admin

Aug 022010
 

“ಅಮೆರಿಕನ್ನಡದ ಹರಿಯವ್ರು ಹೋದ್ರು ಎಂದೆನಬೇಡಿ

ಹೋದ್ರೂ ಇಲ್ಲೇ ಕುಂತವ್ರೆ ಪುಣ್ಯಾತ್ಮರು

ಬಿತ್ತಿ ಹೋಗವ್ರೆ ಇಲ್ಲಿ ಕನ್ನಡವಾ”

ಇದು ನನ್ನ ಮನಸ್ಸಿನಲ್ಲಿ ಮೂಡಿ ಬಂದ ಭಾವನೆ, ಹರಿಹರೇಶ್ವರರ ನಿಧನ ವಾರ್ತೆ ಕೇಳಿ. ಅಂದು ಗೆಳೆಯ ಶ್ರೀನಿವಾಸ ಭಟ್ಟರು ದೂರವಾಣಿಯಲ್ಲಿ ನನಗೆ ಹರಿಯವರ ನಿಧನದ ವಾರ್ತೆ ಮುಟ್ಟಿಸಿದಾಗ ಡಾ.ಪಿ.ಕೆ.ರಾಜಶೇಖರ ಅವರು ಸಂಪಾದಿಸಿದ ‘ಜನಪದ ಮಹಾಭಾರತ”ವನ್ನು ಓದುತ್ತಿದ್ದೆ. ಆ ಗ್ರಂಥವನ್ನು ಹರಿಹರೇಶ್ವರರು ನಾನು ಮೈಸೂರಿನಲ್ಲಿ ಸರಸ್ವತೀಪುರದ ಅವರ ಮನೆಯಲ್ಲಿ ಕಳೆದ ಜನವರಿಯಲ್ಲಿ ಭೇಟಿ ಮಾಡಿದಾಗ ಉಡುಗೊರೆಯಾಗಿ ನನಗೆ ಕೊಟ್ಟಿದ್ದರು. ಅದೊಂದು ಕಾಕತಾಳೀಯ ನ್ಯಾಯವೆಂದರೂ ಸರಿಯೇ!

ಆ ಗ್ರಂಥವನ್ನು ತಮ್ಮ ಸ್ವಹಸ್ತದಲ್ಲಿ, ‘ಆತ್ಮೀಯ ಡಾ. ಎಚ್.ಎನ್. ಐತಾಳ್ ಅವರಿಗೆ’ ಎಂದು ಪ್ರೀತಿಯಿಂದ ಬರೆದು ಕೊಟ್ಟಿದ್ದರು. (ನನ್ನ ಹೆಸರು ನಾಗ ಐತಾಳ ಎಂತಿದ್ದರೂ, ಅವರು ನನ್ನನ್ನು ಎಚ್.ಎನ್. ಐತಾಳ ಎಂದೇ ಸಂಬೋಧಿಸುತ್ತಿದ್ದರು.) ಅಂದು ಅವರೊಡನೆ ಮಾತಾಡುತ್ತ ನಾನು ಆ ಗ್ರಂಥದ ಮೇಲಿನ ಆಸಕ್ತಿಯನ್ನು ವ್ಯಕ್ತಪಡಿಸಿದ್ದೆ. ಹರಿಹರೇಶ್ವರರು ತಟ್ಟನೆ ಎದ್ದು ಮಹಡಿಯಿಂದ ಆ ಗ್ರಂಥದ ಪ್ರತಿಯೊಂದನ್ನು ತಂದು, ‘ಐತಾಳ್ರೇ…, ನಿಮಗೆ ಜಾನಪದದ ಮೇಲಿನ ಆಸಕ್ತಿ ಇರುವುದು ನನಗೆ ತುಂಬಾ ಸಂತೋಷವಾಗುತ್ತಿದೆ. ನನ್ನ ಬಳಿ ಹೆಚ್ಚಿನ ಪ್ರತಿಯೊಂದಿದೆ. ಇಗೊಳ್ಳಿ, ಅದನ್ನು ಅಮೆರಿಕಕ್ಕೆ ಕೊಂಡು ಹೋಗಿ; ಓದಿ ಆನಂದ ಪಡಿರಿ, ಹಾಗೂ ಆ ಬಗ್ಗೆ ಸ್ವಲ್ಪ ಪ್ರಚಾರ ಮಾಡಿ…’ ಎಂದು ಹೇಳಿ ಕೊಟ್ಟಿದ್ದರು. ಅದರಲ್ಲಿ ಉಲ್ಲೇಖಿತವಾದ:

“ಸತ್ಯವಂತ ಪಾಂಡವರು ಸತ್ತರೆಂದೆನಬ್ಯಾಡಿ

ಸತ್ತರೆ ಲೋಕ ಉಳಿಯಾವು – ಪಾಂಡವರು

ಬಿತ್ತಿ ಹೋಗವರೆ ಅವರೇಯ”

ಎಂಬ ತ್ರಿಪದಿಯನ್ನು ಉಲ್ಲೇಖಿಸಿದ್ದರು ಅಂದು. ಅದು ನನ್ನ ಮನಸ್ಸಿನಲ್ಲಿ ಕಂತಿ ಹೋಗಿತ್ತು. ಹರಿಹರೇಶ್ವರರು ಸ್ವರ್ಗಸ್ಥರಾದ ವಾರ್ತೆ ಕೇಳಿದ ನನ್ನಲ್ಲಿ ತಟ್ಟನೆ ಈ ಲೇಖನದ ಪ್ರಾರಂಭದಲ್ಲಿ ಉಲ್ಲೇಖಿಸಿದ (‘ಅಮೆರಿಕನ್ನಡದ ಹರಿಯವ್ರು…’) ಸಾಲುಗಳು ಮೂಡಿ ಬಂದುವು. ಅದಕ್ಕೆ ಬಲವಾದ ಕಾರಣವಿದೆ. ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಬೆಳವಣಿಗೆಗೆ ಹರಿಹರೇಶ್ವರರ ಕೊಡುಗೆ ಅಪಾರವಾದದ್ದು. ಎಷ್ಟೋ ಮಂದಿ ಹವ್ಯಾಸಿ ಕನ್ನಡಿಗರನ್ನು ಹುರಿದುಂಬಿಸಿ, ಅವರಲ್ಲಿ ಸಾಹಿತ್ಯಾಸಕ್ತಿ ಹುಟ್ಟಿಸಿದ ‘ಹರಿಕಾರ’ರು, ಹರಿಹರೇಶ್ವರರು. ಅದು ತಮ್ಮ ಕರ್ತವ್ಯವೆಂದೇ ತಿಳಿದಿದ್ದರು ಅವರು. ಅವರ ಈ ನಿಸ್ವಾರ್ಥ ಸೇವೆಯನ್ನು ನಾವು ಯಾವ ಕಾರಣಕ್ಕೂ ಮರೆಯುವಂತಿಲ್ಲ. ಅಂಥ ಮಹಾಕಾರ್ಯ, ಹರಿಯವರು ಇಲ್ಲಿ ಬಿಟ್ಟು ಹೋದ, ಬಿತ್ತಿ ಹೋದ ಪರಂಪರೆ, ಉಡುಗೊರೆ, ಬಳುವಳಿ! ಅದಕ್ಕಾಗಿ ಅವರಿಗೆ ಅಮೆರಿಕನ್ನಡಿಗರು ಸದಾ ಕೃತಜ್ಞರೇ!

ನನ್ನ ಮತ್ತು ಹರಿಹರೇಶ್ವರರ ಸಂಪರ್ಕ ಸುಮಾರು 30 ವರ್ಷಗಳಿಗೂ ಮಿಕ್ಕಿದ್ದುದು. ಈ ಕಾಲಾವಧಿಯಲ್ಲಿ ಅವರು ನನಗೆ ನೀಡಿದ ಹಲವು ವಿಧದ ಪ್ರೋತ್ಸಾಹಗಳನ್ನು ನಾನಿಲ್ಲಿ ಕೃತಜ್ಞತಾ ಭಾವನೆಯಿಂದ ನೆನೆದುಕೊಳ್ಳುತ್ತಿದ್ದೇನೆ. ಅವುಗಳಲ್ಲಿ ಒಂದೆರಡು ಸಂಗತಿಗಳನ್ನು ನಿಮ್ಮಲ್ಲಿ ಹಂಚಿಕೊಳ್ಳುತ್ತಿದ್ದೇನೆ. ನನ್ನಲ್ಲಿ ಲೇಖನಗಳನ್ನು ಬರೆಯಲು ಉತ್ತೇಜಿಸಿದ್ದರು. ನಾನು ಸಂಪಾದಿಸಿದ ‘ಕಾರಂತ ಚಿಂತನ…’ ಗ್ರಂಥಕ್ಕೆ ತಮ್ಮೆಲ್ಲ ಸಹಕಾರವನ್ನೂ ಕೊಟ್ಟು, ಅದರ ಸಹಸಂಪಾದಕರಾಗಿಯೂ, ಗ್ರಂಥಕ್ಕೆ ಲೇಖಕನವನ್ನು ಒದಗಿಸುವ ಇತರ ಲೇಖಕರನ್ನು ಸೂಚಿಸುವಲ್ಲಿಯೂ ನೆರವಾಗಿದ್ದರು. ಇದು ನನ್ನ ಸಾಹಿತ್ಯ ಸಂಪರ್ಕವನ್ನು ಬೆಳೆಸಿಕೊಳ್ಳಲು ತುಂಬಾ ಸಹಾಯವಾಗಿತ್ತು. ಶಿಕಾಗೋದಲ್ಲಿ ನಾನು ಅಭಿನಯಿಸಿದ ಸಂಸ್ಕೃತ ನಾಟಕ ‘ಅಭಿಜ್ಞಾನ ಶಾಕುಂತಲ’ದಲ್ಲಿ ನನ್ನ ಕಣ್ವ ಋಷಿಯ ಪಾತ್ರವನ್ನು ಮೆಚ್ಚಿ ನುಡಿದ ಉತ್ತೇಜಿತ ಮಾತುಗಳನ್ನು ನಾನೆಂದಿಗೂ ಮರೆಯುವಂತಿಲ್ಲ. ಆ ಸಂದರ್ಭದಲ್ಲಿ ಕಾಳಿದಾಸನ ಕೃತಿಯೊಂದನ್ನೂ ಉಡುಗೊರೆಯಾಗಿ ಕೊಟ್ಟಿದ್ದರು. ಒಂದು ವಿಧದಲ್ಲಿ ಅವರು ನನ್ನ ಸಾಹಿತ್ಯ ಕ್ಷೇತ್ರದ mentor ಎಂದರೂ ಸರಿಯೇ.

ಅವರು ‘ಅಮೆರಿಕನ್ನಡ’ ದ್ವೈಮಾಸಪತ್ರಿಕೆ ಪ್ರಾರಂಬಿಸುವ ಮೊದಲು, ಶಿಕಾಗೋಗೆ ಬಂದು (ಆಗ ನಾನು ಶಿಕಾಕಾಗೋ ನಿವಾಸಿಯಾಗಿದ್ದೆ) ನನ್ನ ಸಹಕಾರ ಕೋರಿದ್ದರು. ನಾನು ಅವರಿಗೆ ಆ ಬಗ್ಗೆ ನನ್ನ ಬೆಂಬಲ ಕೊಟ್ಟುದಲ್ಲದೆ, ಹಲವು ಚಂದಾದಾರರನ್ನೂ ಗಳಿಸಿಕೊಟ್ಟಿದ್ದೆ. ಆ ಪತ್ರಿಕೆಯ ‘ಬಿಡುಗಡೆ’ ದೇಶದ ವಿವಿಧ ಕಡೆಗಳಲ್ಲಿ ನಡೆದಿದ್ದು, ಮಧ್ಯವಲಯದಲ್ಲಿ ನಮ್ಮ ಮನೆಯಲ್ಲಿ ಆ ಸಮಾರಂಭವನ್ನು ಏರ್ಪಡಿಸಿದ್ದೆ. ಆ ಬಗ್ಗೆ ಈಗಲೂ ನನ್ನಲ್ಲಿ ಹೆಮ್ಮೆ ಹುಟ್ಟಿಸುತ್ತಿದೆ. ಮುಂದೆ ಮೈ.ಶ್ರೀ.ನಟರಾಜ ಅವರ ‘ನಾನೂ ಅಮೆರಿಕನಾಗಿಬಿಟ್ಟೆ’ ಕವನ ಸಂಗ್ರಹ ಪ್ರಕಟವಾದಾಗ (ಅದು ಅಮೆರಿಕನ್ನಡದ ಪ್ರಕಾಶನವಾಗಿತ್ತು) ನನಗೆ ಕೆಲವು ಪುಸ್ತಕಗಳನ್ನು ಕಳುಹಿಸಿ, ಆ ಗ್ರಂಥದ ಬಗ್ಗೆ ಪ್ರಚಾರ ಮಾಡಲು ಆದೇಶ ಕೊಟ್ಟಿದ್ದರು. ಅದನ್ನು ನಾನು ಸೈಂಟ್ ಲೂಯಿಸ್ ಕನ್ನಡ ಕೂಟದ ಸ್ಥಾಪನೆಯ ಸಮಯದಲ್ಲಿ ಅಲ್ಲಿಗೆ ಕೊಂಡು ಹೋಗಿ ಕೆಲವು ಪ್ರತಿಗಳನ್ನು ಮಾರಾಟ ಮಾಡಿದ ನೆನಪು ಇನ್ನೂ ಹಸಿರಾಗಿ ಉಳಿದಿದೆ.

ಮುಂದೆ ಅವರು ವೈ.ಆರ್. ಮೋಹನ್ ಅವರ ‘ನೆನಪುಗಳು’ ಗ್ರಂಥದ ಪ್ರಕಟಣೆಗೂ ಸಹಾಯ ಮಾಡಿದ್ದರು. ಹೀಗೆ ಅವರು ಹಲವು ಅಮೆರಿಕನ್ನಡಿಗರಿಗೆ ನೀಡಿದ ಪ್ರೋತ್ಸಾಹದ ನೆನಪನ್ನು ಮರೆಯಲು ಸಾಧ್ಯವಿಲ್ಲ. ತಾವು ನಿರ್ವಹಿಸಿದ ಕಾರ್ಯಗಳಲ್ಲಿ ಬೇರೆಯವರನ್ನೂ ಜೊತೆಗೂಡಿಸಿಕೊಂಡು, ಅಂಥವರಲ್ಲಿ ಸಾಹಿತ್ಯ ಸೇವೆಯ ಆಸಕ್ತಿಯನ್ನು ಕೆರಳಿಸುತ್ತಿದ್ದುದು ಹರಿಯವರ ಒಂದು ವಿಶೇಷ ಗುಣ.

ಹರಿಹರೇಶ್ವರರ ಬಗ್ಗೆ ಬರೆಯುತ್ತ ಹೋದಲ್ಲಿ ಪುಟಗಟ್ಟಲೆ ಬರೆಯಬಹುದು. ಎಲ್ಲ ಸೂಚಿಸುವುದೂ ಒಂದನ್ನೇ; ಅವರ ನಿಸ್ವಾರ್ಥ ಸೇವೆ. ಒಂದೇ ಮಾತಿನಲ್ಲಿ ‘ಹರಿಹರೇಶ್ವರ, ನೀವೊಬ್ಬ ಆದರ್ಶ ನಿಸ್ವಾರ್ಥ ಕನ್ನಡಿಗ’ ಎಂದಿಷ್ಟೇ ಹೇಳಬಹುದು. ಅಷ್ಟೇ ಸಾಕು ಅವರ ವ್ಯಕ್ತಿತ್ವವನ್ನು ಸಂಪೂರ್ಣ ವರ್ಣಿಸಲು. ಅಷ್ಟೇ ಹೇಳಿ ನನ್ನ ಗೌರವವನ್ನು ಈ ಮೂಲಕ ಅವರಿಗೆ ಸಲ್ಲಿಸುತ್ತಿದ್ದೇನೆ.

ಮುಗಿಸುವ ಮುನ್ನ, ಅವರೇ ತಮ್ಮ ಲೇಖನವೊಂದರಲ್ಲಿ ತಿಳಿಸಿದಂತೆ, ನಮ್ಮ ಸಂಸ್ಕೃತಿಯಲ್ಲಿ ಯಾವುದಾದರೂ ಶುಭವನ್ನು ಮೂರು ಬಾರಿ ಹೇಳುವ, ಉದಾಹರಣೆಗೆ ಓಂ ಶಾಂತಿ ಶಾಂತಿ ಶಾಂತಿಃ, ಪದ್ಧತಿಯನ್ನು ಇಲ್ಲಿ ಜ್ಞಾಪಿಸಿಕೊಳ್ಳುತ್ತಿದ್ದೇನೆ. ಅವರ ಹೆಸರೇ ದೇವರನ್ನು ಮೂರು ಬಾರಿ ನೆನೆಯುವಂತಿದೆ. ಆ ಮೂರು ನಾಮವನ್ನು ನೆನೆಸಿಕೊಂಡೇ ಅವರಿಗೆ ವಿದಾಯ ಹೇಳಬಯಸುತ್ತೇನೆ: ಹರಿ ಹರ ಈಶ್ವರಃ!

*  ಕೃಪೆ : ದಟ್ಸ್‌ಕನ್ನಡ.ಕಾಂ

 

 Posted by at 11:26 PM
Aug 022010
 

ಕಣ್ಮರೆಯಾದ ಒಬ್ಬ ಅಚ್ಚ ಕನ್ನಡಿಗ ಎಸ್.ಕೆ. ಹರಿಹರೇಶ್ವರ

ನಮ್ಮ ಮಾನ್ಯ ಗೆಳೆಯರಾದ ಶ್ರೀ ಎಸ್.ಕೆ. ಹರಿಹರೇಶ್ವರರು ಕಳೆದ ಜುಲೈ ೨೩ರಂದು ಮೈಸೂರಿನಲ್ಲಿ  ತೀರಿಹೋದ ಸುದ್ದಿ ಅವರ ‘ಅಮೆರಿಕನ್ನಡ’ ಬಂಧುಗಳೆಲ್ಲರಿಗೂ ಅಪಾರವಾದ ವ್ಯಥೆ ಉಂಟುಮಾಡಿದೆ. ಅಮೆರಿಕದಲ್ಲಿ ಕನ್ನಡ ಸಾಹಿತ್ಯದ ಬೆಳವಣಿಗೆಗಾಗಿಯೇ  ಸ್ಥಾಪಿತವಾಗಿರುವ ಕನ್ನಡ ಸಾಹಿತ್ಯ ರಂಗದ ಸದಸ್ಯರೆಲ್ಲರ ಪರವಾಗಿ ಶ್ರೀ ಹರಿಹರೇಶ್ವರರ ಪತ್ನಿ ಶ್ರೀಮತಿ ನಾಗಲಕ್ಷ್ಮಿಯವರಿಗೂ, ಅವರ ಮಕ್ಕಳಿಗೂ, ಆಪ್ತ ಬಂಧುಗಳಿಗೂ ನಮ್ಮ ಸಂತಾಪವನ್ನು ಈ ಮೂಲಕ ತಿಳಿಸಬಯಸುತ್ತೇನೆ.೧೯೭೦, ೮೦ರ ದಶಕಗಳಲ್ಲಿ ಇಲ್ಲಿ ಬಂದು ನೆಲಸಿದ ಬಹು ಮಂದಿ ಕನ್ನಡಿಗರಿಗೆ ಹರಿಹರೇಶ್ವರರ ಪರಿಚಯ ಇದ್ದೇ ಇರುತ್ತದೆ. ಹರಿಹರೇಶ್ವರರು ಈ ನೆಲದಲ್ಲಿ ಕನ್ನಡಕ್ಕಾಗಿ ಮಾಡಿದ ಕೆಲಸಗಳು ಹಲವಾರು. ಅವರು ಮೊದಲು ಈ ದೇಶಕ್ಕೆ ಬಂದು ನೆಲಸಿದಾಗ ಪೆನ್ಸಿಲ್ವೇನಿಯ ಮತ್ತು ನ್ಯೂ ಜೆರ್ಸಿ ಪ್ರದೇಶದಲ್ಲಿದ್ದರು. ಆ ಸಮಯದಲ್ಲಿ ಇಲ್ಲಿನ ತ್ರಿವೇಣಿ ಕನ್ನಡ ಸಂಘದ ಅಧ್ಯಕ್ಷರಾಗಿದ್ದು ಅನೇಕ ಉತ್ತಮ ಕಾರ್ಯಕ್ರಮಗಳನ್ನು ನಡೆಸಿದ್ದರು. ಒಂದು ಕನ್ನಡ ಸಮ್ಮೇಳನವನ್ನೂ ನಡೆಸಿದ್ದರು. ಆದರೆ ಇವೆಲ್ಲಕ್ಕಿಂತ ಬಹುಶಃ ಜನ ಅವರನ್ನು ನೆನೆಯುವುದು ಅವರು ಸ್ಥಾಪಿಸಿದ ‘ಅಮೆರಿಕನ್ನಡ’ ಪತ್ರಿಕೆಗಾಗಿ. ಅಮೆರಿಕದ ಕನ್ನಡ ಸಮಾಜದ ಬೆಳವಣಿಗೆಯಲ್ಲಿ ಇದೊಂದು ಮುಖ್ಯವಾದ ಮೈಲಿಗಲ್ಲು.

ಅಮೆರಿಕನ್ನಡ ಒಂದು ವಿಶಿಷ್ಟವಾದ ಕೊಡುಗೆ ಎಂಬುದರಲ್ಲಿ ಎರಡು ಅಭಿಪ್ರಾಯಗಳಿಲ್ಲ. ಅದು ಮೊದಲು ಹೊರಬಂದಾಗ ಅದಕ್ಕೆ ಸಿಕ್ಕ ಸ್ವಾಗತ ಅಭೂತಪೂರ್ವವಾಗಿತ್ತು. ದೇಶಾದ್ಯಂತ ನಾನಾ ಕನ್ನಡ ಸಂಘಗಳಲ್ಲಿ ಅದರ ಲೋಕಾರ್ಪಣೆಯಾಯಿತು. ಹರಿಹರೇಶ್ವರ ದಂಪತಿಗಳು ಹತ್ತಾರು ಕಡೆ ಹೋಗಿ ಆ ಸಮಾರಂಭಗಳಲ್ಲಿ ಭಾಗವಹಿಸಿದರು.

ಈ ಪತ್ರಿಕೆಗೆ ಮುಂಚೆ ಇಲ್ಲಿ ಕನ್ನಡ ಪತ್ರಿಕೆಗಳು ಇರಲೇ ಇಲ್ಲ ಎನ್ನಲಾಗದು. ಅನೇಕ ಕನ್ನಡ ಸಂಘಗಳು ಪತ್ರಿಕೆಗಳನ್ನು ಹೊರತರುತ್ತಿದ್ದರು. ಇದು ಸ್ತುತ್ಯವಾದ ಕೆಲಸವೇ ಆದರೂ ಅವು ಆಯಾ ಸಂಘಗಳ ಸದಸ್ಯವರ್ಗಕ್ಕೆ ಮಾತ್ರ ಸೀಮಿತವಾಗಿದ್ದುದರಿಂದಲೂ, ಅವು  ಹೆಚ್ಚಾಗಿ ಕೈಬರಹದ ಪತ್ರಿಕೆಗಳಾಗಿರುತ್ತಿದ್ದುದರಿಂದಲೂ ಅವುಗಳ ವ್ಯಾಪ್ತಿ ತೀರ ಸಂಕುಚಿತವಾಗಿತ್ತಿತ್ತು.  ಅದಕ್ಕಿಂತ ಮುಖ್ಯವಾಗಿ ಅವು ಮುಖ್ಯವಾಗಿ ವಾರ್ತಾವಾಹಿನಿಗಳಾಗಿರುತ್ತಿದ್ದವು. ಅವಕ್ಕೆ ಯಾವ ಸಾಹಿತ್ಯಕ ಉದ್ದೇಶಗಳೂ ಇರುತ್ತಿರಲಿಲ್ಲ. ಅದರಿಂದಾಗಿ ಅವಕ್ಕೆ ಇಲ್ಲಿನ ಕನ್ನಡ ಜನತೆಯನ್ನು ಸಂಘಟಿಸುವ ಸಾಮರ್ಥ್ಯವಿರಲಿಲ್ಲ. ಆದರೆ ಅಮೆರಿಕನ್ನಡದ ದೃಷ್ಟಿ ಮೊದಲಿಂದಲೂ ಇಡೀ ಅಮೆರಿಕವನ್ನು ಒಳಗೊಂಡಿತ್ತು. ಅದರ ದೃಷ್ಟಿ ಸಾಂಸ್ಕೃತಿಕವೂ. ಸಾಹಿತ್ಯಾತ್ಮಕವೂ ಆಗಿತ್ತು. ಅದೊಂದು ಧೀರ ನಿಲುವು. ಸಣ್ಣಸಣ್ಣ ಕಕೂನುಗಳಿಂದ ಹೊರಬಂದು ಕನ್ನಡ ಇಡೀ ದೇಶವನ್ನು ನೋಡತೊಡಗಿತ್ತು. ಇದೊಂದು ಗಮನಾರ್ಹ ಸಂಗತಿ.

ಅಮೆರಿಕನ್ನಡ ಇಲ್ಲಿನ ನಮ್ಮ ಕನ್ನಡಿಗರನೇಕರಲ್ಲಿ ಹುದುಗಿದ್ದ ಸಾಹಿತ್ಯ ಸಾಮರ್ಥ್ಯವನ್ನು ಹೊರಗೆಳೆಯಿತು. ಅವರ ಬರವಣಿಗೆಗೆ ಒಂದು ಒಳ್ಳೆಯ ವೇದಿಕೆಯನ್ನು  ಕಲ್ಪಿಸಿತು. ದೇಶದ ನಾನಾಕಡೆಗಳಿಂದ ಸಾಹಿತ್ಯಾಸಕ್ತರು ಅದರಲ್ಲಿ ಬರೆಯತೊಡಗಿದರು. ಅಂದು ಅದರಲ್ಲಿ ಬರೆಯತೊಡಗಿದ ಅನೇಕರು ಇಂದು ಇಲ್ಲಿನ ಪ್ರಮುಖ ಲೇಖಕರಾಗಿದ್ದಾರೆ. ಈ ರೀತಿ ಲೇಖಕರನ್ನು ಬೆಳಸುವ ಕಾರ್ಯ ಸಾಮಾನ್ಯವಲ್ಲ.

ಅಮೆರಿಕನ್ನಡದ ಇನ್ನೊಂದು ವೈಶಿಷ್ಟ್ಯ ಅದು ಮೊದಲಿಂದಲೂ ಕಂಪ್ಯೂಟರ್ ಬಳಕೆಯ ಬಗ್ಗೆ ಗಮನವಿತ್ತದ್ದು.  ಅಂದರೆ ಎಲ್ಲ ಕೆಲಸವೂ ಗಣಕಯಂತ್ರದ ಸಹಾಯದಿಂದಲೇ ನಡೆಯುತ್ತಿತ್ತೆಂದಲ್ಲ. ಹಲವು ಪುಟಗಳನ್ನಾದರೂ ಕಂಪ್ಯೂಟರ್ ಸಹಾಯದಿಂದ ತಯಾರಿಸುತ್ತಿದ್ದರು.  ಆಗಿನ್ನೂ ಬರಹ, ನುಡಿ ಇತ್ಯಾದಿ ಸಾಫ಼್ಟ್‌ವೇರ್ ಸಿದ್ಧವಾಗಿರಲಿಲ್ಲ. ಕೆಲವು ಪುಟಗಳನ್ನು ಕರ್ನಾಟಕದಲ್ಲಿ ಮುದ್ರಿಸಿ ತರಿಸುತ್ತಿದ್ದರು. ಹೀಗೆ ಪುಟಗಳಲ್ಲಿ ಏಕರೂಪತೆ (uniformity)  ಇಲ್ಲದಿದ್ದರೂ, ಒಟ್ಟಿನಲ್ಲಿ ಪತ್ರಿಕೆ ಆಕರ್ಷಕವಾಗಿಯೇ ಇರುತ್ತಿತ್ತು.

ಅಮೆರಿಕನ್ನಡದಲ್ಲಿ ವಿಷಯವೈವಿಧ್ಯತೆಯಿತ್ತು. ಸಂಪಾದಕೀಯ, ಸಾಹಿತ್ಯಕ, ವೈಚಾರಿಕ, ಹಾಸ್ಯ ಲೇಖನಗಳು, ಕವಿತೆಗಳು, ಪುಸ್ತಕ ವಿಮರ್ಶೆಗಳಿಂದ ಹಿಡಿದು ನಾಗಲಕ್ಷ್ಮಿಯವರು ಮಕ್ಕಳಿಗಾಗಿ ತಯಾರಿಸುತ್ತಿದ್ದ ಕನ್ನಡ ಪಾಠಗಳವರೆಗೂ ವಿಷಯದ ಹರವಿತ್ತು,  ಸಮೃದ್ಧಿಯಿತ್ತು. ಸಂಪಾದಕರ ಸಾಮರ್ಥ್ಯಕ್ಕೆ, ಅವರ ಸೃಜನಶೀಲತೆಗೆ, ಕಲ್ಪನಾಸಾಮರ್ಥ್ಯಕ್ಕೆ ಅಲ್ಲಿ ಏನೂ ಕೊರತೆಯಿರಲಿಲ್ಲ. ಅವರಿಗಿದ್ದ ಕೊರತೆ ಮುಖ್ಯವಾಗಿ ಆರ್ಥಿಕವಾದದ್ದು. ಪತ್ರಿಕೆ ಬೆಳೆಯುತ್ತಿದ್ದಂತೆ ಸಾಕಷ್ಟು ದ್ರವ್ಯಸಹಾಯ ಇಲ್ಲದೇಹೋದದ್ದು. ಆ ಬಗ್ಗೆ ಅವರು ಸಾಕಷ್ಟು ಎಚ್ಚರಿಕೆ ವಹಿಸದೇಹೋದದ್ದು ವಿಷಾದಕರ. ಮೊದಮೊದಲು ಲೇಖಕರಿಗೆ ಒಂದು ಸಣ್ಣ ಗೌರವಧನವನ್ನು ಸಹ ಕೊಡುತ್ತಿದ್ದರು. (ಇದು ತುಂಬ professional  ಆದ ಪದ್ಧತಿ. ಕರ್ನಾಟಕದಲ್ಲೇ ಎಷ್ಟೋ ಘನ ಪತ್ರಿಕೆಗಳು ಇದನ್ನು ಆಚರಿಸುವುದಿಲ್ಲ.) ಅಥವ ಅದಕ್ಕೆ ಬದಲು ಕರ್ನಾಟಕದಿಂದ ತರಿಸಿದ ಪುಸ್ತಕಗಳನ್ನು ಕಳಿಸುತ್ತಿದ್ದರು. (ಇಂಥ ಒಂದು ಸಂದರ್ಭದಲ್ಲಿ ಅವರು ನನಗೆ ಕಳಿಸಿದ ಕನ್ನಡ ರತ್ನಕೋಶ (ಹಾ.ಮಾ. ನಾಯಕರು ಸಂಪಾದಿಸಿದ ಕನ್ನಡ-ಕನ್ನಡ ನಿಘಂಟು) ಈಗಲೂ ನನ್ನ ಬಳಿ ಇದೆ. ಅದನ್ನು ತೆರೆದಾಗೆಲ್ಲ ಹರಿಹರೇಶ್ವರರನ್ನು ನೆನೆಯುತ್ತೇನೆ.) ಅಮೆರಿಕನ್ನಡದ ನಿಲುಗಡೆಗೆ ಬಹುಶಃ ಜನಸಹಾಯವೂ ಅವರಿಗೆ ಸಾಹಷ್ಟು ಸಿಕ್ಕದೇಹೋಯಿತು ಎನ್ನಿಸುತ್ತದೆ. ಅವರು ಕೈಗೆತ್ತಿಕೊಂಡಿದ್ದ ಕೆಲಸಕ್ಕೆ  ತುಂಬಾ ಶ್ರದ್ಧೆ ಬೇಕು, ಸಹನೆ, ನಿಷ್ಠೆ, ಪರಿಶ್ರಮ ಬೇಕು. ಅವು ಸುಲಭವಾಗಿ ಸಿಕ್ಕುವ ವಸ್ತುಗಳಲ್ಲ. ಸುಮಾರು ಐದಾರು ವರ್ಷ ನಡೆದ ಆ ಪತ್ರಿಕೆಯನ್ನು ಅವರು ಈ ಎಲ್ಲ ಕಾರಣಗಳಿಂದಾಗಿ ನಿಲ್ಲಿಸಬೇಕಾಯಿತು. ಪತ್ರಿಕೆ ಇಂದು ನಮ್ಮ ಕಣ್ಣೆದುರಿಗಿಲ್ಲ, ನಿಜ, ಆದರೆ ಅದರ ನೆನಪು ನಮ್ಮೆಲ್ಲರ ಮನಸ್ಸಿನಲ್ಲಿ ಉಳಿಯುವುದು ಖಂಡಿತ.

ಈ ಎಲ್ಲ ಕೆಲಸದಲ್ಲೂ ಅವರಿಗೆ ಸಹವರ್ತಿನಿಯಾಗಿ ಅಷ್ಟೇ ಶ್ರದ್ಧೆಯಿಂದ ದುಡಿದವರು ಅವರ ಪತ್ನಿ ಶ್ರೀಮತಿ ನಾಗಲಕ್ಷ್ಮಿಯವರು. ಅವರಿಬ್ಬರನ್ನೂ ಕಂಡಾಗ ಅವರ ಮದುವೆಯಲ್ಲಿ ಸಪ್ತಪದಿ ನಡೆದಾಗ ‘ಈ ಮುಂದಿನ ಹೆಜ್ಜೆಯನ್ನು ನಾವು ಕನ್ನಡಕ್ಕಾಗಿ ಇಡೋಣ’ ಎಂದು ಹೇಳಿದ್ದರೇನೋ ಅನ್ನಿಸುತ್ತದೆ! ಡಾಕ್ಟರು, ಇಂಜಿನಿಯರು, ಅಥವಾ ಬ್ಯಾಂಕಿನ (ಈಗ ಈಟಿ/ಬೀಟಿ) ಕೆಲಸ ಇರುವವಳನ್ನೇ ಮದುವೆಯಾಗಬೇಕು ಎನ್ನುವ ಧೋರಣೆಯಿರುವ ಸಮಾಜದಲ್ಲಿ ಹರಿಹರೇಶ್ವರ ಕನ್ನಡ ಎಂ.ಎ. ಮಾಡಿದವಳನ್ನೇ ಮದುವೆಯಾಗುವ ಮನಸ್ಸುಮಾಡಿದ್ದರಂತೆ! ಅವರ ಮನಸ್ಸಿಗೆ, ಮನೋಧರ್ಮಕ್ಕೆ ತಕ್ಕವರೇ ದೊರಕಿದರು. ಅದು ಅವರ ಸುಕೃತ. ಇಲ್ಲಿ ನಾನೊಂದು ಸ್ವಂತ ವಿಷಯ ಹೇಳಿಕೊಳ್ಳೋಣವೆನಿಸುತ್ತದೆ, ತಪ್ಪು ತಿಳಿಯಬಾರದು. ನಾನೊಂದು ಲೇಖನ ಬರೆದು ಅಮೆರಿಕನ್ನಡಕ್ಕೆ ಕಳಿಸಿದ್ದೆ. ಅದನ್ನು ಓದಿ ಆ ದಂಪತಿಗಳಿಗೆ ಎಷ್ಟು ಸಂತೋಷವಾಗಿತ್ತೆಂದರೆ ಆ ದಿನ ಅವರು ಪಾಯಸದ ಅಡಿಗೆ ಮಾಡಿ ಉಂಡರಂತೆ. ಇದನ್ನು ನಾಗಲಕ್ಷ್ಮಿಯವರೇ ನನಗೆ ಹೇಳಿದ್ದು. ಜೊತೆಯ ಲೇಖಕನೊಬ್ಬನಿಗೆ ಮತ್ತೊಬ್ಬ ಕೊಡಬಹುದಾದ ಒಂದು ದೊಡ್ಡ ಸಂಭ್ರಮದ ಉಡುಗೊರೆ ಅದು. ಅದನ್ನು ಎಂದಿಗೂ ವಿಶ್ವಾಸದಿಂದ ನೆನೆಯುತ್ತೇನೆ.

ಹರಿಹರೇಶ್ವರ ಇಲ್ಲಿ ಬರುವವರೆಗೂ ಇಲ್ಲಿ ಕನ್ನಡ ಕೆಲಸ ಏನೂ ನಡೆಯುತ್ತಿರಲಿಲ್ಲ ಅಂದುಕೊಳ್ಳಬಾರದು ಎಂದು ಈ ಮೊದಲೇ ಸೂಚಿಸಿದ್ದೆ. ಅವರು ಬಂದಮೇಲೂ ಸಹ ಅನೇಕರು ಆ ಕೆಲಸ ಮಾಡುತ್ತಿದ್ದರು. ಆದರೆ ಹರಿಹರೇಶ್ವರರ ವೈಶಿಷ್ಟ್ಯವೆಂದರೆ ಅವರ ಕೆಲಸದಲ್ಲಿ ಕಾಣುತ್ತಿದ್ದ ಅಪರಿಮಿತ ಉತ್ಸಾಹ, ಅದಕ್ಕಿಂತ ಹೆಚ್ಚಾಗಿ ತೀವ್ರತೆ, ‘ಇದಕ್ಕೆ ಯಾಕಿನ್ನು ತಡ’ ಎನ್ನುವ ಆತುರ; ಜನರನ್ನು ಆಹ್ವಾನಿಸಿ, ಬೇಡಿ, ಕಾಡಿ, ಹುರಿದುಂಬಿಸಿ, ತಳ್ಳಿ – ಎಲ್ಲ ರೀತಿಯಲ್ಲೂ ಅವರ ಮನಸ್ಸನ್ನು ಕನ್ನಡದ ಕಡೆಗೆ ತಿರುಗಿಸುತ್ತಿದ್ದ ರೀತಿ. ಇಗೋ,  ಕನ್ನಡ ನಮ್ಮ ಕಣ್ಣೆದುರಿಗಿದೆ, ಅದನ್ನು ನೋಡೋಣ ಬನ್ನಿ ಎನ್ನುವ ಅವರ ಧಾಟಿ. ಅವರು ವೃತ್ತಿಯಲ್ಲಿ ಇಂಜಿನಿಯರು. ದಿನದಲ್ಲಿ ಸುಮಾರು ಹತ್ತು-ಹನ್ನೊಂದು ಗಂಟೆ ಕಡ್ಡಾಯವಾಗಿ ಆ ವೃತ್ತಿಗೆ ಮೀಸಲಾಗಿಡಬೇಕಿತ್ತು. ಇನ್ನು ಉಳಿದ ಸಮಯದಲ್ಲಿ, ವಾರಾಂತ್ಯದಲ್ಲಿ (ಆಗಲೂ ಎಷ್ಟೋ ಸಲ ಆಫ಼ೀಸಿನ ಕರೆ ಬರುವುದುಂಟು) ಮಾತ್ರ ಮಾಡಲಾಗುತ್ತಿದ್ದ ಕೆಲಸ ಇದು. ಅಂಥ ಪರಿಸ್ಥಿತಿಯಲ್ಲಿ ಇಷ್ಟು ಕೆಲಸ ಅವರು ಸಾಧಿಸಿದ್ದು ಗಮನಾರ್ಹ. ಅವರ ತೀವ್ರತೆಗೆ ತಕ್ಕ ಆಸರೆ, ಪ್ರತಿಸ್ಪಂದನ ದೊರೆಯದಿದ್ದಾಗ ಅಥವಾ ನಿಧಾನವಾದಾಗ, ಅವರಿಗೆ ತಾಳ್ಮೆಗೆಡುತ್ತಿದ್ದುದೂ ಉಂಟು.

ಹರಿಹರೇಶ್ವರರು ತಮ್ಮ ವೃತ್ತಿಯನ್ನರಸಿ ಅಮೆರಿಕದ ಪೂರ್ವ, ಮಧ್ಯಮ, ಮತ್ತು ಪಶ್ಚಿಮ ಭಾಗಗಳಲ್ಲಿದ್ದವರು. ಹೋದೆಲ್ಲ ಕಡೆಯೂ ಅನೇಕ ಗೆಳೆಯರ ಸಂಪರ್ಕ, ಸ್ನೇಹ ಪ್ರೀತಿಗಳನ್ನು ಗಳಿಸಿಕೊಂಡವರು.   ಪತ್ನಿ ನಾಗಲಕ್ಷ್ಮಿಯವರ ಸೂಚನೆಯಂತೆ ಭಾರತಕ್ಕೆ – ಮೈಸೂರಿಗೆ – ತೆರಳಿದ ಹರಿಹರೇಶ್ವರ ಅಲ್ಲಿಯೂ ತಮ್ಮ ಕೆಲಸಗಳನ್ನು ಮುಂದುವರೆಸುತ್ತಲೇ ಇದ್ದರು. ಅನೇಕ ಯುವಜನರು ಅವರ ಮಾರ್ಗದರ್ಶನದಿಂದ ಲಾಭ ಪಡೆದಿದ್ದಾರೆ. ಹೊಸ ಲೇಖಕರ ಪುಸ್ತಕಗಳನ್ನು ಒಂದಲ್ಲ ಹತ್ತು ಪ್ರತಿ ಕೊಂಡು, ಅವನ್ನು ತಮಗೆ ಬೇಕಾದವರಿಗೆಲ್ಲ ಹಂಚಿ ಆ ಲೇಖಕರನ್ನು ಪ್ರೋತ್ಸಾಹಿಸಿದ್ದಾರೆ. ಇಲ್ಲಿ ನಡೆಯುವ ಅಕ್ಕ ಸಮ್ಮೇಳನ ಮುಂತಾದ ವಿಶೇಷ ಕಾರ್ಯಕ್ರಮಗಳಲ್ಲಿ  ಕೆಲವು ವೇಳೆ ಪ್ರತ್ಯಕ್ಷವಾಗಿ, ಬಹು ವೇಳೆ ಪರೋಕ್ಷವಾಗಿ ಭಾಗವಹಿಸಿದ್ದಾರೆ.

ನಮ್ಮಲ್ಲಿ ಕನ್ನಡ ಪ್ರೇಮ, ಉತ್ಸಾಹ, ಪಾಂಡಿತ್ಯ, ಕೈಂಕರ್ಯ ಇವುಗಳ ಮಾತು ಬಂದಾಗ ಸಾಮಾನ್ಯವಾಗಿ ನೆನಪಿಗೆ ಬರುವವರು ಜಿ. ಪಿ. ರಾಜರತ್ನಂ. ಹರಿಹರೇಶ್ವರರೂ ಅದೇ ಅಚ್ಚಿನವರು. ಜನ ಅವರಿಗೆ ಸಲ್ಲಿಸುತ್ತಿರುವ ಗೌರವವನ್ನು  ಸಂಪೂರ್ಣವಾಗಿ ಅವರೇ ಗಳಿಸಿಕೊಂಡದ್ದು.   ಹರಿಹರೇಶ್ವರ ಇನ್ನೂ ಬಹು ಕಾಲ ನಮ್ಮೊಂದಿಗಿರಬಹುದಿತ್ತು.  ಆದರೆ ಮತ್ತೆ ಕನ್ನಡ ತಾಯ ಮಡಿಲಲ್ಲಿ ಮುಖವಿಟ್ಟು ಚಿರಶಾಂತಿ ಪಡೆಯುವ ಸೌಭಾಗ್ಯ ಅವರದಾಗಿತ್ತು. ಅದು ಅವರು ಪಡೆದುಕೊಂಡ ಧನ್ಯತೆಯೆಂದೇ ಅನ್ನಿಸುತ್ತದೆ.

ಎಚ್. ವೈ. ರಾಜಗೋಪಾಲ್
ಅಧ್ಯಕ್ಷ, ಕನ್ನಡ ಸಾಹಿತ್ಯ ರಂಗ

 Posted by at 11:20 PM
Jul 302010
 

 ಶಿಕಾರಿಪುರ ಹರಿಹರೇಶ್ವರ

ಇಂದು ಮಧ್ಯಾಹ್ನ ಕಛೇರಿಯಲ್ಲಿ ಕೆಲಸದಲ್ಲಿ ಮಗ್ನನಾಗಿದ್ದಾಗ ಗೆಳೆಯ ಜೋಶಿ ಕರೆದು ಕೆಟ್ಟ ಸುದ್ದಿಯನ್ನು ಮುಟ್ಟಿಸಿದರು. ಅದುವೆಕನ್ನಡದ ಶಾಮಸುಂದರ್ ಸಹ ಮಿಂಚೋಲೆ ಕಳಿಸಿದರು. ನಂಬಲು ಬಾರದ ಆದರೆ ಕಟು ಸತ್ಯವಾದ ಸುದ್ದಿ ಹೀಗಿತ್ತು: ಗುರುವಾರದ ರಾತ್ರಿ ಭೋಜನವನ್ನು ಮಡದಿಯೊಂದಿಗೆ ಮಾಡಿ ಕೈತೊಳೆದು ಒಂದೇ ಘಳಿಗೆ ಅಗಾಧವಾದ ಹೃದಯಾಘಾತಕ್ಕೆ ತುತ್ತಾಗಿ ಇದ್ದಕ್ಕಿದ್ದಹಾಗಿ ತಮ್ಮ ಇಹಜೀವನದ ಹಂಗನ್ನೆಲ್ಲ ತೊರೆದು ಮಡದಿ ಮಕ್ಕಳನ್ನೂ ಅಪಾರ ಬಂಧುಮಿತ್ರರನ್ನೂ ತೊರೆದು ನಡೆದೇ ಬಿಟ್ಟರು ನಮ್ಮ ಶಿಕಾರಿಪುರ ಹರಿಹರೇಶ್ವರ. ಅವರು ಇಷ್ಟು ಬೇಗ ನಮ್ಮನ್ನು ತ್ಯಜಿಸುತ್ತಾರೆಂದು ನಮಲ್ಲಿ ಯಾರಿಗೂ ಅನಿಸಿರಲಿಲ್ಲ. ಹರಿಯ ಬಗ್ಗೆ ಅಮೆರಿಕದಲ್ಲಿ ನೆಲಸಿರುವ ಕನ್ನಡಿಗರಿಗೆಲ್ಲ ತಿಳಿದೇ ಇದೆ, ಆದರೂ ಅವರನ್ನು ನೆನೆದು ಎರಡು ಸ್ನೇಹದ ಮಾತುಗಳನ್ನಾಡಿ ಶ್ರದ್ಧಾಂಜಲಿ ಅರ್ಪಿಸುವುದು ನನ್ನ ಕರ್ತವ್ಯವೆಂದು ಭಾವಿಸಿ ಕುಳಿತಿದ್ದೇನೆ. ಎಲ್ಲಿಂದ ಪ್ರಾರಂಭಿಸಬೇಕೋ ತಿಳಿಯುತ್ತಿಲ್ಲ.
ಮೊಟ್ಟ ಮೊದಲು ನಾನವರನ್ನು ಕಂಡಿದ್ದು ಬೆಂಗಳೂರಿನಲ್ಲಿ ನಾನು ವಿದ್ಯಾರ್ಥಿಯಾಗಿದ್ದಾಗ. (ಆಗ ಅವರು ಎಮ್. ಎಸ್. ರಾಮಯ್ಯ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದರು.) ತಮ್ಮ ಕೆಲವು ಶಿವಮೊಗ್ಗದ ಮಿತ್ರರನ್ನು ಭೇಟಿಯಾಗಲು ಆಗಾಗ್ಗೆ ಅವರು ನಮ್ಮ ವಿದ್ಯಾರ್ಥಿನಿಲಯಕ್ಕೆ ಭೇಟಿಕೊಡುತ್ತಿದ್ದುದುಂಟು. ಆದರೆ, ಆಗ ಅವರ ಪರಿಚಯ ನನಗಾಗಲಿಲ್ಲ. ನಂತರ ನಾನವರನ್ನು ಕಂಡಿದ್ದು ಮೊದಲನೆಯ ಮತ್ತು ಎರಡನೆಯ ಈಶಾನ್ಯ ಅಮೆರಿಕ ಕನ್ನಡ ಸಮ್ಮೇಳನದಲ್ಲಿ (ನ್ಯೂಯಾರ್ಕ್ ಕನ್ನಡ ಕೂಟ ಮತ್ತು ತ್ರಿವೇಣಿ) ಕಾರ್ಯಕ್ರಮಗಳಲ್ಲಿ. ಆ ಗಲಾಟೆಯಲ್ಲಿ ಹೆಚ್ಚು ಮಾತಾಡುವುದಕ್ಕಾಗಲಿಲ್ಲವಾದರೂ ಈತನೊಬ್ಬ ಕನ್ನಡದ ‘ಹುಚ್ಚ’ ಎಂಬುದಂತೂ ಖಾತರಿಯಾಯಿತು.
ಅದಾದಮೇಲೆ ನಾನು ಕಾವೇರಿ ಅಧ್ಯಕ್ಷನಾದೆ, ನಾನಾ ಕಾರಣಗಳಿಂದ ಅವರ ಪರಿಚಯ ಬೆಳೆಯಿತು, ಕನ್ನಡ ಸಾಹಿತ್ಯದಲ್ಲಿ ಅತ್ಯಂತ ಆಸಕ್ತಿಯಿದ್ದ ದಂಪತಿ –ನಾಗಲಕ್ಷ್ಮಿ-ಹರಿ ಇವರೊಂದಿಗೆ ಹರಟುವುದು ಸಂತಸದ ಚಟವಾಯಿತು.  ವೇಳೆಗೆ ನಾನು ಹಲವು ಕವನಗಳನ್ನೂ ನಾಟಕಗಳನ್ನೂ ಬರೆದಿದ್ದೆ ಮತ್ತು ಅವುಗಳನ್ನು ಇವರಿಬ್ಬರೊಂದಿಗೆ ಹಂಚಿಕೊಂಡಿದ್ದೆ. ಅವರು ಅವುಗಳನ್ನೋದಿ ಟೀಕಿಸಿ ವಿಮರ್ಶಿಸಿ ಫೋನಿನಲ್ಲಿ ತಮ್ಮ ಅನಿಸಿಕೆಗಳನ್ನು ಯಾವ ಮುಚ್ಚುಮರೆಯಿಲ್ಲದೇ ಹಂಚಿಕೊಳ್ಲಲು ಘಂಟೆಗಟ್ಟಲೆ ಮಾತಾಡುತ್ತಿದ್ದ ಆ ದಿನಗಳನ್ನು ನೆನೆಸಿಕೊಳ್ಳುವುದೇ ಒಂದು ರೀತಿಯ ಬೆಚ್ಚನೆಯ ಖುಷಿಗೆ ಕಾರಣವಾಗುತ್ತದೆ.<br>ನನ್ನ ಒಂದು ನಾಟಕ -“ಮೀನಿನ ಹೆಜ್ಜೆ”ಯನ್ನು ಅವರು ಎಷ್ಟು ಹಚ್ಚಿಕೊಂಡಿದ್ದರೆಂದರೆ, ಅದು ಪ್ರದರ್ಶನಗೊಂಡಾಗಲೆಲ್ಲ ಅವರಿಬ್ಬರೂ ಬಂದು ಮೊದಲ ಸಾಲಿನಲ್ಲಿ ಕುಳಿತು ನಮ್ಮ ನಟನೆ ನಿರ್ದೇಶನಗಳಬಗ್ಗೆ `ಪೋಸ್ಟ್-ಮಾರ್ಟಮ್’ ಮಾಡುತ್ತಿದ್ದರು. ಆ ನಾಟಕವನ್ನು ಮುಂದೆ “ಅಭಿವ್ಯಕ್ತಿ” ಪ್ರಕಾಶನದಲ್ಲಿ ಮುದ್ರಿಸಿ ಪ್ರಕಟಿಸಲು ಕಾರಣರಾದವರೂ ಅವರೇ. ಅಂತೂ ನನಗೇ ತಿಳಿಯದಂತೆ, ನಾನು ಅವರ ಸಾಹಿತ್ಯದ ಗುಂಪಿನ ಒಳವೃತ್ತದ ಸದಸ್ಯನಾಗಿಬಿಟ್ಟಿದ್ದೆ.
ಹೀಗಿರುತ್ತ, ಹಿಂದೆ ಯಾರೂ ಮಾಡಿರದಿದ್ದ ಒಂದು ಕೆಲಸಕ್ಕೆ ಅವರು ಕೈಹಾಕಿದರು. ವಿಶ್ವದ ಅತಿ ಶ್ರೀಮಂತದೇಶವಾದ ಅಮೆರಿಕಕ್ಕೂ ಬಡ ಭಾರತದ ಒಂದು ಪ್ರಾಂತ್ಯವಾದ ಕನ್ನಡನಾಡಿಗೂ ಎಂದೆಂದೂ ಬಿಡಿಸಲಾಗದ ಅಕ್ಷರ-ಬೆಸುಗೆಯ ಕೊಂಡಿಯೊಂದನ್ನು ತಯಾರಿಸಲು ಕುಲುಮೆಯನ್ನು ನಿರ್ಮಿಸಿ ಅದರಲ್ಲಿ ಎರಕಹುಯ್ಯುವ ಸಾಹಸದಲ್ಲಿ ತೊಡಗಿದರು.   ನ್ಯೂಯಾರ್ಕ್ ಕನ್ನಡ ಕೂಟದ ಕೈಬರಹದ ಪತ್ರಿಕೆಯಲ್ಲಿ ನಾನು ಬರೆದ “ಅಮೆರಿಕನ್ನಡ ಗಾದೆಗಳು” ಎಂಬ ಲೇಖನವನ್ನು ಬರೆದಾಗ ಯಾವೊಂದು ದೂರಾಲೋಚನೆಯೂ ಇಲ್ಲದೇ ನಾನು ಹೊಸೆದಿದ್ದ `ಅಮೆರಿಕನ್ನಡ’ ಎಂಬ ಪದಗುಚ್ಚವನ್ನು ಮೆಚ್ಚಿ ತಮ್ಮ ಕೈಕೂಸಾಗಿ ಎತ್ತಿಕೊಂಡು ಸಲಹಿದರು.
‘ಅಮೆರಿಕನ್ನಡ’ ಎಂಬ ಹೆಸರಿನಲ್ಲಿ ಒಂದು ಪ್ರಕಾಶನ ಸಂಸ್ಥೆಯನ್ನು ಪ್ರಾರಂಭಿಸಿ ನಾನು ಆವರೆಗೆ ಬರೆದಿದ್ದ ಕವನಗಳನ್ನೆಲ್ಲಾ ಸೇರಿಸಿ ಒಂದು ಕವನ ಸಂಗ್ರಹವನ್ನು (“ನಾನೂ ಅಮೆರಿಕನ್ ಆಗಿಬಿಟ್ಟೆ”) ಪ್ರಕಟಿಸುವುದರ ಮೂಲಕ ನನ್ನಂಥ ಸಾಹಿತ್ಯೇತರ ವಿದ್ಯಾರ್ಥಿಯನ್ನು ಕನ್ನಡ ಸಾಹಿತ್ಯದೆಡೆಗೆ `ತಳ್ಳಿ’ದರು! ಅದೇ ಸಮಯದಲ್ಲಿ “ಅಮೆರಿಕನ್ನಡ” ದ್ವೈಮಾಸಿಕ ಪತ್ರಿಕೆಯ ಜನನವೂ ಆಯಿತು.  ಮುಂದೆ ನಡೆದದ್ದು ಅಮೆರಿಕನ್ನಡ ಸಾಹಿತ್ಯ ಚರಿತ್ರೆಯ ಮೊದಲ ಅಧ್ಯಾಯ. ನನ್ನಂಥ ಅನೇಕರು, ಬರೆಯುವ ಆಸೆಯಿದ್ದವರು, ಶಕ್ತಿಯಿದ್ದವರು -ಇಲ್ಲದವರು, ಎಲ್ಲರ ಕೈಯಲ್ಲೂ ಹೇಳಿ ಬರೆಸಿ ಪ್ರಕಟಿಸಿದರು. ಅಮೆರಿಕದಲ್ಲಿ ಚದುರಿಹೋಗಿರುವ ಸಹಸ್ರಾರು ಕನ್ನಡ ಕುಟುಂಬಗಳಲ್ಲಿ ಕನ್ನಡದ ಓದು ಬರಹ ನಿಜವಾಗಿ ಪ್ರಾರಂಭವಾದದ್ದು ಆವಾಗಲೇ!
ಅವರಿಬ್ಬರ ಶ್ರಮ, ತ್ಯಾಗ ಮತ್ತು ನಿಸ್ವಾರ್ಥ ದುಡಿಮೆಯ ಫಲದಿಂದ ಇಂದು ಅಮೆರಿಕದಲ್ಲಿ ಹಲವಾರು ಕನ್ನಡ ಬರಹಗಾರು ಇದ್ದಾರೆ, ಆದರೆ, ಅವರು ಪ್ರಾಂಭಿಸಿದ ಕನ್ನಡ ಪತ್ರಿಕೆಯನ್ನು ಇಲ್ಲಿನ ಕನ್ನಡಿಗರು ಉಳಿಸಿಕೊಳ್ಳಲಿಲ್ಲ. ಪ್ರಾಯಶಃ, ಮಹಾಭಾರತದ ಅಭಿಮನ್ಯು, ಘಟೋತ್ಕಚ ಮುಂತಾದ ಪಾತ್ರಗಳಂತೆ ಆ ಪತ್ರಿಕೆ ತನ್ನ ಪಾತ್ರವನ್ನು ವಹಿಸಿ ಅಲ್ಪಾಯುವಾಗಿ ಕಣ್ಮರೆಯಾಯಿತು. ಹರಿ ಇತರರಿಗೆ ಪ್ರೋತ್ಸಾಹ ಕೊಡುವ ಗಲಾಟೆಯಲ್ಲಿ ತಮ್ಮ ಸಾಹಿತ್ಯಕೃಷಿಯನ್ನು ಮರೆತಿದ್ದರು, ಆದರೆ, ನಿವೃತ್ತರಾದಮೇಲೆ ತಮ್ಮ ವಿಶ್ರಾಂತಿ(?)ಜೀವನದಲ್ಲಿ ಮೈಸೂರಿನಲ್ಲಿ ಕುಳಿತು ಹಲವಾರು, ಪುಸ್ತಕಗಳನ್ನು ಬರೆದು ಪ್ರಕಟಿಸಿದರು. ತಮಗೆ ಅತ್ಯಂತ ಸಮಾಧಾನ ಕೊಡುವ ಕನ್ನಡದ ಕೆಲಸ, ಬಡಬಗ್ಗರಿಗೆ ಸಹಾಯಕವಾಗುವ ಅನೇಕ ಸಾಮಾಜಿಕ, ಧಾರ್ಮಿಕ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಮಡದಿಯೊಂದಿಗೆ ಒಂದಿಷ್ಟು ಖುಷಿಪಡುತ್ತಿರುವಾಗಲೇ ಜವರಾಯ ಅವರನ್ನು ಕಸಿದುಕೊಂಡಿದ್ದು ನಮ್ಮೆಲ್ಲರ ದುರ್ಭಾಗ್ಯ.
“ಸ್ನೇಹದಲ್ಲಿ ನಿಮ್ಮ” ಎಂದೇ ಕೊನೆಗೊಳ್ಳುವ ಮಿಂಚೋಲೆಗಳನ್ನು ಆಗಾಗ್ಗೆ ಕಳುಹಿಸುತ್ತಿದ್ದ ಆ ಸ್ನೇಹಮಯಿ ಇನ್ನಿಲ್ಲ. ಅವರ ಪ್ರತಿಯೊಂದು ಕೆಲಸದಲ್ಲೂ ಅವರಿಗೆ ಸಹಧರ್ಮಿಣಿ ಎಂಬ ಹೆಸರಿಗೆ ಅನ್ವರ್ಥನಾಮವಾಗಿರುವ ನಾಗಲಕ್ಷ್ಮಿ ಅವರಿಗೆ ಮತ್ತು ಅವರ ಪ್ರೀತಿಯ ಮಕ್ಕಳಾದ ನಂದಿನಿ ಮತ್ತು ಸುಮನರಿಗೆ ನಾವು ಏನು ತಾನೇ ಸಮಾಧಾನ ಹೇಳಲು ಸಾದ್ಯ? ದೇವರು ಶಕ್ತಿ ಮತ್ತು ಸ್ಥೈರ್ಯಗಳನ್ನು ಕೊಟ್ಟು ಕಾಪಾಡಲಿ ಎಂದು ನನ್ನ ಪರವಾಗಿ ಮತ್ತು ಸಮಸ್ತ ಅಮೆರಿಕನ್ನಡಿಗರ ಪರವಾಗಿ ಬೇಡಿಕೊಳ್ಳುತ್ತಾ ಶ್ರದ್ಧಾಂಜಲಿ ಅರ್ಪಿಸುತ್ತೇನೆ.
ಸ್ನೇಹದಲ್ಲಿ ನಿಮ್ಮ,
ಮೈ.ಶ್ರೀ. ನಟರಾಜ. ಮೇರಿಲ್ಯಾಂಡ್, ಅಮೆರಿಕ
ಕೃಪೆ : ದಟ್ಸ್ ಕನ್ನಡ.ಕಾಂ

ಚಿತ್ರ ಕೃಪೆ : www.ourkarnataka.com

 Posted by at 9:29 PM
Jul 302010
 

ಕನ್ನಡ ನಾವೆಯನ್ನು ಮುನ್ನಡೆಸಿದ ‘ಹರಿ’ಗೋಲು

 ಶಿಕಾರಿಪುರ ಹರಿಹರೇಶ್ವರ

ಹರಿ (ಎಸ್. ಕೆ. ಶಿಕಾರಿಪುರ ಹರಿಹರೇಶ್ವರ) ನಮ್ಮನ್ನಗಲಿ ಹೊರಟುಹೋಗಿದ್ದಾರೆ. ಹರಿಪಾದ ಸೇರಿದ್ದಾರೆ. ಕನ್ನಡದ ಪ್ರಚಾರಕನಾಗಿ, ಪರಿಚಾರಕನಾಗಿ, ಕನ್ನಡಾಭಿಮಾನದ ಪ್ರೇರಕನಾಗಿ, ಪ್ರೋತ್ಸಾಹಕನಾಗಿ ಹೇಗೆ ಇರಬಹುದು ಮತ್ತು ಇರಬೇಕು ಎನ್ನುವುದನ್ನು ಬರೀ ಮಾತನಾಡಿ ಅಲ್ಲ ಮಾಡಿ ತೋರಿಸಿ ತೆರಳಿದ್ದಾರೆ. ತಾಯ್ನೆಲದಿಂದ ದೂರವಿದ್ದಾಗ ಮಾತ್ರ ಕನ್ನಡ ಕನ್ನಡ ಎಂದು ಹಾತೊರೆಯುವ ಕನ್ನಡಾಭಿಮಾನಿ ಎಂದೆನಿಸದೆ, ಕರ್ಮಭೂಮಿಯಿಂದ ಜನ್ಮಭೂಮಿಗೆ ಮರಳಿದ ಮೇಲೆ ನಾಡು-ನುಡಿಗಾಗಿ ಮತ್ತಷ್ಟು ದುಡಿದು ಈಗ ಚಿರನಿದ್ರೆಗೆ ಜಾರಿದ್ದಾರೆ. ಅವರ ಹೆಸರಿನ ‘ಎಸ್.ಕೆ’ ಎಂಬೆರಡು ಇನಿಶಿಯಲ್‌ಗಳ ಅರ್ಥ ‘ಶುದ್ಧ ಕನ್ನಡಿಗ’ ಎಂದು ಒಮ್ಮೆ ವಿಶ್ವೇಶ್ವರ ಭಟ್ ಬಣ್ಣಿಸಿದ್ದರು. ಅದರಲ್ಲೊಂಚೂರೂ ಉತ್ಪ್ರೇಕ್ಷೆಯಿಲ್ಲ. ಏಕೆಂದರೆ ಹರಿ ತಾವೇ ಕನ್ನಡವಾಗಿದ್ದರು; ಕನ್ನಡಪ್ರೀತಿಗೆ ಕನ್ನಡಿಯಾಗಿದ್ದರು. ಅವರ ಕನ್ನಡಪ್ರೇಮ ಘೋಷಣೆಗಳದಲ್ಲ. ಕಂಠಶೋಷಣೆಯದು ಮೊದಲೇ ಅಲ್ಲ. ಅದು ಸಸಿ ನೆಟ್ಟು ನೀರುಣಿಸಿ ಮರವಾಗುಕವವರೆಗೂ ಮಮತೆ ತೋರುವ ಪಾಲನೆ-ಪೋಷಣೆಯ ರೀತಿಯದು.

ಮೊನ್ನೆ ಗುರುವಾರ (ಜುಲೈ 22) ತೀವ್ರ ಹೃದಯಾಘಾತಕ್ಕೊಳಗಾಗಿ ಹರಿ ಅಸುನೀಗಿದರೆಂಬ ಸುದ್ದಿ, ಮೈಸೂರಿನಿಂದ ಹೊರಟದ್ದು ಪ್ರಪಂಚಕ್ಕೆಲ್ಲ ಕ್ಷಣಾರ್ಧದಲ್ಲಿ ಹರಡಿತು. ಅಮೆರಿಕನ್ನಡಿಗರಿಗೆ, ಅದರಲ್ಲೂ ಮುಖ್ಯವಾಗಿ ಕನ್ನಡ ಓದು ಬರಹವನ್ನು ಈಗಲೂ ನಿತ್ಯಾನುಷ್ಠಾನದಂತೆ ನಿಷ್ಠೆಯಿಂದ ಮುಂದುವರಿಸಿಕೊಂಡು ಬಂದಿರುವವರಿಗೆ ಅದು ಬರಸಿಡಿಲಿನಂಥ ಸುದ್ದಿಯೇ ಆಗಿತ್ತು. ಅಂತೆಯೇ ಹರಿಯನ್ನು ಹತ್ತಿರದಿಂದ ನೋಡಿ ಬಲ್ಲವರಿಗೆ, ಹರಿಯ ಅಸಂಖ್ಯಾತ ಅಭಿಮಾನಿಗಳಿಗೆ, ಸ್ನೇಹಿತರಿಗೆ ಮತ್ತು ಶಿಷ್ಯವರ್ಗಕ್ಕೆ ಕೂಡ. ದೂರವಾಣಿಯಲ್ಲಿ, ಇಮೇಲ್‌ಗಳಲ್ಲಿ, ಫೇಸ್‌ಬುಕ್ ಟ್ವಿಟರ್‌ಗಳಲ್ಲಿ ದುಃಖ ತೋಡಿಕೊಂಡರು ಅನೇಕರು. ಸಹೃದಯಿ ಸಜ್ಜನ ವ್ಯಕ್ತಿಯ ಗುಣಗಾನ ಮಾಡಿದರು. ತಮ್ಮ ವ್ಯಕ್ತಿತ್ವಕ್ಕೆ ಹರಿ ಕರುಣಿಸಿದ್ದ ಮೆರುಗನ್ನು ಸ್ಮರಿಸಿಕೊಂಡರು. ಹರಿಯವರ ವಿದ್ವತ್ಪೂರ್ಣ ಬರಹಗಳನ್ನು ಅಂಕಣ ರೂಪದಲ್ಲಿ ಪ್ರಕಟಿಸುತ್ತಿದ್ದ thatskannada.com ಮತ್ತು ourkarnataka.com ಮುಂತಾದ ಅಂತರ್ಜಾಲ ಕನ್ನಡಪತ್ರಿಕೆಗಳು ತಡಮಾಡದೆ ನಿಧನವಾರ್ತೆ ಬಿತ್ತರಿಸಿ ಹರಿಯವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದವು. 

ಹರಿಯವರಿಂದ ಪ್ರೋತ್ಸಾಹಕ್ಕೆ ಭಾಜನರಾದ, ಅವರ ಸ್ನೇಹ ಸಂಪಾದಿಸಿ ಸಾಂಸ್ಕೃತಿಕವಾಗಿ ಸಿರಿವಂತರಾದ ಅನೇಕರಲ್ಲಿ ನಾನೂ ಇದ್ದೇನೆ. ಹಿರಿಯ ಹಿತೈಷಿಯೋರ್ವನನ್ನು ಕಳಕೊಂಡ ದುಃಖ ನನಗೂ ಇದೆ. ಆದ್ದರಿಂದಲೇ ಈ ವಾರದ ಅಂಕಣವನ್ನು ಹರಿಸ್ಮರಣೆ ಮೂಲಕ ಹರಿಸಮರ್ಪಣೆ ಮಾಡುತ್ತಿದ್ದೇನೆ. ತೀರಾ ಭಾವುಕನಾಗದೆ, ನಾನು ಕಂಡಂತೆ ಹರಿ ಹಿರಿಮೆಯ ಕೆಲ ಪ್ರಸಂಗಗಳನ್ನು ಇಲ್ಲಿ ಸವಿನೆನಪುಗಳ ರೂಪದಲ್ಲಿ ದಾಖಲಿಸುತ್ತಿದ್ದೇನೆ.

ಇಸವಿ 2002, ದಿನಾಂಕ ಅಕ್ಟೋಬರ್ 15 ಮಂಗಳವಾರ, ವಿಜಯದಶಮಿ .ಅವತ್ತು ಬೆಳಿಗ್ಗೆ 7.42 ಕ್ಕೆ ನನ್ನ ಇಮೇಲ್ ಇನ್‌ಬಾಕ್ಸ್‌ಗೆ `ಶುಭ ಹಾರೈಕೆಗಳೊಂದಿಗೆ ಅಭಿನಂದನೆ ಎಂಬ ಒಂದು ಇಮೇಲ್ ಬಂದಿತ್ತು (ಅಲ್ಲ, ಬಂದಿದೆ. ಏಕೆಂದರೆ ಅದನ್ನು ಮತ್ತು ಅವತ್ತಿನಿಂದ ನನಗೆ ಬಂದ ಆರೀತಿಯ ಎಲ್ಲ ಇಮೇಲ್‌ಗಳನ್ನೂ ಅತ್ಯಂತ ಜೋಪಾನವಾಗಿ ಕಾಯ್ದುಕೊಂಡು ಬಂದಿದ್ದೇನೆ). ಅದು, ಹರಿಯವರು ನನಗೆ ಕಳಿಸಿದ್ದ ಇಮೇಲ್. ಅವತ್ತು ದಟ್ಸ್‌ಕನ್ನಡ ಅಂತರ್ಜಾಲ ವಾಹಿನಿಯಲ್ಲಿ ನನ್ನ ಸಾಪ್ತಾಹಿಕ ಅಂಕಣ `ವಿಚಿತ್ರಾನ್ನ’ ಮೊಟ್ಟಮೊದಲ ಕಂತು ಪ್ರಕಟವಾದದ್ದು. ದಟ್ಸ್‌ಕನ್ನಡದವರು ವಿಚಿತ್ರಾನ್ನ ಲೇಖನದ ಪುಟವನ್ನು ಅಂತರ್ಜಾಲಕ್ಕೇರಿಸಿ ಅರ್ಧಗಂಟೆಯೂ ಕಳೆದಿರಲಿಲ್ಲವೇನೋ, ಹರಿ ಕ್ಯಾಲಿಫೋರ್ನಿಯಾದಿಂದ (ಆಗ ಅಲ್ಲಿ ಸಮಯ ಬೆಳಗಿನ ಜಾವ 4:42) ಅದನ್ನೋದಿ ನನಗೆ ಅಭಿನಂದನೆ ಮತ್ತು ಶುಭಾಶಯ ತಿಳಿಸುತ್ತ ಇಮೇಲ್ ಕಳಿಸಿದ್ದಾರೆ! “ಆತ್ಮೀಯ ಶ್ರೀವತ್ಸಜೋಶಿ, ನಮಸ್ಕಾರ. ನಿಮ್ಮ ಹೊಸ ಅಂಕಣದ ಮೊದಲ ಬರಹವನ್ನು ಈಗಷ್ಟೇ ಓದಿದೆ. ಚೆನ್ನಾಗಿದೆ. ವಿಚಿತ್ರಾನ್ನದ ಮೊದಲ ತುತ್ತು ರುಚಿಯಾಗಿದೆ. ಶುಭವಾಗಲಿ. ಸ್ನೇಹದಲ್ಲಿ ನಿಮ್ಮ, ಹರಿ.”

ಅವತ್ತಿನಿಂದ ಆರಂಭವಾದ ನನ್ನ ಸಾಪ್ತಾಹಿಕ ಅಂಕಣ ಬರವಣಿಗೆ ಮೊದಲ ಐದು ವರ್ಷ ದಟ್ಸ್‌ಕನ್ನಡದಲ್ಲಿ `ವಿಚಿತ್ರಾನ್ನ ರೂಪದಲ್ಲಿ, ಆಮೇಲೆ ಈಗ ವಿಜಯಕರ್ನಾಟಕದಲ್ಲಿ `ಪರಾಗ ಸ್ಪರ್ಶ’ ರೂಪದಲ್ಲಿ ಅವ್ಯಾಹತವಾಗಿ ಮುಂದುವರಿದುಕೊಂಡು ಬಂದಿದೆ. ಹರಿಯವರ ಆ ಒಂದು ಇಮೇಲ್‌ನಿಂದಾಗಿಯೇ ಇದೆಲ್ಲ ಸಾಧ್ಯವಾಯಿತು ಎನ್ನುವುದಕ್ಕೆ ಹೊರಟಿಲ್ಲ ನಾನು. ಆದರೆ ನನ್ನಮಟ್ಟಿಗೆ `ಓದುಗರ ಓಲೆ ಎಂಬ ಪ್ರೀತಿ ಪ್ರೋತ್ಸಾಹ ರಸಧಾರೆಗೆ ಓನಾಮ ಹಾಕಿದವರು, ಶ್ರೀಗುರುಭ್ಯೋನಮಃ ಹರಿಃ ಓಂ ಎಂದೆನಿಸಿದವರು ಹರಿ! ಆಮೇಲೆ ವಿಚಿತ್ರಾನ್ನ ಅಂಕಣ ನೂರು ಕಂತುಗಳನ್ನು ಪೂರೈಸಿದಾಗಲೂ ಹರಿ ಬರೆದು ಹರಸಿದ್ದರು- “ಅನ್ನಂ ನ ನಿಂದ್ಯಾತ್; ತದ್ ವ್ರತಮ್ (ಅನ್ನವನ್ನು ಕಡೆಗಣಿಸಬೇಡ; ಹಾಗೆ ನಡೆಯುವ ಪಣ ತೊಡು) ಎಂದ ತೈತ್ತಿರೀಯ ಉಪನಿಷತ್ತಿನ ಋಷಿಗೆ ಈ ವಿಚಿತ್ರಾನ್ನದ ರುಚಿ ಗೊತ್ತಿದ್ದರೆ ಹಾಗೆ ಹೇಳಬೇಕಾದ ಪ್ರಸಂಗವೇ ಬರುತ್ತಿರಲಿಲ್ಲವೇನೋ. ಇದೇರೀತಿ ನಿರಂತರ ನಡೆಯಲಿ, ಭಿನ್ನರುಚಿಯವರಿಗೆ ಒಂದೆಡೆಯೇ ಸಿಗುವ ಈ ಸಂಭ್ರಮದ ಸಮಾರಾಧನೆಯ ಭೂರಿ ಭೋಜನ!

ಹರಿಯವರೊಂದಿಗೆ ನನ್ನ ಮೊದಲ ಭೇಟಿಯಾದದ್ದು 2002 ಸಪ್ಟೆಂಬರ್‌ನಲ್ಲಿ ಅಮೆರಿಕದ ಡೆಟ್ರಾಯಿಟ್‌ನಲ್ಲಿ ನಡೆದ ವಿಶ್ವಕನ್ನಡ ಸಮ್ಮೇಳನದ ಸಂದರ್ಭದಲ್ಲಿ. ಆಗ ಹರಿ, ನಾನು ಮತ್ತು ದಟ್ಸ್‌ಕನ್ನಡ ಸಂಪಾದಕ ಶಾಮ್ ಮೂವರೂ ಉಳಕೊಂಡಿದ್ದ ನಮ್ಮ ಹೊಟೆಲ್ ಕೊಠಡಿಯನ್ನೇ `ಪ್ರೆಸ್ ರೂಮ್ ಆಗಿ ಮಾರ್ಪಡಿಸಿಕೊಂಡಿದ್ದೆವು. ಸಮ್ಮೇಳನದ ಪ್ರತ್ಯಕ್ಷ ವರದಿಗಳನ್ನು, ಫೋಟೊಗಳನ್ನು ದಟ್ಸ್‌ಕನ್ನಡ ಬೆಂಗಳೂರು ಕಚೇರಿಗೆ ಇಮೇಲ್ ಮಾಡುವುದರಲ್ಲಿ ಶಾಮ್ ಮತ್ತು ನಾನು ವ್ಯಸ್ತರಾಗಿದ್ದರೆ ಹರಿಯವರು ನಮಗೆ “ಅದನ್ನೂ ಬರೀರಿ ಇದನ್ನೂ ಸೇರಿಸಿ… ಎಂದು ಹುರಿದುಂಬಿಸುವರು. ರಾತ್ರೆಯೆಲ್ಲ ನಿದ್ದೆಗೆಟ್ಟು ವರದಿಗಳನ್ನು ಟೈಪ್ ಮಾಡುವಾಗ ಹೊಟೆಲ್‌ರೂಮ್‌ನಲ್ಲೇ ನಮಗೆ ಕಾಫಿ ಮಾಡಿಕೊಡುವರು. ಅಂತೂ ಕನ್ನಡದ ಕೆಲಸ ಎಲ್ಲೋ ನಡೆಯುತ್ತಿದೆ ಅದು ಜಗತ್ತಿಗೆಲ್ಲ ತಿಳಿಯಬೇಕು ಎಂಬ ಅದಮ್ಯ ಉತ್ಸಾಹ ಅವರದು. ಹಾಗಂತ ಅದೇ ಸಮ್ಮೇಳನದಲ್ಲಿ ನಾಗತಿಹಳ್ಳಿ ಚಂದ್ರಶೇಖರ್ ಒಂದು ಕನ್ನಡ ಚಿತ್ರದ ಶೂಟಿಂಗ್ ಸಹ ಮಾಡುತ್ತಿದ್ದರಾದ್ದರಿಂದ ಅದರ ಕುರಿತು ಏನಾದರೂ ಗಾಸಿಪ್ ಐಟಂ ಅಥವಾ ತಮಾಷೆ ನ್ಯೂಸ್‌ಸ್ಟೋರಿ ಸೇರಿಸೋಣ ಎಂದು ಶಾಮ್ ಮತ್ತು ನಾನು ಪಿತೂರಿ ನಡೆಸಿದ್ದರೆ ಅದಕ್ಕೆ ಹರಿಯ ಸಮ್ಮತಿಯಿಲ್ಲ. “ಛೆ! ಯಾಕೆ ಸುಮ್ಮನೆ ನಾಗತಿಯವರ ಕಾಲೆಳೀತೀರಾ, ಮಾಡ್ಬೇಡಿ ಹಾಗೆ ಎಂಬ ತಾಕೀತು. ಅದನ್ನವರು ನಾಗತಿಹಳ್ಳಿ ಮೇಲಿನ ಮಮತೆಯಿಂದ ಹೇಳಿದ್ದಂತೇನಲ್ಲ. ಯಾರನ್ನೇ ಆಗಲಿ ಕಿಚಾಯಿಸುವುದು, ಕಾಲೆಳೆಯುವುದು, ಕೆಟ್ಟ ಮಾತಾಡುವುದು ಇತ್ಯಾದಿ ಹರಿಯ ಜಾಯಮಾನವೇ ಅಲ್ಲ. ಆದರೆ ಮುಂದೆ ಹರಿ ಅಮೆರಿಕದಿಂದ ಮೈಸೂರಿಗೆ ಮರಳಿದಾಗ ಅದೇ ನಾಗತಿಹಳ್ಳಿ `ಹಾಯ್ ಬೆಂಗಳೂರು ಪತ್ರಿಕೆಯ ಅಂಕಣದಲ್ಲಿ “ಹರಿ ಮೈಸೂರಿಗೆ ಬರುತ್ತಿದ್ದಾರೆ ಎಚ್ಚರಿಕೆ! ಎಂಬ ತಲೆಬರಹಕೊಟ್ಟು ಲೇಖನ ಬರೆದಿದ್ದರು. ಕಾಲೆಳೆಯುತ್ತಲೇ ಹರಿಭಕ್ತಿ ತೋರಿದ್ದರು.

ಹಾಗೆ ಪ್ರೀತಿ ಸಲಿಗೆಗಳಿಂದಲೇ ಹರಿಯವರನ್ನು ಕಿಚಾಯಿಸುತ್ತ ಅವರ ಗುಣಗಾನ ಮಾಡಿದ ಇನ್ನೊಬ್ಬ ಹರಿಭಕ್ತ ಇಲ್ಲಿ ವಾಷಿಂಗ್ಟನ್‌ನಲ್ಲಿರುವ ಕನ್ನಡಿಗ ಡಾ.ಮೈ.ಶ್ರೀ.ನಟರಾಜ್. ಮೊನ್ನೆ ಹರಿ ನಿಧನರಾದ ಸುದ್ದಿಯನ್ನು ನಾನು ಅವರಿಗೆ ದೂರವಾಣಿಯಲ್ಲಿ ತಿಳಿಸಿದಾಗ ಅವರೂ ಗದ್ಗದಿತರಾದರು. `ಸಾಹಿತ್ಯವಿದ್ಯಾರ್ಥಿಯಲ್ಲದ ತನ್ನನ್ನು ಕನ್ನಡಸಾಹಿತ್ಯ ರಚನೆಗೆ ತಳ್ಳಿದವರು ಹರಿ ಎನ್ನುವ ನಟರಾಜ್ ಹಿಂದೊಮ್ಮೆ ಅಮೆರಿಕದಲ್ಲಿ ನಡೆದಿದ್ದ ಸಮ್ಮೇಳನವೊಂದರಲ್ಲಿ `ಹರಿಯನ್ನು ಹುರಿಯೋಣ ಎಂಬ ಶೀರ್ಷಿಕೆಯ ಕವನ ಬರೆದು ವಾಚಿಸಿದ್ದರಂತೆ! ಹಾಗೆಯೇ ಹರಿ ಕ್ಯಾಲಿಫೋರ್ನಿಯಾ ಬಿಟ್ಟು ಮೈಸೂರಿಗೆ ಹಿಂತೆರಳಿದಾಗ `ಹೋಗ್ಬರ್ತೀರಾ ಹರಿ? ಎಂಬ ಕವಿತೆಯಲ್ಲಿ “ಬಂದುಹೋಗಿ ಮಾಡುತ್ತೀರಿ ತಾನೆ? ಕೊನೇಪಕ್ಷ `ಸ್ನೇಹದಲಿ ನಿಮ್ಮ… ಪತ್ರವಾದರೂ ಬರೆಯುತ್ತೀರಿ ತಾನೆ? ನಿಮ್ಮನ್ನು ಬಿಟ್ಟು ನಾವು ಇರುವುದಾದರೂ ಹೇಗೆ? ಪದೇಪದೇ ಬರೆಯುತ್ತಿರಿ. ಆಗಾಗ್ಗೆ ಬಂದುಹೋಗುತ್ತಿರಿ ಎಂದು ಪ್ರೀತಿಯ ಆದೇಶ ಕೊಟ್ಟಿದ್ದರು. ಈಗ ಇಹಲೋಕದಿಂದಲೇ ಹೊರಟುಹೋದರಲ್ಲ ಹರಿ! ಅವರಿಗೆ ಅಂಥದೇನಿತ್ತು hurry?

ಇನ್ನೊಂದು ಸ್ವಾರಸ್ಯಕರ ಪ್ರಸಂಗ ನೆನಪಾಗುತ್ತಿದೆ. ಇದೂ ಸಹ ಹರಿ ಹಿರಿಮೆಗೆ ಒಂದು ನಿದರ್ಶನ. ಕೆಲವರ್ಷಗಳ ಹಿಂದೆ ಹರಿ ಒಮ್ಮೆ ವಾಷಿಂಗ್ಟನ್‌ಗೆ ಬಂದಿದ್ದವರು ನಮ್ಮ ಮನೆಯಲ್ಲಿ ಒಂದೆರಡು ದಿನ ಉಳಕೊಂಡಿದ್ದರು. ಇಲ್ಲಿನ ಸ್ನೇಹಿತರ ಮನೆಗಳಿಗೆ, ಶಿವವಿಷ್ಣು ದೇವಸ್ಥಾನಕ್ಕೆ, ನಮ್ಮ ಕಾವೇರಿ ಕನ್ನಡ ಸಂಘದ ಕಾರ್ಯಕ್ರಮಕ್ಕೆ ಹೀಗೆ ಎಲ್ಲಕಡೆಗೂ ನನ್ನ ಕಾರ್‌ನಲ್ಲೇ ಅವರನ್ನು ಕರೆದುಕೊಂಡು ಹೋಗಿದ್ದೆ. ಆಗ ನಡೆದ ಘಟನೆಯಿದು. ಅವತ್ತು ಶನಿವಾರ. ಬೆಳಿಗ್ಗೆ ಬ್ರೇಕ್‌ಫಾಸ್ಟ್ ಮುಗಿಸಿ ನಾವಿಬ್ಬರೂ ದೇವಸ್ಥಾನಕ್ಕೆ ಹೊರಟಿದ್ದೆವು. ಸುಮಾರು ಒಂದು ಗಂಟೆ ಕಾರ್‌ಡ್ರೈವಿಂಗ್‌ನ ದೂರ. ಹೊರಟ ಸ್ವಲ್ಪಹೊತ್ತಿನಲ್ಲೇ ನನ್ನ ಸೆಲ್‌ಫೋನ್‌ಗೆ ಒಂದು ಕರೆ ಬಂತು. ಶಿಕಾಗೊದಿಂದ ನನ್ನೊಬ್ಬ ಹಳೇಸಹೋದ್ಯೋಗಿಯ ಕರೆ. ಅವರು ತೆಲುಗಿನವರು. ಅವತ್ತು ಅವರ ಮನೆಯಲ್ಲಿ ನವಗ್ರಹಪೂಜೆ ಇಟ್ಟುಕೊಂಡಿದ್ದರಂತೆ, ಆದರೆ ಕೊನೇಗಳಿಗೆಯಲ್ಲಿ ಪುರೋಹಿತರು ಕೈಕೊಟ್ಟರಂತೆ. ಕ್ಯಾಸೆಟ್ ಹಾಕಿ ಪೂಜೆ ಮಾಡಲು ನಿರ್ಧರಿಸಿದರಂತೆ. ಪೂಜೆಯಲ್ಲಿ ಒಂಬತ್ತು ಗ್ರಹಗಳಿಗೆ ಒಂಬತ್ತು ವಿಧದ ಧಾನ್ಯಗಳನ್ನು ಜೋಡಿಸಿಡುತ್ತಾರಲ್ಲ, ಯಾವ ಧಾನ್ಯಗಳು, ಯಾವ ಕ್ರಮದಲ್ಲಿ ಎಂದು ನಿಮಗೇನಾದರೂ ಗೊತ್ತೇ ಎಂದು ನನ್ನನ್ನು ಕೇಳಲು ಫೋನ್ ಮಾಡಿದ್ದರು! ಹೇಗ್ಹೇಗೋ ಧಾನ್ಯ ಇಟ್ಟು ಸುಮ್ನೆ ಗ್ರಹಾಚಾರ ತಂದುಕೊಳ್ಳುವುದೇಕೆ ಎಂದು ಅವರು ಗಾಬರಿಗೊಂಡಿರಬೇಕು. ಆದರೆ ನನಗೇನು ಗೊತ್ತು ನವಗ್ರಹ ಧಾನ್ಯಗಳ ಕ್ರಮ? ಮನೆಯಲ್ಲಿದ್ದಿದ್ದರೆ ಛಕ್ಕಂತ ಗೂಗಲ್ ಸರ್ಚ್ ಮಾಡಿಯಾದರೂ ಅವರಿಗೆ ಮಾಹಿತಿ ಕೊಡಬಹುದಿತ್ತು. ಕಾರ್‌ಡ್ರೈವಿಂಗ್ ವೇಳೆ ಎಲ್ಲಿಯ ಗೂಗಲ್, ಎಲ್ಲಿಯ ನವಗ್ರಹಗಳು? ಆದರೆ ಅದೃಷ್ಟ ಎನ್ನುವುದು ಇದನ್ನೇ. ಅದು ನನ್ನ ಅದೃಷ್ಟವೂ ಹೌದು, ಪರೋಕ್ಷವಾಗಿ ನನ್ನ ಆ ಸ್ನೇಹಿತನ ಅದೃಷ್ಟವೂ ಹೌದು. ಕಾರಲ್ಲಿ ನನ್ನ ಪಕ್ಕದಲ್ಲಿದ್ದವರಾರು? ಪ್ರಕಾಂಡಪಂಡಿತ, ನೂರಾರು ಗ್ರಂಥಗಳನ್ನು ಶಾಸ್ತ್ರಗಳನ್ನು ಶಾಸನಗಳನ್ನು ಅರೆದು ಕುಡಿದಿರುವ ಶಿಕಾರಿಪುರ ಹರಿಹರೇಶ್ವರ! ಅವರು ಗೂಗಲಾವಲಂಬಿಯಲ್ಲ. ಧರ್ಮ-ತರ್ಕ-ಶಾಸ್ತ್ರ-ಸಾಹಿತ್ಯ ಎಲ್ಲ ಕರತಲಾಮಲಕವಾಗಿರುವವರು. ಅಮೆರಿಕದಲ್ಲಿರುತ್ತ ನೂರಾರು ಮದುವೆಗಳನ್ನು, ಸತ್ಯನಾರಾಯಣ ಕಥೆಗಳನ್ನು (ಅದೂ ಕನ್ನಡದಲ್ಲಿ) ಮಾಡಿಸಿದ ಸಿವಿಲ್ ಇಂಜನಿಯರ್ ಪುರೋಹಿತ. ಅಂಥ ವ್ಯಕ್ತಿ ನನ್ನ ಪಕ್ಕದಲ್ಲಿರುವಾಗಲೇ ಈ ಧರ್ಮಸಂದೇಹ ಬಂದದ್ದು ಕಾಕತಾಳೀಯ! ಸೆಲ್‌ಫೋನ್ ಹರಿಯವರಿಗೆ ಕೊಟ್ಟೆ, ವಿಷಯ ವಿವರಿಸಿದೆ. ತಗೊಳ್ಳಿ, ಹರಿಯವರು ಫೋನಲ್ಲೇ ಪ್ರತಿಯೊಂದನ್ನೂ ಒಪ್ಪಓರಣವಾಗಿ ವಿವರಿಸಿ ಆ ಶಿಕಾಗೊ ದಂಪತಿಯಿಂದ ನವಗ್ರಹಪೂಜೆ ಮಾಡಿಸಿಯೇಬಿಟ್ಟರು! “ವಿದ್ವಾನ್‌ಸರ್ವತ್ರ ಪೂಜ್ಯತೇ” ಎನ್ನುವುದು ಅದಕ್ಕೇ.

ಹರಿ ಇಷ್ಟೊಂದು ಜನಾನುರಾಗಿ, ಜನಹಿತಕಾರಿ ಆಗಿ ಬೆಳೆದುದರ ಹಿಂದಿನ ಶಕ್ತಿ ಅವರ ಪತ್ನಿ ನಾಗಲಕ್ಷ್ಮಿಯವರು. ಇಬ್ಬರು ಮಕ್ಕಳ ಪಾಲನೆಪೋಷಣೆಯ ಸಂಪೂರ್ಣ ಜವಾಬ್ದಾರಿ ಹೊತ್ತು, ಹರಿಯವರನ್ನು ಕನ್ನಡದ ಪಾಲನೆಪೋಷಣೆಗೆ ಬಿಟ್ಟುಕೊಟ್ಟ ಕರುಣಾಮಯಿ. ಕೊನೆಗೆ ಹರಿಯವರನ್ನೂ `ಮಗು’ವಿನಂತೆ ಅಕ್ಕರೆಯಿಂದ ನೋಡಿಕೊಂಡ ಮಹಾಮಾತೆ. ಈಗ ಶೋಕತಪ್ತೆ. ಅವರೊಬ್ಬರೇ ಅಲ್ಲ, ನಾವೆಲ್ಲರೂ.

ಹರಿಯ ಆತ್ಮ ಶ್ರೀಹರಿಯ ಚರಣಾರವಿಂದಗಳಲ್ಲಿ ಚಿರಶಾಂತಿ ಪಡೆಯಲಿ. ಕನ್ನಡದ ಪಾಲನೆಪೋಷಣೆ ಹರಿ ಹಾಕಿಕೊಟ್ಟ ಮೇಲ್ಪಂಕ್ತಿಯಲ್ಲೇ ನಡೆಯಲಿ.

– ಶ್ರೀವತ್ಸಜೋಶಿ

ಕೃಪೆ : ವಿಜಯ ಕರ್ನಾಟಕ, ದಟ್ಸ್ ಕನ್ನಡ.ಕಾಂ

 Posted by at 8:54 PM