Mar 072013
 

‘ಕನ್ನಡ ಸಾಹಿತ್ಯ ರಂಗ’ದ ಆರನೆಯ ವಸಂತ ಸಾಹಿತ್ಯೋತ್ಸವ – ಕವಿ ಗೋಷ್ಠಿ

ಅಮೆರಿಕಾದ ಏಕೈಕ ರಾಷ್ಟ್ರೀಯ ಕನ್ನಡ ಸಾಹಿತ್ಯ ಸಂಸ್ಥೆಯಾದ ‘ಕನ್ನಡ ಸಾಹಿತ್ಯ ರಂಗ’ ಕ್ಕೆ(ಕಸಾರಂ) ಇದೀಗ ಹತ್ತು ವರ್ಷ ತುಂಬಿದೆ. ಬರುವ ಮೇ ೧೮ ಮತ್ತು ೧೯ರಂದು ‘ಕಸಾರಂ’ ತನ್ನ ದಶಮಾನೋತ್ಸವ ಹಾಗೂ ೬ನೆಯ ವಸಂತ ಸಾಹಿತ್ಯೋತ್ಸವವನ್ನು ಹ್ಯೂಸ್ಟನ್ನಿನಲ್ಲಿ ಟೆಕ್ಸಸ್ ಕನ್ನಡಿಗರ ಆಶ್ರಯದಲ್ಲಿ ಆಚರಿಸುತ್ತಿದೆ. ಸುಪ್ರಸಿದ್ಧ ಸ್ಠಳೀಯ ಕನ್ನಡ ಸಂಸ್ಥೆಯಾದ ‘ಹ್ಯೂಸ್ಟನ್ ಕನ್ನಡ ವೃಂದ’ ಈ ಸಂಘಟನೆಯಲ್ಲಿ ಸಹಪ್ರವರ್ತಕ ಪಾತ್ರ ವಹಿಸಿದೆ. ಟೆಕ್ಸಸ್ ರಾಜ್ಯದ ಇತರ ಹೆಸರಾಂತ ಕನ್ನಡ ಸಂಸ್ಥೆಗಳಾದ – ಆಸ್ಟಿನ್ ಕನ್ನಡ ಕೂಟ, ಸ್ಯಾನ್ ಆಂಟೋನಿಯೋದ ಕುವೆಂಪು ಕನ್ನಡ ಕೂಟ, ಡಲ್ಲಾಸ್‍ನ ಮಲ್ಲಿಗೆ ಕನ್ನಡ ಕೂಟ, ಮತ್ತು ರಿಯೋ ಗ್ರ್ಯಾಂಡ್ ವ್ಯಾಲಿಯ ಕನ್ನಡಕೂಟ – ಇವು ಈ ಸಮ್ಮೇಳನಕ್ಕೆ ತುಂಬು ಹೃದಯದಿಂದ ತಮ್ಮ ಸಹಕಾರ ಹಸ್ತವನ್ನು ಚಾಚುತ್ತಿವೆ. ರೈಸ್ ಯೂನಿವರ್ಸಿಟಿಯ ಹ್ಯಾಮನ್ ಹಾಲ್ ಸಭಾಂಗಣದಲ್ಲಿ ನಡೆಯುವ ಈ ಸಾಹಿತ್ಯ ಸಮಾರಂಭದ ಅಂಗವಾಗಿ ನಡೆಯುವ ಕವಿ ಗೋಷ್ಠಿಯಲ್ಲಿ ನಿಮ್ಮ ಕವನಗಳನ್ನು ಓದಲು ಇದೋ ಇಲ್ಲಿದೆ ಪ್ರೀತಿಯ ಕರೆಯೋಲೆ. ಹೆಸರು ’ಕವಿ ಗೋಷ್ಠಿ’ಯಾದರೂ ಗದ್ಯ ಓದಲು ಅಡ್ಡಿ ಏನಿಲ್ಲ! ನಿಮ್ಮ ಕಂಪ್ಯೂಟರ್ ಕೀಲಿ ಮಣೆಯಲ್ಲಿ ಅಥವಾ ಲೇಖನಿಯಲ್ಲಿ ಹರಿದು ಬಂದ ಸರಸ್ವತಿಯ ನಾದ ಮಾಧುರ್ಯಕ್ಕೆ ಇಲ್ಲಿದೆ ಅಭಿವ್ಯಕ್ತಿಯ ವೇದಿಕೆ.

ಕವಿ ಗೋಷ್ಠಿಯಲ್ಲಿ ಭಾಗವಹಿಸಲು ಇಚ್ಛಿಸುವವರು ಈ ಕೆಳಗಿನ ಅಂಶಗಳನ್ನು ಗಮನಿಸಬೇಕಾಗಿ ವಿನಂತಿ:

ಪ್ರತಿಯೊಬ್ಬರಿಗೂ ಕವನ ವಾಚನಕ್ಕೆ ಐದು ನಿಮಿಷ ಹಾಗೂ ಗದ್ಯ ವಾಚನಕ್ಕೆ ಏಳು ನಿಮಿಷ ಕಾಲಾವಧಿ ನೀಡಲಾಗುತ್ತದೆ.

ನಿಮ್ಮ ರಚನೆಯನ್ನು ನೀವೇ ಓದಬೇಕು.

ನೀವು ಓದಬೇಕೆಂದಿರುವ ಸಾಹಿತ್ಯವನ್ನು ‘ಬರಹ’ ದಲ್ಲಿ ಟೈಪ್ ಮಾಡಿ ಮುಂಚಿತವಾಗಿ ನಮಗೆ ಕಳಿಸಿಕೊಡಿ.

ನಿಮ್ಮ ರಚನೆಯನ್ನು ಕಳಿಸಲು ಕೊನೆಯ ದಿನಾಂಕ ಏಪ್ರಿಲ್ ೨೭, ೨೦೧೩.

ಕವಿ ಗೋಷ್ಠಿಯಲ್ಲಿ ಪ್ರಸ್ತುತಿಯ ಆಯ್ಕೆಯ ಬಗ್ಗೆ ನಮ್ಮ ನಿರ್ಧಾರವೇ ಅಂತಿಮ.

ನಿಮ್ಮ ರಚನೆಯನ್ನು ಈ ಕೆಳ ಕಂಡ ವಿಳಾಸಕ್ಕೆ ಈಮೇಲ್ ಮಾಡಿ.

nmaiya@gmail.com

ಇತಿ,
ವಿಶ್ವಾಸಪೂರ್ವಕ,
ನಳಿನಿ ಮೈಯ

 Posted by at 9:51 AM
Mar 052013
 

ಕೆ.ವಿ.ತಿರುಮಲೇಶ ಅವರು ೧೯೪೦ರಲ್ಲಿ ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಎಂಬ ಗ್ರಾಮದಲ್ಲಿ ಜನಿಸಿದರು.ಪ್ರೊಫೆಸರ್ ಕೆ ವಿ ತಿರುಮಲೇಶ್ ಕನ್ನಡದ ಬಹು ಮುಖ್ಯಕವಿ ಮತ್ತು ವಿಮರ್ಶಕರಲ್ಲೊಬ್ಬರು. ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಅಂಡ್ ಫಾರಿನ್ ಲಾಂಗ್ವೇಜಸ್ ಸಂಸ್ಥೆಯಲ್ಲಿ ಪ್ರಾಧ್ಯಾಪಕರಾಗಿ ನಿವೃತ್ತಿ ಹೊಂದಿದ್ದಾರೆ.ನಂತರ ಯೆಮೆನ್ ದೇಶದಲ್ಲಿ ಕೆಲಕಾಲ ಇಂಗ್ಲೀಷ್ ಅಧ್ಯಾಪನ ಮಾಡಿದ್ದಾರೆ. ಇವರ ೨೦ ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ. ತಿರುಮಲೇಶರು ಅಮೇರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ನಿರಂಜನ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ.

ಕನ್ನಡದ ವಾಕ್ಯರಚನೆಯ ಕುರಿತು ಮತ್ತು ಕರ್ಮಣೀ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿ.ಎಚ್ ಡಿ. ಪ್ರಬಂಧ. ಬೇಂದ್ರೆಯವರ ಶೈಲಿಯ ಬಗ್ಗೆಯೂ ಮತ್ತಿತರ ಭಾಷಾಸಂಬಂಧಿ ವಿಷಯಗಳನ್ನು ಕುರಿತೂ ಹಲವಾರು ಲೇಖನಗಳನ್ನೂ, ಒಂದು ಲೇಖನ ಸಂಗ್ರಹವನ್ನೂ ಪ್ರಕಟಿಸಿದ್ದಾರೆ.
‘ಮುಖವಾಡಗಳು’ ಹಾಗೂ ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು.

 Posted by at 10:29 AM