May 012012
 

ನಾನು ಬಳ್ಳಾರಿಯಲ್ಲಿ ಆಗತಾನೆ, ಎಂಬಿಬಿಎಸ್ ಮುಗಿಸಿ ಹೌಸ್ ಸರ್ಜನ್ಸಿ ಶುರುಮಾಡಿದ್ದೆ. ಎಲ್ಲರೂ ಹೊಸ ವೈದ್ಯರಿಗಿರಬೇಕಾದ ಉತ್ಸಾಹ, ಆತಂಕ ಮತ್ತು ಭಂಡ ಧೈರ್ಯಗಳೊಂದಿಗೆ ವರ್ಷವನ್ನು ಆರಂಭಿಸಿದ್ದೆವು. ಒಂದು ಸ್ಟೆತೋಸ್ಕೋಪು ಹೆಗಲಮೇಲಿದ್ದು ಪ್ರಾಣ ಉಳಿಸುವ ನಾಲ್ಕು ಔಷಧಿಗಳ ಡೋಸನ್ನು ಬಾಯಿಪಾಠ ಮಾಡಿದ್ದರೆ ಸಾಕು, ಜಗತ್ತನ್ನೇ ಗೆಲ್ಲುವ ಛಾತಿ ನಮ್ಮಲ್ಲಿದೆ ಎಂದು ತಿಳಕೊಂಡ ಅಡ್ಡಾದಿಡ್ಡಿ ವಯಸ್ಸದು. ಅಸ್ತಮಾಕ್ಕೆ ಅಮೈನೋಫ಼ಿಲಿನ್, ಹಾರ‍್ಟಿಗೆ ಡಿಗಾಕ್ಸಿನ್ನು (ಅಮೆರಿಕಾಕ್ಕೆ ಬಂದಮೇಲೆ ಡಿಜಾಕ್ಸಿನ್ ಅನ್ನುತ್ತಿದ್ದೇನೆ), ಬೀಪಿಗೆ ನಿಫ಼ಿಡೆಪಿನ್ನುಗಳೇ ಡಾಕ್ಟರಿಕೆಯೆಂದುಕೊಂಡಿದ್ದ ನಾವು ಹೆನ್ರೀ ಗ್ರೇನ ಅನಾಟಮಿ, ಬೈಲಿ ಮತ್ತು ಲವ್‌ರ ಸರ್ಜರಿಯಂತ ದಪ್ಪದಪ್ಪ ಪುಸ್ತಕಗಳನ್ನು ನಮಗೆ ಉರುಹೊಡೆಸಿದ ನಮ್ಮ ಪ್ರೊಫ಼ೆಸರರುಗಳೆಲ್ಲರನ್ನೂ ಬಯ್ದುಕೊಂಡು ಮೊದಲ ತಿಂಗಳ ಸ್ಟೈಪೆಂಡಿನಲ್ಲಿ ಬೆಂಗಳೂರು ರಸ್ತೆಯಲ್ಲಿದ್ದ ಸಂದೀಪ್ ಟೈಲರ್ಸ್‌ನಲ್ಲಿ ಎರಡು ಪ್ಯಾಂಟು ಹೊಲೆಸಿ, ರೌಂಡ್ಸ್ ಮುಗಿಸಿದ ಮೇಲೆ ಕ್ಯಾಂಪಸ್ಸಿನಲ್ಲಿದ್ದ ಕೃಷ್ಣ ಬೇಕರಿಯಲ್ಲಿ ಬೈಟು ಕೇಟಿ ಕುಡಿದುಕೊಂಡು ಓಡಾಡುತ್ತಿದ್ದೆವು.

ಆ ಹುಡುಗಾಟಿಕೆಯ ವಯಸ್ಸಲ್ಲಿಯೂ ನಿಜವಾಗಿ ನನ್ನನ್ನು ಕಂಗೆಡಿಸುತ್ತಿದ್ದುದು ಕ್ಯಾಶುಯಾಲ್‌ಟಿಯಲ್ಲಿ ರಾತ್ರಿಪಾಳಿಯಲ್ಲಿದ್ದಾಗ ವಾರ‍್ಡಿನಿಂದ ಬರುವ ’ಸಾರೂ, ಎಂಎಂಟೂನಾಗೆ (ಎರಡನೇ ಮಹಡಿಯಲ್ಲಿರುವ ಮೇಲ್ ಮೆಡಿಕಲ್ ವಾರ್ಡ್) ಸೀರಿಯಸ್ ಕೇಸು, ಈಗ್ಲೇ ಬರಬೇಕಂತೆ’ ಎಂದು ವಾರ್ಡ್‌ಬಾಯ್ ಓಬಳೇಶು ತರುವ ’ಸಾವಿನ’ ಕರೆಗಳು. ಬಳ್ಳಾರಿಯ ಮೆಡಿಕಲ್ ಕಾಲೇಜಿನಲ್ಲಿ ಕ್ಯಾಶುಂiಲ್‌ಟಿಯಿರುವುದು ವಾರ್ಡಿನಿಂದ ಸುಮಾರು ಹತ್ತು ನಿಮಿಷದ ನಡಿಗೆಯ ದೂರ. ಆಗ ನಾವು ಪಾಳಿಯಲ್ಲಿದ್ದರೂ ವಾರ್ಡಿನ ನರ್ಸುಗಳು ನಮ್ಮನ್ನು ಸುಲಭವಾಗಿ ಪತ್ತೆಹಚ್ಚಲು ಅನುಕೂಲವಾಗುವಂತ ಬೀಪರು, ಮೊಬೈಲುಗಳಂಥ ಜಂಗಮ ಆಟಿಕೆಗಳಿರಲಿಲ್ಲ. ಮೆಡಿಕಲ್ ಆಫ಼ೀಸರರ ಮೇಜಿನ ಮೇಲೆ ಇದ್ದ ಕರಿಯ ರಿಂಗು ರಿಂಗು ರಿಂಗಾ ಫ಼ೋನೊಂದೇ ಕ್ಯಾಶುಯಾಲ್‌ಟಿಗೂ ಮೆಡಿಕಲ್ ವಾರ್ಡಿಗೂ ನಡುವೆ ಇದ್ದ ಏಕೈಕ ಸಂಪರ್ಕ ಸಾಧನ. ಅದೂ ಮೂರುಹೊತ್ತೂ ಕ್ಯಾಶ್ಯುಯಾಲ್‌ಟಿ ಮೆಡಿಕಲ್ ಆಫ಼ೀಸರರು ಫ಼ೋನಿನ ’ಮೇಲಿರದಿದ್ದರೆ’. ಅಕಸ್ಮಾತ್ ಫ಼ೋನು ಹತ್ತಲಿಲ್ಲವೆಂದರೆ ವಾರ್ಡಿನ ನರ್ಸುಗಳು ವಾರ್ಡ್‌ಬಾಯ್ ಅನ್ನು ’ಹೋಗಿ ಡ್ಯೂಟಿ ಡಾಕ್ಟರನ್ ಹಿಡಿಕ್ಯಂಬಾ, ಸೀರಿಯಸ್ ಕೇಸಂತ ಹೇಳು’ ಎಂದು ಹೇಳಿ ಕಳಿಸುತ್ತಿದ್ದರು.

ಓಬಳೇಶು ಬಂದು ಕರೆದಾಗ ಪಾಳಿಯ ಕಾರ್ಯಶ್ರೇಣಿಯ ಅತಿಕೆಳಗಿನ ಮೆಟ್ಟಿಲಲ್ಲಿದ್ದ ಹೌಸ್ ಸರ್ಜನ್ನುಗಳೆಂಬ ಬಡಪಾಯಿಗಳಾದ ನಾವು ನಮ್ಮ ಸ್ಟೆಥೋಸ್ಕೋಪನ್ನೂ ಮತ್ತು ಬಿಳಿಯ ಕೋಟಿನ ಪಾಕೀಟೆಂಬ ಬತ್ತಳಿಕೆಯಲ್ಲಿ ಮಂಡಿ ಕುಟ್ಟುವ ಸಣ್ಣ ಸುತ್ತಿಗೆ, ಒಂದೆರಡು ಅಡ್ರಿನಲಿನ್‌ನ ವಯಾಲ್ ಎಲ್ಲವನ್ನೂ ತೆಗೆದುಕೊಂಡು ಹೊರಡುತ್ತಿದ್ದೆವು. ನಮ್ಮ ಅದೃಷ್ಟಕ್ಕೆ ಈ ಸೀರಿಯಸ್ ಕೇಸು ಸ್ಪೆಷಲ್ ವಾರ್ಡು ಅಥವಾ ಐಸಿಯುನಲ್ಲಾಗಿದ್ದರೆ ಅಥವಾ ನಮ್ಮ ಜತೆ ರಾತ್ರಿಪಾಳಿಯಲ್ಲಿ ಸ್ವಲ್ಪ ಚೆಂದಾದ ಲೇಡಿ ಡಾಕ್ಟರೇನಾದರೂ ಡ್ಯೂಟಿಯ ಮೇಲಿದ್ದರೆ, ಆಗ ನಮ್ಮ ಜತೆ ಈ ಹೆಜಿಮೊನಿಯಲ್ಲಿ ನಮಗಿಂತ ಒಂದು ಮೆಟ್ಟಿಲು ಮೇಲಿದ್ದ ಪೀಜೀಗಳೂ ನಮ್ಮ ಜತೆ ಹೊರಡುತಿದ್ದರು. ’ಗುರೂ ಹೋಗಿ ಸರ್ಟಿಫ಼ೈ ಮಾಡಿ ಬಂದುಬಿಡು. ಈ ಸಾವು ಅನ್ನೋದು ಯಾರಿಗೆ ಬರೋಲ್ಲ, ಹೇಳು’ ಎಂದು ಬುದ್ಧರಾಗುತ್ತಿದ್ದ ಈ ನಮ್ಮ ಪೀಜೀಗಳಿಗೆ ಈ ಲಲನಾಮಣಿಗಳಿದ್ದ ಕ್ಷಣ ’ಕಾರ್ಡಿಯಾಕ್ ಅರೆಸ್ಟ್’ನ ಪೆಥೋಫ಼ಿಸಿಯಾಲಜಿ ಇದ್ದಕ್ಕಿದ್ದ ಹಾಗೆ ನೆನಪಿಗೆ ಬಂದು ಎಂತಹ ’ಅರೆಸ್ಟ್’ ಆದರೂ ರೈಟ್ ಟೈಮ್ ಮತ್ತು ರೈಟ್ ಪ್ಲೇಸಲ್ಲಿ ಆದರೆ ಹೇಗೆ ಉಳಿಸಿಬಿಡಬಹುದೆಂದು ಪಾಠಹೇಳಿಕೊಡುವ ಬೃಹಸ್ಪತಿಗಳಾಗಿಬಿಡುತ್ತಿದ್ದುದನ್ನು ನಾವು ಬಾಯಿಬಿಟ್ಟುಕೊಂಡು ನೋಡುತ್ತಿದ್ದೆವು. ಹೊಸಾ ವೈದ್ಯರುಗಳಾದ ನಾವು ಇಂತಹ ಸಮಯದಲ್ಲಿ ಯಾರು ಸಿಕ್ಕರೂ ಸಾಕು ಎಂದು ಕರೆದುಕೊಂಡು ಹೊರಡುತ್ತಿದ್ದೆವು.

ಒಂದು ಇಂತದೇ ರಾತ್ರಿ. ಸ್ಪೆಷಲ್ ವಾರ್ಡಿನಲ್ಲಿ ಯಾರೂ ರೋಗಿಗಳಿಲ್ಲದ, ಲೇಡಿಗಳು ಯಾರೂ ಡ್ಯೂಟಿಯಲ್ಲಿರದ ರಾತ್ರಿ. ನಾನೊಬ್ಬನೇ ಎಂಎಂಟೂಗೆ ಹೋಗಬೇಕಾದ ಪ್ರಸಂಗ ಬಂತು. ವಾರ್ಡ್ಬಾಯ್ ಓಬಳೇಶು ಬಂದು ’ಸಾರೂ, ಆ ನಾಲ್ಕನೇ ಬೆಡ್‌ನಲ್ಲಿದ್ದನಲ್ಲ, ವಡ್ದರಬಂಡದ ರಾಮುಲು, ಆತಗೆ ಉಸಿರು ಎಬ್ಬೆಬ್ಬಿ ಬರತಾಐದಂತೆ. ರುದ್ರಮ್ಮ ಸಿಸ್ಟರ್ ಓಗಿ ಡಾಕ್ಟ್ರನ್ನ ಬರ್ರನೆ ಕರಕಂಬಾ, ಅಂದ್ಲು.’ ಅಂದ. ನಾನು ನನ್ನ ಪೀಜೀ ಕಡೆ ನೋಡಿದಾಗ ಆತ ಹ್ಯಾರಿಸನ್ನಲ್ಲಿ ಕುತ್ತಿಗೆ ಹುಗಿದು ’ಗುರೂ, ನಾಳೆ ಕ್ಲಿನಿಕಲ್ ಸೆಮಿನಾರಿನಲ್ಲಿ ಮಲ್ಟಿಪಲ್ ಕ್ರೇನಿಯಲ್ ನರ್ವ್ ಪಾಲ್ಸಿ ಪ್ರೆಸೆಂಟ್ ಮಾಡ್ತಾ ಇದೀನಿ. ನೀ ಹೋಗ್ಬಾ. ಏನು ಹೆದರ್ಕೆ ಇಲ್ಲ. ಯು ಆರ್ ರೆಡಿ’ ಎಂದು ವಿಜಯೀಭವ ಎನ್ನುವಂತೆ ಆಶೀರ್ವದಿಸಿ ಕಳಿಸಿದ. ಸರಿ, ಎಂದು ನಾ ಹೊರಡಲು ಸಿದ್ಧನಾದೆ.

ಮೊದಲೇ ಹೇಳಿದ ಹಾಗೆ ಈ ಮೆಡಿಕಲ್ ವಾರ್ಡ್ ಇರುವುದು ಕ್ಯಾಶುಯಾಲ್‌ಟಿಯಿಂದ ಸುಮಾರು ಹತ್ತಿನಿಮಿಷದ ವಾಕ್. ಓಬಳೇಶು ನಮ್ಮನ್ನು ಹುಡುಕಿಕೊಂಡು ಬಂದಿದ್ದಾನೆ ಎಂದರೆ ನರ್ಸ್ ರುದ್ರಮ್ಮ ಸುಮಾರು ಬಾರಿ ಫ಼ೋನು ಮಾಡಿ ಲೈನು ಹತ್ತದೆ, ಕೊನೆಗೆ ಓಬಳೇಶುವನ್ನು ಕಳಿಸಿದ್ದಾರೆ. ಆಗ ತಾನೆ ತಿಂದ ಬೀಡಾದಿಂದ ಕೆಂಪಾದ ನಾಲಿಗೆಯನ್ನು ತೋರಿಸುತ್ತಾ ಹಲ್ಲಿನ ಸಂದಿಗೆ ಕಡ್ಡಿ ಹಾಕುತ್ತಾ ’ಸಾರೂ, ಅರ್ಜೆಂಟಂತೆ’ ಎಂದು ಹೇಳುವ ಪರಿ ನೋಡಿದರೆ ಓಬಳೇಶು ನೇರವಾಗಿ ಕ್ಯಾಶುಯಾಲ್‌ಟಿಗೆ ಬಂದಿದಾನೆ ಎನ್ನುವಂತೆ ಕಾಣಲಿಲ್ಲ. ಹತ್ತು ನಿಮಿಷದ ನಡಿಗೆ, ಹತ್ತದ ಫ಼ೋನು, ಕೆಂಪುನಾಲಿಗೆಯ ಓಬಳೇಶು ಎಲ್ಲವನ್ನೂ ನೋಡಿದಾಗ ಆ ರಾಮುಲು ಬದುಕಿರುವ ಸಾಧ್ಯತೆ ಕಮ್ಮಿ ಎನಿಸಿದರೂ ಅಲ್ಲಿಗೆ ನಾ ಹೋಗಲೇ ಬೇಕಾಗಿರುವುದರಿಂದ ನನ್ನ ಪರಿಕರಗಳನ್ನೆಲ್ಲಾ ಸಿದ್ಧಮಾಡಿಕೊಳ್ಳುತ್ತಿದ್ದೆ. ಅಕಸ್ಮಾತ್ ಆ ರಾಮುಲು ಬದುಕಿದ್ದು ಉಸಿರಾಡಲು ಕಷ್ಟಪಡುತ್ತಿದ್ದರೆ, ಹೃದಯದ ಬಡಿತ ನಿಂತುಹೋಗಿದ್ದರೆ ನಾ ಏನು ಮಾಡಬೇಕು? ಕೃತಕ ಉಸಿರಾಟಕ್ಕೆ ವಾರ್ಡಲ್ಲಿ ಪರಿಕರಗಳಿರುತ್ತವೆಯೇ? ಅಡ್ರಿನಲಿನ್‌ನ ಡೋಸೆಷ್ಟು? ಎದೆಯನ್ನು ನಿಮಿಷಕ್ಕೆ ಎಷ್ಟುಬಾರಿ ಒತ್ತಬೇಕು? ಇದ್ದಕ್ಕಿದ್ದಂತೆ ಒಂದು ಜೀವದ ಅಳಿವು, ಉಳಿವು ನನ್ನ ಕೈಯಲ್ಲಿದೆ ಎಂದೆನಿಸಿ ತೊಡೆನಡುಗಲು ಶುರುವಾಯಿತು. ಆದರೂ ಓಬಳೇಶು ಮುಂದೆ ಅಧೀರನಾಗಬಾರದೆಂದು ಉಗುಳು ನುಂಗಿ ಬಚ್ಚಲಿಗೆ ಹೋಗಿ ’ಮೃತ್ಯುಂಜಯಾಯ ರುದ್ರಾಯ’ ಹೇಳಿಕೊಂಡು ’ಸರಿ ನಡಿ’ ಎಂದು ಹೊರಟೆ. ನಡಕೊಂಡು ಹೊರಟ ನನ್ನ ನೋಡಿ, ಓಬಳೇಶು ’ಇದೇನ್ಸಾಮಿ ಕಾಲ್ನಾಗ್ ನಡೀತಾ ಹೊರಟ್ಯಾ?’ ಎಂದು ನನ್ನ ನೋಡಿದ. ಆಸ್ಪತ್ರೆಯೊಳಗೆ ನಡೆಯದೇ ಇನ್ನು ಹೇಗೆ ಹೋಗುವುದು ಎಂದು ನಾ ಆಶ್ಚರ್ಯದಿಂದ ಆತನ ಮುಖ ನೋಡಿದಾಗ ಆತ ’ಅಯ್ ಬಾ ಇಲ್ಲಿ ಕೂತ್ಕ ಈ ಸೈಕಲ್ ಹಿಂದೆ. ಹಿಂಗ್ ವಾಲಾಡ್ಕಂದು ಹೋದ್ರೆ ಆ ರಾಮುಲು ಸತ್ತು ಸುಮ್ಮಕಾದ್ರೂ ಆ ಸಿಸ್ಟರ್ ನಿನ್ ಜಿವಾ ತಗೀತಾಳೆ’ ಎಂದು ಸೈಕಲ್‌ನ ಕ್ಯಾರಿಯರ್ ಮೇಲೆ ನನ್ನ ಕೂರಿಸಿಕೊಂಡು ಆಸ್ಪತ್ರೆಯ ಕಾರಿಡಾರಿನಲ್ಲಿ ಸೈಕಲ್ಲನ್ನು ಜುಂಯ್ ಎಂದು ಪೆಡಲಿಸಿದ. ನಾನು ನನ್ನ ಕೋಟು, ಹೆಗಲಮೇಲಿನ ಸ್ಟೆಥೋಸ್ಕೋಪು ಮತ್ತು ನೂರಾ ಇಪ್ಪತ್ತು ರೂಪಾಯಿ ಬೆಲೆಬಾಳುವ ಬಾಟಾ ಶೂಗಳೊಳಗಿದ್ದ ನನ್ನ ಕಾಲನ್ನು ಅಗಲಿಸಿ ಕೂತೆ. ಕೇವಲ ಎರಡು ನಿಮಿಷದಲ್ಲಿ ನಾವಿಬ್ಬರೂ ಎಂಎಂಟೂಲಿದ್ದೆವು. ಅಲ್ಲಿ ಸೈಕಲ್‌ಗೆ ಸ್ಟ್ಯಾಂಡ್ ಹಾಕುತ್ತಾ ’ಎಲ್ಲ ಸರೋದ್ಮೇಲೆ ನಂಗೇಳು. ವಾಪಸ್ ಕ್ಯಾಶ್ವಾಲ್ಟಿಗೆ ಡ್ರಾಪ್ ಹಾಕ್ತೀನಿ’ ಎಂದ. ಬೀಪರು, ಮೊಬೈಲುಗಳಿಲ್ಲದೇ ಆಗುವ ವಿಳಂಬವನ್ನು ಓಬಳೇಶು ನಿಭಾಯಿಸುತ್ತಿದ್ದುದು ತನ್ನ ಹರ್ಕ್ಯುಲಿಸ್ ಸೈಕಲ್ಲಿನಿಂದ. ಭಪ್ಪರೇ, ಎಂದುಕೊಂಡು ಒಳಹೋದೆ.

ನನ್ನ ನೋಡಿದತಕ್ಷಣ ರುದ್ರಮ್ಮ ’ಏನ್ ಡಾಕ್ಟ್ರೇ, ಈಗ ಬಂದ್ರಾ. ಬರ್ರಿ ಬರ್ರಿ. ಊರು ಸೂರೆ ಹೊಡೆದ ಮೇಲೆ ಕೋಟೆ ಬಾಗ್ಲು ಹಾಕಿದ್ರಂತೆ. ಮೋಹನ್‌ಬಾಬು ಸಿನಿಮಾನಾಗೆ ಪೋಲಿಸರು ಬರೋದು, ಈ ಎಂಎಂಟೂಗೆ ಡ್ಯೂಟೀ ಡಾಕ್ಟ್ರುಗಳು ಬರೋದು ಎಲ್ಲ ಒಂದೇ ನೋಡಿ. ಬರ್ರಿ ಬರ್ರಿ. ಇಲ್ಲಿ ಕೇಸ್ ಶೀಟಲ್ಲಿ ಒಂದು ಸೈನ್ ಹಾಕಿ ಸರ್ಟಿಫ಼ೈ ಮಾಡಿ ಹೋಗ್ರಲಾ. ಓಬಳೇಶು ಹೊರಟ ಐದು ನಿಮಿಷಕ್ಕೇ ಇತ್ತಕಡೆ ರಾಮುಲು ಕಲಾಸ್. ಹಾರ್ಟ್ ಫ಼ೈಲ್ ಆಗಿತ್ತಂತಲ್ಲ. ನೀವು ಬಂದಿದ್ರೂ ಏನ್ಮಾಡಕ್ ಆಗ್ತಿತ್ತು, ತಗೋರಿ. ಸರಿ ಈಗ ಭಡಾರನೆ ಮಾಡ್ರಿ. ನಾನು ಉಳಿದ ಏರ್ಪಾಟು ಮಾಡ್ಬೇಕು. ಈ ಟೈಮಲ್ಲಿ ಯಾರು ಬಾಡಿ ತಗಂಡೋಗ್ತಾರೆ? ಓಬಳೇಶು, ಆ ಟ್ಯಾಕ್ಸಿ ಬಾಬೂ ಐದನಾ ನೋಡು. ಕೊಂಚ ರೊಕ್ಕಾ ಹೆಚ್ಚುಕಮ್ಮಿ ಮಾಡ್ಕಂಡು ಒಂದು ಟ್ರಿಪ್ ಹೊಡೀತಾನ ಕೇಳ್ಕಂಬ. ಆಕಡೀಂದ ಬರಬೇಕಾದ್ರೆ ಬೆಳಗ್ಮುಂಜಾನೆ ಗಿರಾಕಿಗಳು ಸಿಗ್ಬೌದು ಅಂತ ಏಳು. ಸಿಸ್ಟರ್ ರುದ್ರಮ್ಮ ಏಳಿದ್ರು ಅಂತ ಏಳು ಓಗಲೇ. ಬೇಗ ಹೋಗ್ಲೇ ಮಂಗ. ಅಸಲು ನಯಾಪೈಸಾ ಉಪಯೋಗಿಲ್ಲ. ಉಂಬಾಕಿಲ್ಲದಿದ್ರೂ ಸೈ ಹಲ್ಲಿಗೆ ಕಡ್ಡೀ ಹಾಕ್ತಾ ನಿಂತಿರ್ತೈತೆ’ ಎಂದು ಓಬಳೇಶುವನ್ನು ಡ್ರೈವರ್ ಬಾಬುವನ್ನು ಹುಡುಕಲು ಕಳಿಸಿ ಇನ್ನೂ ಏನು ಮಾಡುತ್ತಾ ನಿಂತಿದ್ದೀಯಾ ಎನ್ನುವಂತೆ ನನ್ನ ನೋಡಿದಳು.

ನಾನು ಇಲ್ಲಿ ಮಾಡುವುದು ಇಲ್ಲಿ ಏನೂ ಉಳಿದಿಲ್ಲ ಎನ್ನುವುದು ನನಗೆ ಖಾತ್ರಿಯಾಯಿತು. ಪರದೆಗಳಿಂದ ಮುಚ್ಚಿದ್ದ ರಾಮುಲುವಿನ ಹಾಸಿಗೆಯ ಹತ್ತಿರ ಒಂದು ಪೆನ್‌ಟಾರ್ಚ್, ಸ್ಟೆಥೋಸ್ಕೋಪ್ ತೆಗೆದುಕೊಂಡು ನಿಧಾನವಾಗಿ ಹೋದೆ. ರೋಗಿಯನ್ನು ಪರೀಕ್ಷಿಸಿ ಜೀವ ಕೊಂಚವಾದರೂ ಇದೆ ಎಂದು ನನಗನಿಸಿದರೆ ಉಳಿಸುವ ಎಲ್ಲ ಪ್ರಯತ್ನವನ್ನು ಮಾಡಬೇಕಾದ, ಇಲ್ಲವಾದಲ್ಲಿ ’ಸತ್ತಿದ್ದಾನೆ’ ಎಂದು ಷರಾ ಬರೆದು ಸಹಿಹಾಕುವ ಕ್ರಿಯೆಯನ್ನು ಯಾರ ಸಹಾಯವೂ ಇಲ್ಲದೇ ಒಬ್ಬನೇ ಮಾಡುತ್ತಿದ್ದುದು ಅದೇ ಮೊದಲು. ಅಳುಕಳುಕಿನಿಂದಲೇ ನಿಧಾನವಾಗಿ ಪರದೆ ಸರಿಸಿ ಒಳಗೆ ಹೋದೆ. ಶಾಂತವಾಗಿ ಮಲಗಿದ್ದ ರಾಮುಲು. ಅರೆನಿಮೀಲಿತ ಕಣ್ಣುಗಳು, ಕೊಂಚವೇ ತೆರೆದ ಬಾಯಿ, ಕಟವಾಯಿಯಲ್ಲಿ ಕೊಂಚ ಜೊಲ್ಲು ಒಸರುತ್ತಿತ್ತು. ಕೆಳತುಟಿಯ ಬಲಭಾಗದಲ್ಲಿ ಕೊಂಚ ರಕ್ತ-ಸಾಯುವ ಕಾಲಕ್ಕೆ ನೋವಿನಿಂದ ತುಟಿಕಚ್ಚಿರಬಹುದೇನೋ ಎನ್ನಿಸಿತು. ಜೀವವಿರುವ ಯಾವ ಸೂಚನೆಯೂ ಕಾಣಲಿಲ್ಲ. ಆದರೂ, ಸ್ಟೆಥೋಸ್ಕೋಪನ್ನು ಆತನ ಎದೆಯ ಮೇಲೆ ಇಟ್ಟು ಕೇಳಲು ಪ್ರಯತ್ನಿಸಿದೆ. ಲಬ್-ಡಬ್ ರಾಮುವಿನ ಎದೆಬಡಿತವೋ ಇಲ್ಲ ನನ್ನದೋ? ಸಣ್ಣಗೆ ಸಿಳ್ಳಿನಂತೆ ನನ್ನ ಕಿವಿಯಲ್ಲಿ ಕೇಳುತ್ತಿರುವುದು ಉಸಿರೇ? ಸುಮ್ಮನೇ ಆತನನ್ನೇ ನೋಡುತ್ತಾ ನಿಂತೆ. ಸತ್ತವನನ್ನು ಸತ್ತಿದ್ದಾನೆ ಎಂದು ಪ್ರಮಾಣೀಕರಿಸಿ ಹೇಳುವುದು ಹೇಗೆ? ಹಾ. ಕಣ್ಣಿನ ಪಾಪೆಗಳಿಗೆ ಬೆಳಕು ತೋರಿಸಿ, ಅವು ಕುಗ್ಗುತ್ತದಾ ನೋಡುವುದು. ಸರಿ, ಎಂದು ಜೇಬಿನಲ್ಲಿದ್ದ ಪೆನ್‌ಟಾರ್ಚನ್ನು ರಾಮುಲುವಿನ ಕಣ್ಣಿಗೆ ತೋರಿಸಿದೆ. ಉಹೂ, ಏನೇನೂ ಇಲ್ಲ.
’ಏನ್ನೋಡ್ತಾ ಇದೀರ್ರೀ ಡಾಕ್ಟ್ರೇ. ಆತ ಸತ್ತಿದ್ದಾನೆ. ಇಲ್ಲಿ ಸರ್ಟಿಫ಼ೈ ಮಾಡಿ. ನಾ ಎಲ್ಲ ಮುಂದಿಂದು ಏರ್ಪಾಟು ಮಾಡ್ತೀನಿ’ ಎಂದು ನನ್ನ ಮುಂದೆ ಒಂದು ಕೇಸ್ ಪೇಪರನ್ನು ಹಿಡಿದಳು, ರುದ್ರಮ್ಮ. ನಾನು ಸಹಿ ಹಾಕಿ ಅಲ್ಲಿಂದ ಹೊರಟೆ. ಓಬಳೇಶು ಡ್ರೈವರ್ ಬಾಬುವನ್ನು ಹುಡುಕುವುದಕ್ಕೆ ಹೋಗಿದ್ದರಿಂದ ನಾನು ಹತ್ತು ನಿಮಿಷ ವಾಕ್ ಮಾಡಬೇಕಾಯಿತು.

ವಾಪಸ್ಸು ಬಂದು ಡ್ಯೂಟಿ ರೂಮಿನಲ್ಲಿ ಮಲಗಲು ಪ್ರಯತ್ನ ಮಾಡಿದೆ. ಏನೇನೋ ಕೆಟ್ಟಕೆಟ್ಟ ಕನಸುಗಳು, ರಾಮುಲು ಕನಸಲ್ಲಿ ಬಂದು ’ಸಾರೂ’ ಎಂದಂತೆ. ನಾನು ಆತನ ಹೃದಯವನ್ನು ಒತ್ತಿಒತ್ತಿ ಉಳಿಸಿದಂತೆ. ಆತ ಎದ್ದು ’ನಿಮ್ಮಿಂದ ತುಂಬಾ ಉಪ್ಕರ ಆತು’ ಎಂದಂತೆ, ಅರೆಬರೆ ನಿದ್ದೆ. ಅರೆಬರೆ ಎಚ್ಚರ. ಮೊದಲ ಸಾವು, ಮೊದಲ ನಿರಾಸೆ.
ಮಾರನೆಯ ದಿನಾ ಎದ್ದು ಅಲ್ಲೇ ಕ್ಯಾಶುಯಾಲ್‌ಟಿಯಲ್ಲಿದ್ದ ನಲ್ಲಿಯಲ್ಲಿ ಮುಖ ತೊಳೆದು, ಹಲ್ಲುಜ್ಜಿ ರೌಂಡ್ಸಿಗೆ ರೆಡಿಯಾಗುತ್ತಿರಬೇಕಾದರೆ ಹೊರಗೆ ಕಾರಿಡಾರಿನಲ್ಲಿ ಓಬಳೇಶು ಅನುಮಾನಾಸ್ಪದವಾಗಿ ಓಡಾಡುತ್ತಿದ್ದುದು ಕಾಣಿಸಿತು. ಡ್ರೈವರ್ ಬಾಬು ಜತೆ ಬೀಡಿ ಸೇದುತ್ತಾ ಪದೇ ಪದೇ ನನ್ನ ಕಡೆ ನೋಡುವುದು, ಏನೋ ಗುಸುಗುಸು ಮಾತಾಡಿಕೊಂಡಂತೆ ಕಾಣಿಸಿತು. ನನಗೇನೋ ಅನುಮಾನವಾಗಿ ಓಬಳೇಶುವಿನ ಹತ್ತಿರ ಹೋಗಿ ’ಏನಾರ ವಿಷಯ ಇದೆಯಾ?’ ಎಂದು ಕೇಳಿದೆ. ಓಬಳೇಶು ನನ್ನ ನೋಡಿ ಕಣ್ಣು ಹೊಡೆದು ’ನೀ ರೌಂಡ್ಸ್ ಮುಗ್ಸು, ಆಮೇಗೆ ಹೇಳ್ತೀನಿ’ ಎಂದ. ನನ್ನ ಹತ್ತಿರ ಗುಟ್ಟು ಮಾಡುವುದು ಓಬಳೇಶುವಿಗೇನಿದೆ ಎನ್ನಿಸಿತು. ’ಏನು ಅಂತ ಹೇಳೋ ಮಾರಾಯ’ ಎಂದು ಕೊಂಚ ಬೇಸರಿಸಿಕೊಂಡೇ ಕೇಳಿದೆ.

ಒಂದು ಕ್ಷಣ ಆಕಡೆ ಈಕಡೆ ನೋಡಿ ಯಾರೂ ಇಲ್ಲ ಎನ್ನುವುದನ್ನು ದೃಢಪಡಿಸಿಕೊಂಡು ಬಂದು ಕಿವಿಯಲ್ಲಿ ’ಸಾರೂ. ರಾಮುಲು ಸತ್ತಿಲ್ಲ, ಸಾರೂ.’ ಎಂದ. ನನಗೆ ಎದೆ ಧಸಕ್ಕೆಂದಿತು. ನಾನು ಸತ್ತ ಎಂದು ದೃಢೀಕರಿಸಿದ ಮೊಟ್ಟಮೊದಲ ರೋಗಿ ಸತ್ತೇ ಇಲ್ಲ ಅಂದರೆ. ಆದರೂ ಸ್ವಲ್ಪ ಧೈರ್ಯ ತೆಗೆದುಕೊಂಡು ’ಏನಯ್ಯ, ಏನ್ಮಾತಾಡ್ತಾ ಇದೀ. ನಾನೇ ಕಣ್ಣಾರೆ ನೋಡಿದ್ದೀನಿ’ ಎಂದೆ. ಮತ್ತೆ ಮತ್ತೆ ಹಿಂದಿನ ರಾತ್ರಿ ನೋಡಿದ್ದ ರಾಮುಲುವಿನ ಮುಖವನ್ನು ನೆನಪಿಸಿಕೊಳ್ಳಲು ಪ್ರಯತ್ನ ಮಾಡಿದೆ. ಕಿವಿಯಲ್ಲಿ ಲಬ್‌ಡಬ್, ಸುಂಂಯ್, ಗೊರಗೊರ ಧ್ವನಿಗಳು ಅನುರಣಿತವಾದವು. ಓ ದೇವರೇ.. ಎಂಥಾ ಕೆಲಸವಾಯಿತು? ಕಾಯಿಲೆ ಕಂಡುಹಿಡಿಯುವುದರಲ್ಲಿ ತಪ್ಪು ಮಾಡಿದರೆ ಪರವಾಗಿಲ್ಲ. ಆದರೆ, ಸಾವನ್ನೇ ಗುರುತಿಸಹೋದನಲ್ಲ. ಎಂಥ ಕಲಿಸಿದ್ದಾರೆ, ಮೆಡಿಕಲ್ ಕಾಲೇಜಿನಲ್ಲಿ. ಹೌದು ನನಗೆ ಕೈಕೊಟ್ಟಿದ್ದು ಆ ಪಾಪೆಯೇ. ಆ ಸಣ್ಣ ಬೆಳಕಿನ ಕೋಲಿನಲ್ಲಿ ಅದು ಹಿಗ್ಗುತ್ತದೋ, ಕುಗ್ಗುತ್ತದೋ ಯಾರಿಗೆ ಗೊತ್ತಾಗುತ್ತದೆ?

’ಇಲ್ಲ, ಸಾರೂ. ನೀನು ಬಂದು ಪರೀಕ್ಸೆ ಮಾಡಿ ಓದ್ಯಾ. ರುದ್ರಮ್ಮಾ ಬಂದು ಬಾಬೂ ಗಾಡಿ ತಗಂಬಾ ಅಂತ ನಂಗೆ ಹೇಳ್ತಾ, ನಾ ಓಗಿ ಬಾಬೂನ ಕರಕಂಬಂದ್ನಾ, ಬಾಬೂ ಬಂದು ಏಮ್ರಾ ಓಬ್ಳೇಶು ಬಾಡಿ ಇಂಕಾ ವಾರ್ಮ್ ಉಂದಿ ಅಂದ್ನಾ, ನಂಗೂ ಏಕ್‌ದಂ ಅನ್ಮಾನ ಸುರು ಆಗ್ಬುಡ್ತು. ಆದ್ರೆ, ರುದ್ರಮ್ಮೋರು ನಮ್ಮಿಬ್ರಿಗೂ ಬೈದು ಕರ್ಕಂಡು ಹೋಗ್ರಲೇ, ನಿಮ್ದೊಂದು ಎಂದಿರತನ ಇದ್ದಿದ್ದೇ ಅಂತ ನಂಗೂ ಬಾಬೂಗೂ ಚುಪ್ ಮಾಡ್ಸಿ ಕಳಿಸ್ಬಿಟ್ರು. ಬಾಬೂನೇ ಕೇಳಿ, ‘ಏ ಬಾಬೂ ಇಕ್ಕಡ ರಾರೇ ರಾ’ ಎಂದು ಬಾಬೂನ ಕರೆದ. ಹೊರಗೆ ಬೀಡಿಯ ಹೊಗೆಯಿಂದ ವರ್ತುಲಾಕಾರದ ಧೂಮಗೋಳಗಳನ್ನು ರಚಿಸುವುದರಲ್ಲಿ ತಲ್ಲೀನನಾದ ಬಾಬು ಬೀಡಿಯ ಬೆಂಕಿಯನ್ನು ಅಲ್ಲೇ ಇದ್ದ ಕಂಬಕ್ಕೆ ಒತ್ತಿ, ಉಳಿದ ಮೋಟನ್ನು ಕಿವಿಯ ಮೇಲಿಟ್ಟುಕೊಂಡು ನಿರ್ವಾತದಲ್ಲಿ ಸೃಷ್ಟಿಯಾಗಿದ್ದ ತನ್ನದೇ ಧೂಮಕಲೆಯನ್ನು ತಾನೇ ನಿರ್ನಾಮ ಮಾಡಿ ನಮ್ಮಬಳಿ ಬಂದ.

’ಔನ್ ಸಾರೂ. ಅಸಲು ನೀ ಎದಕ್ಕೆ ರಾಮುಲು ಸತ್ತ ಅಂದ ಹೇಳ್ದಿ ಅಂತ ನಂಗರ್ಥವೇ ಅಗ್ಲಿಲ್ಲ. ಇಂಥ ಕೇಸನ್ನ ನನ್ನ ಸರ್ವೀಸಲ್ಲಿ ಒಂದೆರಡು ಸಾರಿ ನೋಡಿದೀನಿ. ಆದರೆ, ಈ ಕೇಸೇ ಬೇರೆ. ಮೈಕೈಯೆಲ್ಲ ಬೆಚ್ಚಗೆ ಇತ್ತು ಅಂತ ರಾಮುಲು ಹೆಡತೀಗೆ ಸೂಚ್ನೆ ಗೊತ್ತಾದ ತಕ್ಷಣ ಕಾರ್ನಾಗೇ ಮೈಕೈ ಉಜ್ಜಕ್ಕೆ ಶುರುಮಾಡಿದಳು. ತಕ್ಷಣ ರಾಮುಲು ಎರ್ರಿತಾತಾ ತನ ಬಲಗೈ ಮೇಲೆತ್ತಿದ. ನಾ ಇದೇ ಎರ್ಡು ಕಣ್ಣಾಗೇ ನೋಡ್ದೇ. ಆಮೇಗೆ ರಾಮುಲು ತಮ್ಮ, ತಂಗೀ ಎಲ್ರೂ ಗಾಡೀನ ಓಪಿಡೀಗ್ ವಾಪಸ್ ತಿರುಗ್ಸು ಬಾಬೂ ಅಂದರು. ಆದ್ರೆ ಆಯಮ್ಮ ಮಾತ್ರ ಸತ್ರೂ ಸೈ ಮತ್ತೆ ಓಪಿಡಿ ಮಾತ್ರ ಬೇಡ. ಹಟ್ಯಾಗೇ ಯಾರೋ ಹಕೀಮನ್ನ ಕರ್ಸಣ, ನೀ ಬೇಗ್ನಡಿ ಅಂತು. ನಾ ಸೀದಾ ಗಾಡೀನ ಹಟ್ಟೀಗೆ ಕರಕೊಂಡು ಹೋಗಿ ಅವನ್ನ ಬಿಟ್ಟು ಅಂಗೇ ವಾಪಸ್ ಬರ್ತಾ ರಾಮುಲು ತಮ್ಮನ್ನ ಹಕೀಮ್ ಭೈ ಮನೀತನ ಡ್ರಾಪ್ ಹಾಕ್ಬಂದೆ. ಆಯಪ್ಪ ನಮಜ಼್ ಮುಗಿಸ್ಕಂಡು ಬರ್ತಾನಂತೆ. ಈ ಟೇಮಿಗೆ ರಾಮುಲು ಓಡಾಡ್ತಾ ಇರಬಹುದು.’ ಎಂದ, ತನ್ನ ಹಳೇ ಫ಼ೇವರ್ ಲ್ಯೂಬಾ ನೋಡುತ್ತಾ.

ನನಗೆ ಜಂಘಾಬಲವೇ ಉಡುಗಿಹೋದಂತಾಯಿತು. ನಮ್ಮ ಪ್ರೊಫ಼ೆಸರರಿಗೆ ವಿಷಯವೇನಾದರೂ ಗೊತ್ತಾದರೆ ಆ ರಾಮುಲು ಬದುಕಿದ್ದಾನೋ ಇಲ್ಲವೋ ಗೊತ್ತಿಲ್ಲ, ನಾನಂತೂ ಉಳಿಯುವುದಿಲ್ಲ ಎನ್ನಿಸಿತು. ನಾನೇ ಸಹಿಹಾಕಿದ ’ಟೈಮ್ ಆಫ಼್ ಡೆತ್-೨.೩೦ ಎ ಎಮ್’ ಎಂಬ ಮರಣೋಲ್ಲೇಖದ ಕೆಳಭಾಗದಲ್ಲಿ ನನ್ನ ಸಹಿ ಅದರ ಮುಂದಿದ್ದ ಎಂಬಿಬಿಎಸ್ ಎಂಬ ನಾಲ್ಕಕ್ಷರ ಎಲ್ಲವೂ ನನ್ನ ಕಣ್ಣ ಮುಂದೆ ಕುಣಿಯತೊಡಗಿತು. ’ಎದ್ದು ಕೂತ ಶವ, ವಡ್ಡರ ಬಂಡದಲ್ಲೊಂದು ಮಹಾ ಪವಾಡ’ ಎಂಬ ಬಳ್ಳಾರಿ ಪತ್ರಿಕೆಯ ಕಪ್ಪುಬಿಳುಪು ಹೆಡ್‌ಲೈನ್ ನನ್ನ ಕಣ್ಣ ಮುಂದೆ ಕುಣಿದಾಡತೊಡಗಿತು. ಪ್ರೊಫ಼ೆಸರರು ಕಾಲೇಜಿನಿಂದ ಹೊರಗೆ ಹಾಕುವುದು, ಅಪ್ಪ ’ಕೆಲಸಕ್ಕೆ ಬಾರದವನ ತಗೊಂಬಂದು. ಒಂದು ಡೆಡ್ ಬಾಡೀನ ಗುರುತಿಸೋದಕ್ಕೆ ಆಗೋದಿಲ್ಲ ಅಂದರೆ ಇವನೆಂತ ಡಾಕ್ಟರು, ನಮ್ ವಿಷ್ಣುಮೂರ್ತಿ ಡಾಕ್ಟರು ಸತ್ತಿರೋರನ್ನ ಎಬ್ಬಿಸಿ ಕೂರಿಸ್ತಾರೆ. ಡಾಕ್ಟ್ರು ಅಂದರೆ ಹಂಗಿರ್ಬೇಕು, ಕೆಲವ್ರಿಗೆ ಹುಟ್ಟಿದಾಗ್ಲೇ ಕೈಗುಣ ಬಂದಿರುತ್ತೆ,’ ಎಂದು ಮೂದಲಿಸುವುದು ಎಲ್ಲವನ್ನೂ ನೆನೆಸಿ ’ಅಯ್ಯೋ ದೇವರೇ, ಎಂಥಾ ಕೆಲಸ ಮಾಡ್ಸಿಬಿಟ್ಟೆಯಪ್ಪಾ’ ಎಂದು ನೇರ ಎಮೆಮ್ ಟೂ ಗೆ ನರ್ಸ್ ರುದ್ರಮ್ಮ ಇನ್ನೂ ಡ್ಯೂಟಿಯಲ್ಲಿದ್ದಾರಾ ಅಂತ ನೋಡುವುದಕ್ಕೆ ಹೋದರೆ ಅಲ್ಲಿಯೂ ನಿರಾಶೆ ಕಾದಿತ್ತು. ಏನು ಮಾಡಲೂ ಗೊತ್ತಾಗದೇ ಸುಮ್ಮನೇ ರೂಮಿಗೆ ಬಂದು ರೂಂಮೇಟು ತ್ಯಾಗರಾಜನ ಹತ್ತಿರ ಹೀಗೀಗಾಯ್ತು ಎಂದು ಹೇಳಿಕೊಂಡು ನನ್ನಿಂದ ಆಗಿರಬಹುದಾದ ಒಂದೇ ಒಂದು ಸಣ್ಣ ತಪ್ಪಿನಿಂದ ನನ್ನ ಭವಿಷ್ಯ ಹೇಗೆ ಕರಾಳವಾಗಲಿದೆ ಎಂದು ಚಿತ್ರಕವಾಗಿ ವರದಿಯೊಪ್ಪಿಸಿ ಗಳಗಳ ಎಂದು ಅತ್ತುಬಿಟ್ಟೆ.

’ಛೆ, ಬಿಡ್ತು ಅನು ಗುರೂ. ಇಷ್ಟಕ್ಕೆಲ್ಲಾ ಯಾರಳ್ತಾರೆ’ ಎಂದು ಒಂದೆರಡು ಕ್ಷಣ ಗಂಭೀರವಾಗಿ ಯೋಚನೆ ಮಾಡಿ ’ನಡೀ, ನಾವೇ ಹೋಗಿ ನೋಡಿಕೊಂಡು ಬಂದುಬಿಡೋಣ’ ಎಂದ. ನಾನು ಸತ್ತ ಎಂದು ಹೇಳಿದ ವ್ಯಕ್ತಿ ಎದ್ದು ಕೂತಿದ್ದಾನೆ, ಅವನನ್ನು ನೋಡಲು ಹೋಗಿ ಬರುವುದು ಎಂದರೆ? ಅರ್ಥವಾಗಲಿಲ್ಲ. ಒಂದು ಕ್ಷಣ ಯೋಚಿಸಿದ ನಂತರ ಯಾಕಾಗಬಾರದು ಎನ್ನಿಸಿತು. ನಾನೇನು ನನ್ನ ಕೈಯಾರ ಯಾರನ್ನೂ ಸಾಯಿಸಲಿಲ್ಲವಲ್ಲ. ಆತ ಇನ್ನೂ ಬದುಕಿದ್ದಾನೆ ತಾನೆ. ಬದುಕಿದ್ದರೆ ಹೋಗಿ ಕೈಹಿಡಕೊಂಡು ’ನನ್ನ ತಪ್ಪಾಯಿತಪ್ಪಾ’ ಎಂದು ಕೇಳಿಬಿಡುವುದು. ಇನ್ನು ಮುಂದೆ ಹುಷಾರಾಗಿರುತ್ತೀನಿ ಎಂದು ಹೇಳುವುದು. ತ್ಯಾಗರಾಜ ಹೇಳುತ್ತಿರುವುದರಲ್ಲಿ ಏನೂ ತಪ್ಪಿಲ್ಲ ಎನಿಸಿತ್ತು.

ಸೀದಾ ಹೋಗಿ ಕ್ಯಾಶುಯಾಲ್‌ಟಿಯ ಮುಂದೆ ಮತ್ತೆ ಬೀಡಿ ಸೇದುತ್ತಿದ್ದ ಡ್ರೈವರ್ ಬಾಬುವನ್ನು ಹಿಡಿದು ರಾಮುಲುವಿನ ಹಟ್ಟಿಗೆ ಕರಕೊಂಡು ಹೋಗು ಎಂದು ಗೋಗರೆದು ಐವತ್ತು ರೂಪಾಯಿ ಕೊಟ್ಟಾಗ ಆತ ಒಲ್ಲದ ಮನಸ್ಸಲ್ಲಿ ಒಪ್ಪಿದ. ಡವಡವಗುಡುತ್ತಿದ್ದ ಎದೆಯನ್ನು ಒತ್ತಿಹಿಡಿದು ತ್ಯಾಗರಾಜನ ಕೈಹಿಡಿದು ಕಾರಿಂದ ಇಳಿದು ಬಾಬೂ ತೋರಿಸಿದ ವಿಳಾಸ ಹುಡುಕಿಕೊಂಡು ಹೋದಾಗ ಮನೆಯ ಮುಂದೆ ಕುಡಿಕೆಯಲ್ಲಿ ಬೆಂಕಿ. ಒಳಗಿನಿಂದ ಜೋರಾಗಿ ಅಳು, ಪ್ರಲಾಪ. ಆ ಒಂದು ಕ್ಷಣ ಸದ್ಯ ರಾಮುಲು ಸತ್ತಿದ್ದಾನಲ್ಲ ಎಂದು ನನಗೆ ಒಂದು ರೀತಿ ವಿಚಿತ್ರವಾದ ಸಮಾಧಾನವಾಯಿತು. ಹತ್ತಿರ ಹೋಗೋಣವೇ ಬೇಡವೇ ಎಂದು ತ್ಯಾಗರಾಜನನ್ನು ಕೇಳಿದಾಗ ’ಇನ್ನೇನೂ ಯೋಚನೆಯಿಲ್ಲ. ಬಾ’ ಎಂದು ಕರಕೊಂಡು ಹೋದ.

ಮನೆಯ ಒಳಗೆ ಹೋಗಲು ನನಗೆ ಧೈರ್ಯವಿರಲಿಲ್ಲ. ಹೊರಗೆ ರಾಮುಲುವಿನ ತಮ್ಮ ಓಡಾಡುತ್ತಿದ್ದ. ಆತ ನನ್ನನ್ನು ಗುರುತಿಸಿದವನೇ ಹತ್ತಿರ ಬಂದ. ’ಓ ಇಲ್ಲೀಗೆ ಬಂದ್ರಾ ಸಾರೂ. ಎಂಥ ದೇವ್ರಂಥ ಮನಸು ನಿಂದು’ ಎಂದು ಸಾವಿನ ಮನೆಯಲ್ಲಿಯೂ ಕರೆದು ಕೂಡಿಸಿ ಟೀ ಕೊಟ್ಟು ಉಪಚಾರ ಮಾಡಿದ. ಏನೆಂದು ಕೇಳುವುದು, ಆತನನ್ನು. ಸತ್ತಿರುವನನ್ನು ಸತ್ತಿದ್ದಾನಾ ಎಂದು ದೃಢಪಡಿಸಿಕೊಂಡು ಹೋಗುವುದಕ್ಕೆ ಡಾಕ್ಟರುಗಳು ಬಂದಿದ್ದಾರೆ ಎಂದರೆ ನಮ್ಮನ್ನು ಶತಮೂರ್ಖರು ಎಂದು ತಿಳಕೊಳ್ಳುವುದಿಲ್ಲವೇ? ಸುಮ್ಮನೇ ಟೀ ಕುಡಿದು ಬಂದಾಯಿತು. ಸತ್ತಿದ್ದ ರಾಮುಲು ಎರ್ರಿತಾತನ ತರ ಕೈ ಎತ್ತಿದ ಎಂದು ನನ್ನ ಹತ್ತಿರ ಹೇಳಿದ ಬಾಬೂವನ್ನು ಹುಡುಕಿದೆ. ಆತ ಎಲ್ಲೆಲ್ಲೂ ಸಿಗಲಿಲ್ಲ.

ವಾಪಸ್ಸು ಬರುವಾಗ ನನಗಿಂತ ಈ ಒಂದು ವರ್ಷ ಸೀನಿಯರ್ರಾದ ತ್ಯಾಗರಾಜ, ಸತ್ತ ಮೇಲೆ ಎಷ್ಟು ಹೊತ್ತು ಮೈ ಇನ್ನೂ ಬೆಚ್ಚಗೆ ಇರುತ್ತದೆ. ಇದ್ದಕ್ಕಿದ್ದಂತೆ ಮೈ ಸೆಟೆದುಕೊಳ್ಳುವುದಕ್ಕೆ ರೈಗರ್ ಮಾರ್ಟಿಸ್ ಎನ್ನುತ್ತಾರೆ ಎನ್ನುವ ವೈದ್ಯಕೀಯ ವಿವರಣೆ (ರಾಮುಲು ಎರ್ರಿತಾತಾನ ರೀತಿ ಕೈ ಎತ್ತಿದ್ದು ಅದರಿಂದ ಹೌದೇ ಅಲ್ಲವೇ ಎನ್ನುವುದು ನನಗೆ ಇನ್ನೂ ಗೊತ್ತಾಗಿಲ್ಲ) ಇತರೇ ಎಲ್ಲವನ್ನೂ ವಿವರವಾಗಿ ಹೇಳಿದ್ದಷ್ಟೇ ಅಲ್ಲ, ಮುಂದಿನ ಮೂರು ತಿಂಗಳು ಹಾಸ್ಟೆಲ್ಲಿನ ಮೆಸ್ಸಿನಲ್ಲಿ ಯಾರೇ ಸಾವನ್ನು ಸರ್ಟಿಫ಼ೈ ಬಂದಿದ್ದನ್ನು ಮಾತಾಡುತ್ತಿದ್ದರೂ ’ಒಮ್ಮೆ ಗುರೂಗೆ ತೋರಿಸಬೇಕಿತ್ತು’ ಎಂದು ತಮಾಷೆ ಮಾಡುತ್ತಿದ್ದ.

***

ಈ ಸಾವನ್ನುವುದನ್ನು ದಿನಂಪ್ರತೀ ನೋಡುವ ನನ್ನಂತ ಕೆಲಸದಲ್ಲಿರುವವರು ಸಾವಿನ ಘನತೆಯ ಬಗ್ಗೆ ಎಂಥ ಗೌರವವಿಟ್ಟುಕೊಂಡಿದ್ದರೂ ಸಾವು ಹುಟ್ಟಿಸಬೇಕಾದಂತ ಹಲವು ತೀವ್ರತರ ಭಾವನೆಗಳಿಗೆ ಒಂದು ಮಟ್ಟಿನಲ್ಲಿ ಇನ್ಸುಲರ್ ಆಗಿಬಿಡುತ್ತೇವೆ. ಬಹಳಷ್ಟು ಬಾರಿ ರೋಗಿಯ ಜತೆ ನಮಗೆ ಯಾವ ಸಂಬಂಧ, ಸ್ನೇಹವಿರದೇ ಇರುವುದರಿಂದ ಆ ಸಾವು ನಮ್ಮ ಕೆಲಸದ ಇನ್ನೊಂದು ಭಾಗವಾಗಿ ಹೋಗುತ್ತದೆ. ಎಷ್ಟರಮಟ್ಟಿಗೆ ಎಂದರೆ ಕೆಮ್ಮು, ನೆಗಡಿಗೆ ಮಾತ್ರೆ ಬರೆದುಕೊಟ್ಟಷ್ಟೇ ನಿರಾಳವಾಗಿ ಡೆತ್ ಸರ್ಟಿಫ಼ೈ ಮಾಡಿ ಮುಂದಿನ ಕೆಲಸದಲ್ಲಿ ತೊಡಗಿಕೊಳ್ಳುತ್ತಿರುತ್ತೇವೆ. ಒಮ್ಮೆ ರಾತ್ರಿಪಾಳಿಯಲ್ಲಿದ್ದಾಗ ಬೆಳಿಗ್ಗೆ ಮೂರುಗಂಟೆಯ ಸಮಯದಲ್ಲಿ ಭಯಂಕರ ಹಸಿವಾಗಿ ಪೀಟ್ಜಾ ತಿನ್ನೋಣವೆಂದು ಸಿದ್ಧಮಾಡಿಕೊಳ್ಳುತ್ತಿದ್ದೆವು. ಪೀಟ್ಜಾದವ ಬಿಸಿಬಿಸಿ ಹಬೆಯಾಡುವ ಪೀಟ್ಜಾವನ್ನು ಬ್ರೇಕ್‌ರೂಮಿನಲ್ಲಿರಿಸಿ ಹೋಗಿದ್ದ. ಇನ್ನೇನು ಪೀಟ್ಜಾ ತುಂಡನ್ನು ಕೈಯಲ್ಲಿ ತೆಗೆದುಕೊಳ್ಳಬೇಕು ಎನ್ನುವಷ್ಟರಲ್ಲಿ ಮೇಲಿನ ವಾರ್ಡಿನಿಂದ ಯಾರಿಗೋ ಸೀರಿಯಸ್ ಎಂದು ಎಲ್ಲರ ಬೀಪರ‍್ಗಳೂ ಸದ್ದುಮಾಡಿದಾಗ ಎಲ್ಲರೂ ಅಲ್ಲಿಗೆ ಹೋಗಬೇಕಾಗಿ ಬಂತು. ಮೇಲೆ ಹೋದಾಗ ತೊಂಬತ್ತನಾಲ್ಕರ ಮುದುಕಿಯೊಬ್ಬಳಿಗೆ ಹೃದಯದ ಬಡಿತ ನಿಂತಿತ್ತು. ಏನೇ ಪ್ರಯತ್ನ ಮಾಡಿದರೂ ಆ ಮುದುಕಿ ಉಳಿಯಲಿಲ್ಲ. ಆ ಮುದುಕಿಯ ಕುಟುಂಬದವರೂ ಇದನ್ನು ನಿರೀಕ್ಷಿಸಿದ್ದರೆನಿಸುತ್ತದೆ. ಆ ಮುದುಕಿಯ ಸಾವಿನ ಸುದ್ದಿಯನ್ನು ಆಕೆಯ ಮಗಳಿಗೆ ಫ಼ೋನು ಮಾಡಿ ತಿಳಿಸಿದಾಗ ಆಕೆ ಆಸ್ಪತ್ರೆಯವರೇ ಎಲ್ಲ ವ್ಯವಸ್ಥೆಯನ್ನೂ ಮಾಡಬೇಕೆಂದೂ, ಫ಼್ಯೂನರಲ್ ಹೋಮಿನ ವಿಳಾಸ ಆಸ್ಪತ್ರೆಯ ರೆಕಾರ್ಡುಗಳಲ್ಲಿದೆಯೆಂದೂ, ಆಕೆ ಬೆಳಿಗ್ಗೆ ನೇರವಾಗಿ ಫ಼್ಯೂನರಲ್ ಹೋಮ್‌ಗೆ ಹೋಗುತ್ತೇನೆಂದೂ ಹೇಳಿದಳು. ನಾನು ನನ್ನ ಕೆಲಸ ಮುಗಿಸಿ, ಎಲ್ಲೆಲ್ಲಿ ಬೇಕೋ ಅಲ್ಲಲ್ಲಿ ಸಹಿ ಹಾಕಿ ಮತ್ತೆ ಎಮರ್ಜೆನ್ಸಿ ಡಿಪಾರ್ಟ್‌ಮೆಂಟಿಗೆ ಬಂದಾಗ ನನ್ನ ಬರವನ್ನೇ ಕಾಯುತ್ತಿದ್ದಂತೆ ಅಲ್ಲಿನ ನರ್ಸು ನನ್ನ ಕೈಯಿಗೆ ನಾಲ್ಕು ಹೊಸಾ ರೋಗಿಗಳ ಚಾರ್ಟನ್ನು ಕೊಟ್ಟಳು. ಮುಂದೆ ಕೌಂಟರಿನ ಮೇಲೆ ಕಾಣುತ್ತಿದ್ದ ಪೀಟ್ಜಾದ ಒಂದು ತುಣುಕನ್ನು ಕಚ್ಚಿ ತಿನ್ನುತ್ತಾ ನಾನು ಚಾರ್ಟಿನ ಮೇಲೆ ಕಣ್ಣಾಡಿಸತೊಡಗಿದೆ. ಆಗ ಇದ್ದಕ್ಕಿದಂತೆ ವಾರ್ಡನ್ನು ಸ್ವಚ್ಛಗೊಳಿಸುವ ಟಾಡ್ ಬಂದು ನನ್ನ ಕಡೆ ನೋಡಿ ’ನಾಚಿಕೆಯಾಗ್ಬೇಕು, ಡಾಕ್ ನಿನಗೆ. ಆ ಮುದುಕಿ ಸತ್ತು ಐದು ನಿಮಿಷವಾಗಿಲ್ಲ. ಕೈ ಕೂಡ ತೊಳಕೊಂಡಿದೀಯೋ ಇಲ್ಲವೋ. ಇಲ್ಲಿ ಬಂದು ಪೀಟ್ಜಾ ತಿಂತಾ ಇದೀಯಲ್ಲ. ಮನಸಾದರೂ ಹೇಗೆ ಬರುತ್ತೆ ನಿನಗೆ.’ ಎಂದು ಹೇಳಿ ಜೋರಾಗಿ ಅಳತೊಡಗಿದ. ಟಾಡ್ ಇಪ್ಪತ್ತೆರಡು ವರ್ಷದ ಯುವಕ. ಈ ಕೆಲಸಕ್ಕೆ ಸೇರಿ ಒಂದು ತಿಂಗಳಾಗಿತ್ತಷ್ಟೇ. ನನಗೆ ಈತ ಏನು ಹೇಳುತ್ತಿದ್ದಾನೆ ಎಂದು ಅರ್ಥವಾಗುವುದಕ್ಕೇ ಹತ್ತು ಸೆಕೆಂಡು ಬೇಕಾಯಿತು. ’ಸಾರಿ, ಟಾಡ್.’ ಎಂದೆ. ಆತ ಆಗತಾನೇ ಆ ಮುದುಕಿಯ ದೇಹವನ್ನು ಮಾರ್ಚುರಿಗೆ ಸಾಗಿಸಿ ಬಂದಿದ್ದನಂತೆ. ಮುದುಕಿಯ ಹೆಣದ ಜತೆ ಹತ್ತು ನಿಮಿಷಗಳನ್ನು ಕಳೆದ ಆತನಿಗೆ ಬೆಳೆದಿದ್ದ ಬಾಂಡಿಂಗ್‌ನ ತುಣುಕೂ ಆಕೆಯನ್ನು ಉಳಿಸಲು ಪ್ರಯತ್ನಪಟ್ಟ ನನಗೆ ಇಲ್ಲದೇ ಹೀಗೆ ಯಾವರೀತಿಯ ಭಾವನೆಯೂ ಇಲ್ಲದೇ ಪೀಟ್ಜಾ ತಿನ್ನುತ್ತಿರುವುದು ಆತನನ್ನು ವಿಚಲಿತಗೊಳಿಸಿತ್ತು. ಇದು ನನ್ನ ಮಟ್ಟಿಗೆ ಹತ್ತರ ನಂತರ ಬರುವ ಹನ್ನೊಂದನೆಯ ಸಾವು ಎಂದು ಟಾಡ್‌ಗೆ ಹೇಳಿ ಅರ್ಥಮಾಡಿಸುವುದಾದರೂ ಹೇಗೆ? ಟಾಡ್ ಜತೆ ಯಾವ ಮಾತಾಡಲೂ ಧೈರ್ಯವಾಗಲಿಲ್ಲ. ಆದರೆ, ಎಷ್ಟೇ ಗಟ್ಟಿ ಹೃದಯ ನನ್ನದು ಅಂದುಕೊಂಡಂತ ನನಗೂ ಅಂದು ಪೀಟ್ಜಾ ತಿನ್ನಲಾಗಲಿಲ್ಲ. ಅಂದಿನಿಂದ ಇಂದಿನವರೆಗೆ ನಾನು ಯಾವುದೇ ಕೆಲಸದಲ್ಲಿರಬೇಕಾದರೆ ಎಂಥ ವ್ಯಕ್ತಿ ಸತ್ತರೂ, ಒಂದು ನಿಮಿಷ ಮೌನವಾಗಿ ನಿಂತು ಬಂದು ಮುಂದಿನ ಕೆಲಸದಲ್ಲಿ ತೊಡಗುತ್ತೇನೆ. ಖಂಡಿತಾ ಪೀಟ್ಜಾ ತಿಂದಿಲ್ಲ.

ಅಕಾಲ, ಅನಿರೀಕ್ಷಿತ ಸಾವು ಎಂಥ ಗಟ್ಟಿ ಮನಸ್ಸಿನವನನ್ನೂ ವಿಚಲಿತಗೊಳಿಸಬಹುದು. ಆದರೆ, ಒಬ್ಬ ವ್ಯಕ್ತಿ ಏನು ಮಾಡಿದರೂ ಬದುಕುಳಿಯುವುದಿಲ್ಲ ಎಂದು ಗೊತ್ತಿದ್ದಲ್ಲಿ ಆತನನ್ನು ಮನೆಯವರ ಒತ್ತಾಯದಿಂದಲೋ ಅಥವಾ ಕಾನೂನಿಗೆ ಹೆದರಿಯೋ ಆ ವ್ಯಕ್ತಿಯನ್ನು ಉಳಿಸಬೇಕೆಂದು ಪ್ರಯತ್ನ ಮಾಡುತ್ತಿದ್ದಾಗ ಆ ಪ್ರಯತ್ನದ ಸಾರ್ಥಕತೆಯ ಬಗ್ಗೆ ಅನುಮಾನಬಂದು ಪ್ರಯತ್ನದ ತೀವ್ರತೆ ಹುಸಿಯಾಗುತ್ತದೆ. ನಾನು ಮೇಲೆ ಹೇಳಿದ ಮುದುಕಿಯ ವಿಷಯದಲ್ಲಿ ಆಕೆಯ ಸಾವು ಅವರ ಮನೆಯವರಿಗೂ ಅನಿರೀಕ್ಷಿತವಾಗಿರಲಿಲ್ಲ. ಆದರೆ, ಆಕೆಯ ಹೃದಯ ನಿಂತಾಗ ಆಕೆಯನ್ನು ಉಳಿಸುವ ಪ್ರಯತ್ನ ಮಾಡಬೇಡಿ ಎಂದು ಆಕೆಯಾಗಲೀ ಆಕೆಯ ಮನೆಯವರಾಗಲೀ ಎಲ್ಲೂ ಸೂಚನೆ ಕೊಡದೇ ಇದ್ದುದ್ದರಿಂದ ಕಾನೂನುಬದ್ಧವಾಗಿ ಆಕೆಯನ್ನು ಉಳಿಸುವ ಪ್ರಯತ್ನವನ್ನು ನಾವು ಮಾಡಲೇಬೇಕಾಗಿತ್ತು. ಯಾವುದೇ ರೋಗಿಗೆ ಇದು ಘನತೆಯ ಸಾವಲ್ಲ. ಆದರೂ ಎಷ್ಟೋ ಬಾರಿ ಈ ರೀತಿಯ ಕೃತಕ ಉಸಿರಾಟ, ಎದೆಗೂಡನ್ನು ಒತ್ತುವುದು, ಜೀವ ಉಳಿಸುವ ಔಷಧಿಗಳನ್ನು ಒಲ್ಲದ ಮನಸ್ಸಿನಿಂದ ರೋಗಿಗೆ ಕೊಡುವುದು- ಇಂಥಾವನೆಲ್ಲ ಪರಿಸ್ಥಿತಿಯ ಕೈಗೊಂಬೆಯಾಗಿ ಮಾಡಲೇಬೇಕಾಗುತ್ತದೆ. ಆಗ ಇದು ಪ್ರಯತ್ನಕ್ಕಿಂತ ಹೆಚ್ಚಾಗಿ ರಿಚುಯಲ್ ಆಗಿಬಿಡುತ್ತದೆ. ಈ ಮುದುಕಿಯ ವಿಷಯದಲ್ಲಿ ಆದದ್ದೂ ಹಾಗೆ. ನಾ ಆಕೆಯ ’ಸಾವಿನ ಕರೆ’ಗೆ ಓಗೊಟ್ಟು ಮೇಲೆ ಹೋದಾಗ ಅಲ್ಲಿದ್ದ ವೈದ್ಯಕೀಯ ಸಿಬ್ಬಂದಿ ಒಲ್ಲದ ಮನಸ್ಸಿನಿಂದ ಆಕೆಯ ಎದೆ ಒತ್ತುತ್ತಿದ್ದರು. ಒಂದು ಹಬೆಗಟ್ಟಿದ ಮಾಸ್ಕನ್ನು ಆಕೆಯ ಮುಖದ ಮುಂದೆ ಹಿಡಿದು ಆಕೆಯ ಶ್ವಾಸನಾಳಗಳು, ಶ್ವಾಸಕೋಶಗಳಿಗೆ ಜೀವವಾಯುವಿನ ಪೂರೈಕೆಯನ್ನು ತೋರಿಸಿದ್ದರು. ಇದಕ್ಕೆ ವೈದ್ಯಕೀಯ ಸ್ಲಾಂಗ್ ’ಹಾಲಿವುಡ್ ಕೋಡ್’ ಅಥವಾ ’ಸ್ಲೋ ಕೋಡ್’ (ಕೋಡ್ ಬ್ಲೂ ಅಂದರೆ ಯಾರದಾದರೂ ಹೃದಯ ಸ್ತಂಭನ ಆದಲ್ಲಿ ವೈದ್ಯಕೀಯ ಸಿಬ್ಬಂದಿ ಜೀವ ಉಳಿಸಲು ಕೈಕೊಳ್ಳುವ ಕ್ರಿಯೆ. ಇಲ್ಲಿ ಇದು ತೀರ ತೋರಿಕೆಯ ’ಕೋಡ್ ಬ್ಲೂ’ ಆಗಿರುವುದರಿಂದ ಇದು ಹಾಲಿವುಡ್ ಕೋಡ್) ವೈದ್ಯಕೀಯ ಸಿಬ್ಬಂದಿಯ ಮೇಲೆ ನಾ ಕಾನೂನು, ರೋಗಿಯ ಆಯ್ಕೆ- ಎಲ್ಲವುಗಳ ಬಗ್ಗೆ ದೊಡ್ಡ ಉಪನ್ಯಾಸ ಕೊಡಬಹುದು. ಆದರೆ, ಎಲ್ಲರಿಗೂ ಗೊತ್ತಿರುವ ಅನಿವಾರ್ಯ ಅಂತ್ಯವನ್ನು ನಾನಂತೂ ತಪ್ಪಿಸಲಾರೆನಲ್ಲ. ಆದ್ದರಿಂದ ಎಷ್ಟೇ ಬಾರಿ ನಾ ಇದನ್ನು ಒಪ್ಪದಿದ್ದರೂ ಈ ನಾಟಕದ ಪಾತ್ರಧಾರಿಯಾಗದೇ ಉಳಿಯಲಾಗಿಲ್ಲ.

ಹಾಗೆಂದು ಈ ಸಾವುಗಳು ನನ್ನನ್ನು ವಿಚಲಿತಗೊಳ್ಳಿಸಿಲ್ಲವೆಂದಲ್ಲ. ನಮ್ಮ ಬಳ್ಳಾರಿಯ ಪೀಜೀಗಳು ಹೇಳುತ್ತಿದ್ದ ಮಾತು ನೆನಪಾಗುತ್ತದೆ. ರಾಂಗ್ ಪರ್ಸನ್ ಅಟ್ ದ ರಾಂಗ್ ಟೈಮ್ ಅಂಡ್ ರಾಂಗ್ ಪ್ಲೇಸ್. ಅಂದರೆ ಅಕಾಲ, ಅನಿರೀಕ್ಷಿತ ಮರಣಗಳಾದಾಗ ಎಷ್ಟೋ ದಿನ ನಿದ್ರೆ ಬಾರದೇ ಒದ್ದಾಡಿದ್ದೇನೆ. ಒಮ್ಮೆ ಒಬ್ಬ ೨೩ ವರ್ಷದ ಭಾರತೀಯ ವಿದ್ಯಾರ್ಥಿ ಅಪಘಾತದಿಂದ ತೀವ್ರವಾಗಿ ಗಾಯಗೂಂಡು ಆಸ್ಪತ್ರೆಗೆ ಭರ್ತಿಯಾಗಿದ್ದ. ಆಗ, ನಾನು ಅನಿವಾರ್ಯವಾಗಿ ಉತ್ತರಪ್ರದೇಶದಲ್ಲಿರುವ ಆತನ ಕುಟುಂಬದವರೊಂದಿಗೆ ದುಭಾಷಿಯಾಗಿ ಮಾತನಾಡುವ ಸಂದರ್ಭ ಬಂದಿತು. ’ಡಾಕ್ಟರ್ ಸಾಬ್, ವಹಾಂ ಹಮಾರಾ ಕೋಯೀ ನಹೀ ಹೈ. ಉಸ್ಕೋ ಕ್ಯಾ ಹೋ ರಹಾ ಹೈ ಯೆ ಭೀ ಹಮೆ ನಹೀ ಮಾಲೂಮ್. ಉಸ್ಕಾ ಖಯಾಲ್ ರಖ್‌ನಾ’ ಎಂದು ಆತನ ತಾಯಿ ನನ್ನ ಹತ್ತಿರ ಹೇಳಿದಾಗ ನಾನು ನನಗೆ ಬರುವ ಹಿಂದಿಯಲ್ಲಿ ಆಕೆಯನ್ನು ಸಮಾಧಾನ ಮಾಡುತ್ತಿದ್ದೆ. ನಂತರ ಆ ವಿದ್ಯಾರ್ಥಿ ಸತ್ತಾಗ ಆಕೆಗೆ ಆತ ಸತ್ತ ವಿಷಯವನ್ನೂ ನಾ ಕಷ್ಟಪಟ್ಟು ತಿಳಿಸಿದ್ದೆ. ನನ್ನ ಕೆಲಸದಲ್ಲಿ ಕಾಣುವ ಸಾವುಗಳಿಗೆ ಎಂದೂ ಅಳದ ನಾನು ಅಂದು ಆ ತಾಯಿಯ ಜತೆ ಮಾತಾಡುವಾಗ ಬಿಕ್ಕಿಬಿಕ್ಕಿ ಅತ್ತಿದ್ದೆ. ಆ ಹುಡುಗನಿಗೆ ಆದ ಅಪಘಾತದ ಗಾಯಗಳು ತೀವ್ರವಾಗಿದ್ದು ಆತ ಬದುಕುಳಿಯುವ ಸಾಧ್ಯತೆಗಳೇ ಇರಲಿಲ್ಲ. ಮತ್ತು ಅದೇ ವಯಸ್ಸಿನವರ ಎಷ್ಟೋ ಸಾವನ್ನು ನಾ ನೋಡಿದ್ದೇನೆ. ಆದರೆ ಈ ಸಾವು ನ್ಯಾಯವಲ್ಲ ಎನಿಸಿದ್ದು ಒಂದು ವಿಚಿತ್ರ. ಇದು ಅಕಾಲ ಸರಿ, ಆದರೆ ತಪ್ಪಾದ ಸಮಯಕ್ಕಿಂತ ತಪ್ಪಾದ ಜಾಗ, ದೇಶದಲ್ಲಾದ ಸಾವು ಎಂದು ನನಗೆ ದುಃಖವಾಗಿತ್ತು. ಅಮೆರಿಕಾದಲ್ಲಿ ಭಾರತೀಯರು ಸಾಯಬಾರದು ಎಂಬ ನನ್ನ ನಂಬಿಕೆ ಯಾವ ಹೊಸಾ ಭಾರತೀಯರ ನಂಬಿಕೆಗಿಂತ ಬೇರೆಯಾಗಿರಲಿಲ್ಲ. ಎಲ್ಲೋ ಓದಿದ ನೆನಪು ’ಬದುಕಲು ಬೇಕಾದ ಅಮೆರಿಕಾ ಭಾರತೀಯರಿಗೆ ಸಾಯಲು ಬೇಡ.’ ಈ ಬಗ್ಗೆ ನನಗೆ ಇನ್ನೂ ಒಂದು ನಿರ್ಧಾರಕ್ಕೆ ಬರಲಾಗಿಲ್ಲ.

***

ನಮ್ಮ ವಿಶಿಷ್ಟ ಸಂಪ್ರದಾಯಗಳು ನಮ್ಮನ್ನು ಕೆಲವೊಮ್ಮೆ ವಿಪರೀತವಾದ ಫಜೀತಿಗೆ ತಂದಿಟ್ಟುಬಿಡುತ್ತವೆ. ತೀರಿಕೊಂಡವರ ದೇಹವನ್ನು ಅಂತಿಮ ದರ್ಶನಕ್ಕಾಗಿ ಒಂದು ಕಡೆ ಇಡುವುದು ಭಾರತದಲ್ಲಿ ಒಂದು ಸಂಪ್ರದಾಯ. ಅಮೆರಿಕಾದಲ್ಲಿಯೂ ಈ ಸಂಪ್ರದಾಯವಿದೆ. (ಇದು ಓಪನ್ ಅಥವಾ ಕ್ಲೋಸ್ಡ್ ಕ್ಯಾಸ್ಕೆಟ್ ಆಗಿರಬಹುದು). ಪಾಕಿಸ್ತಾನದಲ್ಲಿ ಈ ಸಂಪ್ರದಾಯ ಇದೆಯೋ ಇಲ್ಲವೋ ನನಗೆ ಗೊತ್ತಿಲ್ಲ. ಒಮ್ಮೆ ಆಸ್ಪತ್ರೆಯಲ್ಲಿ ಪಾಕಿಸ್ತಾನ ಮೂಲದ ಮಹಮ್ಮದ್ ಅಲಿ ಎಂಬಾತನೊಬ್ಬ ಸತ್ತ. ಆತ ಸತ್ತ ಸ್ವಲ್ಪ ಹೊತ್ತಿಗೆ ಆತನನ್ನು ನೋಡಲೆಂದು ಬಂದ ಆತನ ಮಗ ಅಲಿಯನ್ನು ನೋಡಿಕೊಳ್ಳುತ್ತಿದ್ದ ನರ್ಸಿನ ಹತ್ತಿರ ’ಇಲ್ಲಿ ಇಂಟರ್ನೆಟ್ ಕನೆಕ್ಷನ್ ಇದೆಯಾ?’ ಎಂದು ಕೇಳಿದ್ದನಂತೆ. ಯಾಕೆ, ಏನು ಎಂದು ಕೇಳದೆ ಆಸ್ಪತ್ರೆಯ ವೈ ಫ಼ೈ ಪಾಸ್‌ವರ್ಡನ್ನು ಕೊಟ್ಟಿದ್ದಾಳೆ ಆಕೆ. ಕೊಂಚ ಹೊತ್ತಿನ ನಂತರ ಅಲಿಯ ರೂಮಿಗೆ ಹೋದಳು. ಅಲಿಯ ಮಗ ಒಬ್ಬ ಒಂದು ಟ್ರೈಪಾಡಿನ ಮೇಲೆ ಕ್ಯಾಮ್‌ಕೊರ್ಡರನ್ನು ಇರಿಸಿ ಅದನ್ನು ಲ್ಯಾಪ್‌ಟಾಪಿಗೆ ಸಿಕ್ಕಿಸಿ ಅಲಿಯ ಮುಖವನ್ನು ಜ಼ೂಮ್ ಇನ್, ಜ಼ೂಮ್ ಔಟ್ ಮಾಡುತ್ತಿದ್ದನಂತೆ. ಈಕೆಗೆ ಏನಾಗುತ್ತಿದೆ ಎಂದು ಅರ್ಥವಾಗಿಲ್ಲ. ರೂಮಿಗೆ ಹೋದಾಗ ಆಕೆಗೆ ಮೊದಲು ಕಾಣಿಸಿದ್ದು ಹದಿನಾರಿಂಚಿನ ಸ್ಕ್ರೀನಿನಲ್ಲಿ ಕಾಣಿಸುತ್ತಿರುವ ಮಹಮ್ಮದ್ ಅಲಿಯ ಮುಖ. ಆಕೆಗೆ ಗೊಂದಲವಾದರೂ ಅದನ್ನು ತೋರಿಸಿಕೊಳ್ಳದೇ ಅಲಿಯ ಮಗನನ್ನು ನೋಡಿದಳಂತೆ. ಆತ, ಪಕ್ಕದಲ್ಲಿದ್ದ ಅಪ್ಪನ ಮುಖ ನೋಡದೇ ಕಂಪ್ಯೂಟರಿನ ಸ್ಕ್ರೀನಿನಲ್ಲಿದ್ದ ಅಲಿಯ ಮುಖ ನೋಡುತ್ತಿದ್ದನಂತೆ.

ಸೆಪ್ಟೆಂಬರ್ ೧೧ರ ನಂತರ ಮಹಮ್ಮದ್, ಅಹಮದ್, ರಜ಼ಾಕ್ ಎಂಬ ಹೆಸರುಗಳ ಬಗ್ಗೆ ಕೊಂಚ ಹೆಚ್ಚಾಗೇ ಸೂಕ್ಷ್ಮವಾಗಿರುವ ಅಮೆರಿಕನ್ ಮನಸ್ಸಿಗೆ ಇದು ನಾನಾ ಅರ್ಥಗಳನ್ನು ಉಂಟುಮಾಡಿದೆ. ಆಕೆ ಬಂದು ನನ್ನ ಹತ್ತಿರ ’ನಾವೀಗಲೇ ಪೋಲೀಸನ್ನು ಕರೆಸಬೇಕು’ ಎಂದಳು. ನಾನು ’ಏಕೆ?’ ಎಂದು ಕೇಳಿದಾಗ ಆಕೆ ’ಮಹಮದ್ ಅಲಿ ಸತ್ತು ಇನ್ನೂ ಹತ್ತು ನಿಮಿಷವಾಗಿಲ್ಲ. ಆತನ ಸಾವಿನ ಸುದ್ದಿ ಇಂಟರ‍್ನೆಟ್ಟಿನಲ್ಲಿ ಇದೆ.’ ಎಂದು ನನ್ನ ಹತ್ತಿರ ಬಂದು ಕಿವಿಯಲ್ಲಿ ’ಈತ ದೊಡ್ಡ ವ್ಯಕ್ತಿ ಇರಬಹುದು, ಯು ನೋ’ ಎಂದಳು, ಕಣ್ಣು ಮಿಟುಕಿಸಿ. ನಾನು ಇಲ್ಲೇನೋ ಎಡವಟ್ಟಾಗಿದೆ ಎಂದುಕೊಂಡು ಹೋಗಿ ಅಲಿಯ ಮಗನನ್ನು ವಿಚಾರಿಸಿದಾಗ ಆತ ತನ್ನ ಲ್ಯಾಪ್‌ಟಾಪಿನಲ್ಲಿ ಸ್ಕೈಪ್ ಮೂಲಕ ಅಲಿಯ ಮುಖವನ್ನು ಇಸ್ಲಾಮಾಬಾದಿನಲ್ಲಿದ್ದ ಆತನ ಕುಟುಂಬದವರಿಗೆ ಕೊನೆಯ ಬಾರಿಗೆ ತೋರಿಸುತ್ತಿರುವ ವಿಷಯವನ್ನು ಹೇಳಿದ. ನಾನು ಆ ನರ್ಸು ಮತ್ತು ಆಸ್ಪತ್ರೆಯಲ್ಲಿನ ಇನ್ನಿತರ ಸಿಬ್ಬಂದಿಯನ್ನು ಕರಕೊಂಡು ಹೋಗಿ ಮಹಮದ್ ಅಲಿಯ ಮಗ ಆತನ ಪಾಕಿಸ್ತಾನದ ವಿಸ್ತೃತ ಕುಟುಂಬಕ್ಕೆ ಮಾಡಿಸುತ್ತಿರುವ ಅಂತಿಮ ದರ್ಶನದ ಬಗ್ಗೆ ವಿವರವಾಗಿ ತಿಳಿಸಿ, ಸತ್ತಿದ್ದ ಮಹಮದ್ ಅಲಿಯನ್ನು ಉಗ್ರವಾದಿಯಾಗುವುದರಿಂದ ಬಚಾವ್ ಮಾಡಿದೆ.

ಇನ್ನೊಮ್ಮೆ ಧಾರವಾಡದ ನರಹರಿರಾಯರೆಂಬುವವರ ಶ್ರೀಮತಿ ಪರಿಮಳಾಬಾಯಿ ಎನ್ನುವವರು ಆಸ್ಪತ್ರೆಗೆ ಭರ್ತಿಯಾಗಿದ್ದರು. ನರಹರಿರಾಯರ ತಲೆಯ ಚಂಡಿಕೆ, ಆಕೆಯ ಕಚ್ಚೆ ಸೀರೆ, ಕೈ ಮೇಲೆ ಇನ್ನೂ ಹಸಿಯಾಗಿ ಕಾಣಿಸುತ್ತಿರುವ ತಪ್ತಮುದ್ರೆ ಎಲ್ಲವನ್ನೂ ನೋಡಿ ಇವರು ಸಾಗರೋಲ್ಲಂಘನ ಹೇಗೆ ಮಾಡಿದ್ದಾರೆ ಎಂದು ನನಗೆ ಆಶ್ಚರ್ಯವಾಯಿತು. ಇರಲಿ, ಪರಿಮಳಾಬಾಯಿಯವರ ಪರಿಸ್ಥಿತಿ ಗಂಭೀರದಿಂದ ಇನ್ನೂ ಬಿಗಡಾಯಿಸಿ ಉಸಿರಾಟಕ್ಕೆ ತೊಂದರೆಯಾಗಿ ಕೃತಕ ಉಸಿರಾಟದ ಯಂತ್ರವನ್ನು ಅಳವಡಿಸಬೇಕಾಗಿ ಬಂತು. ಕನ್ನಡ ಮಾತಾಡುತ್ತಿದ್ದ ನನ್ನ ನೋಡಿ ನರಹರಿರಾಯರಿಗೆ ಬಹಳ ಖುಷಿಯಾಗಿತ್ತು. ಅವರ ನಾಲ್ಕು ಜನ ಮಕ್ಕಳೂ ಅಮೆರಿಕಾದಲ್ಲಿಯೇ ಇದ್ದುದ್ದರಿಂದ ನರಹರಿರಾಯರು ನಿರ್ವಾಹವಿಲ್ಲದೇ ಅಮೆರಿಕಾಕ್ಕೆ ಬರಲೇಬೇಕಾಯಿತಂತೆ. ನಾನು ಹೋಗಿ ಪರಿಮಳಾಬಾಯಿಯವರ ಪರಿಸ್ಥಿತಿಯನ್ನು ವಿವರವಾಗಿ ತಿಳಿಸಿ, ಅವರಿಗೆ ಕೃತಕ ಉಸಿರಾಟದ ಯಂತ್ರವನ್ನು ಅಳವಡಿಸಬೇಕಾಗಿರುವುದರಿಂದ ಬಾಯೊಳಗೆ ಒಂದು ಪ್ಲಾಸ್ಟಿಕ್ ನಾಳವನ್ನು ಹಾಕಬೇಕಾಗಿದೆಯೆಂದೂ, ಅವರಿಗೆ ನಿದ್ರೆ ಬರುವ ಔಷಧಿಗಳನ್ನು ಕೊಡುತ್ತೇವೆಂದೂ ನರಹರಿರಾಯರು ಪರಿಮಳಾಬಾಯಿಯವರಿಗೆ ಪ್ರಜ್ಞೆಯಿದ್ದಾಗಲೇ ಹೋಗಿ ಒಮ್ಮೆ ಮಾತಾಡಿಸಿ ಬರುವುದು ಒಳ್ಳೆಯದು ಎಂದು ಸೂಕ್ಷ್ಮವಾಗಿ ಹೇಳಿದೆ.

ನರಹರಿರಾಯರಿಗೂ ತಮ್ಮ ಶ್ರೀಮತಿಯವರ ಪರಿಸ್ಥಿತಿ ಅರ್ಥವಾಗಿರಬೇಕು. ನನ್ನ ಹತ್ತಿರ ಬಂದು ’ನೋಡಪ, ನೀ ನನ್ನ ಮಗ ಇದ್ದ ಹಾಗಿದ್ದೀ. ನಿನ್ನ ಬಳಿ ಒಂದೇ ಒಂದು ಕೇಳಕೋತೀನಿ. ಇಲ್ಲೀಗ ಬರೂಮುಂದ ನಾವ್ ಕಾಶೀಗೆ ಹೋಗಿದ್ದೆವು. ಅಲ್ಲಿಂದ ಗಂಗಾಜಲ ತಂದೀವಪ್ಪ. ವಿಮಾನದಾಗ ಎಲ್ಲರ ಕಣ್ತಪ್ಪಿಸಿ ಇಲ್ಲೀತನಕ ತಗಂಬಂದೀವಿ. ಆಕಿ ಉಳಿಯೋ ಭರವಸಾ ನಂಗಂತ ಇಲ್ಲ. ಆಕೀಗ ಇವೆಲ್ಲ ಬೇಕಿತ್ತ ಇಲ್ಲ ಅನ್ನೂದು ನಮಗ್ಗೊತ್ತಿಲ್ಲ. ನೀ ಆಕೀ ಬಾಯೊಳಗ ಉಸಿರಾಟಕ್ಕ ಟ್ಯೂಬ್ ಹಾಕಿದ್ರೂ ನಂತರ ನಾ ಈ ಗಂಗಾಜಲ ಹಾಕೂಕೆ ಬರ್ತದೆ ಹೌದೋ ಅಲ್ಲೋ’ ಎಂದು ಕೇಳಿದರು. ನಾನು ಯಾವುದೋ ಧ್ಯಾನದಲ್ಲಿ ’ಅಲ್ಲಿಯತನಕ ಯಾಕೆ ಕಾಯುತ್ತೀರಿ. ಈಗಲೇ ಬನ್ನಿ ನಾನೇ ನಿಮ್ಮ ಕೈಯಾರೆ ಹಾಕಿಸ್ತೀನಿ’ ಎಂದು ಒಳಗೆ ಕರಕೊಂಡು ಹೋದೆ. ಇನ್ನೇನು ಒಂದೆರಡು ತೊಟ್ಟು ಗಂಗಾಜಲವನ್ನು ರಾಯರು ತಂದಿದ್ದ ತಾಲಿಯಿಂದ ಹಾಕಬೇಕು ಅನ್ನುವಷ್ಟರಲ್ಲಿ ನನ್ನ ನರ್ಸ್ ಬಂದು ’ನಥಿಂಗ್ ಬೈ ಮೌತ್. ಯು ನೋ, ಶೀ ಈಸ್ ಗೋಯಿಂಗ್ ಟು ಬೀ ಆನ್ ವೆಂಟಿಲೇಟರ್’ ಎಂದು ಆಸ್ಪತ್ರೆಯ ಪ್ರೋಟೋಕಾಲುಗಳ ಸರಣಿಯನ್ನೇ ನನ್ನ ಮುಂದೆ ಹಿಡಿದಳು. ನಿರ್ವಾಹವಿಲ್ಲದೇ ನಾ ಸುಮ್ಮನಾದೆ. ಕಡೆಗೂ ಪರಿಮಳಾಬಾಯಿ ಎಚ್ಚರವಿದ್ದಾಗ ನರಹರಿರಾಯರು ಗಂಗಾಜಲವನ್ನು ಆಕೆಯ ಬಾಯೊಳಗೆ ಹಾಕಲಾಗಲೇ ಇಲ್ಲ. ಆಕೆಯನ್ನು ವೆಂಟಿಲೇಟರ‍್ಗೆ ಹಾಕಿದ ಮೇಲೆ ನಾನು ನರಹರಿರಾಯರನ್ನು ಒಳಗೆ ಕರಕೊಂಡು ಹೋಗಿ ಯಾರಿಗೂ ಕಾಣದ ಹಾಗೆ ಎರಡು ಹನಿ ಗಂಗಾಜಲವನ್ನು ಪರಿಮಳಾಬಾಯಿಯವರ ಬಾಯಿಯ ಬದಿಯಲ್ಲಿ ಹಾಕಿಸಿ ಅವರ ಕಡೆಂii ಆಸೆಯನ್ನು ಪೂರ್ತಗೊಳಿಸಿದೆ.

***

ಜೀವ ಉಳಿಸುವ ಕೆಲಸದಲ್ಲಿರುವ ನಾನು ಈ ಸಾವುಗಳಿಂದ ಕಲಿತಿರುವುದು ಜೀವ ಉಳಿಸಿರುವುದರಿಂದ ಕಲಿತಿರುವುದಕ್ಕಿಂತಾ ಹೆಚ್ಚು. ಎಷ್ಟೋ ಬಾರಿ ನನ್ನಿಂದಲೇ ಈ ಜೀವ ಉಳಿದಿದೆ ಎಂದು ವಿನಮ್ರನಾಗಿ ಒಪ್ಪಿಕೊಂಡಿದ್ದರೂ ಅದು ಎಲ್ಲೋ ಒಂದು ಕಡೆ ನನ್ನ ಇಗೋವನ್ನು ಹೆಚ್ಚಿಸುವುದರ ಪರಿ ವಿಚಿತ್ರ ಆದರೆ ಅನುಮಾನಾತೀತ. ಆದರೆ, ನನ್ನ ಶುಷ್ರೂಶೆಯಲ್ಲಿದ್ದ ಒಬ್ಬ ರೋಗಿ ಸತ್ತಾಗ ಆಗುವ ಮೊದಲ ಭಾವ ಸೋಲು. ಈ ಸೋಲನ್ನು ನಾನು ಅನಿವಾರ್ಯವಾಗಿ ಮೀರಲೇ ಬೇಕಾಗಿದೆ. ಇಲ್ಲದಿದ್ದಲ್ಲಿ ದಿನಾ ಕಾಣುವ ಈ ಸೋಲಿನಿಂದ ಆತ್ಮಸ್ಥೈರ್ಯ ಉಡುಗಿ ಈ ಕೆಲಸವನ್ನೇ ಮಾಡಲಾಗದೇ ಇರಬಹುದು. ಆದ್ದರಿಂದಲೇ ನನ್ನಂಥ ಕೆಲಸದಲ್ಲಿರುವವರಿಗೆ ಈ ಸಾವು ಎನ್ನುವುದು ಒಂದು ಲಹರಿಯಾಗಿಬಿಡುತ್ತದೆ. ಅದು ಸೋಲಲ್ಲ, ಇಂಥ ಸಾವಿಂದ ನಾ ಅಳುಕಿಲ್ಲ ಎಂದು ನನಗೆ ನಾನೇ ಹೇಳಿಕೊಳ್ಳಲು ಯಾರಾದರೂ ಸತ್ತನಂತರ ಕೈ ಒರೆಸಿಕೊಳ್ಳದೆ ಪೀಟ್ಜಾ ತಿನ್ನುವ ಡಿಫ಼ೆನ್ಸಿವ್ ಕಾರ್ಯಗಳಲ್ಲಿ ತೊಡಗಿಕೊಳ್ಳುತ್ತೀವೇನೋ.

ಒಂದು ಮಾತ್ರ ನಿಜ. ನನ್ನ ಹೆಸರನ್ನು ಕೂಡ ಉಚ್ಚರಿಸಲು ಬರದ ರೋಗಿಗಳ ಜೀವಗಳು ನನ್ನ ಕೈಯಾರೆ ಉಳಿದಾಗ ’ಡಾ. ಕೇ. ಥ್ಯಾಂಕ್ ಯು’ ಎಂದು ಮನೆಗೆ ಹೋಗುವ ಮುಂಚೆ ಕೈಕುಲುಕಿದಾಗ ಆಗುವ ಪುಲಕವೇ ನನ್ನನ್ನು ಈ ಕೆಲಸದಲ್ಲಿ ಇನ್ನೂ ಮುಂದುವರಿಯುವಂತೆ ಮಾಡುತ್ತಿರುವುದು. ಹಾಗೆ ಉಳಿದ ರೋಗಿಗಳು ನನ್ನ ಕಣ್ಣ ಮುಂದೆ ಶಿಲೆಗಳಂತೆ ಅಚಲ ಪ್ರತಿಮೆಗಳಾಗಿ ಉಳಿದು ನನಗೇನಾದರೂ ಆದಲ್ಲಿ ಉಳಿದರೆ ಹೇಗೆ ಉಳಿಯಬೇಕು, ಹೋದರೆ ಹೇಗೆ ಹೋಗಬೇಕು ಎಂಬುದನ್ನು ಕಲಿಸಿಕೊಟ್ಟಿರುವ ಗುರುಗಳಾಗಿದ್ದಾರೆ.

(ಅಮೆರಿಕದ ಕನ್ನಡ ಸಾಹಿತ್ಯರಂಗ ಪ್ರಕಟಿಸಿರುವ ‘ಮಥಿಸಿದಷ್ಟೂ ಮಾತು’ನಲ್ಲಿ ಪ್ರಕಟವಾದದ್ದು)

 Posted by at 12:02 PM
Oct 252011
 

ಕನ್ನಡ ಸಾಹಿತ್ಯ ರಂಗದ ದ್ವೈವಾರ್ಷಿಕ ಸಮ್ಮೇಳನದ ಸಂದರ್ಭದಲ್ಲಿ ಪ್ರತಿಬಾರಿಯಂತೆ ಈ ಬಾರಿಯೂ ಪುಸ್ತಕವೊಂದನ್ನು ಪ್ರಕಟಿಸಲಾಯಿತು. “ಮಥಿಸಿದಷ್ಟೂ ಮಾತು” (ತ್ರಿವೇಣಿ ಶ್ರೀನಿವಾಸ ರಾವ್-ಪ್ರಧಾನ ಸಂಪಾದಕಿ, ಸಹ ಸಂಪಾದಕ -ಎಂ.ಆರ್.ದತ್ತಾತ್ರಿ) ಎಂಬ ಪ್ರಬಂಧ ಸಂಕಲನಲ್ಲಿ ಅಮೆರಿಕದ ಮೂಲೆ-ಮೂಲೆಗಳಲ್ಲಿ ನೆಲೆಸಿರುವ ಹಲವಾರು ಹಿರಿಯ ಮತ್ತು ಕಿರಿಯ ಬರಹಗಾರರ ಲೇಖನಗಳಿವೆ. ಈ ಪುಸ್ತಕಕ್ಕೆ ಸಾಕಷ್ಟು ಮನ್ನಣೆ ಈಗಾಗಲೇ ದೊರಕಿದೆ. ಈ ಪುಸ್ತಕವನ್ನು ರಾಜಧಾನಿಯ ಕನ್ನಡ ಸಂಘ “ಕಾವೇರಿ”ಯ ಸಹೃದಯೀ ಸದಸ್ಯರುಗಳಾದ ಶ್ರೀಮತಿ ಗೋದಾ ಪ್ರಸಾದ್ ಮತ್ತು ಅವರ ಸಹೋದರ ಬಾಲಾಜಿ ಹೆಬ್ಬಾರ್ ಅವರುಗಳ ಕುಟುಂಬಗಳು ಪ್ರಾಯೋಜಿಸಿ ಕನ್ನಡ ಸಾಹಿತ್ಯ ರಂಗಕ್ಕೆ ಅಪಾರವಾದ ಸಹಾಯವನ್ನು ಮಾಡಿರುತ್ತಾರೆ. ಪಶ್ಚಿಮತೀರದಲ್ಲಿ ನಡೆದ ನಮ್ಮ ಕಾರ್ಯಕ್ರಮಕ್ಕೆ ಪ್ರಾಯೋಜಕರು ಬರುವುದು ಸಾಧ್ಯವಾಗದೇ ಹೋದುದರಿಂದ, ಮೇರೀಲ್ಯಾಂಡಿನ ಪೊಟೋಮೆಕ್ ನಗರದಲ್ಲಿ ವಾಸವಾಗಿರುವ ಕನ್ನಡ ಸಾಹಿತ್ಯ ರಂಗದ ಉಪಾಧ್ಯಕ್ಷ ಡಾ|| ಮೈ.ಶ್ರೀ ನಟರಾಜರ (ಈಗ ಅವರು ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷರಾಗಿ ಸರ್ವಾನುಮತದಿಂದ ಚುನಾಯಿತರಾಗಿದ್ದಾರೆ) ಮನೆಯಂಗಳದಲ್ಲಿ ಕೃತಜ್ಞತಾ ಸಮರ್ಪಣ ಸಮಾರಂಭವೊಂದನ್ನು ಜುಲೈ ೨೩ ರಂದು ಹಮ್ಮಿಕೊಳ್ಳಲಾಗಿತ್ತು.

ksr

ಎಚ್. ವೈ ರಾಜಗೋಪಾಲ್, ಗೋದಾ ಪ್ರಸಾದ್, ಬಾಲಾಜಿ ಹೆಬ್ಬಾರ್, ಎಂ. ಎಸ್.ನಟರಾಜ್

ಮೊಟ್ಟಮೊದಲಿಗೆ, ಕನ್ನಡ ಸಾಹಿತ್ಯ ರಂಗದ ಸ್ವಾಗತ ಸಮಾರಂಭದ ಅಂಗವಾಗಿ ರಚಿಸಿ ವಾಚಿಸಿದ್ದ, “ಮುಂಜಾನೆಯ ಮಿಡಿತ” ಎಂಬ ಕವಿತೆಯನ್ನು (ಈ ಕವನ ಪ್ರಸಿದ್ಧ ಕವಯಿತ್ರಿ ಮಾಯಾ ಏಂಜೆಲೋ ಬರೆದ “ಆನ್ ದಿ ಪಲ್ಸ್ ಆಫ಼್ ಮಾರ್ನಿಂಗ್” ಎಂಬ ಕವನದ ಕನ್ನಡ ಭಾವಾನುವಾದ) ಶ್ರೀಯುತ ನಟರಾಜರು ವಾಚಿಸಿದರು. ನಂತರ ಅತಿಥಿಗಳನ್ನು ಸ್ವಾಗತಿಸಿ ಅವರನ್ನು ಸಭೆಗೆ ಪರಿಚಯಮಾಡಿಕೊಟ್ಟರು. “ಮಥಿಸಿದಷ್ಟೂ ಮಾತು” ಫುಸ್ತಕವನ್ನು ಮಕ್ಕಳು ತಮ್ಮ ತಂದೆ ಮತ್ತು ತಾಯಿ ಅವರ ನೆನೆಪಿಗೆ ಅರ್ಪಿಸಿರುವದನ್ನು ವಿವರಿಸಿ, ದಿವಂಗತರಾದ ಶ್ರೀಮತಿ ಸೀತಾ ಮತ್ತು ಶ್ರೀ ಗೋಪಾಲಕೃಷ್ಣ ಅವರ ಸುದೀರ್ಘವೂ ಅರ್ಥಪೂರ್ಣವೂ ಆದ ದಾಂಪತ್ಯ ಜೀವನ, ಅವರ ಕನ್ನಡ ಪೇಮ ಮತ್ತು ಸಾಹಿತ್ಯದ ಬಗ್ಗೆ ಅವರಿಗಿದ್ದ ಪ್ರೀತಿ-ಅಭಿಮಾನಗಳನ್ನು ಸಭಾಸದರಿಗೆ ಸ್ಥೂಲವಾಗಿ ಪರಿಚಯಿಸಿದರು.

M. S. Nataraj

ದಿವಂಗತ ಶ್ರೀಮತಿ ಸೀತಾ ಮತ್ತು ಶ್ರೀ ಗೋಪಾಲಕೃಷ್ಣರನ್ನು ಪರಿಚಯಿಸುತ್ತಿರುವ ಎಂ. ಎಸ್. ನಟರಾಜ್"

ನಂತರ, ಕನ್ನಡ ಸಾಹಿತ್ಯ ರಂಗದ ಅಧ್ಯಕ್ಷ (ಈಗ ಅವರು ದರ್ಮದರ್ಶಿಗಳ ಮಂಡಲಿಯ ಮುಖ್ಯಸ್ತರಾಗಿ ಆಯ್ಕೆಯಾಗಿದ್ದಾರೆ) ಡಾ|| ಎಚ್. ವೈ. ರಾಜಗೋಪಾಲ್ ಅವರು ಸಂಘದ ಚಟುವಟಿಕೆಗಳ ಪಕ್ಷಿನೋಟ, ಧ್ಯೇಯೋದ್ದೇಶಗಳ ವಿವರಗಳು, ಹಾಗು ಇಲ್ಲಿಯವರೆಗಿನ ಸಾಧನೆಗಳ ಸಮೀಕ್ಷೆಯನ್ನೊಳಗೊಂಡ ಭಾಷಣವನ್ನು ಮಾಡಿದರು. ಹಿಂದೆ ೨೦೦೯ರಲ್ಲಿ ರಾಜಧಾನಿ ಪ್ರದೇಶದ ಕನ್ನಡಿಗರು ಉತ್ಸಾಹದಿಂದ ನಡೆಸಿಕೊಟ್ಟ ಕನ್ನಡ ಸಾಹಿತ್ಯ ರಂಗದ ನಾಲ್ಕನೆಯ ಸಮ್ಮೇಳನವನ್ನು ಕೃತಜ್ಞತೆಯೊಂದಿಗೆ ನೆನೆಸಿಕೊಂಡರು. ನಂತರ ಮಥಿಸಿದಷ್ಟೂ ಮಾತು ಪುಸ್ತಕದಲ್ಲಿರುವ ಹಲವು ಪ್ರಬಂಧಗಳ ಪುಟ್ಟ ಪರಿಚಯವನ್ನು ನಟರಾಜ್ ಮಾಡಿಕೊಟ್ಟು ಪುಸ್ತಕವನ್ನು ಕೊಂಡು ಓದುವಂತೆ ಹುರಿದುಂಬಿಸಿದರು.

Audience

ಸಮಾರಂಭಕ್ಕೆ ಸಾಕ್ಷಿಯಾಗಿದ್ದ ಸಾಹಿತ್ಯಾಸಕ್ತರು

ಮುಖ್ಯಅತಿಥಿಗಳಾದ ಶ್ರೀಮತಿ ಗೋದಾ ಪ್ರಸಾದ್ ಮತ್ತು ಡಾ|| ಬಾಲಾಜಿ ಹೆಬ್ಬಾರ್ ಅವರುಗಳಿಗೆ ಪುಷ್ಪಗುಚ್ಛಗಳನ್ನಿತ್ತು ಕನ್ನಡ ಸಾಹಿತ್ಯರಂಗದ ಮನಃಪೂರ್ವಕ ಧನ್ಯವಾದಗಳನ್ನು ಮತ್ತು ಮೆಚ್ಚುಗೆಯನ್ನೂ ವ್ಯಕ್ತಪಡಿಸಲಾಯಿತು. ನಮ್ಮ ಕರೆಗೆ ಓಗೊಟ್ಟು ಬಂದು ನೆರೆದಿದ್ದ ಸುಮಾರು ನಲವತ್ತಕ್ಕೂ ಹೆಚ್ಚು ಸಾಹಿತ್ಯಾಭಿಮಾನಿಗಳು ಕನ್ನಡ ಸಾಹಿತ್ಯ ರಂಗದ ಪ್ರಕಟಣೆಗಳಾದ ಹಲವಾರು ಪುಸ್ತಕಗಳನ್ನು ಕೊಂಡು, ರುಚಿಕರವಾದ ಭೋಜನವನ್ನು ಸ್ವೀಕರಿಸಿ, ಕುಶಲೋಪರಿ ಮಾತುಗಳಾಡಿ ಬೀಳ್ಕೊಂಡರು. ಸಂಘದ ಹಲವಾರು ಪ್ರಮುಖ ಸದಸ್ಯರೂ ಮತ್ತು ಖಜಾಂಚಿ ಶ್ರೀ ಗುಂಡೂ ಶಂಕರ್ ಅವರೂ ಸಹ ಭಾಗವಹಿಸಿದ್ದು ಸಭೆಗೆ ಒಳ್ಳೆಯ ಕಳೆ ಕಟ್ಟಿತ್ತು.

ಚಿತ್ರಗಳು : ಶ್ರೀವತ್ಸ ಜೋಶಿ

 Posted by at 12:00 PM
Oct 242011
 

ಮಥಿಸಿದಷ್ಟೂ ಮಾತು
ಸಂ: ತ್ರಿವೇಣಿ ಶ್ರೀನಿವಾಸರಾವ್, ಎಂ.ಆರ್.ದತ್ತಾತ್ರಿ
ಪು: 284; ಬೆ: ರೂ. 150
ಪ್ರ: ಕನ್ನಡ ಸಾಹಿತ್ಯ ರಂಗ, ಅಮೆರಿಕ; ಅಭಿನವ, ಬೆಂಗಳೂರು.

ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಸಾಹಿತ್ಯಾಸಕ್ತಿಗೆ ನೀರೆರೆಯುವ ಕೆಲಸ ಮಾಡುತ್ತಿರುವ `ಕನ್ನಡ ಸಾಹಿತ್ಯ ರಂಗ` ತನ್ನ ಸಾಹಿತ್ಯ ಚಟುವಟಿಕೆಗಳ ಮೂಲಕ ಗಮನಸೆಳೆದಿರುವ ಸಂಘಟನೆ. `ಸಾಹಿತ್ಯ ರಂಗ` ನಡೆಸುವ ಸಾಹಿತ್ಯೋತ್ಸವಗಳು ಗಂಭೀರ ಸಾಹಿತ್ಯ ಚರ್ಚೆಗೆ ಹಾಗೂ ಅಮೆರಿಕದಲ್ಲಿನ ಬರಹಗಾರರ ಸಮ್ಮಿಲನಕ್ಕೆ ವೇದಿಕೆಗಳಾಗಿವೆ. ಪುಸ್ತಕ ಪ್ರಕಟಣೆಯಲ್ಲಿಯೂ ಸಕ್ರಿಯವಾಗಿರುವ ಈ ಬಳಗ- `ಕುವೆಂಪು ಸಾಹಿತ್ಯ ಸಮೀಕ್ಷೆ`, `ಆಚೀಚೆಯ ಕಥೆಗಳು`, `ನಗೆಗನ್ನಡಂ ಗೆಲ್ಲೆ`, `ಕನ್ನಡ ಕಾದಂಬರಿ ಲೋಕದಲ್ಲಿ…` ರೀತಿಯ ಗಮನಾರ್ಹ ಕೃತಿಗಳನ್ನು ಪ್ರಕಟಿಸಿದೆ. ಅಮೆರಿಕದಲ್ಲಿ ನೆಲೆಸಿರುವ ಕನ್ನಡಿಗರ ಸೃಷ್ಟಿಶೀಲ ಪ್ರತಿಭೆಗೆ ಈ ಕೃತಿಗಳು ಸಾಕ್ಷಿಯಂತಿವೆ. ಸಾಹಿತ್ಯ ರಂಗದ ಹೊಸ ಪ್ರಕಟಣೆ, `ಮಥಿಸಿದಷ್ಟೂ ಮಾತು`. `ಮಥಿಸಿದಷ್ಟೂ ಮಾತು` – ಅಮೆರಿಕದ ಕನ್ನಡಿಗರ ಸಲ್ಲಾಪ-ಹರಟೆ-ಚಿಂತನೆಗಳ ಗುಚ್ಛ. ಇಪ್ಪತ್ತೇಳು ಬರಹಗಳ ಈ ಸಂಕಲನವನ್ನು  ತ್ರಿವೇಣಿ ಶ್ರೀನಿವಾಸರಾವ್ ಮತ್ತು ಎಂ.ಆರ್.ದತ್ತಾತ್ರಿ ಸಂಪಾದಿಸಿದ್ದಾರೆ.

ಇಲ್ಲಿನ ಬರಹಗಳು ಸಲ್ಲಾಪದಂಗಳ, ಹರಟೆ ಕಟ್ಟೆ ಮತ್ತು ಚಿಂತನೆ ಚಾವಡಿ ಎನ್ನುವ ಮೂರು ಭಾಗಗಳಲ್ಲಿ ಹರಡಿಕೊಂಡಿವೆ. ಆದರೆ, ಇಂಥ ವಿಂಗಡಣೆಯ ಹಂಗಿಲ್ಲದೆ ಓದಿಸಿಕೊಳ್ಳುವ ಹಾಗೂ ಪ್ರಬಂಧದ ಗುಣ ಹೊಂದಿರುವ ಇವುಗಳನ್ನು ಪ್ರಬಂಧಗಳೆಂದೇ ಕರೆಯಬಹುದು. ಪ್ರಾತಿನಿಧಿಕ ಸಂಕಲನಗಳು ಸಾಮಾನ್ಯವಾಗಿ ಹೊಂದಿರುವ ಸಮತೋಲನದ ಗುಣ ಈ ಸಂಕಲನದಲ್ಲೂ ಇದೆ. ಒಳ್ಳೆಯ ಪ್ರಬಂಧಗಳ ಜೊತೆಗೆ ಸರಳವಾದ ರಚನೆಗಳಿಗೆ ಹಾಗೂ ಅಹಿತಾನಲ, ಎಚ್.ವೈ.ರಾಜಗೋಪಾಲರಂಥ ಹಿರಿಯರ ಜೊತೆಗೆ ಹೊಸ ತಲೆಮಾರಿನ ಬರಹಗಾರರಿಗೆ  ಸಂಕಲನದಲ್ಲಿ ಸ್ಥಾನ ದೊರೆತಿದೆ. ಅಹಿತಾನಲ ಅವರ `ನಿವೃತ್ತನೊಬ್ಬದ ದಿನಚರಿಯಿಂದ` ಅವರ ಸ್ವಾನುಭವ ಬರಹ. ನಿವೃತ್ತಿಯ ನಂತರದ ತವಕತಲ್ಲಣಗಳನ್ನು ಹರಟೆಯ ರೂಪದಲ್ಲಿ ಅಹಿತಾನಲ ನಿರೂಪಿಸಿದ್ದಾರೆ. ಓದಿಸಿಕೊಳ್ಳುವ ಗುಣವಿದ್ದರೂ, ದೀರ್ಘವಾಯಿತು ಎನ್ನುವ ಭಾವವನ್ನು ಹುಟ್ಟಿಸುವ ಬರಹವಿದು.

ತ್ರಿವೇಣಿ ಶ್ರೀನಿವಾಸರಾವ್ ಅವರ `ಕಳೆದೂ ಉಳಿಯುವ ಮೋಡಿ` ಒಂದು ಸುಲಲಿತ ಪ್ರಬಂಧ. ಹಂ.ಕ.ಕೃಷ್ಣಪ್ರಿಯ ಅವರ `ಸೈಕಲ್ಲೇರಿ ಕೆಲಸಕೆ ಹೋಗುವ ಆನಂದ` ಬರಹ ಲೇಖಕರ ಸಹಜಭಾಷೆ ಹಾಗೂ ನಿರೂಪಣೆಯ ಕಾರಣದಿಂದಾಗಿ ಗಮನಸೆಳೆಯುವ ಪ್ರಬಂಧ. ಜ್ಯೋತಿ ಮಹಾದೇವ ಹೊರತುಪಡಿಸಿ, ಈ ಸಂಕಲನದ ಎಲ್ಲ ಬರಹಗಾರರೂ ಅಮೆರಿಕದಲ್ಲಿ ನೆಲೆಸಿದ್ದರೂ, ಅವರ ಬರಹಗಳಲ್ಲಿ ಅಮೆರಿಕದ ಛಾಯೆ ಕಾಣುವುದು ತೀರಾ ಕಡಿಮೆ. ಆದರೆ ಕೃಷ್ಣಪ್ರಿಯರ ಬರಹ ಪೂರ್ಣವಾಗಿ ಆತುಕೊಂಡಿರುವುದು ಅಮೆರಿಕದ ವರ್ತಮಾನದ ನೆಲೆಗೆ. ಎಂ.ಆರ್.ದತ್ತಾತ್ರಿ ಅವರ `ಹೇಳ್ಕೊಳ್ಳಕ್ ಒಂದೂರು` ಸೂಕ್ಷ್ಮ ಪ್ರಶ್ನೆಗಳನ್ನು ಓದುಗರಲ್ಲಿ ಉಂಟುಮಾಡಬಲ್ಲ ಶಕ್ತಿಯ ಪ್ರಬಂಧ. ಯುವಪೀಳಿಗೆಯ ಆತ್ಮಸಾಕ್ಷಿಯನ್ನು ಕಲಕಬಲ್ಲ ಈ ಪ್ರಬಂಧದೊಂದಿಗೆ ಗುರುಪ್ರಸಾದ್ ಕಾಗಿನೆಲೆ ಅವರ `ಸಾವೆಂಬ ಲಹರಿ`ಯನ್ನು ಒಟ್ಟಿಗೆ ನೋಡಬಹುದು. ದತ್ತಾತ್ರಿ ಅವರ ಬರಹ ಮಾನಸಿಕ ಅಸ್ತಿತ್ವಕ್ಕೆ ಸಂಬಂಧಿಸಿದ್ದರೆ, ಗುರುಪ್ರಸಾದ್‌ರ ಬರಹ ಭೌತಿಕ ಅಸ್ತಿತ್ವದ ವಿವರಗಳನ್ನು ಹೊಂದಿರುವಂತಹದ್ದು. ಪರಿಣಾಮಕಾರಿ ಭಾಷೆ, ನಿರೂಪಣೆಯಿಂದಾಗಿ ಎರಡೂ ರಚನೆಗಳು ಗಮನಸೆಳೆಯುತ್ತವೆ.

ಅಲಮೇಲು ಅಯ್ಯಂಗಾರ್ (ಗ್ಯಾಡ್ಜೆಟ್ಸ್ ಗಮ್ಮತ್ತು), ನಳಿನಿ ಮೈಯ (ಊಟೋಪನಿಷತ್ತು), ಎಚ್.ವೈ.ರಾಜಗೋಪಾಲ್ (ಸೋಲೂರು ಕ್ಲಬ್ಬಿನ ಗೆಳೆಯರು), ಮೈ.ಶ್ರೀ.ನಟರಾಜ (ವರ್ತುಳದಲ್ಲಿ ಸಿಕ್ಕ ಮನವೆಂಬ ಮರ್ಕಟ) ಹಾಗೂ ವೈಶಾಲಿ ಹೆಗಡೆ (ನಿನ್ನನೆಲ್ಲಿ ಹುಡುಕಲಯ್ಯ ಕಸಗುಡ್ಡದೊಳಗೆ) ಅವರ ಪ್ರಬಂಧಗಳು ತಮ್ಮ ವಸ್ತು ವೈವಿಧ್ಯದಿಂದಾಗಿ ಗಮನಸೆಳೆಯುತ್ತವೆ.

`ಮಥಿಸಿದಷ್ಟೂ ಮಾತು` ಸಂಕಲನದ ಬಹುತೇಕ ಬರಹಗಳು ಆಯಾ ಲೇಖಕರ ಬಾಲ್ಯ ಹಾಗೂ ತವರಿನ ದಿನಗಳ ನೆನಪುಗಳಿಗೆ ನಿಷ್ಠವಾಗಿವೆ. ತೌರ ಹಂಬಲದೊಳಗೆ ಗಂಡನ ಮನೆಯ ನಿರ್ಲಕ್ಷಿಸಿದ ಹೆಣ್ಣಿನಂತೆ ಅವರ ಬರಹಗಳಲ್ಲಿ ಅಮೆರಿಕ ನೆಲ ಗೈರುಹಾಜರಾಗಿದೆ. ಅಮೆರಿಕನ್ನಡಿಗರ ಬರಹಗಳ ಮೂಲಕ ಪಶ್ಚಿಮದ ಬಣ್ಣಗಳ, ತವಕತಲ್ಲಣಗಳ ಕಾಣಲು ಬಯಸಿದರೆ ನಿರಾಶೆ ಖಚಿತ. ಅಂತೆಯೇ, ಈಗಾಗಲೇ ಅಮೆರಿಕನ್ನಡಿಗರ ಸಾಹಿತ್ಯದ ರುಚಿ ಗೊತ್ತಿದ್ದವರಿಗೆ ಇಲ್ಲಿ `ಹೊಸ ರುಚಿ` ಸಿಗುವುದಿಲ್ಲ. ಸಂಕಲನದ ಬಹುತೇಕ ಬರಹಗಳ ಹಿಂದೆ ಭಾವುಕತೆ ಕೆಲಸ ಮಾಡಿರುವುದನ್ನು ವಿಮರ್ಶಕ ರಹಮತ್ ತರೀಕೆರೆ ಅವರು ಮುನ್ನುಡಿಯಲ್ಲಿ ಸರಿಯಾಗಿಯೇ ಗುರ್ತಿಸಿದ್ದಾರೆ.

`ಈ ಲೇಖನಗಳು ನಮ್ಮ ಮಾತುಗಳು. ಒಂದು ರೀತಿಯಲ್ಲಿ ನಮ್ಮಷ್ಟಕ್ಕೆ ನಾವೇ ಆಡಿಕೊಂಡಂತೆ ಕಾಣುವ ನಮ್ಮ ಅಂತರಂಗದ ಮಾತುಗಳು. ಸಾಹಿತ್ಯ ಸಾಧನೆಗಿಂತಲೂ ಹೆಚ್ಚಾಗಿ ನಮ್ಮ ಮನಸ್ಸಿನಲ್ಲಿರುವುದನ್ನು ನಿಮ್ಮೆದುರು ಬರಿದು ಮಾಡಿ ಹಗುರಾಗಲು ಆಡಿದ ಮಾತುಗಳು` ಎನ್ನುವ ಸಂಪಾದಕದ್ವಯರ ಮಾತುಗಳು ಈ ಸಂಕಲನದ ವಿಶೇಷ ಮತ್ತು ಚೌಕಟ್ಟು ಎರಡನ್ನೂ ಹೇಳುವಂತಿದೆ.

`ಮಥಿಸಿದಷ್ಟೂ ಮಾತು` ಸಂಕಲನದ ಮಹತ್ವ ಇರುವುದು ಆ ಬರಹಗಳಲ್ಲಿನ ಪ್ರಾಮಾಣಿಕ ಅಭಿವ್ಯಕ್ತಿಯಲ್ಲಿ. ಕಥೆಯಾಗದ ಗದ್ಯವೇ ಪ್ರಬಂಧ ಎನ್ನುವ ಮೂಢನಂಬಿಕೆ ಕನ್ನಡ ಸಾಹಿತ್ಯ ಪ್ರಕಾರದಲ್ಲಿ ಚಾಲ್ತಿಯಲ್ಲಿರುವ ಸಂದರ್ಭವಿದು. ಪ್ರಸ್ತುತ ಚಲಾವಣೆಯಲ್ಲಿರುವ ಪ್ರಬಂಧದ ಮಾದರಿಗಳು ಗಾಬರಿ ಹುಟ್ಟಿಸುವಂತಿವೆ. ಅಂತರ್ಜಾಲದಲ್ಲಿನ ಅನಾಮಧೇಯರ ಬರಹಗಳನ್ನು ಅನುವಾದಿಸಿ ಪ್ರಬಂಧಗಳ ಹೆಸರಿನಲ್ಲಿ ಚಾಲ್ತಿಗೆ ಬಿಡುವ ಹಾಗೂ ದಿನಚರಿಯ ತುಣುಕು ಛಾಯೆಗಳನ್ನು ಪೋಣಿಸುತ್ತ ಪ್ರಬಂಧಗಳೆಂದು ನಂಬಿಸುತ್ತಿರುವ ಇವತ್ತಿನ ಸಂದರ್ಭದಲ್ಲಿ, ಇಂಥ ಬರಹಗಳಿಗೆ ಪ್ರಶಸ್ತಿಗಳ ಗೌರವವೂ ದೊರಕುತ್ತಿರುವ ಹೊತ್ತಿನಲ್ಲಿ- `ಮಥಿಸಿದಷ್ಟೂ ಮಾತು` ಸಂಕಲನದ ಕೆಲವು ಬರಹಗಳಾದರೂ `ನಿಜ ಪ್ರಬಂಧ`ದ ಸುಖ ಕೊಡಬಲ್ಲವು. ಇಂಥ ಸುಖದ ರುಚಿಯೇ ಒಂದು ಒಳ್ಳೆಯ ಸಂಕಲನದ ಸಾರ್ಥಕತೆ.

– ನಟರಾಜ

 Posted by at 7:17 PM