Jul 222009
 

 

Meera P. R

 ಬಿ.ಎಂ.ಡಬ್ಲ್ಯೂ

 

 

ಯಾವತ್ತಿನ ಹಾಗೆ ಈ ದಿನ ಕೂಡ ವಾಕಿಂಗ್ ರಿಂಕ್‍ನಲ್ಲಿ ನನ್ನ ಜೊತೆ ಹೆಜ್ಜೆ ಹಾಕುತ್ತಾ, ಆಶಾಬೆನ್ ತಮ್ಮ ಮಗಳ ಗುಣಗಾನ ಮಾಡಲು ಶುರುವಿಟ್ಟರು. ‘ನಿಜ್ವಾಗ್ಲೂ ಹೇಳ್ತಿದೀನಿ, ನನ್ನ ಮಗಳು ಅಂತಲ್ಲ. ಎಷ್ಟು ಒಳ್ಳೇ ಹುಡುಗಿ ಗೊತ್ತಾ? ಐಯಾಮ್ ರಿಯಲಿ ಸೋ ಪ್ರೌಡ್ ಆಫ್ ಹರ್’. ಒಮ್ಮೊಮ್ಮೆ ಸ್ವಲ್ಪ ಬೋರೆನಿಸಿದರೂ ಅವರ ಮಗಳ ಕಥೆ ಕೇಳುವಲ್ಲಿ ನನಗೂ ಸಾಕಷ್ಟು ಆಸಕ್ತಿ ಇತ್ತು. ಇಂಡಿಯಾದಿಂದ ಬಂದು ಇಲ್ಲಿ ಮಕ್ಕಳನ್ನ ಹುಟ್ಟಿಸಿ, ಬೆಳೆಸಿ ದೊಡ್ಡವರನ್ನಾಗಿ ಮಾಡ್ತಿರೋ ಉಳಿದ ಬಹುತೇಕ ಅಮ್ಮ, ಅಪ್ಪಂದಿರೆಲ್ಲ ಈ ದೇಶದಲ್ಲಿ ಮಕ್ಕಳನ್ನ ಬೆಳೆಸೋದು(ಅದರಲ್ಲೂ ಹೆಣ್ಣು ಮಕ್ಕಳನ್ನ), ಅವರಿಗೆ ನಮ್ಮ ಭಾಷೆ, ಸಂಸ್ಕೃತಿ, ಆಚಾರ-ವಿಚಾರಗಳನ್ನ ಕಲಿಸೋದು, ….ಒಟ್ಟಲ್ಲಿ ತಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳೋದು ಎಷ್ಟು ಕಷ್ಟ ಅಂತ ರಾಗಮಾಲಿಕೆಯಲ್ಲಿ ಗೋಳು ಹೇಳಿಕೊಳ್ಳುವಾಗ ಈ ಆಶಾಬೆನ್ ಮಾತ್ರ ತಮ್ಮ ಲಾಡ್ಲಿ ಬೇಟಿ ಸೋನುವಿನ ಗುಣಗಾನ ಮಾಡೋದು ಕೇಳಲಿಕ್ಕೆ ಚೆಂದ ಅನ್ನಿಸುತ್ತಿತ್ತು.
‘ಈಗ ವಾರದ ಹಿಂದೆ ಏನಾಯ್ತು ಗೊತ್ತಾ ವಿಜಿ?’ ‘ಹೇಳಿ, ಹೇಳಿ..’ ನಾನಂದೆ.
‘ವೀಕೆಂಡಿನಲ್ಲಿ ಸೋನು ಮನೆಗೆ ಬಂದಿದ್ದಾಗ, ಸಮಯ ನೋಡಿ ನಾನೇ ಅವಳನ್ನ ಕೇಳ್ದೆ, ಇನ್ನೇನು ಒಂದು ವರ್ಷಕ್ಕೆ ನಿನ್ನ ಪಿ.ಜಿ. ಮುಗಿದುಹೋಗತ್ತೆ. ಆಮೇಲಿಂದು ಅಂದರೆ  ನಿನ್ನ ಮದುವೇದು ಏನು ಯೋಚನೆ ಮಾಡಿದೀಯ? ಅಂತ’
‘ಹೌದಾ? ಅದಕ್ಕೆ ಏನು ಹೇಳಿದಳು ಮಗಳು?’
‘ನಾನು ನಮ್ಮೊಮ್ಮನಿಗೆ ಹೇಳಿದ ಹಾಗೇ ಹೇಳಿದಳು. ನಂದು ಓದು ಮುಗಿದು, ಒಂದೆರಡು ವರ್ಷವಾದರೂ ನಾನು ಕೆಲ್ಸ ಮಾಡ್ಬೇಕು ಮಮ್ಮಿ. ಆಮೇಲೆ ಯೋಚನೆ ಮಾಡಿದ್ರಾಯ್ತು, ಮದ್ವೆ ವಿಷ್ಯ..ಅಂತ.’
‘ಅದೂ ಸರಿ ಬಿಡಿ…’ ನಾನು ಮಾತು ಮುಗಿಸುವಷ್ಟರಲ್ಲಿ ಆಶಾ ಹೇಳಿದರು, ‘ಅಯ್ಯೋ ನಿನ್‍ಗೆ ಗೊತ್ತಾಗಲ್ಲಮ್ಮ. ನಿನ್ನ ಮಕ್ಕಳಿನ್ನೂ ಚಿಕ್ಕವರು. ಇಲ್ಲಿ ಇಂಡಿಯನ್ ಹುಡ್ಗೀರಿಗೆ ಮದುವೆಯಾಗೋದು ಎಷ್ಟು ಕಷ್ಟ ಗೊತ್ತಾ?’
‘ಹೌದಾ?’
‘ಹೌದು ಮತ್ತೆ, ಹುಡುಗರಿಗಾದರೆ ಅಂಥಾ ಕಷ್ಟ ಆಗೋದಿಲ್ಲ ನೋಡು. ಇಂಡಿಯಾಗೆ ಹೋಗ್ತಾರೆ, ಒಂದಷ್ಟು ಜನ ಹುಡುಗೀರನ್ನ ನೋಡ್ತಾರೆ, ಜಾತಕ-ಗೀತಕ ಸರಿ ಹೋಗಿ, ಹುಡುಗಿ ಜೊತೆಗೂ ಮಾತಾಡಿ…ಅಂತೂ ಮೂರೋ, ನಾಲ್ಕೋ ವಾರದೊಳಗೇ ಮದುವೇನೂ ಮುಗಿಸಿಕೊಂಡು ಬಂದೇ ಬಿಡ್ತಾರೆ. ಆ ಹುಡುಗೀರೂ ಅಷ್ಟೆ, ಚೆನ್ನಾಗಿ ಓದಿರ್ತಾರೆ, ಕೆಲ್ಸದಲ್ಲೂ ಇರ್ತಾರೆ, ಇಲ್ಲಿ ಬಂದ್ಮೇಲೂ ಅವರಿಷ್ಟ ಬಂದ ಹಾಗೆ ಇರ್ಬೋದು. ಏನೂ ತೊಂದರೆ ಆಗೋದಿಲ್ಲ. ಇಂಡಿಯಾದಲ್ಲೇ ಬೆಳೆದಿರೋದರಿಂದ ಗಂಡ, ಮನೆ ಅಂತ ಹೊಂದಿಕೊಳ್ಳೋದನ್ನೂ ಕಲಿತಿರ್ತಾರೆ. ಏನೂ ತೊಂದರೇನೇ ಬರೋದಿಲ್ಲ.’
‘ಅರೆ, ಅಲ್ಲಿಂದ ಎಲ್ರನ್ನೂ ಬಿಟ್ಟು ಇಷ್ಟು ದೂರ ಬಂದು ಇರೋದೇ ಕಷ್ಟ ಆಗ್ಬೋದಲ್ವ? ಹೊಸದಾಗಿ ಆಗಿರೋ ಮದುವೆ, ಹುಡುಗ, ಹೊಸಾ ದೇಶ, ಪರಿಸರ….ಎಷ್ಟಕ್ಕೆಲ್ಲ ಅಡ್ಜಸ್ಟ್ ಆಗ್ಬೇಕು…’ ನನ್ನ ಮಾತಿನ್ನೂ ಮುಗಿದಿರಲೇ ಇಲ್ಲ, ಆಶಾಬೆನ್ ನನ್ನ ಸಂದೇಹಗಳನ್ನೆಲ್ಲ ಅವು ಸಂದೇಹಗಳೇ ಅಲ್ಲ ಎಂಬಂತೆ ಒಮ್ಮೆ ಭುಜ ಕೊಡವಿ ಹೇಳಿದರು,‘ಅಯ್ಯೋ ಅವೆಲ್ಲ ಏನ್ಮಹಾ ಸುಮ್ನಿರು. ನಾವೆಲ್ಲ ಅದಕ್ಕೆ ಅಡ್ಜಸ್ಟ್ ಆಗ್ಲಿಲ್ವ? ಮುಖ್ಯ ಹುಡ್ಗ ಹುಡ್ಗಿ ಒಬ್ಬರಿಗೊಬ್ಬರು ಸರಿಹೋದ್ರೆ ಆಯ್ತು. ಇಲ್ಲೇ ಬೆಳೆದ ಹುಡುಗರಿಗೂ ಇಂಡಿಯಾದಲ್ಲಿ ಬೆಳೆದ ಹುಡ್ಗೀರಿಗೂ ಹೊಂದಿಕೊಳ್ಳೋ ವಿಷಯದಲ್ಲಿ ಅಂಥಾ ಕಷ್ಟವೇನೂ ಆಗೋದಿಲ್ಲ. ನಿಜವಾದ ಕಷ್ಟ ಇರೋದು ಇಲ್ಲೇ ಹುಟ್ಟಿ ಬೆಳೆಯೋ ಇಂಡಿಯನ್ ಹುಡ್ಗೀರಿಗೆ.’
‘ಅದು ಹ್ಯಾಗೆ?’
‘ನೋಡೂ, ಇಲ್ಲಿರುವ ಇಂಡಿಯನ್ ಹುಡುಗರಿಗೂ, ಅವರ ಅಪ್ಪ-ಅಮ್ಮಂದಿರಿಗೂ ಇಂಡಿಯಾದಲ್ಲೇ ಬೆಳೆದ ಹುಡುಗೀರೇ ಬೇಕು ಮದುವೆ ಆಗೋಕೆ. ಇಲ್ಲಿ ಬೆಳೆದ ಹುಡುಗೀರನ್ನ ಯಾರೂ ಪ್ರಿಫರ್ ಮಾಡಲ್ಲ’.
‘ಅದ್ಯಾಕೆ ಆ ಥರಾ?’
‘ಇಲ್ಲಿ ಬೆಳೆದ ಹುಡುಗೀರು ತುಂಬಾ ಇಂಡಿಪೆಂಡೆಂಟ್ ಆಗಿರ್ತಾರಲ್ಲ, ಅದು ಅವ್ರಿಗೆ ಸರಿಹೋಗಲ್ಲ. ನಾಳೆ ಗಂಡ ಹೆಂಡ್ತಿ ಮಧ್ಯ ನಾಲ್ಕು ಮಾತು ಬಂತು ಅಂದ ತಕ್ಷಣ ಈ ಹುಡ್ಗೀರು ಡೈವೋರ್ಸಿಗೆ ಹಾಕಿಬಿಟ್ರೆ ಏನು ಗತಿ? ಇಂಡಿಯಾದ ಹುಡ್ಗೀರಾದ್ರೆ ಪಾಪ, ಆದಷ್ಟೂ ಅನುಸರಿಸಿಕೊಂಡು ಹೋಗ್ತಾರೆ ನೋಡು….ನಮ್ ಹಾಗೆ.’
ನನಗೆ ಉಕ್ಕಿ ಬರ್ತಿರೋ ಕೋಪ, ಆಗುತ್ತಿದ್ದ ಕಿರಿಕಿರಿ ಎಲ್ಲಾನೂ ತಡೆದುಕೊಳ್ತಾ ಇವರ ಮುಂದಿನ ಮಾತಿಗೆ ಕಾದೆ.
‘ಹೋಗಲಿ ಇಂಡಿಯಾದಿಂದಾನೇ ಗಂಡು ತರೋಣ ಅಂದ್ರೆ ಅದೂ ಸರಿ ಹೋಗಲ್ಲ. ಮತ್ತೆ ಅದೇ ಪ್ರಾಬ್ಲಂ. ಅಲ್ಲಿನ ಹುಡುಗರುಇಲ್ಲಿನ ಹುಡ್ಗೀರ್ನ ಪ್ರಿಫರ್ ಮಾಡಲ್ಲ. ಈ ಹುಡ್ಗೀರ್ಗೂ ಅವ್ರು ಸರಿ ಹೋಗೋದಿಲ್ಲ…ಮತ್ತದೇ ಪ್ರಾಬ್ಲಂ ಗೊತ್ತಲ್ಲ?’
ನಾನೀಗ ಏನೂ ಮಾತಾಡಲಿಲ್ಲ. ಆಶಾ ಬೆನ್ ಮುಂದುವರೆಸಿದರು. ‘ಅದಕ್ಕೇ ನನ್ಗೀಗ ಯೋಚ್ನೆ ಆಗಿರೋದು. ಮೊನ್ನೆ ಮದುವೆ ವಿಷಯ ಮಾತಾಡುವಾಗ, ನಾನೇ ಸೋನೂಗೆ ಇದನ್ನೆಲ್ಲ ವಿವರಿಸಿ ಹೇಳಿದೆ. ಇಷ್ಟೆಲ್ಲ ಕಷ್ಟ ಇರುವುದರಿಂದ, ನಿನ್ನ ಓದಿನ ಜೊತೆ ಜೊತೆಗೇ ನಿನಗ್ಯಾರಾದರೂ ಇಷ್ಟ ಆಗ್ತಾರಾ ಅಂತಾನೂ ನೋಡ್ತಾ ಇರು. ಎಲ್ಲ ಸರಿ ಹೋದ್ರೆ, ನಿನಗಿಷ್ಟ ಬಂದವರನ್ನ ನೀನು ಮದುವೆ ಆಗಬಹುದು ಅಂತಾನೂ ಹೇಳ್ದೆ.’
ಈಗ ನನಗೆ ಒಂದಿಷ್ಟು ಸಮಾಧಾನ ಅನ್ನಿಸಿತು. ‘ಪರ್ವಾಗಿಲ್ಲ ನೀವು, ಒಳ್ಳೇ ಸಲಹೇನೇ ಕೊಟ್ಟಿದೀರ ಮಗಳಿಗೆ. ಅವಳ ಜೀವನ, ಅವಳ ಸಂಗಾತಿ, ಅವಳೇ ನಿರ್ಧರಿಸೋದೇ ಒಳ್ಳೇದು ಬಿಡಿ’
‘ಹೌದಪ್ಪಾ, ನಾವ್ಯಾಕೆ ಎಲ್ಲದರಲ್ಲೂ ಮೂಗು ತ್ತೊರಿಸ್ಬೇಕು ಹೇಳು? ಮಕ್ಕಳು ಅಂತ ಇಂಥಾ ವಿಷಯದಲ್ಲೆಲ್ಲ ಅಧಿಕಾರ ಚಲಾಯಿಸೋದಕ್ಕಾಗತ್ತ?’
ಇವರು ಇಂಡಿಯಾದಲ್ಲೇ ಇದ್ದಿದ್ದರೆ ಅಥವಾ ಮಗಳ ಬದಲು ಮಗನಿಗೆ ಮದುವೆ ಮಾಡಬೇಕಿದ್ದರೆ, ಇಷ್ಟೇ ಧಾರಾಳವಾಗಿರುತ್ತಿದ್ದರಾ ಅಂತ ನಾನು ಅಂದುಕೊಳ್ಳುತ್ತಿರುವಾಗಲೇ ಮತ್ತೆ ಹೇಳಿದರು,
‘ನಮ್ಮ ಸೋನು ಅವಳಿಗೆ ಇಷ್ಟ ಬಂದ ಯಾರನ್ನು ಬೇಕಾದರೂ ಮದುವೆಯಾಗಬಹುದು. ಅವರು ಬಿ.ಎಂ.ಡಬ್ಲ್ಯೂ. ಆಗಿರಬಾರದು ಅಷ್ಟೆ. ನಾವು ಅದೊಂದೇ ಕಂಡಿಷನ್ ಹಾಕಿರೋದು ಅವಳಿಗೆ.’
ಇದ್ದಕ್ಕಿದ್ದಂತೆ ಈ ಬಿ.ಎಂ.ಡಬ್ಲ್ಯೂ. ಎಲ್ಲಿಂದ ಪ್ರತ್ಯಕ್ಷವಾಯಿತು ತಿಳಿಯದೆ ಅವರನ್ನೇ ಕೇಳಿದರೆ, ಅವರಿಗೆ ಆಶ್ಚರ್ಯ. ‘ಯು.ಎಸ್.ನಲ್ಲಿ ೧೦ ವರ್ಷದಿಂದ ಇದ್ದೂ ಹಾಗಂದ್ರೇನು ಗೊತ್ತಿಲ್ವಾ?’ ನನ್ನ ಅಙ್ಞಾನಕ್ಕೆ ಮರುಗುತ್ತಾ ಪಕ್ಕದಲ್ಲಿ ನಡೆಯುತ್ತಿದ್ದ ನನಗೆ ಇನ್ನೂ ಹತ್ತಿರ ಬಂದು ಪಿಸುಗುಟ್ಟಿದರು, ‘ಅದೇ ಬಿ.ಎಮ್.ಡಬ್ಲ್ಯೂ. ಅಂದ್ರೆ ಬ್ಲ್ಯಾಕ್, ಮುಸ್ಲಿಂ, ವೈಟ್…ಈ ಮೂರು ಬಿಟ್ಟು ಇನ್ನೆಂತವರಾದ್ರೂ ಆಗ್ಬೋದು ಅಂತ.’ ಇವರ ಮಾತು ಕೇಳಿ ಸಾವರಿಸಿಕೊಳ್ಳುವಾಗ ಯಾಕೋ ಕಾಲು ತೊಡರುವಂತಾಯಿತು.
‘ಹಾಗೇ ನಮ್ ಹಾಗೇ ವೆಜಿಟೇರಿಯನ್ ಆಗಿರ್ಬೇಕು ಅಂತಾನೂ ಹೇಳಿದೀವಿ, ಇಲ್ಲದೆ ಹೋದ್ರೆ ನಾಳೆ ಇವಳಿಗೆ ಕಷ್ಟ ಆಗುತ್ತಲ್ವ? ಜೊತೆಗೆ ಇಷ್ಟೆಲ್ಲ ಕಂಡಿಷನ್‍ಗಳ ಒಳಗೆ ಸಿಕ್ಕುವ ಹುಡುಗ ಇಂಡಿಯನ್ನೇ ಆಗಿರ್ತಾನಲ್ವ? ಹಾಗಂತ ಹಿಂದೂನೇ ಆಗಿರ್ಬೇಕು ಅಂತೇನಿಲ್ಲ. ಜೈನ್ ಆದ್ರೂ ನಡೆಯತ್ತೆ. ನಮ್ಮದೂ ಅವ್ರದ್ದೂ ದೇವ್ರು ಬೇರೆಯಾದ್ರೂ, ಬಾಕಿ ಎಲ್ಲ ಅಂಥಾ ಏನೂ ವ್ಯತ್ಯಾಸವಿರಲ್ಲ ನೋಡು. ಇಂಡಿಯಾದಲ್ಲಿ ಯಾವ ಸ್ಟೇಟ್‍ನಿಂದ ಬಂದವರಾದ್ರೂ ಪರ್ವಾಗಿಲ್ಲ ಅಂತಾನೂ ಹೇಳ್ಬಿಟ್ಟಿದೀನಿ. ಈವನ್ ಸೌತ್ ಇಂಡಿಯನ್ ಆದ್ರೂ ಪರ್ವಾಗಿಲ್ಲ. ನಮ್ಮ ಮಕ್ಕಳಿಗೆ ಗುಜರಾತೀನೇ ಬೇಕಂತ ಕೂತ್ರೆ ಆಗತ್ತ? ಒಟ್ಟಲ್ಲಿ ಅವಳಿಷ್ಟ ಅಷ್ಟೆ’. ಇಷ್ಟೆಲ್ಲ ಹೇಳಿದ ಮೇಲೂ ‘ಅವಳಿಷ್ಟ’ ಅನ್ನುತ್ತಿರುವ ಇವರ ಜೊತೆ ಮತ್ತೆ ಮಾತಾಡುವಂಥದ್ದೇನೂ ಇಲ್ಲ ಎನಿಸಿ ಸುಮ್ಮನಾದೆ.

ಈ ಮಾತು ಕಥೆ ಎಲ್ಲ ನಡೆದು ಆರು ತಿಂಗಳಾಗಿವೆ. ಜಿಮ್‍ನಲ್ಲಿ ಯಾಕೋ ಒಂದು ವಾರದಿಂದ ಆಶಾಬೆನ್ ಕಾಣಿಸದೆ, ನಾನು ಮಾಡಿದ ಫೋನ್‍ಕಾಲಿಗೂ ಸಿಕ್ಕದೆ, ಅವರ ಆರೋಗ್ಯಕ್ಕೆ ಏನಾದರೂ ತೊಂದರೆಯಾಗಿರಬಹುದಾ ಎಂದುಕೊಳ್ಳುತ್ತಿರುವಾಗ ಅವರ ನೆರೆಯವರಾದ ಸುಗುಣಾ ಜೋಷಿಯಿಂದ ಮೊನ್ನೆ ವಿಷಯ ತಿಳಿಯಿತು. ಸೋನು ತನ್ನ ಅಮ್ಮ, ಅಪ್ಪನಿಗೆ ಹೇಳದೆ ಎಂಗೇಜ್‍ಮೆಂಟ್ ಮಾಡಿಕೊಂಡವಳು, ಈಗ ಮದುವೆಗೂ ಅಣಿಯಾಗುತ್ತಿದ್ದಾಳಂತೆ. ಇದರಿಂದಾಗಿ ಆಶಾ ಮತ್ತವರ ಗಂಡ ಇಬ್ಬರೂ ಎಲ್ಲರಿಂದಲೂ ತಲೆ ಮರೆಸಿಕೊಂಡು ಓಡಾಡುತ್ತಿದ್ದಾರಂತೆ. ‘ಯಾಕೆ ಏನಾಯ್ತು? ಸೋನು ಏನಾದ್ರೂ ಬಿ.ಎಂ.ಡಬ್ಲ್ಯೂ….’ ‘ಅಯ್ಯೋ ಅದಾಗಿದ್ದಿದ್ರೆ ಎಷ್ಟೋ ಒಳ್ಳೇದಿತ್ತು. ಈಗಾಗಿರೋ ಕಥೇನೇ ಬೇರೆ..’ ಜೋಷಿ ಮುಂದುವರೆಸಿದರು, ‘ಸೋನು ಮದುವೆಯಾಗ್ತಿರೋದು ಇಂಡಿಯನ್, ಹಿಂದು, ವೆಜೆಟೇರಿಯನ್ ಕೂಡ…ಮಿಸೆಸ್ ಜೋಷಿ ನನ್ನ ಬಳಿ ಸರಿದು ಪಿಸುಗುಟ್ಟಿದರು, ‘ಆದ್ರೆ ಅದೂ ಒಂದು ಹುಡುಗಿ. ಅವಳ ಹೆಸರು ಮಾಯಾ ದವೆ ಅಂತೆ, ಇವಳ ಹಾಗೇ ಗುಜರಾಥೀ ಹುಡ್ಗಿ. ಸೋನು ಹೀಗೆ ಅಂತ ನಮ್ಗೆ ಯಾರ್ಗೂ ಗೊತ್ತೇ ಇರ್ಲಿಲ್ಲ ನೋಡು. ಬಾಯ್ ಫ಼್ರೆಂಡ್ಸು, ಡೇಟಿಂಗು ಅಂತೆಲ್ಲ ಬೇರೆ ಹುಡ್ಗೀರ ಥರಾ ಇಲ್ಲಪ್ಪ ನಮ್ ಸೋನು ಅಂತ ಆಶಾ ಬೆನ್ ಎಷ್ಟು ಜಂಭ ಕೊಚ್ಚಿಕೊಳ್ತಿದ್ರು! ಇದು ಹೀಗಿರಬಹುದು ಅಂತ ಪಾಪ ಅವ್ರಿಗಾದ್ರೂ ಹೇಗೆ ತಾನೆ ಅನ್ನಿಸಿರತ್ತೆ. ಇಂಡಿಯನ್ ಮಕ್ಳೂ ಹೀಗೆಲ್ಲ ಗೇ, ಲೆಸ್ಬಿಯನ್‍ಗಳಾಗೋದ? ನನಗಂತೂ ಸುದ್ದಿ ಕೇಳಿದಾಗಿಂದಾ ಎಷ್ಟು ಹೆದ್ರಿಕೆ ಆಗ್ಬಿಟ್ಟಿದೆ ಗೊತ್ತಾ? ನಮ್ಮ ಮಕ್ಕಳಿಗೆ ಇನ್ಮೇಲೆ ಬಿ.ಎಂ.ಡಬ್ಲ್ಯೂ. ಅಷ್ಟೇ ಅಲ್ಲ, ಎಲ್.ಜಿ. ಕೂಡಾ ಬೇಡ ಅಂತ ಮೊದ್ಲೇ ಹೇಳಿಬಿಡ್ಬೇಕು…’ ಮಿಸೆಸ್ ಜೋಷಿ ಇನ್ನೂ ಮುಂದುವರಿಸುತ್ತಿದ್ದರು. ನನಗೆ ಮಾತ್ರ ಅವರು ಮುಂದೆ ಹೇಳಿದ್ದೇನೂ ಕೇಳಿಸಲಿಲ್ಲ.         

 

 Posted by at 12:59 AM
Jul 222009
 

Madhu Krishnamurthy

ಲೈಫ಼ೇ ಚಿತ್ರಾನ್ನ!

 

ಏನ್ ಗುರು ಸಮಾಚಾರ? ಸಪ್ಪೆ ಮುಖ ಹಾಕಿಕೊಂಡಿದ್ದ ಆಪ್ತ ಗೆಳೆಯನ್ನ ಈ ರೀತಿ ನಾನು ಕೇಳಿದಾಗ ಬಂದ ಉತ್ತರ ’ಲೈಫ಼ು ಚಿತ್ರಾನ್ನ ಆಗೋಗಿದೆ ಗುರು’ ಎ೦ದು. ಮನಸ್ಸಿಗೆ ಬಹಳ ವ್ಯಥೆಯಾಯಿತು. ಪಾಪ! ಹೀಗೇಕಾಯಿತು? ಚಿತ್ರಾನ್ನಕ್ಕೆ ಈ ಗತಿ ಏಕೆ ಬ೦ತು? ಜೀವನದ ಅರಾಜಕತೆಯನ್ನು ಹಾಗು ನೀರಸತೆಯನ್ನು ವರ್ಣಿಸಲು ಚಿತ್ರಾನ್ನವೇ ಆಗಬೇಕೆ? ಹಾಗೆ ನೋಡಿದರೆ ಚಿತ್ರಾನ್ನ ತಿನ್ನಲು ಬಹಳಾ ರುಚಿ ಅಗಿರುತ್ತೆ. ಜೊತೆಗೆ ನೋಡಲು ಅಂದವಾಗಿರುತ್ತೆ ಕೂಡ. ೧೪ ವರುಷದ ಹಿಂದೆ ನನ್ನ ಚನ್ನರಾಯಪಟ್ಟಣದ ಚಿಕ್ಕಮ್ಮ ಮಾಡಿದ್ದ ಚಿತ್ರಾನ್ನವನ್ನು ಜ್ಞಾಪಿಸಿ ಕೊಂಡರೆ ಇ೦ದಿಗೂ ನನ್ನ ಬಾಯಲ್ಲಿ ನೀರೂರುತ್ತೆ. ಮಲ್ಲಿಗೆ ಹೂವಿನಂತ ಹಳದಿ ಬಣ್ಣದ ಅನ್ನ, ಎಣ್ಣೆಯಲ್ಲಿ ಹುರಿಯಲ್ಪಟ್ಟ ಕ೦ದು ಬಣ್ಣದ ಕಡ್ಲೆ ಬೀಜ, ಅಲ್ಲಲ್ಲಿ ಮೆರಗು ನೀಡುವ ಹಸಿರು ಮೆಣಸಿನ ಕಾಯಿ, ಕರಿಬೇವು ಮತ್ತು ಕರಿ ಸಾಸಿವೆ! ಇಂತಹ ಚಿತ್ರಾನ್ನವನ್ನು ಇವನ ಗೋಳಿನ ಜೀವನಕ್ಕೆ ಹೋಲಿಸುವುದೆ? ಅವನಿಗೆ ಹೇಳಿದೆ “ತಪ್ಪು! ದೊಡ್ಡ ತಪ್ಪು! ಇನ್ನೂ ಬೇಕಾದರೆ ಸಾರನ್ನಕ್ಕೆ ಹೋಲಿಸ್ಕೊ.” ಇದನ್ನು ಕೇಳಿದ ಸ್ನೇಹಿತ ನಿಬ್ಬೆರಗಾಗಿ ನನ್ನನ್ನೇ ನೋಡುತ್ತಾ ನಿ೦ತ. ಸಾರನ್ನದ ಈ ಮಹತ್ವ ತನಗೆ ತಿಳಿದಿರಲಿಲ್ಲವಲ್ಲ ಎ೦ದು ಅವನಿಗೆ ತನ್ನ ಬಗ್ಗೆ ಸ್ವಲ್ಪ ನಿರಾಶೆಯಾಗಿರಬೇಕು. ಅದಕ್ಕೆ ಇರಬೇಕು ಅದಾದ ನ೦ತರ ಅವನು ನನ್ನ ಬಳಿ ಆ ವಿಷಯ ಮಾತಾಡಿಲ್ಲ.

ನಿಜ ಹೇಳ್ಬೇಕು ಅ೦ದ್ರೆ ನನಗೂ ಸಾರನ್ನಕ್ಕು ಸ್ವಲ್ಪ ಅಷ್ಟಕ್ಕಷ್ಟೆ! ಒ೦ದು ಮನೇಲಿ ಇವತ್ತು ಅಡಿಗೆ ಮಾಡಲಾಗಿದೆ ಅನ್ನೋದಕ್ಕೆ ಅನ್ನ ಸಾರು ಒ೦ದು ಸುಳ್ಳು ಸಾಕ್ಷಿಯೇ ಹೊರತು ಅದರಿ೦ದಲೇ ಹೊಟ್ಟೆ ತು೦ಬಿಸ್ಕೋಬೇಕಾದ್ರೆ ಬಹಳ ಕಷ್ಟ ಸ್ವಾಮಿ. ಜೊತೆಗೆ ಹಪ್ಪ್ಳ ಸ೦ಡಿಗೆ ಕರಿದಿದ್ರೆ ಚೆನ್ನಾಗಿರುತ್ತೆ. ಆದ್ರೆ ಇಲ್ಲಿ ಅಮೇರಿಕಾದಲ್ಲಿ ಅದನ್ನೆಲ್ಲ ಕರಿಯೋದು ಒ೦ದು ದೊಡ್ಡ ತಲೇನೋವು. ಕರಿಯೋದು ಸುಲಭ. ಆದ್ರೆ ಆ ಕರಿದ ಎಣ್ಣೆ ಎಸಿಯೋದು ಒ೦ದು ರ೦ಪ?  ಅ೦ಗಡಿ ಸಮೋಸ ಇರೋದ್ರಿ೦ದ, ಏನೋ ಒಂದಷ್ಟು  ಸಾರನ್ನವನ್ನ ಗಂಟಲಲ್ಲಿ ಇಳಿಸ್ಬೋದು.

ಸಾರನ್ನದ ಬಗ್ಗೆ ನನ್ನ ಅಭಿಪ್ರಾಯ ಏನಾದರು ಇದ್ದ್ಗೊ೦ಡ್ ಹೋಗ್ಲಿ. ನನ್ನ ಚೀನಿ ಸಹೋದ್ಯೋಗಿಯೂ ಅದರ ಬಗ್ಗೆ ಆಕ್ಷೇಪಣೆ ಮಾಡೋದೆ? ಒ೦ದು ದಿನ ಊಟ ಮಾಡುವಾಗ ಕೇಳಿಯೇಬಿಟ್ಟಳು “How come you bring  rice inside some kind of soup everyday?” ಎ೦ದು. ಸಾರನ್ನದ ಬಗ್ಗೆ ಈ ರೀತಿ ಲಘುವಾಗಿ ಮಾತಾಡೋದೆ?  ಅವಳು ತರುವ ಊಟದ ಬಗ್ಗೆ ಏನಾದರೂ  ಖಾರವಾಗಿ ಹೇಳಬೇಕು ಎ೦ದು ಮುಷ್ಠಿ ಬಿಗಿದು ಪ್ರಯತ್ನ ಪಟ್ಟೆ. ಬಾಯಲ್ಲೇ ತಡವರಿಸಿದೆನೆ ಹೊರೆತು ಹೆಚ್ಚು ಹೇಳಲಾಗಲಿಲ್ಲ. ನ೦ತರ ಚೆನ್ನಾಗಿ ಯೋಚಿಸಿ ಅವಳ ಊಟದ ಬಗ್ಗೆ ಒ೦ದು ಒಳ್ಳೆಯ ವ್ಯಾಖ್ಯಾನವನ್ನು ಸಿಧ್ಧ ಮಾಡಿಕೊಂಡೆ. ಅದನ್ನು ಹೇಳಲು ಸರಿಯಾದ ಸಮಯಕ್ಕೆ ಕಾಯುತ್ತಿದ್ದೇನೆ. ಎಷ್ಟೇ ಆದರೂ ನಮ್ಮ ಊಟ ನಮಗೆ ಹೆಚ್ಚು.

ಅದೇ ದಿನ ನನ್ನ ಜಪಾನಿ ಸಹೋದ್ಯೋಗಿಗೆ ಸಾರನ್ನದ ಬಗ್ಗೆ ಕುತೂಹಲವುಂಟಾಯಿತು. ವಿನಮ್ರತೆಯಿ೦ದ ಕೇಳಿದ “May I try it ?” ಎ೦ದು. ನಾನು  ಸ್ವಲ್ಪ ಅಳುಕಿನಿಂದಲೆ “Sure” ಎ೦ದೆ. ಅವನು ಒಂದು ಚಮಚದಷ್ಟನ್ನು ಬಾಯಿಗೆ ಹಾಕಿಕೊಂಡ. ನಾನು ಅವನ ಮುಖವನ್ನೇ ನೋಡ ತೊಡಗಿದ್ದೆ. ಅವನು  ತನ್ನ ಕಣ್ಣುಗಳ್ಳನ್ನು ಮುಚ್ಚಿ, ಕತ್ತನ್ನು ಸ್ವಲ್ಪ ಹಿ೦ದಕ್ಕೆ ವಾಲಿಸಿ ಸಾರನ್ನವನ್ನು ಮೆಲ್ಲುತ್ತ “ಊ೦ ಊ೦ ಊ೦ಹು೦ಹು೦” ಎ೦ದು ತಲೆದೂಗ ತೊಡಗಿದ. ನಾನು ಕಾತುರತೆಯಿ೦ದ  ” So what do you think ?” ಎ೦ದೆ. ಅವನು ಕಣ್ಣು ಮುಚ್ಚಿಕೊ೦ಡೇ “It is really cool. I can feel it soothing the nerves on the back of my head” ಎ೦ದು ಹೇಳಿ ಮತ್ತೊಮ್ಮೆ  “ಊ೦ ಊ೦ ಊ೦ಹು೦ಹು೦” ಎ೦ದು ಪರಮಾನಂದದಿ೦ದ  ತಲೆಯಾಡಿಸುತ್ತ “I can really feel it here”  ಎ೦ದು ತನ್ನ ತಲೆಯ ಹಿ೦ಬಾಗವನ್ನು ತೋರಿಸಿದ. ತಕ್ಷಣ ನನ್ನ ಮನಸ್ಸು ಮನೆಯ Fridgeನಲ್ಲಿ ಕುಳಿತಿರುವ ಸಾರಿನ ಪುಡಿಯ ಕಡೆ ಹರಿಯಿತು. ಹೋದ ವರುಷ ಭಾರತದಿಂದ ತಂದ ಸಾರಿನ ಪುಡಿ ಇತ್ತೀಚೆಗೆ ಮತ್ತು ಬರಿಸುವ ಗುಣಗಳ್ಳನ್ನು ಸಂಪಾದಿಸಿಕೊಂಡುಬಿಟ್ಟಿತ್ತೊ ಹೇಗೆ?  ಅಷ್ಟು ಹೊತ್ತು ಊಟ ನಿಲ್ಲಿಸಿದ್ದ ನಾನು ಕೂಡಲೆ ಒಂದು ಚಮಚ ಬಾಯಿಗೆ ಹಾಕಿಕೊಂಡೆ. ಅದರ ರುಚಿ ತಲೆಯ ಹಿ೦ಬಾಗಕ್ಕೆ ಪರಿಣಾಮ ಬೀರುವುದಿರಲಿ, ನನ್ನ ನಾಲಿಗೆಯ ಮೇಲೆ ರುಚಿಯಿಲ್ಲದೆ ಹರಿದು ಸುಮ್ಮನೆ ಹೊಟ್ಟೆ ಸೇರಿತ್ತು. ಜಪಾನಿ ಸಹೋದ್ಯೋಗಿ ಉತ್ಸಾಹದಿ೦ದ ಕೇಳಿದ “Can I take some for my wife?”. ನನಗೆ ಆ ವೇಳೆಗೆ ಏನೂ ತೋಚದ೦ತೆ ಆಗಿತ್ತು. ಆಗಲಪ್ಪ ತಗೊಂಡು ಹೋಗು ಎಂದು ಸ್ವಲ್ಪ ಕೊಟ್ಟೆ. ಮಾರನೆ ದಿನ ಊಟದ ಸಮಯದಲ್ಲಿ ಅವನನ್ನು ಕೇಳಿದೆ. “So what did your wife think of ಸಾರನ್ನ?”. ಅವನು ಸಂತೃಪ್ತಿಯಿ೦ದ ಬೀಗುತ್ತಾ ಉತ್ತರಿಸಿದ “Oh she liked it very much. She too felt it was soothing to the nerves at the back of her head.”  ಅದನ್ನು ಕೇಳಿ ನಾನು ಸುಸ್ತು ಹೊಡೆದು ಹೋದೆ. ಆದರೆ ಸ್ವಲ್ಪ ನಿಧಾನಿಸಿ ಯೋಚಿಸಿದಾಗ ಅವನ ಸ೦ಸಾರದ ಬಗ್ಗೆ ಮೆಚ್ಚುಗೆ ಉ೦ಟಾಯಿತು. ಪರವಾಗಿಲ್ವೆ! ಗಂಡ-ಹೆಂಡ್ತೀರಿಬ್ಬರೂ ಸರಿಯಾಗಿದಾರೆ! ಏನು ಹೊಂದಾಣಿಕೆ. ’ಇಬ್ಬರಿಗೂ ತಿ೦ದ ಅನ್ನ ಒಂದೆ ಜಾಗಕ್ಕೆ ಮೈಗೆ ಹತ್ತತ್ತೆ’. ಅಥವಾ… ಇಬ್ಬರಿಗೂ ನೆತ್ತಿ-ಗಿತ್ತಿ ಹತ್ತಿಬಿಟ್ಟು confuse-ginfuse ಮಾಡಿಕೊಂಡಿರಬಹುದೊ? ಯೋಚನೆ ಮಾಡಿದಷ್ಟೂ ತಲೆ ಕೆಡಲು ಶುರುವಾಯಿತು. ಅದೇ ಯೋಚನೆ ಮಾಡುತ್ತಾ ನನ್ನ ಸಾರನ್ನಕೆ ಕೈ ಹಾಕಿದೆ.ಅನ್ನ ಸಾರು ಹೊಟ್ಟೆ ಸೇರಿದ೦ತೆ ಮನಸ್ಸು ಸ್ವಲ್ಪ ಶಾಂತವಾಯಿತು.  ಸಾರನ್ನದ ಮಹಿಮೆ ಇರಬಹುದೇ ಎಂಬ ಸಂದೇಹ ಸುಳಿಯುತ್ತಿದಂತೆ ಅದನ್ನು ಅಲ್ಲಿಗೆ ಮೊಟಕುಗೊಳಿಸಿ ಆ ವಿಚಾರ ಅಲ್ಲಿಗೇ ಮರೆತೆ.

ನನ್ನ ಅಜ್ಜಿ ನನ್ನ ಬಗ್ಗೆ ಹೇಳುತ್ತಿದ್ದ ಮಾತು ನೆನಪಿಗೆ ಬರ್ತಾ ಇದೆ. “ಇವನಿಗೆ ಊಟ ತಿ೦ಡಿ ವಿಷಯದಲ್ಲಿ ಸ್ವಲ್ಪ ಕುಷ್ಪಿಷ್ಟಿ ಜಾಸ್ತಿ” ಅಂತ. ನನಗೋ ಅದು ಭಾರಿ ತಮಾಶೆ ಎನಿಸುತ್ತಿತ್ತು. ಈ ’ಕುಷ್ಪಿಷ್ಟಿ’ ಅನ್ನೋದು ನಮ್ಮ ಅಜ್ಜಿಯೇ ಹುಟ್ಟುಹಾಕಿದ ಪದ ಎಂದುಕೊಂಡಿದ್ದೆ. ಆದರೆ ಈಚೆಗೆ ನಿಘಂಟಿನಲ್ಲಿ ಅ ಪದ ನೋಡಿದಾಗ ಅದರ ಸರಿಯಾದ ಉಚ್ಛಾರಣೆ ಮತ್ತು ಅರ್ಥ ಈ ರೀತಿ ಇತ್ತು. “ಕುಸಿವಿಷ್ಟಿ – ಅತೀ ನಾಜುಕಿನ; ಸುಲಭವಾಗಿ ಮೆಚ್ಚದ”. ಇದೆಲ್ಲ ಊಟ ತಿ೦ಡಿಯ ವಿಷಯದಲ್ಲಿ ನನಗಿರುವ ಧೋರಣೆಯ ಬಗ್ಗೆ! ಇಷ್ಟಾಗಿ ನಾನು ಮಾಡುತ್ತಿದ್ದುದಾದರೂ ಏನು? ಕೆಲವೊಮ್ಮೆ ಅಡುಗೆಯ ರುಚಿ ನೋಡದೇ ಅದನ್ನು ಬರಿ ಕಣ್ಣಿನಿಂದ ನೋಡಿ ಅದಕ್ಕೆ ’ಉಪ್ಪು ಕಮ್ಮಿ’ ಅಂತಾನೊ, ಅಥವಾ “ಇದಕ್ಕೆ ಕಾರ ಜಾಸ್ತಿ ಅಂತ ಕಾಣ್ಸತ್ತೆ” ಎಂದೋ, ಹೇಳುವ ಚಾತುರ್ಯ ನನಗಿತ್ತು. ಕೆಲವೊಮ್ಮೆ ಹೀಗೂ ಹೇಳಿದ್ದು೦ಟು – ” ಅಮ್ಮ ನೀನು ಮಾಡೊ ಇಡ್ಲಿ ಚಟ್ನಿ ಮದುವೆ ಮನೇಲಿ ಅಡುಗೆಯವರು ಮಾಡೊ ತರ ಯಾಕಿರಲ್ಲ?”.  ಕೊನೆಗೊಂದು ದಿನ ನನ್ನ ಅಮ್ಮ ಸಿಟ್ಟಿನಿಂದ ಹೀಗೆಂದಿದ್ದರು “ನಿನಗೆ ನೀರುನಿಡಿ ಸಿಗದಲೆ ಇರೊ ಜಾಗಕ್ಕೆ ಕರ್ಕೊಂಡು ಹೋಗಿ ಬಿಡಬೇಕು. ಆಗ ತಿಳಿಯುತ್ತೆ ನಾನು ಮಾಡೊ ಅಡುಗೆಯ ಬೆಲೆ”. ಇದೆಲ್ಲ ನಡೆದು ಅನೇಕ ವರುಷಗಳಾಗಿವೆ.  ಈಗ ಆ ಕುಸಿವಿಷ್ಟಿ ಅ೦ದರೆ ಏನು ಎಂದು ಅರ್ಥ ಹುಡುಕುವಂತಾಗಿದೆ. ನಾನು ಪ್ರತಿದಿನ ಬೆಳಗ್ಗೆ ಕಾರು ನಡೆಸುತ್ತ ಎರಡು slice ಬ್ರೆಡ್ಡನ್ನು ತಿನ್ನುತ್ತೇನೆ. ಅದಕ್ಕೆ ಉಪು ಹುಳಿ ಕಾರ ಒಂದೂ ಇಲ್ಲ. ಆದರೂ ಕಳೆದ ಮೂರು ವರುಷದಿಂದ ತಿನ್ನುತ್ತಿದ್ದೇನೆ. ಸುಮ್ಮನೆ ಯಾಂತ್ರಿಕವಾಗಿ ತಿನ್ನುತ್ತೇನೆ. ಕೆಲವೊಮ್ಮೆ drive ಮಾಡುವ ಭರದಲ್ಲಿ ಬ್ರೆಡ್ಡನ್ನು ಸುತ್ತಿದ ಪೇಪರನ್ನೂ ಸಹ ತಿಂದುಬಿಟ್ಟಿರುತ್ತೇನೆ. ಗೊತ್ತೇ ಆಗಿರುವುದಿಲ್ಲ.

ಆದರೆ ಈಚೆಗೆ ನಾನು ತಲ್ಲಣಿಸುವಂತಹ ಒಂದು ಘಟನೆ ನಡೆದುಹೋಯಿತು. ಹೀಗೆ ಯಾರೊ ಪರಿಚಯದವರ ಮಗುವಿನ ಹುಟ್ಟುಹಬ್ಬದ ಸಂದರ್ಭ. ನನ್ನ ಹೆ೦ಡತಿ ಹಾಗು ಮಗಳು ಮುಂಚೆಯೇ ಹೋಗಿದ್ದರು. ನಾನು ತಡವಾಗಿ ಬರುವ ಹೊತ್ತಿಗೆ ಬಹು ಪಾಲು ಜನರ ಊಟ ಮುಗಿದಿತ್ತು. ಊಟ ಮಾಡಲು ಹೊಂಚುಹಾಕುತ್ತಿದ್ದ ನನ್ನನು ನೋಡಿ ನನ್ನ ಹೆಂಡತಿ “ಬಿಸಿಬೇಳೆ ಬಾತ್ ಇದೆ. ಚೆನ್ನಾಗಿದೆ! ತಿನ್ನು” ಎಂದು ಹೇಳಿ ಬೇರೆ ಕಡೆ ಗಮನ ಹರಿಸಿದಳು.  ನಾನು ಬಿಸಿಬೇಳೆ ಬಾತ್ ಹಾಕಿಕೊಂಡು ತಿನ್ನತೊಡಗಿದೆ. ಚೆನ್ನಾಗೇನೂ ಇರಲ್ಲಿಲ್ಲ. ಆದರೆ ಹಸಿವಾಗಿದ್ದರಿಂದ ಎರಡನೆ ಸುತ್ತಿಗೆ ಇನ್ನಷ್ಟು ಬಿಸಿಬೇಳೆ ಬಾತ್ ಹಾಕಿಕೊಂಡು ತಿನ್ನತೊಡಗಿದೆ. ಆಷ್ಟು ಹೊತ್ತು ಯಾರೊಟ್ಟಿಗೋ ಮಾತನಾಡುತ್ತಿದ್ದ ನನ್ನ ಪತ್ನಿ ಗಾಭರಿಯಿಂದ ಕೇಳಿದಳು “ಅಯ್ಯೋ ಅದನ್ಯಾಕೆ ತಿಂತಾ ಇದೀಯ?”. ನಾನೆಂದೆ “ನೀನೆ ಹೇಳಿದ್ಯಲ್ಲಾ! ಬಿಸಿಬೇಳೆ ಬಾತ್ ತಿನ್ನು ಅಂತ!” “ಅಯ್ಯೊ ಇದು ಪಾವ್ ಬಾಜಿದು ಪಲ್ಯ” ಎಂದಳು. ಅಷ್ಟಕ್ಕೆ ನಿಲ್ಲಿಸದೆ ಪಿಸುದನಿಯಲ್ಲಿ ನುಡಿದಳು “ಅದೂ ಹಳಸಿಹೋಗಿದೆ”. ಇದು ನನಗೆ ತೀರ ಆಘಾತವನ್ನುಂಟು ಮಾಡಿತು. ಛೆ! ನಾನು ಈ ಮಟ್ಟಕ್ಕೆ ಇಳೀ ಬಾರದಿತ್ತು! ಬಿಸಿಬೇಳೆ ಬಾತಿಗೂ ಪಾವ್ ಬಾಜಿಯ ಪಲ್ಲ್ಯಕ್ಕೂ ವ್ಯತ್ಯಾಸ ತಿಳಿಯದ ಹಾಗಾಗಿ ಹೋಯಿತೆ ನನ್ನ ಕುಸಿವಿಷ್ಟಿ? ಪೇಪರನ್ನು ಬ್ರೆಡ್ಡೆಂದು ಭಾವಿಸಿ ತಿಂದಿದ್ದು ನಿಜ. ಒಪ್ಪ್ಕೋತೀನಿ. ಆದರೆ ಹಳಸಿದ್ದನ್ನು ತಿಂದರೂ ಗೊತ್ತಾಗದೇ ಹೋಗಿದ್ದು? ಇದನ್ನು ಒಪ್ಪಿಕೊಳ್ಳೋಕೆ ನಾನು ಖಂಡಿತ ತಯಾರಿಲ್ಲ. 

ಒಟ್ಟಿನಲ್ಲಿ ನಾನು ಹೇಳೋದು ಇಷ್ಟೆ. ಒಂದು – ಪಾವ್ ಬಾಜಿ ಪಲ್ಯ ಹಳಸಿದರೆ ಬಿಸಿಬೇಳೆ ಬಾತಿನಂತೆ ರುಚಿಸುತ್ತದೆ. ಎರಡನೇದು –  ಯಾರಾದರು ಕಷ್ಟಸುಖದ ವಿಷಯ ವಿಚಾರಿಸಿದರೆ “ಲೈಫ಼ೇ ಚಿತ್ರಾನ್ನ” ಅನ್ನುವ ಬದಲು ’ಲೈಫ಼ೇ ಸಾರನ್ನ’ ಅಂದರೆ ಹೇಗೆ? ಒಮ್ಮೆ ಪರಿಶೀಲಿಸಿ ನೋಡಿ.

 Posted by at 12:55 AM
Jul 022009
 

Triveni Shreenivasa Rao

 

ಕೃತಿ : ತುಳಸಿವನ
ಲೇಖಕಿ : ತ್ರಿವೇಣಿ ಶ್ರೀನಿವಾಸ ರಾವ್
ವಿಮರ್ಶೆ: ಮಧು ಕೃಷ್ಣಮೂರ್ತಿ 

 

ತ್ರಿವೇಣಿ ಶ್ರೀನಿವಾಸ ರಾವ್ ಬರೆದ ತುಳಸಿವನ ಎಂಬ ಶೀರ್ಷಿಕೆ ಉಳ್ಳ ಪುಸ್ತಕ ನನ್ನ ಕೈ ತಲುಪಿದಾಗ ಮನಸ್ಸಿನ ಆಳದೆಲ್ಲೆಲ್ಲೊ ಅಡಗಿದ್ದ ಚಿತ್ರ ಮೂಡಿಬಂದಿತು. ಅದು ಬೆಂಗಳೂರಿನಲ್ಲಿ ಬೆಂ. ವಾಹನ ನಿಲ್ದಾಣದ ಬಳಿ ಇರುವ ತುಳಸಿತೋಟ. ಈ ತೋಟದ ಬಳಿ ನಾನು ಅನೇಕ ಬಾರಿ ರಾಜಾಜಿನಗರದ ಕಡೆ ಹೋಗುವ ಬಸ್ಸಿಗಾಗಿ ಕಾದಿದ್ದೇನೆ. ಆಗೆಲ್ಲ ನಾನು ನನ್ನ ಬೆನ್ನ ಹಿಂದೆ ಇದ್ದ ತುಳಸಿತೋಟದ ಕಡೆ ಆಸಕ್ತಿಯಿಂದ ನೋಡುತ್ತಿದ್ದೆ. ಆ ಉದ್ಯಾನವನದ ವಿಶೇಷವೇನೆಂದರೆ ರಸ್ತೆಗಿಂತಲೂ ಅದು ತಗ್ಗಿನ ಭಾಗದಲ್ಲಿತ್ತು. ಇಳಿದು ಹೋಗಲು ಮೆಟ್ಟಲು ಇದ್ದವು. ಕೆಳಗಿಳಿದು ಹೋಗಿ ಉದ್ಯಾನವನದಲ್ಲೇನಿದೆ ಎಂದು ನೋಡಬೇಕು ಎಂದು ಅನೇಕ ಬಾರಿ ಅನಿಸಿದ್ದರು ಬೀಟಿ‌ಎಸ್ ಬಸ್ಸು ಹಿಡಿಯುವ ಸಾಹಸ ಹೆಚ್ಚಿನ ಆದ್ಯತೆ ಪಡೆದು ಅದಕ್ಕೆ ಅವಕಾಶ ನೀಡಿರಲಿಲ್ಲ. ನನಗೆ ಆ ಕೂತೂಹಲಕಾರಿ ಉದ್ಯಾನವನದ ಬಗ್ಗೆ ಮನಸಲ್ಲೆ ಇದ್ದ ರಮ್ಯ ಕಲ್ಪನೆ ತ್ರಿವೇಣಿ ಅವರ ತುಳಸಿವನ ಓದುವಾಗ ಮತ್ತೆ ಮೂಡಿಬಂದಿತು. 

ತಮ್ಮ ಬೇರುಗಳೊಂದಿಗೆ ಸಂಪರ್ಕ ಕಳೆದುಕೊಂಡ ಅನಿವಾಸಿಗಳಿಗೆ ತುಳಸಿವನದಲ್ಲಿ ತ್ರಿವೇಣಿ ಅವರು ತಮ್ಮ ಅಗಾಧ ಭಾವಕೋಶದಿಂದ ತೆಗೆದ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಅವರ ಪ್ರಾರಂಭದ ಲೇಖನಗಳು ನಮ್ಮನ್ನು ಚಿಕ್ಕಮಗಳೂರಿನ ವಾತಾವರಣಕ್ಕೆ ಕರೆದೊಯ್ದು ತಾರೆಗಳ ತೋಟದಲ್ಲಿ ಬೇರೂರಿಸುವ ಮೂಲಕ ನಮ್ಮನ್ನು ಸ್ಥಿರವಾಗಿ ಪುಸ್ತಕದಲ್ಲಿ ಸ್ಥಾಪಿಸಿಬಿಡುತ್ತದೆ. ತ್ರಿವೇಣಿ ಅವರು ಈ ಸಂಕಲನದಲ್ಲಿ ಬರೆದಿರುವ ವಿಷಯಗಳ ಪಟ್ಟಿ ಬಹಳ ದೊಡ್ಡದು. ಬಾಲ್ಯದ ಜೀವನ, ಸಿನೆಮ, ಸಂಗೀತವಷ್ಟೇ ಇಲ್ಲ, ಸಾಹಿತ್ಯ, ರಾಜಕೀಯ, ಅಮೇರಿಕದ ಜೀವನ, ಕನ್ನಡ ಮತ್ತು ಹಿಂದಿ ಸಿನಿಮ, ಒಲವು ಮತ್ತು ಹಸನಾದ ಜೀವನಕ್ಕೆ ಬೇಕಾದ ಹಲವಾರು ಹಿತನುಡಿಗಳು ಈ ಸಂಕಲನದಲ್ಲಿ ಹೇರಳವಾಗಿ ಕಾಣಬಹುದು. ಇಷ್ಟೆಲ್ಲ ಅನುಭವಗಳನ್ನು ಪಡೆದಿರುವ ತ್ರಿವೇಣಿ ಅವರ ಜೀವನ ಪ್ರೀತಿ ಈ ಸಂಕಲನದಲ್ಲಿ ಪ್ರತಿಯೊಂದು ಲೇಖನದಲ್ಲೂ ಎದ್ದು ಕಾಣುತ್ತದೆ.

ಇಲ್ಲಿಯ ಲೇಖನಗಳಲ್ಲಿ ತ್ರಿವೇಣಿ ಅವರು ತಮ್ಮನು ಕಾಡುವ ಅನೇಕ ಬಾವನೆಗಳನ್ನು ಹೊರತಂದಿದ್ದಾರೆ.   ಶಿಕಾಗೊಗೆ ಮತ್ತೆ ವಸಂತ ಬಂದ ಲೇಖನದಲ್ಲಿ ನಿಸರ್ಗದ ಬಗ್ಗೆ ಕಾವ್ಯಮಯ ಬರಹವಿದ್ದರೆ ಅದರ ಹಿಂದೆಯೆ “ಬೆನ್ನು ತಟ್ಟಬೇಕಾದವರೆ ಬೆನ್ನಿಗೆ ಬರೆ” ಹಾಕಿದರೆ ಆಗುವ ಸಾತ್ವಿಕ ಸಿಟ್ಟಿನಿಂದ ಬರೆದ ಲೇಖನ ದಿಟ್ಟತನದಿಂದ ಕೂಡಿದೆ. ಯವ್ವನ್ನದ ಹುಚ್ಚು ಖೋಡಿಯ ಮನಸ್ಸಿನಲ್ಲಿ ಏಳುವ ನೂರಾರು ಭಾವನೆಗಳನ್ನು ಸರಳವಾಗಿ ಮತ್ತು ಮುಕ್ತವಾಗಿ ಚರ್ಚಿಸುವುದಷ್ಟೇ ಅಲ್ಲದೆ, ಅ ಭಾವನೆಗಳ ರಭಸಕ್ಕೆ ದುಡುಕಿ ತೇಲಿಹೋಗುವ ಯುವ ಪ್ರೇಮಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಹೊಸ ಸಂಸ್ಸೃತಿಯನ್ನು ತೆರೆದ ಮನಸ್ಸಿನಿಂದ ಸ್ವೀಕರಿಸುವುದನ್ನು ಕ್ರಿಸ್ಮಸ್ ಬಗೆಗಿನ ಲೇಖನದಲ್ಲಿ ಕಾಣಬಹುದು. ಕನಸುಗಾರ ರವಿಚಂದ್ರನ್ ಬಗ್ಗೆ ಬರೆದಿರುವ ಲೇಖನದಲ್ಲಿ, ತ್ರಿವೇಣಿಯವಗಿರುವ ಕನ್ನಡದ ಬಗೆಗಿನ ಭವ್ಯ ಕನಸ್ಸಿನ ಪರಿಚಯವಾಗುತ್ತದೆ.  ಎಲ್ಲಿಯೂ ಭೋದನೆ ಮಾಡದೆ ತಮ್ಮ ನಿಲುವುಗಳ ಬಗ್ಗೆ ಬರೆದಿರುವುದು ಮೆಚ್ಚಬೇಕಾದ ಅಂಶ.

ನಿನ್ನ ಮನಸೇ ಮಾನಸ ಸರೋವರ ಎಂಬ ಲೇಖನ ಪುಟ್ಟಣನವರ ಚಿತ್ರದ ಕಲೆಗಾರಿಕೆಯ ಬಗೆಗಷ್ಟೇ ಅಲ್ಲದೇ ಮಾನಸಿಕ ಆರೋಗ್ಯದ ಬಗ್ಗೆ ಉತ್ತಮ ವಿಶ್ಲೇಶಣೆಯಾಗಿದೆ. ವಟಾರದ ಮನೆಯ ಜೀವನದ ಬಗ್ಗೆ ಬರೆದಿರುವ ಲೇಖನ ಜನಸಾಮಾನ್ಯನ ಜೀವನವನ್ನು ಪ್ರತಿಬಿಂಬಿಸುತ್ತದೆ. ತಮ್ಮ ಸ್ವಂತ ಅನುಭವದಿಂದ ನೆರೆಟ್ ಮಾಡಿರುವುದು ಬಹಳ ಆತ್ಮೀಯತೆಯಿಂದ ಕೂಡಿದೆ. ಈ ವಟಾರದ ಮನೆಯ ಬಗ್ಗೆ ಬರೆಯುವಾಗ ಲೇಖಕಿ ಗಣೇಶನ ಮಧುವೆ ಚಿತ್ರ ನೆನೆಪಿಸಿಕೊಳ್ಳುವುದು ಮತ್ತು ವಟಾರ ಜೀವನದ ಧ್ಯೇಯವೆಂಬಂತಿರುವ “ಎಲ್ಲ ಮನೆಗೂ ಒಂದೇ ಮೀಟರ್ ಎಲ್ಲರಿಗೊಂದೇ ನಲ್ಲಿ ವಾಟರ್” ಎಂಬ ಈ ಸಾಲು ಮಾತು ಹೇಳುವುದು ಖುಷಿ ಕೊಡುತ್ತದೆ.

ಹೆಣ್ಣಿನ ಜಡೆಯನ್ನು ವಸ್ತುವಾಗಿಟ್ಟುಕೊಂಡ  ಶಿವರುದ್ರಪ್ಪನವರ ಕವಿತೆ ಒಂದೆಡೆಯಾದರೆ ಲೇಖಕಿಯ ಬಾಲ್ಯದ ನೆನಪು ಇನ್ನೊಂದೆಡೆ. ಚಿಕ್ಕವರಾಗಿದ್ದಾಗ  ತ್ರಿವೇಣಿಯವರಿಗೆ ಎರಡು ಜಡೆ ಇರುವುದರಿಂದ ಅವರ ಪ್ರಾಥಮಿಕ ಶಾಲೆಯ ಗುರುಗಳು ಟುವೇಣಿ ಎಂದು ಕರೆದಿದ್ದ ವೃತ್ತಾಂತದಿಂದ ಓದುಗರಿಗೂ ತಮ್ಮ ಬಾಲ್ಯದ ನೆನೆಪುಗಳನ್ನು ಕೆದೆಕಿದ್ದಾರೆ. ಪ್ರೀತಿಯ ಬಗ್ಗೆ ವ್ಯಾಲಂಟೈನ್ಸ್ ದಿನದ ಬಗ್ಗೆ ಬರೆಯುವಾಗ ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ತ್ರಿವೇಣಿ ಈ ಮಾತನ್ನು ಉಲ್ಲೇಖಿಸುತ್ತಾರೆ. “ಓರೆಗಳನ್ನು ಕೋರೆಗಳನ್ನು ಮನ್ನಿಸಿ ಮುದ್ದಿಸಿ, ಎಲ್ಲಾ ಸುಂದರವೆಂದು ನೋಡೊ ಒಳಗಣ್ಣೆ ಪ್ರೀತಿ”. ಇದು ಪ್ರೀತಿ ಎಂದರೇನು ಎಂಬ ಪ್ರಶ್ನೆಗೆ ನಾನು ಓದಿದ್ ಅತ್ಯಂತ ಸಮರ್ಪಕವಾದ ಉತ್ತರ.

ತ್ರಿವೇಣಿ ಅವರು ಇಲ್ಲಿ ಕೇವಲ ಹಳೆ ನೆನಪುಗಳನ್ನು ಮೆಲಕು ಹಾಕುತ್ತ ಹಿಂದಿನ ದಶಕದಲ್ಲಿ ತಟಸ್ತರಾಗಿಲ್ಲ. ಇಂದಿನ ಕನ್ನಡ ಚಲನಚಿತ್ರದ ಟ್ರೆಂಡಿಗೂ ಸ್ಪಂದಿಸಬಲ್ಲ ಆಸಕ್ತಿ ಮತ್ತು ಅರಿವು ತ್ರಿವೇಣಿ ಅವರಿಗೆ ಇರುವುದು ಸಂತಸದ ವಿಷಯ. ಜಿ‌ಎಸೆಸ್ ಕವಿತೆ, ಮೈಸೂರು ಮಲ್ಲಿಗೆ ಮತ್ತು ಲಕ್ಷ್ಮಿನಾರಾಯಣ ಭಟ್ಟರ ಕವಿತೆಗಳನ್ನು ಉಲ್ಲೇಖಿಸುವಷ್ಟೆ ಸುಲಭವಾಗಿ, ದರ್ಶನ್ ನಟನೆಯ ಇತ್ತೀಚಿನ ರೌಡಿ ಚಿತ್ರಗಳ ಬಗ್ಗೆಯೂ ವ್ಯಾಖ್ಯಾನ ನೀಡಿದ್ದಾರೆ. ಮೆಂಟಲ್ ಮಂಜ, ಮೆಜೆಸ್ಟಿಕ್, ಕರಿಯ ಸಿನಿಮಗಳ ಬಗ್ಗೆ ಬರೆಯುತ್ತ “ಮೀಟರಿನಲ್ಲಿ ಯಾರಿಗೈತೆ ನನ್ನ ಮುಂದೆ ಶಿಷ್ಯ.” ಎಂಬಂತ ಖತರ್ನಾಕ್ ಡೈಲಾಗುಗಳನ್ನೂ ಇಲ್ಲಿಯ ಲೇಖನದಲ್ಲಿ ನಾವು ಕಾಣಬಹುದು. 

ಮಾತು ಮನುಷ್ಯ ಜೀವಿಗಳ ನಡುವೆ ಇರಬೇಕಾದ ಒಂದು ಆರೋಗ್ಯಕರ ಪ್ರಕ್ರಿಯೆ. ಸಂತೋಷ ಹಂಚಿಕೊಂಡಾಗ ಇಮ್ಮಡಿಯಾಗುವುದು ಮತ್ತು ಸಂಕಟದ ಹೊರೆ ಕಡಿಮೆಯಾಗುವುದು ತಿಳಿದ ವಿಷಯ. ಬರಿ ಮಾತಷ್ಟೇ ಅಲ್ಲದೆ ಹರಟೆಯ ಅಗತ್ಯವನ್ನೂ ತೋರಿಸುವ ಲೇಖನದಲ್ಲಿ ಮತ್ತೆ ಲೇಖಕರು ಅನೇಕ ಉದಾಹರಣೆಗಳನ್ನು ನೀಡಿರುವುದು ನೆನೆಪನ್ನು ಕೆದಕುತ್ತದೆ. ಹಬ್ಬ ಹರಿದಿನಗಳಲ್ಲಿ ಊಟವಾದ ನಂತರೆ ಅಥಿತಿಗಳೊಂದಿಗೆ ಒಂದೆಡೆ ಕಲೆತು ತಾಂಬೂಲ ಮೆಲ್ಲುತ್ತ ಪಟ್ಟಾಂಗಕ್ಕೆ ರಂಗೇರಿಸುವುದು, ಹಳ್ಳಿಗಳಲ್ಲಿ ಕಾಣಬಹುದಾದ ಸೋಮಾರಿ ಕಟ್ಟೆ, ಎ. ಎನ್ ಮೂರ್ತಿರಾಯರ ಹರಟೆಯ ಪ್ರಬಂಧಗಳು ಮತ್ತು ಆಕಾಶವಾಣಿಯಲ್ಲಿ ಪ್ರಸಾರವಾಗುತ್ತಿದ್ದ ಎ. ಎಸ್ ಮೂರ್ತಿಯವರ “ಮನೆ ಮಾತಿನಲ್ಲಿ” ಎಡವಟ್ಟಿನ ಈರಣ್ಣ “ಕಾಪಿ ಓ ಮರ್ತೆ ಬಿಟ್ಟೆ” ಎಂದು ಕಾರ್ಯಕ್ರಮ ಮುಕ್ತಾಯವಾಗುದು ಸುಖ ಎಲ್ಲಾರಿಗು ಎಲ್ಲೈತವ್ವ ಲೇಖನದಲ್ಲಿ ಸುಖ ಎಂದರೇನು ಎಂಬ ಗಂಭೀರ ವಿಷಯದ ಬಗ್ಗೆ ಸ್ಪಷ್ಟವಾದ ಕಲ್ಪನೆ ಇಲ್ಲದೆ ಸುಖದ ಹುಡುಕಾಟ ನಿರಂತರವಾಗಿರುವುದನ್ನು ವಿವರಿಸುತ್ತಾರೆ. ಅನಿವಾಸಿಗಳನ್ನು ಕಾಡುವ ಈ ಸುಖ ಇಲ್ಲದಿರುವಿಕೆಗೆ ಬರುವ ಪ್ರತಿಕ್ರಿಯೆ “ಕೂತು ತಿಂದರೂ ಕರಗದಷ್ಟು ಇರೋವಾಗ ನಿಂಗೇನು ಧಾಡಿ”. ಆದರೆ ಪಾದರಕ್ಷೆ ತೊಟ್ಟವನಿಗೆ ಅದು ಎಲ್ಲಿ ಕಚ್ಚುತ್ತಿದೆ ಎಂಬ ಅರಿವಿರುವುದು ಎಂದು ಹೇಳಿರುವುದು ಸತ್ಯವೆನಿಸುತ್ತದೆ.

ತ್ರಿವೇಣಿ ಅವರ ಈ ಸಂಕಲನದಲ್ಲಿ ಲೇಖಕಿ ತಾನು ಕಂಡ ಜೀವನದ ಅನುಭವಗಳನ್ನನ್ನು ಹಂಚಿಕೊಂಡಿದ್ದಾರೆ.  ಅಷ್ಟಲ್ಲದೆ ಆಧುನಿಕ ಬೆಳವಣಿಗೆಗಳೊಂದಿಗೆ ಹೊಂದಿಕೊಳ್ಳುವ ಮನೋಭಾವ ಮತ್ತು ಆಶಾವಾದ ಈ ಲೆಖನಗಲ್ಲಿ ವ್ಯಕ್ತವಾಗಿದೆ.  ಇಲ್ಲಿ ಕಾಣುವ ಒಂದು ಕೊರತೆ ಏನೆಂದರೆ ಅನೇಕ ಲೇಖನಗಳು ಅವೇ ವಿಷಯಗಳನ್ನು ಪುನರಾವರ್ತನೆಗೊಳ್ಳುತ್ತಿದೆಯೊ ಎನಿಸುತ್ತದೆ.  ಒಂದೇ ಪುಸ್ತಕಕ್ಕೆ ೬೭ ಲೇಖನಗಳು ತುಸು ಜಾಸ್ತಿಯಾದಂತಿದೆ. ಹದಿನೈದಿಪ್ಪತ್ತು ಲೇಖನಗಳಿರುವಂತಾದರೆ ತುಳಸಿವನ  ಹೆಚ್ಚು ಆಕರ್ಷಕವಾಗಬಹು. ತ್ರಿವೇಣಿಯವರೆ ಬರೆದ ಈ ಕವಿತೆ ಈ ಸಂಕಲನದಲ್ಲಿದ್ದು ಅನೇಕ ಲೇಖನಗಳಿಗೆ ತಳಹದಿಯಾಗಿದೆ ಎಂದೆನಿಸುತ್ತದೆ. ಆ ಕವಿತೆ ಇಲ್ಲಿದೆ :-

ಇನಿಯ, ನನ್ನ ಕಣ್ಣುಗಳು
ವಿಕಸಿತ ಕಮಲವಲ್ಲ,
ಪ್ರಶಾಂತ ತಿಳಿಗೊಳವಲ್ಲ,
ಮಿನುಗುವ ನಕ್ಷತ್ರಗಳಲ್ಲ,
ಫಳಗುಟ್ಟುವ ಮೀನೂ ಅಲ್ಲ,
ಅದು ಕೇವಲ ನಿನ್ನೊಲವ
ಪ್ರತಿಫಲಿಸುವ
ಕನ್ನಡಿ ಮಾತ್ರ”

 Posted by at 6:45 PM
Jun 292009
 

Srivatsa Joshi

 

 

ಶ್ರೀವತ್ಸ ಜೋಶಿಯವರ ಎರಡು ಹೊತ್ತಗೆಗಳು:
ಇನ್ನೊಂದಿಷ್ಟು ವಿಚಿತ್ರಾನ್ನ
ಮತ್ತೊಂದಿಷ್ಟು ವಿಚಿತ್ರಾನ್ನ
ವಿಮರ್ಶೆ : ಶ್ರೀನಾಥ್ ಭಲ್ಲೆ, 

 

ಎಲ್ಲರಿಗೂ ನಮಸ್ಕಾರ.

ನನ್ನ ಹೆಸರು ಶ್ರೀನಾಥ್ ಭಲ್ಲೆ. ’ನಮ್ಮ ಹೆಮ್ಮೆಯ ಬರಹಗಾರರು’ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಹಳ ಸಂತೋಷವಾಗುತ್ತಿದೆ. ಆತ್ಮೀಯ ಮಿತ್ರರಾದ ಶ್ರೀವತ್ಸ ಜೋಶಿಯವರ ಪುಸ್ತಕಗಳನ್ನು ವಿಮರ್ಶಿಸಲು ಸಿಕ್ಕ ಅವಕಾಶಕ್ಕೆ ಇನ್ನೂ ಹೆಚ್ಚು ಸಂತೋಷವಾಗುತ್ತಿದೆ. ಮೊದಲ ಬಾರಿಗೆ ಇಂತಹ ಸಮಾರಂಭದಲ್ಲಿ ಪಾಲ್ಗೊಳ್ಳುತ್ತಿರುವುದರಿಂದ ಅರಿತೋ ಅರಿಯದೆಯೋ ಆಗಬಹುದಾದ ತಪ್ಪುಗಳಿಗೆ ಅಡ್ವಾನ್ಸ್ ಆಗಿ ಕ್ಷಮೆ ಇರಲಿ. ಆರು ವರ್ಷಗಳ ಸಾಧನೆಯನ್ನು ಆರೇ ನಿಮಿಷಗಳಲ್ಲಿ ಹೇಳುವ ಪ್ರಯತ್ನ ಮಾಡುತ್ತೇನೆ. ವಿಚಿತ್ರಾನ್ನಗಳ ಸರಣಿಯುದ್ದಕ್ಕೂ ಲಘು ಹಾಸ್ಯ ಎದ್ದುಕಾಣುವುದರಿಂದ ನನ್ನ ವಿಮರ್ಶೆಯನ್ನೂ ಲಘು ಹಾಸ್ಯದಲ್ಲೇ ಕೊಂಡೊಯ್ಯುವ ಪ್ರಯತ್ನವನ್ನೂ ಮಾಡಿದ್ದೇನೆ.

ಸುದ್ದಿಯ ಹಸಿವಿಗೆ ಆಹಾರವೇ ವಿಚಿತ್ರಾನ್ನ. ಭೋಜನದ ಸವಿ ಎಷ್ಟಿದೆ ಎಂದರೆ, ವಿಚಿತ್ರಾನ ಎಂಬೋ ತಟ್ಟೆ ಖಾಲಿಯಾದ ಮೇಲೆ ಎರಡನೇ ಹಾಗೂ ಮೂರನೇ ಸರ್ವಿಂಗ್’ಗಾಗಿ ಓದುಗರನ್ನು ಆಹ್ವಾನಿಸಿ ಹಸಿವನ್ನು ಅಡಗಿಸಲು ಬಂದದ್ದು ’ಇನ್ನೊಂದಿಷ್ಟು ವಿಚಿತ್ರಾನ್ನ’ ಹಾಗೂ ’ಮತ್ತೊಂದಿಷ್ಟು ವಿಚಿತ್ರಾನ್ನ’. ಪುಸ್ತಕಗಳ ಉಪಶೀರ್ಷಿಕೆಯೇ ಹೇಳುವಂತೆ ಇವು ’ಲಗು ಬಗೆಯ’ ಹಾಗೂ ’ಬಗೆ ಬಗೆಯ’ ಬರಹಗಳ ಬುತ್ತಿ. ಜ್ಞ್ನಾನದ ಹಸಿವನ್ನು ತೀರಿಸಿಕೊಳ್ಳಲು ಎಲ್ಲಿಗೆ ಬೇಕಾದರೂ ಒಯ್ಯಬಹುದಾದ್ದರಿಂದ ಇವನ್ನು portable ಜ್ಞ್ನಾನ ಭಂಡಾರ ಎನ್ನಬಹುದು. ಇಷ್ಟಕ್ಕೂ ’ಇನ್ನೊಂದಿಷ್ಟು’, ’ಮತ್ತೊಂದಿಷ್ಟು’ ವಿಚಿತ್ರಾನ್ನಗಳಲ್ಲಿ ಏನಿದೆ ? ಎರಡೂ ಪುಸ್ತಕಗಳನ್ನು ಓದಿದ ಮೆಲೆ ಅನ್ನಿಸಿದ್ದು ’ಏನಿಲ್ಲ?’ ಅಂತ.

ಉದಾಹರಣೆಗೆ, ಈ ಸಮಾರಂಭಕ್ಕೆ ಬರುವಾಗ ’ಯಾವ ಡ್ರಸ್ ಹಾಕಿಕೊಳ್ಳಲಿ’ ಎಂದು ಯೋಚಿಸಿದಾಗ ’ಇನ್ನೊಂದಿಷ್ಟು ವಿಚಿತ್ರಾನ್ನದ ಇಪ್ಪತ್ತನೆಯ’ ಲೇಖನದಲ್ಲಿ ವಿಷಯ ಸಿಕ್ಕಿತು. ಡ್ರಸ್ ತೆಗೆದಿಟ್ಟುಕೊಂಡು ಸ್ನಾನಕ್ಕೆ ಹೋಗಿ ಮೈಗೆ ಪಿಯರ್ಸ್ ಸೋಪು ತಿಕ್ಕಿಕೊಳ್ಳುವಾಗ ಇದು ಯಾಕೆ ಪಾರದರ್ಶಕವಾಗಿದೆ ಅಂತ ಜೋಶಿ ಹೇಳಿದ್ದಾರೆ ಅನ್ನೋದು ನೆನಪಾಯ್ತು. ಹಾಡಿಕೊಂಡು ಜಳಕ ಮುಗಿಸಿದ ಮೇಲೆ, ಪಿಯರ್ಸ್ ಬಗ್ಗೆ ತಿಳಿದುಕೊಳ್ಳೋವಾಗ ನಾನೇಕೆ ಬಾತ್ ರೂಮ್ ಸಿಂಗರ್ ಅಂತಾನೂ ತಿಳಿದುಕೊಂಡೆ.

ಜೋಶಿಯವರು ತಮ್ಮ ಲೇಖನಗಳಲ್ಲಿ ಹಲವಾರು ರೀತಿಯ ತಿಂಡಿ-ತಿನಿಸುಗಳ ರುಚಿ ತೋರಿಸಿದ್ದಾರೆ. ಚಿಕ್ಕಿ, ಬೇಗಲ್, ಬಜಗೋಳಿ, ಗೋಳಿಬಜೆ, ಹಲಸಿನ ಹಪ್ಪಳ ತಿನ್ನಿಸಿದ್ದು ಮಾತ್ರವಲ್ಲದೇ ಗಂಜಿ ಕುಡಿಸಿದ್ದಾರೆ… ಒಮ್ಮೆಯಂತೂ ಹುಲ್ಲು ತಿನಿಸಿದ್ದಾರೆ. ಕಾಕ್ ಟೈಲ್ ಬಗ್ಗೆ ಬರೆಯುವಾಗ ಜೋಶಿಯವರ ತಾವು ಯಾವ ಜೋಶ್’ನಿಂದಲೂ ಈ ಲೇಖನ ಬರೆದಿಲ್ಲ ಅಂತ ಹೇಳಿದ್ದಾರೆ. ನಾನೇನ ಹೇಳಹೊರಟಿದ್ದೀನಿ ಅನ್ನೋದು ಅರ್ಥವಾಗಬೇಕಾದರೆ ಅವರ ಲೇಖನಗಳನ್ನು ಓದಿಯೇ ತಿಳಿಯಬೇಕು.

ಹಲವಾರು ಬಾರಿ ಕೆಣಕಿ-ತಿಣುಕಿಸಿದ ರಸಪ್ರಶ್ನೆಗಳನ್ನು ಕೇಳಿ ವಿಜೇತರನ್ನು ಆರಿಸಿ ಬಹುಮಾನ ನೀಡಿದ್ದಾರೆ. ಒಂದು ಬಾರಿ ಸಚಿತ್ರ ರಸಪ್ರಶ್ನೆ ನೆಡೆಸುವುದರ ಮೂಲಕ ’ಜನಪದ ಜಾತ್ರೆ’ ಯನ್ನೇ ನೆಡೆಸಿದ್ದಾರೆ. ಹಲವಾರು ಹೊಸ ವಿಷಯಗಳ ಹಬ್ಬವೇ ಆಗಿತ್ತು ಆ ರಸಪ್ರಶ್ನೆ. ವೈಜ್ಞ್ನಾನಿಕ ವಿಚಾರಗಳನ್ನು ತಿಳಿಸುತ್ತ ಒಮ್ಮೆ, Telescope, Telegraph ಇನ್ನಿತರೇ “ಟೆಲಿ” ಬಗ್ಗೆ ಮಾತನಾಡುತ್ತ ದೂರವಾಣಿ ನಾಮಕರಣದಂತಹ ವಿಚಾರ ತಿಳಿಸಿದ್ದರು. ಮತ್ತೊಂದೆಡೆ ಕೊಕ್ಕರೆ ಹಾರಾಟದ ಏರೋ ಡೈನಾಮಿಕ್ಸ್ ತಿಳಿಸಿದ್ದಾರೆ. ಹಲವಾರು ಲೇಖನಗಳಲ್ಲಿ ಲಘು ಹಾಸ್ಯದ ಸವಿಯನ್ನು ಚೆನ್ನಾಗಿ ಹರಿಸಿದ್ದಾರೆ. ಉದಾಹರಣೆಗೆ ಹಜಾಮತ್-ಸೆ-ಹಜಾಮತ್ ತಕ್, ಪನ್’ಗಳು, ಮಜಾವಾಣಿ, ಆಂಗ್ಲ-ಕನ್ನಡ translation ವೈಪರೀತ್ಯ, ಹನುಮನಿಗೆ ಬರೆದ ಪತ್ರ ಹೀಗೇ ಸಾಗುತ್ತದೆ ಪಟ್ಟಿ.ಸ್ವಾರಸ್ಯಕರವಾದ ವಿಚಾರಗಳನ್ನು ತಿಳಿಸುವುದರಲ್ಲಿ ಜೋಶಿಯವರದು ಎತ್ತಿದ ಕೈ ಎಂದರೆ ಅದು ಅತಿಶಯೋಕ್ತಿಯಲ್ಲ.  ಎತ್ತಿದ ಕೈ ಇದ್ದರೆ ಟೈಪ್ ಹೇಗೆ ಮಾಡುತ್ತಿದ್ದರು ಎಂದು ಕೇಳಬೇಡಿ.

ಅಂಧಕಾರದ ಬಗ್ಗೆ ವಿಚಾರ ಮಾಡುತ್ತ Switzerland’ನ blind cow restaurant ಬಗ್ಗೆ ಹೇಳಿದ್ದಾರೆ. ಅದರಂತೆಯೇ ಡಾ| ಕೆಲ್ಲಿಯವರ ಕಥಾನಕ, Code Adam, Nostalgia, Murphy’s law, Global dimming, Nut-Bolt-Screw  ಇತ್ಯಾದಿ ಲೇಖನಗಳು.

ಮತ್ತೊಂದು ಕಡೆ ಜೋಶಿಯವರು ಹೇಳ್ತಾರೆ, ತಮಗೆ ಎಲ್ಲೆಲ್ಲಿಂದಲೋ ವಿಷಯಗಳನ್ನು ತಂದು ಅದಕ್ಕೊಂದು ಸಾಮಾನ್ಯ ವಿಷಯ ಹೊಂದಿಸಿ ಪೋಣಿಸುವುದು ಇಷ್ಟ ಎಂದು ತಿಳಿಸಿದ್ದಾರೆ. ಅದನ್ನು ಸಮರ್ಥನೆ ಮಾಡುವ ಒಂದು ಲೇಖನವೆಂದರೆ ಹೇಮಾಮಾಲಿನಿ-ಲಾಲೂ ಪ್ರಸಾದ್-ಗಾಂಧೀಜಿ-ಮಾವಿನಹಣ್ಣಿನ ಬಗ್ಗೆ ಬರೆದ ಲೇಖನ. ಬಹಳ ಸೊಗಸಾದ ಲೇಖನ ಇದು.

ತಾವು ಭೇಟಿ ನೀಡಿದ ಸ್ಥಳಗಳ ವೈಶಿಷ್ಟ್ಯದ ಬಗ್ಗೆ ಹಲವೆಡೆ ಬರೆದಿದ್ದಾರೆ. ಕಾರ್ಯನಿಮಿತ್ತ ಹೋದ ಪೋರ್ಟರಿಕೋ ಆಗಿರಬಹುದು ಅಥವಾ ಸ್ನೇಹಿತರು ಆಹ್ವಾನಿಸಿದ ಪದ್ಮನಾಭ ವ್ರತವೇ ಆಗಿರಬಹುದು. ಹಬ್ಬ ಹರಿದಿನಗಳ ಬಗ್ಗೆ ಮಾತನಾಡುತ್ತ ಮಹತ್ವ ಸಾರುವ ಕಥೆಯನ್ನೂ ವಿವರಿಸಿದ್ದಾರೆ. ಲಕ್ಶ್ಮೀ ಪೂಜೆ, ಮಂಗಳ ಗೌರಿ, ಶಿವರಾತ್ರಿ ಆಚರಣೆ, ಉಗಾದಿ, ದೀಪಾವಳಿ, ದೇವಳದ ಜಾತ್ರೆ ಹೀಗೆ. ಎಲ್ಲ ಲೇಖನಗಳೂ ಉತ್ತಮವಾಗಿದ್ದರೂ ನಾನಗೆ ಅತೀ ಮೆಚ್ಚುಗೆಯಾದವು ಅಂದರೆ ವೇದಾಧ್ಯಯನ ವಿಧಾನ, ವೃಷಭ ವಿಸರ್ಜಿತ, ಏಕವಚನ ನಾಮಾಮೃತ, ತಲ್ಲಣಿಸದಿರು ಕಂಡ್ಯ ವಲಸೆಗಾರ.

ಒಟ್ಟಾರೆ ಹೇಳಿದರೆ ’ಇನ್ನೊಂದಿಷ್ಟು ವಿಚಿತ್ರಾನ್ನ’ ಹಾಗೂ ’ಮತ್ತೊಂದಿಷ್ಟು ವಿಚಿತ್ರಾನ್ನ’ ಲೇಖನ ಸರಮಾಲೆಯಲ್ಲಿ ಉದಾತ್ತ ವಿಚರಗಳಿವೆ, ಚಿಂತನೆ ಇದೆ, ಹಾಸ್ಯ ಇದೆ, ರಸಪ್ರಶ್ನೆಗಳಿವೆ, ಖಾದ್ಯಗಳ ವಿಚಾರವಿದೆ, ಗಣಿತ ಇದೆ, ವಿಜ್ಞ್ನಾನ ಇದೆ, ದಾಸರ ಪದಗಳು ಹಾಗೂ ಸಿನಿಮಾ ಹಾಡುಗಳ ಭಂಡಾರವೇ ಇದೆ. ಬರೀ ತಮ್ಮದೇ ವಿಚಾರಗಳಲ್ಲದೇ ಓದುಗರು ಈ-ಮೈಲ್ ಗಳಲ್ಲಿ ಹಂಚಿಕೊಂಡ ವಿಚಾರಗಳನ್ನೂ ಲೇಖನದಲ್ಲಿ ಸೇರಿಸಿದ್ದಾರೆ.ಅಗಲವಾದ ಜ್ಞ್ನಾನಕ್ಕಿಂತ ಯಾವುದಾದರೂ ಒಂದು ವಿಷಯದಲ್ಲಿ ಆಳವಾದ ಜ್ಞ್ನಾನ ಇದ್ದಿದ್ದರೆ ಎಂದು ಚೆನ್ನಿತ್ತು ಎಂದು ಹೇಳುತ್ತ ನಮಗೂ ಒಮ್ಮೆ ಯೋಚನೆ ಮಾಡುವ ಹಾಗೆ ಮಾಡಿದ್ದಾರೆ. ಅದ್ಭುತ ವಿಚಾರಗಳನ್ನು ಪುಸ್ತಕ ರೂಪದಲ್ಲಿ ತಂದು ಎಲ್ಲರನ್ನೂ ರಂಜಿಸಿರುವ ಶ್ರೀವತ್ಸ ಜೋಶಿಯವರಿಗೆ ಹೃತ್ಪೂರ್ವಕ ಅಭಿನಂದನೆಗಳನ್ನು ಅರ್ಪಿಸುತ್ತ, ನನ್ನ ಮಾತು ಮುಗಿಸುತ್ತೇನೆ. ಹಾಗೂ ವಿಮರ್ಶೆ ಮಾಡುವ ಅವಕಾಶ ನೀಡಿದ ಕನ್ನಡ ಸಾಹಿತ್ಯ ರಂಗದ ಸಮಿತಿ ವರ್ಗದವರಿಗೂ ಅನಂತ ವಂದನೆಗಳು. 

ಈವರೆಗಿನ ನನ್ನ ಮಾತನ್ನು ಕೇಳಿ ನಿಮಗೆ ಆಕಳಿಕೆ ಬಂದಿದ್ದರೆ ಅದು ಯಾಕೆ ಎಂದು ತಿಳಿದುಕೊಳ್ಳಲು ’ಇನ್ನೊಂದಿಷ್ಟು ವಿಚಿತ್ರಾನ್ನದ’ ಇಪ್ಪತ್ತೊಂಬತ್ತನೆಯ ಲೇಖನ ಓದಿ.

ನಾನಿನ್ನು ಬರಲೇ ?

 

 Posted by at 7:14 PM