Jan 042010
 

 (ಚಿತ್ರ ಕೃಪೆ : ದಟ್ಸ್ ಕನ್ನಡ)

೨೦೦೨ರಲ್ಲಿ ಡೆಟ್ರಾಯ್ಟ್ ನಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲಿ ಕನ್ನಡಿಗರೊಬ್ಬರು ‘ನೆನಪಿನ ದೃಶ್ಯಗಳು’ ಎಂಬ ತಮ್ಮ ಆತ್ಮ ಚರಿತ್ರೆಯ ಪುಸ್ತಕವನ್ನು ಪುಕ್ಕಟೆಯಾಗಿ ಎಲ್ಲರಿಗೂ ಲಭ್ಯವಾಗಿಸಿದರು.  ಅವರ ಹೆಸರು ಕೃಷ್ಣ ಶಾಸ್ತ್ರಿ ಎಂದು ಪುಸ್ತಕ ನೋಡಿ ತಿಳಿಯಿತಾದರೂ ಯಾರಿಗೂ “ಯಾರೀ ಕೃಷ್ಣ ಶಾಸ್ತ್ರಿ?” ಎಂಬ ಕುತೂಹಲ ತಣಿಯಲೇ ಇಲ್ಲ!  ಯಾಕೆಂದರೆ ಕೃಷ್ಣ ಶಾಸ್ತ್ರಿಯವರು ವೇದಿಕೆಯ ಮೇಲೆ ರಾರಾಜಿಸಲಿಲ್ಲ.  ತಮ್ಮ ಹೆಸರನ್ನು ಮೈಕಿನಲ್ಲಿ ಹೇಳಿಸಿ ಜನರ ಗಮನ ಸೆಳೆಯಲಿಲ್ಲ.  ಏನೂ ಮಾಡಲಿಲ್ಲ.  ಅವರಿದ್ದಿದ್ದು ಸಭಾಂಗಣದ ಹೊರಗೆ ಒಂದು ಬುಕ್ ಸ್ಟಾಲಿನಲ್ಲಿ. ಅತಿಥಿಯಾಗಿ ಬಂದಿದ್ದ ನಿಸಾರ್ ಅಹಮದ್ ಅವರ ಪುಸ್ತಕಗಳನ್ನು ಮಾರುವ ಹೊಣೆ ಹೊತ್ತು ಕುಳಿತಿದ್ದರು!  ಈ ಒಂದು ಘಟನೆಯಲ್ಲಿ ಕೃಷ್ಣ ಶಾಸ್ತ್ರಿಯವರ ವ್ಯಕ್ತಿತ್ವದ ಮಿಂಚು ನೋಟ ನಮಗೆ ಸಿಕ್ಕುತ್ತದೆ. ಯಾವ ಥಳುಕು, ಆಡಂಬರ ಅವರಿಗೆ ಬೇಕಾಗಿಲ್ಲ.  ಕನ್ನಡದ ಸೇವೆಯನ್ನು ಮಾತ್ರ ತಪ್ಪಿಸುವುದಿಲ್ಲ! ಯಾವ ತುತ್ತೂರಿ, ನಗಾರಿಗಳಿಲ್ಲದೆ ಹಿನ್ನೆಲೆಯಲ್ಲೇ ಉಳಿದು ಸದ್ದಿಲ್ಲದೆ ಕನ್ನಡ ಸೇವೆ ಸಲ್ಲಿಸಿದ ಎಲೆಯ ಮರೆಯ ಕಾಯಿ ಕೃಷ್ಣ ಶಾಸ್ತ್ರಿ ಅವರು.  ಇಂದು ನಮ್ಮೆದೆಯಲ್ಲಿ ನೆನಪಾಗಿ, ಹಾಡಾಗಿ ಹಸಿರಾಗಿ ಉಳಿದೇ ಹೋದವರು.

‘ಅಕ್ಕ’ ಸಮ್ಮೇಳನ ಮುಗಿದ ಮೇಲೆ ಅವರು ನಿಸಾರ್ ಅಹಮದ್ ಅವರ ಅಮೆರಿಕಾ ಪ್ರವಾಸ ಹಾಗೂ ಉಪನ್ಯಾಸಗಳ ಸಂಪೂರ್ಣ ಹೊಣೆಯನ್ನು ತಮ್ಮ ಹೆಗಲ ಮೇಲೆ ಹೊತ್ತು ಸಮರ್ಥವಾಗಿ ನಿಭಾಯಿಸಿದರು! ಅಮೆರಿಕಾದಲ್ಲಿ ಸುಮಾರು ೪೨ ನಗರಗಳಲ್ಲಿ ನಿಸಾರ್ ಅಹಮದ್ ಅವರ ಉಪನ್ಯಾಸ ಏರ್ಪಾಡಾಗಿತ್ತು ಅಂದರೆ ಆಶ್ಚರ್ಯವೆನಿಸದೆ! ಮಾತ್ರವಲ್ಲ ಕರ್ನಾಟಕದಿಂದ ಆಗಮಿಸಿದ ಇನ್ನೂ ಅನೇಕ ಸಾಹಿತಿ, ಸಂಗೀತಗಾರರಿಗೂ ಇದೇ ರೀತಿಯಲ್ಲಿ ಸೇವೆ ಸಲ್ಲಿಸಿದ್ದರು.

ಕೃಷ್ಣ ಶಾಸ್ತ್ರಿಯವರು ‘ಕನ್ನದ ಸಾಹಿತ್ಯ ರಂಗ’ದ ಸ್ಥಾಪಕ  ಸದಸ್ಯರಲ್ಲಿ ಒಬ್ಬರು.  ೨೦೦೪ರಲ್ಲಿ ನಡೆದ ‘ಕನ್ನಡ ಸಾಹಿತ್ಯ ರಂಗ’ದ ಸಮ್ಮೇಳನದಲ್ಲಿಯೂ ಇವರು ಪುಸ್ತಕ ಮಳಿಗೆಯನ್ನು ನಿರ್ವಹಿಸುವ ಜವಾಬ್ದಾರಿಯನ್ನು ಹೊತ್ತಿದ್ದರು.

ಅಯೋವಾ ರಾಜ್ಯದ ಸೀಡರ್ ಫಾಲ್ಸಿನಲ್ಲಿ ನೆಲೆಸಿದ್ದ ಕೃಷ್ಣ ಶಾಸ್ತ್ರಿ ಅವರು ಬಿ.ಎಂ.ಎಸ್ ಕಾಲೇಜಿನಲ್ಲಿ ಓದಿದವರು.  ಆ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘದ ಕಾರ್ಯದರ್ಶಿಯಾಗಿದ್ದರು.  ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡಲೆಂದು ಹಲವಾರು ವಿದ್ಯಾರ್ಥಿ ವೇತನಗಳನ್ನು ಕೊಡ ಮಾಡಿದ್ದರು.  ಕಳೆದ ನವೆಂಬರ್ ೨೫ರಂದು ಸ್ವರ್ಗಸ್ಥರಾದ ಕೃಷ್ಣ ಶಾಸ್ತ್ರಿಯವರು ಪತ್ನಿ ಶಾಂತಾ ಮತ್ತು ಮಕ್ಕಳಾದ ಮಾಲಾ ಮತ್ತು ಪ್ರಿಯಾ ಅವರನ್ನು ಅಗಲಿ ಹೋಗಿದ್ದಾರೆ.  ಅವರ ನಿರ್ಗಮನದಿಂದ ಅಮೆರಿಕಾದ  ನೆಲದಲ್ಲಿ ಕನ್ನಡದ ಕಂಪು ಸೂಸುವ ಒಂದು ಹೂವು ಇಲ್ಲವಾದಂತಾಗಿದೆ. 

– — ನಳಿನಿ ಮೈಯ

 Posted by at 4:19 AM
Oct 252009
 

The Hindu news paper reviews KSR publication “Kannada Kadambari Lokadalli…heege halavu”

Uniting the dispersed 

Kannada Kadambari Lokadalli, edited by M.S. Nataraj
Kannada Sahitya Ranga, Rs. 250

One of the major characteristics of Diasporic experience is biculturism, an attempt to retain cultural bonds with the homeland, which is both an emotional necessity and a means of distinct identity. The Ameri-Kannadigas are a fine instance of this experience.

Although there are many Kannada organisations in America (including Akka), “Kannada Sahitya Ranga” of New Jersey is different; it is primarily a literary organisation, established in 2004, by H.Y. Rajagopal, M.S. Nataraj and others. It organises annual Vasantotsava (a Literary Meet), workshops on literary appreciation, and publishes Kannada works. The present critical anthology is its fourth publication, released during the fourth, Vasantotsava.

“Kannada Kadambari Lokadalli” is a collection of 24 critical articles on Kannada fiction, written in the last three decades. All the writers are Ameri-Kannadigas, and most of them are experts in fields other than literature. The articles cover almost all major novels of the last three decades. Many of them are introductory/explicatory; but all of them reflect their love for Kannada literature though away from Karnataka. While Madhu Krishnamurthy discusses “Aramane” (Kumvee) stressing its symbolic aspect and its ‘dramatic narrator’, Triveni Srinivasarao, discussing “Ashwamedha” (Ashok Hegde) raises the pertinent question of how relevant the theme is today. Whereas Vishwanath Hulikal commends “Ondu Badi Kadalu” (Vivek Shanbhag) for its highly disciplined writing and its depiction of ‘the extraordinary quality of ordinary life’, Ahitanala competently analyses “Kendra Vruttanta” (Yashavanth Chittala) and points out that the novel traces the significant movements of characters within the novel’s narrative circle from the margin to the centre and viceversa. M.S. Nataraj sharply analyses “Bayalu Basiru” (Vasanth Diwanaji) and argues that the depiction of American life in the novel is simplistic, and T.N. Krishnaraju finds the exploration of the ‘self’ and ‘non-self’ at the centre of Ramanujan’s “Mattobbana Atmacharitre”.

Responsible literary criticism begins with a text, then goes on to place it with similar texts, and finally widens to include socio-political issues and ideologies.  Two essays in this collection are brilliant examples of such criticism. The first one is by the Shankar couple on “Avarana” (S.L. Bhairappa). They place the Kannada novel beside Orhan Pamuk’s “My Name Is Red” (translated into English) and undertake comparative analysis. Though both are concerned with Islam, while the first novel views Islam as an outsider the second analyses it as an insider. The authors argue that while the Kannada novel pictures Islam, simplistically, as an unchanging and monolithic doctrine, the Turkish novel, concerns itself with the different strands within Islam and its centuries-old conflict between tradition and modernity. As related to this discussion, the authors analyse current conservative ideologies (of Louis, Huntington, et al) and Liberal ideologies (of Edward Said and Amartya Sen). The authors convincingly conclude that “only when we go beyond histories, can we survive and grow as human beings.”

On similar lines, Shashikala Chandrashekhar approaches Nemichandra’s “Yad Vashem”; she places it in the context of books and films (like “Schindler’s List”, “The Boy in Striped Pyjamas”), related to the notorious, “Final Solution”.

This anthology certainly adds a new dimension to Kannada criticism; and I happily congratulate the editors and authors on their meaningful work.

C.N. RAMACHANDRAN

 

 

 

 

 

 

 

 

 

 

 Posted by at 7:37 PM
Sep 172009
 

ಸಾಹಿತ್ಯ ಗೋಷ್ಠಿ: ಪ್ರೇರಣೆ, ಪರಿಕಲ್ಪನೆ ಮತ್ತು ನಿರ್ವಹಣೆವಿಶ್ವನಾಥ ಹುಲಿಕಲ್
                                                           

 

                                                                                                                          

ಅಮೇರಿಕಾದಲ್ಲಿ ನೆಲೆಸಿರುವ ನಮ್ಮಂತಹ ಅನಿವಾಸಿ ಭಾರತೀಯರಿಗೆ ವಾರಾಂತ್ಯದಲ್ಲಿ ನಡೆಯುವ ‘ಪಾರ್ಟಿ’ಗಳು ಅಪರೂಪವೇನಲ್ಲ! ಸಮಾನ ಮನಸ್ಸಿನ ಮಿತ್ರರು ಮತ್ತು ಅವರ ಕುಟುಂಬವರ್ಗದವರು ಭಾಗಿಯಾಗುವ ಇಂತಹ ಸಂತೋಷಕೂಟಗಳಲ್ಲಿ ಮಿಲನ, ಹರಟೆ, ಊಟ – ಎಲ್ಲವೂ ಇರುತ್ತವೆ. ಹಸಿದ ಹೊಟ್ಟೆಗೆ ಆಹಾರ, ದಣಿದ ಮನಸ್ಸಿಗೆ ಮುದ ಮತ್ತು ಬುದ್ಧಿಗೆ ಚೈತನ್ಯ ನೀಡುವಂತಹ ಚರ್ಚೆಗಳು ಈ ಕೂಟಗಳಲ್ಲಿ ಲಭ್ಯವಾಗುತ್ತವೆ. ಬಿಡುವಿಲ್ಲದ ವಾರದ ದುಡಿಮೆಗೆ ಬಳಲಿದ ದೇಹ ಮತ್ತು ಕಛೇರಿಯ ಒತ್ತಡಕ್ಕೊಳಪಟ್ಟ ಮನಸ್ಸಿಗೆ ಇಂತಹ ಕೂಟಗಳು ಸಂಜೀವಿನಿಯಾಗಿ ಪರಿಣಮಿಸುವುದರಲ್ಲಿ ಎರಡು ಮಾತಿಲ್ಲ. ಆದರೆ ನನ್ನನ್ನು ಆಗಾಗ್ಗೆ ಬಾಧಿಸುತ್ತಿದ್ದ ಅಂಶವೆಂದರೆ, ಅಲ್ಲಿ ನೆರೆದಿದ್ದ ಜನರ ಮಾತುಕತೆಗಳಲ್ಲಿ ತಂತ್ರಜ್ಞಾನ, ಶೇರುಪೇಟೆ ಮತ್ತು ಕೌಟುಂಬಿಕ ವಿಷಯಗಳು – ಹೀಗೆ ವೈವಿಧ್ಯಮಯ ವಸ್ತುಗಳು ಸೇರ್ಪಡೆಯಾಗಿದ್ದರೂ, ಯಾವುದೇ ಒಂದು ವಿಷಯದ ಬಗ್ಗೆ ಮನಸ್ಸನ್ನು ಕೇಂದ್ರೀಕರಿಸಿ, ಅದರ ಬಗ್ಗೆ ಗಂಭೀರವಾಗಿ ಚಿಂತನೆ ಮಾಡಿ, ನಡೆಸಿದಂತಹ ಚರ್ಚೆ ಅಲ್ಲಿ ಆಗುತ್ತಿರಲಿಲ್ಲ ಎಂಬ ಕೊರಗು. ಅಮೇರಿಕಾದಲ್ಲಿನ ನಮ್ಮ ಜೀವನದ ಪಾಲನೆ ಮತ್ತು ಪೋಷಣೆಗೆ ಕಾರಣವಾದ ಮೂಲಧಾತು ವಿಜ್ಞಾನ ಮತ್ತು ತಂತ್ರಜ್ಞಾನ; ಇದರ ಅಗತ್ಯ ಮತ್ತು ಅನಿವಾರ್ಯತೆಯನ್ನು ಯಾರೂ ಅಲ್ಲಗಳೆಯುವಂತಿಲ್ಲ. ಆದರೂ, ಮನಸ್ಸಿನ ಶಾಂತಿ, ನೆಮ್ಮದಿ, ವಿಕಸನಕ್ಕೆ ಮತ್ತು ಆತ್ಮೋದ್ಧಾರಕ್ಕೆ ಅತ್ಯಗತ್ಯವಾದವುಗಳು ಲಲಿತಕಲೆ ಮತ್ತು ಅದ್ಯಾತ್ಮ; ಸಂಗೀತ, ಸಾಹಿತ್ಯ, ನೃತ್ಯ ಮುಂತಾದವುಗಳು ಲಲಿತಕಲೆಯಲ್ಲಿ ಸೇರಿವೆ ಎಂದು ಬಿಡಿಸಿಹೇಳಬೇಕಾಗಿಲ್ಲ. ಆದರೆ ಐಹಿಕಾಭ್ಯುದಯವೇ ಮಾನವನ ಪರಮ ಪುರುಷಾರ್ಥ ಎಂದು ಬಗೆದಂತಹ ಇಂದಿನ ಸಮಾಜದಲ್ಲಿ ಹಾಗೂ ಬೇರಾವುದರ ಕಡೆಗೂ ಗಮನ ಕೊಡದೆ ಧಾವಂತದಿಂದ ಓಡುತ್ತಿರುವ ಜನತೆಗೆ ಇಂತಹ ಲಲಿತಕಲೆಗಳ ಬಗ್ಗೆ ಗಮನ ಹರಿಸಲು ವ್ಯವಧಾನವೆಲ್ಲಿದೆ? ಹೀಗಾಗಿ ಸಾಹಿತ್ಯದ ಬಗ್ಗೆ ಜನರಲ್ಲಿ ಸದಭಿರುಚಿಯನ್ನು ಮೂಡಿಸಲು ಮತ್ತು ತಿಂಗಳಿನಲ್ಲಿ ಕೆಲವು ಘಂಟೆಗಳಾದರೂ ಸಮಾನಾಸಕ್ತರು ಕನ್ನಡ ಸಾಹಿತ್ಯದ ಬಗ್ಗೆ ಗಂಭೀರಚರ್ಚೆಗೆ ಅವಕಾಶವಾಗುವಂತಹ ವೇದಿಕೆಯನ್ನು ನಿರ್ಮಿಸುವ ಉದ್ದೇಶದಿಂದ ನಾನು ಮತ್ತು ನನ್ನ ಪತ್ನಿ ಅನ್ನಪೂರ್ಣ ‘ಸಾಹಿತ್ಯ ಗೋಷ್ಠಿ’ಯನ್ನು ೧೧-೧೧-೦೧ರಲ್ಲಿ ಸ್ಥಾಪಿಸಿದೆವು.ಸಾಹಿತ್ಯದ ಅಧ್ಯಯನದಿಂದ ನಮಗೆ ಅನೇಕ ಪ್ರಯೋಜನಗಳು ಉಂಟಾಗುತ್ತವೆ: ನಮ್ಮ ಪ್ರಜ್ಞಾದಿಗಂತ ವಿಸ್ತೃತವಾಗುತ್ತದೆ; ನಮ್ಮ ಸಂಕುಚಿತ ದೃಷ್ಟಿಕೋನ ಮಾಯವಾಗಿ, ವಿಶಾಲ ಮನಸ್ಸು ಲಭ್ಯವಾಗುತ್ತದೆ. ನಮಗೆ ಯಥೋಚಿತವಾದ ಜೀವನದರ್ಶನ ದೊರಕುತ್ತದೆ. ಜೀವನವನ್ನು ನಿರ್ಲಿಪ್ತ ದೃಷ್ಟಿಕೋನದಿಂದ ಅವಲೋಕಿಸುವಂತಹ ಮನೋಧೋರಣೆ ಲಭಿಸುತ್ತದೆ. ಜೀವನದಲ್ಲಿ ಎದುರಾಗುವ ಕಷ್ಟ-ನಷ್ಟಗಳನ್ನು ಧೈರ್ಯದಿಂದ ಎದುರಿಸಬಲ್ಲಂತಹ ಮನೋಧರ್ಮ ಪ್ರಾಪ್ತವಾಗುತ್ತದೆ; ಕಷ್ಟಗಳ ಇದಿರಿನಲ್ಲಿ ಜೀವನವನ್ನು ಸಹನೀಯವಾಗಿ ಮಾಡುವ ಕಲೆ ನಮ್ಮೊಳಗೇ ಉದಯಿಸುತ್ತದೆ. ನಮಗೇ ಗೊತ್ತಿಲ್ಲದ ಹಾಗೆ, ನಾವು ಸುಸಂಸ್ಕೃತ ವ್ಯಕ್ತಿಗಳಾಗಿ, ನಮ್ಮ ಆತ್ಮೋದ್ಧಾರ ಆಗುತ್ತಾ ಹೋಗುತ್ತದೆ. ಅಧ್ಯಾತ್ಮಿಕ ಸಾಹಿತ್ಯದ ಅಧ್ಯಯನದಿಂದ, ಮಾನವನ ಪರಮಪುರುಷಾರ್ಥವಾದ ಮೋಕ್ಷಸಾಧನೆಗೆ ಅತ್ಯಗತ್ಯವಾದ ಬ್ರಹ್ಮಜ್ಞಾನ (ಆತ್ಮಜ್ಞಾನ) ಪ್ರಾಪ್ತವಾಗುತ್ತದೆ.

 ಸಾಹಿತ್ಯದಿಂದ ನಮಗೆ ಇಂತಹ ಲಾಭಗಳು ಆಗಬೇಕಾದರೆ, ಸಾಹಿತ್ಯದ ಜೊತೆಗಿನ ನಮ್ಮ ಸಂಪರ್ಕ / ಸಂಬಂಧ ನಿಕಟವಾಗಿರಬೇಕಾದುದೇ ಅಲ್ಲದೆ, ನಿರಂತರವಾಗಿಯೂ ಇರಬೇಕು; ನಮ್ಮ ಸಾಹಿತ್ಯಾಧ್ಯಯನ ಅನುಗಾಲವೂ ನಡೆಯುತ್ತಿರಬೇಕು. ಇದು ಸಾಧ್ಯವಾಗುವುದು ಸಾಹಿತ್ಯದ ಬಗೆಗಿನ ನಮ್ಮ ಆಸಕ್ತಿ ನೈಜವಾಗಿಯೂ, ಯಾವಾಗಲೂ ಜೀವಂತವಾಗಿಯೂ ಇರಬೇಕಾಗುತ್ತದೆ. ಇಂತಹ ವಾತಾವರಣವನ್ನು ಸೃಷ್ಟಿಮಾಡುವುದಕ್ಕೋಸ್ಕರ, ಸಮಾನ ಮನಸ್ಸಿನ ಸಾಹಿತ್ಯಾಸಕ್ತರನ್ನು ಒಂದೆಡೆ ಸೇರಿಸಿ, ನಿಯಮಿತವಾಗಿ ಹಾಗೂ ನಿರಂತರವಾಗಿ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸುವಹಾಗೆ ವ್ಯವಸ್ಥೆ ಮಾಡಿಕೊಂಡೆವು. ಹೀಗೆ ಸಾಹಿತ್ಯಿಕ ವಿಷಯಗಳ ಬಗ್ಗೆ ಗಂಭೀರ ಚಿಂತನೆ ಮತ್ತು ಚರ್ಚೆ ಮಾಡುವ, ಮತ್ತು ತನ್ಮೂಲಕ ಕನ್ನಡ ಸಾಹಿತ್ಯದ ಬಗ್ಗೆ ಸದಭಿರುಚಿಯನ್ನು ಮೂಡಿಸಿ, ವೃದ್ಧಿಸಿ ಮತ್ತು ಪೋಷಿಸುವ ಸಲುವಾಗಿ ‘ಸಾಹಿತ್ಯ ಗೋಷ್ಠಿ’ ಜನ್ಮತಾಳಿತು. ಕಳೆದ ಆರು ವರ್ಷಗಳಿಂದ ಪ್ರತಿ ತಿಂಗಳೂ ನಾವು ಆಯೋಜಿಸಿಕೊಂಡು ಬರುತ್ತಿರುವಂತಹ ಕಾರ್ಯಕ್ರಮದಲ್ಲಿ ಸಾಮಾನ್ಯವಾಗಿ ಎರಡು ಸಾಹಿತ್ಯಿಕ ಉಪನ್ಯಾಸಗಳು ಇರುತ್ತವೆ; ಇಂತಹ ಉಪನ್ಯಾಸಗಳು ಮೂಲಕ ಶ್ರೀಮಂತ ಕನ್ನಡ ಸಾಹಿತ್ಯದ ಸೊಬಗನ್ನು ಇಲ್ಲಿನ (ಉತ್ತರ ಕ್ಯಾಲಿಫೋರ್ನಿಯಾದ ಸಿಲಿಕಾನ್ ಕಣಿವೆ ಪ್ರಾಂತ್ಯ) ಜನತೆಗೆ ತಲುಪಿಸುತ್ತಿದ್ದೇವೆ. ತನ್ನ ವಸ್ತು ವೈವಿಧ್ಯ ಮತ್ತು ಸಾಹಿತ್ಯದ ಎಲ್ಲಾ ಪ್ರಕಾರಗಳ ಮೇಲಿನ ಮುಕ್ತಚರ್ಚೆಗಳಿಂದ ‘ಸಾಹಿತ್ಯ ಗೋಷ್ಠಿ’ಯ ಕಾರ್ಯಕ್ರಮಗಳು ಜನಪ್ರಿಯವಾಗಿವೆ. ಇದರ ಸಾಧನೆಯ ಬಗ್ಗೆ ರವಿ ಕೃಷ್ಣಾ ರೆಡ್ಡಿಯವರು, ತಾವು ಆರಂಭಿಸಿದ ವಾರಪತ್ರಿಕೆ ‘ವಿಕ್ರಾಂತ ಕರ್ನಾಟಕ’ದಲ್ಲಿ ಹೀಗೆ ಹೇಳುತ್ತಾರೆ   (೨೯ ಡಿಸೆಂಬರ್ ೨೦೦೬, ಪುಟ ೬೨):

ವಿಶ್ವನಾಥ್ ಹುಲಿಕಲ್‌ನವರು ನಮ್ಮ ಸಾಲುಮರದ ತಿಮ್ಮಕ್ಕನವರ ಊರಾದ ಹುಲಿಕಲ್‌ನವರು. ಅಮೇರಿಕದ ಸಿಲಿಕಾನ್ ಕಣಿವೆಯಲ್ಲಿ ಕನ್ನಡದ ಸಾಹಿತ್ಯ ಪರಿಚಾರಕರಲ್ಲಿ ಪ್ರಮುಖವಾದ ಹೆಸರು ವಿಶ್ವನಾಥ್‌ರವರದು. ಇಲ್ಲಿನ ಕೆಲವು ಕನ್ನಡ ಸಾಹಿತ್ಯಾಸಕ್ತರೊಂದಿಗೆ ಸೇರಿ, 2001ರ ನವೆಂಬರ್‌ನಲ್ಲಿ ಹುಲಿಕಲ್ ದಂಪತಿಗಳು ಸಾಹಿತ್ಯ ಸಂಬಂಧಿ ಚರ್ಚೆಗೆಂದು ಹುಟ್ಟು ಹಾಕಿದ್ದು ‘ಸಾಹಿತ್ಯ ಗೋಷ್ಠಿ’. ಅಲ್ಲಿಂದ ಇಲ್ಲಿಯವರೆಗೂ ನಿಯಮಿತವಾಗಿ ತಿಂಗಳಿಗೊಂದು ಕಾರ್ಯಕ್ರಮದಂತೆ ಇದನ್ನು ನಡೆಸಿಕೊಂಡು ಬಂದಿದ್ದಾರೆ. ಜನ್ನ, ಕುಮಾರವ್ಯಾಸ, ಕುವೆಂಪುರವರಿಂದ ಹಿಡಿದು ಅಡಿಗ, ಭೈರಪ್ಪ, ದಲಿತಕವಿ ಸಿದ್ಧಲಿಂಗಯ್ಯನವರವರೆಗೂ ಎಲ್ಲಾ ಪಂಥ-ಪ್ರಕಾರಗಳ ಕನ್ನಡ ಸಾಹಿತ್ಯ ಕೃತಿಗಳ ಪರಿಚಯಾತ್ಮಕ, ವಿಮರ್ಶಾತ್ಮಕ ಉಪನ್ಯಾಸಗಳು ಇಲ್ಲಿ ನಡೆದಿವೆ. ಸ್ಥಳೀಯ ಸಾಹಿತ್ಯಾಸಕ್ತರೇ ಅಲ್ಲದೆ, ಅಮೇರಿಕವನ್ನು ಸಂದರ್ಶಿಸುವ ಕನ್ನಡದ ಪ್ರಸಿದ್ಧ ಸಾಹಿತಿಗಳೂ ಇಲ್ಲಿ ಉಪನ್ಯಾಸಗಳನ್ನು ನೀಡಿದ್ದಾರೆ. ಬಿಸಿಲು, ಮಳೆ, ಚಳಿಯನ್ನು ಲೆಕ್ಕಿಸದೆ ಗೋಷ್ಠಿಯ ದಿನದಂದು ತಪ್ಪಿಸಿಕೊಳ್ಳದೆ ಹಾಜರಾಗುವ ಒಂದು ಗುಂಪೇ ಸಿಲಿಕಾನ್ ಕಣಿವೆಯಲ್ಲಿದೆ. ಸಾಹಿತ್ಯ ಗೋಷ್ಠಿಯ ಆಶ್ರಯದಲ್ಲಿ ನಡೆದಿರುವ ಮತ್ತೊಂದು ಉಲ್ಲೇಖನೀಯ ಕಾರ್ಯವೆಂದರೆ, ಜಯಂತ ಕಾಯ್ಕಿಣಿಯವರ ‘ಅಮೃತಬಳ್ಳಿ ಕಷಾಯ’ವನ್ನು ಇಂಗ್ಲೀಷಿಗೆ ಭಾಷಾಂತರಿಸಿ Dots and Lines ಹೆಸರಿನಲ್ಲಿ ಪ್ರಕಟಿಸಿರುವುದು. ಸಾಹಿತ್ಯ ಗೋಷ್ಠಿಯ ಐದನೆ ವಾರ್ಷಿಕೋತ್ಸವದ ಕಾರ್ಯಕ್ರಮ ಮೂರು ವಾರದ ಹಿಂದೆ ನಡೆಯಿತು…”

 ಈ ಸಾಹಿತ್ಯ ಗೋಷ್ಠಿ ಶುದ್ಧ ಸಾಹಿತ್ಯಿಕ ವೇದಿಕೆಯಾಗಬೇಕೆಂದು ನಮ್ಮ ಹಂಬಲ. ಇಲ್ಲಿ ಕನ್ನಡ ಸಾಹಿತ್ಯದ ಬಗ್ಗೆ ಮಾತ್ರ ಮುಕ್ತ ಚರ್ಚೆಯಾಗಬೇಕೆಂದು ನಮ್ಮ ತುಡಿತ. ಹೀಗಾಗಿ (ವ್ಯವಸ್ಥೆಯನ್ನು ಭ್ರಷ್ಟಗೊಳಿಸಬಲ್ಲ) ರಾಜಕೀಯ, ಹಣ ಮತ್ತು ಜಾತಿಯನ್ನು ಪ್ರಜ್ಞಾಪೂರ್ವಕವಾಗಿ ಇದರಿಂದ ಹೊರಗಿಟ್ಟಿದ್ದೇವೆ. ಸ್ಥಳೀಯ ಬರಹಗಾರರನ್ನು ಪ್ರೋತ್ಸಾಹಿಸುವುದು ಸಹ ಸಾಹಿತ್ಯ ಗೋಷ್ಠಿಯ ಮೂಲೋದ್ದೇಶಗಳಲ್ಲಿ ಒಂದು. ಹೀಗಾಗಿ ‘ಸಾಹಿತ್ಯ ಗೋಷ್ಠಿ’ ಆರಂಭಿಸಿದಂದಿನಿಂದ ಈವರೆಗೆ ಪ್ರತಿವರ್ಷವೂ ಕವಿ ಮತ್ತು ಸಾಹಿತ್ಯ ಗೋಷ್ಠಿಯನ್ನು ಏರ್ಪಡಿಸಿಕೊಂಡು ಬರುತ್ತಿದ್ದೇವೆ. ಈ ವೇದಿಕೆಯಲ್ಲಿ ಸ್ಥಳೀಯ ಬರಹಗಾರರು, ಆ ದಿನ ತಾವು ಬರೆದು ತಂದ ಕೃತಿಗಳ ವಾಚನವನ್ನು ನೆರೆದಿರುವ ಸಾಹಿತ್ಯಾಭಿಮಾನಿಗಳ ಸಮಕ್ಷಮದಲ್ಲಿ ಮಾಡುವರು. ಪ್ರತಿಯೊಬ್ಬ ಸಾಹಿತಿಗೂ ತಾನು ಬರೆದುದನ್ನು ಬೇರೆಯವರು ಓದಿದಾಗ ಅಥವಾ ಕೇಳಿದಾಗ ಸಿಗುವ ಆನಂದ ವರ್ಣಿಸಲಸದಳ. ಸಿಲಿಕಾನ್ ಕಣಿವೆಯಲ್ಲಿ ಪ್ರಕಟಿತ ಸಾಹಿತಿಗಳಿಗೆ ಬರವಿಲ್ಲ. ಸ್ಥಳೀಯ ಸಾಹಿತಿಗಳು ತಮ್ಮ ಕೃತಿಗಳನ್ನು ಪ್ರಕಟಿಸಿದಾಗ, ಆಗಾಗ್ಗೆ ಸಾಹಿತ್ಯ ಗೋಷ್ಠಿ ಅಂತಹ ಕೃತಿಗಳನ್ನು ಪರಿಚಯಿಸಿ ವಿಮರ್ಶಿಸುವಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ, ಆ ಪ್ರಕಟಿತ ಸಾಹಿತಿಗಳಿಗೆ ತನ್ನದೇ ಆದ ರೀತಿಯಲ್ಲಿ ಗೌರವ ಸಮರ್ಪಣೆ ಮಾಡುತ್ತಿದೆ.

 ಸಾಹಿತ್ಯ ಗೋಷ್ಠಿಯ ಕಾರ್ಯಕ್ರಮಗಳನ್ನು ಆಯೋಜಿಸುವುದೆಂದರೆ, ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡಿದ ಹಾಗೆ: ಒಂದು ಕಾರ್ಯಕ್ರಮವನ್ನು ಏರ್ಪಡಿಸಿ, ಅದನ್ನು ಯಶಸ್ವಿಯಾಗಿ ಮುಗಿಸಿ ಅದರ ಕೃತಕೃತ್ಯತೆಯಲ್ಲಿ ಸಾರ್ಥಕ್ಯವನ್ನು ಅನುಭವಿಸುತ್ತ ನಿರಾಳವಾಗಿ ಕೂತಾಗಲೇ, ಅದರ ಮುಂದಿನ ತಿಂಗಳ ಕಾರ್ಯಕ್ರಮಕ್ಕೆ ಸಿದ್ಧತೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಮ್ಯಾರಥಾನ್ ಸ್ಪರ್ಧೆಯಲ್ಲಿ ಓಡುವವನಿಗೆ ಇರಬೇಕಾದ ಗುಣಗಳು ಇಲ್ಲಿಯೂ ಪ್ರಸ್ತುತವೆನಿಸುತ್ತವೆ: ಕುಂದದ ಉತ್ಸಾಹ, ಅಗಾಧ ಚೈತನ್ಯ, ವಿರಮಿಸದೆ ಓಡುತ್ತಲೇ ಇರುವ ಶಕ್ತಿ, ಇತ್ಯಾದಿ. ಇದುವರೆವಿಗೆ ‘ಸಾಹಿತ್ಯ ಗೋಷ್ಠಿ’ಯ ಏಳೂವರೆ ವರ್ಷಗಳಲ್ಲಿ ನಾವು 81 ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಇವುಗಳಲ್ಲಿ 122 ಉಪನ್ಯಾಸಗಳು, 7 ಕವಿ ಮತ್ತು ಸಾಹಿತ್ಯ ಗೋಷ್ಠಿಗಳು, 5 ವಿಚಾರ ಸಂಕಿರಣಗಳು ಮತ್ತು ಒಂದು ವಿಶೇಷ ಸಾಹಿತ್ಯಿಕ ಕಾರ್ಯಕ್ರಮವೂ ಸೇರಿವೆ. ಹೀಗೆ ೯೦ ತಿಂಗಳಿಂದ ಪ್ರತಿ ತಿಂಗಳೂ ನಾವು ಸಾಹಿತ್ಯಿಕ ಕಾರ್ಯಕ್ರಮಗಳನ್ನು ಆಯೋಜಿಸಿಕೊಂಡು ಬರುತ್ತಿರಬೇಕಾದರೆ, ಅವಿರತವಾಗಿ ಉಪನ್ಯಾಸಕರ ಶೋಧ ನಡೆಯುತ್ತಿರಬೇಕು. ಹೊಸಬರನ್ನು ಗುರುತಿಸಿ, ಅವರನ್ನು ಉಪನ್ಯಾಸವನ್ನು ನೀಡಲು ಪ್ರೇರೇಪಿಸುತ್ತಿರಬೇಕು. ನುರಿತ ಮತ್ತು ಹೊಸ ಭಾಷಣಕಾರರನ್ನು ಸಾಹಿತ್ಯ ಗೋಷ್ಠಿಯಲ್ಲಿ ಉಪನ್ಯಾಸ ನೀಡಲು ವಿನಂತಿಸಿಕೊಳ್ಳಬೇಕು. ಇದಲ್ಲದೆ, ಸಾಹಿತ್ಯ ಗೋಷ್ಠಿಯ ಕಾರ್ಯಕ್ರಮಕ್ಕೆ ಆಗಮಿಸುವ ಸಾಹಿತ್ಯಾಸಕ್ತರ ಸಂಖ್ಯೆ ಇಳಿಮುಖವಾಗದಂತೆ ನೋಡಿಕೊಳ್ಳಲು, ಉಪನ್ಯಾಸಗಳು ಸ್ವಾರಸ್ಯಕರವಾಗಿಯೂ, ಅವುಗಳಲ್ಲಿ ವೈವಿಧ್ಯತೆ ಇರುವಂತೆಯೂ ನೋಡಿಕೊಳ್ಳಬೇಕಾದುದು ಅತ್ಯವಶ್ಯಕ. ಸಾಧ್ಯವಾದಷ್ಟು ಹೆಚ್ಚು ಜನರನ್ನು ವೇದಿಕೆಯ ಮೇಲೆ ಕಾರ್ಯಕ್ರಮದಲ್ಲಿ ಭಾಗಿಗಳಗುವಂತೆ ನೋಡಿಕೊಂಡು, ‘ಸಾಹಿತ್ಯ ಗೋಷ್ಠಿ’ ನಮ್ಮೆಲ್ಲರ ಸಂಸ್ಥೆ ಎಂಬ ನಂಬಿಕೆಯನ್ನು ಧೃಡೀಕರಿಸುತ್ತಿರಬೇಕು. ಇಲ್ಲದಿದ್ದರೆ ಹೀಗೆ ದೀರ್ಘಕಾಲ ಇದನ್ನು ನಡೆಸಿಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ! ಒಟ್ಟಿನಲ್ಲಿ ‘ಸಾಹಿತ್ಯ ಗೋಷ್ಠಿ’ ಸಾಹಿತ್ಯಾಸಕ್ತರ ಸಹೃದಯತೆ, ಸ್ನೇಹ ಮತ್ತು ವಿಶ್ವಾಸಗಳ ಭದ್ರ ಬುನಾದಿಯ ಮೇಲೆ ನಿಂತಿದೆ ಎಂದು ತಿಳಿಸಲು ನಮಗೆ ಸಂತೋಷವಾಗುತ್ತಿದೆ. 

 ಎಲ್ಲಾ ಸಂಘಸಂಸ್ಥೆಗಳಿಗೆ ಇರುವಂತೆ, ‘ಸಾಹಿತ್ಯ ಗೋಷ್ಠಿ’ಗೂ ಕಾರ್ಯಕ್ರಮಗಳನ್ನು ನಡೆಸಲು ಹಣದ ಅವಶ್ಯಕತೆ ಇದೆ. ನಾವು ಇದರ ವೆಚ್ಚವನ್ನು ಸಂತೋಷದಿಂದ ಭರಿಸುತ್ತಿದ್ದೇವೆ; ಈ ಕಾರ್ಯದಲ್ಲಿ ನಮ್ಮ ಬೆಂಬಲಕ್ಕೆ ನಿಂತವರು ಯಾರೆಂದರೆ, ಸ್ವ-ಇಚ್ಛೆಯಿಂದ ಮುಂದೆ ಬಂದು ಧನ ಸಹಾಯ ಮಾಡುತ್ತಿರುವವರು ನಮ್ಮ ‘ಸಾಹಿತ್ಯ ಗೋಷ್ಠಿ’ಯ ದಾನಿಗಳು. ಇದುವರೆಗಿನ ಈ ಸನ್ಮಿತ್ರರ ಸಹಾಯ ಮತ್ತು ಬೆಂಬಲವನ್ನು ನಾವಿಲ್ಲಿ ಕೃತಜ್ಞತೆಯಿಂದ ಸ್ಮರಿಸುತ್ತಿದ್ದೇವೆ.  ಇದುವರೆವಿಗೆ ‘ಸಾಹಿತ್ಯ ಗೋಷ್ಠಿ’ ಯಶಸ್ವಿಯಾಗಿಯೇ ಕಾರ್ಯ ನಿರ್ವಹಿಸಿಕೊಂಡು ಹೋಗುತ್ತಿದೆ. ಉಪನ್ಯಾಸಗಳನ್ನು ನೀಡಲು ಉತ್ಸಾಹದಿಂದ ಮುಂದೆ ಬರುವ ಸಾಹಿತ್ಯಪ್ರೇಮಿಗಳು, ಕಾರ್ಯಕ್ರಮ ನಿರ್ವಹಣೆ, ಪ್ರಾರ್ಥನೆ ಇತ್ಯಾದಿಯಾಗಿ ನಮಗೆ ಸಕ್ರಿಯ ಬೆಂಬಲ ನೀಡುತ್ತಿರುವ ಕಾರ್ಯಕರ್ತರು, ನಮ್ಮ ಕಾರ್ಯಕ್ರಮಗಳನ್ನು ಪ್ರಚುರ ಪಡಿಸಲು ನಮ್ಮೊಂದಿಗೆ ಸಹಕರಿಸುತ್ತಿರುವ ಉತ್ತರ ಕ್ಯಾಲಿಫೋರ್ನಿಯ ಕನ್ನಡ ಕೂಟ ಮತ್ತು ದಟ್ಸ್‌ಕನ್ನಡ ಜಾಗತಿಕ ಜಾಲತಾಣದ ನಮ್ಮ ಮಿತ್ರರು – ಇವರುಗಳ ಸಹಕಾರವನ್ನು ನಾವಿಲ್ಲಿ ತುಂಬುಮನದಿಂದ ಜ್ಞಾಪಿಸಿಕೊಳ್ಳುತ್ತಿದ್ದೇವೆ. ಸಾಹಿತ್ಯ ಗೋಷ್ಠಿ ಇಷ್ಟು ಕಾಲ ಜೀವಂತವಾಗಿ, ಲವಲವಿಕೆಯಿಂದ ಕೆಲಸ ಮಾಡುತ್ತಿರುವುದಕ್ಕೆ ನೇರವಾಗಿ ಕಾರಣಕರ್ತರು – ನಮ್ಮೆಲ್ಲಾ ಕಾರ್ಯಕ್ರಮಗಳಿಗೂ ತಪ್ಪದೇ ಬಂದು, ಅವುಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿರುವ ನಮ್ಮ ಸಾಹಿತ್ಯಾಭಿಮಾನಿ ದೇವರುಗಳು; ಅವರೆಲ್ಲರಿಗೂ ನಮ್ಮ ಹೃತ್ಪೂರ್ವಕ ನಮನಗಳು.

ಅನುಬಂಧ ೧: ಕನ್ನಡ ಸಣ್ಣಕಥೆಗಾರರಾದ ಕಡೂರು ರಾಮಸ್ವಾಮಿಯವರ ಶುಭಾಶಯ ಪತ್ರ

ಬೆಂಗಳೂರು
೨೧-೧೧-೦೬

ಪ್ರಿಯ ಬಂಧುಗಳಾದ ಶ್ರೀಮತಿ ಮತ್ತು ಶ್ರೀ. ವಿಶ್ವನಾಥ್ ಹುಲಿಕಲ್,

ನನಗೆ ನೆನಪಿರುವಂತೆ ಫೆ. ೨೦೦೨ ರ ಮೊದಲ ಭಾನುವಾರ ನೀವು ಹಮ್ಮಿಕೊಂಡ ಸಾಹಿತ್ಯಗೋಷ್ಠಿಯಲ್ಲಿ ನಾನು ಮತ್ತು ಶ್ರೀ. ಎಂ. ವಿ. ನಾಗರಾಜ ರಾವ್ ಮಾತನಾಡಿದೆವು. ಅದು ಬಹುಶಃ ನಿಮ್ಮ ಮೂರನೆಯ ಗೋಷ್ಠಿ. ಅಂದು ನೀವೆಲ್ಲರೂ ನಮಗೆ ಆರತಿ ಬೆಳಗಿ, ಹಾಡಿ ಸ್ವಾಗತ ಕೋರಿದಿರಿ. ಅದೊಂದು ಕನ್ನಡದ ಶ್ರೇಷ್ಠ ಸಂಸ್ಕೃತಿಯ ದ್ಯೋತಕವಾಗಿದ್ದು ನಾವು ಹರ್ಷಿತರಾದೆವು. ಅದನ್ನು ಇಷ್ಟದಿಂದ ಮೆಲಕು ಹಾಕುತ್ತಿರುವಾಗಲೇ ನಿಮ್ಮ ಅರವತ್ತನೆಯ ಗೋಷ್ಠಿಯೂ ನಡೆದುಹೋಗಿದೆ. ಹಾಗೆಂದು ಸಾಧನೆ ಎಣಿಕೆಯಲ್ಲಿ ಮಾತ್ರವಲ್ಲ. ಸಾರ್ಥಕದಲ್ಲೂ ಕೂಡ. ಕೇವಲ ಹಬ್ಬಗಳ ಸುತ್ತ ಮನರಂಜಕ ಲಘು ಕಾರ್ಯಕ್ರಮಗಳಿಗೆ ಸೀಮಿತವಾದ ಸಾರ್ವಜನಿಕ ಸಾಮೂಹಿಕ ಕೂಟಗಳಿಗೆ ಭಿನ್ನವಾಗಿ ಅಧ್ಯಯನ, ಚಿಂತನ, ಪ್ರವಚನಗಳ ಆಳವಾದ ಅಭ್ಯಾಸದ ಕಡೆಗೆ ಗಮನ ಸೆಳೆದ ಹೆಚ್ಚುಗಾರಿಕೆ ನಿಮ್ಮ ಏಕೆ ನಮ್ಮ ಸಾಹಿತ್ಯಗೋಷ್ಠಿಯದು. ಗೋಷ್ಠಿಯ ಸಭಾಂಗಣ ಮತ್ತು ಅದರಲ್ಲಿನ ಹಾಜರಾತಿಯ ಗಾತ್ರ ಚಿಕ್ಕದಾದರೂ ಗುಣದಲ್ಲಿ ದೊಡ್ಡದು. ಸಾಹಿತ್ಯಾಸಕ್ತಿ, ಅನುಭವ, ಓದುಗಾರಿಕೆ, ಪರಿಚಯ ಸಾಕಷ್ಟಿದ್ದವರೇ ಅಲ್ಲಿ ಸೇರುವುದು. ವಾರಾಂತ್ಯದ ವಿರಾಮಕ್ಕೂ ವಿದಾಯ ಹೇಳಿ ಮೈಲಿಗಟ್ಟಲೆ ಚಕ್ರ ತಿರುಗಿಸುತ್ತಾ ಬಂದ ಸದರ, ನಿಕಟತೆ, ಸಹೃದಯ ವಿಚಾರ ವಿನಿಮಯ, ವಿನೋದಮಯ ರಸಗಳಿಗೆಯಲ್ಲಿ ನಾನು ನಾಲ್ಕಾರು ಬಾರಿ ಭಾಗಿಯಾಗಿ ನಲಿದಿದ್ದೇನೆ.

ಸಾಹಿತ್ಯಗೋಷ್ಠಿ ಮಾಡಿದ ಸ್ತುತ್ಯ ಕಾರ್ಯಕ್ರಮಗಳು:

೧. ಕನ್ನಡ ಸಾಹಿತ್ಯದಲ್ಲಿ ಅಭಿರುಚಿಯುಳ್ಳವರನ್ನು ಆರಿಸಿ ಒಂದೆಡೆ ಸೇರಿಸಿದ್ದು.
೨. ಸಾಮರ್ಥ್ಯವಿದ್ದೂ ಅಭಿವ್ಯಕ್ತಿಗೆ ಮುಂದಾಗದ ಸಂಕೋಚದ ಸ್ವಭಾವದವರನ್ನು ಹುರಿದುಂಬಿಸಿದ್ದು.
೩. ಗಂಭೀರವಾದ ಅಧ್ಯಯನ ಮತ್ತು ವಿಮರ್ಷಕ ದೃಷ್ಟಿಯನ್ನು ಬೆಳೆಸಿದ್ದು.
೪. ಬರೆಯದಿದ್ದ ಬರೆಯ ಬಲ್ಲವರ ಕೈಯಲ್ಲಿ ಉತ್ತಮ ಸಾಹಿತ್ಯವನ್ನು ಬರೆಸಿದ್ದು.
೫. ಚರ್ಚೆಗೆ, ಉಪನ್ಯಾಸಕ್ಕೆ, ಪ್ರವಚನಕ್ಕೆ ವಸ್ತು ವೈವಿಧ್ಯ, ಪ್ರಕಾರ ವೈವಿಧ್ಯಗಳನ್ನು ಒದಗಿಸಿದ್ದು.
ಇತ್ಯಾದಿ ಇತ್ಯಾದಿ ಎಲ್ಲವೂ ವ್ಯವಸ್ಥಿತವಾಗಿ ನಡೆಯುತ್ತಿರುವುದೊಂದು ಹೆಗ್ಗಳಿಕೆ. ಈ ನಮ್ಮ ಸಾಹಿತ್ಯಗೋಷ್ಠಿಯು ಸಮಾನ ಮನೋಧರ್ಮ, ಆಸಕ್ತಿ, ಸಾಮರ್ಥ್ಯಗಳುಳ್ಳ ಸತ್ವಯುತ ಸತ್ಸಂಗವಾಗಿ ಉಳಿದು ಬೆಳೆಯಲೆಂದು ಹಾರೈಸುತ್ತೇನೆ.

ಆರನೇ ಸಂವತ್ಸರಕ್ಕೆ ಕಾಲಿಕ್ಕುತ್ತಿರುವ ಸಾಹಿತ್ಯಗೋಷ್ಠಿಗೆ ನನ್ನ ಶುಭಾಶಯಗಳು.

ಇಂತು, ನಿಮ್ಮವನೇ ಆದ
ಕಡೂರು ರಾಮಸ್ವಾಮಿ.

ಅನುಬಂಧ ೨: ಸಾಹಿತ್ಯ ಗೋಷ್ಠಿಯ ಚಟುವಟಿಕೆಗಳು

ವಿವರಗಳಿಗೆ ನಮ್ಮ ಜಾಗತಿಕ ಜಾಲತಾಣವನ್ನು ಸಂದರ್ಶಿಸಿ: http://www.sahityagoshti.org

 Posted by at 8:45 PM
Jul 262009
 

ಶ್ರೀನಾಥ್ ಭಲ್ಲೆಮೂಗಿಗೆ ಹತ್ತಿ ತುರುಕುವ ಮುನ್ನ

 

ಜಂಜಟ್ಟಿನ ಜಗಕೆ ಜಾರೋ ಮುನ್ನ
ಪುಟ್ಟ ಕೋಟೆಯಲಿ ನೀ ಸುಖವಪಡು

ತಾರತಮ್ಯವನು ಅರಿಯೋ ಮುನ್ನ
ಎಲ್ಲರೊಂದಿಗೆ ಬೆರೆತು ಒಂದಾಗಿಬಿಡು

ಪಾಲಕರು ಸ್ಪರ್ಧೆಗೊಡ್ಡೋ ಮುನ್ನ
ಕುಣಿದಾಡಿ ಬಿಡು ನಲಿದಾಡಿ ಬಿಡು

ಕಳೆವುದ, ಭಾಗಿಸುವದ ಕಲಿಯೋ ಮುನ್ನ
ಕೂಡಿಸಿ, ವೃದ್ದಿಸಿ ಖುಷಿಯಪಡು

ಸಂಸಾರ ಸಾಗರದ ಸುಳಿ ಸೆಳೆಯೋ ಮುನ್ನ
ಸ್ವಚ್ಚಂದದ ತಂಗಾಳಿಯಲಿ ತೇಲಿಬಿಡು

ರೋಗರುಜಿನಗಳು ನಿನ್ನಲ್ಲರಳೋ ಮುನ್ನ
ನರಳೋ ರೋಗಿಗಳ ಬಗ್ಗೆ ಕರುಣೆ ಇಡು

ಮೂಗಿಗೆ ಹತ್ತಿ ತುರುಕೋ ಮುನ್ನ
ನಿರ್ಮಲ ಮನದಲ್ಲೊಮ್ಮೆ ಉಸಿರಾಡಿಬಿಡು

ಬಾಯಿಗೆ ಅಕ್ಕಿ ತುಂಬಿಸೋ ಮುನ್ನ
ತಪ್ಪುಗಳಿಗೆ ಕ್ಷಮೆ ಯಾಚಿಸಿಬಿಡು

ನಾಲ್ಕು ಕಾಲಿನ ರಥವೇರೋ ಮುನ್ನ
ಸೌದೆಗೆ ಬೆಂಕಿ ಹಚ್ಚೋ ಮುನ್ನ
ಕ್ರೋಧ ಬಿಡು, ಆಕ್ರೋಶ ಬಿಡು
ಇದ್ದುದರಲ್ಲೇ ಸಂತೃಪ್ತಿ ಪಡು
ಸಜ್ಜನರ ಸಂಗದಿ ಸುಖವ ಪಡು

 

ಭವ ಬಂಧನ

ಹೊರಗೆಡಹಲು ಎನ್ನ ಮನದಾಳದ ಅಳಲು
ಮೂಲೆ ಹಿಡಿದು ನಾ ಗಟ್ಟಿಯಾಗಿ ಅಳಲು

ತಲೆ ನೇವರಿಸಿದಳು ತಾಯಂತಹ ಅತ್ತೆ
ಏನಂತಹ ದುಗುಡ ನೀನೇಕೆ ಅತ್ತೆ

ಸೂರ್ಯ ತಾ ಮುಳುಗಿಹನು ಇದು ಸಂಧ್ಯಾಕಾಲ
ಇಂಥದೇ ಸಂಜೆ ಅಪ್ಪನ ಜೀವಕದು ಸಂಧ್ಯಾಕಾಲ

ಹೇಳಲಾಗಲಿಲ್ಲ ಹೃದಯದಿ ಅಡಗಿದ್ದ ಭಾವ
ಇದ್ದುದಿಬ್ಬರೇ ಸಂತೈಸಲು ಆ ನನ್ನ ಅಕ್ಕ ಭಾವ

ಅಕ್ಕಗೆ ನುಡಿದಿದ್ದನವ ಇವಳನ್ನು ನೀ ಸಾಕು
ಬಂಧುಗಳಿಲ್ಲದ ಈ ಊರು ಅವಳಿಗಿನ್ನು ಸಾಕು

ಹೆತ್ತಮ್ಮನಿಲ್ಲ, ಸಲುಹಿದ ಅಪ್ಪನಿಲ್ಲ, ಏನಾಗುವುದೋ ಎನ್ನ ಬಾಳು
ಕಂಕಣ ಬಲ ಒದಗಿಸಿ ಹರಸಿಹಳು ಅಕ್ಕ ನೀ ನೂರ್ಕಾಲ ಬಾಳು

ತಂಪನೆಯ ಗಾಳಿಯೊಂದಿಗೆ ಸೂರ್ಯ ಮುಳುಗುವಾ ಹೊತ್ತು
ಬಂದಿದ್ದಳು ಅಕ್ಕ ದೂರಾಗುವ ಸಂದೇಶವಾ ಹೊತ್ತು

ಮುಪ್ಪಾದವರ ಸೇವೆಗೆ ಭಾವನ ಕೂಗಿ ಕರೆದಿತ್ತು ಕರ್ತವ್ಯದ ಕರೆ
ಏಂದೋ ಒಮ್ಮೆ ನೋಡುವ ಅಕ್ಕಳಿಗಿನ್ನು ಕೇವಲ ದೂರವಾಣಿ ಕರೆ

ಎನ್ನವರೆಲ್ಲ ದೂರಾಗುತ್ತಿಹರತ್ತೆ ನಾನೇನ ಮಾಡಿರುವೆ ಪಾಪ
ಹೊಟ್ಟೆ ಹಸಿವಿನಿಂದ ಅಳಲು ಹತ್ತಿತ್ತು ಮಲಗಿದ್ದ ನನ್ನ ಪಾಪ

ನವ ಬಂಧನವು ಸೆಳೆದಾಗ ಹಳೆ ಬಂಧನಗಳು ಹರಿವುದೇ?
ಹಳೆ ಬಂಧನದ ಮೌಲ್ಯ ನವ ಪೀಳಿಗೆಯಲ್ಲೂ ಹರಿವುದೇ?

ಟಿಪ್ಪಣಿ :- ಹಲವಾರು ಬಾರಿ ಪದವೊಂದೇ ಆದರೂ ಅವುಗಳ ಅರ್ಥ ಬೇರೆ ಇರುತ್ತದೆ. ಅಂತಹ ಕೆಲವು ಪದಗಳನ್ನು ತೆಗೆದುಕೊಂಡು ಕವನ ರೂಪದಲ್ಲಿ ಭವ ಬಂಧನದ ಬಗೆಗಿನ ಒಂದು ಸನ್ನಿವೇಶವನ್ನು ಹೆಣೆದಿದ್ದೇನೆ. ಕವನದಲ್ಲಿ ಅಕ್ಕ-ತಂಗಿಯರ ಬಾಂಧವ್ಯವಿದೆ. ತಂದೆಯ ಸ್ಥಾನದಲ್ಲಿ ನಿಲ್ಲುವ ಭಾವನ ಚಿತ್ರಣವಿದೆ. ಹೊಸ ಬಂಧನಕ್ಕೆ ಸಿಲುಕುತ್ತಿದ್ದಂತೆ ಜೊತೆ ಹಳೆಯ ಬಾಂಧವ್ಯವು ಮಸುಕಾಗುವ ಕ್ರೂರ ಸತ್ಯವೂ ಅಡಕವಾಗಿದೆ. ಅದಲ್ಲದೆ, ನಾವು ಒಬ್ಬರಿಗೆ ಋಣಿಯಾಗಿದ್ದೇವೆ ಎಂದು ನಮ್ಮ ಮುಂದಿನವರೂ ಅದರಂತೆ ಋಣಿಯಾಗಿರಬೇಕೇ ಎಂಬ ಪ್ರಶ್ನೆಯೂ ಇದೆ…. ನಿಮಗೆ ಉತ್ತರ ಗೊತ್ತೆ ?

 Posted by at 10:00 PM