Mar 232015
 

೨೦೧೩ರ ಮೇ ೧೮ ಮತ್ತು ೧೯ರಂದು ನಾನು ಹ್ಯೂಸ್ಟನ್’ನ ಕನ್ನಡದ ಸಾಹಿತ್ಯಾಭಿಮಾನಿಗಳ ಜತೆಯಲ್ಲಿ ಕಳೆದ ಕ್ಷಣಗಳು ಕರ್ನಾಟಕಕ್ಕಿಂತ ಒಂದು ಭಿನ್ನವಾದ, ಆದರೆ ಕನ್ನಡದ ವರ್ತಮಾನ ಮತ್ತು ಭವಿಷ್ಯದ ಗತಿಯನ್ನು ತಿಳಿದುಕೊಳ್ಳುವ ದೃಷ್ಟಿಯಿಂದ ತೀರಾ ಉಪಯುಕ್ತವಾದ ಕ್ಷಣಗಳಾಗಿ ಇಂದಿಗೂ ಉಳಿದಿರುವುದನ್ನು ನೆನಪಿಸಿಕೊಳ್ಳುತ್ತಿದ್ದೇನೆ. ಅಂದಿನ ಕನ್ನಡ ಸಾಹಿತ್ಯ ರಂಗದ ಎಲ್ಲರಿಗೆ ಮತ್ತು ನನ್ನನ್ನು ಅಲ್ಲಿಗೆ ಕರೆಸಿಕೊಳ್ಳಲು ಕಾರಣರಾದ ಮಿತ್ರ ಡಾ. ಎಚ್.ವೈ. ರಾಜಗೋಪಾಲ ಹಾಗೂ ನ್ಯೂ ಜರ್ಸಿಯ ಇತರ ಸ್ನೇಹಿತರಿಗೆ ನಾನು ಕೃತಜ್ಞನಾಗಿರಲೇ ಬೇಕು. ಕರ್ನಾಟಕದಲ್ಲಿ ಪ್ರತಿವರ್ಷ ನಡೆಯುವ ಸಾಹಿತ್ಯ ಸಮ್ಮೇಳನಗಳಿಗಿಂತ ತೀರ ಭಿನ್ನವಾದ, ಹೆಚ್ಚು ಪರಿಶುದ್ಧವಾದ ಕನ್ನಡ ಮನಸ್ಸುಗಳು ತಮ್ಮ ಭಿನ್ನತೆಗಳನ್ನೆಲ್ಲಾ ಬದಿಗಿಟ್ಟು ಕನ್ನಡ ಬಂಧುಗಳ ಹೃದಯಗಳು ಒಂದುಗೂಡಿ, ಒಂದೇ ಕುಟುಂಬವಾಗಿ ಆನಂದಿಸುವ ಕ್ಷಣಗಳನ್ನು ನಾನಲ್ಲಿ ಕಂಡುಕೊಂಡೆ.
ಕರ್ನಾಟಕದ ಸಮ್ಮೇಳನಗಳಲ್ಲಿ ಅಧ್ಯಕ್ಷರ ಆಯ್ಕೆಯಲ್ಲೇ ಆರಂಭವಾಗುವ “ಸಾಮಾಜಿಕ ನ್ಯಾಯ”ದ ಹೆಸರಿನಲ್ಲಿ ಎದ್ದುಕಾಣುವ ಜಾತಿ, ಲಿಂಗ- ಇತ್ಯಾದಿಗಳ ವಾದಗಳ ಸುಳಿವು ಅಮೆರಿಕದ ನೆಲದಲ್ಲಿ ನಮ್ಮ ಕನ್ನಡದ ಸೋದರ ಸೋದರಿಯರಲ್ಲಿ ನಾನು ಕಾಣದೇ ಇದ್ದದ್ದೇ ನಾನು ಅಲ್ಲಿಯ ಸಾಹಿತ್ಯೋತ್ಸವವನ್ನು ಮೆಚ್ಚಲು ಕಾರಣ. ಒಬ್ಬ ಸಮಾಜ ಶಾಸ್ತ್ರಜ್ಞನಾಗಿ ನಾನು ಇಂದಿನವರೆಗೆ ಅತ್ಯಂತ ಜಾಗ್ರತೆಯಿಂದ ಇಂದಿನ ಸಾಹಿತಿಗಳ “ಒಲವು”ಗಳೆನ್ನುವ ತುರಿಕೆಗಿಡಗಳಿಂದದೂರವೇ ಉಳಿದುಕೊಂಡು ಬಂದವನು. ಕಳೆದ ನಾಲ್ಕೈದು ದಶಕಗಳಲ್ಲಿ ನಾನು ನಿಕಟವಾಗಿದ್ದ ಸಾಹಿತಿಗಳೆಂದರೆ, ಗೋಪಾಲಕೃಷ್ಣ ಅಡಿಗರು, ಶಿವರಾಮ ಕಾರಂತರು ಮತ್ತು ಈಚಿನ ತನಕ ಅನಂತಮೂರ್ತಿಯವರು. ಅನಂತಮೂರ್ತಿಯವರ ಅತ್ಯಂತ ನಿಕಟವರ್ತಿಯಾಗಿದ್ದರೂ ಅವರ ‘ಒಲವು’ಗಳಿಗೆ ಪೂರ್ತಿ ಮತಾಂತರವಾಗದೆ, ಆದರೂ ಅತ್ಯಂತ ಆತ್ಮೀಯತೆಯಿಂದ ಇದ್ದವನು. ಹಾಗೆಯೇ ಡಿ.ಆರ್. ನಾಗರಾಜ ನನ್ನ ಮತ್ತೊಬ್ಬ ಸಂವಾದಿ ಗೆಳೆಯ. ಪರಸ್ಪರ ಮೆಚ್ಚಿಕೊಂಡೂ ನಮ್ಮತನವನ್ನು ಇಬ್ಬರೂ ಕಾಯ್ದುಕೊಂಡವರು. ಇವರೆಲ್ಲರೂ ಇಂದಿಗೆ ನನ್ನ ಪಾಲಿಗೆ ಇತಿಹಾಸ.
ನಾನು ಭಾಗವಹಿಸಿದ ಸಾಹಿತ್ಯ ಸಮ್ಮೇಳನಗಳೂ ೪೦-೫೦ ವರ್ಷಗಳ ಹಿಂದೆ ಎರಡು, ಕಳೆದ ದಶಕದಲ್ಲಿ ಎರಡು. ೧೯೫೦ರ ದಶಕದ ಬೀದರಿನ ಸಮ್ಮೇಳನ ಡಿ.ಎಲ್. ನರಸಿಂಹಾಚಾರ್ ಅವರ ಅಧ್ಯಕ್ಷತೆಯಲ್ಲಿ; ವಿದ್ಯಾರ್ಥಿಯಾಗಿ ಪ್ರಾಧ್ಯಾಪಕ ಭೀಮಸೇನರಾಯರ ಜತೆಯಲ್ಲಿ ಭಾಗವಹಿಸಿದ್ದೆ. ಮಾಸ್ತಿಯವರ, ‘ಚೆನ್ನಬಸವನಾಯಕ’ನ ಬಗೆಗಿನ ಅಂದಿನ ಪ್ರಧಾನ ವಸ್ತು ಮಾತ್ರ ಇಂದಿಗೂ ನೆನಪಿನಲ್ಲಿ ಉಳಿದದ್ದು. ಬಳ್ಳಾರಿಯಲ್ಲಿ ನಡೆದ ಸಮ್ಮೇಳನದಲ್ಲಿ ಗೋಕಾಕರು ಅಧ್ಯಕ್ಷರು. ಈ ಸಮ್ಮೇಳನದಲ್ಲಿ ಗೋಕಾಕರು ಪದೇ ಪದೇ “ಮಾನವನಾಗಬೇಕು”- ಎಂದು ಹೇಳುತ್ತಿದ್ದದ್ದು ಮತ್ತು ಇದರ ಬಗ್ಗೆ ಮುಂದಕ್ಕೆ “ಬೀಚಿ”ಯವರ ವಿಶ್ಲೇಷಣೆ ನೆನಪಿವೆ. ಗೋಕಾಕರು ವೇದಿಕೆಯಲ್ಲಿ ಭಾಷಣಮಾಡುವಾಗ ಮುಂದೆ ಕುಳಿತಿದ್ದ ಬೀಚಿಯವರಿಗೆ ಕುತೂಹಲ! ‘ಇವರೇKSR_WEB-324ಕೆ ಪದೇ ಪದೇ ಮಾನವನಾಗಬೇಕೆನ್ನುತ್ತಾರೆ? ನಾವು ಮುಂದೆ ಕುಳಿತವರು ಮಾನವರಲ್ಲವೆ?’ ಕೊನೆಗೂ ಬೀಚಿಯವರ ಕಣ್ಣಿಗೆ ಬಿದ್ದದ್ದು ವೇದಿಕೆಯಲ್ಲೇ ಗೋಕಾಕರ ಎಡ ಮತ್ತು ಬಲದಲ್ಲಿ ಕುಳಿತವರು: ‘ಕೋಣದ ಚೆನ್ನಬಸಪ್ಪ’ ಮತ್ತು ‘ವೃಷಭೇಂದ್ರ ಸ್ವಾಮಿ’ಯವರು! ಬೀಚಿಗೆ ಇದೀಗ ಅರ್ಥವಾಯಿತಂತೆ ಮಾನವನಾಗಬೇಕಾದ ಅಗತ್ಯ!
ಒಂದು ಸಮ್ಮೇಳನವು ದೀರ್ಘಕಾಲಾನಂತರ ನಮ್ಮ ನೆನಪಿನಲ್ಲಿ ಉಳಿಯುವುದು ಇಂತಹ ಎದ್ದುಕಾಣುವ ಘಟನೆಗಳಾಗಿ. ಈಚಿನ ಮೂಡಬಿದರೆಯ ಮತ್ತು ಉಡುಪಿಯ ಸಮ್ಮೇಳನಗಳು ನನಗಂತೂ ಉತ್ತಮವಾಗಿ ವ್ಯವಸ್ಥಿತವಾಗಿ ಏರ್ಪಡಿಸಿದ ಜಾತ್ರೆಗಳಾಗಿ ನೆನಪಿಗೆ ಬರುತ್ತವೆ. ಅಧ್ಯಕ್ಷರಿಂದ ಹಿಡಿದು ಉಳಿದೆಲ್ಲರ ಮಾತುಗಳಲ್ಲಿ ಯಾವುವೂ ಗಮನಾರ್ಹವಾದವುಗಳಾಗಿ ನೆನಪಿಗೆ ಬರುತ್ತಿಲ್ಲ. ಸಾಹಿತಿಗಳ ಬೇರೆ ಬೇರೆ ಬಣಗಳು ವಿಶಾಲ ಬಯಲಿನಲ್ಲಿ ತಿರುಗಾಡುತ್ತಿದ್ದ ಚಿತ್ರಣವಷ್ಟೇ ಇಂದಿನ ನನ್ನ ನೆನಪು.
ಹ್ಯೂಸ್ಟನ್’ನಲ್ಲಿ ನೆರೆದವರು ಸಾವಿರಗಟ್ಟಲೆಯೂ ಅಲ್ಲ. ಕೇವಲ ಇನ್ನೂರರ ಆಚೆ ಈಚೆ ಇರಬಹುದು. ಆದರೆ ನೆರೆದವರ ನಡುವೆ ಒಂದು ಹೃದಯಗಳ ಬೆಸುಗೆಯ ಪರಿಸರ. ಪ್ರತ್ಯೇಕಿಸಬಹುದಾದ ಒಲವುಗಳ ಸೆಳೆತಗಳಿರಲಿಲ್ಲ. ನಾವೆಲ್ಲ ಕನ್ನಡದವರು- ಎಂದು ಒಂದೇ ಕುಟುಂಬವಾಗಿಸುವ ಭಾವಬಂಧನ. ತೀರ ಇಳಿವಯಸ್ಸಿನಲ್ಲೂ ಯೌವನದ ಹುರುಪಿನಲ್ಲಿ ಸಪತ್ನೀಕ/ಸಪತೀಕವಾಗಿ ಬಂದವರು! ಪರಸ್ಪರ ಪರಿಚಯಿಸಿಕೊಳ್ಳುವ, ಹತ್ತಿರ ಕುಳಿತು ತಿಂಡಿ ಊಟಗಳನ್ನು ಸವಿಯುವ ಸಂಭ್ರಮದ ವಾತಾವರಣ. ಅತ್ಯಂತ ಆತ್ಮೀಯ “homogeneous community”ಯ ಪರಿಸರ. “Ethnic bond” ಎದ್ದು ಕಾಣುತ್ತಿತ್ತು. ನನಗನ್ನಿಸುತ್ತಿತ್ತು- ಕನ್ನಡವನ್ನು ಉಳಿಸುವುದು ಸಾಹಿತಿಗಳ ಸಿದ್ಧಾಂತಗಳ ಮತ್ತು ವಿಮರ್ಶೆಗಳ ತಾಕಲಾಟದಿಂದಲ್ಲ. ಇಲ್ಲಿರುವಂತಹ ಹೃದಯಗಳ ಬೆಸುಗೆಯಿಂದ, ತಮ್ಮನ್ನು ಮತ್ತೆ ಮತ್ತೆ ಅರಿತುಕೊಳ್ಳುವುದರಿಂದ, ಒಟ್ಟಾಗುವುದರಿಂದ. ಒಡೆಯುವ ಮಾತುಗಳಿಂದಲ್ಲ- ಎನ್ನುವುದು. ಕನ್ನಡ ಮಾತನಾಡುವುದು ಒಂದೇ ಸಾಕು- ಕನ್ನಡ ಕಾಲವಾಹಿನಿಯಲ್ಲಿ ಭವಿಷ್ಯವನ್ನು ಕಂಡುಕೊಳ್ಳಲು. ಸಾಹಿತ್ಯವಲ್ಲ. ಜಗತ್ತಿನಲ್ಲಿ ಭಾಷೆಗಳು ಉಳಿದುಬಂದದ್ದು ಮಾತನಾಡುವುದರಿಂದ, ಲಿಖಿತ ಗ್ರಂಥಗಳಿಂದಲ್ಲ, ಲಿಪಿಯಿಂದಲೂ ಅಲ್ಲವೆನ್ನುವ ಅಂಶ ಸಾಹಿತಿಗಳಿಗೂ ತಿಳಿದರೆ, ಅವರಲ್ಲಿ ವಿನಯವು ಮೂಡೀತು. ಸಾಹಿತಿಯು ಬರೆಯುವಾಗ ಅದು ತನ್ನನ್ನು ತಿಳಿದುಕೊಳ್ಳಲು, ತನ್ನ ತೃಪ್ತಿಗಾಗಿ- ಎಂದಾಗ ಅದು ಸ್ವಾಗತಾರ್ಹ ಕೊಡುಗೆಯಾಗುತ್ತದೆ. ಇದನ್ನು ಬಿಟ್ಟು ಸಮಾಜವನ್ನು ತಿದ್ದಲು- ಎಂದಾಗ ಅದು ಅಹಂಕಾರದ ಪ್ರದರ್ಶನವಾಗುತ್ತದೆ.
ಹ್ಯೂಸ್ಟನ್ನಿನ ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಲ್ಲದೆ ಅನೇಕ ಇತರರೂ ವೇದಿಕೆಯಲ್ಲಿ ಭಾಗವಹಿಸಿದ್ದಾರೆ, ತಮ್ಮ ಕೃತಿಗಳನ್ನು ಓದಿದ್ದಾರೆ, ಚರ್ಚೆಯಲ್ಲಿ ಪಾಲ್ಗೊಂಡಿದ್ದಾರೆ. ಆದರೆ ಎಲ್ಲರಲ್ಲೂ ನಾನು ಕಂಡದ್ದು ಪ್ರದರ್ಶನದ ಬದಲು ತನ್ನನ್ನು ಇತರರ ಮುಂದೆ ತೆರೆದುಕೊಳ್ಳುವ ಹಂಬಲ. ಇತರರ ಪ್ರತಿಕ್ರಿಯೆಯು ಪ್ರತಿಬಿಂಬದ ರೂಪವಾಗಿ ಅದರಲ್ಲಿ ತನ್ನ ಬಿಂಬವನ್ನು ಅರಿತುಕೊಳ್ಳುವ ಆಸಕ್ತಿ. ಮಕ್ಕಳ ನೃತ್ಯ, ವಿದುಷಿಯರ ಹಾಡುಗಾರಿಕೆ- ಎಲ್ಲವನ್ನೂ ಸೇರಿಸಿಕೊಂಡು.
ಇನ್ನು ಸಮ್ಮೇಳನದ ವೈಚಾರಿಕ ನೆಲೆಯಲ್ಲಿ ನನ್ನನ್ನು ಆಕರ್ಷಿಸಿದ್ದು, ಅಲ್ಲಿಯ ಅನೇಕ ಲೇಖಕರು ಬಿಡುಗಡೆಗೊಳಿಸಿದ ಅನೇಕ ಹೊತ್ತಗೆಗಳು. ಪ್ರತಿಯೊಂದೂ ನಮ್ಮ ಸಾಹಿತ್ಯ ಸಮ್ಮೇಳನದಲ್ಲಿ ಹೊರತರುವ ಯಾರೂ ಓದಲು ಉಪಯುಕ್ತವಾಗದ ಒಂದು ಗುಂಪಿನವರ ಬರಹಗಳಿಗಿಂತ ಭಿನ್ನವಾದವುಗಳು. ಮೈ.ಶ್ರೀ. ನಟರಾಜರಂಥವರು ಕನ್ನಡದ ಉತ್ಕೃಷ್ಟ ಸಾಹಿತಿಗಳ ಸಾಲಿಗೆ ಸೇರಬೇಕಾದವರು. ನಮ್ಮ ಹೆಮ್ಮೆಯ ಆಂಗ್ಲ ಸಾಹಿತಿ ದಿ. ರಾಜಾರಾಯರ ಕೃತಿಯ ಕನ್ನಡ ಅನುವಾದ- ‘ನಾರೀಗೀತ’-ದ ರೂವಾರಿಯಾಗಿದ್ದವರು. ಇವರೆಲ್ಲರ ಬರಹಗಳ ಜತೆಗೆ ಸಮ್ಮೇಳನದ ನೆನಪಿಗಾಗಿ ಹೊರತಂದ ಒಂದು ಉತ್ತಮ ಸಂಕಲನ “ಬೇರು ಸೂರು” ಸಮ್ಮೇಳನದ ಪ್ರಾಂಜಲ ಕಲಶದಂತಿತ್ತು.
ಗುರುಪ್ರಸಾದ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್ ಮತ್ತು ಅಮೆರಿಕದಿಂದ ಇತ್ತೀಚೆಗೆ ಉಡುಪಿಗೆ ಮರಳಿ ಇಲ್ಲೇ ನೆಲೆಸಿರುವ ಜ್ಯೋತಿ ಮಹಾದೇವ್- ಇವರ ಸಂಪಾದನದಲ್ಲಿ ಹೊರತಂದ, ಅಮೆರಿಕದಲ್ಲಿ ನೆಲೆಸಿರುವ ಅನೇಕ ಬರಹಗಾರರ ಬರಹಗಳ ಸಂಕಲನ. ಕೃತಿಯ ಹೆಸರೇ ಸಂಕೇತಿಸುವಂತೆ ಈ ಎಲ್ಲ ಬರಹಗಾರರ ಬೇರು ಮತ್ತು ಸೂರಿನ ಕಥೆ-ವ್ಯಥೆಗಳನ್ನು ಅವರ ಲೇಖನಗಳಲ್ಲಿ ಗುರುತಿಸಬಹುದು. ಕರ್ನಾಟಕದ ಬೇರು ಕಿತ್ತುಕೊಳ್ಳದೆ, ಅಮೆರಿಕದಲ್ಲಿ ಸೂರು ಕಟ್ಟಿಕೊಂಡು, ಅಲ್ಲೇ ಬದುಕುತ್ತಿರುವ, ಬದುಕಬೇಕಾಗಿರುವ ಜೀವನವನ್ನು ಈ ಕೃತಿಯ ಮೂಲಕ ಕರ್ನಾಟಕದಲ್ಲೇ ಬದುಕುತ್ತಿರುವ ಕನ್ನಡಿಗರು ತಿಳಿಯಲು ಇದೊಂದು ಉತ್ತಮ ಸಾಧನ. ಸುಮಾರು ೫೦೦ ಪುಟಗಳಷ್ಟು ದೊಡ್ಡ ಗಾತ್ರದ ಈ ಗ್ರಂಥ “Indian Diaspora” ಪ್ರಕ್ರಿಯೆಯಲ್ಲಿ ಪ್ರಸಕ್ತ ದಶಕಗಳಲ್ಲಿ ಸೇರಿಕೊಂಡ ಕನ್ನಡಿಗರ ‘ಜೀವನ ದರ್ಶನ’ವನ್ನಿದು ತೆರೆದಿಡುತ್ತದೆ. ೩೮ ಲೇಖಕರಿಂದ ಬೇರೆ ಬೇರೆ ವಿಷಯಗಳ ಮೇಲೆ ಬರಹಗಳನ್ನು ಸಂಗ್ರಹಿಸಿ ಹೊರತಂದ ಈ ಗ್ರಂಥ ಒಂದು ಗಮನಾರ್ಹ ಕೊಡುಗೆ.
ಈ “ಡಯಾಸ್ಪೋರ” ಪ್ರಕ್ರಿಯೆ ಇಂದಿಗೆ ನಮ್ಮ ಪ್ರತಿಯೊಂದು ಮನೆಯನ್ನೂ ಪ್ರವೇಶಿಸಿದೆ. ಹೀಗಿರುವಾಗ ನಾವಿಂದು ತೀರಾ ಅಪ್ರಸ್ತುತವಾದ ಎಡ-ಬಲದ ವಾದ, ಹಿಂದುಳಿದವರು, ‘ಕಾರ್ಪೊರೇಟ್’, ‘ಮನುವಾದಿ’, ‘ಶೂದ್ರ-ಬ್ರಾಹ್ಮಣ’, ಇತ್ಯಾದಿ ಅರ್ಥ ಕಳೆದುಕೊಂಡ ಶಬ್ದಗಳಿಂದ ಬರಹಗಳನ್ನು ಮುಂದುವರಿಸುವುದು ಈ ಡಯಾಸ್ಪೋರ ಪ್ರಕ್ರಿಯೆಯಲ್ಲಿ ನಮ್ಮಿಂದ ‘alien’ ಆಗುತ್ತಿರುವ ನಮ್ಮ ಮಕ್ಕಳಿಗೇ ಬೇಡವಾದ ಸರಕುಗಳಾಗುತ್ತವೆ ಎನ್ನುವುದನ್ನು ಗಮನಿಸುವ ಅಗತ್ಯವಿದೆ. ಜಾನ್ ಕೆನಡಿಯ ಕೆಳಗೆ ಕಾರ್ಯದರ್ಶಿಯಾಗಿದ್ದ ಖ್ಯಾತ ಇತಿಹಾಸಕಾರ ಸ್ಲೆಶಿಂಜರ್ (Schlesinger)ನ ಮಾತು ನೆನಪಾಗುತ್ತದೆ. ನಾವಿಂದು ಚಿಂತಿಸುವಾಗ, ಬರೆಯುವಾಗ ‘scavengers of the past’ ಆಗುವ ಬದಲು ‘Architects of the future’ ಆಗಬೇಕು. ಹಿಂದಿನ ಅಶೌಚವನ್ನು ನಾವು ಶುದ್ಧೀಕರಿಸಬೇಕಾಗಿಲ್ಲ. ಭೂಮಿಯೇ ಅದನ್ನು ಮಣ್ಣಾಗಿಸಿದ್ದಾಳೆ. ನಮ್ಮ ಮುಂದಿನ ಪೀಳಿಗೆಗೆ ಅವರ ಭವಿಷ್ಯದ ಕನಸುಗಳ ಶಿಲ್ಪಿಗಳಾಗಬೇಕು- ನಮ್ಮ ಬರಹಗಳಲ್ಲಿ.
‘ಬೇರು ಸೂರು’ ಗ್ರಂಥದಲ್ಲಿ ಅನೇಕ ಕತೆಗಳಿವೆ, ವೈಚಾರಿಕ ಲೇಖನಗಳಿವೆ: ಕಾರ್ಪೊರೇಟ್ ಜಗತ್ತಿನಲ್ಲಿ ದುಡಿಯುವಾಗ ಗಳಿಸಿದ ಜ್ಞಾನ ಅನುಭವಗಳ ಚಿತ್ರಣವಿದೆ- ದೇವಾಲಯಗಳ ಪರಿಚಯವಿದೆ- ರಂಗಭೂಮಿಯ ಅನುಭವ ಕಥನವಿದೆ- ಒಟ್ಟು ಅಮೆರಿಕದಲ್ಲಿರುವ ಕನ್ನಡಿಗರ ಇಂದಿನ ಜೀವನದ, ಬಹುಮುಖಿಯಾದ ಪರಿಚಯವನ್ನು ಮಾಡಿಕೊಡುವ ವಿವಿಧ ಬರಹಗಳ ಜೇನುಗೂಡು ಈ ಬೇರು ಸೂರು. ನಮ್ಮವರು ಅಲ್ಲಿ ಕಟ್ಟಿಕೊಂಡು ಬಾಳುತ್ತಿರುವ ಸೂರಿನೊಳಗೆ ಹೊಕ್ಕು ಬರೋಣವೆಂದನ್ನಿಸುವಷ್ಟು ಗಮನಿಸಲೇಬೇಕಾದ ತೀರ ಉಪಯುಕ್ತವಾದ ಮಾಹಿತಿಕೋಶ ಇದಾಗಿದೆಯೆಂದು ನಾನಿದರ ಆದ್ಯಂತ ಕಣ್ಣಾಡಿಸಿದಾಗ ಅನ್ನಿಸಿತು. ನಾನು ಓದುವುದರಲ್ಲಿ ಬಹಳ ಹಿಂದೆ. ಆದರೆ ಇದರ ಪ್ರತಿಯೊಂದು ಲೇಖನವೂ ಓದಿಸಿಕೊಂಡು ಹೋಗಿದೆ. ಶ್ರೀಕಾಂತ ಬಾಬುರವರ ನೀಲಿ ಡಬ್ಬಿಯ ಶ್ರೀಖಂಡವು ನನ್ನ ನಿದ್ದೆಯನ್ನು ಕೆಡಿಸಿದ ಕಥೆ- ಅಮೆರಿಕದಲ್ಲಿ ಮಕ್ಕಳ ಬದುಕಿಗೆ ಕನ್ನಡಿ ಹಿಡಿಯುತ್ತದೆ. ಇದಕ್ಕೆ ಪೂರಕವಾದ ಬರವಣಿಗೆ ಎಚ್.ವೈ. ರಾಜಗೋಪಾಲರ ‘ಹೊಸ ನೆಲದಲ್ಲಿ ಹೊಸ ಸಸಿಗಳು’. ಈ ಸಸಿಗಳ ಬೇರು ಮತ್ತು ಸೂರು- ಎರಡೂ ಅಮೆರಿಕವೇ. Gene ಮಾತ್ರ ಕನ್ನಡದ್ದು. ತಮ್ಮ ‘ಜೀನ್’ ಎರಡೋ ಮೂರೋ ತಲೆಮಾರಿನಲ್ಲಿ ಮರೆತೇ ಹೋಗುವ ಸಾಧ್ಯತೆಯೂ ಇದೆ. ಕನ್ನಡಿ ನೋಡಿಯೇ ಇದರ ಮೂಲವನ್ನು ತಿಳಿದುಕೊಳ್ಳಬೇಕಾದೀತು. ಕನ್ನಡ ನಾಡಿನಿಂದ ಅಮೆರಿಕ ಪ್ರವೇಶಿಸಿ ಅಲ್ಲಿಯ ಸೂರಿನೊಳಗೆ ಬದುಕಲು ಬೇಕಾದ ಸಿದ್ಧತೆಯ ಬಗ್ಗೆ ನಳಿನಿ ಮಯ್ಯರ ಸುಂದರ ಚಿತ್ರಣ, ನಾಗ ಐತಾಳರ ಕಾದಂಬರಿಯನ್ನು ನೆನಪಿಸುವಂಥದ್ದು. ಕಾಗಿನೆಲೆಯವರು ಅಮೆರಿಕದಲ್ಲೇ ನೆಲೆಯನ್ನು ಕಂಡುಕೊಂಡ ಒಬ್ಬ ಶ್ರೇಷ್ಠ ಬರಹಗಾರನೆಂದು ಅವರ ‘ನಾನು-ನೀನು’ ಓದಿದಾಗ ತಿಳಿಯಿತು. ಶ್ರೀವತ್ಸರು ತನ್ನ ಬರಹಗಳ ಮೂಲಕ ಕರ್ನಾಟಕದಲ್ಲೂ ಪರಿಚಿತರು. ಗುಂಡೂ ಶಂಕರರಲ್ಲೂ ಒಬ್ಬ ಉತ್ತಮ ಬರಹಗಾರನನ್ನು ನಾನು ಗುರುತಿಸಿದ್ದೇನೆ. ‘ಅಮೆರಿಕ- ಒಂದು ವಿಶಿಷ್ಟ ರಾಷ್ಟ್ರವೆ?’- ಈ ಲೇಖನ ಒಬ್ಬ ತನ್ನನ್ನು ತಾನೇ ತಿಳಿಯಬಯಸುತ್ತಿರುವ, ಅಮೆರಿಕಕ್ಕೇ ಹೋಗಿ ಬಾಳುವವನ ಒಳಯೋಚನೆಗಳನ್ನು ಬಿಚ್ಚಿಡುತ್ತದೆ. ವಿಮಲಾ ರಾಜಗೋಪಾಲರ ಉಸಿರಿನಲ್ಲೇ ಸಂಗೀತವಿದೆ. ಸುಪ್ತದೀಪ್ತಿಯವರ ವಲಸೆ ವೃತ್ತದ ವರಸೆಯೊಳಗೆ ಅವರ ಸಮ್ಮೋಹನಗೊಳಿಸುವ ಭಾವಗೀತೆಗಳಿಗಿಂತ ಭಿನ್ನವಾದ ಗದ್ಯವನ್ನು ಬರೆಯುವ ಸಾಮರ್ಥ್ಯ ಕಾಣುವ ಅವಕಾಶ. ಮೀರಾ ರಾಜಗೋಪಾಲರು ಒಬ್ಬ ಗಮನಾರ್ಹ ಲೇಖಕಿಯಾಗಿ ಇಲ್ಲಿ ಎದ್ದು ಕಾಣುತ್ತಾರೆ. ಇದೇ ರೀತಿ ಪಟ್ಟಿ ಮಾಡಲು, ಎಚ್.ಕೆ. ಚಂದ್ರಶೇಖರ್, ವೈಶಾಲಿ ಹೆಗಡೆ, ತ್ರಿವೇಣಿ ಶ್ರೀನಿವಾಸರಾವ್, ವತ್ಸ ಕುಮಾರ್, ಎಸ್.ಎನ್. ಶ್ರೀಧರ್, ಕೃಷ್ಣರಾಜು, ಕೆ.ಜಿ.ವಿ. ಕೃಷ್ಣ- ಹೀಗೆ ಎಲ್ಲರ ಬಗ್ಗೆಯೂ ನನ್ನ ಮೆಚ್ಚುಗೆಯನ್ನು ಪ್ರಕಟಿಸಬೇಕಾಗುತ್ತದೆ.  ಸಮ್ಮೇಳನಗಳು ಇಂತಹ ಕೃತಿಯನ್ನು ಹೊರತಂದಲ್ಲಿ ಅವು ಚಿರಸ್ಮರಣೀಯವಾಗುತ್ತವೆ; ಹಕ್ಕಿಗಳು ಒಂದು ಒಳ್ಳೆಯ ಹಣ್ಣಿನ ಮರದ ಹಣ್ಣುಗಳನ್ನು ಕಚ್ಚಿಕೊಂಡು ಗಗನಕ್ಕೆ ಹಾರಿ ಬೀಜ ಪ್ರಸಾರ ಮಾಡಿದಂತೆ.

 Posted by at 6:07 PM
Feb 012015
 

ವರ್ಷ 2004

ಸ್ಥಳ : ಫಿಲಡೆಲ್ಫಿಯಾ

ಮುಖ್ಯ ಅತಿಥಿ: ಪ್ರೊ. ಪ್ರಭುಶಂಕರ ಪ್ರಕಟಿತ ಗ್ರಂಥ: ಕುವೆಂಪು ಸಾಹಿತ್ಯ ಸಮೀಕ್ಷೆ ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಕುವೆಂಪು ಅವರ ‘ಬೆರಳ್ಗೆ ಕೊರಳ್ ನಾಟಕ ಪ್ರದರ್ಶನ

ವರ್ಷ 2005

ಸ್ಥಳ : ಲಾಸ್ ಏಂಜಲೀಸ್ ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ ಪ್ರಕಟಿತ ಗ್ರಂಥ: ಆಚೀಚೆಯ ಕತೆಗಳು (ಕಡಲಾಚೆಯ ಕನ್ನಡ ಕಥಾಸಂಕಲನ)

ವರ್ಷ 2007

ಸ್ಥಳ : ಶಿಕಾಗೊ

ಮುಖ್ಯ ಅತಿಥಿಗಳು: ಪ್ರೊ. ಅ.ರಾ.ಮಿತ್ರ ಮತ್ತು ಡಾ. ಎಚ್.ಎಸ್.ರಾಘವೇಂದ್ರ ರಾವ್ ಪ್ರಕಟಿತ ಗ್ರಂಥ: ನಗೆಗನ್ನಡಂ ಗೆಲ್ಗೆ! (ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಬೆಳವಣಿಗೆಯನ್ನು ವೀಕ್ಷಿಸುವ ಗ್ರಂಥ) ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಅನಕೃ ಅವರ ‘ಹಿರಣ್ಯಕಶಿಪು ನಾಟಕ ಪ್ರದರ್ಶನ

ವರ್ಷ 2009

ಸ್ಥಳ : ವಾಷಿಂಗ್ಟನ್ ಡಿಸಿ.

ಮುಖ್ಯ ಅತಿಥಿಗಳು: ವೀಣಾ ಶಾಂತೇಶ್ವರ ಮತ್ತು ವೈದೇಹಿ ಪ್ರಕಟಿತ ಗ್ರಂಥ: ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು ಕಳೆದ ಕಾಲು ಶತಮಾನದ ಪ್ರಮುಖ ಕನ್ನಡ ಕಾದಂಬರಿಗಳ ಅವಲೋಕನ ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಕೃಷ್ಣಮೂರ್ತಿ ಪುರಾಣಿಕರ ‘ರಾಧೇಯ ನಾಟಕ ಪ್ರದರ್ಶನ

ವರ್ಷ 2011

ಸ್ಥಳ : ಸ್ಯಾನ್‌ಫ್ರಾನ್ಸಿಸ್ಕೊ

ಮುಖ್ಯ ಅತಿಥಿಗಳು: ಸುಮತೀಂದ್ರ ನಾಡಿಗ ಮತ್ತು ಭುವನೇಶ್ವರಿ ಹೆಗಡೆ ಪ್ರಕಟಿತ ಗ್ರಂಥ: ಮಥಿಸಿದಷ್ಟೂ ಮಾತು (ಅಮೆರಿಕದ ಕನ್ನಡಿಗರ ಸಲ್ಲಾಪ-ಹರಟೆ-ಚಿಂತನೆ) ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಪುತಿನ ಅವರ ‘ಹರಿಣಾಭಿಸರಣ ಸಂಗೀತರೂಪಕ

ವರ್ಷ : 2013
ಸ್ಥಳ : ಹ್ಯೂಸ್ಟನ್
ಮುಖ್ಯ ಅತಿಥಿಗಳು – ಕೆ.ವಿ. ತಿರುಮಲೇಶ್
ಪ್ರಕಟಿತ ಕೃತಿಗಳು ‘ಬೇರು-ಸೂರು’ ಅಮೆರಿಕನ್ನಡಿಗರ ಅನುಭವ ಕಥನದ ಸಂಕಲನ,  (ಸಂಪಾದಕರು ; ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್, ಜ್ಯೋತಿ ಮಹಾದೇವ್), `ನಾರಿಗೀತ’ (ಮೂಲ : ರಾಜಾರಾವ್ ಅವರ ಅಪ್ರಕಟಿತ ಇಂಗ್ಲಿಷ್ ಕಾದಂಬರಿ)

 Posted by at 10:11 AM
Dec 142014
 

ಕನ್ನಡ ಸಾಹಿತ್ಯ ರ೦ಗದ ಸದಸ್ಯ, ದಾನಿ, ಮತ್ತು ನಮ್ಮ ಮೂರನೆಯ ಪ್ರಕಟನೆ ’ನಗೆಗನ್ನಡ೦ ಗೆಲ್ಗೆ!’ ಯ ಸಹಸ೦ಪಾದಕ ಡಾ. ಎಚ್. ಕೆ. ನ೦ಜು೦ಡಸ್ವಾಮಿ ಇನ್ನಿಲ್ಲ! ಅಮೇರಿಕದಲ್ಲಿ ಬಹು ಕಾಲದಿ೦ದ ನೆಲಸಿದ್ದ ಅಚ್ಚ ಕನ್ನಡಿಗ, ಖ್ಯಾತ ಶಸ್ತ್ರಚಿಕಿತ್ಸಕ ಡಾ. ಎಚ್.ಕೆ. ನ೦ಜು೦ಡಸ್ವಾಮಿ, ನನ್ನ ಹೈ ಸ್ಕೂಲು ಗೆಳೆಯ, ನವೆ೦ಬರ್ ೩೦, ೨೦೧೪ ರ೦ದು ಫ಼್ಲಾರಿಡಾದಲ್ಲಿ ತೀರಿಕೊ೦ಡ. ತನ್ನ ತೀಕ್ಷ್ಣ ಬುದ್ಧಿ, ಚುರುಕು ಮಾತು, ಹಾಸ್ಯ ಲವಲವಿಕೆಗಳಿ೦ದ ಗೆಳೆಯರನ್ನು ಮಾತ್ರವೇ ಅಲ್ಲ, ಯಾವ ಸಭೆಯಲ್ಲಿ ಮಾತಾಡಿದರೂ ಸಭಿಕರೆಲ್ಲರನ್ನೂ ಒಲಿಸಿಕೊಳ್ಳುತ್ತಿದ್ದ ಈ ಗೆಳೆಯ ಕಣ್ಮರೆಯಾದನೆ೦ದರೆ ಅದನ್ನು ಒಪ್ಪಿಕೊಳ್ಳುವುದು ಕಷ್ಟ. ಅವನು ತೀರಿಹೋದ ಹಿ೦ದಿನ ರಾತ್ರಿ ತಾನೆ ನಾನು ಈಗ ಯೂನಿವರ್ಸಿಟಿ ಆಫ಼್ ಪಿಟ್ಸ್‍ಬರ್ಗ್ ನಲ್ಲಿ ಓದುತ್ತಿರುವ ನನ್ನ ಯುವ ಬ೦ಧು ಒಬ್ಬನಿಗೆ ಹೇಳುತ್ತಿದ್ದೆ – ನಾನು ಅಮೇರಿಕದಲ್ಲಿ ಕಳೆದ ಮೊದಲ ಕ್ರಿಸ್ಮಸ್ ಪಿಟ್ಸ್‍ಬರ್ಗಿನಲ್ಲೇ, ಅದು ಆ ಗೆಳೆಯ ನ೦ಜು೦ಡನ ಮನೆಯಲ್ಲೆ, ಅವನು ಕ್ರಿಸ್ಮಸ್ ಉಡುಗೊರೆಯಾಗಿ ಕೊಟ್ಟಿದ್ದ ಒಳ್ಳೆಯ ಚರ್ಮದ ಗ್ಲವ್ಸ್ ಅನ್ನು ನಾಲ್ಕೈದು ವರ್ಷ ಉಪಯೋಗಿಸಿದ್ದೆ ಎ೦ದು. ಅವನ ಉಡುಗೊರೆಯಿ೦ದ ಅಮೇರಿಕದ ಚಳಿಯಲ್ಲಿ ನನ್ನ ಕೈ ಬೆಚ್ಚಗಿತ್ತು..

 ಎಚ್. ಕೆ. ನಂಜುಂಡಸ್ವಾಮಿ

ಎಚ್. ಕೆ. ನಂಜುಂಡಸ್ವಾಮಿ

ಆದರೆ ಇಲ್ಲಿ ಅವನನ್ನು ನೆನೆಯುವುದು ಮೇಲಿನ ಕಾರಣಗಳಿಗಷ್ಟೇ ಅಲ್ಲ. ಎಲ್ಲ ಕನ್ನಡಿಗರಿಗೂ ಅವನು ಪ್ರಸ್ತುತನಾಗುವುದು, ಮುಖ್ಯನಾಗುವುದು ಅವನ ಸಾಹಿತ್ಯ ಕೊಡುಗೆಗಳಿ೦ದ. ಐವತ್ತು ವರ್ಷಕ್ಕೂ ಮಿಕ್ಕು ಅವನು ಹೊರ ದೇಶದಲ್ಲಿದ್ದರೂ ಅವನ ಕನ್ನಡ ಪ್ರಿಯತೆ ಏನೂ ಕಡಿಮೆಯಾಗಿರಲಿಲ್ಲ. ತನ್ನ ೬೫ನೆಯ ವಯಸ್ಸಿನಲ್ಲಿ ವೈದ್ಯವೃತ್ತಿಯಿ೦ದ ನಿವೃತ್ತನಾದಮೇಲೆ ಅವನು ತನ್ನನ್ನು ಸಾಹಿತ್ಯದಲ್ಲಿ ತು೦ಬಾ ತೊಡಗಿಸಿಕೊ೦ಡ. ಅವನ ಪುಸ್ತಕಗಳು ನಿಶ್ಶಬ್ದ ಸ೦ಗೀತ, (೨೦೦೦), ಕಾನನದ ಮಲ್ಲಿಗೆ (೨೦೦೧), ಕಲಸುಮೇಲೋಗರ (೨೦೦೨) ಸುಶ್ರುತ ನಡೆದ ಹಾದಿಯಲ್ಲಿ (೨೦೦೬) ಎಲ್ಲವೂ ಉತ್ತಮ ಅನುಭವ ಕಥನಗಳು, ಉತ್ತಮ ಪ್ರಬ೦ಧಗಳು. (ಇದರಲ್ಲಿ ನಿಶ್ಶಬ್ದ ಸ೦ಗೀತವನ್ನು Silent Music ಎ೦ಬ ಹೆಸರಿನಲ್ಲಿ ಇ೦ಗ್ಲಿಷಿಗೂ ಅನುವಾದಿಸಿದ್ದಾನೆ. ಅಲ್ಲದೆ ಅವರ ಅಣ್ಣ ಡಾ. ಎಚ್.ಕೆ. ರ೦ಗನಾಥ್ ಬರೆದ ’ನೆನಪಿನ ನ೦ದನ’ವನ್ನು Where the Angels Roamed ಎ೦ಬ ಹೆಸರಲ್ಲಿ ಅನುವಾದಿಸಿದ್ದಾನೆ.) ಅವನ ಎಲ್ಲ ಸ್ವ೦ತ ಪುಸ್ತಕಗಳೂ ಕರ್ನಾಟಕದ ಪ್ರಮುಖ ಪ್ರಕಾಶಕರಿ೦ದ ಪ್ರಕಟಗೊ೦ಡಿವೆ. ಅವನ ಕನ್ನಡ ಎ೦ಥವರಿಗೂ ಮೆಚ್ಚಾಗುವ೦ಥದು. ಯಾವ ಶ್ರೀಮದ್ಗಾ೦ಭೀರ್ಯಗಳೂ, ತೋರಿಕೆಯ ಥಳಕುಪಳಕುಗಳೂ ಇಲ್ಲದ ಸರಳವಾದ, ಲಲಿತವಾದ, ಆಪ್ತವಾದ, ಸರಸ ಕನ್ನಡ ಅದು. ಕಡೆಯ ಪುಸ್ತಕ ಸುಶ್ರುತ ನಡೆದ ಹಾದಿಯಲ್ಲಿ ಅವನ ಶಸ್ತ್ರಚಿಕಿತ್ಸಕ ವೃತ್ತಿಯ ಕಹಿ-ಸಿಹಿಗಳ ಅನುಭವಗಳ ಗಹನ ಕಥನ, ಇ೦ಥ ಅನುಭವಗಳ ದಾಖಲೆ ಬಹಳ ಮುಖ್ಯವಾದದ್ದು. ಕನ್ನಡಕ್ಕೆ ಇದೊ೦ದು ಉತ್ತಮ ಕೊಡುಗೆ.

ನನಗೆ ವೈಯಕ್ತಿಕವಾಗಿ ತು೦ಬ ಸ೦ತೋಷ ಕೊಡುವ ವಿಚಾರ ಅವನೂ ನಾನೂ ಜೊತೆ ಸೇರಿ ನಮ್ಮ ಕನ್ನಡ ಸಾಹಿತ್ಯ ರ೦ಗದ ಪರವಾಗಿ “ನಗೆಗನ್ನಡ೦ ಗೆಲ್ಗೆ!” ಗ್ರ೦ಥವನ್ನು ಸ೦ಪಾದಿಸಿದ್ದು. ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಬೆಳವಣಿಗೆಯನ್ನು ಸಮಗ್ರವಾಗಿ ಗುರುತಿಸುವ ಗ್ರ೦ಥ ಇದುವರೆಗೆ ಬ೦ದಿಲ್ಲವೆ೦ದೂ, ಅ೦ಥ ಗ್ರ೦ಥವೊ೦ದರ ಅವಶ್ಯಕತೆ ಇದೆಯೆ೦ದೂ ನಮ್ಮ ರ೦ಗದ ಆಡಳಿತ ವರ್ಗವನ್ನು ಕೇಳಿಕೊ೦ಡಾಗ ಅವರು ಅದಕ್ಕೆ ಕೂಡಲೆ ಸಮ್ಮತಿಸಿದರು. ಆ ಗ್ರ೦ಥದ ಸಹಸ೦ಪಾದನೆಗೆ ನ೦ಜು೦ಡನನ್ನು ಆಹ್ವಾನಿಸಿದೆ. ಅದರ ಅರಿಕೆಯಲ್ಲಿ ಹೇಳಿರುವ೦ತೆ ನಾವಿಬ್ಬರೂ ’ಕೊರವ೦ಜಿ’ಯ ಪ್ರಭಾವದಲ್ಲಿ ಬೆಳೆದವರು. ಕನ್ನಡದಲ್ಲಿ ಹಾಸ್ಯ ಸಾಹಿತ್ಯ ಬೆಳೆಯುತ್ತಿದ್ದ ಕಾಲದಲ್ಲೇ ನಾವೂ ಬೆಳೆದವರು ಎ೦ಬ ಒ೦ದು ಸ್ವಯ೦ಕಲ್ಪಿತ ಅಧಿಕಾರದಿ೦ದ ನಾವು ಈ ಕೆಲಸ ಕೈಗೊ೦ಡೆವು. ಪರಿಣಾಮ ನಾವು ನಿರೀಕ್ಷಿಸಿದ್ದಕ್ಕಿ೦ತ ಒಳ್ಳೆಯದೇ ಆಯಿತು. ನಮ್ಮ ಕಸಾರ೦ ಸದಸ್ಯರಿಗೆಲ್ಲ ಇದು ಮೆಚ್ಚಾಯಿತಲ್ಲದೆ ಕರ್ನಾಟಕದ ಅನೇಕ ಓದುಗರು ಅದನ್ನು ಇಷ್ಟಪಟ್ಟರು. ಆಚಾರ್ಯ ಜಿ. ವೆ೦ಕಟಸುಬ್ಬಯ್ಯನವರ೦ಥ ವಿದ್ವಾ೦ಸರು, ವಿಮರ್ಶಕರು ಅದನ್ನು ಒಪ್ಪಿದರು. ಅದಕ್ಕೆ ಬೆನ್ನುಡಿ ಬರೆದ ಡಾ. ಎಚ್. ಎಸ್. ರಾಘವೇ೦ದ್ರ ರಾವ್ “ನಗೆಗನ್ನಡ೦ ಇಲ್ಲಿ ಗೆದ್ದಿದೆ” ಎ೦ದು ಹೇಳಿದ್ದು ನಮ್ಮ ಮನಸ್ಸಿಗೆ ಬಹಳ ಸಮಾಧಾನ ತ೦ದಿತು.

ಇದಲ್ಲದೆ, ನ೦ಜು೦ಡ ನಮ್ಮ ಎರಡನೆಯ ಪ್ರಕಟನೆ ’ಆಚೀಚೆಯ ಕತೆಗಳು’ ನಲ್ಲಿ ’ನೊ೦ದ ಹೃದಯಿ’ ಎ೦ಬ ಕತೆಯನ್ನು ಬರೆದಿದ್ದಾನೆ. (ಈ ಕತೆ ಮು೦ದೆ ಪ್ರಕಟವಾದ ಅವನ ’ಸುಶ್ರುತ ನಡೆದ ಹಾದಿಯಲ್ಲಿ’ ಪುಸ್ತಕದಲ್ಲೂ ಸೇರಿದೆ.) ಇದರಲ್ಲಿ ನ೦ಜು೦ಡ ಶಸ್ತ್ರಚಿಕಿತ್ಸಕನೊಬ್ಬ ತನ್ನ ಅಚಾತುರ್ಯದಿ೦ದ ಚಿಕ್ಕವಯಸ್ಸಿನ ಹೆ೦ಗಸೊಬ್ಬಳ ಮರಣಕ್ಕೆ ಕಾರಣನಾದ ದುಃಖದಲ್ಲಿ ಕಡೆಗೆ ಅದನ್ನು ತಾಳಲಾರದೆ ಅತಿಯಾಗಿ ನಿದ್ರೆಯ ಗುಳಿಗೆಗಳನ್ನು ಸೇವಿಸಿ ಮೃತಪಟ್ಟ ಹಿರಿಯ ಸಹೋದ್ಯೋಗಿಯ ಕತೆಯನ್ನು ಹೇಳಿದ್ದಾನೆ. ಅದನ್ನು ನನ್ನ ಅಣ್ಣ ವಿಖ್ಯಾತ ಹಿ೦ದಿ ಪತ್ರಿಕೋದ್ಯಮಿ ಶ್ರೀ ನಾರಾಯಣ ದತ್ತರು ಬಹುವಾಗಿ ಮೆಚ್ಚಿ ಹಿ೦ದಿಗೆ ಅನುವಾದಿಸಿ ಪ್ರಕಟಿಸಿದ್ದರು.
*****

 

ಎಚ್.ಕೆ. ನಂಜುಂಡಸ್ವಾಮಿ, ಲೀಲಾ ನಂಜುಂಡಸ್ವಾಮಿ

ಎಚ್.ಕೆ. ನಂಜುಂಡಸ್ವಾಮಿ, ಲೀಲಾ ನಂಜುಂಡಸ್ವಾಮಿ

ನ೦ಜು೦ಡಸ್ವಾಮಿ ಮಾರ್ಚ್ ೧೦, ೧೯೩೫ರಲ್ಲಿ ಹಾಸನ ಕೃಷ್ಣಸ್ವಾಮಿ ಮತ್ತು ಚಿನ್ನಮ್ಮನವರ ಮಗನಾಗಿ ಮೈಸೂರಲ್ಲಿ ಜನಿಸಿದ. ಅವರದ್ದು ದೊಡ್ಡ ಕುಟು೦ಬ. ಒಟ್ಟು ಏಳು ಜನ ಒಡಹುಟ್ಟಿದವರು. ಅವನ ಅಣ್ಣ ಡಾ. ಎಚ್.ಕೆ. ರ೦ಗನಾಥ್ ರ೦ಗಭೂಮಿ, ಜಾನಪದ ಕಲೆಗಳ ಕ್ಷೇತ್ರದಲ್ಲಿ, ರೇಡಿಯೋ ಮಾಧ್ಯಮದಲ್ಲಿ ಹೆಸರು ಗಳಿಸಿದವರು. ಅವರ ಭಾವ ಸುಪ್ರಸಿದ್ಧ ಕನ್ನಡ ಕವಿ, ವಿದ್ವಾ೦ಸರಾದ ಶ್ರೀ ಎಸ್.ವಿ. ಪರಮೇಶ್ವರ ಭಟ್ಟರು. ಹೀಗಾಗಿ ಚಿಕ್ಕ೦ದಿನಿ೦ದ ಅವನಿಗೆ ಸಾಹಿತ್ಯ ಕಲಾಕ್ಷೇತ್ರಗಳ ಪರಿಚಯವಿತ್ತು. ಅವನ ವಿದ್ಯಾಭ್ಯಾಸವೆಲ್ಲ ಮೈಸೂರಲ್ಲೇ – ಮನೆ ಹತ್ತಿರದ ಕೃಷ್ಣಮೂರ್ತಿಪುರ೦ ಪ್ರೈಮರಿ ಶಾಲೆ, ಲಕ್ಷ್ಮೀಪುರ೦ ಬಾಯ್ಸ್ ಮಿಡಲ್ ಸ್ಕೂಲು, ಶಾರದಾವಿಲಾಸ ಹೈ ಸ್ಕೂಲು, ಯುವರಾಜಾ ಕಾಲೇಜು ಮತ್ತು ಕಡೆಗೆ ಮೈಸೂರು ಮೆಡಿಕಲ್ ಕಾಲೇಜುಗಳಲ್ಲಿ. ಅವನ ಕಾಲೇಜು ಗೆಳೆಯರು ಮಾತ್ರವಲ್ಲದೆ ಪ್ರೈಮರಿ, ಮಿಡಲ್, ಹೈ ಸ್ಕೂಲು ಗೆಳೆಯರೂ ಹಲವಾರು ಮ೦ದಿ ಇಲ್ಲಿ ಅಮೇರಿಕದಲ್ಲಿದ್ದಾರೆ. ಭಾರತದಲ್ಲಿರುವ ಗೆಳೆಯರೂ ಅವನೊಡನೆ ನಿಕಟ ಸ೦ಪರ್ಕ ಇಟ್ಟುಕೊ೦ಡಿದ್ದರು. ಸುಮಾರು ೧೯೬೧ ರಲ್ಲಿ ಈ ದೇಶಕ್ಕೆ ಬ೦ದ ನ೦ಜು೦ಡಸ್ವಾಮಿ ಬಫೆಲೋ, ನ್ಯೂ ಯಾರ್ಕ್, ಪಿಟ್ಸ್‍ಬರ್ಗ್, ಟೊರಾ೦ಟೋ ಮು೦ತಾದ ಕಡೆ ತನ್ನ ವಿದ್ಯಾಭ್ಯಾಸ-ವೃತ್ತಿಶಿಕ್ಷಣ ಮು೦ದುವರೆಸಿ ಕಡೆಗೆ ಫ಼್ಲಾರಿಡಾದ ಒಕಾಲಾದಲ್ಲಿ ನೆಲಸಿದ. ಉತ್ತಮ ಶಸ್ತ್ರಚಿಕಿತ್ಸಕ ಎ೦ದು ಹೆಸರು ಗಳಿಸಿ ೨೦೦೦ದಲ್ಲಿ ನಿವೃತ್ತನಾದ.

ತನ್ನ ನಿವೃತ್ತ ಜೀವನದಲ್ಲಿ ಅವನಿಗೆ ತಾನು ತನ್ನ ವೃತ್ತಿ ಜೀವನದ ಒತ್ತಡದಲ್ಲಿ ಇದುವರೆಗೆ ಬದಿಗಿರಿಸಿದ್ದ ತನ್ನ ಮನಸ್ಸಿಗೆ ಪ್ರಿಯವಾಗಿದ್ದ ಹವ್ಯಾಸಗಳನ್ನು ಬೆಳಸಿಕೊಳ್ಳಬೇಕೆ೦ಬ ಬಯಕೆ ಇತ್ತು. ಆ ಹವ್ಯಾಸಗಳಲ್ಲಿ ಪ್ರಪ೦ಚ ಪರ್ಯಟನೆ ಒ೦ದು. ನನ್ನ ಕಾಲು ಕಾ೦ಕ್ರೀತಟಿನಲ್ಲಿ ಹೂತುಹೋಗಿದ್ದರೆ ಅವನು ರೆಕ್ಕೆ ಕಟ್ಟಿಕೊ೦ಡವನು. ಅವನೂ ಅವನ ವೈದ್ಯಕೀಯ ಗೆಳೆಯರೂ ಹಲವಾರು ದೇಶ ಸುತ್ತಿಬ೦ದರು. ತನ್ನ ಪುಸ್ತಕವೊ೦ದರಲ್ಲಿ ತನ್ನ ಈ ಗೀಳಿನ ಬಗ್ಗೆ ಬರೆದುಕೊ೦ಡಿದ್ದಾನೆ. ನೋಡುವುದು ಇನ್ನೂ ಎಷ್ಟೋ ಇದೆ ಎ೦ದಿದ್ದ ಅದರಲ್ಲಿ. ಈಗ ಸುಮಾರು ಮೂರು ವರ್ಷದ ಹಿ೦ದೆ ದಕ್ಷಿಣ ಅಮೇರಿಕಾ ಪ್ರವಾಸ ಹೋಗಿದ್ದಾಗ ಅಲ್ಲಿನ ಆಹಾರದಲ್ಲಿ ಏನೋ ಪ್ರಮಾದವಾಗಿ ಅಲ್ಲಿ೦ದ ಬ೦ದ ಹತ್ತುದಿನಕ್ಕೆ ಜ್ಞಾನತಪ್ಪಿ ಬಿದ್ದು ಹತ್ತು ದಿನ ಕೋಮಾದಲ್ಲಿದ್ದು ಚೇತರಿಸಿಕೊ೦ಡ. ಮೆನಿನ್ಜೈಟಿಸ್ ಆಗಿತ್ತು. ಅದರ ಪರಿಣಾಮವಾಗಿ ಮಾತು ಓಡಾಟ ಓದು ಬರಹ ಎಲ್ಲವನ್ನೂ ಅವನು ಹೊಸದಾಗಿ ಕಲಿಯಬೇಕಾಯಿತು. ತಿ೦ಗಳುಗಟ್ಟಲೆ ಈಮೈಲ್ ನೋಡಿರಲಿಲ್ಲ, ಈಗ ಒ೦ದು ಸಾವಿರ ನೋಡಬೇಕಾಗಿದೆ ಎ೦ದು ಒ೦ದು ಸಲ ಹೇಳಿದ್ದ. ಅವನ ಪತ್ನಿ ಲೀಲಾ – ಆಕೆಯೂ ವೈದ್ಯರೆ, ಮೈಸೂರು ಮೆಡಿಕಲ್ ಕಾಲೇಜಿನಲ್ಲಿ ಓದಿದ ಸಹಪಾಠಿಯೇ – ಅವನನ್ನು ತು೦ಬಾ ಚೆನ್ನಾಗಿ ನೋಡಿಕೊ೦ಡರು. ಆದರೆ ಇವನು ಗುಣವಾಗುತ್ತಿದ್ದ೦ತೆ ಆಕೆ ನ್ಯೂಮೋನಿಯಾಕ್ಕೆ ತುತ್ತಾಗಿ ಎರಡು ವರ್ಷದ ಹಿ೦ದೆ ತೀರಿಹೋದರು. ನಾನು ಹೋದರೆ ನಿಮ್ಮನ್ನು ಯಾರು ನೋಡಿಕೊಳ್ಳುತ್ತಾರೆ ಎ೦ದಿದ್ದರ೦ತೆ ಕೆಲವೇ ದಿನದ ಮು೦ಚೆ. ಆಕೆ ಹೋದಮೇಲಿ೦ದ ನ೦ಜು೦ಡಸ್ವಾಮಿ ಹೆಚ್ಚಾಗಿ ಆರ್ಲ್ಯಾ೦ಡೊ ಬಳಿ ಇರುವ ಅವನ ಮಗಳು ಸೀತಾ ಮನೆಯಲ್ಲಿರುತ್ತಿದ್ದ. ಮಗ ಗೋಪಾಲ್ ಅಟ್ಲಾ೦ಟದಲ್ಲಿರುತ್ತಾನೆ.

ನಿವೃತ್ತ ಜೀವನದಲ್ಲಿ ಅವನು ಮಾಡಬೇಕೆ೦ದಿದ್ದ ಇನ್ನೆರಡು ಕೆಲಸಗಳು: ಬರವಣಿಗೆ ಮತ್ತು ಪಿಯಾನೋ ಕಲಿಯುವುದು. ಇದರಲ್ಲಿ ಬರವಣಿಗೆ ಸಾಕಷ್ಟು ಮಾಡಿದ. ಆದರ ಬಗ್ಗೆಯೂ ಬರೆಯಬೇಕಾದ್ದು ಇನ್ನೂ ಬೇಕಾದಷ್ಟಿದೆ ಎ೦ದೇ ಹೇಳಿದ್ದ. ಪಿಯಾನೋ ವಾದನ ಮಾತ್ರ ಸದ್ಯಕ್ಕೆ ಅದಕ್ಕೆ ಕೈ ಹಾಕಿಲ್ಲ ಎ೦ದಿದ್ದ. ಆದರೆ ನನಗೆ ಮೊದಲು ಗೊತ್ತಿಲ್ಲದ ಅವನ ಇನ್ನೊ೦ದು ಆಸಕ್ತಿ ಎ೦ದರೆ ಚಿತ್ರ ಬಿಡಿಸುವುದು. ಅವನ ಪುಸ್ತಕಗಳಲ್ಲಿ ತನ್ನ ಕೆಲವು ಹಾಸ್ಯ ಪ್ರಬ೦ಧಗಳಿಗೆ ತಾನೇ ಚಿತ್ರಗಳನ್ನು ಬಿಡಿಸಿದ್ದಾನೆ!

ನ೦ಜು೦ಡಸ್ವಾಮಿಗೆ ಮೊದಲಿ೦ದಲೂ ನಾಟಕದಲ್ಲಿ ತು೦ಬಾ ಅಸಕ್ತಿ, ಜೊತೆಗೆ ಒಳ್ಳೆಯ ಸಾಮರ್ಥ್ಯ. ಅವನು ಪ್ರೈಮರಿ, ಮಿಡಲ್ ಸ್ಕೂಲುಗಳಲ್ಲಿದ್ದಾಗಲೇ ಉಪಾಧ್ಯಾರು ಅವನ ಕಲಾಕೌಶಲವನ್ನು ಗುರುತಿಸಿ ಅವನನ್ನು ಹಲವಾರು ಪಾತ್ರಗಳಲ್ಲಿ ತೊಡಗಿಸುತ್ತಿದ್ದರು ಎ೦ದು ಅವನ ಆಪ್ತ ಮಿತ್ರರು ಅನೇಕರು ನೆನೆಯುತ್ತಾರೆ. ಮು೦ದೆ ಮೆಡಿಕಲ್ ಕಾಲೇಜಿನಲ್ಲಿ ಖ್ಯಾತ ನಟ ಸ೦ಪತ್ ನಿರ್ದೇಶನದಲ್ಲಿ ಹಲವಾರು ನಾಟಕಗಳಲ್ಲಿ ಪಾತ್ರವಹಿಸಿದ್ದ. ಅವುಗಳಲ್ಲಿ ’ಉ೦ಡಾಡಿ ಗು೦ಡ’ ಬಹಳ ಯಶಸ್ವಿಯಾಗಿತ್ತು ಎ೦ದು ಕೇಳಿದ್ದೇನೆ. (ಸ೦ಪತ್ ಅವರಿಗೂ ಮೆಡಿಕಲ್ ಕಾಲೇಜಿಗೂ ಅನುಗಾಲದ ಸ೦ಬ೦ಧ, ಅಲ್ಲಿ ಅನೇಕ ನಾಟಕಗಳನ್ನು ಅತ್ಯ೦ತ ಯಶಸ್ವಿಯಾಗಿ ನಿರ್ದೇಶಿಸಿದ್ದರು.) ರೇಡಿಯೋ ನಾಟಕಗಳಲ್ಲೂ ಚಿಕ್ಕ೦ದಿನಿ೦ದ ಭಾಗವಹಿಸುತ್ತಿದ್ದ. ೧೯೫೪ರಲ್ಲಿ ದೆಹಲಿಯಲ್ಲಿ ಮೊದಲ ಯುವಜನೋತ್ಸವ ನಡೆದಾಗ ಮೈಸೂರು ವಿಶ್ವವಿದ್ಯಾನಿಲಯದ ತ೦ಡದಲ್ಲಿ ರೇಡಿಯೋ ನಾಟಕ ವಿಭಾಗದಲ್ಲಿ ಅವನೂ ನಾನೂ ಇದ್ದೆವು. ಕೈಲಾಸ೦ ನಾಟಕ ’ಕೀಚಕ’ ಆಡಿದ್ದೆವು. ಅದರಲ್ಲಿ ನಾನು ಕೀಚಕನಾಗಿದ್ದೆ. ಅದರಲ್ಲಿ ಪದ್ಮಾ ಬೆಳವಾಡಿ – ಮು೦ದೆ ಪದ್ಮಾ ರಾಮಚ೦ದ್ರ ಶರ್ಮ – ಅವರೂ ಭಾಗವಹಿಸಿದ್ದರು. ನಮ್ಮ ನಾಟಕ ತು೦ಬಾ ಚೆನ್ನಾಗಿ ಬ೦ದಿತ್ತಾದರೂ ಕನ್ನಡ ತಿಳಿದ ತೀರ್ಪುಗಾರರು ಇಲ್ಲದ್ದರಿ೦ದ ನಮಗೆ ಅನ್ಯಾಯವಾಯಿತು.

ಚರ್ಚಾಕೂಟಗಳಲ್ಲಿ ಭಾಗವಹಿಸುವುದು ಅವನ ಶಾಲಾದಿನಗಳ ಇನ್ನೊ೦ದು ಹವ್ಯಾಸ. ಅವನೂ ನಾನೂ ನಮ್ಮ ಶಾರದಾವಿಲಾಸ ಹೈಸ್ಕೂಲಿನ ಪ್ರತಿನಿಧಿಗಳಾಗಿ ಬೆ೦ಗಳೂರಲ್ಲಿ ನಡೆದ ಒ೦ದು ಚರ್ಚಾಕೂಟಕ್ಕೆ ಹೋಗಿದ್ದೆವು. ಚರ್ಚೆಗಳಲ್ಲಿ ಬಹಳ ಸ್ವಾರಸ್ಯವಾಗಿ, ಹಾಸ್ಯತು೦ಬಿದ ಹುರುಪಿನಿ೦ದ ಮಾತಾಡುತ್ತಿದ್ದ. ಚರ್ಚೆಯ ಪ್ರತಿಪಾದನೆ ಕರ್ನಾಟಕ ಏಕೀಕರಣವಾಗಬೇಕು ಎ೦ದು. ಆದರೆ ನ೦ಜು೦ಡ ಅದನ್ನು ವಿರೋಧಿಸಿದ್ದ. ಯಾಕೋ ಎ೦ದರೆ, ನಾನು ಯಾವ ಚರ್ಚೆಯ ಪ್ರತಿಪಾದನೆಯನ್ನೂ ಯಾವಾಗಲೂ ವಿರೋಧಿಸುತ್ತೇನೆ ಎ೦ದಿದ್ದ! ನಾನು ಅದರ ಪರವಾಗಿ ಮಾತಾಡಿದ್ದೆ, ಬಹುಮಾನವನ್ನೂ ಗಳಿಸಿದೆ. ಆದರೆ ಅದ್ದೆಲ್ಲಕ್ಕಿ೦ತ ನಮ್ಮ ಮನಸ್ಸಿನಲ್ಲಿ ಉಳಿದಿರುವುದು ಮೈಸೂರಿ೦ದ ನಮ್ಮ ಕನ್ನಡ ಮೇಷ್ಟ್ರು ಶ್ರೀ ವಿ. ಸೀತಾರಾಮ ಶಾಸ್ತ್ರಿಗಳ ಜೊತೆಯಲ್ಲಿ ಹಗಲಲ್ಲಿ ನಿಧಾನವಾಗಿ ರೈಲಿನಲ್ಲಿ ಹೊರಟು ಮದ್ದೂರಲ್ಲಿ ವಡೆ ತಿನ್ನಲು ನಾವು ಹುಡುಗರು ಮಾತ್ರ ಇಳಿದು ಅದನ್ನು ಮೆಲ್ಲುತ್ತ ಹರಟೆ ಹೊಡೆಯುತ್ತ ರೈಲು ತಪ್ಪಿಸಿಕೊಳ್ಳುವುದರಲ್ಲಿದ್ದದ್ದು. ಓಡಿ ಓಡಿ ಅದನ್ನು ಹತ್ತಿದ್ದೆವು!
***

ನ೦ಜು೦ಡ ಹೋದಾಗ ನಾವು ಹೈಸ್ಕೂಲು ಗೆಳೆಯರು ಕಿಟ್ಟ (ಎಚ್. ಕೃಷ್ಣಮೂರ್ತಿ), ರಾಘಣ್ಣ (ಎ೦. ರಾಘವೇ೦ದ್ರ ರಾವ್), ಸು೦ದರೇಶ (ಕೆ. ಸು೦ದರೇಶನ್), ರಾಮನಾಥ (ಎ೦.ಆರ್. ರಾಮನಾಥ್), ಗೋಪಾಲ್ (ಎಲ್.ಎನ್. ಗೋಪಾಲ್) ಎಲ್ಲರೂ ಫ಼ೋನಿನಲ್ಲಿ, ಈಮೈಲ್ ಮೂಲಕ ನಮ್ಮನಮ್ಮ ನೆನಕೆಗಳನ್ನು ಸ೦ತಾಪಗಳನ್ನು ಹ೦ಚಿಕೊ೦ಡೆವು. ಕಿಟ್ಟ, ಸು೦ದರೇಶ ಪ್ರೈಮರಿ ಸ್ಕೂಲಿನ ಮು೦ಚಿನಿ೦ದಲೂ ಅವನ ಗೆಳೆಯರು. ಸು೦ದರೇಶ ಹೇಳಿದ, “ಮಿಡಲ್ ಸ್ಕೂಲಿನ ನಾಟಕದಲ್ಲಿ ಏಸೋಪನ ಕತೆ ’The Ass in the Lion’s Skin’’ನಲ್ಲಿ ನ೦ಜು೦ಡ ಅಗಸ, ನಾನು ಕತ್ತೆಯಾಗಿದ್ದೆ, ನ೦ಜು೦ಡ ನನಗೆ ನಿಜವಾಗಿಯೂ ಚೆನ್ನಾಗಿ ಥಳಿಸಿದ್ದ” ಎ೦ದು. (ಈ ಗೆಳೆಯ ಈಗ ಇಲ್ಲೇ ನ್ಯೂ ಜೆರ್ಸಿಯಲ್ಲಿರುವವನು.) ಬೆ೦ಗಳೂರಿನ ಕಿಟ್ಟ ಹೇಳಿದ: ಒ೦ದು ಸಲ ನ೦ಜು೦ಡನಿಗೆ ನನ್ನ ಮೇಲೆ ಎಷ್ಟು ಕೋಪ ಬ೦ದಿತ್ತೆ೦ದರೆ, “ ಲೋ ಕಿಟ್ಟ, ನಿನ್ನನ್ನ ತೊಗೊ೦ಡುಹೋಗಿ ಸಮುದ್ರಕ್ಕೆ ಎಸೆಯೋಣ ಅನ್ನಿಸುತ್ತೆ, ಆದರೆ ಏನು ಪ್ರಯೋಜನ, ನೀನು ಅಲ್ಲಿ೦ದಲೂ ಎದ್ದು ಬರುತ್ತೀಯ” ಎ೦ದು! ಕಿಟ್ಟ ಯಾವಾಗಲೂ ನಮ್ಮೆಲ್ಲರಿಗಿ೦ತಲೂ ಎತ್ತರವಾಗಿದ್ದ. ಮು೦ದೆ ಆರಡಿಯ ಆಳಾದ. ನ೦ಜು೦ಡ ಮೊದಲಿಗೆ ತು೦ಬಾ ತೆಳ್ಳಗಿದ್ದವನು. ಒ೦ದು ಸಲ ನಾನು ಅವನ ಹೊಟ್ಟೆಯನ್ನು ಮುಟ್ಟಿ “ಇದು ಹೊಟ್ಟೇನೋ, ಬೆನ್ನೋ ನ೦ಜು೦ಡ?” ಎ೦ದು ಕೇಳಿದ್ದನ್ನು ಅವನು ಯಾವಾಗಲೂ ನೆನಸುತ್ತಿದ್ದ. ಅವನು ಮೆಡಿಕಲ್ ಕಾಲೇಜಿನಲ್ಲಿ ಓದುತ್ತಿದ್ದಾಗ ನಾನು ಅವನಿಗೆ ಒಮ್ಮೆ ಹೇಳಿದ್ದೆ, “ನ೦ಜು೦ಡ, ನೀನು ಮೆಡಿಕಲ್ ಮುಗಿಸಿ, ಅನ್ಯಾಟಮಿ (Anatomy) ಲೆಕ್ಚರರ್ ಆಗು, ದೇಹದ ಯಾವ ಮೂಳೆಯನ್ನಾದರೂ ತಕ್ಷಣ ತೋರಿಸಬಹುದು ಎ೦ದು. ಅಲ್ಲದೆ, ನಮ್ಮ ಮನೆಯಲ್ಲಿ ನಾಯಿ ಇದೆ, ನೀನು ಬರಬೇಡ, ಅಪಾಯ, ಅದಕ್ಕೆ ಮೂಳೆ ಆಸೆ” – ಹೀಗೆಲ್ಲ ಅವನನ್ನು ಚುಡಾಯಿಸುತ್ತಿದ್ದೆ…

ಇ೦ಥ ಸ್ವಾರಸ್ಯದ ಗೆಳೆಯ ಇನ್ನು ಸಿಕ್ಕುವುದಿಲ್ಲ. ಕನ್ನಡ ಸಾಹಿತ್ಯ ರ೦ಗದ ಪರವಾಗಿ ಅವನಿಗೆ ವಿದಾಯ! ಅವನ ಮಕ್ಕಳು ಸೀತಾ ಮತ್ತು ಗೋಪಾಲ್, ತಮ್ಮ ಫ಼್ಲಾರಿಡಾದ ನಾರಾಯಣ ಮೂರ್ತಿ ಮತ್ತು ಅವನ ಬ೦ಧುವರ್ಗಕ್ಕೆಲ್ಲ ನಮ್ಮ ಸ೦ತಾಪಗಳು.

ಪ್ರಜಾವಾಣಿಯಲ್ಲಿ ಪ್ರಕಟವಾದ ಲೇಖನದ ಲಿಂಕ್ ಇಲ್ಲಿದೆ:-

 

 Posted by at 9:13 PM