May 052011
 
ಪುಸ್ತಕ ಮಳಿಗೆಯಲ್ಲಿ ‘ …ಮಾತು.’

ಅಮೆರಿಕದಲ್ಲಿ ಬೇರೆಬೇರೆ ಬಗೆಯ ಕನ್ನಡಿಗರ ಸಮಾವೇಶಗಳು ನಡೆಯುವುದು ನಮಗೆಲ್ಲ ತಿಳಿದಿದೆ. ಅವುಗಳಲ್ಲೆಲ್ಲ ಗಂಭೀರ ಸಾಹಿತ್ಯಾಸಕ್ತರು ಸೇರಿ ರಚಿಸಿಕೊಂಡಿರುವ ಸಾಹಿತ್ಯರಂಗದ ಕಾರ್ಯಕ್ರಮಗಳು ಇದಕ್ಕಿಂತ ಕೊಂಚ ಭಿನ್ನವಾಗಿವೆ ಮತ್ತು ವಿಶಿಷ್ಟವಾಗಿವೆ. ಸಾಹಿತ್ಯ ರಂಗವು ಕನ್ನಡ ಸಾಹಿತ್ಯದ ಮೇಲೆ  ಚರ್ಚೆಯನ್ನು ಏರ್ಪಡಿಸುತ್ತದೆ; ಮತ್ತು ಅಮೆರಿಕದಲ್ಲಿರುವ ಕನ್ನಡ ಲೇಖಕರು ಬರೆದಿರುವ ಬರಹಗಳ ಸಂಕಲನವನ್ನು ಪ್ರಕಟಿಸುತ್ತದೆ. ಕರ್ನಾಟಕದಲ್ಲಿ ಉತ್ಸವಗಳು ಹೆಚ್ಚಾಗುತ್ತ ಸಂವಾದ ಮತ್ತು ಚರ್ಚೆಗಳು ಕಡಿಮೆಗೊಳ್ಳುತ್ತಿವೆ ಅನಿಸುತ್ತಿರುವ ಈ ಹೊತ್ತಲ್ಲಿ, ಸಾಹಿತ್ಯ ರಂಗದ ಈ ಉಪಕ್ರಮವು ಮಹತ್ವದ್ದಾಗಿ ತೋರುತ್ತಿದೆ. ಅಮೆರಿಕ ಕನ್ನಡಿಗರ ಬರೆಹಗಳ ಸಂಕಲನವಾಗಿರುವ ಪ್ರಸ್ತುತ ಕೃತಿಯು, ಈ ಬಾರಿಯ ವಸಂತೋತ್ಸವದಲ್ಲಿ ಬಿಡುಗಡೆಯಾಗುತ್ತಿದೆ. ಇದಕ್ಕೆ ನಾನು ಮುನ್ನುಡಿಯನ್ನು ಬರೆಯಬೇಕೆಂದು ಸಾಹಿತ್ಯರಂಗದ ಅಧ್ಯಕ್ಷರಾದ ಶ್ರೀ. ರಾಜಗೋಪಾಲ್ ಅವರು ಇಚ್ಛೆಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಈ ಕೆಲವು ಅನಿಸಿಕೆಗಳನ್ನು ಹಂಚಿಕೊಳ್ಳುತ್ತಿದ್ದೇನೆ.

ಈ ಸಂಕಲನದಲ್ಲಿರುವ ಬರಹಗಳನ್ನು ಸಂಪಾದಕರು ಸಲ್ಲಾಪ ಹರಟೆ ಚಿಂತನೆ ಎಂದು ಮೂರು ಭಾಗಗಳಲ್ಲಿ ವಿಂಗಡಿಸಿದ್ದಾರೆ. ಆದರೆ ಅನುಭವ ಮತ್ತು ಚಿಂತನಾ ಪ್ರಧಾನವಾದ ಈ ಬರೆಹಗಳನ್ನು ಒಟ್ಟಾರೆಯಾಗಿ ಪ್ರಬಂಧಗಳು ಎನ್ನಬಹುದು. ಈ ಪ್ರಬಂಧಗಳನ್ನು ಓದುತ್ತ ನನಗೆ ಅಮೆರಿಕ ಕನ್ನಡಿಗರ ಬಾಳಿನ ಒಂದು ಮುಖದ ದರ್ಶನವಾದಂತಾಯಿತು. ಬೇರೆಬೇರೆ ಕ್ಷೇತ್ರದಲ್ಲಿ ಹಾಗೂ ಜ್ಞಾನಶಿಸ್ತಿನಲ್ಲಿ ಕೆಲಸ ಮಾಡುವ ಜನರು ಕನ್ನಡದೊಳಗೆ ಬರೆಯುವುದರಿಂದ ಕನ್ನಡ ಬರೆಹಕ್ಕೆ ಹೊಸಶಕ್ತಿಯ ಆವಾಹನೆಯಾಗುತ್ತದೆ ಎಂದು ನಂಬಿದವನು ನಾನು. ಈ ಬರೆಹಗಳನ್ನು ಓದಿದ ಮೇಲೆ, ಬೇರೆಬೇರೆ ದೇಶಗಳಲ್ಲಿ ಇರುವ ಕನ್ನಡಿಗರು ಬರೆದಾಗಲೂ ಕನ್ನಡಕ್ಕೆ ಹೊಸ ಆಯಾಮದ ಕೂಡಿಕೆಯಾಗುತ್ತದೆ ಎಂದು ಅನಿಸುತ್ತಿದೆ. ಈ ಬರೆಹಗಳ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಹೋಗಿಬಂದವರು ಬರೆದ ಅನೇಕ ಪ್ರವಾಸಕಥನಗಳ ಮಿತಿಯೂ ಹೊಳೆಯುತ್ತಿದೆ.

ಇಲ್ಲಿನ ಲೇಖಕರು ಮುಖ್ಯವಾಗಿ ವೈದ್ಯರು ಇಂಜಿನಿಯರರು ವಿಜ್ಞಾನಿಗಳು ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಆಗಿರುವರು. ಇವರಲ್ಲಿ ಅರ್ಧದಷ್ಟು ಜನ ಮಹಿಳೆಯರು ಎನ್ನುವುದು ಸಹ ಕುತೂಹಲಕರ. ಇಲ್ಲಿನ ಲೇಖಕರಿಗೆ ಪುರುಸೊತ್ತೇ ಇಲ್ಲದ ದುಡಿಮೆ ಮತ್ತು ಸಾಂಸ್ಕೃತಿಕ ಏಕಾಂಗಿತನವೇ ಈ ಬಗೆಯ ಬರೆಹಗಳಲ್ಲಿ ಅವರನ್ನು ತೊಡಗಿಸಿರುವಂತೆ ತೋರುತ್ತದೆ. ಹೀಗಾಗಿ ಇಲ್ಲಿನ ಬರೆಹಗಳಿಗೆ ಆಯಾ ಲೇಖಕರ ವೈಯಕ್ತಿಕ ವಿಶಿಷ್ಟತೆ ಮತ್ತು ಲೋಕದೃಷ್ಟಿಗಳ ಆಚೆ, ಒಂದು ಸಾಮುದಾಯಕ ಲಕ್ಷಣವೂ ಇದೆ. ಉದಾಹರಣೆಗೆ, ಇಲ್ಲಿನ ಬರೆಹದ ಮುಖ್ಯ ವಸ್ತು, ಕಳೆದುಹೋದ ಬಾಳಿನ ಅಥವಾ ಬಿಟ್ಟುಬಂದ ದೇಶದ ನೆನಪುಗಳಿಗೆ ಸಂಬಂಧಪಟ್ಟಿರುವುದು ಗಮನಿಸಬೇಕು. ಹೀಗಾಗಿಯೇ ಬಾಲ್ಯದ ಬದುಕಿನ ಸಂಗತಿಗಳು ಇಲ್ಲಿ ಬಹುತೇಕ ಬರೆಹಗಳ ‘ವಸ್ತು’ವಾಗಿವೆ. ಇದರಿಂದ ಸಹಜವಾಗಿಯೇ ಬರೆಹಗಳಲ್ಲಿ ಭಾವುಕತೆ ಪ್ರಧಾನವಾಗಿ ಕೆಲಸ ಮಾಡಿದೆ. ಇಲ್ಲಿರುವ ಅಡುಗೆ ಮತ್ತು ಊಟದ ವಿವರಗಳು ಕೂಡ ಗತದ ಸ್ಮೃತಿಗಳಲ್ಲಿ ಆಹಾರ ಸಂಸ್ಕೃತಿಯ ಪ್ರಾಮುಖ್ಯವನ್ನು ಸೂಚಿಸುತ್ತಿವೆ. ಇಲ್ಲಿ ಬಳಕೆಯಾಗಿರುವ ಕರ್ನಾಟಕದ ಬೇರೆಬೇರೆ ಭಾಗದ ಪ್ರಾದೇಶಿಕ ವಿಶಿಷ್ಟವಾದ ಮಾತುಕತೆಗಳು ಬರೆಹವನ್ನು ಜೀವಂತಗೊಳಿಸಿವೆ. ಮಾತ್ರವಲ್ಲ, ಅವು ದೂರದೇಶದಲ್ಲಿದ್ದು ಊರನ್ನು ನೆನೆಯುವ ಒಳ ಉಪಾಯವಾಗಿಯೂ ಬಂದಂತಿವೆ.

ಇಲ್ಲಿನ ಬರಹಗಳಿಗೆ ಇನ್ನೊಂದು ಮುಖವಿದೆ. ಅದು ಬದುಕಿಗಾಗಿ  ಆಯ್ದುಕೊಂಡಿರುವ ಹೊಸ ದೇಶದಲ್ಲಿ ಅನುಭವಿಸುವ ಕಷ್ಟ ಸುಖಗಳನ್ನು ಕುರಿತದ್ದು. ಅಪರಿಚಿತವಾದ ನಾಗರಿಕ ಸಮಾಜದಲ್ಲಿ ಬದುಕನ್ನು ಸವಾಲಾಗಿ ಸ್ವೀಕರಿಸಿದ ಜನ ಮಾಡಿರುವ ಹೋರಾಟ ಮತ್ತು ಬೆಳೆಸಿಕೊಂಡಿರುವ ಹೊಸ ಸಂಬಂಧಗಳ ಚಿತ್ರಣವೂ ಇಲ್ಲಿದೆ. ಗೆಳತಿಯ ಮನೆಗೆ ಹೋದ ಅನುಭವವನ್ನು ಹೇಳಿಕೊಂಡಿರುವ ಮಾಲಾರಾವ್ ಅವರ ಲೇಖನವು ಅಮೆರಿಕವನ್ನು ತನ್ನದೆಂದು ಭಾವಿಸಿದ ಸದರ ಮತ್ತು ಆಪ್ತತೆಯಲ್ಲಿಯೇ ಹುಟ್ಟಿದ್ದು. ಇದಕ್ಕೆ ಪ್ರತಿಯಾಗಿ, ಮರಳಿ ಸ್ವದೇಶಕ್ಕೆ ಬಂದಾಗ, ಸ್ವಂತ ಊರಿನಲ್ಲಿ ತಿರುಗಾಡುವಾಗ, ಪರಕೀಯತೆಯ ಭಾವ ಅನುಭವಿಸುವಿಕೆ ಬರೆಹಗಳೂ ಇವೆ. ಬಹುಶಃ ಪರದೇಶದಲ್ಲಿ ಅನುಭವಿಸುವ  ಪರಕೀಯತೆಯ ಭಾವಕ್ಕಿಂತ ನಮ್ಮ ಊರುಗಳಲ್ಲೇ ಅನುಭವಿಸುವ ಪರಕೀಯತೆಯು ಹೆಚ್ಚು ವಿಚಿತ್ರವಾದುದು. ಸಂಕಟಕರವಾದುದು. ಆದರೆ ಅದನ್ನು ಹೇಳಿಕೊಳ್ಳುವುದಕ್ಕೆ ಪ್ರಾಮಾಣಿಕತೆ ಬೇಕು. ದತ್ತಾತ್ರಿಯವರ ಲೇಖನವು,  ನೆನಪುಗಳ ಭಾವುಕತೆಯು ಬದಲಾದ ವಾಸ್ತವತೆಯ ಜತೆ ಮುಖಾಮುಖಿ ಮಾಡಿದಾಗ ಹುಟ್ಟುವ ಕಟುವಾದ ಅನುಭವಗಳನ್ನು ನಮಗೆ ಮುಟ್ಟಿಸುತ್ತದೆ.

ಹೀಗೆ ಬಿಟ್ಟುಹೋದ ದೇಶದ ಮತ್ತು ಬದುಕುತ್ತಿರುವ ದೇಶದ ಎರಡೂ ಅನುಭವ ಲೋಕಗಳು ಸೇರಿ, ಇಲ್ಲಿನ ಬರೆಹಗಳಲ್ಲಿ ಒಂದು ಬಗೆಯ ಇಂಡೊ-ಅಮೆರಿಕನ್ ಎಂದು ಕರೆಯಬಹುದಾದ ಒಂದು ಅನುಭವಲೋಕವು ನಿರ್ಮಾಣವಾಗಿದೆ. ಹೊಸ ಮತ್ತು ಹಳೆಯ ತಲೆಮಾರಿನ ಲೇಖಕರು ಒಟ್ಟಿಗೆ ಬರೆದಿರುವುದರಿಂದ, ಹಳೆಯ ಅಮೆರಿಕ ಚಿತ್ರದಿಂದ ಬದಲಾದ ಅಮೆರಿಕದ ಚಿತ್ರದವರೆಗೆ ಹಳೆಯ ಭಾರತದಿಂದ ಬದಲಾದ ಭಾರತದವರೆಗೆ, ಎರಡೂ ದೇಶಗಳ ಅಂದು ಇಂದಿನ ಚಿತ್ರಗಳು ಇಲ್ಲಿ ಸಿಗುತ್ತವೆ. ಒಟ್ಟಾರೆ ಇಲ್ಲಿರುವುದು ಬದಲಾದ ಅಥವಾ ಬದಲಾಗುತ್ತಿರುವ ದೇಶಗಳ ಕಥನ.

ಇಲ್ಲಿನ ಎರಡು ಲೇಖನಗಳು ಅಮೆರಿಕದ ಹಿಂದುಧರ್ಮ ಬದಲಾಗುತ್ತಿರುವ ಚಿತ್ರವನ್ನು ಕೊಡುತ್ತದೆ. ‘ಅಮೆರಿಕೋಪನಯನ’ ಎಂಬ ಇಲ್ಲಿನ ಒಂದು ಲೇಖನದ ಹೆಸರು, ಬಹುಶಃ ಈ ಮಿಶ್ರಸಂಸ್ಕೃತಿಯನ್ನು ಮಾರ್ಮಿಕವಾಗಿ ಸೂಚಿಸುತ್ತಿದೆ. ‘ಗೇ’ ಮದುವೆ ಮಾಡಿಸಿದ ಪುರೋಹಿತನಿಂದ ಹಿಡಿದು ಭಾಷಣದ ಮೊದಲು ಶಂಖ ಊದುವ ವ್ಯಕ್ತಿಯವರೆಗೆ ಎಷ್ಟೊಂದು ಬಗೆಯ ಚಿತ್ರಗಳಿವೆ ಇಲ್ಲಿ! ಇವೆಲ್ಲವೂ ಸಂಸ್ಕೃತಿ ಧರ್ಮ ಅಧ್ಯಯನ ಮಾಡುವವರಿಗೆ ಮಹತ್ವದ ಸಂಗತಿಗಳಾಗಿವೆ. ಅಮೆರಿಕದ ಕನ್ನಡಿಗರ ಅನುಭವ ಲೋಕ ಮತ್ತು ಚಿಂತನಕ್ರಮಗಳಲ್ಲಿ ನಾನಾ ಪರಿಯಲ್ಲಿ ಅಡಗಿರುವ ಸಂಕರತನವು, ಅದನ್ನು ಅಭಿವ್ಯಕ್ತಿ ಮಾಡಲು ಬಳಸುತ್ತಿರುವ ಭಾಷೆಯನ್ನು ಸಹ ಸಂಕರಗೊಳಿಸಿಗೊಂಡಿದೆ. ಹೊಸ ಅನುಭವ ಮತ್ತು ಚಿಂತನೆಗಳು ಹೊಸ ಭಾಷೆಯನ್ನು ಕಟ್ಟಿಕೊಳ್ಳಲು ಒತ್ತಾಯ ಹಾಕುವುದು ಸಾಮಾನ್ಯ.

ಇಲ್ಲಿನ ಬರಹಗಳಲ್ಲಿ ಸಂಕ್ರಮಣದ ಅವಸ್ಥೆಯಲ್ಲಿರುವ ಜೀವನದ ಲಯವನ್ನು ಹಿಡಿಯುವುದೇ ಪ್ರಧಾನವಾಗಿದೆ. ಜಂಗಮಕ್ಕಳಿವಿಲ್ಲ ನಿಜ. ಆದರೆ ಜಂಗಮತನಕ್ಕೆ ನೋವಿನ ತಲ್ಲಣದ ಅಸ್ಥಿರತೆಯ ಸಂಕಟಗಳೂ ಇವೆ. ಇಲ್ಲಿನ ಅನೇಕ ಬರೆಹಗಳಲ್ಲಿ ಬದಲಾವಣೆ ಸಹಜವೆಂಬ ಭಾವವಿದ್ದರೂ, ಆಳದಲ್ಲಿ ಎಂತಹುದೊ ಒಂದು ಬಗೆಯ ಆತಂಕವೂ ಸುಪ್ತವಾಗಿ ಮಿಡಿಯುತ್ತ ಇದೆ. ಈ ಆತಂಕದ ಭಾಗವಾಗಿಯೇ ಇಲ್ಲಿನ ಬರೆಹಗಳಲ್ಲಿರುವ ವಿನೋದ ಪ್ರಜ್ಞೆಯನ್ನು ನೋಡಬೇಕು. ಇಲ್ಲ್ಲಿನ ಬರಹಗಳ ಶಕ್ತಿಯೂ ಆಗಿರುವ ಈ ಲಘುಶೈಲಿಯು ಲೇಖಕರ ಸಹಜ ವಿನೋದ ಪ್ರಜ್ಞೆಯಿಂದ ಮಾತ್ರ ಬಂದಿದ್ದಲ್ಲ; ಅದು ಬದುಕಿನ ಪರಿಸ್ಥಿತಿಗಳೇ ಅದನ್ನು ಸಹ್ಯವಾಗಿಸಿಕೊಂಡು ಬದುಕಲು ಹುಟ್ಟಿಸಿದ ಅನಿವಾರ್ಯವಾದ ಕೀಲೆಣ್ಣೆಯಂತೆ  ಬಂದಂತಿದೆ. ತಮ್ಮ ಹತೋಟಿಗೆ ಮಿರಿದ ಪಲ್ಲಟಗಳನ್ನು ಸಹಿಸುವುದಕ್ಕೆ ಈ ಹಾಸ್ಯಪ್ರಜ್ಞೆ ನೆರವಾಗಿರುವಂತಿದೆ. ವೈಯಕ್ತಿಕವಾಗಿ ಮೈಶ್ರೀ ಅವರ ಪ್ರಾಮಾಣಿಕ ಪೋಲಿತನ ಧ್ವನಿಪೂರ್ಣವಾದ ಮಾತುಗಳನ್ನು ಸಹಜವಾಗಿ ಬರೆಯುವುದು ಇಷ್ಟವಾಗುತ್ತದೆ.

ಇಲ್ಲಿನ ಬರಹಗಳ ಗುಣಮಟ್ಟ ಬೇರೆಬೇರೆ ತರಹ ಇದೆ. ಬರವಣಿಗೆಯ ಕಲೆಯನ್ನು ಬಲ್ಲ ಕುಶಲರು ಇರುವಂತೆ, ಕುಶಲತೆಯಿಲ್ಲದವರೂ ಇದ್ದಾರೆ. ಲವಲವಿಕೆಯ ಬರೆಹಗಳಿರುವಂತೆ ಕೆಲವು ಸೋತ ಬರೆಹಗಳೂ ಇವೆ. ಕೆಲವು ಪ್ರಬಂಧಗಳು ಅನುಭವ ಪ್ರಧಾನವಾಗಿವೆ. ಕೆಲವು ಚಿಂತನ ಪ್ರಧಾನವಾಗಿವೆ. ಆದರೆ ಅನುಭವ ಮತ್ತು ಚಿಂತನೆಯ ಎರಡೂ ಆಯಾಮಗಳನ್ನು ಬೆಸೆಯಲು ಯತ್ನಿಸಿರುವ ಬರಹಗಳೇ ಇಲ್ಲಿನ ಯಶಸ್ವೀ ಬರೆಹಗಳು. ದತ್ತಾತ್ರಿ, ಕಾಗಿನೆಲೆ, ಶಾಂತಲಾ, ಶಶಿಕಲಾ ಅವರ ಲೇಖನಗಳಲ್ಲಿ ಅಳವಟ್ಟಿರುವ ಚಿಂತನೆ ಅಪೂರ್ವವಾಗಿದೆ. ವೈಶಾಲಿ ಮತ್ತು ಶಶಿಕಲಾ ಅವರು ಒಳ್ಳೇ ಪ್ರಬಂಧಕಾರರು. ವಿಮಲಾ ಅವರು ಬಹಳ ಸಹಜವಾಗಿ ಬರೆದಿರುವ ಬರೆಹವು ಬಹಳ ಆಳವನ್ನು ಹೊಂದಿದೆ. ಅವರಿಗೆ ರೋಚಕಗೊಳ್ಳದೆ ತಣ್ಣಗೆ ದೊಡ್ಡದನ್ನು ಬರೆಯುವ ಶಕ್ತಿಯಿದೆ. ರಾಮಪ್ರಿಯನ್ ಅವರ ಹಳಹಳಿಕೆಯಿಂದ ಕೂಡಿದ್ದರೂ ಕಳೆದುಹೋದ ದಿನಗಳ ಚಿತ್ರವನ್ನು ಕೊಡುವ ಕಾರಣಕ್ಕಾಗಿಯೇ ಚಾರಿತ್ರಿಕ ಮಹತ್ವ ಪಡೆದಿದೆ.

ಅಮೆರಿಕದ ಬಗ್ಗೆ ಅದರ ಹೊರಗಿರುವ ನಮ್ಮಂತಹವರಿಗೆ ಎರಡು ಅತಿರೇಕದ  ಗ್ರಹಿಕೆಗಳಿದ್ದಂತಿವೆ. ಒಂದು ರೆಡ್‌ಇಂಡಿಯನರನ್ನು ಕೊಂದು ದೇಶವನ್ನು ಆಕ್ರಮಿಸಿಕೊಂಡು, ಗುಲಾಮಗಿರಿಯನ್ನು ಎಗ್ಗಿಲ್ಲದೆ ಮಾಡುತ್ತ, ತಮ್ಮ ಹಿತಾಸಕ್ತಿಗಳಿಗೆ ಯುದ್ಧಖೋರ ನೀತಿಯನ್ನು ಮಾಡುತ್ತಿರುವ ದೊಡ್ಡಣ್ಣ ಎಂಬುದು; ಇನ್ನೊಂದು ಅಮೆರಿಕವು ತಂತ್ರಜ್ಞಾನ ವಿಜ್ಞಾನದಲ್ಲಿ ಶಿಕ್ಷಣವುಳ್ಳ ಮಂದಿಗೆ ತೆರೆದಿರುವ ಭುವಿಯ ಮೇಲಣ ಸ್ವರ್ಗ ಎಂಬುದು. ಈ ಎರಡನೆಯ ಚಿತ್ರಕ್ಕೆ ಕಾರಣ, ಪ್ರವಾಸಿಗರಾಗಿ ಅಮೆರಿಕಕ್ಕೆ ಹೋಗಿಬಂದವರ ಪ್ರವಾಸ ಕಥನಗಳೂ  ಇರಬೇಕು. ಆದರೆ ಈ ಎರಡಕ್ಕೂ ಹೊರತಾಗಿ, ಅಲ್ಲಿಯೇ ಬದುಕುತ್ತಿರುವ ಜನರ ಗ್ರಹಿಕೆಗಳು ಬೇರೆಬೇರೆ ತರಹ ಇವೆ ಎಂಬುದನ್ನು ಈ ಕೃತಿ ಸಾದರಪಡಿಸುತ್ತದೆ. ಇಷ್ಟಾಗಿಯೂ ೯/೧೧ರ ಸ್ಮೃತಿಯು ಅನೇಕ ಬರಹಗಳಲ್ಲಿ ಕಾಣಿಸಿದ್ದು ಅದೊಂದು ವಿಷಾದಕರ ಘಟನೆಯಾಗಿ ಪಾಸಾಗಿದೆ. ಆದರೆ ಬರೆಹಗಳಲ್ಲಿ ಅಮೆರಿಕದ ಯುದ್ಧ ಮತ್ತು ವಿದೇಶನೀತಿಯನ್ನು ಕುರಿತ ವಿಮರ್ಶೆಯ ಮಾತು ಒಂದೇ ಒಂದು ಕಡೆ ಧ್ವನಿಪೂರ್ಣವಾಗಿ ಬಂದಿರುವುದು ಬಿಟ್ಟರೆ, ಉಳಿದಂತೆ ಈ ಕುರಿತು ಎಚ್ಚರಿಕೆಯ ಮೌನವೇ ಆವರಿಸಿದೆ. ಬಹುಶಃ ಅಮೆರಿಕದಲ್ಲಿದ್ದೇ ಅದನ್ನು ವಿಮರ್ಶಿಸುವುದು ಕಷ್ಟವೊ ಅಥವಾ ಹಾಗೆ ವಿಮರ್ಶೆ ಮಾಡುವಂತಹ ದೃಷ್ಟಿಕೋನವೇ ಇಲ್ಲವೊ ತಿಳಿಯದು. ಆದರೆ ಅಮೆರಿಕನ್ ಸಮಾಜದ ಚಿತ್ರಣವು ಇಲ್ಲಿನ ಬರೆಹಗಳಲ್ಲಿ ಬಹುಮಟ್ಟಿಗೆ ಕ್ಷೀಣವಾಗಿದೆ.

ತನ್ನ ಪಾಡಿಗೆ ತಾನಿರುವ ಅಮೆರಿಕನ್ ಬದುಕೇ ಇಂತಹುದೊ? ಅಥವಾ  ದೈಹಿಕ ಶ್ರಮ ಮಾಡುವ ಜನರು ಅಮೆರಿಕಕ್ಕೆ ಹೋಗಿ ಬರೆದರೆ ಅವರ ಅನುಭವ ಲೋಕ ಭಿನ್ನವಾಗಿರುವುದೊ? ಈ ಕುತೂಹಲವು ಈ ಬರೆಹಗಳನ್ನು ಓದಿದ ಬಳಿಕ ಹಾಗೆ ಉಳಿಯುತ್ತದೆ. ಇಲ್ಲಿನ ಲೇಖಕರ ಸಾಮಾಜಿಕ ಹಿನ್ನೆಲೆ ಮತ್ತ ವರ್ಗದ ಸ್ತರವು ಇಲ್ಲಿನ ಬರೆಹಗಳ ಅನುಭವ ಲೋಕಕ್ಕೆ ಒಂದು ಪರಿಮಿತಿಯನ್ನು ಒದಗಿಸಿದೆ. ಆದರೆ ಇಲ್ಲಿನ ಬರೆಹಗಳು ಅನಿವಾರ್ಯವಾಗಿ ಹೇರಲ್ಪಡುವ ಇಂತಹ ಸಾಮಾಜಿಕ ರಾಜಕೀಯ ಚೌಕಟ್ಟನ್ನು ಮೀರಲು ಪ್ರೇರಿಸುತ್ತವೆ. ಇದು ತಾನೇ ಬರೆಹದ ಅಥವಾ ಕಲೆಯ ಶಕ್ತಿ? ಇರುವುದೆಲ್ಲವ ಬಿಟ್ಟು ಇರದುದೆಡೆಗೆ ತುಡಿಯುವ ಚಹರೆಗಳು ಇಲ್ಲಿನ ಬರೆಹಗಳಲ್ಲಿವೆ. ಕನ್ನಡನಾಡಿನಲ್ಲಿ ಇರುವವರು ಬರೆಯುತ್ತಿರುವುದನ್ನು ವಿಶ್ವದ ಕನ್ನಡಿಗರು ಓದುವುದು ಒಂದು ಬಗೆಯಾಗಿದೆ; ವಿಶ್ವದ ಬೇರೆಬೇರೆ ಭಾಗದಲ್ಲಿರುವ ಕನ್ನಡಿಗರು ಬರೆಯುವುದು ಒಳನಾಡಿನಲ್ಲಿರುವ ನಾವು ಓದುವುದು ಇನ್ನೊಂದು ಬಗೆಯಾಗಿದೆ. ನಾವು ಎಲ್ಲಿದ್ದು ಬರೆಯುತ್ತೇವೆ ಎನ್ನುವುದು ಬರಹದ ಸ್ವರೂಪವನ್ನು ನಿರ್ಣಯಿಸುವಂತೆ, ನಾವು ಎಲ್ಲಿದ್ದುಕೊಂಡು ಓದುತ್ತೇವೆ ಎನ್ನುವುದು ನಮ್ಮ ಓದಿನ ಪರಿಯನ್ನೂ ನಿಯಂತ್ರಿಸುತ್ತದೆ.  ಅಮೆರಿಕದ ಕನ್ನಡಿಗರ ತಳಮಳಗಳನ್ನು ಸುಖ ಸಂಭ್ರಮಗಳನ್ನು ಆಶೋತ್ತರಗಳನ್ನು ಈ ಮೂಲಕ ತಿಳಿಯುವಂತೆ ಮಾಡಿದ ಇಲ್ಲಿನ ಲೇಖಕರನ್ನು ಕೃತಜ್ಞತೆಯಿಂದ ನೆನೆಯುತ್ತೇನೆ.

ರಹಮತ್ ತರೀಕೆರೆ

 Posted by at 8:15 AM
Apr 112011
 
Dr.Sumatheendra Nadig
ಡಾ. ಸುಮತೀಂದ್ರ ನಾಡಿಗ

ಕವಿ, ಕಥೆಗಾರ, ವಿಮರ್ಶಕ ಸುಮತೀಂದ್ರ ನಾಡಿಗ

ಕನ್ನಡದ ಪ್ರಮುಖ ಕವಿ ಮತ್ತು ವಿಮರ್ಶಕರಾಗಿ ಪ್ರಸಿದ್ಧರಾಗಿರುವ ಶ್ರೀ ಸುಮತೀಂದ್ರನಾಡಿಗರು (ಜನನ: ೧೯೩೫) ಚಿಕ್ಕಮಗಳೂರು ಜಿಲ್ಲೆಯ ಕಳಸದಲ್ಲಿ ಜನಿಸಿದರು. ಇಂಗ್ಲಿಷ್ ಮತ್ತು ಕನ್ನಡ ಸಾಹಿತ್ಯಗಳ ಪ್ರತಿಭಾವಂತ ವಿದ್ಯಾರ್ಥಿಯಾದ ನಾಡಿಗರು ೧೯೫೭ರಲ್ಲಿ ಮೈಸೂರು ವಿಶ್ವವಿದ್ಯಾನಿಲಯದಿಂದ ಮತ್ತು ೧೯೭೯ರಲ್ಲಿTemple University, Philadelphia, USA  ಇಂದ ಇಂಗ್ಲಿಷ್ ಎಂ. ಎ. ಪದವಿಯನ್ನು ಪಡೆದರು. ೧೯೮೫ರಲ್ಲಿ, ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಕನ್ನಡದಲ್ಲಿ ಡಾಕ್ಟರೇಟ್ ಪಡೆದುಕೊಂಡ ನಾಡಿಗರು ತಮ್ಮ ಪ್ರೌಢ ಪ್ರಬಂಧಕ್ಕಾಗಿ ಆರಿಸಿಕೊಂಡಿದ್ದ ವಿಷಯ ‘ಬೇಂದ್ರೆಯವರ ಕಾವ್ಯದ ವಿಭಿನ್ನ ನೆಲೆಗಳು’. ಬೇಂದ್ರೆ, ಗೋಪಾಲಕೃಷ್ಣ ಅಡಿಗ ಮತ್ತು ಕೆ. ಎಸ್. ನರಸಿಂಹಸ್ವಾಮಿಯವರ ಕಾವ್ಯದ ಬಗ್ಗೆ ವಿಶೇಷವಾದ ಅಧ್ಯಯನ ನಡೆಸಿದ್ದಾರೆ.
ಸುಮತೀಂದ್ರ ನಾಡಿಗರು ಕಾವ್ಯ, ಸಣ್ಣಕಥೆ, ವಿಮರ್ಶೆ, ಅನುವಾದ ಪ್ರಕಾರಗಳಲ್ಲಿ ತಮ್ಮ ಅಮೂಲ್ಯ ಕೊಡುಗೆಯನ್ನು ಸಲ್ಲಿಸಿದ್ದಾರೆ. ‘ಜಡ ಮತ್ತು ಚೇತನ’, ‘ಪಂಚಭೂತಗಳು’, ‘ನಟರಾಜ ಕಂಡ ಕಾಮನಬಿಲ್ಲು’, ‘ಕುಹೂ ಗೀತ’, ‘ತಮಾಷೆ ಪದ್ಯಗಳು’, ‘ದಾಂಪತ್ಯ ಗೀತ’, ‘ಭಾವಲೋಕ’, ‘ಉದ್ಘಾಟನೆ’, ‘ಕಪ್ಪು ದೇವತೆ’ ಮತ್ತು ‘ನಿಮ್ಮ ಪ್ರೇಮಕುಮಾರಿಯ ಜಾತಕ’ ಎಂಬ ಕವನ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಇವುಗಳ ಪೈಕಿ ‘ಪಂಚಭೂತಗಳು’ ಮತ್ತು ‘ದಾಂಪತ್ಯ ಗೀತ’ ಬಹಳ ಪ್ರಮುಖವಾಗಿದ್ದು, ಇಂಗ್ಲಿಷ್ ಮತ್ತು ಭಾರತದ ಹಲವಾರು ಪ್ರಾಂತೀಯ ಭಾಷೆಗಳಿಗೆ ಅನುವಾದಗೊಂಡಿವೆ.
‘ಮೌನದಾಚೆಯ ಮಾತು’, ‘ನಾಲ್ಕನೆಯ ಸಾಹಿತ್ಯ ಚರಿತ್ರೆ’, ‘ಮತ್ತೊಂದು ಸಾಹಿತ್ಯ ಚರಿತ್ರೆ’, ‘ಅಡಿಗರು ಮತ್ತು ನವ್ಯಕಾವ್ಯ’, ‘ವಿಮರ್ಶೆಯ ದಾರಿಯಲ್ಲಿ’, ‘ಕಾವ್ಯ ಎಂದರೇನು?’ ಇತ್ಯಾದಿ…, ನಾಡಿಗರ ವಿಮರ್ಶಾ ಕೃತಿಗಳು.  ‘ಗಿಳಿ ಮತ್ತು ದುಂಬಿ’, ‘ಕಾರ್ಕೋಟಕ’ ‘ಸ್ಥಿತಪ್ರಜ್ಞ’ಎಂಬ ಕಥಾ ಸಂಕಲನಗಳನ್ನು ಹೊರತಂದಿರುವ ನಾಡಿಗರ ‘ಆಯ್ದ ಕಥೆಗಳು’ ಎಂಬ ಕೃತಿ ೧೯೯೨-೧೯೯೩ರ ಸಾಲಿನ, ಬೆಂಗಳೂರು ವಿಶ್ವವಿದ್ಯಾನಿಲಯದ ಪದವಿ ತರಗತಿಗಳಿಗೆ ಪಠ್ಯವಾಗಿ ಆಯ್ಕೆಯಾಗಿತ್ತು. ಮಕ್ಕಳ ಸಾಹಿತ್ಯದಲ್ಲೂ ವಿಪುಲ ಕೃಷಿ ನಡೆಸಿರುವ ನಾಡಿಗರು, ‘ಡಕ್ಕಣಕ್ಕ ಡಕ್ಕಣ’, ಧ್ರುವ ಮತ್ತು ಪ್ರಹ್ಲಾದ’, ‘ಗೂಬೆಯ ಕಥೆ’, ‘ಇಲಿ ಮದುವೆ’, ‘ಗಾಳಿಪಟ’ ಮುಂತಾದ ಕೃತಿಗಳನ್ನೂ, ‘ಹನ್ನೊಂದು ಹಂಸಗಳು’ ಎಂಬ ಮಕ್ಕಳ ನಾಟಕವನ್ನೂ ಬರೆದಿದ್ದಾರೆ.
ಅನುವಾದ ಕ್ಷೇತ್ರದಲ್ಲೂ ನಾಡಿಗರದು ದೊಡ್ಡ ಹೆಸರು. ‘ರಾಧಾನಾಥ್ ರಾಯ್’, ‘ಸಿಂಧಿ ಸಾಹಿತ್ಯ ಚರಿತ್ರೆ’, ಅರಿಷ್ಟೋಫೇನನ ‘Birds’ ರಸ್ಕಿನ್ನನ ‘Unto This Last’ ಮುಂತಾದ ಕೃತಿಗಳನ್ನು ಇಂಗ್ಲಿಷಿನಿಂದ ಕನ್ನಡಕ್ಕೆ ತಂದಿರುವುದಲ್ಲದೆ, ಬಂಗಾಳಿ ಭಾಷೆಯಿಂದ ರವೀಂದ್ರನಾಥ ಟಾಗೋರ್, ನರೇಂದ್ರನಾಥ ಚಕ್ರವರ್ತಿಯವರ ಕವಿತೆಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ.
ಸುಮತೀಂದ್ರ ನಾಡಿಗರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ದಿನಕರ ಪ್ರತಿಷ್ಠಾನ ಪ್ರಶಸ್ತಿ, ವಿ. ಎಂ. ಇನಾಂದಾರ್ ಪ್ರಶಸ್ತಿ, ಎಂ. ವಿ. ಸೀ. ಪುರಸ್ಕಾರ ಮುಂತಾದ ಹಲವಾರು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿದ್ದಾರೆ. ೧೯೯೬-೧೯೯೯ ಅವಧಿಯಲ್ಲಿ ‘ನ್ಯಾಷನಲ್ ಬುಕ್ ಟ್ರಸ್ಟ್’ ಸಂಸ್ಥೆಯ ಚೇರ್‌ಮನ್ನರಾಗಿದ್ದ ನಾಡಿಗರನ್ನು ಹರಿದ್ವಾರದ ಗುರುಕುಲ ಕಾಂಗ್ಡಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ. ಭಾರತದ ಹಲವಾರು ಭಾಷೆಗಳನ್ನು ಬಲ್ಲ ನಾಡಿಗರಿಗೆ (ಕನ್ನಡ, ಹಿಂದಿ, ಮರಾಠಿ, ಕೊಂಕಣಿ, ಬಂಗಾಳಿ) ಭಾರತೀಯ ಸಾಹಿತ್ಯದ ಅತ್ಯಂತ ನಿಕಟ ಪರಿಚಯವಿದೆ.

ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ

Bhuvaneshwari Hegade

ಭುವನೇಶ್ವರಿ ಹೆಗಡೆ

ಕನ್ನಡದ ಪ್ರಮುಖ ಹಾಸ್ಯ ಲೇಖಕಿಯಾಗಿರುವ  ಶ್ರೀಮತಿ ಭುವನೇಶ್ವರಿ ಹೆಗಡೆಯವರ (ಜನನ: ಮೇ ೦೬, ೧೯೫೬) ಜನ್ಮ ಸ್ಥಳ ಉತ್ತರ ಕನ್ನಡ ಜಿಲ್ಲೆ ಕತ್ರಗಾಲ ಗ್ರಾಮ.  ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಇವರು, ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರ ವಿಭಾಗದಲ್ಲಿ ಎಸೋಸಿಯೇಟ್ ಪ್ರೊಫೆಸರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಭುವನೇಶ್ವರಿಯವರ ೫೦೦ಕ್ಕೂ ಹೆಚ್ಚು ಹಾಸ್ಯ ಪ್ರಬಂಧಗಳು ಕನ್ನಡದ ಎಲ್ಲ ಪ್ರಮುಖ ಪತ್ರಿಕೆ, ಮ್ಯಾಗಜಿನ್‌ಗಳಲ್ಲಿ ಪ್ರಕಟವಾಗಿವೆ.
ಭುವನೇಶ್ವರಿಯವರು ‘ಮುಗುಳು’, ‘ನಕ್ಕು ಹಗುರಾಗಿ’, ‘ಎಂಥದು ಮಾರಾಯ್ರೆ’, ‘ವಲಲ ಪ್ರತಾಪ’, ‘ಹಾಸಭಾಸ’,  ‘ಮೃಗಯಾ ವಿನೋದ’, ‘ಬೆಟ್ಟದ ಭಾಗೀರಥಿ’,  ‘ಮಾತಾಡಲು ಮಾತೇ ಬೇಕೇ?’,  ‘ಪಟ್ಟೆಯ ಪಟ್ಟೆ ಹುಲಿ’, ‘ಕೈಗುಣ ಬಾಯ್ಗುಣ’ ಎಂಬ ಕೃತಿಗಳನ್ನು ಪ್ರಕಟಿಸಿದ್ದಾರೆ. ಇವರ ಆಯ್ದ ನಗೆಬರಹಗಳು ‘ಬೆಸ್ಟ್ ಆಫ್ ಭು. ಹೆ. ಎಂಬ ಹೆಸರಿನ ಪುಸ್ತಕವಾಗಿ ಪ್ರಕಟವಾಗಿವೆ.  ಭುವನೇಶ್ವರಿಯವರು ‘ಸೂರು ಸಿಕ್ಕದಲ್ಲಾ’, ‘ಕಛೇರಿ ವೈಭವಂ’, ‘ವಸಂತ ವ್ಯಾಧಿ’, ‘ಕಾವ್ಯಕೋಲಾಹಲ’ ಎಂಬ ರೇಡಿಯೋ ನಗೆನಾಟಕಗಳನ್ನು ಕೂಡ ರಚಿಸಿದ್ದಾರೆ.  ಭುವನೇಶ್ವರಿಯವರ  ‘ಸಭಾಕಂಪನ’,  ‘ಮೂಢ ನಂಬಿಕೆಗಳ ಬೀಡಿನಲ್ಲಿ’, ‘ಸುಲಭದಲ್ಲಿ ಸಜ್ಜನರಾಗಲಾರಿರಿ’ ‘ನಕ್ಕು ಹಗುರಾಗಿ’ ಮತ್ತಿತರ ಪ್ರಬಂಧಗಳು ಶಾಲಾಕಾಲೇಜುಗಳ ಪಠ್ಯವಾಗಿ ಆಯ್ಕೆಯಾಗಿವೆ.  ಭುವನೇಶ್ವರಿಯವರು ಅಂಕಣಗಾರ್ತಿಯಾಗಿಯೂ  ಪ್ರಸಿದ್ಧರು.  ‘ಮಂಗಳೂರು ಮುಗುಳ್ನಗೆ’  (ಲಂಕೇಶ್ ಪತ್ರಿಕೆ),  ‘ನಗೆಮೊಗೆ’ (ವಾರ್ತಾಭಾರತಿ),‘ ಲಘುಬಗೆ’(ಉದಯವಾಣಿ),  ‘ಎಂಥದು ಮಾರಾಯ್ರೇ’ (ಕರ್ಮವೀರ),  ‘ಪಡು ಪಡುಸಾಲೆ’ (ಪ್ರಜಾವಾಣಿ) – ಭುವನೇಶ್ವರಿಯವರು ನಿರ್ವಹಿಸಿದ ಅಂಕಣಗಳು.  ಇವಲ್ಲದೆ ಹಲವಾರು ವಿಶೇಷ ಸಂಚಿಕೆಗಳಲ್ಲಿಯೂ ಭುವನೇಶ್ವರಿಯವರ ಲೇಖನಗಳು ಪ್ರಕಟವಾಗಿವೆ.  ಅಮೆರಿಕದ ಕನ್ನಡ ಸಾಹಿತ್ಯ ರಂಗ ಹೊರತಂದಿರುವ ‘ನಗೆ ಗನ್ನಡಂಗೆಲ್ಗೆ’ ಗ್ರಂಥದಲ್ಲಿ ‘ಅ.ರಾ.ಸೇ.’ ಕುರಿತ ಆಹ್ವಾನಿತ ಲೇಖನ ಪ್ರಕಟವಾಗಿದೆ.
ಭುವನೇಶ್ವರಿಯವರು ಸಲ್ಲಿಸಿರುವ ವಿಪುಲ ಸಾಹಿತ್ಯಸೇವೆಯಿಂದಾಗಿ  ಹಲವಾರು ಪ್ರಶಸ್ತಿ-ಪುರಸ್ಕಾರಗಳು ಅವರನ್ನು  ಅರಸಿ ಬಂದಿವೆ.  ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ(೧೯೮೮, ೧೯೯೭), ಪಡುಕೋಣೆ ರಮಾನಂದ ಪ್ರಶಸ್ತಿ, ಅತ್ತಿಮಬ್ಬೆ ಪ್ರತಿಷ್ಠಾನ ಬಹುಮಾನ (೧೯೯೭, ೨೦೦೦), ಬನಹಟ್ಟಿ ಪುಸ್ತಕ ಬಹುಮಾನ, ಪುತ್ತೂರಿನ ಉಗ್ರಾಣ ಪ್ರಶಸ್ತಿ, ಉತ್ತರ ಕರ್ನಾಟಕ ಲೇಖಕಿಯರ ಸಂಘ ಹಾಗೂ ಇನ್ಫೋಸಿಸ್ ಫೌಂಡೇಶನ್ನಿನ ಡಾ. ಸುಧಾಮೂರ್ತಿ ಪ್ರಶಸ್ತಿಗಳಲ್ಲದೆ, ಇನ್ನೂ ಹಲವಾರು ಪ್ರಶಸ್ತಿಗಳಿಂದ ಭುವನೇಶ್ವರಿಯವರನ್ನು ಗೌರವಿಸಲಾಗಿದೆ.  ಭುವನೇಶ್ವರಿಯವರು  ಪತಿ ಶಂಭು ಹೆಗಡೆ ಮತ್ತು ಪುತ್ರಿ ಆಭಾ ಹೆಗಡೆಯವರೊಂದಿಗೆ ಮಂಗಳೂರಿನಲ್ಲಿ ನೆಲೆಸಿದ್ದಾರೆ.

 Posted by at 9:40 AM
May 072007
 

ಕನ್ನಡ ಸಾಹಿತ್ಯ ರಂಗದ ಮೈಲಿಗಲ್ಲುಗಳು

೨೦೦೪

ನ್ಯೂ ಜೆರ್ಸಿ ರಾಜ್ಯದಲ್ಲಿ ಕನ್ನಡ ಸಾಹಿತ್ಯ ರಂಗದ ದಾಖಲೆ, ಆರ್ಥಿಕ ಲಾಭೋದ್ದೇಶವಿಲ್ಲದ ಸಾಂಸ್ಕೃತಿಕ, ಶೈಕ್ಷಣಿಕ  ಸಂಸ್ಥೆ ಎಂಬ ಅಧಿಕೃತ ಅಭಿದಾನ. (Federal EIN: 20-0939357)

ಮೇ ೨೯, ಮೊಟ್ಟಮೊದಲ ಕನ್ನಡ ಸಾಹಿತ್ಯ ಸಮ್ಮೇಳನ, ಫ಼ಿಲಡೆಲ್ಫ಼ಿಯಾ ಬಳಿಯ ವಿಲನೋವ ವಿಶ್ವವಿದ್ಯಾಲಯದಲ್ಲಿ.
ಸಹಪ್ರವರ್ತಕರು: ವಿಲನೋವ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಅಧುನಿಕ ಭಾಷಾ ಸಾಹಿತ್ಯಗಳ ವಿಭಾಗ; ಸಹಕಾರ: ತ್ರಿವೇಣಿ (ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ)
ಮುಖ್ಯ ವಸ್ತು: ಕುವೆಂಪು ಜನ್ಮ ಶತಮಾನೋತ್ಸವ
ಮುಖ್ಯ ಅತಿಥಿ: ಡಾ. ಪ್ರಭುಶಂಕರ; ಭಾಷಣ: “ಕನ್ನಡ ಸಾಹಿತ್ಯ: ಒಂದು ಮಿಂಚು ನೋಟ”
ಪುಸ್ತಕ ಬಿಡುಗಡೆ: “ಕುವೆಂಪು ಸಾಹಿತ್ಯ ಸಮೀಕ್ಷೆ” ಪ್ರಧಾನ ಸಂಪಾದಕ: ನಾಗ ಐತಾಳ

೨೦೦೫

ತ್ರಿವೇಣಿ ನಡೆಸಿದ ಪುತಿನ ಜನ್ಮ ಶತಮಾನೋತ್ಸವದಲ್ಲಿ ಸಹಪ್ರವರ್ತನ, ಜೂನ್ ೧೮

ಎರಡನೆಯ ಕನ್ನಡ ಸಾಹಿತ್ಯ ಸಮ್ಮೇಳನ, ಡಿಸೆಂಬರ್ ೫, ಲಾಸ್ ಏಂಜಲಿಸ್ ಬಳಿಯ ಲೇಕ್‍ವುಡ್ ಊರಿನ ಹೂವರ್ ಹರ್ಬರ್ಟ್ ಮಾಧ್ಯಮಿಕ ಶಾಲೆಯಲ್ಲಿ
ಸಹಪ್ರವರ್ತಕರು: ಕರ್ನಾಟಕ ಸಾಂಸ್ಕೃತಿಕ ಸಂಘ – ದಕ್ಷಿಣ ಕ್ಯಾಲಿಫ಼ೋರ್ನಿಯ, ಕಸ್ತೂರಿ ಕನ್ನಡ ಸಂಘ, ಸಾನ್ ಡಿಯೇಗೋ, ಮತ್ತು “ಅಂಜಲಿ,” ಲಾಸ್ ಏಂಜಲಿಸ್
ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ
ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ; ಭಾಷಣ: “ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ”
ಪುಸ್ತಕ ಬಿಡುಗಡೆ: “ಆಚೀಚೆಯ ಕತೆಗಳು” ಪ್ರಧಾನ ಸಂಪಾದಕ: ಗುರುಪ್ರಸಾದ ಕಾಗಿನೆಲೆ

೨೦೦೬

ಕನ್ನಡ ಸಾಹಿತ್ಯ ಶಿಬಿರ – ಅಮೆರಿಕದ ಒಂಬತ್ತು ನಗರಗಳಲ್ಲಿ ಜೂನ್-ಆಗಸ್ಟ್ ಕಾಲಾವಧಿಯಲ್ಲಿ ಎರಡು ದಿನಗಳ ಕನ್ನಡ ಸಾಹಿತ್ಯ ಚರಿತ್ರೆಯ ಕ್ರಮಬದ್ಧ ಅಭ್ಯಾಸ ಶಿಬಿರ; ಅಮೆರಿಕದಲ್ಲಿ ಈ ಪ್ರಮಾಣದಲ್ಲಿ ನಡೆದ ಮೊಟ್ಟಮೊದಲ ಶಿಬಿರ.
ಉಪನ್ಯಾಸಕರು: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ
ಉಪನ್ಯಾಸದ ಟಿಪ್ಪಣಿಗಳು, ೪ ಧ್ವನಿಮುದ್ರಿಕೆಗಳ (CD) ಸಂಪುಟದ ಹಂಚಿಕೆ.

೨೦೦೭

  1. ಲಾಸ್ ಏಂಜಲಿಸ್‍ನ “ಅಂಜಲಿ” ಪ್ರಕಟಿಸಿದ “ಕನ್ನಡದಮರ ಚೇತನ (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮೀಕ್ಷೆ)” ಯೋಜನೆಯಲ್ಲಿ ಸಹಾಯ.
  2. ಆದಾಯ ತೆರಿಗೆ ವಿನಾಯಿತಿ ಸ್ಥಾನಕ್ಕೆ IRS ನೊಂದಿಗೆ ಅರ್ಜಿ ಸಲಿಸಿಕೆ.
  3. ರಂಗದ ಅಂತರ್ಜಾಲ ತಾಣದ ಉದ್ಘಾಟನೆ (http://www.KannadaSahityaRanga.org)

೨೦೦೮

ಆಡಳಿತ ಮಂಡಲಿಯ ಪುನರ್ರಚನೆ ಮತ್ತು ಚುನಾವಣೆ; ಕಾರ್ಯಕಾರೀ ಸಮಿತಿಯ ಚುನಾವಣೆ

                                                             ***

ವಿ.ಸೂ. ಮುಖ್ಯ ಅತಿಥಿಗಳ ಭಾಷಣಗಳನ್ನು ಪ್ರತ್ಯೇಕವಾಗಿ ಮುದ್ರಿಸಿದೆ. ಇವನ್ನು ಸಮ್ಮೇಳನದಲ್ಲಿ ಉಚಿತವಾಗಿ ಪಡೆಯಬಹುದು, ಪುಸ್ತಕಗಳನ್ನು ಕೊಳ್ಳಬಹುದು.

 

 Posted by at 9:08 PM
May 072007
 

ಕನ್ನಡ ಸಾಹಿತ್ಯ ರಂಗ

ಸ್ವಾಗತ

ಪ್ರಿಯ ಕನ್ನಡ ಬಂಧುಗಳೇ,

 ನಮಸ್ಕಾರ. ಪ್ರಪಂಚದ ಮಹಾನಗರಗಳಲ್ಲಿ ಒಂದಾದ ಚಿಕಾಗೋನಲ್ಲಿ ನಡೆಯುತ್ತಿರುವ ಈ ವಸಂತ ಸಾಹಿತ್ಯೋತ್ಸವಕ್ಕೆ ಕನ್ನಡ ಸಾಹಿತ್ಯ ರಂಗದ ಪರವಾಗಿ ಎಲ್ಲರಿಗೂ ಹೃತ್ಪೂರ್ವಕ ಸ್ವಾಗತ! ಇಂದಿನ ಈ ಸಾಹಿತ್ಯೋತ್ಸವದಲ್ಲಿ ನಮಗೆ ಬೆಂಬಲವಾಗಿ ನಿಂತು  ವಿಶಿಷ್ಟ ರೀತಿಯಲ್ಲಿ ನೆರವು ನೀಡುತ್ತಿರುವ ವಿದ್ಯಾರಣ್ಯ ಕನ್ನಡ ಕೂಟಕ್ಕೆ ನಮ್ಮ ಕೃತಜ್ಞತೆಯನ್ನು ಸಲ್ಲಿಸುತ್ತಾ ಇಂದಿನ ಸಮಾರಂಭದಲ್ಲಿ ತೊಡಗುತ್ತಿದ್ದೇವೆ.

 ಚಿಕಾಗೋವನ್ನು Windy City ಎನ್ನುವುದು ಬಳಕೆ. ಈಗ ಅದು ತನ್ನ ಹೆಸರನ್ನು ಸಾರ್ಥಕಗೊಳಿಸಿಕೊಂಡಿದೆ. ಏಕೆಂದರೆ ಅಲ್ಲಿ ಈಗ ಕನ್ನಡದ ಗಾಳಿ  ಬೀಸುತ್ತಿದೆ! ಹಿಂದಿನ ಹಿರಿಯ ಸಾಹಿತಿ ಪಂಜೆ ಮಂಗೇಶರಾಯರ ‘ತೆಂಕಣ ಗಾಳಿಯಾಟ’ ನೆನಪಿಗೆ ಬರುತ್ತದೆ. ವರಕವಿ ಬೇಂದ್ರೆ ಹಾಡಿದ ಉತ್ತರ ಧ್ರುವದಿಂ ದಕ್ಷಿಣ ಧ್ರುವಕೂ ಚುಂಬಕ ಗಾಳಿಯು ಬೀಸುತಿದೆ ಎಂಬ ಸಾಲು ನೆನಪಿಗೆ ಬರುತ್ತದೆ. ಆ ಗಾಳಿ ಇಂದು ನಿನ್ನೆಯದಲ್ಲ.  ಕಳೆದ ಸುಮಾರು ಮೂವತ್ತು ವರ್ಷಗಳಿಂದ, ವಿದ್ಯಾರಣ್ಯ ಕನ್ನಡ ಕೂಟ ಇಲ್ಲಿ ಸ್ಥಾಪಿತವಾದಾಗಿನಿಂದ ಬೀಸುತ್ತಿದೆ. ಇಂದು ಅದರ ರಭಸ ಹೆಚ್ಚಿದೆ. ಅದರ ಶಕ್ತಿ ಹೆಚ್ಚಿದೆ. ಅದು ಹೊತ್ತುತರುತ್ತಿರುವ ಪರಿಮಳ ಹೆಚ್ಚು ದಟ್ಟವಾಗಿದೆ. ಅದರ ನಿರ್ಮಲ ಸಂಜೀವಿನೀ ಶಕ್ತಿ ನಮ್ಮಲ್ಲಿ ಹೊಸ ಚೈತನ್ಯ ಮೂಡಿಸುತ್ತಿದೆ. ಇಂಥ ವಾತಾವರಣದಲ್ಲಿ ಚಿಕಾಗೋ ಸಹೃದಯರ ಜೊತೆಯಲ್ಲಿ ಈ ವಸಂತ ಸಾಹಿತ್ಯೋತ್ಸವ ನಡೆಸುವುದು ನಮಗೆ ಒಂದು ಅತ್ಯಂತ ಸಂತೋಷದ, ಹೆಮ್ಮೆಯ ವಿಚಾರ.

 ಕನ್ನಡ ಸಾಹಿತ್ಯ ರಂಗದ ಬಗ್ಗೆ ಒಂದೆರಡು ಮಾತು ಹೇಳಬಯಸುತ್ತೇವೆ. ಹೀಗೆ ಹೇಳಲು ಕಾರಣ ಈ ಸಂಸ್ಥೆ ಹೊಸದು ಎಂದಷ್ಟೇ ಅಲ್ಲ, ಅದೊಂದು ವಿಶಿಷ್ಟ ಸಂಸ್ಥೆಯೂ ಹೌದು ಎಂದೂ ಕೂಡ. ಉತ್ತರ ಅಮೆರಿಕದ ಸಂಯುಕ್ತ ಸಂಸ್ಥಾನಗಳಲ್ಲಿ ನೆಲಸಿರುವ ಸಹಸ್ರಾರು ಕನ್ನಡಿಗರ ಸಾಂಸ್ಕೃತಿಕ, ಸಾಮಾಜಿಕ ಅಸಕ್ತಿ ಅವಶ್ಯಕತೆಗಳನ್ನು ಪೂರೈಸಲು ಹಲವಾರು ಕನ್ನಡ ಸಂಸ್ಥೆಗಳು ಈ ಕಳೆದ ಮೂರು ನಾಲ್ಕು ದಶಕಗಳಲ್ಲಿ ಹುಟ್ಟಿವೆ, ಕೆಲಸ ಮಾಡುತ್ತಿವೆ. ಆದರೆ ಸಾಹಿತ್ಯಕ್ಕೇ ಮೀಸಲಾದ ಸಂಸ್ಥೆಗಳು ತೀರ ಕಡಿಮೆ. ಇದ್ದರೂ ಅವುಗಳ  ವ್ಯಾಪ್ತಿ ಕಡಿಮೆ.  ರಾಷ್ಟ್ರೀಯ ಸಂಸ್ಥೆಯಂತೂ ಯಾವುದೂ ಇರಲಿಲ್ಲ. ಆದ್ದರಿಂದ, ಕನ್ನಡ ಸಾಹಿತ್ಯದಲ್ಲಿ ಒಲವುಳ್ಳ, ಕನ್ನಡದಲ್ಲಿ ಓದಿ ಬರೆಯುವ, ಅದರಲ್ಲಿ ಒಂದು ಸಜೀವ ಅಸಕ್ತಿಯನ್ನು ಉಳಿಸಿಕೊಳ್ಳುವ ಹಂಬಲ ಇರುವ ಕನ್ನಡಿಗರ ಹಿತಾಸಕ್ತಿಯನ್ನು ಗಮನದಲ್ಲಿರಿಸಿಕೊಂಡು ಒಂದು ಹೊಸ ಸಂಸ್ಥೆಯನ್ನು ಸ್ಥಾಪಿಸುವುದು ಅನಿವಾರ್ಯವೆಂಬುದು ನಮ್ಮಲ್ಲಿ ಬಹು ಮಂದಿಗೆ ಮನವರಿಕೆಯಾಯಿತು. ಅದರ ಫಲವಾಗಿ ೨೦೦೪ರಲ್ಲಿ ಮೈತಳೆದ ಸಂಸ್ಥೆಯೇ ಈ ಕನ್ನಡ ಸಾಹಿತ್ಯ ರಂಗ.

 ತನ್ನ ಮೂಲ ಉದ್ದೇಶಗಳಿಗನುಸಾರವಾಗಿ ರಂಗ ಈ ಕಳೆದ ಮೂರು ವರ್ಷಗಳಲ್ಲಿ ಹಲವಾರು ಉತ್ತಮ ಕಾರ್ಯಗಳನ್ನು ಸಾಧಿಸಿದೆ. ಇದುವರೆಗೆ ಎರಡು ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ನಡೆಸಿದೆ. ಎರಡು ಪುಸ್ತಕಗಳನ್ನು ಹೊರತಂದಿದೆ. ನಮ್ಮ ಸೋದರ ಸಂಸ್ಥೆಯೊಂದು ಹೊರತಂದ ಪುಸ್ತಕದ ಪ್ರಕಾಶನದಲ್ಲಿ  ಸಹಾಯಮಾಡಿದೆ. ದೇಶಾದ್ಯಂತ ೯ ಕೇಂದ್ರಗಳಲ್ಲಿ ಕನ್ನಡ ಸಾಹಿತ್ಯ ಶಿಬಿರ ನಡೆಸಿದೆ. ಇವುಗಳ ವಿವರಗಳನ್ನು ಪ್ರತ್ಯೇಕವಾಗಿ ಕೊಟ್ಟಿದೆ (‘ಮೈಲಿಗಲ್ಲುಗಳು’ ನೋಡಿ).

 ಇದೀಗ ನಮ್ಮ ಮೂರನೆಯ ಸಮ್ಮೇಳನ ನಡೆಯುತ್ತಿದೆ. ಇದು ನಮ್ಮ ವಸಂತ ಸಾಹಿತ್ಯೋತ್ಸವ. ವಸಂತ ಜೀವಜಾತಕೆಲ್ಲಕ್ಕೂ ಒಂದು ಪುನರ್ಸೃಷ್ಟಿಯ ಕಾಲ.  ನಾವೂ ಸಹ ಹೊಸ ಸಾಹಿತ್ಯಾನುಭವದಿಂದ, ಹೊಸ ಕಲಾನುಭವದಿಂದ ಹೊಸ ಜೀವ ಪಡೆಯುತ್ತಿದ್ದೇವೆ.  ಇಂದಿನ ಕಾರ್ಯಕ್ರಮ ನೋಡಿ.  ಈ ಸಮ್ಮೇಳನದ ಮುಖ್ಯ ವಸ್ತು ಕನ್ನಡ ಸಾಹಿತ್ಯದಲ್ಲಿ ಹಾಸ್ಯ. ಕನ್ನಡ ನಾಡಿನ ಇಂದಿನ ವಿದ್ವಾಂಸರಲ್ಲಿ, ಉಪನ್ಯಾಸಕರಲ್ಲಿ, ಹಾಸ್ಯಲೇಖಕರಲ್ಲಿ ಅಗ್ರಗಣ್ಯರೆನಿಸಿದ ಪ್ರೊ. ಅ.ರಾ. ಮಿತ್ರ ಈ ಸಮ್ಮೆಳನದ ಮುಖ್ಯ ಅತಿಥಿ. ಅವರ ಭಾಷಣ ಕೇಳಿನೋಡಿ. ಕೇಳುಗರನ್ನು ನಗುನಗಿಸುತ್ತಲೇ ಅವರನ್ನು ಹೆಚ್ಚು ಸುಸಂಸ್ಕೃತರನ್ನಾಗಿಸುವ ಕಲೆ ಅವರಿಗೆ ಸಿದ್ಧಿಸಿದೆ.  ಅವರೊಡನೆ ಸಂವಾದ ನಡೆಸಿ. ಇಂದು ಬಿಡುಗಡೆಯಾಗುತ್ತಿರುವ ಗ್ರಂಥ “ನಗೆಗನ್ನಡಂ ಗೆಲ್ಗೆ!” ಅದನ್ನು ಓದಿ ನೋಡಿ. ಕನ್ನಡ ಜನತೆಯನ್ನು ನಕ್ಕು ನಲಿಸಿ ಅವರ ಜೀವನವನ್ನೂ ಕನ್ನಡ ಸಾಹಿತ್ಯವನ್ನೂ ಶ್ರೀಮಂತಗೊಳಿಸಿದ ನಗೆನಾಡ ಸಿರಿವಂತರಿಗೆ ಸಮಗ್ರವಾಗಿ ಧನ್ಯವಾದವನ್ನರ್ಪಿಸುವ ಇಂಥ ಗ್ರಂಥ ಕನ್ನಡದಲ್ಲಿ ಹೊರಬರುತ್ತಿರುವುದು ಇದೇ ಮೊದಲು.

 ಕನ್ನಡ ಸಾಹಿತ್ಯದಲ್ಲಿ ಹಾಸ್ಯ ಎಂಬುದು ನಮ್ಮ ಮುಖ್ಯ ವಸ್ತುವಾದರೂ, ಈ ಸಮ್ಮೇಳನದಲ್ಲಿ ಗಂಭೀರ ಸಾಹಿತ್ಯ ಚರ್ಚೆಗೆ ಅನುವಾಗಿಸುವ ಅನೇಕ ಕಾರ್ಯಕ್ರಮಗಳಿವೆ. ನಮ್ಮ ಇಲ್ಲಿನ ಕನ್ನಡ ಬರಹಗಾರರನ್ನು ಉತ್ತೇಜಿಸುವುದು, ಎತ್ತಿಹಿಡಿಯುವುದು ನಮ್ಮ ಧ್ಯೇಯಗಳಲ್ಲೊಂದು. (ನಮ್ಮ ಪುಸ್ತಕಳಲ್ಲಿ ಬಹು ಪಾಲು ಲೇಖನಗಳು ಇಲ್ಲಿನ ಕನ್ನಡಿಗರದೇ ಆಗಿರುತ್ತದೆ.) ‘ನಮ್ಮ ಬರಹಗಾರರು’ ಕಾರ್ಯಕ್ರಮ ಇತ್ತೀಚೆಗೆ ಪ್ರಕಟವಾದ ಕೃತಿಗಳನ್ನೂ ಅವುಗಳ ಲೇಖಕರನ್ನೂ ಪರಿಚಯ ಮಾಡುತ್ತದೆ. ಸಾಹಿತ್ಯ ಗೋಷ್ಠಿಯಲ್ಲಿ ನಮ್ಮ ಇಲ್ಲಿನ ಲೇಖಕರ ಸ್ಫೂರ್ತಿಯುತ ರಚನೆಗಳನ್ನು ಕೇಳುತ್ತೀರಿ. ಅಮೆರಿಕದಲ್ಲಿ ಕನ್ನಡ ಕಲಿಕೆ ಬಗ್ಗೆ ವಿವರಗಳನ್ನು ಕೇಳುತ್ತೀರಿ. ಕನ್ನಡದ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರಿಗೆ ಶುಭಾಶಯ ಸಲ್ಲಿಸುತ್ತೀರಿ. ಕನ್ನಡದ ಇನ್ನೊಬ್ಬ ವಿಖ್ಯಾತ ಚಿಂತಕ, ವಿಮರ್ಶಕ ಡಾ. ಎಚ್.ಎಸ್. ರಾಘವೇಂದ್ರ ರಾವ್ ವಿದೇಶಿ ಕನ್ನಡಿಗರು ಅನುಭವಿಸುವ ಸಾಂಸ್ಕೃತಿಕ ಸಂಘರ್ಷ ಅವರ ಸಾಹಿತ್ಯ ಚಿಂತನೆಯಲ್ಲಿ ಹೇಗೆ ರೂಪುಗೊಳ್ಳುತ್ತದೆ ಎಂಬ ಬಗ್ಗೆ ತಮ್ಮ ವಿಚಾರಧಾರೆ ಹರಿಸುವುದನ್ನು ಕೇಳುತ್ತೀರಿ; ಇಲ್ಲಿನ ಕವಿಗಳ ಭಾವಗೀತೆಗಳನ್ನು ಸವಿಯುತ್ತೀರಿ; ಕಂಬಾರರ ನಾಟಕ ನೋಡಿ ನಲಿಯುತ್ತೀರಿ. ಈ ಎಲ್ಲವನ್ನೂ ನಿಮ್ಮ ಸಹೃದಯ ಗೆಳೆಯ ಗೆಳತಿಯರೊಂದಿಗೆ ಹಂಚಿಕೊಳ್ಳುತ್ತೀರಿ. ನಮ್ಮ ಬರಹಗಾರರು ಹೊರತಂದಿರುವ ಉತ್ತಮ ಪುಸ್ತಕಗಳನ್ನು ಕೊಳ್ಳಲು ಅನುವಾಗುವಂತೆ ಒಂದು ಪುಸ್ತಕಾಲಯ ನಿಮಗಾಗಿ ತೆರೆದಿದೆ. ನಮ್ಮವರ ಪುಸ್ತಕಗಳನ್ನು ನೀವು ಸುಮ್ಮನೆ ಕೊಂಡಾಡಿದರೆ ಸಾಲದು, ಜಿ.ಪಿ. ರಾಜರತ್ನಂ ಹೇಳುತ್ತಿದ್ದಂತೆ, ಅವನ್ನು ನೀವು ಕೊಂಡು ಅದರ ಬಗ್ಗೆ ಆಡಬೇಕು. 

 ನಮ್ಮ ಸಂಸ್ಥೆ ಇನ್ನೂ ಈಚೆಗೆ ಮೊದಲಾದದ್ದು.  ಅದಕ್ಕೆ ಸಹೃದಯರ ಬೆಂಬಲವೇ ಜೀವಾಧಾರ.  ಇಂಥ ಸಮ್ಮೇಳನಗಳು, ಪುಸ್ತಕ ಪ್ರಕಟನೆಗಳಿಗಾಗುವ ವೆಚ್ಚವೆಲ್ಲ  ನಮಗೆ ನಿಮ್ಮಂಥ ಅಭಿಮಾನಿಗಳ ನೋಂದಣಿ, ಮತ್ತು ನಿಮ್ಮ ಧನಸಹಾಯಗಳಿಂದಲೇ ತುಂಬಬೇಕು.  ಇದೊಂದು ಹೊಸ ಪ್ರಯೋಗ. ಇದೊಂದು ವಿಶಿಷ್ಟ ಧ್ಯೇಯಗಳನ್ನು, ಉನ್ನತ ಅದರ್ಶಗಳನ್ನು ಹೊತ್ತ ಸಂಸ್ಥೆ.  ಇಲ್ಲಿ ನಮಗೆ ಸಾಹಿತ್ಯ ಮಾತ್ರ ಮುಖ್ಯ, ಮಿಕ್ಕೆಲ್ಲವೂ ಗೌಣ. ಅದರಿಂದಲೇ ನಮ್ಮ ಸಮ್ಮೇಳನಗಳಲ್ಲಿ ಅದ್ಧೂರಿ, ಹಾರತುರಾಯಿಗಳ ಡೌಲಿಗಿಂತ ಸರಳತೆಗೆ ಹೆಚ್ಚು ಬೆಲೆ. ಕೇವಲ ಔಪಚಾರಿಕ ಮಾತುಕತೆಗಿಂತ ವೈಚಾರಿಕತೆಗೆ ಹೆಚ್ಚು ಬೆಲೆ. ಇದನ್ನು ಯಾರೂ ಅಗೌರವ ಎಂದು ಭಾವಿಸಬಾರದು. ಇದುವರೆಗೆ ನಾವು ಮಾಡಿರುವ ಕೆಲಸ ನಿಮಗೆ ಒಪ್ಪಿಗೆಯಾಗಿದೆ ಎಂದು ನಂಬಿದ್ದೇವೆ.  ಈ ಸಂಸ್ಥೆಯನ್ನು ಮತ್ತಷ್ಟು ಶಕ್ತಿಯುತವಾಗಿ ಬೆಳಸಿ, ಇಲ್ಲಿನ ಸಮಾಜದಲ್ಲಿ ಅದೊಂದು ಪ್ರಮುಖ ಅಂಗವಾಗುವಂತೆ ಮಾಡಬೇಕೆಂಬುದು ನಮ್ಮ ಆಶಯ.  ಅದಕ್ಕೆ ನಿಮ್ಮೆಲ್ಲರ ಬೆಂಬಲ, ಧನಸಹಾಯ ಕೋರುತ್ತೇವೆ.

 ಮತ್ತೊಮ್ಮೆ ನಿಮ್ಮೆಲ್ಲರಿಗೂ ರಂಗದ ಹೃತ್ಪೂರ್ವಕ ಸ್ವಾಗತ! ನಗೆಗನ್ನಡಂ ಗೆಲ್ಗೆ!

ಕನ್ನಡ ಸಾಹಿತ್ಯ ರಂಗದ ಪರವಾಗಿ,

ಎಚ್.ವೈ. ರಾಜಗೋಪಾಲ್ (ಕಾರ್ಯಕಾರೀ ಸಮಿತಿಯ ಅಧ್ಯಕ್ಷ)
ನಳಿನಿ ಮೈಯ (ಅಡಳಿತ ಮಂಡಲಿಯ ಅಧ್ಯಕ್ಷೆ)  

 

 

 Posted by at 8:23 PM