Mar 152019
 

ಸಮ್ಮೇಳನದ ದಿನಾಂಕ – ಮೇ ೧೮, ೧೯ (May 18, 19)

ಸಮ್ಮೇಳನದಲ್ಲಿ ನೋಂದಣೆಯಾಗಿ ಭಾಗವಹಿಸುವವರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಇರುತ್ತದೆ. 

ಈ ಬಾರಿಯ ಸಮ್ಮೇಳನದ ವಿಷಯ – ಬದಲಾವಣೆ

ಮುಖ್ಯ ಅತಿಥಿ- ವಸುಧೇಂದ್ರ

ಭಾಗವಹಿಸಲಿರುವ ಇತರ ಸಾಹಿತಿಗಳು –   ಸುನಂದಾ ಕಡಮೆ, ವಸುಂಧರಾ ಭೂಪತಿ ಮತ್ತಿತರರು.

ಸ್ಥಳ ;  DeMasi Middle School

199 Evesboro Medford Road, Marlton, NJ 08053

Accommodation:

Rooms have been blocked at a nearby Wyndham Hotel at discounted price as below.

King – With Sofa – $105 Plus Taxes

Queen – Double – $115 Plus Taxes

Apply the Group Code under the Menu Item – Special Rates on the website for booking online. Please email us for gruoup code :-  ksrnews@gmail.com

Website:

https://www.wyndhamhotels.com/wyndham/mount-laurel-new-jersey/wyndham-philadelphia-mount-laurel/overview

Address:

Wyndham

1111 Route 73 N

Mount Laurel, NJ 08054

856-234-7008

Please make use of this to reserve your rooms ASAP. The discount offer ends on 4/17/2019.

We request the members to inform me as soon as you make the hotel reservation for our records.

 Posted by at 1:47 PM
Nov 212018
 

ಕನ್ನಡ ಸಾಹಿತ್ಯ ರಂಗವು 2019 ರಲ್ಲಿ ನಡೆಸಲಿರುವ ಸಮ್ಮೇಳನವನ್ನು, ಮೇ ತಿಂಗಳಿನ 18 ಮತ್ತು 19ರ ಶನಿವಾರ ಮತ್ತು ಭಾನುವಾರಗಳಂದು, ನ್ಯೂಜೆರ್ಸಿಯಲ್ಲಿ, ತ್ರಿವೇಣಿ ಕನ್ನಡ ಕೂಟದ ಸಹಯೋಗದೊಂದಿಗೆ ನಡೆಸಲು ನಿರ್ಧರಿಸಲಾಗಿದೆ. ಸಮ್ಮೇಳನದ ಮುಖ್ಯ ಅತಿಥಿಯಾಗಿ ಭಾಗವಹಿಸಲು ಲೇಖಕ ವಸುಧೇಂದ್ರ ಅವರು ಒಪ್ಪಿದ್ದಾರೆಂದು ತಿಳಿಸಲು ಸಂತೋಷವಾಗುತ್ತಿದೆ. ಈ ಬಾರಿಯ ಸಮ್ಮೇಳನವು ಸಮಾಜದ ವಿವಿಧ ಕ್ಷೇತ್ರಗಳಲ್ಲಾಗಿರುವ ‘ಬದಲಾವಣೆಯನ್ನು’ ಮುಖ್ಯ ವಿಷಯವನ್ನಾಗಿ ಇರಿಸಿಕೊಂಡಿದೆ.

ಈ ಸಮ್ಮೇಳನದಲ್ಲಿ ಭಾಗವಹಿಸಲು ನಿಮ್ಮೆಲ್ಲರನ್ನು ಆದರಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ. ಹೆಚ್ಚಿನ ವಿವರಗಳನ್ನು ಮುಂಬರುವ ದಿನಗಳಲ್ಲಿ ತಿಳಿಸಲಾಗುತ್ತದೆ.
Date: May 18 & 19, 2019

Location: DeMasi Middle School

199 Evesboro Medford Road, Marlton, NJ 08053
The place is about 25 miles from PHL airport and about 80 miles from EWR airport.
ಮುಖ್ಯ ಅತಿಥಿಯಾಗಿ – ಶ್ರೀ ವಸುಧೇಂದ್ರ ಅವರ ಉಪಸ್ಥಿತಿ

DeMasi Middle School,199 Evesboro – Medford Rd, Marlton, NJ 08053

 Posted by at 9:25 PM
Jul 042018
 

ಇದು ಕತೆಯಲ್ಲ, ಕವಿತೆಯೂ ಅಲ್ಲ,
ಪ್ರಬಂಧವೂ ಅಲ್ಲ, ಇದು ಕಗ್ಗ
ಸಗ್ಗವ ಹುಡುಕುತ ನುಗ್ಗುತ ಬರುವ
ಬಡವರ ಬಗ್ಗರ ಬವಣೆಯ ಕಗ್ಗ

ಉತ್ತರ ಅಮೆರಿಕ ಗಡ್ಡದ ಜೊತೆಗೆ
ದಕ್ಷಿಣ ಅಮೆರಿಕ ಜುಟ್ಟಿನ ಕೊಂಡಿ
ಇವೆರಡನು ಜಗ್ಗಿ ಕಟ್ಟುವ ಹಗ್ಗ
ಮಧ್ಯ ಅಮೆರಿಕದಿ ಜೀವವು ಅಗ್ಗ

ಬಡತನ ಸುರಿಯುವ ಗ್ವಾಟೆಮಾಲ
ಹಂಡರಬಂಡರ ಹಾಂಡೂರಸ್
ಎಲ್ಲಿಯು ಸಲ್ಲದ ಸಾಲ್ವಡೋರ್
ಕಂಡರೆ ಕರಗುವ ನಿಕರಾಗುವ!

ತಿನಲು ಅನ್ನವಿಲ್ಲ, ಉಡಲು ಬಟ್ಟೆಯಿಲ್ಲ
ಮಾಡುವೆನೆಂದರೆ ಕೆಲಸವಿಲ್ಲ,
ಓದುವೆನೆಂದರೆ ಶಾಲೆಗಳಿಲ್ಲ
ಜೀವಕೆ ಇಲ್ಲಿ ಬೆಲೆಯೇ ಇಲ್ಲ

ಕೊಲುವರ ಭಯವು ಹಿರಿಯರಿಗಾದರೆ
ಕೆಡಿಪರ ಭಯವು ಮಕ್ಕಳಿಗೆ
ಆಗಲೆ ಗಂಡನ ಕೊಂದಿಹರಲ್ಲ
ಮಗಳನು ಪುಂಡರು ಕೆಡಿಸಿಹರಲ್ಲ

ದೀನರ ದಲಿತರ ರಕ್ಷಿಪರಿಲ್ಲ
ನಿರಾಶ್ರಿತರಿಗೆ ನಿದ್ರೆಯು ಇಲ್ಲ
ಅಸಹಾಯಕರಿಗೆ ಶಾಂತಿಯೆ ಇಲ್ಲ
ಬಿಟ್ಟೋಡದೆ ಬೇರೆ ಗತಿಯೇ ಇಲ್ಲ

ಕಾಲ್ನಡಿಗೆಯಲೋ ಬಸ್ ಪಯಣದಲೋ
ಸರಕನು ಸಾಗಿಪ ರೈಲುಗಳಲ್ಲೋ
ಹೊರಟಿರುವರು ದೂರದ ಪಯಣಕ್ಕೆ
ನೂರಾರು ಗಾವುದ ಯಾತನೆಗೆ

ಪುಂಡರ ಕಾಟವ ತಡೆಯಲಾರದೆ
ಆಶ್ರಯ ಬಯಸುತ ಹೊರಟಿಹರು
ಗಡಿಗಳ ದಾಟುತ ನಡೆದಿಹರು
ನಾರುವ ನದಿಗಳ ಈಜಿಹರು

ಕಳ್ಳರು ಕಾಕರು ಕುಡುಕರು ಕೊರಮರು
ಹೆಣ್ಗಳ ಕೆಣಕುವ ಕೆಟ್ಟ ಖದೀಮರು
ಎಲ್ಲರು ಜೊತೆಯಲೆ ಬಂದಿಹರು
ಸಗ್ಗದ ಗಡಿಯನು ತಲುಪಿಹರು

ಹೊಟ್ಟೆಯಲಿರುವ ಕಂದನ ಭಾರ
ಸೊಂಟವ ತಬ್ಬಿಹ ಹಸಿದ ಕಿಶೋರ
ತಪ್ಪಿಸಿ ಓಡುವ ಹರೆಯದ ಬಾಲೆ
ಮೋಸದಿ ಎರಗುವ ಕಾಮಿಯ ಶೂಲೆ

ಗಡಿಯಲಿ ಕಾದಿದೆ ತುರುಫ಼ನ ತಂಡ
ಜೊತೆಯಲ್ಲಿವು ನನ್ನಯ ಗಂಡ
ಮಕ್ಕಳ ಆಚೆಗೆ ಸಾಗಿಸಲೋಸುಗ
ತೆರಬೇಕೇನು ತಲೆಗಳ ದಂಡ?

ನೋಡದೊ ಕಂಡಿತು ಸಗ್ಗದ ಬಾಗಿಲು
ಬೇಲಿಯ ದಾಟಲು ಹರ್ಷದ ಹೊನಲು
ಸ್ವಾತಂತ್ರ್ಯ ದೇವತೆ ಇರುವಳು ಅಲ್ಲೇ
ಸಲಹುವಳೆಮ್ಮನು ನಾನದ ಬಲ್ಲೆ

ಆಕೆಯ ಕೈಯಲಿ ಉರಿಯುವ ಪಂಜು
ಮತ್ತೊಂದು ಕೈಯಲಿ ತಬ್ಬಿದ ಫಲಕ
ಫಲಕದಲೇನೋ ಸಂದೇಶವಂತೆ
ಓದಿನೋಡಿದರೆ ತಿಳಿಯುವುದಂತೆ

“ನಿಮ್ಮಲ್ಲಾರೋ ದಣಿದವರಿದ್ದರೆ
ಅವರನು ನಮಗೆ ತಂದು ಕೊಡಿ
ನಿಮ್ಮ ಬಡವರನು ನಮಗೆ ಬಿಡಿ
ಕಟ್ಟಿದ ಶ್ವಾಸವ ತೆರೆದು ಬಿಡಿ

ಮುದುಡಿ ಕುಳಿತವರ ಸೆಟೆದು ನಿಲ್ಲಿಸಿ
ಸ್ವತಂತ್ರ ಉಸಿರಿಗೆ ಗಾಳಿಯಾಡಿಸಿ
ಸಮೃದ್ಧ ಜೀವನ ಸಾರ್ಥಕ ಬದುಕಿಗೆ
ಕಾದಿಹರೆಲ್ಲರ ನಮಗೆ ಕೊಡಿ

ನಿಮ್ಮ ತೀರದಲಿ ಕೊಚ್ಚಿಹೋಗುತಿಹ
ಪರಿತ್ಯಕ್ತರನು ನಮಗೆ ಕೊಡಿ
ವಸತಿ ಕಾಣದೆ ವಿಲಗುಟ್ಟುತಿಹ
ಹುಟ್ಟು ತಿರುಕರನು ನಮಗೆ ಕೊಡಿ

ಚಕ್ರವಾತವು ತಿರುಚಿ ಎಸೆದಿಹ
ದಿಕ್ಕುಗಾಣದ ದೀನರ ದಲಿತರ
ದೇಶವಿಹೀನರ ಶೋಷಿತ ಜನಗಳ
ತಪ್ಪದೆ ಕೂಡಲೇ ಕಳಿಸಿ ಬಿಡಿ

ಇದೋ ತೆರೆಯುವೆನು ಚಿನ್ನದ ದ್ವಾರ
ಪಂಜಿನ ಬೆಳಕಿದೆ ಇಲ್ಲಿ ಅಪಾರ
ಬನ್ನಿರಿ ಬನ್ನಿರಿ ಪ್ರಿಯ ಬಾಂಧವರೆ
ನನ್ನೀ ಅಮೆರಿಕದಂಗಳಕೆ”

ಬನ್ನಿರಿ ಮಕ್ಕಳೆ ಬನ್ನಿರಿ ಬೇಗ
ಸ್ವಾತಂತ್ರ್ಯ ದೇವತೆ ಕರೆದಿಹಳು
ಸದ್ದು ಮಾಡದೆ ನಡೆಯಿರಿ ಈಗ
ಗಡಿಯನು ದಾಟುವ ಸಮಯವಿದು

ರಾತ್ರಿಯ ಕತ್ತಲು ಕಳೆಯುವ ಮುನ್ನ
ಬೇಲಿಯ ಮುಳ್ಳನು ಬದಿಗೊತ್ತರಿಸಿ
ಸುತ್ತಿದ ತಂತಿಯ ತುದಿ ಕತ್ತರಿಸಿ
ಉಪಾಯದಿಂದಲಿ ನುಸಿಯುವೆವು

ಬೇಗನೆ ನುಸಿಯಿರಿ ಎನ್ನುತ ದೂಡಲು
ಮಗಳು ನುಗ್ಗಿದಳು ತಮ್ಮನ ಎಳೆದಳು
ತಾಯಿಯು ತಲೆಯನು ತೂರುತ ತೆವಳುತ
ಆಯ ತಪ್ಪಿದಳು ಕುಸಿಯುತಲಿ

ತುಂಬು ಬಸುರಿಯು ಸೋತು ಬಳಲಿದಳು
ಏರುಸಿರಿನಲಿ ಹೆಣಗುತ ಅತ್ತಳು
ಅಯ್ಯೋ ಬಾಯಾರಿಕೆ ನೀರು ಕೊಡಿ
ಎನ್ನುತ ಮಕ್ಕಳ ಬೇಡಿದಳು

ಬಾಟಲಿಯಲ್ಲಿ ಹನಿಗಳು ಮಾತ್ರ
ತೆವಳಲು ಬಿಡದು ಹೊಟ್ಟೆಯ ಗಾತ್ರ
ನಡುಗುತ ನಡುಗುತ ನಲುಗಿದಳು
ಹೊಟ್ಟೆಯ ಮೇಲಕೆ ಮಾಡಿದಳು

ಈಗಲೆ ಬಂದಿತೆ ಹೆರಿಗೆಯ ನೋವು
ದಾಟುವ ಮೊದಲೇ ಬರುವುದೇ ಸಾವು
ಮಗುವಿದು ಹುಟ್ಟಲಿ ಅಮೆರಿಕದಲ್ಲಿ
ಬೆಳೆಯಲಿ ಸುಖದಲಿ ಪ್ರಜೆಯಾಗಲ್ಲಿ

ಬೆನ್ನಿನ ಬೇನೆಯ ತಾಳೆನೆ ಅಮ್ಮ
ಚೀತ್ಕಾರ ಮಾಡದೆ ಹೇಗಿರಲಮ್ಮ
ಕಾವಲುಗಾರಗೆ ಕೇಳಿಸಿಬಿಟ್ಟರೆ
ನಮ್ಮನು ಹಿಂದಕೆ ದೂಡುವನಮ್ಮ

ಮಕ್ಕಳಿಬ್ಬರು ಗಡಿಯ ದಾಟಿಹರು
ತಾಯಿಯ ಎಳೆಯಲು ಯತ್ನಿಸುತಿಹರು
ತಲೆಯು ಅಮೆರಿಕದಿ ದೇಹ ಮೆಕ್ಸಿಕೋ
ಸ್ವಾತಂತ್ರ್ಯ ದೇವಿಯೆ ಬೇಗ ಎತ್ತಿಕೋ

ಆಕೆ ಇರುವುದು ಸಾವಿರ ಮೈಲಿ
ಕೂಗಲಾದೀತೆ ಇವಳ ಕೈಯಲಿ
ಕೇಳೀತೆ ಕೂಗು ಅವಳ ಕಿವಿಗಳಿಗೆ
ತಾಳೀತೆ ಮಗು ಗರ್ಭದ ಒಳಗೆ?

ಅಗೋ ಬಂದನು ಕಾವಲುಗಾರ
ಗದರಿಸಿ ಬೈಯ್ದನು ಯಥಾಪ್ರಕಾರ
ಭುಜವನು ಹಿಡಿದು ಧರಧರ ಎಳೆದು
ನಲುಗಾಡಿಸಿದನು ದೇಹವ ಹಿಡಿದು

ಬಸುರಿಯ ಯಾತನೆ ನೋಡಿದನು
ಸುರಿಯುವ ರಕ್ತಕೆ ಬೆದರಿದನು
ನಡುಗುತ ತುಟಿಯನು ಕಚ್ಚಿದನು
ಆದ ಅನರ್ಥಕೆ ಬೆಚ್ಚಿದನು

ಅಯ್ಯೋ ಏತಕೆ ಎಳೆದೆನು ರಟ್ಟೆ
ತಂತಿಯ ಮುಳ್ಳದು ಸೀಳಿತು ಹೊಟ್ಟೆ
ಚಿತ್ರಹಿಂಸೆಯನು ಬಸುರಿಗೆ ಕೊಟ್ಟೆ
ಗರ್ಭದ ಚೀಲವು ಒಡೆಯಿತು ಕಟ್ಟೆ

ವೈದ್ಯನು ಇಲ್ಲದೆ ದಾದಿಯು ಇಲ್ಲದೆ
ಭೂಮಿಯ ಮಡಿಲಲಿ ಶಿಶು ಜನನ
ಗಡಿಯನು ಬಿಡಿಸುವ ರೇಖೆಯನಳಿಸಿತು
ಹರಿಯುವ ರಕ್ತದ ಸಂಚಲನ

ಕಲ್ಪನೆಗೆಟುಕದ ಶಸ್ತ್ರದ ಸೀಳಿಗೆ
ಚಿಮ್ಮುತ ಹುಟ್ಟಿದ ಹೊಸ ಜೀವ
ಅಮೆರಿಕ ದೇಶದ ಪ್ರಜೆಗಳ ಗುಂಪಿಗೆ
ಸೇರಲಿ ಹರಸೋ ಎಲೆ ದೇವ!

ರಕ್ತದಿ ತೊಯ್ಯುತ ಮಲಗಿರೆ ಮಾನಿನಿ
ಬೆವರುತ ಬೆದರುತ ನೋಡಿದನು
ಬೆತ್ತಲೆ ಶಿಶುವನು ಎತ್ತಿಕೊಂಡವನು
ಮೂವರ ಜೊತೆಯಲಿ ಓಡಿದನು

ನಿಗದಿಯಾಗಿರುವ ತಂಗುದಾಣದಲಿ
ನಡೆದನು ಮಕ್ಕಳ ಪಂಜರಕೆ
ತಂದೆತಾಯಿಗಳ ಬಿಡಿಸಿ ತಂದಿರುವ
ಮಕ್ಕಳ ಜೊತೆಯಲಿ ತಂಗಲಿಕೆ

ಸಾವಿರ ಸಾವಿರ ಮಕ್ಕಳ ನಡುವೆ
ಪುಟ್ಟ ಕಂದನನು ಮಲಗಿಸಿದ
ಕಾನೂನಿನಂತೆ ವರ್ತಿಸಿ ಅವನು
ಕೈಗಳ ತೊಳೆಯಲು ಧಾವಿಸಿದ

ಅತ್ತ ಬೇನೆಯಲು ನಕ್ಕಳು ತಾಯಿ
ಸ್ವಾತಂತ್ರ್ಯ ದೇವಿಯೆ ನೀನೇ ಕಾಯಿ
ಕನಸ ಕಾಣುತ್ತ ಕಣ್ಣ ಮುಚ್ಚಿದಳು
ಬೇರಾದ ಮಕ್ಕಳ ಕಾಣಲು ಆಯಿ

ನರಳುತ ಒರಳುತ ಕನಸಿನ ನಿದ್ದೆ
ಕಾಪ್ಟರ್ ಇಳಿಯಿತು ಪಟ ಪಟ ಸದ್ದೆ
ಹಾರುತ ಬಂದಿತು ರಕ್ಕಸ ಹದ್ದು
ಎಲ್ಲಿದೆ ನನ್ನಯ ನೋವಿಗೆ ಮದ್ದು?

ತೆಳ್ಳನೆ ಸುಂದರಿ ಇಳಿದು ಬಂದಳು
ಸ್ವಲ್ಪ ದೂರದಲಿ ಮುಂದೆ ನಿಂದಳು
ಇವಳೇ ಏನು ಸ್ವಾತಂತ್ರ್ಯ ದೇವತೆ?
ಸಾಂತ್ವನ ಹೇಳಲು ಬಂದಿಹಳೆ?

ಕೈಲಿ ಪಂಜಿಲ್ಲ, ಮುಖದಿ ಕಳೆಯಿಲ್ಲ
ಫಲಕವು ಇಲ್ಲ ಸಂದೇಶವು ಇಲ್ಲ
ಆಕೆ ನಗಲಿಲ್ಲ, ಕುಶಲ ಕೇಳಲಿಲ್ಲ
ಯೋಗಕ್ಷೇಮವನು ವಿಚಾರಿಸಲಿಲ್ಲ

ಬೆನ್ನ ತೋರುತ್ತ ಕ್ಷಣಕಾಲ ನಿಂದು
ರಾಜನ ಆಜ್ಞೆಯ ಸಾರಲು ಎಂದು
ಸಗ್ಗದ ರಾಣಿಯೆ ಇರಬಹುದೀಕೆ
ಸಂದೇಶ ಬೆನ್ನಲಿ ಬರೆದಿಹುದೇಕೆ?

ಮಗಳೇ ಓದಮ್ಮ ಓದು ಮಗಳೇ
ಇಲ್ಲದ ಮಗಳನು ಬೇಡಿದಳು
ಮಗಳ ದನಿಯಿಲ್ಲ, ಅವಳೆಲ್ಲೋ?
ಮಗನ ದನಿಯಿಲ್ಲ ಅವನೆಲ್ಲೋ?

ಅಯ್ಯೋ ಕೂಸು, ಹಾಲೂಡಿಸಬೇಕು
ಯಾರು ರಕ್ಷಿಸುವವರು ಎಳೆಗೂಸ?
ದೈತ್ಯನು ಬಂದನು ಕೂಗುತ ಹತ್ತಿರ
ಕರ್ಕಶ ಸ್ವರದಲಿ ಕೊಟ್ಟನು ಉತ್ತರ

ಓದಿ ಹೇಳಿದನು ಸಂದೇಶವನು
ವಿವರಣೆ ಕೊಡುತ್ತ ಟ್ವೀಟಿನಲಿ
“ಐ ರಿಯಲಿ ಡೋಂಟ್ ಕೇರ್, ಡು ಯು?
ಹಹ್ಹಹ್ಹ! ಐ ರಿಯಲಿ ಡೋಂಟ್”

ಅತ್ತ ನವಜಾತ ಶಿಶು ಅತ್ತೇ ಅತ್ತಿತು
ಉಸಿರುಗಟ್ಟಿತ್ತು, ನೀಲಿಗಟ್ಟಿತ್ತು
ಅಕ್ಕ ಆ ಪಕ್ಕ ತಮ್ಮ ಈ ಪಕ್ಕ
ಕೂಸು ಅಳುವನ್ನು ನಿಲ್ಲಿಸಿತು!

(ಮೈ.ಶ್ರೀ. ನಟರಾಜ ಅವರು ಬರೆದಿರುವ ನೀಳ್ಗವನ- ಸ್ವಾತಂತ್ರ್ಯ ದೇವಿಯ ಕರುಣೆಯ ಕಗ್ಗ ಇದು ಅಮೆರಿಕದ ಸದ್ಯದ ಪರಿಸ್ಥಿತಿಯನ್ನು ಬಿಂಬಿಸುವಂತಿದೆ. ಮಧ್ಯ ಅಮೆರಿಕದಿಂದ ಹೊರಟು ಗಡಿ ದಾಟಲು ಯತ್ನಿಸುವ ಒಂದು ಬಡ ಸಂಸಾರದ ಗರ್ಭಿಣಿ ಹೆಣ್ಣು ತನ್ನ ಎರಡು ಮಕ್ಕಳೊಡನೆ ಪಡುವ ಬವಣೆಯೇ ಇದರ ವಸ್ತು. )

 Posted by at 8:07 AM