Dec 142014
 

 

 ಎಚ್. ಕೆ. ನಂಜುಂಡಸ್ವಾಮಿ

ಎಚ್. ಕೆ. ನಂಜುಂಡಸ್ವಾಮಿ

ನವೆಂಬರ್, ೩೦, ೨೦೧೪ರಂದು ನಮ್ಮನ್ನು ಅಗಲಿದ ಎಚ್. ಕೆ. ನಂಜುಂಡಸ್ವಾಮಿಯವರಿಗೆ ಕನ್ನಡ ಸಾಹಿತ್ಯರಂಗವು ಶ್ರದ್ಧಾಂಜಲಿ ಅರ್ಪಿಸುತ್ತಿದೆ…

 Posted by at 9:10 PM
Oct 232014
 

ಅಮೆರಿಕದಲ್ಲಿರುವ ಕನ್ನಡ ಬರಹಗಾರರಿಗೆಲ್ಲಾ ದೀಪಾವಳಿ ಹಬ್ಬದ ಹಾರ್ದಿಕ ಶುಭಾಶಯಗಳು.
ನಮ್ಮ-ನಿಮ್ಮೆಲ್ಲರ ’ಕನ್ನಡ ಸಾಹಿತ್ಯ ರಂಗ’ ವು ೨೦೧೫ ರ ಏಳನೆಯ ಸಾಹಿತ್ಯ ಸಮ್ಮೇಳನಕ್ಕೆ ಸಿದ್ಧತೆ ನಡೆಸುತ್ತಿದೆ. ಈ ಸಮ್ಮೇಳನದ ವಿವರಗಳನ್ನು ಸಧ್ಯದಲ್ಲಿಯೇ ತಿಳಿಸಲಾಗುವುದು.

ಪ್ರತಿ ಸಮ್ಮೇಳನದಲ್ಲೂ ಯಾವುದಾದರೊಂದು ವಿಶೇಷ ವಿಷಯವನ್ನು ಕುರಿತಂತೆ ಕನ್ನಡ ಸಾಹಿತ್ಯ ರಂಗವು ಪುಸ್ತಕವನ್ನು ಹೊರತರುವುದು ತಮಗೆಲ್ಲಾ ತಿಳಿದ ಸಂಗತಿ. ಇದೇ ನಿಟ್ಟಿನಲ್ಲಿ ಮುಂದುವರಿಯುತ್ತಾ ಮುಂದಿನ ಸಮ್ಮೇಳನದ ಪುಸ್ತಕಕ್ಕಾಗಿ ಪತ್ರಮುಖೇನ ನಿಮ್ಮೆಲ್ಲರನ್ನೂ ಲೇಖನಗಳಿಗಾಗಿ ಆಹ್ವಾನಿಸುತ್ತಿದ್ದೇವೆ. ಇದರ ಯಶಸ್ಸಿಗೆ ಎಂದಿನಂತೆ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.

ಈ ಬಾರಿಯ ವಿಷಯ – ’ಅನುವಾದ ಸಾಹಿತ್ಯ’
ಅನುವಾದವೆಂದರೇನು? ಎಂದು ಪ್ರಶ್ನಿಸಿದರೆ, ಕೃತಿಯ ಧ್ವನಿಗೆ ಲೋಪ ಬಾರದಂತೆ ಭಾವಾನುವಾದ ಮಾಡುವುದು ಅಥವಾ ಶಬ್ದಶಃ ಭಾಷಾನುವಾದ ಮಾಡುವುದು. ಬಹುತೇಕ ಅನುವಾದಗಳು ಇವೆರಡರ ಮಧ್ಯೆ ನಿಲ್ಲುವ ಸಾಧ್ಯತೆ ಹೆಚ್ಚು. ಅದರಲ್ಲೂ ವಿಭಿನ್ನ ಸಂಸ್ಕೃತಿಗಳ ಭಾಷಾನುವಾದ ಬಹಳ ಕಷ್ಟಸಾಧ್ಯವಾಗಬಹುದು.

ಕನ್ನಡ ಭಾಷಾ ಸಾಹಿತ್ಯಕ್ಕೆ ಇತರ ಭಾಷೆಗಳಿಂದ ಸಮೃದ್ಧವಾಗಿ ಅನುವಾದಗಳ ಮೂಲಕ ಸಾಹಿತ್ಯ ಪ್ರವಹಿಸಿದಂತೆ ಕನ್ನಡ ಭಾಷೆಯ ಉತ್ತಮ ಕೃತಿಗಳೂ ಸಹ ವಿಶ್ವದ ಇತರೆ ಭಾಷೆಗಳಿಗೆ ಅನುವಾದಗೊಂಡಿವೆ. ಕಥೆ, ಕಾದಂಬರಿ, ನಾಟಕ, ಪ್ರಬಂಧ, ಕವಿತೆ, ಪದ್ಯ, ಕಾವ್ಯ ಹೀಗೆ ಸಾಹಿತ್ಯದ ಎಲ್ಲ ಸಾಹಿತ್ಯ ಪ್ರಕಾರಗಳಲ್ಲೂ ಅನುವಾದಗಳು ನಡೆದಿವೆ.

ಈ ಹಿನ್ನೆಲೆಯಲ್ಲಿ ನಾವು ಮುಂದಿನ ಸಂಚಿಕೆಯಲ್ಲಿ ಕನ್ನಡ ಸಾಹಿತ್ಯಕೃತಿಗಳನ್ನು ಇಂಗ್ಲೀಷಿಗೂ ಮತ್ತು ಬೇರೆ ಭಾಷೆಗಳಲ್ಲಿನ ಸಾಹಿತ್ಯ ಕೃತಿಗಳನ್ನು ಕನ್ನಡಕ್ಕೂ ಅನುವಾದಮಾಡಿ ಪ್ರಕಟಿಸುವ ಮೂಲಕ ಸಾಹಿತ್ಯದ ಈ ಕೊಡುಕೊಳ್ಳುವಿಕೆಯನ್ನು ಪ್ರೋತ್ಸಾಹಿಸಲು ಯೋಚಿಸಿದ್ದೇವೆ. ಈ ನಮ್ಮ ಉದ್ದೇಶ ಸಫಲವಾಗಲು ನಿಮ್ಮೆಲ್ಲರ ಸಹಕಾರ ಅತ್ಯಗತ್ಯ.
ನೀವು ಬೇರೆ ಭಾಷೆಗಳಲ್ಲಿ ಓದಿದ ಕೃತಿಯನ್ನು ಕನ್ನಡೀಕರಿಸಲು ಇದೊಂದು ಸದವಕಾಶ ಮತ್ತು ಕನ್ನಡದ ಉತ್ತಮ ಕೃತಿಗಳನ್ನು ಇಂಗ್ಲೀಷಿಗೆ ಅನುವಾದಿಸಲೂಬಹುದು. ನೀವು ಕಳುಹಿಸಬಹುದಾದ ಅನುವಾದಿತ ಕೃತಿಯು ನಿಮ್ಮ ಸ್ವಂತದ್ದಾಗಿದ್ದು, ಈ ಮುನ್ನ ಬೇರೆಲ್ಲೂ ಪ್ರಕಟವಾಗಿರಕೂಡದು. ಕಥೆ, ಕವನ, ಚುಟುಕ, ಹಾಸ್ಯ, ಕಿರು ನಾಟಕ, ಪ್ರಬಂಧ ಇತ್ಯಾದಿಗಳಿಗೆ ಸ್ವಾಗತ.

ಅನುವಾದಕರಿಗೆ ಸೂಚನೆಗಳು
ಅಕ್ಷರದ ಗಾತ್ರ ೧೪ರಲ್ಲಿದ್ದು, ಅನುವಾದಿತ ಬರಹವು ಸುಮಾರು ೮-೧೦ ಪುಟಗಳಿಷ್ಟಿರಲಿ. ಬರಹ ಅಥವಾ ಎಮ್. ಎಸ್. ವರ್ಡ್. ಕಡತವನ್ನು ಉಪಯೋಗಿಸಿ.
ನಿಮ್ಮ ಅನುವಾದಿತ ಕೃತಿಯನ್ನು ಕಳುಹಿಸಲು ಕೊನೆಯ ದಿನಾಂಕ ಡಿಸೆಂಬರ್ ೨೦, ೨೦೧೪.
ಕೃತಿಯ ಜೊತೆಗೆ ನಿಮ್ಮ ಮತ್ತು ಮೂಲ ಲೇಖಕರ ಪುಟ್ಟ ಪರಿಚಯ ಪತ್ರ ಮತ್ತು ಭಾವಚಿತ್ರವನ್ನು ಕಳುಹಿಸುವುದು.
ನಿಮ್ಮ ಕೃತಿಗಳನ್ನು ಕಳುಹಿಸಬೇಕಾದ ವಿಳಾಸ: ksrsammelana2015@gmail.com
ನಿಮ್ಮ ಕೃತಿಯ ಮೂಲ ಲೇಖಕರ ಹೆಸರು, ಭಾಷೆ, ಪ್ರಕಟವಾದ ದಿನಾಂಕ, ಪುಸ್ತಕ, ಇತ್ಯಾದಿಗಳ ವಿವರಗಳನ್ನು ನಮ್ಮ ಸಂಪಾದಕ ಮಂಡಳಿಯೊಡನೆ ಮೊದಲೇ ಹಂಚಿಕೊಳ್ಳಬೇಕಾಗಿ ವಿನಂತಿ.
ಹೆಚ್ಚಿನ ಮಾಹಿತಿಗಾಗಿ ಅಥವಾ ಕಾಪಿರೈಟ್ ವಿಚಾರಗಳಿಗೆ ಸಂಪಾದಕ ಮಂಡಳಿಯನ್ನು ಸಂಪರ್ಕಿಸುವುದು.
ಕನ್ನಡದ ಕೃತಿಗಳನ್ನು ಇಂಗ್ಲೀಷಿಗೆ ಅನುವಾದ ಮಾಡುವವರಿಗೊಂದು ಸೂಚನೆ – ದಯವಿಟ್ಟು ೨೦೦೦ ರ ನಂತರ ಪ್ರಕಟಿತವಾದ ಕೃತಿಗಳನ್ನು ಆಯ್ದುಕೊಳ್ಳುವುದು ಅಥವಾ ಅಮೆರಿಕದ AKKA ಮತ್ತು KSR ನಿಂದ ಮುದ್ರಿತವಾದ ಉತ್ತಮವಾದ ಲೇಖನಗಳನ್ನು ಅನುವಾದಿಸಲು ಆರಿಸಿಕೊಳ್ಳಬೇಕಾಗಿ ವಿನಂತಿ. ಹೆಚ್ಚಿನ ಮಾಹಿತಿಗಳಿಗೆ ಸಂಪಾದಕ ಮಂಡಳಿಯನ್ನು ಸಂಪರ್ಕಿಸಬಹುದು.
ಅನುವಾದಿತ ಕೃತಿಯು ಮುದ್ರಣದ ವಿಷಯದಲ್ಲಿ ಸಂಪಾದಕರ ನಿರ್ಣಯವೇ ಅಂತಿಮವೆಂದು ಪರಿಗಣಿಸಲಾಗುವುದು.

ನಿಮ್ಮ ಪ್ರೋತ್ಸಾಹ ಮತ್ತು ಸಹಕಾರಗಳನ್ನು ನಿರೀಕ್ಷಿಸುವ,
ಕ.ಸಾ.ರಂ. ಸಂಪಾದಕ ಮಂಡಳಿ
Sreekantha Babu – svenkatesha@hotmail.com
Meera P.R – bhameera@gmail.com
Vaishali Hegde – vaishalimadhu@gmail.com
Prakash H Nayak – phn66@yahoo.com
Guruprasad Kaginele – gkaginele@hotmail.com

 Posted by at 9:36 PM
Sep 102014
 

KSR-Logo

May, 29, 2004

ಸ್ಥಳ  : ವಿಲನೊವ ವಿಶ್ವವಿದ್ಯಾಲಯ ಫಿಲಡೆಲ್ಫಿಯ

ಸಹಪ್ರವರ್ತಕರು: ವಿಲನೋವ ವಿಶ್ವವಿದ್ಯಾಲಯದ ಪ್ರಾಚೀನ ಮತ್ತು ಅಧುನಿಕ ಭಾಷಾ ಸಾಹಿತ್ಯಗಳ ವಿಭಾಗ; ಸಹಕಾರ: ತ್ರಿವೇಣಿ (ಪೆನ್ಸಿಲ್ವೇನಿಯ, ನ್ಯೂ ಜೆರ್ಸಿ, ಡೆಲವೇರ್ ತ್ರಿರಾಜ್ಯ ಕನ್ನಡ ಕೂಟ)
ಮುಖ್ಯ ವಸ್ತು: ಕುವೆಂಪು ಜನ್ಮ ಶತಮಾನೋತ್ಸವ
ಮುಖ್ಯ ಅತಿಥಿ: ಡಾ. ಪ್ರಭುಶಂಕರ; ಭಾಷಣ: “ಕನ್ನಡ ಸಾಹಿತ್ಯ: ಒಂದು ಮಿಂಚು ನೋಟ”
ಪುಸ್ತಕ ಬಿಡುಗಡೆ: “ಕುವೆಂಪು ಸಾಹಿತ್ಯ ಸಮೀಕ್ಷೆ” ಪ್ರಧಾನ ಸಂಪಾದಕ: ನಾಗ ಐತಾಳ

2005

ಸ್ಥಳ :  ಲಾಸ್ ಏಂಜಲೀಸ್

ಮುಖ್ಯ ಅತಿಥಿಗಳು – ಬರಗೂರು ರಾಮಚಂದ್ರಪ್ಪ
ಪುಸ್ತಕ ಬಿಡುಗಡೆ – ಆಚೀಚೆಯ ಕಥೆಗಳು

ಸಂಪಾದಕರು : ಗುರುಪ್ರಸಾದ್ ಕಾಗಿನೆಲೆ,

2007

ಸ್ಥಳ : ಬಾಲಾಜಿ ದೇವಾಲಯ, ಅರೋರ, ಇಲಿನಾಯ್
ಮುಖ್ಯ ಅತಿಥಿಗಳು: ಪ್ರೊ. ಅ.ರಾ.ಮಿತ್ರ ಮತ್ತು ಡಾ. ಎಚ್.ಎಸ್.ರಾಘವೇಂದ್ರ ರಾವ್
ಪುಸ್ತಕ ಬಿಡುಗಡೆ – ನಗೆಗನ್ನಡಂ ಗಲ್ಗೆ

ಸಂಪಾದಕರು : ಎಚ್. ಕೆ. ನಂಜುಂಡಸ್ವಾಮಿ, ಎಚ್. ವೈ. ರಾಜಗೋಪಾಲ್

April 31 – May -01, 2009

ಸ್ಥಳ : ವಾಷಿಂಗ್ಟನ್ ಡಿಸಿ.

ಮುಖ್ಯ ಅತಿಥಿಗಳು: ವೀಣಾ ಶಾಂತೇಶ್ವರ ಮತ್ತು ವೈದೇಹಿ

ಪುಸ್ತಕ ಬಿಡುಗಡೆ: ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು ಕಳೆದ ಕಾಲು ಶತಮಾನದ ಪ್ರಮುಖ ಕನ್ನಡ ಕಾದಂಬರಿಗಳ ಅವಲೋಕನ

ಸಂಪಾದಕರು :  ಮೈ, ಶ್ರೀ. ನಟರಾಜ
ವರ್ಷ 2011

ಸ್ಥಳ : -ವುಡ್ ಸೈಡ್ ಪ್ರೌಢಶಾಲೆ, ಚರ್ಚಿಲ್ ಅವೆನ್ಯು CA 94062.

ಮುಖ್ಯ ಅತಿಥಿಗಳು: ಸುಮತೀಂದ್ರ ನಾಡಿಗ ಮತ್ತು ಭುವನೇಶ್ವರಿ ಹೆಗಡೆ

ಪುಸ್ತಕ ಬಿಡುಗಡೆ: ಮಥಿಸಿದಷ್ಟೂ ಮಾತು (ಅಮೆರಿಕದ ಕನ್ನಡಿಗರ ಸಲ್ಲಾಪ-ಹರಟೆ-ಚಿಂತನೆ)

ಸಂಪಾದಕರು : ತ್ರಿವೇಣಿ ಶ್ರೀನಿವಾಸರಾವ್, ಎಂ. ಆರ್. ದತ್ತಾತ್ರಿ

May 17, 18, 2013

ಸ್ಥಳ : ಹ್ಯೂಸ್ಟನ್, ಟೆಕ್ಸಸ್
ಮುಖ್ಯ ಅತಿಥಿಗಳು – ಕೆ.ವಿ. ತಿರುಮಲೇಶ್

ಪುಸ್ತಕ ಬಿಡುಗಡೆ – ಬೇರು ಸೂರು

ಸಂಪಾದಕರು : ಗುರುಪ್ರಸಾದ್ ಕಾಗಿನೆಲೆ, ಜ್ಯೋತಿ ಮಹದೇವ್, ತ್ರಿವೇಣಿ ಶ್ರೀನಿವಾಸರಾವ್

 May 30, 31, 2015 

ಸಾರಂ ಮುಂದಿನ ಸಮ್ಮೇಳನ  ಮೇ, ೩೦, ೩೧ ರಂದು ಮಿಸೋರಿ ರಾಜ್ಯದ ಸೈಂಟ್‍ಲೂಯಿಸಿನಲ್ಲಿ ನಡೆಯಲಿದೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಿ…

 Posted by at 9:37 AM
Aug 222014
 

U_R_Ananthamurthy_Z1 ಹಿರಿಯ ಸಾಹಿತಿ, ಜ್ಞಾನಪೀಠ ಪ್ರಶಸ್ತಿ ಪುರಸ್ಕ್ರುತ ಅನಂತಮೂರ್ತಿಯವರು ನಿಧನ ಹೊಂದಿದ್ದಾರೆ. ಅವರ ನಿಧನದಿಂದಾಗಿ ಕನ್ನಡ ಸಾಹಿತ್ಯಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಅನಂತಮೂರ್ತಿಯವರು ಕನ್ನಡಸಾಹಿತ್ಯದಲ್ಲಿ ಮೂಡಿಸಿದ ಛಾಪು ಚಿರಕಾಲ ಉಳಿಯುವಂಥದ್ದು. ಕನ್ನಡಸಾಹಿತ್ಯ ಪರಂಪರೆ ಅವರಿಂದ ಶ್ರೀಮಂತವಾಗಿದೆ.  ಅನಂತಮೂರ್ತಿಯವರ ನಿಧನಕ್ಕೆ ಕನ್ನಡ ಸಾಹಿತ್ಯ ರಂಗವು ಶ್ರದ್ಧಾಂಜಲಿ ಅರ್ಪಿಸುತ್ತಿದೆ.

 

ಡಾ. ಯು. ಆರ್. ಅನಂತಮೂರ್ತಿ ಇಂದು (ಆಗಸ್ಟ್ 22, 2014) ನಿಧನರಾಗಿದ್ದಾರೆ.

ಉಡುಪಿ ರಾಜಗೋಪಾಲಾಚಾರ್ಯ ಅನಂತಮೂರ್ತಿ ಶಿವಮೊಗ್ಗ ಜಿಲ್ಲೆಯ ಮೇಳಿಗೆಯಲ್ಲಿ 1932 ಡಿಸೆಂಬರ್ 21ರಂದು ರಾಜಗೋಪಾಲಾಚಾರ್ಯ-ಸತ್ಯಮ್ಮ ದಂಪತಿಗಳ ಹಿರಿಯ ಮಗನಾಗಿ ಜನಿಸಿದರು. ಅವರ ತಾತ ಪದ್ಮನಾಭಾಚಾರ್ಯ ಅಂಗಿ ತೊಡದೆ ಧೋತ್ರ ಹೊದೆದು ಜುಟ್ಟಿನಲ್ಲಿ ತುಳಸಿ ಮುಡಿಯುತ್ತಿದ್ದ ಶುದ್ಧ ವೈದಿಕ ಬ್ರಾಹ್ಮಣ, ಸಾಹಸಪ್ರಿಯ, ಅಲೆಮಾರಿ. ತಂದೆ ರಾಜಗೋಪಾಲಾಚಾರ್ಯರು ಆ ಕಾಲದಲ್ಲೇ ಲಂಡನ್ ಮೆಟ್ರಿಕ್ಯುಲೇಷನ್ ಹಾಗೂ ಕೇಂಬ್ರಿಡ್ಜ್ ಪರೀಕ್ಷೆ ಕಟ್ಟಿ ಉತ್ತೀರ್ಣರಾದವರು. ಅರ್ಚಕರಾಗಿ, ಶ್ಯಾನುಭೋಗರಾಗಿ, ಅಕೌಂಟೆಂಟ್ ಆಗಿ, ಪೋಸ್ಟ್ ಮಾಸ್ಟರ್, ಮಠದ ಪಾರುಪತ್ಯೇಗಾರ – ಹೀಗೆ ಹಲವು ಹುದ್ದೆಗಳಲ್ಲಿದ್ದು ವಿಶಿಷ್ಟ ವ್ಯಕ್ತಿತ್ವ ರೂಢಿಸಿಕೊಂಡವರು. ಗಾಂಧೀಜಿ, ರಾಜಾಜಿ ಅಂತಹವರ ಅಭಿಮಾನಿ. ಇಂಗ್ಲೀಷ್ ಸಾಹಿತ್ಯವನ್ನು ಸಾಕಷ್ಟು ಓದಿಕೊಂಡವರು. ಗಾಂಧೀಜಿಯವರ ‘ಹರಿಜನ’ ಪತ್ರಿಕೆ ತರಿಸುತ್ತಿದ್ದರು. ‘ಪುರಷಸೂಕ್ತವನ್ನು’ ಪಠಿಸುತ್ತಿದ್ದರು. ಒಂದು ರೀತಿಯಲ್ಲಿ ರಾಜಗೊಪಾಲಾಚಾರ್ಯರು ಎರಡು ಪ್ರಪಂಚಗಳ ನಡುವೆ ಇದ್ದವರು. ಕೆಲವೊಮ್ಮೆ ಕ್ರಾಪು, ಮತ್ತೆ ಕೆಲವೊಮ್ಮೆ ಜುಟ್ಟು, ಇನ್ನು ಕೆಲವೊಮ್ಮೆ ಕ್ರಾಪು ಜುಟ್ಟು ಎರಡೂ ಇರೋದು. ಮುಂದೆ ಅನಂತಮೂರ್ತಿಯವರ ಕೃತಿಗಳಲ್ಲಿ ಪ್ರಧಾನವಾಗಿ ಕಂಡುಬರುವ conflictಗಳಿಗೆಲ್ಲ ಮೂಲವನ್ನು ನಾವು ಇಲ್ಲಿಯೇ ಗುರುತಿಸಬಹುದಾಗಿದೆ. ತಂದೆಯವರಿಗೆ ಮಗ ಅನಂತಮೂರ್ತಿ ಗಣಿತಶಾಸ್ತ್ರಜ್ಞನಾಗಬೇಕೆಂಬ ಆಸೆಯಿತ್ತು. ಆದರೆ ಮಗನ ಮನಸ್ಸು ಸಾಹಿತ್ಯದತ್ತ ಒಲಿದಾಗ ಅದಕ್ಕೆ ಅಡ್ಡಿಯುಂಟುಮಾಡಲಿಲ್ಲ.

ಸಂಪ್ರದಾಯವಾದಿಯ ಕರ್ಮಠತನದ ಹಠಮಾರಿತನವಾಗಲೀ, ಪರಂಪರೆಯ ಅರಿವಿಲ್ಲದ ಆಧುನಿಕತೆಯ ಸಿನಿಕತನವಾಗಲೀ ತಿರಸ್ಕಾರಯೋಗ್ಯ ಎಂದು ಪ್ರತಿಪಾದಿಸುತ್ತಾ ಕನ್ನಡ ಸಾಹಿತ್ಯಲೋಕದಲ್ಲಿ ನಮ್ಮ ಕಾಲದ ಸೃಜನಶೀಲ ಚಿಂತಕರು ಎಂದು ಹೆಸರು ಪಡೆದಿರುವವರು ಡಾ. ಯು. ಆರ್. ಅನಂತಮೂರ್ತಿಗಳು. ತಮ್ಮ ಕೃತಿಗಳ ಮೂಲಕ ನಮ್ಮನ್ನು ನಾವೇ ಒಳಹೊಕ್ಕು ನೋಡುವಂತೆ ಮಾಡುವ, ಸಮಕಾಲೀನ ವಾಸ್ತವ ದ್ವಂದ್ವಗಳಿಗೆ ನಮ್ಮನ್ನು ಕೈಹಿಡಿದು ಕರೆದೊಯ್ಯುವ ಸಂಗಾತಿಯಾಗುತ್ತಾರೆ. ಏಕಕಾಲದಲ್ಲಿ ಒಳಗಿನವರಂತೆ ಆಪ್ತವಾಗಿಯೂ, ಹೊರಗಿನವರಂತೆ ವಿಶ್ಲೇಷಣಾತ್ಮಕ ಸಮಕಾಲೀನ ಸಮಸ್ಯೆಗಳ ಬಗ್ಗೆ ಚಿಂತಿಸುವವರಾಗಿಯೂ ಮೂಡುವ ಅನಂತಮೂರ್ತಿ ಕನ್ನಡಸಂಸ್ಕೃತಿ ಕಂಡ ವಿಶಿಷ್ಟಪ್ರತಿಭೆ.

ಒಂದು ಕಡೆ ಮಠದ ಪರಿಸರ, ಅಲ್ಲಿನ ಪೂಜೆ ಪುನಸ್ಕಾರಗಳು, ಮತ್ತೊಂದೆಡೆ ಬರ್ನಾಡ್ ಷಾ, ಮತ್ತು ನಿರೀಶ್ವರವಾದಿ ಇಂಗರ್ ಸಾಲ್ ಬಗ್ಗೆ ಹೇಳುತ್ತಿದ್ದ ಸಿನ್ಹಾ ಮೇಷ್ಟರು, ದಾಳಿಂಬೆ ಮರದಡಿ ಕುಳಿತು ಕತೆ ಹೇಳುತ್ತಿದ್ದ ಅಬ್ಬಕ್ಕ, ಸಂಸ್ಕೃತ ಪಾಠ ಹೇಳುತ್ತಿದ್ದ ನಿಷ್ಠ ಸದಾಶಿವ ಭಟ್ಟರು, ಇಡೀ ಊರನ್ನು ಆಕ್ರಮಿಸಿ ಬಲಿ ತೆಗೆದುಕೊಳ್ಳುತ್ತಿದ್ದ ಪ್ಲೇಗ್ ಈ ಎಲ್ಲವೂ ಅನಂತಮೂರ್ತಿಯವರ ವ್ಯಕ್ತಿತ್ವವನ್ನು ಬಾಲ್ಯದಲ್ಲಿ ರೂಪಿಸಿದ ಸಂಗತಿಗಳು.

ಅನಂತಮೂರ್ತಿಯವರ ಪ್ರಾಥಮಿಕ ವಿದ್ಯಾಭ್ಯಾಸ ಮೇಳಿಗೆ, ಕೋಣಂದೂರು, ತೀರ್ಥಹಳ್ಳಿ ಶಾಲೆಗಳಲ್ಲಿ ನಡೆಯಿತು. ನಂತರ ಇಂಟರ್ ಮೀಡಿಯಟ್ ಓದಲು ಶಿವಮೊಗ್ಗದ ಸರ್ಕಾರಿ ಕಾಲೇಜು ಸೇರಿದರು. ಶಿವಮೊಗ್ಗದಲ್ಲಿದ್ದಾಗಲೇ ಕಾಗೋಡು ಸತ್ಯಾಗ್ರಹದಲ್ಲಿ ಅನಂತಮೂರ್ತಿ ಭಾಗಿಯಾಗಿದ್ದು. ಇದು ಅವರ ಜೀವನದ ದಿಕ್ಕನ್ನೇ ಬದಲಿಸಿದ ಮಹತ್ವದ ಘಟನೆ. ಡಾಕ್ಟರ್ ಲೋಹಿಯಾರ ಕ್ರಾಂತಿಕಾರಕ ವೈಚಾರಿಕತೆ, ಶಾಂತವೇರಿ ಗೋಪಾಲಗೌಡರ ಆತ್ಮೀಯ ಒಡನಾಟ, ರಮಾನಂದ ಮಿಶ್ರ ಎಂಬ ಬಿಹಾರದ ರೈತ ನಾಯಕನ ಭಾಷಣ – ಇವೆಲ್ಲ ಅನಂತಮೂರ್ತಿಯ ಒಳಗಿನ ಚಿಂತಕನನ್ನು, ಬರಹಗಾರನನ್ನು ಬಡಿದೆಬ್ಬಿಸಿದ ಪ್ರೇರಣೆಗಳು.

ಮುಂದೆ ಅನಂತಮೂರ್ತಿ ಮೈಸೂರಿನಲ್ಲಿ ಬಿ.ಎ (ಆನರ್ಸ್) ಹಾಗೂ ಎಂ.ಎ (ಇಂಗ್ಲೀಷ್) ಪದವಿ ಪಡೆದು ಇಂಗ್ಲೆಂಡಿನ ಬರ್ಮಿಂಗ್ ಹ್ಯಾಮ್ ವಿಶ್ವ ವಿದ್ಯಾಲಯದಿಂದ ಪಿಎಚ್.ಡಿ ಪದವಿ ಪಡೆದರು. 1956ರಲ್ಲಿ ಹಾಸನದ ಸರ್ಕಾರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇರಿದ ಅನಂತಮೂರ್ತಿ ನಂತರ ಮೈಸೂರಿನ ಮಹಾರಾಜ ಕಾಲೇಜು, ರೀಜನಲ್ ಕಾಲೇಜುಗಳಲ್ಲಿ ಕೆಲಕಾಲ ಕೆಲಸಮಾಡಿ ನಂತರ ಮೈಸೂರು ವಿಶ್ವವಿದ್ಯಾಲಯದ ಇಂಗ್ಲೀಷ್ ವಿಭಾಗ ಸೇರಿದರು. ರೀಡರ್ ಆಗಿ, ಪ್ರಾಧ್ಯಾಪಕರಾಗಿ ಸೇವೆಸಲ್ಲಿಸಿ, ಕೇರಳದ ಕೊಟ್ಟಾಯಂ ಮಹಾತ್ಮಗಾಂಧಿ ವಿಶ್ವವಿದ್ಯಾಲಯದಲ್ಲಿ 1987ರಿಂದ 91ರವರೆಗೆ ಕುಲಪತಿಗಳಾಗಿ ಕಾರ್ಯನಿರ್ವಹಿಸಿದರು. ಅಮೆರಿಕದ ಅಯೋವಾ ವಿಶ್ವ ವಿದ್ಯಾಲಯ, ಟಫ್ಟ್ಸ್ ವಿಶ್ವವಿದ್ಯಾಲಯ, ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯ, ದೆಹಲಿಯ ಜವಹರಲಾಲ್ ವಿಶ್ವವಿದ್ಯಾಲಯ – ಮೊದಲಾದ ಕಡೆ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು. ಅನಂತಮೂರ್ತಿ ನ್ಯಾಷನಲ್ ಬುಕ್ ಟ್ರಸ್ಟ್ ಅಧ್ಯಕ್ಷರಾಗಿ, ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಅನಂತಮೂರ್ತಿಯವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಮಾಸ್ತಿ ಪ್ರಶಸ್ತಿ, ರವೀಂದ್ರಭಾರತೀ ವಿಶ್ವವಿದ್ಯಾಲಯ ಗೌರವ ಡಿಲಿಟ್ ಪ್ರಶಸ್ತಿ, ಹಿಮಾಚಲ ಪ್ರದೇಶ ಸರಕಾರದ ಶಿಖರ್ ಸನ್ಮಾನ ಪ್ರಶಸ್ತಿ, ಭಾರತ ಸರ್ಕಾರದ ಪದ್ಮಭೂಷಣ ಪ್ರಶಸ್ತಿ, ಜ್ಞಾನಪೀಠ ಪ್ರಶಸ್ತಿ – ಮೊದಲಾದ ಅನೇಕ ಪ್ರಶಸ್ತಿಗಳು ಸಂದಿವೆ.

ಪ್ರಾಥಮಿಕ ಶಾಲಾ ವಿದ್ಯಾರ್ಥಿಯಾಗಿದ್ದ ಅನಂತಮೂರ್ತಿ ತನ್ನ ಗೆಳೆಯರೊಡನೆ ‘ತರಂಗಿಣಿ’ ಎಂಬ ಕೈಬರಹದ ಪತ್ರಿಕೆಯೊಂದನ್ನು ತರುತ್ತಿದ್ದರು. ಇಂಟರ್ ಮೀಡಿಯೆಟ್ ಓದುತ್ತಿದ್ದಾಗ ‘ಮಿತ್ರ’ ಪತ್ರಿಕೆಯಲ್ಲಿ ಅವರ ಕೆಲವು ಕತೆ, ಕವನಗಳು ಪ್ರಕಟವಾಗಿದ್ದವು. ನಂತರ ‘ಚಿತ್ರಗುಪ್ತ’, ಜನಪ್ರಗತಿ’ ಪತ್ರಿಕೆಗಳಿಗೂ ಕೆಲವು ಕತೆಗಳನ್ನು ಬರೆದರು. ಪ್ರಸಿದ್ಧಿ ತಂದುಕೊಟ್ಟ ಮೊದಲ ಕತೆ ‘ಎಂದೆಂದೂ ಮುಗಿಯದ ಕತೆ’. ಇದು ಮೈಸೂರಿನ ‘ವಾರ್ಸಿಟಿ ಟೈಮ್ಸ್’ನಲ್ಲಿ ಪ್ರಕಟವಾಯಿತು. 1955ರಲ್ಲಿ ಅವರ ಪ್ರಥಮ ಕಥಾ ಸಂಕಲನ ಇದೇ ಹೆಸರಿನಲ್ಲಿ ಗೋಪಾಲಕೃಷ್ಣ ಅಡಿಗರ ‘ಮುನ್ನುಡಿ’ಯೊಡನೆ ಪ್ರಕಟವಾಯಿತು. ಅನಂತರ ನಾಲ್ಕು ಕಥಾಸಂಕಲನಗಳನ್ನು ಅವರು ಪ್ರಕಟಿಸಿದ್ದಾರೆ.

‘ಎಂದೆಂದೂ ಮುಗಿಯದ ಕಥೆ’ ಸಂಕಲನಕ್ಕೆ ಮುನ್ನುಡಿ ಬರೆದಿರುವ ಅಡಿಗರು “ ‘ತಾಯಿ’ ಮತ್ತು ‘ಹೆಂಗರುಳು’ ಎಂಬ ಇಲ್ಲಿರುವ ಸಣ್ಣಕತೆಗಳು ತಂತ್ರದ ದೃಷ್ಟಿಯಿಂದ ಅತ್ಯುತ್ತಮವಾದ ಕಥೆಗಳು ಎನ್ನಬಹುದು. ಇವು ಈ ಸಂಕಲನದಲ್ಲಿ ಮಾತ್ರವಲ್ಲ ನಮ್ಮ ಕಥಾಲೋಕದಲ್ಲೇ ಎರಡು ಉಜ್ವಲ ರತ್ನಗಳು. ಈ ಎರಡು ಕತೆಗಳನ್ನು ಬರೆದ ಸಾಹಿತಿ ಕೃತಕೃತ್ಯ. ಆತನನ್ನು ತರುಣ ಸಾಹಿತಿ ಎಂದು ಬೆನ್ನು ಚಪ್ಪರಿಸುವುದು ಅನಗತ್ಯ ಮಾತ್ರವಲ್ಲ ದಾರ್ಷ್ಟ್ಯವೂ ಆದೀತು” ಎಂದು ಹೇಳಿ ಅನಂತಮೂರ್ತಿಯವರನ್ನು ಅವರ ಮೊದಲಕಥಾಸಂಕಲನದಲ್ಲೇ ಪ್ರಬುದ್ಧ ಸಾಹಿತಿ ಎಂದು ಗುರುತಿಸಿ ಪ್ರಶಂಸಿಸಿದ್ದಾರೆ. ಇದು ಆಕಸ್ಮಿಕವಲ್ಲ ಎಂಬುದನ್ನು ಅವರ ಮುಂದೆ ಬಂದ ಕತೆಗಳಲ್ಲಿನ ಬೆಳವಣಿಗೆ ನಿಚ್ಚಳವಾಗಿ ತೋರುತ್ತವೆ.

ಮೊದಲ ಕತೆ ‘ಎಂದೆಂದೂ ಮುಗಿಯದ ಕಥೆ’ಯಲ್ಲಿಯೇ ಅನಂತಮೂರ್ತಿ ತಮ್ಮ ಸೃಜನಶೀಲತೆಯ ಸ್ವರೂಪದ ಹುಡುಕಾಟ ಆರಂಭಿಸಿದಂತೆ ತೋರುತ್ತದೆ. ಒಮ್ಮೆ ಮಕ್ಕಳು ಮೊಮ್ಮಕ್ಕಳಾಗಿದ್ದವರು ಈಗ ಅಜ್ಜ ಅಜ್ಜಿಯರಾಗಿದ್ದಾರೆ. ಅವರೀಗ ತಮ್ಮ ಮೊಮ್ಮಕ್ಕಳಿಗೆ ಕತೆ ಹೇಳುತ್ತಿದ್ದಾರೆ. ಆ ಕತೆಯಾದರೂ ಯಾವುದು? ತಮ್ಮ ಅಜ್ಜ ಅಜ್ಜಿಯರಿಂದ ಕೇಳಿದ ಕತೆ. ಬದುಕು ಮುಂದುವರಿದಂತೆ ಕತೆಯೂ ಮುಂದುವರೆಯುತ್ತದೆ. ಒಂದು ಕುಟುಂಬದ ಸಾಮಾನ್ಯ ಕತೆ ಇಡೀ ಬದುಕನ್ನು, ಸೃಷ್ಟಿಯನ್ನು ಒಳಗೊಂಡು ಬೆಳೆಯುವ ಕ್ರಮ ಆಶ್ಚರ್ಯಕರವಾಗಿದೆ. ‘ಈ ಕಥೆ ಕೊನೆ ಮುಟ್ಟಿದರೆ – ಬೆಳಕಾಗಲ್ಲ, ಕತ್ತಲಾಗಲ್ಲ, ಮರದಲ್ಲಿ ಹಣ್ಣಾಗಲ್ಲ, ಗಿಡದಲ್ಲಿ ಹೂವಾಗಲ್ಲ – ಮೊಮ್ಮಕ್ಕಳಿಗೆ ಕಥೆ ಹೇಳೋ ಅಜ್ಜಿಯರೂ ಬದುಕಲ್ಲ’.

ಬದುಕಿನ ಭಾವಪೂರ್ಣ ಘಟನೆಗಳನ್ನು ವೈಚಾರಿಕತೆಯ ಒಡಲಿನಲ್ಲಿಟ್ಟು ಅದರ ಅರ್ಥವಂತಿಕೆಯನ್ನು ಅನ್ವೇಷಿಸುವ ಪ್ರಯತ್ನ ಆರಂಭದ ಕತೆಗಳಲ್ಲಿ ಕಂಡರೆ, ನಂತರದ ಕತೆಗಳಲ್ಲಿ ವಸ್ತುಪ್ರಪಂಚ ವಿಸ್ತಾರವಾಗಿರುವುದನ್ನು ಕಾಣಬಹುದು. ಅಮೂರರು ಗುರುತಿಸಿರುವಂತೆ ನವ್ಯಕತೆಗಾರರಲ್ಲಿ ಅನಂತಮೂರ್ತಿ ಪ್ರಮುಖಸ್ಥಾನ ಪಡೆದುಕೊಂಡಿದ್ದು ಅವರ ‘ಪ್ರಶ್ನೆ’ ಸಂಕಲನದಿಂದ. ಈ ಸಂಕಲನದ ಪ್ರಕೃತಿ, ಘಟಶ್ರಾದ್ಧ, ಕಾರ್ತೀಕ ಕತೆಗಳು ಕನ್ನಡ ಶ್ರೇಷ್ಠಕತೆಗಳ ಸಾಲಿನಲ್ಲಿ ನಿಲ್ಲಬಲ್ಲಂಥವು.

ನಮ್ಮ ಸಮಾಜ ಎದುರಿಸುತ್ತಿರುವ ಸಾಂಸ್ಕೃತಿಕ ಸಂಘರ್ಷದ ಸ್ವರೂಪವನ್ನು ಬಹುಮುಖೀ ನೆಲೆಯನ್ನು ತಮ್ಮ ಕತೆಗಳ ಮೂಲಕ ವಿಶ್ಲೇಷಿಸಲು ಪ್ರಯತ್ನಿಸುವ ಅನಂತಮೂರ್ತಿಯವರು ನಂತರದ ಹಂತದ ನವಿಲುಗಳು, ಸೂರ್ಯನ ಕುದುರೆ, ಅಕ್ಕಯ್ಯ ಮೊದಲಾದ ಕತೆಗಳಲ್ಲಿ ಮತ್ತೊಂದು ರೀತಿಯ ಬೆಳವಣಿಗೆಯನ್ನು ಸೂಚಿಸುತ್ತಾರೆ. ಎಂದೆಂದೂ ಮುಗಿಯದ ಕತೆ, ಪ್ರಶ್ನೆ, ಮೌನಿ, ಆಕಾಶ ಮತ್ತು ಬೆಳಕು ಹಾಗೂ ಸೂರ್ಯನ ಕುದುರೆ ಕಥಾಸಂಕಲನಗಳಲ್ಲಿ ಕಾಣುವ ಬೆಳವಣಿಗೆ ಅನಂತಮೂರ್ತಿಯವರ ಸೃಜನಶೀಲ ಪ್ರತಿಭೆ ಹೇಗೆ ಹೊಸ ಹುಡುಕಾಟದಲ್ಲಿ ನಿರಂತರ ತನ್ನನ್ನು ತೊಡಗಿಸಿಕೊಂಡಿದೆ ಎಂಬುದನ್ನು ಸೂಚಿಸುತ್ತದೆ. ಸಣ್ಣಕತೆಯ ಸಾಧ್ಯತೆಗಳನ್ನು ವಿಸ್ತರಿಸಿದ ಮಹತ್ವದ ಕತೆಗಾರ ಅನಂತಮೂರ್ತಿ ಎಂಬುದನ್ನು ಕನ್ನಡ ವಿಮರ್ಶೆ ನಿಸ್ಸಂದೇಹವಾಗಿ ಗುರ್ತಿಸಿದೆ.

‘ಸಂಸ್ಕಾರ’ ಹಳೆಯ ಕಥಾವಸ್ತುವೊಂದನ್ನು, ಸನಾತನ ಪರಂಪರೆಯ ಪರಿಕಲ್ಪನೆಯನ್ನು ಸಮಕಾಲೀನಗೊಳಿಸುವ ಒಂದು ಕಾದಂಬರಿ. ಬ್ರಾಹ್ಮಣ್ಯವನ್ನು ಧಿಕ್ಕರಿಸಿದ ಬ್ರಾಹ್ಮಣನೊಬ್ಬನ ಸಾವು, ಆತನ ಶವಸಂಸ್ಕಾರದ ಸಮಸ್ಯೆ ಕಾದಂಬರಿಯ ಕೇಂದ್ರ. ಈ ಶವಸಂಸ್ಕಾರದ ಸಮಸ್ಯೆ ವ್ಯಕ್ತಿತ್ವದ ‘ಸಂಸ್ಕಾರ’ವಾಗಿ ಪರಿವರ್ತನೆಗೊಳ್ಳುವ ಬಗೆ ಈ ಕಾದಂಬರಿಯ ವಸ್ತು ವಿನ್ಯಾಸ. ವೇದಾಂತಶಿರೋಮಣಿ ಪ್ರಾಣೇಶಾಚಾರ್ಯ, ಬ್ರಾಹ್ಮಣ್ಯ ದ್ಧಿಕ್ಕರಿಸಿದ ನಾರಣಪ್ಪ. ಇವು ಯಾವುದರ ಹಂಗೂ ಇಲ್ಲದೆ ಅಪ್ಪಟ ಲೌಕಿಕ ಬದುಕಿನ ಇಹದ ವ್ಯಕ್ತಿ ಮಾಲೇರ ಪುಟ್ಟ – ಈ ಮೂವರ ಬದುಕಿನ ಕ್ರಮಗಳು ಪರಸ್ಪರ ಮುಖಾಮುಖಿಯಾಗುತ್ತ ಸಂಸ್ಕಾರವೆಂಬುದು ಕೃತಿಯ ವಸ್ತುಮಾತ್ರವಲ್ಲದೆ, ಅದರ ಸ್ವರೂಪ ದರ್ಶನವೂ ಆಗಿಬಿಡುವ ಕ್ರಮ ‘ಸಂಸ್ಕಾರ’ ಕಾದಂಬರಿಯನ್ನು ಶ್ರೇಷ್ಠಕಲಾಕೃತಿಯಾಗಿಸಿದೆ. 1970ರಲ್ಲಿ ‘ಸಂಸ್ಕಾರ’ ಪಟ್ಟಾಭಿರಾಮರೆಡ್ಡಿ ಅವರ ನಿರ್ದೇಶನದಲ್ಲಿ ಚಲನಚಿತ್ರವಾಗಿ ನಾಡಿನಾದ್ಯಂತ ವಿಚಾರಕ್ರಾಂತಿಯನ್ನೆಬ್ಬಿಸಿತು. ರಾಷ್ಟ್ರಪತಿಯವರ ಸ್ವರ್ಣಪದಕವನ್ನು ಪಡೆದ ಈ ಕೃತಿ ಹೊಸ ಅಲೆಯ ಚಲನಚಿತ್ರ ಚಳುವಳಿಗೆ ಪ್ರೇರಣೆ ಒದಗಿಸಿತು.

ಸಂಸ್ಕಾರದ ನಂತರ ಅನಂತಮೂರ್ತಿಯವರು ‘ಭಾರತೀಪುರ’, ‘ಅವಸ್ಥೆ’ ಹಾಗೂ ‘ಭವ’ ಕಾದಂಬರಿಗಳನ್ನು ಬರೆದಿದ್ದಾರೆ. ಭಾರತೀಪುರ ಕಾದಂಬರಿ – ‘ಒಬ್ಬ ಭಾರತೀಯ ಸೋಷಲಿಸ್ಟ್ ಸುಧಾರಕನ ಕಥೆ. ಆಧುನಿಕ ಪಾಶ್ಚಾತ್ಯ ವಿದ್ಯಾಭ್ಯಾಸ ಪಡೆದ ಇಂಡಿಯಾದ ತರುಣನೊಬ್ಬನ ತಲ್ಲಣಗಳ ಕಥೆ, ಸಮಾಜ ಸುಧಾರಣೆಯ ವಿಫಲ ಕತೆ.’ ಅವಸ್ಥೆ – ‘ಹಿಂದುಳಿದ ಜಾತಿಗಳಿಂದ ಮೇಲೆದ್ದು ಬಂದ ಉತ್ಸಾಹೀ ಪ್ರಾಮಾಣಿಕ ರಾಜಕೀಯ ನಾಯಕನೋಬ್ಬನು ಭ್ರಷ್ಟ ರಾಜಕಾರಣದ ಬಲೆಯಲ್ಲಿ ಸಿಲುಕಿ ಸೋಲುವ ಕಥೆ; ರೈತ ಚಳುವಳಿಯ ರಾಜಕಾರಣದ ಸೋಲಿನ ಕಥೆ.’ ‘ಭವ’ ಕಾದಂಬರಿ – ಆಧುನಿಕ ಬದುಕಿನ ಸಮಸ್ಯೆಗಳನ್ನು ಅದರ ಆಯಸ್ಥಳಗಳಲ್ಲಿ ಮುಟ್ಟಿನೋಡಲು ಪ್ರಯತ್ನಿಸುತ್ತದೆ. ಬದುಕಿನ ‘ಅನುರಕ್ತಿ-ವಿರಕ್ತಿ’ಗಳ ಸ್ವರೂಪವನ್ನು ಶೋಧಿಸಲು ಬಯಸುತ್ತದೆ.

ಹೀಗೆ ಅನಂತಮೂರ್ತಿಯವರ ಕಾದಂಬರಿಗಳು ಸಮಕಾಲೀನ ವೈಯಕ್ತಿಕ ಹಾಗೂ ಸಾಮಾಜಿಕ ಸಮಸ್ಯೆಗಳನ್ನು ಸೃಜನಶೀಲ ನೆಲೆಯನ್ನು ಚರ್ಚಿಸಬಯಸುವ ಮಹತ್ವದ ಪ್ರಯತ್ನಗಳಾಗಿ ಕಾಣಿಸುತ್ತವೆ.

“ಐವತ್ತರ ದಶಕದಲ್ಲಿ ಕವಿತೆಯ ಗುಂಗಿನಲ್ಲಿದ್ದವ ಕಥೆಗಾರನಾದೆ. ಆದರೆ ಕಥೆಗಳಲ್ಲೂ ಕವಿತೆಯನ್ನೇ ಬರೆದೆ” ಎನ್ನುತ್ತಾರೆ ಅನಂತಮೂರ್ತಿ. 1963ರಲ್ಲಿ ಅನಂತಮೂರ್ತಿ ‘ಬಾವಲಿ’ ಕವನಸಂಕಲನ ಪ್ರಕಟಿಸಿದರು. ನಂತರದಲ್ಲಿ ಆ ಹತ್ತು ಕವಿತೆಗಳಿಗೆ ಇನ್ನೈದು ಸೇರಿಸಿ ’15 ಪದ್ಯಗಳು’ ಎಂಬ ಸಂಕಲನವನ್ನು 1970ರಲ್ಲಿ ಪ್ರಕಟಿಸಿದರು. ‘ಅಜ್ಜನ ಹೆಗಲ ಸುಕ್ಕುಗಳು’ 1989ರಲ್ಲಿ ಪ್ರಕಟವಾಯಿತು. 1992ರಲ್ಲಿ ‘ಮಿಥುನ’ ಸಂಕಲನವನ್ನೂ ಅನಂತಮೂರ್ತಿ ಪ್ರಕಟಿಸಿದ್ದಾರೆ.

‘ಆವಾಹನೆ’ ಅನಂತಮೂರ್ತಿಯವರು ಬರೆದಿರುವ ಏಕೈಕ ನಾಟಕ. ಸೃಜನಶೀಲ ಚಿಂತಕರಾದ ಅನಂತಮೂರ್ತಿಯವರು ಹಲವಾರು ಉತ್ತಮ ವಿಮರ್ಶಾ ಸಂಕಲನಗಳನ್ನು ಪ್ರಕಟಿಸಿದ್ದಾರೆ. ‘ಪ್ರಜ್ಞೆ-ಪರಿಸರ’, ‘ಸೃಜನಶೀಲತೆ-ತತ್ವಚಿಂತನೆ’, ‘ಶೂದ್ರ-ಬ್ರಾಹ್ಮಣ’, ‘ಜಗಲಿ-ಹಿತ್ತಿಲು’ ಹೀಗೆ ಅನೇಕ ಪರಿಕಲ್ಪನೆಗಳನ್ನು ಅನಂತಮೂರ್ತಿ ಕನ್ನಡ ಸಂಸ್ಕೃತಿಗೆ ನೀಡಿದ್ದಾರೆ. 1981ರಲ್ಲಿ ಅನಂತಮೂರ್ತಿ ‘ಋಜುವಾತು’ ಎಂಬ ತ್ರೈಮಾಸಿಕ ಪತ್ರಿಕೆ ಪ್ರಾರಂಭಿಸಿದ್ದರು. ಇತ್ತೀಚಿನ ದಿನಗಳಲ್ಲಿ ಅದೇ ಹೆಸರಿನ ಬ್ಲಾಗಿನಲ್ಲಿ ತಮ್ಮ ಬರಹಗಳನ್ನು ಪ್ರಸ್ತುತಪಡಿಸುತ್ತಿದ್ದಾರೆ. ಇದೇ ಹೆಸರಿನ ಪುಸ್ತಕ ಕೂಡ 2007ರ ವರ್ಷದಲ್ಲಿ ಬಿಡುಗಡೆಯಾಗಿದೆ.

ಅನಂತಮೂರ್ತಿಯವರ ‘ಸಂಸ್ಕಾರ’ ಕೃತಿಯಲ್ಲದೆ, ‘ಅವಸ್ಥೆ’ ಕಾದಂಬರಿ ಮತ್ತು ‘ಬರ’, ‘ಘಟಶ್ರಾದ್ಧ’, ‘ಮೌನಿ’ ಕತೆಗಳನ್ನು ಆಧರಿಸಿ ಚಲನಚಿತ್ರಗಳು ನಿರ್ಮಾಣವಾಗಿವೆ. ಇವೆಲ್ಲವೂ ಮಹತ್ವದ ಚಿತ್ರಗಳಾಗಿದ್ದು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ಪಡೆದಿವೆ. ‘ಸಂಸ್ಕಾರ’ ಮತ್ತು ‘ಘಟಶ್ರಾದ್ಧ’ ಚಲನ ಚಿತ್ರಗಳು ಭಾರತ ಸರ್ಕಾರದ ಸ್ವರ್ಣ ಕಮಲ ಪ್ರಶಸ್ತಿಯನ್ನು ಪಡೆದಿವೆ. ‘ಸಂಸ್ಕಾರ’, ‘ಘಟಶ್ರಾದ್ಧ’ ಮತ್ತು ‘ಬರ’, ‘ಮೌನಿ’ ಚಿತ್ರಗಳಿಗೆ ಅತ್ಯುತ್ತಮ ಕತೆಗಾಗಿ ಅನಂತಮೂರ್ತಿಯವರಿಗೆ ಪ್ರಶಸ್ತಿ ಸಿಕ್ಕಿದೆ. ಹಲವು ಮಹತ್ವದ ವ್ಯಕ್ತಿಗಳೊಡನೆ ಅನಂತಮೂರ್ತಿಯವರು ನಡೆಸಿರುವ ಸುಂದರ ಸಂದರ್ಶನಗಳನ್ನು ಒಳಗೊಂಡ ‘ಹತ್ತು ಸಮಸ್ತರು’ ಪುಸ್ತಕ ಇತ್ತೀಚಿನ ವರ್ಷದಲ್ಲಿ ಬಿಡುಗಡೆಗೊಂಡಿದೆ.

ಅನಂತಮೂರ್ತಿಯವರು ಯಾವಾಗಲೂ ವಾಗ್ವಾದಗಳನ್ನು ಹುಟ್ಟುಹಾಕುವುದರ ಮೂಲಕ ಜನ ಸಂವೇದನೆಯನ್ನು ಕೆಣಕಿ ಚರ್ಚೆಗೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಹದಗೊಳಿಸುವ ಕಾಯಕವನ್ನು ಉದ್ದಕ್ಕೂ ಮಾಡಿಕೊಂಡು ಬಂದಿದ್ದಾರೆ. ಅವರ ಅನೇಕ ವಿಚಾರಗಳನ್ನು ನಾವು ಪ್ರಶ್ನಿಸುವಂತಿರುತ್ತವೆ. ಆದರೆ ಅವರೊಂದಿಗೆ ಅರ್ಥಪೂರ್ಣ ಸಂವಾದ ಸಾಧ್ಯವೆಂಬುದೇ ಅವರ ಬರವಣಿಗೆಯ ಮಹತ್ವ. ಈ ದೃಷ್ಟಿಯಿಂದ ಕನ್ನಡ ಸಂಸ್ಕೃತಿಯ ಬೆಳವಣಿಗೆಯಲ್ಲಿ ಅನಂತಮೂರ್ತಿಯವರ ಪಾತ್ರ ಅತ್ಯಂತ ಮಹತ್ವದ್ದು.

ಅನಂತಮೂರ್ತಿಯವರು ಇತ್ತೀಚಿನ ದಿನಗಳಲ್ಲಿ ಹುಟ್ಟುಹಾಕಿದ ರಾಜಕೀಯ ವಾಗ್ವಾದಗಳು, ಇತರ ಬರಹಗಾರರ ಕುರಿತು ಆಡಿದ ನುಡಿಗಳು, ಅವರು ಹಾಗೂ ಮತ್ತೊಬ್ಬ ಸಾಹಿತಿಗಳು ಹೇಳಿದರೆನ್ನಲಾದ ಹಿಂದೂ ಧಾರ್ಮಿಕ ನಂಬಿಕೆಗಳು ಕುರಿತಾದ ಮಾತುಗಳು ಬಹಳಷ್ಟು ಮನಸ್ಸುಗಳನ್ನು ಕಲಕಿದ್ದವು.

ಹಲವು ಕಾಲದಿಂದ ಅನಾರೋಗ್ಯದಲ್ಲಿದ್ದ ಅನಂತಮೂರ್ತಿಯವರು ಇಂದು ನಿಧನರಾಗಿರುವುದು ಒಬ್ಬ ಮಹತ್ವದ ಬರಹಗಾರರ ಸಾಹಿತ್ಯಲೋಕಕ್ಕೆ ತೆರೆ ಎಳೆದಂತಾಗಿದೆ.

(ಆಧಾರ: ಡಾ. ನರಹಳ್ಳಿ ಬಾಲಸುಬ್ರಮಣ್ಯ ಅವರ ಯು.ಆರ್. ಅನಂತಮೂರ್ತಿ ಅವರ ಕುರಿತ ಲೇಖನ)

‘ಕನ್ನಡ ಸಂಪದ’ದಲ್ಲಿ ಪ್ರಕಟವಾಗಿರುವ ಲೇಖನವಿದು.

 Posted by at 9:29 AM