admin

Jul 262009
 

ದತ್ತಾತ್ರಿ ಎಂ.ಆರ್. ವೈರಸ್ ಉಡುಗೊರೆ

 

 

ಲಾಸ್ ಏಂಜಲಿಸ್ ನಗರದಿಂದ ದಕ್ಷಿಣಕ್ಕೆ ಸ್ಯಾನ್ ಡಿಯಾಗೋ ಎನ್ನುವ ಊರಿನ ಹಾದಿಯಲ್ಲೇ ನಾನಿರುವ ಊರಿರುವುದು. ಇದು ಮೆಕ್ಸಿಕೋ ದೇಶಕ್ಕೆ ಗಡಿ ಪ್ರದೇಶ. ಫ್ರೀವೇ ೫ರಲ್ಲಿ ಹೊರಟು ದಕ್ಷಿಣದ ಕಡೆ ಸಾಗುತ್ತಾ ಸಾನ್ ಈಸಿಡ್ರೊ ಎನ್ನುವ ಊರಿನ ಬಳಿ ಕೊನೆಯ ಎಕ್ಸಿಟ್ ತೆಗೆದುಕೊಳ್ಳುವುದ ಮರೆತಿರೋ ಗಡಿರೇಖೆಯಲ್ಲಿ ಇಮ್ಮಿಗ್ರೇಷನ್ ಆಫೀಸರನ ಮುಂದೆಯೇ ಇರುತ್ತೀರಿ. ಆ ಇಮ್ಮಿಗ್ರೇಷನ್ ಆಫೀಸರನ ಆಚೆಯ ಬದಿಯಲ್ಲೇ ಸ್ಪಾನಿಷ್ ಭಾಷೆ ಧಾರೆಯಾಗಿ ಉಕ್ಕಿ ಹರಿಯುವ ಮತ್ತು ಥೇಟ್ ನಮ್ಮ ಗಾಂಧೀಬಜಾರ್ ಮಾರ್ಕೆಟ್‍ನಂತೆಯೇ ಕಾಣುವ ಟಿಹುಆನ ಎನ್ನುವ ಮೆಕ್ಸಿಕನ್ ಊರು. ನಿಮಗೇನಾದರೂ ವೀಸಾ ಸಮಸ್ಯೆಯಿದ್ದರೆ ಈ ಕೊನೆಯ ಅಮೆರಿಕನ್ ಎಕ್ಸಿಟ್‍ನ್ನು ನೀವು ಮರೆಯದಿರುವುದು ಒಳ್ಳೆಯದು. ಏಕೆಂದರೆ ಮೆಕ್ಸಿಕೋ ಹೊಕ್ಕ ನಂತರ ಅಮೆರಿಕಾಕ್ಕೆ ಮರುಪ್ರವೇಶ ನಿಮಗೆ ನಿಷಿದ್ಧವಾಗಿ ಅಲ್ಲೇ ಉಳಿದುಕೊಂಡು ಮೈದಾ ಚಪಾತಿಗೆ ಈರುಳ್ಳಿ ಅವಕೆಡೋ ಕಂದುಬಣ್ಣದ ಬೀನ್ಸ್ ಮತ್ತು ಕೆಂಪನ್ನವನ್ನು ಸುತ್ತಿದ ಬರಿಟೋ ತಿನ್ನುತ್ತಾ ಫುಟ್‌ಪಾತ್‌ನಲ್ಲಿ ಜಾಗ ಹಿಡಿದು ಒಬಾಮನ ಮುಖಚಿತ್ರ ಹೊತ್ತ ಟೀಶರ್ಟುಗಳು ಮತ್ತು ಅಮೆರಿಕನ್ ಟೂರಿಸ್ಟರು ಜಾಸ್ತಿ ಕೊಳ್ಳುವ ಮಾಯನ್ನರ ಬಣ್ಣ ಬಣ್ಣದ ಮುಖವಾಡಗಳನ್ನು ಮಾರುತ್ತಾ ಜೀವನ ಸಾಗಿಸಬೇಕಾದೀತು! ಅಥವಾ, ಗಡಿಯುದ್ದಕ್ಕೂ ಪೋಲೀಸರಿಗಿಂತಲೂ ಹೆಚ್ಚು ಸಕ್ರಿಯವಾಗಿರುವ ಮತ್ತು ಪೋಲೀಸರಿಗಿಂತಲೂ ಹೆಚ್ಚು ಸಂಬಳ ಕೊಡುವ ಡ್ರಗ್ ಮಾಫಿಯಾದ ಜೊತೆಗೂ ಕೆಲಸ ಮಾಡಬಹುದು!

ಮೆಕ್ಸಿಕನ್ನರಿಗೆ ಮಾತ್ರ ಈ ದೇಶಕ್ಕೆ ಬರುವುದು ಎಂದರೆ ಬಾಲನ್ನು ಅರೆಸುತ್ತಾ ಪಕ್ಕದ ಮನೆಯ ಕಾಂಪೌಂಡನ್ನು ಹಾರುತ್ತಿದ್ದೆವೆಲ್ಲ ನಾವು ಚಿಕ್ಕವಯಸ್ಸಿನಲ್ಲಿ, ಅಷ್ಟೇ ಸುಲಭ. ಹಣದ ಅಗತ್ಯಬಿದ್ದಾಗ ಅಥವ ಕೆಲಸ ಮಾಡದೆ ಮೈ ಜಡ್ಡು ಹಿಡಿಯಿತು ಎನ್ನಿಸಿದಾಗಲೆಲ್ಲಾ ಹಕ್ಕಿಗಳಂತೆ ಯಾವ ಬಂಧವೂ ಇಲ್ಲದೆ ಗಡಿರೇಖೆ ಹಾರಿಬಂದು ಬ್ಯಾಂಕ್ ಆಫ್ ಅಮೆರಿಕಾದ ನಲ್ವತ್ತೇಳನೇ ಅಂತಸ್ತನ್ನು ಗುಡಿಸಿ ಮೆಟ್‍ಲೈಫ್ ಕಾನ್‍ಫರೆನ್ಸ್ ರೂಮುಗಳನ್ನು ಒರೆಸಿ, ನೂರೈವತ್ತು ಡಾಲರಿಗೆ ಮೂವತ್ತೈದು ವರ್ಷ ಹಳೆಯ ಪಿಕಪ್ ಟ್ರಕ್‍ ಒಂದನ್ನು ಕೊಂಡು ಇನ್ಸುರೆನ್ಸ್‍ನ ಗೋಜೇ ಇಲ್ಲದೆ ಲಾಸ್ ಏಂಜಲಿಸ್‍ನ ತುಂಬೆಲ್ಲಾ ಗುಡುಗುಡು ಶಬ್ದ ಮಾಡುತ್ತಾ ಓಡಾಡಿ, ಮೆಕ್‍ಆರ್ಥರ್ ಪಾರ್ಕಿನಲ್ಲಿ ಚೀಪಾದ ಬಿಯರ್ ಕುಡಿದು ಸ್ಟಾಪಲ್ಸ್ ಸೆಂಟರಿನ ಮುಂದೆ ಕ್ಯಾಮೆಲ್ ಬ್ರಾಂಡಿನ ಸಿಗರೇಟು ಎಳೆದು ಹಾಗೆಯೇ ಡೌನ್‍ಟೌನಿನ ರಸ್ತೆಗಳಲ್ಲಿ ಓಡಾಡಿಕೊಂಡಿರುವಾಗಲೇ ಅಮ್ಮನ ಆರೋಗ್ಯ ಚಿಂತಾಜನಕ ಎಂದು ಸುದ್ದಿ ಬಂದೊಡನೆಯೇ ಬಂದ ರೀತಿಯಲ್ಲೇ ಹಕ್ಕಿಯಂತೆ ಗಡಿಯ ಗೋಡೆಯನ್ನು ಹಾರಿ ಮೆಕ್ಸಿಕೋದೊಳಗೆ ಕಣ್ಮರೆಯಾಗುತ್ತಾನೆ. ಆಲೆಮನೆಯ ಗಾಣದೆತ್ತಿನಂತೆ ಬರೀ ಆಫೀಸು ಮನೆಯ ವೃತ್ತದಲ್ಲಿ ಸುತ್ತುವ ನನ್ನಂತವರಿಗೆ ಅವನು ಬಂದದ್ದೂ ತಿಳಿಯುವುದಿಲ್ಲ ಹಾಗೆಯೇ ಹೋದದ್ದೂ ಕೂಡ.

ಇಂತಹ ಮೆಕ್ಸಿಕನ್ನರಿಂದ ಪ್ರಪಂಚಕ್ಕೊಂದು ಫ್ಲೂ ಬಂದಿದೆ. ಅದು ಕೊಂದದ್ದು ಬರೀ ಹತ್ತಿಪ್ಪತ್ತು ಜನರನ್ನಾದರೂ, ಒಂದು ರೀತಿಯ ವಿನಾಶದ ಭಯ, “ನಾವು ಉಸಿರಾಡುತ್ತಿರುವ ಗಾಳಿಯಲ್ಲೇ ದೆವ್ವ ಒಂದು ಓಡಾಡುತ್ತಿದೆ” ಎನ್ನುವಂತಹ ವಿನಾಶದ ಅಂಜಿಕೆಯನ್ನು ನಮ್ಮಲ್ಲಿ, ವಿಶೇಷವಾಗಿ ಮೆಕ್ಸಿಕೋದ ನೆರೆರಾಜ್ಯ ಅಮೆರಿಕಾದಲ್ಲಿ, ಅದರಲ್ಲೂ ವಿಶೇಷವಾಗಿ ಮೆಕ್ಸಿಕೋಕ್ಕೆ ಹೊಂದಿಕೊಂಡ ಗಡಿಪ್ರದೇಶದ ಊರುಗಳಲ್ಲಿ ಆಳವಾಗಿ ಊರಿಸಿಬಿಟ್ಟಿದೆ. “ನಾವು ಮೊದಲಿಂದಲೂ ಹೇಳುತ್ತಿರಲಿಲ್ಲವೇ ನಮ್ಮನ್ನು ವಿನಾಶ ಮಾಡುವಂತಹ ಸಾಂಕ್ರಾಮಿಕವೊಂದು ಹರಡುತ್ತದೆಯೊಂದು, ಇದೇ ಇದೇ ಅದು ನೋಡಿ” ಎಂದು ಯೂನಿವರ್ಸಿಟಿಯ ವಿಜ್ಞಾನಿಗಳು ಮತ್ತು ಹೆಲ್ತ್ ಡಿಪಾರ್ಟಮೆಂಟುಗಳು ತಮ್ಮ ವಾದದ ಗಟ್ಟಿತನವನ್ನು ತೋರಿಸುವ ಬರದಲ್ಲಿ ಹೆದರಿದವರನ್ನು ಮತ್ತೂ ಹೆದರಿಸುತ್ತಿವೆ.

ಈ ನಡುವೆ, ಎಲ್ಲವನ್ನೂ ಅತೀ ಮಾಡುವ ಅಮೆರಿಕನ್ ಮಾದ್ಯಮಗಳು ಜನರು ಮರೆಯದಂತೆ “ಸಾಂಕ್ರಾಮಿಕ ಭಯವನ್ನು” ಜಾಗೃತಿಯಲ್ಲಿಟ್ಟು ರೋಗದ ಟ್ವೆಂಟಿಫೋರ್ ಬೈ ಸೆವೆನ್ ಕವರೇಜ್ ನೀಡುತ್ತಿವೆ. ಮೆಕ್ಸಿಕೋ ನಗರದ ಸರಕಾರಿ ಆಸ್ಪತ್ರೆಗೆ ದಾಖಲಾದ ಆರುವರ್ಷದ ಹುಡುಗನ ಹರಿದ ಚಡ್ಡಿಯಿಂದ ಹಿಡಿದು ಗೋಡೆಯ ಮೇಲೆ ಧ್ಯಾನಸ್ಥವಾದ ಕಂದು ಬಣ್ಣದ ಠೊಣಪ ಹಲ್ಲಿಯ ತನಕ ಎಲ್ಲವನ್ನೂ ನೇರ ಪ್ರಸಾರ ಮಾಡಲಾಗುತ್ತಿದೆ. ಇದ್ದಕ್ಕಿದ್ದಂತಲೇ ಪ್ರಪಂಚದ ದೃಷ್ಟಿ ಮೆಕ್ಸಿಕೋನತ್ತ ಹರಿದಿದೆ.

ಇತಿಹಾಸಬಲ್ಲವರಿಗೆ ವೈರಸ್ ಜೊತೆಗಿನ ಮೆಕ್ಸಿಕೋದ ನಂಟು ಇವತ್ತಿನದಲ್ಲ ಎನ್ನುವುದು ಸ್ಪಷ್ಟವಾಗಿ ತಿಳಿದಿದೆ. ಐದುನೂರು ವರ್ಷಗಳ ಹಿಂದೆ ಭಾರತವನ್ನು ಹುಡುಕುತ್ತೇನೆ ಎಂದು ಅಮೆರಿಕಾಕ್ಕೆ ಬಂದಿಳಿದ ಕೊಲಂಬಸ್ ಅಲ್ಲಿದ್ದ ಮೂಲನಿವಾಸಿಗಳಿಗೆ ಮೊದಲು ಕೊಟ್ಟ ಉಡುಗೊರೆ ಎಂದರೆ ಸಿಡುಬಿನ ವೈರಸ್. ಹಡಗುಗಳಲ್ಲಿ ಬಂದಿಳಿದ ಉಕ್ಕಿನ ಕವಚದ ಸ್ಪಾನಿಯಾರ್ಡರು ಮತ್ತು ಬರೀ ಲಂಗೋಟಿಯಲ್ಲಿ ನಿಂತಿದ್ದ ಮೆಕ್ಸಿಕೋದ ಮೂಲ ನಿವಾಸಿಗಳು ಒಬ್ಬರನ್ನೊಬ್ಬರು ನೋಡಿದೊಡನೆಯೇ ಹಸ್ತಲಾಘವ ಕೊಡಲಿಲ್ಲ, ಒಬ್ಬರನ್ನೊಬ್ಬರು ತಬ್ಬಿಕೊಳ್ಳಲಿಲ್ಲ. ಯುರೋಪಿಗಿಂತಲೂ ಹಳೆಯದಾದ ನಾಗರೀಕತೆಯನ್ನು ಹೊಂದಿದ್ದರೂ ಪೂರ್ತೀ ಮೈ ಮುಚ್ಚುವಂತೆ ಬಟ್ಟೆ ಹಾಕಿಕೊಳ್ಳದ ಮತ್ತು ಲೋಹವನ್ನೇ ಕಾಣದೆ ಬರೀ ಬೆತ್ತದ ಕೋಲು ಹಿಡಿದು ಯುದ್ಧಕ್ಕೆ ಬರುವ ಈ ಮೂಲನಿವಾಸಿಗಳನ್ನು ಕೊಲಂಬಸ್ “ಅರೆ ಮಾನವರು” ಎಂದು ಕರೆದ. ಈ ಅರೆ ಮಾನವರನ್ನು ಪೂರ್ತೀ ಮಾನವರನ್ನಾಗಿಸಲು ಕೊಲಂಬಸ್‍ನ ದೇಹದ ವೈರಸ್‍ಗಳು ಆ ತನಕ ಈ ತರಹದ ವೈರಸ್‍ನ್ನೇ ಕಾಣದ ಮೂಲ ನಿವಾಸಿಗಳ ದೇಹವನ್ನು ಹೊಕ್ಕವು. ಅಂದು ಯುದ್ಧದಿಂದ ಸತ್ತದ್ದು ಹತ್ತು ಸಾವಿರವಾದರೆ ಯುರೋಪಿಯನ್ನರು ಕೊಟ್ಟ ರೋಗದಿಂದ ಸತ್ತದ್ದು ಹತ್ತು ಲಕ್ಷ. ಉಕ್ಕಿನ ಎದೆ ಕವಚ, ಉಕ್ಕಿನ ಶಿರಸ್ತ್ರಾಣವನ್ನು ತೊಟ್ಟು ಆಳೆತ್ತರದ ಉಕ್ಕಿನ ಕತ್ತಿಯನ್ನು ಹಿಡಿದು ಕುದುರೆಯೇರಿ ಬಂದ ಸ್ಪಾನಿಯಾರ್ಡರನ್ನು ಮೂಲನಿವಾಸಿಗಳು ಇವರು ದೇವರಿರಬಹುದು ಎಂದು ತಿಳಿದರಂತೆ. ದೇವರೋ ಅಲ್ಲವೋ ಎಂದು ಪರೀಕ್ಷಿಸಲು ತಮ್ಮ ಪಂಡಿತರನ್ನು ಕಳುಹಿಸಿದಾಗ ಆ ಪಂಡಿತರು ಒಂದು ತಟ್ಟೆಯಲ್ಲಿ ಮನುಷ್ಯರ ಆಹಾರವಾದ ಜೋಳದ ಟಾರ್ಟಿಯಾಗಳು, ಈರುಳ್ಳಿ, ಮೆಣಸು, ಸೀಬೇಹಣ್ಣು, ಕೋಳಿಯ ಮಾಂಸವನ್ನು ಮತ್ತು ಇನ್ನೊಂದು ತಟ್ಟೆಯಲ್ಲಿ ದೇವರಿಗೆ ಪ್ರಿಯವಾದ ಬಲಿಕೊಟ್ಟ ಪ್ರಾಣಿಯ ಹಸಿಮಾಂಸ ಮತ್ತು ಹಸಿ ರಕ್ತವನ್ನು ಹಾಕಿ ಸ್ಪಾನಿಯಾರ್ಡರ ಮುಂದೆ ಇಟ್ಟರು. ಅವರ ಪ್ರಕಾರ ಈ ಉಕ್ಕಿನ ಜೀವಿಗಳು ಮಾನವನ ಆಹಾರವನ್ನು ಸ್ವೀಕರಿಸಿದರೆ ಆಗ ಇವರ ಮಾನವರೆಂದೂ ಇವರ ಮೇಲೆ ಯುದ್ಧ ಮಾಡಬಹುದೆಂದೂ, ಅವರೇನಾದರೂ ಭಗವಂತನ ಆಹಾರವನ್ನು ಸ್ವೀಕರಿಸಿದರೆ ಆಗ ಅವರು ದೇವರೆಂದು ಮತ್ತು ಅವರಿಗೆ ಶರಣಾಗುವುದೆಂದು ಪಂಡಿತರ ಯೋಜನೆ. ಹಡಗಿನಲ್ಲಿನ ದೂರದ ಪಯಣದಿಂದ ಹಸಿದುಬಂದಿದ್ದ ಸ್ಪಾನಿಯಾರ್ಡರು ಎರಡೂ ತಟ್ಟೆಯ ಆಹಾರವನ್ನು ತಿಂದರು. ಹಾಗೆಯೇ ಮಾನವರಾಗಿ ಯುದ್ಧಮಾಡಿ ಕೊನೆಗೆ ತಮ್ಮ ಕತ್ತಿಯ ಬಲದಿಂದ ದೇವರಾಗಿ ಈ ಮೂಲನಿವಾಸಿಗಳನ್ನು ಶರಣಾಗತರನ್ನಾಗಿಸಿಕೊಂಡರು. ಆ ದೇವರುಗಳೇ ವೈರಸ್ಸನ್ನು ವರವಾಗಿ ನೀಡಿ ಅರೆ ಮಾನವರನ್ನು ಪೂರ್ಣವಾಗಿಸುವಾಗ ಇಲ್ಲವೆನ್ನಲಾಗುತ್ತದೆಯೇ?

ಐನೂರು ವರ್ಷಗಳ ಹಿಂದೆ ತಾವು ಪಡೆದ ಬಳುವಳಿಯನ್ನು ಇವತ್ತು ಪ್ರಪಂಚಕ್ಕೆ ವಾಪಸ್ಸು ನೀಡಿ ಮೆಕ್ಸಿಕನ್ನರು ಋಣಮುಕ್ತರಾಗುತ್ತಿದ್ದಾರೆ. ಐನೂರು ವರ್ಷಗಳಿಂದ ತಾವು ಜತನವಾಗಿ ಕಾಪಾಡಿದ ಬಳುವಳಿಯನ್ನು ಚೆಂದವಾಗಿ ಗಿಫ್ಟ್ ಪ್ಯಾಕ್ ಮಾಡಿ ಅಂದಕ್ಕಾಗಿ ಹಂದಿಯ ಮುಖವಿಟ್ಟು ತಾವು ಪಡೆದ ರೀತಿಯಲ್ಲೇ ಹಡಗು ವಿಮಾನ ಬಸ್ಸು ಕುದುರೆಗಳಲ್ಲಿ ವೈರಸ್ಸನ್ನು ವಾಪಸ್ಸು ಕಳಿಸುತ್ತಾ ಮೆಕ್ಸಿಕನ್ನರು ವಿನೀತರಾಗಿ ಪ್ರಪಂಚಕ್ಕೆ ಬದಲು ಉಡುಗೊರೆ ನೀಡುತ್ತಿದ್ದಾರೆ. ಇದೋ, ಸ್ವೀಕರಿಸಿ!

 Posted by at 9:54 PM
Jul 262009
 

ಮೈ. ಶ್ರೀ. ನಟರಾಜಶಕುನಿಯ ದಾಳ

ಒಂಬತ್ತು-ಹನ್ನೊಂದರಂದು
ಅನಿರೀಕ್ಷಿತ ಆಘಾತಕ್ಕೆ ನಡುಗಿ
ಬೆಂಕಿಯುಂಡೆಯ ಶಾಖವುಂಡು
ಕರುಗುತ್ತಾ ತನ್ನೊಳಕ್ಕೇ ಕುಸಿದು ಉಡುಗಿ
ನಿಜಮಾಡಿಬಿಟ್ಟೆ ನಾಣ್ನುಡಿಯ ಮಾತು
“ಅತ್ಯುನ್ನತಿಯೆ ಪತನಕ್ಕೆ ಹೇತು” (೧)

ಬೆಳೆದಷ್ಟು ಬೆಳೆದಷ್ಟು ಎತ್ತರ
ಸಹಸ್ರಾಕ್ಷನಾಗಿ ಹುಡುಕುತ್ತಿರಬೇಕು
ಸುತ್ತಲೂ ವೈರಿಗಳ ಪೂರ್ವೋತ್ತರ
ವಿಶ್ವಸಿರಿಕೇಂದ್ರ ಆಗಿದ್ದೇನೋ ದಿಟ
ಅವಳಿ-ಜವಳಿಗಳಾಗಿ ಹುಟ್ಟಿ ಬೆಳೆದು
ನೀವಾಡಿದ್ದೆ ಆಟ ಹೂಡಿದ್ದೆ ಹೂಟ (೨)

ಒಮ್ಮೆ ಕರಗಿದಮೇಲೆ ಆ ಸೊಕ್ಕು
ಮಿಕ್ಕದ್ದು ಬರಿ ಒಂದಷ್ಟು ಉಕ್ಕು
ಉರಿದುಳಿದ ನಿನ್ನ ಅಸ್ಥಿಪಂಜರಕ್ಕು
ಏಳುವರ್ಷಗಳಲ್ಲೆ ಪುನರ್ಜನ್ಮ ಸಿಕ್ಕು
ಹುಟ್ಟಿದೆ ನೋಡು ಮತ್ತೊಂದು ಯುದ್ಧನೌಕೆ
ಹೊಡೆತಕ್ಕೆ ಕಾಯುತ್ತ ಕೂರದಿರು ಜೋಕೆ (೩)

ಎಲೆ ಯುದ್ಧನೌಕೆ, ಯುಎಸೆಸ್ ನ್ಯೂಯಾರ್ಕೆ
ವೈರಿಗಳ ಹುಡುಕಲು ತಡವಿನ್ನೇಕೆ
ಉಗ್ರರ ಹಿಡಿಯಲು ಬೇಡ ಹಿಂಜರಿಕೆ
ಕುರುನಾಡಬಿಟ್ಟು ನೀ ನಡೆ ಗಾಂಧಾರಕೆ
ಸತ್ತು ಮತ್ತೆ ಚಿಗುರಿದ ಮೂಳೆಯ ದಾಳ
ಮುಗಿಸಲಿಲ್ಲವೇ ಕೌರವೇಂದ್ರನ ಬಾಳ? (೪)

ಸಿರಿಕೇಂದ್ರದುರಿಯಿಂದ ಹುಟ್ಟಿಬಂದೀ ಅಸ್ತ್ರ
ಆಗಿಬಿಡಲಿ ವೈರಿಗಳ ಸುಡುವ ಮಾರಕಾಸ್ತ್ರ
ಉರುಳಿಸು ಉಗ್ರರನು ಮತ್ತೆ ತಲೆಯೆತ್ತದಂತೆ
ಕಿತ್ತೊಗೆ ಬೇರುಗಳ ಮತ್ತೆಂದೂ ಚಿಗುರದಂತೆ
ದಾಳಗಳನುರುಳಿಸುತ ಗರಗಳನು ಕೇಳು
ಒಂಬತ್ತು-ಹನ್ನೊಂದು ಬೀಳದಿದ್ದರೆ ಕೇಳು! (೫)

ಟಿಪ್ಪಣಿ :- ಸೆಪ್ಟೆಂಬರ್ ಹನ್ನೊಂದು, ಎರಡುಸಾವಿರದ ಒಂದರಂದು ಸಿರಿಕೇಂದ್ರದ ಜೋಡಿ ಕಂಬಗಳು ಉಗ್ರರ ವಿಮಾನದ ಬಡಿತಕೆ ಸಿಕ್ಕು ಕುಸಿದನಂತರ, ಅಲ್ಲಿ ಕರಗಿದ ಉಕ್ಕನ್ನು ಬಳಸಿ ಯುಎಸೆಸ್ ನ್ಯೂಯಾರ್ಕ್ ಎಂಬ ಯುದ್ಧನೌಕೆಯೊಂದನ್ನು ಕಟ್ಟಿ ಸಿದ್ಧಗೊಳಿಸಲಾಗಿದೆ. ವಿಶ್ವದಾದ್ಯಂತ ಉಗ್ರರ ವಿರುದ್ಧ ಧಾಳಿ ನಡೆಸುವ ಸಲುವಾಗೇ ಕಟ್ಟಿದ ಈ ನೌಕೆಯನ್ನು ಇಲ್ಲಿ ಶಕುನಿಯ ದಾಳಕ್ಕೆ ಹೋಲಿಸಲಾಗಿದೆ. ಕೌರವನ ದ್ವೇಷಕ್ಕೆ ಪಾತ್ರರಾದ ಶಕುನಿಯ ಸಮಸ್ತ ಕುಟುಂಬವನ್ನು ಸೆರೆಯಲ್ಲಿಟ್ಟು ಒಬ್ಬರಿಗಾಗುವಷ್ಟು ಮಾತ್ರ ಆಹಾರವನ್ನು ಕೊಡುತ್ತಿದ್ದರಂತೆ. ತಮ್ಮೆಲ್ಲರ ಆಹಾರವನ್ನು ಶಕುನಿಗೆ ಕೊಟ್ಟು ಅವನನ್ನು ಉಳಿಸಿ ತಮ್ಮ ಪ್ರಾಣಗಳನ್ನು ತ್ಯಾಗಮಾಡಿದ ಅವರೆಲ್ಲರ ಆಶಯ ಏನಿತ್ತೆಂದರೆ, ಉಳಿದುಕೊಂಡ ಶಕುನಿ ಏನಾದರೂ ಕುತಂತ್ರಮಾಡಿ ಕೌರವರನ್ನು ನಿರ್ನಾಮಗೊಳಿಸಲಿ ಎಂಬುದೇ ಆಗಿತ್ತು. ಶಕುನಿ ತನ್ನ ಅಣ್ಣತಮ್ಮಂದಿರ ಮೂಳೆಯಿಂದ ಮಾಡಿದ ದಾಳಗಳನ್ನು ಪಗಡೆಯ ಜೂಜಿನಾಟಕ್ಕೆ ಉಪಯೋಗಿಸಿದನಂತೆ. ಅವನಿಗೆ ಕೇಳಿದ ಗರ ಬಿಳುತ್ತಿತ್ತಂತೆ.  ಅದೇರೀತಿ, ಬಿನ್ ಲಾಡೆನ್ ಮುಂತಾದ ಉಗ್ರರನ್ನು ಕೊಲ್ಲಲು ಆ ಸಿರಿಕೇಂದ್ರದ ಜೋಡಿ ಕಂಬಗಳಲ್ಲಿ ಬಲಿಯಾಗಿ ಕರಗಿದ ಉಕ್ಕು ಮೂರು ಸಾವಿರ ಜನರ ಮೂಳೆಯಿಂದ ಬಲಗೊಂಡು ಈ ಯುದ್ಧನೌಕೆಯ ರೂಪತಾಳಿದೆ ಎಂಬುದೇ ಇಲ್ಲಿನ ಪ್ರತಿಮೆ.

 Posted by at 9:46 PM
Jul 222009
 

Shankar Hegdeಕನ್ನಡ ಸಾಹಿತ್ಯ ರಂಗದ ನಾಲ್ಕನೇ ಸಾಹಿತ್ಯೋತ್ಸವ  

 

ಕನ್ನಡ ಸಾಹಿತ್ಯ ರಂಗದ ನಾಲ್ಕನೇ ವಸಂತ ಸಾಹಿತ್ಯೊತ್ಸವವು ಕಾವೇರಿ ಕನ್ನಡ ಸಂಘದ ಸಹಯೋಗದಲ್ಲಿ ಮೇ ೩೦ ಮತ್ತು ೩೧, ೨೦೦೯ ರಂದು ರಾಕ್‍ವಿಲ್ (ಮೇರಿಲ್ಯಾಂಡ್) ನಲ್ಲಿರುವ ಶೇಡೀ ಗ್ರೋವ್ ವಿಶ್ವವಿದ್ಯಾಲಯದ ಆವರಣದಲ್ಲಿ  ಯಶಸ್ವಿಯಾಗಿ ನೆರವೇರಿತು. ಮುಖ್ಯ ಅತಿಥಿಗಳಾಗಿ ಆಧುನಿಕ ಕನ್ನಡದ ಇಬ್ಬರು ಪ್ರಮುಖ ಲೇಖಕಿಯರಾದ –  ಡಾ. ವೀಣಾ ಶಾಂತೇಶ್ವರ ಮತ್ತು ಶ್ರೀಮತಿ ವೈದೆಹಿ – ಆಗಮಿಸಿ ಎರಡು ದಿನಗಳ ಕಾಲ ನಮ್ಮನ್ನು ಕನ್ನಡ ಕತೆ-ಕಾದಂಬರಿ ಲೋಕಕ್ಕೆ ಕರೆದೊಯ್ದು ಸಾಹಿತ್ಯದ ರಸದೂಟವನ್ನುಣಿಸಿದರು. ಜೊತೆಗೆ ವುಡ್‍ಲ್ಯಾಂಡ್ಸ್ ಹೋಟೆಲಿನ ರುಚಿ-ರುಚಿ ಊಟ-ಉಪಹಾರಗಳ ರಸದೂಟಕ್ಕೂ ಏನೂ ಕೊರತೆಯಿರಲಿಲ್ಲ.

ಸಮ್ಮೇಳನದ ಮೊದಲ ದಿನದ ಕಾರ್ಯಕ್ರಮ ಸ್ವಾಗತ ಗೀತೆಯೊಂದಿಗೆ ಪ್ರಾರಂಭವಾಯಿತು.  ರಂಗದ ಅಧ್ಯ಼ಕ್ಷ ಎಚ್. ವೈ, ರಾಜಗೊಪಾಲ್ ಹಾಗೂ ಕಾವೇರಿ ಕನ್ನಡ ಕೂಟದ ಅಧ್ಯಕ್ಷೆ ಮೀನಾ ರಾವ್ ಅವರ ಸ್ವಾಗತ ಭಾಷಣಗಳ ನಂತರ, ರಾಜಗೊಪಾಲ್ ಅವರು ಡಾ. ವೀಣಾ ಶಾಂತೇಶ್ವರ್ ಅವರನ್ನೂ, ಶಶಿಕಲಾ ಚಂದ್ರಶೇಖರ್ ಅವರು ವೈದೇಹಿ ಅವರನ್ನು ಪರಿಚಯ ಮಾಡಿಕೊಟ್ಟರು. ಬಳಿಕ ಡಾ. ವೀಣಾ ಶಾಂತೇಶ್ವರ್ ಅವರು ಸಾಹಿತ್ಯ ರಂಗದ ಹೊಸ ಪ್ರಕಟಣೆ “ಕನ್ನಡ ಕಾದಂಬರಿ ಲೋಕದಲ್ಲಿ – ಹೀಗೆ ಹಲವು” ಪುಸ್ತಕವನ್ನು ಲೋಕಾರ್ಪಣೆ ಮಾಡಿದರು. ಪುಸ್ತಕದ ಪ್ರಧಾನ ಸಂಪಾದಕ ಮೈ.ಶ್ರೀ.ನಟರಾಜ ಹಾಗೂ ಸಂಪಾದಕ ಮಂಡಳಿಯ ಪರವಾಗಿ ಗುರುಪ್ರಸಾದ ಕಾಗಿನೆಲೆ ಅವರು ಪುಸ್ತಕ ಪ್ರಕಟನೆಯ ಹಿನ್ನೆಲೆ ಮತ್ತು ಸಂಪಾದನೆಯ ಅನುಭವವನ್ನು ಹಂಚಿಕೊಂಡರು. ಸಮ್ಮೇಳನದ ಅಂಗವಾಗಿ ಹೊರತಂದ ಈ ಪುಸ್ತಕದಲ್ಲಿ ಕಳೆದ ಮೂರು ದಶಕಗಳಲ್ಲಿ ಪ್ರಕಟವಾದ ೨೪ ಕನ್ನಡ ಕಾದಂಬರಿಗಳ ಪರಿಚಯಾತ್ಮಕ ವಿಮರ್ಶೆ (ವಿಮರ್ಶಾತ್ಮಕ ಪರಿಚಯ) ಗಳಿವೆ.  ಎಲ್ಲಾ ೨೪ ಲೇಖನಗಳೂ ಅಮೆರಿಕೆಯಲ್ಲಿ ವಾಸವಾದ ಕನ್ನಡಿಗರಿಂದಲೇ ಬರೆದವುಗಳು.

ಮುಖ್ಯ ಅತಿಥಿ ಡಾ. ವೀಣಾ ಶಾಂತೇಶ್ವರರು ತಮ್ಮ ಭಾಷಣದಲ್ಲಿ “ಕನ್ನಡ ಕಾದಂಬರಿಯಲ್ಲಿ ಕಳೆದ ಕಾಲು ಶತಮಾನ” ವಿಷಯದ ಮೇಲೆ ಒಂದು ಘಂಟೆ ನಿರರ್ಗಳವಾಗಿ ಮಾತನಾಡಿದರು. ಕನ್ನಡದಲ್ಲಿ ಕಾದಂಬರಿ ಪ್ರಕಾರದ ಸಾಹಿತ್ಯದ ಉಗಮದಿಂದ ಪ್ರಾರಂಭಿಸಿ, ನವೋದಯ, ಪ್ರಗತಿಶೀಲ, ನವ್ಯ ಹಾಗೂ ನವ್ಯೋತ್ತರ ಘಟ್ಟಗಳ ಕಾದಂಬರಿಗಳ ವೈಶಿಷ್ಟ್ಯಗಳನ್ನು ಉದಾಹರಣೆಗಳೊಂದಿಗೆ ವಿವರವಾಗಿ ಚರ್ಚಿಸಿದರು. ಭಾಷಣದ ನಂತರ ಇನ್ನೊಬ್ಬ ಮುಖ್ಯ ಅತಿಥಿ ವೈದೇಹಿ ಅವರು ಮೈ.ಶ್ರೀ.ನಟರಾಜರ “ಜಾಲತರಂಗಿಣಿ”  ಪುಸ್ತಕವನ್ನು ವಿದ್ಯುಕ್ತವಾಗಿ ಬಿಡುಗಡೆ ಮಾಡಿದರು. ಮೊದಲ ದಿನದ ಕೊನೆಯ ಸಾಹಿತ್ಯಕ ಕಾರ್ಯಕ್ರಮ ಅಮೇರಿಕನ್ನಡಿಗರ ಸಾಹಿತ್ಯ ಗೋಷ್ಠಿ. ಮನೋರಂಜಕವಾಗಿ, ಸಂಭಾಷಣೆಯ ರೂಪದಲ್ಲಿ ಯಶಸ್ವಿಯಾಗಿ ನಡೆಸಿಕೊಟ್ಟವರು ನಳಿನಿ ಮೈಯ ಮತ್ತು ಮಧು ಕೃಷ್ಣಮೂರ್ತಿಯವರುಗಳು. ಇದರಲ್ಲಿ ಹನ್ನೆರಡು ಕೆಲ ಹೊಸ ಮತ್ತೆ ಕೆಲ ಪರಿಚಿತ ಬರಹಗಾರರು ತಮ್ಮ ಕಥೆ, ಕವನ, ಹರಟೆಗಳನ್ನು ರಸವತ್ತಾಗಿ ಓದಿ ರಂಜಿಸಿದರು. ಮೊದಲ ದಿನದ ಕಾರ್ಯಕ್ರಮ ಕಾವೇರಿ ಕನ್ನಡ ಕೂಟದ ಹವ್ಯಾಸಿ ಕಲಾವಿದರಿಂದ “ರಾಧೇಯ” ಮತ್ತು “ಹಿರಣ್ಯಕಶಿಪು” ನಾಟಕಗಳೊಂದಿಗೆ ಮುಕ್ತಾಯವಾಯಿತು.

ಎರಡನೇ ದಿನದ ಪ್ರಮುಖ ಕಾರ್ಯಕ್ರಮಗಳೆಂದರೆ ವೈದೇಹಿ ಅವರಿಂದ ಕೃತಿಭಾಗ ವಾಚನ,  ಅಮೇರಿಕನ್ನಡ ಬರಹಗಾರರಿಂದ ಇತ್ತೀಚೆಗ ಪ್ರಕಟಿಸಿದ ಪುಸ್ತಕಗಳ ಪರಿಚಯ-ವಿಶ್ಲೇಷಣೆ, ಮತ್ತು ಮುಖ್ಯ ಅತಿಥಿಗಳ ಜೊತೆ ಕೆಲವು ಸ್ಥಳೀಯ ಸದಸ್ಯರು ಕೂಡಿ ನಡೆಸಿಕೊಟ್ಟ ಸಂವಾದ (ಪ್ರಶ್ನೋತ್ತರ) ಕಾರ್ಯಕ್ರಮ. ಪ್ರಾರಂಭದಲ್ಲಿ, ಶ್ರೀವತ್ಸ ಜೋಶಿ ಮತ್ತು ಶಿವು ಭಟ್ ಅವರು ಗಣಕಯಂತ್ರ ಮತ್ತು ಅಂತರ್‌ಜಾಲಲ್ಲಿ ಕನ್ನಡವನ್ನು“ಬರಹ” ತಂತ್ರಾಂಶದ ಮೂಲಕ ಹೇಗೆ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದೆಂದು ಪ್ರತ್ಯಕ್ಷ ಉದಾಹರಣೆಗಳೊಂದಿಗೆ ತೋರಿಸಿಕೊಟ್ಟರು. ವೈದೇಹಿಯವರು ತಮ್ಮ “ವೈದೇಹಿ ಅವರ ಆಯ್ದ ಕವಿತೆಗಳು” ಪುಸ್ತಕದಿಂದ ಎರಡು ಕವನಗಳನ್ನು ಮತ್ತು  “ವೈದೇಹಿ ಅವರ ಆಯ್ದ ಕಥೆಗಳು”  ಪುಸ್ತಕದಿಂದ “ಅಮ್ಮಚ್ಚಿಯೆಂಬ ನೆನಪು” ಕಥೆಯನ್ನು ಭಾವಪೂರ್ಣವಾಗಿ ಓದಿ ನಮ್ಮನ್ನೆಲ್ಲ ರಂಜಿಸಿ, ನಗಿಸಿ, ನಮ್ಮ-ನಮ್ಮ ಜೀವನಾನುಭದ “ಅಮ್ಮಚ್ಚಿ” ಯನ್ನು ನೆನಪಿಗೆ ತಂದುಕೊಟ್ಟರು.

ತ್ರಿವೇಣಿ ಶ್ರೀನಿವಾಸ ರಾವ್ ನಿರ್ವಸಿಕೊಟ್ಟ “ಹೆಮ್ಮೆ ಬರಿಸುವವರು ನಮ್ಮ ಬರಹಗಾರರು” ಕಾರ್ಯಕ್ರಮದಲ್ಲಿ ಕಳೆದ ವಸಂತೋತ್ಸವದಲ್ಲಿ ಬಿಡುಗಡೆಯಾದ ರಂಗದ “ನಗೆಗನ್ನಡಂ ಗೆಲ್ಗೆ” ಪುಸ್ತಕವನ್ನೊಳಗೊಂಡು, ಒಟ್ಟೂ ಎಂಟು ಪುಸ್ತಕಗಳನ್ನು ವಿವಿಧ ಓದುಗರು ಅರ್ಥಪೂರ್ಣವಾಗಿ ವಿಮರ್ಶಿಸಿದರು. ವಿಮರ್ಶಿಸಿದ ಪುಸ್ತಕಗಳಲ್ಲಿ, ನಮ್ಮ ಶಿಕಾಗೋದವರೇ ಆದ ತ್ರಿವೇಣಿ ಶ್ರೀನಿವಾಸ ರಾವ್ “ತುಳಸೀವನ” ವೂ ಒಂದು.

ರವಿವಾರದ ರಸದೂಟದ ಬಳಿಕ “ಇಂದಿನ ಕನ್ನಡ ಬರಹಗಾರ್ತಿಯರು”  ವಿಷಯದ ಮೇಲೆ ಸಂವಾದ ಕಾರ್ಯಕ್ರಮ – ನಡೆಸಿಕೊಟ್ಟವರು ಶಶಿಕಲಾ ಚಂದ್ರಶೇಖರ್. ತುಂಬ ಸ್ವಾರಸ್ಯಕರವಾಗಿದ್ದ ಈ ಕಾರ್ಯಕ್ರಮದಲ್ಲಿ ವೀಣಾ ಶಾಂತೇಶ್ವರ್ ಮತ್ತು ವೈದೇಹಿ ಅವರ ಜೊತೆಯಲ್ಲಿ ನಳಿನಿ ಮೈಯ, ತ್ರಿವೇಣಿ ಶ್ರೀನಿವಾಸ ರಾವ್, ಜ್ಯೋತಿ ಮಹಾದೇವ್, ವಿಮಲಾ ರಾಜಗೋಪಾಲ್, ಹಾಗೂ ಮೀರಾ ಪಿ. ಆರ್.  ಅವರೂ ಭಾಗವಹಿಸಿದ್ದರು. ಅತಿ ಉತ್ಸಾಹದ ಶ್ರೋತೃಗಳಿಂದ ಬಂದ ಪ್ರಶ್ನೆಗಳು ವೈವಿದ್ಯಮಯವಾಗಿದ್ದರೆ, ಉತ್ತರಗಳೂ ಕೂಡ ಅಷ್ಟೇ ಸ್ವಾರಸ್ಯಮಯವೂ, ವಿಚಾರಾತ್ಮಕವೂ ಆಗಿದ್ದವು. ಕೊನೆಯದಾಗಿ ಕಾವೇರಿ ಸಂಘದ ಕನ್ನಡ ಕಲಿಯೋಣ ಶಾಲಾ ಮಕ್ಕಳ ವಿವಿಧ ವಿನೋದಾವಳಿ ಮತ್ತು ವಂದನಾರ್ಪಣೆಗಳೊಂದಿಗೆ, ವಸಂತೋತ್ಸವ ಕಾರ್ಯಕ್ರಮ ಮುಕ್ತಾಯವಾಯಿತು.

-ಶಂಕರ ಹೆಗ್ಗಡೆ

 Posted by at 1:20 AM
Jul 222009
 

 

Meera P. R

 ಬಿ.ಎಂ.ಡಬ್ಲ್ಯೂ

 

 

ಯಾವತ್ತಿನ ಹಾಗೆ ಈ ದಿನ ಕೂಡ ವಾಕಿಂಗ್ ರಿಂಕ್‍ನಲ್ಲಿ ನನ್ನ ಜೊತೆ ಹೆಜ್ಜೆ ಹಾಕುತ್ತಾ, ಆಶಾಬೆನ್ ತಮ್ಮ ಮಗಳ ಗುಣಗಾನ ಮಾಡಲು ಶುರುವಿಟ್ಟರು. ‘ನಿಜ್ವಾಗ್ಲೂ ಹೇಳ್ತಿದೀನಿ, ನನ್ನ ಮಗಳು ಅಂತಲ್ಲ. ಎಷ್ಟು ಒಳ್ಳೇ ಹುಡುಗಿ ಗೊತ್ತಾ? ಐಯಾಮ್ ರಿಯಲಿ ಸೋ ಪ್ರೌಡ್ ಆಫ್ ಹರ್’. ಒಮ್ಮೊಮ್ಮೆ ಸ್ವಲ್ಪ ಬೋರೆನಿಸಿದರೂ ಅವರ ಮಗಳ ಕಥೆ ಕೇಳುವಲ್ಲಿ ನನಗೂ ಸಾಕಷ್ಟು ಆಸಕ್ತಿ ಇತ್ತು. ಇಂಡಿಯಾದಿಂದ ಬಂದು ಇಲ್ಲಿ ಮಕ್ಕಳನ್ನ ಹುಟ್ಟಿಸಿ, ಬೆಳೆಸಿ ದೊಡ್ಡವರನ್ನಾಗಿ ಮಾಡ್ತಿರೋ ಉಳಿದ ಬಹುತೇಕ ಅಮ್ಮ, ಅಪ್ಪಂದಿರೆಲ್ಲ ಈ ದೇಶದಲ್ಲಿ ಮಕ್ಕಳನ್ನ ಬೆಳೆಸೋದು(ಅದರಲ್ಲೂ ಹೆಣ್ಣು ಮಕ್ಕಳನ್ನ), ಅವರಿಗೆ ನಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನ ಕಲಿಸೋದು, ….ಒಟ್ಟಲ್ಲಿ ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳೋದು ಎಷ್ಟು ಕಷ್ಟ ಅಂತ ರಾಗಮಾಲಿಕೆಯಲ್ಲಿ ಗೋಳು ಹೇಳಿಕೊಳ್ಳುವಾಗ ಈ ಆಶಾಬೆನ್ ಮಾತ್ರ ತಮ್ಮ ಲಾಡ್ಲಿ ಬೇಟಿ ಸೋನುವಿನ ಗುಣಗಾನ ಮಾಡೋದು ಕೇಳಲಿಕ್ಕೆ ಚೆಂದ ಅನ್ನಿಸುತ್ತಿತ್ತು.
‘ಈಗ ವಾರದ ಹಿಂದೆ ಏನಾಯ್ತು ಗೊತ್ತಾ ವಿಜಿ?’ ‘ಹೇಳಿ, ಹೇಳಿ..’ ನಾನಂದೆ.
‘ವೀಕೆಂಡಿನಲ್ಲಿ ಸೋನು ಮನೆಗೆ ಬಂದಿದ್ದಾಗ, ಸಮಯ ನೋಡಿ ನಾನೇ ಅವಳನ್ನ ಕೇಳ್ದೆ, ಇನ್ನೇನು ಒಂದು ವರ್ಷಕ್ಕೆ ನಿನ್ನ ಪಿ.ಜಿ. ಮುಗಿದುಹೋಗತ್ತೆ. ಆಮೇಲಿಂದು ಅಂದರೆ  ನಿನ್ನ ಮದುವೇದು ಏನು ಯೋಚನೆ ಮಾಡಿದೀಯ? ಅಂತ’
‘ಹೌದಾ? ಅದಕ್ಕೆ ಏನು ಹೇಳಿದಳು ಮಗಳು?’
‘ನಾನು ನಮ್ಮೊಮ್ಮನಿಗೆ ಹೇಳಿದ ಹಾಗೇ ಹೇಳಿದಳು. ನಂದು ಓದು ಮುಗಿದು, ಒಂದೆರಡು ವರ್ಷವಾದರೂ ನಾನು ಕೆಲ್ಸ ಮಾಡ್ಬೇಕು ಮಮ್ಮಿ. ಆಮೇಲೆ ಯೋಚನೆ ಮಾಡಿದ್ರಾಯ್ತು, ಮದ್ವೆ ವಿಷ್ಯ..ಅಂತ.’
‘ಅದೂ ಸರಿ ಬಿಡಿ…’ ನಾನು ಮಾತು ಮುಗಿಸುವಷ್ಟರಲ್ಲಿ ಆಶಾ ಹೇಳಿದರು, ‘ಅಯ್ಯೋ ನಿನ್‍ಗೆ ಗೊತ್ತಾಗಲ್ಲಮ್ಮ. ನಿನ್ನ ಮಕ್ಕಳಿನ್ನೂ ಚಿಕ್ಕವರು. ಇಲ್ಲಿ ಇಂಡಿಯನ್ ಹುಡ್ಗೀರಿಗೆ ಮದುವೆಯಾಗೋದು ಎಷ್ಟು ಕಷ್ಟ ಗೊತ್ತಾ?’
‘ಹೌದಾ?’
‘ಹೌದು ಮತ್ತೆ, ಹುಡುಗರಿಗಾದರೆ ಅಂಥಾ ಕಷ್ಟ ಆಗೋದಿಲ್ಲ ನೋಡು. ಇಂಡಿಯಾಗೆ ಹೋಗ್ತಾರೆ, ಒಂದಷ್ಟು ಜನ ಹುಡುಗೀರನ್ನ ನೋಡ್ತಾರೆ, ಜಾತಕ-ಗೀತಕ ಸರಿ ಹೋಗಿ, ಹುಡುಗಿ ಜೊತೆಗೂ ಮಾತಾಡಿ…ಅಂತೂ ಮೂರೋ, ನಾಲ್ಕೋ ವಾರದೊಳಗೇ ಮದುವೇನೂ ಮುಗಿಸಿಕೊಂಡು ಬಂದೇ ಬಿಡ್ತಾರೆ. ಆ ಹುಡುಗೀರೂ ಅಷ್ಟೆ, ಚೆನ್ನಾಗಿ ಓದಿರ್ತಾರೆ, ಕೆಲ್ಸದಲ್ಲೂ ಇರ್ತಾರೆ, ಇಲ್ಲಿ ಬಂದ್ಮೇಲೂ ಅವರಿಷ್ಟ ಬಂದ ಹಾಗೆ ಇರ್ಬೋದು. ಏನೂ ತೊಂದರೆ ಆಗೋದಿಲ್ಲ. ಇಂಡಿಯಾದಲ್ಲೇ ಬೆಳೆದಿರೋದರಿಂದ ಗಂಡ, ಮನೆ ಅಂತ ಹೊಂದಿಕೊಳ್ಳೋದನ್ನೂ ಕಲಿತಿರ್ತಾರೆ. ಏನೂ ತೊಂದರೇನೇ ಬರೋದಿಲ್ಲ.’
‘ಅರೆ, ಅಲ್ಲಿಂದ ಎಲ್ರನ್ನೂ ಬಿಟ್ಟು ಇಷ್ಟು ದೂರ ಬಂದು ಇರೋದೇ ಕಷ್ಟ ಆಗ್ಬೋದಲ್ವ? ಹೊಸದಾಗಿ ಆಗಿರೋ ಮದುವೆ, ಹುಡುಗ, ಹೊಸಾ ದೇಶ, ಪರಿಸರ….ಎಷ್ಟಕ್ಕೆಲ್ಲ ಅಡ್ಜಸ್ಟ್ ಆಗ್ಬೇಕು…’ ನನ್ನ ಮಾತಿನ್ನೂ ಮುಗಿದಿರಲೇ ಇಲ್ಲ, ಆಶಾಬೆನ್ ನನ್ನ ಸಂದೇಹಗಳನ್ನೆಲ್ಲ ಅವು ಸಂದೇಹಗಳೇ ಅಲ್ಲ ಎಂಬಂತೆ ಒಮ್ಮೆ ಭುಜ ಕೊಡವಿ ಹೇಳಿದರು,‘ಅಯ್ಯೋ ಅವೆಲ್ಲ ಏನ್ಮಹಾ ಸುಮ್ನಿರು. ನಾವೆಲ್ಲ ಅದಕ್ಕೆ ಅಡ್ಜಸ್ಟ್ ಆಗ್ಲಿಲ್ವ? ಮುಖ್ಯ ಹುಡ್ಗ ಹುಡ್ಗಿ ಒಬ್ಬರಿಗೊಬ್ಬರು ಸರಿಹೋದ್ರೆ ಆಯ್ತು. ಇಲ್ಲೇ ಬೆಳೆದ ಹುಡುಗರಿಗೂ ಇಂಡಿಯಾದಲ್ಲಿ ಬೆಳೆದ ಹುಡ್ಗೀರಿಗೂ ಹೊಂದಿಕೊಳ್ಳೋ ವಿಷಯದಲ್ಲಿ ಅಂಥಾ ಕಷ್ಟವೇನೂ ಆಗೋದಿಲ್ಲ. ನಿಜವಾದ ಕಷ್ಟ ಇರೋದು ಇಲ್ಲೇ ಹುಟ್ಟಿ ಬೆಳೆಯೋ ಇಂಡಿಯನ್ ಹುಡ್ಗೀರಿಗೆ.’
‘ಅದು ಹ್ಯಾಗೆ?’
‘ನೋಡೂ, ಇಲ್ಲಿರುವ ಇಂಡಿಯನ್ ಹುಡುಗರಿಗೂ, ಅವರ ಅಪ್ಪ-ಅಮ್ಮಂದಿರಿಗೂ ಇಂಡಿಯಾದಲ್ಲೇ ಬೆಳೆದ ಹುಡುಗೀರೇ ಬೇಕು ಮದುವೆ ಆಗೋಕೆ. ಇಲ್ಲಿ ಬೆಳೆದ ಹುಡುಗೀರನ್ನ ಯಾರೂ ಪ್ರಿಫರ್ ಮಾಡಲ್ಲ’.
‘ಅದ್ಯಾಕೆ ಆ ಥರಾ?’
‘ಇಲ್ಲಿ ಬೆಳೆದ ಹುಡುಗೀರು ತುಂಬಾ ಇಂಡಿಪೆಂಡೆಂಟ್ ಆಗಿರ್ತಾರಲ್ಲ, ಅದು ಅವ್ರಿಗೆ ಸರಿಹೋಗಲ್ಲ. ನಾಳೆ ಗಂಡ ಹೆಂಡ್ತಿ ಮಧ್ಯ ನಾಲ್ಕು ಮಾತು ಬಂತು ಅಂದ ತಕ್ಷಣ ಈ ಹುಡ್ಗೀರು ಡೈವೋರ್ಸಿಗೆ ಹಾಕಿಬಿಟ್ರೆ ಏನು ಗತಿ? ಇಂಡಿಯಾದ ಹುಡ್ಗೀರಾದ್ರೆ ಪಾಪ, ಆದಷ್ಟೂ ಅನುಸರಿಸಿಕೊಂಡು ಹೋಗ್ತಾರೆ ನೋಡು….ನಮ್ ಹಾಗೆ.’
ನನಗೆ ಉಕ್ಕಿ ಬರ್ತಿರೋ ಕೋಪ, ಆಗುತ್ತಿದ್ದ ಕಿರಿಕಿರಿ ಎಲ್ಲಾನೂ ತಡೆದುಕೊಳ್ತಾ ಇವರ ಮುಂದಿನ ಮಾತಿಗೆ ಕಾದೆ.
‘ಹೋಗಲಿ ಇಂಡಿಯಾದಿಂದಾನೇ ಗಂಡು ತರೋಣ ಅಂದ್ರೆ ಅದೂ ಸರಿ ಹೋಗಲ್ಲ. ಮತ್ತೆ ಅದೇ ಪ್ರಾಬ್ಲಂ. ಅಲ್ಲಿನ ಹುಡುಗರುಇಲ್ಲಿನ ಹುಡ್ಗೀರ್ನ ಪ್ರಿಫರ್ ಮಾಡಲ್ಲ. ಈ ಹುಡ್ಗೀರ್ಗೂ ಅವ್ರು ಸರಿ ಹೋಗೋದಿಲ್ಲ…ಮತ್ತದೇ ಪ್ರಾಬ್ಲಂ ಗೊತ್ತಲ್ಲ?’
ನಾನೀಗ ಏನೂ ಮಾತಾಡಲಿಲ್ಲ. ಆಶಾ ಬೆನ್ ಮುಂದುವರೆಸಿದರು. ‘ಅದಕ್ಕೇ ನನ್ಗೀಗ ಯೋಚ್ನೆ ಆಗಿರೋದು. ಮೊನ್ನೆ ಮದುವೆ ವಿಷಯ ಮಾತಾಡುವಾಗ, ನಾನೇ ಸೋನೂಗೆ ಇದನ್ನೆಲ್ಲ ವಿವರಿಸಿ ಹೇಳಿದೆ. ಇಷ್ಟೆಲ್ಲ ಕಷ್ಟ ಇರುವುದರಿಂದ, ನಿನ್ನ ಓದಿನ ಜೊತೆ ಜೊತೆಗೇ ನಿನಗ್ಯಾರಾದರೂ ಇಷ್ಟ ಆಗ್ತಾರಾ ಅಂತಾನೂ ನೋಡ್ತಾ ಇರು. ಎಲ್ಲ ಸರಿ ಹೋದ್ರೆ, ನಿನಗಿಷ್ಟ ಬಂದವರನ್ನ ನೀನು ಮದುವೆ ಆಗಬಹುದು ಅಂತಾನೂ ಹೇಳ್ದೆ.’
ಈಗ ನನಗೆ ಒಂದಿಷ್ಟು ಸಮಾಧಾನ ಅನ್ನಿಸಿತು. ‘ಪರ್ವಾಗಿಲ್ಲ ನೀವು, ಒಳ್ಳೇ ಸಲಹೇನೇ ಕೊಟ್ಟಿದೀರ ಮಗಳಿಗೆ. ಅವಳ ಜೀವನ, ಅವಳ ಸಂಗಾತಿ, ಅವಳೇ ನಿರ್ಧರಿಸೋದೇ ಒಳ್ಳೇದು ಬಿಡಿ’
‘ಹೌದಪ್ಪಾ, ನಾವ್ಯಾಕೆ ಎಲ್ಲದರಲ್ಲೂ ಮೂಗು ತ್ತೊರಿಸ್ಬೇಕು ಹೇಳು? ಮಕ್ಕಳು ಅಂತ ಇಂಥಾ ವಿಷಯದಲ್ಲೆಲ್ಲ ಅಧಿಕಾರ ಚಲಾಯಿಸೋದಕ್ಕಾಗತ್ತ?’
ಇವರು ಇಂಡಿಯಾದಲ್ಲೇ ಇದ್ದಿದ್ದರೆ ಅಥವಾ ಮಗಳ ಬದಲು ಮಗನಿಗೆ ಮದುವೆ ಮಾಡಬೇಕಿದ್ದರೆ, ಇಷ್ಟೇ ಧಾರಾಳವಾಗಿರುತ್ತಿದ್ದರಾ ಅಂತ ನಾನು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಹೇಳಿದರು,
‘ನಮ್ಮ ಸೋನು ಅವಳಿಗೆ ಇಷ್ಟ ಬಂದ ಯಾರನ್ನು ಬೇಕಾದರೂ ಮದುವೆಯಾಗಬಹುದು. ಅವರು ಬಿ.ಎಂ.ಡಬ್ಲ್ಯೂ. ಆಗಿರಬಾರದು ಅಷ್ಟೆ. ನಾವು ಅದೊಂದೇ ಕಂಡಿಷನ್ ಹಾಕಿರೋದು ಅವಳಿಗೆ.’
ಇದ್ದಕ್ಕಿದ್ದಂತೆ ಈ ಬಿ.ಎಂ.ಡಬ್ಲ್ಯೂ. ಎಲ್ಲಿಂದ ಪ್ರತ್ಯಕ್ಷವಾಯಿತು ತಿಳಿಯದೆ ಅವರನ್ನೇ ಕೇಳಿದರೆ, ಅವರಿಗೆ ಆಶ್ಚರ್ಯ. ‘ಯು.ಎಸ್.ನಲ್ಲಿ ೧೦ ವರ್ಷದಿಂದ ಇದ್ದೂ ಹಾಗಂದ್ರೇನು ಗೊತ್ತಿಲ್ವಾ?’ ನನ್ನ ಅಙ್ಞಾನಕ್ಕೆ ಮರುಗುತ್ತಾ ಪಕ್ಕದಲ್ಲಿ ನಡೆಯುತ್ತಿದ್ದ ನನಗೆ ಇನ್ನೂ ಹತ್ತಿರ ಬಂದು ಪಿಸುಗುಟ್ಟಿದರು, ‘ಅದೇ ಬಿ.ಎಮ್.ಡಬ್ಲ್ಯೂ. ಅಂದ್ರೆ ಬ್ಲ್ಯಾಕ್, ಮುಸ್ಲಿಂ, ವೈಟ್…ಈ ಮೂರು ಬಿಟ್ಟು ಇನ್ನೆಂತವರಾದ್ರೂ ಆಗ್ಬೋದು ಅಂತ.’ ಇವರ ಮಾತು ಕೇಳಿ ಸಾವರಿಸಿಕೊಳ್ಳುವಾಗ ಯಾಕೋ ಕಾಲು ತೊಡರುವಂತಾಯಿತು.
‘ಹಾಗೇ ನಮ್ ಹಾಗೇ ವೆಜಿಟೇರಿಯನ್ ಆಗಿರ್ಬೇಕು ಅಂತಾನೂ ಹೇಳಿದೀವಿ, ಇಲ್ಲದೆ ಹೋದ್ರೆ ನಾಳೆ ಇವಳಿಗೆ ಕಷ್ಟ ಆಗುತ್ತಲ್ವ? ಜೊತೆಗೆ ಇಷ್ಟೆಲ್ಲ ಕಂಡಿಷನ್‍ಗಳ ಒಳಗೆ ಸಿಕ್ಕುವ ಹುಡುಗ ಇಂಡಿಯನ್ನೇ ಆಗಿರ್ತಾನಲ್ವ? ಹಾಗಂತ ಹಿಂದೂನೇ ಆಗಿರ್ಬೇಕು ಅಂತೇನಿಲ್ಲ. ಜೈನ್ ಆದ್ರೂ ನಡೆಯತ್ತೆ. ನಮ್ಮದೂ ಅವ್ರದ್ದೂ ದೇವ್ರು ಬೇರೆಯಾದ್ರೂ, ಬಾಕಿ ಎಲ್ಲ ಅಂಥಾ ಏನೂ ವ್ಯತ್ಯಾಸವಿರಲ್ಲ ನೋಡು. ಇಂಡಿಯಾದಲ್ಲಿ ಯಾವ ಸ್ಟೇಟ್‍ನಿಂದ ಬಂದವರಾದ್ರೂ ಪರ್ವಾಗಿಲ್ಲ ಅಂತಾನೂ ಹೇಳ್ಬಿಟ್ಟಿದೀನಿ. ಈವನ್ ಸೌತ್ ಇಂಡಿಯನ್ ಆದ್ರೂ ಪರ್ವಾಗಿಲ್ಲ. ನಮ್ಮ ಮಕ್ಕಳಿಗೆ ಗುಜರಾತೀನೇ ಬೇಕಂತ ಕೂತ್ರೆ ಆಗತ್ತ? ಒಟ್ಟಲ್ಲಿ ಅವಳಿಷ್ಟ ಅಷ್ಟೆ’. ಇಷ್ಟೆಲ್ಲ ಹೇಳಿದ ಮೇಲೂ ‘ಅವಳಿಷ್ಟ’ ಅನ್ನುತ್ತಿರುವ ಇವರ ಜೊತೆ ಮತ್ತೆ ಮಾತಾಡುವಂಥದ್ದೇನೂ ಇಲ್ಲ ಎನಿಸಿ ಸುಮ್ಮನಾದೆ.

ಈ ಮಾತು ಕಥೆ ಎಲ್ಲ ನಡೆದು ಆರು ತಿಂಗಳಾಗಿವೆ. ಜಿಮ್‍ನಲ್ಲಿ ಯಾಕೋ ಒಂದು ವಾರದಿಂದ ಆಶಾಬೆನ್ ಕಾಣಿಸದೆ, ನಾನು ಮಾಡಿದ ಫೋನ್‍ಕಾಲಿಗೂ ಸಿಕ್ಕದೆ, ಅವರ ಆರೋಗ್ಯಕ್ಕೆ ಏನಾದರೂ ತೊಂದರೆಯಾಗಿರಬಹುದಾ ಎಂದುಕೊಳ್ಳುತ್ತಿರುವಾಗ ಅವರ ನೆರೆಯವರಾದ ಸುಗುಣಾ ಜೋಷಿಯಿಂದ ಮೊನ್ನೆ ವಿಷಯ ತಿಳಿಯಿತು. ಸೋನು ತನ್ನ ಅಮ್ಮ, ಅಪ್ಪನಿಗೆ ಹೇಳದೆ ಎಂಗೇಜ್‍ಮೆಂಟ್ ಮಾಡಿಕೊಂಡವಳು, ಈಗ ಮದುವೆಗೂ ಅಣಿಯಾಗುತ್ತಿದ್ದಾಳಂತೆ. ಇದರಿಂದಾಗಿ ಆಶಾ ಮತ್ತವರ ಗಂಡ ಇಬ್ಬರೂ ಎಲ್ಲರಿಂದಲೂ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರಂತೆ. ‘ಯಾಕೆ ಏನಾಯ್ತು? ಸೋನು ಏನಾದ್ರೂ ಬಿ.ಎಂ.ಡಬ್ಲ್ಯೂ….’ ‘ಅಯ್ಯೋ ಅದಾಗಿದ್ದಿದ್ರೆ ಎಷ್ಟೋ ಒಳ್ಳೇದಿತ್ತು. ಈಗಾಗಿರೋ ಕಥೇನೇ ಬೇರೆ..’ ಜೋಷಿ ಮುಂದುವರೆಸಿದರು, ‘ಸೋನು ಮದುವೆಯಾಗ್ತಿರೋದು ಇಂಡಿಯನ್, ಹಿಂದು, ವೆಜೆಟೇರಿಯನ್ ಕೂಡ…ಮಿಸೆಸ್ ಜೋಷಿ ನನ್ನ ಬಳಿ ಸರಿದು ಪಿಸುಗುಟ್ಟಿದರು, ‘ಆದ್ರೆ ಅದೂ ಒಂದು ಹುಡುಗಿ. ಅವಳ ಹೆಸರು ಮಾಯಾ ದವೆ ಅಂತೆ, ಇವಳ ಹಾಗೇ ಗುಜರಾಥೀ ಹುಡ್ಗಿ. ಸೋನು ಹೀಗೆ ಅಂತ ನಮ್ಗೆ ಯಾರ್ಗೂ ಗೊತ್ತೇ ಇರ್ಲಿಲ್ಲ ನೋಡು. ಬಾಯ್ ಫ಼್ರೆಂಡ್ಸು, ಡೇಟಿಂಗು ಅಂತೆಲ್ಲ ಬೇರೆ ಹುಡ್ಗೀರ ಥರಾ ಇಲ್ಲಪ್ಪ ನಮ್ ಸೋನು ಅಂತ ಆಶಾ ಬೆನ್ ಎಷ್ಟು ಜಂಭ ಕೊಚ್ಚಿಕೊಳ್ತಿದ್ರು! ಇದು ಹೀಗಿರಬಹುದು ಅಂತ ಪಾಪ ಅವ್ರಿಗಾದ್ರೂ ಹೇಗೆ ತಾನೆ ಅನ್ನಿಸಿರತ್ತೆ. ಇಂಡಿಯನ್ ಮಕ್ಳೂ ಹೀಗೆಲ್ಲ ಗೇ, ಲೆಸ್ಬಿಯನ್‍ಗಳಾಗೋದ? ನನಗಂತೂ ಸುದ್ದಿ ಕೇಳಿದಾಗಿಂದಾ ಎಷ್ಟು ಹೆದ್ರಿಕೆ ಆಗ್ಬಿಟ್ಟಿದೆ ಗೊತ್ತಾ? ನಮ್ಮ ಮಕ್ಕಳಿಗೆ ಇನ್ಮೇಲೆ ಬಿ.ಎಂ.ಡಬ್ಲ್ಯೂ. ಅಷ್ಟೇ ಅಲ್ಲ, ಎಲ್.ಜಿ. ಕೂಡಾ ಬೇಡ ಅಂತ ಮೊದ್ಲೇ ಹೇಳಿಬಿಡ್ಬೇಕು…’ ಮಿಸೆಸ್ ಜೋಷಿ ಇನ್ನೂ ಮುಂದುವರಿಸುತ್ತಿದ್ದರು. ನನಗೆ ಮಾತ್ರ ಅವರು ಮುಂದೆ ಹೇಳಿದ್ದೇನೂ ಕೇಳಿಸಲಿಲ್ಲ.         

 

 Posted by at 12:59 AM