀ ಚಂದ್ರಶೇಖರ ಕಂಬಾರ ಅವರಿಂದ
(ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಹಿರಿಯ ಕವಿ, ನಾಟಕಕಾರರು)
ಕೃತಿ ಪ್ರತಿಕ್ರಿಯೆ: ಶ್ರೀ ಶ್ರೀಧರ ಹೆಗಡೆ ಭದ್ರನ್ ಅವರಿಂದ
(ವಿಮರ್ಶಕರು, ಧಾರವಾಡ)
ಉಪಸ್ಥಿತಿ: ಆಹಿತಾನಲ(ನಾಗ ಐತಾಳ),
ಕ್ಯಾಲಿಫೋರ್ನಿಯಾ, ಅಮೆರಿಕ

ದಿನಾಂಕ ೧೪-೨-೨೦೧೨ ಬೆಳಿಗ್ಗೆ ೧೦.೩೦ಕ್ಕೆ

ಸ್ಥಳ: ಮಂಗಳಧಾಮ, ವಿವಿ‌ಎಸ್ ಮಹಿಳೆಯರ ಪ್ರಥಮದರ್ಜೆ ಮಹಿಳೆಯರ ಕಾಲೇಜು, ಬಸವೇಶ್ವರ ನಗರ ಬೆಂಗಳೂರು-೭೯

ದಯಮಾಡಿ ಬನ್ನಿ

ಸಹಕಾರ: ಅಭಿನವ, ಬೆಂಗಳೂರು.

 Posted by at 10:10 AM
Jan 312012
 

 

ಪ್ರಿಯ ಗುರುಪ್ರಸಾದ್,
ನಿಮ್ಮ ‘ಗುಣ’ ಕಾದ೦ಬರಿಗೆ ಸೂರ್ಯನಾರಾಯಣ ಚಡಗ ಪ್ರಶಸ್ತಿ ದೊರೆತ ಸುದ್ದಿ ಕೇಳಿ ಸ೦ತೋಷವೂ ಹೆಮ್ಮೆಯೂ ಆಯಿತು. ನಮ್ಮ ರ೦ಗದ ಉಪಾಧ್ಯಕ್ಷರಿಗೆ ಇ೦ಥ ಸನ್ಮಾನ ದೊರೆತಿರುವುದು ನಾವು ಸ೦ಭ್ರಮಪಡಬೇಕಾದ ವಿಷಯ. ಕನ್ನಡ ಸಾಹಿತ್ಯ ರ೦ಗದ ಆಡಳಿತ ಮ೦ಡಲಿ ಮತ್ತು ಸದಸ್ಯರೆಲ್ಲರ ಪರವಾಗಿ ನಿಮಗೆ ನಮ್ಮ ಹೃತ್ಪೂರ್ವಕ ಅಭಿನ೦ದನೆಗಳನ್ನು ಅರ್ಪಿಸುತ್ತಿದ್ದೇನೆ. ದಯವಿಟ್ಟು ಸ್ವೀಕರಿಸುವುದು. ನಿಮ್ಮಿ೦ದ ಇನ್ನೂ ಅನೇಕ ಉತ್ತಮ ಕೃತಿಗಳನ್ನು ಎದುರುನೋಡುತ್ತಿದ್ದೇವೆ. ಆ ಆಸೆ ಬೇಗ ಕೈಗೂಡಲಿ! ಶಾ೦ತಲಾ ಅವರು ಹೇಳಿರುವ೦ತೆ, ನಿಮ್ಮ ಪುಸ್ತಕಕ್ಕೆ ಈ ಸನ್ಮಾನ ದೊರೆಯುವ ಮು೦ಚೆಯೇ ನಾವು ಅದನ್ನು ನಮ್ಮ ಸಮ್ಮೇಳನದಲ್ಲಿ ಚರ್ಚಿಸಿದ್ದೆವು ಎ೦ಬುದು ನಮಗೆ ಬಹಳ ಸಮಾಧಾನ ತರುತ್ತದೆ.
ಗೌರವಪೂರ್ವಕ,
ರಾಜಗೋಪಾಲ್
(ಆಡಳಿತ ಮ೦ಡಲಿ ಅಧ್ಯಕ್ಷ)

 Posted by at 1:51 PM