Jul 042018
 

ಇದು ಕತೆಯಲ್ಲ, ಕವಿತೆಯೂ ಅಲ್ಲ,
ಪ್ರಬಂಧವೂ ಅಲ್ಲ, ಇದು ಕಗ್ಗ
ಸಗ್ಗವ ಹುಡುಕುತ ನುಗ್ಗುತ ಬರುವ
ಬಡವರ ಬಗ್ಗರ ಬವಣೆಯ ಕಗ್ಗ

ಉತ್ತರ ಅಮೆರಿಕ ಗಡ್ಡದ ಜೊತೆಗೆ
ದಕ್ಷಿಣ ಅಮೆರಿಕ ಜುಟ್ಟಿನ ಕೊಂಡಿ
ಇವೆರಡನು ಜಗ್ಗಿ ಕಟ್ಟುವ ಹಗ್ಗ
ಮಧ್ಯ ಅಮೆರಿಕದಿ ಜೀವವು ಅಗ್ಗ

ಬಡತನ ಸುರಿಯುವ ಗ್ವಾಟೆಮಾಲ
ಹಂಡರಬಂಡರ ಹಾಂಡೂರಸ್
ಎಲ್ಲಿಯು ಸಲ್ಲದ ಸಾಲ್ವಡೋರ್
ಕಂಡರೆ ಕರಗುವ ನಿಕರಾಗುವ!

ತಿನಲು ಅನ್ನವಿಲ್ಲ, ಉಡಲು ಬಟ್ಟೆಯಿಲ್ಲ
ಮಾಡುವೆನೆಂದರೆ ಕೆಲಸವಿಲ್ಲ,
ಓದುವೆನೆಂದರೆ ಶಾಲೆಗಳಿಲ್ಲ
ಜೀವಕೆ ಇಲ್ಲಿ ಬೆಲೆಯೇ ಇಲ್ಲ

ಕೊಲುವರ ಭಯವು ಹಿರಿಯರಿಗಾದರೆ
ಕೆಡಿಪರ ಭಯವು ಮಕ್ಕಳಿಗೆ
ಆಗಲೆ ಗಂಡನ ಕೊಂದಿಹರಲ್ಲ
ಮಗಳನು ಪುಂಡರು ಕೆಡಿಸಿಹರಲ್ಲ

ದೀನರ ದಲಿತರ ರಕ್ಷಿಪರಿಲ್ಲ
ನಿರಾಶ್ರಿತರಿಗೆ ನಿದ್ರೆಯು ಇಲ್ಲ
ಅಸಹಾಯಕರಿಗೆ ಶಾಂತಿಯೆ ಇಲ್ಲ
ಬಿಟ್ಟೋಡದೆ ಬೇರೆ ಗತಿಯೇ ಇಲ್ಲ

ಕಾಲ್ನಡಿಗೆಯಲೋ ಬಸ್ ಪಯಣದಲೋ
ಸರಕನು ಸಾಗಿಪ ರೈಲುಗಳಲ್ಲೋ
ಹೊರಟಿರುವರು ದೂರದ ಪಯಣಕ್ಕೆ
ನೂರಾರು ಗಾವುದ ಯಾತನೆಗೆ

ಪುಂಡರ ಕಾಟವ ತಡೆಯಲಾರದೆ
ಆಶ್ರಯ ಬಯಸುತ ಹೊರಟಿಹರು
ಗಡಿಗಳ ದಾಟುತ ನಡೆದಿಹರು
ನಾರುವ ನದಿಗಳ ಈಜಿಹರು

ಕಳ್ಳರು ಕಾಕರು ಕುಡುಕರು ಕೊರಮರು
ಹೆಣ್ಗಳ ಕೆಣಕುವ ಕೆಟ್ಟ ಖದೀಮರು
ಎಲ್ಲರು ಜೊತೆಯಲೆ ಬಂದಿಹರು
ಸಗ್ಗದ ಗಡಿಯನು ತಲುಪಿಹರು

ಹೊಟ್ಟೆಯಲಿರುವ ಕಂದನ ಭಾರ
ಸೊಂಟವ ತಬ್ಬಿಹ ಹಸಿದ ಕಿಶೋರ
ತಪ್ಪಿಸಿ ಓಡುವ ಹರೆಯದ ಬಾಲೆ
ಮೋಸದಿ ಎರಗುವ ಕಾಮಿಯ ಶೂಲೆ

ಗಡಿಯಲಿ ಕಾದಿದೆ ತುರುಫ಼ನ ತಂಡ
ಜೊತೆಯಲ್ಲಿವು ನನ್ನಯ ಗಂಡ
ಮಕ್ಕಳ ಆಚೆಗೆ ಸಾಗಿಸಲೋಸುಗ
ತೆರಬೇಕೇನು ತಲೆಗಳ ದಂಡ?

ನೋಡದೊ ಕಂಡಿತು ಸಗ್ಗದ ಬಾಗಿಲು
ಬೇಲಿಯ ದಾಟಲು ಹರ್ಷದ ಹೊನಲು
ಸ್ವಾತಂತ್ರ್ಯ ದೇವತೆ ಇರುವಳು ಅಲ್ಲೇ
ಸಲಹುವಳೆಮ್ಮನು ನಾನದ ಬಲ್ಲೆ

ಆಕೆಯ ಕೈಯಲಿ ಉರಿಯುವ ಪಂಜು
ಮತ್ತೊಂದು ಕೈಯಲಿ ತಬ್ಬಿದ ಫಲಕ
ಫಲಕದಲೇನೋ ಸಂದೇಶವಂತೆ
ಓದಿನೋಡಿದರೆ ತಿಳಿಯುವುದಂತೆ

“ನಿಮ್ಮಲ್ಲಾರೋ ದಣಿದವರಿದ್ದರೆ
ಅವರನು ನಮಗೆ ತಂದು ಕೊಡಿ
ನಿಮ್ಮ ಬಡವರನು ನಮಗೆ ಬಿಡಿ
ಕಟ್ಟಿದ ಶ್ವಾಸವ ತೆರೆದು ಬಿಡಿ

ಮುದುಡಿ ಕುಳಿತವರ ಸೆಟೆದು ನಿಲ್ಲಿಸಿ
ಸ್ವತಂತ್ರ ಉಸಿರಿಗೆ ಗಾಳಿಯಾಡಿಸಿ
ಸಮೃದ್ಧ ಜೀವನ ಸಾರ್ಥಕ ಬದುಕಿಗೆ
ಕಾದಿಹರೆಲ್ಲರ ನಮಗೆ ಕೊಡಿ

ನಿಮ್ಮ ತೀರದಲಿ ಕೊಚ್ಚಿಹೋಗುತಿಹ
ಪರಿತ್ಯಕ್ತರನು ನಮಗೆ ಕೊಡಿ
ವಸತಿ ಕಾಣದೆ ವಿಲಗುಟ್ಟುತಿಹ
ಹುಟ್ಟು ತಿರುಕರನು ನಮಗೆ ಕೊಡಿ

ಚಕ್ರವಾತವು ತಿರುಚಿ ಎಸೆದಿಹ
ದಿಕ್ಕುಗಾಣದ ದೀನರ ದಲಿತರ
ದೇಶವಿಹೀನರ ಶೋಷಿತ ಜನಗಳ
ತಪ್ಪದೆ ಕೂಡಲೇ ಕಳಿಸಿ ಬಿಡಿ

ಇದೋ ತೆರೆಯುವೆನು ಚಿನ್ನದ ದ್ವಾರ
ಪಂಜಿನ ಬೆಳಕಿದೆ ಇಲ್ಲಿ ಅಪಾರ
ಬನ್ನಿರಿ ಬನ್ನಿರಿ ಪ್ರಿಯ ಬಾಂಧವರೆ
ನನ್ನೀ ಅಮೆರಿಕದಂಗಳಕೆ”

ಬನ್ನಿರಿ ಮಕ್ಕಳೆ ಬನ್ನಿರಿ ಬೇಗ
ಸ್ವಾತಂತ್ರ್ಯ ದೇವತೆ ಕರೆದಿಹಳು
ಸದ್ದು ಮಾಡದೆ ನಡೆಯಿರಿ ಈಗ
ಗಡಿಯನು ದಾಟುವ ಸಮಯವಿದು

ರಾತ್ರಿಯ ಕತ್ತಲು ಕಳೆಯುವ ಮುನ್ನ
ಬೇಲಿಯ ಮುಳ್ಳನು ಬದಿಗೊತ್ತರಿಸಿ
ಸುತ್ತಿದ ತಂತಿಯ ತುದಿ ಕತ್ತರಿಸಿ
ಉಪಾಯದಿಂದಲಿ ನುಸಿಯುವೆವು

ಬೇಗನೆ ನುಸಿಯಿರಿ ಎನ್ನುತ ದೂಡಲು
ಮಗಳು ನುಗ್ಗಿದಳು ತಮ್ಮನ ಎಳೆದಳು
ತಾಯಿಯು ತಲೆಯನು ತೂರುತ ತೆವಳುತ
ಆಯ ತಪ್ಪಿದಳು ಕುಸಿಯುತಲಿ

ತುಂಬು ಬಸುರಿಯು ಸೋತು ಬಳಲಿದಳು
ಏರುಸಿರಿನಲಿ ಹೆಣಗುತ ಅತ್ತಳು
ಅಯ್ಯೋ ಬಾಯಾರಿಕೆ ನೀರು ಕೊಡಿ
ಎನ್ನುತ ಮಕ್ಕಳ ಬೇಡಿದಳು

ಬಾಟಲಿಯಲ್ಲಿ ಹನಿಗಳು ಮಾತ್ರ
ತೆವಳಲು ಬಿಡದು ಹೊಟ್ಟೆಯ ಗಾತ್ರ
ನಡುಗುತ ನಡುಗುತ ನಲುಗಿದಳು
ಹೊಟ್ಟೆಯ ಮೇಲಕೆ ಮಾಡಿದಳು

ಈಗಲೆ ಬಂದಿತೆ ಹೆರಿಗೆಯ ನೋವು
ದಾಟುವ ಮೊದಲೇ ಬರುವುದೇ ಸಾವು
ಮಗುವಿದು ಹುಟ್ಟಲಿ ಅಮೆರಿಕದಲ್ಲಿ
ಬೆಳೆಯಲಿ ಸುಖದಲಿ ಪ್ರಜೆಯಾಗಲ್ಲಿ

ಬೆನ್ನಿನ ಬೇನೆಯ ತಾಳೆನೆ ಅಮ್ಮ
ಚೀತ್ಕಾರ ಮಾಡದೆ ಹೇಗಿರಲಮ್ಮ
ಕಾವಲುಗಾರಗೆ ಕೇಳಿಸಿಬಿಟ್ಟರೆ
ನಮ್ಮನು ಹಿಂದಕೆ ದೂಡುವನಮ್ಮ

ಮಕ್ಕಳಿಬ್ಬರು ಗಡಿಯ ದಾಟಿಹರು
ತಾಯಿಯ ಎಳೆಯಲು ಯತ್ನಿಸುತಿಹರು
ತಲೆಯು ಅಮೆರಿಕದಿ ದೇಹ ಮೆಕ್ಸಿಕೋ
ಸ್ವಾತಂತ್ರ್ಯ ದೇವಿಯೆ ಬೇಗ ಎತ್ತಿಕೋ

ಆಕೆ ಇರುವುದು ಸಾವಿರ ಮೈಲಿ
ಕೂಗಲಾದೀತೆ ಇವಳ ಕೈಯಲಿ
ಕೇಳೀತೆ ಕೂಗು ಅವಳ ಕಿವಿಗಳಿಗೆ
ತಾಳೀತೆ ಮಗು ಗರ್ಭದ ಒಳಗೆ?

ಅಗೋ ಬಂದನು ಕಾವಲುಗಾರ
ಗದರಿಸಿ ಬೈಯ್ದನು ಯಥಾಪ್ರಕಾರ
ಭುಜವನು ಹಿಡಿದು ಧರಧರ ಎಳೆದು
ನಲುಗಾಡಿಸಿದನು ದೇಹವ ಹಿಡಿದು

ಬಸುರಿಯ ಯಾತನೆ ನೋಡಿದನು
ಸುರಿಯುವ ರಕ್ತಕೆ ಬೆದರಿದನು
ನಡುಗುತ ತುಟಿಯನು ಕಚ್ಚಿದನು
ಆದ ಅನರ್ಥಕೆ ಬೆಚ್ಚಿದನು

ಅಯ್ಯೋ ಏತಕೆ ಎಳೆದೆನು ರಟ್ಟೆ
ತಂತಿಯ ಮುಳ್ಳದು ಸೀಳಿತು ಹೊಟ್ಟೆ
ಚಿತ್ರಹಿಂಸೆಯನು ಬಸುರಿಗೆ ಕೊಟ್ಟೆ
ಗರ್ಭದ ಚೀಲವು ಒಡೆಯಿತು ಕಟ್ಟೆ

ವೈದ್ಯನು ಇಲ್ಲದೆ ದಾದಿಯು ಇಲ್ಲದೆ
ಭೂಮಿಯ ಮಡಿಲಲಿ ಶಿಶು ಜನನ
ಗಡಿಯನು ಬಿಡಿಸುವ ರೇಖೆಯನಳಿಸಿತು
ಹರಿಯುವ ರಕ್ತದ ಸಂಚಲನ

ಕಲ್ಪನೆಗೆಟುಕದ ಶಸ್ತ್ರದ ಸೀಳಿಗೆ
ಚಿಮ್ಮುತ ಹುಟ್ಟಿದ ಹೊಸ ಜೀವ
ಅಮೆರಿಕ ದೇಶದ ಪ್ರಜೆಗಳ ಗುಂಪಿಗೆ
ಸೇರಲಿ ಹರಸೋ ಎಲೆ ದೇವ!

ರಕ್ತದಿ ತೊಯ್ಯುತ ಮಲಗಿರೆ ಮಾನಿನಿ
ಬೆವರುತ ಬೆದರುತ ನೋಡಿದನು
ಬೆತ್ತಲೆ ಶಿಶುವನು ಎತ್ತಿಕೊಂಡವನು
ಮೂವರ ಜೊತೆಯಲಿ ಓಡಿದನು

ನಿಗದಿಯಾಗಿರುವ ತಂಗುದಾಣದಲಿ
ನಡೆದನು ಮಕ್ಕಳ ಪಂಜರಕೆ
ತಂದೆತಾಯಿಗಳ ಬಿಡಿಸಿ ತಂದಿರುವ
ಮಕ್ಕಳ ಜೊತೆಯಲಿ ತಂಗಲಿಕೆ

ಸಾವಿರ ಸಾವಿರ ಮಕ್ಕಳ ನಡುವೆ
ಪುಟ್ಟ ಕಂದನನು ಮಲಗಿಸಿದ
ಕಾನೂನಿನಂತೆ ವರ್ತಿಸಿ ಅವನು
ಕೈಗಳ ತೊಳೆಯಲು ಧಾವಿಸಿದ

ಅತ್ತ ಬೇನೆಯಲು ನಕ್ಕಳು ತಾಯಿ
ಸ್ವಾತಂತ್ರ್ಯ ದೇವಿಯೆ ನೀನೇ ಕಾಯಿ
ಕನಸ ಕಾಣುತ್ತ ಕಣ್ಣ ಮುಚ್ಚಿದಳು
ಬೇರಾದ ಮಕ್ಕಳ ಕಾಣಲು ಆಯಿ

ನರಳುತ ಒರಳುತ ಕನಸಿನ ನಿದ್ದೆ
ಕಾಪ್ಟರ್ ಇಳಿಯಿತು ಪಟ ಪಟ ಸದ್ದೆ
ಹಾರುತ ಬಂದಿತು ರಕ್ಕಸ ಹದ್ದು
ಎಲ್ಲಿದೆ ನನ್ನಯ ನೋವಿಗೆ ಮದ್ದು?

ತೆಳ್ಳನೆ ಸುಂದರಿ ಇಳಿದು ಬಂದಳು
ಸ್ವಲ್ಪ ದೂರದಲಿ ಮುಂದೆ ನಿಂದಳು
ಇವಳೇ ಏನು ಸ್ವಾತಂತ್ರ್ಯ ದೇವತೆ?
ಸಾಂತ್ವನ ಹೇಳಲು ಬಂದಿಹಳೆ?

ಕೈಲಿ ಪಂಜಿಲ್ಲ, ಮುಖದಿ ಕಳೆಯಿಲ್ಲ
ಫಲಕವು ಇಲ್ಲ ಸಂದೇಶವು ಇಲ್ಲ
ಆಕೆ ನಗಲಿಲ್ಲ, ಕುಶಲ ಕೇಳಲಿಲ್ಲ
ಯೋಗಕ್ಷೇಮವನು ವಿಚಾರಿಸಲಿಲ್ಲ

ಬೆನ್ನ ತೋರುತ್ತ ಕ್ಷಣಕಾಲ ನಿಂದು
ರಾಜನ ಆಜ್ಞೆಯ ಸಾರಲು ಎಂದು
ಸಗ್ಗದ ರಾಣಿಯೆ ಇರಬಹುದೀಕೆ
ಸಂದೇಶ ಬೆನ್ನಲಿ ಬರೆದಿಹುದೇಕೆ?

ಮಗಳೇ ಓದಮ್ಮ ಓದು ಮಗಳೇ
ಇಲ್ಲದ ಮಗಳನು ಬೇಡಿದಳು
ಮಗಳ ದನಿಯಿಲ್ಲ, ಅವಳೆಲ್ಲೋ?
ಮಗನ ದನಿಯಿಲ್ಲ ಅವನೆಲ್ಲೋ?

ಅಯ್ಯೋ ಕೂಸು, ಹಾಲೂಡಿಸಬೇಕು
ಯಾರು ರಕ್ಷಿಸುವವರು ಎಳೆಗೂಸ?
ದೈತ್ಯನು ಬಂದನು ಕೂಗುತ ಹತ್ತಿರ
ಕರ್ಕಶ ಸ್ವರದಲಿ ಕೊಟ್ಟನು ಉತ್ತರ

ಓದಿ ಹೇಳಿದನು ಸಂದೇಶವನು
ವಿವರಣೆ ಕೊಡುತ್ತ ಟ್ವೀಟಿನಲಿ
“ಐ ರಿಯಲಿ ಡೋಂಟ್ ಕೇರ್, ಡು ಯು?
ಹಹ್ಹಹ್ಹ! ಐ ರಿಯಲಿ ಡೋಂಟ್”

ಅತ್ತ ನವಜಾತ ಶಿಶು ಅತ್ತೇ ಅತ್ತಿತು
ಉಸಿರುಗಟ್ಟಿತ್ತು, ನೀಲಿಗಟ್ಟಿತ್ತು
ಅಕ್ಕ ಆ ಪಕ್ಕ ತಮ್ಮ ಈ ಪಕ್ಕ
ಕೂಸು ಅಳುವನ್ನು ನಿಲ್ಲಿಸಿತು!

(ಮೈ.ಶ್ರೀ. ನಟರಾಜ ಅವರು ಬರೆದಿರುವ ನೀಳ್ಗವನ- ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ ಇದು ಅಮೆರಿಕದ ಸದ್ಯದ ಪರಿಸ್ಥಿತಿಯನ್ನು ಬಿಂಬಿಸುವಂತಿದೆ. ಮಧ್ಯ ಅಮೆರಿಕದಿಂದ ಹೊರಟು ಗಡಿ ದಾಟಲು ಯತ್ನಿಸುವ ಒಂದು ಬಡ ಸಂಸಾರದ ಗರ್ಭಿಣಿ ಹೆಣ್ಣು ತನ್ನ ಎರಡು ಮಕ್ಕಳೊಡನೆ ಪಡುವ ಬವಣೆಯೇ ಇದರ ವಸ್ತು. )

 Posted by at 8:07 AM
Feb 052013
 

ಬರಾಕ್ ಒಬಾಮ ಎರಡನೆಯ ಬಾರಿಗೆ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಪ್ರಮಾಣವಚನ ಸ್ವೀಕರಿಸಿದ ಸಂದರ್ಭದಲ್ಲಿ ರಿಚರ್ಡ್ ಬ್ಲಾಂಕೋ ಓದಿದ ಕವಿತೆಯ ಕನ್ನಡ ಅನುವಾದ.ಅನುವಾದಿಸಿದವರು ಡಾ.ಮೈಶ್ರೀ.ನಟರಾಜ.

Barack_Obama_second_swearing_in_ceremony_1-21-13
ಮೂಲ ಕವಿತೆಯ ಯೂಟ್ಯೂಬ್ ಲಿಂಕ್ ಇಲ್ಲಿದೆ:-

ಒಂದು ಇಂದಿನ ದಿನ

ಉದಯಿಸಿದನಿಂದು, ಒಬ್ಬ ಸೂರ್ಯ,
ತೀರಗಳ ತನ್ನ ಕಿರಣಗಳಿಂದ ಬೆಳಗುತ್ತ,
ಧೂಮ್ರ-ಪರ್ವತಗಳನನಿಣಿಕಿ ನೋಡುತ್ತ,
ಮಹಾ ಸರೋವರಗಳಿಗೆ ನಮಿಸಿ ನಗುತ್ತ,
ಮಹಾ ಬಯಲುಗಳ ಸುತ್ತೆಲ್ಲ
ಸರಳ ಸತ್ಯವನೊಂದ ಹರಡುತ್ತ,
ರಾಕೀ ಪರ್ವತ ಶಿಖರಗಳತ್ತ ಜಿಗಿಯುತ್ತ,
ಬೆಳಕನು ಹೊತ್ತು, ಮನೆಮನೆಯ
ಛಾವಣಿಗಳ ಬೆಳಗಿ ಎಲ್ಲರನು ತಟ್ಟೆಬ್ಬಿಸುತ್ತ,
ಪ್ರತಿ ಚಾವಡಿಯಡಿ ಗವಾಕ್ಷಿಗಳಲ್ಲಿ
ಕೈಸನ್ನೆಮಾತ್ರದಿಂದ ಬಿತ್ತರಿಸಲ್ಪಟ್ಟ
ಮೌನಕಥಾನಕಗಳ ಕೇಳುತ್ತ ಹೊರಟ, ಆ ಭಾನು.

ನನ್ನ ಮುಖ, ನಿಮ್ಮ ಮುಖ, ಕೋಟಿ ಮುಖಗಳು
ಬೆಳಗಿನ ಮುಕುರದ ಬಿಂಬಗಳು,
ಪ್ರತಿಯೊಂದು ಆಕಳಿಸುತ್ತ ಜೀವತಳೆದು
ತಂತಮ್ಮ ದಿನಚರಿಯಲ್ಲಿ ಲೀನ.
ಮಗುವಿನ ಕೈಗೊಂದು ಹಲಗೆ ಬಳಪದ ಹಡಪ,
ಹಳದಿಯ ಶಾಲೆ ಬಸ್ಸು ಓಡುವಲ್ಲೆಲ್ಲ
ಹಸಿರು-ಹಳದಿ-ಕೆಂಪು ತೋರುದೀಪಗಳು,
ಹಣ್ಣಿನಂಗಡಿ, ಸೇಬು, ಕಿತ್ತಳೆ, ನಿಂಬೆ,
ಕಾಮನಬಿಲ್ಲಿನಂತೆ ಚಿತ್ತಾರ,
ಬೇಡುತ್ತಿವೆ ನಮ್ಮ ಹೊಗಳಿಕೆಯ ಮಂದಾರ.
ಬೆಳ್ಳಿ ಟ್ರಕ್ಕುಗಳು, ಎಣ್ಣೆಯನೊ, ಹಾಲನೋ,
ಇಟ್ಟಿಗೆ-ಕಾಗದ ಮತ್ತೇನೇನೋ ಹೊತ್ತು ನಡೆದಿವೆ
ಹೆದ್ದಾರಿಗಳ ಮೇಲೆ ನಮ್ಮ ವಾಹನಗಳ ಅಕ್ಕ ಪಕ್ಕ.
ನಾವು ಹೊರಟದ್ದು ಖಾಲಿ ಮೇಜಿನೆಡೆಗೋ,
ಲೆಕ್ಕ-ಪತ್ರಗಳ ಗೋಜಿನೆಡೆಗೋ,
ಜೀವ ಉಳಿಸಲೋ, ಗಣಿತ ಕಲಿಸಲೋ,
ಅಥವಾ, ಕಿರಾಣಿ ಅಂಗಡಿಯಲ್ಲಿ ಕಾಸನೆಣಿಸಿ
ಸಾಮಾನು ತೂಗಿಸಲೋ —
ನಮ್ಮಮ್ಮ ಇಪ್ಪತ್ತು ವರ್ಷ ಮಾಡಿದಂತೆ —
ಅವಳು ಮಾಡಿದ್ದರಿಂದಲೇ ತಾನೆ,
ನಾನು ಈ ಕವನ ಬರೆಯುವಂತಾದ್ದು?

ಜೀವತುಂಬಿದ ಮುಖ್ಯರು ನಾವೆಲ್ಲ
ಸಾಗುವುದೂ ಆ ಒಂದೇ ಬೆಳಕನು ಸೀಳಿ,
ಶಾಲೆಯಲಿ ಇಂದಿನ ಪಾಠವ ಬರೆದ
ಆ ಕಪ್ಪುಹಲಗೆಯ ಮೇಲೆ ಬಿದ್ದ ಬೆಳಕೂ ಅದೇ;
ಸಮೀಕರಣಗಳ ಬಿಡಿಸಲು, ಇತಿಹಾಸವನು ಪ್ರಶ್ನಿಸಲು,
ಪರಮಾಣುವನು ಊಹಿಸಿಕೊಳ್ಳಲು.
“ನನಗೊಂದು ಕನಸಿಹುದು” ಎಂಬಂಥ ಕನಸುಗಳ ಕಾಣುತ್ತ,
ಶಬ್ದಕೆಟುಕದ ದುಃಖವನು ಅನುಭವಿಸಲು.
ಆ ಇಪ್ಪತ್ತು ಮಕ್ಕಳು ಕುಳಿತಿರುತ್ತಿದ್ದ
ಖಾಲಿ ಬೆಂಚುಗಳ ವರ್ಣಿಸಲು ಎಲ್ಲಿದೆ ಶಬ್ದ?
ಅವರಿಲ್ಲ ಇಂದು, ಇನ್ನೆಂದು,
ಟೀಚರ್ ಕರೆದಾಗ ಅವರ ದನಿಯಿಲ್ಲ.
ಪ್ರಾರ್ಥನೆಯನು ಬಿಟ್ಟೇನೂ ಮಿಕ್ಕಿಲ್ಲ.
ಆದರೆ, ಆ ಒಂದು ಬೆಳಕು, –ಇಗರ್ಜಿಯಲ್ಲಿ —
ಬಣ್ಣ ಮೆತ್ತಿದ ಗಾಜಿನ ಕಿಟಕಿಗಳಲಿ
ರಂಗೇರಿ ಉಸಿರಾಡುತಿತ್ತು,
ವಸ್ತುಸಂಗ್ರಹಾಲಗಳಲಿ ಪ್ರತಿಮೆಗಳ
ಕಂಚಿನ ಮುಖದಲ್ಲಿ ಜೀವವನೆ ತರಿಸಿತ್ತು,
ಮೆಟ್ಟಲುಗಳಿಗೆ ಬಿಸಿಯ ತಟ್ಟಿಸಿ
ಉದ್ಯಾನಗಳ ಪೀಠಗಳಿಗೆ ಶಾಖ ಕೊಟ್ಟಿತ್ತು,
ತಾಯಂದಿರು ಜಾರುಬಂಡೆಯಲಿ ಆಡುವ ಮಕ್ಕಳ
ದಿವಸದ ಹೊಟ್ಟೆಯಲಿ ಜಾರಲು ಬಿಟ್ಟಾಗ.

ನೆಲದ ಮೇಲೆ, ನಮ್ಮ ನೆಲದ ಮೇಲೆ,
ನೇತಾಡುವ ಜೋಳ, ಅದ ಹೊತ್ತಿಹ ಕಾಂಡ,
ಅದನು ನೆಲಕೆ ಕಚ್ಚಿಸಿದ ಬೇರು,
ಬೆವರಲಿ ನೆನೆಸಿದ ಬೀಜವ ನೆಟ್ಟಿಹ
ಕೈಗಳ ಶ್ರಮವೆಲ್ಲ ತೆನೆತೆನೆಗಳಲ್ಲಿ.
ನಮ್ಮನು ಬೆಚ್ಚಗೆ ಇಟ್ಟಿಹ ಇದ್ದಿಲ ಗಣಿಯಲಿ
ಅಗೆಯುವ ಕಲಿಗಳ ಸಾಲು,
ಮರಳನು ಮೆಟ್ಟುತ ಗುಡ್ಡವ ಹತ್ತುತ
ಗಾಳಿಯ ಯಂತ್ರವ ನೆಟ್ಟಿಹ ಕಲಿಗಳ ಗೋಳು,
ಕೊಳವೆಯ ಹಾಸುತ, ತಂತಿಯ ಹೂಳುತ
ದುಡಿಯುವ ಮೈಗಳ ಪಾಡು,
ಗದ್ದೆಯ ಕೆಸರಲಿ ಈಜುತ ಸಾಗುತ
ಕಬ್ಬನು ಕುಯ್ಯುತ ಸವೆದಂತೆ, ನಮ್ಮಪ್ಪ —
ನನಗೂ ನನ್ನಣ್ಣನಿಗೂ ಪುಸ್ತಕ
ಚಪ್ಪಲಿ ಕೊಳ್ಳಲು ಸಾಧ್ಯವಾಗಲೆಂದು.

ಮರುಭೂಮಿಯ ಮರಳು, ಹೊಲಗಳ ಧೂಳು, ನಗರ,
ಬಯಲು ಎಲ್ಲವು ಮಿಂದಿದೆ ಒಂದೇ ವಾಯುವಿನಿಂದ,
ಅದೆ ನಮ್ಮಯ ಉಸಿರು, ಉಸಿರಾಡುವ ನಾವು.
ಕಾರಿನ ಹಾರನ್ ಸದ್ದಲು ಅಡಗಿದೆ ವಾಯು,
ರಸ್ತೆಯ ನಡುವೆ ಹಾಯುವ ಬಸ್ಸಿನಲಿ,
ಮೆಟ್ಟಿಲನೇರುವ ತಾಳದ ದನಿಯಲ್ಲಿ,
ಗಿಟಾರಿನ ಕಂಪನದಲ್ಲಿ, ಗಜಿಬಿಜಿ ಸದ್ದಿನ ರಸ್ತೆಯಲಿ,
ಒಣಗುವ ಬಟ್ಟೆಯ ಹಗ್ಗದ ಮೇಲಿನ
ಅನಿರೀಕ್ಷಿತ ಹಕ್ಕಿಯ ಸದ್ದಿನಲ್ಲಿ,
ಅಡಗಿದೆ ಅದೆ ವಾಯು.

ಮಕ್ಕಳ ಜೋಕಾಲಿಯ ಕೀಯ್-ಕೀಯ್,
ಚೂ-ಚೂ-ರೈಲಿನ ಕೂ-ಕೂ, ಕೇಳಿ:
ಉಪಾಹಾರಗೃಹಗಳ ಗುಜು-ಗುಜು, ಕೇಳಿ
ನಗುತ ಬಾಗಿಲ ತೆಗೆದು ಸ್ವಾಗತಿಸುತ,
ದಿನವಿಡೀ ಪರಸ್ಪರ ನಾವಾಡಿದ
“ಹೆಲೊ, ಶಲೋಂ, ಬೋನ್-ಜೋರ್ನೋ, ಹೌಡಿ, ನಮಸ್ತೆ,”
ಅಥವಾ, ನಮ್ಮಮ್ಮ ಕಲಿಸಿದ ನುಡಿಯಲ್ಲಿ,
“ಬ್ಯೂನೋಸ್ ಡಿಯಾಸ್” ನಾನಾ ನಾಡಿನ ನುಡಿಗಳಲಿ,
ಆ ಒಂದೇ ಗಾಳಿಯಲ್ಲಿ ತೇಲಿಬಿಟ್ಟ
ಮಾತುಗಳು ಬಿಮ್ಮಿಲ್ಲದೇ ಓಡಿ,
ಥಟ್ಟನೆ ತುಟಿಯ ಮೀರಿ ಹಾರಿ
ನಮ್ಮ ಬಾಳಲಿ ಮಾಡಿದ ಮೋಡಿ.

ಒಂದೇ ಬಾನು
ಅಪಲೇಶಿಯನ್ ಮತ್ತು ಸಿಯರಾ ಶ್ರೇಣಿಗಳು
ತಮ್ಮ ಭವ್ಯತೆಯ ಕಂಡಾಗಿನಿಂದ,
ಮಿಸಿಸಿಪ್ಪಿ ಮತ್ತು ಕೊಲರೆಡೂ ಹರಿದು
ಕಡಲ ಸೇರಿದಂದಿನಿಂದ,
ನಮ್ಮ ಕೈಗಳ ಚಳಕಕೆ ನಮೋ ಎನ್ನಿ.
ಸೇತುವೆಗಳಿಗೆ ಉಕ್ಕನು ನೇಯ್ದು,
ಬಾಸ್ ಕೊಟ್ಟ ಮತ್ತೊಂದು ವರದಿಯ
ವೇಳೆಗೆ ಮುನ್ನ ಬರೆದು ಮುಗಿಸಿ,
ಮತ್ತೊಂದು ಗಾಯವ ಹೊಲಿದು,
ಮತ್ತೊಂದು ಸಮವಸ್ತ್ರವ ಜೋಡಿಸಿ,
ತೈಲಚಿತ್ರವೊಂದಕೆ ಮೊದಲ ಕುಂಚವನಾಡಿಸಿ,
ಸ್ವಾತಂತ್ರ್ಯ ಗೋಪುರಕೆ ಕೊನೆಯ ಮಹಡಿಯನೇರಿಸಿ,
ಬಡಿತಕೆ ಬಗ್ಗದೆ, ಹೊಡೆತಕೆ ತಗ್ಗದೆ, ಜಿಗಿದ ಆ ಬಾನು.

ಒಮ್ಮೊಮ್ಮೆ ದುಡಿದುಡಿದು ದಣಿದು,
ಮೇಲೆ ಮುಖಮಾಡಿ ನೋಡುವ ಆ ಒಂದೇ ಬಾನು,
ಕೆಲವೊಮ್ಮೆ, ಬಾಳಿನ ಹವಾಗುಣವನೂಹಿಸಿ,
ಕೆಲವೊಮ್ಮೆ, ಇತರರು ನಮ್ಮ ಪ್ರೀತಿಗೆ
ತಕ್ಕ ಪ್ರೀತಿಯ ತೋರಿದ್ದಕ್ಕೆ ಧನ್ಯರಾಗಿ,
ಕೊಡುವ ತಾಯಿಗೆ ಕೆಲವೊಮ್ಮೆ ಕೈಮುಗಿದು,
ಅಥವಾ, ಕೇಳಿದ್ದನ್ನು ಕೊಡಿಸದಿದ್ದ
ತಂದೆಯ ಕ್ಷಮಿಸುವಂದು ಕಂಡ ಆ ಬಾನು.

ಇಗೋ, ಮನೆಯತ್ತ ಹೊರಟೆವು, ನಾವು.
ಮಳೆಯಲಿ ನೆನೆಯುತ, ಹಿಮಭಾರಕೆ ಬಾಗುತ,
ಧೂಳಲಿ ಮೀಯುತ, ಅಂತೂ ಮನೆಯತ್ತ,
ಎಂದೆಂದೂ, ಆ ಒಂದೇ ಬಾನಿನ ಅಡಿಯಲ್ಲಿ,
ನಮ್ಮದೇ ಬಾನಿನ ಅಡಿಯಲ್ಲಿ.
ಅಲ್ಲಿ, ಎಂದೆಂದೂ ಒಂದೇ ಚಂದ್ರಮ,
ಪ್ರತಿ ಹಂಚಿನ ಮೇಲೂ ಯಾರಿಗೂ ಕೇಳಿಸದಂತೆ
ಡಂಗುರ ಬಾರಿಸದ ತಮಟೆ.
ಪ್ರತಿ ಕಿಟಕಿಯಲ್ಲೂ ಕಾಣುವ,
ಒಂದೇ ನಾಡಿನ, ನಮ್ಮೆಲ್ಲರ ನಾಡಿನ,
ನಮ್ಮೆಲ್ಲರ, ತಾರೆಗಳ ವಲ್ಲಭನವನು
ಭರವಸೆ –ಹೊಸ ತಾರಾಮಂಡಲದ ಭರವಸೆ,
ನಾವು ಗುರುತಿಸಲೆಂದು ನಿರೀಕ್ಷೆ,
ನಾವು ಹೆಸರಿಡಲೆಂದು ಕಾಯುವ ಪರೀಕ್ಷೆ,
ನಾವೆಲ್ಲ ಒಟ್ಟಾಗಿ ಸಾಧಿಸಲೆಂಬ ಸಮೀಕ್ಷೆ!

 Posted by at 11:47 AM
Nov 252012
 

ಮೈ.ಶ್ರೀ. ನಟರಾಜ

೨೦೧೩ ರ ಮೇ ಮಾಸದಲ್ಲಿ ಹ್ಯೂಸ್ಟನ್ ನಗರದಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯ ರಂಗದ ವಸಂತೋತ್ಸವಕ್ಕೆ ಮುಖ್ಯ ಅತಿಥಿಗಳಾಗಿ ಬರಲು ಶ್ರೀ. ಕೆ.ವಿ. ತಿರುಮಲೇಶ್ ಅವರು ನಮ್ಮ ಆಹ್ವಾನವನ್ನು ಒಪ್ಪಿಕೊಂಡಾದಮೇಲೆ ಅವರ ಎರಡು ಕವಿತೆಗಳನ್ನು ನಾನು “ಕೆಂಡ ಸಂಪಿಗೆ” ಜಾಲತಾಣದಲ್ಲಿ ಓದಿದೆ. ಓದಿದೊಡನೆಯೇ ಅವು ನನಗೆ ಪ್ರಿಯವಾದವು, ಹಾಗಾಗಿ ಆ ಕವಿತೆಗಳನ್ನು ಆಂಗ್ಲ ಭಾಷೆಗೆ ಅನುವಾದಿಸಿ ಮೂಲ ಕವಿಯೊಂದಿಗೆ ಹಂಚಿಕೊಂಡೆ. ಅನುವಾದವನ್ನು ಅವರು ಮೆಚ್ಚಿಕೊಂಡರು, ಅಷ್ಟೇ ಅಲ್ಲ, ಮೂಲ ಕವಿತೆಗಳನ್ನೂ ಅನುವಾದಗಳನ್ನೂ ಕನ್ನಡ ಸಾಹಿತ್ಯ ರಂಗದ ಜಾಲತಾಣದಲ್ಲಿ ಪ್ರಕಟಿಸಲು ತಿರುಮಲೇಶರನ್ನು ನಾನು ಕೇಳಿಕೊಂಡಾಗ ಸಂತೋಷದಿಂದಲೇ ಒಪ್ಪಿಗೆ ಕೊಟ್ಟಿದ್ದಾರೆ. ನಮ್ಮ ಓದುಗರೊಡನೆ ಹಂಚಿಕೊಳ್ಳುತ್ತಿದ್ದೇನೆ, ಇದೋ ಸ್ವೀಕರಿಸಿ.

 Posted by at 12:32 AM
Nov 252012
 

ಕೆ.ವಿ.ತಿರುಮಲೇಶ್

ಮನೆ ಬಿಟ್ಟವರಿದ್ದಾರೆ ಮಠ ಬಿಟ್ಟವರಿದ್ದಾರೆ
ತತ್ವಜ್ಞಾನದ ಮೋಹದಲ್ಲಿ
ದೇಶ ತೊರೆದವರು ವಿಷ ಕುಡಿದವರು
ಅಮೃತದಂತೆ ಮದ್ಯವನ್ನೂ
ವ್ಯಸನವಾಗಿಸಿಕೊಂಡವರು ಹಾಗೂ
ತಬ್ಬಿಕೊಂಡವರು
ಅಪ್ಸರಸಿಯರಂತೆ ಸೂಳೆಯರನ್ನೂ

ಏನೀ ಆಕರ್ಷಣೆ ಎಂದು ನಾನೂ
ನಡೆದು ನೋಡುತ್ತೇನೆ
ಒಂದಷ್ಟು ದೂರ
ಹರಡಿದ ಮಬ್ಬಲ್ಲದೆ ಇನ್ನೇನೂ
ಕಾಣಿಸುವುದಿಲ್ಲ
ನನಗೋ ಸಮೀಪದೃಷ್ಟಿ
ಯಾರೂ ಬಿಟ್ಟ ದಾರಿಗುರುತುಗಳಿಲ್ಲ
ಇದ್ದರೂ ಅವನ್ನು ಬಳಸುವಂತಿಲ್ಲ
ಇಷ್ಟು ಮಾತ್ರ ತಿಳಿದಿದ್ದೇನೆ:
ತತ್ವಜ್ಞಾನ ಹೀಗೆಯೇ ಆವಾಗಲೂ ಯಾವಾಗಲೂ
ದೇಶಭ್ರಷ್ಟ!

ಕಾವ್ಯವೂ ಅರ್ಧ ಹಾಗೆಯೇ
ಇನ್ನರ್ಧ ಹೀಗೆ
ಕವಿ ನಡೆಯುತ್ತಾನೆ ಬರಿಜೇಬಿನಲ್ಲೂ ಮಹಾ
ರಾಜನ ಹಾಗೆ
ಎಲ್ಲರನ್ನೂ ಕೂಡಿಕೊಂಡೇ
ಕಾಡುಮೇಡುಗಳಲ್ಲಿ ಮತ್ತು
ವಾರದ ಸಂತೆಗಳಲ್ಲಿ ಒಬ್ಬನೇ ಆದರೂ ಬರೀ
ಒಬ್ಬನೂ ಅಲ್ಲ

ದೇವಯಾನಿ ಶರ್ಮಿಷ್ಠ ಮತ್ತಿನ್ನು ಯಾರು ಆ
ಅಪ್ಸರಸಿ ಸರಸಿ ಯವನೀ ರಮಣಿ ಕೂಡ
ಅವನಿಗಿಷ್ಟ

ಇತ್ತ ಈ ಫ಼ಿಲಾಸಫ಼ಿಗಾದರೆ ಮೈಮನಸ್ಸಿಗೆ ಗಾಯ
ಆದರೂ ಅದೆಂಥ ಮೋಹ ಎಂದಿಗೂ
ಪರವಶತೆ ಬಿಡದ ಮನದ ಮಾಯ.

 Posted by at 12:30 AM