admin

May 062011
 

ಜಯಂತ್ ಕಾಯ್ಕಿಣಿ

 

 

 

ಅಮೆರಿಕೆಯಲ್ಲಿ ಬಿಡಾರ ಹೂಡಿರುವ ಕನ್ನಡ ಪರಿಸರದ ಸ್ಥಾಯೀ ಮತ್ತು ಸಂಚಾರೀ ಭಾವಗಳ, ವೈವಿಧ್ಯಪೂರ್ಣ ಆಧುನಿಕ ಅಭಿವ್ಯಕ್ತಿಯ ವಿಶಿಷ್ಟ ಸೊಲ್ಲುಗಳ ಸಂಕಲನ ಇದು.  ಕಾವ್ಯದ ಧ್ವನಿಶಕ್ತಿಯ ಜೊತೆಗೆ ಕಥನದ ಕುತೂಹಲವನ್ನೂ ಹೊಂದಿರುವ ಈ ಲಲಿತ ನಿಬಂಧಗಳು, ತಮ್ಮ ಅನುಭವಜನ್ಯ ವಿವರಗಳಲ್ಲಿ ಮೈದಾಳುತ್ತಲೇ,  ಅದರಾಚೆಗೂ ಚಿಂತನಶೀಲವಾಗಿ ರೆಕ್ಕೆ ಬಿಚ್ಚುವ ರೀತಿ ಭಾವೋದ್ದೀಪಕವಾಗಿದೆ.  ಹೊಸ ಆವರಣ, ಜೀವನ ಶೈಲಿಯ ವಿವರ, ಮಾಹಿತಿಗಳಷ್ಟೆ ಪ್ರಬಂಧವಾಗಲಾರವು. ವಿವರಗಳು ಅರಿವಿನೆಡೆಯ ಕಿಟಕಿಗಳೂ, ಬಾಗಿಲುಗಳೂ, ಕಾಲ್ದಾರಿಗಳೂ ಆದಾಗ ಮಾತ್ರ ಅದು ಸಾರ್ಥಕ ಸಲ್ಲಾಪ.

‘ಕೆಂಪು ಗಾಜಿನ ಹಣ್ಣುಗಳಂತೆ ಕಾಣುವ ಗಾರ್ನೆಟ್‌ಗಳು’, ‘ಸ್ಕೂಟರನ್ನು ಬೆದರಿಸುವ ಲಾರಿಯಂತೆ ಲೇಖಕಿಯನ್ನು ಕಂಗೆಡಿಸುವ ಖಾಲಿ ಹಾಳೆ’, ‘ಬಡಿಸಿದ್ದು ಆರಿ ಹೋಗ್ತಾ‌ಇದೆ, ಊಟಕ್ಕೆ ಬಾರೋ’ ಎಂದು ಕರೆಯುತ್ತಲೇ ಇರುವ ಅಮ್ಮನ ದನಿ, ‘ಮತಿಘಟ್ಟದ ಅಪರೂಪದ ಹತ್ತಿಯಷ್ಟೇ ಮೃದುವಾದ ನೆಹರೂರ ಕೈಕುಲುಕನ್ನು ನೆನೆಯುವ ಅಜ್ಜಯ್ಯ’, ‘ಐಸಿಯು’ನ ವೆಂಟಿಲೇಟರಿನಲ್ಲಿ ಹೋಗದ ಗಂಗೋದಕ’, ‘ಊರಿನ ಆಯಿಗೆಂದೇ ಕಾದಿರಿಸಿದ ಮಾಲ್‌ನ ಇಪ್ಪತ್ತು ಪೌಂಡ್ ಅಕ್ಕಿಯ ಸೋನಾಮಸೂರಿಯ ಖಾಲಿಚೀಲ’, ‘ಬಡವನ ಪಾಲಿನ ಕೇವಲ ಕಪ್ಪುಬಿಳಿಬಣ್ಣದ ಕಾಮನಬಿಲು’,  ‘ಎಂದೂ ಹಾದಿ ತಪ್ಪಿಸದ ಎದೆಯ ಜಿ.ಪಿ.ಎಸ್’,  ‘ಎಚ್‌ಒನ್‌ಎನ್‌ಒನ್’ಗಿಂತ ಭಯಾನಕವಾದ ‘ಎಚ್‌ಒನ್’(ವೀಸಾ) ಆತಂಕ, ‘ಕ್ಷಣವನ್ನು ಹಿಡಿಯುವುದನ್ನು ಹೇಳಿಕೊಡುವ ಟೀವಿ ಗುರು’, ‘ಕಳೆದುಕೊಂಡದ್ದರ ಕುರಿತ ದಿಢೀರ್ ವೈರಾಗ್ಯ’, ‘ಸೊನ್ನೆಯಿಂದ ಅನಂತದ ನಡುವಿನ ಶೂನ್ಯ ಸಂಪಾದನೆ’, ‘ನೆನಪಿನ ಚಿಲಿಪಿಲಿಗಳಿಂದ ನೇಯ್ದ ಖಾಲಿಗೂಡು’, ‘ಬರೆದು ಒರೆಸಿದಷ್ಟೂ ನುಣುಪಾಗುವ, ಅಂಚು ಮೊಂಡಾದ ಕಲ್ಲಿನ ಪಾಟಿ(ಸ್ಲೇಟ್)’ …. ಇಂಥ ಎಷ್ಟೊಂದು ಸಜೀವ ಸಂಗತಿಗಳು, ಒಟ್ಟಾಗಿ ಒಂದು ದರ್ಶನದೆಡೆಗೆ ಪ್ರಾಮಾಣಿಕವಾಗಿ ಚಲಿಸುವ ರೀತಿಯೇ ಈ ನಿಬಂಧಗಳ ನಿರಾಡಂಬರ ಸ್ಥೈರ್ಯವಾಗಿದೆ. ಇಂಥ ವಿವರಗಳು ಕೇವಲ ಕಲೆಹಾಕುವ ‘ಮಾಹಿತಿ’ಗಳಾಗದೆ, ಒಂದು ಮನೋಧರ್ಮವನ್ನು ರೂಪಿಸುವ ಸ್ಪಂದನವಾಗಿ ಬೆಳೆಯುವುದರಿಂದಲೇ, ಇಲ್ಲಿನ ಹೆಚ್ಚಿನ ಬರಹಗಳು ಕನ್ನಡ ಸಂವೇದನೆಯನ್ನು ಹಿಗ್ಗಿಸುವಷ್ಟು ಸತ್ವಶಾಲಿಯಾಗಿವೆ.

ಜಯಂತ ಕಾಯ್ಕಿಣಿ

 Posted by at 10:39 AM
May 052011
 
ಪುಸ್ತಕ ಮಳಿಗೆಯಲ್ಲಿ ‘ …ಮಾತು.’

ಅಮೆರಿಕದಲ್ಲಿ ಬೇರೆಬೇರೆ ಬಗೆಯ ಕನ್ನಡಿಗರ ಸಮಾವೇಶಗಳು ನಡೆಯುವುದು ನಮಗೆಲ್ಲ ತಿಳಿದಿದೆ. ಅವುಗಳಲ್ಲೆಲ್ಲ ಗಂಭೀರ ಸಾಹಿತ್ಯಾಸಕ್ತರು ಸೇರಿ ರಚಿಸಿಕೊಂಡಿರುವ ಸಾಹಿತ್ಯರಂಗದ ಕಾರ್ಯಕ್ರಮಗಳು ಇದಕ್ಕಿಂತ ಕೊಂಚ ಭಿನ್ನವಾಗಿವೆ ಮತ್ತು ವಿಶಿಷ್ಟವಾಗಿವೆ. ಸಾಹಿತ್ಯ ರಂಗವು ಕನ್ನಡ ಸಾಹಿತ್ಯದ ಮೇಲೆ  ಚರ್ಚೆಯನ್ನು ಏರ್ಪಡಿಸುತ್ತದೆ; ಮತ್ತು ಅಮೆರಿಕದಲ್ಲಿರುವ ಕನ್ನಡ ಲೇಖಕರು ಬರೆದಿರುವ ಬರಹಗಳ ಸಂಕಲನವನ್ನು ಪ್ರಕಟಿಸುತ್ತದೆ. ಕರ್ನಾಟಕದಲ್ಲಿ ಉತ್ಸವಗಳು ಹೆಚ್ಚಾಗುತ್ತ ಸಂವಾದ ಮತ್ತು ಚರ್ಚೆಗಳು ಕಡಿಮೆಗೊಳ್ಳುತ್ತಿವೆ ಅನಿಸುತ್ತಿರುವ ಈ ಹೊತ್ತಲ್ಲಿ, ಸಾಹಿತ್ಯ ರಂಗದ ಈ ಉಪಕ್ರಮವು ಮಹತ್ವದ್ದಾಗಿ ತೋರುತ್ತಿದೆ. ಅಮೆರಿಕ ಕನ್ನಡಿಗರ ಬರೆಹಗಳ ಸಂಕಲನವಾಗಿರುವ ಪ್ರಸ್ತುತ ಕೃತಿಯು, ಈ ಬಾರಿಯ ವಸಂತೋತ್ಸವದಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೆ ನಾನು ಮುನ್ನುಡಿಯನ್ನು ಬರೆಯಬೇಕೆಂದು ಸಾಹಿತ್ಯರಂಗದ ಅಧ್ಯಕ್ಷರಾದ ಶ್ರೀ. ರಾಜಗೋಪಾಲ್ ಅವರು ಇಚ್ಛೆಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಈ ಸಂಕಲನದಲ್ಲಿರುವ ಬರಹಗಳನ್ನು ಸಂಪಾದಕರು ಸಲ್ಲಾಪ ಹರಟೆ ಚಿಂತನೆ ಎಂದು ಮೂರು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಆದರೆ ಅನುಭವ ಮತ್ತು ಚಿಂತನಾ ಪ್ರಧಾನವಾದ ಈ ಬರೆಹಗಳನ್ನು ಒಟ್ಟಾರೆಯಾಗಿ ಪ್ರಬಂಧಗಳು ಎನ್ನಬಹುದು. ಈ ಪ್ರಬಂಧಗಳನ್ನು ಓದುತ್ತ ನನಗೆ ಅಮೆರಿಕ ಕನ್ನಡಿಗರ ಬಾಳಿನ ಒಂದು ಮುಖದ ದರ್ಶನವಾದಂತಾಯಿತು. ಬೇರೆಬೇರೆ ಕ್ಷೇತ್ರದಲ್ಲಿ ಹಾಗೂ ಜ್ಞಾನಶಿಸ್ತಿನಲ್ಲಿ ಕೆಲಸ ಮಾಡುವ ಜನರು ಕನ್ನಡದೊಳಗೆ ಬರೆಯುವುದರಿಂದ ಕನ್ನಡ ಬರೆಹಕ್ಕೆ ಹೊಸಶಕ್ತಿಯ ಆವಾಹನೆಯಾಗುತ್ತದೆ ಎಂದು ನಂಬಿದವನು ನಾನು. ಈ ಬರೆಹಗಳನ್ನು ಓದಿದ ಮೇಲೆ, ಬೇರೆಬೇರೆ ದೇಶಗಳಲ್ಲಿ ಇರುವ ಕನ್ನಡಿಗರು ಬರೆದಾಗಲೂ ಕನ್ನಡಕ್ಕೆ ಹೊಸ ಆಯಾಮದ ಕೂಡಿಕೆಯಾಗುತ್ತದೆ ಎಂದು ಅನಿಸುತ್ತಿದೆ. ಈ ಬರೆಹಗಳ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಹೋಗಿಬಂದವರು ಬರೆದ ಅನೇಕ ಪ್ರವಾಸಕಥನಗಳ ಮಿತಿಯೂ ಹೊಳೆಯುತ್ತಿದೆ.

ಇಲ್ಲಿನ ಲೇಖಕರು ಮುಖ್ಯವಾಗಿ ವೈದ್ಯರು ಇಂಜಿನಿಯರರು ವಿಜ್ಞಾನಿಗಳು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆಗಿರುವರು. ಇವರಲ್ಲಿ ಅರ್ಧದಷ್ಟು ಜನ ಮಹಿಳೆಯರು ಎನ್ನುವುದು ಸಹ ಕುತೂಹಲಕರ. ಇಲ್ಲಿನ ಲೇಖಕರಿಗೆ ಪುರುಸೊತ್ತೇ ಇಲ್ಲದ ದುಡಿಮೆ ಮತ್ತು ಸಾಂಸ್ಕೃತಿಕ ಏಕಾಂಗಿತನವೇ ಈ ಬಗೆಯ ಬರೆಹಗಳಲ್ಲಿ ಅವರನ್ನು ತೊಡಗಿಸಿರುವಂತೆ ತೋರುತ್ತದೆ. ಹೀಗಾಗಿ ಇಲ್ಲಿನ ಬರೆಹಗಳಿಗೆ ಆಯಾ ಲೇಖಕರ ವೈಯಕ್ತಿಕ ವಿಶಿಷ್ಟತೆ ಮತ್ತು ಲೋಕದೃಷ್ಟಿಗಳ ಆಚೆ, ಒಂದು ಸಾಮುದಾಯಕ ಲಕ್ಷಣವೂ ಇದೆ. ಉದಾಹರಣೆಗೆ, ಇಲ್ಲಿನ ಬರೆಹದ ಮುಖ್ಯ ವಸ್ತು, ಕಳೆದುಹೋದ ಬಾಳಿನ ಅಥವಾ ಬಿಟ್ಟುಬಂದ ದೇಶದ ನೆನಪುಗಳಿಗೆ ಸಂಬಂಧಪಟ್ಟಿರುವುದು ಗಮನಿಸಬೇಕು. ಹೀಗಾಗಿಯೇ ಬಾಲ್ಯದ ಬದುಕಿನ ಸಂಗತಿಗಳು ಇಲ್ಲಿ ಬಹುತೇಕ ಬರೆಹಗಳ ‘ವಸ್ತು’ವಾಗಿವೆ. ಇದರಿಂದ ಸಹಜವಾಗಿಯೇ ಬರೆಹಗಳಲ್ಲಿ ಭಾವುಕತೆ ಪ್ರಧಾನವಾಗಿ ಕೆಲಸ ಮಾಡಿದೆ. ಇಲ್ಲಿರುವ ಅಡುಗೆ ಮತ್ತು ಊಟದ ವಿವರಗಳು ಕೂಡ ಗತದ ಸ್ಮೃತಿಗಳಲ್ಲಿ ಆಹಾರ ಸಂಸ್ಕೃತಿಯ ಪ್ರಾಮುಖ್ಯವನ್ನು ಸೂಚಿಸುತ್ತಿವೆ. ಇಲ್ಲಿ ಬಳಕೆಯಾಗಿರುವ ಕರ್ನಾಟಕದ ಬೇರೆಬೇರೆ ಭಾಗದ ಪ್ರಾದೇಶಿಕ ವಿಶಿಷ್ಟವಾದ ಮಾತುಕತೆಗಳು ಬರೆಹವನ್ನು ಜೀವಂತಗೊಳಿಸಿವೆ. ಮಾತ್ರವಲ್ಲ, ಅವು ದೂರದೇಶದಲ್ಲಿದ್ದು ಊರನ್ನು ನೆನೆಯುವ ಒಳ ಉಪಾಯವಾಗಿಯೂ ಬಂದಂತಿವೆ.

ಇಲ್ಲಿನ ಬರಹಗಳಿಗೆ ಇನ್ನೊಂದು ಮುಖವಿದೆ. ಅದು ಬದುಕಿಗಾಗಿ  ಆಯ್ದುಕೊಂಡಿರುವ ಹೊಸ ದೇಶದಲ್ಲಿ ಅನುಭವಿಸುವ ಕಷ್ಟ ಸುಖಗಳನ್ನು ಕುರಿತದ್ದು. ಅಪರಿಚಿತವಾದ ನಾಗರಿಕ ಸಮಾಜದಲ್ಲಿ ಬದುಕನ್ನು ಸವಾಲಾಗಿ ಸ್ವೀಕರಿಸಿದ ಜನ ಮಾಡಿರುವ ಹೋರಾಟ ಮತ್ತು ಬೆಳೆಸಿಕೊಂಡಿರುವ ಹೊಸ ಸಂಬಂಧಗಳ ಚಿತ್ರಣವೂ ಇಲ್ಲಿದೆ. ಗೆಳತಿಯ ಮನೆಗೆ ಹೋದ ಅನುಭವವನ್ನು ಹೇಳಿಕೊಂಡಿರುವ ಮಾಲಾರಾವ್ ಅವರ ಲೇಖನವು ಅಮೆರಿಕವನ್ನು ತನ್ನದೆಂದು ಭಾವಿಸಿದ ಸದರ ಮತ್ತು ಆಪ್ತತೆಯಲ್ಲಿಯೇ ಹುಟ್ಟಿದ್ದು. ಇದಕ್ಕೆ ಪ್ರತಿಯಾಗಿ, ಮರಳಿ ಸ್ವದೇಶಕ್ಕೆ ಬಂದಾಗ, ಸ್ವಂತ ಊರಿನಲ್ಲಿ ತಿರುಗಾಡುವಾಗ, ಪರಕೀಯತೆಯ ಭಾವ ಅನುಭವಿಸುವಿಕೆ ಬರೆಹಗಳೂ ಇವೆ. ಬಹುಶಃ ಪರದೇಶದಲ್ಲಿ ಅನುಭವಿಸುವ  ಪರಕೀಯತೆಯ ಭಾವಕ್ಕಿಂತ ನಮ್ಮ ಊರುಗಳಲ್ಲೇ ಅನುಭವಿಸುವ ಪರಕೀಯತೆಯು ಹೆಚ್ಚು ವಿಚಿತ್ರವಾದುದು. ಸಂಕಟಕರವಾದುದು. ಆದರೆ ಅದನ್ನು ಹೇಳಿಕೊಳ್ಳುವುದಕ್ಕೆ ಪ್ರಾಮಾಣಿಕತೆ ಬೇಕು. ದತ್ತಾತ್ರಿಯವರ ಲೇಖನವು,  ನೆನಪುಗಳ ಭಾವುಕತೆಯು ಬದಲಾದ ವಾಸ್ತವತೆಯ ಜತೆ ಮುಖಾಮುಖಿ ಮಾಡಿದಾಗ ಹುಟ್ಟುವ ಕಟುವಾದ ಅನುಭವಗಳನ್ನು ನಮಗೆ ಮುಟ್ಟಿಸುತ್ತದೆ.

ಹೀಗೆ ಬಿಟ್ಟುಹೋದ ದೇಶದ ಮತ್ತು ಬದುಕುತ್ತಿರುವ ದೇಶದ ಎರಡೂ ಅನುಭವ ಲೋಕಗಳು ಸೇರಿ, ಇಲ್ಲಿನ ಬರೆಹಗಳಲ್ಲಿ ಒಂದು ಬಗೆಯ ಇಂಡೊ-ಅಮೆರಿಕನ್ ಎಂದು ಕರೆಯಬಹುದಾದ ಒಂದು ಅನುಭವಲೋಕವು ನಿರ್ಮಾಣವಾಗಿದೆ. ಹೊಸ ಮತ್ತು ಹಳೆಯ ತಲೆಮಾರಿನ ಲೇಖಕರು ಒಟ್ಟಿಗೆ ಬರೆದಿರುವುದರಿಂದ, ಹಳೆಯ ಅಮೆರಿಕ ಚಿತ್ರದಿಂದ ಬದಲಾದ ಅಮೆರಿಕದ ಚಿತ್ರದವರೆಗೆ ಹಳೆಯ ಭಾರತದಿಂದ ಬದಲಾದ ಭಾರತದವರೆಗೆ, ಎರಡೂ ದೇಶಗಳ ಅಂದು ಇಂದಿನ ಚಿತ್ರಗಳು ಇಲ್ಲಿ ಸಿಗುತ್ತವೆ. ಒಟ್ಟಾರೆ ಇಲ್ಲಿರುವುದು ಬದಲಾದ ಅಥವಾ ಬದಲಾಗುತ್ತಿರುವ ದೇಶಗಳ ಕಥನ.

ಇಲ್ಲಿನ ಎರಡು ಲೇಖನಗಳು ಅಮೆರಿಕದ ಹಿಂದುಧರ್ಮ ಬದಲಾಗುತ್ತಿರುವ ಚಿತ್ರವನ್ನು ಕೊಡುತ್ತದೆ. ‘ಅಮೆರಿಕೋಪನಯನ’ ಎಂಬ ಇಲ್ಲಿನ ಒಂದು ಲೇಖನದ ಹೆಸರು, ಬಹುಶಃ ಈ ಮಿಶ್ರಸಂಸ್ಕೃತಿಯನ್ನು ಮಾರ್ಮಿಕವಾಗಿ ಸೂಚಿಸುತ್ತಿದೆ. ‘ಗೇ’ ಮದುವೆ ಮಾಡಿಸಿದ ಪುರೋಹಿತನಿಂದ ಹಿಡಿದು ಭಾಷಣದ ಮೊದಲು ಶಂಖ ಊದುವ ವ್ಯಕ್ತಿಯವರೆಗೆ ಎಷ್ಟೊಂದು ಬಗೆಯ ಚಿತ್ರಗಳಿವೆ ಇಲ್ಲಿ! ಇವೆಲ್ಲವೂ ಸಂಸ್ಕೃತಿ ಧರ್ಮ ಅಧ್ಯಯನ ಮಾಡುವವರಿಗೆ ಮಹತ್ವದ ಸಂಗತಿಗಳಾಗಿವೆ. ಅಮೆರಿಕದ ಕನ್ನಡಿಗರ ಅನುಭವ ಲೋಕ ಮತ್ತು ಚಿಂತನಕ್ರಮಗಳಲ್ಲಿ ನಾನಾ ಪರಿಯಲ್ಲಿ ಅಡಗಿರುವ ಸಂಕರತನವು, ಅದನ್ನು ಅಭಿವ್ಯಕ್ತಿ ಮಾಡಲು ಬಳಸುತ್ತಿರುವ ಭಾಷೆಯನ್ನು ಸಹ ಸಂಕರಗೊಳಿಸಿಗೊಂಡಿದೆ. ಹೊಸ ಅನುಭವ ಮತ್ತು ಚಿಂತನೆಗಳು ಹೊಸ ಭಾಷೆಯನ್ನು ಕಟ್ಟಿಕೊಳ್ಳಲು ಒತ್ತಾಯ ಹಾಕುವುದು ಸಾಮಾನ್ಯ.

ಇಲ್ಲಿನ ಬರಹಗಳಲ್ಲಿ ಸಂಕ್ರಮಣದ ಅವಸ್ಥೆಯಲ್ಲಿರುವ ಜೀವನದ ಲಯವನ್ನು ಹಿಡಿಯುವುದೇ ಪ್ರಧಾನವಾಗಿದೆ. ಜಂಗಮಕ್ಕಳಿವಿಲ್ಲ ನಿಜ. ಆದರೆ ಜಂಗಮತನಕ್ಕೆ ನೋವಿನ ತಲ್ಲಣದ ಅಸ್ಥಿರತೆಯ ಸಂಕಟಗಳೂ ಇವೆ. ಇಲ್ಲಿನ ಅನೇಕ ಬರೆಹಗಳಲ್ಲಿ ಬದಲಾವಣೆ ಸಹಜವೆಂಬ ಭಾವವಿದ್ದರೂ, ಆಳದಲ್ಲಿ ಎಂತಹುದೊ ಒಂದು ಬಗೆಯ ಆತಂಕವೂ ಸುಪ್ತವಾಗಿ ಮಿಡಿಯುತ್ತ ಇದೆ. ಈ ಆತಂಕದ ಭಾಗವಾಗಿಯೇ ಇಲ್ಲಿನ ಬರೆಹಗಳಲ್ಲಿರುವ ವಿನೋದ ಪ್ರಜ್ಞೆಯನ್ನು ನೋಡಬೇಕು. ಇಲ್ಲ್ಲಿನ ಬರಹಗಳ ಶಕ್ತಿಯೂ ಆಗಿರುವ ಈ ಲಘುಶೈಲಿಯು ಲೇಖಕರ ಸಹಜ ವಿನೋದ ಪ್ರಜ್ಞೆಯಿಂದ ಮಾತ್ರ ಬಂದಿದ್ದಲ್ಲ; ಅದು ಬದುಕಿನ ಪರಿಸ್ಥಿತಿಗಳೇ ಅದನ್ನು ಸಹ್ಯವಾಗಿಸಿಕೊಂಡು ಬದುಕಲು ಹುಟ್ಟಿಸಿದ ಅನಿವಾರ್ಯವಾದ ಕೀಲೆಣ್ಣೆಯಂತೆ  ಬಂದಂತಿದೆ. ತಮ್ಮ ಹತೋಟಿಗೆ ಮಿರಿದ ಪಲ್ಲಟಗಳನ್ನು ಸಹಿಸುವುದಕ್ಕೆ ಈ ಹಾಸ್ಯಪ್ರಜ್ಞೆ ನೆರವಾಗಿರುವಂತಿದೆ. ವೈಯಕ್ತಿಕವಾಗಿ ಮೈಶ್ರೀ ಅವರ ಪ್ರಾಮಾಣಿಕ ಪೋಲಿತನ ಧ್ವನಿಪೂರ್ಣವಾದ ಮಾತುಗಳನ್ನು ಸಹಜವಾಗಿ ಬರೆಯುವುದು ಇಷ್ಟವಾಗುತ್ತದೆ.

ಇಲ್ಲಿನ ಬರಹಗಳ ಗುಣಮಟ್ಟ ಬೇರೆಬೇರೆ ತರಹ ಇದೆ. ಬರವಣಿಗೆಯ ಕಲೆಯನ್ನು ಬಲ್ಲ ಕುಶಲರು ಇರುವಂತೆ, ಕುಶಲತೆಯಿಲ್ಲದವರೂ ಇದ್ದಾರೆ. ಲವಲವಿಕೆಯ ಬರೆಹಗಳಿರುವಂತೆ ಕೆಲವು ಸೋತ ಬರೆಹಗಳೂ ಇವೆ. ಕೆಲವು ಪ್ರಬಂಧಗಳು ಅನುಭವ ಪ್ರಧಾನವಾಗಿವೆ. ಕೆಲವು ಚಿಂತನ ಪ್ರಧಾನವಾಗಿವೆ. ಆದರೆ ಅನುಭವ ಮತ್ತು ಚಿಂತನೆಯ ಎರಡೂ ಆಯಾಮಗಳನ್ನು ಬೆಸೆಯಲು ಯತ್ನಿಸಿರುವ ಬರಹಗಳೇ ಇಲ್ಲಿನ ಯಶಸ್ವೀ ಬರೆಹಗಳು. ದತ್ತಾತ್ರಿ, ಕಾಗಿನೆಲೆ, ಶಾಂತಲಾ, ಶಶಿಕಲಾ ಅವರ ಲೇಖನಗಳಲ್ಲಿ ಅಳವಟ್ಟಿರುವ ಚಿಂತನೆ ಅಪೂರ್ವವಾಗಿದೆ. ವೈಶಾಲಿ ಮತ್ತು ಶಶಿಕಲಾ ಅವರು ಒಳ್ಳೇ ಪ್ರಬಂಧಕಾರರು. ವಿಮಲಾ ಅವರು ಬಹಳ ಸಹಜವಾಗಿ ಬರೆದಿರುವ ಬರೆಹವು ಬಹಳ ಆಳವನ್ನು ಹೊಂದಿದೆ. ಅವರಿಗೆ ರೋಚಕಗೊಳ್ಳದೆ ತಣ್ಣಗೆ ದೊಡ್ಡದನ್ನು ಬರೆಯುವ ಶಕ್ತಿಯಿದೆ. ರಾಮಪ್ರಿಯನ್ ಅವರ ಹಳಹಳಿಕೆಯಿಂದ ಕೂಡಿದ್ದರೂ ಕಳೆದುಹೋದ ದಿನಗಳ ಚಿತ್ರವನ್ನು ಕೊಡುವ ಕಾರಣಕ್ಕಾಗಿಯೇ ಚಾರಿತ್ರಿಕ ಮಹತ್ವ ಪಡೆದಿದೆ.

ಅಮೆರಿಕದ ಬಗ್ಗೆ ಅದರ ಹೊರಗಿರುವ ನಮ್ಮಂತಹವರಿಗೆ ಎರಡು ಅತಿರೇಕದ  ಗ್ರಹಿಕೆಗಳಿದ್ದಂತಿವೆ. ಒಂದು ರೆಡ್‌ಇಂಡಿಯನರನ್ನು ಕೊಂದು ದೇಶವನ್ನು ಆಕ್ರಮಿಸಿಕೊಂಡು, ಗುಲಾಮಗಿರಿಯನ್ನು ಎಗ್ಗಿಲ್ಲದೆ ಮಾಡುತ್ತ, ತಮ್ಮ ಹಿತಾಸಕ್ತಿಗಳಿಗೆ ಯುದ್ಧಖೋರ ನೀತಿಯನ್ನು ಮಾಡುತ್ತಿರುವ ದೊಡ್ಡಣ್ಣ ಎಂಬುದು; ಇನ್ನೊಂದು ಅಮೆರಿಕವು ತಂತ್ರಜ್ಞಾನ ವಿಜ್ಞಾನದಲ್ಲಿ ಶಿಕ್ಷಣವುಳ್ಳ ಮಂದಿಗೆ ತೆರೆದಿರುವ ಭುವಿಯ ಮೇಲಣ ಸ್ವರ್ಗ ಎಂಬುದು. ಈ ಎರಡನೆಯ ಚಿತ್ರಕ್ಕೆ ಕಾರಣ, ಪ್ರವಾಸಿಗರಾಗಿ ಅಮೆರಿಕಕ್ಕೆ ಹೋಗಿಬಂದವರ ಪ್ರವಾಸ ಕಥನಗಳೂ  ಇರಬೇಕು. ಆದರೆ ಈ ಎರಡಕ್ಕೂ ಹೊರತಾಗಿ, ಅಲ್ಲಿಯೇ ಬದುಕುತ್ತಿರುವ ಜನರ ಗ್ರಹಿಕೆಗಳು ಬೇರೆಬೇರೆ ತರಹ ಇವೆ ಎಂಬುದನ್ನು ಈ ಕೃತಿ ಸಾದರಪಡಿಸುತ್ತದೆ. ಇಷ್ಟಾಗಿಯೂ ೯/೧೧ರ ಸ್ಮೃತಿಯು ಅನೇಕ ಬರಹಗಳಲ್ಲಿ ಕಾಣಿಸಿದ್ದು ಅದೊಂದು ವಿಷಾದಕರ ಘಟನೆಯಾಗಿ ಪಾಸಾಗಿದೆ. ಆದರೆ ಬರೆಹಗಳಲ್ಲಿ ಅಮೆರಿಕದ ಯುದ್ಧ ಮತ್ತು ವಿದೇಶನೀತಿಯನ್ನು ಕುರಿತ ವಿಮರ್ಶೆಯ ಮಾತು ಒಂದೇ ಒಂದು ಕಡೆ ಧ್ವನಿಪೂರ್ಣವಾಗಿ ಬಂದಿರುವುದು ಬಿಟ್ಟರೆ, ಉಳಿದಂತೆ ಈ ಕುರಿತು ಎಚ್ಚರಿಕೆಯ ಮೌನವೇ ಆವರಿಸಿದೆ. ಬಹುಶಃ ಅಮೆರಿಕದಲ್ಲಿದ್ದೇ ಅದನ್ನು ವಿಮರ್ಶಿಸುವುದು ಕಷ್ಟವೊ ಅಥವಾ ಹಾಗೆ ವಿಮರ್ಶೆ ಮಾಡುವಂತಹ ದೃಷ್ಟಿಕೋನವೇ ಇಲ್ಲವೊ ತಿಳಿಯದು. ಆದರೆ ಅಮೆರಿಕನ್ ಸಮಾಜದ ಚಿತ್ರಣವು ಇಲ್ಲಿನ ಬರೆಹಗಳಲ್ಲಿ ಬಹುಮಟ್ಟಿಗೆ ಕ್ಷೀಣವಾಗಿದೆ.

ತನ್ನ ಪಾಡಿಗೆ ತಾನಿರುವ ಅಮೆರಿಕನ್ ಬದುಕೇ ಇಂತಹುದೊ? ಅಥವಾ  ದೈಹಿಕ ಶ್ರಮ ಮಾಡುವ ಜನರು ಅಮೆರಿಕಕ್ಕೆ ಹೋಗಿ ಬರೆದರೆ ಅವರ ಅನುಭವ ಲೋಕ ಭಿನ್ನವಾಗಿರುವುದೊ? ಈ ಕುತೂಹಲವು ಈ ಬರೆಹಗಳನ್ನು ಓದಿದ ಬಳಿಕ ಹಾಗೆ ಉಳಿಯುತ್ತದೆ. ಇಲ್ಲಿನ ಲೇಖಕರ ಸಾಮಾಜಿಕ ಹಿನ್ನೆಲೆ ಮತ್ತ ವರ್ಗದ ಸ್ತರವು ಇಲ್ಲಿನ ಬರೆಹಗಳ ಅನುಭವ ಲೋಕಕ್ಕೆ ಒಂದು ಪರಿಮಿತಿಯನ್ನು ಒದಗಿಸಿದೆ. ಆದರೆ ಇಲ್ಲಿನ ಬರೆಹಗಳು ಅನಿವಾರ್ಯವಾಗಿ ಹೇರಲ್ಪಡುವ ಇಂತಹ ಸಾಮಾಜಿಕ ರಾಜಕೀಯ ಚೌಕಟ್ಟನ್ನು ಮೀರಲು ಪ್ರೇರಿಸುತ್ತವೆ. ಇದು ತಾನೇ ಬರೆಹದ ಅಥವಾ ಕಲೆಯ ಶಕ್ತಿ? ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವ ಚಹರೆಗಳು ಇಲ್ಲಿನ ಬರೆಹಗಳಲ್ಲಿವೆ. ಕನ್ನಡನಾಡಿನಲ್ಲಿ ಇರುವವರು ಬರೆಯುತ್ತಿರುವುದನ್ನು ವಿಶ್ವದ ಕನ್ನಡಿಗರು ಓದುವುದು ಒಂದು ಬಗೆಯಾಗಿದೆ; ವಿಶ್ವದ ಬೇರೆಬೇರೆ ಭಾಗದಲ್ಲಿರುವ ಕನ್ನಡಿಗರು ಬರೆಯುವುದು ಒಳನಾಡಿನಲ್ಲಿರುವ ನಾವು ಓದುವುದು ಇನ್ನೊಂದು ಬಗೆಯಾಗಿದೆ. ನಾವು ಎಲ್ಲಿದ್ದು ಬರೆಯುತ್ತೇವೆ ಎನ್ನುವುದು ಬರಹದ ಸ್ವರೂಪವನ್ನು ನಿರ್ಣಯಿಸುವಂತೆ, ನಾವು ಎಲ್ಲಿದ್ದುಕೊಂಡು ಓದುತ್ತೇವೆ ಎನ್ನುವುದು ನಮ್ಮ ಓದಿನ ಪರಿಯನ್ನೂ ನಿಯಂತ್ರಿಸುತ್ತದೆ.  ಅಮೆರಿಕದ ಕನ್ನಡಿಗರ ತಳಮಳಗಳನ್ನು ಸುಖ ಸಂಭ್ರಮಗಳನ್ನು ಆಶೋತ್ತರಗಳನ್ನು ಈ ಮೂಲಕ ತಿಳಿಯುವಂತೆ ಮಾಡಿದ ಇಲ್ಲಿನ ಲೇಖಕರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ರಹಮತ್ ತರೀಕೆರೆ

 Posted by at 8:15 AM
Apr 232011
 

ಕನ್ನಡಿಗರು ತಾವು ಹುಟ್ಟಿದ ನಾಡನ್ನು ಬಿಟ್ಟು ಮತ್ತೊಂದು ದೇಶಕ್ಕೆ ವಲಸೆ ಹೋಗುವ ಪರಿಪಾಠ ಹಿಂದಿನಿಂದಲೂ ಬಂದಿದೆ. ವಲಸೆಗೆ ಕಾರಣವೇನೇ ಇರಬಹುದು, ಆದರೆ ನಾಡನ್ನು ಬಿಟ್ಟ ಮಾತ್ರಕ್ಕೆ ಭಾಷೆಯ ಬಗೆಗಿನ ಒಲವನ್ನು ತೊರೆದು ಹೋಗದೆ, ತಮ್ಮೊಂದಿಗೇ ಕೊಂಡೊಯ್ದಿದ್ದಾರೆ. ಹೀಗೆ ವಲಸೆ ಹೋದ ಕನ್ನಡಿಗರು ತಮ್ಮ ದಿನನಿತ್ಯದ ಜಂಜಾಟದ ಜೀವನದಲ್ಲಿಯೂ ತಮ್ಮ ಅಮೂಲ್ಯವಾದ ಸಮಯವನ್ನು, ಕನ್ನಡ ಭಾಷೆಯನ್ನು ಉಳಿಸಿ, ಬೆಳೆaಸಿ, ಕಲಿಸುವುದಕ್ಕಾಗಿ ವಿನಿಯೋಗಿಸಿದ್ದಾರೆ. ವಲಸೆ ಬಂದ ಜನರ ಜೀವನಾಧಾರದ ಮೂಲವುa ಏನೇ ಇದ್ದರೂ ಭಾಷೆಗಾಗಿ ದುಡಿಯಲು ವಿನಿಯೋಗಿಸುವ ಈ ಸಮಯವು ಸ್ವಯಂ ಸೇವೆ ಮಾತ್ರ. ಭಾಷೆ ಎಂಬುದು ಒಂದು ಕುರುಹು. ಇಬ್ಬರು ವ್ಯಕ್ತಿಗಳ ನಡುವೆ ವಿಚಾರ ವಿನಿಮಯಕ್ಕೆ ಬಳಸಿಕೊಳ್ಳುವ ಸಾಧನ ಎಂಬುವುದರ ಜೊತೆಗೆ ‘ಭಾಷೆ’ ಎಂಬುದು ಆ ನಾಡಿನ ಕಲೆ, ಸಂಸ್ಕೃತಿ, ಆಹಾರ ಪದ್ದತಿ ಮತ್ತಿತರ ಅಂಶಗಳನ್ನೂ ಅಡಕವಾಗಿಸಿಕೊಂಡಿದೆ. ಲಾಭದಾಯಕವೂ ಅಲ್ಲದ, ಸಂಭಾವನೆಯನ್ನೂ ತರದ ಭಾಷಾಭಿವೃದ್ದಿ ಕೆಲಸವನ್ನು ಮಾಡಲು ಇವರಲ್ಲಿ ಮೂಡಿರುವ ಪ್ರೇರಣೆಯಾದರೂ ಏನು? ಈ ರೀತಿ ಕೈಗೊಂಡ ಕಾರ್ಯಗಳಿಂದ ಅವರು ಎದುರು ನೋಡುತ್ತಿರುವ ಫಲಾಪೇಕ್ಷೆ ಏನು? ಅಂತಹ ಅವಶ್ಯಕತೆ ಏನಿದೆ? ಒಂದೇ ನಾಡಿನಿಂದ ಬಂದು ನೆಲೆಸಿದ ಮಾತ್ರಕ್ಕೆ ತಮ್ಮದೇ ಒಂದು ಸಮುದಾಯವನ್ನು ರಚಿಸಿಕೊಳ್ಳುವ ಉದ್ದೇಶ ಏನು ಎಂಬೆಲ್ಲ ಅಂಶಗಳತ್ತ ಪಕ್ಷಿನೋಟ ಬೀರುತ್ತ, ಇಂತಹ ಹೊಣೆಗಾರಿಕೆಯನ್ನು ತಮ್ಮ ಹೆಗಲಿಗೇರಿಸಿಕೊಂಡು ಯಶಸ್ವಿಯಾಗಿ ನಿರ್ವಹಿಸಿಕೊಂಡು ಬಂದಿರುವ ಹೊರನಾಡ ಕನ್ನಡಿಗರ ಮೇಲೆ ಬೆಳಕು ಚೆಲ್ಲುವ ಪ್ರಯತ್ನವೇ ಈ ಲೇಖನದ ಉದ್ದೇಶ.

ಕಳೆದ ಶತಮಾನದ ಅರವತ್ತು-ಎಪ್ಪತ್ತರ ದಶಕದಲ್ಲಿ ಪ್ರಮುಖವಾಗಿ ವೈದ್ಯರು, ಇಂಜಿನಿಯರ್’ಗಳ ವಲಸೆಯಿಂದ ಆರಂಭವಾಗಿತ್ತು. ಆರಂಭದಲ್ಲಿ ವಲಸೆಯ ಸಂಖ್ಯೆ ಕಡಿಮೆಯಿದ್ದು ನಂತರ ಎಂಬತ್ತರ ದಶಕದಲ್ಲಿ ಸ್ವಲ್ಪ ಹೆಚ್ಚೇ ಎನ್ನಬಹುದಾದ ಮಟ್ಟಿಗೆ ಏರಿತ್ತು. ಹೀಗೆ ಹೊರದೇಶಕ್ಕೆ ಕಾಲಿಟ್ಟ ಸಂಸಾರಗಳಲ್ಲಿ, ಮೊದಲಿಗೆ ಕನ್ನಡ ಭಾಷೆ ಕೇವಲ ಗಂಡ-ಹೆಂಡಿರ ನಡುವೆ ಸೀಮಿತವಾಗಿದ್ದು, ನಂತರ ಹೊರಗೆಲ್ಲೋ ಅಂಗಡಿ ಮುಂಗಟ್ಟಿನಲ್ಲಿ, ಕೇಳಿಬಂದ ಕನ್ನಡದ ದನಿಗೆ ತಲೆ ತಿರುಗಿಸಿ ಅವರ ಪರಿಚಯ ಮಾಡಿಕೊಳ್ಳುವುದರ ಮೂಲಕ ಮುಂದುವರೆಯಿತು. ಮುಂದೆ ನಾಲ್ಕಾರು ಕನ್ನಡದ ಸಂಸಾರಗಳು ಜೊತೆಯಾಗಿ ವಾರಾಂತ್ಯವೇ ಅಲ್ಲದೇ, ಪ್ರಮುಖ ಹಬ್ಬ-ಹರಿದಿನಗಳನ್ನು ಒಟ್ಟಾಗಿ ಆಚರಿಸಿಕೊಳ್ಳುತ್ತ, ನಾಲ್ಕು ಸಂಸಾರಗಳ ಗುಂಪು ನಲವತ್ತಾಗಿ ಬೆಳೆದು ಮುಂದೊಂದು ದಿನ ತಮ್ಮದೇ ಒಂದು ಸಂಘವನ್ನೇಕೆ ಸ್ಥಾಪಿಸಿಕೊಳ್ಳಬಾರದು ಎಂಬ ಆಲೋಚನೆ ಮೊಳಕೆಯೊಡೆದು ಅದು ಇಂದಿಗೆ ಮುನ್ನೂರು-ನಾನ್ನೂರು ಕುಟುಂಬಗಳನ್ನು ಒಟ್ಟು ಸೇರಿಸಿದ ಹೆಮ್ಮೆ ಹೊತ್ತು ನಿಂತ ಹಲವಾರು ನಿದರ್ಶನಗಳಿವೆ.

ಕನ್ನಡ ಜನರು ಒಂದೆಡೆ ಸೇರಿ, ಒಂದಾಗಿ ಬೆರೆತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸುವುದು, ಸಾಧ್ಯವಾದಲ್ಲಿ ಮತ್ತೊಂದು ಸ್ಥಳದ ಕಲಾವಿದರನ್ನು ತಮ್ಮಲ್ಲಿ ಕರೆಸಿ ಅವರ ಕಲೆಯನ್ನು ಪ್ರೋತ್ಸಾಹಿಸುವುದು ಮತ್ತಿತರ ಸಾಂಘಿಕ ಚಟುವಟಿಕೆಗಳು, ಇಂದು ಹೊರನಾಡಿನಲ್ಲಿ ಕನ್ನಡ ಬೆಳೆಯುವುದಕ್ಕೆ ಸಹಕಾರಿಯಾಗಿದೆ. ಈ ರೀತಿಯ ಒಟ್ಟುಗೂಡುವಿಕೆ ಕೇವಲ ಮನರಂಜನೆಗಷ್ಟೇ ಸೀಮಿತಗೊಳ್ಳದೇ, ತಮ್ಮ ನಾಡಿನ ಜನರ ಸುಖ-ದು:ಖಗಳಲ್ಲಿ ಭಾಗಿಯಾಗುವುದು, ಕರ್ನಾಟಕದ ಸಂತ್ರಸ್ತ ಕುಟುಂಬಗಳಿಗೆ ದೇಣಿಗೆ ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು, ತಮ್ಮ ವಲಯದಲ್ಲೇ ಮಕ್ಕಳಿಗೆ ಕನ್ನಡ ಕಲಿಸುವುದು ಮುಂತಾದವು ನೆಡೆಯುತ್ತದೆ.

ಹೀಗೆ ಕನ್ನಡ ಜನರ ಸಂಘಗಳು ಎಲ್ಲೆಡೆ ಬೆಳೆದು ಸ್ಥಿರವಾದ ಹೆಜ್ಜೆ ಊರಿದಂತೇ, ಇನ್ನಿತರ ಸಂಘಗಳ ನಡುವಿನ ಸಂಬಂಧ ಹೆಚ್ಚಿಸಿಕೊಳ್ಳಲು, ಅಭಿಪ್ರಾಯಗಳನ್ನು ಹಂಚಿಕೊಳ್ಳಲು, ರಾಷ್ಟ್ರ ಮಟ್ಟದಲ್ಲಿ ತಮ್ಮ ದನಿಯನ್ನು ಗುರುತಿಸಿಕೊಳ್ಳಲು, ಕನ್ನಡ ನಾಡಿಗೆ ತಮ್ಮ ದನಿಯನ್ನು ತಲುಪಿಸಲು ಒಂದು ಸಾಮಾನ್ಯ ವೇದಿಕೆಯ ಅವಶ್ಯಕತೆ ಇದೆ ಎನ್ನಿಸಿದಾಗ ಆರಂಭವಾಗಿದ್ದು “ಅಕ್ಕ”. ಅಮೇರಿಕದಲ್ಲಿನ ಕನ್ನಡ ಸಂಘಗಳ ನಡುವಿನ ಸೌಹಾರ್ದತೆ ಬೆಳೆಸಲು, ಕನ್ನಡ ಪರ ಚಟುವಟಿಕೆಗಳನ್ನು ನೆಡೆಸಲು, ಕನ್ನಡಿಗರ ನಡುವಿನ ಸಂಪರ್ಕ ವೃದ್ದಿಸಲು ಹುಟ್ಟಿಕೊಂಡ “Association of Kannada Kootas of America”ವೇ ’ಅಕ್ಕ’.
ಅಮೇರಿಕದಂತಹ ದೊಡ್ಡ ದೇಶದಲ್ಲಿ, ಹೆಚ್ಚಾಗಿ ಪೂರ್ವ, ಪಶ್ಚಿಮ, ಮಧ್ಯ ದೇಶದಲ್ಲಿ ಕೇಂದ್ರೀಕೃತವಾಗಿರುವ ಅರವತ್ತು ಸಾವಿರಕ್ಕೂ ಹೆಚ್ಚು ಕನ್ನಡಿಗರ ಅಪೇಕ್ಷೆಯನ್ನು ಪೂರೈಸಲು ಒಂದೇ ಸಾಂಘಿಕ ಶಕ್ತಿಗೆ ಕೈ ಸಾಲದೆ, ಅದೇ ಉದ್ದೇಶದಿಂದ ದುಡಿಯಲು ತಲೆ ಎತ್ತಿದ್ದ ಮತ್ತೊಂದು ವೇದಿಕೆ ‘ನಾರ್ತ್ ಅಮೇರಿಕ ವಿಶ್ವ ಕನ್ನಡ ಅಗರ’ ಅಂದರೆ ’ನಾವಿಕ’. ಹೊರನಾಡಿನಲ್ಲಿ ಕನ್ನಡವು ಕೇವಲ ಅಮೇರಿಕದಲ್ಲಿ ಮಾತ್ರವಲ್ಲದೇ, ಸಿಂಗಪುರ್, ಮಲೇಷ್ಯಾ, ಇಂಗ್ಲೆಂಡ್, ಆಸ್ಟ್ರೇಲಿಯಾ, ಜಪಾನ್, ಕೆನಡ ಮುಂತಾದ ದೇಶಗಳಲ್ಲೂ ಕನ್ನಡ ಕಂಪನ್ನು ಹೊರನಾಡ ಕನ್ನಡಿಗರು ಹರಡಿದ್ದಾರೆ.

ಉಲ್ಲೇಖಿಸಲೋಗ್ಯ ಉತ್ತಮ ಉದಾಹರಣೆ ಎಂದರೆ, ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಶ್ರೀ.ಗೋಪೀನಾಥ್ ರಾವ್. ಇವರು ಕನ್ನಡ ಭಾಷೆಯನ್ನು ಬೆಳೆಸುವತ್ತ ಒಂದು ಹೆಜ್ಜೆ ಮುಂದಿಟ್ಟಿದ್ದಾರೆ ಎನ್ನಬಹುದು. ಅಂತರ್ಜಾಲದ ಪೋರ್ಟಲ್ ’ಕನ್ನಡಧ್ವನಿ’ಯ ಮೂಲಕ ಹಲವಾರು ಬರಹಗಾರರನ್ನು ಒಂದೆಡೆ ಸೇರಿಸಿದ್ದಾರೆ. ಕೊಲ್ಲಿ ರಾಷ್ಟ್ರದಲ್ಲಿ ಅನೇಕ ಕಡೆ ಕನ್ನಡ ಸಂಘಗಳಿವೆ. ಅದರಲ್ಲಿ ಕೆಲವು ’ಕನ್ನಡ ಸಂಘ ಬಹರೇನ್, ಅಬು-ಧಾಬಿ ಕರ್ನಾಟಕ ಸಂಘ, ಕನ್ನಡ ಸಂಘ ದುಬೈ’ ಹೀಗೆ. ವರ್ಷದುದ್ದಕ್ಕೂ ಒಂದಲ್ಲ ಒಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಭಾಷೆಯನ್ನು ಬೆಳೆಸುವಲ್ಲಿ ಉತ್ತಮ ಪ್ರಯತ್ನಗಳನ್ನೇ ಮಾಡುತ್ತಿದ್ದಾರೆ. ಸಂಗೀತ ಕಾರ್ಯಕ್ರಮಗಳು, ನಾಟಕ, ಕ್ರೀಡೆ, ಸಾಹಿತ್ಯ ಕೂಟ, ಯಕ್ಷಗಾನ, ವಿಚಾರ ವೇದಿಕೆ, ಮಾಸಿಕ ಪತ್ರಿಕೆಗಳು, ಕನ್ನಡ ಗ್ರಂಥಾಲಯ ಹೀಗೆ ಹಲವು ವಿಧದಲ್ಲಿ ಭಾಷೆಯನ್ನು ಬೆಳೆಸುವ ಕಾರ್ಯಾಚರಣೆಗಳು ನೆಡೆಯುತ್ತವೆ. ಸಾಹಿತ್ಯ ಕ್ಶೇತ್ರದಲ್ಲಿ ಒಂದು ಅದ್ಬುತ ಪ್ರಯತ್ನ ಅಮೇರಿಕದಲ್ಲಿ ನೆಡೆದಿದೆ. ಎರಡು ವರ್ಷಗಳಿಗೊಮ್ಮೆ ’ಕನ್ನಡ ಸಾಹಿತ್ಯ ರಂಗ’ವು ಸಾಹಿತ್ಯೋತ್ಸವ ಕಾರ್ಯಕ್ರಮವನ್ನು ನೆಡೆಸುತ್ತದೆ. ಎರಡು ದಿನಗಳ ಈ ಕಾರ್ಯಕ್ರಮವನ್ನು, ಸಾಹಿತ್ಯ ರಂಗವು ತಾವು ಉತ್ಸವ ನೆಡೆಸುವ ಪ್ರಾಂತ್ಯದ ಕನ್ನಡ ಕೂಟದ ಸಹಯೋಗದೊಂದಿಗೆ ನೆಡೆಯುತ್ತದೆ. ಅಮೇರಿಕನ್ನಡ ಬರಹಗಾರರ ಪುಸ್ತಕಗಳ ಮಾರಾಟ ಮಳಿಗೆ, ಕರ್ನಾಟಕದಿಂದ ಆಹ್ವಾನಿಸಲ್ಪಟ್ಟ ಹೆಸರಾಂತ ಸಾಹಿತಿಗಳ ವಿಚಾರ ಧಾರೆ, ಅಮೇರಿಕನ್ನಡದವರ ಪುಸ್ತಕಗಳ ಬಗ್ಗೆ ವಿಮರ್ಶೆ, ಕವಿಗೋಷ್ಟಿ ಮುಂತಾದವುಗಳು ಈ ಕಾರ್ಯಕ್ರಮದ ಪ್ರಮುಖ ಆಕರ್ಷಣೆ. ಇಲ್ಲಿ ಚಲನಚಿತ್ರ ರಂಗದವರ ವೈಭವವಿಲ್ಲ, ರಾಜಕಾರಣಿಗಳ ಆಡಂಬರವಿಲ್ಲ. ಸಾಹಿತ್ಯ ರಂಗದ ಈ ಸಾಹಿತ್ಯೋತ್ಸವದಲ್ಲಿ ಎದ್ದು ಕಾಣುವ ಅಂಶವೆಂದರೆ ಸಹೃದಯ ವಾತಾವರಣ ಮತ್ತು ಸಮಯ ಪರಿಪಾಲನೆ.

ಕನ್ನಡ ಭಾಷೆಯ ಕಂಪನ್ನು ಹೊರದೇಶದಲ್ಲಿ ಹರಡುವ ಹಾದಿಯಲ್ಲಿ ಚಲನಚಿತ್ರದ ಪಾತ್ರವೂ ದೊಡ್ಡದು. ಅಮೇರಿಕದ ವಿಷಯ ಹೇಳಿದಲ್ಲಿ, ಒಂದು ಕಾಲಕ್ಕೆ ಭಾರತೀಯ ದಿನಸಿ ಅಂಗಡಿಗಳಲ್ಲಿ ಕೆಲವೇ ಹಳೆಯ ಕ್ಯಾಸೆಟ್’ಗಳು  ದೊರೆಯುತ್ತಿತ್ತು. ಕೆಲವು ದೊಡ್ಡ ನಗರಗಳಲ್ಲಿ ಮಾತ್ರ ಕರ್ನಾಟಕದಿಂದ ರೀಲ್ ತರಿಸಿ ಚಲನಚಿತ್ರ ತೋರಿಸುತ್ತಿದ್ದರು. ಇಂದು, ಹೊರದೇಶದಲ್ಲೇ ಕನ್ನಡ ಚಲನಚಿತ್ರ ವಿತರಕರಿದ್ದು, ಹೊಸ ಚಲನಚಿತ್ರಗಳನ್ನು ಬಿಡುಗಡೆಯಾದ ಕೆಲವೇ ದಿನಗಳಲ್ಲಿ ನೋಡಿ ಆನಂದಿಸಬಹುದಾಗಿದೆ. ಹೊರದೇಶದಲ್ಲಿ ನೆಡೆವ ಕನ್ನಡ ಪರ ಚಟುವಟಿಕೆಗಳಲ್ಲಿ ಹಲವಾರು ಚಲನಚಿತ್ರ ಕಲಾವಿದರು ಬರುವುದು ಸಾಮಾನ್ಯ ನೋಟವಾಗಿದೆ. ಅಂತೆಯೇ ಕನ್ನಡ ಕಲೆ ಸಂಸ್ಕೃತಿಯನ್ನು ಮೆರೆಸುವ ಹಲವಾರು ಕಲಾವಿದರೂ ಹೊರದೇಶಕ್ಕೆ ಆಗಮಿಸಿ, ಹಲವಾರು ಊರುಗಳನ್ನು ಸುತ್ತಿ, ಕಾರ್ಯಕ್ರಮಗಳನ್ನು ನೆಡೆಸಿಕೊಡುತ್ತ, ಕನ್ನಡದ ಪ್ರಚಾರ ನೆಡೆಸುತ್ತಿದ್ದಾರೆ ಎಂದರೆ ಅತಿ ಅತಿಶಯೋಕ್ತಿಯಲ್ಲ. ಇದೇ ನಿಟ್ಟಿನಲ್ಲಿ ನೆಡೆಯುತ್ತಿರುವ ಮತ್ತೊಂದು ಕನ್ನಡ ಪರ ಪ್ರಚಾರ ಎಂದರೆ ಹೊರನಾಡಿನ ಕನ್ನಡದ ಎಫ್.ಎಂ ರೇಡಿಯೋ ಕಾರ್ಯಕ್ರಮಗಳಲ್ಲಿ ಮೂಡಿ ಬರುವ ಕನ್ನಡ ಚಲನಚಿತ್ರಗಳ ಗೀತೆಗಳು, ಭಾವಗೀತೆಗಳು, ವಿಚಾರ ವಿನಿಮಯ ಇತ್ಯಾದಿ. ವಿದೇಶದಲ್ಲಿ ಕನ್ನಡ ಬೆಳವಣಿಗೆಗೆ ಬರಹಗಾರರ ಕೊಡುಗೆ ಪ್ರಶಂಶನೀಯವಾದದ್ದು. ಅಮೇರಿಕದ ತಮ್ಮ ಮೂವತ್ತು ವರ್ಷಗಳ ಜೀವಿತದಲ್ಲಿ “ಅಮೇರಿಕನ್ನಡ” ಎಂಬ ದ್ವಿಮಾಸಿಕ ಒಂದರ ಪ್ರಧಾನ ಸಂಪಾದಕರಾದ ಶ್ರೀಯುತರಾದ ಶಿಕಾರಿಪುರ ಹರಿಹರೇಶ್ವರ ಅವರು ಹದಿನೇಳು ಪುಸ್ತಕಗಳನ್ನು ಬರೆದಿದ್ದರು. ಅಲ್ಲದೆ, ಹಲವಾರು ಸಾಹಿತ್ಯಾಸಕ್ತರಲ್ಲಿ ಬರವಣಿಗೆಯನ್ನು ಪ್ರಚೋದಿಸಿ, ಪ್ರೋತ್ಸಾಹಿಸಿ ಅವರನ್ನು ಬರಹಗಾರರನ್ನಾಗಿಸಿದ್ದಾರೆ. ಹಲವಾರು ಬರಹಗಾರರ ಪುಸ್ತಕಗಳನ್ನು ತಮ್ಮ ಖರ್ಚಿನಲ್ಲಿ ಅಚ್ಚು ಹಾಕಿಸಿದ್ದಾರೆ. ಇವರ ಅವಿರತ ಶ್ರಮವನ್ನು ಗುರುತಿಸಿದ ಘನ ಕರ್ನಾಟಕ ಸರ್ಕಾರವು ಇವರಿಗೆ ’ರಾಜ್ಯೋತ್ಸವ’ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.

ಹೊರನಾಡಿಗೆ ಬಂದು, ಕನ್ನಡ ಸಂಘವನ್ನು ಸ್ಥಾಪಿಸಬೇಕು ಎಂದುಕೊಂಡಿದ್ದೇಕೆ? ಮುಂದಿನ ಪೀಳಿಗೆಗೂ ಕನ್ನಡ ಭಾಷೆ ಉಳಿಸಬೇಕಾದಲ್ಲಿ ಕೈಗೊಳ್ಳಬೇಕಾದ ಕಾರ್ಯವೇನು? ಎಂಬುದಾಗಿ ಪ್ರಶ್ನಿಸಿದಾಗ, ಹಲವು ಕನ್ನಡ ಸಂಘಗಳ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿರುವ  ರಿಚ್ಮಂಡ್ ಕನ್ನಡ ಸಂಘ ಪ್ರಥಮ ಅಧ್ಯಕ್ಷರಾದ ಡಾ|ರವೀಂದ್ರ ಅವರ ಅಭಿಪ್ರಾಯ ಹೀಗಿದೆ. ಕನ್ನಡದ ಮೇಲಿನ ಪ್ರೇಮವೇ ಹೊರನಾಡಿನಲ್ಲೂ ಕನ್ನಡವನ್ನು ಬೆಳೆಸಲು ಪ್ರೇರಣೆ. ಕನ್ನಡ ಪರ ಚಟುವಟಿಕೆಗಳು ನಿಂತರೆ ಭಾಷೆಯ ಅವನತಿಗೆ ಎಡೆ ಮಾಡಿಕೊಟ್ಟಂತೆ. ಕನ್ನಡಿಗರು ಭೇಟಿಯಾದಾಗ ಕನ್ನಡದಲ್ಲಿ ವ್ಯವಹರಿಸಬೇಕು. ನಮ್ಮಲ್ಲಿ ಭಾಷೆಯ ಬಗೆಗಿನ ಒಲವನ್ನು ಬೆಳೆಸಿಕೊಳ್ಳಬೇಕು. ಎಂದಾದರೊಮ್ಮೆ ಭೇಟಿಯಾಗುವುದು, ಮತ್ತು ಹಬ್ಬ ಹರಿದಿನಗಳಲ್ಲಿ ಸೇರುವುದಕ್ಕಿಂತ ಹೆಚ್ಚಾಗಿ ಒಂದು ಸಂಘವನ್ನು ಸ್ಥಾಪಿಸಿ ವರ್ಷದುದ್ದಕ್ಕೂ ಕಾರ್ಯಕ್ರಮಗಳನ್ನು ಹಮ್ಮಿಕೊಂಡಾಗ ಭಾಷಾಭಿಮಾನ ಹೆಚ್ಚುತ್ತದೆ ಮತ್ತು ಮುಂದಿನ ಪೀಳಿಗೆಗೂ ಕನ್ನಡದ ಬಗ್ಗೆ ಅರಿವು ಮೂಡುತ್ತದೆ. ನವ ಪೀಳಿಗೆಯಲ್ಲೂ ಕನ್ನಡ ಭಾಷೆ ಮುಂದುವರೆಯಬೇಕಾದಲ್ಲಿ ಅದರ ಆರಂಭ ಮನೆಯಲ್ಲಿ ಆಗಬೇಕು. ಹಿರಿಯರು ಮಕ್ಕಳೊಡನೆ ಕನ್ನಡದಲ್ಲಿ ವ್ಯವಹರಿಸಬೇಕು. ಆಗ ಮಾತ್ರ ಭಾಷೆಯ ಉಳಿವು, ಮತ್ತು ಬೆಳವಣಿಗೆ.

ಕರ್ನಾಟಕ ಕಲಾ ಪ್ರಪಂಚದ ಒಂದು ಅವಿಭಾಜ್ಯ ಅಂಗ, ಭಾರತವೇ ಅಲ್ಲದೆ ಹೆಚ್ಚು ಕಡಿಮೆ ಇಡೀ ವಿಶ್ವವನ್ನೇ ಮಂತ್ರಮುಗ್ದವನ್ನಾಗಿಸುವ ಕಲೆ ಎಂದರೆ ’ನೃತ್ಯ’. ಈ ನೃತ್ಯ ಕಲೆಯು ಅನಾದಿ ಕಾಲದಿಂದಲೂ ಬಂದಿದ್ದರೂ, ಅದು ಕೆಲವು ಜನರಿಗೆ ಮಾತ್ರ ಎಂದು ಮೂಗೆಳೆವ ಮಡಿವಂತರಿದ್ದರು. ಅಂದಿನ ದಿನಗಳ ಜನರ ನಿರ್ಲಕ್ಷ್ಯಕ ಭಾವೆನೆಯಿಂದ ಕುಗ್ಗದೆ, ಇಂದಿನ ತಾಂತ್ರಿಕ ಜಗತ್ತಿನ ಪ್ರವಾಹದಲ್ಲಿ ಕೊಚ್ಚಿಹೋಗದೆ, ತಮಗೆ ಒಲವಿದ್ದ ಕಲೆಯನ್ನು ಉಳಿಸಿಕೊಂಡು, ಅದನ್ನು ಬೆಳೆಸಿ, ಪಸರಿಸಿ, ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಹಿರಿದಾಗಿಸಿ ಪರನಾಡಿನವರಿಂದಲೂ ಸೈ ಎನಿಸಿಕೊಂಡು ಮುನ್ನೆಡೆಯುತ್ತಿರುವವರಲ್ಲಿ ಉಮಾ ಇಟ್ಟಿಗಿ ಕೂಡಾ ಒಬ್ಬರು. ಅಮೇರಿಕದ ಬಹುತೇಕ ಎಲ್ಲ ರಾಜ್ಯಗಳಲ್ಲೂ ಇದ್ದಂತೆ, ಜಗತ್ತಿನ ಎಲ್ಲೆಡೆ ಉಮಾ ಇಟ್ಟಿಗಿ ಅವರಂತಹ ಕಲಾ ಪೋಷಕರು ಇದ್ದಾರೆ. ಕನ್ನಡ ನಾಡಿನಲ್ಲಿ ಹುಟ್ಟಿ ಹೊರದೇಶದಲ್ಲಿ ಉಳಿದಿದ್ದರೂ ಇವರುಗಳ ಕಲಾಸೇವೆ ಮಾತ್ರ ಹಿಂದೆ ಬಿದ್ದಿಲ್ಲ. ಕಲಾಸೇವೆಯ ಮೂಲಕ ಕಲೆಯನ್ನು ಪರಿಚಯಿಸುವುದಷ್ಟೇ ಅಲ್ಲದೇ ಎರಡು ರಾಷ್ಟ್ರಗಳ ನಡುವಿನ ಸೌಹಾರ್ದತೆಯ ಭದ್ರ ಸೇತುವೆಯನ್ನೂ ನಿರ್ಮಿಸುವಲ್ಲಿ ಹಿರಿದಾದ ಪಾತ್ರವಹಿಸುತ್ತಿದ್ದಾರೆ. ಕಲೆಯ ಮುಖಾಂತರ ಹೊರನಾಡ ಕನ್ನಡಿಗರಲ್ಲಿ ನಮ್ಮ ಭಾಷೆಯ ನಾಡು, ನುಡಿಯ ಬಗ್ಗೆ ಅಭಿಮಾನ ಹೆಚ್ಚಿಸಲು ಕಾರಣೀಭೂತರಾಗಿದ್ದಾರೆ.

ಎಪ್ಪತ್ತರ ದಶಕದ ಆರಂಭದಲ್ಲಿ ಅಮೇರಿಕಕ್ಕೆ ಬಂದು ನೆಲೆಸಿದ ಹಿರಿಯರೊಬ್ಬರನ್ನು ಇಂದಿಗೂ ಅಂದಿಗೂ ನೀವು ಕಂಡಂತೆ ಭಾಷೆ ಹೇಗೆ ಬೆಳೆದಿದೆ ಎಂಬುದಾಗಿ ಪ್ರಶ್ನಿಸಿದಾಗ, ಶ್ರೀಯುತ ಗಂಗಾಧರ ಮೂರ್ತಿಯವರು ಅಂದಿನ ಚಿತ್ರಣವನ್ನೇ ನಮ್ಮ ಮುಂದಿಟ್ಟರು. ಎಪ್ಪತರ ದಶಕದಲ್ಲಿ ಅಮೇರಿಕದ ಫಿಲಡೆಲ್ಫಿಯಾ ನಗರಕ್ಕೆ ಬಂದರು. ಎರಡು ವಾರಕ್ಕೊಮ್ಮೆ ಹತ್ತಿರದ ನ್ಯೂಯಾರ್ಕ್ ನಗರಕ್ಕೆ ದಿನಸಿ ಅಂಗಡಿಗೆ ಹೋಗುತ್ತಿದ್ದ ಇವರ ಕಣ್ಣಿಗೆ ಅಪರೂಪಕ್ಕೊಮ್ಮೆ ಭಾರತೀಯ ಕಂಡು ಬರುತ್ತಿದ್ದರೂ ಅವರಲ್ಲಿ ಯಾರೂ ಕನ್ನಡಿಗರಾಗಿರಲಿಲ್ಲ. ಅಮೇರಿಕ ಸೇರಿದ ಎರಡು ವರ್ಷದ ನಂತರ ಅವರಿಗೆ ಮೊದಲ ಕನ್ನಡ ಸಂಸಾರ ಕಣ್ಣಿಗೆ ಬಿದ್ದದ್ದು. ಅಂದಿನ ದಿನಗಳಲ್ಲಿ ಫಿಲಡೆಲ್ಫಿಯ, ನ್ಯೂಯಾರ್ಕ್ ಇತ್ಯಾದಿ ನಾಲ್ಕೈದು ಪ್ರಮುಖ ನಗರದಲ್ಲಿರುವವರು ಉಗಾದಿ ಹಬ್ಬ ಆಚರಿಸಿದಾಗ ಸುಮಾರು ಮುನ್ನೂರು ಮಂದಿ ಸೇರುತ್ತಿದ್ದಾರು. ಅದೇ ಚಿತ್ರಣವನ್ನು ಇಂದಿಗೆ ಹೋಲಿಸಿದರೆ ಒಂದು ಸಣ್ಣ ನಗರದ ಒಂದು ಸಂಘದಿಂದ ಅಷ್ಟು ಜನ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನೆಡೆಸುತ್ತಾರೆ. ಸಂಖ್ಯೆಯ ಮತ್ತು ಭಾಷೆಯ ಬೆಳವಣಿಗೆಯ ದೃಷ್ಟಿಯಿಂದ ಅದ್ಬುತ ಬೆಳವಣಿಗೆ ಎಂಬುದು ಸತ್ಯ. ಮೊದಲ ದಿನಗಳಲ್ಲಿ ಸ್ನೇಹಿತರಾದ ಒಂದೆರಡು ಕುಟುಂಬಗಳೂ ಇಂದಿಗೂ ತಮ್ಮೊಂದಿಗೆ ಇದ್ದಾರೆ. ಕೆಲವರು ದೂರದ ಊರಿಗೆ ಹೋದರೆ, ಒಂದಿಬ್ಬರು ಕಾಲವೇ ಆಗಿದ್ದಾರೆ ಎಂಬುದನ್ನೂ ತಿಳಿಸಿದರು. ದೇಶ ಬಿಟ್ಟು ಬಂದವರಿಗೆ, ಸ್ನೇಹಿತರೇ ಬಂಧು-ಬಳಗ ಎಂದು ಅನಿಸದೇ ಇರಲಿಲ್ಲ.

ಭಾಷಾಭಿವೃದ್ದಿ ಕೆಲಸವನ್ನು ಮಾಡಲು ನಿಮಗೆ ಮೂಡಿರುವ ಪ್ರೇರಣೆಯಾದರೂ ಏನು? ಈ ರೀತಿ ಕೈಗೊಂಡ ಕಾರ್ಯಗಳಿಂದ ನೀವು ಅಪೇಕ್ಷಿಸುತ್ತೀರಿ ಎಂಬುದಾಗಿ ಅಮೇರಿಕದ ಅಲಬಾಮಾದಲ್ಲಿ ನೆಲೆಸಿರುವ ಸಂಧ್ಯಾ ಅನಂತ್ ಅವರನ್ನು ಕೇಳಿದಾಗ, ಅವರ ಅಭಿಪ್ರಾಯದಲ್ಲಿ ಭಾಷೆಯ ಬೆಳವಣಿಗೆಯು ಮುಂದಿನ ಪೀಳಿಗೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೆಡೆಯಬೇಕು. ಭಾರತೀಯರಾಗಿ ಹುಟ್ಟಿ, ಬೆಳೆದು ಹೊರನಾಡಿನಲ್ಲಿ ನೆಲೆಸಿರುವ ಜನರಿಗೆ ಎರಡೂ ಸಂಸ್ಕೃತಿಯನ್ನು ಅಳವಡಿಸಿಕೊಂಡು ಬದುಕಲು ಶ್ರಮಿಸಿದರೂ, ಮುಂದಿನ ಪೀಳಿಗೆಯವರು ಇದೇ ರೀತಿ ಶ್ರಮಿಸುತ್ತಾರೆ ಎಂದುಕೊಳ್ಳುವುದು ಸರಿ ಇಲ್ಲ. ಏಕೆಂದರೆ ಅವರುಗಳು ಬೆಳೆಯುತ್ತಿರುವ ಪರಿಸರವೇ ಹೊರದೇಶ. ಅವರಲ್ಲಿ ನಮ್ಮ ನಾಡಿನ ಭಾಷೆ, ಸಂಸ್ಕೃತಿಯ ಬಗ್ಗೆ ಅರಿವು ಮೂಡಿಸುವುದೇ ನಾವುಗಳು ಮಾಡಬೇಕಾದ ಮೊದಲ ಕೆಲಸ. ಇಲ್ಲಿನ ಮಕ್ಕಳು ಭಾಷೆಯನ್ನು ಕಲಿತಲ್ಲಿ, ನಮ್ಮ ಹಿಂದಿನ ಪೀಳಿಗೆಯವರ ಜೊತೆ ಬಾಂಧವ್ಯ ಬೆಳೆಸಲು ಸಹಕಾರಿ ಆಗುತ್ತದಷ್ಟೇ ಅಲ್ಲದೆ ಮುಂಬರುವ ಪೀಳಿಗೆಯಲ್ಲೂ ಕನ್ನಡ ಭಾಷೆಯ ಉಳಿಯುತ್ತದೆ.

ಹೀಗೆ ವಲಸೆ ಬಂದ ಕನ್ನಡಿಗರು ಮೂಲತ: ವಿವಿಧ ಪ್ರಾಂತ್ಯದವರಾಗಲಿ, ಜಾತಿಯವರಾಗಲಿ, ಸಮಾಜದಲ್ಲಿ ಯಾವುದೇ ಮಟ್ಟದವರಾಗಲಿ, ಆದರೆ ಎಲ್ಲರನ್ನೂ ಒಟ್ಟಾಗಿ ಬಂಧಿಸಿದ ಒಂದು ಶಕ್ತಿಯೆಂದರೆ ’ಭಾಷೆ’. ವಲಸೆ ಬಂದಾಗ ಹೆತ್ತವರನ್ನೂ, ಒಡಹುಟ್ಟಿದವರನ್ನೂ ಬಿಟ್ಟು ಬಂದವರನ್ನು,  ಸಂಬಂಧಿಕರಲ್ಲದವರೊಂದಿಗೆ ಬೆರೆತು ಒಂದೇ ಕುಟುಂಬದವರಾಗಿ ಬದುಕುವಂತೆ ಅನುವು ಮಾಡಿಕೊಡುವಲ್ಲಿ “ಭಾಷೆ” ಸಹಕಾರಿಯಾಗಿದೆ. ತಮ್ಮ ಬಂಧುಗಳು, ಸ್ನೇಹಿತರು, ಎಂದೆಲ್ಲ ಜನರ ಸುತ್ತಲೇ ಇರುವವರಿಗೆ ಹೊರದೇಶಕ್ಕೆ ಬಂದ ಕೂಡಲೇ ’ನೀರ ಬಿಟ್ಟ ಮೀನು’ ಆದ ಪರಿಸ್ಥಿತಿ ಎದುರಾಗುತ್ತದೆ. ತಮಗೇ ಅರಿವಿಲ್ಲದೆ ಭೇಟಿಯಾದ ತಮ್ಮ ಭಾಷೆಯವರು ಅವರಿಗೆ ಬಂಧುಗಳಂತೇ ತೋರುತ್ತಾರೆ. ತಮ್ಮೊಂದಿಗೆ ಇಲ್ಲದ ತಮ್ಮವರನ್ನು ಅವರಲ್ಲಿ ಕಾಣುತ್ತಾರೆ. ತಮ್ಮ ನಾಡಿನಲ್ಲಿ ಬಿಟ್ಟು ಬಂದ ತಂದೆ-ತಾಯಿಯರನ್ನು ಪರದೇಶದಲ್ಲಿ ಕಾಣುವ ಹಿರಿಯರಲ್ಲಿ ಕಾಣುತ್ತಾರೆ. ಇದೆಲ್ಲ ಭಾವನೆಗಳ ಹಿಂದೆ ಇರುವ ಕೊಂಡಿ ಎಂದರೆ ‘ಭಾಷೆ.’ ‘ನಾವೆಲ್ಲರೂ ಒಂದು’ ಎಂಬ ಭಾವೈಕ್ಯತೆ ಬಹಳಷ್ಟು ಸಂದರ್ಭದಲ್ಲಿ ಎದ್ದು ಕಾಣುತ್ತದೆ. ಭಾರತದಿಂದ ಬಂದು ಹಿರಿಯರು ಇಲ್ಲಿ ಅನಾರೋಗ್ಯ ಪೀಡಿತರಾದಲ್ಲಿ ತಮ್ಮ ಕೈಲಾದಷ್ಟರ ಮಟ್ಟಿಗೆ ಸಹಾಯ ಮಾಡುವಷ್ಟು ಉದಾರ ಮನಸ್ಸಿನ ವೈದ್ಯರಿದ್ದಾರೆ. ರಿಸೆಷನ್ ಸಮಯದಲ್ಲಿ ಜಗತ್ತಿನ ಆರ್ಥಿಕ ಪರಿಸ್ಥಿತಿಯೇ ಅಲುಗಾಡಿ, ಅಮೇರಿಕ ಮತ್ತು ಇತರೆ ಪಾಶ್ಚಿಮಾತ್ಯ ದೇಶಗಳಲ್ಲಿ ಕಂಪನಿಗಳು ದಿವಾಳಿ ಎದ್ದು, ಸಹಸ್ರಾರು ಜನರು ಕೆಲಸ ಕಳೆದುಕೊಂಡಾಗ, ಕನ್ನಡಿಗರೂ ಅದಕ್ಕೆ ಹೊರತಾಗಿರಲಿಲ್ಲ. ಅಂತಹ ಸಮಯದಲ್ಲಿ ತಮ್ಮ ’ಭಾಷೆ’ಯ ಜನರಿಗೆ ಸಹಾಯ ಮಾಡಿ ಅವರ ಕಷ್ಟ ಕಾಲದಲ್ಲಿ ಬೆಂಬಲವಾಗಿ ನಿಂತ ನಿದರ್ಶನಗಳು ಹೇರಳ. ಕಷ್ಟ ಕಾಲದಲ್ಲಿ ಕಲ್ಲಾಗಿ, ಬೆಟ್ಟದಡಿಯ ಹುಲ್ಲಾಗಿ ಎಲ್ಲೆಡೆ ಮಲ್ಲಿಗೆ ಕಂಪನ್ನು ಬೀರುವ ವಿಶಾಲ ಹೃದಯಿ ಕನ್ನಡಿಗರಿಗೆ ಇದೇನೂ ಕಷ್ಟವಲ್ಲ.ಸಂಘಗಳೂ ಹಾಗೂ ಸಾಂಘಿಕ ಶಕ್ತಿಗಳು ಬಲವಾಗಿಯೇ ಇದ್ದು ಹತ್ತು ಹಲವು ಕಾರ್ಯಕ್ರಮಗಳನ್ನು ನೆಡೆಸಿಕೊಳ್ಳುತ್ತ ಬಂದು, ಭಾಷೆಯ ಅಭಿವೃದ್ದಿಗೆ ಸಹಕಾರಿಯಾಗಿದ್ದರೂ, ಇನ್ನೂ ಒಂದು ವಿಚಾರದಲ್ಲಿ ಬಹಳ ಹಿಂದೆ ಇದ್ದೇವೆ. ಅಮೇರಿಕ ಹಾಗೂ ಯು.ಕೆ ದೇಶಗಳ ಪ್ರಮುಖ ವಿಶ್ವವಿದ್ಯಾಲಯಗಳಲ್ಲಿ ಪರದೇಶಗಳ ಭಾಷಾ ತರಬೇತಿಗಳನ್ನು ವಿಶ್ಲೇಷಿಸಿ ನೋಡಿದಾಗ ಕಂಡು ಬಂದ ವಿಷಯವೆಂದರೆ, ವಿದೇಶೀ ವಿಶ್ವವಿದ್ಯಾಲಯಗಳಲ್ಲಿ ನೆಡೆಯುತ್ತಿರುವ ಭಾರತೀಯ ಭಾಷೆಗಳ ಅಧ್ಯಯನವು ಪರ ಭಾರತೀಯ ಭಾಷೆಗಳಿಗೆ ಹೋಲಿಸಿದಾಗ ಕನ್ನಡ ಭಾಷೆಯು ಇನ್ನೂ ಸಾಕಷ್ಟು ಹಿಂದುಳಿದಿದೆ.

ಅಂತರಾಷ್ಟ್ರೀಯ ಮಟ್ಟದ ಹಲವನ್ನು ಪರಿಶೀಲಿಸಿದಾಗ ಕಂಡಿದ್ದು, ಅಮೇರಿಕದ ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯದಲ್ಲಿ ಕೇವಲ ಒಂದು ತರಗತಿ ಕನ್ನಡಕ್ಕೆ ಮೀಸಲಾಗಿದ್ದು, ಅದೂ ಕೇವಲ ಕನ್ನಡ ಕಲಿಸುವುದಕ್ಕಾಗಿ ಮಾತ್ರ. ಅಮೇರಿಕದ್ದೇ ಶಿಕಾಗೋ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯಗಳಲ್ಲಿ, ಮತ್ತು ಲಂಡನ್ ವಿಶ್ವವಿದ್ಯಾಲಯಗಳಲ್ಲಿ ಕನ್ನಡ ತರಗತಿಗಳೇ ಇಲ್ಲ. ಈ ಎಲ್ಲದರಲ್ಲಿಯೂ ಇತರ ಭಾರತೀಯ ಭಾಷೆಗಳ ಬಗ್ಗೆ ಭೋಧನೆ ಆಗುತ್ತಿರುವುದೇ ಅಲ್ಲದೇ, ಆ ಭಾಷೆಗಳ ಹಿನ್ನೆಲೆ, ಚರಿತ್ರೆ, ಬೆಳವಣಿಗೆ, ಮಹತ್ ಕೃತಿಗಳು, ಇವುಗಳ ಬಗ್ಗೆ ಆಳವಾಗಿ ಅಧ್ಯಯನ ನೆಡೆಸುವಲ್ಲಿ ಮುಂದಾಗಿದ್ದರೆ. ಇನ್ನೂ ಭಾಷಾ ಕಲಿಕೆಯ ಹಂತದಲ್ಲೇ ಇರುವ ಕನ್ನಡ ಭಾಷೆಯ ವಿಷಯದಲ್ಲಿ ಕನ್ನಡ ಪರ ವೇದಿಕೆಗಳು ಮತ್ತು ಭಾಷೆಯ ಬೆಳವಣಿಗೆಗಾಗಿ ದುಡಿಯುತ್ತಿರುವವರು ಶ್ರಮಿಸಿದಲ್ಲಿ ಕನ್ನಡ ಬಗೆಗಿನ ಗೌರವ ಹೆಚ್ಚುತ್ತದೆ. ತೊಂಬತ್ತರ ದಶಕದಲ್ಲಿ ಹೊಸ ಅಲೆಯ ವಲಸೆ ಭಾರೀ ಗಾತ್ರದಲ್ಲಿ ಆರಂಭವಾಯಿತು. ಅದು Information Technology ಅಂದರೆ ಮಾಹಿತಿ ತಂತ್ರಜ್ಞ್ನಾನದ ಅಲೆ. ನಾನಾ ದೇಶಗಳಿಗೆ ಕನ್ನಡಿಗರು ವಲಸೆ ಹೋಗಿದ್ದರಿಂದ ಭಾಷೆ ಬೆಳೆಯಲೂ ಸಹಕಾರಿಯಾಯಿತು. ಹಿಂದಿನ ಪೀಳಿಗೆಯ ಸಮಯದಲ್ಲಿ ತಲೆ ಎತ್ತಿದ ಕನ್ನಡ ಸಂಘಗಳೂ ಹಾಗೂ ಕನ್ನಡ ಭಾಷಾ ಚಟುವಟಿಕೆಗಳು ಈ ಸರದಿಯಲ್ಲಿ ದುಪ್ಪಟ್ಟಾಯಿತು. ಹೊಸ ಅಲೆಯ ವಲಸಿಗರ ಬೇಕು’ಗಳ ಪೂರೈಕೆಗಾಗಿಯೇ ಇಂದು ಅಕ್ಕ, ನಾವಿಕ ಎಂಬೆಲ್ಲ ಸಾಂಘಿಕ ಶಕ್ತಿಗಳು ಹುಟ್ಟಿಕೊಂಡಿರುವುದು.

ಒಂದು ಕಾಲಕ್ಕೆ ಕನ್ನಡ ಸಾಹಿತ್ಯ ಸೇವೆ ಕರ್ನಾಟಕಕ್ಕೆ ಸೀಮಿತ, ಹಿರಿಯರಿಗೆ ಮೀಸಲು ಎಂಬೆಲ್ಲ ಸೀಮಿತಗೊಂಡಿತ್ತು. ತಂತ್ರಜ್ಞ್ನಾನ ಬೆಳೆದಂತೆಲ್ಲ ಕನ್ನಡ ಪರ ಚಟುವಟಿಕೆಗಳೂ ಬೆಳೆಯುವುದರಲ್ಲಿ ಹಿಂದೆ ಬೀಳಲಿಲ್ಲ. ಇಂತಹ ದಿನಗಳಲ್ಲಿ ಹೊರಬಂದುದೇ ಬರಹ, ಶ್ರೀ, ಲಿಪಿ ಎಂಬ ತಂತ್ರಾಂಶಗಳು. ನವಯುಗದ ಬರಹಗಾರರಿಗೆ ಬರೆಯುವ ಹುಮ್ಮಸ್ಸನ್ನು ಹೆಚ್ಚಿಸಿದ್ದೇ ಈ ತಂತ್ರಾಂಶಗಳು. ನಂತರದ ದಿನಗಳಲ್ಲಿ ಮೂಡಿ ಬಂದ ಅಂತರ್ಜಾಲದ ಪೋರ್ಟಲ್’ಗಳು ಮತ್ತು ಬ್ಲಾಗ್ ಪ್ರಪಂಚ ಬರಹಗಾರರಿಗೆ ಹೊಸ ಪ್ರಪಂಚವನ್ನೇ ತೆರೆದಿಟ್ಟಂತಾಯಿತು. ’ಗೂಗಲ್’ನವರು ಕನ್ನಡ ಭಾಷೆಯ Transliteration ಒದಗಿಸಿದ ಮೇಲಂತೂ, ಕನ್ನಡ ತಂತ್ರಾಂಶವನ್ನು ಕಂಪ್ಯೂಟರ್’ನಲ್ಲಿ ಇಳಿಸಿಕೊಳ್ಳಲೇಬೇಕೆಂಬ ಅವಶ್ಯಕತೆಯೂ ಇಲ್ಲದಾಯಿತು. ಎಲ್ಲೆಲ್ಲಿ ಏನೇನು ಕನ್ನಡ ಪರ ಚಟುವಟಿಕೆಗಳು ನೆಡೆಯುತ್ತಿವೆ ಎಂಬುದರ ಬಗೆಗಿನ ಮಾಹಿತಿ ಪಾರದರ್ಶಕವಾಯಿತು. ಇಂದು ಅಂತರ್ಜಾಲದ ಪೋರ್ಟಲ್’ನ ಕನ್ನಡ ಬರಹಗಳನ್ನು, ಕನ್ನಡ ಪತ್ರಿಕೆಗಳನ್ನು ಮೊಬೈಲ್’ನಲ್ಲೇ ಓದಬಹುದಾಗಿದೆ. ಹೊರದೇಶದಲ್ಲೆಲ್ಲೋ ಕುಳಿತು ತಾವು ಬರೆದ ಬರಹಗಳನ್ನು ಅಂಚೆ ಮೂಲಕ ಪತ್ರಿಕೆಗಳಿಗೆ ಕಳಿಸಿ ನಂತರ ಅದು ಸ್ವೀಕಾರವಾಗಿ ಪ್ರಕಟಣೆಗೊಳ್ಳುವ ಹೊತ್ತಿಗೆ ಕನಿಷ್ಟ ಆರು ತಿಂಗಳೇ ತಗುಲುತ್ತಿದ್ದ ದಿನಗಳು ಇನ್ನಿಲ್ಲ. ಕಪ್ಪೆ ಚಿಪ್ಪಿನಲ್ಲಿ ಸೇರಿಕೊಂಡಂತಾಗಿದ್ದ ಭಾವನೆಗಳು ಇಂದು ಬ್ಲಾಗ್ ಪ್ರಪಂಚದಲ್ಲಿ ನಿರ್ಭಿಡೆಯಿಂದ ಹೇಳಿಕೊಳ್ಳಬಹುದಾಗಿದೆ. ತಮ್ಮ ಲೇಖನಗಳನ್ನು ಪತ್ರಿಕೆಗೆ ಈ-ಮೈಲ್’ನಲ್ಲಿ ಕಳಿಸುವಷ್ಟೇ ಸಲೀಸಾಗಿ ಪೋರ್ಟಲ್’ಗಳಲ್ಲಿ ಪ್ರಕಟಿಸಿ ಭಾಷೆಯ ಉಳಿವು, ಬೆಳವಣಿಗೆ ಮತ್ತು ಪ್ರಚಾರಕ್ಕೆ ಪರೋಕ್ಷವಾಗಿಯೇ ಸಹಕಾರಿಯಾಗಿದ್ದಾರೆ. ಈಜಿಪ್ಟಿನಲ್ಲಿನ ಮೂವತ್ತು ವರ್ಷಗಳ ದಬ್ಬಾಳಿಕೆಯ ಆಡಳಿತವು ಇಂದಿನ ತಾಂತ್ರಿಕ ಜಗತ್ತಿನ ದಿನದಲ್ಲಿ ಕೇವಲ ಮೂವತ್ತು ದಿನಗಳಲ್ಲಿ ಅಡಗಿಸಬಹುದಾಗಿದೆ ಎಂದಲ್ಲಿ ಇನ್ಯಾವ ಕ್ರಾಂತಿಯೂ ಆಗಬಹುದು.

ಭಾಷಾ ಬೆಳವಣಿಗೆಗೆ ಸಹಕಾರಿಯಾಗಿರುವ ಆಧುನಿಕ ತಂತ್ರಜ್ಞ್ನಾನದ ಯುಗದ ಮತ್ತೆರಡು ಅವಿಷ್ಕಾರಗಳು ಎಂದರೆ ‘ಫೇಸ್ ಬುಕ್’ ಮತ್ತು ‘ಟ್ವಿಟ್ಟರ್’. ಜಗತ್ತಿನ ಯಾವುದೋ ಮೂಲೆಯಲ್ಲಿ ಕುಳಿತು ತಾವು ಓದಿದ ಪುಸ್ತಕ ಬಗ್ಗೆಯೋ ಅಥವಾ ತಮಗೆ ಇಷ್ಟವಾದ ವಿಚಾರ ಧಾರೆಯನ್ನೋ ಹಂಚಿಕೊಂಡಲ್ಲಿ ಜಗತ್ತಿನ ಮತ್ತೊಂದು ಮೂಲೆಯಲ್ಲಿರುವವರು ಮರುಕ್ಷಣದಲ್ಲೇ ಅದನ್ನು ಓದಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಷ್ಟು ಪ್ರಭಾವಶಾಲಿ ಮಾಧ್ಯಮವಾಗಿದೆ. ’ಫೇಸ್ ಬುಕ್’ ನ ಕೆಲವು ಕನ್ನಡ ವೇದಿಕೆಗಳು ಎಂದರೆ ‘ಕನ್ನಡ ಸಾಹಿತ್ಯ ಮಂಚ’, ‘ನಿಲುಮೆ’, ‘ಕನ್ನಡ ಸಂಪದ’, ಇತ್ಯಾದಿ. ’ಕನ್ನಡ ಸಂಪದ’ವು ಕರ್ನಾಟಕದ ’ಸ್ಮರಣೀಯರ’ ಬಗ್ಗೆ ಮಾಹಿತಿ ಒದಗಿಸಿದಾಗ, ಹೊರನಾಡ ಕನ್ನಡಿಗರೂ ತಮ್ಮ ಅನಿಸಿಕೆಗಳನ್ನು, ಅಭಿಪ್ರಾಯಗಳನ್ನು, ಅನುಭವಗಳನ್ನು ಹಂಚಿಕೊಂಡು ವಿರಳವಾಗಿದ್ದ ಕನ್ನಡವನ್ನು ಹೇರಳವಾಗಿಸಿದ್ದಾರೆ. ಕನ್ನಡ ಬ್ಲಾಗ್ ಪ್ರಪಂಚವನ್ನು ಪ್ರಮುಖವಾಗಿ ಪ್ರಚಾರ ಮಾಡಿರುವವರು ’ಅವಧಿ’ (www.avadhimag.com). ಸಾಮಾಜಿಕ ಮಾಧ್ಯಮದಲ್ಲಿ ಆಧುನಿಕ ತಂತ್ರಜ್ಞ್ನಾನವನ್ನು ಬಳಸಿಕೊಂಡು ಜಗತ್ತಿನಾದ್ಯಂತ ಬರಹಗಾರರಿಗೆ ಹೊಸ ವೇದಿಕೆಯನ್ನೇ ಸೃಷ್ಟಿ ಮಾಡಿದ್ದಾರೆ. ಇಂದಿನ ತಂತ್ರಜ್ಞ್ನಾನ ಮತ್ತು ಹೊಸ ಅವಿಷ್ಕಾರ ಯುಗವು ಭಾಷೆಯ ಬೆಳವಣಿಗೆ ಮಾಡಲು ಸೂಕ್ತ ಸಮಯವಾಗಿದೆ. ಈ ಸುಸಮಯವನ್ನು ಉಪಯೋಗಿಸಿಕೊಂಡು ಕನ್ನಡ ಭಾಷೆಯನ್ನು ಇನ್ನೊಂದು ಹಂತಕ್ಕೆ ಕೊಂಡೊಯ್ಯಲು, ಹೊರನಾಡ ಕನ್ನಡಿಗರ ಸಮುದಾಯದ ನಡುವಿನ ಭಾಂಧವ್ಯ ಗಟ್ಟಿಯಾಗಿಸಲು, ರಾಜ್ಯದಲ್ಲಿನ ಮತ್ತು ಹೊರನಾಡಿನ ಕನ್ನಡಿಗರ ನಡುವೆ ಅಂತರ ಕಡಿಮೆ ಮಾಡಲು ಮತ್ತು ಸೇತುವೆ ಭದ್ರವಾಗಿಸಲು ಭಾಷೆಯ ಬೆಳವಣಿಗೆಗಾಗಿ ಹೋರಾಡುತ್ತಿರುವವರು ಸೂಕ್ತವಾಗಿ ಬಳಸಿಕೊಳ್ಳಬೇಕು.

( ಇದು ‘ಬೆಳಗಾವಿ’ಯಲ್ಲಿ ನಡೆದ ವಿಶ್ವಸಮ್ಮೇಳನ ಸಂದರ್ಭದಲ್ಲಿ ಹೊರತಂದ ಸ್ಮರಣ ಸಂಚಿಕೆಯಲ್ಲಿ ಪ್ರಕಟವಾದ ಲೇಖನ. ಲೇಖಕರು – ಶ್ರೀನಾಥ್ ಭಲ್ಲೆ ಮತ್ತು ವೆಂಕಟೇಶ್ ರಾಘವೆಂದ್ರ. ವೆಂಕಟೇಶ್ ರಾಘವೆಂದ್ರ ಅವರು ವಿಶ್ವದ ಅನೇಕ ಕಡೆಗಳಲ್ಲಿ ಅಭ್ಯುದಯ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀನಾಥ್ ಭಲ್ಲೆ ಅವರು ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಸಾಹಿತ್ಯ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದಾರೆ.)

 Posted by at 9:04 AM
Apr 112011
 
Dr.Sumatheendra Nadig
ಡಾ. ಸುಮತೀಂದ್ರ ನಾಡಿಗ

ಕವಿ, ಕಥೆಗಾರ, ವಿಮರ್ಶಕ ಸುಮತೀಂದ್ರ ನಾಡಿಗ

ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಪ್ರಸಿದ್ಧರಾಗಿರುವ ಶ್ರೀ ಸುಮತೀಂದ್ರನಾಡಿಗರು (ಜನನ: ೧೯೩೫) ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಜನಿಸಿದರು. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ಪ್ರತಿಭಾವಂತ ವಿದ್ಯಾರ್ಥಿಯಾದ ನಾಡಿಗರು ೧೯೫೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಮತ್ತು ೧೯೭೯ರಲ್ಲಿTemple University, Philadelphia, USA  ಇಂದ ಇಂಗ್ಲಿಷ್ ಎಂ. ಎ. ಪದವಿಯನ್ನು ಪಡೆದರು. ೧೯೮೫ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಡಾಕ್ಟರೇಟ್ ಪಡೆದುಕೊಂಡ ನಾಡಿಗರು ತಮ್ಮ ಪ್ರೌಢ ಪ್ರಬಂಧಕ್ಕಾಗಿ ಆರಿಸಿಕೊಂಡಿದ್ದ ವಿಷಯ ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’. ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಕೆ. ಎಸ್. ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ವಿಶೇಷವಾದ ಅಧ್ಯಯನ ನಡೆಸಿದ್ದಾರೆ.
ಸುಮತೀಂದ್ರ ನಾಡಿಗರು ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಯನ್ನು ಸಲ್ಲಿಸಿದ್ದಾರೆ. ‘ಜಡ ಮತ್ತು ಚೇತನ’, ‘ಪಂಚಭೂತಗಳು’, ‘ನಟರಾಜ ಕಂಡ ಕಾಮನಬಿಲ್ಲು’, ‘ಕುಹೂ ಗೀತ’, ‘ತಮಾಷೆ ಪದ್ಯಗಳು’, ‘ದಾಂಪತ್ಯ ಗೀತ’, ‘ಭಾವಲೋಕ’, ‘ಉದ್ಘಾಟನೆ’, ‘ಕಪ್ಪು ದೇವತೆ’ ಮತ್ತು ‘ನಿಮ್ಮ ಪ್ರೇಮಕುಮಾರಿಯ ಜಾತಕ’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವುಗಳ ಪೈಕಿ ‘ಪಂಚಭೂತಗಳು’ ಮತ್ತು ‘ದಾಂಪತ್ಯ ಗೀತ’ ಬಹಳ ಪ್ರಮುಖವಾಗಿದ್ದು, ಇಂಗ್ಲಿಷ್ ಮತ್ತು ಭಾರತದ ಹಲವಾರು ಪ್ರಾಂತೀಯ ಭಾಷೆಗಳಿಗೆ ಅನುವಾದಗೊಂಡಿವೆ.
‘ಮೌನದಾಚೆಯ ಮಾತು’, ‘ನಾಲ್ಕನೆಯ ಸಾಹಿತ್ಯ ಚರಿತ್ರೆ’, ‘ಮತ್ತೊಂದು ಸಾಹಿತ್ಯ ಚರಿತ್ರೆ’, ‘ಅಡಿಗರು ಮತ್ತು ನವ್ಯಕಾವ್ಯ’, ‘ವಿಮರ್ಶೆಯ ದಾರಿಯಲ್ಲಿ’, ‘ಕಾವ್ಯ ಎಂದರೇನು?’ ಇತ್ಯಾದಿ…, ನಾಡಿಗರ ವಿಮರ್ಶಾ ಕೃತಿಗಳು.  ‘ಗಿಳಿ ಮತ್ತು ದುಂಬಿ’, ‘ಕಾರ್ಕೋಟಕ’ ‘ಸ್ಥಿತಪ್ರಜ್ಞ’ಎಂಬ ಕಥಾ ಸಂಕಲನಗಳನ್ನು ಹೊರತಂದಿರುವ ನಾಡಿಗರ ‘ಆಯ್ದ ಕಥೆಗಳು’ ಎಂಬ ಕೃತಿ ೧೯೯೨-೧೯೯೩ರ ಸಾಲಿನ, ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ಪಠ್ಯವಾಗಿ ಆಯ್ಕೆಯಾಗಿತ್ತು. ಮಕ್ಕಳ ಸಾಹಿತ್ಯದಲ್ಲೂ ವಿಪುಲ ಕೃಷಿ ನಡೆಸಿರುವ ನಾಡಿಗರು, ‘ಡಕ್ಕಣಕ್ಕ ಡಕ್ಕಣ’, ಧ್ರುವ ಮತ್ತು ಪ್ರಹ್ಲಾದ’, ‘ಗೂಬೆಯ ಕಥೆ’, ‘ಇಲಿ ಮದುವೆ’, ‘ಗಾಳಿಪಟ’ ಮುಂತಾದ ಕೃತಿಗಳನ್ನೂ, ‘ಹನ್ನೊಂದು ಹಂಸಗಳು’ ಎಂಬ ಮಕ್ಕಳ ನಾಟಕವನ್ನೂ ಬರೆದಿದ್ದಾರೆ.
ಅನುವಾದ ಕ್ಷೇತ್ರದಲ್ಲೂ ನಾಡಿಗರದು ದೊಡ್ಡ ಹೆಸರು. ‘ರಾಧಾನಾಥ್ ರಾಯ್’, ‘ಸಿಂಧಿ ಸಾಹಿತ್ಯ ಚರಿತ್ರೆ’, ಅರಿಷ್ಟೋಫೇನನ ‘Birds’ ರಸ್ಕಿನ್ನನ ‘Unto This Last’ ಮುಂತಾದ ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿರುವುದಲ್ಲದೆ, ಬಂಗಾಳಿ ಭಾಷೆಯಿಂದ ರವೀಂದ್ರನಾಥ ಟಾಗೋರ್, ನರೇಂದ್ರನಾಥ ಚಕ್ರವರ್ತಿಯವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.
ಸುಮತೀಂದ್ರ ನಾಡಿಗರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ. ವಿ. ಸೀ. ಪುರಸ್ಕಾರ ಮುಂತಾದ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. ೧೯೯೬-೧೯೯೯ ಅವಧಿಯಲ್ಲಿ ‘ನ್ಯಾಷನಲ್ ಬುಕ್ ಟ್ರಸ್ಟ್’ ಸಂಸ್ಥೆಯ ಚೇರ್‌ಮನ್ನರಾಗಿದ್ದ ನಾಡಿಗರನ್ನು ಹರಿದ್ವಾರದ ಗುರುಕುಲ ಕಾಂಗ್ಡಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಭಾರತದ ಹಲವಾರು ಭಾಷೆಗಳನ್ನು ಬಲ್ಲ ನಾಡಿಗರಿಗೆ (ಕನ್ನಡ, ಹಿಂದಿ, ಮರಾಠಿ, ಕೊಂಕಣಿ, ಬಂಗಾಳಿ) ಭಾರತೀಯ ಸಾಹಿತ್ಯದ ಅತ್ಯಂತ ನಿಕಟ ಪರಿಚಯವಿದೆ.

ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ

Bhuvaneshwari Hegade

ಭುವನೇಶ್ವರಿ ಹೆಗಡೆ

ಕನ್ನಡದ ಪ್ರಮುಖ ಹಾಸ್ಯ ಲೇಖಕಿಯಾಗಿರುವ  ಶ್ರೀಮತಿ ಭುವನೇಶ್ವರಿ ಹೆಗಡೆಯವರ (ಜನನ: ಮೇ ೦೬, ೧೯೫೬) ಜನ್ಮ ಸ್ಥಳ ಉತ್ತರ ಕನ್ನಡ ಜಿಲ್ಲೆ ಕತ್ರಗಾಲ ಗ್ರಾಮ.  ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಎಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಭುವನೇಶ್ವರಿಯವರ ೫೦೦ಕ್ಕೂ ಹೆಚ್ಚು ಹಾಸ್ಯ ಪ್ರಬಂಧಗಳು ಕನ್ನಡದ ಎಲ್ಲ ಪ್ರಮುಖ ಪತ್ರಿಕೆ, ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿವೆ.
ಭುವನೇಶ್ವರಿಯವರು ‘ಮುಗುಳು’, ‘ನಕ್ಕು ಹಗುರಾಗಿ’, ‘ಎಂಥದು ಮಾರಾಯ್ರೆ’, ‘ವಲಲ ಪ್ರತಾಪ’, ‘ಹಾಸಭಾಸ’,  ‘ಮೃಗಯಾ ವಿನೋದ’, ‘ಬೆಟ್ಟದ ಭಾಗೀರಥಿ’,  ‘ಮಾತಾಡಲು ಮಾತೇ ಬೇಕೇ?’,  ‘ಪಟ್ಟೆಯ ಪಟ್ಟೆ ಹುಲಿ’, ‘ಕೈಗುಣ ಬಾಯ್ಗುಣ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಆಯ್ದ ನಗೆಬರಹಗಳು ‘ಬೆಸ್ಟ್ ಆಫ್ ಭು. ಹೆ. ಎಂಬ ಹೆಸರಿನ ಪುಸ್ತಕವಾಗಿ ಪ್ರಕಟವಾಗಿವೆ.  ಭುವನೇಶ್ವರಿಯವರು ‘ಸೂರು ಸಿಕ್ಕದಲ್ಲಾ’, ‘ಕಛೇರಿ ವೈಭವಂ’, ‘ವಸಂತ ವ್ಯಾಧಿ’, ‘ಕಾವ್ಯಕೋಲಾಹಲ’ ಎಂಬ ರೇಡಿಯೋ ನಗೆನಾಟಕಗಳನ್ನು ಕೂಡ ರಚಿಸಿದ್ದಾರೆ.  ಭುವನೇಶ್ವರಿಯವರ  ‘ಸಭಾಕಂಪನ’,  ‘ಮೂಢ ನಂಬಿಕೆಗಳ ಬೀಡಿನಲ್ಲಿ’, ‘ಸುಲಭದಲ್ಲಿ ಸಜ್ಜನರಾಗಲಾರಿರಿ’ ‘ನಕ್ಕು ಹಗುರಾಗಿ’ ಮತ್ತಿತರ ಪ್ರಬಂಧಗಳು ಶಾಲಾಕಾಲೇಜುಗಳ ಪಠ್ಯವಾಗಿ ಆಯ್ಕೆಯಾಗಿವೆ.  ಭುವನೇಶ್ವರಿಯವರು ಅಂಕಣಗಾರ್ತಿಯಾಗಿಯೂ  ಪ್ರಸಿದ್ಧರು.  ‘ಮಂಗಳೂರು ಮುಗುಳ್ನಗೆ’  (ಲಂಕೇಶ್ ಪತ್ರಿಕೆ),  ‘ನಗೆಮೊಗೆ’ (ವಾರ್ತಾಭಾರತಿ),‘ ಲಘುಬಗೆ’(ಉದಯವಾಣಿ),  ‘ಎಂಥದು ಮಾರಾಯ್ರೇ’ (ಕರ್ಮವೀರ),  ‘ಪಡು ಪಡುಸಾಲೆ’ (ಪ್ರಜಾವಾಣಿ) – ಭುವನೇಶ್ವರಿಯವರು ನಿರ್ವಹಿಸಿದ ಅಂಕಣಗಳು.  ಇವಲ್ಲದೆ ಹಲವಾರು ವಿಶೇಷ ಸಂಚಿಕೆಗಳಲ್ಲಿಯೂ ಭುವನೇಶ್ವರಿಯವರ ಲೇಖನಗಳು ಪ್ರಕಟವಾಗಿವೆ.  ಅಮೆರಿಕದ ಕನ್ನಡ ಸಾಹಿತ್ಯ ರಂಗ ಹೊರತಂದಿರುವ ‘ನಗೆ ಗನ್ನಡಂಗೆಲ್ಗೆ’ ಗ್ರಂಥದಲ್ಲಿ ‘ಅ.ರಾ.ಸೇ.’ ಕುರಿತ ಆಹ್ವಾನಿತ ಲೇಖನ ಪ್ರಕಟವಾಗಿದೆ.
ಭುವನೇಶ್ವರಿಯವರು ಸಲ್ಲಿಸಿರುವ ವಿಪುಲ ಸಾಹಿತ್ಯಸೇವೆಯಿಂದಾಗಿ  ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅವರನ್ನು  ಅರಸಿ ಬಂದಿವೆ.  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೮, ೧೯೯೭), ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನ (೧೯೯೭, ೨೦೦೦), ಬನಹಟ್ಟಿ ಪುಸ್ತಕ ಬಹುಮಾನ, ಪುತ್ತೂರಿನ ಉಗ್ರಾಣ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಇನ್ಫೋಸಿಸ್ ಫೌಂಡೇಶನ್ನಿನ ಡಾ. ಸುಧಾಮೂರ್ತಿ ಪ್ರಶಸ್ತಿಗಳಲ್ಲದೆ, ಇನ್ನೂ ಹಲವಾರು ಪ್ರಶಸ್ತಿಗಳಿಂದ ಭುವನೇಶ್ವರಿಯವರನ್ನು ಗೌರವಿಸಲಾಗಿದೆ.  ಭುವನೇಶ್ವರಿಯವರು  ಪತಿ ಶಂಭು ಹೆಗಡೆ ಮತ್ತು ಪುತ್ರಿ ಆಭಾ ಹೆಗಡೆಯವರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

 Posted by at 9:40 AM