Jun 182020
 

 

ಕಸಾರಂ ಆಶ್ರಯದಲ್ಲಿ ಎರಡು ವರ್ಷಕ್ಕೊಮ್ಮೆ ಆಚರಿಸುವ ವಸಂತ ಸಾಹಿತ್ಯೋತ್ಸವ ಈ ಬಾರಿ ಮೇ ೨೦೨೧ರಲ್ಲಿ ಡಲ್ಲಸ್ ನಗರದ ಮಲ್ಲಿಗೆ ಕನ್ನಡ ಸಂಘದ ಆಶ್ರಯದಲ್ಲಿ ನಡೆಯಲಿದೆ. ಇದೇ ಸಂದರ್ಭದಲ್ಲಿ ಪ್ರಕಟಿಸುವ ಗ್ರಂಥಕ್ಕೆ ಲೇಖನಗಳನ್ನು ಆಹ್ವಾನಿಸುವುದೇ ಈ ಪ್ರಕಟಣೆಯ ಉದ್ದೇಶ.

‘ಜನವಾಣಿ ಬೇರು : ಕವಿವಾಣಿ ಹೂವು’ ಎಂದರು ಬಿ.ಎಮ್.ಶ್ರೀ. ಕವಿವಾಣಿ ಶಿಷ್ಟ ಮಾರ್ಗದ್ದಾದರೆ, ಜನವಾಣಿಯಾದ ಜಾನಪದದ್ದು ದೇಸೀಮಾರ್ಗ. ಜನಮನದ ಮಾತು, ಜಾನಪದ ಕತೆ, ಹಾಡು-ಹಬ್ಬಗಳಲ್ಲಿ ವೈವಿಧ್ಯವಾಗಿ ಅರಳಿ ಅಲ್ಲಲ್ಲಿನ, ಅಂದಂದಿನ ಜನ ಸಮುದಾಯದ ನೋವು, ನಲಿವು, ಸುಖ-ದುಃಖಗಳನ್ನು ಅದು ಇರುವಂತೆಯೇ ದಾಖಲಿಸುವುದು, ದಾಟಿಸುವುದು ಜನಪದದ ಶಕ್ತಿ. ಜಾನಪದ ಸಾಹಿತ್ಯ-ಕಲೆಗಳ ಅಧ್ಯಯನ, ಆ ಭಾಷಿಕರ ಸಂಸ್ಸ್ಕೃತಿಯೊಂದರ ಅಧ್ಯಯನವಾಗಬಲ್ಲದು.

ಈ ನಿಟ್ಟಿನಲ್ಲಿ ಬರಲಿರುವ ನಮ್ಮ ಸಮ್ಮೇಳನದ ಮುಖ್ಯ ವಿಷಯವಾಗಿ ‘ಜಾನಪದ’ವನ್ನೇ ನಾವು ಆರಿಸಿಕೊಂಡಿದ್ದೇವೆ. ಪ್ರತಿ ಬಾರಿಯಂತೆ, ಸಮ್ಮೇಳನದ ಸಂದರ್ಭದಲ್ಲಿ ನಾವು ಹೊರತರಲಿರುವ ಗ್ರಂಥಕ್ಕಾಗಿ ನಾವು ಆರಿಸಿಕೊಂಡಿರುವ ವಿಷಯ ‘ಅಮೆರಿಕನ್ ಜಾನಪದ ಲೋಕ’. ಕರ್ನಾಟಕದ ಜಾನಪದದಂತೆಯೇ ನಾವಿಂದು ಬದುಕುತ್ತಿರುವ ಅಮೆರಿಕಾ ದೇಶದ ಜಾನಪದ ಲೋಕವನ್ನೂ ನಾವು ಪರಿಚಯಿಸಿಕೊಳ್ಳುವ, ಅರಿಯುವ ಮತ್ತು ಅದನ್ನು ಕನ್ನಡ ಲೋಕಕ್ಕೆ ಪರಿಚಯಿಸುವ ಅವಕಾಶವೊಂದು ನಮಗೀಗ ಈ ಮೂಲಕ ಒದಗಿ ಬಂದಿದೆ. ವಲಸಿಗರ ದೇಶವೇ ಆದ ಅಮೆರಿಕಾ ದೇಶದಲ್ಲಿ ಮೊದಲಿನಿಂದಲೂ ನೆಲೆಸಿದ ಮೂಲನಿವಾಸಿಗಳ ಜಾನಪದವಷ್ಟೇ ಅಲ್ಲದೆ, ಈ ದೇಶಕ್ಕೆ ಕಾಲಾಂತರಗಳಲ್ಲಿ ವಲಸಿಗರಾಗಿ ಬಂದು ನೆಲೆಸಿದ ಬೇರೆ ಬೇರೆ ದೇಶ, ಭಾಷೆ, ಜನಾಂಗಗಳು ಅವರೊಟ್ಟಿಗೆ ಹೊತ್ತು ತಂದ ಅಲ್ಲಲ್ಲಿನ ನಂಬಿಕೆ, ಹಾಡು, ಪಾಡುಗಳು ಅವರ ಜನಪದ ಸಾಹಿತ್ಯ, ಕಲೆ ಮತ್ತು ಆಚರಣೆಗಳಲ್ಲಿ ಸೇರಿ ಹೋಗಿದೆ. ಅಮೇರಿಕದ ಜನಪದ ಸಂಪತ್ತನ್ನು, ವೈವಿಧ್ಯತೆಯನ್ನು ಪರಿಚಯಿಸುವ ಪ್ರಯತ್ನ ನಮ್ಮದು.

• ಅಮೆರಿಕನ್ ಜಾನಪದ ಕಥೆ/ಹಾಡುಗಳನ್ನು ಕನ್ನಡಕ್ಕೆ ತರುವುದು – ನೇರ ಅನುವಾದವೇ ಆಗಬೇಕೆಂದಿಲ್ಲ, ಭಾವಾನುವಾದದ ಮೂಲಕ ಮೂಲವನ್ನು ಕನ್ನಡದಲ್ಲೇ ಹೊಸದಾಗಿ ಕಟ್ಟುವ ಪ್ರಯತ್ನವನ್ನೂ ಮಾಡಬಹುದು. ದೊಡ್ಡ ಕಥೆಗಳಿದ್ದರೆ ಸಂಕ್ಷಿಪ್ತಗೊಳಿಸಲು ಅಥವಾ ವಿವರಗಳನ್ನು ಸೇರಿಸಲು ಅವಕಾಶವಿರುತ್ತದೆ. ಒಂದೇ ಕಥೆ ಅಲ್ಪಸ್ವಲ್ಪ ಭಿನ್ನವಾಗಿ ಲಭ್ಯವಿದ್ದರೆ ಒಟ್ಟುಗೂಡಿಸುವ, ಯಾವುದೋ ಒಂದನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯ ಬರಹಗಾರರಿಗಿದೆ. ಪ್ರತಿ ಕಥೆ/ಲೇಖನ/ಕವನಗಳಿಗೂ ಉಪಯೋಗಿಸಿದ ಮೂಲಗಳನ್ನು, ಆಕರ ಗ್ರಂಥಗಳನ್ನು ಉಲ್ಲೇಖಿಸಬೇಕು. ಅನುವಾದಕ್ಕಿಂತಲೂ ಮರುಕಥನವಾದರೆ ಒಳಿತು.
• ಮೂಲನಿವಾಸಿಗಳಲ್ಲಿ ಸಾಕಷ್ಟು ಭಿನ್ನ ಜನಪದಗಳಿವೆ. ಪುನರಾವರ್ತನೆಯಾಗದಂತೆ ಅವುಗಳನ್ನು ವೈವಿಧ್ಯವನ್ನು ಪರಿಚಯಿಸುವುದು ಉದ್ದೇಶವಾಗಿರುವುದರಿಂದ, ಲೇಖಕರು ತಮ್ಮ ರಾಜ್ಯದ ಅಥವಾ ಹತ್ತಿರದ ಜನಪದಗಳನ್ನು ಪ್ರತಿನಿಧಿಸಲು ಪ್ರಯತ್ನಿಸಿದರೆ ವೈವಿಧ್ಯತೆ ಬರಲು ಸುಲಭವಾಗಬಹುದು. ಹಾಗೂ ಸ್ಥಳೀಯ ಲೈಬ್ರರಿಗಳಲ್ಲಿ ಆಕರ ಗ್ರಂಥಗಳು ಸಿಗುವುದೂ ಸುಲಭವಾಗಬಹುದು.
• ಆಫ್ರಿಕ, ಯುರೋಪ್, ದ. ಅಮೇರಿಕ ಮತ್ತು ಏಷ್ಯಾ ಖಂಡಗಳಿಂದ ಜನ ವಲಸೆಬಂದಂತೆ ಆದ ಕೊಡುಕೊಳ್ಳುವಿಕೆ ಅಥವಾ ಸಂಘರ್ಷ ತಂದ ಬದಲಾವಣೆಯನ್ನು ಗುರುತಿಸಲು ಪ್ರಯತ್ನಿಸಬಹುದು. ಬೇರೆ ಬೇರೆ ಭಾಷಿಕರ/ಜನಾಂಗಗಳ ನಂಬಿಕೆ, ಆಚರಣೆಗಳ ಮೂಲಕ ಆಯಾ ಜನಪದದ ಚರಿತ್ರೆ ಮತ್ತು ಮನಃಶಾಸ್ತ್ರೀಯ ವಿವರಗಳ ಸಂಕ್ಷಿಪ್ತ ಅಧ್ಯಯನವನ್ನೂ ಮಂಡಿಸಬಹುದು.
• ಜಾನಪದ ಕಥೆ/ಕಾವ್ಯಗಳ ಹೊರತಾಗಿ ಜಾನಪದ ಸಂಗೀತ, ನೃತ್ಯ, ಮಕ್ಕಳ ಸಾಹಿತ್ಯ, ಕಲೆ, ನಂಬಿಕೆ, ಆಟ, ಆಹಾರ, ಔಷಧಿ, ಗಾದೆ-ಒಗಟುಗಳಂಥವು – ಒಟ್ಟಿನಲ್ಲಿ ಸಾಮಾನ್ಯ ಜನಜೀವನದ ಹಲವು ಅಲ್ಲಲ್ಲಿನ (ಆಯಾ ಜನಪದಗಳಿಗೆ ಸಂಬಂಧಿಸಿದ ಕತೆಗಳೊಡನೆ) ವಿಷಯಗಳನ್ನು ಬರೆದಲ್ಲಿ ಓದುಗರಲ್ಲಿ ಅದನ್ನು ಇನ್ನಷ್ಟು ಅರಿಯುವ ಆಸಕ್ತಿ ಹುಟ್ಟುತ್ತದೆ. ಅಥವಾ ಕೆಲವರು ತೌಲನಿಕವಾಗಿ ಒಂದೊಂದು ವಿಷಯದ ಬಗ್ಗೆ ಬರೆದರೂ ಆದೀತು.
• ಕನ್ನಡ ನಾಡಿನ ಮತ್ತು ಅಮೆರಿಕಾದ ಜಾನಪದದಲ್ಲಿ ಕಾಣಬಹುದಾದ ಸಾಮ್ಯತೆ ಅಥವಾ ಭಿನ್ನತೆಗಳ ತೌಲನಿಕ ಅಧ್ಯಯನವನ್ನೂ ಲೇಖನದಲ್ಲಿ ಮಂಡಿಸಬಹುದು.

ಮೊಟ್ಟ ಮೊದಲು, ಈ ನಮ್ಮ ಯತ್ನದಲ್ಲಿ ಭಾಗಿಯಾಗಲು ಉತ್ಸಾಹವುಳ್ಳವರು ಸಾಧ್ಯವಾದಷ್ಟು ಬೇಗ (ಜೂನ್ ತಿಂಗಳು ಮುಗಿಯುವ ಮುನ್ನ) ಸಂಪಾದಕರನ್ನು ಸಂಪರ್ಕಿಸಿ ತಮ್ಮ ಉದ್ದಿಶ್ಯವನ್ನು (ಸಾಧ್ಯವಿದ್ದಲ್ಲಿ ವಸ್ತುವಿನ ಸ್ಥೂಲ ಪರಿಚಯವನ್ನೂ) ಹಂಚಿಕೊಂಡಲ್ಲಿ ನಿರ್ವಹಣೆಯ ದೃಷ್ಟಿಯಿಂದ ಸಹಾಯವಾಗುತ್ತದೆ. ನಿಮ್ಮ ಯೋಚನೆ ಹಾಗು ಯೋಜನೆಯನ್ನು ಆದಷ್ಟು ಬೇಗ ನಮ್ಮೊಂದಿಗೆ ಹಂಚಿಕೊಂಡರೆ ವಿಷಯಗಳ ಪುನರಾವರ್ತನೆಯಾಗುವುದನ್ನು ತಡೆಯಬಹುದು. ದಯವಿಟ್ಟು ಸಹಕರಿಸಿ.
ಲೇಖನಗಳ ಉದ್ದ, ಮಿತಿ, ಫ಼ಾಂಟ್ ಮುಂತಾದ ವಿವರಗಳನ್ನು ಆಸಕ್ತಿ ತೋರಿಸಿದ ಲೇಖಕರಿಗೆ ಮತ್ತೊಂದು ಪ್ರಕಟಣೆಯಲ್ಲಿ ತಿಳಿಸಲಾಗುವುದು. ನಿಮ್ಮ ಲೇಖನದ ಮೊದಲ ಕರಡನ್ನು ಸಿದ್ಧಪಡಿಸಲು ಸುಮಾರು ಎರಡು ತಿಂಗಳ ಸಮಯವಿರುತ್ತದೆ. ಅಂದರೆ ಆಗಸ್ಟ್ ಕೊನೆಯ ವೇಳೆಗೆ ನಿಮ್ಮ ಮೊದಲ ಕರಡು ಸಂಪಾದಕರನ್ನು ಸೇರಬೇಕು. ಐದಾರು ಜನರ ಸಂಪಾದಕ ಸಮಿತಿ ಕೈಗೆ ಬಂದ ಲೇಖನಗಳನ್ನು ಸಮೀಕ್ಷಿಸಿ ತಮ್ಮ ಆಯ್ಕೆಯ ಫಲಿತಾಂಶವನ್ನು ಸೆಫ್ಟೆಂಬರ್ ಕೊನೆಯ ವೇಳೆಗೆ ಲೇಖಕರಿಗೆ ತಿಳಿಸುವುದು. ಅಗತ್ಯವಿದ್ದಲ್ಲಿ ತಿದ್ದುಪಡಿಗಳನ್ನು ಮಾಡಿದ ಕೊನೆಯ ಕರಡನ್ನು ಸಿದ್ಧಪಡಿಸಲು ಒಂದು ತಿಂಗಳ ಅವಧಿ ಇರುತ್ತದೆ. ನವೆಂಬರ್ ತಿಂಗಳಲ್ಲಿ ಗ್ರಂಥವು ನಿರ್ದಿಷ್ಟ ರೂಪನ್ನು ಪಡೆಯಬೇಕೆಂಬುದು ನಮ್ಮ ಆಶಯ. ಇದಕ್ಕೆ ಲೇಖಕರ ಸಹಕಾರ ಅತ್ಯಗತ್ಯ. ಅಮೆರಿಕದಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವ ಘನ ಉದ್ದೇಶದಿಂದ ಕಸಾರಂ ಹುಟ್ಟಿದೆ, ಬರವಣಿಗೆಯನ್ನು ಗಂಭೀರವಾಗಿ ಗ್ರಹಿಸುವವರಿಗೆ ಸ್ವಾಗತವಿದೆ. ಹಿರಿಯ ನುರಿತ ಲೇಖಕರಿಗೂ, ಉತ್ಸಾಹೀ ಯುವ ಲೇಖಕರಿಗೂ ಸಮಾನಾವಕಾಶ ಕಲ್ಪಿಸುವುದು ನಮ್ಮ ಯೋಜನೆ. ಹಾಗಿದ್ದರೂ ಗುಣಮಟ್ಟಗಳನ್ನು ಕಾಪಾಡಿಕೊಳ್ಳುವುದರ ಬಗ್ಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ, ಆದ್ದರಿಂದ ಲೇಖನಗಳ ಆಯ್ಕೆಯ ವಿಷಯದಲ್ಲಿ ಸಂಪಾದಕ ಸಮಿತಿಯ ನಿರ್ಧಾರವೇ ಅಂತಿಮವಾಗಿರುತ್ತದೆ. ಲೇಖನವನ್ನು ಕಳುಹಿಸುವವರು ದಯವಿಟ್ಟು ಈ ನಿಯಮವನ್ನು ಗೌರವಿಸುವಿರೆಂದು ನಂಬುತ್ತೇವೆ.

ನಿಮ್ಮ ಉದ್ದೇಶವನ್ನು ತಿಳಿಸಲು ಅಥವಾ ಹೆಚ್ಚಿನ ವಿವರಗಳನ್ನು ತಿಳಿಯಲು ಈ ವಿಳಾಸಕ್ಕೆ ವಿಅಂಚೆ ಕಳಿಸಿರಿ: mysreena@aol.com

 Posted by at 1:58 PM
Jan 102020
 

ಕನ್ನಡ ಸಾಹಿತ್ಯರಂಗವು ಅಮೆರಿಕದ ವಿವಿಧ ನಗರಗಳಲ್ಲಿ ನಡೆಸಲಿರುವ ಸಾಹಿತ್ಯ ಶಿಬಿರಗಳು-ಉಪನ್ಯಾಸ ಮಾಲಿಕೆ!! – ಉಪನ್ಯಾಸಕರು – ಡಾ.
ನರಹಳ್ಳಿ ಬಾಲಸುಬ್ರಹ್ಮಣ್ಯ !

ಕನ್ನಡ ಸಾಹಿತ್ಯ ರಂಗ
ಸಂಚಾರೀ ಸಾಹಿತ್ಯ ಶಿಬಿರ
ಪ್ರಕಟಣೆ: ಸುತ್ತೋಲೆ-೧

ಅಮೆರಿಕದ ಕನ್ನಡ ಸಾಹಿತ್ಯೋತ್ಸಾಹಿಗಳಿಗೆ ಶುಭ ಸಮಾಚಾರ!
ಕೆಲ ವರುಷಗಳ ಹಿಂದೆ ಸಾಹಿತ್ಯ ರಂಗವು ಕನ್ನಡ ಸಾಹಿತ್ಯ ಚರಿತ್ರೆಯನ್ನು ಮೂಲವಸ್ತುವಾಗಿ ಉಳ್ಳ ಒಂದು ಸಂಚಾರೀ ಶಿಬಿರವನ್ನು ಹತ್ತಾರು ಊರುಗಳಲ್ಲಿ ನಡೆಸಿದ್ದ ವಿಷಯ ಅನೇಕರ ನೆನಪಿನಲ್ಲಿ ಉಳಿದಿರಬಹುದು. ಪ್ರಸಿದ್ಧ ಕನ್ನಡ ವಿದ್ವಾಂಸರೂ ಖ್ಯಾತ ಕವಿಗಳೂ ಆದ ಡಾ. ಎನ್.ಎಸ್ ಲಕ್ಷ್ಮೀನಾರಾಯಣ ಭಟ್ಟರು ಉಪನ್ಯಾಸ ನೀಡಿ ಕನ್ನಡ ಸಾಹಿತ್ಯದ ಮೊದಲ ಹೆಜ್ಜೆಯಿಂದ ಹಿಡಿದು ಆಧುನಿಕ ಕಾಲದವರೆಗಿನ ಎನ್ ಎಸ್ ಎಲ್ವಿವರಗಳನ್ನು ಮಂಡಿಸಿದ್ದರು. ಅವರ ಪಠ್ಯದ ಮುಖ್ಯಾಂಶಗಳನ್ನುಳ್ಳ ಸುದೀರ್ಘ ಧ್ವನಿ ಸಂಪುಟಗಳನ್ನು ಸಹ ಶಿಬಿರದಲ್ಲಿ ಭಾಗವಹಿಸಿದವರಿಗೆ ಹಂಚಲಾಗಿತ್ತು.

ಈಗ, 2020 ರ ವಸಂತ ಋತುವಿನಲ್ಲಿ ನಮ್ಮ ಎರಡನೇ ಸಂಚಾರೀ ಶಿಬಿರವನ್ನು ನಡೆಸಬೇಕೆಂದು ರಂಗದ ಆಡಳಿತ ಮಂಡಲಿ ನಿರ್ಧರಿಸಿದೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಕಳೆದ ಒಂದು ಶತಮಾನದಲ್ಲಿ ನಡೆದಿರುವ
ಮತ್ತು ಇಂದು ನಡೆಯುತ್ತಿರುವ ಪ್ರಮುಖ ವಿಷಯಗಳನ್ನು ಮಂಡಿಸುವ ಯತ್ನ ಇದಾಗಿರುತ್ತದೆ. ಕನ್ನಡದ ಪ್ರಸಿದ್ಧ ಬರಹಗಾರರೂ, ಖ್ಯಾತ ವಿಮರ್ಶಕರೂ, ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡವನ್ನು ವಿಶ್ವವಿದ್ಯಾಲಯದ ಮಟ್ಟದಲ್ಲಿ ಮೂರು ದಶಕಗಳಿಗೂ ಹೆಚ್ಚು ಬೋಧಿಸಿ ನಿವೃತ್ತರಾಗಿರುವ ಡಾ.ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ನಮ್ಮ ಶಿಬಿರವನ್ನು ನಡೆಸಿಕೊಡಲು ಒಪ್ಪಿದ್ದಾರೆಂದು ತಿಳಿಸಲು
ಸಂತಸ ಮತ್ತು ಹೆಮ್ಮೆ ಆಗುತ್ತಿದೆ. ಒಂದು ಅಥವಾ ಎರಡು ದಿನಗಳ ಶಿಬಿರದ ಮೂಲವಸ್ತು ಆಧುನಿಕ ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳನ್ನು, ಮುಖ್ಯ ಕೊಡುಗೆಗಳನ್ನು ಮತ್ತು ಮುನ್ನಡೆಯ ವಿವಿಧ ಮಜಲುಗಳನ್ನೂ ಒಳಗೊಂಡಿರುತ್ತದೆ. ಪಠ್ಯದ ಸುದೀರ್ಘ ಟಿಪ್ಪಣಿಗಳನ್ನು ಪುಸ್ತಕರೂಪದಲ್ಲಿ ಪ್ರಕಟಿಸುವ ಹಾಗೂ ಶಿಬಿರದಲ್ಲಿ ಭಾಗಿಯಾಗುವ ಸರ್ವರಿಗೂ ಹಂಚುವ ತೀರ್ಮಾನ ನಮ್ಮದು.

ನಮ್ಮ ಹಿಂದಿನ ಅನುಭವವನ್ನನುಸರಿಸಿ, ಪಶ್ಚಿಮ ತೀರದ, ದಕ್ಷಿಣ ಮತ್ತು ಉತ್ತರ ಕ್ಯಾಲಿಫ಼ೋರ್ನಿಯ, ಮಧ್ಯವಲಯದ ಶಿಕಾಗೋ ಮತ್ತು ಸೇಯಿಂಟ್ ಲೂಯಿಸ್, ಈಶಾನ್ಯದ ಬಾಸ್ಟನ್, ನ್ಯೂಯಾರ್ಕ್/ನ್ಯೂಜೆರ್ಸಿ, ಪೂರ್ವ ತೀರದ ಮೇರೀಲ್ಯಾಂಡ್/ವರ್ಜೀನ್ಯಾ, ಉತ್ತರ ಕೆರೊಲಿನ, ದಕ್ಷಿಣದ ಡಲ್ಲಸ್, ಹ್ಯೂಸ್ಟನ್ ಮತ್ತು ಫ಼್ಲಾರಿಡಾ ಪ್ರದೇಶಗಳಲ್ಲಿ ಮೇ-ಜೂನ್ ತಿಂಗಳುಗಳ ಸುಮಾರು ಐದಾರು ವಾರಾಂತ್ಯಗಳಲ್ಲಿ ನಡೆಸಬಹುದೆಂಬುದು ನಮ್ಮ ಅಂದಾಜು (ಇನ್ನೂ ಹೆಚ್ಚಿನ ವಿವರಗಳನ್ನು
ಸಧ್ಯದಲ್ಲೇ ನಿರೀಕ್ಷಿಸಿ). ಶಿಬಿರದಲ್ಲಿ ನೋಂದಾಯಿಸಿಕೊಳ್ಳುವರಿಗೆ ಒಂದು ಸುಲಭಶುಲ್ಕವನ್ನು ನಿಗದಿ ಪಡಿಸಲಾಗುವುದು. ಶಿಬಿರವನ್ನು ಸ್ಥಳೀಯ ಕನ್ನಡ ಸಂಘದ ಸಹಕಾರದೊಂದಿಗೆ, ಸ್ವಯಂಸೇವಕರ ಮನೆಯ
ನೆಲಮಾಳಿಗೆಯಲ್ಲೋ, ಗ್ರಂಥಾಲಯದ ಅಥವಾ ದೇಗುಲದ ಸಭಾ-ಕೊಠಡಿಗಳಲ್ಲೋ ನಡೆಸಲಾಗುವುದು.

ಮುಂದಿನ ಏರ್ಪಾಟುಗಳನ್ನು ಖಚಿತಗೊಳಿಸಲು ಮೊದಲು ನಮಗೆ ಆಸಕ್ತರ ಸಂಖ್ಯೆಯ ಅಂದಾಜು ಮತ್ತು ಸ್ವಯಂಸೇವಕರ ಉಮೇದುಗಳ ಬಗ್ಗೆ ವಿವರಗಳು ಬೇಕಾಗಿವೆ. ಸಾಹಿತ್ಯವನ್ನು ನೇರವಾಗಿ ಅಭ್ಯಾಸಮಾಡಿರದ ಆದರೆ, ಸಾಹಿತ್ಯದಲ್ಲಿ ಆಸಕ್ತಿಯುಳ್ಳವರನ್ನು ಗಮನದಲ್ಲಿಟ್ಟುಕೊಂಡು ಈ ಶಿಬಿರವನ್ನು ವಿನ್ಯಾಸಗೊಳಿಸಲಾಗುತ್ತಿದೆ. ಈ ನಮ್ಮ ಯೋಜನೆಗೆ, ತಮ್ಮೆಲ್ಲರ ತನು-ಮನ-ಧನಗಳ
ಪ್ರೋತ್ಸಾಹ ದೊರಕುವುದೆಂದು ನಂಬಿದ್ದೇವೆ.
ಮೈ.ಶ್ರೀ. ನಟರಾಜ Mysore Nataraja
ಅಧ್ಯಕ್ಷ, ಕಸಾರಂ

ವಿ.ಸೂ: ಆಸಕ್ತರು ರಂಗದ ಆಡಳಿತ ಮಂಡಲಿಯ ಸದಸ್ಯರನ್ನು ಸಾಧ್ಯವಾದಷ್ಟು ಬೇಗ ಸಂಪರ್ಕಿಸಿದರೆ ನಮ್ಮ ಮುಂದಿನ ಕೆಲಸಗಳಿಗೆ ಅನುಕೂಲವಾಗುವುದು. ಹಾಗೂ ಈ ಸುತ್ತೋಲೆಯನ್ನು ತಮ್ಮ ಬಂಧು-ಮಿತ್ರರಲ್ಲಿ ಹಂಚಿಕೊಳ್ಳಬೇಕೆಂದು ವಿನಂತಿ.
ಸಿರಿಗನ್ನಡಂ ಗೆಲ್ಗೆ.

 Posted by at 10:42 AM
Jun 122019
 

 

  1. ಶ್ರದ್ಧಾಂಜಲಿ 
 ಕನ್ನಡ ಸಾಹಿತ್ಯ ರಂಗದ ಶ್ರದ್ಧಾಂಜಲಿ

ಗಿರೀಶ್ ಕಾರ್ನಾಡರಿಗೆ ಭಾವಪೂರ್ಣ ಶ್ರದ್ಧಾಂಜಲಿ

ಕನ್ನಡ ಭಾಷೆಯ ಹಿರಿಮೆಯನ್ನು ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೆರೆಸಿದ ಹಲವೇ ಪ್ರಖ್ಯಾತ ಲೇಖಕರಲ್ಲಿ ಒಬ್ಬರಾದ ಗಿರೀಶ ಕಾರ್ನಾಡರ ಸಾವಿನ ಸುದ್ದಿ ನಮ್ಮೆಲ್ಲರನ್ನೂ ದುಃಖತಪ್ತರನ್ನಾಗಿಸಿದೆ. ಆಧುನಿಕ ಭಾರತೀಯ ರಂಗಭೂಮಿಯನ್ನು ಎತ್ತರಕ್ಕೆ ಒಯ್ದ ಪ್ರತಿಭಾವಂತ ನಟ, ನಿರ್ದೇಶಕ ಮತ್ತು ಅಪ್ರತಿಮ ನಾಟಕಕಾರ ಕಾರ್ನಾಡ್. ನಾಟಕರಂಗದ ಜೊತೆಗೆ ಚಲನಚಿತ್ರ ಮತ್ತು ಕಿರುತೆರೆಯ ಮಾಧ್ಯಮದ ಮೇಲೆ ಸಹ ಕಾರ್ನಾಡ್ ತಮ್ಮದೇ ಆದ ಛಾಪುಗಳನ್ನು ಒತ್ತಿಹೋಗಿದ್ದಾರೆ. ಭಾರತೀಯ ಸಾರಸ್ವತಲೋಕದ ಹೆಮ್ಮೆಯ ಜ್ಞಾನಪೀಠ ಪುರಸ್ಕೃತರಾದ ಗಿರೀಶ ಕಾರ್ನಾಡರನ್ನು ನೆನೆಯುತ್ತ ಅವರ ಆತ್ಮಕ್ಕೆ ಶಾಂತಿ ಕೋರುತ್ತೇವೆ.

ಅಮೆರಿಕದ ಕನ್ನಡ ಸಾಹಿತ್ಯ ರಂಗದ ಪರವಾಗಿ,

ನಾಗ ಐತಾಳ ಮತ್ತು ಮೈ. ಶ್ರೀ. ನಟರಾಜ
ಆಡಳಿತ ಮಂಡಲಿಯ ಮತ್ತು ಕಾರ್ಯಕಾರೀ ಸಮಿತಿಯ ಅಧ್ಯಕ್ಷರು.

 

 Posted by at 10:45 AM
Jun 072019
 

ಒಂಬತ್ತನೆಯ ವಸಂತ ಸಾಹಿತ್ಯೋತ್ಸವದ ವರದಿ

Inaguration ~ಪ್ರತಿಭಾ ಕೇಶವಮೂರ್ತಿ

 

ಇದೇ ಮೇ ತಿಂಗಳ ದಿನಾಂಕ ೧೮ ಮತ್ತು ೧೯ ಕನ್ನಡ ಸಾಹಿತ್ಯ ರಂಗದ ೯ನೇ ವಸಂತ ಸಾಹಿತ್ಯೋತ್ಸವ, ತ್ರಿವೇಣಿ ಕನ್ನಡ ಸಂಘದ ಆತಿಥ್ಯದಲ್ಲಿ ಅಚ್ಚುಕಟ್ಟಾಗಿ ನಡೆಯಿತು. ಮುಖ್ಯ ಅತಿಥಿಗಳಾಗಿ ಕನ್ನಡ ಸಾಹಿತ್ಯದ ಪ್ರಸಿದ್ದ ಲೇಖಕರೂ, ಪ್ರಕಾಶಕರೂ ಆದ ವಸುಧೇಂದ್ರ ಅವರು ಭಾರತದಿಂದ ಆಗಮಿಸಿದ್ದರು. ಇವರಲ್ಲದೆ, ಆಯುರ್ವೇದ ವೈದ್ಯರೂ, ಕನ್ನಡ ಲೇಖಕಿಯೂ ಆದ ಡಾ. ವಸುಂಧರಾ ಭೂಪತಿ, ಕವಿ ಪ್ರಕಾಶ್ ಕಡಮೆ ಹಾಗೂ ಕತೆಗಾರ್ತಿ ಸುನಂದ ಕಡಮೆ ಅವರೂ ಅತಿಥಿಗಳಾಗಿ ಬಂದಿದ್ದರು. ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಳಿ ಸದಸ್ಯರು, ತ್ರಿವೇಣಿ ಕನ್ನಡ ಸಂಘದ ಸದಸ್ಯರು, ಹಾಗು ಸ್ವಯಂ ಸೇವಕರು ಕೂಡಿ ಕಾರ್ಯಕ್ರಮವನ್ನು ವ್ಯವಸ್ಥಿತವಾಗಿ ನಿರ್ವಹಿಸಿದರು. ಸಾಹಿತ್ಯಕ ಕಾರ್ಯಕ್ರಮಗಳು, ಮನೋರಂಜನೆ ಕಾರ್ಯಕ್ರಮಗಳು, ಊಟ, ಉಪಹಾರ ಎಲ್ಲವೂ ಸೇರಿ ಕರ್ನಾಟಕದಲ್ಲಿ ನಡೆಯುವ ಒಂದು ಹಬ್ಬದ ವಾತಾವರಣ ಮೂಡಿಸಿತ್ತು. ದೇಶದ ನಾನಾಭಾಗಗಳಿಂದ ಬಂದಿದ್ದ ಕನ್ನಡ ಸಾಹಿತ್ಯ ಅಭಿಮಾನಿಗಳು ಎಲ್ಲಾ ಕಾರ್ಯಕ್ರಮಗಳಲ್ಲೂ ಆಸಕ್ತಿಯಿಂದ ಭಾಗವಹಿಸಿ ಸಂತಸಪಟ್ಟರು.ಕನ್ನಡ ಭಾವಗೀತೆಗಳು

 

’ಹಚ್ಚೇವು ಕನ್ನಡದ ದೀಪ’ ಸುಮಧುರ ಗಾಯನದೊಂದಿಗೆ ದೀಪ ಬೆಳಗಿ, ಎಲ್ಲರನ್ನೂ ಸ್ವಾಗತಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು. ಈ ಬಾರಿಯ ಸಮ್ಮೇಳನದ ಮೂಲವಸ್ತು ’ಬದಲಾವಣೆ’. ಮುಖ್ಯ ಅತಿಥಿ ವಸುಧೇಂದ್ರ ಅವರು ಈ ವಿಷಯವಾಗಿ ಮಾತನಾಡಿ ಬದಲಾವಣೆಯ ಪ್ರಸ್ತುತತೆಯನ್ನು ವಿವರಿಸಿದರು. ನಂತರ ಒಂದರ ಹಿಂದೆ ಒಂದು ಸಾಹಿತ್ಯ ಕಾರ್ಯಕ್ರಮಗಳ ಸಾಲು. ಕಳೆದ ವರ್ಷ ಅಗಲಿದ ಕನ್ನಡ ಸಾಹಿತ್ಯ ರಂಗದ ಮೊದಲ ಅಧ್ಯಕ್ಷ ಎಚ್.ವೈ.ರಾಜಗೋಪಾಲ್ ಅವರಿಗೆ ಮನಮುಟ್ಟುವ ಶ್ರದ್ದಾಂಜಲಿ ಅರ್ಪಿಸಲಾಯಿತು. ದಿವಂಗತ ರಾಜಗೋಪಾಲ್ ಅವರ ಪತ್ನಿ ವಿಮಲ ರಾಜಗೋಪಾಲ್ ಮಾತನಾಡಿ, ರಾಜಗೋಪಾಲ್ ಅವರ ಜೀವನದಲ್ಲಿ ನಡೆದ ಕೆಲವು ಹಾಸ್ಯ ಪ್ರಸಂಗಗಳನ್ನು ಹಂಚಿಕೊಂಡರು. ರಾಜಗೋಪಾಲ್ ಅವರಲ್ಲದೆ, ಕಳೆದೆರೆಡು ವರ್ಷಗಳಲ್ಲಿ ದಿವಂಗತರಾದ ಪ್ರಭುಶಂಕರ, ಸುಮತೀಂದ್ರ ನಾಡಿಗ್, ಗಿರಡ್ಡಿ ಗೋವಿಂದರಾಜು ಮತ್ತು ಎಮ್.ಎನ್.ವ್ಯಾಸರಾವ್ ಅವರುಗಳಿಗೂ ಶ್ರದ್ದಾಂಜಲಿ ಅರ್ಪಿಸಲಾಯಿತು. ’ನಮ್ಮ ಬರಹಗಾರರು’ ಕಾರ್ಯಕ್ರಮದಲ್ಲಿ ಅಮೇರಿಕದ ಕನ್ನಡ ಬರಹಗಾರರ ಪುಸ್ತಕಗಳ ಪರಿಚಯ ಮಾಡಿಕೊಡಲಾಯಿತು. ಸುಮಾರು ಹತ್ತಕ್ಕೂ ಹೆಚ್ಚು ಪುಸ್ತಕಗಳ ಪರಿಚಯವನ್ನು ಬರಹಗಾರರೊಂದಿಗೆ ವೇದಿಕೆಯ ಮೇಲೆ ಇದ್ದ ಸಾಹಿತ್ಯಾಭಿಮಾನಿಗಳು ಮಾಡಿಕೊಟ್ಟರು. ಬರಹಗಾರರಿಗೂ ತಮ್ಮ ಪುಸ್ತಕದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಳ್ಳುವ ಅವಕಾಶವಿತ್ತು.

ಕನ್ನಡ ಸಾಹಿತ್ಯದಲ್ಲಿ ಸ್ತ್ರೀ ಸಂವೇದನೆ

ತಾಯ್ನಾಡಿನಿಂದ ಸಾವಿರಾರು ಮೈಲಿಗಳ ದೂರವಿದ್ದೂ, ಕನ್ನಡ ಅಭಿಮಾನ ಉಳಿಸಿ ಬೆಳೆಸುತ್ತಿರುವ ಈ ಬರಹಗಾರರ ಕೊಡುಗೆ ಶ್ಲಾಘನೀಯ. ’ಸ್ತ್ರೀ ಸಂವೇದನೆ’ ಸಂವಾದದಲ್ಲಿ ಭಾಗವಹಿಸಿದ ಡಾ. ವಸುಂಧರ ಭೂಪತಿ ಅವರು, ಸೂಕ್ಶ್ಮ ವಿಷಯವಾದ ’ಭ್ರೂಣ ಹತ್ಯೆ’ ಬಗ್ಗೆ ಮಾತನಾಡಿ ತಮ್ಮ ವೃತ್ತಿ ಜೀವನದಲ್ಲಾದ ಅನುಭವಗಳನ್ನು ಹಂಚಿಕೊಂಡರು. ’ಅನುವಾದ ಸಂವಾದ’ ಕಾರ್ಯಕ್ರಮದಲ್ಲಿ ಮಾತನಾಡಿದ ಶ್ರೀ ವಸುಧೇಂದ್ರ ಅವರು, ಅನುವಾದ ಸಾಹಿತ್ಯ ಮೂಲ ಸಾಹಿತ್ಯಕ್ಕೆ ಆದಷ್ಟು ಹತ್ತಿರ ತರುವ ಪ್ರಯತ್ನವನ್ನು ಬರಹಗಾರರು ಮಾಡುತ್ತಾರೆ, ಆದರೂ ಅದು ಮೂಲ ಸಾಹಿತ್ಯಕ್ಕೆ ಪರ್ಯಾಯವಾಗುವುದಿಲ್ಲ, ಇದು ಒಂದು ಸಣ್ಣ ತಂಬಿಗೆಯಲ್ಲಿ ಗಂಗೆಯನ್ನು ತಂದು ತುಂಗೆಯಲ್ಲಿ ಬರೆಸುವ ಸಂಪ್ರದಾಯದಂತೆ ಎಂದರು. ಇತರ ಸಾಹಿತ್ಯ ಕಾರ್ಯಕ್ರಮಗಳಾದ ಸಂವಾದ – ಸಣ್ಣ ಕಥೆಗಳು, ಪುಸ್ತಕ ಸಂಸ್ಕೃತಿ ಹಾಗು ಸಾಹಿತ್ಯ ಗೋಷ್ಠಿ ಚೆನ್ನಾಗಿ ಮೂಡಿ ಬಂದವು. ಎಲ್ಲಾ ಸಾಹಿತ್ಯ ಕಾರ್ಯಕ್ರಮಗಳೂ ಎಲ್ಲರಲ್ಲಿ ಆಸಕ್ತಿ ಮೂಡಿಸಿ, ಚಿಂತನೆಗೆ ಒಳಪಡಿಸಿ ಇನ್ನೂ ಸ್ವಲ್ಪ ಹೊತ್ತು ಮುಂದುವರಿಯಬಹುದಿತ್ತೇನೋ ಅನ್ನುವಂತಿತ್ತು.

ಸಾಹಿತ್ಯ ಗೋಷ್ಥಿ

ಈ ಸಮ್ಮೇಳನದಲ್ಲಿ ಎರಡು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಮೊದಲ ಪುಸ್ತಕ ’ಬದಲಾವಣೆಯ ಬೆನ್ನಟ್ಟಿ’. ಈ ಪುಸ್ತಕ ಬದಲಾವಣೆ ಎಂಬ ವಿಷಯವನ್ನು ಆಧರಿಸಿ ಅಮೇರಿಕದ ವಿವಿಧ ಕನ್ನಡ ಬರಹಗಾರರ ಲೇಖನ, ಕಥೆ, ಕವನ, ಪ್ರಬಂಧಗಳನ್ನು ಹೊಂದಿದೆ. ಈ ಪುಸ್ತಕವನ್ನು ಸಂಪಾದಿಸಿದವರು ಪ್ರಕಾಶ್ ನಾಯಕ್ ಹಾಗೂ ಶಂಕರ್ ಹೆಗಡೆ. ಎರಡನೆಯ ಪುಸ್ತಕ  ’ಆಪ್ತವಲಯದಲ್ಲಿ ಅಮೇರಿಕನ್ನಡಿಗ – ಎಚ್.ವೈ.ರಾಜಗೋಪಾಲ್’. ಈ ಪುಸ್ತಕ ದಿವಂಗತ ಎಚ್.ವೈ.ರಾಜಗೋಪಾಲ್ ಅವರನ್ನು ಕುರಿತು ಅವರನ್ನು ಹತ್ತಿರದಿಂದ ಕಂಡು ಅವರೊಡನೆ ಒಡನಾಡಿದ ಬಂಧು ಮಿತ್ರರ ನೆನಪುಗಳ ಸಂಕಲನ. ಈ ಪುಸ್ತಕವನ್ನು ಸಂಪಾದಿಸಿದವರು ಮೈ.ಶ್ರೀ.ನಟರಾಜ ಹಾಗೂ ತ್ರಿವೇಣಿ ಶ್ರೀನಿವಾಸರಾವ್. ಈ ಎರಡು ಪುಸ್ತಕಗಳೊಂದಿಗೆ ಸಮ್ಮೇಳನದ ಸ್ಮರಣ ಸಂಚಿಕೆ ’ತಳಿರು’ ಪುಸ್ತಕವನ್ನೂ ಆಗಮಿಸಿದ ಎಲ್ಲಾ ಸಾಹಿತ್ಯಾಭಿಮಾನಿಗಳಿಗೆ ಹಂಚಲಾಯಿತು. ’ತಳಿರು’ ಸಮ್ಮೇಳನದ ಬಗ್ಗೆ ಮಾಹಿತಿ ಒದಗಿಸುವುದರ ಜೊತೆಗೆ, ಕನ್ನಡ ಸಾಹಿತ್ಯ ರಂಗ ನಡೆದು ಬಂದ ದಾರಿ ಹಾಗೂ ಹಿಂದಿನ ೮ ಸಮ್ಮೇಳನಗಳ ಬಗ್ಗೆ ವಿವರಗಳನ್ನು ಹೊಂದಿ ಬಹಳ ಸುಂದರವಾಗಿ ಮುದ್ರಿತವಾಗಿದೆ.

ಕುವೆಂಪು ನಾಟಕ - ಜಲಗಾರ

ಸಾಹಿತ್ಯ ಕಾರ್ಯಕ್ರಮಗಳ ನಡುವೆ, ಕನ್ನಡ ಸಾಹಿತ್ಯ ರಂಗ, ತ್ರಿವೇಣಿ, ಬೃಂದಾವನ ಹಾಗೂ ನವೋದಯ ಕನ್ನಡ ಕೂಟದ ಸದಸ್ಯರು ವಿವಿಧ ನೃತ್ಯ, ಸಂಗೀತ, ನಾಟಕ ಕಾರ್ಯಕ್ರಮಗಳನ್ನು ಪ್ರಸ್ತುತ ಪಡಿಸಿ ಎಲ್ಲರ ಮನ ರಂಜಿಸಿದರು. ತ್ರಿವೇಣಿ ಸದಸ್ಯರು  ಬಹಳ ಆಸಕ್ತಿ ವಹಿಸಿ ಊಟ ತಿಂಡಿಯ ಪಟ್ಟಿ ತಯಾರಿಸಿದ್ದರು. ಕರ್ನಾಟಕದ ವಿಶೇಷ ತಿನಿಸುಗಳಾದ ಅಂಟಿನುಂಡೆ, ಕಾಯಿ ಹೋಳಿಗೆ, ಬಿಸಿಬೇಳೆಬಾತ್ ಇವುಗಳನ್ನು ನಗುಮುಖದಿಂದ ಎಲ್ಲರಿಗೂ ಉಣಬಡಿಸಿದರು. ಕನ್ನಡ ಸಾಹಿತ್ಯ ರಂಗದ ೯ನೇ ’ವಸಂತ ಸಾಹಿತ್ಯೋತ್ಸವ’ ವನ್ನು ಯಶಸ್ವಿಯಾಗಿ ನಿರ್ವಹಿಸಿದ ಕನ್ನಡ ಸಾಹಿತ್ಯ ರಂಗದ ಆಡಳಿತ ಮಂಡಳಿ ಸದಸ್ಯರಿಗೂ, ತ್ರಿವೇಣಿ ಕನ್ನಡ ಸಂಘದ ಸದಸ್ಯರಿಗೂ ಹಾಗೂ ಎಲ್ಲಾ ಸ್ವಯಂಸೇವಕರಿಗೂ ಅಭಿನಂದನೆಗಳು.

ರಸದೌತಣದ ರೂವಾರಿಗಳು

 

 

 

 Posted by at 4:20 PM