Apr 032018
 

ಕನ್ನಡ ಸಾಹಿತ್ಯರಂಗದ ಸಂಸ್ಥಾಪಕರಲ್ಲೊಬ್ಬರಾದ ಮತ್ತು ಕಸಾರಂ ನ ಬೆಳವಣಿಗೆಯಲ್ಲಿ ಅತ್ಯಮೂಲ್ಯ ಪಾತ್ರವಹಿಸಿದ ಡಾ. ಎಚ್. ವೈ. ರಾಜಗೋಪಾಲ್ ಅವರು ಈ ದಿನ ಬೆಳಿಗ್ಗೆ ಇಹಲೋಕವನ್ನು ತ್ಯಜಿಸಿ ದಿವಂಗತರಾದರೆಂದು ತಿಳಿಸಲು ತೀವ್ರ ವಿಷಾದವಾಗುತ್ತಿದೆ. ಕನ್ನಡ ಸಾಹಿತ್ಯ ರಂಗದ ಪ್ರೇರಕ ಶಕ್ತಿಯಾಗಿದ್ದ ರಾಜಗೋಪಾಲ್ ಅವರನ್ನು ಕಳೆದುಕೊಂಡ ನೋವು ನಮ್ಮದು. ಕನ್ನಡ ಸಾಹಿತ್ಯ ರಂಗವು ಈ ಮೂಲಕ ಎಚ್.ವೈ .ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿಗಳನ್ನು ಅರ್ಪಿಸುತ್ತಿದೆ.

ಏಪ್ರಿಲ್ 2 ರ ಬೆಳಿಗ್ಗೆ University of Pennsylvania Main Hospital ನಲ್ಲಿ ನಿಧನರಾದ ರಾಜಗೋಪಾಲ್ ಅವರು ಪತ್ನಿ ವಿಮಲಾ ರಾಜಗೋಪಾಲ್, ಮಕ್ಕಳಾದ ಮಾಧವಿ ರಿಜ್ಜೊ, ರಾಮ್ ರಾಜಗೋಪಾಲ್, ಚೇತನಾ ಜೋಯ್ಸ್ ಮತ್ತು ಅಪಾರ ಕನ್ನಡ ಬಳಗವನ್ನು ಅಗಲಿದ್ದಾರೆ. ರಾಜಗೋಪಾಲ್ ಅವರ ಕುಟುಂಬಕ್ಕೆ ಸಾಂತ್ವನ, ಅಗಲಿದ ಚೇತನಕ್ಕೆ ಸದ್ಗತಿ ದೊರೆಯಲೆಂದು ಪ್ರಾರ್ಥಿಸುತ್ತೇವೆ! 🙏

 

 Posted by at 5:55 PM
Apr 262017
 

ಏಪ್ರಿಲ್-೨೯ ಮತ್ತು ೩೦ ರಂದು ನಡೆಯಲಿರುವ ಸಮ್ಮೇಳನದಲ್ಲಿ, ಮುಖ್ಯ ಅತಿಥಿಯಾಗಿ ಆಗಮಿಸುತ್ತಿರುವ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರಿಂದ ಬಿಡುಗಡೆಯಾಗಲಿರುವ ಕೃತಿ – ‘ಅವರವರ ಭಕುತಿಗೆ’

 Posted by at 8:35 AM
Apr 262017
 

ಕನ್ನಡ ಸಾಹಿತ್ಯ ರಂಗ – ಮಂದಾರ, ನ್ಯೂ ಇಂಗ್ಲೆಂಡ್ ಕನ್ನಡಕೂಟ, ಬಾಸ್ಟನ್ – ಸಹಯೋಗದಲ್ಲಿ ನಡೆಯಲಿರುವ ಅದ್ಧೂರಿಯ ಸಮ್ಮೇಳನದ ದಿನ ಹತ್ತಿರವಾಗಿದೆ.   (ಏಪ್ರಿಲ್ ೨೯, ೩೦, ಶನಿವಾರ ಮತ್ತು ಭಾನುವಾರ)

ಬನ್ನಿ, ಸಮ್ಮೇಳನದಲ್ಲಿ ಭಾಗವಹಿಸಿ, ಸಮ್ಮೇಳನ ಯಶಸ್ವಿಯಾಗಿ ನಡೆಯಲು ಸಹಕರಿಸಿ.

 

 

 Posted by at 7:45 AM
Apr 182017
 

ಬಾಸ್ಟನ್ನಿನಲ್ಲಿ ನಡೆಯಲಿರುವ ಕನ್ನಡ ಸಾಹಿತ್ಯರಂಗದ ಎಂಟನೆಯ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಶ್ರೀ ಲಕ್ಷೀಶ ತೋಳ್ಪಾಡಿಯವರು ಆಗಮಿಸುತ್ತಿದ್ದಾರೆ. ಅವರ ಕಿರುಪರಿಚಯ ಇಲ್ಲಿದೆ:-


ಶ್ರೀಯುತ ಲಕ್ಷ್ಮೀಶ ತೋಳ್ಪಾಡಿಯವರು ಕನ್ನಡದ ಪ್ರತಿಭಾವಂತ ಲೇಖಕರು ಮತ್ತು ಚಿಂತಕರಾಗಿ ಹೆಸರಾದವರು. ಕನ್ನಡದ ಸಾಹಿತ್ಯ ಕ್ಷೇತ್ರಕ್ಕೆ ತಮ್ಮ ಉತ್ತಮ ಕೃತಿಗಳನ್ನು ಕೊಡುಗೆಯಾಗಿ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನವರಾದ ಲಕ್ಷ್ಮೀಶ ಅವರು ತಮ್ಮ ಪ್ರಾಥಮಿಕ ವಿದ್ಯಾಭ್ಯಾಸವನ್ನು ಉಡುಪಿ ಮತ್ತು ಪುತ್ತೂರಿನಲ್ಲಿ ಆರಂಭಿಸಿ, ಉನ್ನತ ವ್ಯಾಸಂಗವನ್ನು ಮಂಗಳೂರು ಕಾಲೇಜಿನಲ್ಲಿ ಪಡೆದುಕೊಂಡಿದ್ದಾರೆ.  ತಾಯಿ ರತ್ನಾವತಿ ಮತ್ತು ತಂದೆಯವರಾದ ವಿಷ್ಣುಮೂರ್ತಿ ತೋಳ್ಪಾಡಿಯವರ ಅಕ್ಕರೆ, ಆಶೀರ್ವಾದದೊಂದಿಗೆ ಬೆಳೆದು ವೃತ್ತಿ ಸಾಧನೆಯಲ್ಲಿ ತೊಡಗಿ, ಬಾಳ ಸಂಗಾತಿ ವಿಜಯಲಕ್ಷ್ಮಿಯವರ ಜೊತೆಯಲ್ಲಿ ಜೀವನದ ಗುರಿಯತ್ತ ಪ್ರಯಾಣ ಮುಂದುವರಿಸಿದ್ದಾರೆ.
ಶ್ರೀ ಲಕ್ಷ್ಮೀಶ ತೋಳ್ಪಾಡಿಯವರ “ಮಹಾಯುದ್ಧಕ್ಕೆ ಮುನ್ನ”, “ಬೆಟ್ಟ ಮೊಹಮದನ ಬಳಿಗೆ ಬಾರದಿದ್ದರೆ”, “ಸಂಪಿಗೆ ಭಾಗವತ”, “ಭವತಲ್ಲಣ” ಮತ್ತು “ಆನಂದಲಹರಿ” ಯಂತಹ ಉತ್ತಮ ಕೃತಿಗಳು ಸಫಲವಾಗಿ ಪ್ರಕಟಣೆಗೊಂಡು, ಸಾಹಿತ್ಯ ಕ್ಷೇತ್ರದಲ್ಲಿ ಅಪಾರ ಖ್ಯಾತಿಯನ್ನು ಒದಗಿಸಿ ಕೊಟ್ಟಿವೆ. ತೋಳ್ಪಾಡಿಯವರು ತಮ್ಮ ಪಾಂಡಿತ್ಯಪೂರ್ಣ ಬರಹಗಳ ಮೂಲಕ ಸಾಹಿತ್ಯ ಸೇವೆ ಸಲ್ಲಿಸುತ್ತಾ  ಹಲವು ಗೌರವ, ಪ್ರಶಸ್ತಿ ಪುರಸ್ಕಾರಗಳಿಗೆ ಪಾತ್ರರಾಗಿದ್ದಾರೆ. ತೋಳ್ಪಾಡಿಯವರಿಗೆ ಸಂದಿರುವ ಗೌರವಾನ್ವಿತ ಪ್ರಶಸ್ತಿ ಸನ್ಮಾನಗಳ ಸಾಲಿನಲ್ಲಿ, ೨೦೧೨ರ “ಪೊಳಲಿ ಶಾಸ್ತ್ರಿ ಪ್ರಶಸ್ತಿ”, ೨೦೧೩ರಲ್ಲಿ ಬಂದ “ಕಡವ ಶಂಭುಕರ್ಮ ಪ್ರಶಸ್ತಿ”, “ಕಾಂತಾವರ ಸಾಹಿತ್ಯ” ಪುರಸ್ಕಾರ, “ರಾಮವಿಠಲ ಪ್ರಶಸ್ತಿ” ಮತ್ತು ೨೦೧೬ರಲ್ಲಿ ಕೈಗೂಡಿದ”ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ” ಗಳೂ ಸೇರಿವೆ.

ಮುಂದೆ ಇದೇ ರೀತಿಯಲ್ಲಿ, ಶ್ರೀ ಲಕ್ಷ್ಮೀಶ ತೋಳ್ಪಾಡಿಯವರ ಲೇಖನಿಯಿಂದ ಮತ್ತಷ್ಟು ವಿದ್ವತ್ಪೂರ್ಣ ಸಾಹಿತ್ಯ ಕೃತಿಗಳು ಹೊರಬಂದು, ಅದನ್ನು ಓದುವ ಭಾಗ್ಯ ತಮಗೆ ಸಿಗುತ್ತಿರಲಿ ಎನ್ನುವುದು ಅವರ ಸಾಹಿತ್ಯಾಭಿಮಾನಿಗಳೆಲ್ಲರ ತುಂಬು ಹೃದಯದ ಹಾರೈಕೆಯಾಗಿದೆ.

 Posted by at 11:04 PM