ಪ್ರಿಯ ಗುರುಪ್ರಸಾದ್,
ನಿಮ್ಮ ‘ಗುಣ’ ಕಾದ೦ಬರಿಗೆ ಸೂರ್ಯನಾರಾಯಣ ಚಡಗ ಪ್ರಶಸ್ತಿ ದೊರೆತ ಸುದ್ದಿ ಕೇಳಿ ಸ೦ತೋಷವೂ ಹೆಮ್ಮೆಯೂ ಆಯಿತು. ನಮ್ಮ ರ೦ಗದ ಉಪಾಧ್ಯಕ್ಷರಿಗೆ ಇ೦ಥ ಸನ್ಮಾನ ದೊರೆತಿರುವುದು ನಾವು ಸ೦ಭ್ರಮಪಡಬೇಕಾದ ವಿಷಯ. ಕನ್ನಡ ಸಾಹಿತ್ಯ ರ೦ಗದ ಆಡಳಿತ ಮ೦ಡಲಿ ಮತ್ತು ಸದಸ್ಯರೆಲ್ಲರ ಪರವಾಗಿ ನಿಮಗೆ ನಮ್ಮ ಹೃತ್ಪೂರ್ವಕ ಅಭಿನ೦ದನೆಗಳನ್ನು ಅರ್ಪಿಸುತ್ತಿದ್ದೇನೆ. ದಯವಿಟ್ಟು ಸ್ವೀಕರಿಸುವುದು. ನಿಮ್ಮಿ೦ದ ಇನ್ನೂ ಅನೇಕ ಉತ್ತಮ ಕೃತಿಗಳನ್ನು ಎದುರುನೋಡುತ್ತಿದ್ದೇವೆ. ಆ ಆಸೆ ಬೇಗ ಕೈಗೂಡಲಿ! ಶಾ೦ತಲಾ ಅವರು ಹೇಳಿರುವ೦ತೆ, ನಿಮ್ಮ ಪುಸ್ತಕಕ್ಕೆ ಈ ಸನ್ಮಾನ ದೊರೆಯುವ ಮು೦ಚೆಯೇ ನಾವು ಅದನ್ನು ನಮ್ಮ ಸಮ್ಮೇಳನದಲ್ಲಿ ಚರ್ಚಿಸಿದ್ದೆವು ಎ೦ಬುದು ನಮಗೆ ಬಹಳ ಸಮಾಧಾನ ತರುತ್ತದೆ.
ಗೌರವಪೂರ್ವಕ,
ರಾಜಗೋಪಾಲ್
(ಆಡಳಿತ ಮ೦ಡಲಿ ಅಧ್ಯಕ್ಷ)
ಅಮೆರಿಕೆಯಲ್ಲಿ ಬಿಡಾರ ಹೂಡಿರುವ ಕನ್ನಡ ಪರಿಸರದ ಸ್ಥಾಯೀ ಮತ್ತು ಸಂಚಾರೀ ಭಾವಗಳ, ವೈವಿಧ್ಯಪೂರ್ಣ ಆಧುನಿಕ ಅಭಿವ್ಯಕ್ತಿಯ ವಿಶಿಷ್ಟ ಸೊಲ್ಲುಗಳ ಸಂಕಲನ ಇದು. ಕಾವ್ಯದ ಧ್ವನಿಶಕ್ತಿಯ ಜೊತೆಗೆ ಕಥನದ ಕುತೂಹಲವನ್ನೂ ಹೊಂದಿರುವ ಈ ಲಲಿತ ನಿಬಂಧಗಳು, ತಮ್ಮ ಅನುಭವಜನ್ಯ ವಿವರಗಳಲ್ಲಿ ಮೈದಾಳುತ್ತಲೇ, ಅದರಾಚೆಗೂ ಚಿಂತನಶೀಲವಾಗಿ ರೆಕ್ಕೆ ಬಿಚ್ಚುವ ರೀತಿ ಭಾವೋದ್ದೀಪಕವಾಗಿದೆ. ಹೊಸ ಆವರಣ, ಜೀವನ ಶೈಲಿಯ ವಿವರ, ಮಾಹಿತಿಗಳಷ್ಟೆ ಪ್ರಬಂಧವಾಗಲಾರವು. ವಿವರಗಳು ಅರಿವಿನೆಡೆಯ ಕಿಟಕಿಗಳೂ, ಬಾಗಿಲುಗಳೂ, ಕಾಲ್ದಾರಿಗಳೂ ಆದಾಗ ಮಾತ್ರ ಅದು ಸಾರ್ಥಕ ಸಲ್ಲಾಪ.
‘ಕೆಂಪು ಗಾಜಿನ ಹಣ್ಣುಗಳಂತೆ ಕಾಣುವ ಗಾರ್ನೆಟ್‌ಗಳು’, ‘ಸ್ಕೂಟರನ್ನು ಬೆದರಿಸುವ ಲಾರಿಯಂತೆ ಲೇಖಕಿಯನ್ನು ಕಂಗೆಡಿಸುವ ಖಾಲಿ ಹಾಳೆ’, ‘ಬಡಿಸಿದ್ದು ಆರಿ ಹೋಗ್ತಾಇದೆ, ಊಟಕ್ಕೆ ಬಾರೋ’ ಎಂದು ಕರೆಯುತ್ತಲೇ ಇರುವ ಅಮ್ಮನ ದನಿ, ‘ಮತಿಘಟ್ಟದ ಅಪರೂಪದ ಹತ್ತಿಯಷ್ಟೇ ಮೃದುವಾದ ನೆಹರೂರ ಕೈಕುಲುಕನ್ನು ನೆನೆಯುವ ಅಜ್ಜಯ್ಯ’, ‘ಐಸಿಯು’ನ ವೆಂಟಿಲೇಟರಿನಲ್ಲಿ ಹೋಗದ ಗಂಗೋದಕ’, ‘ಊರಿನ ಆಯಿಗೆಂದೇ ಕಾದಿರಿಸಿದ ಮಾಲ್‌ನ ಇಪ್ಪತ್ತು ಪೌಂಡ್ ಅಕ್ಕಿಯ ಸೋನಾಮಸೂರಿಯ ಖಾಲಿಚೀಲ’, ‘ಬಡವನ ಪಾಲಿನ ಕೇವಲ ಕಪ್ಪುಬಿಳಿಬಣ್ಣದ ಕಾಮನಬಿಲು’, ‘ಎಂದೂ ಹಾದಿ ತಪ್ಪಿಸದ ಎದೆಯ ಜಿ.ಪಿ.ಎಸ್’, ‘ಎಚ್‌ಒನ್‌ಎನ್‌ಒನ್’ಗಿಂತ ಭಯಾನಕವಾದ ‘ಎಚ್‌ಒನ್’(ವೀಸಾ) ಆತಂಕ, ‘ಕ್ಷಣವನ್ನು ಹಿಡಿಯುವುದನ್ನು ಹೇಳಿಕೊಡುವ ಟೀವಿ ಗುರು’, ‘ಕಳೆದುಕೊಂಡದ್ದರ ಕುರಿತ ದಿಢೀರ್ ವೈರಾಗ್ಯ’, ‘ಸೊನ್ನೆಯಿಂದ ಅನಂತದ ನಡುವಿನ ಶೂನ್ಯ ಸಂಪಾದನೆ’, ‘ನೆನಪಿನ ಚಿಲಿಪಿಲಿಗಳಿಂದ ನೇಯ್ದ ಖಾಲಿಗೂಡು’, ‘ಬರೆದು ಒರೆಸಿದಷ್ಟೂ ನುಣುಪಾಗುವ, ಅಂಚು ಮೊಂಡಾದ ಕಲ್ಲಿನ ಪಾಟಿ(ಸ್ಲೇಟ್)’ …. ಇಂಥ ಎಷ್ಟೊಂದು ಸಜೀವ ಸಂಗತಿಗಳು, ಒಟ್ಟಾಗಿ ಒಂದು ದರ್ಶನದೆಡೆಗೆ ಪ್ರಾಮಾಣಿಕವಾಗಿ ಚಲಿಸುವ ರೀತಿಯೇ ಈ ನಿಬಂಧಗಳ ನಿರಾಡಂಬರ ಸ್ಥೈರ್ಯವಾಗಿದೆ. ಇಂಥ ವಿವರಗಳು ಕೇವಲ ಕಲೆಹಾಕುವ ‘ಮಾಹಿತಿ’ಗಳಾಗದೆ, ಒಂದು ಮನೋಧರ್ಮವನ್ನು ರೂಪಿಸುವ ಸ್ಪಂದನವಾಗಿ ಬೆಳೆಯುವುದರಿಂದಲೇ, ಇಲ್ಲಿನ ಹೆಚ್ಚಿನ ಬರಹಗಳು ಕನ್ನಡ ಸಂವೇದನೆಯನ್ನು ಹಿಗ್ಗಿಸುವಷ್ಟು ಸತ್ವಶಾಲಿಯಾಗಿವೆ.
ಜಯಂತ ಕಾಯ್ಕಿಣಿ