admin

ಕನ್ನಡ ಸಾಹಿತ್ಯ ರಂಗದ ಐದನೇ ವಸಂತ ಸಾಹಿತ್ಯೋತ್ಸವ

 ೨೦೧೧ ನೇ ವಸಂತ ಸಾಹಿತ್ಯೋತ್ಸವ  Comments Off on ಕನ್ನಡ ಸಾಹಿತ್ಯ ರಂಗದ ಐದನೇ ವಸಂತ ಸಾಹಿತ್ಯೋತ್ಸವ
Jan 282011
 

ಕನ್ನಡ ಸಾಹಿತ್ಯ ರಂಗದ ಐದನೇ ವಸಂತ ಸಾಹಿತ್ಯೋತ್ಸವದ ಬಗ್ಗೆ ಈಗಾಗಲೇ ಬಂದ ಪ್ರಕಟನೆಯನ್ನು ಸಾಹಿತ್ಯಾಭಿಮಾನಿಗಳೆಲ್ಲರೂ ನೋಡಿರುವರೆಂದು ನಂಬಿದ್ದೇವೆ. ಈ ಪ್ರಕಟನೆಯಲ್ಲಿ ಸಾಹಿತ್ಯೋತ್ಸವದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುತ್ತಿದ್ದೇವೆ. ದಯವಿಟ್ಟು ಗಮನಿಸಿ.

ಹಿಂದೆಯೇ ಹೇಳಿದಂತೆ ಈ ಸಾಹಿತ್ಯೋತ್ಸವ ಉತ್ತರ ಕ್ಯಾಲಿಫ಼ೋರ್ನಿಯಾದ ಕನ್ನಡ ಕೂಟದ ಸಹಯೋಗದೊಂದಿಗೆ ಮತ್ತು ಅಲ್ಲಿನ ಸಾಹಿತ್ಯ ಗೋಷ್ಠಿ ಸಂಸ್ಥೆಯ ಸಹಕಾರದೊಂದಿಗೆ ನಡೆಯುತ್ತಿದೆ.
ಈ ಕಾರ್ಯಕ್ರಮ ಏಪ್ರಿಲ್ ೩೦ (ಶನಿವಾರ) ಮತ್ತು ಮೇ ೧ (ಭಾನುವಾರ), ೨೦೧೧ ಸಾನ್ ಫ಼್ರಾನ್ಸಿಸ್ಕೋಗೆ ಸುಮಾರು ೩೦ ಮೈಲಿ ದಕ್ಷಿಣದಲ್ಲಿರುವ ವುಡ್‌ಸೈಡ್ ಎಂಬ ಊರಿನ ವುಡ್‌ಸೈಡ್ ಹೈ ಸ್ಕೂಲ್‌ನ ಸುಂದರ ನಿವೇಶನದಲ್ಲಿ  ನಡೆಯುತ್ತಿದೆ. ಕಾರ್ಯಕ್ರಮ ಶನಿವಾರ ಮಧ್ಯಾಹ್ನ ಸುಮಾರು ೧:೩೦ ಹೊತ್ತಿಗೆ ಮೊದಲಾಗಿ ರಾತ್ರಿ ೧೦:೩೦ ವರೆಗೆ ನಡೆದು, ಮತ್ತೆ ಮರುದಿನ ಬೆಳಿಗ್ಗೆ ಸುಮಾರು ೮ ರಿಂದ ಮಧ್ಯಾಹ್ನ ೪ರ ವರೆಗೂ ನಡೆಯುತ್ತದೆ. ಹೊರ ಊರುಗಳಿಂದ ಬಂದು ಹೋಗುವವರಿಗೆ ಅನುಕೂಲವಾಗಲೆಂದೇ ಕಾರ್ಯಕ್ರಮ ಸಮಗಳನ್ನು ಈ ರೀತಿ ನಿಯೋಜಿಸಲಾಗಿದೆ. ಉತ್ತಮ ಊಟ ಉಪಾಹಾರಗಳನ್ನೂ, ತಕ್ಕ ವಸತಿ ಸೌಕರ್ಯಗಳನ್ನೂ ಸಿದ್ಧಗೊಳಿಸಲಾಗುತ್ತಿದೆ. ಕೆಲಸಗಳು ಹುರುಪಿನಿಂದ ಸಾಗುತ್ತಿವೆ.
ಈ ಸಾಹಿತ್ಯೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕನ್ನಡದ ಖ್ಯಾತ ಬರಹಗಾರರೂ ವಿಮರ್ಶಕರೂ ಆದ ಡಾ. ಗಿರಡ್ಡಿ ಗೋವಿಂದರಾಜ ಅವರು ಬರುತ್ತಿದ್ದಾರೆ. ಅಲ್ಲದೆ ಕನ್ನಡದ ಅತ್ಯುತ್ತಮ ಹಾಸ್ಯ ಸಾಹಿತಿಗಳಲ್ಲೊಬ್ಬರಾದ ಶ್ರೀಮತಿ ಭುವನೇಶ್ವರಿ ಹೆಗಡೆ ಅವರೂ ಬರುತ್ತಿದ್ದಾರೆ. ಒಂದು ಕಡೆ ಗಂಭೀರ ಸಾಹಿತ್ಯ ವಿಷಯಗಳತ್ತ ನಿಮ್ಮ ಮನಸ್ಸನ್ನು ಪ್ರಚೋದಿಸುವ ಕಾರ್ಯ ನಡೆಯುತ್ತಿದ್ದರೆ, ಇನ್ನೊಂದು ಕಡೆ ನಿಮ್ಮ ಮನಸ್ಸನ್ನು ಹಾಸ್ಯಕಿರಣಗಳಿಂದ ಹಗುರಗೊಳಿಸುವ ಕಾರ್ಯವೂ ನಡೆಯುತ್ತದೆ.  ಡಾ. ಗಿರಡ್ಡಿಯವರು ತಮ್ಮ ಕಥೆ, ಕವಿತೆ, ಪ್ರಬಂಧ  ಮತ್ತು ವಿಮರ್ಶೆಗಳಿಂದ ಇಂದಿನ ಪ್ರಮುಖ ಸಾಹಿತಿಗಳಲ್ಲೊಬ್ಬರೆಂದು ಪ್ರಖ್ಯಾತರಾಗಿದ್ದಾರೆ. ವಿಮರ್ಶೆಯ ಕ್ಷೇತ್ರದಲ್ಲಿ ಅವರ ಕೀರ್ತಿ ನಾಡಿನಾದ್ಯಂತ ಹರಡಿದೆ. ಶ್ರೀಮತಿ ಭುವನೇಶ್ವರಿ ಹೆಗಡೆಯವರ ಹಾಸ್ಯ ಲೇಖನಗಳನ್ನೋದಿ ಆನಂದಿಸದವರಾರು? ಹೀಗೆ ಜೀವನ ಸಾಹಿತ್ಯಗಳ ವಿವಿಧ ಮುಖಗಳನ್ನು ಪರಿಚಯಿಸುವ ಇಂಥ ಇಬ್ಬರು ಉತ್ತಮ ಸಾಹಿತಿಗಳು ಇಲ್ಲಿ ಬರುತ್ತಿರುವುದು ಒಂದು ವೈಶಿಷ್ಟ್ಯ.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ರಂಗ ತನ್ನ ಐದನೇ ಪ್ರಕಟನೆಯನ್ನು ಲೋಕಾರ್ಪಣ ಮಾಡುತ್ತಿದೆ. ಅಮೆರಿಕದ ಕನ್ನಡಿಗರು ಬರೆದ ಸುಮಾರು ೨೫ ಲಘು ಪ್ರಬಂಧಗಳ ಸಂಕಲನ ಶ್ರೀಮತಿ ತ್ರಿವೇಣಿ ಶ್ರೀನಿವಾಸರಾವ್ ಮತ್ತು  ಶ್ರೀ ಎಂ. ಆರ್. ದತ್ತಾತ್ರಿಯವರ ಸಂಪಾದಕತ್ವದಲ್ಲಿ ಹೊರಬರುತ್ತಿದೆ. ಪುಸ್ತಕ ಇನ್ನೇನು ಅಚ್ಚಿನಮನೆಗೆ ಹೋಗುತ್ತಿದೆ.
ಇದರ ಜೊತೆಗೆ ಈ ಸಾಹಿತ್ಯೋತ್ಸವದಲ್ಲಿ, ಇಲ್ಲಿನವರೇ ಬರೆದ, ಇದುವರೆಗೆ ಪ್ರಕಟವಾಗಿಲ್ಲದ, ಹೊಸ ಪುಸ್ತಕಗಳನ್ನೂ ಲೋಕಾರ್ಪಣೆ ಮಾಡುವ ಅವಕಾಶವಿರುತ್ತದೆ. ಆ ಬಗ್ಗೆ ಆಸಕ್ತಿಯುಳ್ಳ ಲೇಖಕರು ನಮ್ಮನ್ನು ಸಂಪರ್ಕಿಸಬೇಕೆಂದು ಕೋರುತ್ತೇವೆ.
ಮೇ ೨೦೦೯ರ ತರುವಾಯ ಇಲ್ಲಿನವರು ಬರೆದು ಪ್ರಕಟಿಸಿರುವ ಪುಸ್ತಕಗಳನ್ನು ಜನರ ಗಮನಕ್ಕೆ ತರುವ ಸಲುವಾಗಿ ‘ನಮ್ಮ ಬರಹಗಾರರು’ ಕಾರ್ಯಕ್ರಮ ನಿಯೋಜಿಸಲಾಗಿದೆ. ಬರಹಗಾರರನ್ನೂ, ಅವರ ಪುಸ್ತಕಗಳನ್ನೂ, ಅವುಗಳ ಬಗ್ಗೆ ಯುಕ್ತ ರೀತಿಯ ವಿಮರ್ಶೆಗಳನ್ನೂ ಜನಕ್ಕೆ ಪರಿಚಯಿಸುವುದು ಈ ಕಾರ್ಯಕ್ರಮದ ಉದ್ದೇಶ. ಇದರಲ್ಲಿ ಭಾಗವಹಿಸುವ ಆಸಕ್ತಿಯುಳ್ಳವರು ದಯವಿಟ್ಟು ನಮ್ಮನ್ನು ಸಂಪರ್ಕ ಮಾಡಿ.
ಇಲ್ಲಿನ ಕನ್ನಡಿಗರು ಬರೆದ ಪುಸ್ತಕಗಳು ಎಷ್ಟೋ ವೇಳೆ ಇಲ್ಲಿನವರಿಗೇ ದೊರೆಯುವುದಿಲ್ಲ – ಲೇಖಕರು ತಾವಾಗಿ ‘ವಿಶ್ವಾಸಪೂರ್ವಕ’ ಕೊಟ್ಟ ಹೊರತು! ಈ ಪರಿಸ್ಥಿತಿ ಬದಲಾಗಬೇಕು. ಇಲ್ಲಿನವರು ಬರೆದ ಪುಸ್ತಕಗಳನ್ನು ನಾವು ಇಲ್ಲಿಯೇ ಕೊಳ್ಳುವಂತಾಗಬೇಕು. ಇದನ್ನು ಕಾರ್ಯಗತ ಮಾಡುವ ಉದ್ದೇಶದಿಂದ ನಮ್ಮ ಸಾಹಿತ್ಯೋತ್ಸವದಲ್ಲಿ ಒಂದು ಪುಸ್ತಕ ಮಳಿಗೆ ತೆರೆಯುತ್ತೇವೆ. ಇಲ್ಲಿನ ಲೇಖಕರು ತಮ್ಮ ಪುಸ್ತಕಗಳನ್ನು ನಮ್ಮ ರಂಗದ ಮೂಲಕ ಅಲ್ಲಿ ಮಾರಾಟಮಾಡಬಹುದು.
ನಮ್ಮ  ಕನ್ನಡಿಗರ ಸೃಜನಶೀಲತೆಗೆ ಇಂಬುಗೊಡುವ ಕಾರ್ಯಕ್ರಮ ಕವಿಗೋಷ್ಠಿ. ಇದರಲ್ಲಿ ಭಾಗವಹಿಸಲು ಇಚ್ಛೆಯುಳ್ಳವರಿಗೆ ನಮ್ಮ ಆದರದ ಸ್ವಾಗತ. ಈ ಬಗ್ಗೆ ನಿರ್ದಿಷ್ಟ ಸೂಚನೆಗಳನ್ನೊಳಗೊಂಡ ವಿಶೇಷ ಪ್ರಕಟನೆಯೊಂದು ಸದ್ಯದಲ್ಲೇ ಬರಲಿದೆ. ಅದನ್ನು ಗಮನಿಸಿ.
ವಸಂತ ಸಾಹಿತ್ಯೋತ್ಸವ ಒಂದು ಅಪೂರ್ವ ಪ್ರಯೋಗ, ಒಂದು ಅಪೂರ್ವ ಅನುಭವ. ಬಹಳ ಮುತುವರ್ಜಿಯಿಂದ, ಪೂರ್ವಾಲೋಚನೆಯಿಂದ ಸಿದ್ಧಗೊಳಿಸಿದ ಕಾರ್ಯಕ್ರಮಗಳು, ಬಿಗಿಯಾಗಿ ಯಾರ ಸಮಯವನ್ನೂ ವ್ಯರ್ಥಗೊಳಿಸದೆ ಕಾರ್ಯನಿರ್ವಹಣೆ ಮಾಡುವ ಶಿಸ್ತು, ಉತ್ತಮವಾದ ಮನರಂಜನೆ, ಸಹೃದಯ ವಾತಾವರಣ, ಹಿತವಾದ ಊಟೋಪಚಾರ, ಸನ್ಮಿತ್ರರೊಂದಿಗೆ ಹಂಚಿಕೊಳ್ಳುವ ರಸನಿಮಿಷಗಳು… ಇವೆಲ್ಲ ನಿಮಗೆ ಅಲ್ಲಿ ಲಭ್ಯ. ಕಾರ್ಯಕ್ರಮ, ನೋಂದಣಿ, ಇತ್ಯಾದಿ ವಿವರಗಳು ಸಿದ್ಧವಾದಂತೆಲ್ಲ ಅವನ್ನು ಈ ತಾಣದಲ್ಲೂ,  ಮತ್ತು  ತಾಣಗಳಲ್ಲೂ ಪ್ರಕಟಿಸುತ್ತೇವೆ.
ಸಂಪರ್ಕ : ಎಚ್.ವೈ.ರಾಜಗೋಪಾಲ್ (hyrajagopal@gmail.com); ವಲ್ಲೀಶ ಶಾಸ್ತ್ರಿ (vshastry@yahoo.com); ಅಲಮೇಲು ಐಯಂಗಾರ್ (iyengars@gmail.com); ಪದ್ಮಾ ರಾವ್ (padmita@hotmail.com)
ಮತ್ತೊಮ್ಮೆ ನಿಮ್ಮೆಲ್ಲರಿಗೂ ಸುಸ್ವಾಗತ.
– ಎಚ್.ವೈ. ರಾಜಗೋಪಾಲ್

 Posted by at 2:31 PM
Oct 182010
 

ಕನ್ನಡ ಸಾಹಿತ್ಯ ಪ್ರೇಮಿಗಳಿಗೆಲ್ಲ ಆದರಪೂರ್ವಕ ನಮಸ್ಕಾರಗಳು. ಈಗಾಗಲೇ ನಾವು ಪ್ರಕಟಿಸಿರುವಂತೆ, ಕನ್ನಡ ಸಾಹಿತ್ಯ ರಂಗದ ಮುಂದಿನ ಅಧಿವೇಶನ 2011ರ ಮೇ ತಿಂಗಳಿನಲ್ಲಿ, ಅಮೆರಿಕದ ಪ್ರಮುಖ ಕನ್ನಡ ಕೂಟಗಳಲ್ಲಿ ಒಂದಾಗಿರುವ ಉತ್ತರ ಕ್ಯಾಲಿಫ಼ೋರ್ನಿಯಾ ಕನ್ನಡ ಕೂಟದ (KKNC) ಸಹಯೋಗದೊಂದಿಗೆ ಮತ್ತು ಸ್ಥಳೀಯ ಸಾಹಿತ್ಯಾಸಕ್ತರ ಬಳಗ ‘ಸಾಹಿತ್ಯಗೋಷ್ಠಿ’ಯ ಸಹಕಾರದೊಂದಿಗೆ ಸ್ಯಾನ್ ಫ಼್ರಾನ್ಸಿಸ್ಕೋ – ಬೇ ಏರಿಯ ಬಳಿ ನಡೆಯಲಿದೆ. ಈ ಸಂದರ್ಭದಲ್ಲಿ ಹಿಂದಿನ ಸಮ್ಮೇಳನಗಳಂತೆ ಈ ಸಲವೂ ಬಹುಮಟ್ಟಿಗೆ ಅಮೆರಿಕದ ಕನ್ನಡಿಗರೇ ಬರೆದಿರುವ ಕನ್ನಡ ಪುಸ್ತಕವೊಂದನ್ನು ಹೊರತರುತ್ತಿದ್ದೇವೆ. ಈ ಬಾರಿ ಲಲಿತ ಪ್ರಬಂಧಗಳಿಂದ ಕೂಡಿದ ಸಂಕಲನವೊಂದನ್ನು ಹೊರತರುವ ಯೋಜನೆ ನಮ್ಮದು. ಈ ಸಂಕಲನದ ಸಂಪಾದಕತ್ವವನ್ನು ಶ್ರೀಮತಿ ತ್ರಿವೇಣಿ ಶ್ರೀನಿವಾಸರಾವ್ ಮತ್ತು ಶ್ರೀ ಎಂ. ಆರ್. ದತ್ತಾತ್ರಿಯವರು ವಹಿಸಿಕೊಂಡಿದ್ದಾರೆ.

ಬಿಗಿಯಾಗಿರುವುದನ್ನು ಲಘುವಾಗಿ ಹೇಳುವುದೇ ಲಲಿತ ಪ್ರಬಂಧಗಳ ವೈಶಿಷ್ಟ್ಯವೆನ್ನಬಹುದು. ಲಲಿತ ಪ್ರಬಂಧಗಳು ಲಘುವಾಗಿದ್ದರೂ ಅದರ ದೃಷ್ಟಿಕೋನ ಮಾತ್ರ ಲಘುವಲ್ಲ. ಎರಡು ಸಂಸ್ಕೃತಿಗಳನ್ನು ಕಂಡವರಿಗೆ, ಹೊಸ ದೇಶಗಳನ್ನು ಕಂಡವರಿಗೆ ಅನೇಕ ಹೊಸ ಅನುಭವಗಳಾಗಿರುತ್ತವೆ, ಹೊಸ ವಿಚಾರಗಳು ಮನಸ್ಸಿಗೆ ಹೊಳೆದಿರುತ್ತವೆ. ಅವನ್ನು ಅವರು ನೋಡುವ, ತಮ್ಮದಾಗಿಸಿಕೊಳ್ಳುವ ರೀತಿಯೂ ಹೊಸದಾಗಿರಲು ಸಾಧ್ಯ. ಇಂಥವೆಲ್ಲ ಈ ಲಲಿತ ಪ್ರಬಂಧಗಳಿಗೆ ತಕ್ಕ ವಸ್ತುವಾಗಬಲ್ಲವು. ಕನ್ನಡ ಸಾಹಿತ್ಯ ಚರಿತ್ರೆಯಲ್ಲಂತೂ ಲಲಿತ ಪ್ರಬಂಧಗಳಿಗೆ ತನ್ನದೇ ಆದ ವಿಶಿಷ್ಟ ಸ್ಥಾನಮಾನವಿದೆ. ಎ.ಎನ್. ಮೂರ್ತಿರಾವ್, ಗೊರೂರು ರಾಮಸ್ವಾಮಿ ಅಯ್ಯಂಗಾರ್, ಅ.ರಾ. ಮಿತ್ರರಿಂದ ಹಿಡಿದು ಈಚೆಗಿನ ವಸುಧೇಂದ್ರರವರೆಗೂ ಲಲಿತ ಪ್ರಬಂಧ ಸುಲಲಿತವಾದ ಹಾದಿಯಲ್ಲಿ ಸಾಗಿಬಂದಿದೆ. ಹಾಗಾಗಿ, ಸಾಹಿತ್ಯ ರಂಗ ತನ್ನ ಈ ಬಾರಿಯ ಪ್ರಕಟಣೆಗೆಂದು ‘ಲಲಿತ ಪ್ರಬಂಧ’ ಪ್ರಕಾರವನ್ನೇ ಆರಿಸಿಕೊಂಡಿದ್ದು, ಈ ಮೂಲಕ ನಿಮ್ಮ ಪ್ರಬಂಧಗಳನ್ನು ಪ್ರಕಟನೆಗೆಂದು ಆಹ್ವಾನಿಸುತ್ತಿದೆ.

ಅದಕ್ಕಾಗಿ ನಾವು ರೂಪಿಸಿರುವ ಕೆಲವು ನಿಯಮಗಳು ಈ ರೀತಿಯಾಗಿವೆ:

* ಲಲಿತ ಪ್ರಬಂಧಗಳಿಗೆ ವಿಷಯದ ಮಿತಿಯಿಲ್ಲ. ಆದರೂ ನೀವು ಆರಿಸಿಕೊಳ್ಳುವ ವಿಷಯ ಸಾರ್ವಕಾಲಿಕವಾಗಿದ್ದು, ಸರ್ವತ್ರ ಅನ್ವಯವಾಗುವಂತಿದ್ದರೆ ಒಳಿತು.

* ಅನಿವಾಸಿ ಕನ್ನಡಿಗರ ಬರಹಗಳಿಗೆ ಆದ್ಯತೆ. ಇತರರ ಬರಹಗಳನ್ನು ಯುಕ್ತವಾದಲ್ಲಿ ಸ್ವೀಕರಿಸಲಾಗುವುದು.

* ನಮಗೆ ಕಳಿಸುವ ಪ್ರಬಂಧಗಳು ಈ ಮೊದಲು ಬೇರೆಲ್ಲೂ ಪ್ರಕಟವಾಗಿರಬಾರದು, ಪ್ರಕಟನೆಗೆಂದು ಇನ್ನೆಲ್ಲಿಗೂ ಕಳುಹಿಸಿರಬಾರದು.

* ನಮಗೆ ಬರುವ ಎಲ್ಲಾ ಪ್ರಬಂಧಗಳಿಂದ, ಸಂಪಾದಕ ಮಂಡಲಿ ಅತ್ಯುತ್ತಮವೆಂದು ತೀರ್ಮಾನಿಸುವ ಇಪ್ಪತ್ತೈದು-ಮೂವತ್ತು ಪ್ರಬಂಧಗಳನ್ನು ಆಯ್ದುಕೊಳ್ಳಲಾಗುತ್ತದೆ. ಈ ಆಯ್ಕೆಯಲ್ಲಿ ಸಂಪಾದಕ ವರ್ಗದ ತೀರ್ಮಾನವೇ ಅಂತಿಮವಾದದ್ದು.

* ನಿಮ್ಮ ಪ್ರಬಂಧಗಳು ಸುಮಾರು ಎಂಟು ಪುಟಗಳ ಮಿತಿಯಲ್ಲಿರಬೇಕು (ಸಾಲುಗಳ ನಡುವೆ ಒಂದು ಅಂತರ ಮಾತ್ರ -‘ಸಿಂಗಲ್ ಸ್ಪೇಸಿಂಗ್’ ಮತ್ತು ಬರಹ ಫ಼ಾಂಟ್ ೧೪, ಒಟ್ಟಿನಲ್ಲಿ, ಸುಮಾರು ೨೫೦೦ ಪದಗಳು).

* ಲೇಖನಗಳನ್ನು ‘ಬರಹ’ ತಂತ್ರಾಂಶ ಉಪಯೋಗಿಸಿ, ವಿ-ಅಂಚೆಯ ಮೂಲಕ ಕಳುಹಿಸಬೇಕು.

* ನಿಮ್ಮ ಪ್ರಬಂಧಗಳು ನಮ್ಮನ್ನು ತಲುಪಲು ಕೊನೆಯ ದಿನಾಂಕ: ಡಿಸೆಂಬರ್, ೧೫, ೨೦೧೦

* ಪ್ರಬಂಧಗಳನ್ನು ಕಳಿಸಬೇಕಾದ ವಿಳಾಸ – sritri@gmail.com

ಈ ಹಿಂದಿನಂತೆಯೇ, ಕನ್ನಡ ಸಾಹಿತ್ಯರಂಗಕ್ಕೆ ನಿಮ್ಮೆಲ್ಲರ ಬೆಂಬಲ, ಉತ್ತೇಜನಗಳನ್ನು ನೀಡುತ್ತೀರೆಂಬ ಭರವಸೆ ನಮಗಿದೆ. ಈ ಸಂಬಂಧವಾಗಿ ನಿಮ್ಮಲ್ಲಿ ಪ್ರಶ್ನೆಗಳಿದ್ದರೆ, ತ್ರಿವೇಣಿ ಶ್ರೀನಿವಾಸರಾವ್ (sritri@gmail.com ), ಎಂ. ಆರ್. ದತ್ತಾತ್ರಿ(dattathri_m_r@yahoo.com ) ಅಥವಾ ಕೆಳಕಾಣಿಸಿರುವ ಸಂಪಾದಕ ಮಂಡಲಿಯ ಯಾರನ್ನಾದರೂ ಸಂಪರ್ಕಿಸಬಹುದು: ಎಚ್.ವೈ. ರಾಜಗೋಪಾಲ್ (hyr1195@aol.com ), ಎಂ.ಎಸ್. ನಟರಾಜ (mysreena@aol.com ), ನಳಿನಿ ಮೈಯ (nmaiya@gmail.com), ನಾಗ ಐತಾಳ  (nagaaithal@yahoo.com ), ಮತ್ತು ಎಚ್.ಕೆ. ಚಂದ್ರಶೇಖರ್ (hkcssd@gmail.com ).

ಧನ್ಯವಾದಗಳು.

ಕನ್ನಡ ಸಾಹಿತ್ಯ ರಂಗದ ಪರವಾಗಿ,

ತ್ರಿವೇಣಿ ಶ್ರೀನಿವಾಸರಾವ್

ಎಂ.ಆರ್. ದತ್ತಾತ್ರಿ

 Posted by at 3:37 PM
Sep 242010
 

ಉತ್ತರ ಅಮೆರಿಕದ ಕನ್ನಡ ಸಾಹಿತ್ಯ ರಂಗ ತನ್ನ ಐದನೆಯ ವಸಂತ ಸಾಹಿತ್ಯೋತ್ಸವವನ್ನು ಈ ಮೂಲಕ ಉದ್ಘೋಷಿಸುತ್ತ ಕನ್ನಡ ಸಾಹಿತ್ಯಾಭಿಮಾನಿಗಳೆಲ್ಲರೂ ತಪ್ಪದೆ ಆ ಸಮ್ಮೇಳನಕ್ಕೆ ಬರಬೇಕೆಂದು ಅತ್ಯಂತ ವಿಶ್ವಾಸದಿಂದ ಕೋರುತ್ತಿದೆ.  ಈ ಸಮ್ಮೇಳನ ಬರುವ ವರ್ಷದ  ಮೇ ತಿಂಗಳಲ್ಲಿ (May, 2011) ಉತ್ತರ ಕ್ಯಾಲಿಫ಼ೋರ್ನಿಯಾದ ಸಾನ್ ಫ಼್ರಾನ್ಸಿಸ್ಕೋ ಸಮೀಪದಲ್ಲಿ ಅಲ್ಲಿನ ಅತ್ಯಂತ ಪ್ರತಿಷ್ಠಿತ ಕನ್ನಡ ಸಂಸ್ಥೆಯಾದ ಉತ್ತರ ಕ್ಯಾಲಿಫ಼ೋರ್ನಿಯ ಕನ್ನಡ ಕೂಟದ (KKNC) ಸಹಪ್ರಾಯೋಜಕತೆಯಿಂದ ನಡೆಯಲಿದೆ. ಅದೇ ಪ್ರದೇಶದಲ್ಲಿರುವ ಸಾಹಿತ್ಯ ಗೋಷ್ಠಿ ಸಂಸ್ಥೆಯೂ ಈ ಸಮ್ಮೇಳನಕ್ಕೆ ತನ್ನ ಬೆಂಬಲ ನೀಡಿದೆ.  ಸಮ್ಮೇಳನದ ವಿವರಗಳನ್ನು ಅವು ಸಿದ್ಧವಾದಂತೆಲ್ಲ ನಿಮಗೆ ದಟ್ಸ್ ಕನ್ನಡ.ಕಾಂ ಮುಂತಾದ ಮಾಧ್ಯಮಗಳ ಮೂಲಕ ತಿಳಿಸುತ್ತೇವೆ. ದಯವಿಟ್ಟು ಅವನ್ನು ಗಮನಿಸಿ.

ಕನ್ನಡ ಸಾಹಿತ್ಯ ರಂಗ ಉತ್ತರ ಅಮೆರಿಕದಲ್ಲಿರುವ ಹಲವಾರು ಕನ್ನಡ ಸಂಸ್ಥೆಗಳಲ್ಲಿ ಸಾಹಿತ್ಯಕ್ಕೇ ಮೀಸಲಾದ ಏಕೈಕ ರಾಷ್ಟ್ರೀಯ ಸಂಸ್ಥೆ. ಸಂಪೂರ್ಣವಾಗಿ ಸ್ವಾವಲಂಬಿಯಾದ, ಸ್ವತಂತ್ರವಾಗಿ ವ್ಯವಹರಿಸುವ, ಆರ್ಥಿಕ ಲಾಭೋದ್ದೇಶವಿಲ್ಲದ ಸಂಸ್ಥೆ ಇದು. ಸಂಸ್ಥೆ ಚಿಕ್ಕದು, ಆದರೆ ಅದರ ಧ್ಯೇಯಗಳು, ಆಶೋತ್ತರಗಳು  ದೊಡ್ಡವು. ಇದುವರೆಗೆ ನೀವೆಲ್ಲ ಈ ಸಂಸ್ಥೆಯನ್ನು ಪ್ರೀತಿಯಿಂದ ನೋಡಿ ಅದಕ್ಕೆ ನಿಮ್ಮ ಬೆಂಬಲ ನೀಡಿದ್ದೀರಿ, ಅದಕ್ಕೆ ನಾವು ಅತ್ಯಂತ ಕೃತಜ್ಞರಾಗಿದ್ದೇವೆ. ಇನ್ನು ಮುಂದೆಯೂ ನೀವು ಅದೇ ರೀತಿ ನಿಮ್ಮ ಬೆಂಬಲ ನೀಡುವಿರೆಂದು ಆಶಿಸುತ್ತೇವೆ.

ಉತ್ತರ ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟ ಅಮೆರಿಕದ ಸ್ಥಳೀಯ ಕನ್ನಡ ಕೂಟಗಳಲ್ಲೆಲ್ಲ ಅತಿ ದೊಡ್ಡ ಸಂಸ್ಥೆ. ೧೯೭೩ರಲ್ಲಿ ಸ್ಥಾಪನೆಯಾದ ಈ ಕೂಟ ಸಾನ್ ಫ಼್ರಾನ್ಸಿಸ್ಕೋ ಕೊಲ್ಲಿಯ ಪ್ರದೇಶದ ಸಹಸ್ರಾರು ಕನ್ನಡಿಗರಿಗೆ ಮಮತೆಯ ಮನೆಯಾಗಿದೆ. ವಿವಿಧ ರೀತಿಯ ಕನ್ನಡ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವುದಲ್ಲದೆ, ಸುತ್ತಲಿನ ಸಮಾಜದೊಂದಿಗೆ ನಿಕಟ ವ್ಯವಹಾರವನ್ನೂ ಇಟ್ಟುಕೊಂಡು ಅದರ ಚಟುವಟಿಕೆಗಳಲ್ಲೂ ಭಾಗವಹಿಸುವ ಸಂಸ್ಥೆ ಇದು. ಹೊಸ ರೀತಿಯ ಕಾರ್ಯಕ್ರಮಗಳನ್ನು ನಡೆಸುವ ಉತ್ಸಾಹವಿರುವ ಈ ಸಂಸ್ಥೆಯ ಪದಾಧಿಕಾರಿಗಳು ಕನ್ನಡ ಸಾಹಿತ್ಯ ರಂಗದೊಂದಿಗೆ ಬರುವ ವರ್ಷದ ವಸಂತ ಸಾಹಿತ್ಯೋತ್ಸವನ್ನು ನಡೆಸುವ ಯೋಜನೆಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿ, ಅದಕ್ಕೆ  ತಮ್ಮ ಪೂರ್ಣ ಸಹಕಾರ ಬೆಂಬಲಗಳನ್ನು ನೀಡಿದ್ದಾರೆ. ಅವರಿಗೆ ಕನ್ನಡ ಸಾಹಿತ್ಯ ರಂಗ ಅತ್ಯಂತ ಋಣಿಯಾಗಿದೆ.

ಈ ಸಮ್ಮೇಳನದ ಮುಖ್ಯ ಗುರಿ ಇಲ್ಲಿನ ಎಲ್ಲ ಕನ್ನಡ ಸಾಹಿತ್ಯಾಸಕ್ತರನ್ನೂ, ಬರಹಗಾರರನ್ನೂ ಒಂದೆಡೆ ಸೇರಿಸಿ ಅವರು ತಂತಮ್ಮ ವಿಚಾರಗಳನ್ನು ಮಂಡಿಸಲು, ಆಲೋಚನೆಗಳನ್ನು ಹಂಚಿಕೊಳ್ಳಲು ಅನುವಾಗುವಂಥ ಒಂದು ಗದ್ದಲವಿಲ್ಲದ, ನೆಮ್ಮದಿಯ, ಸಂತೋಷದ ವೇದಿಕೆಯನ್ನು ಕಲ್ಪಿಸುವುದು. ಇಲ್ಲಿನವರು ಬರೆದ ಹೊಸ ಪುಸ್ತಕಗಳನ್ನು ಕುರಿತು ಚರ್ಚಿಸುವುದು, ಈ ನಾಡಿನಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗೆ ಏನೇನು ಕ್ರಮಗಳನ್ನು ಕೈಗೊಳ್ಳಬಹುದು ಎಂದು ಯೋಚಿಸುವುದು, ಕರ್ನಾಟಕದಿಂದ ಬರುವ ಅತಿಥಿ ಸಾಹಿತಿಗಳೊಂದಿಗೆ ಸಾವಧಾನವಾಗಿ, ಮನಸಾರೆ ಮಾತನಾಡುವುದು  – ಇಂಥ ಎಲ್ಲಕ್ಕೂ ಒಂದು ಉತ್ತಮ ಅವಕಾಶವನ್ನು ಕೊಡುತ್ತದೆ ಈ ಸಮ್ಮೇಳನ. ಇವಲ್ಲದೆ ಸಾಹಿತ್ಯಾತ್ಮಕವಾದ ಉತ್ತಮ ಮನರಂಜನೆಯ ಕಾರ್ಯಕ್ರಮಗಳೂ ಇರುತ್ತವೆ. ಈ ಹಿಂದೆ ನಡೆದ ವಸಂತ ಸಾಹಿತ್ಯೊತ್ಸವಗಳಲ್ಲಿ ಪಾಲುಗೊಂಡವರೆಲ್ಲ ತಮ್ಮ ಅನುಭವಗಳ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಈ ಮುಂದಿನ ಸಮ್ಮೇಳನದಲ್ಲಿ ಇನ್ನೂ ಹೆಚ್ಚು ಮಂದಿ ಪಾಲುಗೊಂಡು ಕನ್ನಡ ಸಾಹಿತ್ಯಸುಧೆಯನ್ನು ಆಸ್ವಾದಿಸುವರೆಂದು ನಂಬಿದ್ದೇವೆ.

ಪ್ರತಿ ಸಮ್ಮೇಳನದ ಸಂದರ್ಭದಲ್ಲೂ ಕನ್ನಡ ಸಾಹಿತ್ಯ ರಂಗ ಒಂದೊಂದು ಹೊಸ ಪುಸ್ತಕ ಹೊರತಂದಿದೆ. ಈ ಪುಸ್ತಕ ಯೋಜನೆಯಲ್ಲಿ ಅಮೆರಿಕದ ಕನ್ನಡ ಲೇಖಕರಿಗೇ ಅಗ್ರಸ್ಥಾನವಿರುತ್ತದೆ.  ಈ ಸಲದ ಪುಸ್ತಕ ಯೋಜನೆಯ ಬಗ್ಗೆ ಸದ್ಯದಲ್ಲೇ ಪ್ರಕಟನೆ ಹೊರಡಲಿದೆ. ಅದನ್ನೂ, ಸಮ್ಮೇಳನದ ಬಗ್ಗೆ ಮುಂದೆ ಬರಲಿರುವ  ವಾರ್ತಾ ಪ್ರಕಟನೆಗಳನ್ನೂ ದಯವಿಟ್ಟು ಎದುರುನೋಡಿ.

ಮತ್ತೊಮ್ಮೆ ಎಲ್ಲ ಕನ್ನಡ ಸಾಹಿತ್ಯಾಭಿಮಾನಿಗಳಿಗೂ ಐದನೇ ವಸಂತ ಸಾಹಿತ್ಯೋತ್ಸವಕ್ಕೆ ಸುಸ್ವಾಗತ ಕೋರುತ್ತೇವೆ.

ವಿವರಗಳಿಗೆ ಎಚ್.ವೈ. ರಾಜಗೋಪಾಲ್ (hyrajagopal@gmail.com ) ಅವರನ್ನು ಸಂಪರ್ಕಿಸಬಹುದು.

ಎಚ್.ವೈ. ರಾಜಗೋಪಾಲ್

ಅಧ್ಯಕ್ಷ, ಕನ್ನಡ ಸಾಹಿತ್ಯ ರಂಗ ಕಾರ್ಯಕಾರೀ ಸಮಿತಿ

 Posted by at 3:36 AM
Aug 022010
 

ಗುರುಹರಿಗೆ ಸಂಧ್ಯಾರವಿ ಗುರುವಂದನೆ

ಆವತ್ತು ನಮ್ಮ ಮನೆಗೆ ಹರಿಹರೇಶ್ವರ ಮತ್ತು ನಾಗಲಕ್ಷ್ಮಿ ಬಂದಿದ್ದರು. ಅವರು ಬರುತ್ತಾರೆ ಎಂದರೆ ನನಗೆ ಎಲ್ಲಿಲ್ಲದ ಸಡಗರ, ಉತ್ಸಾಹ. ಮನೆಗೆ ಹಿರಿಯ ದಂಪತಿಗಳು ಬರುವರೆಂದು ಮಾತ್ರವಲ್ಲ, ಪ್ರೀತಿಪಾತ್ರರಾದ ಸ್ನೇಹಿತರು. ಕನ್ನಡದ ಬಗ್ಗೆ ಹುರುಪು ತುಂಬುವವರು, ಬದುಕಿಗೆ ಚೇತನ ತುಂಬುವ ಮಾರ್ಗದರ್ಶಿಗಳು ನಮ್ಮಂಥವರ ಮನೆಗೆ ಬರುವುದು ಕಡಲು ತೊರೆ ಅರಸಿ ಬಂದಂತೆ.

ಅವರು ಬಂದ ಕ್ಷಣದಿಂದ ಪ್ರಾರಂಭವಾಗುವ ನಮ್ಮ ಸಂಭಾಷಣೆ ಎಡೆತಡೆಯಿಲ್ಲದೆ ಸಾಗುವುದು. ಒಂದು ಕ್ಷಣವೂ ಸುಮ್ಮನೆ ಇರುವುದಿಲ್ಲ, ಬೇಸರದ ಸುಳಿವೇ ಇಲ್ಲ. ಹರಿಹರೇಶ್ವರ ಅವರು ವಿವಿಧ ವಿಷಯಗಳಲ್ಲಿ ಹೊಂದಿದ್ದ ಅಗಾಧವಾದ ಜ್ಞಾನದಿಂದ ನಮ್ಮ ಸಂಭಾಷಣೆಗಳು ಶಾಲೆಯಲ್ಲಿ ಕುಳಿತು ಗುರುಗಳೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವಂತೆ ಇರುತ್ತಿತ್ತು. ಏಕವ್ಯಕ್ತಿ ವಿಶ್ವವಿದ್ಯಾಲಯ ಎಂದು ಕರೆಯುವುದು ಇಂಥವರಿಗೇ.

ಕಳೆದ ಗುರುವಾರ ನಮ್ಮನ್ನಗಲಿದ ಶಿಕಾರಿಪುರ ಹರಿಹರೇಶ್ವರ ತಾವು ಓದಿದ ಪ್ರತಿಯೊಂದು ಪುಸ್ತಕವನ್ನೂ ಪತ್ನಿ ನಾಗಲಕ್ಷ್ಮಿಯವರೊಡನೆ ಹಂಚಿಕೊಳ್ಳುತ್ತಿದ್ದರು. ಸಾಹಿತ್ಯ, ನಿರೂಪಣೆ, ಪದಬಳಕೆ ಬಗೆಗೆ ಅವರವರಲ್ಲಿ ಚರ್ಚೆ ಸಾಗುತ್ತಿತ್ತು. ಹರಿ ಅವರೇ ಹೇಳಿದಂತೆ ತಾವು ಬರೆಯುವ ಪ್ರತಿಯೊಂದು ಬರಹವನ್ನೂ ನಾಗಲಕ್ಷ್ಮಿ ವಿಮರ್ಶಿಸುತ್ತಿದ್ದರು. ಅವರದ್ದು ಅನುರೂಪ, ಅಪರೂಪದ ದಾಂಪತ್ಯ. ಇಬ್ಬರ ಆಸೆ, ಆಸಕ್ತಿಗಳು ಒಂದೇ ಆದ್ದರಿಂದ ಜೀವನ ಸುಗಮ, ಸರಾಗ, ಸ್ನೇಹಮಯ. ಅವರಿಬ್ಬರ ಹೆಸರೂ ಅನುರೂಪವಾಗಿಯೇ ಇದೆ, ಅವರು ಹರಿ ಆದರೆ ಇವರು ಲಕ್ಷ್ಮಿಯಾಗುತ್ತಾರೆ, ಅವರು ಹರೇಶ್ವರರಾದರೆ, ಇವರು ನಾಗ!

ಹರಿ ನಾಗಲಕ್ಷಿಯವರದ್ದು ಕೊಡುವ ಕೈ. ಇವರು ಇಲ್ಲಿ, ಅಂದರೆ ಅಮೇರಿಕಾದಲ್ಲಿ ಇದ್ದಾಗ ಮಾಡಿದ ಕನ್ನಡ ಪರ ಕೆಲಸಗಳು ಅನೇಕ. ಅಮೆರಿಕನ್ನಡ ಪತ್ರಿಕೆ ಪ್ರಾರಂಭಿಸುವುದರ ಮೂಲಕ 1980ರ ದಶಕದಲ್ಲಿ ಅಮೇರಿಕಾದಾದ್ಯಂತ ಮನೆಮಾತಾಗಿದ್ದರು. ಕನ್ನಡವೇ ಕಾಣದ, ಕೇಳದ ಈ ಪರಿಸರದಲ್ಲಿ, ಆ ಸಮಯದಲ್ಲಿ ನನ್ನಂತಹ ಕನ್ನಡಪ್ರೇಮಿಗಳಿಗೆ ಅಮೆರಿಕನ್ನಡ ಮರುಭೂಮಿಯಲ್ಲಿ ಸಿಕ್ಕ ಓಯಸಿಸ್‌ನಂತೆ ಇತ್ತು.

ನನ್ನ ಗುರು, ನಮಗೆಲ್ಲ ಗುರು : ಅವರು ಕ್ಯಾಲಿಫೋರ್ನಿಯಾಗೆ ಬಂದ ಮೇಲಂತೂ ನನ್ನ ಬರವಣಿಗೆಗೆ ಅವರಿಂದ ತುಂಬು ಹೃದಯದ ಬೆಂಬಲ ದೊರಕಿತು. ಪ್ರತಿವಾರ ಒಂದಲ್ಲ ಒಂದು ಕಾರ್ಯಕ್ರಮ ಹೂಡುತ್ತಿದ್ದರು. ಅವರು ಹೋಮ್‌ವರ್ಕ್ ಕೊಟ್ಟು ನನ್ನ ಕನ್ನಡದ ಬರವಣಿಗೆಗೆ ಪ್ರೋತ್ಸಾಹವಿತ್ತರು. ಹೀಗೆ ಇಲ್ಲಿನ ಕನ್ನಡಿಗರಿಗೆ ಕನ್ನಡ ಸಾರುವುದಕ್ಕೆ, ಬೆಳೆಸುವುದಕ್ಕೆ ಹರಿ ಊರುಗೋಲಾಗಿದ್ದರು. ಅವರು ಮೈಸೂರಿಗೆ ಮರಳಿದ ಮೇಲೆ ಊರುಗೋಲು ಖಂಡಾಂತರದ ಸೇತುವೆಯಾಯಿತು. ನಾನು ಮೈಸೂರಿನಿಂದ ನಿಮ್ಮ ಕನ್ನಡಪರ ಕಾರ್ಯಕ್ರಮಗಳಿಗೆ ಹೇಗೆ ಸಹಾಯ ಮಾಡಲಿ? ಎನ್ನುವುದು ಅವರು ಪ್ರತಿಸಲಿ ನನ್ನೊಡನೆ ಮಾತನಾಡಿದಾಗ ಕೇಳುವ ಪ್ರಶ್ನೆ! ನನ್ನ ಸಣ್ಣಕಥೆಗಳ ಸಂಗ್ರಹ ಬೆಳಕು ಕಾಣುವುದಕ್ಕೆ ಈ ದಂಪತಿಗಳೇ ಕಾರಣ. ಹಲವಾರು ವರುಷಗಳಿಂದ ಬರೆದಿದ್ದ ಕಥೆಗಳು ಒಂದು ಪುಸ್ತಕವಾಗಿ ಹೊರಹೊಮ್ಮಿತು. ಉತ್ತರ ಕ್ಯಾಲಿಫೋರ್ನಿಯಾದಿಂದ ನಾನು ಕಳಿಸಿದ ಕಥೆಗಳನ್ನು ಮೂರು ವಾರಗಳಲ್ಲಿ ಅಚ್ಚು ಮಾಡಲು, ಪ್ರಕಟಗೊಳಿಸಲು ಸಿದ್ಧಗೊಳಿಸಿ, ಪುಸ್ತಕ ಬಿಡುಗಡೆಯ ಕಾರ್ಯಕ್ರಮವನ್ನೂ ಅಚ್ಚುಕಟ್ಟಾಗಿ ಮಾಡಿಬಿಟ್ಟರು.
ಅಧ್ಯಯನಶೀಲ : ಹರಿಯವರು ಯಾವ ವಿಷಯವನ್ನೇ ತೆಗೆದುಕೊಂಡರೂ ಅದನ್ನು ಆಮೂಲಾಗ್ರವಾಗಿ ಓದಿ, ಸಂಶೋಧಿಸಿ, ಅದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ಗುಬ್ಬಿ ಕುರಿತೇ ಇರಲಿ ಅಥವಾ ಮಹಾಲಕ್ಷ್ಮಿ ಬಗ್ಗೆಯೇ ಇರಲಿ. ವೇದ, ವೇದಾಂತ, ಜಾನಪದ, ಸಾಹಿತ್ಯಲೋಕದಲ್ಲಿ ಎಲ್ಲೆಲ್ಲಿ ಅದರ ಉಲ್ಲೇಖನವಿರುತ್ತದೋ ಅದೆಲ್ಲವು ಹರಿಯವರಿಗೆ ಕರತಲಾಮಲಕ. ಅವರೇ ಬರೆದಿರುವ ಅನೇಕ ಪುಸ್ತಕಗಳಲ್ಲಿರುವ ಟಿಪ್ಪಣಿಗಳಿಂದ ಇದು ನಮಗೆ ತಿಳಿದು ಬರುತ್ತದೆ. ಹರಿಯವರು ಹಲವಾರು ವಿಷಯಗಳ ಕುರಿತು 20ಕ್ಕೂ ಹೆಚ್ಚು ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಹರಿಯವರ ಕನ್ನಡ ಪ್ರೀತಿಗೆ ಇನ್ನೊಂದು ಉದಾಹರಣೆಯೆಂದರೆ ಅವರೇ ಹಣ ಕೊಟ್ಟು ಇತರರ ಪುಸ್ತಕಗಳನ್ನು ಪ್ರಕಟಿಸುವುದು. ಕನ್ನಡದಲ್ಲಿ ಬರೆಯುವವರಿಗೆ ಇವರು ಈ ರೀತಿ ಪ್ರೋತ್ಸಾಹಿಸುವುದಲ್ಲದೆ, ಓದುವವರಿಗೆ ಬಿಟ್ಟಿ ಪುಸ್ತಕಗಳನ್ನು ಕೊಟ್ಟು ಓದುವಂತೆ ಕೋರಿಕೊಳ್ಳುತಿದ್ದರು! ಬಂದೆಡೆಯೆಲ್ಲ ಅವರು ಬರಿಯ ಕೈಯಲ್ಲಿ ಬರುವ ವ್ಯಕ್ತಿಯಲ್ಲ. ಇತರರಿಗೆ ಕೊಡುವುದಕ್ಕೆ ಕೃತಿಗಳು ಜೋಳಿಗೆಯಲ್ಲಿ ಸದಾ ಇರುತ್ತಿದ್ದವು. ಹರಿ ದಂಪತಿಗಳು ತಾಯ್ನಾಡಿಗೆ ಮರಳಿದ ಮೇಲೆ ಅನೇಕ ರೀತಿಯಲ್ಲಿ ಸಮಾಜಸೇವೆಯನ್ನು ಜತೆಜತೆಯಾಗಿ ಮಾಡುತ್ತಿದ್ದರು. ಅವರ ನೆರವಿನಿಂದ ಅನೇಕರು ಶಾಲಾ ಕಾಲೇಜುಗಳಲ್ಲಿ ಅಧ್ಯಯನ ಮುಂದುವರೆಸಲು ಸಾಧ್ಯವಾಗಿದೆ. ಅನ್ನದಾನ, ವಸ್ತ್ರದಾನ, ವಿದ್ಯಾದಾನ ನೀಡುವ ಅನೇಕ ಕಾರ್ಯಕ್ರಮಗಳಿಗೆ ತಮ್ಮ ತನು, ಮನ, ಧನವನ್ನು ಮುಡಿಪಾಗಿಟ್ಟಿದ್ದರು. ತಾಯ್ನಾಡಿಗೆ ಒಂದು ನಿರ್ದಿಷ್ಟ ಉದ್ದಿಶ್ಯವಿಟ್ಟುಕೊಂಡು ವಾಪಸ್ಸು ಹೋಗಿದ್ದರು. ಉದ್ದೇಶ ಸ್ಪಷ್ಟ, ಶ್ರದ್ಧೆ ಅಚಲ, ಫಲಿತಾಂಶ ಸಾರ್ಥಕತೆ. ಹರಿ ಮತ್ತು ನಾಗಲಕ್ಷ್ಮಿ ಅವರ ವೈವಾಹಿಕ ಜೀವನಕ್ಕೆ ಇದೇ ಆಗಸ್ಟ್ ಗೆ 40 ವರ್ಷ ತುಂಬುತ್ತದೆ. ಆ ದಿವಸಕ್ಕಾಗಿ ಅವರ ಮಕ್ಕಳು ಸುಮನಾ ಮತ್ತು ನಂದಿನಿ ಹಾಗೂ ನಾವೆಲ್ಲ ಸೇರಿ ಹರಿ ನಾಗೂ ಅವರಿಗೆ ಸರ್ ಪ್ರೈಸ್ ಮಾಡುವ ಯೋಜನೆ ಹಾಕಿಕೊಂಡಿದ್ದೆವು. ನಮಗೆ ಆ ಪುಣ್ಯ ಇಲ್ಲದಂತಾಯಿತು. ಹರಿಯನ್ನು ವಿಧಿ ಕರೆಸಿಕೊಂಡಿತು. ಅನ್ಯ ಮಾರ್ಗವಿಲ್ಲ. ಹಾಗಂತ ಪತ್ನಿ ನಾಗು ಅವರಾಗಲೀ, ನನ್ನಂಥ ಹರಿ ಅಭಿಮಾನಿಗಳಾಗಲೀ ಅನಾಥರಾದೆವೆಂದು ಭಾವಿಸಬೇಕಿಲ್ಲ. ಬದುಕಿರುವವರೆಗೂ ಭಾವನಾತ್ಮಕ ನೆಲೆಯಲ್ಲಿ ಒಟ್ಟಿಗೇ ಇರುವ ನೇಮವನ್ನು ತಾವು ತೊರೆಯುವುದಿಲ್ಲ.

 Posted by at 11:44 PM