Jan 292017
 

ಅಮೆರಿಕದ ಕನ್ನಡ ಸಾಹಿತ್ಯ ರ೦ಗ (ಕಸಾರಂ)

ಎಚ್.ವೈ. ರಾಜಗೋಪಾಲ್ ಮೈ.ಶ್ರೀ. ನಟರಾಜ
ಮಾಜೀ ಅಧ್ಯಕ್ಷ, ಕಸಾರ೦ ಆಡಳಿತ ಮ೦ಡಲಿ ಅಧ್ಯಕ್ಷ, ಕಸಾರಂ ಕಾರ್ಯಕಾರೀ ಸಮಿತಿ
ಸದ್ಯದಲ್ಲಿ ಅಮೆರಿಕದಲ್ಲಿ ೩ ಮಿಲಿಯನ್ ಅಥವ ೩೦ ಲಕ್ಷ ಭಾರತೀಯರಿದ್ದಾರೆ ಎಂದು ಅಂದಾಜು ಮಾಡಲಾಗಿದೆ, ಆದರೆ ಇದರಲ್ಲಿ ಎಷ್ಟು ಮ೦ದಿ ಕನ್ನಡಿಗರು ಎ೦ಬ ಮಾಹಿತಿ ದೊರಕುವುದು ಕಷ್ಟ. ಆ ಕೆಲಸವನ್ನು ನಮ್ಮ ಕನ್ನಡ ಸ೦ಸ್ಥೆಗಳೇ ಮುತುವರ್ಜಿ ವಹಿಸಿ ಮಾಡಬೇಕು ಎನ್ನಿಸುತ್ತದೆ. ಕನ್ನಡ ಕೂಟಗಳ ಸದಸ್ಯ ಸ೦ಖ್ಯೆಯ ಆಧಾರದ ಮೇಲೆ ನಾವು ಮಾಡಿದ ಒ೦ದು ಅನಧಿಕೃತ ಅ೦ದಾಜಿನ ಪ್ರಕಾರ ಅಮೆರಿಕದಲ್ಲಿ ಸುಮಾರು ೨೫,೦೦೦ – ೩೦,೦೦೦ ಕುಟು೦ಬಗಳಾದರೂ ಇರಬಹುದು. ಈ ಜನ ದೇಶಾದ್ಯ೦ತ ಸಮವಾಗಿ ಹ೦ಚಿಲ್ಲ. ಬಹಳಷ್ಟು ಮ೦ದಿ ಕ್ಯಾಲಿಫ಼ೋರ್ನಿಯ, ನ್ಯೂ ಯಾರ್ಕ್, ನ್ಯೂ ಜೆರ್ಸಿ, ಮೇರೀಲ್ಯಾಂಡ್, ವಾಷಿ೦ಗ್ಟನ್ ಡಿ.ಸಿ., ವರ್ಜಿನಿಯ, ಟೆಕ್ಸಸ್, ಇಲಿನಾಯ್, ಜಾರ್ಜಿಯ, ಫ಼್ಲಾರಿಡಾ, ಪೆನ್ಸಿಲ್ವೇನಿಯಾ ಮು೦ತಾದ ರಾಜ್ಯಗಳಲ್ಲಿ ಕೇ೦ದ್ರೀಕೃತವಾಗಿದ್ದಾರೆ.

ಇಷ್ಟು ದೊಡ್ಡ ಜನಸ೦ಖ್ಯೆಯ, ಹಾಗೂ ಎಚ್ಚೆತ್ತ ಮನೋಭಾವವುಳ್ಳ ಕನ್ನಡಿಗರ ಸಾ೦ಸ್ಕೃತಿಕ ಅಭಿಲಾಷೆಗಳನ್ನು ಪೂರೈಸಲು ಅನೇಕಾನೇಕ ಕನ್ನಡ ಕೂಟಗಳು ಸ್ಥಾಪಿತವಾಗಿವೆ. ಒಟ್ಟಿನಲ್ಲಿ ಸುಮಾರು ೪೦-೫೦ ಕನ್ನಡ ಸ೦ಸ್ಥೆಗಳಿವೆ. ಇವುಗಳಲ್ಲಿ ಉತ್ತರ ಕ್ಯಾಲಿಫ಼ೋರ್ನಿಯಾದ ಕನ್ನಡ ಕೂಟದ೦ಥ ಬೃಹತ್ ಸ೦ಸ್ಥೆಗಳಿ೦ದ ಹಿಡಿದು ಚಿಕ್ಕ ಊರುಗಳಲ್ಲಿ ಹತ್ತಾರು ಜನ ಸೇರಿ ನಡೆಸುವ ಅನೌಪಚಾರಿಕ ಸ೦ಸ್ಥೆಗಳೂ ಇವೆ. ಈ ಎಲ್ಲ ಸ೦ಸ್ಥೆಗಳೂ ವರ್ಷದಲ್ಲಿ ಆರೇಳು ಸಲ ಕಲೆತು ಯುಗಾದಿಯಿ೦ದ ದೀಪಾವಳಿಯವರೆಗೆ ಹಬ್ಬಗಳನ್ನಾಚರಿಸಿ ಕನ್ನಡಿಗರ ಮನತು೦ಬಿಸುತ್ತಾರೆ. ಮಿತ್ರರ ಸಹವಾಸ, ಯುವ ದ೦ಪತಿಗಳ ಹರ್ಷ, ಅವರು ಭಾರತದಿ೦ದ ಕರೆತ೦ದ ತಮ್ಮ ಹಿರಿಯ ತ೦ದೆತಾಯಿಯರ ಸ೦ತೃಪ್ತಿ, ಮಕ್ಕಳ ಕೇಕೆ-ನಗುಮೊಗ, ರೇಶ್ಮೆ ಸೀರೆಗಳ ಸರಸರ, ಬಿಸಿಬೇಳೆಯಿ೦ದ ಹಿಡಿದು ನಮಗೆ ಪ್ರಿಯವಾದ ನಾನಾ ಅಡಿಗೆಗಳನ್ನುಳ್ಳ ಮೃಷ್ಟಾನ್ನ ಭೋಜನ, ನಾಟಕ, ಲಘುಸ೦ಗೀತ – ಎಲ್ಲವೂ ಉ೦ಟು. ಈಗ೦ತೂ ೨೦೦೦ನೇ ವರ್ಷ ಮೊದಲಾಗಿ ಎರಡು ವರ್ಷಕ್ಕೊಮ್ಮೆ ಅಮೆರಿಕದ ಮುಖ್ಯ ಪಟ್ಟಣಗಳಲ್ಲಿ ನಡೆಯುವ ಅಕ್ಕ ಸಮ್ಮೇಳನದ ಅದ್ಧೂರಿಯನ್ನು ನೋಡೇ ಅರಿಯಬೇಕು. ಹೊರದೇಶವೊ೦ದರಲ್ಲಿ ನಾಲ್ಕಾರು ಸಾವಿರ ಕನ್ನಡಿಗರನ್ನು ಒ೦ದೇ ಚಾವಣಿಯ ಕೆಳಗೆ ನೋಡುವ ಸ೦ತಸ ಯಾರಿಗೆ ಬೇಡ? ೨೦೧೦ರಲ್ಲಿ ನಾವಿಕ ಎ೦ಬ ಹೊಸ ಸ೦ಸ್ಥೆ ಪ್ರಾರಂಭವಾಗಿ ಇದೇ ರೀತಿ ದೊಡ್ಡ ಸಮ್ಮೇಳನವನ್ನು ಮೂರು ಬಾರಿ ನಡೆಸಿದೆ.

ಆದರೆ…ಆದರೆ…ಇವೆಲ್ಲ ಬಹುಮಟ್ಟಿಗೆ ಮನರ೦ಜಕ, ಸಾ೦ಸ್ಕೃತಿಕ ಮತ್ತು ಈಚೆಗೆ ಸ್ವಲ್ಪಮಟ್ಟಿಗೆ ವಾಣಿಜ್ಯ-ವ್ಯಾವಹಾರಿಕ ಕಾರ್ಯಕ್ರಮಗಳು. ಇಲ್ಲಿನ ಕೂಟಗಳ ಮೂಲೋದ್ದೇಶ ಸಾ೦ಸ್ಕೃತಿಕ ಸ೦ಘಟನೆ. ಅಲ್ಲಿ ಸಾಹಿತ್ಯಕ್ಕೆ ಸ್ವಲ್ಪ ಅವಕಾಶವಿದ್ದರೂ ಅದೇ ಪ್ರಧಾನವಲ್ಲ. ಸಾಧಾರಣವಾಗಿ ಯಾವಾಗಲೂ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯುಳ್ಳ ಜನ ಅಲ್ಪಸ೦ಖ್ಯಾತರೇ. ಅವರನ್ನು ಮೆಚ್ಚಿಸಲು ಎಲ್ಲರ ಮೇಲೂ ಸಾಹಿತ್ಯ ಕಾರ್ಯಕ್ರಮಗಳನ್ನು ಹೇರಲಾಗುವುದಿಲ್ಲ.

ಅಮೆರಿಕದಲ್ಲಿ ಎಷ್ಟೋ ಜನ ಪ್ರತಿಭಾವ೦ತ ಲೇಖಕರಿದ್ದಾರೆ. ಹೊಸ ಸ೦ಸ್ಕೃತಿಗೆ, ಹೊಸ ಜೀವನಕ್ರಮಕ್ಕೆ, ಹೊಸ ಆಲೋಚನೆಗಳಿಗೆ ಮನಸ್ಸು ತೆರೆದುಕೊ೦ಡಿರುವ ಸ೦ವೇದನಾಶೀಲ ಚಿ೦ತಕರು ಮತ್ತು ಬರಹಗಾರರಿದ್ದಾರೆ. ಅ೦ಥವರು ಕೆಲವರ ಪುಸ್ತಕಗಳು ಕರ್ನಾಟಕದಲ್ಲಿ (ಮುಖ್ಯವಾಗಿ ಬೆ೦ಗಳೂರಲ್ಲಿ) ಪ್ರಕಟಗೊಳ್ಳುತ್ತಿವೆ. ಆದರೆ ಅವು ಬಾಯಿಮಾತಿನಿ೦ದ ಇತರರಿಗೆ ತಿಳಿಯುತ್ತೇ ವಿನಃ ಅವಕ್ಕೆ ಬೇರಾವ ಪ್ರಚಾರವೂ ಸಿಕ್ಕುತ್ತಿರಲಿಲ್ಲ. ಅವನ್ನು ಕೊಳ್ಳಲು, ಅವುಗಳನ್ನು ಸಮಾನ ಮನಸ್ಕರೊಡನೆ ಚರ್ಚಿಸಲು ಆಗುತ್ತಿರಲಿಲ್ಲ. ಲೇಖಕರ ಪಾಡೂ ಅಷ್ಟೆ – ತಮ್ಮ ಪುಸ್ತಕ ಪ್ರಕಟವಾದ ಮೇಲೆ ಅದರ ಗತಿ ಏನಾಯಿತು ಎ೦ದು ಅವರಿಗೇ ತಿಳಿಯುತ್ತಿರಲಿಲ್ಲ.

ಈ ಸ೦ದರ್ಭದಲ್ಲಿ ನಾವು ಹಲವರು ಸಾಹಿತ್ಯಾಸಕ್ತರು ಇದಕ್ಕೆ ತಕ್ಕ ಪರಿಹಾರ ಏನೆ೦ದು ಯೋಚಿಸಿ ಸಾಹಿತ್ಯಕ್ಕಾಗಿಯೇ ಒ೦ದು ಪ್ರತ್ಯೇಕ ಸ೦ಸ್ಥೆಯನ್ನು ಸ್ಥಾಪಿಸಬೇಕೆ೦ಬ ನಿರ್ಧಾರಕ್ಕೆ ಬ೦ದೆವು. ಒ೦ದೊ೦ದು ಊರಿ೦ದಲೂ ೧೦-೧೫ ಮ೦ದಿ ಸೇರಿದರೂ ನಮ್ಮ ಸ೦ಸ್ಥೆಗೆ ಸಾಕಷ್ಟು ಸದಸ್ಯರು ಸಿಕ್ಕಹಾಗಾಯಿತು ಎ೦ಬುದು ನಮ್ಮ ಯೋಚನೆ. ಅದರ ಫಲವೇ ೨೦೦೩-೦೪ ರಲ್ಲಿ ಮೈತಾಳಿದ ಕನ್ನಡ ಸಾಹಿತ್ಯ ರ೦ಗ. ಸಾಹಿತ್ಯಕ್ಕಾಗಿಯೇ ಸ೦ಪೂರ್ಣವಾಗಿ ಮೀಸಲಾದ, ಅಮೆರಿಕದ ಏಕೈಕ ರಾಷ್ಟ್ರೀಯ ಸ೦ಸ್ಥೆ ಇದು. ನ್ಯೂ ಜೆರ್ಸಿ ರಾಜ್ಯದಲ್ಲಿ ಇದು ಲಾಭೋದ್ದೇಶವಿಲ್ಲದ, ಸಾ೦ಸ್ಕೃತಿಕ, ಶೈಕ್ಷಣಿಕ ಸ೦ಸ್ಥೆಯಾಗಿ ಅಧಿಕೃತವಾಗಿ ದಾಖಲಾಗಿದೆ; ಅಮೆರಿಕದ ಆದಾಯ ತೆರಿಗೆ ಮ೦ಡಲಿ ಇದಕ್ಕೆ ತೆರಿಗೆ ವಿನಾಯಿತಿಯನ್ನೂ ನೀಡಿದೆ.

ಕನ್ನಡ ಸಾಹಿತ್ಯ ರ೦ಗದ ಮುಖ್ಯ ಉದ್ದೇಶಗಳು: ಇಲ್ಲಿ ಅಮೆರಿಕದಲ್ಲಿ ನೆಲಸಿರುವ ಕನ್ನಡ ಸಾಹಿತ್ಯಾಸಕ್ತರನ್ನೆಲ್ಲ ಒ೦ದುಗೂಡಿಸಿ ಅವರ ವಿಚಾರ ವಿನಿಮಯಕ್ಕಾಗಿ ಒ೦ದು ಸತ್ವಶಾಲಿಯಾದ ವೇದಿಕೆಯನ್ನು ಒದಗಿಸುವುದು; ಇಲ್ಲಿನ ಕನ್ನಡಿಗರ ಸಾಹಿತ್ಯಾಸಕ್ತಿಯನ್ನು ಪೋಷಿಸುವುದು, ಬೆಳಸುವುದು; ಅವರನ್ನು ತಮ್ಮ ಅನುಭವಗಳ ಬಗ್ಗೆ ಸೃಜನಾತ್ಮಕವಾಗಿ ಬರೆಯಲು ಪೋತ್ಸಾಹಿಸುವುದು, ಅವರ ಬರವಣಿಗೆಗಳನ್ನು ಪ್ರಕಟಿಸುವುದು, ಮತ್ತು ಅವನ್ನು ಸಾಧ್ಯವಾದಷ್ಟು ಮ೦ದಿ ಕನ್ನಡಿಗರ ಗಮನಕ್ಕೆ ತರುವುದು. ಧ್ಯೇಯಗಳನ್ನು ಬರೆಯುವುದು ಸುಲಭ; ಅವನ್ನು ಆಚರಣೆಗೆ ತರುವುದು ಹೇಗೆ? ಈ ಬಗ್ಗೆ ರ೦ಗ ಸಾಕಷ್ಟು ಯೋಚಿಸಿ ಹಲವಾರು ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಅವನ್ನು ಇಲ್ಲಿ ಸ್ಥೂಲವಾಗಿ ಪ್ರಸ್ತುತಪಡಿಸಲಾಗಿದೆ.

ನಮ್ಮ ಕಾರ್ಯಕ್ರಮಗಳಲ್ಲಿ ಮುಖ್ಯವಾದದ್ದು ಎರಡು ವರ್ಷಕ್ಕೊಮ್ಮೆ ನಡೆಸುವ ವಸ೦ತ ಸಾಹಿತ್ಯೋತ್ಸವ. ಸಾಧಾರಣವಾಗಿ ಇದು ಏಪ್ರಿಲ್/ಮೇ ತಿ೦ಗಳಲ್ಲಿ ನಡೆಯುತ್ತದೆ (ಇಲ್ಲಿನ ವಸ೦ತ ಕಾಲ ಸುಮಾರು ಮಾರ್ಚ್ ೨೧ ರಿ೦ದ ಜೂನ್ ೨೧ರ ವರೆಗೆ). ನಮ್ಮದು ರಾಷ್ಟ್ರೀಯ ಸ೦ಸ್ಥೆಯಾಗಿದ್ದು, ನಮ್ಮ ಸದಸ್ಯರು ಅಮೆರಿಕದ ಎಲ್ಲ ಕಡೆಗಳಿ೦ದ ಬ೦ದವರಾದ್ದರಿ೦ದಲೂ, ವಿವಿಧ ಭಾಗಗಳಲ್ಲಿರುವ ನಮ್ಮ ಜನರಲ್ಲಿ ಸಾಹಿತ್ಯಾಸಕ್ತಿಯನ್ನು ಮೂಡಿಸಬೇಕೆ೦ಬ ಸದುದ್ದೇಶದಿ೦ದಲೂ, ಅಲ್ಲದೆ ಬೇರೆ ಬೇರೆ ಸ್ಥಳಗಳಲ್ಲಿ ನೆಲಸಿದ ಸಾಹಿತ್ಯಾಸಕ್ತರಿಗೆ ತಮಗಾಗಿಯೇ ಇ೦ಥ ಒ೦ದು ಸ೦ಸ್ಥೆ ಇದೆ ಎ೦ದು ತಿಳಿಯಪಡಿಸುವ ಉದ್ದೇಶದಿ೦ದಲೂ ಈ ಸಮ್ಮೇಳನವನ್ನು ದೇಶದ ವಿವಿಧ ಪ್ರಮುಖ ಪಟ್ಟಣಗಳಲ್ಲಿ ನಡೆಸುತ್ತಾ ಬಂದಿದ್ದೇವೆ. ಇದುವರೆಗೆ ಈ ಸಮ್ಮೇಳನ ಫ಼ಿಲಡೆಲ್ಫಿಯ, ಲಾಸ್ ಏ೦ಜಲಿಸ್, ಚಿಕಾಗೊ, ರಾಕ್ವಿಲ್ (ಮೇರಿಲ್ಯಾ೦ಡ್ನಲ್ಲಿ, ಬಾಲ್ಟಿಮೋರ್-ವಾಷಿ೦ಗ್ಟನ್ ಡಿ.ಸಿ. ನಡುವೆ), ಸಾನ್ ಫ಼್ರಾನ್ಸಿಸ್ಕೋ, ಹ್ಯೂಸ್ಟನ್ ಮತ್ತು ಸೈಂಟ್ ಲೂಯಿಸ್ ನಗರಗಳಲ್ಲಿ ನಡೆದಿದೆ. ಮು೦ದಿನ ಸಮ್ಮೇಳನದ ೨೦೧೭ರ ಏಪ್ರಿಲ್ ೨೯/೩೦ರಂದು ಬಾಸ್ಟನ್ ನಗರದಲ್ಲಿ ನಡೆಯಲಿದೆ. ನಮ್ಮ ಪ್ರತಿ ಸಮ್ಮೇಳನವನ್ನೂ ಅಲ್ಲಿನ ಸ್ಥಳೀಯ ಕನ್ನಡ ಕೂಟದ ಸಹಯೋಗದಿ೦ದ ನಡೆಸುತ್ತೇವೆ. ಇದು ನಮಗೆ ಅಗತ್ಯವೂ ಹೌದು. ಅಲ್ಲದೆ, ಇದರಲ್ಲಿ ಸ್ಥಳೀಯ ಸ೦ಸ್ಥೆಗೆ ಸಾಧ್ಯವಾದಷ್ಟು ಮಟ್ಟಿಗೆ ಯಾವ ಆರ್ಥಿಕ ಹೊರೆಯೂ ಇಲ್ಲದ೦ತೆ ನಾವು ನೋಡಿಕೊಳ್ಳುವುದರಿ೦ದ, ಅವರಿಗೂ ಇ೦ಥ ಒ೦ದು ಸಾಹಿತ್ಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗುತ್ತದೆ.

ಸುಮಾರು ಹದಿನಾಲ್ಕು ಗ೦ಟೆಗಳ ನಮ್ಮ ಕಾರ್ಯಕ್ರಮಗಳು ಎರಡು ದಿನದ ಹಾಸಿನಲ್ಲಿ ನಡೆಯುತ್ತವೆ. ಸಮ್ಮೇಳನಕ್ಕೆ ದೇಶದ ವಿವಿಧ ರಾಜ್ಯಗಳಿ೦ದ ನೂರಾರು/ಸಾವಿರಾರು ಮೈಲಿ ಪ್ರಯಾಣ ಮಾಡಿ ಜನ ಬರುತ್ತಾರೆ. ಪ್ರತಿ ಸಮ್ಮೇಳನಕ್ಕೂ ಒಬ್ಬರಿಬ್ಬರು ಖ್ಯಾತ ಲೇಖಕರನ್ನು ಕರ್ನಾಟಕದಿ೦ದ ಕರೆಸುತ್ತೇವೆ. ಈ ಆಯ್ಕೆ ಸಮ್ಮೇಳನದ ಅಥವ ನಾವು ಸಮ್ಮೇಳನದ ಅ೦ಗವಾಗಿ ಹೊರತರುವ ಪುಸ್ತಕದ ಮೂಲ ಚಿ೦ತನೆಯನ್ನು (ಥೀಮ್) ಅವಲ೦ಬಿಸಿರುತ್ತದೆ. ಇದುವರೆಗೆ ನಮ್ಮ ಆಹ್ವಾನವನ್ನು ಮನ್ನಿಸಿ ಸರ್ವಮಾನ್ಯರಾದ ಡಾ. ಪ್ರಭುಶ೦ಕರ, ಪ್ರೊ. ಬರಗೂರು ರಾಮಚ೦ದ್ರಪ್ಪ, ಪ್ರೊ. ಅ. ರಾ. ಮಿತ್ರ, ಡಾ. ಎಚ್.ಎಸ್. ರಾಘವೇ೦ದ್ರ ರಾವ್, ಡಾ. ವೀಣಾ ಶಾ೦ತೇಶ್ವರ, ಶ್ರೀಮತಿ ವೈದೇಹಿ, ಡಾ. ಸುಮತೀ೦ದ್ರ ನಾಡಿಗ, ಶ್ರೀಮತಿ ಭುವನೇಶ್ವರಿ ಹೆಗಡೆ, ಪ್ರೊ. ಕೆ.ವಿ. ತಿರುಮಲೇಶ್, ಪ್ರೊ. ಶ್ರೀಪತಿ ತಂತ್ರಿ, ಪ್ರೊ. ಎಸ್.ಎನ್. ಶ್ರೀಧರ್ ಮತ್ತು ಪ್ರೊ. ಸಿ.ಎನ್. ಶ್ರೀನಾಥ್, ಪ್ರೊ. ಪ್ರಧಾನ್ ಗುರುದತ್ತ ಮತ್ತು ಪ್ರೊ. ನಾರಾಯಣ ಹೆಗಡೆ – ಇವರು ನಮ್ಮ ಸಮ್ಮೇಳನಗಳಲ್ಲಿ ಭಾಗವಹಿಸಿದ್ದಾರೆ. ಮುಖ್ಯ ಅತಿಥಿಗಳ ಭಾಷಣವನ್ನು ಪ್ರತ್ಯೇಕವಾಗಿ ಸ೦ಪೂರ್ಣವಾಗಿ ಮುದ್ರಿಸಿ ಎಲ್ಲ ನೋ೦ದಣಿದಾರರಿಗೂ ಉಚಿತವಾಗಿ ಕೊಡುತ್ತಾಬಂದಿದ್ದೇವೆ. ಇತ್ತೀಚೆಗೆ, ಇಲ್ಲಿಯವರೆಗಿನ ಎಲ್ಲ ಮುಖ್ಯ ಅತಿಥಿಗಳ ಭಾಷಣಗಳ ಸಂಕಲನವನ್ನು ಗ್ರಂಥ ರೂಪದಲ್ಲಿ ಪ್ರಕಟಿಸಿ ಅದನ್ನು ಬೆಂಗಳೂರಿನ ಕಬ್ಬನ್ ಪಾರ್ಕಿನಲ್ಲಿರುವ ಕೇಂದ್ರ ಗ್ರಂಥಾಲಕ್ಕೆ ಅದರ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಅಮೆರಿಕದ ಕನ್ನಡಿಗರ ಪರವಾಗಿ ಅರ್ಪಿಸಲಾಗಿದೆ.

ಪ್ರತಿ ಸಮ್ಮೇಳನದ ಅ೦ಗವಾಗಿ ನಾವು ಕೈಗೊಳ್ಳುವ ಒ೦ದು ಮುಖ್ಯ ಕೆಲಸ ಇಲ್ಲಿನವರ ಬರಹಗಳನ್ನೊಳಗೊ೦ಡ ಒ೦ದು ಪುಸ್ತಕ ಪ್ರಕಟಿಸುವುದು. ಕುವೆಂಪು ಸಾಹಿತ್ಯ ಸಮೀಕ್ಷೆ ಮತ್ತು ನಗೆಗನ್ನಡಂ ಗೆಲ್ಗೆ ಈ ಎರಡು ಪುಸ್ತಕಗಳನ್ನು ಹೊರತು ಉಳಿದೆಲ್ಲ ಪುಸ್ತಕಗಳೂ ಸ೦ಪೂರ್ಣವಾಗಿ ಇಲ್ಲಿನವರು ಬರೆದ ಲೇಖನಗಳಿ೦ದಲೇ ಕೂಡಿವೆ (ಮುನ್ನುಡಿ, ಬೆನ್ನುಡಿ ಇತ್ಯಾದಿ ಬಿಟ್ಟು). ಸಮ್ಮೇಳನದ ಮುಖ್ಯ ಚಿ೦ತನೆಗನುಸಾರವಾಗಿ ನಮ್ಮ ಪುಸ್ತಕಗಳು ವಿವಿಧ ವಿಷಯಗಳನ್ನು ಕುರಿತಾಗಿವೆ (ಈ ಪ್ರಕಟಣೆಗಳ ಪಟ್ಟಿಯನ್ನು ಲೇಖನದ ಕೊನೆಯಲ್ಲಿ ಕೊಡಲಾಗಿದೆ). ಈ ಪುಸ್ತಕಗಳಿಗೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅತ್ಯುತ್ತಮ ಲೇಖಕರಾಗಿ ಕೀರ್ತಿಪಡೆದ (ದಿವಂಗತ) ಡಾ. ಜಿ.ಎಸ್. ಶಿವರುದ್ರಪ್ಪ, (ದಿವಂಗತ) ಶ್ರೀ ಯಶವ೦ತ ಚಿತ್ತಾಲ, (ದಿವಂಗತ) ಶ್ರೀ ಚಿ. ಶ್ರೀನಿವಾಸ ರಾಜು, ಡಾ. ಎಚ್.ಎಸ್. ರಾಘವೇ೦ದ್ರ ರಾವ್, ಡಾ. ಜಿ. ಎಸ್. ಆಮೂರ್, ಶ್ರೀಮತಿ ವೈದೇಹಿ, ಡಾ. ರಹಮತ್ ತರೀಕೆರೆ, ಶ್ರೀ ಜಯ೦ತ್ ಕಾಯ್ಕಿಣಿ, ಶ್ರೀ. ಎಲ್.ಎಸ್. ಶೇಷಗಿರಿರಾವ್, ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಮುಂತಾದವರು ವಿಮರ್ಶಾತ್ಮಕವಾಗಿ ಮುನ್ನುಡಿ, ಬೆನ್ನುಡಿಗಳನ್ನು ಬರೆದು ನಮ್ಮನ್ನು ಪ್ರೋತ್ಸಾಹಿಸಿದ್ದಾರೆ. ವಿಮರ್ಶಕರು ಇವುಗಳಲ್ಲಿನ ಸತ್ವವನ್ನು ಗುರುತಿಸಿ ಮೆಚ್ಚಿದ್ದಾರೆ. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಬೆಳವಣಿಗೆಯನ್ನು ವೀಕ್ಷಿಸುವ ಗ್ರ೦ಥ ನಗೆಗನ್ನಡ೦ ಗೆಲ್ಗೆ! ಮತ್ತು ಕಳೆದ ಕಾಲು ಶತಮಾನದ ಪ್ರಮುಖ ಕನ್ನಡ ಕಾದ೦ಬರಿಗಳನ್ನು ಒ೦ದೇ ಕಡೆ ಅವಲೋಕಿಸುವ ಕನ್ನಡ ಕಾದ೦ಬರಿ ಲೋಕದಲ್ಲಿ…ಹೀಗೆ ಹಲವು… ಪುಸ್ತಕಗಳನ್ನು ಕುರಿತು ಕನ್ನಡದಲ್ಲಿ ಇ೦ಥ ಪುಸ್ತಕಗಳು ಬರುತ್ತಿರುವುದು ಇದೇ ಮೊದಲು ಎ೦ದು ಹಲವರು ವಿದ್ವಾ೦ಸರು ಹೇಳಿದ್ದಾರೆ. ನಮ್ಮ ಪುಸ್ತಕಗಳ ಮೂಲಕ ಮೊದಲ ಬಾರಿಗೆ ತಮ್ಮ ಲೇಖನ ಪ್ರಕಟವಾದುದರ ಬಗ್ಗೆ ತಮಗಾದ ಹಿಗ್ಗನ್ನು ಅನೇಕ ಯುವ ಲೇಖಕರು ನಮ್ಮೊ೦ದಿಗೆ ಹ೦ಚಿಕೊ೦ಡಿದ್ದಾರೆ.

ಸಮ್ಮೇಳನದಲ್ಲಿ ರ೦ಗ ಹೊರತರುವ ಪುಸ್ತಕ ಲೋಕಾರ್ಪಣೆಗೊಳ್ಳುವುದಷ್ಟೇ ಅಲ್ಲದೆ ಇಲ್ಲಿನ ನಮ್ಮ ಇತರ ಲೇಖಕರು ಬರೆದ ಪುಸ್ತಕಗಳೂ ಲೋಕಾರ್ಪಣೆ ಗೊಳ್ಳುತ್ತವೆ. ಕಳೆದ ಸಮ್ಮೇಳನದಿ೦ದೀಚೆಗೆ ಪ್ರಕಟವಾದ ಪುಸ್ತಕಗಳನ್ನೂ ಮತ್ತು ಅವುಗಳ ಲೇಖಕರನ್ನೂ ಸಭೆಗೆ ಪರಿಚಮಾಡಿಕೊಡುವುದೂ, ಕೃತಿಗಳನ್ನು ವಿಮರ್ಶಿಸುವುದೂ ನಮ್ಮ ಇನ್ನೊ೦ದು ಕಾರ್ಯಕ್ರಮ. ಜೊತೆಗೆ ಈ ಹೊಸ ಪುಸ್ತಕಗಳನ್ನು ಸಮ್ಮೇಳನದಲ್ಲೇ ಕೊಳ್ಳಲು ಅನುಕೂಲವಾಗುವ೦ತೆ ಒ೦ದು ಪುಸ್ತಕ ಸ೦ತೆಯನ್ನೂ ಏರ್ಪಡಿಸುತ್ತೇವೆ. ತಮ್ಮ ಕೃತಿಗಳಿಗೆ ಇಲ್ಲಿ ಸಿಕ್ಕುವಷ್ಟು ಪುರಸ್ಕಾರ, ಪ್ರಚಾರ ಅಮೆರಿಕದಲ್ಲಿ ಇನ್ನೆಲ್ಲೂ ದೊರೆಯುವುದಿಲ್ಲವೆ೦ದು ಅನೇಕರು ಹೇಳಿದ್ದಾರೆ.

ನಮ್ಮ ಇಲ್ಲಿನ ಲೇಖಕರನ್ನೊಳಗೊ೦ಡ ಸಾಹಿತ್ಯ ಗೋಷ್ಠಿ, ಮುಖ್ಯ ಅತಿಥಿ ಲೇಖಕರೊ೦ದಿಗೆ ಸ೦ವಾದ, ಹಿರಿಯ ಲೇಖಕರ ಸ್ಮರಣೆ – ಇವು ನಮ್ಮ ಇತರ ಕಾರ್ಯಕ್ರಮಗಳು. ಇಲ್ಲಿ ಕನ್ನಡ ಕಲಿಯುತ್ತಿರುವ ಮಕ್ಕಳಿಗೆ ಪ್ರೋತ್ಸಾಹ ನೀಡಲು, ಮತ್ತು ಆ ಬಗ್ಗೆ ಆಸ್ಥೆ ವಹಿಸಿ ಅತ್ಯ೦ತ ಶ್ರದ್ಧೆಯಿ೦ದ ಕೆಲಸಮಾಡುತ್ತಿರುವ ತ೦ದೆ ತಾಯಿಯರಿಗೆ ನಮ್ಮ ಕೃತಜ್ಞತೆ ತೋರುವ ಕಾರ್ಯಕ್ರಮ ಇನ್ನೊ೦ದು ಮುಖ್ಯ ಅ೦ಗ. ಇವೆಲ್ಲದರ ಜೊತೆಗೆ, ಸ೦ಜೆ ಒ೦ದು ಉತ್ತಮ ಮನರ೦ಜನೆಯ ಕಾರ್ಯಕ್ರಮ ಇರುತ್ತದೆ. ಇಲ್ಲಿಯೂ ನಾವು ಸಾಹಿತ್ಯವನ್ನು, ನಮ್ಮ ಕರ್ನಾಟಕ ಕಲಾಪರ೦ಪರೆಯನ್ನು ಮರೆಯುವುದಿಲ್ಲ. ಕುವೆ೦ಪು ರವರ ಬೆರಳ್ಗೆ ಕೊರಳ್, ಪುತಿನ ಅವರ ಹರಿಣಾಭಿಸರಣ, ಅನಕೃ ಅವರ ಹಿರಣ್ಯಕಶಿಪು, ಕೃಷ್ಣಮೂರ್ತಿ ಪುರಾಣಿಕರ ರಾಧೇಯ ಪಾಶ್ಚಿಮಾತ್ಯರಲ್ಲಿ ಜನಪ್ರಿಯವಾಗಿರುವ ಬ್ಯಾಲೆ ನೃತ್ಯಗಳ ಕನ್ನಡ ರೂಪಾಂತರ, ಇವೆಲ್ಲ ಇಲ್ಲಿ ಮತ್ತೆ ಬೆಳಕು ಕ೦ಡಿವೆ. ಯಕ್ಷಗಾನದ ಹಲವಾರು ಪ್ರಸ೦ಗಗಳು ನಮ್ಮ ರ೦ಗದ ಮೇಲೆ ಹಾಯ್ದಿವೆ. ಮಾಸ್ತಿಯವರ ಕಥೆಗಳನ್ನು ಗೀತ-ನೃತ್ಯಗಳ ಮೂಲಕ ರಂಗದ ಮೇಲೆ ತಂದಿರುವುದಲ್ಲದೇ ಡಿ.ವಿ.ಜಿ ಯವರ ಅಂತಃಪುರಗೀತೆಗಳನ್ನು ನೃತ್ಯಸಂಯೋಜನೆಗೆ ಅಳವಡಿಸಿ ಪ್ರದರ್ಶಿಸಲಾಗಿದೆ. ನಮ್ಮ ಇತ್ತೀಚಿನ (೨೦೧೩. ೨೦೧೫) ಸಮ್ಮೇಳನ ಕಾರ್ಯಕ್ರಮ, ಛಾಯಾಚಿತ್ರಗಳೇ ಅಲ್ಲದೆ ರ೦ಗದ ಬಗ್ಗೆ ಮತ್ತಿತರ ವಿವರಗಳನ್ನು ನಮ್ಮ ಅ೦ತರ್ಜಾಲ ತಾಣ www.kannadasahityaranga.com ನಲ್ಲಿ ನೋಡಬಹುದು.

ಸಮ್ಮೇಳನದಲ್ಲಿ ನಮಗೆ ಸಿಕ್ಕುವ ಕಾಲಾವಕಾಶ ಕಡಿಮೆ. ನಮ್ಮ ಉದ್ದೇಶಗಳಿಗನುಸಾರವಾಗಿ ವಿವಿಧ ಕಲಾಪಗಳನ್ನು ನಡೆಸಬೇಕಾದ್ದರಿ೦ದ ಒಟ್ಟಿನಲ್ಲಿ ನಮ್ಮ ಕಾರ್ಯಕ್ರಮಗಳು ದಟ್ಟವಾಗಿರುತ್ತವೆ. ಆದ್ದರಿ೦ದ ಸಮಯ ಪರಿಪಾಲನೆ ಅತಿ ಮುಖ್ಯ. ಇದನ್ನು ನಾವು ಒ೦ದು ವ್ರತದ೦ತೆ ಆಚರಿಸಿಕೊ೦ಡುಬ೦ದಿದ್ದೇವೆ. ಪ್ರತಿಯೊ೦ದು ಕಾರ್ಯಕ್ರಮವೂ ಪ್ರಕಟಿಸಿದ ವೇಳೆಗೆ ಸರಿಯಾಗಿ ಪ್ರಾರಂಭವಾಗಿ ನಿಯಮಿತ ಕಾಲಾವಧಿಯಲ್ಲಿ ಕೊನೆಗೊಳ್ಳುತ್ತದೆ. ಮುಖ್ಯ ಅತಿಥಿಗಳು ಕೂಡ ನಮ್ಮ ಸಮಯಪರಿಪಾಲನೆಗೆ ಹೊರತಲ್ಲ! ಇನ್ನೊಂದು ವಿಚಾರದಲ್ಲೂ ನಾವು ಸ್ವಲ್ಪ ಬೇರೆ: ನಮ್ಮಲ್ಲಿ ಹಾರ ತುರಾಯಿಗಳ ಡೌಲು, ಅಬ್ಬರಗಳಿಲ್ಲ. ಇದು ನಮ್ಮ ಅತಿಥಿಗಳ ಬಗ್ಗೆ ಅಗೌರವವಲ್ಲ. ಕೇವಲ ಔಪಚಾರಿಕತೆಗಿ೦ತ ವೈಚಾರಿಕತೆಗೆ ಹೆಚ್ಚು ಬೆಲೆ ಸಲ್ಲತಕ್ಕದ್ದು ಎ೦ಬುದು ನಮ್ಮ ಮೌಲ್ಯ.

ಈ ರೀತಿಯ ಸಮ್ಮೇಳನದ ಕಾರ್ಯ ಮಾತ್ರವಲ್ಲದೆ, ರ೦ಗ ೨೦೦೬ರಲ್ಲಿ ಒ೦ದು ಕನ್ನಡ ಸಾಹಿತ್ಯ ಶಿಬಿರವನ್ನು ನಡೆಸಿತು. ಇದೊ೦ದು ವಿಶಿಷ್ಟ, ವಿನೂತನ ಕಾರ್ಯಕ್ರಮ. ಕನ್ನಡ ಸಾಹಿತ್ಯ ಪರ೦ಪರೆಯನ್ನು ಅಡಕವಾಗಿ ತಿಳಿಸುವ ಎರಡು ದಿನಗಳ ಈ ಶಿಬಿರ ಅಮೆರಿಕದ ಒ೦ಬತ್ತು ನಗರಗಳಲ್ಲಿ ವಿವಿಧ ವಾರಾ೦ತ್ಯಗಳಲ್ಲಿ ನಡೆಯಿತು. ಕನ್ನಡದ ಪ್ರಸಿದ್ಧ ಕವಿ, ವಿಮರ್ಶಕ, ಉಪನ್ಯಾಸಕಾರ ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರು ಇದನ್ನು ಬಹು ಯಶಸ್ವಿಯಾಗಿ ನಡೆಸಿಕೊಟ್ಟರು. ವಿದ್ಯಾರ್ಥಿಗಳಿಗೆ ಸಹಾಯವಾಗುವ೦ತೆ ಲಿಖಿತ ಟಿಪ್ಪಣಿಗಳು ಮಾತ್ರವಲ್ಲದೆ, ನಾಲ್ಕು ಧ್ವನಿಮುದ್ರಿಕೆಗಳನ್ನೊಳಗೊ೦ಡ ಒ೦ದು ಧ್ವನಿಸ೦ಪುಟವನ್ನೂ ಸಿದ್ಧಪಡಿಸಿಕೊಟ್ಟರು. (ಇ೦ಥ ಸೀಡಿ ಕನ್ನಡದಲ್ಲಿ ಇದೇ ಮೊದಲು ಬ೦ದದ್ದು ಎ೦ದು ಕೇಳಿದ್ದೇವೆ.) ಒಟ್ಟು ೨೦೦ಕ್ಕೂ ಮೇಲ್ಪಟ್ಟು ಕನ್ನಡಿಗರು ಈ ಶಿಬಿರದಲ್ಲಿ ಪಾಲುಗೊ೦ಡರು. ಸ್ಯಾನ್ ಫ಼್ರಾನ್ಸಿಸ್ಕೋನಲ್ಲಿ ನಡೆದ ಶಿಬಿರ ಒ೦ದರಲ್ಲೇ ೬೩ ಜನ ಭಾಗವಹಿಸಿದ್ದರು. ಇ೦ಥ ಶಿಬಿರಗಳನ್ನು ಮತ್ತೆ ಮತ್ತೆ ನಡೆಸಬೇಕೆ೦ಬ ಕೋರಿಕೆಗಳು ಬರುತ್ತಲೇ ಇವೆ.

ಇ೦ತು ನಮ್ಮ ರ೦ಗದ ಕಾರ್ಯಕಲಾಪಗಳನ್ನು ಇಲ್ಲಿ ನೆಲೆಸಿರುವ ಕನ್ನಡಿಗರ ಔದಾರ್ಯದ ಪೋಷಣೆಯಿಂದಲೇ ನಡೆಸುತ್ತಾಬಂದಿದ್ದೇವೆ ಎಂಬುದು ಗಮನಿಸಬೇಕಾದ ವಿಷಯ. ರಂಗದ ಸದಸ್ಯತ್ವ ಮತ್ತಾವ ಸಂಘ ಸಂಸ್ಥೆಗಳ ಚಟುವಟಿಕೆಗಳೊಂದಿಗೆ ಯಾವ ರೀತಿಯ ವಿರೋಧವನ್ನೂ ತಾಳುವುದಿಲ್ಲ, ಏಕೆಂದರೆ, ರಂಗದ ಧ್ಯೇಯ ಧೋರಣೆಗಳು ಸಂಪೂರ್ಣವಾಗಿ ಸಾಹಿತ್ಯಕ್ಕೇ ಮುಡುಪಾಗಿವೆ ಮತ್ತು ಮತ್ತಾವ ಸಂಸ್ಥೆಯೂ ಇಂಥ ಧ್ಯೇಯ ಧೋರಣೆಗಳನ್ನು ಹೊಂದಿಲ್ಲ. ಇದನ್ನೆಲ್ಲ ನಿರ್ವಹಿಸಲು ಸಮಯ ಬೇಕು, ಶ್ರದ್ಧೆ ಬೇಕು. ಈ ನಿಟ್ಟಿನಲ್ಲಿ ಕಸಾರಂ ನ ಆಡಳಿತ ಮಂಡಲಿಯ ಸದಸ್ಯರು ಮತ್ತು ಕಾರ್ಯಕಾರೀ ಸಮಿತಿಯ ನಿರ್ವಾಹಕರು ಅತ್ಯಂತ ಶ್ರದ್ಧೆ ಮತ್ತು ಉತ್ಸಾಹಗಳಿಂದ ದುಡಿಯುತ್ತಿದ್ದಾರೆ. ಕಸಾರಂ ಸಮ್ಮೇಳನಗಳಲ್ಲಿ ಈ ವರೆಗೆ ಭಾಗವಹಿಸಿರದ ಅಮೆರಿಕದ ವಿವಿಧ ಭಾಗಗಳಲ್ಲಿ ನೆಲೆಸಿರುವ ಸಾಹಿತ್ಯಾಭಿಮಾನಿಗಳಿಗೆ ನಮ್ಮ ರಂಗದ ಪರಿಚಯ ಈ ಲೇಖನದ ಮೂಲಕ ಆಗಲೆಂಬುದು ನಮ್ಮ ಆಶಯ. ಈವರೆಗಿನ ನಮ್ಮ ಸಾಧನೆಗಳನ್ನು ಕೆಳಗೆ ಕೊಟ್ಟಿರುವ ಸಾರಾಂಶ ಪಟ್ಟಿಯಲ್ಲಿ ಸ್ಥೂಲರೂಪದಲ್ಲಿ ಭಟ್ಟಿ ಇಳಿಸಿದ್ದೇವೆ, ಪರಾಂಬರಿಸಿ.

ಕನ್ನಡ ಸಾಹಿತ್ಯ ರಂಗದ ಪ್ರಮುಖ ಮೈಲಿಗಲ್ಲುಗಳು

೨೦೧೫: ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವ: ಸೈಂಟ್ ಲೂಯಿಸ್ ನಗರದ ಸಂಗಮ ಕನ್ನಡ ಕೂಟದ ಆಶ್ರಯ ಮತ್ತು ಮಧ್ಯ-ಪಶ್ಚಿಮ ವಲಯದ ಹಲವು ಕನ್ನಡ ಸಂಘಗಳ ಸಹಕಾರದೊಂದಿಗೆ ಅನುವಾದ ಸಾಹಿತ್ಯವನ್ನು ಕುರಿತ ಕಾರ್ಯಕ್ರಮ ಮೇ ೩೦-೩೧ ರಂದು ವಿಜೃಂಭಣೆಯಿಂದ ನೆರವೇರಿತು. ಮೈಸೂರಿನಿಂದ ಖ್ಯಾತ ಅನುವಾದಕ ಪ್ರೊ. ಪ್ರಧಾನ್ ಗುರುದತ್ತರು ಪ್ರಧಾನ ಅತಿಥಿಗಳಾಗಿ ಆಗಮಿಸಿ ಅನುವಾದದ ಆಗು-ಹೋಗುಗಳು ಎಂಬ ವಿದ್ವತ್ಪೂರ್ಣ ಭಾಷಣವನ್ನು ಮಾಡಿದರು. ಪ್ರೊ. ಎಸ್. ಎನ್. ಶ್ರೀಧರ್ ಮತ್ತು ಪ್ರೊ. ನಾರಾಯಣ ಹೆಗ್ಡೆ ವಿಶೇಷ ಅತಿಥಿಗಳಾಗಿ ಬಂದು ಅನುವಾದ ಕಮ್ಮಟದಲ್ಲಿ ಭಾಗವಹಿಸಿದರು. ಅನುವಾದ ಸಂವಾದ ಎಂಬ ಕನ್ನಡ ಪುಸ್ತಕ (ಇತರ ಭಾಷೆಗಳಿಂದ ಕನ್ನಡಕ್ಕೆ ಅನುವಾದಿಸಿದ, ಕಥೆ, ಕವನ, ಪ್ರಬಂಧ ಮತ್ತು ನಾಟಕಗಳ ಸಂಕಲನ) ಮತ್ತು ಆ ಳಿತ್ತ್ಲೆ ಟಸ್ತೆ ಒಫ಼್ ಖನ್ನದ ಇನ್ ಏನ್ಗ್ಲಿಶ್ ಎಂಬ ಇಂಗ್ಲೀಷ್ ಪುಸ್ತಕ (ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಕಥೆ, ಕವನ ಮತ್ತು ಪ್ರಬಂಧಗಳ ಸಂಕಲನ) ಶ್ರೀಕಾಂತ ಬಾಬು ಅವರ ಸಂಪಾದಕತ್ವದಲ್ಲಿ ಲೋಕಾರ್ಪಣೆಗೊಂಡವು. ಆಂಗ್ಲ ಭಾಷೆಯಲ್ಲಿ ಪುಸ್ತಕವೊಂದನ್ನು ರಂಗ ಹೊರತರುತ್ತಿರುವುದು ಇದೇ ಮೊದಲು. ಈ ಪುಸ್ತಕಗಳು ಮೊದಲ ಬಾರಿಗೆ ಅಮೆಜಾನ್ ಮೂಲಕ ಲಭ್ಯವಾಗಿವೆ. ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಸಂಪಾದಿಸಿರುವ ಅಮೆರಿಕನ್ನಡ ಬರಹಗಾರರ ಸಂಕ್ಷಿಪ್ತ ಮಾಹಿತಿ ಕೋಶ ಎಂಬ ಉಪಯುಕ್ತ ಪುಸ್ತಕವು ಕೂಡ ಲೋಕಾರ್ಪಣೆಗೊಂಡಿದ್ದು ಏಳನೆಯ ವಸಂತ ಸಾಹಿತ್ಯೋತ್ಸವದ ಹಿರಿಮೆಗಳಲ್ಲೊಂದು.

೨೦೧೩: ಕನ್ನಡ ಸಾಹಿತ್ಯ ರಂಗ ಮೊದಲ ದಶಕವನ್ನು ತಲುಪಿದ ಸಂಭ್ರಮ, ಹ್ಯೂಸ್ಟನ್ ಕನ್ನಡವೃಂದದ ಸಹಯೋಗದಲ್ಲಿ ಮತ್ತು ಟೆಕ್ಸಸ್ ಪ್ರಾಂತ್ಯದ ಇತರ ಕನ್ನಡ ಸಂಘಗಳಾದ ಡಲ್ಲಾಸಿನ ಮಲ್ಲಿಗೆ ಕನ್ನಡ ಸಂಘ, ಸ್ಯಾನ್ ಆಂಟೋನಿಯಾದ ಕುವೆಂಪು ಕನ್ನಡ ಸಂಘ, ರಿಯೋ ಗ್ರ್ಯಾಂಡಿ ಕಣಿವೆಯ ಕನ್ನಡ ಸಂಘ ಮತ್ತು ಆಸ್ಟಿನ್ ಕನ್ನಡ ಸಂಘಗಳ ಸಹಕಾರದೊಂದಿಗೆ ರೈಸ್ ಯೂನಿವರ್ಸಿಟಿ ಪ್ರಾಂಗಣದಲ್ಲಿ ಆರನೇ ವಸಂತ ಸಾಹಿತ್ಯೋತ್ಸವ. ಪ್ರಖ್ಯಾತ ಕವಿ ಮತ್ತು ಬರಹಗಾರ ಪ್ರೊ|| ಕೆ.ವಿ ತಿರುಮಲೇಶ್ ಅವರು ಮುಖ್ಯ ಅತಿಥಿಗಳು, ಮುಖ್ಯ ಅತಿಥಿಗಳ ಭಾಷಣದ ವಿಷಯ ಕನ್ನಡದ ಮುನ್ನಡೆ: ಸವಾಲುಗಳು ಮತ್ತು ಅವಕಾಶಗಳು. ಸಮಾಜ ಶಾಸ್ತ್ರಜ್ಞ, ಪ್ರೊ. ಶ್ರೀಪತಿ ತಂತ್ರಿ, ಕನ್ನಡ ಭಾಷಾಶಾಸ್ತ್ರಜ್ಞ ಪ್ರೊ. ಎಸ್.ಎನ್. ಶ್ರೀಧರ್ ಮತ್ತು ಮೈಸೂರಿನ ಧ್ವನ್ಯಾಲೋಕದ ಪ್ರೊ. ಸಿ. ಎನ್. ಶ್ರೀನಾಥ್ ಇತರ ಆಹ್ವಾನಿತ ಅತಿಥಿಗಳು. ಹ್ಯೂಸ್ಟನ್ ಕನ್ನಡವೃಂದ ಯೋಜಿಸಿದ, ಜಗದ್ವಿಖ್ಯಾತ (ದಿವಂಗತ) ರಾಜಾರಾಯರ ಇನ್ನೂ ಕರಡಿನಲ್ಲಿದ್ದ ಆಂಗ್ಲ ಕಾದಂಬರಿಯ ಕನ್ನಡ ರೂಪಾಂತರ, ನಾರೀಗೀತದ ಲೋಕಾರ್ಪಣೆ ಮತ್ತು ಅದರ ವೈಶಿಷ್ಟ್ಯಗಳ ಚರ್ಚೆ. ಅಮೆರಿಕದಲ್ಲಿ ನೆನೆಸಿರುವ ಕನ್ನಡಿಗರ ಜೀವನ ಮತ್ತು ವೃತ್ತಿ ಅನುಭವಗಳನ್ನು ಸೆರೆಹಿಡಿಯುವ ಪ್ರಬಂಧಗಳನ್ನೊಳಗೊಂಡ ಅಮೂಲ್ಯ ಪುಸ್ತಕ ಬೇರು-ಸೂರು, ಅಮೆರಿಕದಲ್ಲಿ ನಮ್ಮ ಬದುಕು ಪ್ರಕಟಣೆ (ಸಂಪಾದಕರು: ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಮತ್ತು ಜ್ಯೋತಿ ಮಹಾದೇವ್).

೨೦೧೨: ಖ್ಶ್-ಭೂಕ್ ಛ್ಲುಬ್ ಸ್ಥಾಪನೆ. ತಿ೦ಗಳಿಗೊಮ್ಮೆ ದೂರವಾಣಿಯ ಮೂಲಕ ನಡೆಯುವ ಈ ಕಿರು ಸಂಕಿರಣದಲ್ಲಿ ಯಾವುದಾದರೂ ಒ೦ದು ಉತ್ತಮವಾದ ಕತೆ ಅಥವ ಇತರ ಸಾಹಿತ್ಯ ರಚನೆಯನ್ನು ಕುರಿತು ಸದಸ್ಯರು ಚರ್ಚಿಸುತ್ತಾರೆ. ದೇಶದ ಒಳಗೆ ಮತ್ತು ಹೊರಗೆ ಇರುವ ಆಸಕ್ತ ಸದಸ್ಯರೆಲ್ಲ ಸೇರಿ ನಡೆಸುವ ಈ ಚರ್ಚೆ ಬಹಳ ವಿಚಾರಶೀಲವೂ ಉಪಯುಕ್ತವೂ ಆಗಿದೆ. ಪ್ರತಿ ತಿಂಗಳೂ ನಡೆಯುವ ರಂಗದ ಈ ಕಾರ್ಯಕ್ರಮದಲ್ಲಿ ಕೇಳುಗರಾಗಿ ಅಥವಾ ಪ್ರಸ್ತುತ ಪಡಿಸುವವರಾಗಿ ಮತ್ತು ಚರ್ಚೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವವರಾಗಿ ಭಾಗವಹಿಸಲು ಅವಕಾಶವಿದೆ. ಈ ಬಗ್ಗೆ ರಂಗದ ಪದಾಧಿಕಾರಿಗಳನ್ನು ಸಂಪರ್ಕಿಸಿ.

೨೦೧೧: ಐದನೇ ವಸ೦ತ ಸಾಹಿತ್ಯೋತ್ಸವ, ಏಪ್ರಿಲ್ ೩೦-ಮೇ ೧, ಕ್ಯಾಲಿಫ಼ೋರ್ನಿಯಾ ಕೊಲ್ಲಿ ಪ್ರದೇಶದ ವುಡ್ಸೈಡ್ ಎಂಬ ಊರಿನಲ್ಲಿ; ಸಹಯೋಗ: ಕ್ಯಾಲಿಫ಼ೊರ್ನಿಯಾ ಕನ್ನಡ ಕೂಟ; ಸಹಕಾರ: ಸಾಹಿತ್ಯ ಗೋಷ್ಠಿ; ಮುಖ್ಯ ವಸ್ತು: ಕನ್ನಡ ಪ್ರಬಂಧ; ಮುಖ್ಯ ಅತಿಥಿ: ಡಾ. ಸುಮತೀ೦ದ್ರ ನಾಡಿಗ; ಪ್ರಮುಖ ಭಾಷಣದ ಶೀರ್ಷಿಕೆ: ಕನ್ನಡ ಸಾಹಿತ್ಯದಲ್ಲಿ ಪ್ರಬ೦ಧ ಪ್ರಕಾರ; ವಿಶೇಷ ಅತಿಥಿ: ಭುವನೇಶ್ವರಿ ಹೆಗಡೆ; ಭಾಷಣ: ಹಾಸ್ಯ ಲೇಖಕಿಯಾಗಿ ನನ್ನ ಅನುಭವಗಳು; ಪ್ರಕಟವಾದ ಪುಸ್ತಕ: ಮಥಿಸಿದಷ್ಟೂ ಮಾತು (ಸ೦ಪಾದಕರು: ತ್ರಿವೇಣಿ ಶ್ರೀನಿವಾಸ ರಾವ್ ಮತ್ತು ಎ೦.ಆರ್. ದತ್ತಾತ್ರಿ)

೨೦೦೯: ನಾಲ್ಕನೆಯ ವಸಂತ ಸಾಹಿತ್ಯೋತ್ಸವ, ಮೇ ೩೦-೩೧, ಬಾಲ್ಟಿಮೋರ್-ವಾಷಿಂಗ್ಟನ್ ನಡುವಿನ ರಾಕ್ವಿಲ್, ಮೇರಿಲೆಂಡ್ನಲ್ಲಿರುವ ಊನಿವೆರ್ಸಿತಿಎಸ್ ಒಫ಼್ ಂಅರ್ಯ್ಲನ್ದ್ ಅತ್ ಷದ್ಯ್ಗ್ರೊವೆ ನಲ್ಲಿ. ಕಾವೇರಿ ಕನ್ನಡ ಸಂಘದ ಸಹಯೋಗದೊಂದಿಗೆ ನಡೆದ ಈ ಉತ್ಸವಕ್ಕೆ ಮುಖ್ಯ ವಸ್ತು: ಕನ್ನಡ ಕಾದಂಬರಿ; ಮುಖ್ಯ ಅತಿಥಿ: ಡಾ. ವೀಣಾ ಶಾಂತೇಶ್ವರ; ಭಾಷಣದ ಶೀರ್ಷಿಕೆ: “ಕನ್ನಡ ಕಾದಂಬರಿ – ಕಳೆದ ಕಾಲು ಶತಮಾನದಲ್ಲಿ;” ವಿಶೇಷ ಅತಿಥಿ ವೈದೇಹಿಯವರಿಂದ ಸ್ವಂತ ಕತೆಗಳ ವಾಚನ ಮತ್ತು ಅವರೊಂದಿಗೆ ಸಂವಾದ; ಪ್ರಕಟವಾದ ಪುಸ್ತಕ: “ಕನ್ನಡ ಕಾದಂಬರಿ ಲೋಕದಲ್ಲಿ…ಹೀಗೆ ಹಲವು…” (ಸಂಪಾದಕರು: ಮೈ.ಶ್ರೀ. ನಟರಾಜ).

೨೦೦೮: ಆಡಳಿತ ಮಂಡಲಿಯ ಪುನಾರಚನೆ ಮತ್ತು ಚುನಾವಣೆ; ಕಾರ್ಯಕಾರೀ ಸಮಿತಿಯ ಚುನಾವಣೆ.

೨೦೦೭: ಮೂರನೆಯ ವಸಂತ ಸಾಹಿತ್ಯೋತ್ಸವ, ಮೇ ೧೯-೨೦, ಚಿಕಾಗೋ ಬಳಿಯ ಅರೋರ, ಇಲಿನಾಯ್ನಲ್ಲಿನ ಶ್ರೀ ಬಾಲಾಜಿ ದೇವಾಲಯದಲ್ಲಿ. ಸಹಪ್ರವರ್ತಕರು: ವಿದ್ಯಾರಣ್ಯ ಕನ್ನಡ ಕೂಟ; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಹಾಸ್ಯ; ಮುಖ್ಯ ಅತಿಥಿ: ಪ್ರೊ. ಅ.ರಾ. ಮಿತ್ರ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯದಲ್ಲಿ ಹಾಸ್ಯಶೀಲತೆ;” ವಿಶೇಷ ಅತಿಥಿ: ಡಾ. ಎಚ್.ಎಸ್. ರಾಘವೇಂದ್ರ ರಾವ್; ಮುಖ್ಯ ಅತಿಥಿಗಳ ಭಾಷಣದ ಶೀರ್ಷಿಕೆ: “ಅಮೆರಿಕಾದ ಕನ್ನಡಿಗರ ಸಾಹಿತ್ಯ ಸೃಷ್ಟಿ – ಕೆಲವು ಅನಿಸಿಕೆಗಳು;” ಪ್ರಕಟವಾದ ಪುಸ್ತಕ: “ನಗೆಗನ್ನಡಂ ಗೆಲ್ಗೆ!” (ಸಂಪಾದಕರು: ಎಚ್.ಕೆ. ನಂಜುಂಡಸ್ವಾಮಿ ಮತ್ತು ಎಚ್.ವೈ. ರಾಜಗೋಪಾಲ್). ಲಾಸ್ ಏಂಜಲಿಸ್ನ “ಅಂಜಲಿ” ಪ್ರಕಟಿಸಿದ “ಕನ್ನಡದಮರ ಚೇತನ (ಮಾಸ್ತಿ ವೆಂಕಟೇಶ ಅಯ್ಯಂಗಾರ್ ಸಾಹಿತ್ಯ ಸಮೀಕ್ಷೆ)” ಯೋಜನೆಯಲ್ಲಿ ಆರ್ಥಿಕ ಸಹಾಯ; ಅಮೆರಿಕದ ಈನ್ತೆರ್ನಲ್ ಎವೆನುಎ ಶೆರ್ವಿಚೆ (ಈಶ್) ನಿಂದ ಆದಾಯ ತೆರಿಗೆ ವಿನಾಯಿತಿ ಅನುದಾನ; ರಂಗದ ಅಂತರ್ಜಾಲ ತಾಣದ ಉದ್ಘಾಟನೆ .

೨೦೦೬: ಕನ್ನಡ ಸಾಹಿತ್ಯ ಶಿಬಿರ – ಅಮೆರಿಕದ ಒಂಬತ್ತು ನಗರಗಳಲ್ಲಿ ಜೂನ್-ಆಗಸ್ಟ್ ಕಾಲಾವಧಿಯಲ್ಲಿ ಕನ್ನಡ ಸಾಹಿತ್ಯ ಚರಿತ್ರೆಯ ಎರಡು ದಿನಗಳ ಕ್ರಮಬದ್ಧ ಅಭ್ಯಾಸ ಶಿಬಿರ; ಅಮೆರಿಕದಲ್ಲಿ ಈ ಪ್ರಮಾಣದಲ್ಲಿ ನಡೆದ ಮೊಟ್ಟಮೊದಲ ಶಿಬಿರ. ಉಪನ್ಯಾಸಕರು: ಡಾ. ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟ; ಉಪನ್ಯಾಸದ ಟಿಪ್ಪಣಿಗಳು, ೪ ಧ್ವನಿಸಂಪುಟಗಳ ಹಂಚಿಕೆ.

೨೦೦೫: ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ ತ್ರಿವೇಣಿ ನಡೆಸಿದ ಪುತಿನ ಜನ್ಮ ಶತಮಾನೋತ್ಸವದಲ್ಲಿ ಸಹಪ್ರವರ್ತನ, ಜೂನ್ ೧೮. ಎರಡನೆಯ ವಸಂತ ಸಾಹಿತ್ಯೋತ್ಸವ, ಡಿಸೆಂಬರ್ ೫, ಲಾಸ್ ಏಂಜಲಿಸ್ ಬಳಿಯ ಲೇಕ್ವುಡ್ ಎಂಬ ಊರಿನ ಹೂವರ್ ಹರ್ಬರ್ಟ್ ಮಾಧ್ಯಮಿಕ ಶಾಲೆಯಲ್ಲಿ. ಸಹಪ್ರವರ್ತಕರು: ಕರ್ನಾಟಕ ಸಾಂಸ್ಕೃತಿಕ ಸಂಘ – ದಕ್ಷಿಣ ಕ್ಯಾಲಿಫ಼ೋರ್ನಿಯ; ಕಸ್ತೂರಿ ಕನ್ನಡ ಸಂಘ – ಸ್ಯಾನ್ ಡಿಯೇಗೋ; ಮತ್ತು “ಅಂಜಲಿ” – ಲಾಸ್ ಏಂಜಲಿಸ್; ಮುಖ್ಯ ವಸ್ತು: ಕನ್ನಡ ಸಾಹಿತ್ಯದಲ್ಲಿ ಸೃಜನಶೀಲತೆ; ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯ ಮತ್ತು ಸೃಜನಶೀಲ ಸ್ವಾತಂತ್ರ್ಯ;” ಪ್ರಕಟವಾದ ಪುಸ್ತಕ: “ಆಚೀಚೆಯ ಕತೆಗಳು” (ಪ್ರಧಾನ ಸಂಪಾದಕ: ಗುರುಪ್ರಸಾದ ಕಾಗಿನೆಲೆ).

೨೦೦೪: ನ್ಯೂ ಜೆರ್ಸಿ ರಾಜ್ಯದಲ್ಲಿ ಕನ್ನಡ ಸಾಹಿತ್ಯ ರಂಗದ ದಾಖಲೆ, ಆರ್ಥಿಕ ಲಾಭೋದ್ದೇಶವಿಲ್ಲದ ಸಾಂಸ್ಕೃತಿಕ, ಶೈಕ್ಷಣಿಕ ಸಂಸ್ಥೆ ಎಂಬ ಅಧಿಕೃತ ಅಭಿದಾನ. ಮೇ ೨೯, ಮೊಟ್ಟಮೊದಲ ವಸಂತ ಸಾಹಿತ್ಯೋತ್ಸವ, ಫಿಲಡೆಲ್ಫಿಯಾ ಬಳಿಯ ವಿಲನೋವ ವಿಶ್ವವಿದ್ಯಾಲಯದಲ್ಲಿ. ಸಹಪ್ರವರ್ತಕರು: ವಿಲನೋವ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಅಧುನಿಕ ಭಾಷಾ ಸಾಹಿತ್ಯಗಳ ವಿಭಾಗ; ಸಹಕಾರ: ತ್ರಿವೇಣಿ (ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ); ಮುಖ್ಯ ವಸ್ತು: ಕುವೆಂಪು ಜನ್ಮ ಶತಮಾನೋತ್ಸವ; ಮುಖ್ಯ ಅತಿಥಿ: ಡಾ. ಪ್ರಭುಶಂಕರ; ಭಾಷಣದ ಶೀರ್ಷಿಕೆ: “ಕನ್ನಡ ಸಾಹಿತ್ಯ — ಒಂದು ಮಿಂಚು ನೋಟ;” ಪ್ರಕಟವಾದ ಪುಸ್ತಕ: “ಕುವೆಂಪು ಸಾಹಿತ್ಯ ಸಮೀಕ್ಷೆ” (ಪ್ರಧಾನ ಸಂಪಾದಕ: ನಾಗ ಐತಾಳ).

೨೦೦೩: ಕನ್ನಡ ಸಾಹಿತ್ಯ ರಂಗದ ಪರಿಕಲ್ಪನೆ ಹಾಗು ರಂಗದ ಆಶಯ ಮತ್ತು ಧ್ಯೇಯೋದ್ದೇಶಗಳ ಅಂಕುರಾರ್ಪಣೆ.

ಮುಕ್ತಾಯ: ಅಮೆರಿಕದಲ್ಲಿ ನೆಲೆಸಿರುವ ಕನ್ನಡ ಸಾಹಿತ್ಯಾಸಕ್ತರನ್ನು ರಂಗ ಆದರದಿಂದ ಸ್ವಾಗತಿಸುತ್ತದೆ. ರಂಗದ ಸಂವಿಧಾನದ ಪ್ರಕಾರ ಸದಸ್ಯತ್ವ ಆಹ್ವಾನದ ಮೂಲಕ ನಡೆಯುತ್ತದೆ. ಸದಸ್ಯತ್ವ ಪಡೆದವರು ಸ್ವಯಂಸೇವಕರಾಗಿ ದುಡಿದು ಕಾರ್ಯಕಾರೀ ಸಮಿತಿಯಲ್ಲಿ ಮತ್ತು ಆಡಳಿತ ಮಂಡಲಿಗೆ ಚುನಾಯಿತರಾಗಲು ಹೇರಳವಾದ ಅವಕಾಶಗಳಿವೆ. ರಂಗ ಪ್ರಕಟಿಸುವ ಪುಸ್ತಕಗಳಲ್ಲಿ ತಮ್ಮ ಲೇಖನಗಳಿಗೆ ಸ್ವಾಗತವಿದೆ, ಅಷ್ಟೇ ಅಲ್ಲ, ರಂಗದ ಸಂಪಾದಕೀಯ ಸಮಿತಿಯ ಸದಸ್ಯರಾಗಲೂ ಅವಕಾಶಗಳಿವೆ. ನೀವು ಸದಸ್ಯರಾಗಲು ಬಯಸದಿದ್ದಲ್ಲಿ ಸಹ ರಂಗದ ಚಟುವಟಿಕೆಗಳಿಗೆ ನೀವು ಹಲವು ರೀತಿಯಲ್ಲಿ ನಿಮ್ಮ ಉತ್ತೇಜನ ಮತ್ತು ಸಹಕಾರಗಳನ್ನು ತೋರಬಹುದು. ಸದಸ್ಯರಾಗಲು ಇಚ್ಛೆಯಿದ್ದಲ್ಲಿ ನಿಮ್ಮ ಬಯಕೆಯನ್ನು ರಂಗದ ಸದಸ್ಯರಿಗೆ ತಿಳಿಸಿದರೆ ನಿಮಗೆ ಆಹ್ವಾನ ಕೊಡಲಾಗುವುದು, ರಂಗದ ಪ್ರಕಟಣೆಗಳನ್ನು ಕೊಂಡು ಓದಲು, ರಂಗ ನಡೆಸುವ ವಸಂತ ಸಾಹಿತ್ಯೋತ್ಸವಗಳಲ್ಲಿ ಭಾಗವಹಿಸಲು, ಹಾಗು ಪ್ರತಿ ತಿಂಗಳೂ ನಡೆಯುವ ಪುಸ್ತಕ-ಕೂಟದ ಚರ್ಚೆಗಳಲ್ಲಿ ಭಾಗವಹಿಸಲು ನೀವು ಸದಸ್ಯರಾಗಬೇಕಿಲ್ಲ, ಕನ್ನಡ ಸಾಹಿತ್ಯದಲ್ಲಿ ಆಸಕ್ತಿಯಿದ್ದರೆ ಸಾಕು. ಜೊತೆಗೆ, ಉಳ್ಳ ಉದಾರಿಗಳು ನಮಗೆ ಧನಸಹಾಯಮಾಡಬಹುದು (ರಂಗ ಲಾಭರಹಿತ ಸಂಸ್ಥೆಯಾದ್ದರಿಂದ, ತಮ್ಮ ಕೊಡುಗೆ ಆದಾಯ ತೆರಿಗೆಯಿಂದ ವಿನಾಯತಿಗೆ ಅರ್ಹವಾಗುತ್ತದೆ ಎಂಬುದನ್ನು ತಾವು ದಯವಿಟ್ಟು ಗಮನಿಸಬೇಕು!) ನಮ್ಮ ಪ್ರಕಟನೆಗಳನ್ನು ಅಭಿನವ ಮತ್ತು ವಸ೦ತ ಪ್ರಕಾಶನ, ಬೆ೦ಗಳೂರು, ಅವರಿ೦ದ ಪಡೆಯಬಹುದು. ಕನ್ನಡ ಸಾಹಿತ್ಯ ರಂಗದ ಮುಂದಿನ ಕಾರ್ಯಕ್ರಮಗಳನ್ನು ನಿಮ್ಮೂರಿಗೆ ಕರೆಸಿಕೊಳ್ಳಲು ನಿಮಗೆ ಬಯಕೆಯಿದ್ದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ, ಕನ್ನಡ ಸಾಹಿತ್ಯ ರಂಗದ ಹೆಚ್ಚಿನ ಚಟುವಟಿಕೆಗಳ ಮಾಹಿತಿ ಪಡೆಯಲು ನಮ್ಮ ಜಾಲತಾಣಕ್ಕೆ ತಪ್ಪದೇ ಭೇಟಿ ಕೊಡಿ (ವ್ವ್ವ್.ಕನ್ನದಸಹಿತ್ಯರನ್ಗ.ಒರ್ಗ್).

ಸಿರಿಗನ್ನಡ ಗೆಲ್ಗೆ.

 Posted by at 10:00 AM
Sep 222016
 

14424199_10209146043261119_838326681_o ಕನ್ನಡ ಸಾಹಿತ್ಯ ರಂಗದ ಎಂಟನೆಯ ವಸಂತ ಸಾಹಿತ್ಯೋತ್ಸವ

ಕೇಳಿ! ಕೇಳಿ!! ಅಮೆರಿಕದ ಕನ್ನಡ ಸಾಹಿತ್ಯೋತ್ಸಾಹಿಗಳಿಗೆ ಸಂತಸದ ಸುದ್ದಿ!!! ೨೦೦೩ ನೆಯ ಇಸವಿಯಿಂದ ಈವರೆಗೆ ಏಳು ವಸಂತ ಸಾಹಿತ್ಯೋತ್ಸವಗಳನ್ನು ಕ್ರಮಬದ್ಧವಾಗಿ ನಡೆಸಿ ಫಿಲಡೆಲ್ಫಿಯ, ಲಾಸ್ ಏಂಜಲೀಸ್, ಶಿಕಾಗೋ, ವಾಷಿಂಗ್‌ಟನ್ ಡಿ.ಸಿ. ಸ್ಯಾನ್ ಹೋಸೆ, ಹ್ಯೂಸ್ಟನ್ ಮತ್ತು ಸೇಂಟ್ ಲೂಯಿಸ್ ನಗರಗಳ ಸುತ್ತಮುತ್ತಲ ಕನ್ನಡಿಗರಿಗೆ ಶ್ರೀಮಂತ ಕನ್ನಡ ಸಾಹಿತ್ಯದ ವಿವಿಧ ಮುಖಗಳನ್ನು ಪರಿಚಯಮಾಡಿಕೊಟ್ಟು, ವಿವಿಧ ಮೂಲವಸ್ತುಗಳನ್ನೊಳಗೊಂಡ ಹಲವು ಹತ್ತು ಪುಸ್ತಕಗಳನ್ನು ಪ್ರಕಟಿಸಿ, ಕರ್ನಾಟಕದ ಹತ್ತಾರು ಹೆಸರಾಂತ ಲೇಖಕರನ್ನು ಮುಖ್ಯ ಅತಿಥಿಗಳಾಗಿ ಆಹ್ವಾನಿಸಿ ಅಮೆರಿಕದ ಕನ್ನಡ ಬರಹಗಾರರನ್ನು ಪ್ರೋತ್ಸಾಹಿಸುತ್ತಾ ಬಂದಿರುವ ಕನ್ನಡ ಸಾಹಿತ್ಯ ರಂಗದ (ಕಸಾರಂ) ಎಂಟನೆಯ ವಸಂತ ಸಾಹಿತ್ಯೋತ್ಸವದ ಸ್ಥಳ ಮತ್ತು ದಿನಾಂಕಗಳು ಇದೀಗ ನಿಶ್ಚಯಗೊಂಡಿವೆ.

14446494_10209146047421223_1894579420_o

ನ್ಯೂ ಇಂಗ್ಲೆಂಡ್ ಕನ್ನಡ ಕೂಟ–“ಮಂದಾರ”ದ ಆಶ್ರಯದಲ್ಲಿ ಮುಂದಿನ ವಸಂತ ಸಾಹಿತ್ಯೋತ್ಸವ ನಡೆಯಲಿದೆ. ಸೆಪ್ಟೆಂಬರ್ ೧೭ರಂದು ಮಂದಾರದ ಸದಸ್ಯರು ಆಚರಿಸಿದ ಗಣೇಶೋತ್ಸವದ ಶುಭ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ರಂಗದ ಕಾರ್ಯಕಾರೀ ಸಮಿತಿಯ ಅಧ್ಯಕ್ಷರಾದ ಡಾ. ಮೈ. ಶ್ರೀ. ನಟರಾಜರು ಭಾಗವಹಿಸಿ ತಮ್ಮ ಸಂಸ್ಥೆಯ ಮೂಲೋದ್ದೇಶಗಳು ಮತ್ತು ಅದರ ಹದಿಮೂರು ವರ್ಷಗಳ ಇತಿಹಾಸವನ್ನು ದೊಡ್ಡ ಸಂಖ್ಯೆಯಲ್ಲಿ ನೆರೆದಿದ್ದ ನ್ಯೂ ಇಂಗ್ಲೆಂಡ್ ಕನ್ನಡಿಗರಿಗೆ ಪರಿಚಯ ಮಾಡಿಕೊಟ್ಟ ನಂತರ ಮುಂದಿನ ವಸಂತ ಸಾಹಿತ್ಯೋತ್ಸವ ನಡೆಸುವ ಬಗ್ಗೆ ಕಸಾರಂ ಮತ್ತು ಮಂದಾರ ಸಂಸ್ಥೆಗಳು ಪರಸ್ಪರ ಮಾಡಿಕೊಂಡ ಒಪ್ಪಂದಕ್ಕೆ ಮೈ.ಶ್ರೀ. ನಟರಾಜ ಮತ್ತು ಮಂದಾರದ ಅಧ್ಯಕ್ಷ ಡಾ. ಸುಧಾಕರ ರಾವ್ ಅವರುಗಳು ಸಭಿಕರ ಸಮ್ಮುಖದಲ್ಲಿ ಸಹಿ ಹಾಕುವುದರ ಮೂಲಕ ಎಂಟನೆಯ ಸಮ್ಮೇಳನದ ತಯಾರಿಗೆ ಔಪಚಾರಿಕ ಪ್ರಾರಂಭವನ್ನು ಮಾಡಿದ್ದಾರೆಂದು ತಿಳಿಸಲು ಕಸಾರಂ ಆಡಳಿತ ಮಂಡಲಿಗೆ ಅತ್ಯಂತ ಆನಂದವಾಗುತ್ತಿದೆ. ಬಾಸ್ಟನ್ ಪ್ರದೇಶದಲ್ಲಿ ೨೦೧೭ರ ಏಪ್ರಿಲ್ ಕೊನೆಯ ವಾರಾಂತ್ಯದಲ್ಲಿ (೨೯ ಮತ್ತು ೩೦ ನೆಯ ತಾರೀಖು) ನಡೆಯಲಿರುವ ಈ ಬಾರಿಯ ಸಮ್ಮೇಳನದ ಮೂಲ ವಸ್ತು (ಥೀಮ್) “ಭಕ್ತಿ ಸಾಹಿತ್ಯ.” ಇದೇ ವಿಷಯವನ್ನು ಕುರಿತು ಪ್ರಮುಖ ಭಾಷಣ ಮಾಡಲು ಕರ್ನಾಟಕದಿಂದ ಶ್ರೀಯುತ ಲಕ್ಷ್ಮೀಶ ತೋಳ್ಪಾಡಿಯವರು ಮುಖ್ಯ ಅತಿಥಿಗಳಗಿ ಬರಲು ದಯಮಾಡಿ ಒಪ್ಪಿರುವರೆಂದು ತಿಳಿಸಲು ಆಡಳಿತ ಮಂಡಲಿಗೆ ಹರ್ಷವಾಗುತ್ತಿದೆ.

ಅಮೆರಿಕದ ಕನ್ನಡ ಸಾಹಿತ್ಯಪ್ರಿಯರೇ, ದಯವಿಟ್ಟು ದಿನಾಂಕ ಮತ್ತು ಸಾಹಿತ್ಯದ ಹಬ್ಬ ನಡೆಯುವ ಊರು ಇವೆರಡನ್ನೂ ಗುರುತು ಹಾಕಿಕೊಳ್ಳಿ. ಈಗಾಗಲೇ. ಭಕ್ತಿಸಾಹಿತ್ಯದ ವಿವಿಧ ಮುಖಗಳನ್ನು ಪರಿಚಯಿಸುವ ಅಮೆರಿಕದ ಬರಹಗಾರರೇ ಬರೆದ ಲೇಖನಗಳ ಸಂಗ್ರಹದ ಪುಸ್ತಕವನ್ನು ಸಿದ್ಧಗೊಳಿಸಲು ಕಸಾರಂ ಸಂಪಾದಕ ಮಂಡಲಿ ಭರದಿಂದ ಕಾರ್ಯ ಪ್ರಾರಂಭಿಸಿದೆ. ಎಂದಿನಂತೆ, ಕವಿಗೋಷ್ಠಿ, ಪ್ರಬಂಧಗಳ ಮಂಡನೆ, ಪುಸ್ತಕಗಳ ಲೋಕಾರ್ಪಣೆ ಮತ್ತು ಲೇಖಕರ ಪರಿಚಯ, ಪುಸ್ತಕಗಳ ಮಳಿಗೆ, ಅತಿಥಿಗಳೊಂದಿಗೆ ಪ್ರಶ್ನೋತ್ತರಗಳು, ಮಂದಾರ ಕಲಾವಿದರ ಉತ್ತಮ ಮಟ್ಟದ ಮನರಂಜನೆ, ಜೊತೆಗೆ ರಸದೌತಣ, ಇವನ್ನೆಲ್ಲ ತಪ್ಪಿಸಿಕೊಳ್ಳಬೇಡಿ, ೨೦೧೭, ಏಪ್ರಿಲ್ ತಿಂಗಳಿನ ೨೯ ಮತ್ತು ೩೦ರ ದಿನಗಳನ್ನು ಕಾದಿರಿಸಿಕೊಳ್ಳಿ.

ಹ್ಞಾ! ಮತ್ತೊಂದು ಬಹುಮುಖ್ಯ ವಿಷಯ. ಮಹಾಭಾರತ, ರಾಮಾಯಣ, ಭಾಗವತ, ಭಗವದ್ಗೀತೆ ಮತ್ತಿತರ ತಾತ್ವಿಕ ವಿಷಯಗಳ ಬಗ್ಗೆ ನಿರರ್ಗಳವಾಗಿ ಅಧಿಕಾರವಾಣಿಯಿಂದ ಮಾತಾಡಬಲ್ಲ ಶ್ರೀ ಲಕ್ಷ್ಮೀಶ ತೋಳ್ಪಾಡಿಯವರನ್ನು ನಿಮ್ಮೂರಿಗೆ ಕರೆಸಿಕೊಳ್ಳಬೇಕಾ? ಆಸಕ್ತಿಯಿದ್ದವರು ನಮ್ಮೊಡನೆ ತಕ್ಷಣ ಪ್ರಸ್ತಾಪಿಸಿದರೆ ಉಪಕಾರವಾದೀತು.

ಕಸಾರಂ ಆಡಳಿತ ಮಂಡಲಿ.

May 302016
 

ದೇ.ಜವರೇಗೌಡ

 

ಕನ್ನಡದ ಹಿರಿಯ ಸಾಹಿತಿ ದೇ. ಜವರೇಗೌಡ (ದೇಜಗೌ) (98 ವರ್ಷ) ಅನಾರೋಗ್ಯದ ಕಾರಣ ಸೋಮವಾರ ಸಂಜೆ (30-05-2016) ರಂದು ಮೈಸೂರಿನಲ್ಲಿ ವಿಧಿವಶರಾಗಿದ್ದಾರೆ. ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ದೇಜಗೌ ಅವರನ್ನು ಮೈಸೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ದಿವಂಗತ ದೇ.ಜವರೇಗೌಡರಿಗೆ ಕನ್ನಡ ಸಾಹಿತ್ಯರಂಗದ ಭಾವಪೂರ್ವಕ ಶ್ರದ್ದಾಂಜಲಿಗಳು!

‘ಕನ್ನಡಪ್ರಭ’ ವರದಿ :-

http://www.kannadaprabha.com/top-news/senior-litterateur-d-javaregowda-no-more/276528.html

ವಿಜಯವಾಣಿ:-

http://vijayavani.net/?p=1786812&number=20160531231658

ಉದಯವಾಣಿ:-

http://www.udayavani.com/kannada/news/state-news/150578/they-veteran-writer-javare-gowda-passes-away

 Posted by at 12:43 PM
Jun 152015
 

ಅನುವಾದ ಸಂಪುಟ- ಪುಸ್ತಕ ಬಿಡುಗಡೆ ಕಾರ್ಯಕ್ರಮ ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವದ ಸಂಪೂರ್ಣ ವರದಿ ಇಲ್ಲಿದೆ:-

ಸೈಂಟ್ ಲೂಯಿಸ್ ನಗರದ ಕನ್ನಡ ಸಂಸ್ಥೆ “ಸಂಗಮ”ದ ಆಶ್ರಯದಲ್ಲಿ ಹಾಗು ಮಧ್ಯಪಶ್ಚಿಮ ವಲಯದ ಇತರ ಕನ್ನಡ ಸಂಘಗಳ ಸಹಕಾರದೊಂದಿಗೆ ಕನ್ನಡ ಸಾಹಿತ್ಯ ರಂಗದ ಏಳನೆಯ ವಸಂತ ಸಾಹಿತ್ಯೋತ್ಸವ ಮೇ ೩೦, ೩೧, ೨೦೧೫ ರಂದು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲ್ಪಟ್ಟಿತು. ಈ ಬಾರಿ ರಂಗ “ಅನುವಾದ ಸಾಹಿತ್ಯ” ವನ್ನು ಚರ್ಚೆಯ ಮುಖ್ಯ ವಿಷಯವಾಗಿ ಆಯ್ದುಕೊಂಡು, ಕರ್ನಾಟಕದ ಪ್ರಸಿದ್ಧ ಭಾಷಾಂತರಕಾರರಲ್ಲೊಬ್ಬರಾದ ಪ್ರೊ. ಪ್ರಧಾನ್ ಗುರುದತ್ತರನ್ನು ಮುಖ್ಯ ಅತಿಥಿಗಳಾಗಿ ಬರಮಾಡಿಕೊಂಡಿತ್ತು. ಅವರೊಡನೆ, ಅಮೆರಿಕದವರೇ ಆದ ಪ್ರೊ.ಎಸ್.ಎನ್. ಶ್ರೀಧರ್ ಮತ್ತು ಪ್ರೊ. ನಾರಾಯಣ ಹೆಗ್ಡೆ ಅವರುಗಳು ವಿಶೇಷ ಅತಿಥಿಗಳಾಗಿ ಬಂದಿದ್ದರು. ಕಾರ್ಯಕ್ರಮದ ಆರಂಭದ ವೇಳೆಗೆ ಸಭಾಂಗಣ ತಳಿರು ತೋರಣಗಳಿಂದ ಕಂಗೊಳಿಸುತ್ತಿತ್ತು. ಬೇರೆ ಬೇರೆ ಊರುಗಳಿಂದ ಬಂದು ಸೇರಿದ್ದ ಸಾಹಿತ್ಯಾಸಕ್ತರು ಒಂದು ಕಡೆ ನೋಂದಣಿ ಮಾಡಿಕೊಳ್ಳುತ್ತ ಪರಸ್ಪರ ಕುಶಲವನ್ನು ವಿಚಾರಿಸುತ್ತಿದ್ದರೆ, ಮತ್ತೆ ಬೇರೆಡೆಯಲ್ಲಿ ಸುಂದರವಾದ ಸೀರೆಗಳನ್ನುಟ್ಟು ನಗುಮೊಗದೊಂದಿಗೆ ಓಡಾಡುತ್ತಿದ್ದ ಸಂಗಮದ ಕಾರ್ಯಕರ್ತೆಯರು ಇಡೀ ಒಳಾಂಗಣಕ್ಕೆ ಹಬ್ಬದ ವಾತಾವರಣವನ್ನುಂಟುಮಾಡಿದ್ದರು! ಮಧ್ಯಾಹ್ನ ಒಂದು ಗಂಟೆಗೆ ಸರಿಯಾಗಿ ಅತಿಥಿಗಳು ದೀಪ ಬೆಳಗುವ ಮೂಲಕ ಸಮ್ಮೇಳನದ ಉಧ್ಘಾಟನೆ ಮಾಡಿದರು. `ಸಂಗಮ’ ತಂಡದ ಗಾಯಕರ ಸುಶ್ರಾವ್ಯ ಸ್ವಾಗತ ಗೀತೆಯೊಂದಿಗೆ ಎರಡು ದಿನಗಳ ಸಾಹಿತ್ಯೋತ್ಸವ ಆರಂಭವಾಯಿತು. ಸಾಹಿತ್ಯ ರಂಗದ ಆಡಳಿತ ಮಂಡಲಿಯ ಅಧ್ಯಕ್ಷರಾದ ನಾಗ ಐತಾಳ ಮತ್ತು ಕಾರ್ಯಕಾರೀ ಸಮಿತಿಯ ಅಧ್ಯಕ್ಷ ಮೈ.ಶ್ರೀ. ನಟರಾಜ ಅವರು ಎಲ್ಲರನ್ನೂ ಸ್ವಾಗತಿಸಿ ಸಮ್ಮೇಳನಕ್ಕೆ ಚಾಲನೆ ಕೊಟ್ಟರು. ನಂತರ ಕಾವ್ಯಾ ಕಡಮೆ, ಮಾನಸಾ ವೆಂಕಟ ಸುಬ್ಬಯ್ಯ ಮತ್ತು ಸುಮತಿ ಮುದ್ದೇನಹಳ್ಳಿ ಅವರುಗಳು ಅತಿಥಿಗಳನ್ನು ಕ್ರಮವಾಗಿ, ಚಿಕ್ಕದಾಗಿ ಚೊಕ್ಕವಾಗಿ ಸಭೆಗೆ ಪರಿಚಯಿಸಿದರು.

ಪುಸ್ತಕಗ ಮತ್ತು ಧ್ವನಿ ಸಂಪುಟದ ಲೋಕಾರ್ಪಣೆ

ಪ್ರಧಾನ ಸಂಪಾದಕ ಶ್ರೀಕಾಂತಬಾಬು ಅವರು ಸಂಪಾದಕ ಮಂಡಲಿಯನ್ನು ಪರಿಚಯಸಿ ಈ ಸಮ್ಮೇಳನದ ಪ್ರಮುಖ ವಿಷಯವಾದ ’ಅನುವಾದ ಸಾಹಿತ್ಯ’ ವನ್ನು ಕುರಿತು ಪ್ರಕಟಿಸಲಾದ ಎರಡು ಪುಸ್ತಕಗಳನ್ನು ಸಭೆಗೆ ಪರಿಚಯಿಸಿ ಅತಿಥಿಗಳಿಗೆ ಪುಸ್ತಕಗಳನ್ನು ಲೋಕಾರ್ಪಣೆ ಮಾಡಲು ಕೇಳಿಕೊಂಡರು. ವಿವಿಧ ಭಾಷೆಗಳಿಂದ ಆಯ್ದ ಲೇಖನಗಳ ಕನ್ನಡ ಅನುವಾದದ ಪುಸ್ತಕ ‘ಅನುವಾದ ಸಂವಾದ’ ವನ್ನು ಮೊದಲಿಗೆ ಪ್ರೊ. ಪ್ರಧಾನ ಗುರುದತ್ತ ಅವರು ಲೋಕಾರ್ಪಣೆ ಮಾಡಿದರು. ನಂತರ ಕನ್ನಡದಿಂದ ಇಂಗ್ಲೀಷಿಗೆ ಅನುವಾದಿಸಿದ ಪುಸ್ತಕ ಸಂಕಲನ ‘A Little Taste of Kannada – in English’ ನ್ನು ಪ್ರೊ. ನಾರಾಯಣ ಹೆಗ್ಡೆ ಅವರು ಲೋಕಾರ್ಪಣೆ ಮಾಡಿದರು. ನಾಗ ಐತಾಳ ಮತ್ತು ಜ್ಯೋತಿ ಮಹಾದೇವ್ ಸಂಪಾದಿಸಿ ಕನ್ನಡ ಸಾಹಿತ್ಯ ರಂಗ ಮತ್ತು ಸಾಹಿತ್ಯಾಂಜಲಿ ಅಭಿನವ ಪ್ರಕಾಶನದ ಸಹಯೋಗದೊಂದಿಗೆ ಪ್ರಕಟಿಸಿದ ಪುಸ್ತಕ ‘ಅಮೆರಿಕನ್ನಡ ಬರಹಗಾರರು (ಸಂಕ್ಷಿಪ್ತ ಮಾಹಿತಿ ಕೋಶ)’ ವನ್ನು ಪ್ರೊ. ಶ್ರೀಧರ್ ಅವರು ಬಿಡುಗಡೆ ಮಾಡಿದರು. ಸವಿತಾ ರವಿಶಂಕರ್ ಅವರು ಮಕ್ಕಳಿಗಾಗಿ ತಯಾರಿಸಿದ ‘ಚಿಲಿ ಪಿಲಿ ಕನ್ನಡ ಕಲಿ’ ಧ್ವನಿ ಸಂಪುಟವನ್ನು ಪ್ರೊ. ಪ್ರಧಾನ್ ಗುರುದತ್ತ ಅವರು ಲೋಕಾರ್ಪಣೆ ಮಾಡಿದರು. ಕೊನೆಯದಾಗಿ ಸಂಗಮದ ಶಂಕರ ಶಾಸ್ತ್ರಿಯವರು ಸಂಪಾದಿಸಿದ ಸಮ್ಮೇಳನದ ಸ್ಮರಣ ಸಂಚಿಕೆ ‘ಸೊಬಗು’ ವನ್ನು ಪ್ರೊ. ಶ್ರೀಧರ್ ಅವರು ಬಿಡುಗಡೆ ಮಾಡಿದರು.

ಸುಮಾರು ಒಂದು ಗಂಟೆಗೂ ಮೀರಿದ “ಅನುವಾದದ ಆಗು-ಹೋಗುಗಳು” ಎಂಬ ವಿಷಯವನ್ನು ಕುರಿತು ಪ್ರಧಾನ್ ಗುರುದತ್ತರು ವಿದ್ವತ್ಪೂರ್ಣವಾದ ಪ್ರಾಸ್ತಾವಿಕ ಭಾಷಣವನ್ನು ಮಾಡಿ ಸಭಾಸದರಿಗೆ ಅನುವಾದದ ಒಳನೋಟವನ್ನು ಕಾಣಿಸಿ, ರಸದೌತಣವನ್ನೇ ಬಡಿಸಿದರು. ಅಷ್ಟೇ ಅಲ್ಲ, ರಂಗ ಈ ವರೆಗೆ ಪ್ರಕಟಿಸಿದ ಮತ್ತು ಅಮೆರಿಕದಲ್ಲಿರುವ ಹಲವಾರು ಲೇಖಕರು ಪ್ರಕಟಿಸುತ್ತಾ ಬಂದಿರುವ ಅನೇಕ ಪುಸ್ತಕಗಳ ಬಗ್ಗೆ ಸಹ ಮೆಚ್ಚುಗೆಯ ಮಾತುಗಳನ್ನಾಡಿದರು. ಭಾಷಣ ವಿದ್ವತ್ಪೂರ್ಣವಾಗಿರುವುದರ ಜೊತೆಗೆ ವಿನೋದಪೂರ್ಣವೂ ಅಗಿದ್ದುದರಿಂದ ಸಭಾಸದರೆಲ್ಲರೂ ಏಕರೀತಿಯಲ್ಲಿ ಆಸ್ವಾದಿಸಿ ಸಂತಸಪಟ್ಟರು. ಮುಖ್ಯ ಅತಿಥಿಗಳ ಹುಟ್ಟು ಹಬ್ಬ ಅಂದೇ ಎಂದು ತಿಳಿದು ಪ್ರಾಸ್ತಾವಿಕ ಭಾಷಣ ಮುಗಿದ ಕೂಡಲೇ ಅವರಿಗೆ “ಹ್ಯಾಪ್ಪಿ ಬರ್ತ್ ಡೇ” ಹಾಡುವುದರ ಜೊತೆ ಅವರಿಗೂ ಮತ್ತು ರಂಗದ ಆಡಳಿತ ಮಂಡಲಿ ಅಧ್ಯಕ್ಷ ನಾಗ ಐತಾಳರ ೫೫ನೇ ಮದುವೆಯ ವಾರ್ಷಿಕೋತ್ಸವದ ಸಲುವಾಗಿಯೂ ಎರಡು ವಿಭಿನ್ನ ರುಚಿಕರವಾದ ಕೇಕ್ ಗಳನ್ನು ಕತ್ತರಿಸಿದ್ದು ಅಂದಿನ ಕಾರ್ಯಕ್ರಮಕ್ಕೆ ವಿಶೇಷ ಕಳೆಯನ್ನು ಕೊಟ್ಟಿತು.

ಸಾಹಿತ್ಯ ಗೋಷ್ಠಿ: ಮಧ್ಯಾಹ್ನ ನಡೆದ ಸಾಹಿತ್ಯ ಗೋಷ್ಠಿ ಸುಮಾರು ಒಂದೂವರೆ ಗಂಟೆಗಳ ಕಾಲ ನೆರೆದವರಿಗೆಲ್ಲ ರಸದೌತಣವನ್ನು ಉಣಬಡಿಸಿತು. ನಿರೀಕ್ಷೆಗೂ ಮೀರಿ ಅಭ್ಯರ್ಥಿಗಳ ಪಟ್ಟಿ ಬೆಳೆದಿದ್ದರಿಂದ ಹಲವಾರು ಪದಾಧಿಕಾರಿಗಳು ಮತ್ತು ಇತರರು ತಾವು ಮಾಡಬೇಕೆಂದಿದ್ದ ಪ್ರಸ್ತುತಿಯನ್ನು ಹಿಂದೆಗೆದುಕೊಂಡರು- ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಸಲುವಾಗಿ.  ಒಟ್ಟು ಹದಿನಾಲ್ಕು ಜನರು ಭಾಗವಹಿಸಿದ್ದರು.  ಅನಿಲ್ ದೇಶಪಾಂಡೆ, ಲತಾ, ವಿಶ್ವನಾಥ್, ಕಾವ್ಯಾ ಕಡಮೆ ನಾಗರಕಟ್ಟೆ, ಶ್ರೀನಿವಾಸ ರಾವ್ ಮತ್ತು ಮೈ ಶ್ರೀ ನಟರಾಜ ಅವರು ಮೂಲ ಕೃತಿ ಮತ್ತು ಅದರ ಅನುವಾದವನ್ನು ಪ್ರಸ್ತುತ ಪಡಿಸಿದರು.  ಶಂಕರ ಶಾಸ್ತ್ರಿ ಮತ್ತು ತ್ರಿವೇಣಿ ಶ್ರೀನಿವಾಸ ರಾವ್ ತಮ್ಮ ತಿಳಿ ಹಾಸ್ಯಭರಿತ ಪ್ರಬಂಧವನ್ನು ಓದಿದರು.  ನಾಗಭೂಷಣ ಮೂಲ್ಕಿ, ಪಿ ಎಸ್ ಮೈಯ, ಸವಿತಾ ರವಿಶಂಕರ್ ಮತ್ತು ಶಂಕರ ಹೆಗ್ಡೆ ಅವರು ಕವನಗಳನ್ನು ವಾಚಿಸಿದರು.  ಸಾಹಿತ್ಯ ಗೋಷ್ಠಿಯನ್ನು ನಿರ್ವಹಿಸಿದ ನಳಿನಿ ಮೈಯ ಮತ್ತು ವೈಶಾಲಿ ಹೆಗಡೆ ಅವರನ್ನು ಹಲವಾರು ಜನರು ನಂತರ ಭೇಟಿಯಾಗಿ ಅಭಿನಂದನೆಗಳ ಸುರಿಮಳೆಯನ್ನೇ ಸುರಿಸಿದರು.

ಶ್ರದ್ಧಾಂಜಲಿ ಮತ್ತು ಕವಿ ನಮನ: ಕನ್ನಡ ಸಾಹಿತ್ಯ ರಂಗದ ಸದಸ್ಯರಾಗಿದ್ದು ನಮ್ಮನ್ನಗಲಿದ ಅಶ್ವತ್ಥನಾರಾಯಣ ರಾವ್, ವೈ. ಆರ್. ಮೋಹನ್, ಎಚ್.ಕೆ. ನಂಜುಂಡ ಸ್ವಾಮಿ ಮತ್ತು ಕರ್ನಾಟಕದಲ್ಲಿ ಕಳೆದ ಎರಡು ವರ್ಷಗಳಲ್ಲಿ ಕಣ್ಮರೆಯಾದ ಕನ್ನಡ ಕವಿ/ಬರಹಗಾರರಾದ ಜಿಎಸ್. ಶಿವರುದ್ರಪ್ಪ, ಯು.ಆರ್. ಅನಂತಮೂರ್ತಿ ಮತ್ತು ಯಶವಂತ ಚಿತ್ತಾಲ ಇವರುಗಳಿಗೆ ಶ್ರದ್ಧಾಂಜಲಿ ಅರ್ಪಿಸುವ ಕಾರ್ಯಕ್ರಮವನ್ನು ನಳಿನಿ ಕುಕ್ಕೆ, ಮಾನಸಾ, ಸುಮತಿ ಮತ್ತು ಕಾವ್ಯಾ ಅವರ ಸಹಾಯದಿಂದ ಅಚ್ಚುಕಟ್ಟಾಗಿ ನಿರ್ವಹಿಸಿದರು. ಈ ಕಾರ್ಯಕ್ರಮದ ಕಿರೀಟವಾಗಿ ಸಂಗಮದ ಅರ್ಚನ ಮೂಡ್ ಅವರ ನಿರ್ದೇಶನದಲ್ಲಿ ನರ್ತಕಿಯರು ಹಲವು ಪ್ರಸಿದ್ಧ ಕವಿಗಳಿಗೆ ನಮನ ಸಲ್ಲಿಸಿದ್ದು ಮಧ್ಯಾಹ್ನದ ಇತರ ಕಾರ್ಯಕ್ರಮಕ್ಕೆ ಪೂರಕವಾಗಿತ್ತು.

ಮನರಂಜನಾ ಕಾರ್ಯಕ್ರಮ:  ಸಂಜೆಯ ಮನರಂಜನೆಯ ಕಾರ್ಯಕ್ರಮದಲ್ಲಿ ಸಂಗಮದ ಪ್ರತಿಭೆಗಳು ತಮ್ಮ ಕೈಚಳಕವನ್ನು ತೋರಿಸಿಯೇ ತೋರಿಸಿದರು! ಸುಮಧುರ ಗಾಯನ, ಸುಂದರ ನರ್ತನ ಮತ್ತು ಮನೋಜ್ಞ ನಾಟಕಗಳಿಂದ ಕೂಡಿದ ರಸದೌತಣವನ್ನೇ ನೀಡಿದರು. ಸಾಹಿತ್ಯದ ಕಾರ್ಯಕ್ರಮಕ್ಕೆ ಅನುಗುಣವಾಗಿ ಡಿವಿಜಿ ಅವರ ಅಂತಃಪುರ ಗೀತೆಗಳಿಗೆ ಅಳವಡಿಸಿದ ನಾಟ್ಯ ಮತ್ತು ಮಧ್ಯ-ಪಶ್ಚಿಮ ವಲಯದ ಪ್ರಸಿದ್ಧ ನಾಟ್ಯಾಚಾರ್ಯ ಪ್ರಸನ್ನ ಕಸ್ತೂರಿ ಅವರು ಮಾಸ್ತಿಯವರ ಸಣ್ಣ ಕಥೆಗಳನ್ನಾಧರಿಸಿ ಬರೆದು ನಿರ್ದೇಶಿದ “ಚಿತ್ತಾರ” ಎಲ್ಲರ ಮನಸ್ಸನ್ನೂ ಸೂರೆಗೊಂಡಿತು. ಸಂಜೆಯ ಕಾರ್ಯಕ್ರಮದಲ್ಲಿ ಪರ ಊರುಗಳಿಂದ ಬಂದವರೂ ಸೇರಿ ಒಟ್ಟು ನಲವತ್ತಕ್ಕೂ ಹೆಚ್ಚು ಕಲಾವಿದರು, ಪುರುಷರು, ಸ್ತ್ರೀಯರು ಮತ್ತು ಮಕ್ಕಳೂ ಸೇರಿದಂತೆ, ಅತ್ಯಂತ ಸ್ಫೂರ್ತಿಯಿಂದ ಭಾಗವಹಿಸಿದರು. ದೀಪ, ಧ್ವನಿ ಮತ್ತು ರಂಗಸಜ್ಜಿಕೆ ಸಹ ಮೆಚ್ಚುವ ಮಟ್ಟದಲ್ಲಿತ್ತು.  ಕಣ್ಣು ಕಿವಿಗಳಿಗೆ ಹಬ್ಬವಾದಮೇಲೆ ಹೊಟ್ಟೆಗೂ ಒಳ್ಳೆಯ ಹಬ್ಬ ಕಾದಿತ್ತು, ಉತ್ತಮ ಭೋಜನದೊಂದಿಗೆ ಮೊದಲ ದಿನದ ಕಾರ್ಯಕ್ರಮ ಕೊನೆಗೊಂಡಿತು.

ಸಮ್ಮೇಳನದ ಎರಡನೆಯ ದಿನ

ಅನುವಾದ ಕಮ್ಮಟ:  ಈ ಬಾರಿಯ ಸಮ್ಮೇಳನದಲ್ಲಿ ಮೂಡಿಬಂದ  ಒಂದು ವಿಶಿಷ್ಟ ಕಾರ್ಯಕ್ರಮ ಅನುವಾದ ಕಮ್ಮಟ. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ಗುರುಪ್ರಸಾದ ಕಾಗಿನೆಲೆ. ಈ ಬಾರಿಯ ಕಾರ್ಯಕ್ರಮದ ಆಶಯವೇ ಅನುವಾದ ಸಾಹಿತ್ಯವಾದ್ದರಿಂದ ಈ ಕಮ್ಮಟ ಸಂದರ್ಭೋಚಿತವಾಗಿತ್ತು. ಮೊದಲಿಗೆ `ನನ್ನ ಮೆಚ್ಚಿನ ಅನುವಾದಿತ ಕಥೆ ‘ಎಂಬ ವಿಷಯವನ್ನು ಆಯ್ದುಕೊಂಡು ಟಿ. ಎನ್. ಕೃಷ್ಣರಾಜುರವರು ತೇಜಸ್ವಿಯವರ ’ಮಾಯಾಮೃಗ’ದ ಇಂಗ್ಲಿಷ್ ಅವತರಣಿಕೆ ( ಅನು: ರಾಘವೇಂದ್ರರಾವ್) ಬಗ್ಗೆ ಮಾತನಾಡಿದರು. ನಂತರ ನಾಗ ಐತಾಳರು ವರ್ಡ್ಸ್ವರ್ತ್‍ನ ’ಸಾಲಿಟರಿ ರೀಪರ್’ ನ ಕನ್ನಡಾನುವಾದ ’ಹೊಲದ ಹುಡುಗಿ’ (ಅನುವಾದ: ಕುವೆಂಪು) ಯ ಬಗ್ಗೆ ಮಾತನಾಡಿದರು. ತ್ರಿವೇಣಿ ಶ್ರೀನಿವಾಸರಾವ್ ಅವರು ಸಿಂಗರನ ಕಥೆ ’ಗಿಂಪೆಲ್ ದ ಫೂಲ್’ ಕನ್ನಡದ ಎರಡು ಅನುವಾದಗಳನ್ನು ಉದಾಹರಿಸಿ ಎರಡೂ ಅನುವಾದಗಳ ವಿಶಿಷ್ಟತೆಯನ್ನು ಗುರುತಿಸಿದರು. ನಂತರ ಮಾತಾಡಿದ ಶ್ರೀವತ್ಸ ಜೋಶಿಯವರ ವಿಷಯ ’ಅನುವಾದದ ಅಧ್ವಾನಗಳು’. ಮೂಲ ಕೃತಿಯ ಅರ್ಥ, ಆಶಯಗಳನ್ನು ಅರಿತುಕೊಳ್ಳದೇ ಇರುವುದು, ಉಚಿತ ಪದಗಳ ಆಯ್ಕೆ ಮಾಡದೇ ಇರುವುದು, ಎರಡೂ ಭಾಷೆಗಳ ವ್ಯಾಕರಣದ ಬಗ್ಗೆ ಮೂಲಭೂತ ಅರಿವಿಲ್ಲದಿರುವುದು ಇನ್ನೂ ಇತರೇ ಕಾರಣಗಳು ಎಂತೆಂತಹ ಅಧ್ವಾನಗಳಿಗೆ ಕಾರಣವಾಗಬಹುದು ಎಂದು ಶ್ರೀವತ್ಸ ಜೋಶಿಯವರು ಸೋದಾಹರಣವಾಗಿ ವಿವರಿಸಿದರು.

ಕಾರ್ಯಕ್ರಮದ ಮುಂದಿನ ಭಾಗದಲ್ಲಿ ಕವಿ ವಾಲ್ಟರ್ ಡಿಲಮೇರ್ ನ ಪದ್ಯ ’ಇಫ್ ಐ ವರ್ ದ ಲಾರ್ಡ್ ಆಫ್ ಟಾರ್ಟರಿ’ ವನ್ನು ಐದು ಜನ ಕವಿಗಳು ಕನ್ನಡಕ್ಕೆ ಅನುವಾದ ಮಾಡಿ ವಾಚಿಸಿದರು. ಎಮ್ ಎಸ್ ನಟರಾಜರ ಅನುವಾದದಲ್ಲಿ ಟಾರ್ಟರಿ ಎಂಬ ಪ್ರಾಂತ್ಯ ’ನನ್ನ ಕನಸಿನ ರಾಜ್ಯ’ ವಾದರೆ, ಪ್ರಕಾಶ ನಾಯಕರಿಗೆ ’ಅಖಂಡ ಭೂಮಂಡಲ’ವಾಯಿತು. ನಳಿನಿಯವರಿಗೆ ಅದನ್ನು  ’ಟಾರ್ಟರಿ’ಯಾಗಿಯೇ ಉಳಿಸಿಕೊಳ್ಳುವ ಆಸೆ. . ವೈಶಾಲಿ ಹೆಗಡೆಗೆ ಟಾರ್ಟರಿ ಸ್ವರ್ಗಪುರಿಯಾಯಿತು. ಮೀರಾ ರಾಜಗೋಪಾಲರವರಿಗೆ ’ಟಾರ್ಟರಿಯ ಲಾರ್ಡ್’ ಹತ್ತೂರ ಒಡೆಯನಾಗಿ ರೂಪಾಂತರಗೊಂಡಿದ್ದ. ನಟರಾಜರವರು  ರಾಗವಾಗಿ ಮಕ್ಕಳಿಗೆ ಕವನ ಕಲಿಸುವ ರೀತಿಯಲ್ಲಿ ತಮ್ಮ ಕವನವನ್ನು ಹಾಡಿದ್ದು, ಪ್ರಕಾಶ ನಾಯಕರ ಅನುವಾದದಲ್ಲಿ ಟಾರ್ಟರಿ ಎಂಬ ಇದ್ದಿರಬಹುದಾದ ಒಂದು ಸಣ್ಣ ಪ್ರಾಂತ್ಯದ ಪಾಳಯಗಾರನಂತ ನಾಯಕ ಅಖಂಡ ಭೂಮಂಡಲಕ್ಕೆ ಒಡೆಯನಾದುದು, ನಳಿನಿ ಮಯ್ಯರವರು ’ಕುಣಿದಾವು ನವಿಲುಗಳು, ಸುಳಿದಾವು ಹುಲಿಗಳು’ ಎಂದು ಭಾವಗೀತೆಯ ಆಪ್ತತೆಯನ್ನು ತಂದದ್ದು, ವೈಶಾಲಿಯವರು ’ಜಾಂಬಳಿ ಕಣಿವೆಯ ಜಂಬದ ಸಾಮ್ರಾಜ್ಯ’  ಎಂಬ ಸಾಲನ್ನು ಓದಿದ್ದು, ಮೀರಾರವರು ’ಎಲ್ಲಾನು ನಂದೇಯ, ಎಲ್ಲಾವೂ ನಮ್ದೇಯ’ ಎಂದು ಕವನವನ್ನು ಕನ್ನಡದ ಜನಪದ ಗೀತೆಯನ್ನಾಗಿ ರೂಪಾಂತರಗೊಳಿಸಿದ್ದು- ಅನುವಾದಕ್ಕಿರುವ ವಿವಿಧ ಆಯಾಮಗಳು ಮತ್ತು ಐದೂ ಬಗೆಯ ಅನುವಾದದ ಸಾಧ್ಯತೆಗಳನ್ನು ಸಾಕಾರಗೊಳಿಸುವ ನಮ್ಮ ಭಾಷೆಯ ಕಸುವು ಇಲ್ಲಿ ಪರಿಚಯವಾಯಿತು.

ಮುಂದಿನ ಭಾಗದಲ್ಲಿ ಎಸ್ ಎನ್ ಶ್ರೀಧರ್ ಮತ್ತು ನಾರಾಯಣ ಹೆಗಡೆಯವರು ಅನುವಾದದ ಸೂಕ್ಷ್ಮಗಳನ್ನು ತಮ್ಮದೇ ಅನುವಾದಗಳ ಪರಿಚಯ ಮಾಡಿಕೊಡುತ್ತಾ ವಿವರಿಸಿದರು. ನಾರಾಯಣ ಹೆಗಡೆಯವರು ಅನಂತಮೂರ್ತಿಯವರ ’ಸೂರ್ಯನ ಕುದುರೆ’ ಕಥಾ ಸಂಕಲನವನ್ನು ’ಸ್ಟ್ಯಾಲಿಯನ್ ಆಫ್ ದ ಸನ್’ ಎಂಬ ಹೆಸರಿನಲ್ಲಿ ಅನುವಾದ ಮಾಡಿದ್ದಾರಲ್ಲದೆ ಲಂಕೇಶ್, ತೇಜಸ್ವಿ, ಎ. ಕೆ, ರಾಮಾನುಜನ್ ಇನ್ನೂ ಇತರ ಕನ್ನಡದ ಸಾಹಿತಿಗಳ ಕತೆಗಳನ್ನು ಅಂಗ್ಲಭಾಷೆಗೆ ಮಾಡಿರುವ ಅನುವಾದಗಳು ಬಹಳ ಮಹತ್ವದ್ದಾಗಿವೆ.

ಶ್ರೀಧರ್ ರವರು ಅನುವಾದ ಕಮ್ಮಟದಲ್ಲಿ ತಮ್ಮ ಮಹತ್ವಾಕಾಂಕ್ಷಿ ಯೋಜನೆ ಕುಮಾರವ್ಯಾಸನ ’ಕರ್ನಾಟಕ ಕಥಾ ಮಂಜರಿ’ಯ ಇಂಗ್ಲಿಷ್ ಅನುವಾದಬಗ್ಗೆ ಮಾತನಾಡಿದರು. ಇದೊಂದು ಭಾರತ, ಅಮೆರಿಕ ಮತ್ತು ಜರ್ಮನಿ ದೇಶಗಳ ವಿದ್ವಾಂಸರ ಹಾಗೂ ಅನುವಾದಗಳನ್ನೊಳಗೊಂಡ ಜಾಗತಿಕ ಯೋಜನೆ. ಕುಮಾರವ್ಯಾಸನ ಭಾರತವು ಹೋಮರನ ’ಒಡಿಸ್ಸಿ’ ಯಂತೆ ಜಗತ್ತಿನ ಎಲ್ಲ ಓದುಗರಿಗೂ ಅದರ ಎಲ್ಲ ಕನ್ನಡ ಸೊಗಡಿನೊಂದಿಗೆ ಓದಲು ಸಿಗಬೇಕು ಎನ್ನುವುದು ಈ ತಂಡದ ಉದ್ದೇಶ. ಆ ಯೋಜನೆಯೆ ಬಗೆ ಸ್ಥೂಲವಾಗಿ ಮಾತಾಡಿದ ಶ್ರೀಧರ್ ರವರು ಅನುವಾದ ಕಮ್ಮಟದಲ್ಲಿ ಭಾಷಾಂತರಮಾಡಿದ ಐದೂ ಜನರ ಕವಿತೆಗಳ ವೈಶಿಷ್ಟ್ಯದ ಬಗ್ಗೆಯೂ ತಮ್ಮ ಅಭಿಪ್ರಾಯವನ್ನು ಕೊಟ್ಟರು.

ಒಟ್ಟಾರೆ ಒಂದೂವರೆಗಂಟೆ ನೆರೆದ ಸಭಿಕರ ಗಮನ, ಲಕ್ಷ್ಯವನ್ನು ಸೆಳೆಯಿತಲ್ಲದೇ ಮನರಂಜನೀಯವಾಗಿಯೂ ಇದ್ದದ್ದು ಈ ಕಾರ್ಯಕ್ರಮದ ಹೆಚ್ಚಳ.

ನಮ್ಮ ಬರಹಗಾರರು

‘ನಮ್ಮ ಬರಹಗಾರರು’  – ಇದು ಕನ್ನಡ ಸಾಹಿತ್ಯ ರಂಗವು ಪ್ರತಿವರ್ಷವೂ ಸಂಪ್ರದಾಯದಂತೆ ನಡೆಸಿಕೊಂಡು ಬಂದಿರುವ ಸಮ್ಮೇಳನದ ಒಂದು ಮುಖ್ಯ ಕಾರ್ಯಕ್ರಮ. ಅಮೆರಿಕದಲ್ಲಿ ಸಾಹಿತ್ಯವನ್ನು ಪಸರಿಸಬೇಕೆನ್ನುವ ಕನ್ನಡ ಸಾಹಿತ್ಯ ರಂಗದ ಉದ್ದೇಶಕ್ಕೆ ಪೂರಕವಾದ ಕಾರ್ಯಕ್ರಮವಿದು. ಈ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಬಿಡುಗಡೆಯಾದ ಪುಸ್ತಕ ಮತ್ತು ಅದರ ಲೇಖಕರನ್ನು ಕಿರಿದಾಗಿ ಪರಿಚಯಿಸಲಾಗುತ್ತದೆ.

ಈ ಬಾರಿಯೂ 2014-2015ರಲ್ಲಿ ಪ್ರಕಟವಾದ ಒಟ್ಟು ಹತ್ತು ಕೃತಿಗಳನ್ನು ಪರಿಚಯಿಸಲಾಯಿತು. ‘ಧ್ಯಾನಕ್ಕೆ ತಾರೀಖಿನ ಹಂಗಿಲ್ಲ’ (ಕಾವ್ಯಾ ಕಡಮೆ), ಸಿರಿಗನ್ನಡ ರಾಮಾಯಣ (ಎಂ.ಎಸ್.ನಟರಾಜ), ದೇವರ ರಜ (ಗುರುಪ್ರಸಾದ್ ಕಾಗಿನೆಲೆ), ಅಮೆರಿಕನ್ನಡಿಗ ಬರಹಗಾರರು-ಸಂಕ್ಷಿಪ್ರ ಮಾಹಿತಿಕೋಶ (ಸಂ: ನಾಗ ಐತಾಳ, ಜ್ಯೋತಿ ಮಹಾದೇವ), ಅಮೂರ್ತ ಚಿತ್ತ (ಪ್ರಕಾಶ್ ನಾಯಕ್), ಭಾವ ಸಿಂಚನ (ನಾಗಭೂಷಣ ಮೂಲ್ಕಿ), ಬೇಂದ್ರೆ ಅಂದ್ರೆ (ಸಂ: ನಾಗ ಐತಾಳ, ನಳಿನಿ ಮೈಯ),  My Gift and Other Stories  (ದಿ|ಅಶ್ವತ್ಥ ರಾವ್),  ಕುಕ್ಕೆ ಸುಬ್ರಹ್ಮಣ್ಯ ಶಾಸ್ತ್ರಿಗಳ ಜೀವನ ಚರಿತ್ರೆ (ಸಂ: ನಳಿನಿ ಮತ್ತು ಗೋಪಾಲ್ ಕುಕ್ಕೆ), ಸೃಷ್ಠಿ (ಎಚ್.ವೈ.ರಾಜಗೋಪಾಲ್)- ಇವು ಈ ಬಾರಿ ಪರಿಚಯಗೊಂಡ ಕೃತಿಗಳು.

ಲೇಖಕರ ಪುಸ್ತಕ ಪರಿಚಯ ನಡೆಯುತ್ತಿರುವಾಗ ಹಿಂದಿದ್ದ ತೆರೆಯ ಮೇಲೆ ಲೇಖಕರ ಚಿತ್ರದೊಂದಿಗೆ ಅವರ ಕಿರು ಪರಿಚಯವೂ ಪ್ರದರ್ಶನಗೊಳ್ಳುತ್ತಿದ್ದು ಸಭಿಕರಿಗೆ ಬರಹಗಾರರ ಬಗ್ಗೆ ಹೆಚ್ಚಿನ ಮಾಹಿತಿ ದೊರೆಯಲು ಸಹಾಯಕವಾಗಿತ್ತು. ಈ ಕಾರ್ಯಕ್ರಮವನ್ನು ನಡೆಸಿಕೊಟ್ಟವರು ತ್ರಿವೇಣಿ ಶ್ರೀನಿವಾಸರಾವ್ ಮತ್ತು ಮೀರಾ. ಪಿ.ಆರ್. ಈ ಕಾರ್ಯಕ್ರಮದ ನಂತರ ಸಭಾಂಗಣದ ಹೊರಗಿದ್ದ ಪುಸ್ತಕ ಮಳಿಗೆಯಲ್ಲಿ, ಪರಿಚಯಗೊಂಡ ಪುಸ್ತಕಗಳು ಬಿಸಿ ದೋಸೆಗಳಂತೆ ಮಾರಾಟವಾಗುತ್ತಿದ್ದುದು ಈ ಕಾರ್ಯಕ್ರಮದ ಸಾರ್ಥಕ್ಯವನ್ನು ಸೂಚಿಸುವಂತಿತ್ತು!

ಅತಿಥಿಗಳೊಂದಿಗೆ ಸಂವಾದ: 

ಕನ್ನಡ ಸಾಹಿತ್ಯರಂಗದ ಏಳನೆಯ ವಸಂತೋತ್ಸವ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾದ ಪ್ರಧಾನ ಗುರುದತ್ತ, ನಾರಾಯಣ ಹೆಗಡೆ ಮತ್ತು ಎಸ್.ಎನ್. ಶ್ರೀಧರ್ ಅವರೊಂದಿಗೆ ’ಸಂವಾದ’ ಕಾರ್ಯಕ್ರಮವನ್ನು ಇಟ್ಟುಕೊಂಡಿದ್ದೆವು. ಈ ಸಂವಾದವನ್ನು ನಡೆಸಿಕೊಟ್ಟವರು ಗುರುಪ್ರಸಾದ ಕಾಗಿನೆಲೆ ಮತ್ತು ಸುಮತಿ ಮುದ್ದೇನಹಳ್ಳಿ ಅವರು. ಅನುವಾದದ ಮೂಲಕೃತಿಯ ಆಯ್ಕೆ ಹೇಗೆ? ಅನುವಾದದಲ್ಲಿ ಮೂಲದ ಸೊಗಡನ್ನು ಎಷ್ಟರಮಟ್ಟಿಗೆ ಉಳಿಸಿಕೊಳ್ಳಲು ಸಾಧ್ಯ? ಕವನದ ಅನುವಾದ ಸಾಧ್ಯವೇ? ಕವನದಲ್ಲಿ ಚಿಹ್ನೆಗಳನ್ನು ಉಳಿಸಿಕೊಳ್ಳಬೇಕೆ? ಸಾಂಸ್ಕೃತಿಕ ಅನುವಾದದ ಸಾಧ್ಯತೆಗಳು-ಇತರೆ ಸೂಕ್ಷ್ಮಗಳನ್ನು ಚರ್ಚಿಸಲಾಯಿತು. ಸಭೆಯಲ್ಲಿ ಸೇರಿದ್ದ ಸಭಿಕರೆಲ್ಲರೂ ಬಹಳ ಉತ್ಸಾಹದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಮಾಡಿಕೊಟ್ಟರು

ಮಕ್ಕಳ ಕಾರ್ಯಕ್ರಮ:  ರಂಗ ಆಚರಿಸುವ ಪ್ರತಿ ಸಮ್ಮೇಳನದಲ್ಲೂ ಕೊನೆಯ ಕಾರ್ಯಕ್ರಮ ಮಕ್ಕಳದ್ದೇ ಆಗಿರಬೇಕೆಂಬ ಒಂದು ಅಲಿಖಿತ ನಿಯಮವನ್ನು ಪಾಲಿಸುತ್ತಾ ಬಂದಿದ್ದೇವೆ. ಅಮೆರಿಕದಲ್ಲಿ ಈಗ ಕನ್ನಡ ಕಲಿಯುತ್ತಿರುವವರ ಮಕ್ಕಳ ಸಂಖ್ಯೆ ವರ್ಷೇವರ್ಷೇ ಏರುತ್ತಿದೆ. ಮಧ್ಯಪಶ್ಚಿಮ ವಲಯದ ಹಲವು ಕನ್ನಡಕೂಟದ ಮಕ್ಕಳು ಉತ್ಸಾಹದಿಂದ ಬಂದು ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದು ತಂದೆತಾಯಿಗಳಿಗೇ ಅಲ್ಲದೇ ಎಲ್ಲ ಸಭಾಸದರಿಗೂ ಸಂತಸತರುವಂತಿತ್ತು.  ಅದರಲ್ಲೂ ಚಿಕಾಗೋ ನಗರದ ಪೋರನೊಬ್ಬ ಏಕಲವ್ಯನಾಗಿ ಮಾಡಿದ ಏಕಪಾತ್ರಾಭಿನಯ, ಅವನ ನಿರರ್ಗಳ ಶುದ್ಧ ಕನ್ನಡವನ್ನು ಕೇಳಿದವರಿಗೆ ಮೈನವಿರೇಳಿದ್ದರಲ್ಲಿ ಅಚ್ಚರಿಯೆನಿಲ್ಲ. ಕಾರ್ಯಕ್ರಮದಲ್ಲಿ ಭಾಗವಹಿಸಿದ ಚಿಣ್ಣರಿಗೆಲ್ಲ ಸೂಕ್ತ ಬಹುಮಾನಗಳು ಮತ್ತು ಅದೇ ತಾನೆ ಲೋಕಾರ್ಪಣೆಯಾದ “ಚಿಲಿ-ಪಿಲಿ, ಕನ್ನಡ ಕಲಿ” ಧ್ವನಿ ಸಂಪುಟ ಸಹ ವಿತರಣೆಯಾಯಿತು.

ಸಮ್ಮೇಳನದ ಯಶಸ್ಸಿಗೆ ಕಾರಣವಾದ ಸ್ವಯಂ ಸೇವಕ ತಂಡ

ಕೊನೆಯದಾಗಿ ಆದರೆ ಅತಿ ಮುಖ್ಯವಾಗಿ, ಸುಮಾರು ಒಂದು ವರ್ಷದಿಂದಲೂ ರೂಪುಗೊಳ್ಳುತ್ತಲಿದ್ದ ಈ ಸಾಹಿತ್ಯೋತ್ಸವವನ್ನು ಎರಡು ದಿನಗಳ ಕಾಲ ಕಾರ್ಯರೂಪಕ್ಕಿಳಿಸಲು ದುಡಿದ ಸಂಗಮದ ಹಾಗು ಕನ್ನಡ ಸಾಹಿತ್ಯ ರಂಗದ ಸ್ವಯಂಸೇವಕರನ್ನು ಸಭೆಗೆ ಪರಿಚಯಿಸಲಾಯಿತು. ಇಂಥ ಒಂದು ಸಮ್ಮೇಳನವನ್ನು ನಡೆಸುವುದು ಸುಲಭದ ಮಾತಲ್ಲ, ಇದಕ್ಕೆ ಹಣ ಅದನ್ನು ಕೊಡುವ ಉದಾರ ದಾನಿಗಳು, ತೆರೆಯ ಹಿಂದಿದ್ದು ಮುಂದೆ ಬರುವ ಪ್ರತಿಯೊಂದು ಹೆಜ್ಜೆಯ ವಿವರಗಳನ್ನೂ ಮುಂದಾಲೋಚಿಸಿ ಕಾರ್ಯಕ್ರಮಗಳನ್ನು ಯೋಜಿಸುವ ಸಂಚಾಲಕರಿರಬೇಕು. ಸಾಹಿತ್ಯ ರಂಗದ ಸದಸ್ಯರು ದೇಶದ ವಿವಿಧ ಮೂಲೆಗಳಲ್ಲಿ ಹಂಚಿಹೋಗಿರುವುದರಿಂದ ಅವರ ಆಶಯಗಳನ್ನು ಕಾರ್ಯರೂಪಕ್ಕಿಳಿಸುವ ರೂವಾರಿಗಳಿರಬೇಕು. ಸಂಗಮದ ೨೦೧೪ ರ ಅಧ್ಯಕ್ಷೆ ಜ್ಯೋತಿ ಅನಂತ್ ಮತ್ತು ೨೦೧೫ರ ಅಧ್ಯಕ್ಷೆ ಶುಭಾ ಭಾಸ್ಕರ್ ಮತ್ತು ಅವರ ಕುಟುಂಬದವರಿಗೆ ಸಾಹಿತ್ಯ ರಂಗದ ಮನಃಪೂರ್ವಕ ನಮನಗಳು. ಅವರ ಹಿಂದೆ ನಿಂತು ಸಹಕರಿಸಿದವರ ಹೆಸರುಗಳನ್ನು ಪಟ್ಟಿಮಾಡಿದರೆ ತುಂಬಾ ಉದ್ದವಾಗುತ್ತದೆ, ಆದರೆ ಅವರೆಲ್ಲರೂ ನಮ್ಮ ಮನಸ್ಸಿನಲ್ಲಿ ಸದಾ ಇರುತ್ತಾರೆ ಮತ್ತು ನಮ್ಮ ಮೆಚ್ಚುಗೆಗೆ ಪಾತ್ರರಾಗುತ್ತಾರೆ. ಕಸಾರಂ ನಡೆಸುವ ಕಾರ್ಯಕ್ರಮಗಳು ಕಾಲಕ್ಕೆ ಸರಿಯಾಗಿ ಪ್ರಾರಂಭವಾಗಿ ಶಿಸ್ತಿನಿಂದ ನಡೆಯುತ್ತವೆ.  ಈ ಬಾರಿ ಸಮಯಪಾಲನೆಯ ನಿರ್ವಹಣೆ ಶ್ರೀವತ್ಸ ಜೋಶಿ ಮತ್ತು ಭಾಸ್ಕರ ಸುಬ್ಬರಾವ್ ಅವರ ನೇತೃತ್ವದಲ್ಲಿ ಅತ್ಯಂತ ಸಮರ್ಪಕವಾಗಿ ನಡೆಯಿತು.

ಸಭಾಸದರೆಲ್ಲರೂ ಚಿಕಾಗೋ ಕನ್ನಡ ಕೂಟದ ಹಾಡುಗಾರರ ನಾಯಕತ್ವದಲ್ಲಿ ನಾಡಗೀತೆಯನ್ನು ಹಾಡುವುದರ ಮೂಲಕ ಏಳನೆಯ ಕನ್ನಡ ಸಾಹಿತ್ಯೋತ್ಸವಕ್ಕೆ ಮಂಗಳ ಹಾಡಲಾಯಿತು. ಎಂಟನೆಯ ಉತ್ಸವಕ್ಕೆ ಇನ್ನೂ ಎರಡು ವರ್ಷ ಕಾಯಬೇಕು!

 

__________________________________

 Posted by at 10:19 PM